ರಾಗ ಭೈರವಿ ಝಂಪೆತಾಳ

ಧಾರಿಣೀಪತಿ ಕೇಳು ಕೌರವೇಶ್ವರನಿತ್ತ | ಭೂರಿ ಚಿಂತೆಯ ತಾಳಿ ಮೌನದಿಂದಿರಲು || ೮೪ ||

ಗುರುಜ ಕೃಪ ಕೃತವರ್ಮ ಶಲ್ಯ ಸೌಬಲ ಸಹಿತ | ಹರುಷದಿಂ ದಳಪತಿಯು ಬರರೆಲ್ಲರೊಲಿದು || ೮೫ ||

ಕೌರವೇಶ್ವರ ತಿಳಿದು ಪರಿಪರಿಯೊಳುಪಚರಿಸಿ | ಶೌರ್ಯಬಲಯುತರೆಲ್ಲ ಕೇಳಿ ಸಂತಸದಿ || ೮೬ ||

ನೋಡಿದಿರೆ ಪಾಂಡವರ ಕಡು ಪರಾಕ್ರಮಗಳನು | ರೂಢಿಯೊಳು ಸರಿಯಾದ ಭಟರಿಲ್ಲವರಿಗೆ || ೮೭ ||

ಮೂರು ಲೋಕದೊಳೊಬ್ಬ ವೀರನರ್ಜುನ ಹೊರತು | ಬೇರೆ ಭಟರಿನ್ನುಂಟೆ ಸರಿಯಾರವರಿಗೆ || ೮೮ ||

ಎಂದು ಮೂದಲಿಸಿ ಮಾತಾಡುತಿರೆ ಕರ್ಣ ತಾ | ನೆಂದ ನೃಪನೊಡನಾಗ ಮುಂದಾಹ ಬಗೆಯ ||೮೯||

ಇಂದುಕುಲ ತಿಲಕ ಕೇಳ್ ಸಾರಥಿಯ ಬಲವೆ ಬಲ | ವೆಂದು ಕರ್ಣನು ಪೇಳ್ದನರಸಗರಿವಂತೆ ||೯೦||

ಹಿಂದೆ ರಾಘವನು ಮಾತಲಿಯಿಂದ ರಾವಣನ | ಕೊಂದ ಕಥನವನು ನೀ ತಿಳಿಯದವನೇನೈ ||೯೧||

ಇಂದು ಫಲುಗುಣಗೆ ಗೋವಿಂದ ಸಾರಥಿಯಾದ | ರಂದು ಪೆಸರಾದರಿಳೆಗೆಂದನಾ ರವಿಜ ||೯೨||

ಭಾರಿ ಬಾಣಗಳಿರಲಿ ಭೂರಿ ಮಾರ್ಬಲವಿರಲಿ | ಸಾರಥಿಗಳಿಲ್ಲದಿರೆ ಸಮರವಿದು ವ್ಯರ್ಥ ||೯೩||

ಸೂತನೊಬ್ಬನ ಕೂಡಿ ಕೊಟ್ಟೆಯಾದರೆ ವೈರಿ | ವ್ರಾತಗಳು ತೃಣವಲ್ಲವೇನಯ್ಯ ನೃಪತಿ ||೯೪||

ವಾರ್ಧಕ

ತರಣಿಸುತನೆಂದುದಂ ಕೇಳುತಂ ಕೌರವಂ |
ಹರುಷದಿಂದೀ ಮಹಾಸೈನ್ಯದೊಳ್ ನಿನಗಾಹ |
ದುರಧೀರನಂ ತೋರ್ದಡಾತನಂ ಕರೆಸಿ ಸಾರಥಿತನಕೆ ಮಾಳ್ಪೆನೆನಲು ||
ಧರಣಿಪತಿ ಮಾದ್ರೇಶ ಭೂಪನಂ ತನಗೀಗ |
ಕರೆಸಿ ಸಾರಥಿ ತನಕೆ ನೇಮವಂ ಮಾಡಿದರೆ |
ಧುರದಿ ಬಗೆವೆನೆ ಪಾಂಡುಸುತರನೆಂದರುಹಲಾ ನೃಪತಿ ಮಗುಳಿಂತೆಂದನು || ೯೫ ||

ಭಾಮಿನಿ

ಸಾರಶೌರ್ಯಾಗ್ರಣಿಯೆ ಕೇಳ್ ಮೈ |
ದೋರಿರುವ ಹನ್ನೊಂದಕ್ಷೌಹಿಣಿ |
ಭೂರಿ ಮಾರ್ಬಲದೊಳಗೆ ಸೂತತ್ವವನು ಬಲ್ಲವರು ||
ವೀರರನು ಎನಗೊರೆಯದಿಂದು ಮ |
ಹೀರಮಣನಾಗಿರ್ಪ ಶಲ್ಯನ |
ಸಾರಥಿತ್ವಕೆ ಬಯಸಿದೇನೆನೆ ನುಡಿದನಾ ಕರ್ಣ || ೯೬ ||

ರಾಗ ಕಾಂಭೋಜಿ ಝಂಪೆತಾಳ

ಚಿತ್ತವಿಸು ಕುರುಕುಲಾಂಬುಧಿಪೂರ್ಣಶುಭ್ರಾಂಶು | ಬಿತ್ತರಿಪೆನೆನ್ನಾದಿ ಕಥೆಯ ||
ಸತ್ಯನಿಧಿ ಭಾರ್ಗವನ ಕೂಡೆ ದ್ವಿಜರೂಪದೊಳು | ವರ್ತಿಸಿದೆ ಗುಪಿತದೊಳು ಜೀಯ || ೯೭ ||

ಸರಸದಿಂ ಶಸ್ತ್ರವಿದ್ಯಾಭ್ಯಾಸ ಕಲಿಯುತಿರೆ | ಗುರುವೊಂದು ದಿನ ಎನ್ನ ತೊಡೆಯ ||
ಶಿರದಡಿಯಲಿಟ್ಟು ಮಲಗಿರೆ ತಾ ಸುಷುಪ್ತಿಯೊಳ್ | ಸುರಪನೆಸಗಿದ ಕಡು ಉಪಾಯ || ೯೮ ||

ಸುತಗೆ ಬಾಧಕ ಬಪ್ಪುದೆಂದು ಅಳಿರೂಪಿನಿಂ | ದತಿಶಯದಿ ಕೊರೆಯೆ ಜಂಘೆಯನು |
ಅತಿರಕ್ತ ಶೀತಳದಿ ತಿಳದೇಳಲಾಗ ಗುರು | ಖತಿಯಿಂದ ಕಾಣುತೆನ್ನುವನು || ೯೯ ||

ರೂಪುದೋರದೆ ಎನಗೆ ವಿದ್ಯವನು ಕಲಿತೆ ಕಡು | ಕಾಪಟಿಗನೆನುತ ಗುರು ಮುನಿದು ||
ಶಾಪವೀಯಲು ಕೇಳುತಿರೆ ಮನದಿ ಚಿಂತಿಸ | ಲ್ಕಾಪರಾಕ್ರಮಿಯು ಎನಗೊಲಿದು || ೧೦೦ ||

ಭದ್ರತ್ವದಿಂದಿಷ್ಟು ಕಾಲ ನೀ ಕಲಿತುದಕೆ | ಉದ್ರೇಕದಿಂ ಮುಂದೆ ರಣದಿ ||
ಮಾದ್ರಭೂಪನ ಸೂತತನದಿ ಜಯಿಸೆನುತಾ ಸ | ಮುದ್ರ ಭೀಕರಪೇಳ್ದ ದಯದಿ || ೧೦೧ ||

ಅದರಿಂದ ಶಲ್ಯನಾಪೇಕ್ಷಿಸಿದೆ ಕೇಳ್ ಭೂಪ | ಒದಗಿ ಕರೆತರಲು ಕ್ಷಣದಿಂದ ||
ಸದೆದು ರಿಪುಗಳ ಯಮನ ಸದನಕೊಪ್ಪಿಸುವೆ ಎ | ನ್ನಧಟುತನ ಮತ್ತೆ ನೋಡೆಂದ || ೧೦೨ ||

ರಾಗ ಭೈರವಿ ಏಕತಾಳ

ಭಳಿರೇ ಭಾಸ್ಕರತನಯ | ಎ | ನ್ನೊಳು ನೀನಾಡಿದ ನುಡಿಯ |
ಕಳಚುವರಿಲ್ಲರಿವಿಜಯ | ನಿನ | ಗೊಲಿಸುವೆ ಶಲ್ಯನ ಜೊತೆಯ || ೧೦೩ ||

ವೈರಿಬಲವ ಸಂಹರಿಸು | ಮಮ | ವೈರಾಗ್ಯವ ಪರಿಹರಿಸು ||
ಕಾರ್ಯದಿ ಸಾಹಸ ಮೆರೆಸು | ಘನ | ಶೌರ್ಯದಿ ಭೂಮಿಯ ಒಲಿಸು || ೧೦೪ ||

ಮದಗರ್ವದಿ ರವಿಸುತನು | ಪೇ | ಳಿದ ಮಾದ್ರಾಧೀಶ್ವರನು ||
ಕದನದೊಳೆನ್ನಾಜ್ಞೆಯನು | ನಡೆ | ಸಿದಡರಿಗಳ ಜಯಿಸುವೆನು || ೧೦೫ ||

ಬವರದಿ ಕಡಿದಾಡುವೆನು | ಹ | ಬ್ಬವ ಮಾರಿಗೆ ಮಾಡುವೆನು ||
ದಿವಿಜರ ಕಂಗೆಡಿಸುವೆನು | ಮಾ | ಧವ ಮೂರ್ತಿಯೆ ಬರಲಿನ್ನು || ೧೦೬ ||

ಕಂದ

ಕರ್ಣನು ಇಂತೆನಲಾ ನೃಪ |
ಕರ್ಣಾನಂದದೊಳೆಲ್ಲರ ಬೀಳ್ಗೊಟ್ಟಾಗಂ ||
ಸ್ವರ್ಣದ ದೀವಿಗೆ ಬೆಳಕಿಂ |
ಪೂರ್ಣೋಲ್ಲಾಸದೊಳೆ ಬಂದ ಶಲ್ಯನ ಬಳಿಗಂ || ೧೦೭ ||

ರಾಗ ಸಾಂಗತ್ಯ ರೂಪಕತಾಳ

ಬರವ ಕಾಣುತ ಮಾದ್ರಭೂಪ ತಾನಿದಿರೆದ್ದು | ಕರೆತಂದು ಕೌರವೇಶ್ವರನ ||
ಹರಿವಿಷ್ಟರದಲಿ ಕುಳ್ಳಿರಿಸಿ ನೀನೀ ನಡು | ವಿರುಳೊಳಯ್ತಂದ ಕಾರ್ಯವನು || ೧೦೮ ||

ಅರುಹಬೇಕೆನುತಲೆ ಗಂಧಕಸ್ತುರಿಯನ್ನು | ಧರಿಸಿ ಕೈಮುಗಿಯುತಿಂತೆಂದ ||
ದೊರೆರಾಯ ಕೇಳಯ್ಯ ಬಂದ ಕಾರ್ಯಗಳೇನು | ಆರುಹೆನಲೆಂದನಾ ನೃಪತಿ || ೧೦೯ ||

ಮಾವ ಕೇಳೀಗ ನಿಮ್ಮೊಡನೊಂದು ಕಾರ್ಯವ | ಭಾವಿಸಿ ಬಂದೆ ನಿಮ್ಮೆಡೆಗೆ ||
ನೀವನುಗ್ರಹವ ಗೆಯ್ದರೆ ಪಾಂಡುಸುತರಿನ್ನು | ಯಾವ ದೊಡ್ಡಿತು ಭಾನುಸುತಗೆ || ೧೧೦ ||

ಸಾರಥಿಯಾಗಿ ನೀವ್ ಕರ್ಣನ ರಥದಲಿ | ತೋರಿಸಬೇಕು ವಿಕ್ರಮವ ||
ಮೂರು ಲೋಕದಿ ನಿಮ್ಮ ಪೋಲ್ವ ಸಾಹಸಿಯಾರು | ಸಾರಥಿತ್ವದ ಹರಹಿನಲಿ || ೧೧೧ ||

ಭಾಮಿನಿ

ಕೇಳುತಲೆ ಕಲಿ ಮಾದ್ರಭೂಪತಿ |
ತಾಳುತತಿ ರೋಷವನು ಹರ ಹರ |
ಖೂಳ ಕರ್ಣಗೆ ಸಾರಥಿಯೆ ನಾವೀಗಲಾ ಎನುತ ||
ಹೇಳಿ ಫಲವೇನಿನ್ನು ಸುಮ್ಮನೆ |
ಕಾಳು ತೊತ್ತಿನ ಮಗನ ಕೆಲಸದ |
ಮೇಲೆ ನಿಲಿಸುವ ಮಾತ ಪೇಳ್ವರೆ ಎಂದನಾ ಶಲ್ಯ || ೧೧೨ ||

ರಾಗ ಕೇದಾರಗೌಳ ಅಷ್ಟತಾಳ

ಕುರುಭೂಪ ಲಾಲಿಸು ನೀನೆಂದ ನುಡಿಗಳು | ಸರಳಾಗಿ ಉರವನಿನ್ನು ||
ಕೊರೆಯುತಲಿವೆ ಸೂತಸುತನ ಸಂಗರಕೆ ನಾ | ಸಾರಥಿಯೆಂತಹೆನು || ೧೧೩ ||

ಕಬ್ಬಿಲ್ಲರವನ ನೃಪರ ಹಂತಿಯಲಿ ನೀವು | ತಬ್ಬಿಕೊಂಡಿರಿಯವನ |
ಕೊಬ್ಬಿ ತಾತನ ಮೈಯ ಶೋಣಿತವದರಿಂದ | ಲೊಬ್ಬರ ನೋಡುವನೆ || ೧೧೪ ||

ನೀವಾಗಲಿ ನಿಮ್ಮ ತಮ್ಮನಾಗಲಿ ಮತ್ತೆ | ಯಾರೊಬ್ಬರಾಗಿರಲಿ ||
ನಾವು ಸಾರಥಿಯಾಹೆವಲ್ಲದೆ ಕರ್ಣನ | ಸಾರಥ್ಯವೊಲ್ಲೆವಯ್ಯ || ೧೧೫ ||

ರಾಗ ದೇಶಿ ಅಷ್ಟತಾಳ

ಏನಯ್ಯ | ಶಲ್ಯ | ಏನಯ್ಯ || ಪ ||

ಏನಯ್ಯ ಶಲ್ಯ ನೀನೆಂದ ಮಾತುಗಳು | ಮಾನಕೆ ಕುಂದಿಹುದೇನು ಕರ್ಣನೊಳು || ಅ ||

ಅಂಗದೇಶದ ನೃಪನಲ್ಲವೆ ಅವನು | ಅಂಗಶುದ್ಧಗಳಾಗಿಯಿರುವ ತಾನಿನ್ನು ||
ಹಿಂಗುವನೆ ಸಮರದಿ ಸುಭಟರನು | ಮುಂಗಾಣದರಿಯದೆ ಪೇಳ್ದುದಕೇನು || ೧೧೬ ||

ಸಾರಥ್ಯವನು ಮಾಡಿದರೆ ಹೀನವೇನು | ಶೂರಕರ್ಣನ ರಥದಲಿ ಊನವೇನು ||
ಅರಿಯದೆ ಪೇಳ್ದರೆ ಸಂದೇಹಗಳನು | ಮರೆಯದೆ ದಯಮಾಡು ಗೆಲುವ ವೈರಿಯನು || ೧೧೭ ||

ಹರಗೆ ಸಾರಥಿಯಾದ ಕಮಲಸಂಭವನು | ತರಣಿಯ ಸೂತತ್ವ ವೆರಸಿಯರುಣನು ||
ಧರಣೀಶ ರಾಮಗೆ ಸುರಸೂತ ತಾನು | ಹರಿಸಿದ ರಥವನು ನರಗೆ ಶ್ರೀವರನು || ೧೧೮ ||

ಭಾಮಿನಿ

ಏನ ಹೇಳಿದರೇನು ಫಲ ಕುಲ |
ಹೀನ ಕಲಿ ರಾಧೇಯನಾತಗೆ |
ನಾನು ಸಾರಥಿಯಾಹೆನೇ ಬಿಡು ಕುರುಕುಲೇಶ್ವರನೆ ||
ನೀನು ನಮ್ಮನು ಹೊಗಳಲೇತಕೆ |
ಸಾನುಮತವಲ್ಲಿದುವೆ ಮತ್ತೀ |
ಸೇನೆಯೊಳಗಿನ್ನೋರ್ವ ಸುಭಟನ ಕರೆಸು ಹೋಗೆಂದ || ೧೧೯ ||

ಕಂದ

ಇಂತೆನುತಂ ಶಲ್ಯಂ ಬಹು |
ಪಂಥದೊಳಿರುತಿರೆ ಕಂಡಾ ಸಮಯದೊಳಾಗಳ್ ||
ಸಂತಸದಿಂ ಕೌರವನೃಪ |
ನಂತರಿಸದೆ ಪೇಳ್ದ ತ್ರಿಪುರದಹನದ ಕಥೆಯಂ || ೧೨೦ ||

ದ್ವಿಪದಿ
ಧರಣಿಪತಿ ಮಾದ್ರೇಶ ಕೇಳು ವಿನಯದಲಿ | ದುರುಳ ದಾನವರೆಲ್ಲ ಕೂಡೆ ಧರಣಿಯಲಿ ||೧೨೧||
ತ್ರಿಪುರವನು ರಚಿಸಿಕೊಳಲಪರಿಮಿತವಾಗಿ | ಅಪರಬುದ್ಧಿಗಳಿಂದ ಸುರಪುರಕೆ ಪೋಗಿ ||೧೨೨||
ಒಡವೆ ವಸ್ತುಗಳೆಲ್ಲ ಸುಲಿದು ಸುಮನಸರ | ಮಡದಿಯರ ಪಿಡಿದು ಗೋಳ್ಗುಡಿಸಿ ಮತ್ತವರ ||೧೨೩||
ದೂರಿದರು ಬಂದು ಕಮಲಜಗೆ ಸುರವರರು | ತಾರಕಾಸುರನ ಸುತರುಪಟಳವನವರು ||೧೨೩||
ಸುರಪಾಲ ಕೇಳೆಮ್ಮ ವರದ ಬಲುಮೆಯಲಿ | ಇರುವರೀ ದಾನವರ ಗೆಲಲು ಸಮರದಲಿ ||೧೨೪||
ಹರನು ಹೊರತಲ್ಲದಡೆ ಕಾಣೆನೊಬ್ಬನನು | ಅರುಹೆ ನಾ ಬಹೆನೆಂದನಮರರಿಂಗಜನು ||೧೨೫||

ಭಾಮಿನಿ

ಕಮಲಜನನೊಡಗೊಂಡು ಸುಮನಸ | ನಿವಹವತಿ ತೋಷದಲಿ ಗಿರಿಜಾ |
ಧವನ ಚರಣವ ಕಂಡು ಮೆಯ್ಯಿಕ್ಕಿದುದು ಭಕ್ತಿಯಲಿ ||
ಉಮೆಯರಸ ಕೇಳೆಮ್ಮ ಬವಣೆಯ | ವಿವರಿಸಲು ಬಗೆಯಿಲ್ಲ ರಮಣಿಯ |
ರಿರವದೆಂತೈ ಪೇಳಲಮ್ಮೆವು ತಾರಕಾತ್ಮಜನ || ೧೨೬ ||

ಕಂದ

ಅಳಲದಿರಿನ್ನಿವರುಗಳಂ |
ಘಳಿಲನೆ ನಾಂ ಕೊಂದು ಕೊಡುವೆನಾ ಖೂಳರತ |
ನ್ನಿಳಯವನಿಂದುರಿಗೊಳಿಸುವೆ |
ಅಳುಕದಿರಿದಕೆಂದು ಪೇಳ್ದನಾ ಮಾರಹರಂ || ೧೨೭ ||

ವಾರ್ಧಕ

ಸುರರಿಗಭಯವನಿತ್ತು ವಾಮದೇವಂ ಬಳಿಕ |
ತರಿಸಿದಂ ಮಣಿಮಯ ವರೂಥಮಂ ಕಮಲಜನ |
ನಿರಿಸಿ ಸಾರಥಿತನಕೆ ನೇಮವಂ ಗೆಯ್ದು ಮಿಗೆ ಪುರಹರಂ ಪೊರಮಟ್ಟನು ||
ಪುರವ ಮುತ್ತುತಲವರ ಸೈನ್ಯಮಂ ಸವರಿ ಘನ |
ದುರಿತಾತ್ಮರಾಗಿರ್ದ ರಕ್ಕಸರ ಶಿರಗಳಂ |
ತರಿದು ಪುರವನು ಸುಟ್ಟು ಹರುಷದಿಂ ತ್ರಿಪುರಾರಿ ನಿಜನಗರಿಗಯ್ತಂದನು || ೧೨೮ ||

ಭಾಮಿನಿ

[ಹರನು ಬಿಲುವಿದ್ಯೆಯನು ಕೊಡುತಲೆ |
ಪರಶುರಾಮನಿಗೆಂದನಧಮರಿ |
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದು ||
ಸುರರು ಮೆಚ್ಚಿದ ರಾಮ ನೀತನ |
ಕರೆದು ಗರಡಿಯ ಹೊಗಿಸಿದನು ಕಡು |
ಗರುಹನೀ ರಾಧೇಯನಧಮನೆ ಮಾವ ಕೇಳೆಂದ || ೧೨೯ ||

ದೇವಕೀಸುತನೆಂದು ಬಂಡಿಯ |
ಬೋವ ಕುಲದಲಿ ಹುಟ್ಟಿದನೊ ಮೇ |
ಣಾ ವಿರಿಂಚಿಯದಾವ ಸಾರಥಿತನದ ಪೀಳಿಗೆಯೋ ||
ಕಾವುದಿದರೊಳಗೊಬ್ಬರದನಾ |
ವಾವಶೀಲ ಪದ ಪ್ರಯೋಜನ |
ಭಾವಕರು ಸತ್ಪುರುಷರಿದಕೆ ವಿಚಾರವೇಕೆಂದ || ೧೩೦ ||

ಸೂತಕುಲಸಂಭವನೆ ಭುವನ |
ಕ್ಷಾತ್ರಕಂದನೊ ಸಾಕಿದಾತನು |
ಸೂತನಾದಡೆ ಮಾವ ಕೇಳನ್ವಯಕೆ ಹಳಿಯುಂಟೆ ||
ಸ್ವಾತಿಯುದಕದಲಾದ ಮುಕ್ತಾ |
ವ್ರಾತಕಾರ್ಯನುಚಿಮ್ಮೆ ನಿಮಗಿ |
ನ್ನ್ಯಾತಕೀ ಸಂದೇಹ ಸಾರಥಿಯಾಗಿ ಸಾಕೆಂದ || ೧೩೧ ||

ಗುರು ಪಿತಾಮಹರಿಂದ ಮೋರೆಯ |
ಮುರಿದ ವಿಜಯವಧೂಕಟಾಕ್ಷವ |
ತಿರುಹಿ ಹಾಯ್ಕುವ ವೀರನಾವನು ನೀವು ತಪ್ಪಿದರೆ ||
ಕುರುಕುಲೋದ್ಧಾರಕನು ಮಾದ್ರೇ |
ಶ್ವರ ನೆನಿಪ ಪ್ರಖ್ಯಾತಿ ಬರುವುದು |
ಪರಿಹರಿಸದಿರಿ ಮಾಡಿರೆಂದೆರಗಿದನು ಚರಣದಲಿ] || ೧೩೨ ||]

ರಾಗ ಮಾರವಿ ಏಕತಾಳ

ಇಂತೀ ಪರಿಯೊಳ್ ತ್ರಿಪುರರ ಗೆಲಿದುದ | ನಂತರದಲಿ ತಿಳಿದು ||
ಚಿಂತೆಗಳೆಲ್ಲವನುಳಿದಾ ಶಲ್ಯನು | ಸಂತಸವನು ತಳೆದು || ೧೩೩ ||

ಧರಣಿಪ ಕೇಳೈ ನಿನ್ನಯ ವಚನವ | ಮರೆಯುವರಾರಿಹರು ||
ತರಣಿಯ ಸುತನಿಗೆ ಸಾರಥಿಯಾಹೆನು | ಧುರವನು ಜಯಿಸುವಡೆ || ೧೩೪ ||

ಕರ್ಣನು ತನ್ನಯ ಹಮ್ಮಿನೊಳೆಮ್ಮನು | ಮನ್ನಿಸದಿರಲವನು ||
ನಿರ್ಣಯವಿದು ನಾ ಪೇಳಿದ ಮಾತುಗ | ಳೊಮ್ಮೆಯು ಕೇಳದಿರೆ  || ೧೩೫ ||

ವಾಘೆಯ ರಥದಲಿ ಬಿಸುಟು ಮತ್ತವನೊಳು | ಹೋಗೆನು ತಾನೀಗ ||
ನಾಗ ಗರುಡರ ಹಿತವು ನಮ್ಮವರಿಗೆ | ಯೋಗವು ದೊರಕಿತಲಾ || ೧೩೬ ||

ಕರೆಸೈ ಕರ್ಣನ ರಥವನು ಇಲ್ಲಿಗೆ | ಬರಿಸೈ ನೋಡುವೆನು ||
ಅರುಹಲಿಕಾಕ್ಷಣ ಚರರನು ಕಳುಹುತ | ಕರೆಸಿದ ಕರ್ಣನನು || ೧೩೭ ||

ಭಾಮಿನಿ

ಧರಣಿಪತಿ ಕೇಳಿತ್ತ ಕೌರವ |
ರರಸ ಮಾದ್ರೇಶ್ವರನ ಕೈಯಲಿ |
ಕರವಿಡಿದು ಎಳೆತಂದು ಕೊಟ್ಟನು ಅರ್ಕಸಂಭವನ ||
ಹರುಷದಲಿ ಮೈದಡವಿ ಮನ್ನಿಸೆ |
ಕುರುಪತಿಯು ಬೀಳ್ಗೊಂಡನಿತ್ತಲು |
ತರಣಿಸುತ ನಡೆತಂದು ಹೊಕ್ಕನು ಶಸ್ತ್ರಮಂದಿರವ || ೧೩೮ ||

ಕಂದ

ತರತರದೊಳ್ ಶರಮಂ ತಂ |
ದಿರಿಸುತಲಿರಲಾಗಳಂತೆ ಕುರಿಕೋಣಗಳಂ ||
ತರಿದಿದಿರೊಳಿರಿಸಿ ಬಳಿಕಂ |
ಹರಿವಾಣದೊಳಾರತಿಯೆತ್ತಿ ತಾಂ ಪ್ರಾರ್ಥಿಸಿದಂ || ೧೩೯ ||

ರಾಗ ಮಧುಮಾಧವಿ ಆದಿತಾಳ

ಮಾಡಿದ ಪೂಜೆಯನು | ಕರ್ಣನು | ಪಾಡುತ ದುರ್ಗೆಯನು || ಪ ||

ಅಥರ್ವಣಮಂತ್ರದಲಿ | ಪೂಜಿಸಿ | ಸತತದಿ ಭಕ್ತಿಯಲಿ ||
ಅತಿ ಮಾಂಸಗಳಿಂದ | ಶೋಣಿತ | ಘೃತಭಕ್ಷ್ಯಗಳಿಂದ || ಮಾಡಿದ || ೧೪೦ ||

ಧೂಪದೀಪಗಳಿಂದ | ನೈವೇದ್ಯಸ | ಮರ್ಪಣೆ ನಿನಗೆಂದ ||
ವ್ಯಾಪಿಸಿ ಕೈದುವನು | ಕೊಂಡನು | ಚಾಪಶರಂಗಳನು || ಮಾಡಿದ || ೧೪೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧನುವ ಪೂಜೆಯ ಮಾಡಿ ಶಲ್ಯನ | ಘನತೆಯಲಿ ಸಾರಥಿಗೆ ನೇಮಿಸಿ |
ಘನ ಪರಾಕ್ರಮಿ ಕರ್ಣನಡರಿದ | ಮಣಿರಥವನು || ೧೪೨ ||

ಭೇರಿ ಪಟಹ ನಗಾರಿ ತಂಬಟೆ | ಭಾರಿ ರವ ಭೋರ್ಗುಡಿಸೆ ಪಾರ್ಥನ |
ತೋರಿಕೊಡುವವರಾರು ನಮಗೀ | ಭೂರಿಬಲದಿ || ೧೪೩ ||

ತೋರಿದವರಿಗೆ ಕೊಡುವೆ ಧನ ಬಲು | ಭೂರಿ ವಸನಾಭರಣನಿಚಯವ |
ವಾರಣಂಗಳನೀವೆನೆನ್ನುತ | ವೀರ ನುಡಿದ || ೧೪೪ ||

ಊರುಗಳ ಕೊಡಬೇಡ ರಥ ಹಯ | ವಾರಣವ ಕೊಡಬೇಡ ಪಾರ್ಥನ |
ತೋರಿಸುವೆ ನೋಡೆನುತ ಶಲ್ಯನು | ಸಾರುತೆಂದ || ೧೪೫ ||

ಕಂಡು ಮಾಡುವುದೇನು ಮೊದಲಲಿ | ಕಂಡರಾ ಕಲಿ ದ್ರೋಣ ಭೀಷ್ಮರು |
ಭಂಡತನವೇಕಿನಿತು ಬಾಯಿಗೆ | ಬಂದ ತೆರದಿ || ೧೪೬ ||

ಬಗುಳಿದರದೇನಹುದು ಪಾರ್ಥನ | ಹಗೆಯಲಳಿದವ ನೀನೊ ನೃಪತಿಯೊ |
ಬಗೆಯನರಿಯದೆ ಕೆಟ್ಟುಹೋಗುವೆ | ಮಿಗುವರಿಯಲು || ೧೪೭ ||

ರಾಗ ದೇಶಿ ಅಷ್ಟತಾಳ

ಏನೆಂದೇ | ಶಲ್ಯ | ಏನೆಂದೇ || ಪ ||

ಏನೆಂದೆ ಶಲ್ಯ ನೀನತಿಗರುವದಲಿ | ಹಾನಿಯನೆಣಿಸುವೆ ಎಮಗೆ ಪಾರ್ಥನಲಿ || ಅ ||

ನೀನು ವೈರಿಗಳ ಸಹಾಯಿಯೆಂಬುದನು | ಕಾಣಿಸದಿಲ್ಲಿತನಕ ನಮ್ಮುವನು ||
ಕಾಣಲು ಕಣ್ಣಿನ ಕಸಗಳಂದದಲಿ | ನಿ | ಧಾನಿಸದಾಡುವರೇನೊ ನೀನಿಲ್ಲಿ || ಏನೆಂದೇ || ೧೪೮ ||

ಬಂಟತನದ ಸಾಹಸವನೇನ ಬಲ್ಲೆ | ಒಳ್ಳೆ | ಪಂಟಿಗೆ ನಿಲುವ ವೀರರು ನೀವಲ್ಲೇ ||
ಉಂಟಾದುದರುಹ ಕೇಳುವದಲ್ಲದಿಂಥ | ತುಂಟತನದ ಮಾತಾಡುವರೇನೊ ಭ್ರಾಂತ || ಏನೆಂದೆ || ೧೪೯ ||

ಯಾರು ಕೊಟ್ಟರು ನಿನಗೀ ವಿಚಾರವನು | ನಮ್ಮ | ದೂರಿ ಪಾಂಡವರನ್ನು ಪೊಗಳುವುದನ್ನು ||
ತೋರುವ ನಿನ್ನೆಳೆಗರುಳ ಧಾರಿಣಿಗೆ | ಬೀರುವೆನೆನುತ ಖಡ್ಗವ ಕೊಂಡು ಪೋಗೆ || ಏನೆಂದೇ || ೧೫೦||

ಭಾಮಿನಿ

ಹೊಡೆದು ತಲೆಯನು ನಿನ್ನ ರಕುತವ |
ಕುಡಿಸುವೆನು ಕೂರಸಿಗೆ ಕಡೆಯಲಿ |
ಕೆಡಹುವೆನು ಕಲಿ ಭೀಮ ಪಾರ್ಥರನೆಂದು ಗರ್ಜಿಸುತ ||
ಕೆಡಹಿದರೆ ಬಳಿಕಾ ಸುಯೋಧನ |
ತೊಡಗಿದಗ್ಗದ ರಾಜಕಾರ್ಯವು |
ಕೆಡುವುದೆಂಬುದರಿಂದಲುಳುಹಿದೆ ನಿನ್ನನಿಂದಿನಲಿ || ೧೫೧ ||

ರಾಗ ಶಂಕರಾಭರಣ ಮಟ್ಟೆತಾಳ

ಎನುತ ಶಲ್ಯನೃಪನ ಕರ್ಣ ಬೈದು ಭಂಗಿಸಿ | ಕನಲಿ ಖಡ್ಗವನ್ನು ತೆಗೆದು ಒರೆಗೆ ಸೇರಿಸಿ ||
ಅನಿತರೊಳಗೆ ಶಲ್ಯ ಮನದಿ ಕಿನಿಸ ತಾಳುತ | ಇನಿತು ಸತ್ತ್ವ ಬಂತೆ ನಿನಗೆ ಎನುತ ಪೇಳುತ ||೧೫೨||

ಕೇಳು ಸೂತನಣುಗ ನಿನಗೆ ಬಂತೆ ಗರ್ವವು | ಖೂಳ ಹೋಗೆನುತ್ತ ರಥವನಿಳಿಯೆ ಸೈನ್ಯವು ||
ಇಳಿದು ರಥವ ಶಲ್ಯ ತನ್ನ ಬಲಸಮೂಹಕೆ | ಮುಳಿದು ಕರವ ನೆಗಹಿ ಪೇಳ್ದ ಮನದ ಕೋಪಕೆ ||೧೫೩||

ಹೊಡೆದು ಬಡೆದು ಕೊಚ್ಚಿ ಕೊಲ್ಲಿರಿವನನೆನ್ನುತ | ಹಿಡಿದು ಕೆಡಹುತಿವನ ರಥವ ಮುರಿಯಿರೆನ್ನುತ ||
ನುಡಿಯ ಕೇಳುತಾಗ ಕರ್ಣ ರೌದ್ರ ರೋಷದಿ | ಬಡಿವೆ ಪೋಪೆಯೆಲ್ಲಿ ಕುನ್ನಿ ಮುಂದೆ ಗರ್ವದಿ ||೧೫೪||

ಬಳಿಕ ಶಲ್ಯ ಕರ್ಣರಾಗ ತಮ್ಮ ತಮ್ಮೊಳು | ಮುಳಿದು ಮುಷ್ಟಿಪ್ರಹರವನ್ನು ಗೆಯ್ಯೆ ಭರದೊಳು ||
ತಿಳಿದು ಕೌರವೇಂದ್ರನಿತ್ತ ಬಂದು ಶೀಘ್ರದಿ | ಕಲಹ ಬೇಡ ನಿಮ್ಮೊಳೆನುತಲವರ ಮಧ್ಯದಿ ||೧೫೫||

ಭಾಮಿನಿ

ಬಳಿಕ ಕೌರವರಾಯನೀರ್ವರ |
ಬಳಿಗೆ ಹರಿತಂದಿಳಿದು ಶಲ್ಯನ |
ನೊಲಿದು ಬೇಡಿದ ರಥಕೆ ಬಿಜಯಂಗೆಯ್ಯಬೇಕೆಂದು ||
ತಿಳುಹಿ ನಯನೀತಿಯಲಿ ಕರ್ಣನ |
ಛಲವನುರೆ ಪರಿಹರಿಸಿ ಕಾಲಿಗೆ |
ಮಣಿಸಿ ಮಾದ್ರೇಶ್ವರನ ಮನ್ನಿಸಿ ರಥವನೇರಿಸಿದ || ೧೫೬ ||

ಕಂದ

ರಣಮಂಡಲದೋಳ್ ಕುರುಪತಿ |
ಇನಸುತ ಮಾದ್ರೇಶರ ಮನ್ನಿಸಿ ಬೀಳ್ಗೊಡಲುಂ ||
ದಿನಮಣಿ ಪೂರ್ವಾಂಬುಧಿಯೊಳ |
ಗನುವರವೀಕ್ಷಿಸಲಯ್ತರೆ ರಣಕಯ್ತಂದರ್ || ೧೫೭ ||

ರಾಗ ಭೈರವಿ ತ್ರಿವುಡೆತಾಳ

ಬಂದರಾಗ | ರಣಕ | ಯ್ತಂದರಾಗ || ಪ ||

ಬಂದರಾ ಕುರುವೀರನನುಜರು | ಸ್ಯಂದನಗಳೆಡಬಲದ ಪಾಠಕ |
ರಿಂದ ಪೊಗಳಿಸಿಕೊಳುತ ಮರುತನ | ಹಿಂದುಳುಹಿ ವೇಗದಲಿ ಬರಲಾ |
ಮುಂದುವರಿದತಿರಥ ಭಯಂಕರ | ದಿಂದಲಾ ಗುರುಸೂನು ಷಡುರಥ |
ರೊಂದೆ ಮನದಲಿ ಶಲ್ಯಭಾಸ್ಕರ | ನಂದನರು ರಥವೇರಿ ಬೇಗದಿ || ಬಂದರಾಗ || ೧೫೮ ||

ಆರು ಸಾವಿರ ಭಂಡಿ ಶರ ಹದಿ | ನಾರು ಸಾವಿರ ವರಮಹಾರಥ |
ವಾರಣಂಗಳು ಐದು ಲಕ್ಷವು | ಚಾರು ಕುದುರೆಗಳೇಳು ಕೋಟಿಯು |
ಬೇರೆ ಕಾಲಾಳುಗಳು ತೊಂಭ | ತ್ತಾರುಅರ್ಬುದವಾದುದೆಣಿಕೆಗೆ |
ವೀರ ಕರ್ಣನು ಬರಲು ಪಥದಲಿ | ತೋರಿತುತ್ಪಾತಂಗಳಾ ಕ್ಷಣ || ಏನನೆಂಬೆ || ೧೫೯ ||

ಬರುತಲಾ ಬೀದಿಯಲಿ ಕರಿಗಳು | ಧರಿಸಿದವು ಮೃತ್ತಿಕೆಯ ಶಿರದಲಿ |
ವರ ರಥಾಗ್ರದ ಮೇಲೆ ಖಗ ಬಂ | ದೆರಗಿತೈ ಶಿಲೆಯೊಳಗೆ ತಾವರೆ |
ಯರಳಿದವು ಕಣ್ಣೊಳಗೆ ನೀರ್ಗಳು | ಸುರಿಸುತಾ ಕುದುರೆಗಳು ಬರುತಿರ |
ಲರಿತು ಶಲ್ಯನು ಕಷ್ಟವಿಂದಿನ | ಧುರವೆನುತ್ತಾಕ್ಷಣದೊಳರುಹುತ || ಬಂದರಾಗ || ೧೬೦ ||

ಭಾಮಿನಿ

ಬರೆದ ಬರೆಹವು ತೀರದಾ ಜನ |
ರರಿವರೇ ದುಃಶಕುನಫಲಗಳ |
ಹರಿವು ತನಗಿಂದಿನಲಿ ಎಂಬುದನರಿಯದಾ ಕರ್ಣ ||
ಧುರವನಿಂದಿಲಿ ಜಯಿಸಿ ಶಾಂತಿಯ |
ವಿರಚಿಸುವೆ ನಾಳಿನಲಿ ಎಂಬನಿ |
ತರಲಿ ಬಂದರು ಘೋರ ಸಮಸಪ್ತಕರು ಸಂಗರಕೆ || ೧೬೧ ||