ಕಂದ

ರತುನಗಳವನಿಗೆ ಬೀಳಲು |
ಸಿತತುರಗನ ತಲೆಯಿದೇ ಎನುತ್ತೆಂದಾಗಳ್ ||
ಪ್ರತಿಯಾಗಿಯೆ ಕಾಣಿಸೆ ತಾಂ |
ಮತಿಗೆಡುತಂ ಧರ್ಮಕುಮಾರಂ ಪ್ರಲಪಿಸಿದಂ || ೪೬೮ ||

ರಾಗ ನೀಲಾಂಬರಿ ಆದಿತಾಳ

ಶ್ವೇತವಾಹನ | ಶಶಿನಿಭಾನನ | ಭೂತನಾಥನು | ಮುನಿದನೇನಯ್ಯ ||
ಏತಕೀ ಮಹಾ | ಪಾಶುಪತಶರ | ಏತಕ್ಹಿಂಗಿತು | ಅನಲಧನುವಿದು || ೪೬೯ ||

ಮೃಡನ ಸಂಗಡ | ಕಾದಿ ಗೆಲಿದಿಹ | ಕಡು ಪರಾಕ್ರಮ | ವೆತ್ತ ಪೋದುದೋ ||
ಜಡಜಮಿತ್ರನ | ಸುತನ ಖಡುಗದಿ | ಮಡಿದೆಯಲ್ಲವೆ | ತಮ್ಮ ಅರ್ಜುನ || ೪೭೦ ||

ಅಡವಿಯೇ ಸುಖ | ನಮಗೆ ರಾಜ್ಯದ | ಗೊಡವೆ ಬೇಡ ನಾ | ನೆಂದೆ ನಿನ್ನೊಳು |
ಪೊಡವಿಯಾಳದ | ನೃಪನ ಸ್ವರ್ಗದಿ | ಬಿಡರು ದಾರಿಯ | ಎಂದೆಯಲ್ಲವೆ || ೪೭೧ ||

ಕಂದನೋರ್ವನ | ಕೊಲಿಸಿ ಕಡೆಯಲಿ | ಕೊಂದೆನನುಜನ | ಈಗಲಯ್ಯಯ್ಯೋ ||
ಮುಂದೆ ಕೌರವ | ನೃಪನ ಗೆಲಿದರೆ | ಸಂದ ಅರ್ಜುನ | ಮರಳಿ ಬರುವನೆ || ೪೭೨ ||

ಭಾಮಿನಿ

ಅನುಜನೋರ್ವನನಗಲಿ ತನ್ನಯ |
ತನುವ ಪೊರೆವೆನೆ ಶಿವ ಶಿವಕಟಾ |
ಎನುತ ಖಡುಗವ ಕೊಂಡು ಛೇದಿಪೆನೀಗ ತನ್ನಸುವ |
ಇನಸುತನಿಗೊಪ್ಪಿಸುವೆ ಜೀವವ |
ನೆನುತಲಿರೆ ಬಳಿಕಿತ್ತ ದ್ರುಪದಜೆ |
ಕನಲಿ ಕಂಗೆಡುತಯ್ದೆ ಬಂದಳು ನೃಪನ ಪೊರೆಗಾಗಿ || ೪೭೩ ||

ಕಂದ

ಕುಕ್ಷಿಯ ಬಾರಿಸುತಾ ಕಮ |
ಲಾಕ್ಷಿಯುಮತಿ ಚಿಂತೆಯಿಂದ ಶೋಕಿಸುತಂ ಮೇಣ್ ||
ದಕ್ಷಾತ್ಮಜೆಯರಸನೆ ನೀಂ |
ರಕ್ಷಿಸುವುದು ನಮ್ಮನೆಂದು ಮರುಗಿದಳ್ ತಾಂ || ೪೭೪ ||

ರಾಗ ನೀಲಾಂಬರಿ ಏಕತಾಳ

ಅಯ್ಯಯ್ಯೋ ಎನ್ನಯ ರಮಣ | ಅರಿಗಳಿಗಸಿಯಾಭರಣ |
ಕೈಯಾರೆ ಕೊಲಿಸದೆ ಎನ್ನ | ಪೋಪರೆ ಮೋಹನ್ನ || ೪೭೫ ||

ಧೈರ್ಯದಿ ನಿನ್ನೊಳ್ ಕಾದುವ | ವೈರಿಗಳಾರಿನ್ನಿಳೆಯೊಳು |
ಆರ್ಯಮಸುತನಿಗೆ ಸೋಲುವ | ಪರಿಯಾಯಿತೆ ಶಿವನೆ || ೪೭೬ ||

ಪಾಶುಪತಾಸ್ತ್ರವು ಬರಿ ಬಯ | ಲಾಸೆಗಳಾದುದೆ ಶ್ರೀ ಲ |
ಕ್ಷ್ಮೀಶನೆ ನಿನಗಲ್ಲದೆ ಇ | ನ್ನಾರಿಗೆ ಪೇಳುವೆನು || ೪೭೭ ||

ಪಾಸಟಿ ಕೌರವನೊಳಗೆ ವಿ | ನಾಶಗಳಾಗುವುದಾಯಿತೆ |
ಈ ಶೋಕವನ್ಯಾರಿಗೆ ಪೇಳುವೆ | ಹರಹರ ಕೇಶವ ಮಾಧವನೇ || ೪೭೮ ||

ಮರುತಜನೆಲ್ಲಿರ್ಪನೊ ಮಾದ್ರೀ | ಸುತರೇನಾದರೊ ವಿಧಿ ಪರಿ |
ಹರಿಸುವರಾರೀ ಶೋಕವನೆನು | ತೊರಲಿದಳಬುಜಾಕ್ಷಿ  || ೪೭೯ ||

ರಾಗ ಸಾವೇರಿ ಆದಿತಾಳ

ಹರ ಹರ ಎನ್ನಯ ವಿಧಿಯೇ | ಅಯ್ಯಯ್ಯೋ |
ಸುರ | ವರರಿಗಿನಿತು ಪ್ರೀತಿಯಾಯ್ತೆ | ಅಯ್ಯಯ್ಯೋ ||
ಪುರುಷರೈವರಿರಲೇನಾಯಿ | ತಯ್ಯಯ್ಯೋ |
ಎನ್ನ | ಕೊರಳ ಕೊಯ್ದು ಪೋದಿರೇ ನೀ | ವಯ್ಯಯ್ಯೋ || ೪೮೦ ||

ಕಂದನಭಿಮನ್ಯುವಿರ | ಲಯ್ಯಯ್ಯೋ |
ಈ ಕುರು |  ವೃಂದವನುಳುಹಗೊಡುವನೆ | ಅಯ್ಯಯ್ಯೋ ||
ಮಂದಬುದ್ಧಿಯಾಯಿತಲ್ಲ | ಅಯ್ಯಯ್ಯೋ |
ನಾವು | ಇಂದು ಮೋಸಹೋದೆವಲ್ಲ | ಅಯ್ಯಯ್ಯೋ || ೪೮೧ ||

ಪುಟ್ಟಿ ದೇಹ ವ್ಯರ್ಥವಾದು | ದಯ್ಯಯ್ಯೋ |
ಮುಂದೆ | ಇಟ್ಟು ಬಾಳಿಕೊಂಡರೇನು ಸ್ವಾರ್ಥ | ಅಯ್ಯಯ್ಯೋ ||
ಥಟ್ಟನೆ ನಾ ವಿಷವ ಕೊಂಬೆ | ನಯ್ಯಯ್ಯೋ |
ಪ್ರಾಣ | ಬಿಟ್ಟರೆ ಲೇಸಿದು ತನಗೆ | ಅಯ್ಯಯ್ಯೋ  || ೪೮೨ ||

ಭಾಮಿನಿ

ಎಂದು ನಾನಾವಿಧದಿ ದುಃಖಿಸು |
ವಂದವನು ತಿಳಿದಾಗ ಮುರಹರ |
ನಂದು ದೂತನ ಹರಿಸಿ ಸಂತೈಸಿದನು ಧರ್ಮಜನ ||
ಚಂದವಾದುದೆನುತ್ತ ದ್ರುಪದನ |
ನಂದನೆಗೆ ಧೈರ್ಯವನು ತಿಳುಹಿಸ |
ಲಂದು ಗಮಿಸಿದನಸುರ ರಿಪುವಿದ್ದೆಡೆಗೆ ವೇಗದಲಿ || ೪೮೩ ||

ವಾರ್ಧಕ

ಧರಣಿಪತಿ ಕೇಳಿತ್ತಲಚ್ಯುತಂ ಪಾಂಡವರ |
ಹರುಷಮಂಗೊಳಿಸುತಿರಲತ್ತಲಂದುರಗಾಸ್ತ್ರ |
ಮರಳಿ ಬಂದುದು ಪುರಾಕೃತ ವೈರದಿಂದಿನಜನಿರುವಲ್ಲಿಗಾ ಕ್ಷಣದೊಳು ||
ಅರಿಕೆಯಿನ್ನೊಂದುಂಟು ತೊಡು ಮರಳಿ ಬೇಗದಿಂ |
ಪರಿಕಿಸರ್ಜುನನ ಶಿರ ಕಡಿವೆನೆಂದೊರೆಯಲನಿ |
ತರೊಳು ರವಿಸೂನು ತಾ ಬೆರಗಾಗಿ ನೋಡುತಿರೆ ಮಾದ್ರೇಶನಿಂತೆಂದನು || ೪೮೪ ||

ಕಂದ

ಕರ್ಣನೆ ಕೇಳೀ ಶರ ಮಗು |
ಳಿನ್ನೊಮ್ಮೆ ತೊಡು ಎಂದು ಬೇಡುತಿದೆ ಬೆಸನಂ ||
ನಿನ್ನೊಳಗನುಮಾನವಿದೇ |
ಕಿನ್ನದ ತೊಡು ಬೇಗದೊಳೀ ಮಹಾಹಿಶರಮಂ || ೪೮೫ ||

ರಾಗ ಕಾಂಭೋಜಿ ಝಂಪೆತಾಳ

ಕೇಳು ಮಾದ್ರಾಧೀಶ ನೀನೆಂಬ ವಚನವನು | ಕೇಳಿ ಸಂತಸವಾದುದೆನಗೆ ||
ಲೋಲಲೋಚನ ರಾಮನಾಳ್ವ ಕಾಲದಲಿ ಬಹು | ಖೂಳ ರಕ್ಕಸರನುರೆಗೆಲಿದು || ೪೮೬ ||

ಮರಳಿ ಬಹ ಬಾಣಗಳೊಳಾರು ನೀನೀ ವಿಶಿಖ | ಅರುಹಬೇಕೆನಲುಮವನೆಂದ ||
ಸುರಪತಿಯ ಖಾಂಡವವನದೊಳಿರಲು ತಾನಲ್ಲಿ | ಉರಗಪತಿ ತಾನಶ್ವಸೇನ || ೪೮೭ ||

ಒಂದು ದಿನವಾ ವನವನುರಿಗೊಳಿಸಲರ್ಜುನನು ಅಂದು ಭಯದಿಂ ಪಾಯ್ವುತಿರಲು ||
ಕೊಂದನೀ ಪಾಪಿ ಅರೆಗಡಿದೆನ್ನ ನಾನವನಿ | ಗೆಂದ ಭಾಷೆಯ ಕೇಳು ನೀನು || ೪೮೮ ||

ಧರಣಿಯೊಳಗುಳ್ಳ ವೀರರ ಸೇರಿ ಸರಳಾಗಿ | ಕೊರಳ ಕತ್ತರಿಪೆನೆಂದೆಂಬ ||
ಇರುವ ಭಾಷೆಗೆ ನರನ ಶಿರವನವನಿಗೆ ಕೆಡೆವೆ | ಹರಿಸೊಮ್ಮೆ ಎನಲುಮವನುಸಿರ್ದ || ೪೮೯ ||

ಭಾಮಿನಿ

ಮರುಳೆಲಾ ಎಲೆ ವಿಶಿಖ ನಾನೀ |
ಪರರ ಹಂಗಿಲಿ ಗೆಲುವ ಕರ್ಣನೆ |
ಅರಿಗೆ ವೈರಿಯು ನೀನು ನಿನ್ನನು ತೊಡುವುದಿಲ್ಲೆಂದ ||
ಮರುಗಿದನು ಶಲ್ಯನು ನೃಪಾಲನ |
ನಿರಿದೆಯೋ ರಾಧೇಯ ಕುರುಪತಿ |
ಕರೆದು ನಿನ್ನನು ಸಾಕಿದಕ್ಕುಪಕಾರವಾಯ್ತೆಂದ || ೪೯೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲವೊ ನಿನ್ನನು ಜಗವರಿಯೆ ಕ | ಬ್ಬಿಲರ ಮಗನನು ತಂದು ವಂಚಿಸಿ |
ಕುಲಜನನು ಮಾಡಿದಕೆ ಕಡೆಯಲಿ | ಫಲವ ತೋರ್ದೆ || ೪೯೧ ||

ನೆಲನು ಹೊರುವುದೆ ಪಾಪಿ ಕೀರ್ತಿಯ | ಬೆಳಸು ಮಾಸಿದರುಂಟೆ ಸಾಕಿದ |
ಹೊಲೆಯನಾದರು ಹರಿಬಕೊದಗದೆ | ಉಳಿವನೇನೈ || ೪೯೨ ||

ಏನೆಲವೊ ವಿಶ್ವಾಸಘಾತಕ | ನೀನು ರಣಕಂಜುವರೆ ಸ್ವರ್ಗದ |
ಮಾನಿನಿಯ ರತಿಸುಖವ ಕೆಡಿಸಿದೆ | ಯೆನುತುಸುರ್ದ || ೪೯೩ ||

ಭಾಮಿನಿ

[ಮಾತೆಗಿತ್ತೆನು ಭಾಷೆಯನು ತವ |
ಜಾತರೊಳಗೈವರನು ರಣದಲಿ |
ಘಾತಿಸದೆ ನಾಂ ಕಾಯ್ವೆನೆಂಬಾ ಮಾತಿಗೋಸುಗವೆ ||
ಸೋತವನು ತಾನೀಗ ಪಾರ್ಥನ |
ಖಾತಿಗೊಪ್ಪಿಸಿ ಕಳೆವೆ ತನುವನು |
ಭೀತಿ ಬೇರಿಲ್ಲೆನಲು ಕಿಡಿಕಿಡಿಯಾದನಾ ಶಲ್ಯ || ೪೯೪ ||]

ನಂಬಿ ಹಿಡಿದರೆ ನದಿಯ ಮಗ ಹಗೆ |
ಯಂಬಿಗಿತ್ತನು ಕಾಯವನು ಸುತ |
ನೆಂಬ ನೆವದಲಿ ತನುವ ಬಿಸುಟನು ಗರಡಿಯಾಚಾರ್ಯ ||
ಅಂಬು ಬೆಸನವ ಬೇಡಿದರೆ ತೊಡೆ |
ನೆಂಬ ಛಲ ನಿನಗಾಯ್ತು ಮೂವರ |
ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ | || ೪೯೫ ||

ಕಂದ

ಚಮ್ಮಟಿಕೆಯನಲ್ಲಿಯೆ ಬಿಸು |
ಟುಮ್ಮಳಿಸುತ ರಥವನ್ನಿಳಿದಾ ಕ್ಷಣ ಶಲ್ಯಂ ||
ದುಮ್ಮಾನದೊಳಡಹಾಯ್ದಹಿ |
ಧರ್ಮಾನುಜನೀಕ್ಷಿಸೆಂದಂ ಮಾರಜನಕಂ  || ೪೯೬ ||

ರಾಗ ಸಾಂಗತ್ಯ ರೂಪಕತಾಳ

ಕೇಳಯ್ಯ ಪಾರ್ಥ ನೀ ಖಾಂಡವವನವನುರಿ | ಗೊಳಿಸುವ ಸಮಯದೊಳೀತ ||
ನಿಳಯದಿಂದಭ್ರಕ್ಹಾರುವ ವೇಳೆಯಲಿ ಬಾಣ | ಸೆಳೆದು ತುಂಡಿಸಿದರ್ಧ ದೇಹ || ೪೯೭ ||

ನಿನ್ನ ತಲೆಯ ಕಚ್ಚಿ ಕೊಲುವೆನೆಂಬ ಭಾಷೆ | ಯನ್ನು ತಾಳಿದು ಕರ್ಣನಲ್ಲಿ ||
ಪನ್ನಗಶರವಾಗಿರಲು ಆತನು ಪೂಡೆ | ಯೊಮ್ಮೆ ನಾ ಕಾಯ್ದೆನಿಂದಿನಲಿ || ೪೯೮ ||

ಮರಳಿ ಬಂದೊಮ್ಮೆ ನೀ ತೊಡು ಎಂದು ಕರ್ಣನೊಳ್ | ಶಿರವ ಕತ್ತರಿಸುವೆನೆನಲು ||
ಪರರ ಹಂಗಿಲಿ ಗೆಲ್ವ ಭಟನಲ್ಲ ತಾನೆಂದು | ಮರಳಿ ನೂಕಿಸಿ ಬಿಟ್ಟು ಕಳೆದ || ೪೯೯ ||

ತೊಡು ಬೇಗ ಬಾಣವನೆನಲು ಮುಕ್ಕಡಿಯಾಗಿ | ನಡುವೆ ಖಂಡಿಸಿದನಾ ಕ್ಷಣದಿ ||
ಅಡಗಿದುದಾ ಶರವಲ್ಲಿಯೆ ಮುಂದಣ | ನಡೆದ ಸಂಗತಿ ಕೇಳು ಭೂಪ || ೫೦೦ ||

ಭಾಮಿನಿ

ಧರಣಿಪತಿ ಕೇಳಿತ್ತ ಮಾದ್ರಾ |
ವರ ಜನಪನಡಹಾಯ್ದನತ್ತಲು |
ತರಣಿ ಸುತನಳುಕುವನೆ ಕೊಂಡನು ದಿವ್ಯ ಮಾರ್ಗಣವ ||
ಹರಿಗೆ ಐವತ್ತೆಂಟು ಮೇಲಿನ |
ಮರುತಜನಿಗೆಂಭತ್ತು ಮುಂದಣ |
ತುರಗಚಯಕೈವತ್ತು ಶರಗಳನೆಚ್ಚು ನರಗೆಂದ || ೫೦೧ ||

ರಾಗ ಭೈರವಿ ಅಷ್ಟತಾಳ

ಎಲವೋ ಪಾರ್ಥನೆ ನೀ ಕೇಳೊ | ಆಕಳಿಗೆ ಹೆ | ಬ್ಬುಲಿಯಂಜಲುಂಟೆ ಪೇಳೊ ||
ತಿಳಿಯಬಹುದು ಹಿಂದಣಂತಲ್ಲ ಸಮರದ | ಬಲುಮೆಯ ನೋಡೆಂದನು || ೫೦೨ ||

ನೋಡಿದೆ ಮೊದಲು ನಾನು | ನಿಮ್ಮರಸನ | ಜೋಡಾಗಿ ಬಿಗಿದುದನು ||
ಗಾಢದಿ ಖೇಚರರವರೊಳು ಕಾದಿ ಹೊ | ಯ್ದಾಡಿದಾತನು ನೀನೆಲೈ  || ೫೦೩ ||

ಇಷ್ಟು ಮಾತುಗಳಾರೊಳು | ಪೇಳುವರೆದೆ | ಮುಟ್ಟಿ ನೋಡಿಕೊ ನಿನ್ನೊಳು ||
ನೆಟ್ಟನೆ ಇದಿರಾಗೆನುತ್ತಲೆ ಶರಗಳ | ವೃಷ್ಟಿಯ ಸುರಿದನಂದು || ೫೦೪ ||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಸೂತನುಣಗ ಕೇಳು | ಹುಲು ಶರಂಗಳಿಂ |
ಗೆಲುವುದಲ್ಲದಿರಲು ನೋಡು | ದಿವ್ಯ ಶರಗಳಿಂ || ೫೦೫ ||

ಎನಲು ಕೇಳುತಾಗ ಕರ್ಣ | ಕುಲಿಶ ಶರವನು ||
ಕನಲುತೆಚ್ಚನಾಗ ವಿಜಯ | ಕಡಿದು ಬಿಸುಟನು || ೫೦೬ ||

ಮತ್ತೆ ಪ್ರಾಸಪರಿಘ ಪಟ್ಟಿ | ಸಾಯುಧಂಗಳ ||
ಒತ್ತಿ ಬಿಡಲು ಕಡಿದನಾಗ | ನೈಂದ್ರಶರದೊಳು || ೫೦೭ ||

ವಾರ್ಧಕ

ಧರಣಿಪತಿ ಕೇಳು ಕರ್ಣಾರ್ಜುನರ ಸಮರದಿಂ |
ದರುವತ್ತು ಕೋಟಿ ಕರಿತುರಗರಥಸಾಲ್ಗಳಿಂ |
ದೊರಸಿ ನೂರೆಂಬತ್ತುಸಾವಿರ ನೃಪಾಲರಂ ಸವರಿದಂ ಸೈನಿಕರನು ||
ಅರುಣಾಂಬುವಿನ ಹೊಳೆಯ ಮಧ್ಯದಿಂ ಚೋದ್ಯದಿಂ |
ಸರಕಟಿಸಿ ಬೀಳ್ವ ಶವದೋಟದಿಂ ಕೂಟದಿಂ |
ನರಿ ಹದ್ದು ಕಾಗೆ ನಾಯ್ ಹರಿವುದಂತರಿವುದಂ ಏನೆಂಬೆನಚ್ಚರಿಯನು || ೫೦೮ ||

ಭಾಮಿನಿ

ಇಂತು ಸಮರದಿ ಸುರಿವ ರಕುತದಿ |
ದಂತಿ ಮುಳುಗುವ ತೆರದಿ ಕೆಸರುಗ |
ಳಾಂತು ಧರಣಿಯೊಳ್ ನಿಂತುದಾ ವರ ರಥವು ಕಣನೊಳಗೆ ||
ಪಂಥದಲಿ ರಥದಚ್ಚು ಕೀಲ್ಗಳ |
ನಾಂತು ಕೀಳುವ ರವಿಜನಧಟನು |
ನಿಂತು ನೋಡುತ ಕೃಷ್ಣ ಪಾರ್ಥನೊಳೆಂದ ನಸುನಗುತ  || ೫೦೯ ||

ರಾಗ ಘಂಟಾರವ ಆದಿತಾಳ

ಕೇಳಯ್ಯ ಪಾರ್ಥ ನೀ ವೈರಿ ಕರ್ಣನ ಕೊಲುವ |
ವೇಳೆಯದೀಗ ನೋಡು ತೊಡು ದಿವ್ಯ ಶರವ || ೫೧೦ ||

ತಡವ ಮಾಡದೆ ಬೇಗ ಇಳುಹು ಮಸ್ತಕವನ್ನು |
ಪೊಡವಿಪಾಲರ ಕೆಲಸ ಹಿಡಿ ಗಾಂಡೀವವನು || ೫೧೧ ||

ರಥವ ಸಂತಯಿಸಿ ಕೊಂಡಳವಿಗೊಟ್ಟರೆ ಮತ್ತೆ |
ಹುತವಾಹನಯ್ಯನೊಳ್ ತೀರದು ನೋಡು || ೫೧೨ ||

ನೋಡಿದೇನೈ ರಥಹೀನನೊಡನೆ ಬಾಣ |
ತೊಡುವುದೆ ಕ್ಷತ್ರಿಕುಲ ಧರ್ಮವೇನಯ್ಯ || ೫೧೩ ||

ಶರಹೀನ ರಥಹೀನನಾಗಿ ಶರಧಿಯೊಳು |
ಮುಳುಗುವನೊಳು ತೊಡೆ ಗಾಂಡೀವವನು || ೫೧೪ ||

ಏತಕೆ ಸಂದೇಹ ಹೊಡೆ ಮಸ್ತಕವನೆನೆ |
ಮಾತ ಕೇಳುತ ಕರ್ಣ ನುಡಿದನು ನರಗೆ || ೫೧೫ ||

ಭಾಮಿನಿ

ಕಲಿ ಕಿರೀಟಿಯೆ ಕೇಳು ನೀ ಸೈ |
ರಿಸುವುದೊಂದರೆಗಳಿಗೆ ಮಾತ್ರದಿ |
ನೆಲನೊಳಡಗಿಹ ರಥವನೆಬ್ಬಿಸಿಕೊಂಡು ನಾನೀಗ ||
ಅಳವಿಗೊಡುವೆನು ಮತ್ತೆ ಅನಕರ |
ನಿಲಿಸು ಗಾಂಡೀವವನು ಎನುತಿರೆ |
ನಳಿನಸಖಸುತನೊಡನೆ ಕೃಪೆ ಸಂಜನಿಸಿತರ್ಜುನಗೆ || ೫೧೬ ||

ಕಂದ

ದ್ವೇಷವಡಗಿಯಾತನೊಳಭಿ |
ಲಾಷೆಯಿಂದಲಾ ಮಧುಸೂದನನೊಳಾಗಂ ||
ಮೋಸದಿ ಕೊಲಿಸದೆ ಕರ್ಣನ |
ಈ ಸಮಯದೊಳಾರೆಂಬುದನುರುಹೆನಗೆಂದಂ || ೫೧೭ ||

ರಾಗ ಮಧ್ಯಮಾವತಿ ಆದಿತಾಳ

ಯಾದವೋತ್ತಮ ಲಾಲಿಸಿ ಕೇಳು | ಈ | ರಾಧೇಯನಾರೆಂಬ ನಿಜವನು ಪೇಳು  || ಪ ||

ಕುಂತಿಯುದರದಲಿ ಜನಿಸಿದವನೊ ಎಂಬ | ಅಂತರ್ಭಾವದೊಳೀಗ ಸಂಶಯವಾಗಿದೆ ||
ದಂತೀಶನಿಗೆ ರಾಜ್ಯ ಬಿಟ್ಟು ನಾವೈವರು | ಸಂತೋಷದಲಿ ವನವ ಚರಿಸುತ್ತಲಿಹೆವು || ೫೧೭ ||

ಅರಸ ಧರ್ಮಜನಂತೆ ವರ ವೃಕೋದರನಂತೆ | ಪರಿಕಿಸಲೊಂದಾಗಿ ತೋರುವುದೆನಗೆ ||
ಸರಸಿಜಾಕ್ಷನೆ ನೀನು ಕರ್ಣನ್ಯಾರೆಂಬುದ | ನರುಹು ನಿಶ್ಚಯವನ್ನು ವರ ದಯಾಸಿಂಧು || ೫೧೮ ||

ಬಿಸುಟು ಹೋದನು ರಥವ ಸಾರಥಿ ಮೊದಲೆ | ವಸುಧೆಯೊಳಡಗಿತು ರಥವು ಮತ್ತವಗೆ ||
ನಿಶಿತಮಾರ್ಗಣವಿಲ್ಲ ಕೈಯೊಳಗಾತಗೆ | ಅಸುರಾರಿ ಕರ್ಣನ ಕೊಲುವವತಾನಲ್ಲ || ೫೧೯ ||

ಬಳಿಕಾ ಭೀಮಾದಿಗಳೆಲ್ಲರ ಮನದಲಿ | ಸುಳಿದುದು ಸಂದೇಹವಾಯಿತೆಮಜಗೆ ||
ಅಳುಕಿ ದ್ರೌಪದಿ ಮನದೊಳಗೆ ಸಂತಾಪದಿ | ಕಳವಳಗೊಳುತಿರ್ದರೆಲ್ಲರಾಚೆಯಲಿ || ೫೨೦ ||

ರಾಗ ಸಾವೇರಿ ಅಷ್ಟತಾಳ

ಕೇಳಯ್ಯ ಪಾರ್ಥ ನೀನೆಂಬ ಮಾತ | ಕೇಳಿ ಸಂತಸವಾಯಿತಯ್ಯ ಪ್ರಖ್ಯಾತ || ಪ ||
ಖೂಳ ಕೌರವನ ತಂಬುಲಕೆ | ತಾನು | ಓಲಗಿಸುತಲಿಹನದಕೆ ||
ಕಾಲದೆಕ್ಕಡವನ್ನು ಪಿಡಿವ ಕರ್ಣಗೆ ಸಮ | ಹೋಲಿಸಬಹುದೆ ನೀನು ||
ಧರ್ಮಜನನ್ನು | ಕಾಲಲಿ ತುಳಿದವನು || ನೀನಾತನ | ಪೊಗಳುವುದೇನಿನ್ನು || ೫೨೧ ||

ಲಂಡಿಗಳಂತೆ ಮರೆಯಲಿ | ನಿಂತು | ಕೊಂಡನೀ ಖಳ ಬೆಂಗಡೆಯಲಿ ||
ತುಂಡಿಸಿದನು ತೋಳೆರಡಭಿಮನ್ಯುವ | ದಿಂಡುಗೆಡಹಿದವನು ||
ಆತನ ಜೀವ | ಗೊಂಡ ಅಧಮನಿವನು || ಪೋಗಲಾ ಮಾತ | ಕಂಡುದನಾಡಿದೆನು || ೫೨೨ ||

ನಿನಗೆ ತೀರದೆ ಪೋದರೇನು | ಬಿಡು | ಅನಿಲಸಂಭವನೊಡನಾನು |
ಜನಜನಿತದಿ ಕೊಂದು ಕೆಡಹಿ ಕೌರವನಾಳ್ವ | ವನಿಯನು ಧರ್ಮಜಗೆ ||
ಪಟ್ಟವ ಕಟ್ಟಿ | ಯೊಲವಿನಿಂ ಸುಖದೊಳಗೆ || ಪಾಲಿಸುವಂತೆ | ಮಾಡುವೆ ಕ್ಷಣದೊಳಗೆ || ೫೨೩ ||