ರಾಗ ಶಂಕರಾಭರಣ ಏಕತಾಳ

ಜಡಜನೇತ್ರೆ ಕೇಳೆ ಎನ್ನ | ನುಡಿಯ ನೀನರಿಯೆಯೇನೆ |
ಬಿಡು ಬಿಡಿವನಗೊಡವೆ ನಿನಗೆ | ಬೇಡವೇ ಕಾಂತೆ || ೨೩೮ ||

ಬಿಡುವಳಲ್ಲ ಕಾಂತ ನಾನು | ಬಿಡುವುದಾದಡರಸನೊಡನೆ |
ಬಿಡುವೆ ಪ್ರಾಣ ಹೊರತು ಬೇರೆ | ಮಾತಿಲ್ಲ ಕಾಂತ  || ೨೩೯ ||

ಅರಸನೆನ್ನ ಕರದ ಬಿಲ್ಲ | ನರಕವೈರಿಗಿತ್ತು ರಥವ |
ಹರಿಸೆಂದೆನ್ನ ಜರೆವುದಿದು | ಸರಿಯೇನೆ ಕಾಂತೆ || ೨೪೦ ||

ಸರಿಯಿದಲ್ಲವೆಂಬಡೆ ಶ್ರೀ | ಹರಿಯೆ ಬಲ್ಲ ನೋಡದಕ್ಕೆ |
ಅರಿವೆ ಕೊರಳನೆಂಬುದಿದು | ಸರಿಯೇನೋ ಕಾಂತ || ೨೪೧ ||

ವಾರ್ಧಕ

ಅರವಿಂದಮುಖಿ ಮನದ ತಾಪದಿಂ ಕೋಪದಿಂ |
ದುರೆ ನೊಂದು ಬೆಂಡಾಗಿ ಕರಗುತಂ ಮರುಗುತಂ |
ಕುರುವರನ ಸಭೆಯೊಳಹ ಕೃತ್ಯಮಂ ಸತ್ಯಮಂ ಕರಿಸುವರೆ ನೀನಜ್ಞನೆ ||
ಅರಸ ಬಿಡು ದಮ್ಮಯ್ಯ ವರ್ಮಮಂ ಶರ್ಮಮಂ |
ಮರೆತುಬಿಡು ತರವಲ್ಲ ಹತ್ಯಮಂ ಸತ್ಯಮಂ |
ತೊರೆಯಬೇಡೆಂದಬಲೆ ನಯದಿಂದ ಭಯದಿಂದಲರುಹುತಿರಲಾ ಕ್ಷಣದೊಳು || ೨೪೨ ||

ಭಾಮಿನಿ

ಮುರಹರನು ನಡೆತಂದು ಪಾರ್ಥನ |
ಕರದ ಖಡ್ಗವ ಪಿಡಿದು ಪೇಳಿದ |
ಪರಿಯಿದೇನೈ ಭಾವ ನಿನ್ನಯ ಮನದ ಸಂಕಲ್ಪ ||
ಕುರುನೃಪಾಲನ ಸಭೆಯೊಳಾದುದ |
ಪರಿಯ ಮರೆದೆಯ ಪಾಪಿ ನೀನಾ |
ಧರಣಿಪತಿ ಧರ್ಮಜನು ಆರೆಂದರಿಯದಾದೆಯಲಾ || ೨೪೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪಿಡಿಯದಿರು ಮುರವೈರಿ ಪಾರ್ಥನ | ಖಡುಗಕಿದೆ ತನ್ನೊಡಲು ಬೇರಿ |
ನ್ನುಡಿಯಲೇತಕೆ ಎರೆದು ಧಾರೆಯ | ಕೊಡುವೆ ತನುವ || ೨೪೪ ||

ತೊಡಗಿದಾತನ ರಾಜಕಾರ್ಯವ | ಕೆಡಿಸದಿರು ನರಕಾರಿ ಪಾರ್ಥನ |
ನುಡಿಗಳವು ಪುಸಿಯಾಗಲಾರವು | ಜಡಜನೇತ್ರ || ೨೪೫ ||

ನರಕರಿಪು ಕೇಳೆನ್ನ ಕರದೊಳ | ಗಿರುವ ಗಾಂಡೀವವನು ನಿನ್ನೊಳ |
ಗಿರಿಸಿ ಸಾರಥ್ಯವನು ಮಾಡೆಂ | ದೊರೆದನಿನ್ನು  || ೨೪೬ ||

ಆರದನ್ಯಾಯವು ವಿಚಾರಿಸ | ಲಾರದನು ನೀ ಬಲ್ಲೆ ನಮ್ಮಲಿ |
ತೋರಿದಡೆ ತವ ಪಾದಸೇವೆಗೆ | ದೂರನಹೆನು || ೨೪೭ ||

ದೇವ ಕೇಳೈ ಪೂರ್ವದಲಿ ಸುರ | ಪಾಲಕನು ಎನಗಿತ್ತ ವರಗಳ |
ದೇವಧನುವನು ಕ್ರೋಧದಿಂದಲಿ | ಆವ ತೆರದಿ || ೨೪೮ ||

ಭಾವಿಸದೆ ಪರಗೀಯಲೆಂದವ | ನಾವನೇ ಹಗೆಯೆಂಬ ನುಡಿಯನು |
ಭೂವರೇಣ್ಯನು ನುಡಿದ ಮೇಲೆನ | ಗಾವ ಭಯವು || ೨೪೯ ||

ರಾಗ ಮಾರವಿ ಏಕತಾಳ

ಕೊಲುವೆನು ಮೊದಲಲಿ ಅಣ್ಣ ದುರಾತ್ಮನ | ಬಳಿಕಾ ಕೌರವನ ||
ತಲೆಯನು ತರಿಯುವೆನೆನ್ನುತಲಾ ಕ್ಷಣ | ಸೆಳೆದನು ಖಡುಗವನು || ೨೫೦ ||

ಚಳಕದಿ ಝೇಂಪಿಸೆ ನೋಡುತ ಕೃಷ್ಣನು | ಝಳಪಿಸುವಾಯುಧವ |
ಕೆಲದೊಳಗಿಡು ತಲೆ ಬಿಡಿಸಲು ಯಮಸುತ | ಅಳುಕದೆ ಹರಿಗೆಂದ || ೨೫೧ ||

ಭಾಮಿನಿ

ಆಸೆ ದೇಹದೊಳಿಲ್ಲ ರಾಜ್ಯದ |
ಪಾಶ ಮೊದಲಿನಿತಿಲ್ಲ ಪಾರ್ಥನ |
ಭಾಷೆಸಂದರೆ ಸಾಕು ಬಿಡು ಬಿಡು ಕೃಷ್ಣ ಫಲುಗುಣನ ||
ವಾಸುದೇವನು ನುಡಿದನೀ ಭೂ |
ಮೀಶನನು ನೀ ಕೊಲ್ಲಲಯ್ದಲು |
ನಾಶವಾದನು ನೃಪತಿ ಫಲುಗುಣಗೆಲಿದೆ ಭಾಷೆಗಳ  || ೨೫೨ ||

ಕಂದ

ಮಾನವರೊಳಗಿಂದೀ ಯಮ |
ಸೂನುವಿನಿಂದಧಿಕರ ಕಾಣೆನೀ ಧಾರಿಣಿಯೊಳ್ ||
ನೀನನುಮಾನಿಸದಲೆ ಅವ |
ಮಾನವ ಮಾಡಿದರಿಂ ಬಂತು ನಿರ್ದ್ರೋಹತ್ವಂ || ೨೫೩ ||

ರಾಗ ಮಧುಮಾಧವಿ ಆದಿತಾಳ

ದಾರಿಯೇನಿದಕಿನ್ನು | ಮುರಹರ | ಪಾರಗಾಣೆನು ನಾನು   || ಪ ||

ಅಣ್ಣ ಧರ್ಮಾತ್ಮನೊಳು | ಪಾಪವ | ಹಣ್ಣಿದೆ ಕ್ರೋಧದೊಳು ||
ಪುಣ್ಯಮೂರುತಿ ನೀನು | ಪ್ರಾಯಶ್ಚಿತ್ತ | ವನ್ನು ತೋರೆನಗಿನ್ನು || ೨೫೪ ||

ತನ್ನಾತ್ಮ ಸ್ತುತಿಗಳನು | ತಾನೇ | ವರ್ಣಿಸಿಕೊಂಡವನು |
ನಿರ್ಣಯದಲಿ ತನುವ | ಹೋಗಾ | ಡಿನ್ನಿದೊ ನಿನ್ನಘವ || ೨೫೫ ||

ಹಿಂದೆ ಶ್ರೀ ರಾಘವನು | ಕ್ರೋಧದಿ | ಸಿಂಧುವ ಕೊಲ್ಲುವೆನು ||
ಎಂದು ಶಾರ್ಙ್ಗವ ಪಿಡಿದು | ನೆಗಹಲಿ | ಕಂದವ ತಾ ತಿಳಿದು  || ೨೫೬ ||

ವಂದಿಸಿದನು ಪದಕೆ | ಭಕ್ತಿಯೊ | ಳಿಂದಿನಿತೇಕಿದಕೆ ||
ಚಂದದೊಳಭಯವನು | ಕೊಡಲರ | ವಿಂದನಾಭನು ತಾನು || ೨೫೭ ||

ಕೊಂದಾ ವೈರಿಯನು | ಸಲಹಿದ | ಚಂದದಿ ರಾಘವನು |
ಇಂದು ನಿನ್ನಗ್ರಜನ | ಅರಿಯನು | ಸಂಧಿಸಿ ಬೇಗವನ || ೨೫೮ ||

ಕೊಂದು ಯಮಾತ್ಮಜನ | ಪಾದಕೆ | ವಂದಿಸಿದರೆ ನಿನ್ನ ||
ಹೊಂದಿದ ಪಾಪಗಳು | ಹರಿವುದು | ಎಂದನು ಕರುಣಾಳು || ೨೫೯ ||

ವಾರ್ಧಕ

ಮುರಹರನ ನುಡಿ ಕೇಳಿ ಫಲುಗುಣಂ ಬಳಿಕ ತಾ |
ನರಸುಹಂತಿಯ ಗೆಲಿದು ದ್ರುಪದಾತ್ಮಜೆಯ ತಂದೆ |
ಹರನೊಡನೆ ಕಾದಿ ಶರ ಪಾಶುಪತಮಂ ಪಡೆದೆ ಸುರರ ದುರ್ಗವನೇರಿದೆ ||
ದುರುಳ ರಕ್ಕಸರ ಬಡೆದೊರಸಿ ಮೂರ್ಕೋಟಿಯಂ |
ಮುರಿದು ಕೌರವನುಗ್ರಮಂ ನಿಲಿಸಿ ಗೋವುಗಳ |
ತಿರುಗಿ ಮತ್ಸೈಶ್ವರನಿಗಿತ್ತು ಮಿಗೆ ಸರಳಮಂಚದಿ ಮಲಗಿಸಿದೆ ಭೀಷ್ಮನ || ೨೬೦ ||

ಕಂದ

ಒರಗಿಸಿ ಭಗದತ್ತನನುಂ |
ಶಿರವರಿದಾ ಸುಪ್ರತೀಕ ಗಜವನ್ನಾಗಳ್ ||
ಧುರದೊಳ್ ದ್ರೋಣನ ಗೆಲಿದೆಂ |
ದುರು ಶೌರ್ಯದೊಳೆಂದ ಧರ್ಮಜನಿದರೊಳ್ ಪಾರ್ಥಂ || ೨೬೧ ||

ದ್ವಿಪದಿ

ಅರಸ ಕೇಳಿತ್ತ ಧರ್ಮಜ ನುಡಿದ ನರಗೆ | ಹರುಷದಿಂದೀ ರಾಜ್ಯವಾಳು ಸುಖದೊಳಗೆ || ೨೬೨ ||
ಎನಗೆ ವನವೇ ಸಾಕು ಎಂದು ಯಮಸೂನು |  ವಿನಯದಿಂ ತಿರುಗುತಿರಲನಿಲಸುತ ತಾನು || ೨೬೩ ||
ಮಡದಿಯರಸರ ಬೆನ್ನ ಬಿಡದೆ ಮಾದ್ರೇಯ |  ರೊಡನೆ ನಡೆದುದು ಸಕಲ ಸೇನೆ ಸಮುದಾಯ || ೨೬೪ ||
ಈ ಪರಿಯ ಕಾಣುತರ್ಜುನ ಭೀತಿಯಿಂದ | ಭೂಪನಂಘ್ರಿಯೊಳು ತಲೆವಾಗುತಿಂತೆಂದ || ೨೬೫ ||

ಭಾಮಿನಿ

ಜನಪ ಕೇಳೈ ಗಗನದಗ್ರಕೆ |
ದಿನಪನಿಲ್ಲದ ಪರಿಯೊಳಿರೆ ಭೂ |
ವನಿತೆಗರಸಿನ್ನುಂಟೆ ಬೇರಿನ್ನೀ ಧರಿತ್ರಿಯಲಿ ||
ಘನ ದುರಿತ ದುರ್ಗುಣನು ದುರಹಂ |
ಕಾರಿ ತಾನೆಲೆ ದೇವ ನೀನೇ |
ಘನ ಕೃಪಾಸಾಗರನು ತನ್ನಪರಾಧ ಕ್ಷಮಿಸೆಂದ || ೨೬೬ ||

ಕಂದ

ಎರಗಿದ ಸಹಜನ ಕಂಡಾ |
ದರಿಸದೆ ನೃಪನಿರಲೀಕ್ಷಿಸುತಾಗ ರಮೇಶಂ ||
ಧರಣಿಪ ನಿನಗೀತನೊಳುಂ |
ಪರಿಭೇದಗಳೇನೆನಲವನದನಾಲಿಸುತಂ || ೨೬೭ ||

ರಾಗ ಕಾಂಭೋಜಿ ಝಂಪೆತಾಳ

ಮುರಹರನ ತಂತ್ರದಿಂದೆತ್ತಿ ತಕ್ಕೈಸುತ್ತ | ಶಿರವನಾಘ್ರಾಣಿಸುತ ನರನ |
ಹರುಷದಿಂ ಕಣ್ದಣಿಯಲೀಕ್ಷಿಸುತಲಂದು ತಾ | ಕರದಿ ತಡವರಿಸಿದನು ತನುವ || ೨೬೮ ||

ಅರಿಯ ಶರಗಾಯವನು ಕಂಡು ಮರುಗುತ ಮನದಿ | ಮರೆತನಾ ಕ್ಷಣ ತನ್ನ ನೋವ ||
ತರುಣ ನಿನ್ನನು ಧುರದಿ ಬಳಲಿಸಿದರಾರಕಟ | ತರಣಿತನಯನನಿಂದು ರಣದಿ || ೨೬೯ ||

ಶಿರವನಿಳುಹುವೆನೆಂದ ಭರವಸವದೇನು ನೀ | ನರಿಯದವನಂತೆ ಆಡುವರೆ ||
ಸಿರಿಯರಸನೇಂ ಗೆಯ್ವನೆಂದು ಮರುಗಲ್ಕಾಗ | ನರನು ಕರಗಳ ಮುಗಿಯುತೆಂದ || ೨೭೦ ||

ರಾಗ ಕೇದಾರಗೌಳ ಅಷ್ಟತಾಳ

ಅರಿವಧೆಗೆನಗಪ್ಪಣೆಯನೀಯಬೇಕೆಂದು | ಕರವ ಮುಗಿದ ಪಾರ್ಥನು ||
ಶಿರವ ಚೆಂಡಾಡಿ ಬಂದೆರಗುವೆ ಪಾದಕೆ | ತರಣಿಯಸ್ತಮಯಕಾನು || ೨೭೧ ||

ಇನನಸ್ತಮಯಕೊಂದೇ ಜಾವವು ಉಳಿಯಿತು | ಅನುಜ ನೀನೆಂಬುದೇನು ||
ಚಿನುಮಯಾತ್ಮಕ ಬಲ್ಲನೆಂದು ಕಂಬನಿದುಂಬಿ | ಮನದಿ ಚಿಂತಿಸುತೆಂದನು || ೨೭೨ ||

ಹಿಂದೆ ಸೈಂಧವನ ಕೊಲ್ಲುವೆನೆಂದು ನುಡಿದುದ | ಕಂದ ನಮ್ಮೊಳು ಪ್ರೇಮದಿ ||
ಮಂದರಧರನೊಂದು ಯತ್ನ ಗೆಯ್ದುದರಿಂದ | ಸಂದಿತಂದಿನ ಭಾಷೆಯು || ೨೭೩ ||

ಇಂದೊಂದು ಜಾವವದುಳಿಯಿತು ಕರ್ಣನ | ಕೊಂದಪೆನೆಂದುವನು ||
ನಂದನಂದನ ನೀನೆ ಕಾಯಬೇಕೆನುತವ | ಗೊಂದಿಸಿದನು ಪದಕೆ || ೨೭೪ ||

ಭಾಮಿನಿ

ಕೇಳು ಧರಣೀಪಾಲ ಪಾರ್ಥನು |
ಪೇಳಿದಾ ನುಡಿಯೆಮ್ಮ ನುಡಿಯೆಂ |
ದಾಲಿಸುವುದೆಂದೆನುತ ನುಡಿದನು ಕೃಷ್ಣ ಧರ್ಮಜಗೆ ||
ಲೀಲೆಯಲಿ ಪಿಡಿದೆತ್ತಿ ಲಕ್ಷ್ಮೀ |
ಬಾಲಿಕೆಯನಪ್ಪುವ ಸುಕೋಮಲ |
ತೋಳಿನಲಿ ಬಿಗಿದಪ್ಪಿ ಸಂತೈಸಿದನು ಭೂಪತಿಯ || ೨೭೫ ||

ವಾರ್ಧಕ

ಅರಸ ಜನಮೇಜಯನೆ ಲಾಲಿಸೈ ಮುಂಗಥೆಯ |
ನೊರೆವೆ ಕೇಳಿನ್ನು ಮುರಹರ ಪಾರ್ಥರೊಂದಾಗಿ |
ಮೆರೆವ ಮಣಿಮಯ ರಥವನೇರುತಿರಲಾಗ ವರದೇವದುಂದುಭಿ ಮೊಳಗಲು ||
ಧರಣಿಯೊಳಗುಳ್ಳ ಬುಧಜನರು ವೇದೋಕ್ತದಿಂ |
ಹರಸಿ ಮಂತ್ರಾಕ್ಷತೆಯನಿತ್ತು ತೆರಳಲ್ಕಾಗ |
ತರುಣಿ ದ್ರೌಪದಿ ಬಂದು ಧುರವ ಜಯಿಸೆಂದೆನುತ ಪಣೆಗೆ ತಿಲಕವನಿಟ್ಟಳು || ೨೭೫ ||

ಕಂದ

ಮತ್ತಾ ವನಜಾಂಬಕಿ ಮುದ |
ವೆತ್ತಾಗಳೆ ಪುರವರದೊಳಗಿರಲಾ ಕ್ಷಣಕಂ |
ಪೃಥ್ವಿಪ ಕೌರವನನುಜಂ |
ಹಸ್ತದಿ ಚಾಪವ ಧರಿಸುತಲಯ್ತಂದೆಂದಂ  || ೨೭೬ ||

ರಾಗ ಮಾರವಿ ಏಕತಾಳ

ಅಣ್ಣ ಸುಯೋಧನ ಲಾಲಿಸು ನಿನ್ನಯ | ಪುಣ್ಯಫಲೋದಯವ |
ಬಣ್ಣಿಸುವವರ್ಯಾರು ಬಗುಳಿದ ಪಾರ್ಥನು | ಹೆಮ್ಮೆಯೊಳಗ್ರಜಗೆ || ೨೭೭ ||

ತರಣಿಯಸ್ತಮಿಪುದರೊಳಗಾ ಕರ್ಣನ | ಶಿರವ ಧರೆಗೆ ಕೆಡಹಿ ||
ಭರದಿ ಬಂದೆರಗುವೆನೆಂದೆಂಬ ಭಾಷೆಯ | ಪರಿಯನು ಕೇಳ್ದೆವೆಲೈ || ೨೭೮ ||

ಎಮಗುಪಕಾರಗಳಾಯಿತು ಪಾರ್ಥನು | ಭ್ರಮೆಯಿಂದಾಡಿದುದು |
ಸಮರದೊಳಾತಗೆ ಸಾಹಸದೋರುವೆ | ಕೊಡಿಸೆನಗಪ್ಪಣೆಯ || ೨೭೯ ||

ಮಾರಿಗೆ ಹಬ್ಬವ ಮಾಡುವೆ ಪಾಂಡವ | ವೀರರ ತಲೆಗಡಿದು ||
ಬೀರುವೆ ಶೋಣಿತವನು ಮರುತಾತ್ಮಜ | ವೀರಸುಪಾರ್ಥರನು || ೨೮೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದು ದುಶ್ಯಾಸನನು ಪೇಳಲಿ | ಕಂದು ಕೌರವನೃಪತಿಯನುಜಗೆ |
ಚಂದದಿಂದಾಭರಣವಿತ್ತಾ | ನಂದದಿಂದ || ೨೮೧ ||

ಕಡಗ ಸರಪಣಿ ಹಾರವನು ಮಿಗೆ | ತೊಡಿಸೆ ಸೀಸಕ ಕವಚವನು ಇ |
ತ್ತೊಡನೆ ಬೇಕಾದಸ್ತ್ರಸಂಕುಲ | ವಿತ್ತನಾಗ || ೨೮೨ ||

ಮತ್ತೆ ಹೊಂಬಟ್ಟಲಲಿ ವೀಳ್ಯವ | ನಿತ್ತು ಪೇಳಿದನನುಜನೊಡನೀ |
ಹೊತ್ತು ಕರ್ಣನ ಕಾದುಕೋ ರವಿ | ಯಸ್ತಮಯಕೆ || ೨೮೩ ||

ಒಂದು ಜಾವದ ಅವಧಿ ದಿನಕರ | ನಿಂದು ಕಾಯ್ದರೆ ಸಾಕು ಜಯ ನಮ |
ಗಿಂದು ದೊರೆವುದೆನುತ್ತ ನಡೆದನು | ಮಂದಿರಕ್ಕೆ || ೨೮೪ ||

ಭಾಮಿನಿ

ಧರಣಿಪತಿ ಕೇಳಾ ಸುಯೋಧನ |
ನರಸನತ್ತಲು ತೆರಳಲಾಗಳೆ |
ಧುರ ವಿಜಯ ದುಶ್ಯಾಸ ಪೊಕ್ಕನು ನರನ ಸೈನ್ಯವನು ||
ಅರಿಯ ಬರವನು ಕಾಣುತಾ ಮುರ |
ಹರನು ಪೇಳಿದ ನರನೊಳಾತಗೆ |
ಶರವ ತೊಡಬೇಡಿಂದು ಭೀಮನ ಭಾಷೆಗೆಡರಹುದು || ೨೮೫ ||

ಕಂದ

ಎಂದಾ ನುಡಿಯಂ ಕೇಳುತ |
ಸ್ಯಂದನದೊಳ್ ಗಾಂಡೀವವನಿಳುಹಲ್ ವಿಜಯಂ ||
ಬಂದಾ ಭೀಮಂ ನರಹರಿ |
ಯಂದದೊಳಾರ್ಭಟಿಸುತಂದು ತೋರ್ದರಿಬಲಕಂ  || ೨೮೬ ||

ರಾಗ ಪಂತುವರಾಳಿ ಮಟ್ಟೆತಾಳ

ಅರಿಯ ಬರವನು | ಕಂಡು ಭೀಮನು ||
ಕರದಿ ಗದೆಯನು | ತಿರುಹುತೆಂದನು  || ೨೮೭ ||

ತರುಣಿ ದ್ರುಪದೆಯ | ಮಾನ ಗೊಂಡೆಯ ||
ಉರವ ಬಗಿವೆನು | ಕರುಳನುಗಿವೆನು  || ೨೮೮ ||

ಕರೆಸು ಜೂಜಿನ | ಕುಟಿಲಗಾರನ ||
ಧುರಕೆ ಬೇಗ ಬೆಂ | ಬಲಕೆ ಶೀಘ್ರದಿ   || ೨೮೯ ||

ಬಾಯಬಡಕನೆ | ಬಲ್ಲೆ ನಿನ್ನನು ||
ಕಾಯಲಾಪರಾ | ನಾರ ಕಾಣೆನು  || ೨೯೦ ||

ರಾಯ ಕೌರವ | ನನುಜನಾಗಿಹೆ ||
ಕಾಯಸತ್ತ್ವದಿ | ಭಟನು ನೀನಹೆ  || ೨೯೧ ||

ಎನುತ ಬಾಣವ | ಹೂಡುತಿರಲದ ||
ಅನಕ ಭೀಮನು | ಕಡಿದು ಬಿಸುಟನು  || ೨೯೨ ||

ಮನಕೆ ಹರುಷವ | ಮಾಡಿ ಕೌರವ ||
ಜನಪನನುಜನು | ಜಡಿದು ತಿವಿದನು  || ೨೯೩ ||

ರಾಗ ಶಂಕರಾಭರಣ ಮಟ್ಟೆತಾಳ

ದಿಟ್ಟಿನಹುದೊ ಭಳಿರೆ ಭೀಮ ಎನುತ ಚಾಪವ |
ರಟ್ಟೆಯುರುಳುವಂತೆ ತೆಗೆದು ಬಿಟ್ಟನಸ್ತ್ರವ   || ೨೯೪ ||

ಭಳಿರೆ ವೀರನಹೆ ಶಭಾಸು ಭಲೆ ನೃಪಾತ್ಮಜ |
ತಿಳಿದೆನೊಂದು ಗಳಿಗೆ ನಿಲ್ಲು ತೋರ್ಪೆ ಸಾಹಸ  || ೨೯೫ ||

ಎನುತಲಾಗ ಭೀಮ ಗದೆಯನೆತ್ತಿ ಹೊಯ್ಯಲು |
ಕನಲಿ ಕಂಗೆಡುತ್ತಲಾಗ ಬಿದ್ದ ಭುವಿಯೊಳು  || ೨೯೬ ||

ಅನಿತರೊಳಗೆ ನೃಪತಿಯನುಜನೆದ್ದು ಖತಿಯೊಳು |
ಜನಪನನುಜನುರವ ತಿವಿದು ಎಚ್ಚ ಭರದೊಳು  || ೨೯೭ ||

ಎಚ್ಚ ಭರಕೆ ಭೀಮನೌಡುಗಚ್ಚುತಾಕ್ಷಣ |
ಕಿಚ್ಚಿನಂತೆ ಶರವನೆಚ್ಚನತಿ ವಿಚಕ್ಷಣ  || ೨೯೮ ||

ಇಂತು ಭಟರ ಸಮರ ನಡೆದುದಿಲ್ಲಿ ತನಕಲಾ |
ಮುಂತೆ ನಡೆದ ಪರಿಯ ಕೇಳು ಪೇಳ್ವೆ ಭೂವರ  || ೨೯೯ ||

ಭಾಮಿನಿ

ಪೊಡವಿಪತಿ ಕೇಳಾ ಸುಯೋಧನ |
ನನುಜ ದುಶ್ಯಾಸನನು ಗರ್ವದಿ |
ಹಿಡಿದು ದ್ರುಪದಾತ್ಮಜೆಯ ಮಾನವ ಕಳೆದ ದ್ರೋಹಗಳು ||
ಬಿಡುವುದೇ ಎಲೆ ನೃಪತಿ ಸುವ್ರತೆ |
ನುಡಿದ ನುಡಿ ಪುಸಿಯಹುದೆ ಕೇಳೈ |
ಕಡು ಮದಾಂಧನ ಹೆಡಕ ಹಿಡಿದಳು ಮೃತ್ಯುವಾ ಕ್ಷಣದಿ || ೩೦೦ ||

ವಾರ್ಧಕ

ಹರಿಧನಂಜಯರಿತ್ತ ಸಮರಮಂ ಕಾಣುತಿರೆ |
ಪರಿಯನುಂ ತಿಳಿದು ಸಹದೇವ ನಕುಲಾದಿಗಳ |
ನೆರವಿಯಂ ಧರ್ಮಜಂ ಪರಿಕಿಸಿದನಾಗ ಮರುತಾತ್ಮಜನ ಸಾಹಸವನು ||
ಹರನ ಕೋಪಾಟೋಪಮಂ ಕಂಡು ಹರುಷದಿಂ |
ಪಿರಿದು ಹೆಂಪುಳಿಯಾಗುತಡಿಗಡಿಗೆಯಿರಲಿತ್ತ |
ಕುರುಕುಲೇಶಂ ತನ್ನ ಮನದಿ ಭೀತಿಯ ತಳೆದು ಮರುಗಿ ಗೋಳಿಡುತಿರ್ದನು || ೩೦೧ ||

ರಾಗ ಭೈರವಿ ಏಕತಾಳ

ಅತ್ತಲು ದುಶ್ಯಾಸನನು | ಬಲು | ಶಕ್ತಿಯಿಂ ಕೊಂಡು ಶರವನು ||
ಎತ್ತುತ ಕರ್ಣಾಂತರಕೆ | ಬಿಡ | ಲತ್ತಲು ತೀರ್ಚಿದ ಕ್ಷಣಕೆ || ೩೦೨ ||

ಭಾಮಿನಿಯರ್ಧ

[ಅನಕ ಭೀಮನು ಮನದಿ ಯೋಚಿಸೆ | ಎಣಿಕೆ ತೊಂಭತ್ತೆಂಟು ಎನುತಲಿ |
ಘನ ಮದಾಂಧನ ಕರೆದು ನುಡಿದನು ಮನದ ಕೋಪದಲಿ ||]

ರಾಗ ಸುರುಟಿ ಅಷ್ಟತಾಳ

ಬಾರೋ ತಮ್ಮ ದುಶ್ಯಾಸ ನೀನೀಗ |  ತೋರಿಸೋ ನಿನ್ನ ಕೈಗುಣವನ್ನು ಬೇಗ || ೩೦೩ ||
ಅರಗಿನಾಲಯದೊಳು ಉರಿಯನು ಪ್ರಬಲಿಸಿ | ಪರೀಕ್ಷೆಯಿಂದಲಿ ನೋಡುವುದೀಗ || ೩೦೪ ||
ಸೀರೆಯ ಸುಲಿದ ದುರಾತ್ಮಕ ಎನ್ನಯ | ಮಾರಿಯ ಭವನವ ಸೇರಿಪೆನೀಗ || ೩೦೫ ||
ಈ ಕ್ಷಣದಲಿ ನಿನ್ನ ಕೊಂದು ಕಳೆವೆನೀಗ | ರಕ್ಷಿಸುವವರ್ ಯಾರು ಪೇಳು ನೀ ಬೇಗ || ೩೦೬ ||

ರಾಗ ಭೈರವಿ ಏಕತಾಳ

ಬತ್ತಳಿಕೆಯು ಬರಿದಾಯ್ತು | ಧೈರ್ಯದ  | ಹೊತ್ತುಗಳೆಲ್ಲವು ಹೋಯ್ತು ||
ಚಿತ್ತದಿ ರಣಭೀತಿಗಳು | ತೋ | ರುತ್ತಲೆ ಭೀಮ ರೋಷದೊಳು || ೩೦೭ ||

ಫಡ ಫಡ ಎನುತಾರ್ಭಟಿಸಿ | ಮುಂ | ಗಡೆಯಲಿ ಖಡ್ಗವ ಧರಿಸಿ ||
ಒಡೆವೆನು ಶಿರಗಳನೆನುತ | ಬಂ | ದೊಡನದರನು ಮುರಿದಿಡುತ || ೩೦೮ ||

ಹತ್ತಿತು ಉರಿ ಜಠರದಲಿ | ಹರ | ನಿತ್ತವರದ ಬಲುಮೆಯಲಿ ||
ಸುತ್ತಿತು ಹೊಗೆ ಹೊರೆ ಸೂಸಿ | ಬೆರ | ಸುತ್ತಲೆ ಹೋದನು ಸಹಸಿ || ೩೦೯ ||

ಉಗ್ಗಡದರಿಭಟನನ್ನು | ಧರೆ | ಜಗ್ಗುವ ತೆರದೊಳಗಿನ್ನು ||
ಬಗ್ಗಿಸುತೆಡಗಾಲಿಂದ | ಕೆಡೆ | ದುಗ್ಗಡದೊಳೇರ್ದೆಂದ || ೩೧೦ ||

ಕ್ಕಿಕ್ಕಿರಿಕಿರಿಕಿರಿಯೆನುತ | ಬಾಯೊ | ಳುಕ್ಕಿತು ಹೊಸ ಬಿಸಿ ರಕುತ ||
ಘಕ್ಕನೆ ಉರಕುಗುರೂರಿ | ಬಗಿ | ದಿಕ್ಕಲು ಖಳ ಬಲುಚೀರಿ || ೩೧೧ ||