ವಾರ್ಧಕ (ಅರ್ಧ)

ಮುನಿ ಋಷ್ಯ ಶಂಗರಾಮಂತ್ರಣವ ಸ್ವೀಕರಿಸಿ |
ಧನು ಶರವ ಧರಿಸುತ್ತ ಪೊರಟು ಬರೆ ವಸುಷೇಣ |
ವನದತುಳ ಪ್ರಾಕತಿಕ ಶೋಭೆಯಂ ಕಾಣುತತಿ ವಿಯದಿಂದೆರಗಿ ಮುನಿಗೆ ||210||

ರಾಗ ಮಧುಮಾಧವಿ ತ್ರಿವುಡೆತಾಳ

ಕಂದ ಬಾರೈ ಇನತನೂಭವ | ಇಂದು ರಕ್ಕಸನುಪಟಳದಿ ನಾವ್ |
ಬೆಂದಿಹೆವು ನೀ ಸುಖವನೊದಿಗಿಸು |
ಕೊಂದು ಖಳನನು ವೇಗದಿ ||211||

ಎಂದು ನೇಮಿಸೆ ರವಿಜ ತಾ ಬಲ | ವಂದು ಮುನಿಗರೆಗುತ್ತ ಪರಕೆಯ |
ಹೊಂದಿ ನಡೆದನು ಖಳನನರಸುತ |
ಮುಂದೆ ಮುಂದಕೆ ವಹಿಲದಿ ||212||

ಭಾಮಿನಿ

ಜನಪ ಕೇಳಾ ವನದೊಳು ಜರಾ |
ಮನ್ಯು ದನುಜನು ನೆಲಸಿ ಮುನಿಜನ |
ರನ್ನು ಕಂಗೆಡಿಸಿರುತ ಬೇಟೆಯೆನುತ್ತ ನಡೆತಂದು ||
ವನದಿ ನೆಲಸಿಹ ಹಂದಿ ಕಾಳ್ಮಿಗ |
ಗಣವ ಸಂಹರಿಸುತ್ತ ಬರುತಿರೆ |
ಧನುಶರವ ಪಿಡಿದತ್ತ ಸುಳಿದಿಹ ತರಳನನು ಕಂಡು ||213||

ರಾಗ ಮಾರವಿ ಅಷ್ಟತಾಳ

ಆರೆಲೊ ತರಳ | ಬಂದಿಹೆ ವನ | ಕಾರೆಲೊ ತರಳ  ||ಪಲ್ಲವಿ||

ಆರೊ ಮಾರಿಯ ಹಸಿದ ಹೊತ್ತಿಗೆ | ಸಾರಿಬಂದಿಹ ಕುರಿಯ ತೆರದಲಿ |
ಭೂರಿಮದಗೊಬ್ಬಿನಲಿ ಸಾಹಸ | ತೋರಿ ಧನುಶರ ಪಿಡಿದು ಬಂದವ ||  ಆರೆಲೊ ||ಅ.ಪ.||

ಎಲೊ ನರಮಾಂಸವ ಮೆಲದೆ ದಿನ | ಹಲವಾಯ್ತು ನಿನಗಾಗಿ ಸುಳಿದೇ ||
ಗಳವ ಕಡಿಯುತ ರಕ್ತ ಹೀರುವೆ | ಎಲುಬು ಮಾಂಸವ ಹುರಿದು ಮುಕ್ಕುವೆ |
ಹುಲು ಮನುಜ ನೀನೆನ್ನ ತುತ್ತಿಗೆ | ಸುಳಿದು ಸಿಲುಕಿದೆ ಭಲರೆ ಭಾಪುರೆ || ಆರೆಲೊ ||214||

ರಾಗ ಮಾರವಿ ಏಕತಾಳ

ದನುಜನೆ ಕುಳೆಲೊ ಇನಿತೇಕೊರಲುವೆ | ಘನತರ ಪೌರುಷವ |
ವನದೊಳು ತಪವಿಹ ಮುನಿಗಳ ಬೆದರಿಸಿ | ಕೆಣಕಿದ ಪರಿಯಲ್ಲ ||215||

ಬೆಡಗಿನ ನುಡಿಗಳ ಬಡಬಡಿಸದೆ ನಡೆ | ಕಡುಹಿನ ನುಡಿಯೇಕೆ ||
ಬಡ ಕಿತ್ತಡಿಗಳ ನುಡಿಕೇಳುತ ಬರೆ | ಕೆಡುವೆಯ ಫಡ ಜೋಕೇ ||216||

ರಾಗ ಘಂಟಾರವ ಅಷ್ಟತಾಳ

ಬಾರೆಲೋ ಜರಾಮನ್ಯುವೆನ್ನೊಳು ಶೌರ್ಯ |
ತೋರಿದಡೆ ಶಿರಕಡಿದು ಕಾಲನ |
ಊರ ದಾರಿಯ ಪಿಡಿಸುವೆ ||217||

ಕುಟ್ಟಿ ಕೊಲ್ಲುವೆನೀಗಲೆ ತರಳನೆ |
ಅಟ್ಟಿರುವ ಮುನಿಕುಲವತರಿವೆನು |
ಸುಟ್ಟು ಸೂರೆಯ ಗೊಂಬೆನು ||218||

ಎಂದ ಮಾತನು ಕೇಳುತ್ತಲಧಿರಥಿ |
ಅಂಧಕಾರಿಯ ತೆರದಿ ಗರ್ಜಿಸಿ |
ಸಂಧಿಸಿದ ಕೂರ್ಗಣೆಯನು ||219||

ಭಳಿರೆ ಭಾಪುರೆ ಪರಮಸಾಹಸಿ ನಿನ್ನ |
ತಲೆಯ ಕಡಿದೀಡಾಡಿ ಕಾಲನ |
ನಿಳಯಕಟ್ಟುವೆ ನೋಡೆಲೋ ||220||

ಭಾಮಿನಿ

ಭಾಪೆನುತ ರವಿಜಾತ ವಜ್ರವ |
ಕೋಪದಿಂದಿಸೆದವನ ವಧಿಸಿದ |
ತಾಪಸನ ಬಳಿಗೈದಿ ನಮಿಸಲು ಎತ್ತಿ ಹರಸಿದನು ||221||

ರಾಗ ಕಾಂಭೋಜಿ ಝಂಪೆತಾಳ

ಬಲವಂತ ನೀನೆನಿಸಿ ಭುವಿಯೊಳಗೆ ಪೆಸರಾದೆ |
ಕಲಿಗಳೊಳಗಿದಿರಿಲ್ಲ | ಮೆಚ್ಚಿದೆನು ರವಿಜ ||
ಖಳನ ಕೊಂದೆಮ್ಮ ತಪ | ನಿಳಯವನು ರಕ್ಷಿಸಿದೆ |
ಒಲಿದೀಗ ನಾನಿನಗೆ ವರವೀವೆ ಕೇಳು ||222||

ಆದರಣೆ ಬುಧರ, ನೂರೈದು ಮಕ್ಕಳು, ಸತತ |
ಬೇಡಿದುದ ತಾನೀವ ವರಚಾಗ ಬುದ್ಧಿ ||
ಭೂಧವನ ಸಖತನವು | ಮಾಧವನ ದರುಶನವು |
ಕಾದಿ ಮಡಿವೆಡೆಯಹುದು ವೀರವಿಖ್ಯಾತ ||223||

ಕಂದ

ಇಂತಾ ಮುನಿಪತಿ ಹರಸಲು |
ಸಂತಸಿಂದೆರಗುತ ರವಿಜನು ಬೀಳ್ಕೊಳುತಾಗಂ ||
ಸ್ವಂತಾಶ್ರಮಕೈದಿರೆ ಸುರಪಾ |
ಲಂ ತಳೆಯುತ ಬುಧವೇಷವ ನಡೆತರುತೆಂದಂ ||224||

ರಾಗ ದೇಶಿ ಅಷ್ಟತಾಳ

ಕೇಳಯ್ಯ | ವೀರ | ಕೇಳಯ್ಯ ||ಪಲ್ಲವಿ||

ಕೇಳಯ್ಯ ವೀರ ನಾ ಪೇಳುವ ಮಾತ ||
ಕೇಳಿ ಬಂದೆನು ನಿನ್ನ ಬಳಿಗೆ ವಿಖ್ಯಾತ  ||ಅ.ಪ.||

ಹಿಂದೆ ದಧೀಚಿ ಶಿಬಿ ನಪವರರು |
ಬಂದರು ಕಷ್ಟವ ದಾನ ಗೈದಿಹರು ||
ಇಂದು ನೀನವರಿಗೆ ಕಿರಿಯನಲ್ಲೆಂದು ||
ಬಂದಿಹೆ ಮನದಿಷ್ಟ ಕೊಡು ದಯಾಸಿಂಧು ||225||

ಕೊಡುವೆಯಾದರೆ ಕೊಡು ಕರ ನಂಬುಗೆಯ |
ನುಡಿವೆನು ನಂತರ ಎನೆ ರವಿ ತನಯ ||
ಕೊಡಲು ನಂಬುಗೆಯ ಭೂಸುರನು ಸಂತಸದಿ |
ಕೊಡು ಕವಚವ ತರಿದೆನಗೆನೆ ಭರದಿ ||226||

ಭಾಮಿನಿ

ಪೃಥ್ವಿಸುರನಿಂತೆನಲು ರವಿಜನು |
ಮತ್ತೆ ಯೋಚನೆಗೈದ ತನ್ನೊಳು |
ಮಿಥ್ಯ ಭೂಸುರನಿವನು ಯನ್ನನು ಪರಿಕಿಸಲು ಬಂದ ||
ಉತ್ತಮನು ಇವನಾರೆಯಾಗಲಿ |
ಕತ್ತರಿಸಿ ಕವಚವನು ಕೊಡವೆನೆ |
ನುತ್ತ ಧಾರೆಯನೆರೆದ ದಾನಿಗಳರಸ ರವಿಜಾತ ||227||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮತ್ತೆ ಸೂತಜ ಹಿರಿದು ಖಡ್ಗವ |
ಕತ್ತರಿಸಿ ತೆಗೆದಾಗ ಕವಚವ |
ನಿತ್ತ ಸಹನೆಯನೇನೆನಲಿ ನೊರೆ | ನೆತ್ತರೊಸರೆ ||228||

ಭಾಪು ಮಝರೇ ದಾನಶೂರನೆ |
ಈ ಪರಿಯೊಳಿತ್ತವರ ಕಾಣೆನು |
ತಾಪ ಗಾಯಗಳ್ಮಾಣಲೆನ್ನುತ | ತಾ ಪರಸಿದ ||229||

ದಾನಿ, ನಿನ್ನ ಪರೀಕ್ಷಿಸಿದೆ ಸುರ |
ಪಾನು ಮೆಚ್ಚಿದೆನಿದಕೊ ಶಕ್ತಿಯ |
ನೀನೆಸೆಯೆ ಕೊಲುತೊಬ್ಬನನು ಬಹು | ದೆನ್ನ ಬಳಿಗೆ ||230||

ಎತ್ತಿದನು ಮಣಿದವನ, ಕರ್ಣ, ವಿ |
ಕರ್ತನಾದಿಯ ನಾಮದಲಿ ಮೆರೆ |
ಯುತ್ತ ಬಾಳೈ ಕಂದನೆನ್ನುತ | ಮಾಯವಾದ ||231||

ಇತ್ತ ಕರ್ಣನು ಪರ್ಣಶಾಲೆಯ |
ನಿತ್ತು ಬುಧರಿಗೆ, ಸಿಂಧುದೇಶಕೆ |
ನುತ್ತ ಬರೆ ನಪ ಪೇಳ್ದ ಪೋಗಿಭ | ಪುರಿಗೆ ನೀನೂ ||232||

ಸುತ ಜಯದ್ರಥನಿಹನು ವಿದ್ಯೆಯ |
ಜತೆಯೊಳ್ ನೀ ಕಲಿಯೆನಲು ಬಂದಿರೆ |
ಕ್ಷಿತಿಪ ಸುತ ದುಃ | ಶ್ಶಾಸ ಬೇಟೆಗೆ | ನಡೆದ ವನದಿ ||233||

ರಾಗ ತುಜಾವಂತು ಏಕತಾಳ

ಬಂದ ದುಶ್ಶಾಸ ಬೇಟೆಗೆಂದು | ಆನಂದದಿಂದ |
ಬಂದಾ ದುಶ್ಶಾಸ ಬೇಟೆಗೆಂದು  ||ಪಲ್ಲವಿ||

ಬಂದನಾಗ ಮಗ | ವಂದವ ಹುಡುಕುತ |
ಮುಂದರಿಯುತ ಶರ | ಸಂಧಿಸಿ ವನದೊಳು || ಬಂದಾ ||ಅ.ಪ||

ಕರಿ ಶಾರ್ದೂಲ ವರಾಹವ ಹುಲಿಗಳ |
ಹರಿಣಂಗಳ ತರಿದೊರಗಿಸಿ ಧರೆಯೊಳು || ಬಂದಾ ||234||

ಭಾಮಿನಿ

ಕಾಡಿನೊಳು ದುಶ್ಶಾಸ ಬೇಟೆಯ |
ನಾಡುತಾಡುತ ಮುಂದೆ ಬರುತಿರೆ |
ನೋಡಿದನು ಕೇಸರಿಯನಾಕ್ಷಣ ಧನುವನೊದರಿಸುತ ||
ಜೋಡಿಸಿದಶರಗಳನು ಎಸೆಯುತ |
ಲೋಡಿಸುತ ಬರುತಿರಲು ಕೇಸರಿ |
ಗಾಢ ಗರ್ವದಿ ಕೆರಳಿ ಗರ್ಜಿಸತೊಡಗಿತೇನೆಂಬೆ ||235||

ರಾಗ ಮಾರವಿ ಏಕತಾಳ

ಕರಕರ ದಂತವ ಕಡಿಯುತ ಕೇಸರಿ | ಧರೆ ನಡುಗುವ ತೆರದಿ ||
ಕೆರಳುತ ಶರಗಳ ಮುರಿಯುತ ಗರ್ಜಿಸಿ | ತಿರುಗಿತು ರೋಷದಲಿ ||236||

ಸಾಣೆಯಶರಗಳನೆಸೆಯಲು ಕೇಸರಿ | ಮಾಣದೆ ಮುಂದರಿಯೆ ||
ಕಾಣುತ ಮುಸುಲ ಭಶುಂಡಿಯ ಮುದ್ಗರ ಜಾಣತನದೊಳೆಸೆದ ||237||

ಶರಗಳ ಲಕ್ಷಿಸದೆರಗಲು ಬರುತಿಹ | ಹರಿಯನು ಕಾಣುತಲಿ ||
ಥರಥರ ನಡುಗಿದ ಗತಿಯೇನೆನುತಲಿ | ಮರಣದ ಭೀತಿಯಲಿ ||238||

ಅನಿತರೊಳಲ್ಲಿಗೆ ಹರಿ ಮೊರೆಯಾಲಿಸು | ತಿನಜನು ನಡೆತಂದು ||
ಕನಲಿದ ಹರಿಯನು ಬೆದರಿದ ನಪತನು | ಜನ ಇರವನು ಕಂಡು ||239||

ಶರಗಳನೆಸೆಯುತ ಹರಿಯೊಳು ಕಾದಿದ | ಪರಿಗಳನೇನೆಂಬೆ ||
ಪರಿಪರಿ ಗರ್ಜಿಸಿ ಯೆರಗಲು ಬರುತಿಹ | ಹರಿಯನು ತಡೆದೆಂದ ||240||

ರಾಗ ಭೈರವಿ ಏಕತಾಳ

ಭಳಿಭಳಿರೆಲೆ ಬಡಸಿಂಹ | ಕಾ | ಡೊಳು ಬಡಮಗ ಹಿಡಿತಿಂಬ ||
ಬಲು ತರ ಹೆಮ್ಮೆಯ ಬಳಸೀ | ಬರೆ | ಕೊಲುವೆನು ಶರಗಳ ಚಲಿಸೀ ||241||

ಮೊರೆಮೊರೆದಳಲುವದೇಕೆ | ಮುಂ | ದರಿದರೆ ಕೊಲುವೆನು ಜೋಕೆ ||
ಥರ ಥರ ಶರಗಳ ಸುರಿದ | ಕೇ | ಸರಿ ಬಾಲವ ತುಂಡರಿದ ||242||

ಕೆರಳಿತು ಹರಿ ಹರನಂತೆ | ಮುಂ | ಬರಿಯಿತು ವರ ಖಗನಂತೆ ||
ಸರಿದನು ತಪ್ಪಿಸುತಾಗ | ಬಲು | ಶರದಿಂ ಕೊಂದನು ಬೇಗ ||243||

ಭಾಮಿನಿಅರ್ಧ

ಹರಿಹರಣವಳಿಯಲ್ಕೆ ಕರ್ಣನ |
ಸರಿಸಕೈದುತೆ ನುಡಿದನು ಭಯ |
ಭರಿತ ಭಕ್ತಿಯಲೊಂದಿಸುತ ದುಶ್ಶಾಸನನು ತಾನೂ ||

ರಾಗ ಕಾಂಭೋಜಿ ಝಂಪೆತಾಳ

ಆರು ನೀನೆಲೆ ವೀರ ಸಾರಿರುವುದೆಲ್ಲಿಂದ |
ಭೂರಿ ಕರುಣಾನ್ವಿತನೆ ಗುಣನಿಧಿ ನಿನ್ನ ||
ಚಾರು ಕುಲ ಶೀಲಾದಿ ತಿಳಿಯಲಾಶಿಸುವೆ |
ಸಾರಿಯುಳುಹಿದೆ ಕರುಣದಿ ಈಗಲೆನ್ನ ||244||

ಕುರುಕುಲಾಂಬುಧಿ ಚಂದ್ರ ದುರಿಯೋಧನನ ತಮ್ಮ |
ಕರೆವರೈ ದುಶ್ಶಾಸನಾಖ್ಯನೆಂದೆನುತಾ ||
ಗುರು ಕುಲದಿ ವಿದ್ಯೆಯನು ಪಠಿಸುತಿರೆ ನಾನೋರ್ವ |
ತೆರಳಿಬಂದೆನು ಉತ್ಸಹದಿ ಬೇಟೆಗೆನುತ ||245||

ಊರೇನು ಕಾಡೇನು ನತದಷ್ಟ ನಾನೊಬ್ಬ |
ಸಾರಿದೆನು ಗತಿಹೀನ ಊರೂರತಿರುಗಿ ||
ಭೂರಿಕಷ್ಟವ ಹೊಂದಿ ಜೀವನದ ಬೇಸರದಿ |
ಸಾರೆ ವನದೊಳಗಿಂದು ತವ ಭೇಟಿಯಾಯ್ತು ||246||

ಹರಣವುಳುಹಿದ ನಿನ್ನ ಶರಣನಾಗಿಹೆನೆನ್ನ |
ಪರಮಾನುಗ್ರಹ ತೋರಿ ಅರಮನೆಗೆ ಬಂದು ||
ಪರಮ ತೋಷವಗೊಳಿಸಿ ತೆರಳಬೇಹುದು ಎನುತ |
ಕರೆದೊಯ್ದನಂಧನಪ | ತನುಜಾತ ಮನೆಗೆ ||247||

ಕಂದ

ಅರಮನೆಗೈತರಲುಭಯರು |
ದುರಿಯೋಧನನಿಗೆ ನಮಿಸಲು ತೋಷದೊಳಾಗಂ ||
ಪರಿಚಯ ಕೇಳಲು ಕರ್ಣನ |
ವರ ದುಃಶ್ಯಾಸನನೊರೆದನು ನಡೆದಿಹ ಪರಿಯಂ ||248||

ಸಾಂಗತ್ಯ ರೂಪಕತಾಳ

ಅಣ್ಣ ಕೇಳೆಲೊ ನಾನು | ನಿನ್ನೆ ಬೇಟೆಗೆ ಪೋದ |
ರಣ್ಯದೊಳಿಹುದೊಂದು ಸಿಂಹ |
ತಿನ್ನುವೆನೆನ್ನುತ ಕ್ರೋಧದಿ ಬರೆ ಕೊಲು |
ತೆನ್ನನುಸಲಹಿದನೀತ ||249||

ಯಾರೆಂದರೊರೆಯನು | ದಾರಿಹೋಕನ ತೆರ |
ತೋರಿದೆ ಬೇಸರ ಜಗದಿ ||
ಭಾರಿ ಒತ್ತಾಯದಿ ಕರೆತಂದೆನಿಲ್ಲಿಗೆ |
ವೀರನಿಂಗೆಣೆಗಾಣೆ ನಾನು ||250||

ಯಾರಯ್ಯ ವೀರ ನಿನ್ನಯ ಕುಲ ಪೇಳದ |
ಭೂರಿ ಕಷ್ಟಗಳೇನು ನಿನಗೆ ||
ಯಾರಲ್ಲಿ ಕಲಿತೆ ನೀ ಬಾಣವಿದ್ಯೆಯನೆನೆ |
ಸೂರ್ಯನ ಸುತನಾಗ ನುಡಿದ ||251||

ಭಾಮಿನಿ

ಕುರುವರನೆ ಲಾಲಿಪುದು ಸೂತಜ |
ಪರಮ ವಿದ್ಯೆಯ ಕಲಿವೆನೆನ್ನುತ |
ಪರಶುಧರನನು ಸೇರಿ ಸೇವಿಸಿ ಕಲಿತೆ ವಿದ್ಯೆಗಳ ||
ಪರಮ ಗೌರವದೊರಕದದರಿಂ |
ತೊರೆದು ಸಂಯಮ ವನವ ಸೇರಿದೆ |
ಹರಿಯ ತುತ್ತಿನೊಳಿರುವ ನಿನ್ನಯ ಸಹಜನನು ಕಂಡೇ ||252||

ರಾಗ ರೇಗುಪ್ತಿ ಅಷ್ಟತಾಳ

ಎಂದ ನುಡಿಗಳ ಕೇಳಿ ಕೌರವನು | ಮನದೊಳಗೆ ಯೋಚಿಸು
ತೆಂದನಿವನಿಂ ಪಾಂಡುಸುತರನ್ನು ||
ಹೊಂದಿಸುವೆ ನಾ ಯಮನ ಪುರವನ್ನು | ಶಸ್ತ್ರಾಸ್ತ್ರದಲ್ಲಿವ |
ನಿಂದ್ರಸುತನಿಮ್ಮಿಗಿಲು ಭಯವೇನು ||253||

ಅನುಜನನು ನೀನೊಲಿದು ಸಲಹಿರುವೇ | ನಿನ್ನಯ ಋಣವ |
ನೆನಿತು ತೀರಸಲಯ್ಯ ಎನ್ನಳವೇ ||
ಅನುಜರಾ ತೆರನಿಹುದು ನಮ್ಮೊಡನೆ | ಕುಲ ಹುಟ್ಟನೆಲ್ಲ |
ವೆಣಿಸುವವರಾವಲ್ಲ ನೋಡ್ನೀನೇ ||254||

ಕಂದ

ತಳೆಯುತ ಕರ್ಣಾನಂದವ |
ಗೆಳೆತನದಿಂದಿರೆ ಕಲಶಜ ಭೀಷ್ಮನ ಬಳಿಗಂ ||
ಸುಳಿಯುತಲೊರೆದನು ತರಳರು |
ಕಲಿತಿಹ ವಿದ್ಯೆಯ ಪರಿಕಿಪುದೆನಲಾ ನದಿಜಂ ||255||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವರಮುಹೂರ್ತವನಿರಿಸಿ ಬಯಲಲಿ | ಭರದಿ ಸನ್ನಹಗೈದು ತರಳರ |
ಹಿರಿಯರನು ಕರೆಸುತ್ತ ಮನ್ನಿಸೆ | ಸರುವರನ್ನು ||256||

ಭರದಿ ಭಾರದ್ವಾಜ ಬಂದನು | ಪರಮ ಶಿಷ್ಯರ ಗಡಣದೊಂದಿಗೆ |
ಸರುವ ಜನ ಗೌರವದಿ ನಮಿಸಿದ | ರ್ಗುರುವರಂಗೆ ||257||

ಸ್ವೀಕರಿಸುತಲಿ ಪರಮ ಗೌರವ | ತಾ ಕರೆದು ಶಿಷ್ಯರಿಗೆ ಪೇಳಿದ |
ನೀವ್ಕಲಿತ ಶರವಿದ್ಯೆ ತೋರಲು | ಬೇಕು ಈಗಾ ||258||

ಎನಲು ಧರ್ಮಜನೆದ್ದು ನಮಿಸುತ | ಧನು ಶರವಗೊಂಡಾಗ ಸಾರ್ದನು |
ಅನಿಮಿಷರು ಪೊಗಳಲ್ಕೆ ವಿದ್ಯವ | ನೇನನೆಂಬೆ ||259||

ಆನೆ ಕುದುರೆಯನೇರಿ ತೋರಿದ | ಬಾಣ ಮುದ್ಗರ ಕುಂತ ಖಡುಗದಿ |
ಜಾಣನಿವಸರಿಯೆಂದು ಪೊಗಳಲು | ತಾನೆ ಸರಿದ ||260||

ಭರದಿ ದುಃಶ್ಯಾಸನನು ಬಂದನು | ವರವರೂಥವನೇರಿ ತೋರಿದ |
ಸರಳು ಗದೆ ಖಡುಗಾದಿ ವಿದ್ಯಾ | ಪರಿಣತೆಯನು ||261||

ರಾಗ ಮಾರವಿ ಏಕತಾಳ

ಬಂದನು ಭೀಮ ಭಯಂಕರ ವೇಗದಿ | ಸಂದಿಸಿ ಶರವಂದಾ ||
ಸ್ಯಂದನ ಕರಿಹಯವೇರುತ ತೋರಿದ | ವಂದಾರಕರೆಲ್ಲ ||262||

ಭಳಿಭಳಿರೆಂದೆನೆ ಗದೆ ಖಡ್ಗಾಯುಧ | ಗಳ ಪರಿಣತೆಯಿಂದ ||
ಇಳೆಯೊಳಗಿವಗೆಣೆಯಿಲ್ಲೆ ಪರಶಿವ | ನಿಳೆಯೊಳಗುದಿಸಿದನೇ ||263||

ಎಂಬುವ ಸಮಯದಿ ದುರ್ಯೋಧನ ತಾ | ಮುಂಬರಿದಾಯುಧದೀ ||
ತುಂಬಿದನಂಬರ ಭೂಮಿಯ ಜನರಲಿ | ತುಂಬಿತು ಭಯಭೀತಿ ||264||

ಗದೆಯನು ತಿರುಹಿದ ಖಡುಗವ ಝಳಪಿಸು | ತೊದರಿದ ಕೇಳೆಲವೊ ||
ಮದ ಮುಖ ಭೀಮನೆ ಒದಗೈ ಯುದ್ಧಕೆ | ಬೆದರದೆ ಬಾ ಮುಂದೆ ||265||

ರಾಗ ಘಂಟಾರವ ಅಷ್ಟತಾಳ

ಎಂದ ಮಾತಿಗೆ ಕನಲಿ ಭೋರ್ಗರೆಯುತ್ತ |
ಅಂಧಕಾತ್ಮಜ ನಿಲ್ಲು ನಿಲ್ಲೆಲೊ | ಕೊಂದು ನಿಮಿಷದಿ ||266||

ಹುಂಬ ಭೀಮನೆ ಬಂದೆಯೊಳ್ಳಿತು ಕೇಳು |
ತಿಂಬಡಿಹುದೇನಿಲ್ಲ ಮತ್ತಿಕೆ | ತುಂಬುವೆನು ನಿನ್ನೊಡಲಲಿ ||267||

ಗರಳವಿಕ್ಕಿದೆ ಪಾಪಿ ನೀ ಜಲದಲ್ಲಿ |
ಉರುಳಿಸಿದ ಫಲ ತೋರಿ ಕೊಡುವೆನು | ಕರುಳು ತೆಗೆವೆನು ನಿಲ್ಲೆಲೊ ||268||

ಕಂದ

ಮದ್ದಾನೆಗಳಂದದಿ ಬಲು |
ಕ್ರುದ್ಧತೆಯಿಂದ ಮುಂದೊತ್ತುವ ತರಳರ ತಡೆದುಂ ||
ಉದ್ದಟತನ ಬಿಡಿರೆನುತಲಿ |
ಗದ್ದರಿಸಿದರಾ ಭೀಷ್ಮದ್ರೋಣರು ಜಡಿದುಂ ||269||

ರಾಗ ಪಂತುವರಾಳಿ ಮಟ್ಟೆತಾಳ

ಸುರಪಸುತನ ಕರೆಯಲಾಗ | ಗುರುವ ನದಿಜ ಮಾತೆ ಸಹಜ
ಸುರರಿಗೆರಗಿ ಧನುವ ಪಿಡಿದು | ಶರಸವ್ಯಾಪಸವ್ಯದಿಂದ |
ತರಿದ ಯಂತ್ರ ಶಬ್ದವೇಧಿಯ |
ತೋರ್ದನರರೆ | ಪರಮವ್ಯೆಹ ಬೇಧ ರಚನೆಯಾ ||270||

ನರನು ರಥವ ಕರಿಯ ಹರಿಯ | ಭರದೊಳೇರಿ ರಣವ ಮಾಳ್ಪ |
ಸರುವಶಸ್ತ್ರ ತೊಡುವ ಬಿಡುವ | ತಿರುಹು ಮುರುಹಿನಿಂದ ಸರಿವ |
ಧುರದ ಸಕಲ ರೀತಿ ತೋರಿದಾ || ಅಗ್ನಿಯನಿಲ |
ಉರಗ ವರುಣ ಗರುಡ ತಿಮಿರವಾ || ಎಸೆದು ಕಡಿವ
ಪರಿಯ | ತೋರಿ ಭ್ರಮೆಯಗೊಳಿಸಿದಾ || ದಿವ್ಯ ಮಂತ್ರ | ಶರವೆಸೆದುಪಸಂಹರಿಸಿದಾ ||
ಪರಿಯ ಪೊಗಳಿ | ಸುರರು ಸುರಿಯೆ ಮಳೆಯ ಪುಷ್ಪದಾ ||
ಭಾಪು ಮಝರೆ | ಧರೆಯೊಳಿಲ್ಲ ಎಣೆಯು ಎನುವದಾ ||271||

ರಾಗ ಕೇತಾರಗೌಳ ಝಂಪೆತಾಳ

ಕೇಳಿ ಕನಲಿದ ಕರ್ಣನು | ಮುಂಬರಿದು | ತಾಳಿರೈ ನಾ ತೋರ್ಪೆನು ||
ಪೇಳಿ ಬಳಕುತ್ತಮರನು | ಬರಿದೆ ಚ | ಪ್ಪಾಳಿಕೆಯನಿಕ್ಕಲೇನು ||272||

ನರನು ತೋರಿದ ರೀತಿಯ ಸರ್ವಾಸ್ತ್ರ | ಗುರಿಯೆಸೆದು ತರಿದ ಪರಿಯ ||
ಪರಿಕಿಸುತ ಜನರಿವನನು | ಪಾರ್ಥನಿಗೆ | ಸರಿ ಜೋಡಿ ಎನೆ ಕರ್ಣನು ||273||

ಬಾರೊಬಾರೆಲವೊ ಪಾರ್ಥಾ | ಎನ್ನೊಡನೆ | ತೋರು ವಿಕ್ರಮ ಯಥಾರ್ಥ ||
ಧೀರನಾದೆಡೆ ರಣವನು | ಮಾಡೆನಲು | ತೋರಿ ಕೋಪವ ಭೀಮನೂ ||274||

ರಾಜಪುತ್ರನು ಪಾರ್ಥನು | ನೀ ಕಾದೆ | ರಾಜನಾವನ ಜಾತನು |
ಮಾಜದುಸುರೆಲೊ ಕುಲವನು | ಬಾಯ್ಬಡಿಕ ಆಜಿ ನಿನಗೇಕೆಂದನು ||275||

ಸೂತನಧಿರಥಜಾತನೆ | ದ್ವಂದ್ವ ನಿನಗೇತಕೆಲೊ ಬರಿ ಭ್ರಾಂತನೆ ||
ಪೂತ ಶಶಿವಂಶಜರೊಳು | ಸರಿಸಾಟಿ | ಸೂತನಿಗೆ ಸರಿಯೆ ಮರುಳು ||276||

ಭಾಮಿನಿ

ವಾತಸುತನೀ ತೆರದಿ ನಿಂದಿಸೆ |
ಸೂತಸುತನವಮಾನದಿಂದಲಿ |
ಭೂತಳಕೆ ವೆಸನಾತಿರೇಕದಿ ದೊಪ್ಪನುರುಳಿದನು ||
ಕಾತರಿಸಿ ಕಡುನೊಂದು ಶಿವಶಿವ |
ಜಾತಿಯೊಳಗೇನುಂಟು ಕಾಣೆನು |
ಪೂತವಿರೆ ಗುಣ ಸಾಲದೇ ಗುಣಹೀನನುತ್ತಮನೆ ||277||

ಕುಲವೆ ಎನಗೆ ಕುಠಾರವಾದುದು |
ನೆಲಕೆ ಭಾರಕನಾದೆ ಜೀವಿಸಿ |
ಫಲವ ಕಾಣೆನು ಮಾನವಿಲ್ಲದ ಹರಣವಿನ್ನೇಕೆ ||
ಕಳೆವೆನೆನ್ನುತಲಳುವ ಮಿತ್ರನ |
ಬಳಿಯ ಸಾರಿದು ನುಡಿದ ಕುರುವರ |
ನಳಲದಿರು ನಾ ಕಾವೆ ನಿನ್ನಯ ಮಾನಹರಣಗಳಾ ||278||

ರಾಗ ಮಾರವಿ ಏಕತಾಳ

ಕೇಳಿರಿ ಭೀಷ್ಮ ದ್ರೋಣ ಯುಧಿಷ್ಟಿರ | ಖೂಳ ವಕೋದರನೆ ||
ಕೇಳಿರಿ ಭೂಪಾಲಕ ದಿಕ್ಪಾಲರೆ | ಶೂಲಿಯ ಸಮನಿವಗೆ ||279||

ಭೂತಳಕಧಿಪತಿಯಾದಡೆ ಈತನ | ಸೂತಜನೆನಲುಂಟೆ ||
ಖ್ಯಾತಿಯ ಅಂಗಧರಾತಳದೊಡೆತನ | ಈ ತಕ್ಷಣವಿತ್ತೆ ||280||

ಹೊಡಿಸೈ ಡಂಗುರ ಕರೆಸೈ ಬುಧರನು | ತೊಡಿಸೈ ಭೂಷಣವ ||
ಇಡುವೆ ಕಿರೀಟವನೆನೆ ದುಃಶ್ಶಾಸನ | ಹೊಡೆಸಿದ ಡಂಗುರವ ||281||

ಭಾಮಿನಿ

ಅರಸ ಕೇಳೈ ಬಳಿಕ ಕೌರವ |
ತರಿಸಿ ಸಿಂಹಾಸನವನೇರಿಸಿ |
ಕರೆಸಿ ಬುಧರಭಿಷೇಕಗೈಸಿದ ಸುರರುಘೇಯೆನಲೂ ||
ತರುಣಿಯರು ತಾವ್ಬೆಳಗೆಯಾರತಿ |
ಪರಮ ಸಂತಸ ಹೊಂದಿ ಕರ್ಣನು |
ಕುರುವರನ ಪದಕೆರಗಿ ನುಡಿದನು ಭಾವಶುದ್ಧಿಯಲೀ ||282||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಾಯಿ ತಂದೆಯನರಿಯೆನೆನ್ನಯ | ಕಾಯುತುಳುಹಿದೆ ಮಾನಹರಣವ |
ತಾಯಿ ತಂದೆಯು ಗುರುವು ಬಂಧುವು | ರಾಯ ನೀನೇ ||283||

ಸಾಯುತಿದ್ದಿಹ ತನುವು ನಿನ್ನಯ | ಕಾರ್ಯಕಿಂದಿಂ ಮೀಸಲಾ ಕೌಂ |
ತೇಯರಾದರು ಜನ್ಮ ಶತ್ರುಗಳ್ | ರಾಯ ಕೇಳೂ ||284||

ಆಯಿತಿದು ಭೂಭಾರ ಹರಣಕೆ | ರಾಯ ಮಾರ್ಗವಿದೆಂದು ಕಮಲದ |
ಳಾಯತಾಕ್ಷನ ನೆನೆದರಮರರು | ಘೇಯೆನುತ್ತಾ ||285||

ರಾಗ ಕಾಂಭೋಜಿ ಝಂಪೆತಾಳ

ಇಂತಿರುವ ಕಥನವನು ಕಂತುಪಿತ ದಯದಿಂದ |
ಮುಂತೋರಿಯನ್ನ ಕೈಪಿಡಿದು ಬರೆಸಿದನು ||
ಅಂತು ದುರ್ಮುಖಿ ಭಾದ್ರಪದ ಶುದ್ಧದಷ್ಟಮಿಗೆ |
ಅಂತ್ಯವಿಸಿ ಸಂತವಿಟ್ಟನು ದೇವನೆನ್ನ ||286||

ಹಿರಿಯಡಕ ಶ್ರೀ ವೀರಭದ್ರನಾ ಕಪೆಯೊಳಿಹ |
ಹಿರಿಯ ಶಾಲೆಯೊಳಿರುವ ವರ ಸಹಾಯಕನು ||
ಬರೆದೆ ಸೀತಾನದಿಯ ಗಣಪಯ್ಯ ಶೆಟ್ಟಿಯಿದ |
ನಿರಲು ತಪ್ಪನು ತಿದ್ದಿ ಬುಧಜನರು ಮೆರಸೀ ||287||

ಮಂಗಲ ಪದ

ಮಂಗಲಂ | ಜಯ | ಮಂಗಲಂ ||ಪಲ್ಲವಿ||

ಮಂಗಲ ವೇದೋದ್ಧಾರನಿಗೆ | ಮಂಗಲ ಕೂರ್ಮ ವರಾಹನಿಗೆ ||
ಮಂಗಲ ನರಹರಿ ವಾಮನಗೆ ಮಂಗಲ ಭಾರ್ಗವ ರಾಮನಿಗೆ ||288||

ಮಂಗಲಹಲ್ಯೋದ್ಧಾರನಿಗೆ | ಮಂಗಲ ವೇಣುವಿನೋದನಿಗೆ ||
ಮಂಗಲ ಬೌದ್ಧಗೆ ಕಲ್ಕ್ಯನಿಗೆ | ಮಂಗಲ ಹತ್ತವತಾರನಿಗೆ || ಮಂಗಲಂ ||289||

ಮಂಗಲಂ ಗಣಪತಿ ದೇವನಿಗೆ | ಮಂಗಲ ವೀರಭದ್ರನಿಗೆ ||
ಮಂಗಲಂ ಗಣಪತಿ ದೇವನಿಗೆ | ಮಂಗಲ ವೀರಭದ್ರನಿಗೆ ||
ಮಂಗಲ ಪದ್ಮನಾಭನಿಗೆ | ಮಂಗಲ ಉಡುಪಿ ಶ್ರೀಕೃಷ್ಣನಿಗೆ ||
ಮಂಗಲಂ | ಜಯ | ುಂಗಲಂ ||290||

 

* * *