ಭಾಮಿನಿ

ಇಂತು ಸರಿಸಮನಾಗಿಯುಭಯರು |
ಪಂಥದಲಿ ಹೆಣಗುತ್ತಲಿರೆ ಛಲ |
ವಂತ ಸಿಂಧು ಧರೇಶನೊರಗಿದ ಭುವಿಗೆ ಮೈ ಮರೆದು ||
ಕಂತುಹರನಂದದಲಿ ಗರ್ಜಿಸಿ |
ಮುಂತೆ ನೂಕುತೆ ರಥವನಿದಿರೊಳು |
ನಿಂತು ನುಡಿದನು ಪಾಂಡು ಭೂಪತಿ ಚೇದಿ ನಪನೊಡನೆ ||81||

ರಾಗ ಭೈರವಿ ಏಕತಾಳ

ಧಿರುರೆ ನಪಾಲಕ ಕೇಳು | ಮಮ |
ಶರ ಪರಿಯರಿಯುವೆ ತಾಳು ||
ಪರಿಹರ ನೋಡಿಕೊ ನಿನ್ನ | ಕೊರ |
ಳರಿಯುವೆ ಮರೆಹೊಗು ಎನ್ನ ||82||

ಕುರುವರ ಹರಟುವೆಯೇಕೆ | ಈ
ತರುಣಿಯ ನಾಬಿಡೆ ಜೋಕೆ ||
ಧರೆಯೊಳು ಬದುಕುವ ಬಯಕೆ | ಇರೆ |
ಸರಿಯಲೊ ದೊರೆಯಳು ಈಕೆ ||83||

ಫಡ ಫಡ ನರಪತಿ ರಣದಿ | ಬಲಿ |
ಗೊಡುವೆನು ಭೂತಕೆ ಚಣದಿ |
ಹುಡುಗಿಯ ಬಯಸುತ ಸೆಣಸಿ | ಅಸು |
ಬಿಡುವುದು ಘನವೇ ಸಹಸಿ ||84||

ರಾಗ ಭೈರವಿ ಅಷ್ಟತಾಳ

ಎಲೆ ಕುರುಭೂಪ ಕೇಳು | ಎನ್ನಸ್ತ್ರವ |
ತಿಳಿದಿಲ್ಲ ನಿಲ್ಲು ತಾಳು ||
ಛಲ ಬಲುಹನು ನಿಲಿಸಲಿಕೆಸೆವಾಸ್ತ್ರವ |
ಗೆಲುವಂಥ ದಾರಿನೋಡು ||85||

ಎಲವೊ ಭೂವರ ನಿನ್ನನು | ಗೆಲ್ಲುವುದೊಂದು |
ಹುಲುಕಾರ್ಯ ಶರಗಳನು ||
ನೆಲ ನಭ ದಿಗುತಟ | ಗಳ ಭೇದ ತಿಳಿಯದ |
ವೊಲು ಅಲಗಸೆಯುವೆನು ||86||

ಅನಲಾಸ್ತ್ರ ದಮಘೋಷನು | ಮಂತ್ರಿಸಿ ಬಿಡೆ |
ವನ ಶರದಿಂ ತರಿದವನು ||
ಘನವೇಗ ತಿಮಿರಾಸ್ತ್ರವನು ಪೂಡೆ ಕಾಣುತ ||
ಲಿನ ಶರದಿಂ ಕಡಿದ ||87||

ಕಂದ

ಇಂತುಭಯರು ಹೆಣಗುತ್ತಿರೆ |
ನಂತರ ದಮಘೋಷನು ಕುರುಪಾಲಕನೆಸೆದಾ ||
ಮಂತ್ರ ಶರೌಘದಿ ತನು ಮರೆ |
ದಂ ತುಳಿಲಾಳ್ಗಳ್ ಬೆದರುತೆ ಸರಿದರು ರಣದಿಂ ||88||

ಭಾಮಿನಿ

ಅರಸ ಕೇಳೈ ಬಳಿಕ ಕೋಸಲ |
ಧರಣಿಪನ ಪರಿಭವಿಸಿ ಮತ್ಸ್ಯನ |
ನೊರಸಿ ಗೂರ್ಜರ ಗೌಳ ಮಾಳವ ಜನಪರನು ಗೆಲಿದು ||
ಮೆರೆದಿರಲು ಕಲ್ಪಾಂತ ರುದ್ರನ |
ತೆರದೊಳವನೊಳು ಸೆಣಸಲಳುಕಿದ |
ರರಸುಗಳು ತಲೆಗುತ್ತಿನಿಂದರು ಭಯದಿ ತತ್ತರಿಸೀ ||89||

ರಾಗ ಮಾರವಿ ಏಕತಾಳ

ಸುತ್ತಲು ನೋಡುತ ಪಾಂಡು ನಪಾಲಕ | ಪೃಥ್ವಿಪರನು ಕರೆದು ||
ಸತ್ವಪರಾಕ್ರಮವಿರಲೈತನ್ನಿರಿ | ಮತ್ರಾಣವ ತೋರ್ಪೆ ||90||

ನಪರದ ಕೇಳುತಲೆಂದರು ಕೈಮುಗಿ | ದುಪಚರಿಸುತಲಾಗ ||
ಕಪೆಯಿಂ ಕ್ಷಮಿಸುತಲಪರಾಧಂಗಳ | ಚಪಲಾಕ್ಷಿಯನೊರಿಸು ||2||

ಕಾದುವರ‌್ಯಾರೈ ನಿನೆ್ನೂಳು ಸರಿಸಮ | ಭೂದಿವ ಪಾತಾಳ ||
ಶೋಧಿಸೆ ಸಿಗರೈ ನಾವೀಗರಿತೆವು | ಭೂಧವ ತವ ಶೌರ್ಯ ||91||

ರಾಗ ಕೇತಾರಗೌಳ ಅಷ್ಟತಾಳ

ಧಾರುಣಿಯಧಿಪರ ವಿನಯವ ಕಾಣುತ |
ನಾರಿ ಕುಂತೀ ದೇವಿಯೂ ||
ಸಾರಿ ನಾಚುತ ಪಾಂಡು ರಾಜನ ಕೊರಳಿಗೆ |
ಹಾರವನಿಕ್ಕಿದಳು ||92||

ಒಡನೆ ಕುಂತೀಭೋಜ | ನುಡಿದನು ನಮಿಸುತ |
ಪೊಡವಿ ಪಾಲಕರೆಲ್ಲರು ||
ನಡೆದುದ ನೆಣಸಿದೆ | ನಡೆಸಿಕೊಡುವುದಯ್ಯ |
ಜಡಜಾಕ್ಷಿ ಪರಿಣಯವ ||93||

ವಾರ್ಧಕ

ರಾಜ ವರ್ಗದ ಇದಿರೆ ರಾಜೀವ ಮುಖಿ ಮದುವೆ |
ಈ ಜಗದ ಜನವೆಲ್ಲ ಸೋಜಿಗವ ಪಡುವಂತೆ |
ರಾಜಿಸಿತು ರಂಜಿಸಿತು ಜನವೆಲ್ಲ ಎಣೆಯಿಲ್ಲ ಮೂಜಗದಿ ಎಂದುಸುರಿತು ||
ರಾಜ ಜಾಮಾತನಿಗೆ ಬಳುವಳಿಯನಿತ್ತ ಬಹು |
ವಾಜಿ ಗಜ ರಥ ರತ್ನ ದಾಸ ದಾಸಿಯ ಲಕ್ಷ |
ರಾಜೀವ ಮುಖಿ ಸಹಿತ ಪಾಂಡು ರಾಜನು ಪುರವ ಪೊಕ್ಕನತಿ ವೈಭವದೊಳು ||94||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳೈ ಇತ್ತಲಧಿರಥ | ತರಳ ವಸುಷೇಣಂಗೆ ವಿದ್ಯೆಯ |
ನರುಹುವರೆ ಕರೆದೊಯ್ದು ದೂರ್ವಾ | ಸರಿಗೆ ನಮಿಸೀ ||95||

ದೇವ ಬಿನ್ನಹ ತನ್ನ ಪುತ್ರಗೆ | ಕೋವಿದನೆ ಶಾಸ್ತ್ರಾದಿ ವಿದ್ಯೆಯ |
ನೀವೊರೆಯ ಬೇಕೆನಲು ಮುನಿಪತಿ | ಭಾವಿಸಿದನು ||96||

ವನಜ ಮುಖಿಯಲಿ ತನ್ನ ಮಂತ್ರದಿ | ಇನ ತನೂಭವನಾದ ನೀತನು |
ಘನವ ಪಡೆವನು ಎನುತಲೊಪ್ಪಿದ | ಮುನಿಪನಾಗ ||97||

ತರಳ ವಸುಷೇಣಾಖ್ಯಗೊರೆದಿರೆ | ಸರುವ ಶಾಸ್ತ್ರಾಸ್ತ್ರಗಳನೊಂದಿ |
ಪರಮ ತೇಜಃ ಪುಂಜ ಭಾರ್ಗವ | ಬರಲು ನಮಿಸೀ ||98||

ರಾಗ ಮಾರವಿ ಏಕತಾಳ

ಬಂದಿಹ ಭಾರ್ಗವಗರ್ಘ್ಯವನಿತ್ತಾ | ನಂದೊಳುಪಚರಿಸೆ ||
ನಿಂದಿದನೆಲ್ಲವ ಕಂದನು ಕಾಣುತ | ಲೊಂದಿಸೆ ಭಾರ್ಗವಗೆ ||99||

ಬಾಲಾದಿತ್ಯನ ಹೋಲುವನಾರೈ | ಶೀಲ ಗುಣಾಢ್ಯನಿವ ||
ಬಾಲಕ ನಿನ್ನಭಿಲಾಷೆಯದೇನಿದೆ | ಪೇಳೆನೆ ಕಾಲ್ಪಿಡಿದು ||100||

ರಾಗ ಧನ್ಯಾಸಿ ಅಷ್ಟ

(ಧಾಟಿ : ಪಾಹಿ ಪಂಕಜದಳ ಲೋಚನ)

ಪಾಹಿ ಭಾರ್ಗವ ಕರುಣಾಕರ | ವಿದ್ಯಾ | ದೇಹಿ ಪರಾತ್ಪರ ಮುನೀಶ್ವರ ||
ಮಹ ಸುಗುಣಿ ಯಘ | ದಹನ ಸಜ್ಜನ ಪಾಲ ||ಪಲ್ಲವಿ||

ದುಷ್ಟನಾಶನ ಸಷ್ಟಿ ಪಾಲನ | ಮನ | ದಿಷ್ಟವ ಕರುಣಿಸು ಪಾವನ ||
ಶ್ರೇಷ್ಟ ಸರಳ ವಿದ್ಯೆ | ಕೊಟ್ಟು ಪೊರೆವುದೆನ್ನ || ಪಾಹಿ ||101||

ವಾರ್ಧಕ

ಬಾಲಕನ ಭಾವವನ್ನರಿತಾಗ ಪರಶುಧರ |
ಶೀಲ ಸೌಜನ್ಯಕುರೆ ಬೆರಗಾಗಿ ನುಡಿದನೆಲೆ |
ಬಾಲ ಪಾರ್ಥಿವರಿಂಗೆ ನಾಕಲಿಸೆ ವಿದ್ಯಮಂ ಕಾಲನಾಂ ಕ್ಷತ್ರಿಯರಿಗೆ ||
ಕೇಳುತಲಿ ಮಣಿದೆಂದ ಕ್ಷತ್ರಿಯಂ ತಾನಲ್ಲ |
ಕೋಲ ವಿದ್ಯವನರುಹಿ ಕಾಪಾಡು ವಿಪ್ರನಾಂ |
ಕೇಳುವವರಿಲ್ಲ ನೀನೇ ಗತಿಯು ಮರೆಹೊಕ್ಕೆನೆನಲೊಪ್ಪಿ ಕರೆದೊಯ್ದನು ||102||

ಭಾಮಿನಿ

ಮುನಿಪನನು ಬಹುವಿಧದಿ ಸೇವಿಸು |
ತನುನಯದಿ ಧನುರ್ವಿದ್ಯೆ ಕಲಿತನು |
ಜನಪ ಕೇಳೈ ಇತ್ತ ಭೀಷ್ಮನು ಮದ್ರ ಭೂಪತಿಯ ||
ಅನುಜೆಯನು ಪಾಂಡುವಿಗೆ ಪರಿಣಯ |
ವನು ವಿರಚಿಸಲು ಉಭಯ ಕಾಂತಾ |
ಮಣಿಗಳೊಡಗೂಡಿರಲು ವನಪಾಲಕರು ನಡೆ ತಂದು ||103||

ರಾಗ ಮುಖಾರಿ ಏಕತಾಳ

ಲಾಲಿಸ ಬೇಕು ಜೀಯ | ವರ ಪಾಂಡು ರಾಯ |
ಲಾಲಿಸ ಬೇಕು ಜೀಯ ||ಪಲ್ಲವಿ||

ವನದ ಕಾವಲ ಗೈವ | ವನು ವನದೊಳಗೆ ಸರ್ವ |
ವನ ಮಗ ಜಾಲಗಳ | ಘನ ತರದುಪಟಳ || ಲಾಲಿಸ ||104||

ನಾವು ಕಷ್ಟದಿ ನೆಟ್ಟು | ಕಾವಲಿರುತ ನೀರು ಬಿಟ್ಟು |
ಹೂವ ಹಣ್ಣಿನ ತರುವೂ | ನಾವೇನ ಹೇಳುವೆವೂ || ಲಾಲಿಸ ||105||

ಕೋಡಗಾನೆ ಹುಲಿ ಹರಿಣ | ಮಾಡಿದ ನೊರೆಯಲು ಕಠಿಣ ||
ಕಾಡೊಳು ಬೇಟೆಯ ನಾಡೂ | ಮಾಡೈ ವನ ಸುಖ ಬೀಡೂ || ಲಾಲಿಸ ||106||

ರಾಗ ಮಾರವಿ ಏಕತಾಳ

ಚರರಿಂತೆಂದುದ ಕೇಳುತಲವನಿಪ | ತ್ವರಿತದಿ ಶಬರರನು ||
ಕರೆಸಲು ತಾವೈತಂದಾ ರಾಜಗೆ | ಎರಗುತ ಪೇಳಿದರು ||107||

ಜನಪತಿ ಲಾಲಿಸು ಎಮ್ಮಯ ಸಹಸವ | ವನದೊಳು ತೋರುವೆವು ||
ಎನೆ ಮನ್ನಿಸಿ ಹಯವೇರುತ ಪೊರಟನು | ಧನುಶರ ಧರಿಸುತಲಿ ||108||

ರಾಗ ಭೈರವಿ ತ್ರಿವುಡೆತಾಳ

ಬಂದನಾಗ | ಬೇಟೆಗೈ | ತಂದನಾಗ ||ಪಲ್ಲವಿ||

ಬಂದನಾ ಜನಪಾಲ ಶಬರರ | ಸಂದಣಿಯನೊಡಗೂಡುತ |
ಹಂದಿ ನರಿ ಕಾಡ್ಕೋಣ ಮೊಲಗಳ | ತಂಡವನು ತರಿದಾಡುತ |
ಮಂದಿಗಳು ಬಿಲು ಝೇಂಕರಿಸಿ ಪೊದ | ರಿಂದ ಲೋಡುತಲಿರುತಿಹ |
ಗಂಧ ಮೂಷಿಕ ತೋಳ ಹುಲಿ ಕರಿ | ಮಂದೆಗಳ ಸವರುತ್ತ ತೋಷದಿ || ಬಂದ ||109||

ಭಾಮಿನಿ

ಜನಪ ಕೇಳೈ ನಪತಿಯಾದಿನ |
ಮನದಣಿಯೆ ಮಗಬೇಟೆಯಾಡಿದ |
ವನದಿ ಮುಂದೈತರುತ ಕಂಡನು ಉಭಯ ಹರಿಣಗಳ |
ಮನುಮಥನ ಕೇಳಿಯೊಳು ನೆರೆದಿಹ |
ಅನುವ ಕಾಣುತಲೊಂದೆ ಶರದಲಿ ||
ಹನನಗೊಳಿಸುವೆನುಭಯ ಮಿಗಗಳನೆನುತ ತೆಗೆದೆಚ್ಚ ||110||

ವಾರ್ಧಕ (ಅರ್ಧ)

ಶರಸೋಂಕಲಾಕ್ಷಣದಿ ಮುನಿರೂಪ ತಾಳುತ್ತ |
ತರುಣಿ ಹಾ ಹಾ ರಮಣಿಯೆನುತೊರಗಿತಾ ಮಗವು |
ತರುಣಿ ರೂಪವ ತಾಳ್ದುದಿನ್ನೊಂದು ಬೆರಗಾಂತು ನಪನಿರಲು ರೋದಿಸಿದಳು ||

ರಾಗ ನೀಲಾಂಬರಿ ಆದಿತಾಳ

ಹಾ ಕಾಂತಾ ಯನ್ನಗಲಿದೆಯ | ಅಯ್ಯಯ್ಯ ಪ್ರಿಯನೆ |
ಏಕೆ ಮುಚ್ಚಿಹೆ ಕಣ್ಣುಜೀಯ ||
ರಾಕಾ ಸುಧಾಕರ ಪ್ರಿಯ | ಅಯ್ಯಯ್ಯ ಮೊಗದ |
ಆ ಕಾಂತಿ ಕಂದಿತಯ್ಯೋ ||111||

ಜನಪನೆನ್ನಯ ಪತಿಯ | ಕೊಂದೆಯ ಅಯ್ಯ |
ವನದಿ ಕಿಂದಮ ಮುನಿಯು ||
ಜನುಮ ಕೆಟ್ಟಿತು ಎನ್ನಯ | ಗೈವುದೆ ಇಂತು |
ಹನನ ನಿರಪರಾಧಿಯ ||112||

ಮಿಗೆ ತಪದೊಳಗಿಹ ಮುನಿಯ | ಸಮಾಧಿಯಿಳುಹೆ |
ಬಗೆದು ಬೇಡಲು ರತಿಯ ||
ಹಗಲು ಮನುಜ ಭೋಗವು | ನಿಷಿದ್ಧವೆಂದು |
ಮಗ ರೂಪ ತಾಳಿದೆವು ||113||

ರತಿ ಕಾಲದೊಳಗಿರೆ ಪತಿಯ | ಕೊಂದೆಯ ಪಾಪಿ |
ಕ್ಷಿತಿಯಲಿ ನಿನ್ನಯ ಸತಿಯ ||
ಜೊತೆಯ ಸೇರುತ ರಮಿಸೆ | ಒದಗಲಿ ನಿನಗೆ |
ಮತಿಯು ಎನ್ನುತ ಶಪಿಸೆ ||114||

ಕಂದ

ಸತಿಯಿಂತಳಲುತ್ತಾ ಪತಿ |
ಚಿತೆಯೊಳ್ಬಿಳ್ದುರಿವೋದಳ್ ಕಾಣುತ ನಪನಾ ||
ಅತಿ ವೆಥೆಯೊಳು ಬಳಲುತೆ ಪಶು |
ಪತಿ ಶಿವ ಶಂಕರ ಇನಿತೊದಗಿತೆ ವಿಧಿಯೆನುತಂ ||115||

ರಾಗ ಆನಂದ ಭೈರವಿ ಏಕತಾಳ

ಸತ್ಯದಿಂದ ಪೊಡವಿಯಾಳ್ದೆ | ಪುತ್ರರಿಲ್ಲದೆಂತು ಬಾಳ್ವೆ |
ಅರಿಯೆನೂ | ವ್ಯಥೆಯ | ಮರೆಯೆನು ||116||

ದೇಶ ಕೋಶವೇಕೆಯನಗೆ | ಈಶ ದಯವ ತೊರೆದಗ್ರಜಗೆ |
ಒರೆವೆನು | ವನಕೆ | ಸರಿವೆನೂ ||117||

ರತಿಯ ಸಮನ ಸತಿಯರುಭಯ | ವ್ಯಥೆಯ ತಾಳಿ ಬಾಳ್ವರೆಂತು ||
ನೊಂದನೂ | ಪುರಕೆ ಬಂದನೂ ||118||

ರಾಗ ಕಲ್ಯಾಣಿ ಮಟ್ಟೆತಾಳ

ಬೇಟೆಗಡವಿಗಾನು ನಿನ್ನೆ | ಅಣ್ಣದೇವ || ಪೋಗೆ |
ಬೇಟದುಭಯ ಮಗಕೆ ಎಸೆದೆ | ಅಣ್ಣದೇವ ||119||

ಮುನಿಪ ಕಿಂದಮಾಖ್ಯ ಸಾಯೆ | ಅಣ್ಣ ದೇವ || ಸತಿಯು |
ಕನಲಿ ಶಾಪವಿತ್ತಳಯ್ಯ | ಅಣ್ಣದೇವ ||120||

ಸತಿಯ ಬೆರೆಯೆ ಮತಿಯು ಬರಲಿ | ಅಣ್ಣದೇವ || ಎಂದು |
ಚಿತೆಯನೇರ್ದು ನಾಕ ಸೇರ್ದ | ಳಣ್ಣ ದೇವ ||121||

ಮಲಿನವಾಯ್ತೆ ವಿಮಲ ಕುಲವು | ತಮ್ಮ ತಮ್ಮ || ಮುಂದೆ |
ನೆಲಕೆ ಗತಿಯದಾರೊ ವಿಧಿಯೆ | ತಮ್ಮ ತಮ್ಮಾ ||122||

ಪಾವನಾತ್ಮ ಜೀವದನುಜ | ತಮ್ಮ ತಮ್ಮ | ಎಮ್ಮ |
ಕಾವರಾರು ತಾಳ್ವೆನೆಂತು | ತಮ್ಮ ತಮ್ಮಾ ||123||

ಅಂಧನೆನ್ನ ಕಣ್ಣಾಗಿದ್ದೆ | ತಮ್ಮ ತಮ್ಮ || ಇಲ್ಲ |
ಮುಂದೆ ರಾಜ್ಯಕೆನಗೆ ಗತಿಯು | ತಮ್ಮ ತಮ್ಮಾ ||124||

ವಾರ್ಧಕ (ಅರ್ಧ)

ಅಂಧಕನ ಬೇಗುದಿಯ ಸಂತವಿಸುತೊಪ್ಪಿಸಿ ವ |
ಸುಂಧರೆಯ ಅಧಿಕಾರ ಸರ್ವಸ್ವವಂ ಬಳಿಕ |
ಸುಂದರಾಂಗಿಯರಿಂಗೆ ತಿಳುಹಿ ವನವಾಸಮಂ ಕೈಕೊಳಲು ಬರುವೆವೆನುತಾ ||

ರಾಗ ತೋಡಿ ಅಷ್ಟತಾಳ

ಸತಿಗೆ ಪತಿಯು ದೈವವಲ್ಲೆ | ಕ್ಷಿತಿಯೊಳಗಲಿ ಬಾಳಲಾರೆ |
ಗತಿಯು ಮತಿಯು ಬೇರಿಲ್ಲೆಮಗೆ | ಜೊತೆಯೊಳ್ಬರುವೆವು ||125||

ಪಾದಸೇವ ಭಾಗ್ಯಕ್ಕಿಂತ | ಮೋದವುಂಟೆ ಪೆರತು ಸತಿಗೆ |
ಖೇದ ಮರೆತು ಜನುಮ ಸಫಲ | ಸಾಧಿಸುವೆವು ||126||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭೂಪ ಸತಿಯರ ಮಾತಲಾಲಿಸಿ | ತಾಪ ಮರೆಯುತಲವರ ಸಹಿತಲೆ |
ತಾಪಸರ ಪರಿವನವ ಸೇರಿದ | ಭೂಪ ಕೇಳು ||127||

ಹಿಮಗಿರಿಯ ಶತ ಶಂಗದೆಡೆಯಾ | ಶ್ರಮವ ರಚಿಸುತ ಗೈಯೆ ತಪವನು |
ಸುಮುಖಿಯರು ಸೇವಿಸುತಲಿರ್ದರು | ರಮಣನನ್ನು ||128||

ಇತ್ತಲಾ ವಸುಷೇಣ ನಿಯಮದಿ | ನಿತ್ಯ ಗುರು ಶುಶ್ರೂಷೆಗಯ್ಯತ |
ಉತ್ತಮದ ಧನುರ್ವಿದ್ಯೆ ಕಲಿತನು | ಭಕ್ತಿಯಿಂದ ||129||

ಅರಣಿಕುಶ ಸಮಿಧೆಗಳ ತರುವರೆ | ತೆರಳಿದವ ಸಂಗ್ರಹಿಸಿ ಬೇಗನೆ |
ಪರಮ ಉತ್ಸಾಹದಲಿ ಬೇಟೆಯ | ನಾಡತೊಡಗೆ ||130||

ರಾಗ ಭೈರವಿ ತ್ರಿವುಡೆತಾಳ

ನಡೆದೆನಾಗ | ಕಾಡೊಳು | ನಡೆದಾಗ ||ಪಲ್ಲವಿ||

ನಡೆದನಾ ಕಡು ವೇಗದಿಂದಲಿ |
ಕೆಡಹುತಾ ಶರವೆಚ್ಚು ಖಗಗಳ |
ಗಡಣವನು ಹುಲಿ ಶರಭ ಸಿಂಹವ |
ಮಡುಹಿ ವೀರಾವೇಶ ತಳೆಯುತ || ನಡೆದ ||131||

ಭಾಮಿನಿ

ಅರಸ ಕೇಳಾ ತರಳ ಮಗವೆಂ |
ದರಿದು ಎಸೆದಿಹ ಬಾಣದಿಂದಲಿ |
ಹರಣ ನೀಗುತ ಧರಣಿಗೊರಗಿತು ಗೋವು ಗಾಲವನ ||
ಹರಹರಾ ಗೋವಧೆಯು ಘಟಿಸಿತೆ |
ಪರಮ ಪಾತಕಿಯಾದೆ ಶಿವಶಿವ |
ಗುರುವರಗೆ ಮೊಗವೆಂತು ತೋರುವೆನೆನುತ ದುಃಖಿಸಿದಾ ||132||

ಕಂದ

ತುರುವನ್ನರಸುತ ಬರುತಿರೆ |
ಧರೆಗೊರಗಿದ ಪರಿಯರಿಯುತ ಗಾಲವ ಮುನಿಪಂ ||
ನೆರೆ ಪರಿತಪಿಸುತಲಿರುತಿಹ |
ತರಳನ ನಿರುಕಿಸೆ ಕೆರಳುತ ಹರಿ ತೆರನೊರೆದಂ ||133||

ರಾಗ ಮಾರವಿ ಏಕತಾಳ

ಎಲ ಎಲ ಪಾಪಿಯೆ ಕೊಂದೆಯ ಗೋವನು | ಹೊಲೆಗೆಲಸವಗೈದು ||
ಸಲೆ ಪೂಜಾರ್ಹದ ಪರಮ ಪವಿತ್ರಾ | ಕಳ ಕೊಲೆ ಬೆಂಬಿಡದೈ ||134||

ಧರ್ಮಾಧರ್ಮವನರಿಯದ ಮೂಢ ಕು | ಕರ್ಮವಗೈದೆಯಲ ||
ದುರ್ಮತಿ ಶಸ್ತ್ರಾಭ್ಯಾಸದ ಮದದಲಿ | ಕ್ಷಮೆ ಭಾರಕನಾದೆ ||135||

ಜೀವನ್ಮರಣದ ಹೋರಾಟದಲಿರೆ | ಭೂವನಿತೆಯು ನಿನ್ನ ||
ಧಾವಿಪ ರಥವನು ಕಚ್ಚುತ ಹಿಡಿದರೆ | ಸಾವನು ಪಡೆ ನೀನು ||136||

ವಾರ್ಧಕ

ಶಾಪದಾ ನುಡಿಕೇಳಿ ವಸುಷೇಣ ಮರುಗುತನು |
ತಾಪದಿಂ ಗುರುವಿನೆಡೆ ಬರಲಿತ್ತ ವನದೊಳಗೆ ||
ತಾಪಸರ ನಡುವಿರ್ದ ಪಾಂಡು ನಪ ಮರುಗುತಿರೆ ಸುತರಿಲ್ಲ ತನಗೆನುತಲಿ ||
ತಾಪದಗ್ಧನು ಮೊದಲೆ ಸುತಹೀನ ಗತಿಯಿರದು |
ಪಾಪಿಯಾದೆನು ಜನ್ಮ ಸಾಫಲ್ಯವಿರದೆಂದು |
ತಾಪ ಪಡುತಿರೆ ಮುನಿಗಳೊರೆದರು ನಿಯೋಗದಿಂ ಪಡೆಯೆನಲು ಕರೆದು ಸತಿಯ ||137||

ರಾಗ ಕೇತಾರಗೌಳ ಝಂಪೆತಾಳ

ಏಣಾಕ್ಷಿ ಕುಂತಿ ಬಾರೆ | ಮನವ್ಯಾಕು | ಲಾನೊರೆವೆ ಕೇಳು ನೀರೆ ||
ಮಾನವಗೆ ಸುತರಿಲ್ಲದೆ | ಗತಿದೊರಕದೇನೆಂಬೆ ನಾರಿಯಿದಕೆ ||138||

ಮುನಿಗಳೆಂಬರು ನಿಯೋಗ | ದಿಂ ಪಡೆದ | ತನಯರಿಂ ನಾಕ ಭೋಗ ||
ಸನುಮತವು ಧರ್ಮಶಾಸ್ತ್ರ | ಏನೆಂಬೆ | ಯೆನೆ ನುಡಿದಳ್ ಸತಿ ಯಥಾರ್ಥ ||139||

ನಾ ಧರ್ಮ ಮೀರೆನೆನುತ | ನಿಯಮವನು | ಗೈದಿರುವೆ ಕೇಳು ಪ್ರೀತ ||
ಹೇ ಧವನೆ ನಿನ್ನಾಜ್ಞೆ ಮತ್ತು | ಧರ್ಮವಿರೆ | ಆದರಿಪೆ ಶಿರದಿ ಹೊತ್ತು ||140||

ದ್ವಿಜ ದಿವಿಜ ಪತಿ ಸಹಜರಿಂ | ಪಡೆಯ ಕ್ಷೇ | ತ್ರಜರೆನಿಪ ಕಾರಣದಿ ನೀಂ ||
ಸುಜನ ಸಮ್ಮತ ಧರ್ಮದಿ | ಪಡೆಯೆನಲು | ನಿಜ ಪತಿಗೆ ಸತಿಯು ಎರಗಿ ||141||

ಅರಿಕೆ ಲಾಲಿಪುದು ನಾಥಾ | ದೂರ್ವಾಸ | ಪರಮ ಮಂತ್ರಗಳನಿತ್ತಾ ||
ಕರೆಯಲಾ ಮಂತ್ರದಿಂದ | ಕಾಮಿತವ | ಸುರರು ಬಂದೀವರೆಂದ ||142||

ದೇವನೊಲುಮೆಮಗೆಯಿಹುದು | ನೆನೆಧರ್ಮ | ದೇವನನು ಪಡೆಸುತನನು ||
ಪಾವನಾತ್ಮನ ಕರುಣದಿ | ಜನಿಸಲಿಹ | ಭೂವಲಯ ವಂದ್ಯ ನಿಜದಿ ||143||

ಕಂದ

ಕುಂತಿಯು ಭಕ್ತಿಯೊಳ್ಮಂತ್ರದಿ |
ಅಂತಕನಂ ಧ್ಯಾನಿಸೆ ಒಲಿದಾಕ್ಷಣದೊಳಗಂ ||
ಕಂತುವಿನಂತೆಸೆಯುತ್ತಂ |
ಕಾಂತೆಯಭೀಷ್ಟವ ಸಲಿಸುತೆ ಮಾಯಕವಾದಂ ||144||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸಕೇಳೈ ಇತ್ತ ಭಾರ್ಗವ | ಪರಮ ಶಿಷ್ಯನ ಸೇವೆಗೊಲಿಯುತ |
ಲೊರೆದನತಿಶಯ ವಿದ್ಯಗಳನತಿ | ಹರುಷದಿಂದ ||145||

ಚಾಪವಿದ್ಯೆ ವ್ಯೆಹ ರಚನೆಗ | ಳಾ ಪರಂತಪ ಸಕಲ ಶಸ್ತ್ರ |
ಚಾಪಯಂತ್ರ ದೊಳೆಸೆವ ಮಂತ್ರಿಪ | ಕತ್ತರಿಸುವ ||146||

ಪರಮ ಶಿಷ್ಯನೆ ಸಕಲ ವಿದ್ಯಾದಿ | ಪರಿಣತನು ನೀನಾದೆಯಗಲಲು |
ಭರಿತ ವೆಸನಗಳಾಪುದೆನಗೆನೆ | ಕರವ ಮುಗಿದೂ ||147||

ದೇವ ಗುರುಪಾದವನು ಸೇವಿಸಿ | ಪಾವನಾತ್ಮಕನಪ್ಪೆಯನುಮತಿ |
ಯೀವುದೆನೆ ಸಂತಸದಿ ನುಡಿದನು | ಭಾವ ಶುದ್ಧ ||148||

ಮಗನೆ ನಿನ್ನಯ ಚಿತ್ತಶುದ್ಧಿಯ | ಪೊಗಳಲಳವೇ ಮೆಚ್ಚಿದೆನು ನಾ |
ಸೊಗದಿ ನಿದ್ರಿಪೆ ರಚಿಸು ತಳಿರ್ವಾ | ಸಿಗೆಯನೆಂದಾ ||149||