ಭಾಮಿನಿ

ಕಾತರಿಸಿ ಕಲಿ ಭೀಮ ಶಸ್ತ್ರದ |
ವ್ಯಾಕುಲದಿ ಮಲಗಿರಲು ಬಳಿಕಾ |
ಶ್ವೇತವಾಹನನೊಡನೆ ನುಡಿದನು ಮಾತುಳಧ್ವಂಸಿ ||
ಘಾತವಾದನು ಭೀಮನಿಂದು ವಿ |
ಘಾತವಾಯಿತು ಅಕಟ ನಾನೀ |
ರೀತಿಯಿಂದಲೆ ಬಂದು ಕೆಟ್ಟೆ ನಿರರ್ಥ ನಿಮಗಾಗಿ  || ೩೯೪ ||

ಕಂದ

ಇಷ್ಟರ ಬಲುಮೆಯನವಗಂ |
ಕೊಟ್ಟಿವರಾರೀ ಮುರಹರನಲ್ಲದೆನುತ್ತಂ ||
ಥಟ್ಟನೆ ಹಾರಿಸು ರಥವೆನ |
ಲಷ್ಟರೊಳವಗಿದಿರೊಳ್ ನಿಲಿಸಿಯೆ ತೋರಿಸಿದಂ || ೩೯೫ ||

ವಾರ್ಧಕ

ನೋಡಿದಂ ಫಲುಗುಣನು ಕರ್ಣಜನ ಖಾತಿಯಂ |
ಮಾಡಿದಂ ಮಾರ್ಗಣದೊಳಸ್ತ್ರಸಂಕುಲಗಳಂ |
ಹೂಡಿದಂ ವಾಜಿ ರಥ ವಾರಣಂಗಳನೆಚ್ಚು ರೂಢಿಯೊಳ್ ಬೊಬ್ಬಿರಿದನು |
ನೋಡುತಾ ಕ್ಷಣ ಬರುವ ಬಾಣಜಾತಗಳ ಕಡಿ |
ಮಾಡುತಾ ಬಾಲಕನ ಸಾಹಸಕೆ ಮೆಚ್ಚಿ ಕೊಂ |
ಡಾಡುತಾತನ ಸವ್ಯಸಾಚಿ ನಸುನಗೆಯಿಂದ ಕೂಡೆ ಮತ್ತಿಂತೆಂದನು || ೩೯೬ ||

ರಾಗ ಶಂಕರಾಭರಣ ಮಟ್ಟೆತಾಳ

ಸಾಕು ಸಾಕು ನಿನ್ನ ಸಾಹಸ | ತರಳರಿಗೆ ವಿ | ವೇಕವಲ್ಲವಿನಿತು ಪೌರುಷ | ಸಾಕು ಸಾಕು || ಪ ||

ಕಾಕು ಮಾತನಾಡಿ ನಮ್ಮಾ | ನೇಕ ಜನರ ಮುಂದೆ ನೀನು |
ಪೋಕನೆನಿಸಿಕೊಂಡು ಬರಿದೆ | ನೂಕಿ ಪೋಪರೇನೊ ಮನೆಗೆ    || ಅ ||

ವಿಷದ ಘಟವ ಪೊಕ್ಕು ನೊಣಗಳು | ಬದುಕಲುಂಟೆ | ಪಸುಳೆ ನೀನು ನಿನಗೆ ರಣದೊಳು ||
ಅಸಮ ವೀರನೊಡನೆ ಬಾಣ | ದೆಸುಗೆಗಳನದೇನ ಬಲ್ಲೆ |

ಶಿಶುವಿಘಾತ ಗೆಯ್ಯಲಾರೆ | ಅಸುವ ನೀಗದೀಗ ಪೋಗು || ೩೯೭ ||
ಗರುಡ ನೊಲುಮೆಯುಳ್ಳ ಸುಭಟನು | ಫಣಿಗೆ ಬೆದರಿ | ಮರುಳವನೆ ಕಿರೀಟಿ ನಮ್ಮನು |

ಸುರರು ಮೆಚ್ಚುವಂತೆ ಭರದೊ | ಳರಿದರಿಲ್ಲ ನಿನಗೆ ದೋಷ |
ತರಳನಾದರೇನು ಕೈಯ | ಗುರಿಯನೀಕ್ಷಿಸೆನುತಲೆಚ್ಚ  || ೩೯೮ ||

ಕರ್ಣಸುತನ ಸರಳ ಖಂಡಿಸಿ | ದಿವ್ಯ ಶರಗ | ಳನ್ನು ಪಾರ್ಥ ಧನುವಿಗೇರಿಸಿ ||
ಕೆನ್ನೆಯುಗಿದು ಬಿಡಲು ಕಿಡಿಗ | ಳನ್ನು ತುಳುಕಿ ಬರುವ ಕಣೆಗ |

ಳನ್ನು ಸವರಲವನ ಚಳಕ ವನ್ನು ನೋಡಿ ನರನು ಪೇಳ್ದ || ೩೯೯ ||
ಹರಿಯೆ ಪರಿಕಿಸೆನ್ನ ಕುವರನ | ಪೋಲ್ವ ಸುಭಟ | ವರನ ತಟ್ಟಲೀತನೋರ್ವನ |

ಧುರದಿ ಗುರುನದೀಜರುಗಳ | ಸರಿ ಸಮಾನನೀತನೆನ್ನ |
ಸರಕುಮಾಡಲಿವನ ಬಗೆಯ | ನರಿವೆನೆನುತಲವನೊಳೆಂದ || ೪೦೦ ||

ರಾಗ ಶಂಕರಾಭರಣ ಏಕತಾಳ

ಕರ್ಣಜಾತ ಕೇಳೊ ಮಾತ | ಸಣ್ಣವನೆಂಬುದಕಾಗಿ |
ಮನ್ನಿಸಿ ಬಿಟ್ಟರೆ ಇಂಥ | ಗರ್ವ ಬಂತೇನೊ  || ೪೦೧ ||

ಸಣ್ಣವ ನಾನಹುದಾದ | ರೆನ್ನ ಬಾಣಜಾತಗಳನು |
ಹೂಣೆ ನೋಡೆನುತಲೆಚ್ಚ | ಬಾಣಗಳನ್ನು  || ೪೦೨ ||

ಭ್ರೂಣಹತ್ಯ ಪಾಪಕಂಜಿ | ಬಿಟ್ಟೆವೀಗ ನೋಡು ನಿನ್ನ |
ಕಾಣಬಹುದೆನುತ್ತಲೆಚ್ಚ | ಸಾಣೆಯಲಗನು  || ೪೦೩ ||

ಜಾಣತನದ ಮಾತು ನಿನ್ನ | ರಾಣಿಯರ ನಿವಾಸದೊಳಗೆ |
ಹೂಣಿಗನಾದರೆ ನಿಲ್ಲು | ನಿಲ್ಲತ್ತ ಸಾರೋ  || ೪೦೪ ||

ಇಷ್ಟು ಪಂಥಯಾರೊಡನೆ | ಥಟ್ಟನಿದಿರಾಗೆನುತ್ತ |
ತೊಟ್ಟ ಬಾಣವನ್ನು ಜಯಿಸೆಂ | ದಿಟ್ಟನಾ ಪಾರ್ಥ  || ೪೦೫ ||

ಅಷ್ಟರೊಳು ವೃಷಸೇನ | ತೊಟ್ಟ ಸೀಸಕವಚ ಹರಿಯೆ |
ಬಟ್ಟ ಬಯಲನ್ನು ಮಾಡಿ | ಬಿಟ್ಟನಾ ಕ್ಷಣ  || ೪೦೬ ||

ದಿಟ್ಟ ವೃಷಸೇನನವಗೆ | ಮುಷ್ಟಿಯಿಂದಲೆರಗುತಿರಲು |
ಬಿಟ್ಟ ಶರದಿ ಶಿರವು ನಭಕೆ | ತಟ್ಟಿ ಪೋದುದು || ೪೦೭ ||

ಭಾಮಿನಿ

ಕರ್ಣತನಯನ ಶಿರವು ಧರೆಗೆ ಸು |
ವರ್ಣತೇಜದಿ ಬೀಳುತಿರೆ ಸೌ |
ಪರ್ಣವಾಹನ ಕಂಡು ವಿಸ್ಮಿತನಾಗುತಿಂತೆಂದ ||
ದುರ್ನಯನು ಕೌರವನಧರ್ಮದ |
ನಿರ್ಣಯದಿ ಸುತನಳಿದನೆಂದುಂ |
ವರ್ಣಿಸುತಲೆತ್ತಿದರು ವೇಗದಿ ಸುರರು ಸುರಪುರಕೆ || ೪೦೮ ||

ರಾಗ ಭೈರವಿ ಝಂಪೆತಾಳ

ಧರಣಿಪತಿ ಕೇಳು ಜನಮೇಜಯನೆ ಕೌರವನು | ತರಳ ವೃಷಸೇನನನು ನೆನೆದು ಮರುಗುತಲೆ ||
ತರಣಿತನಯನು ತನ್ನ ತರಳನೆಲ್ಲಿಗೆ ಪೋದ | ಕರೆದು ತಾರೆಂದೆನ್ನೊಳರುಹಲೇನೆಂಬೆ || ೪೦೯ ||

ಹರಣದಾಸೆಗೆ ತನ್ನ ತರುಣನನು ಹರಿವ್ಯಾಘ್ರ | ಝರಿಗೆ ನೂಕಿಸಿ ಉಳಿದೆನೆಂಬೆ ನಾನವಗೆ ||
ಮರಣವದರಿಂದ ಲೇಸೆನುತಲಾ ಕೃತ್ರಿಮನು | ಗರಳವನು ಕುಡಿದು ಜೀವವ ಕಳೆವೆನನಲು || ೪೧೦ ||

ಎಂದು ಮರುಗುವ ಸಮಯದೊಳಗಿತ್ತಲಾ ಭಾನು | ನಂದನನು ನಡೆತಂದನಾಗ ಕೌರವನ ||
ಇಂದಿದೇನೆನೆ ಶೋಕ ಬಿಡು ನಿನಗೆ ನಾನಿರಲು | ಬಂದ ವ್ಯಾಕುಲವೇನು ಪೇಳೆನ್ನೊಳೀಗ || ೪೧೧ ||

ಪೇಳುವರೆ ಭಯದಿ ಬಾಯಾರಿ ಬಳಲುವ ನೃಪನ | ನಾಲಿಗೆಯು ತಡವರಿಸುತಂತರಿಸುವಾಗ ||
ಕೇಳೊ ನಿನ್ನಯ ಕುವರ ಖೂಳ ಭೀಮನ ಗೆಲಿದು | ಕಾಳಗದೊಳರ್ಜುನನೊಳಯ್ದ ಸುರಪುರಕೆ || ೪೧೨ ||

ಭಾಮಿನಿ

ಸುತಗೆ  ಮರಣವ ಗೆಯ್ದ ಪಾರ್ಥನ |
ಸತಿಯ ವಾಲೆಯ ಕಳೆವೆ ನೋಡೆಂ |
ದತಿ ಮಹಾ ಚಿಂತೆಯಲಿ ಪೊರಟನು ನೃಪಸಭಾಲಯವ ||
ಅತುಳಬಲ ನಡೆ ತಂದು ಶಸ್ತ್ರದ |
ಹತಿಯಳೊರಗಿದ ಮಗನ ಕಾಣುತ |
ಗತಿಯದಾರೆನಗೆನುತ ಮಮ್ಮಲಮರುಗಿದನು ಕರ್ಣ || ೪೧೩ ||

ಕಂದ

ಅನಿತರೊಳೆಚ್ಚತ್ತಾಗಳ್ |
ಘನ ಶೋಕಗಳಿಂದಲೀಕ್ಷಿಸುತೆ ಕುವರನ ತಾಂ ||
ಗುಣಗಣಗಳ ವರ್ಣಿಸುತಲೆ |
ನೆನೆದು ಪ್ರಲಾಪಿಸುತೆ ಮತ್ತೆ ತಾನಿಂತೆಂದಂ || ೪೧೪ ||

ರಾಗ ನೀಲಾಂಬರಿ ಆದಿತಾಳ

ಮಗನೇ ನಿನ್ನ ಪೋಲ್ವರಾರೀ | ವಿಗಡಭಟರೊಳಿನ್ನು ||
ಜಗದೊಳು ನಿನ್ನಂಥ ಚೆಲುವ | ಸುಗುಣ ಕುವರರಿಹರೆ || ೪೧೫ ||
ಮೊಗದೊಳು ತಾ ಮೊಗವನಿಟ್ಟು | ಸೊಗಸಿನಿಂದ ಮುತ್ತ ಕೊಟ್ಟು |
ಝಗಝಗಿಸುವಂಥ ಪ್ರಭೆಯು | ಮುಗಿದು ಹೋಯಿತಯ್ಯೋ || ೪೧೬ ||

ದುಷ್ಟ ಪಾಪಿಯುದರದೊಳು | ಪುಟ್ಟಿ ವ್ಯರ್ಥವಾದೆ ||
ದೃಷ್ಟಿಯನ್ನು ತಾನೆ ಕುತ್ತಿ | ಕಳೆದಂತಾಯಿತಯ್ಯೋ  || ೪೧೭ ||

ಸೃಷ್ಟಿ ಈರೇಳರೊಳಿಂಥ | ಶ್ರೇಷ್ಠನನ್ನು ಕಾಣೆ ||
ಕೆಟ್ಟೆ ನಾನೀ ದೇಹವನ್ನು | ಇಟ್ಟು ಬಾಳಲಾರೆ  || ೪೧೮ ||

ಪುಟ್ಟಿ ಈರೇಳ್ ವರುಷವಾಯಿ | ತಷ್ಟರೊಳಿಂತಾಯ್ತು |
ಇಷ್ಟಪಡುವ ಸಮಯದಿ | ಕಷ್ಟವೊದಗಿತಯ್ಯೊ  || ೪೧೯ ||

ಬತ್ತಳಿಕೆಯನ್ನು ಬೆನ್ನೊಳು | ಪೊತ್ತು ಮಲಗಿರುವೆ |
ಎತ್ತಿ ಸಲಹಿದಂಥ ತೋಳು | ವ್ಯರ್ಥವಾಯಿತಯ್ಯೋ || ೪೨೦ ||

ಧಾತ್ರಿಯಧಿಪತಿತನಕೆ | ಯೋಗ್ಯನಹೆಯಲ್ಲ ||
ಸುತ್ರಾಮನ ಪುರವು ನಿನಗೆ | ಪ್ರೀತಿಯಾಯಿತಲ್ಲ  || ೪೨೧ ||

ಭಾಮಿನಿ

ವೀರ ವೃಷಸೇನಾಖ್ಯನಳಿದನೆ |
ತೀರಿತೇ ತನ್ನುರು ಪರಾಕ್ರಮ |
ಸೂರೆ ಹೋದುದೆ ಸಮರ ಪಾರ್ಥಗೆ ಶಿವಾ ಶಿವಾ ಎನುತ ||
ಸೂರಿಯನ ಸುತನಾಗ ಚಿಂತಾ |
ಭಾರದಲಿ ಮನನೊಂದು ದೈವದ ||
ಕೂರುಮೆಯನಾರರಿವರಕಟಾ ತನ್ನ ವಿಧಿಯೆಂದ || ೪೨೨ ||

ಜನಪ ಕೇಳೈ ಬಳಿಕ ಕರ್ಣನು | ಮನದ ಚಿಂತೆಯ ಬಿಟ್ಟು ರೋಷದಿ |
ಕಣುಗಳಲಿ ಕಿಡಿಯುಗುಳಿ ಮಾದ್ರಾಜನಪಗಿಂತೆಂದ ||
ಅನಿಮಿಷಾಧಿಪಕುವರನೆಡೆಗೀ | ಘನ ರಥವ ಹರಿಸೆನಲು ಕೇಳ್ದಾ |
ಕ್ಷಣದಿ ಕಪಿಕೇತನನ ರಥಸಮ್ಮುಖಕೆ ಹಾರಿಸಿದ || ೪೨೩ ||

ಕಂದ

ಬಂದಾ ರಥಮಂ ಕಾಣುತ |
ಮುಂದರಿಯುತ ಸಮ್ಮುಖದೊಳ್ ಮುರಹರನಾಗಂ ||
ಚಂದವೆ ಸಾರಥಿತನವಿದು |
ಸುಂದರನೆ ಎನುತ ಶಲ್ಯನೊಳ್ ಜರೆಯುತೆಂದಂ  || ೪೨೪ ||

ರಾಗ ಸಾರಂಗ ಅಷ್ಟತಾಳ

ಏನಯ್ಯ ಶಲ್ಯಭೂಪ | ನಿನ್ನಂಗವಿ | ದೇನಯ್ಯ ಮದನರೂಪ ||
ಭೂನಾಥ ನಿನಗೆ ಈ ಸಾರಥಿತನವಿದು | ಹೀನವೃತ್ತಿಗಳೇಕಯ್ಯ || ಪೇಳಯ್ಯ || ೪೨೫ ||

ಧರ್ಮವಲ್ಲರಸರಿಗೆ | ನೋಡಿಂಥ ದು | ಷ್ಕರ್ಮವೇತಕೆ ನಿನಗೆ ||
ಚಮ್ಮಟಿಕೆಯ ಪಿಡಿದಶ್ವವ ನಡೆಸುವ | ಮರ್ಮವಾದರು ಬಲ್ಲೆಯ || ಪೇಳಯ್ಯ || ೪೨೬ ||

ಕರ್ಣನ ಬಂಡಿಯನು | ನಾ ಹೊಡೆವುದು | ದುರ್ನೀತಿಯಹುದು ನೀನು ||
ಎನ್ನವಗುಣವ ಶೋಧಿಸುವಾತ ನರನಶ್ವ | ವನ್ನು ನಡೆಸುವೆ ಏಕೆ  || ಪರಾಕೆ || ೪೨೭ ||

ಹರಿ ನಿನ್ನ ಮಹಿಮೆಯನ್ನು | ಎಂತೊರೆವೆ ಗೋ | ಪರ ಕುಲದೈವ ನೀನು ||
ತುರಗಲಕ್ಷಣವೇನ ಬಲ್ಲೆ ಹೇಳೆನುತಲೆ | ಜರೆದ ಸನ್ನುತಿವೆರೆದು || ಕೈ ಮುಗಿದು || ೪೨೮ ||

ವಚನ

ಈ ಪರಿಯಿಂದ ಶಲ್ಯಭೂಪನು ಕೃಷ್ಣನಲಿ ಅರುಹಿದ ಮೇಲೆ ಇತ್ತಲಾ ಯುದ್ಧಾಂಗಣದಲ್ಲಿ ಕರ್ಣನು ರೋಷದಿಂದ ಅರ್ಜುನನೊಡನೆ ಏನೆಂದನು ಎಂದರೆ –

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಪಾರ್ಥ ಕೇಳು ನೀನು | ಕಳವಿನಲ್ಲಿ ಸಿಂಧುನೃಪನ |
ಗೆಲಿದ ಪರಿಯಿದಲ್ಲ ನೋಡು | ನಿಲ್ಲು ಸಮರಕೆ  || ೪೨೯ ||

ಕಳವಿನಲ್ಲಿ ಬೆಂಗಡೆಯೊಳು | ಕರದ ಬಿಲ್ಲ ಕಡಿದ ಜೀವ |
ಗಳ್ಳನೆಂದು ಬಲ್ಲೆ ಗೋ | ಗ್ರಹಣ ದಿನದಲಿ  || ೪೩೦ ||

ಗೋಗ್ರಹಣವಲ್ಲವಿಂದು | ಪಾರ್ಥ ನಿನಗೆ ಸೋಮಗ್ರಹಣ |
ಭಾರ್ಗವೇಂದ್ರ ತಾನೆ ಬರಲಿ | ಗೆಲುವೆ ಶೀಘ್ರದಿ  || ೪೩೧ ||

ಭಾರ್ಗವೇಂದ್ರನೇಕೆ ನಿನಗೆ | ವ್ಯಾಘ್ರನಂತೆ ಚಿತ್ರಸೇನ |
ಭೋರ್ಗುಡಿಸಿ ಕುರುಪಶುವ ಪಿಡಿಯಲೆಲ್ಲಿಹೆ  || ೪೩೨ ||

ಕಾಲನಣುಗನೆಂಬ ಕುರಿಯ | ಗೋಣನೌಕಿ ಪಿಡಿದು ಬಡೆವ |
ವೇಳೆಯರಿತು ಬಿಡಿಸಿದಾತ ಭಟನು ನೀನೆಲಾ  || ೪೩೩ ||

ಭಟನು ನೀನಹುದೊ ರವಿಜ | ಕುಟಿಲವಿದ್ಯೆ ಕಲೆಗಳಲ್ಲಿ |
ಪಟುತನವ ನೋಡೆನುತ್ತ | ಸುರಿದ ಬಾಣವ  || ೪೩೪ ||

ರಾಗ ಪಂಚಾಗತಿ ಮಟ್ಟೆತಾಳ

ಎಚ್ಚ ಬಾಣವನ್ನು ಕರ್ಣ | ಕೊಚ್ಚಿ ನಿಮಿಷದಿ ||
ಬಿಚ್ಚಕಂಗಳಣುಗ ಶರವ | ನೆಚ್ಚ ರೋಷದಿ || ೪೩೫ ||

ಬಳಿಕ ಅಜಮಹಾಸ್ತ್ರವನ್ನು | ಹೂಡೆ ರವಿಜನು |
ನಳಿನನಾಭಶರವನೆಚ್ಚು | ತರಿದ ವಿಜಯನು || ೪೩೬ ||

ಒಡನೆ ಅನಲಶರವನೆಚ್ಚ | ಲಾಗ ಕರ್ಣನು |
ಒಡನೆ ವಾರುಣಾಸ್ತ್ರದಿಂದ | ಕಡಿದ ವಿಜಯನು || ೪೩೭ ||

ವಾರ್ಧಕ

ಹವ್ಯವಾಹಾಸ್ತ್ರಮಂ ವಾರುಣಾಸ್ತ್ರದಿ ಗೆಲಿದು |
ನವ್ಯಮೇಘಾಸ್ತ್ರಮಂ ಪೂಡುತಿರೆ ಕರ್ಣ ವಾ |
ಯವ್ಯಾಸ್ತ್ರದಿಂದದಂ ಸವರುತಿರಲಾ ಸವ್ಯಸಾಚಿ ತಿಮಿರಾಸ್ತ್ರ ಬಿಡಲು ||
ರವ್ಯಸ್ತ್ರದಿಂ ಜಯಿಸಿ ಪರ್ವತಾಸ್ತ್ರವನೆಸೆಯೆ |
ದಿವ್ಯ ಕುಲಿಶಾಸ್ತ್ರದಿಂ ಕಡಿದಾ ಧನಂಜಯಂ |
ಸೂರ್ಯಮಂಡಲ ಕಾಣದಂತೆ ಅಕ್ಷಯ ಶರವನೆಚ್ಚುತಾತನ ಗೆಲಿದನು || ೪೩೮ ||

ರಾಗ ಭೈರವಿ ಏಕತಾಳ

ಭಳಿ ಭಳಿರೆಲವೊ ಶಭಾಸು | ಶರ | ವಲಯವ ತೀರ್ಚಿದೆ ಲೇಸು ||
ಸಲುವುದು ಭಟತನ ನಿನಗೆ | ಪಲ್ | ಮೊರೆವುತಲೆಚ್ಚನು ಮೇಗೆ || ೪೩೯ ||

ನರನು ಶರೌಘವ ಮುರಿದು | ಮಗು | ಳುರು ಮಂತ್ರಾಸ್ತ್ರವ ತೆಗೆದು ||
ಭರದಿಂದೆಚ್ಚನು ನಗುತ | ಭೋ | ರ್ಗರೆವಸ್ತ್ರವನೀಕ್ಷಿಸುತ || ೪೪೦ ||

ತಿರುವಿಗೆ ಶರಗಳ ಹೂಡಿ | ಬಿಡ | ಲರಿಗಳನುರೆ ಪುಡಿಮಾಡಿ ||
ತ್ವರಿತದಿ ರವಿಜನ ರಥವ | ಒದೆ | ದ್ಹಾರಿಸೆ ಏಳ್ ಯೋಜನವ || ೪೪೧ ||

ಭಾಮಿನಿ

ಏನು ಹೇಳುವೆನರಸ ಇಂದ್ರನ |
ಸೂನುವಿನ ಶರಹತಿಗೆ ಕೌರವ |
ಸೇನೆ ಕಳವಳಿಸಲ್ಕೆ ಕರ್ಣನ ರಥವ ಹಾರಿಸಿದ ||
ಭಾನುಸುತನಾ ಕ್ಷಣದಿ ತನ್ನಯ |
ಸೇನೆಗಭಯವ ಕೊಟ್ಟು ರಥವನು ||
ದಾನವಾರಿಯ ಮುಂದೆ ಸಂತೈಸಿದನು ನಿಮಿಷದಲಿ || ೪೪೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಥವನುರೆ ಸಂತಯಿಸಿಕೊಳುತಾ | ಧರಿಸಿ ವಾಘೆಯ ನೂಕಿ ಶಲ್ಯನ |
ಪ್ರತಿಕರದಿ ಕಾಲಿಂದಲೊದೆದ | ಚ್ಯುತನ ರಥವ || ೪೪೩ ||

ಗತಿಗೆ ವರರಥ ಚಿಗಿದು ಯೋಜನ | ತತಿಗಳೆರಡರೊಳಂತರಿಸುತಿರೆ |
ರತಿಪತಿಯ ಪಿತ ಪೊಗಳುತಿರ್ದಾ | ದಿತ್ಯಸುತನ || ೪೪೪ ||

ಪೂತು ಮಝರೇ ಕರ್ಣ ಸುಭಟ | ಖ್ಯಾತ ನೀನಹೆ ಲೇಸು ಕೌರವ ||
ಪ್ರೀತಿಯಲಿ ಸಾಕಿದಕೆ ಫಲಿಸಿತು | ಭಾಪು ಭಲರೇ || ೪೪೫ ||

ಈ ತೆರದಿ ಪೊಗಳುತಿರೆ ಶ್ರೀರಘು | ನಾಥಭಕ್ತನು ಹನುಮ ರಥದಿಂ |
ಖ್ಯಾತ ನೀನಹೆ ಭಳಿರೆ ಕರ್ಣಶ | ಭಾಸು ಎಂದ || ೪೪೬ ||

ವಾರ್ಧಕ

ಈ ತೆರದಿ ಕರ್ಣನಂ ಪೊಗಳುತಿರಲಾ ಹರಿಯ |
ಮಾತು ಕರ್ಕಶವಾಗಿ ನೆಡಲಹಂಕಾರದಿಂ |
ಘಾತಿಸುವೆನರಿಭಟನ ರಥವನುರೆ ದಶಯೋಜನಾಂತರಕೆ ಹಾರಿಸುವೆನು ||
ಶ್ವೇತವಾಹನ ಕೇಳು ಕರ್ಣನ ವರೂಥಮಂ |
ಘಾತಿಸುವಡಿದು ಸಮರ್ಥತೆಯಲ್ಲ ಹದಿನಾಲ್ಕು |
ಭೂತಳವು ಎನ್ನ ಜಠರದೊಳುಂಟು ನವಖಂಡದೊಳಗೊಬ್ಬನೇ ಮಾರುತಿ || ೪೪೭ ||

ಭಾಮಿನಿ

ಅಂತರಹಿತನೆ ನಿನ್ನ ಮಹಿಮೆಯ |
ನಿಂತು ಬಣ್ಣಿಪರಾರು ಲೋಕದಿ |
ಮುಂತೆ ಕೇಳುವುದೆನ್ನ ಭಾಷೆಯನೆಂದನಾ ಪಾರ್ಥ ||
ಕಂತುಹರನಿವನಾದಡಾಗಲಿ |
ಪಂತಿಮುಖನಾದಡೆಯದಾಗಲಿ |
ಕುಂತಿಸುತ ತಾನಾದಡೀತನ ಗೆಲುವೆ ನೋಡೆಂದ  || ೪೪೮ ||

ಕಂದ

ಎಂದಾ ಪಾರ್ಥನ ನುಡಿ ಕೇ |
ಳ್ದಂದಾನಂದದೊಳುಸಿರಿದ ಕಾಮನ ಜನಕಂ ||
ಸಂದೇಹವೆ ಇದರೊಳ್ ರಘು |
ನಂದನನ ಬಾಣಕೆ ಸರಿಸಮವೀಮಹದ್ವಚನಂ  || ೪೪೯ ||

ರಾಗ ಮಾರವಿ ಏಕತಾಳ

ಇಂತೀ ಪರಿಯಲಿ ಪಾರ್ಥನ ಪೊಗಳಲ | ನಂತರದಿ ರವಿಜ ||
ಸಂತಸದಿಂದುರಗಾಸ್ತ್ರವ ತೆಗೆದು ಮ | ಹಾಂತ ಪರಾಕ್ರಮದೀ || ೪೫೦ ||

ಮುಗಿಲೊಳಗಿಹ ರವಿಯಂದದಿ ಫಣಿಶರ | ಝಗಝಗಿಸುತ ಭೋರ್ಗುಡಿಸೆ |
ಗಗನದೊಳಿಹ ಖಗಸಂತತಿಯಳಿಯಲು | ಉಗುಳುತ ವಿಷದುರಿಯ || ೪೫೧ ||

ಉರಿವ ಮಹಾಸ್ತ್ರವ ತೆಗೆಯಲು ಕೌರವ | ಗಹಗಹಿಸುತಲಾಗ ||
ಅರಿಗಳ ಜಯವೀಶರದೊಳಗೆನ್ನುತ | ಲರಿದತಿ ತೋಷದಲಿ || ೪೫೨ ||

ಅತ್ತಲು ಪಾಂಡವಸೈನ್ಯದಿ ಭೀತಿಯು | ಹತ್ತಿತು ವಿಷದುರಿಗೆ |
ಚಿತ್ತದಿ ಭಯದೋರುತ್ತ ಯಮಜ ತಲೆ | ಗುತ್ತಿದನಾ ಕ್ಷಣಕೆ || ೪೫೩ ||

ಮರುತಜ ಸಾತ್ಯಕಿ ನಕುಲಾಂಕರು ಬಲು | ಉರುತರ ಭೀತಿಯಲಿ ||
ಇರುತಿರಲತ್ತಲು ಹೂಡಿದನಾ ಮಹ | ಶರವನು ತಿರುವಿನಲಿ || ೪೫೪ ||

ಭಾಮಿನಿ

ಹೂಡಿದನು ತಿರುವಿನಲಿ ಬಾಣವ |
ನೋಡಿ ಪಾರ್ಥನಗಳಕೆ ಸಮನವ |
ಮಾಡಿದನು ಕಲಿಕರ್ಣ ಸರ್ಪಾಸ್ತ್ರವನು ನಿಮಿಷದಲಿ ||
ನೋಡಿದನು ಶಲ್ಯನನು ಮಿಗೆ ಮಾ |
ತಾಡಿದನು ಕುರುಪತಿಯ ಪುಣ್ಯದ |
ಬೀಡು ಬೀಡುವರೆ ಕಾಣಲಿನ್ನಹುದೆಂದ ಕಲಿ ಕರ್ಣ |  || ೪೫೫ ||

ಏನು ಸಾರಥಿ ಸರಳು ಪಾಂಡವ |
ಸೇನೆಯನು ಗೆಲಲಹುದೆ ಪಾರ್ಥನ |
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಬಹುದೆ ||
ಆನಲಮ್ಮುವರುಂಟೆ ನಿನಗಿದು |
ಸಾನುರಾಗವೆ ಹೇಳೆನಲು ರವಿ |
ಸೂನುವಿನ ಸರ್ಪಾಸ್ತ್ರವನು ಹೊಗಳಿದನು ಮಾದ್ರೇಶ | || ೪೫೬ ||

ಲೇಸನಾಡಿದೆ ಕರ್ಣ ಕೌರವ |
ನೀಸು ದಿನ ಸಾಕಿದ ಫಲವ ನೀ |
ನೈಸಲೇ ತೋರಿಸಿದವನು ಶಿವ ಶಿವ ಮಹಾದೇವ ||
ಏಸು ಕಾಳಗವಾದುವೀ ಕ |
ಟ್ಟಾಸುರದ ಶರವೆಲ್ಲಿ ಗುಪ್ತಾ |
ವಾಸವಾದುದೊ ಪೂತುರೆಂದನು ಶಲ್ಯನಿನಸುತನ |
ನೋಡಿದನು ಕಲಿ ಶಲ್ಯ ಮನದಲಿ |
ಮಾಡಿದನು ಬಲು ಶರದ ಪಾಯವ |
ಪಾಡು ತಪ್ಪಿತೆನುತ್ತ ಕರ್ಣನೊಳೆಂದನಾ ಕ್ಷಣದಿ  || ೪೫೭ ||

ರಾಗ ಕೇದಾರಗೌಳ ಅಷ್ಟತಾಳ

ಎಲೆ ಭಾನುಜಾತ ಕೇಳಸ್ತ್ರದ ಮಹಿಮೆಯ | ನೆಲೆಯರಿಯದೆ ಹೂಡಿದೆ ||
ನಳಿನಾಕ್ಷನಾತನ ರಥದೊಳಗಿಹ ನಿನ್ನ | ಗೆಲುವರೆ ಬಿಡುವನೇನೈ || ೪೫೮ ||

ಕೊರಳಿಗೆ ಹಿಡಿದರೆ ಮುಕುಟಕೆ ತಾಗುವು | ದುರಕಾಗಿ ಬೆಸಸಿದರೆ ||
ಶಿರವ ಕತ್ತರಿಸುವುದಿದುಸಿದ್ಧ ಬೇಗದಿ | ಮರಳಿ ನೀ ತೊಡು ಎಂದನು || ೪೫೯ ||

ನೀತಿಯ ಪೇಳ್ವರೆ ಕರೆದೇವೆ ನಾವ್ ನಿನ್ನ | ಸೂತ ಶೌನಕನೆ ನೀನು |
ಘಾತಕವೃತ್ತಿಯೊಳ್ ನಡೆಯುವಾತನೆ ನಾನು | ಮಾತುಗಳೊಂದೆಮಗೆ || ೪೬೦ ||

ಭಾಮಿನಿ

ಒಂದು ಶರಸಂಧಾನ ನಾಲಿಗೆ |
ಯೊಂದು ನಮ್ಮಲಿ ಕುಟಿಲವಿದ್ಯೆಗ |
ಳೆಂದು ಕಂಡೈ ಶಲ್ಯ ನಾವಡಿಯಿಡುವ ಧರ್ಮದಲಿ ||
ಇಂದು ಹೂಡಿದ ಶರವನಿಳುಹುವು |
ದಂದವೇ ನೀನರಿಯೆ ಹೊರಸಾ |
ರೆಂದು ತಿರುವಿನೊಳಂಬು ತೊಟ್ಟನು ಕರ್ಣನಾ ಕ್ಷಣದಿ || ೪೬೧ ||

ರಾಗ ಶಂಕರಾಭರಣ ತ್ರಿವುಡೆತಾಳ

ಏನ ಹೇಳುವೆನರಸ ಪಾರ್ಥನ | ಮಾನಿನಿಯ ಸಿರಿತನಕೆ ಮತ್ತಿ |
ನ್ನ್ಯೂನವಹುದೆನ್ನುತ್ತ ವೈಮಾ | ನಿಕರು ಮರುಗೆ || ೪೬೨ ||

ಆನನದ ಕಟವಾಯಲೊಯ್ಯನೆ | ಜೇನಹಟ್ಟಿಯೊಳ್ ಬಸಿವ ವಿಷದಂ |
ತಾ ನರೇಂದ್ರನ ಅನುಜನಲ್ಲಿಗೆ | ಬರಲು ಭಟರು || ೪೬೩ ||

ಹಾ ವೃಕೋದರ ಹಾ ಧನಂಜಯ | ಹಾ ನಕುಲ ಸಹದೇವ ಧರ್ಮಜ |
ಹಾವಿನಗ್ನಿಗೆ ಹವಿಗಳಾದಿರೆ | ಎಂದು ಮರುಗೆ || ೪೬೪ ||

ಗರುಡಪಂಚಾಕ್ಷರಿಯ ಮಂತ್ರೋ | ಚ್ಚರಣೆಯಲಿ ರಕ್ಷೆಘ್ನಸೂಕ್ತವ |
ವಿರಚಿಸುತ ಮರಕತದ ಗುಟಿಕೆಯ | ಬಾಯೊಳಿರಿಸಿ || ೪೬೫ ||

ನೊಂದ ಧರ್ಮಜ ಮರುಗಿ ಶ್ರೀಗೋ | ವಿಂದ ನೀನೇ ಗತಿಯೆನುತ್ತಿರ |
ಲಂದು ಪಾರ್ಥನ ಕೊರಳ ಸರಿಸಕೆ | ಬಂದಿತಾಗ || ೪೬೬ ||

ಭಾಮಿನಿ

ಪೊಡವಿಪಾಲಕ ಕೇಳು ಪಾರ್ಥನ |
ಕೊರಳ ಸರಿಸಕೆ ಬರಲು ರಥವನು |
ಅಡಗಿಸಿದನೈದಂಗುಲವ ಧರಣಿಯಲಿ ಕಡಿವಡದು ||
ಹಿಡಿದು ಮುಕುಟವ ಕಚ್ಚಿ ಹಾಯಲು |
ಪೊಡವಿಗುದುರಿತು ವಜ್ರ ವೈಡೂ |
ರ್ಯಾದಿ ಗೋಮೇದಿಕ ಸುರತ್ನಾದಿಗಳು ಸರಕಟಿಸಿ || ೪೬೭ ||