ಭಾಮಿನಿ

ಉರವ ಬಗಿಯಲು ಕೌರವೇಂದ್ರನ |
ಅನುಜ ಕೂಗಿದ ಭರಕೆ ದಿಗ್ಗಜ|
ಜರಿದು ಬೀಳ್ವಂತಾಯ್ತು ಧರಣಿಪರೆರಡು ತಟ್ಟಿನಲಿ ||
ಇರಲಿದೇನುತ್ಪಾತ ಶಬ್ದಗ |
ಳೆನುತಲಾ ಯಮಜಾದ್ಯರಿರುತಿರೆ |
ತರಣಿಸುತ ಸೌಬಲ ಸುಶರ್ಮಾದಿಗಳು ಭೀತಿಯಲಿ || ೩೧೨ ||

ಕಂದ

ಇರಲಾ ಕ್ಷಣ ಭೀಮಂ ನೆರೆ |
ಕರಕುಡುತೆಗಳಿಂದಲೀಂಟಲಾ ಶೋಣಿತ ಮಂ ||
ಧರೆಯೊಳು ಪೊಸತಾದುದು ವರ |
ನರಹರಿ ಹಿರಣ್ಯಕಶಿಪರ ಸಂಗರಕಾಗಂ || ೩೧೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ | ಸಿಕ್ಕಿದೆಯ ನೀ ನಮ್ಮ ಭವನಕೆ |
ಘಕ್ಕನನಲನನಿಟ್ಟ ದ್ರೋಹವು | ದಕ್ಕಿತೇನೈ || ೩೧೪ ||

ಸೊಕ್ಕಿನಲಿ ದ್ರೌಪದಿ ಮುಡಿಗೆ ಕೈ | ಯಿಕ್ಕಿಕೊಂಡೆಳೆದುಟ್ಟ ಸೀರೆಯ |
ಬಿಕ್ಕಿ ಬಿರಿದಾ ಪಾತಕಕೆ ಜಯ | ಸಿಕ್ಕಿತೇನೈ || ೩೧೫ ||

ಎಂದು ಮೂದಲಿಸುತ್ತಲಿರೆ ಬಳಿ | ಕಂಧನೃಪನಾತ್ಮಜನ ಕರೆಕರೆ |
ದೆಂದನಾ ಕಲಿ ಭೀಮ ಶೋಣಿತ | ದಂದ ನೋಡೈ || ೩೧೬ ||

ಅವನ ಬಿಡು ನೋಡಿತ್ತ ರವಿಸುತ | ಭುವನ ಮೂರರೊಳಿಲ್ಲ ನಿನ್ನೊಳು
ಬವರ ಕೊಡುವರ ಕಾಣೆ ಬಿಡಿಸೈ | ಅವನಿಪನನು || ೩೧೭ ||

ಇವನು ನಿಮ್ಮನು ಸಲಹಿದಾತನು | ಬವಣೆಯನು ನೀವ್ ಬಿಡಿಸಲೊಲ್ಲದೆ |
ಯುವತಿಯಂದದಿ ನೆಲವ ನೋಡ್ವಿರಿ | ಮೊಲೆಗಳುಂಟೇ || ೩೧೮ ||

ಗುರುಜ ಕೃಪ ಕೃತವರ್ಮ ಶಕುನಿಗ | ಳಿದರ ಸವಿಯನು ನೋಡಬನ್ನಿರಿ |
ಕುರುಕುಲೇಶನ ಹರಿಬಕೊದಗುವ | ಭಟರು ನೀವೈ || ೩೧೯ ||

ಭಾಮಿನಿ

ಎಲ್ಲಿ ನಿನ್ನನುಜಾತರಗ್ರಜ |
ರೆಲ್ಲಿ ನಿನ್ನಯ ಮನ್ನಣೆಯ ಭಟ |
ರೆಲ್ಲಿ ನಿನ್ನ ಮಹೇಂದ್ರಜಾಲದ ಕರ್ಣ ಶಕುನಿಗಳು ||
ಎಲ್ಲಿ ನಿನ್ನೊಲುಮೆಯ ಕುಮಂತ್ರಿಗ |
ಳೆಲ್ಲಿ ನಿನ್ನಯ ಬಲುಹಿನವರಿ |
ನ್ನೆಲ್ಲಿ ನಿನ್ನಾತುಮರ ಕರೆ ಸೆರೆ ಬಿಡಿಸಲಿನ್ನೆಂದ || ೩೨೦ ||

ಎಂದು ಮೂದಲಿಸುತ್ತಲವರನು | ಚಂದದಲಿ ಸುರಿಸುರಿದು ರಕುತವ |
ನಿಂದು ನೋಡುವುದೇಕೆ ಬಿಡಿಸೈ ಕೌರವೇಶ್ವರನೆ ||
ಅಂಧಕನಸುತನಿವನು ನಿನ್ನನು | ಹೊಂದಿದನುಜನು ಇವನ ರಕುತವ |
ನಿಂದು ಕುಡಿವರೆ ಬನ್ನಿ ತಾನಿಹೆನೆಂದನಾ ಭೀಮ || ೩೨೧ ||

ಕಂದ

ಎಂದಾ ಭೀಮನ ನುಡಿ ಕೇ |
ಳ್ದಂಧಕನೃಪನಣುಗ ಕೌರವೇಶ್ವರನಾಗಲ್ ||
ಮುಂದೀ ಕುರುವಂಶದ್ರುಮ |
ಕಿಂದಿವ ಪಗೆಯಾದನೆಂದು ಶೋಕಿಸುತಿರ್ದಂ || ೩೨೨ ||

ರಾಗ ಮಾರವಿ ಏಕತಾಳ

ಕುರುಸೈನ್ಯದ ನರಗುರಿಗಳಿರಾ ನಿ | ಮ್ಮರಸನ ಸೋದರನು ||
ಗರುಡನ ಬಾಯಿಗೆ ಭೋಜನನಾಗಿಹ | ಬಿಡಿಸಿರೊ ನಿಹಿತನನು || ೩೨೩ ||

ಸೀರೆಯ ಸುಲಿದ ದುರಾತ್ಮಕನೀತನು | ಮಾರಿಯ ಭವನವನು ||
ಸೇರಿದ ಕೌರವ ಜೀವಿಸಲೇಕೆ ಶ | ರೀರವ ಸುಡಲಿನ್ನು  || ೩೨೪ ||

ಗಜ ಬಹು ಸಿಂಹನ ವಶವಾದಂದದಿ | ಎನ್ನೊಳ್ ಸಿಕ್ಕಿದ ಭಟನು ||
ದಳಪತಿ ಶಕುನಿಗಳಿತ್ಯಾದಿ ಕಲಿಗ | ಳುಳುಹಿಸಿ ನೀವಿವನ  || ೩೨೫ ||

ಪರಮ ಶ್ರುತಿ ಸ್ಮೃತಿ ಶಾಸ್ತ್ರವಿಚಾರದ | ಗುರುಸುತ ಕೃಪರಿವನ ||
ಧುರದೊಳು ಕೊಟ್ಟು ನೀವು ಸುಮ್ಮನೆ ಕುಳಿ | ತಿರುವುದು ಸರಿಯೇನೈ || ೩೨೬ ||

ಎನುತೆಲ್ಲರ ಹಂಗಿಸೆಯಿವಗುತ್ತರ | ವೆನಲರಿಯದೆ ಭಟರು ||
ಮಿಡುಕುತಲಿರೆ ಮಾರುತಿ ನುಡಿದನು ತಾ | ನತಿ ಮನ ಕೋಪದೊಳು || ೩೨೭ ||

ಭಾಮಿನಿ

ದುರುಳರೀ ಕೌರವನ ಸಹಜನ |
ಸೆರೆಯ ಸಿಕ್ಕಿಸಿ ಸೊಬಗ ನೋಡುವ |
ನೆರೆ ನಪುಂಸಕರೊಡಲ ಸುಡು ಬಿಡಿ ಕೈದುಗಳನೆಂದ ||
ಮರಣ ಹೊರ ಹೊರಗಾಯ್ತಲಾತನ |
ಹರಣವೆನ್ನಯ ಕೈಯೊಳಿದೆ ನರ |
ಗುರಿಗಳಿವರಿನ್ನ್ಯಾರು ನಿಮ್ಮನು ರಕ್ಷಿಸುವರೆಂದ ||೩೨೮||

ರಾಗ ಕೇದಾರಗೌಳ ಅಷ್ಟತಾಳ

ಗಂಡುಸಾದವರನ್ನು ಕಾಣೆನೀ ಸೈನ್ಯದಿ | ಲಂಡ ಸುಭಟರಿವರು ||
ಪುಂಡರೀಕಾಕ್ಷನ ಕಡೆಯಲಿ ಭಟರುಂಟೆ | ಎಂದನಾ ಕ್ಷಣ ಭೀಮನು || ೩೨೯ ||

ಮುರಹರ ಕೇಳು ಸಂಧಾನದಿ ನಿನ್ನಯ | ಕರವ ಬಿಗಿದ ಭಟನು |
ಕುರಿಯಂತೆ ಸಿಕ್ಕಿಕೊಂಡಿರುವ ನಾಯನು ಸತ್ತ್ವ | ವಿರೆ ಬಿಡಿಸುವುದೆಂದನು || ೩೩೦ ||

ಸಹದೇವ ನಕುಲ ಸಾತ್ಯಕಿ ಧೃಷ್ಟದ್ಯುಮ್ನರಿಂ | ದಹುದಲ್ಲ ಯಮಜನೊಳು ||
ಅಹುದು ಪರಾಕ್ರಮಿ ವಿಜಯ ನಿನ್ನೊಳು ಸತ್ತ್ವ | ಸಾಹಸವಿರಲು ತೋರು || ೩೩೧ ||

ಹಿಂದೊಂದು ಬಾರಿ ಖೇಚರನೊಳು ಸಿಲುಕಿದ | ನಂದು ಬಿಡಿಸಿದಾತನು ||
ಇಂದುನಾಚುವುದೇಕೆ ಕರದೊಳು ಬಳೆಯುಂಟೆ | ಎಂದನಾಕ್ಷಣ ಭೀಮನು || ೩೩೨ ||

ರಾಗ ಮಾರವಿ ಏಕತಾಳ

ಕೇಳುತ ಭೀಮನ | ನುಡಿಯನು ಪಾರ್ಥ ಕ | ರಾಳ ರೋಷದಿಕಿಡಿ |
ಯುಗುಳುತ ಕಂಗಳೊಳ್ | ಧಾಳಿಯ ಕೊಂಡು ಶ | ರಾಳಿಸಹಿತ ಬರೆ |
ಗೂಳೆಯ ತೆಗೆದಾ | ಭೂತಾಳಿಗಳದ || ನೇನನೆಂಬೆ || ೩೩೩ ||

ಅಸಮಸಾಹಸ ಕೇ | ಳಸುರ ದುಶ್ಯಾಸನ | ಬಿಸಿರಕುತವ ಕುಡಿ |
ದೆಸೆವ ಪರಾಕ್ರಮ | ಕುಸುರಿ ದರಿದನೆಂ | ದ್ಹೊಸ  ಕಣೆಯನು ಕೊಳ |
ಲಸುರಹರನು ಕಂ | ಡೆಂದನಾ ಕ್ಷಣದಿ || ಏನನೆಂಬೆ || ೩೩೪ ||

ರಾಗ ಮಾರವಿ ಆದಿತಾಳ

ಇಂಥ ಮಾತೇಕೆಂಬೆ ಪಾರ್ಥ | ಪಂಥವು ಯಾರೊಡನೆ ||
ಕಂತುಹರನು ಬಂದರಿವನ | ಮುಂತೆ ನಿಲುವನೆ || ೩೩೫ ||

ಸುರಲೋಕಕ್ಕೆ ಪೋಗಿ ಅಸುರ | ನಿವಾತಕವಚರನ್ನು ||
ಶಿರವನರಿದೆನೆಂಬ ಗರ್ವ | ಹರಿಯದಿವನೊಳಿನ್ನು || ೩೩೬ ||

ಹರನೊಳು ಸರಿಯಾಗಿ ಕಾದಿ | ಶರವ ಪಡೆದೆನೆಂಬ
ದುರಹಂಕಾರ ಬೇಡ ಭೀಮನ | ಪರಿಕಿಸಿ ನೋಡೆಂದ || ೩೩೭ ||

ಹರಿಯ ಮಾತಿಗಾಗಿ ನರನು | ಪೂರ್ಣ ದೃಷ್ಟಿಗಳಿಂದ ||
ಪರಿಕಿಸುತ್ತಲಾಗಾತನಿಗೆ | ಶರವನಿತ್ತವನೆಂದು || ೩೩೮ ||

ಹರ ಹರ ನಾನರಿಯದಿವನೊಳ್ | ಶರವ ಪಿಡಿದು ನಿಂದೆ ||
ತರಳನೆಂಬ ಭಾವವಿರಲು | ಕರುಣದೋರೋ ತಂದೆ || ೩೩೯ ||

ಭಾಮಿನಿ

ತನಗೆ ಪಾಶುಪತಾಸ್ತ್ರವನು ಮಗು |
ಳೊಲಿದು  ಕೊಟ್ಟ ಮಹಾನುಭಾವನು |
ಅನಘನೆಂದೇ ಭಕ್ತಿ ಭಾವದಿ ಪೊಗಳುತಿಂತೆಂದ ||
ಮನುಮಥಾಂತಕ ವಿಶ್ವತೋಮುಖ |
ತ್ರಿಣಯನ ಪುರಾರಾತಿ ಕರುಣಾ |
ವನಧಿ ಪಾಲಿಸು ಪಾರ್ವತೀವಲ್ಲಭ ನಮೋ ಎಂದ  || ೩೪೦ ||

ಅನಿಲಸಂಭವನಿತ್ತ ತನ್ನಯ |
ವನಿತೆಗೀ ಹದನೆಲ್ಲ ತಿಳುಹಿಸಿ |
ರಣಕೆ ಕರೆತಾರೆಂದು ಕಳುಹಿದ ಚರರನಾ ಕ್ಷಣಕೆ  || ೩೪೧ ||

ಕಂದ

ಮರುತಜನಪ್ಪಣೆಯಂ ತಾಂ |
ಶಿರದೊಳಗಾಂತಂತುಮಯ್ತರುತ್ತಂದಾಗಳ್ ||
ತರುಣೀಮಣೀ ದ್ರುಪದಾತ್ಮಜೆ |
ಯಡಿಗಂ ಶಿರಬಾಗುತುಸಿರ್ದದನೇಪೇಳ್ವೆಂ || ೩೪೨ ||

ರಾಗ ಸಾರಂಗ ಅಷ್ಟತಾಳ

ತಾಯೆ ನೀ ಲಾಲಿಸವ್ವ | ನಿನ್ನೊಡನೊಂದೆ | ಕಾರ್ಯವ ಪೇಳ್ವೆನವ್ವ || ಪ ||

ವಾಯುಜನರುಹಿದನು | ದುಶ್ಯಾಸನ | ಕಾಯವ ಕೆಡಹಿದನು ||
ತೋಯಜಮುಖಿ ನಿನ್ನೊಳರುಹಿ ಬೇಗದಿ ಕರೆ | ತಾರೆಂದು ಕಳುಹಿದನು || ನಿಮ್ಮುವನು || ೩೪೩ ||

ಹಿಂದೆ ಜೂಜಿನ ದಿನದಿ | ದುಶ್ಯಾಸನ | ನೆಂಬ ಖೂಳನು ಗರ್ವದಿ ||
ಮುಂದಲೆಯನು ಪಿಡಿದೆಳೆದು ಮೂದಲಿಸುತ್ತ | ಲಂದು ಸೀರೆಯ ಸುಲಿದು || ತಾನೊಲಿದು || ೩೪೪ ||

ಮದಮುಖತನದಿ  ನಿಮ್ಮ | ಮುಡಿಯ ಬಿಚ್ಚಿ | ಕೆಡಹಿದಾತನೊಳು ವರ್ಮ ||
ಅದರಿಂದಲಾತನ ಉದರ ರಕ್ತದೊಳದ್ದಿ ಮುಡಿಯಕಟ್ಟುವೆನೆಂದನು || ನಿಮ್ಮವನು || ೩೪೫ ||

ಎಂದ ಮಾತನು ಕೇಳುತಾ | ದ್ರೌಪದಿದೇವಿ | ಅಂದು ತೋಷವ ತಾಳುತ ||
ಹೊಂದಿಹೋದನೆ ಖೂಳ ಬರುವೆನಲ್ಲಿಗೆ ಈಗ | ಚಂದವಾಯಿತು ಎಂದಳು || ಮತ್ತವಳು || ೩೪೬ ||

ಹರುಷದಿ ದುಶ್ಯಾಸನ | ನೋಡುವೆನೆಂಬ | ತ್ವರಿತದಿ ಮರುತಜನ ||
ಅರಲಂಬನಾನೆಯೆಂಬಂದದಿ ಪೊರಟಳು | ತರುಣಿಯೈವರ ಕಾಂತೆಯು || ಸಿರಿವಂತೆಯು || ೩೪೭ ||

ವಾರ್ಧಕ

ನಡೆಗೆ ನಡುವಳುಕುತಂದಡಿಗಡಿಗೆ ನಿಲುಕುತಂ |
ಮುಡಿದಲರನಂದದಿಂ ಬಿಡುಮುಡಿಯ ಚಂದದಿಂ |
ತಡೆಯದರೆನೋಟದಿಂ ಕಿರುಬೆವರ ಕೂಟದಿಂ ಗಡಗಡನೆ ನಡೆವ ಭರಕೆ ||
ಕುಡಿಮೊಲೆಯು ಕುಣಿವುತಲಿ ನಡುವಳುಕಿ ದಣಿವುದಂ |
ನುಡಿಗೆ ಗಿಳಿವೃಂದದಿಂ ಜಡೆನಾಗಬಂಧದಿಂ |
ಉಡುಗಣಪ್ರಭೆಗಳಿಂ ಮೆರೆವ ಶಶಿ ಬಿಂಬದಿಂ ಪೊರಟಳಾನಂದದಿಂದ || ೩೪೮ ||

ರಾಗ ದೇಶಿ ಅಷ್ಟತಾಳ

ಮೆಲ್ಲಮೆಲ್ಲನೆ ಬರುತ ದ್ರೌಪದಿದೇವಿ |
ನಿಲ್ಲದಡಿಯಿಡುತಾಗ ಭಯದೊಳ | ಗಲ್ಲಿ ದೂರದೊಳೀಕ್ಷಿಸಿ || ೩೪೯ ||

ಏನಿದದ್ಭುತವಾಯ್ತು ಹಿರಣ್ಯಕ |
ದಾನವನ ಸಂಗರಕೆ ನೂರ್ಮಡಿ | ಕಾಣಲಿದು ಪೊಸತಾಯಿತು || ೩೫೦ |

ಅಮಮ ತನ್ನಯ ರಮಣ ಮಾರುತಿಯೊ |
ಕಮಲನೇತ್ರನೊ ಕಾಮವೈರಿಯೊ | ಸಮರವಿದ ನೋಡುತ್ತಲೆ || ೩೫೧ ||

ವಾತಸಂಭವನಹುದೊ ದುಶ್ಯಾಸನ |
ಘಾತಿಸೋ ರಣದೊಳಗೆ ರಣವಿ | ಖ್ಯಾತ ಭೀಮನ ನೋಡುತ || ೩೫೨ ||

ಭಾಮಿನಿ

ರಣದೊಳಗೆ ಪವಡಿಸಿದ ಹೆಣಗಳ |
ಬಣಬೆಯನು ಕಾಣುತ್ತ ದ್ರುಪದಜೆ |
ದಣಿದು ಹತ್ತಿಳಿಯುತ್ತ ಬಂದಳು ಭೀಮನಿದ್ದೆಡೆಗೆ ||
ಮಣಿದಳಂಗನೆಯಳನು ಮಾರುತಿ |
ಕಣುದಣಿಯಲೀಕ್ಷಿಸುತ ಮುದ್ದಿಸಿ |
ವನಜಲೋಚನೆಯಳನು ಕುಳ್ಳಿರಿಸಿದನು ತೊಡೆಯೊಳಗೆ || ೩೫೩ ||

ರಾಗ ಘಂಟಾರವ ಆದಿತಾಳ

ಲಲನೆ ಕೇಳೆಲೆ ನಿನ್ನ | ಬಳಲಿಸಿದಧಮರು | ಉಳಿವರೆ ಲೋಕದಿ | ನಳಿನದಳಾಕ್ಷಿ ||
ಹಳುವಕಟ್ಟಿದೆನೆಂಬ | ಹಮ್ಮಿಲಿ ತನ್ನೊಳ | ಗಳವಿಗೊಟ್ಟೀಗಲು ಮಡಿದ ದುಶ್ಯಾಸ || ೩೫೪ ||

ನೋಡು ನೋಡೆನುತವ | ನೊಡಲ ರಕ್ತದೊಳದ್ದಿ | ಮುಡಿಯ ನೇವರಿಸಿದ | ನಾಗಲಾ ಭೀಮ ||
ಹೊಡೆದು ಹಲ್ಲುಗಳನ್ನು ಕಳಚಿ ಕೈಬೆರಳಿಂದ | ಒಡನೆ ಬಾಚುತ ಎಳೆ | ಗರುಳನ್ನೆ ಮುಡಿಸಿ || ೩೫೫||

ಸಂದಿತಂದಿನ ದಿನ | ದಿಂದಲೆನ್ನಯ ಭಾಷೆ | ಯೆಂದು ಸಂತಯಿಸಿದ | ನಂದು ಕಾಮಿನಿಯ ||
ಮುಂದೇನು ಭೀತಿ ಬೇ | ಡೆಂದವಳೊಡನರುಹ | ಲಂದು ಕೈಮುಗಿಯುತ್ತ | ಲೆಂದಳಾ ಕಾಂತೆ || ೩೫೬ ||

ರಾಗ ತೋಡಿ ಅಷ್ಟತಾಳ

ಕೊಂದನೇ | ಭೀಮ | ಕೊಂದನೇ            || ಪ ||

ಕೊಂದನೇ ಕೌರವನನುಜ ಸಂಪನ್ನ | ಒಂದಿಷ್ಟು ಕರುಣೆಯಿಲ್ಲದೆ ಭೀಮ ನಿನ್ನ  || ಅ ||

ವನಕೆ ಐವರನಟ್ಟಿ ರಾಜಮಂದಿರದಿ | ಮನಕೆ ಬೇಕಾದ ಭೋಜನವುಂಡು ಸುಖದಿ |
ಮಿನುಗುವ ಕಾಯ ಜಜ್ಝರಿಯಾಯ್ತೀ ತೆರದಿ |
ತನಿಗರುಳರುಣಾಂಬು ಸೋರುವ ತೆರದಿ || ಕೊಂದನೇ || ೩೫೭ ||

ಮುಡಿಹಿಡಿದೆಳೆದ ಕೈ ತೊಳಲಾಯಿತಲ್ಲ | ಕೆಡುನುಡಿದಾ ಜಿಹ್ವೆಯೊಳಸೇರಿತಲ್ಲ |
ಅಡಚಿದಾಪತ್ತಿಗೆ ನಿನ್ನವರಿಲ್ಲ | ಕಡು ನಿಪುಣರು ಜೂಜಿನೊಳಗವರೆಲ್ಲ || ಕೊಂದನೇ || ೩೫೮ ||

ಎನ್ನಯ ದುಗುಡ ಸೈರಿಸದೆಯವನಿಯೊಳು | ನಿನ್ನರಸಿಯು ಕೇಳಿ ಹೇಗೆ ಜೀವಿಪಳು ||
ಅನ್ಯರಿಗತಿಕೇಡ ಬಗೆದವರಿಂತು | ಬನ್ನ ಬಡುವರೆಂದು ಜರೆದಳು ನಿಂತು  || ಕೊಂದನೇ || ೩೫೯ ||

ಭಾಮಿನಿ

ಗಂಡರಲಿ ಕಲಿ ಭೀಮ ನೀನೇ |
ಗಂಡನೆನ್ನಯ ಮನದಭೀಷ್ಟವ |
ಕಂಡು ಸಲಿಸುವರಿಲ್ಲ ಮಿಕ್ಕುಳಿದಿರ್ದ ಗಂಡರಲಿ ||
ಮಂಡೆಯನು ಮಣಿದೆರಗಲಾ ಮಾ |
ರ್ತಂಡತೇಜದಿ ಮೆರೆವ ಲಕುಮಿಯ |
ಗಂಡನನು ಕಾಣುತ್ತ ಬಿನ್ನಯಿಸಿದಳು ಚರಣದಲಿ  || ೩೬೦ ||

ವಾರ್ಧಕ

ಜಯ ಜಯ ರಮಾಧೀಶ ಖಳನಾಶ ರವಿಭಾಸ |
ಜಯ ಜಯ ಸರೋಜಾಕ್ಷ ಮುನಿಪಕ್ಷ ಖಳಶಿಕ್ಷ |
ಜಯ ಜಯ ಚಿದಾನಂದ ಗೋವಿಂದ ಗುಣವೃಂದ ಜಯ ಘನಶ್ಯಾಮ ಭೀಮ ||
ಜಯ ಜಯ ಜಗತ್ಪಾಲ ಶ್ರೀಲೋಲ ಗೋಪಾಲ |
ಜಯ ಜಯ ಖಗವರೂಥ ಅಜತಾತ ಸುಪ್ರೀತ |
ಜಯ ಜಯ ಸದಾನಂತ ಗುಣವಂತ ನಿಶ್ಚಿಂತ ಜಯ ಜಯೆಂದಡಿಗೆಡೆದಳು || ೩೬೧ ||

ಕಂದ

ಅಡಿಗೆರಗಿದ ದ್ರುಪದಜೆಯಂ |
ಪಿಡಿದೆತ್ತುತ್ತಧಿಕಮಾದ ತೋಷದೊಳಾಗಳ್ ||
ಜಡಜದಳಾಂಬಕಿ ನಿನ್ನಯ |
ಕಡುಮುಳಿಸಿಂದಳಿದರಳ್ತೆ ಕೌರವನನುಜರ್  || ೩೬೨ ||

ರಾಗ ನೀಲಾಂಬರಿ ರೂಪಕತಾಳ

ಅಂದೆರಗಿದ ದ್ರೌಪದಿಯನು ಸಂತಯಿಸಿ ಗೋ | ವಿಂದ ಪೇಳಿದನವಳೊಡನೆ |
ಮಂದಗಮನೆ ನಿನ್ನ ಜಠರಾಗ್ನಿಯಿಂದಲಿ | ಬೆಂದಿತು ಕೌರವರಡವಿ || ೩೬೩ ||

ಅಂಧಕನೃಪತಿಯ ಸುತರು ನೂರ್ವರೊಳೊಬ್ಬ | ನಿಂದಿಗೆ ಉಳಿದ ಕೌರವನು ||
ನೊಂದ ನೋವುಗಳಡಗಿತೆ ದುಶ್ಯಾಸನನಿಂದ | ನಂದಿತೆ ನಿನ್ನೊಡಲುರಿಯು || ೩೬೪ ||

ಚಂದವಾಯಿತು ಮುಂದೆ ಸುಖದೊಳಗಿರು ನೀನು | ಎಂದು ಸಂತಯಿಸಿ ಬೀಳ್ಗೊಡಲು ||
ಇಂದಿರೆಯರಸ ಗೋವಿಂದ ಮಾಧವ ಜಯ | ಎಂದು ಸಾಗಿದಳು ಮಂದಿರಕೆ || ೩೬೫ ||

ಭಾಮಿನಿ

ಧರಣಿಪತಿ ಕೇಳಿತ್ತ ದ್ರೌಪದಿ |
ಶಿಬಿರಕಭಿಮುಖವಾಗಲಿತ್ತಲು |
ಕುರುಕ್ಷಿತೀಶ್ವರನಿರ್ದ ಬಳಿಗಯ್ತಂದು ಗುರುಸೂನು ||
ಬರವ ಕಾಣುತಲಾಗ ಕೌರವ |
ಹರುಷದಿಂದವಗೆರಗಿ ಬೆಸಗೊಳ |
ಲರುಹಿದನು ನೀತಿಗಳ ಸಂಗತಿಯನ್ನುಮವನೊಡನೆ || ೩೬೬ ||

ರಾಗ ಕಾಪಿ ಅಷ್ಟತಾಳ

ಕುರುರಾಯ ಕೇಳೆನ್ನ ಮಾತ | ನಿನ್ನ | ಸಿರಿಯ ವೈಭವಕಾರು ಸರಿಯಿಲ್ಲ ಖ್ಯಾತ  || ಪ ||

ಇನ್ನಾದರು ಪಾಂಡವರನು | ಬೇಗ | ಮನ್ನಿಸಿ ಕೊಡಿಸಯ್ಯ ಅರ್ಧ ರಾಜ್ಯವನು ||
ಭಿನ್ನ ಭೇದಗಳೆಲ್ಲವನ್ನು | ಬಿಡೆ | ಚೆನ್ನ ಶ್ರೀಕೃಷ್ಣಗೋವಿಂದ ರಕ್ಷಿಪನು || ೩೬೭ ||

ಗುರು ದ್ರೋಣ ಭೀಷ್ಮರೆಂಬವರ | ಕಂಡು | ಮರೆಯದೆ ಕೊಲಿಸಿದೆ ಅನುಜತನುಜರ ||
ಸರಿ ಯಾರು ನಿನ್ನ ಭಾವನಿಗೆ | ಮುಂದೆ | ಕುರಿಯಂತೆ ಮೆರೆಸಿದರಾ ದುಶ್ಯಾಸನಗೆ || ೩೬೮ ||

ಏತಕೆ ಹಗೆಯವರೊಡನೆ | ಬಿಡು | ಘಾತಕ ವೃತ್ತಿಯ ಕಪಟಹೃದಯನೆ ||
ನೀತಿಹೀನನು ಕರ್ಣ ನಿನಗೆ | ಪೇಳ್ದ | ಮಾತು ಹಿತವ ನಂಬಿ ಕೆಡುವೆ ನೀ ಕಡೆಗೆ || ೩೬೯ ||

ಬೇಡ ಸಾರಿದೆ ಕಡ್ಡಿ ಮುರಿದು | ನಿನ್ನ | ನಾಡೊಳಯ್ದು ಗ್ರಾಮವಿತ್ತು ಶೋಭಿಪುದು |
ಆಡುವರ್ ನಿನ್ನೊಳು ಹಿತವ | ಬೆನ್ನ | ಗೂಡನೆಣಿಸುವರು ಕಪಟ ಕೃತ್ರಿಮವ || ೩೭೦ ||

ಭಾಮಿನಿ

ಕೇಳ್ವುದಶ್ವತ್ಥಾಮ ನೀನೇ |
ಪೇಳಿದಾ ನುಡಿಯಹುದು ಮೊದಲಲಿ |
ಪೇಳಿದರು ಗುರು ಭೀಷ್ಮ ವಿದುರಾದಿಗಳು ಮನವೊಲಿದು ||
ಕೇಳದವರುಚಿತಗಳನರಿಯದೆ |
ಕೋಳು ಹೋದುದು ಅನುಜತನುಜರ |
ಜಾಲ ಬಾಂಧವರುಗಳು ತನಗೋಸುಗವೆ ಅಳಿದರಲಾ || ೩೭೧ ||

ಕಂದ

ಸಂಧಿಯೆ ಎನಗಿನ್ನವರೊಳ್ |
ಮುಂದಿನ್ನೇನಾದರಾಗಲಿಯೆನುತಂ ||
ಹಿಂದಕೆ ಕರೆದರಿಗಳ ಧರೆ |
ಯನ್ನಿತ್ತರೆ ಕರೆಯರೆ ಪೇತುಗನೆಂದೆನ್ನಂ || ೩೭೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಹಹ ಕೌರವ ಕೆಡುವ ಕಾಲಕೆ | ವಿಹಿತವೇ ಮದ್ವಚನ ಕೊಳ್ಳದು |
ಇಹಪರಂಗಳನರಿಯದವನೇ | ತಿಳಿಯಬಹುದೈ  || ೩೭೩ ||

ಎನುತ ಚಿತ್ತ ವ್ಯಥೆಯೊಳಾತನ | ಘನ ಸಭಾಸ್ಥಳವಿಳಿಯಲನಿತರೊಳ್ |
ದಿನಪತನುಜಕುಮಾರ ವೃಷಸೇ | ನಾಖ್ಯನೆನಿಪ  || ೩೭೪ ||

ಧನುವ ಝೇವಡೆಗೆಯ್ದು ಬಂದಡಿ | ಗೆರಗಿ ನಿನ್ನನುಜಾತನೂರ್ವರ |
ನೆನಹ ಮಾಣಿಸಿದಧಮನುರವನು | ಬಗಿವೆ ನೋಡೈ  || ೩೭೫ ||

ಎನುತ ಕಡಗವ ಸರಿಸೆ ಮೇಲಕೆ | ಜನಪ ಕೌರವನುಬ್ಬಿ ಹರುಷದಿ |
ರಣಕೆ ಸಣ್ಣವನೆಂತು ಕಳುಹುವೆ | ನೆನುತ ನುಡಿದ  || ೩೭೬ ||

ರಾಗ ನೀಲಾಂಬರಿ ಏಕತಾಳ

ಮಗನೆ ನೀ ಸಣ್ಣವ ನಿನ್ನನು | ನಾನು | ಜಗಳಕಿನ್ನೆಂತು ಕಳುಹುವೆನು ||
ವಿಗಡ ಭೀಮಾರ್ಜುನವೀರರು | ನಿನ್ನ | ಹೊಗಗೊಡುವರೆ ಸೈನ್ಯಕವದಿರು || ೩೭೭ ||

ಮೃಗರಾಜನಿದಿರೊಳು ಕರಿಗಳು | ಕಾದಿ | ಜಗದಿ ಗೆಲುವುದುಂಟೆ ನೀ ಹೇಳು  ||
ಮೃಗಧರನಂತಿಹ ನಿನ್ನಯ್ಯ | ಕೇಳಿ | ಸೊಗಸುಗೊಂಬನೆ ಬೇಡ ಬೇಡಯ್ಯ || ೩೭೮ ||

ಅರಿಗಳಿಗಂಕುಶ ಕರ್ಣನು | ಒಬ್ಬ | ನಿರಲು ಬೇಕೆ ಪ್ರತಿಭಟರಿನ್ನು ||
ತರಳ ನೀನೊಮ್ಮೆ ಸಂಗರವನ್ನು | ನೋಡು | ತಿರುಯೆಂದು ಚಿಂತೆಯೊಳಿರ್ದನು || ೩೭೯ ||

ರಾಗ ಕೇದಾರಗೌಳ ಝಂಪೆತಾಳ

ಅರಸ ಬಿಡು ಚಿಂತೆಗಳನು | ಪಾಂಡವರ | ಧುರಕೆ ತಾನಿಹೆನೆಂದನು ||
ಸರಕುಮಾಡುವೆನೆ ತಾನು | ನೋಡಿ ನರ | ಕಾರಿಯೇ ತಡೆಯಲಿನ್ನು || ೩೮೦ ||

ಉರವ ಬಗಿವೆನು ಭೀಮನ | ಕ್ಷಣದೊಳಗೆ | ತಿರುಗಿಸುವೆ ನಿನ್ನನುಜನ ||
ಗರುಡನಿದಿರಲಿ ಉರಗರು | ಕಾದಿ ಗೆಲು | ವರಿವುದುಂಟೇಯವದಿರು || ೩೮೧ ||

ನೋಡು ಸಾಹಸವೆನ್ನನು | ರಣದಿ ಹೊ | ಯ್ದಾಡುವಂಥಾ ಬಗೆಯನು ||
ಕೂಡೆ ಶಾಕಿನಿ ಬಳಗಕೆ | ಔತಣವ | ಮಾಡಿ ತೋರುವೆ ನಿಮಿಷಕೆ || ೩೮೨ ||

ಭಾಮಿನಿ

ಎಂದು ಪೌರುಷವಾಡುತಿರಲಾ |
ನಂದದಿಂ ಕೌರವನು ಸ್ವಪ್ನದಿ |
ಕಂಡ ಹಣವಿಗೆ ಗೋಣಿಯೊಡ್ಡುವ ತೆರನು ತಾನಾದ ||
ಮುಂದುಗಾಣದೆ ಕುವರನನು ಬಳಿ |
ಕಂದು ತಾ ಬೀಳ್ಗೊಡಲು ಸಿಂಹದ |
ಮುಂದೆ ಕರಿ ಮಲೆವಂತೆ ಮಲೆತನು ವೀರ ವೃಷಸೇನ || ೩೮೩ ||

ವಾರ್ಧಕ

ಪೃಥ್ವಿಪತಿ ಲಾಲಿಸೈಯತ್ತಲು ವೃಕೋದರಂ |
ಚಿತ್ತಶುದ್ಧಿಯೊಳಾಗ ಕಾಲ್ಮೊಗಂ ತೊಳೆದು ಬಳಿ |
ಕುತ್ತಮದ ಮಡಿವಸನಮಂ ಕೊಂಡು ಪರಿಮಳಗಳಂ ಧರಿಸುತುತ್ಸಹದೊಳು ||
ಕತ್ತಲೆಯ ಕಡಿದು ಬಗಿದೇಳ್ವ ರವಿಯಂದದಿಂ |
ದುತ್ತಮ ವರೂಥಮನ್ನಡರೆ ವೃಷಸೇನ ಬಲು |
ಶಸ್ತ್ರದಿಂ ತರುಬುತಿಪ್ಪತ್ತು ಸಾವಿರ ಸೈನ್ಯದೊಡನೆ ಬಂದಿದಿರಾದನು || ೩೮೪ ||

ರಾಗ ಮಾರವಿ ಏಕತಾಳ

ಎಲವೋ ಭೀಮ ಪರಾಕ್ರಮ ನಿನ್ನದು | ಹಳೆ ಹಳೆ ಹಾರ್ವರಲಿ ||
ಗೆಲಿದಿಹ ಪೌರುಷ ಬಿಡು ಬಿಡು ಎನ್ನಯ | ಅಳವಿಯ ನೋಡಿಲ್ಲಿ || ೩೮೫ ||

ಕಾಡೊಳು ಕರಡಿಯ ಸಂಗಡವಿರುವರು | ನಾಡನು ಬಯಸಿದಕೆ |
ತೋಡುವೆ ಕರುಳನೆನುತ್ತಲೆ ಧನುವನು | ಪಿಡಿದನು ತತ್‌ಕ್ಷಣಕೆ || ೩೮೬ ||

ಹಿಡಿ ಹಿಡಿ ಧನುವನೆನುತ್ತಲೆ ಕರ್ಣಜ | ನುಡಿದ ಪರಾಕ್ರಮಕೆ ||
ಕಡು ಹಿಗ್ಗುತಲಾ ಮರುತಜ ನುಡಿದನು | ತರಳನ ಸಾಹಸಕೆ || ೩೮೭ ||

ಎಲವೋ ಕರ್ಣಕುಮಾರನೆ ನಿನ್ನನು | ಗೆಲಿದರೆ ಗೆಲುವೇನು ||
ಛಲ ವ್ಯರ್ಥವು ವಿವೇಕದಿ ಸಾರುವು | ದೊಳ್ಳಿತು ನೋಡಿನ್ನು || ೩೮೮ ||

ಕಂದ

ಸಾರುವರಂ ಕಡೆಸಾರಿಸು |
ಸಾರದಿರೆನ್ನೊಳಗೆನುತ್ತಲಾ ವೃಷಸೇನಂ ||
ತೋರೆ ಪರಾಕ್ರಮವೆನ್ನಯಿ |
ದಿರೊಳೆನುತ ಮಾರುತಿಯೊಡನಿಂತೆಂದಂ ತಾಂ || || ೩೮೯ ||

ರಾಗ ಭೈರವಿ ಅಷ್ಟತಾಳ

ಧುರಕೆ ಸಣ್ಣವನಾದರೇ ನಾನು | ನಿನ್ನ | ಶಿರವ ಕೊಳ್ಳದೆ ಪೋದರೇ ಇನ್ನು ||
ಕರೆಯೈ ವೈಶ್ಯರ ಸುತನೆನಗೆಂದು | ಮತ್ತೆ | ಶರವ ಸುರಿದು ಮೇಲ್ವಾಯ್ದನಂದು || ೩೯೦ ||

ಹುಡುಗನೆಂಬುದಕಾಗಿ ನಿನ್ನನು | ಕೈಯ | ತಡೆದರೆ ಬಂತೆ ಗರ್ವಗಳಿನ್ನು |
ಧಡ ಧಿಡು ಧಪ್ಪು ಧಿಪ್ಪೆನುತಲೆ | ಭೀಮ | ಬಡೆದನು ಗದೆಯಿಂದಲಾಗಳೆ || ೩೯೧ ||

ಹೊಡೆದ ಭರಕೆ ವೃಷಸೇನನು | ಕಣ್ಣ | ಬಿಡುತಲೆ ಕಚ್ಚಿದ ಮಣ್ಣನು |
ಒಡನೆ ಥೂಯೆಂದುಗುಳುಗುಳುತ್ತ | ಮತ್ತೆ | ಮೃಡನ ಮಂತ್ರವನಾಗ ಜಪಿಸುತ್ತ || ೩೯೨ ||

ಏಳುತೇಳುತ ಕೊಂಡು ಧನುವನು | ಭೀಮ | ಬೀಳು ಬೀಳೆನುತೆಚ್ಚ ಶರವನು ||
ಭಾಳವನೊಡೆದುಚ್ಚಳಿಸಿತು | ಮೂಗಿ | ನೊಳಗೆ ಶ್ವಾಸಗಳಂತರಿಸಿತು || ೩೯೩ ||