ವಾರ್ಧಕ

ಗುರು ಶಿರವ ತೊಡೆಯ ಮೇಲಿರಿಸಿಕೊಂಡಿರೆ ಶಿಷ್ಯ |
ಸುರಪ ತಾಳಿದು ಮತ್ಸರವನಿವಗೆ ಶಾಪಮಂ |
ತರಿಸಬೇಕೆನುತಾಗಲಳಿ ರೂಪನಿಂ ಬಂದು ಕೊರೆಯುತಿರೆ ಜಂಘೆಯನ್ನೂ ||
ಸುರಿಯ ತೊಡಗಿತು ರುಧಿರವೇದನೆಯ ಸೈರಿಸುತ |
ಗುರು ನಿದ್ದೆಗೇಡಾಗದಂತೆ ನಿಶ್ಚಲದಿ ಕುಳಿ |
ತಿರಲು ನೆತ್ತರು ಸೋಂಕಲೆಚ್ಚರಿತು ಪರಶುಧರ ಕಂಡದಂ ಕೆರಳಿ ನುಡಿದಾ ||150||

ರಾಗ ತೋಡಿ ಅಷ್ಟತಾಳ

ಏನಿದೂ | ಬಾಲ | ಏನಿದೂ  ||ಪಲ್ಲವಿ||

ಏನಿದು ಬಾಲ ನಿನ್ನಂದವಿದೇನು |
ಶಾನೆ ಸೋರ್ವುದು ರಕ್ತ ಕಾರಣವೇನು ||151||

ನಾನಿರೆ ನಿದ್ರೆಯೊಳ್ನಿನಗಾದುದೇನು |
ಹೀನ ಕಾರ್ಯವಗೈದವನ ಪೆಸರೇನು || ಏನಿದೂ ||152||

ರಾಗ ಮಧುಮಾಧವಿ ತ್ರಿವುಡೆತಾಳ

ಗುರುವೆ ಬಿನ್ನಹ ನೀವು ನಿದ್ರೆಯೊ | ಳಿರಲು ಬಂದಾ ಕೀಟವೂ ||
ಕೊರೆಯತೊಡಗಿತು ತೊಡೆಯ ನೀಪರಿ | ಯೊರೆಯಲೇನದ ತಾಪವಾ ||153||

ನಿದ್ರೆ ಭಂಗಿಸ ಬಾರದೆನ್ನುತ | ಲಿದ್ದೆ ನೋವನು ಸಹಿಸುತ ||
ರುದ್ರಸಮಗುರು ಕಾವುದೆನುತಲಿ | ಬಿದ್ದ ಪಾದದಿ ಶಿಷ್ಯನೂ ||154||

ರಾಗ ಮಾರವಿ ಏಕತಾಳ

ಎಲ ಎಲ ಧೂರ್ತಾಧಮ ನಿನ್ನಯ ಗುಣ | ಕುಲಕನುಗತವಲ್ಲ ||
ಖಳ, ಕುಲವಂಚಿಸಿಯನ್ನೊಳು ವಿದ್ಯೆಯ | ಗಳಿಸುವ ಸಾಹಸವೆ ||155||

ಪಾರ್ಥಿವಗಲ್ಲದೆ ಈ ಪರತರಸಾ | ಮರ್ಥ್ಯವೆ ಸಹಿಸುವಡೆ ||
ಪಾರ್ಥಿವ ಕುಲಕಂಟಕನಾನಿರುತಿರೆ | ಸ್ವಾರ್ಥದಿ ವಂಚಿಸಿದೆ ||156||

ಕೊಲುವೆನೆ ನಿನ್ನನು ಕಲಿಸಿಹೆ ವಿದ್ಯೆಯ | ಕುಲಕಂಟಕನಾಗಿ ||
ಕಲಹದಿ ಆಪತ್ಕಾಲದಿ ಮರೆಯಲಿ | ಕಲಿತಿಹ ವಿದ್ಯೆಗಳು ||157||

ರಾಗ ನೀಲಾಂಬರಿ ಆದಿತಾಳ

ಗುರುವೆ ನೀ ಮುನಿಯದಿರು | ಸರುವಪರಾಧ |
ಮರೆತು ನೀ ಕ್ಷಮೆಯದೋರು ||
ಕರುಣಾಸಾಗರನಲ್ಲವೆ | ಶಿಷ್ಯನಾದೆನ್ನ |
ಪೊರೆವುದು ಘನವಲ್ಲವೆ ||158||

ಮಾತೆಪಿತರಾನರಿಯೆ | ಸಾಕಿದರೆನ್ನ |
ಸೂತರಾಧೆಯರನರಿವೆ ||
ಪ್ರೀತಿಯಿಂ ಸುತನಂತೆ ಕಲಿಸೀ | ಶಪಿಸುವುದುಂಟೆ |
ಖಾತಿಯೊಳ್ ನೀ ಪೂತನೆನಿಸೀ ||159||

ಸಾಕಿ ಸಲಹಿದಂಥ ತರುವ | ಕಯ್ಯರೆ ಕಡಿದು |
ಹಾಕುವುದುಂಟೇನು ಗುರುವಾ ||
ಕಾಕು ನುಡಿದೆನೆಂದು ಶಪಿಸೀ | ಕೊಂದೆಯ ತನುವ |
ನೂಕುವನಗ್ನಿಯೊಳ್ದಹಿಸೀ ||160||

ಭಾಮಿನಿ

ಎಂದು ಕಾಲ್ಪಿಡಿದಳಲಿ ರೋದಿಪ |
ಕಂದನನು ಕಾಣುತ್ತ ಶಾಂತಿಯ |
ಹೊಂದಿ ನುಡಿದನು ಪರಶುಧರ ಕೇಳ್ಬಾಲನಳಲದಿರು ||
ಮುಂದೆ ಶಲ್ಯನ ಸೂತ ತನದಲಿ |
ಹೊಂದುವುದು ಸಕಲಾಸ್ತ್ರ ಸಿದ್ಧಿಯು |
ಬಂದಪುದು ಜಯನಿನಗೆ ಬಾರದು ಸೋಲು ನಡೆಯೆಂದ ||161||

ರಾಗ ಸಾಂಗತ್ಯ ರೂಪಕತಾಳ

ಮರುಗುತ ಕರಗುತ ಬೇಯುತ ಅಳಲುತ |
ಗುರುವನು ಪರಿಪರಿನುತಿಸಿ ||
ಎರಗಿ ತಾ ಬಲವಂದು ಆಶ್ರಮಕೊಂದಿಸಿ |
ಪೊರಟನು ರಾಧೇಯ ತಾನು ||162||

ಹರ ಹರ ವಿಧಿಯೇಕೆ ತನಗಿಂತು ಮುನಿದನೊ |

ಪರಮನಿರ್ಭಾಗ್ಯ ತಾನಾದೆ ||
ವರಮಾತಾ ಪಿತರಿಂಗೆ ಮೊಗವೆಂತು ತೋರಲಿ |
ವರ ತಪಾಚರಣೆಯೊಳಿರುವೆ ||163||

ಗಂಗೆಯಾ ತಡಿಯಲ್ಲಿ | ಮಂಗಲಾಶ್ರಮ ರಚಿಸಿ |
ಅಂಗಜಾರಿಯ ತಪಗೈದು ||
ಮಂಗಲಾಪದವನ್ನು ಪಡೆವೆನೆಂದೆನುತಲಿ |
ಸಂಗವ ತೊರೆದು ವಾಸಿಸಿದಾ ||164||

ರಾಗ ಮಧ್ಯಮಾವತಿ ತ್ರಿವುಡೆತಾಳ

ಶರಜ ಲೋಚನೆ ಮಾದ್ರಿಯತಿ ೆಡಗಿನಲಿ |
ಪರಮಾಭರಣ ಸುಮ ಜತೆಗೊಳಿಸುತಲಿ ||
ವರಪಿಡಿನಡೆ ಸಿಂಗನಡು ಬಳುಕುತಲಿ ||
ಪೆರೆನೊಸಲ ಸುಳಿ | ಗುರುಳ ಕಾಳೋರಗ ಸುವೇಣಿಯು |
ಸುರಪಸತಿ ರತಿ ರಂಭೆಯಂಬಿಕೆ |
ರಮೆಯ ಚೆಲ್ವಿನ | ಪರಮ ಸಾಧ್ವಿಯು |
ನಗುತ ನಲಿಯುತ ವನದಿ ಬಂದಳು ||165||

ರಾಗ ಪಂತುವರಾಳಿ ಆದಿತಾಳ
(
ಧಾಟಿಆಡಿದರು ಸುದತಿಯರು||)

ಆಡಿದಳುಯ್ಯಲೆಯ | ವರ ಮಾದ್ರಿದೇವಿ |
ಆಡಿದಳುಯ್ಯಲೆಯ ||ಪಲ್ಲ||
ನೋಡಿದ ಜನ ಮನ | ಕೂಡಪಹರಿಸುವ | ಗಾಢ ಸಂಭ್ರಮದೋರುತ್ತ |
ಮೋಹದಿ ತಾನೆ | ನೋಡಿ ಹಿಗ್ಗನು ತಾಳುತಾ || ಆಡಿದ ||166||

ಭಾಮಿನಿ

ಪೃಥ್ವಿ ಪಾಲಕ ಪಾಂಡು ವನದಲಿ |
ಸುತ್ತಿ ಬರುತಲಿ ಕಾಣುತಾಕೆಯ |
ಚಿತ್ತದಲಿ ಕಳವಳಿಸಿ ಕಾಮನ ಶರಕೆ ತುತ್ತಾಗೆ ||
ಯೋಗಿಯೆದೆಯಸಿ, ಪರುಷ ಬಡವನ |
ಭೋಗಿ ಸ್ಮರ ಸಾಮ್ರಾಜ್ಯ ದೇವತೆ |
ರಾಗಿಗಳ ಪ್ರೇಮಾಬ್ಧಿ, ಈಕೆಯು ಸೊಗದಸಾಕಾರ || ||167||

ವಿತ್ತದೆಡೆಯಿಹ ಉರಗ, ಧನವಿರೆ |
ತುತ್ತುಗೊಳ್ಳದ ಲೋಭಿ, ಬೆಳಕಿರೆ |
ಸುತ್ತ ಕಾಣದ ಅಂಧನಾದೆನು ಬದುಕಿ ಫಲವೇನು || ||168||

ರಾಗ ನಾದನಾಮಕ್ರಿಯೆ ಅಷ್ಟತಾಳ
(
ದಾಟಿ : ಇರುಳೊಂದು ಯುಗವಾಗಿ ಕಳೆದೆನೊ)

ಎಂತು ತಾಳಲಿ ಕಾಮ ಬಾಧೆಯ | ಈಗ |
ಕಂತು ತಾ ಸುಡುವನು ದೇಹವ ||
ಮುಂತೆ ಈ ಸುಧೆಯುಣೆ ಸಾವನೆ | ವಿಧಿ |
ಯಿಂತು ವಂಚನೆಗೈದ ಶಿವನೆ ||169||

ಆದುದಾಗಲಿ ಎಂದು ನಪತಿ | ಕಾಮ |
ಬಾಧೆಯೊಳ್ ಬರೆಕಂಡು ಸುದತಿ ||
ಮೋದವಳಿದು ತಾನು ಭಯದಿ | ಪತಿ |
ಪಾದಕೆರಗಿ ಬೇಡೆ ನಯದಿ ||170||

ರಾಗ ತೋಡಿ ಅಷ್ಟಾಳ

ಥರವಿದಲ್ಲ ಸ್ಮರವಿಕಾರ | ಪರಮಜ್ಞಾನಿ ನಲ್ಲ ಸಲ್ಲ |
ದಿರುವ ಕಾರ್ಯಕೊದಗಬೇಡ | ಕರವ ಮುಗಿವೆನು ||171||

ಧರೆಯ ಭೋಗವಿರದ ಮೇಲೆ | ನರಗೆ ಜೀವದಿಂದಲೇನು |
ಸ್ಮರದಿ ಶರದಿಸಾವೆನೀಗ | ಬರಿದೆ ಆಶೆಯೂ ||172||

ಪತಿಯೆ ಧರೆಯೊಳಸಮರೈದು | ಸುತರ ಪಡೆದು ವಿಷಯ ಸುಖದಿ |
ಮತಿಯ ಪೊಂದೆ ಕ್ಷಿತಿಯೊಳ್ನಗರೆ | ಗತಿಯದಾರಯ್ಯ ||173||

ದೇವತೆಗಳೆ ಕಾವರವರ | ಸಾವು ಬಾಳು ದೇವನಿಚ್ಛೆ |
ಜೀವಿ ಧರ್ಮ ವಿಷಯ ಸುಖವು | ಎನುತ ಪಿಡಿದನು ||174||

ಬೇಡ ಬೇಡ ಬೇಡವಯ್ಯ | ಬೇಡಿಕೊಂಬೆ ರೂಢಿಪಾಲ |
ಕೇಡು ಬಹುದು ಅಯ್ಯ ಅಕ್ಕ | ಓಡಿ ಬಾರವ್ವ ||175||

ಭಾಮಿನಿ

ಬಿಡದೆ ಮಾದ್ರಿಯ ಲತೆ ವಿತಾನದಿ |
ಪೊಡವಿಪತಿ ಭೋಗಿಸಿದ ಶಾಪದಿ |
ನಡುಗೆ ಕೈ ಕಾಲ್ಕರಣ ಕಳವಳಗೊಳುತ ಮತನಾದ ||
ಜಡಜಮುಖಿ ಕಾಣುತ್ತ ಬೆದರಿದು |
ನಡುಗಿ ಗೋಳಿಟ್ಟಳುತ ಹರಹರ |
ಮಢನೆ ಶಂಕರ ಪಾರ್ವತೀಪತಿ ಕೆಟ್ಟೆವಕಟಕಟ ||176||

ರಾಗ ನೀಲಾಂಬರಿ ರೂಪಕತಾಳ

ಹರಹರ ಧರೆಯೊಳು ಕಾಂತನ | ಮರಣಕೆ ಕಾರಣಳಾದೆನೆ |
ಪರ ಇಹ ಸುಖಕೆರವಾದೆನೆ | ತರಳರ ಗತಿಯೇನು ||
ಸ್ಮರ ರೂಪನೆ ಸುಗುಣಾಢ್ಯನೆ | ಮರೆತೆಮ್ಮನು ಸುರಲೋಕಕೆ |
ತೆರಳಿದ ಯೇಕೆನುತಿರೆ ಪಥೆ | ಯರಿತಳಲುತ ಬಂದು ||177||

ಯಾತಕೆ ಮಲಗಿಹೆ ಶಶಿಕುಲ | ಜಾತಗುಣಾಢ್ಯನೆ ಯನ್ನೊಳು |
ಖಾತಿಯದೇನೈ ಸುತರೊಳು | ಮಾತಾಡೈರಮಣ ||
ಪಾತಕಿ ಪತಿಯನು ಕೊಂದೆಯ | ನೀತಿಯೇ ಸಾಧ್ವಿಗೆ ಶಾಪದ |
ರೀತಿಯನರಿತೀ ಪರಿಯೆ ದು | ರಾತ್ಮಳೆ ಗತಿಯೇನು ||178||

ರಾಗ ನವರೋಜು ಆದಿತಾಳ

ಸತಿಯರ ರೋದನ ಕೇಳಿ | ವರ | ಯತಿಗಳು ಗಾಬರಿ ತಾಳಿ ||
ಸತಿಯರ ಬಳಿ ಸೇ | ರುತ ಹಿತವೊರೆದರು |
ಮತಿವಂತರೆ ನೀ | ವತಿ ರೋದಿಸುವುದೆ ||179||

ಮುನಿಸತಿ ಶಾಪದಿ ನಪನು | ತಾ | ಳ್ದನು ಮತಿಯಾ ನೀವಿನ್ನೂ ||
ಘನತರ ದುಃಖದಿ | ತನು ಬಳಲಿಸದಿರಿ |
ತನಯರ ಪಾಲಿಸಿ | ರೆನಲಾ ಕುಂತಿಯು ||180||

ರಾಗ ಕಾಪಿ ಅಷ್ಟತಾಳ

ತಂಗಿ ಲಾಲಿಸು ಅಂತ | ರಂಗದಲ್ಲಿಯ ಬೇಗೆ |
ಹಿಂಗದಾದರು ಪತಿಗೆ ಇಂದು ||
ಸಾಗಗೊಳಿಸುತಲಗ್ನಿ ಸಂಸ್ಕಾರ ಸತಿ ಪೋಪೆ |
ಮಂಗಳಾಂಗಿಯೆ ಸಲಹು ಸುತರ ||181||

ಅಕ್ಕ ಆಗದು ಎನ್ನ | ಚಿಕ್ಕವರ ಪೊರೆ ನಿನ್ನ |
ಮಕ್ಕಳಂದದೊಳಿಂದು ಪತಿಯು ||
ವಕ್ಷದಲಿ ತನು ಬಿಸುಟ | ಹೊಕ್ಕುರಿವೆ ಪತಿಯೊಡನೆ |
ಕಕ್ಕುಲಿತೆ ಬಿಡು ಹರಸು ಎನ್ನ ||182||

ವಾರ್ಧಕ

ಮುನಿಗಳನುಮತಿ ಪಡೆದು ಜನಪತಿಗೆ ಚಿತೆರಚಿಸೆ |
ವನಿತೆ ಶುಚಿಮತಿಯಾಗಿ ಸತಿ ಸಿಂಗರದಿಬಂದು |
ತನಯರುಭಯರ ಕುಂತಿ ಧರ್ಮಜರಿಗೊಪ್ಪಿಸುತ ಮುನಿಗಳಿಂ ಪರಕೆಗೊಂಡು ||
ವನಿತೆ ಚಿತೆಯೇರಿ ತೊಡೆಮೇಲಿರಿಸೆ ಪತಿ ಶಿರವ |
ನನಲನುರಿಗೊಳಿಸಲ್ಕೆ ಗಗನಮಂ ಚುಂಬಿಸಿದ |
ನನಿಮಿಷರು ಜಯವೆನುತ ಹೂ ಮಳೆಯಗರೆದು ವರ ದುಂದುಭಿಯ ಬಾರಿಸಿದರು ||183||

ಕಂದ

ಜನಪನಿಗುತ್ತರ ಕಾರ್ಯವ |
ತನಯರು ನಡೆಸಲು ಕಷ್ಟವಕಂಡಾ ||
ಮುನಿಗಳು ಕರೆದೊಯ್ಯಲು ನದಿ |
ಜನು ತಾ ಕಾಣುತಲನಿಬರ ಮನ್ನಿಸೆ ನಯದಿಂ ||184||

ರಾಗ ದೇಶಿ ಅಷ್ಟತಾಳ

ಕೇಳಯ್ಯ | ಭೀಷ್ಮ | ಕೇಳಯ್ಯ ||ಪಲ್ಲವಿ||

ಕೇಳಯ್ಯ ಭೀಷ್ಮಾನಾವೆಂಬುವ ಮಾತ |
ಪೇಳಲು ವ್ಯಥೆಯಪ್ಪುದಯ್ಯ ವಿಖ್ಯಾತ  ||ಅ.ಪ.||

ಪುತ್ರ ಸನ್ನಿಭ ಪಾಂಡು ನಾಕ ಸೇರಿದನು |
ಪತಿವ್ರತೆಯಹ ಮಾದ್ರಿ ಚಿತೆಯನೇರಿದಳು ||
ಪುತ್ರರೊಂದಿಗೆ ಕುಂತಿ ಕಷ್ಟದೊಳಿಹಳು |
ಇತ್ತು ಆಶ್ರಯವನ್ನು ಸಲಹು ಮೋದದೊಳು ||185||

ಅಳಿದನೆ ಪಾಂಡುವು ಅಯ್ಯ ಕಾನನದಿ |
ನಳಿನಾಕ್ಷಿ ಬಾಲರ ಕಾಣುತ ಮದದಿ ||
ಬಳಲಬೇಕಾಗಿಲ್ಲ ನೀವು ಕಾನನದಿ |
ಸಲಹುವೆ ನಿಮ್ಮನು ರಾಜ ಭವನದಿ ||186||

ವಾರ್ಧಕ

ಆಪತ್ತುಗಳ ಭೀಷ್ಮ ಧತರಾಷ್ಟ್ರನಿಗೆ ತಿಳುಹಿ |
ಭೂಪತಿಯ ಸುತ ಸಲಹುತ್ತಲಿರೆ, ಬಡತನದ |
ತಾಪದಿಂ ಬಳಲಿ ಕಂಗಾಣದೆಯೆ ದ್ರೋಣ ತಾಂ ನಡೆತಂದ ಪಾಂಚಾಲಕೆ ||
ತಾಪಸನ ಬಳಿ ವಿದ್ಯೆ ಪಠಿಸುತಿರೆ ಬಾಲ್ಯದಲಿ |
ಭೂಪಸುತ ದ್ರುಪದಾಖ್ಯ ಜೀವ ಸಖನಾಗಿರ್ದ |
ಭೂಪಾಲನಾಗಿ ಓಲಗದೊಳಿರೆ ತಾ ಬರಲು ಬಾಗಿಲವ ಕಂಡೆಂದನು ||187||

ರಾಗ ಮಾರವಿ ಏಕತಾಳ

ಎಲೆ ಎಲೆ ಪಾರ್ವಾ ಯಾರೈ ನೀನು | ನಿಲು ನಿಲು ನಿಲ್ಲಲ್ಲಿ ||
ಸೆಲೆ ಹುಚ್ಚಾಟದಿ ಮುಂದೈ ತಂದರೆ | ಕಳುಹುವೆ ಬಂಧನಕೆ ||188||

ರಾಗ ಕೇತಾರಗೌಳ ಅಷ್ಟತಾಳ

ದ್ವಾರಪಾಲಕ ಕೇಳು ತೋರುವೀ ರಾಜ್ಯದ | ಭೂರಿ ವೈಭವದರಸ ||
ಭಾರಿ ವಿಖ್ಯಾತನ ಕಾಣಲೋಸುಗ ಬಂದೆ | ಮೀರಿದ ಸಂತೋಷದಿ ||189||

ರಾಗ ಮಾರವಿ ಏಕತಾಳ

ಭಲೆ ಭಲೆ ಭಟ್ಟಾಚಾರ್ಯನೆ ರಾಜನ | ಬಳಿಗೈದಲು ನೀನು ||
ತಿಳಿಯೆಯ ಅರಮನೆ ಕ್ರಮನಿಬಂಧನೆ | ಹಳುವದಿ ಬಂದವನೆ ||190||

ರಾಗ ಕೇತಾರಗೌಳ ಅಷ್ಟತಾಳ

ಎಲವೊ ಕೇಳೆಲೊ ಎನ್ನ | ಬಾಲ್ಯ ಸ್ನೇಹಿತನವ | ಗೆಳೆಯನ ಕಂಡರೀಗ |
ತಳೆಯುವ ಸಂತಸ | ತಿಳಿಯೆ ನೀನದ ಚಾರ | ಗಳಿಲನೆ ಒಳಗೆ ಬಿಡು ||191||

ರಾಗ ಮಾರವಿ ಏಕತಾಳ

ಹರಹರ ನಿಮ್ಮಯ ಗೆಳೆತನ ಗೈದನೆ | ಅರಸಗೆ ಸಖರ್ಸಿಗದೆ ||
ಬರಿ ಎಲು ನರಚರ್ಮಂಗಳ ಹಂದರ | ಸರಿಯೆಲೋ ವೈದ್ಯನೆಡೆ ||192||

ಒಡೆಯನ ಊಳಿಗ ಮಾಡುವ ಬಡವನೆ | ಕೆಡುನುಡಿ ನಿನಗೇಕೆ ||
ಗಡಿಮೀರಿದ ಮಾತಾಡಿದೆಯಾದರೆ ಕೆಡುವೆಯ ಫಡ ಜೋಕೆ ||193||

ಭಾಮಿನಿ

ಕಣುಗಳಲಿ ಕಿಡಿಸೂಸಿ ಗರ್ಜಿಸೆ |
ಮನದಿ ಭಯಗೊಂಡಾಗಲೊಂದಿಸಿ |
ಜನಪಗರಿಕೆಯ ಮಾಳ್ಪೆನೆನುತೈದಿದನು ಜವದಿಂದ ||
ಜನಪತಿಯು ದ್ರುಪದಾಖ್ಯ ವಿಭವದಿ |
ಗಣಿಕೆಯರ ನತ್ಯವಿಲಾಸದಿ |
ಎಣೆಯಿರದ ಒಡ್ಡೋಲಗದೊಳಿರೆ ಬಂದು ಚಾರಕನು ||194||

ರಾಗ ಸುರಟಿ ಏಕತಾಳ

ಲಾಲಿಸು ದೊರೆರಾಯ | ದ್ವಾರವ | ಪಾಲಿಸುತಿರೆ ಜೀಯ ||
ಕಾಲನೊ ಅನಲನೊ ಕಾಲಾಂತಕನೊ |
ಓಲಗಕೈದುವೆನೆನುತೈದಿರುವನು ||195||

ಕಣುಗುಳಿ ಬಿದ್ದಿಹುದು | ನರ ಯೆಲು | ಗಣಿಸಲು ಬರುತಿಹುದು ||
ಜನಪತಿ ಸಖ ತಾ | ನೆನುತಿಹ ತಡೆಯಲು |
ಘನ ಕೋಪದಿ ತಾ | ಕನಲುತ ನಿಂದಿಹ ||196||

ಬಡ ಹಾರ್ವಗೆ ಬೆದರಿ | ಬಂದೆಯೊ | ನಡೆ ನೀ ಹೇಡಿಕುರಿ ||
ನಡೆದಿಹ ನತ್ಯವ | ಕೆಡಿಸದಿರೆನುತಿರೆ |
ನಡೆತರುತೊಯ್ಯನೆ | ನುಡಿದನು ಕುಂಭಜ ||197||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಮರೆತಿಹೆ ಯೇಕೆ ಎನ್ನನು | ಗುರುತಿಸೆಯ ನೀ ಪರಮ ಸಖನನು |
ಗುರುಕುಲದಿ ನಾವ್ ಕೂಡಿ ನಲಿದಿಹ | ಪರಿಯನೆಲ್ಲ ||198||

ತಿರುಕ ಹಾರುವರೊಡನೆ ನಪರಿಗೆ | ಸರಿಯೆ ಸಖತನ ಕಾಣೆ ನಿನ್ನಯ |
ಗುರುಕುಲವ ನೀನ್ಯಾರೊ ಪೊರಡೆನೆ | ಮರಳಿ ನುಡಿದ ||199||

ಕ್ಷೋಣಿಪಾಲಕ ನಿನ್ನ ಸಖನಾ | ದ್ರೋಣನನು ನೀನೆಂತು ಮರೆತೈ |
ಕ್ಷೋಣಿಯರ್ಧವನೀವೆನೆಂದಿಹೆ | ಮಾಣದುಸುರು ||200||

ಸೂರಿಗತಿ ಮೂರ್ಖಂಗೆ, ಹೇಡಿಗೆ ವೀರನಿಗೆ, ಭಂಡನಿಗೆ ಮಾನ್ಯಗೆ |
ಧಾರಿಣಿಪ ತಿರುಕನಿಗೆ ಗೆಳೆತನ | ಸೇರಲುಂಟೆ ||201||

ಏನೆಲವೊ ವಿಶ್ವಾಸ ಘಾತಕಿ | ಯೇನು ಬಂದಿರಿ ಎಂಬ ನಯನುಡಿ |
ತಾನೆ ಸಾಲದೆ ಧನವ ಸುಡು ನಿನ | ಗೇನನೆಂಬೆ ||202||

ನೆತ್ತರಿನ, ವಿಕ್ರಮದ, ಪಥಿ್ವಯ | ನೊತ್ತಿಯಾಳುವ ಸತ್ವ, ಯವ್ವನ |
ನೆತ್ತಗೇರಿತೆ ತಿರುಕನೆಂದೆಯ | ಇತ್ತ ಕೇಳು ||203||

ಎಲವೊ ತವ ತನು, ರಾಜ್ಯಸಿರಿ ಚಣ | ದೊಳಗೆ ಸುಡುವೆನು ತಡೆವುದು |
ಕಲಿಸಿ ಶಿಷ್ಯರ ಕಳುಹಿ ಕಟ್ಟಿಸಿ | ತಲೆಯನೊದೆವೆ ||204||

ಕಂದ

ಅತಿಶಯ ಕೋಪದಿ ಕಲಶಜ |
ಸತಿಸುತರ್ವೆರಸುತೆ ತೊಳಲಿದು ಹಲದೇಶಗಳಂ ||
ಮುತಿಯುತ ಶಿಷ್ಯರನರಸುತ |
ಲೈತಂದನು ಕರಿಪುರಕತಿ ವೇಗದಿ ವೀರಂ ||205||

ಕೂಪದಿ ಮುದ್ರಿಕೆ ಯೆತ್ತಿದ |
ಚಾಪ ಚತುರತೆಯನರುಹಲು ತರಳರು ಭೀಷ್ಮಂ |
ಬಾಪುರೆಯೆನುತಲಿ ಕರೆಸುತ |
ಲಾ ಪರಿ ಪರಿ ಮನ್ನಿಸುತಾಗಮನವ ಕೇಳ್ದ ||206||

ರಾಗ ಬೇಗಡೆ ಏಕತಾಳ

ಕೇಳು ಭೀಷ್ಮಾಚಾರ್ಯ ಎನ್ನಿರವ | ಪೇಳುವೆನೀಗ |
ಶೂಲಿಸಮವಿಕ್ರಮಮನೆ ನಡೆದಿರುವ ||
ತಾಳಿಹೆನು ಕಲಶದಲಿ ಜನುಮವ |
ಬಾಳು ಬಡತನ ಚಾಪ ವಿದ್ಯೆಯ |
ಪೇಳ್ವೆ ಬಾಲರಿಗೆನುತಲಾಶೆಯ |
ತಾಳಿ ದೇಶವ ತೊಳಲಿ ಬಂದೆನು ||207||

ಎಂದ ದ್ರೋಣನ ನುಡಿಯ ಕೇಳುತ್ತ | ಗಾಂಗೇಯ ಹರುಷವ |
ಹೊಂದಿ ನುಡಿದನು ವಿಪ್ರಗೆರಗುತ್ತ ||
ಕಂದರಿಹರ್ನೂರಾರು ಎಮ್ಮಲಿ |
ಇಂದು ಬಹುಲೇಸಾಯ್ತು ನೀನೈ |
ತಂದುದವರಿಗೆ ಚಾಪ ವಿದ್ಯೆಯ |
ಚಂದದಿಂದೊರೆ ಗೌರವಿಸುವೆನು ||208||

ಗರಡಿಯಾಲಯ ಭೀಷ್ಮ ರಚಿಸಲ್ಕೆ | ಧೃತರಾಷ್ಟ್ರಪಾಂಡು |
ತರಳರು ಪಠಿಸೆ ವಿದ್ಯೆ ದಿನದಿನಕೆ ||
ನೆರೆದರೈ ಹಲವಾರು ದೇಶದ |
ಧರಣಿಪಾಲರ ಸುತರ ವಿದ್ಯೆಯ |
ನರಿಯುವರೆ ಏನೆಂಬೆ ದ್ರೋಣನ |
ಪರಮ ಕೀರ್ತಿಯು ತುಂಬಿದೆಣ್ದೆಸೆ ||209||