ಭಾಮಿನಿ

ಹಲವಿದೇತಕೆ ರಣದಿ ನದಿಸುತ |
ಹುಲು ಶಿಖಂಡಿಯ ನೆವದೊಳೊರಗಿದ |
ಕಲಶಸಂಭವ ತನುವ ನೀಗಿದ ಸುತನಿಮಿತ್ತದೊಳು ||
ಅಲಗು ಮರಳಿದೆ ಹೂಡೆನೆಂಬಾ |
ಛಲ ಕಣಾ ನಿನಗಿಂತು ಕೌರವ |
ತಿಲಕ ಮೂವರ ನಂಬಿ ಕೆಟ್ಟನೆನುತ್ತ ಖತಿ ತಳೆದ || ೩೯೮ ||

ಕಂದ

ಇನ್ನೇಕೀ ಸಮರವಿದೆನು |
ತುನ್ನತ ರೋಷದಿ ದುಮ್ಮಿಕ್ಕುತಲಾ ಶಲ್ಯಂ ||
ಗನ್ನದಿ ಪೋಗಲು ತಾನೇ |
ತನ್ನ ರಥವ ನಡೆಸುತಲಿದಿರಾದಂ ಕರ್ಣಂ || ೩೯೯ ||

ರಾಗ ಪಂಚಾಗತಿ ಮಟ್ಟೆತಾಳ

ಇನಿತು ತಾನೆ ರಥವ ನಡೆಸು | ತಿನಜನಯ್ದೆ ಸಮರದಲ್ಲಿ |
ಧನುವನೊದರಿಸುತ್ತ ಪಾರ್ಥ | ನನು ಪಚಾರಿಸಿ ||
ಧನುವನೊದರಿಸುತ್ತ ಪಾರ್ಥ | ನನು ಪಚಾರಿಸಲ್ಕೆ ಕಂಡು |
ಕನಲುತಾಗ ರಥವ ನಡೆಸಿ | ದನು ಧನಂಜಯ || ೪೦೦ ||

ಮೋಡಿಯಿಂದಲಿರ್ವರೆ | ಚ್ಚಾಡುತಿರುವ ರಭಸವನ್ನು |
ನೋಡಿ ದಿವಿಜರೆಲ್ಲ ಕೊಂ | ಡಾಡುತಿರ್ದರು ||
ನೋಡಿ ದಿವಿಜರೆಲ್ಲ ಕೊಂ | ಡಾಡುತಿರಲು ಭಾನುಸುತನ |
ರೂಢಿಸಿದ ವರೂಥವಿಳೆಯೊ | ಳೂಡಿ ಕುಸಿದುದು || ೪೦೧ ||

ಭಾಮಿನಿ

ಏನ ಮಾಡುವುದಿನ್ನು ದೈವವಿ |
ಹೀನನಲ್ಲಾ ನೃಪತಿ ರಣದಭಿ |
ಮಾನಿದೇವತೆ ಮುಳಿದಳಿಂದಿಗೆನುತ್ತ ಚಿಂತಿಸಿದ ||
ಭಾನುಸುತ ರಥವಿಳಿದು ಕುಂತೀ |
ಸೂನುವಿನ ಮೊಗ ನೋಡಿ ನೀತಿವಿ |
ಧಾನದಲಿ ತಾನೊರೆದ ಸರ್ವರು ಮೆಚ್ಚುವಂದದಲಿ || ೪೦೨ ||

ರಾಗ ಮಧುಮಾಧವಿ ಏಕತಾಳ

ಎಲೆ ಪಾರ್ಥ ನೀ ಕೇಳ್ವುದೊಲಿದೆನ್ನ ಮಾತ | ಛಲದಂಕನಹೆ ಸೋಮ ಕುಲಧರ್ಮಜಾತ |
ನೆಲದಲಿ ಹೂಳಿದುಮ್ಮಳಿಸಿತು ರಥವು | ಕಲಹಕಾನುವರೀಗಲಲಸದು ಮತವು || ೪೦೩ ||

ಬಿಲುಹೀನ ಶರಹೀನ ಸಲೆ ವಾಹನಗಳ | ಬಲಹೀನರಲಿ ಸಲ್ಲದೆಂಬ ನೀತಿಗಳ |
ಸಲೆ ಬಲ್ಲಿದವ ನೀನು ನಿಲು ಒಂದು ಕ್ಷಣಕೆ | ಸಿಲುಕಿರ್ದ ರಥವೆತ್ತುತಲೆ ಬಪ್ಪೆ ರಣಕೆ || ೪೦೪ ||

ವಾರ್ಧಕ

ಅಸಮಬಲನೆಂದ ನುಡಿಗೊಲಿದಾ ಧನಂಜಯಂ |
ವಸುಧೆಗಿಳುಹಲು ಚಾಪಮಂ ಬಳಿಕ ರಾಧೇಯ |
ನಸು ತಿರುಗಿ ಬಾಗಿ ಮಂಡಿಯನೂರಿ ಗಾಲಿಯಂ ಪಿಡಿದೆತ್ತುತಿರೆ ಕಾಣುತ ||
ಎಸೆ ಮರುಳೆ ಗಾಂಡೀವಿ ವೈರಿಗಳಿಗಾಪತ್ತು |
ಮಸಗಿದಾಗಲೆ ಕೊಲಲುಬೇಕೆಂಬುದರಸುಗಳ |
ಹಸನಾದ ನೀತಿ ತೊಡು ತೊಡು ಮಹಾಸ್ತ್ರವನೆಂದು ಮುರವೈರಿ ಗರ್ಜಿಸಿದನು || ೪೦೫ ||

ಕಂದ

ಹರಿಯಾಡಿದುದಂ ಕೇಳಿದು |
ತರಣಿಕುಮಾರನ ಬೆನ್ನ ನಿರೀಕ್ಷಿಸಲಾಗಂ ||
ಕರಗಿದುದಂತಃಕರಣಂ |
ಮರುಗುತ ಬಳಿಕಜಪಿತನೊಡನೆಂದನು ಪಾರ್ಥಂ || ೪೦೬ ||

ರಾಗ ಸೌರಾಷ್ಟ್ರ ಅಷ್ಟತಾಳ

ಮನಸಿಜಪಿತ ನೀನು ಮಾತಿಲಿ ಬಿಟ್ಟಾಡು | ಕರ್ಣನಾರೈ | ಎನ್ನ |
ಮನದಲ್ಲಿ ಹಲವು ಹಂಬಲಿಸುತ್ತಲಿರ್ಪುದು | ಕರ್ಣನಾರೈ |
ಧನುವೆತ್ತಲಾರೆ ಕೂರ್ಗಣೆ ತೊಡಲಾರೆನು | ಕರ್ಣನಾರೈ | ಮೇ |
ಣೆನಗೀಸು ಪಗೆಗಾಣದಾತನ ಮೇಲಿನ್ನು | ಕರ್ಣನಾರೈ || ೪೦೭ ||

ಪೊಡವಿಪಾಲಕನಿಂದ ಹೆಚ್ಚು ತೋರುತಲಿದೆ | ಕರ್ಣನಾರೈ || ಎನ್ನ
ಒಡಹುಟ್ಟಿದವನೊ ಸಂಬಂಧವೊ ತಿಳಿಯದು | ಕರ್ಣನಾರೈ
ನಡೆಯದೆನ್ನಯ ಮಾರ್ಗಣಂಗಳಾತನ ಮೇಲೆ | ಕರ್ಣನಾರೈ | ದೇವ |
ನುಡಿ ನುಡಿ ಮರೆಮಾಜಬೇಡ ಯಥಾರ್ಥವ | ಕರ್ಣನಾರೈ || ೪೦೮ ||

ಪ್ರೀತಿಯುಕ್ಕುತಲಿಹುದೆನ್ನ ಮನದಿ ಬಹು | ಕರ್ಣನಾರೈ | ಇವನ |
ಘಾತಿಸಲಿಕ್ಕೆನ್ನ ಮನವೆಳಸುವುದಿಲ್ಲ | ಕರ್ಣನಾರೈ |
ಖಾತಿಹುಟ್ಟುವುದಿಲ್ಲ ಲೇಶವಾದರು ಈಗ | ಕರ್ಣನಾರೈ | ಇದು |
ನೀತಿಯಾಗಿಯೆ ತೋರ್ಪುದಿಲ್ಲವು ತನಗಿಂದು | ಕರ್ಣನಾರೈ || ೪೦೯ ||

ಭಾಮಿನಿ

ಸಾಯಕಗಳಿಲ್ಲವಗೆ ಕರದೊಳ |
ಗಾಯತದ ಧನುವಿಲ್ಲ ಬರಿದೆ ನಿ |
ರಾಯುಧನ ಕೊಲಲೆಂದಡೆಂತೈ ನೋಡು ಮನದೊಳಗೆ |
ಬಾಯ ಬಿಡುತಲಿ ರಥವನೆಳೆದೆಳೆ |
ದಾಯೆನುತ ನಿಂದವನ ಮೇಲುರು |
ಗಾಯ ತೋರುವನಾರು ನೀ ನಿಷ್ಕರುಣಿ ಪೋಗೆಂದ || ೪೧೦ ||

ವಾರ್ಧಕ

ಎಂದಡೆಲೆ ಮರುಳೆ ಕೌಂತೇಯ ನಿನಗೇನೆಂಬೆ |
ಮಂದಮತಿ ಸೂತ ಸುತನಿವ ನಿನ್ನ ಬಾಂಧವನೆ |
ಹಂದೆ ಕುಲಗೆಡುಕ ನೀನೇಸು ಮರುಗುವೆ ಸಾಕು ಪಿಂದಣ ರಣಾಗ್ರದೊಳಗೆ ||
ಕಂದನಭಿಮನ್ಯುವಂ ಕೊಲುವಾಗಲೆಸೆವ ಸಂ |
ಬಂಧದವನೆಂದೆನುತ ನೋಡಿದನೆ ಬಿಡು ವೃಥಾ |
ಬಂಧುತನಮಂ ಬಳಿಕ ಧನುವಿಡಿದು ತೊಡು ದಿವ್ಯ ಮಾರ್ಗಣವನೀಗೆಂದನು || ೪೧೧ ||

ಕಂದ

ಮಾಧವನಿಂತೆನೆ ಕೇಳ್ದುಂ |
ಕ್ರೋಧದೊಳುರಿಮಸಗಿ ಧನಂಜಯನತಿ ಭರದಿಂ ||
ಛೇದಿಸಲೆಂದೆಸೆಯಲು ಕಲಿ |
ರಾಧೇಯನು ಕಂಡು ಕಠಾರಿಯೊಳಿರಿದೆಂದಂ || ೪೧೨ ||

ರಾಗ ಕೇದಾರಗೌಳ ಅಷ್ಟತಾಳ

ಭಳಿರೆ ಶಾಭಾಸು ಪಾರ್ಥಿವವಂಶಜಾತನೆ | ಕೊಳುಗುಳದಧಟ ನೀನೈ ||
ತಿಳಿಯದೀ ಪರಿ ಕೃತ್ರಿಮದಲಿ ಕೊಲ್ಲುವೆನೆಂದ | ರಳುಕುವ ಭಟನೆ ತಾನು || ೪೧೩ ||

ಇನ್ನು ನೋಡಲುಬಹುದುರುಪರಾಕ್ರಮದ ಸಂ | ಪನ್ನ ತೇಜವನು ನೀನು |
ಸನ್ನದ್ಧರಾಗಿದಿರಾಗೆಂದು ಕರ್ಣ ತಾ | ಖಿನ್ನಗೆಯ್ಸಿದ ಪಾರ್ಥನ || ೪೧೪ ||

ರಾಗ ಪಂಚಾಗತಿ ಮಟ್ಟೆತಾಳ

ಎನಲು ಕೇಳುತಾಗ ಪಾರ್ಥ | ಮನದಿ ರೋಷಗೊಂಡು ತನ್ನ |
ಧನುವನೊದರಿಸುತ್ತ ಶರದ | ವನಧಿ ಕವಿಸಿದ ||
ಧನುವನೊದರಿಸುತ್ತ ಶರದ | ವನಧಿ ಕವಿಸಲಾಗ ಕರ್ಣ |
ಕನಲುತೆಚ್ಚ ಪೊಸ ಶರೌಘ | ವನು ವಿರೋಧದಿ || ೪೧೫ ||

ಸವರುತಾಗಲದನು ಮರಳಿ | ರವಿಜಗಂಬಿನಿಂದ ಮುಸುಕ |
ಲವನಿ ತಳದೊಳೆಲ್ಲ ಬಾಣ | ನಿವಹವೆನಿಸಿತು ||
ಅವನಿತಳದೊಳೆಲ್ಲ ಬಾಣ | ನಿವಹವೆನಿಸಿತೆಂಬವೋಲು |
ಕವಿಸಲಯ್ದೆ ಕರ್ಣ ತಾ ನಿ | ದ್ರವದೊಳಿರ್ದನು || ೪೧೬ ||

ಭಾಮಿನಿ

ಹಾನಿದೋರಲ್ಕರಿದು ನೃಪ ನಿ |
ನ್ನಾನೆ ಕುಸಿದುದು ಕೇಳು ಕೊಳುಗುಳ |
ಕಾನುವಡೆ ಕೈಕಾಲು ನಡುಗಿತು ಧೈರ್ಯಸಿರಿ ತೊಲಗಿ ||
ಹೀನನಾದನು ಕೌರವೇಶ್ವರ |
ಗೇನು ಗತಿಯೋ ಹರ ಮಹಾದೇ |
ವೀ ನಿರೋಧಕೆ ಕಾದೆನೆಂದೆನುತಳಲಿದನು ಕರ್ಣ || ೪೧೭ ||

ರಾಗ ನೀಲಾಂಬರಿ ಏಕತಾಳ

ಶಿವ ಶಿವ ಸಮರದೊಳು | ಕೈಸೋತೆನಲ್ಲ | ಭುವನೇಶ ಮಮತೆಯೊಳು ||
ಕುವರನಂದದೊಳೆನ್ನನು | ಆಪತ್ತಿಗಾ | ಗುವನೆಂದು ಸಲಹಿದನು || ೪೧೮ ||

ಕೀಳುವಂಶಜನೆಂಬುದ | ಗ್ರಹಿಸದೆ ಗುಣ | ಶೀಲನೆಂದೆನ್ನ ಪೊರೆದ ||
ಕಾಳಗದೊಳು ಮಡಿದ | ಬಂಧುಗಳೆನ್ನ | ಮೇಲಾಸೆಯಿಂದ ಮರೆದ || ೪೧೯ ||

ಎನ್ನಕುಲವ ಕೃಷ್ಣನು | ಎಚ್ಚರಿಸಿ ತಾ | ನೆನ್ನೊಡೆಯನ ಕೊಂದನು ||
ಇನ್ನೆಂತು ಅಗಲುವೆನು | ಕೌರವನಿಗೆ | ಎನ್ನಂಥ ಮಿತ್ರರಾರಿನ್ನು || ೪೨೦ ||

ಕೋವಿದನೆನುತೆನ್ನನು | ಸನ್ನುತ ಹಿತ | ಭಾವದಿ ಸಲಹಿದನು ||
ಈ ವಿಧಿ ತನಗಾಯಿತು | ಆ ಕೌರವನ | ಜೀವದ ಸಿರಿ ಹೋಯಿತು || ೪೨೧ ||

ಚೆಲುವನ ಗುಣವ ಪೇಳಿ | ತುದಿಯ ಕಾಣೆ | ತಲೆಯ ರಣಾಗ್ರದಲಿ ||
ಸಲಹಿದಾತನ ಕಾರ್ಯದಿ | ಒಪ್ಪಿಸಲೆನ | ಗೊಲಿಯಲಚ್ಯುತ ಮುದದಿ || ೪೨೨ ||

ರಾಗ ಕಾಂಭೋಜಿ ಝಂಪೆತಾಳ

ಮರುಗುತೀ ತೆರದಿಂದ ಸುಜ್ಞಾನದಿಂದರಿತ | ಸೊರಗಲೇಕೀ ತೆರದಿ ತಾನು ||
ಹರಿ ಛಾಯೆಯಿಂದಳಿವ ತೆರವೆಂದ ಭಾಷೆ ಮುರ | ಹರನಿತ್ತನೆನಗೆ ಪೂರ್ವದೊಳು || ೪೨೩ ||

ನರನೆಂಬವನೆ ಛಾಯೆ ಹರಿಸಹಿತ ಮುಕ್ತಿಯನು | ಕರುಣಿಸದೆ ಬಿಡನಾದರೆನ್ನ ||
ಪರಶುಧರ ಚಕ್ರಧರ ಸುರಪ ನಿಜಮಾತೆಯೀ | ಧರಣಿದೇವಿಯು ಸಹಿತ ಮುನ್ನ || ೪೨೪ ||

ನೆರೆ ಯೋಚಿಸುತ್ತಿರ್ದು ಸರಿಸಿದರು ಕಾರ್ಯವನು | ಹರಣವೊಂದುಳಿದಿರ್ದರಿವರ ||
ತರಿದು ಭಾಷೆಯ ನಡೆಸದಿರ ಹಿಂದಣಾ ಪಗೆಯ | ಕುರುರಾಯನೇಂ ಬಲ್ಲನದರ || ೪೨೫ ||

ವಾರ್ಧಕ

ಎಂದು ನಿಶ್ಚಯಿಸಿ ಹರಿಯಂ ನೆನೆಯುತಿರೆ ಕೃಷ್ಣ |
ನಂದರಿತು ಸಾಹಸ್ರ ಕವಚದಿಂದೊಂದುಳಿದು |
ಬಂದು ಪುಟ್ಟಿದನೀತಗಂ ಮುಕ್ತಿಯನ್ನೀವ ಮತಮೆನಗೆ ಸುಧೆಕಲಶವು ||
ಇಂದಿವನ ಹೃದಯದೊಳಗಿರಲಳಿಯನಿವನೆನುತ |
ಲಂದು ವೃದ್ಧಾಕಾರದ ಸುವಿಪ್ರನಾಗಿ ಮುದ |
ದಿಂದ ಕರ್ಣನ ಪೊಗಳುತಯ್ತಂದನೇನೆಂಬೆ ಶ್ರೀವರನ ಸೂತ್ರಗಳನು || ೪೨೬ ||

ಕಂದ

ಎನುತಪರೋಕ್ಷದಿ ರವಿಜಂ |
ಮನವಿರಿಸುತ ನರನ ವರೂಥಾಗ್ರದ ಹರಿಯಂ ||
ನೆನೆದೀಕ್ಷಿಸುತಿರೆ ಪಾರ್ಥನ |
ಘನಶರವಳುಕಲು ದ್ವಿಜನಾಗಿಯೆ ಹರಿ ಬಂದಂ || ೪೨೭ ||

ರಾಗ ತಿಲ್ಲಾನಿ ಅಷ್ಟತಾಳ

ಬಂದು ಹರಿಯು ಕಪಟವೇಷ | ದಿಂದ ಸೂರ್ಯಸುತನ ಕೂಡಿಂ |
ತೆಂದ ತ್ಯಾಗದೊಳಗೆ ನಿನ್ನಲಿ |
ಕುಂದುಗಾಣೆವೆನುತ ನಾವ | ಯ್ತಂದೆವಿಲ್ಲಿಗೆಮ್ಮಪೇಕ್ಷೆಯ |
ನಿಂದು ಪೂರಯಿಸುವುದು ರಾಧೇಯ || ೪೨೮ ||

ಎನಲು ಕೇಳುತ್ತೆಲೆಲೆ ವಿಪ್ರ | ಘನ ರಣಾಗ್ರದಲ್ಲಿ ಬರಲು |
ನಿನಗೆ ಸಿಕ್ಕುವುದೇನು ಎಂದಡೆ |
ಕನಕಕುಂಡಲಂಗಳನ್ನು | ವಿನಯದಿಂದ ತೆಗೆದು ಬೇಗ |
ಲೆನಗೆ ಕೊಡುವುದಯ್ಯ ಪ್ರೇಮದಿ || ೪೨೯ ||

ವಿಪ್ರನಲ್ಲೀತ ಸಾಕ್ಷಾತ್ | ಸುಪ್ರಸನ್ನನೆಂದು ತಿಳಿದು |
ಕ್ಷಿಪ್ರದಿಂದ ಕುಂಡಲಂಗಳ ||
ಸುಪ್ರತಾಪನು ಕೊಡಲು ಧಾರೆ | ಯ ಪ್ರವಾಹಿಸದಿತ್ತರದು ತಾ |
ನಪ್ರಯೋಜಕವಪ್ಪುದೆಂದನು || ೪೩೦ ||

ವಾರ್ಧಕ

ಬುಧನೆಂದುದಂ ಕೇಳ್ದು ನೀರಿಲ್ಲಮೆನಲು ನಿ |
ನ್ನೆದೆಯೊಳಿದ್ದಮೃತಕಲಶವತೆಗೆ ವಿನೋದದಿಂ |
ಮುದದಿ ಧಾರೆಯನೆರೆದು ಕೊಡು ಎನೆ ಶರಾಗ್ರದಿಂದಾಗ ವಕ್ಷಸ್ಥಳವನು ||
ಕೆದರಿ ಸುಧೆಯಂ ತೆಗೆದು ವಿಪ್ರನ ಕರಾಂಜಲಿಯೊ |
ಳುದಕಮಂ ಬಿಟ್ಟು ಕುಂಡಲಮೀಯಲತಿ ಮೆಚ್ಚಿ |
ಪದುಳದಿಂ ವಿಶ್ವರೂಪವ ತೋರ್ದು ಹರಿ ಬಳಿಕ ನಿಜರಥದೊಳೆಸೆದಿರ್ದನು || ೪೩೧ ||

ರಾಗ ಮೋಹನ ಅಷ್ಟತಾಳ

ಕಂಡನು | ವಿಶ್ವರೂಪವ ಕರ್ಣನು | ಕಂಡನು   || ಪಲ್ಲವಿ ||

ಕಂಡನು ಸಕಲ ಬ್ರಹ್ಮಾಂಡದೊಡೆಯನನು | ದ್ದಂಡಮೂರುತಿಯ ಶ್ರೀಪುಂಡರೀಕಾಕ್ಷನ  || ಅ ||

ಹರಿಕೋಟಿ ಲಾವಣ್ಯದಿಂದ | ಮೊಗ | ಸ್ಫುರಿಸೆ ಕೋಮಲಕಾಯದಿಂದ | ರತ್ನ |
ವೆರಸಿದ ಹಾರಗಳಿಂದ | ಪೀತಾಂ | ಬರಮುಟ್ಟು ಶೋಭಿಸಲಂದ || ಶಿರ |
ಕಿರಿಸಿದ ಜ್ವಲಿಪ ಶ್ರೀಸಿರಿಮುಡಿ ಗಂಧ ಸುಂ |
ದರಕೋಟಿ ಮದನನನಿರದೆ ಹಿಂಗಿಸುತಿರೆ || ಕಂಡನು || ೪೩೨ ||

ಬಲು ಮೊಗ ಕೈ ಕರ್ಣದಿಂದ | ಮತ್ತೆ | ಬಲು ನೇತ್ರ ಬಲು ರೂಪಿನಿಂದ | ಸುರ |
ಕುಲವನು ಮುನಿಗಳನಂದ | ಮನು | ಗಳ ರುದ್ರವಸುಗಳ ವೃಂದ || ಯೋಗಿ |
ಗಳನು ಗಂಧರ್ವ ಚಾರಣ ವಿದ್ಯಾಧರಯಕ್ಷ |
ಕುಲವ ಕಿಂಪುರುಷರ ಜಲಜಾಕ್ಷನಂಗದಿ || ಕಂಡನು  || ೪೩೩ ||

ಗಿರಿ ನದನದಿಗಳನೆಲ್ಲ | ಮತ್ತೆ | ತರು ಗುಲ್ಮ ಫಲ ಸುಮವೆಲ್ಲ | ಗ್ರಹ |
ನೆರವಿಯ ನಕ್ಷತ್ರವೆಲ್ಲ | ತನ್ನ | ಚರಣದಾಶ್ರಿತ ಭಕ್ತರೆಲ್ಲ || ರೋಮ |
ದಿರದಲಿ ಕುಣಿಯುತ್ತಲೊಂದೆಸೆ ಪಾಂಡವ |
ರಿರದೊಂದು ಬದಿ ಕುರುವರಮುಖ್ಯರಿರಲದ || ಕಂಡನು  || ೪೩೪ ||

ಹರಕಮಲಜಗಿರಿಜೆಯನು | ದಿಕ್ಪಾ | ಲರ ಸಿರಿ ಶಾರದೆಯರನು | ಶಚಿ |
ಸುರರಪ್ಸರಾಂಗನೆಯರನು | ತೀರ್ಥ | ನೆರವಿಯ ಭಾಗೀರಥಿಯನು || ಸಪ್ತ |
ಶರಧಿ ಚತುರ್ದಶ ವರ ಭುವನವ ಸಹ |
ಹರಿಯಂಗದಲಿ ವೇದ ಪೊರೆದಿಹ ಬ್ರಹ್ಮನ || ಕಂಡನು  || ೪೩೫ ||

ವಾರ್ಧಕ

ಹರಿಯ ಕಂಡತ್ಯಧಿಕ ಭಕ್ತಿಯಿಂ ನುತಿಸುತಂ |
ಹರಿಯೆ ನೀ ಹಿಂದಿತ್ತ ಭಾಷೆಯಂ ನಡೆಸೆಂದು |
ಹರಿಸುತನು ಶಿರವೆಸಗೆ ಸಂಜ್ಞೆಯಿಂ ವಾಂಛೆಯಂ ಸಲಿಸುವೆನು ದಿಟವಿದೆನಲು ||
ಹರಿ ಕೃಷ್ಣ ಕೇಶವಾಚ್ಯುತ ಶ್ರೀಶನೆನ್ನುತಿರೆ |
ಹರಿ ನರನ ರಥಕಡರೆ ಪರಮಾತ್ಮ ಪರಬ್ರಹ್ಮ |
ಹರಿವೈರಿಕುಲನಾಶ ಶ್ರೀಧರನೆ ಜಯಮೆಂದು ಏಕಾಗ್ರಮನನಾದನು || ೪೩೬ ||

ಕಂದ

ಮುರಹರನಾಗ ಕಿರೀಟಯ |
ಕರೆದೀ ಕ್ಷಣ ತೊಡು ದಿವ್ಯ ಮಹಾಸ್ತ್ರವನೆನಲುಂ ||
ಹರನಾಸ್ತ್ರದಿ ಬಳುವಳಿಗಂ |
ಗಿರಿಜೆಯು ಕೊಟ್ಟಂಜನಬಾಣವ ತೆಗೆದೆಚ್ಚಂ || ೪೩೭ ||

ರಾಗ ಭೈರವಿ ತ್ರಿವುಡೆತಾಳ

ಎಚ್ಚನಾಗ | ಫಲುಗುಣ | ನೆಚ್ಚನಾಗ    || ಪಲ್ಲವಿ ||

ಅಚ್ಯುತಾಂಘ್ರಿಯ ನೆನೆದು ನೆಗಹಿದ | ಚಚ್ಚರದೊಳುರುಧನುವನು |
ಮೆಚ್ಚಿ ಕರುಣದೊಳಗಜೆಯಿತ್ತಿಹ | ಪೆಚ್ಚಿನಂಜನ ಶರವನು |
ಬಿಚ್ಚಿ ಡೊಣೆಯಿಂ ತೆಗೆದು ಮೌರಿಗೆ | ಹಚ್ಚಿ ಕರ್ಣನ ಶಿರವನು |
ಚುಚ್ಚಿ ಕೆಡೆಯಿಂದೆನುತಲೌಡನು | ಕಚ್ಚಿ ಕಿವಿವರೆಗೆಳೆದು ಬಿಸುಟನು || ಎಚ್ಚನಾಗ || ೪೩೮ ||

ಬಾಣದುರುಬೆಗೆ ಸಕಲ ಜನ ನಿ | ತ್ರಾಣವಾದುದು ಕ್ಷಣದೊಳು |
ಕೇಣ ಕಾರ್ಬೊಗೆ ಸುಳಿದು ಮುಸುಕಿತು | ಮಾಣದೆ ನಭಾಂಗಣದೊಳು |
ಕ್ಷೀಣವಿಲ್ಲದೆ ಸುರಿವ ಕಿಡಿಗಳ | ಠಾಣವೆಸೆದುದು ರಣದೊಳು |
ಕ್ಷೆಣಿ ಬಾಯ್ಬಿಡೆ ಕೂರ್ಮದಿಗ್ಗಜ | ಶ್ರೇಣಿ ಬೆಚ್ಚಲು ತೀವ್ರ ಕಣನೊಳು || ಎಚ್ಚನಾಗ || ೪೩೯ ||

ಭಾಪು ಭಳಿರೇ ಪೂತು ಮಝರೆನು | ತಾ ಪುರಂದರ ಪೊಗಳಲು |
ಲೋಪವಹುದೆನುತಖಿಳಜನದಾ | ಳಾಪದನುವನು ನೆಗಳಲು
ಚಾಪವೆಡೆಗೊಂಡಂಬು ಕರ್ಣಪ್ರ | ತಾಪಶಿರವನು ಕಡಿದು ಜಿಗುಳಲು || ಎಚ್ಚನಾಗ || ೪೪೦ ||

ಭಾಮಿನಿ

ಅಂಜನಾಸ್ತ್ರದೊಳರಿದು ಕರ್ಣನ |
ರಂಜಿಸುವ ತಲೆ ಧರಣಿಗುರುಳಲು
ಮಂಜುಳಾತ್ಮಜ್ಯೋತಿಯಯ್ದಿತು ಸುಪ್ರಕಾಶದಲಿ ||
ಕಂಜಸಖನೆಡೆಗಾಗಿ ಬಳಿಕಾ |
ಕುಂಜರನೆ ಹಾಯೆಂದು ಮರುಗಿ ಧ |
ನಂಜಯನು ತಿರುಗಿದನು ನೆನೆನೆನೆದವನ ವಿಕ್ರಮವ || ೪೪೧ ||

ವಾರ್ಧಕ

ಸಕಲ ಜನ ಮರುಗಿತಾ ರಾಧೇಯನಳಿವಿನೊಳು |
ವಿಕಳಮತಿ ಕೌರವಂ ಕೇಳ್ದು ಮೂರ್ಛಿತನಾದ |
ಶಕುನಿ ಮೊದಲಾದವರು ಬಂದು ಸಂತವಿಸಿ ನಿಜಪಾಳೆಯಕೆ ತೆರಳಿಸಿದರು ||
ಪ್ರಕಟಿಸಿದನಾತ್ಮಜಂ ಮಡಿದನೆಂಬೀ ಶೋಕ |
ವಿಕಸಿತದೊಳಿನನಿಳಿದನಂಬುಧಿಗೆ ಕೂಡೆ ಸೈ |
ನಿಕವೆರಡು ತಿರುಗಿದು ಬಿಡಾರಂಗಳಿಗೆ ಪಾಂಡುಸುತರೊಡನೆ ಹರಿ ಬಂದನು || ೪೪೨ ||

ಮರುದಿವಸ ಶಲ್ಯ ಸೌಬಲ ತ್ರಿಗರ್ತರ ಸದೆದು |
ಕೆರೆಯೊಳಡಗಿರ್ದ ಕೌರವನನೆಬ್ಬಿಸಿ ರಣದಿ |
ತರಿದು ಧೃತರಾಷ್ಟ್ರಾದಿಗಳ ಶಾಪಮಂ ಬಿಡಿಸಿ ಪಾಂಡುಸುತರಂದು ಬಳಿಕ ||
ಹರಿ ಸಹಿತ ಸಿಂಧೂರನಗರಾಂತರಕ್ಕಯ್ದಿ |
ವರ ಯುಧಿಷ್ಠಿರನೃಪಗೆ ಪಟ್ಟಾಭಿಷೇಕಮಂ |
ವಿರಚಿಸಲು ವರವಾದ್ಯರವವೆಸೆಯೆ ನಾರಿಯರು ತಂದೆತ್ತಲಾರತಿಯನು || ೪೪೩ ||

ರಾಗ ಢವಳಾರ ಏಕತಾಳ

ರಾಜಾಧಿರಾಜ ಪಾಂಡವಗೆ | ರಾಜೀವಾಕ್ಷನ ಭಜಿಸುವಗೆ ||
ತೇಜದಿ ಬೆಳಗುವ ಧರ್ಮಸ್ವರೂಪಗೆ | ಮೂಜಗದೊಳಗತಿ ಕೀರ್ತಿಕಲಾಪಗೆ ||
ರಾಜವದನೆಯರು ವೈಭವದಿಂದಲಿ | ರಾಜಿಸುವಾರತಿಯ ಬೆಳಗಿರೆ || ಶೋಭಾನೆ ||೪೪೪||

ಐವರ ಸತಿಗೆ ತೋಷದೊಳು | ಮೆಯ್‌ವಳೆಯದ ನಾರಿಗಳು |
ಕಯ್ ವಿಡಿದಿಹ ದೀವಿಗೆಬೆಳಕಿನೊಳು | ನೈವರಿಸುವ ಘನ ಗೀತಂಗಳೊಳು ||
ದೈವಿಕದಂಗನೆಯೆನುತಾರತಿಯನು | ರೈವಾಸದಿಂದ ಬೆಳಗಿರೆ || ಶೋಭಾನೆ || ೪೪೫ ||

ಶೀಲವಂತೆಯರೆಲ್ಲ ಸುಳಿದು | ಜಾಲ ಮುತ್ತಿನ ಸೇಸೆ ತಳಿದು |
ಮೇಲುದಶಾಗ್ರವ ಕುಚದಡಿಗೆಳೆದು | ಕಾಲಲಂದುಗೆ ಗೆಜ್ಜೆ ಘಲಿರೆನೆ ನಲಿದು ||
ನೀಲಮಾಣಿಕದಿಂದಲೆ ರಚಿಸಿರ್ದ ವಿ | ಶಾಲದಾರತಿಯ ಬೆಳಗಿರೆ || ಶೋಭಾನೆ || ೪೪೬ ||

ಭಾಮಿನಿ

ಇಂತು ಪಟ್ಟವ ಧರಿಸುತೆಮಜನು |
ಚಿಂತೆವಿರಹಿತನಾಗಿ ಪ್ರಜೆಗಳ |
ಸಂತವಿಡುತಲೆ ರಾಜ್ಯಭಾರವ ಗೆಯ್ಯಲಾ ಬಳಿಕ ||
ಕಂತುಜನಕನು ವಿನಯದಿಂದಲೆ |
ಕುಂತಿತನುಜನ ಬೀಳುಗೊಂಡಾ |
ದಂತಿನಗರವ ಪೊರಟುಬಂದನು ದ್ವಾರಕಾಪುರಿಗೆ || ೪೪೭ ||

ಲಾಲಿಸೈ ಜನನಾಥ ಲಕ್ಷ್ಮೀ |
ಲೋಲ ಪಾಂಡುಕುಮಾರರೊಡನತಿ |
ಲೀಲೆಯಿಂದಿರುತಿರ್ದನೆಂಬೀ ಘನ ಕಥಾಮೃತವ ||
ಮೇಲೆ ಭೀಷ್ಮ ದ್ರೋಣ ವಿಕ್ರಮ |
ಶಾಲಿ ರವಿಸುತ ಮುಖ್ಯ ನೃಪರ ವಿ |
ಶಾಲಚರಿತವಿದಿಲ್ಲಿ ಮುಗಿದುದೆನುತ್ತ ಮುನಿ ನುಡಿದ || ೪೪೮ ||

ಇದು ಕಣಾ ಪರಮೋಕ್ಷಸಾಧನ |
ಇದು ಕಣಾ ಪಾತಕವಿನಾಶನ |
ಇದು ಕಣಾ ಐಶ್ವರ್ಯ ಧನ ಕನಕಾದಿ ಲಭ್ಯಕರ ||
ಇದನು ಲಾಲಿಸಿ ಕೇಳ್ದ ಜನರಿಗೆ |
ಮುದವೊಲಿದು ತಾ ಪೇಳಿದವರಿಗೆ  |
ಪದುಮನಾಭನ ದಯವು ದೊರಕುವುದವರಿಗನವರತ || ೪೪೯ ||

ಈ ಮಹಾಕೃತಿ ರಚಿಸುವರೆ ತಾ |
ಕ್ಷೇಮನಗರಾಪತಿಯ ವೇಂಕಟ |
ಧಾಮನೆನ್ನಯ ಹೃದಯ ಕಮಲದಿ ವಾಸವಾಗಿರ್ದು ||
ಪ್ರೇಮದಿಂದಲಿ ನುಡಿಸಲಾತನ |
ನಾಮ ಸಂಕೀರ್ತನೆಯನುಸಿರಿದೆ |
ಭೂಮಿಯೊಳಗುತ್ತಮರು ಕೇಳುವುದೀ ಮಹಾಕಥೆಯ || ೪೫೦ ||

ಮಂಗಲ

ರಾಗ ಅಹೇರಿ ಏಕತಾಳ

ಮಂಗಲಂ | ಜಯ | ಮಂಗಲಂ     || ಪಲ್ಲವಿ ||

ಮಂಗಲ ಶರಧಿಯ ಪೊಕ್ಕವಗೆ | ಜಯ | ಮಂಗಲ ಗಿರಿಯನು ತಾಳ್ದವಗೆ ||
ಮಂಗಲ ಧರಣಿಯ ತಂದವಗೆ | ಶುಭ | ಮಂಗಲ ವರದನೃಸಿಂಹನಿಗೆ || ಮಂಗಲಂ || ೪೫೧ ||

ಮಂಗಲ ನಿಪುಣನಹ ವಟುವಿಂಗೆ | ಜಯ | ಮಂಗಲ ನೃಪಕುಲ ತರಿದವಗೆ ||
ಮಂಗಲ ಕಪಿಗಳಿಗೊಲಿದವಗೆ | ಶುಭ | ಮಂಗಲ ಕಪಟಚರಿತ್ರನಿಗೆ ||  ಮಂಗಲಂ || ೪೫೨ ||

ಮಂಗಲ ಬತ್ತಲೆ ನಿಂದವಗೆ | ಜಯ | ಮಂಗಲಂ ತುರಗವೇರ್ದವಗೆ ||
ಮಂಗಲ ಶ್ಯಾಮಲವರ್ಣನಿಗೆ | ಶುಭ | ಮಂಗಲ ಕ್ಷೇಮಪುರೀಶನಿಗೆ || ಮಂಗಲಂ || ೪೫೩ ||

ಯಕ್ಷಗಾನ ಕರ್ಣಪರ್ವ ಮುಗಿದುದು