ರಾಗ ದೇಶಿ ಅಷ್ಟತಾಳ

ಬಂದರಾ ಸಮಸಪ್ತಕರಂದು ಸಾ |
ನಂದದಿಂದಮರೇಂದ್ರಸುತನೊಡ | ನಿಂದು ಕಾದುವೆವೆನ್ನುತ || ೧೬೨ ||

ಕಾರುಗತ್ತಲೆಯಂತೆ ತೋರುವ ಮುಖ |
ಕೋರೆದಾಡೆಯು ಕರದ ನಖ ದಂ | ಷ್ಷ್ರಾಳಿಯಿಂ ಕಿಡಿ ಸುರಿಸುತ || ೧೬೩ ||

ಕರದಿ ಬಾಣವ ಹೆದೆಗೊಳಿಸುತ ಮತ್ತೆ |
ಥರಥರನೆ ಸುರಲೋಕ ನಡುಗುವ | ತೆರದೊಳೊದರಿಸಿ ಧನುವನು || ೧೬೪ ||

ಬರುತ ತಗ್ಗಿತು ಧರಣಿ ದಿಗ್ಗಜಗಳು |
ಕೊರಳ ತಗ್ಗಿಸೆ ಕಮಠ ಫಣಿಪನ | ಕರುಳು ಬೆನ್ನಿಗೆ ಸೇರಿತು || ೧೬೫ ||

ಹರುಷದಿಂದಲಿ ಕರ್ಣನಾ ಕ್ಷಣದೊಳು |
ಕರವ ಮುಗಿಯಲ್ಕಾಗ ದನುಜರು | ಭರದಿ ಶಿರಗಳ ತೂಗುತ || ೧೬೬ ||

ಗಾಳಿ ಬೆಂಕಿಗಳೊಂದಾಗಿ ಬರುವಂತೆ |
ಖೂಳ ದನುಜರು ಶಲ್ಯ ಭಾಸ್ಕರ | ಬಾಲ ಸಹಿತಾನಂದದಿ || ೧೬೭ ||

ಭಾಮಿನಿ

ದನುಜರಾ ಸಮಯದಲಿ ತಮ್ಮಯ |
ಜನದೊಳೋರ್ವನ ಕರೆದು ಪಾರ್ಥನೊ |
ಳನುವರಕೆ ನಡೆತಂದು ನಿಂದಿಹೆವೆನುತಲವನೊಡನೆ ||
ನೆನಹನೆಚ್ಚರ ಗೆಯ್ವುತಾತನ |
ನನುವರಿಸಿ ಬರಲೆಂದು ಕಳುಹ |
ಲ್ಕನಿಲವೇಗದಿ ಬಂದು ಪೇಳಿದರಾ ಧನಂಜಯಗೆ || ೧೬೮ ||

ರಾಗ ಮುಖಾರಿ ಏಕತಾಳ

ಲಾಲಿಸಿ ಕೇಳಯ್ಯ ಪಾರ್ಥ | ನಾವೆಂಬ ಮಾತ | ಲಾಲಿಸಿ ಕೇಳಯ್ಯ ಪಾರ್ಥ || ಪ ||

ಜಾಲಮಾತುಗಳಲ್ಲವಯ್ಯ | ಬಂದಿದೆ ಶರಧಿ | ಏಳರಂದದಿ ಸೈನ್ಯವಯ್ಯ ||
ಖೂಳ ಖಳರು ಯಮ | ನಾಳುಗಳಂದದಿ | ಪಾಳೆಯವನು ಕೊಂ | ಡಾಲೋಚಿಸುತಲೆ | ಕಾಳಗಕಿದಿರಾ |
ಗೇಳೇಳೆನುತಲೆ | ಪೇಳಿದರಾ ಖಳ  | ರಾಳುಗಳಾಗ || ಲಾಲಿಸಿ || ೧೬೯ ||

ಕರಿಯಾ ಮೈಯವನ ಬಿಟ್ಟು ಈಗ | ಕರೆಸಿಕೊ ಧುರಕೆ | ಕರಿಚರ್ಮಾಂಬರನನು ನೀ ಬೇಗ ||
ಧುರದೊಳು ನಿನ್ನಯ | ಶಿರವುಳಿವೆತ್ನಗ | ಳರಿಯೆವು ಕೇಳ್ ನಿನ್ನರಸಿಗೆ ಗತಿ ಯಾ |
ರಿರುವರೆಂದು ನೀ | ನರಿತುಕೊ ಮನದಲಿ | ಕರಕರೆಗೊಳ್ಳದೆ | ಪೊರಡೈರಣಕೆ || ಲಾಲಿಸಿ || ೧೭೦ ||

ಶಿರವೈದರವನ ಪುರವರವ | ಪೊಕ್ಕರು ತೀರ | ದಿರುವುದಿಂದಿನ ಮಹಾಧುರವ ||
ಬರಹೇಳೆಂದೆನು | ತರುಹಿದರಾಗಲೆ | ಧುರವಿಜಯರು ಅನು | ವರ ಕೇಳೆಂಬುದ |
ನರುಹಲು ಬಂದೆವು | ತೆರಪಿನಿತಿಲ್ಲವು | ಸರಿಸಮನೇ ನೀ | ನರಿತುಕೊ ಮನದಿ || ಲಾಲಿಸಿ ||೧೭೧||

ಆಗಲಾ ಕರ್ಣನ ಕಡೆಯ | ಚಾರಕನೋರ್ವ | ಪೋಗಿ ಪೇಳಿದ ನರನ ಕೈಯ ||
ಪೋಗುವೆಯೆಲ್ಲಿಗೆ | ರಣಸನ್ನಾಹಗ | ಳಾಗೇಳ್ ನಿನ್ನಯ | ಖಗಸಂತತಿಗಳಿ |
ಗೀಗುಣಲಿಕ್ಕುವ  ಭಾರ್ಗವ ವೀರನ | ಹಾಗಿಹ ಕರ್ಣನ | ಬಗೆಯನರಿಯೆ ನೀ || ಲಾಲಿಸಿ ||೧೭೨||

ಭಾಮಿನಿ

ಚರರ ನುಡಿಯನು ಕೇಳಿ ಫಲುಗುಣ |
ಹರುಷದಿಂದವರುಗಳ ಮನ್ನಿಸಿ |
ಮರಳಿ ಕಳುಹಿಸಿಕೊಟ್ಟು ಮನದಲಿ ರಾಮಭೃತ್ಯನನು ||
ಸ್ಮರಿಸಲಯ್ತಂದಾ ರಥಾಗ್ರದಿ |
ಸ್ಥಿರದಿ ಕುಳ್ಳಿರಲಾಗ ಮುರಹರ |
ಧರಣಿ ನಡುಗುವ ತೆರದೊಳೊದರಿಸೆ ಪಾಂಚಜನ್ಯವನು || ೧೭೩ ||

ವಾರ್ಧಕ

ಧರಣಿಪತಿ ಲಾಲಿಸೈ ನರನು ಗಾಂಡೀವದಿಂ |
ದರಿಗಳೆದೆ ತಲ್ಲಣಿಸುವಂತೆ ಝೇಂಕರಿಸುತ್ತ |
ಲಿರಲಾಗ ಮರುತಜಂ ವರ ರಥಾಗ್ರದ ಮೇಲೆ ಶರಧಿಗಳ್ ತುಳುಕುವಂತೆ ||
ಭರದಿ ಹುಂಕಾರಮಂ ಗೆಯ್ಯಲಾ ಫಲುಗುಣಂ |
ವರದೇವದತ್ತಮಂ ಪೂರೈಸಲಾಗಲ |
ಚ್ಚರಿಯಿಂದ ಕುರುಸೇನೆಯಲ್ಲಲ್ಲಿ ಗರಹೊಡೆದ ತೆರನಂತೆ ಇರುತಿರ್ದುದು || ೧೭೪ ||

ಭಾಮಿನಿ

ರಾಯ ಕೇಳಂದಿನಲಿ ಪಾಂಡವ |
ರಾಯರರಸಿಯು ಬಂದು ಕಮಲದ
ಳಾಯತಾಕ್ಷನ ಚರಣಕಮಲದಿ ಬಿದ್ದು ಗೋಳಿಡಲು ||
ತಾಯೆ ಏಳೌ ತಂಗಿ ಸುಮ್ಮನೆ |
ಆಯಸವ ಕೊಳಲೇಕೆ ಮನಸಿನ |
ದಾಯತವನುಸಿರಿದರೆ ಕೇಳುವೆನೆಂದನಸುರಾರಿ || ೧೭೫ ||

ರಾಗ ಕೇದಾರಗೌಳ ಅಷ್ಟತಾಳ

ಚಿನುಮಯ ಕೇಳೆನ್ನ ಮನಸಿನೊಳಿರುವುದ | ನರಿಯೆಯ ನಾನೆಂಬುದೇನು ||
ಘನದುಷ್ಟನಾದ ಕೌರವನನುಜನು ಎನ್ನ | ಜನಪರ ಸಭೆಯೊಳಗೆ || ೧೭೬ ||

ಉಡಿಮಂಡಿಯನು ಬಿಚ್ಚಿ ಕೆಡಹಿದಂದಿನ ಭಾಷೆ | ನಡೆಯದಿಂದಿನವರೆಗೆ ||
ಕಡುದ್ರೋಹಿ ದುಶ್ಯಾಸನೇನ್ ಘನವಾತ ನಿ | ಮ್ಮಡಿಗಿದು ಸಹಜವೇನೈ || ೧೭೭ ||

ಗಂಡರೈವರು ಎನ್ನ ಮಾನ ಕಾಯುವರಿಲ್ಲೆಂ | ದಂಡಲೆಯುವ ಸತಿಗೆ ||
ಲಂಡ ದುಶ್ಯಾಸನನುದರ ರಕ್ತದೊಳದ್ದಿ | ಮಂಡೆ ಕಟ್ಟಿಸುವೆನವ್ವ || ೧೭೮ ||

ಇನನುದಯವಾಗಿರ್ದಸ್ತಮಯದ ಮುನ್ನ | ಇನಿತೆಂದ ವಾಕ್ಯಗಳು ||
ಕನಕಾಂಗಿ ಕೇಳಮ್ಮ ಭಾಷೆ ತಪ್ಪಿದರೆನ್ನ | ಜನಕನ ಪಾದದಾಣೆ || ೧೭೯ ||

ಇನಿತು ದುಃಖಿಸಬೇಡ ಮನೆಯೊಳಗಿರು ನೀನು | ದನುಜನ ಉರಗಳನು ||
ರಣದೊಳು ಭೀಮನ ಗದೆಯಿಂದ ಕೆಡಹಿಸಿ | ನಿನಗೆ ತೋರಿಸುವೆನವ್ವ || ೧೮೦ ||

ಭಾಮಿನಿ

ಎಂದು ಅಭಯವ ಕೊಟ್ಟು ಮುರರಿಪು |
ಸ್ಯಂದನವ ನಡೆಸುತ್ತಲರಿಗಳ |
ಮುಂದೆ ಕಾಣಿಸಲಾಗ ಸಮಸಪ್ತಕರು ಸಂಗರಕೆ ||
ಇಂದು ಪೋಪೆಯದೆಲ್ಲಿ ನಮ್ಮೊಳು |
ನಿಂದು ಕಾದಿಯೆ ಉಳಿದೆಯಾದಡೆ |
ಮುಂದೆ ಕೌರವರೊಡನೆ ಸಂಗರವೆನುತಲಡ್ಡೈಸೆ || ೧೮೧ ||

ರಾಗ ಶಂಕರಾಭರಣ ಮಟ್ಟೆತಾಳ

ನರನ ರಥವ ತರುಬಿ ನಿಂದು ದುರುಳ ದೈತ್ಯರು | ಉರುತರಾಸ್ತ್ರವನ್ನು ತೆಗೆದು ನರನಿಗೆಸೆದರು ||
ಬರುವ ಸರಳ ಕಂಡು ಪಾರ್ಥ ಭರದಿ ಖಂಡಿಸಿ | ಮರಳಿ ತೀವ್ರ ಶರದೊಳದನು ತರಿದ ಸಾಹಸಿ ||೧೮೨||

ಮತ್ತೆ ದನುಜರೊಂದೆ ಭರದಿ ಶಕ್ತಿಶರವನು | ಎತ್ತಿ ಬಿಸುಡಲಾಗ ವಿಜಯ ಕತ್ತರಿಸಿದನು ||
ರಕ್ತ ಮದದಿ ಬಂದು ಖಳನೆ ವ್ಯರ್ಥ ಸಾಯ್ವೆಯಾ | ಶಕ್ತಿಯಿರಲು ಖಂಡಿಸೆನುತ ಬಿಟ್ಟನಕ್ಷಯ ||೧೮೩||

ಶರವು ತಾಗಲನಿತರೊಳಗೆ ಕೆರಳಿ ದೈತ್ಯರು | ಭರದಿ ಕೋಲಮಳೆಯನಾಗ ನರನಿಗೆರೆದರು ||
ಹರನೊಳ್ ಬೇಡಿದಸ್ತ್ರವೆಲ್ಲಿ ನೋಳ್ಪೆ ತೆಗೆಯೆಲಾ | ತರಣಿಜಾತನೂರ ನಿನಗೆ ತೋರ್ಪೆ ನೋಡೆಲಾ ||೧೮೪||

ಸುತರು ಪೋಪುದುಚಿತ ಜನಕನಿರುವ ಲೋಕಕೆ | ಪಥವನರಿಯದಿರಲು ತೋರ್ಪೆ ನೋಡು    ನಿಮಿಷಕೆ ||
ಪೃಥಿವಿ ಯಾವುದಭ್ರಯಾವುದೆಂಬ ಬಗೆಯನು | ಕ್ಷಿತಿಗೆ ರವಿಯು ತೋರದೆಂಬ ತೆರದೊಳೆಚ್ಚನು ||೧೮೫||

ಭಾಮಿನಿ

ಭೂರಿನೇತ್ರನ ತನುಜನರ್ಜುನ |
ವೀರ ಸಮಸಪ್ತಕರ ಸಮರದಿ |
ಭಾರಿಯಾಹವಮುಖದೊಳಿರುತಿರೆ ಮಾರುತಿಯು ಬಳಿಕ ||
ವೀರ ಕೌರವನಸುವ ರಣದಲಿ |
ತೀರಿಸುವೆನೆಂದೆನುತ ಬರುತಿರೆ |
ಸೂರ‍್ಯನಾತ್ಮಜ ತಡೆದು ಭೀಮನ ಸಮರಕನುವಾದ || ೧೮೬ ||

ರಾಗ ಭೈರವಿ ಅಷ್ಟತಾಳ

ಎಲವೊ ಭೀಮನೆ ನೀ ಕೇಳು | ನಿನ್ನಯ ಜೀವ | ಉಳಿವ ಯತ್ನವನೆ ಪೇಳು ||
ಕಳವಿನೊಳ್ ದ್ರೋಣನ ಗೆಲಿದ ಗರ್ವವನಿನ್ನು | ನಿಲಿಸುವೆನಿಂದಿನೊಳು || ೧೮೭ ||

ಗೆಲುವ ಸಮರ್ಥ ಕೇಳು | ಖೇಚರರೊಳು | ಸಿಲುಕಿ ನಿರ್ಬಂಧದೊಳು ||
ಅಳುವ ಕೌರವನನ್ನು ಬಿಡಿಸಿದ ಭಟ ನಿನ್ನ | ಬಲುಮೆಯ ಬಲ್ಲೆನೇಳು || ೧೮೮ ||

ಖಳ ಬಕನೆಂಜಲನು | ತಿಂದೋರುವ | ಲಲನೆಯ ಭೋಗವನು ||
ಸಲಿಸುವಿರೈವರ ಮೊಗ ನೋಡಲಾಗದೆಂ | ದುಲಿದೆಚ್ಚನಾ ಕರ್ಣನು || ೧೮೯ ||

ಎಚ್ಚ ಶರೌಘವನು | ಕಾಣುತ ನುರಿ | ನುಚ್ಚು ಮಾಡುತಲೆಂದನು ||
ಅಚ್ಚ್ಯುತರಹಿತರಿಗೆಲ್ಲಿಯ ಜಯವೆನು | ತೆಚ್ಚನಾ ಕ್ಷಣ ಭೀಮನು || ೧೯೦ ||

ಮಡದಿ ದ್ರೌಪದಿಯೊಡನೆ | ದುಶ್ಯಾಸನ | ನೊಡಲಿಗಂತಕನು ತಾನೇ ||
ಬಡಿವಾರದಲಿ ಪೇಳ್ದ ಮಾತೆಂದರಿಯದೆ ನೀ | ನಡೆಯೋ ಬೇಗದಿ ಸುಮ್ಮನೆ || ೧೯೧ ||

ಗಾಯವಡೆದ ಹುಲಿಯ | ಕೆಣಕಿ ನೀನು | ನೋಯಿಸಬಹುದೇನಯ್ಯ ||
ಕಾಯುವ ಸುಭಟನ ಕರೆಬೇಗೆಂದೆನುತಲೆ | ಸಾಯಕವೆಸೆಯಲವ || ೧೯೨ ||

ವಾರ್ಧಕ

ಮರುತಸುತನಸ್ತ್ರಮಂ ತರಿದು ಪ್ರತಿಶಸ್ತ್ರಮಂ |
ತರಣಿತನಯಂ ತೆಗೆದು ಪೂಡಿದಂ ನೋಡಿದಂ |
ತೆರವುಗೊಡದರಿಭಟನ ಕಾಯದಿಂ ಗಾಯದಿಂ ಸುರಿವ ನೆತ್ತರುಗಳಿಂದ ||
ಇರಲಿತ್ತ ಪಾಂಡುಜ ಯಯುತ್ಸು ಸೃಂಜಯ ಶಕುನಿ |
ಗುರುಜ ಸಾತ್ಯಕಿ ವೀರ ದ್ರುಪದಸುತ ದುಶ್ಯಾಸ |
ವರ ಸುಶರ್ಮಕ ನಕುಲರೆಚ್ಚಾಡಿ ಮೈಮರೆದರೇನೆಂಬೆನದ್ಭುತವನು || ೧೯೩ ||

ಭಾಮಿನಿ

ಆಗಲಾ ರವಿಸೂನು ಶಸ್ತ್ರದ |
ಸಾಗರದೊಳದ್ದಿದನು ಭೀಮನ |
ಯೋಗ ನಿದ್ರೆಯೊಳಿರಿಸಿ ತಿರುಗಿದನಂದು ಧರ್ಮಜನ ||
ನಾಗನಿಗೆ ಖಗವೆರಗುವಂದದಿ |
ತಾಗಿದನು ಶಸ್ತ್ರಾಸ್ತ್ರನಿಕರದೊ |
ಳಾಗಲಾ ಯಮಸೂನು ತೆಗೆದನು ದಿವ್ಯ ಮಾರ್ಗಣವ || ೧೯೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುಟ್ಟವಿಸಿ ಬಹ ತರಣಿತನುಜನ | ನಟ್ಟಿ ಹೊಯ್ದನು ಪೂತು ಮಝ ಜಗ |
ಜಟ್ಟಿ ನೀನಹುದೆನುತ ಶರಗಳ | ವೃಷ್ಟಿಯನ್ನು || ೧೯೫ ||

ಸುರಿಸಿ ಮಾರ್ಬಲವೊರೆಸೆ ಶಿರಗಳು | ತರಿದು ಧರಣಿಯೊಳುರುಳುವುದ ಕಂ |
ಡರಿತು ದಿನಪನ ಸೂನು ಕಿಡಿಗಳ | ಕರೆಯುತೆಂದ || ೧೯೬ ||

ಬೆಟ್ಟವನು ಕಡಿದೆಡಹ ಬಲ್ಲುದೆ | ಕಟ್ಟಿರುವೆ ಕೇಳೆಲೆ ನಪುಂಸಕ ||
ಸೃಷ್ಟಿಯಾಸೆಗೆ ಬಂದು ನಮ್ಮೊಳು | ಕೆಟ್ಟೆ ಬರಿದೆ || ೧೯೭ ||

ಫಡ ಮರುಳೆ ಕೇಳೆಲೆ ಯುಧಿಷ್ಠಿರ | ಪೊಡವಿಗೋಸುಗ ನಮ್ಮ ಕೆಣಕಿದು |
ಕಡೆಯ ಕಾಲವೆ ಹೊರತು ನಿನ್ನನು | ಬಿಡುವೆನೇನೈ || ೧೯೮ ||

ಎಲವೊ ಸೂತಜ ಕೇಳು ನಿನ್ನನು | ನಳಿನಸಖನಪರಾಬ್ಧಿಗಿಳಿವುದ |
ರೊಳಗೆ ತೀರ್ಚದೆ ಉಳಿದೆವಾದರೆ | ಫಲವನೊರೆವೆ  || ೧೯೯ ||

ಜನನಿಯುದರದೊಳಾವು ಐವರು | ಜನಿಸಲಿಲ್ಲವೆನುತ್ತ ನೀ ತಿಳಿ |
ಯೆನುತ ಹೂಡಿದನಾ ಮಹಾಸ್ತ್ರವ  | ಕಿನಿಸಿನಿಂದ || ೨೦೦ ||

ರಾಗ ಮಾರವಿ ಏಕತಾಳ

ಅನಿತರೊಳಾ ರವಿಸೂನು ನೃಪಾಲನ | ಧನುವನು ಖಂಡಿಸುತ ||
ಕ್ಷಣದೊಳು ಸೂತನ ಕೆಡಹಿಯೆ ಯಮಜನ | ಹಿಡಿದನು ಹೆಡತಲೆಯ || ೨೦೧ ||

ನಿನಗೇತಕೆ ಧುರವೆನ್ನುತಲಾತನ | ಕುಸುಬುತಲವನಿಯಲಿ ||
ದನುಜಾರಿಯೆ ಗತಿಯೆನುತಿರಲಾ ಕ್ಷಣ | ಇನಸುತನಿಂತೆಂದ || ೨೦೨ ||

ರಾಗ ಕಾಪಿ ಅಷ್ಟತಾಳ

ಸಿಕ್ಕಿದೆಯಾ ಧರ್ಮರಾಯ | ನಮ | ಗಕ್ಕರವಾಯ್ತು ಕಾಣಯ್ಯ ||
ರಕ್ಕಸಾರಿಯ ಕೈಯ ಪಂಜರದರಗಿಣಿ | ಘಕ್ಕನೆ ಹಾರಿಬಂದೆನ್ನ ಕೈಯೊಳಗಿಂದು || ಸಿಕ್ಕಿದೆಯಾ ||೨೦೩||

ನದಿಯೊಳು ಸ್ನಾನವ ರಚಿಸಿ | ಬಹು | ವಿಧ ವಿಧ ಜಪವನುಕರಿಸಿ ||
ವಿಧಿವಿಹಿತದಿ ಮುನಿನಿಕರಯೋಗಂಗಳ | ಹದವರಿಯದೆ ನೀನೇಕೊದಗಿದೆ ಸಮರಕೆ | ಸಿಕ್ಕಿದೆಯಾ ||೨೦೪||

ಹಲವು ಶಾಸ್ತ್ರಂಗಳನರಿತು | ಎನ್ನ | ನೆಲೆಯರಿಯದೆ ಮೈಯ ಮರೆತು ||
ಕಲಹಕೆ ಬರಬಹುದೇನನೆನಲಿ ನಿನ್ನ | ಕೊಲುವಡಚ್ಯುತಗಿತ್ತ ಭಾಷೆಗಂಜುವೆನಯ್ಯ || ಸಿಕ್ಕಿದೆಯಾ ||೨೦೫||

ಜಾಣ ತನದಿ ಗೆಲುವುದಕೆ | ಭೀಷ್ಮ | ದ್ರೋಣರಂತಲ್ಲನುವರಕೆ ||
ಕ್ಷೆಣೀಶ ನೀ ಬಂದು ಸೂತಜನೊಳು ಸೋತು | ರಾಣಿಗೆ ಮೊಗವೆಂತು ಕಾಣಿಪೆ ನೀನಿಂತು || ಸಿಕ್ಕಿದೆಯಾ ||೨೦೬||

ಭೀಮ ಕಿರೀಟಿ ನಕುಲರು | ಮತ್ತೆ | ಸ್ವಾಮಿದ್ರೋಹಿಗಳಲ್ಪಬಲರು ||
ಈ ಮಡುವಿಗೆ ನಿನ್ನ ನೂಕಿದ ಮೇಲಿನ್ನು | ಈ ಮಹೀಶನ ಮರೆಹೊಕ್ಕು ಜೀವಿಸು ನೀನು || ಸಿಕ್ಕಿದೆಯಾ ||೨೦೭||

ಭಾಮಿನಿ

ಬಿಡಿಸುವವರಾರಿನ್ನು ಭೀಮನೊ |
ಕಡೆಯೊಳಾ ಫಲುಗುಣನೊ ನಕುಲನೊ |
ಜಡಜನೇತ್ರನೊ ಮೃಡನೊ ನಿನ್ನಯ ಮಡದಿ ದ್ರೌಪದಿಯೊ ||
ನುಡಿಯೆಲಾ ಎಲೆ ಮರುಳೆ ಜನನಿಯ |
ಒಡಲನುರೆ ಹೊಗು ಹೋಗೆನುತ್ತಲೆ |
ಝಡಿದು ತಿವಿದನು ಬಿಲ್ಲಕೋಟಿಯೊಳಾ ಯುಧಿಷ್ಠಿರನ || ೨೦೮ ||

ಕಂದ

ಅನಿತರೊಳಾಗಲೆ ಶಲ್ಯಂ |
ಘನ ಕೋಪವ ತಾಳುತಾಗ ಭಾಸ್ಕರಸುತಗಂ ||
ರಣದೊಳ್ ಸಿಕ್ಕಿಹ ನೃಪನಂ |
ದಣಿಸುವುದಿದಾವ ನೀತಿಯಿದೆಂದನು ನಯದಿಂ || ೨೦೯ ||

ರಾಗ ಸುರುಟಿ ಏಕತಾಳ

ಲಾಲಿಸು ರವಿಜಾತ | ಸಂಗರ | ವೀರರೊಳತಿ ಖ್ಯಾತ ||
ಸೋಲವಿದೆಮ್ಮದು ಧರ್ಮಜಗಲ್ಲ ಶ್ರೀ | ಲೋಲನು ಭಕ್ತರ ಪಾಲಿಸದಿರುವನೆ || ೨೧೦ ||

ಅರಸ ಸಿಕ್ಕಿದನೆಂದು | ಮನದಲಿ | ಹರುಷಗೊಳ್ಳದಿರಿಂದು ||
ಪರಿಕಿಸಿ ನೀ ನೋಡರೆಗಳಿಗೆಯೊಳ್ ಮುರ | ಹರ ಬರುವಬ್ಬರವನು ನರ ಸಹಿತಲೆ || ೨೧೧ ||

ರಣದಲಿ ಸಿಕ್ಕಿಹನ | ಕೊಲ್ಲುವು | ದೇನಿದು ದೊಡ್ಡ ಘನ ||
ಗುಣವೇ ಕ್ಷತ್ರಿಯಕುಲದಲಿ ಜನಿಸಿದ | ಜನಪರು ನಿಲುವರೆ ಅನುವರಮದದಲಿ || ೨೧೨ ||

ಕರದಲಿ ಧನುವಿಲ್ಲ | ಮತ್ತವ | ಗೇರ್ವರೆ ರಥವಿಲ್ಲ ||
ಹೊರುವಳೆ ಧರಣಿ ದುರ್ನೀತರನೀಗನು | ಕರಿಸುವಳೇ ಜಯಸಿರಿ ನೀ ಲಾಲಿಸು || ೨೧೩ ||

ಭಾಮಿನಿ

ಧರಣಿಪತಿ ಕೇಳ್ ಮಾದ್ರಭೂಮಿಪ |
ನರುಹೆ ಕಂಗಳೊಳುರಿಯನುಗುಳುತ |
ಮೆರೆವ ದಕ್ಷಧ್ವಂಸನಂದದಿ ನುಡಿದ ಧರ್ಮಜಗೆ ||
ಕುರಿಯೆ ಕೇಳಿಂದೆನ್ನ ಜನನಿಯೊ |
ಳೊರೆದ ಮಾತಿಗೆ ನಿನ್ನನುಳುಹಿದೆ |
ಹೊರತು ನಡೆ ಹೋಗೆನುತಲೆಡಗಾಲ್ತುದಿಯೊಳವಗೊದೆದು || ೨೧೪ ||

ಕಂದ

ತಿರುಗಿದನಿತ್ತಲು ರವಿಜಂ |
ವರಧರ್ಮಕುಮಾರನಂದವನ್ನೀಕ್ಷಿಸುತಂ ||
ಭರದಿಂ ಮುತ್ತೈತಹನೆಂ |
ಬುರು ಭೀತಿಗಳಿಂದ ಪೊಕ್ಕನಾ ನಿಜ ಬಲವಂ || ೨೧೫ ||

ರಾಗ ಕಾಂಭೋಜಿ ಝಂಪೆತಾಳ

ಆ ಸಮಯದೊಳಗಿತ್ತ ವಾಸವಾತ್ಮಜನು ಬಲು | ಕ್ಲೇಶಗೊಳುತೆಂದ ಹರಿಯೊಡನೆ ||
ಸೂಸುತಿದೆ ಕಣ್ಣೊಳುದಕಂಗಳುರಿ ಜಠರದೊಳು | ವಾಸವಾಗಿಹುದೇನ್ ನಿಮಿತ್ತ || ೨೧೬ ||

ಕರದ ಚಾಪವು ಭಾರವಾಗುತಿದೆಯೆನಗೀಗ | ತರುಣನಳಿದಂದಿನಂದದಲಿ ||
ಅರುಹಬೇಕೆನಗೀಗ ಧರ್ಮಜನ ವಾರತೆಯ | ಹರಣದಲಿ ಸುಖವೊ ದುಃಸ್ಥಿತಿಯೋ || ೨೧೭ ||

ನೀನರಿದಡುಸಿರೆನಲ್ಕಾದಾನವಧ್ವಂಸಿ | ಮಾನನಿಧಿ ಧರ್ಮಜಗೆ ರಣದಿ ||
ಭಾನುಸುತನಿಂದಾದ ಬವಣೆಯೆಲ್ಲವನು ಅನು | ಮಾನವಿಲ್ಲದೆ ಪೇಳ್ದ ಮುದದಿ || ೨೧೮ ||

ರಾಗ ಸೌರಾಷ್ಟ್ರ ಅಷ್ಟತಾಳ

ಕೇಳಯ್ಯ ಪಾರ್ಥ ಕರ್ಣನ ಪ್ರತಾಪಗಳನು | ಸವ್ಯಸಾಚಿ || ಈಗ |
ಪೇಳುವಡಿದು ವೇಳೆಯಲ್ಲ ಮದಾಂಧನ | ಸವ್ಯಸಾಚಿ || ೨೧೯ ||

ಮರುತಸಂಭವ ಮುಖ್ಯರಾದ ವೀರರನೆಲ್ಲ | ಸವ್ಯಸಾಚಿ || ಧರೆ |
ಗುರುಳಿಸಿ ಯಮಜನನಡ್ಡೈಸಿ ಹಿಡಿದನು | ಸವ್ಯಸಾಚಿ  || ೨೨೦ ||

ಕರದ ಬಿಲ್ಲನು ಮುರಿದಿಕ್ಕಿ ಸಾರಥಿಯನು | ಸವ್ಯಸಾಚಿ || ಶಿರ |
ವರಿದು ಕೆಡಹಿ ನೃಪನುರಕಸ್ತ್ರ ತಿವಿದನು | ಸವ್ಯಸಾಚಿ || ೨೨೧ ||

ಬಿಲ್ಲಕೋಟಿಯೊಳೆದೆಗುತ್ತಿ ಮೂದಲಿಸಿದ | ಸವ್ಯಸಾಚಿ || ಕರೆ |
ಹುಲ್ಲು ಭೀಮಾರ್ಜುನರೆಲ್ಲಿ ತೋರೆನುತಲೆ | ಸವ್ಯಸಾಚಿ || ೨೨೨ ||

ಎಡಗಾಲ ತುದಿಯಿಂದಲೊದೆದು ಕೆಡಹಿ ಮತ್ತೆ | ಸವ್ಯಸಾಚಿ || ಬಲು |
ಸಡಗರದಿಂದಲೆ ತನಗಿದಿರಿಲ್ಲೆಂದ | ಸವ್ಯಸಾಚಿ || ೨೨೩ ||

ಭಾಮಿನಿ

ಕೇಳುತಲೆ ಕಲಿ ಪಾರ್ಥ ಕಲ್ಪದ |
ಕಾಲಭೈರವನಂತೆ ಗರ್ಜಿಸೆ |
ಮೇಲು ಜಗ ನಡುಗಿದುದು ಕರ್ಣಗೆ ಕಡೆಯ ದಿನವೆನುತ ||
ಪಾಳೆಯಕೆ ತಿರುಗಿದನು ಮುರಹರ |
ನಾಳು ಸಹಿತರ್ಜುನನು ಧರಣೀ |
ಪಾಲನೇಕಾಂಗದಲಿ ಚಾಚಿದನಂದು ಮಣಿಶಿರವ || ೨೨೪ ||

ನೊಂದೆಲಾ ನರನಾಥ ವಿಧಿಯೇ |
ನಿಂದು ಮುನಿದನೊ ನಿನಗೆನುತ್ತರ |
ವಿಂದನಾಭನು ಪೂರ್ಣ ದೃಷ್ಟಿಗಳಿಂದ ಧರ್ಮಜನ ||
ಚಂದದಲಿ ಮೈದಡವಿ ಮನ್ನಿಸೆ |
ಸಂದಿಸಿದ ನಯನಾಂಬುವನು ಮಿಗೆ |
ಕಂದೆರೆದು ನೋಡಿದನು ಭೂಪತಿ ಕೃಷ್ಣಫಲುಗುಣರ || ೨೨೫ ||

ರಾಗ ಸಾವೇರಿ ಆದಿತಾಳ

ಹರಿಯೇ ನೀ ಲಾಲಿಸಯ್ಯ | ನಿನ್ನಯ ಪಾದ | ದರುಶನವೊಂದೆ ಸಾಕಯ್ಯ ||
ಅರಸು ಕೌರವನೊಳಿನ್ನು | ಸಂಗರ ಬೇಡ | ಕರುಣವೊಂದಿರೆ ಸಾಕಿನ್ನು || ೨೨೬ ||

ಧರಣಿಗೋಸುಗ ನೃಪರನ್ನು | ಸದೆದು ವ್ಯರ್ಥ | ಗುರುದ್ರೋಣ ಭೀಷ್ಮರನ್ನು |
ಸೆರೆಗೊಡ್ಡಿ ಬೇಡಿಗೊಂಬೆನು | ಇನ್ನಾದರು ನೀ | ಧುರಕೆ ಸಂಧಿಯ ಮಾಡಿನ್ನು || ೨೨೭ ||

ತರಣಿಜಾತನ ಧುರದಿ | ಗೆಲ್ಲುವರಾರೈ | ಸುರನರಲೋಕ ಮಧ್ಯದಿ ||
ಹರನಿಗಾದರು ತೀರದು | ಗೆಲುವಡೆಮ್ಮ | ನರಭೀಮರಿಂದಾಗದು || ೨೨೮ ||

ಬೇಡವೆನಗೆ ದೊರೆತನ | ಮುರಹರ ಕೇಳು | ಕಾಡೊಳಿರುವುದೇ ಘನ ||
ಬಾಡಿದರಳಿನಂದದಿ | ಧರ್ಮಜನಿರೆ | ನೋಡಿ ಅರ್ಜುನ ಮುದದಿ || ೨೨೯ ||

ಭಾಮಿನಿ

ಅಳಲಲೇತಕ್ಕರಸ ನಿನ್ನನು |
ಬಲುಮೆಯಿಂ ಭಂಗಿಸಿದ ಖೂಳನ |
ನಳಿನ ಸಖನಸ್ತಮಿಸುವುದರೊಳಗವನ ಮಸ್ತಕವ ||
ಇಳುಹದಿರೆ ನಿನ್ನೊಡನೆ ಜನಿಸಿದ |
ಅನುಜನೇನೆನುತಲುಗೆ ಮೀಸೆಯ |
ತಿಳಿದು ಧರ್ಮಕುಮಾರನೆಂದನು ಇಂದ್ರನಂದನಗೆ || ೨೩೦ ||

ರಾಗ ಆನಂದಭೈರವಿ ಏಕತಾಳ

ಬಿಡು ಬಿಡಿಂಥಾ ಮಾತೇಕೆಂಬೆ | ನುಡಿವರೆ ಬಾಯಿಬಡಕರಂತೆ |
ಆಡ್ವರೆ | ಅರಿಗಳ್ | ನೋಡ್ವರೆ ||
ಸುಡಲಿನ್ನು ದೊರೆತನವನ್ನು | ಬಡವರಂತೆಯಿರೆ ಸಾಕಿನ್ನು |
ಎಂದನು | ಬಲು | ನೊಂದನು  || ೨೩೧ ||

ಧರಣಿಯೊಳಗೆ ಕರ್ಣ ನೋರ್ವ | ಹೊರತು ಬೇರಿನ್ನುಂಟೆ ಭಟರು |
ನೋಡಯ್ಯ | ಬಡಿವಾರ | ಬೇಡಯ್ಯ ||
ಶರವ ಪಿಡಿದು ನಿಲ್ಲಲವನ | ಸರಿಸದಿ ನಿಲ್ಲುವರನ್ನು |
ಕಾಣೆನು | ಎಣೆ | ಗಾಣೆನು  || ೨೩೨ ||

ಅನುಜರು ನೀವ್ ನಾಲ್ವರೆನ್ನ | ತನುವಿಗೆ ಹಿತಕಾರಿಗಳೆಂದು |
ಮಾಡಿದೆ | ಹರುಷ | ಗೂಡಿದೆ |
ದನುಜಹರನೆ ಬಲ್ಲನೆನ್ನ | ಮನದೊಳಿರ್ದ ಪರಿಯನೆಲ್ಲ |
ಪೇಳ್ವೆನು | ಶೋಕ | ತಾಳ್ವೆನು  || ೨೩೩ ||

ನರನೆ ಕೇಳು ನಿನ್ನೊಳಿನಿತು | ಹರಿವುದಲ್ಲ ಮುಂದಾದಕ್ಕೆ |
ಮಾಡ್ವೆನು | ಅಳಿ | ಹೂಡ್ವೆನು |
ಕರದೊಳಿರುವ ಬಿಲ್ಲನೀಗ | ನರಕವೈರಿಗಿತ್ತು ಮತ್ತೆ |
ಕಾಯಯ್ಯ | ಹಯದ | ವಾಘೆಯ  || ೨೩೪ ||

ಭಾಮಿನಿ

ಎಂದು ಧರ್ಮಜ ನುಡಿಯೆ ಸುರಪತಿ |
ನಂದನನು ಕಿಡಿಯುಗುಳುತಾಕ್ಷಣ |
ಚಂದವೇ ನೀ ನುಡಿದ ಮಾತುಗಳೆನಗೆ ಅಗ್ರಜನೆ ||
ಕೊಂದು ಕಳೆವೆನು ಮೊದಲಿಗೀತನ |
ನೆಂದು ಸುರಗಿಯನುಗಿದು ಬರಲಾ |
ಇಂದು ಮುಖಿ ದ್ರಪದಜೆಯು ಖಡುಗಕೆ ತನುವನೊಡ್ಡಿದಳು || ೨೩೫ ||

ರಾಗ ಮಾರವಿ ಏಕತಾಳ

ಕೊಲುವರೆ ಕೊಲು ನಮ್ಮೀರ್ವರನೆನುತಲೆ | ಲಲನೆಯು ಶೋಕಿಸುತ |
ಬಲಹೀನಗೆ ಬೆಂಬಲವಾಗಿ ನುಡಿದಳು | ಬಳಿಕಾ ಪಾರ್ಥನೊಳು || ೨೩೬ ||

ವೃತ್ತ

ಎರೆಯ ಕೇಳೆನ್ನ ಮಾತಾ ಏತಕೀ ಕ್ರೋಧವಿಂಥಾ |
ಮರುಳತನ ಬೇಡವಿನ್ನೂ ಧರಿಸಿದೈ ಪಾಪವನ್ನೂ ||
ಪರಿವುದಕೆ ಯತ್ನವಿಲ್ಲಾ ಪಾರ್ವತೀರಮಣ ಬಲ್ಲಾ |
ಮರೆದು ಕಳೆ ಕಲ್ಮಷವನೂ ಮನ್ನಿಸೈ ಕಾಂತ ನೀನೂ || ೨೩೭ ||