ರಾಗ ನಾಟ ಝಂಪೆತಾಳ

ಜಯ ಜಯತು ಗಣನಾಥ | ಜಯ ಕೀರ್ತಿವಿಖ್ಯಾತ |
ಜಯತು ಮೂಷಿಕರೂಥ | ಜಯತು ಹರಿಪ್ರೀತ ||
ಜಯತು ಪನ್ನಗಭೂಷ | ಜಯತು ದಿನಕರಭಾಸ |
ಜಯತು ವಿಘ್ನವಿನಾಶ | ಜಯತು ಸರ್ವೇಶ || ಜಯತು ಜಯತು || ೧ ||

ಮಾರಾರಿವರಪುತ್ರ | ಮೊದಲ ಪೂಜೆಗೆ ಪಾತ್ರ |
ಧಾರಿಣೀಧರವಕ್ತ್ರ | ಧರ್ಮಚಾರಿತ್ರ ||
ವಾರಿರುಹದಳ ನೇತ್ರ | ವಾಸವಾದಿಸ್ತೋತ್ರ |
ನೀರಜಾಸನಮಿತ್ರ | ನಿರ್ಮಲಸುಗಾತ್ರ || ಜಯತು ಜಯತು  || ೨ ||

ಉದರ ಗಿರಿಯಾಕಾರ | ಉದಧಿಸಮಗಂಭೀರ |
ಪದುಮಬಾಣವಿದೂರ | ಪಾವನಶರೀರ ||
ವಿಧಿಸುಮನಸಾಧೀಶ | ವಿವಿಧರತ್ನ ವಿಭಾಸ |
ಮಧುರತರವರಭಾಷ | ಮೌನಿಜನಪೋಷ || ಜಯತು ಜಯತು || ೩ ||

ದೃಷ್ಟಾಂತಮಾದ ಗಜ | ಪುರದಿ ನರಹರಿಯೊಡನೆ |
ಒಟ್ಟಿನಲಿ ಮೆರೆವ ಬಲು | ಶ್ರೇಷ್ಠ ವಿಘ್ನೇಶ ||
ಕೊಟ್ಟ ಹರಕೆಯನು ಕೈ | ಗೊಟ್ಟು ಸುಜನರ ಮನದ |
ಭೀಷ್ಟವನು ಕೊಡುವ ಶ್ರೀ  ಭಟ್ಟಿ ವಿಘ್ನೇಶ || ಜಯತು ಜಯತು || ೪ ||

ರಾಗ ಸೌರಾಷ್ಟ್ರ ಅಷ್ಟತಾಳ

ಪಾಹಿ ಪನ್ನಗವೇಣಿ | ಪೂರ್ಣೇಂದುಭಾಷಿಣಿ | ಶ್ರೀಮೂಕಾಂಬಾ || ಎನ್ನ |
ತಾಯೆ ಮಹಮ್ಮಾಯೆ | ಮಾರಾರಿಸುಪ್ರೀಯೆ | ಶ್ರೀಮೂಕಾಂಬಾ || ೫ ||

ರಕ್ತಬೀಜಾಪಹಾರಿ | ಶಕ್ತಿ ಮಹೇಶ್ವರಿ | ಶ್ರೀಮೂಕಾಂಬಾ | ದೃಢ |
ಭಕ್ತಸುಪೋಷಣಿ | ಮುಕ್ತಿಪ್ರದಾಯಿನಿ | ಶ್ರೀಮೂಕಾಂಬಾ || ೬ ||

ಕೊಡಚಾದ್ರಿ ಪುರವಾಸೆ | ಜಡಜಸಂಭವಪೋಷೆ | ಶ್ರೀಮೂಕಾಂಬಾ || ಜಗ |
ದೊಡೆಯನನುಜೆ ಬೇಗ | ಕೊಡು ಮತಿಯೆನಗೀಗ | ಶ್ರೀಮೂಕಾಂಬಾ || ೭ ||

ಕಂದ

ಶಾರದೆದೇವಿಗೆ ವಂದಿಸಿ |
ಮಾರಮಣಿಯ ಸ್ಮರಿಸುತುಮಾಸತಿಗಂ ಮಣಿದುಂ ||
ನೀರಜಪತ್ರೇಕ್ಷಣ ಭವ |
ತಾರಕನಿಂಗಭಿವಂದಿಸುವೆನು ಮನ್ಮನದೊಳ್ || ೮ ||

ವಾರ್ಧಕ

ಭುವನತ್ರಯಂ ಗೆಲಿದ ವೀರನಂ ಧೀರನಂ |
ದಿವಿಜೇಂದ್ರನುತಿಪಾಲನಂ ಫಾಲನೇತ್ರನಂ |
ರವಿಪೂರ್ಣಕೋಟಿಪ್ರಕಾಶನಂ ಈಶನಂ ವರ ಮಹಾಗಂಗಾರ್ದ್ರನಂ ||
ಶಿವನಂ ಶಶಾಂಕವರದಾತನಂ ಖ್ಯಾತನಂ |
ಭವದೂರನಂ ಭೂತವರ್ಗನಂ ಭರ್ಗನಂ |
ಶಿವೆಯರಸನಂ ಪಂಚವಕ್ತ್ರತ್ರಿಣೇತ್ರನಂ ಸ್ಮರಿಸಿ ಮತಿಯಂ ಪಡೆವೆನು || ೯ ||

ದ್ವಿಪದಿ

ವರ ವಸಿಷ್ಠ ವ್ಯಾಸ ವಾಲ್ಮೀಕರ ನುತಿಸಿ | ಗುರು ಭೀಷ್ಮ ಭೂಮಿಸುರರಂಘ್ರಿಗಳ ಸ್ಮರಿಸಿ || ೧೦ ||

ಶುಕಶೌನಕಾದಿಗಳಿಗೊಂದನೆಯ ಮಾಡಿ | ಭಕುತಿ ಪೂರ್ವಕದೊಳಮರರನ್ನು ಕೊಂಡಾಡಿ || ೧೧ ||

ತಂದೆತಾಯ್ಗಳ ಪಾದಕೆರಗಿ ಗುರುಪದವ | ಚಂದದಿಂದರ್ಚಿಸುತ ಬೇಡುವೆನು ವರವ || ೧೨ ||

ಕವಿಜನರ ಚರಣಗಳಿಗೆರಗಿ ವಿನಯದಲಿ | ಭುವನದೊಳು ಭಾರತಪುರಾಣಕಥನದಲಿ || ೧೩ ||

ದುರುಳ ದುಶ್ಶಾಸನನ ಉರವನುರೆ ಬಗಿದು | ಕರುಳ ದ್ರೌಪದಿಮುಡಿಗೆ ಮುಡಿಸಿ ಮನವೊಲಿದು || ೧೪ ||

ನರಕರ್ಣರೆಸಗಿರುವ ಕಾಳಗದ ಕಥೆಯ | ಅರಿತಂತೆ ಪೇಳ್ವೆ ನಾ ನಡೆದ ಸಂಗತಿಯ || ೧೫ ||

ತಪ್ಪಿದ್ದರದ ಬಿಡದೆ ತಿದ್ದಿ ಕೋವಿದರು | ಒಪ್ಪವಿಡುತಲೆ ಮೆರೆಸಿ ಸುಜನರಾದವರು ||೧೬ ||

ಬಪ್ಪ ಅಪಮೃತ್ಯುವನು ತರಿದು ವಿನಯದಲಿ | ಸರ್ಪಶಯನನೆ ಕಾಯೊ ಎನ್ನ ಕರುಣದಲಿ || ೧೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸೋಮವಂಶಲಲಾಮನಾಗಿಹ | ಭೂಮಿಪತಿ ಜನಮೇಜಯಗೆ ನಿ |
ಸ್ಸೀಮ ವೈಶಂಪಾಯನಾಖ್ಯನು | ಪ್ರೇಮದಿಂದ || ೧೮ ||

ಭಾರತಾಮೃತಕಥೆಯ ಬಲು ವಿ | ಸ್ತಾರದಿಂ ಪೇಳುತಿರೆ ಪುನರಪಿ |
ಧಾರಿಣೀಪತಿ ನಮಿಸಿ ಕೇಳ್ದನು | ಚಾರು ಮುನಿಯ || ೧೯ ||

ಭೀಮಸೇನನು ಬಾಹುಬಲನಿ | ಸ್ಸೀಮ ಕಲಿ ದುಶ್ಶಾಸನುರವನು |
ತಾ ಮುದದಿ ಬಗಿದಾ ಕಥೆಯ ಸು | ಪ್ರೇಮದಿಂದ || ೨೦ ||

ಧುರ ವಿಜಯ ಕಲಿ ಪಾರ್ಥ ರಣದಲಿ | ತರಣಿಸುತ ಕಲಿ ಕರ್ಣನೆನಿಪನ |
ಶಿರವನರಿದಾ ಪರಿಯನೆಲ್ಲವ | ನೊರೆವುದೆನಗೆ || ೨೧ ||

ಎಂದು ಮುನಿಪನ ಪಾದಕಮಲ | ದ್ವಂದ್ವದಲಿ ಚಾಚಲ್ಕೆ ಮುಕುಟವ |
ಚಂದದಿಂ ಪಿಡಿದೆತ್ತಿ ತಳ್ಕಿಸು | ತೆಂದನವಗೆ || ೨೨ ||

ವಾರ್ಧಕ

ಕಂದ ಕೇಳ್ ಧರ್ಮಸುತನನುಜರೊಡಗೂಡಿ ಸಾ |
ನಂದದಿಂದಿರುವ ಸಮಯದೊಳರಿತನೆಮಗಿನ್ನು |
ಬಂದಿತೈ ಕಡೆಗಾಲವೆಂದು ನರಪೌತ್ರನಿಗೆ ಪಟ್ಟಮಂ ಕಟ್ಟಿ ಬಳಿಕ ||
ಇಂದೀವರಾಕ್ಷಿ ಸಹಿತೊಡನೆ ಸ್ವರ್ಗಕ್ಕಯ್ಯ |
ಲಂದಿತ್ತ ನೃಪತಿ ವನಬೇಟೆಗೆಂದೆನುತ ನಡೆ |
ತಂದು ಮುಂದಿರುವ ತಪಸಿಯ ಕಂಡು ಬಿಲ್ಲ ತುದಿಯಿಂದ ಹಾವಿನ ಹಕ್ಕೆಯ || ೨೩ ||

ಕಂಧರದಿಯಿರಿಸಿ ದೊರೆ ನಡೆದನಾಗಳೆ ತನ್ನ |
ಮಂದಿರವನಿತ್ತಲುಂ ಬಂದನಾ ಮುನಿಸುತಂ |
ನಿಂದು ನೋಡುತ ಪಿತನನಂದು ಕೋಪಿಸಿ ಮುನಿಪನೆಂದನೇಳನೆ ದಿನದಲಿ ||
ಕೊಂದು ಬಿಸುಡಲಿ ತನ್ನ ತಂದೆಯಂ ಬಾಧಿಸಿದ |
ಮಂದಮತಿಗೀ ನುಡಿಗಳೆಂದು ಪೇಳಿರಲಿತ್ತ |
ಬಂದಿತೀ ವಾರ್ತೆ ಹರ ಹರ ಎಂದು ನೃಪಗೃಹವನುಳಿದಿರ್ದ ಹರಿಕಥೆಯಲಿ || ೨೪ ||

ಬಂದಿತಾ ಶಾಪವಶದಿಂದ ಸದ್ಗತಿ ನೃಪತಿ |
ಗಂದು ಕೇಳುತ್ತ ಜನಮೇಜಯ ನೃಪಂ ಬಳಿಕ |
ಒಂದುಳಿಯದಂತೆ ಸುಡಬೇಕೆಂದು ಯಜ್ಞದಿಂ ಕೊಂದನಗಣಿತದಹಿಯನು ||
ಬಂದ ಕುಷ್ಠವ್ಯಾಧಿ ಪರಿಹಾರಕಾಗಿ ಯದು |
ನಂದನನ ಸತ್ಕಥೆಯ ಲಾಲಿಸಿದೊಡದರಿಂದ |
ಮುಂದೆ ಸುಖಿಯಾಗಿ ಬಾಳುವೆಯೆಂದು ಮುನಿ ನುಡಿಯೆ ಕೇಳ್ದನೈ ಭಾರತವನು || ೨೫ ||

ಭಾಮಿನಿ

ಅರಸ ಕೇಳೈ ಪಾಂಡುನರಪತಿ |
ಗುರುಬಲಾನ್ವಿತರೈವರುದಿಸಲು |
ತರುಣಿಮಣಿ ಗಾಂಧಾರಿ ಪಡೆದಳು ಸುತರ ನೂರ್ವರನು ||
ಇರಲು ಕೌರವರರಸ ಜೂಜಿನ |
ಪರಿಯೊಳಾ ಪಾಂಡವರ ಸೋಲಿಸಿ |
ವರುಷ ಹದಮೂರಂತ್ಯದಲಿ ಬಹುದೆಂದು ಪೊರಡಿಸಿದ || ೨೬ ||

ವಾರ್ಧಕ

ಅರಸ ಕೇಳ್ ಧರ್ಮಜಂ ಕೌರವನ ಕಟ್ಟಳೆಯ |
ವರುಷದವಧಿಯ ಕಳೆದು ಮರಳಿದಂ ನಿಜಪುರಿಗೆ |
ಹರಿಯಿಂದ ಸಂಧಾನ ಮುರಿದುದಂ ತಿಳಿದು ಸಂಗರಕೆ ನಿಜಬಲವನವನು ||
ನೆರಹಲಿತ್ತಲು ಕೌರವೇಶ್ವರಂ ಬಳಿಕ ತ |
ದ್ಧುರಕೆ ಭೀಷ್ಮಾಚಾರ್ಯ ದ್ರೋಣರಿಗೆ ಪಟ್ಟಮಂ |
ವಿರಚಿಸಲು ಧರ್ಮಜಂ ಮುರಹರನ ತಂತ್ರದಿಂ ಗೆಲಿದನನುಜಾತರೊಡನೆ || ೨೭ ||

ರಾಗ ಭೈರವಿ ಝಂಪೆತಾಳ

ಇಂತು ವೈಭವದೊಳಗೆ | ಕಂತುಪಿತ ಸಹಿತಲ |
ತ್ಯಂತ ಹರುಷದೊಳಿರಲು ಕುಂತಿಯಾತ್ಮಜರು || ೨೮ ||

ಹಿರಿಯಾತ ಭೀಷ್ಮನನು | ಸರಳಮಂಚದೊಳಿರಿಸಿ |
ಗರಡಿಯಾಚಾರ್ಯನನು | ಸುರಪುರಕೆ ಕಳುಹಿ || ೨೯ ||

ವರ ಧರ್ಮ ಭೀಮ ನರ | ತರಳರಾ ಮಾದ್ರಿಜರು |
ತರುಣಿ ದ್ರೌಪದಿ ಸಹಿತ | ಲಿರಲು ಸಂತಸದಿ || ೩೦ ||

ಭಾಮಿನಿ

ಧರಣಿಪತಿ ಕೇಳಿತ್ತ ಕೌರವ |
ರರಸನೊಡ್ಡೋಲಗದೊಳೊಪ್ಪಿರೆ |
ಶರದ ಗುರುವಿನ ಸೂತ ರಥವನು ತಿರುಹಿ ಮೊರೆಯಿಡುತ ||
ಭರದೊಳಯ್ತಂದಂಘ್ರಿ ಕಮಲದೊ |
ಳೆರಗಲಾ ಸಾರಥಿಯ ಶಿರವನು |
ಎರಡು ಕೈಯಿಂದೆತ್ತಿ ಮೈದಡವುತ್ತಲಿಂತೆಂದ || ೩೧ ||

ರಾಗ ಸವಾಯ್ ಏಕತಾಳ

ಸೂತನೆ ಕೇಳ್ ನೀ ರಥವನು ತಿರುಗಿಸಿ | ಏತಕಿಲ್ಲಿಗಯ್ತಂದಿರುವೆ ||
ಭೀತಿಗಳೇನಿದು ಬಿಡು ವೃತ್ತಾಂತವ | ನೀ ತಿಳಿದರುಹದಿಹುದು ತರವೆ || ೩೨ ||

ರಾಗ ಸಾರಂಗ ಅಷ್ಟತಾಳ

ದೊರೆರಾಯ ಲಾಲಿಸಯ್ಯ | ನಾ ಪೇಳ್ವ ಸಂ | ಗರದ ವೃತ್ತಾಂತ ಜೀಯ ||
ಅರುಹುವರೆನಗೆ ಅಂಜಿಕೆಯಪ್ಪುದಾದರು |
ಕರುಣದಿ ಮನವಿಟ್ಟು ಲಾಲಿಸು ಕಿವಿಗೊಟ್ಟು || ೩೩ ||

ಗುರುದ್ರೋಣರೊಡನೆ ಕಾದಿ | ರಣದಿ ಗೆಲು | ವರ ಕಾಣೆ ಮೂರ್ಲೋಕದಿ ||
ಹರನಿಗರಿದು ಮಿಕ್ಕ ಸುರರಿಗಸಾಧ್ಯವು |
ಧರಣಿಪಾಲಕರನ್ನು ಭರದಿ ಲೆಕ್ಕಿಸುವನೆ || ೩೪ ||

ಚಕ್ರವ್ಯೂಹವ ಮಾಡಿದ | ಮತ್ತವರೊಳು | ವಿಕ್ರಮವನು ತೋರಿದ ||
ಶಕ್ರನಣುಗನ ತನಯನ ಗೆಲಲು ಶಂಖ |
ಚಕ್ರಾಂಕಿತ ಪಾರ್ಥರೊಂದಾಗಿ ಮರುದಿನ || ೩೫ ||

ಕಂದನೆಂಬುರು ತಾಪದಿ | ಕೊಂದರು ನಿಮ್ಮ | ಸಿಂಧುನೃಪನ ಕೋಪದಿ ||
ಇಂದಿನಾಹವದೊಳು ಧರ್ಮಸುತನ ಕರೆ |
ತಂದು ನಿಲಿಸಿದನು ಕಲಶಜನಿದಿರಲಿ || ೩೬ ||

ಸತ್ಯವಂತನು ಧರ್ಮನು | ಪೇಳಿದನೊಂದ | ಕೃತ್ಯದ ವಚನವನು ||
ಪ್ರತ್ಯಕ್ಷದಲಿ ನಿನ್ನ ಸುತನಶ್ವತ್ಥಾಮನು | ಸತ್ಯಲೋಕಕೆ ಪೋದನೆಂದರುಹಿದ ತಾನು || ೩೭ ||

ಭಾಮಿನಿ

ಕಂದನಶ್ವತ್ಥಾಮ ಸುರಪುರ |
ಕಿಂದು ತೆರಳಿದನೆನುತ ಯಮಸುತ |
ನೆಂದ ಮಾತನು ಕೇಳಿ ಕಲಶಜ ಸತ್ಯವೆಂದರಿದು ||
ಸ್ಯಂದನದಿ ದೇಹಗಳ ಬಿಸುಟಾ |
ನಂದನನ ಬಳಿಗಯ್ದಲಿತ್ತಲು |
ಮಂದಮತಿ ದ್ರುಪದಾಖ್ಯತನುಜನು ಕೊಂಡು ಖಡುಗಗಳ || ೩೮ ||

ಕಂದ

ತುಂಡಿಸಿ ದೇಹಗಳಂ ಎದೆ |
ಗುಂಡಿಗೆಯ ಕಡಿದಿರಿಸುತವನೆಲುಗಳ ಸಾವಿರ ||
ತುಂಡಾಗುವ ತೆರದೊಳ್ ಪುಡಿ |
ಹೊಂದಿಸಿ ರಣರಂಗದೊಳೆಸೆದನ್ ಆ ಶವಮಂ || ೩೯ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದ ಮಾತನು ಕೇಳಿ ಕೌರವ | ನೊಂದು ಮನದಲಿ ಮರುಗಿ ರೋಷದೊ |
ಳೆಂದನಾ ಕರ್ಣಾದಿ ಸುಭಟರ | ಮುಂದೆ ಭರದಿ || ೪೦ ||

ದ್ರೋಣ ನಮ್ಮೀಬಲಕೆ ಪಂಚ | ಪ್ರಾಣ ತಾನಾಗಿರಲು ವೈರಿಗೆ |
ಪ್ರಾಣ ದಂಡವ ತೆತ್ತು ನಮ್ಮಯ | ಗೋಣ ಕೊಯ್ದ || ೪೧ ||

ಹೂಣಿಗರೊಳಾರಿನ್ನು ಸುಭಟ | ಶ್ರೇಣಿಯಲಿ ನಾ ಕಾಣೆ ಪಾರ್ಥನ |
ಬಾಣಕಿದಿರಹ ಭಟರದಾರೈ | ಕ್ಷೆಣಿಯೊಳಗೆ  || ೪೨ ||

ಜೀಯ ಸಂಶಯವಿಲ್ಲ ಗುರು ಗಾಂ | ಗೇಯರಳುಕಿದರೇನು ಕಲಿರಾ |
ಧೇಯನಿಹನೆಂದರುಹಿದನು ಕೃಪ | ರಾಯನೊಡನೆ || ೪೩ ||

ವಾರ್ಧಕ

ಧರಣಿಪತಿ ಜನಮೇಜಯಾಖ್ಯ ನೀಂ ಲಾಲಿಸೈ |
ಹರುಷದಿಂ ಗುರುಜ ಕೃಪ ಕೃತವರ್ಮ ಮೊದಲಾದ |
ಉರು ಪರಾಕ್ರಮಿಗಳಂದೊರೆದರಾ ಕರ್ಣನಿಗೆ ಸೇನಾಧಿಪತ್ಯವನ್ನು ||
ವಿರಚಿಸುವುದೆಂದಡಾ ನುಡಿ ಕೇಳಿ ಕೌರವಂ |
ತರಿಸಿದುರು ಸುರುಚಿರದ ವಿಷ್ಟರವ ಕುಳ್ಳಿರಿಸಿ |
ಧುರದ ದಳಪತಿ ಕರ್ಣನೆಂದು ಡಂಗುರ ಹೊಯ್ಸಿ ಹರಸಿ ಸೇಸೆಯ ತಳಿದರು || ೪೪ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ತರಣಿಸುತನಿಗೆ ಸೇನೆಯೊಡೆತನ | ಕುರುಪತಿಯು ತಾನೊಲಿದು ಮಾಡಲು |
ಗುರುತನುಜ ಕೃಪ ಶಲ್ಯ ಶಕುನಿಗ | ಳಿರದೆ ಕಾಣಿಕೆಗೊಟ್ಟರು | ತೋಷದಿಂದ || ೪೫ ||

ಅರಳಿತರಸನ ವದನ ಮೇಲೀ | ಧರಣಿಯನು ಯಮಸುತಗೆ ಗೋವಿನ |
ಚರಣದಗಲದ ಸ್ಥಳವ ಕೊಡುವೆನೆ | ಬರಲಿ ನಾಳಿನ ಸಮರಕೆ | ಧರ್ಮರಾಯ || ೪೬ ||

ಹಿಂದೆ ಕಪಟದಿ ಭೀಷ್ಮ ಗುರುಗಳ | ಕೊಂದರಾ ಮುರವೈರಿ ಯಮಸುತ |
ರೆಂದು ಕೌರವರರಸ ಕರ್ಣಗೆ | ತಂದು ಕರದಲಿ ಕೊಟ್ಟನು | ವೀಳೆಯವನು || ೪೭ ||

ಭಾಮಿನಿ

ಪೊಡವಿಪತಿ ಕೇಳಾಗ ಪುತ್ರನ |
ಸಡಗರವ ನೋಡುವೆನೆನುತ್ತಲೆ |
ಯಡರಿದನು ದಿನನಾಥ ಪೂರ್ವಾಚಲದ ತುದಿಗಂದು ||
ಇಡುವ ಮಣಿ ಮುಕುಟಗಳು ಪೊಡವಿಯ |
ಹಿಡಿದು ನುಂಗುವ ಕತ್ತಲೆಯ ಕಡಿ |
ದಿಡುತ ಥಳಥಳಿಸುತ್ತ ಮೇಲಕೆ ಬಂದನಾ ಭಾನು || ೪೮ ||

ರಾಗ ಮಾರವಿ ಏಕತಾಳ

ತಂದೆಯ ಬರವ ನಿರೀಕ್ಷಿಸಿ ಕರ್ಣನು | ಮಿಂದತಿ ಭಕ್ತಿಯಲಿ ||
ಚಂದದೊಳರ್ಘ್ಯವನಿತ್ತುರೆ ರಥವನು | ಬಂದೇರಿದನಾಗ || ೪೯ ||

ಹೊಡೆಯಲು ಭೇರಿಯ ನಡೆಯಲು ಸೈನ್ಯವು | ತಡೆಯಲು ಷಡುರಥರು ||
ನಡೆಯುತಲಿರೆ ಕೆಂಧೂಳಿಯು ಮುಸುಕಿತು | ಬಿಡದಾಕಾಶದೊಳು || ೫೦ ||

ಕರೆಯಿರೊ ಪಾಂಡುನೃಪಾಲನ ತನುಜರು | ಬರಲಿಂದಾಹವಕೆ ||
ಗುರುಭೀಷ್ಮಾದ್ಯರ ಗೆಲಿದಬ್ಬರವನು ನಿಲಿಸುವೆನರೆ ಕ್ಷಣಕೆ || ೫೧ ||

ವಾರ್ಧಕ

ಧರಣಿಪತಿ ಕೇಳಿತ್ತಲಾ ಪಾಂಡುನಂದನರು |
ಭರದಿಂದ ತಂತಮ್ಮ ನಿತ್ಯ ವಿಧಿಗಳ ರಚಿಸಿ |
ಕರದಿ ಧನುಶರವಾಂತು ಮುರಹರನ ಬಳಿಗಯ್ದಿ ಸಾಷ್ಟಾಂಗಮಂ ಗೆಯ್ಯಲು ||
ಬರಸೆಳೆದು ಬಿಗಿಯಪ್ಪುತಾ ಧರ್ಮನಂದನನೊ |
ಳರಸ ಕೌರವ ಭಾನುಸುತಗೆ ಪಟ್ಟವ ಕಟ್ಟಿ |
ಧುರಕೆ ಪದ್ಮವ್ಯೂಹಕೈದಿತಾ ರಿಪುಸೇನೆ ಕರ್ಣನಾ ಕಟ್ಟಳೆಯೊಳು || ೫೨ ||

ರಾಗ ಭೈರವಿ ಏಕತಾಳ

ಮುರಹರನಿಂತೆನೆ ಕೇಳಿ | ನರ | ತ್ವರಿತದಿ ರೋಷವ ತಾಳಿ ||
ಕುರುಬಲವನು ಹೊಯ್ದರಿವೆ | ಮೇಣ್ | ಧರಣಿಪರೆಲ್ಲರ ಗೆಲುವೆ || ೫೩ ||

ಹೊರತಲ್ಲದೆ ಕೌರವನ | ನಾ | ನೊರೆಸುವೆನೀಗರ್ಕಜನ ||
ಶಿರಗಳ ಚೆಂಡಾಡುವೆನು ಎನು | ತಿರಲಾ ಕ್ಷಣ ಮಾಧವನು || ೫೪ ||

ಭಳಿಭಳಿರೆಲವೊ ಕಿರೀಟಿ | ನಿ | ನ್ನಳವಿಯೊಳಾರ್ ಸರಿಸಾಟಿ ||
ಕುಲಹೀನನು ಅರ್ಕಜನು | ಎ | ನ್ನಳಿಯನ ತೀರ್ಚಿದನವನು  || ೫೫ ||

ಕೇಳುತ ಭಟರರ್ಜುನಗೆ | ಹರಿ | ಪೇಳಿದ ನುಡಿ ಶರದೊಳಗೆ ||
ಹೂಳಿದರುದರವನಾಗ | ಸುರ | ಪಾಲರು ಹರ್ಷಿಸುತಾಗ || ೫೬ ||

ಭಾಮಿನಿ

ಧರಣಿಪತಿ ಕೇಳುತ್ತ ಮಾದ್ರೀ |
ವರಸುತಾದಿ ಸಮಸ್ತ ಪಟುಭಟ |
ರಿರದೆ ಹತ್ತಿತು ಚಕ್ರವ್ಯೂಹವನಧಿಕ ರೋಷದಲಿ ||
ನರನು ಮುರಹರಗೆರಗಿ ಹನುಮನ |
ಚರಣಕಾನತನಾಗಿ ರಥವನು |
ತ್ವರಿತದಿಂದೇರಲ್ಕೆ ನಭದೊಳು ಸುರರುಘೇಯೆನಲು || ೫೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲಾ ಪಾಂಡವರ ಬಲ ಮುಂ | ದೊತ್ತಿ ಶರಧಿಯ ತೆರದಿ ಬರುತಿರೆ |
ಅತ್ತಲಾ ಕುರುಸೇನೆ ಸೈನ್ಯವ | ಮುತ್ತಿತಾಗ || ೫೮ ||

ಚೂಣಿಬಲ ಹೊಯ್ದಾಡಿ ಸಮರದಿ | ಕಾಣದಯ್ತರೆ ಪೊಡವಿ ನಿಮಿಷದಿ |
ಪ್ರಾಣವುಳಿದರೆ ಸಾಕೆನುತ್ತರಿ | ಸೇನೆಯಾಗ  || ೫೯ ||

ಭರದಿ ಪಿಂತಿರುಗಲ್ಕೆ ಕೌರವ | ಕರೆದು ಬೇಗದಿ ಕ್ಷೇಮ ಧೂರ್ತನೊ |
ಳರುಹಲಾ ನೀ ನೋಡು ತನ್ನಯ | ಧುರದ ಪರಿಯ || ೬೦ ||

ಅರೆಗಳಿಗೆಯೊಳು ಪಾಂಡುಸುತರಿಗೆ | ಧರಣಿಯನು ಸಾಕೆನಿಸಿ ದುರ್ಧರ |
ದರಣ್ಯವೇ ಲೇಸೆನಿಪೆನೆನ್ನುತ | ತೆರಳ್ದನಾಗ || ೬೧ ||

ರಾಗ ಕಾಂಭೋಜಿ ಮಟ್ಟೆತಾಳ

ಕರದಿ ಧನುವ ಪಿಡಿದು ಕ್ಷೇಮಧೂರ್ತನಾಗಳೆ |
ತರಣಿಜಾತಸುತನ ಮೇಲೆ ನಡೆದನಾಗಳೆ || ೬೨ ||

ಧರ್ಮನೆಂಬ ಮಾತನೊಂದ ಕೆಡಿಸಿಕೊಂಡೆಲಾ |
ಕರ್ಮವಶದಿ ಕಲಶಭವನ ಗೆಲಿದೆಯೈ ಭಲಾ || ೬೩ ||

ಪರಿಯದಲ್ಲ ಹೊಸಬ ನಾನು ತಿರುಗಿ ನೋಡೆಲಾ |
ಹರಣವುಳಿವುದಕ್ಕುಪಾಯವನ್ನು ಮಾಡೆಲಾ || ೬೪ ||

ಎನುತಲಾಗ ಧರ್ಮಸುತನ ಮೂದಲಿಸುತಿರೆ |
ಕನಲಿ ಪಾರ್ಥ ಕೋಪದಿಂದ ತಡೆದನಾಗಳೆ || ೬೫ ||

ರಾಗ ಮಾರವಿ ಏಕತಾಳ

ಖೂಳನ ವಾಕ್ಯವ | ನಾಲಿಸಿ ಕಂಗಳೊ | ಲೇಳಿಸಿ ಕಿಡಿಗಳ |
ತಾ ಲಯ ದಂತ್ಯದ | ಕಾಲನಂತೆ ಸುರ | ಪಾಲಕಕುವರನು |
ಲೀಲೆಯೊಳಯ್ದಿದ | ಕಾಳಗಕೆನುತ | ರೋಷದಿಂದ || ೬೬ ||

ಆ ಸಮಯದೊಳಾ | ರೋಷದಿ ಮರುತಜ | ದೋಷಕಾರಿಯ ಯಮ |
ವಾಸವ ಮಾಡುವೆ | ಆ ಸುರರಡ್ಡೈ | ಸಲು ಬಿಡೆನೆನ್ನುತ |
ಲಾಶುಗಕುವರನು | ತಾ ಸಮರಕೆನುತ | ನಡೆದನಾಗ || ೬೭ ||

ರಾಗ ಭೈರವಿ ಆದಿತಾಳ

ಗದೆಯನು ತಿರುಹುತಲಂದು | ನೃಪ | ನೆದೆಮೇಲೆರಗುತ ನಿಂದು ||
ಫಡ ಫಡ ಎನಲಾ ಕ್ಷಣದಿ | ಖಳ | ಸಿಡಿದ್ಹಾರಿದನಾ ರಣದಿ || ೬೮ ||

ಖೂಳ ಭೀಮನೆ ಕೇಳೆಲವೋ | ನಿನ | ಗಾಲಯ ಯಮಪುರ ವರವೋ ||
ಬಾಳುವೆ ತೀರಿತೆನುತ್ತ | ಶರವೇಳರೊಳೆಚ್ಚನು ನಗುತ || ೬೯ ||

ಆತನ ಶರಗಳ ತರಿದು | ಬಲು | ಖಾತಿಯಿಂದೌಡುಗಳಗಿದು ||
ಘಾತಕ ನಿಲ್ ನಿಲ್ಲೆನುತ | ಶರ | ವ್ರಾತವೆಸೆದ ಗರ್ಜಿಸುತ || ೭೦ ||

ಘರಘರ ಹಲ್ ಮಸೆಯುತ್ತ | ಭೀಮ | ಭರದೊಳ್ ಶಿರಕೆರಗುತ್ತ ||
ಹರ ಹರಯೆನ್ನುತ ಧರೆಗೆ | ಖಳ | ನೊರಗಿದನಾರಣದೊಳಗೆ || ೭೧ ||

ಭಾಮಿನಿ

ಭೂಮಿಪತಿ ಕೇಳಿಂತು ಸಮರದೊ |
ಳಾ ಮಹಾ ಕಲಿ ಭೀಮಸೇನನು |
ಕ್ಷೇಮಧೂರ್ತನ ಗೆಲಿದು ಶೈಮಿನಿಪುರಕೆ ಕಳುಹಿಸಿದ ||
ಆ ಮರುತಸುತನನು ತಡೆಯೆ ರಿಪು |
ಸ್ತೋಮ ಬರೆ ಹದಿಮೂರು ಸಾವಿರ |
ಭೀಮಸೇನನು ಬಗೆವನೇ ಬಡಿದುರುಳಿಚಿದನವರ || ೭೨ ||

ವಾರ್ಧಕ

ಅರಸ ಕೇಳಿತ್ತಲಾ ಕೌರವಂ ಸಮರಮಂ |
ಪರಿಕಿಸಿದನಾಗಳುರೆ ತಾಪದಿಂ ಕೋಪದಿಂ |
ಶರವನುರೆ ಸಮನಿಸುತಲಸ್ತ್ರದಿಂ ಶಸ್ತ್ರದಿಂ ಪರಬಲವ ಮುರಿದೆಚ್ಚನು ||
ಸುರಪಸುತನಿತ್ತಲತ್ಯುಗ್ರದಿಂ ಶೀಘ್ರದಿಂ |
ಪರಿಪರಿಯೊಳಾ ಧನುರ್ನಾದದಿಂ ಭೇದದಿಂ |
ಕುರುಕುಲಾಂಬುಧಿಯನುರೆ ತೆವರಿದಂ ಸವರಿದಂ ಸೈನ್ಯವನ್ನರೆನಿಮಿಷದಿ || ೭೩ ||

ಕಂದ

ಇಂತೀ ಪರಿ ಪಾರ್ಥಂ ಬಲು |
ಪಂಥದಿ ರಣರಂಗಮುಖದಿ ಕಾದುತ್ತಿಹುದಂ ||
ಸಂತೈಸುತಲಾ ಧರ್ಮಜ |
ತಾಂ ತವಕದಿ ನಡೆದ ಕುರುಪನೊಡನಾಹವಕಂ || ೭೪ ||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಕೌರವೇಂದ್ರ ನಿನ್ನ | ಬಲದ ಜೂಜಿನವರ ಕರೆಸು |
ಗೆಲುವಡಿದಕೊ ಬಂದೆನೀಗ ಸರಳ ಮೊನೆಯಲಿ || ೭೫ ||

ಗೆಲುವ ಸುಭಟನಹುದೊ ಯಮಜ | ತಲೆಗೆ ಪಿತ್ತವೇರಿತೇನೊ |
ಇಳುಹುವುದಕೌಷಧಿಯ ಮಾಳ್ಪೆ | ನಲಗತುದಿಯಲಿ || ೭೬ ||

ಕೇಳುಕುರುಕುಲೇಶ ನಿನ್ನ | ಸ್ಥೂಲದುರವ ಬಗಿದು ಧರಣಿ |
ಜಾಲವನ್ನು ತೆಗೆವೆ ನೋಡು | ಲೀಲೆಯಿಂದಲಿ || ೭೭ ||

ಧರಣಿಯಾಸೆಯೇಕೆ ನಿನಗೆ | ಸ್ಮರಿಸಗೊಡೆನು ಸ್ವಪ್ನದಲ್ಲಿ |
ಹರಣದಾಸೆಯಿರಲು ವನಕೆ | ತೆರಳು ಶೀಘ್ರದಿ || ೭೮ ||

ವನದ ಪರಿಯ ಬಲ್ಲೆ ನಾನು | ಧನುಪರೀಕ್ಷೆ ನೋಡು ನೀನು |
ಎನುತ ಯಮಜ ನೂರು ಶರವ | ಕನಲುತೆಚ್ಚನು || ೭೯ ||

ಎಚ್ಚ ಶರವ ನಡುವೆ ತರಿದು | ಕೊಚ್ಚಿ ಕೌರವೇಂದ್ರನುರಿಯ |
ಮುಚ್ಚಿದಹಿಪನಂತೆ ರೋಷ | ಹೆಚ್ಚಿತಾಗಳೆ || ೮೦ ||

ಎಲವೊ ಯಮಜ ಕೇಳು ನಿನ್ನ | ಬಲದ ಕೃಷ್ಣನೆಲ್ಲಿ ಪೋದ |
ತಲೆಯನುಳುಹಿಕೊಳ್ಳೆನುತ್ತ | ತಳುವದೆಚ್ಚನು  || ೮೧ ||

ಹತ್ತು ಶರದೊಳದನು ಕಡಿದು | ಮತ್ತೆ ಯಮಜಕರದ ಬಿಲ್ಲ |
ಕತ್ತರಿಸುತ ರಥವ ಮುರಿದ | ನುತ್ತಮಾಸ್ತ್ರದಿ || ೮೨ ||

ಭಾಮಿನಿ

ಕರದ ಚಾಪವು ಪೋಗೆ ಕೌರವ |
ರರಸ ಚಿಂತಾಭಾರದಿಂದಲಿ |
ತಿರುಗಿದನು ನಿಜಬಲಕೆ ಭಾಸ್ಕರನಿಳಿದನಂಬುಧಿಗೆ ||
ತರಣಿಯಸ್ತಮಯದಲಿ ಮುರರಿಪು |
ನರ ವೃಕೋದರ ಮಾದ್ರಿ ಯಮಸುತ |
ರಿರದೆ ತಾವ್ ನಡೆತಂದು ಹೊಕ್ಕರು ತಮ್ಮ ಶಿಬಿರವನು || ೮೩ ||