ರಾಗ ನಾಟಿ ಝಂಪೆತಾಳ

ಗಜವದನ ಹರಜಾತ | ಭಜಕಜನ ಪೊರೆವಾತ |
ಸುಜನ ಜನ ಸುಪ್ರೀತ | ಭಜಿಪೆ ಗಣನಾಥ ||
ಜಯ ಜಯತು ಜಯತು ||1||

ವಿಘ್ನಾಟವಿ ಧ್ವಂಸ | ವಿಘ್ನಗಜ ಪಂಜಾಸ್ಯ |
ವಿಘ್ನಾದ್ರಿ ವರಕುಲಿಶ | ಹರಸು ವಿಘ್ನೇಶಾ ||
ಜಯ ಜಯತು ಜಯತು ||2||

ಸೋಮೇಶ್ವರಾ ವಾಸ | ಸೋಮಾರ್ಕ ಶತಭಾಸ ||
ಸೋಮಧರಸುತ ಹರಸು | ಕಾಮಿತ ಗಣೇಶಾ ||
ಜಯ ಜಯತು ಜಯತೂ ||3||

ಭಾಮಿನಿ

ವೀಣೆ ಪುಸ್ತಕ ಪಾಣಿ, ವರ ಕ |
ಲ್ಯಾಣಿ ಕಮಲಜ ರಾಣಿ ಪರ ಸು |
ಶ್ರೋಣಿ ಶಾರದೆ ವಾಣಿ ಭಾರತಿ ನೆಲಸಿ ಜಿಹ್ವೆಯೊಳು ||
ಜಾಣೆಯೊದಗಿಸು ಉಕ್ತಿ ಶಕ್ತಿಯ |
ಜಾಣ, ಕವಿ, ಬುಧರೆಲ್ಲ ಮೆಚ್ಚಲು |
ಕ್ಷೋಣಿಯೊಳು ಸತ್ಕೃತಿಗೆ ಮಂಗಲ ಕರುಣಿಸೌ ತಾಯೇ ||4||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಜನಮೇಜಯಗೆ ಮುನಿಪತಿ |
ವರ ಮಹಾ ಭಾತರವನೊರೆಯುತ |
ಲಿರಲು ನಪ ತಾನೆರಗಿ ಕೇಳ್ದನು | ಹರುಷದಿಂದ ||5||

ರವಿಸುತನ ಜನ್ಮಾದಿ ಕಥೆಯನು |
ಸವಿಯಬೇಕೆಂಬಾಸೆ ಮನಕಿದೆ |
ತವಕದಿಂದದನೊರೆಯ ಬೇಕೆನೆ | ತವಸಿಯೊರೆದ ||6||

ಕ್ಷಿತಿಪ ಕುಂತೀಭೋಜ ಧರೆಯನು |
ಅತಿ ವಿಭವದೊಳಗಾಳುತಿರುತಿರೆ |
ಸುತೆಯ ಸಲಹುವ ಆಶೆಯಿಂದಲಿ |
ಸತಿಯು ಕೊರಗೆ ||7||

ಮಿತ್ರಯಾದವ ಶೂರನೆಂಬನ ಪುತ್ರಿ |
ಪ್ರಥೆಯನು ದತ್ತು ಪಡೆಯುತ |
ಪುತ್ರಿಯಂದದಿ ಸಲಹಿ ಕುಂತಿಯೆ |
ನುತ್ತ ಕರೆದ ||8||

ಜನಪ ವೈಭವದೊಳಿರೆ ಬಂದನು |
ಮುನಿಪ ದೂರ್ವಾಸಾಖ್ಯ ಕಣುತ |
ಲನುಪಮನ ಭಕುತಿಯೊಳು ಮನ್ನಿಸಿ | ಜನಪ ನುಡಿದ ||9||

ರಾಗ ಕೇತಾರಗೌಳ ಅಷ್ಟತಾಳ

ಎತ್ತ ಗಮನವಿದು | ಬಿತ್ತರಿಸೈ ಮುನಿ | ಪೋತ್ತಮ ಕತಕತ್ಯನಾದೆ ||
ಹತ್ತಿದ ಅಘವೆಲ್ಲ | ಹೊತ್ತಿಹೋಯಿತು ಈಗ | ಕತ್ತಿವಾಸನ ರೂಪ ಮುನಿಪ ||10||

ಜನಪ ಕೇಳೈ ತೀರ್ಥಾ | ಟನೆಗೈದು ಬಂದೆ ಪಾ | ವನ ಚರಿತನೆ ನಿನ್ನ ಬಳಿಗೆ ||
ಜನರೆಲ್ಲ ಸುಖಿಗಳೆ | ವರ್ಣಧರ್ಮಗಳೆಂತು | ಅನುಸರಿಪರೆ ನೀತಿ ನ್ಯಾಯಾ ||11||

ಹರನನುಗ್ರಹದಿಂದ ಸರಿಯಿದೆ ಸರ್ವವ | ದರಿಪುದೈ ಬಿನ್ನಪವಾ ||
ನೆರೆಚಾತುರ್ಮಾಸವ | ನರಮನೆಯಲಿ ಕಳೆ | ಪರಮಾನು ಗ್ರಹವ ತೋರಿ ||12||

ಧರಣಿಪನರಿಕೆಯ | ವರ ಮುನಿಯೊಪ್ಪಲು | ಪರಿಕರ ಮೇಳೈಸುತ ||
ಪರಿಚಾರತ್ವಕೆ ತನ್ನ ತರಳೆ ಕುಂತಿಯ ಕರೆ | ದೊರೆದಿನು ಪ್ರೇಮದಲಿ ||13||

ರಾಗ ಮಧುಮಾಧವಿ ತ್ರಿವುಡೆತಾಳ

ಮಗಳೆ ಮಂಗಲವತಿಯೆ ಕೇಳೌ | ಸುಗುಣೆ ನಿನ್ನಭ್ಯುದಯವೊದಗಿದೆ |
ವಿಗಡ ರುದ್ರನಹೋಲ್ವ ಮುನಿಪನ | ಸೊಗದಿ ಸೇವಿಸುತೀರ್ಪುದು ||14||

ಕಾಲಕಾಲಕೆ ಪುಷ್ಪ ಫಲಗಳ | ಮೇಳವಿಸು ಪೂಜಾದಿ ಪರಿಕರ |
ಕೇಳುತಿರು ಧರ್ಮಾದಿ ವಿಷಯವ | ಬಾಳು ಸಾರ್ಥಕಮಪ್ಪುದು ||15||

ವನಿತೆಯನು ಒಪ್ಪಿಸುತ ನುಡಿದನು | ಮುನಿಪ ಚಿಕ್ಕವಳಿಹಳು ದೋಷವ |
ನೆಣಿಸದಾಗ್ರಹಗೊಳದೆ ಕಾವುದು | ಅಣುಗೆಯನ್ನನುಗ್ರಹಿಪುದು ||16||

ಅಸ್ತೆನುತ ಮುನಿಯೆರಗಿದ ಸತಿ | ಮಸ್ತಕವ ತಡವರಿಸಿ ಹರಿಸಿದು |
ವಸ್ತಿಯಲಿ ಪೂಜಾದಿ ಕಾರ್ಯದಿ | ವ್ಯಸ್ತನಾಗಿರೆ ಮುನಿಪತಿ ||17||

ಭಾಮಿನಿ

ಅರಸ ಕೇಳ್ಕ್ರಮವರಿತು ಸೇವಿಸೆ |
ಪರಮ ಮುನಿ ಸುಪ್ರೀತನಾಗುತ |
ಭರದಿ ಸಾಮುದ್ರಿಕದೊಳರಿತನು ಭಾವಿ ಸಂಗತಿಯ ||
ತರುಣಿ ಚಕ್ರೇಶ್ವರನ ಕೈಪಿಡಿ |
ದರೆಯು ಪತಿಸುಖದೊರಕಲರಿಯದು |
ಪರಮ ಮಂತ್ರಗಳಿತ್ತು ತರಳೆಯನುದ್ಧರಿಪೆನೆನುತ ||18||

ರಾಗ ಕೇತಾರಗೌಳ ಝಂಪೆತಾಳ

ಜಲಜಾಕ್ಷಿ ಕೇಳೆ ಬಾಲೆ | ಕರದೊಳಿಹ | ಫಲವ ನಾ ಪೇಳ್ವೆ ಶೀಲೆ ||
ಛಲ ಬಲ ಸುಗುಣ ಶೀಲನು | ಚಕ್ರಪತಿ | ಗೆಲಿದೊಲಿಪನೈ ನಿನ್ನನು ||19||

ಮುಂದೆ ಬಹ ಕಷ್ಟಕೊಂಚ | ಕೊದಗುವರೆ | ಇಂದೀವೆ ಮಂತ್ರ ಪಂಚ ||
ವಂದಾರಕರನಾರನು | ಕರೆದಾಗ | ಬಂದೊದಗಿ ವರವೀವನು ||20||

ಮಂತ್ರೋಪದೇಶವೀಯೇ | ಮಾನಿನಿಯು | ಸಂತೋಷ ಜಲದಿ ಮೀಯೆ ||
ಕಾಂತೆಯನು ಮುನಿ ಹರಸುತ | ನಡೆದ ಭೂ | ಕಾಂತನನು ಬೀಳ್ಕೊಳ್ಳುತ ||21||

ಕಂದ

ಮುನಿ ನಾಲ್ಮಾಸವ ಕಳೆಯುತ |
ವನಕಭಿಗಮಿಸಿದ ಕಳೆಯಲು ಕೆಲ ದಿನ ನಾರೀ ||
ಮಣಿ ಸಖಿಯೊಡವೆರಸೊಂದಿನ |
ವನದೊಳು ವಿಹರಿಸಲೆನುತಲಿ ಬಂದಳು ಜವದಿಂ ||22||

ರಾಗ ಕೇತಾರಗೌಳ ಝಂಪೆತಾಳ

ನೋಡಿದರು ವನ ವಿಭವವ | ಮಗ ಪಕ್ಷಿ |
ಯಾಡುತಿಹ ವಿವಿದಾಟವ ||
ಸೂಡಿದರು ಕೊಯ್ದ ಹೂವ | ಇಬ್ಬರ |
ಡ್ಡಾಡಿದರು ಉದ್ಯಾನವ ||23||

ನೋಡು ನೋಡಾಚೆ ತರುಣಿ | ಮೂಡಲಲಿ |
ಮೂಡಿ ಬಹ ಬಾಲ ತರಣಿ ||
ಓಡಿದಳು ರಾತ್ರಿ ರಮಣಿ | ಜಗಶಕ್ತಿ |
ಗೂಡೆ ನಗುವಳು ಪದ್ಮಿನಿ ||24||

ಬಾನೊಳಗೆ ಭಾನು ಬೆಳಿಗೆ | ಈ ರೀತಿ |
ಕಾಣುವನು ಬಂದರಿಳೆಗೆ ||
ತಾನೆಂತು ಸೊಬಗೊ ಮೇಗೆ | ಎನೆ ಸಖಿಗೆ |
ಮಾರ್ನುಡಿದಳ್ ಕುಂತಿ ಹೀಗೆ ||25||

ಬರಿಸ ಬಲ್ಲೆ ತರಣಿಯ | ನಮ್ಮೆಡೆಗೆ |
ವರಮಂತ್ರವಿಹುದು ಮುನಿಯ ||
ತರುಣಿ ನೋಡೌ ಕರೆಸುವೆ | ಮುನಿಮಂತ್ರ |
ಧರೆಯೊಳಗೆ ನಾ ಮೆರೆಸುವೆ ||26||

ಶುದ್ಧಾಂತಃಕರಣದಿಂದ | ಸತಿ ನೆನೆಯೆ |
ಸಿದ್ಧ ಮಲ ಮಂತ್ರದಿಂದ ||
ಹೊದ್ದಿದನು ರವಿ ಧರಣಿಗೆ | ಕಾಣೆ ಭಯ ||
ಹೊದ್ದಿತೈ ತರುಣಿಯರಿಗೆ ||27||

ಭಾಮಿನಿ

ಏನು ಕರೆಸಿದೆ ಬಾಲೆ ಎನ್ನನು |
ಏನು ನಿನ್ನಭಿಲಾಷೆಯೊರೆಯೌ |
ಸಾನುರಾಗದೊಳೀವೆ ನಿನ್ನಿಷ್ಟಾರ್ಥ ಸಂಪದವ ||
ಕಾಣುತಲಿ ವಿಧಿವಶದಿ ರವಿಸಮ |
ಸೂನುವನು ಪಡೆವಾಶೆಯಲಿ ಸು |
ಬಾಣ ಹತಿಯಲಿನೊಂದು ನಾಚುತ ನುಡುದಳಿವನೊಡನೆ ||28||

ರಾಗ ತೋಡಿ ಅಷ್ಟತಾಳ

ದೇವ ನಿಮ್ಮ ದರ್ಶನದೊಳು | ಪಾವನಾಯ್ತು ಜನುಮವೆನ್ನ |
ನೀವು ತೆರಳಬೇಹುದೆನಗೆ ಬೇಡವಾವುದೂ ||29||

ರಾಗ ಕೇತಾರಗೌಳ ಅಷ್ಟತಾಳ

ವನಜ ಗಂಧಿನಿ ನಿನ್ನ | ಮನದಭಿಲಾಷೆಯು |
ಎನಗೀಗಲರಿತಿಹುದು ||
ಅನಿಮಿಷನಂ ಕರೆ | ದಿನಿತು ನಿಷ್ಪಲಮಾಗೆ |
ಘನತೆಯಲ್ಲುಭಯರಿಗೆ ||30||

ರಾಗ ತೋಡಿ ಅಷ್ಟತಾಳ

ಬೇಡ ಬೇಡ ಬೇಡಲಾರೆ | ರೂಢಿಪಾಲ ಕನ್ಯೆ ನಾನು |
ಮಾಡೆ ಮನವ ಶೀಲ ಘನತೆ | ನೀತಿ ತೊರೆಯಲು ||31||

ರಾಗ ಕೇಾರಗೌಳ ಅಷ್ಟತಾಳ

ಸರಸಿಜಾಕ್ಷಿಯಿದೇನ | ನೊರೆವೆಯ ವರವದು |
ನೆರವೇರದಿರೆ ಮುನಿಯು ||
ಕೆರಳಿರುದ್ರನ ತೆರ | ನುರಿದು ಶಾಪಿಪನೆಮ್ಮ |
ಸರುವನಾಶಗಳಪ್ಪುದು ||32||

ವಾರ್ಧಕ (ಅರ್ಧ)

ಶಾಪಮೆನೆ ಸತಿಬೆದರಿ ಕಂಗಾಣದಿರೆ ಕಾಮ |
ತಾಪದುರಿಯೇರುತಿರೆ ತಪನಕರ ಪಿಡಿಯಲ್ಕೆ |
ಕೋಪಿಸುತ ಸಖಿ ತಡೆಯೆ, ರವಿ ಮೂರ್ಛಿಸುತಲವಳ ಸೆಳೆದೊಯ್ದ ಸತಿಯ ಮರೆಗೆ || ||33||

ಕಂದ

ಸುತ್ತಲು ದಿವದೊಳು ಕವಿಸುತ |
ಕತ್ತಲೆ ಭೋಗಿಸೆ ದಿನಕರ ಸತಿ ಭಯದೊಳಗಂ ||
ಅತ್ತಳು ಬಹುತೆರ, ರವಿವರ |
ವಿತ್ತನು ಕನ್ನಿಕೆತನಕೆಡದಹ ಸುತನೆನುತಂ ||34||

ರಾಗ ಸಾಂಗತ್ಯ ರೂಪಕತಾಳ

ರವಿ ಬಾನನೇರಲ್ಕೆ ಕವಿದ ಕತ್ತಲೆ ಮಾಯೆ |
ಭುವಿಯೊಳು ಮಲಗಿರ್ದ ಸಖಿಯು ||
ನಿರ್ವಿಣ್ಣೆ ಕುಂತಿಯ ಬಳಿಗೈದಿ ತಬ್ಬುತ |
ನಿವರುತ ಸಂತೈಸಲಾಕೆ ||35||

ತಾಯೆ ಕೇಳವ್ವ ಎನ್ನಯ ಧರ್ಮ ಹಾಳಾಯ್ತು |
ಸಾಯುವೆ ವಿಷವನ್ನು ಕುಡಿದು ||
ಹೇಯವಾದೀ ದೇಹ ಹೊತ್ತು ಬಾಳಲಾರೆ |
ಬೇಯುತಲಿಹುದೆನ್ನ ಹದಯ ||36||

ವಿಧಿ  ನಿಯಮವ ಮೀರ್ವರಾರುಂಟು ಲೋಕದಿ |
ಸದಮಲೆ ನೀನಹುದಮ್ಮ ||
ಒದಗಿಬಹುದನೆಲ್ಲ | ಇದಿರಿಸುವುದೆ ಬಾಳ್ವೆ |
ಪದುಮಾಕ್ಷ ಕಾಯುವ ನಿಮ್ಮ ||37||

ಚೆನ್ನ ಧರ್ಮವ ಕಾವ | ರನ್ನು ಕಾವುದು ಧರ್ಮ |
ವೆನ್ನದು ಧರ್ಮವೆಂತು ||
ಕನ್ನೆಯ ನಾ ಮದುವೆಂು | ಮುನ್ನ ಪಡೆಯೆ ಸುತ |
ರೆನ್ನರೆ ಕುಲಟೆಯೆಂದು ||38||

ದೇವಿ ಕೇಳೆೆ ನಿನ್ನ | ಪಾವನ ಗರ್ಭದಿ |
ದೇವತೆಗಳು ಜನ್ಮತಾಳಿ ||
ಭೂವಲಯದಿ ಧರ್ಮಸ್ಥಾಪಿತ ಲಿಹರಂತೆ |
ದೂರ್ವಾಸ ಮುನಿ ಪೇಳ್ದನೊಮ್ಮೆ ||39||

ದೇವತೆಗಳು ಪುಟ್ಟೆ ಧರ್ಮ ಬೇಕಲೆ ತಾಯೆ |
ಪಾವನ ಚರಿತಕುಮವರು ||
ಕೋವಿದೆ, ಯೆನ್ನ ಸಂತೈಸಲೋಸುಗ ಪೇಳ್ವೆ |
ಈ ಮಾತನೊಪ್ಪೆ ನಾನು ||40||

ಮನುಜರ್ಗೆ ಪಾರ್ಥಿವ ತನು ಸುರರಿಗೆ ತೇಜಃ |
ತನು, ಮನುಜರ ವೀರ್ಯವು ||
ಘನತೇಜ ದೇಹದಿ ದಗ್ದವಪ್ಪುದು ತೇಜ |
ಮನುಜ ದೇಹವ ದಹಿಸುವುದು ||41||

ಮನುಜ ಸಂಭವೆಯಾದೊಡಲ್ಲ ಪಾರ್ಥಿವ ದೇಹ |
ತನು ತೇಜವಿದು ನಿಮ್ಮದು ||
ಇನ ವೀರ್ಯದಿಂದಲಿ | ತನು ಬೆಂದುದಿಲ್ಲವು |
ಘನ ಧರ್ಮವಿದು ನಿಮಗೆ ||42||

ಭಾಮಿನಿ

ಕಾಂತೆ ಸಂತವಿಸಲ್ಕೆ ಗುಪಿತದೊ |
ಳಂತಃಪುರದೊಳಗಿರಲು ನವಮಾ |
ಸಾಂತರದಿ ಸತಿ ಪಡೆದಳೈ ರವಿಯಾತ್ಮಸಂಭವನ ||
ಳಂತುರೂಪಿನ ಕವಚ ಕುಂಡಲ |
ವಾಂತು ಜನಿಸಿದ ಶಿಶುವ ಕಾಣುತ
ಕಾಂತೆ ಹಲುಬಿದಳ್ಮುತ್ತು ಸಡಲಿದ ಚಿಪ್ಪಿನಂದದಲಿ ||43||

ರಾಗ ಕೇತಾರಗೌಳ ಅಷ್ಟತಾಳ

ಮರುಗ ಬೇಡಲೆತಾಯೆ | ತೊರೆ ಶಿಶು ಜಲದಲ್ಲಿ |
ವರ ರಾಜಪುತ್ರಿ ನೀನು ||
ವರವಂಶ ಗೌರವ | ವಿರಿಸೆ ಸಮಾಜವ |
ಮರೆಸೆಂದಳಾ ಸಖಿಯೂ ||44||

ರಾಗ ನೀಲಾಂಬರಿ ಆದಿತಾಳ

ಕಾಣಮ್ಮಾ ಇಂಥಾ ಶಿಶುವನು | ತ್ಯಜಿಸುತಲೆಂತು |
ಪ್ರಾಣವಿಡಿದು ಬಾಳ್ವೆನು ||
ಮಾಣಲಿ ಕುಲ ಧರ್ಮವು ಹಾಳಾಗಲಯ್ಯ |
ನಾಣು ನಿಯಮ ಭೂತಿಯೂ ||45||

ಹಲಜನ್ಮ ತಪವಗಯ್ಯೆ | ಹೀಗಿರುವಂಥ |
ಚೆಲುಬಾಲನಹನೆ ತಾಯೆ ||
ಜಲದಲ್ಲಿ ಒಗೆಯಲೆಂತು | ಹಡೆದೆನ್ನ ಬಸಿರ
ಕಲುಮಣ್ಣ ತುಂಬಲೆಂತು ||46||

ಭಾಮಿನಿ

ಬಾಲ ಸೂರ್ಯನ ತೆರದಿ ಶೋಭಿಪ |
ಬಾಲನನು ಹರವಿಯಲಿ ಮಲಗಿಸಿ |
ಬಾಲೆತುಂಬಿದಳಧಿಕ ರತ್ನಾಭರಣ ಧನಗಳನು ||
ಶೀಲೆ ಸಖಿಯೊಡನಶ್ವ ನದಿಯಲಿ |
ತೇಲಿಸುತ ಜಗದಂಬೆ ಜಾಹ್ನವಿ |
ಪಾಲಿಸೌ ಸುತನಂತೆ ನೀ ಕೊಲಬೇಡ ಸಲಹಮ್ಮ || ||47||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳೈ ಹರವಿ ತೇಲುತ |
ತೆರಳಿ ಯಮುನೆಯ ಸೇರಿ ಬಳಿಕದು |
ಸುರನದಿಯ ಮೇಲಿಂದ ಸಾಗಿತು | ಭರದಿ ಮುಂದೆ ||48||

ಅಂಗ ರಾಜ್ಯದ ಸೂತನಧಿರಥ |
ಗಂಗೆಯನು ನಿತ್ಯದಲಿ ಸೇವಿಸಿ |
ಮಂಗಳಾಂಗಿಯೊಳ್ ಬೇಡುತಿರ್ದನು | ಕಂದನನ್ನು ||49||

ಬಂದು ಗಂಗೆಯೊಳಿಳಿದು ಶ್ರದ್ಧೆಯೊ |
ಳ್ಮಿಂದು ಎಂದಿನ ತೆರದಿ ಬೇಡುತ |
ನಿಂದಿರಲು ತೇಲುತ್ತ ಹರವಿಯು | ಬಂದಿತಲ್ಲೀ ||50||

ಕಂಡು ಮುಂದಕೆ ನಡೆದು ಪಿಡಿಯುತ |
ಭಾಂಡವನು ತಾನಿಣಿಕಿನೋಡಿದ |
ಕಂಡ ಕಣ್ಣನು ನಂಬದಾದನು | ಭಂಡಿ ಬೋವ ||51||

ಬಾಲತರಣಿಯೊ ಚಂದ್ರ ಬಿಂಬವೊ |
ಕಾಲ ಮೇಘದ ಮಿಂಚೊ ಅಗ್ನಿಯೊ |
ಆಲದೆಲೆಶಯನಾದಿದೇವನೊ | ಪೇಳದಾದಾ ||52||

ರಾಗ ಕಾಪಿ ಅಷ್ಟತಾಳ

ಶಿವನೆ ಯೇನ್ಚರಿ ಜಲದಿ | ಕವಿ |
ಛವಿಯ ಶಿಶುವನೊಗೆದರೊ ನಿರ್ದಯದಿ ||
ಅವಳೆಂಥ ರಕ್ಕಸಿ ಹಡೆದ | ಬೆಣ್ಣೆ |
ಗುವರರನ ತ್ಯಜಿಸುತ ಜೀವಿಪಳೆಂದ ||53||

ಬಾಲರಿಲ್ಲದ ಬಾಳು ಹಾಳು | ಮುಂದೆ |
ಕೇಳುವರಿಲ್ಲದಪ್ಪುದು ಬಹು ಗೋಳು ||
ಕೋಳು ಪೋಪುದು ವಂಶ ಬೋಳು | ಎಂದು
ಗೋಳಾಡುತಿರ್ದೆ ನಾ ದಿನ ಹಗಲಿರುಳು ||54||

ಬಂದಿತೆ ದಯವಿಂದು ಹರಿಗೆ | ರನ್ನ |
ಕಂದನ ಕರುಣಿಸಿ ಪೊರೆದನು ಮೇಗೆ ||
ಮಂದಿರವನು ಸೇರಿ ಸತಿಗೆ | ಆ |
ನಂದವ ತಿಳುಹಲೈತಂದನು ಮನೆಗೆ ||55||

ರಾಗ ಮಧುಮಾಧವಿ ಏಕತಾಳ

ಹಿಮಕರ ಮುಖಿ ಬಾರೆ ರಾಧೆ ಸುಶೀಲೆ |
ಕಮಲಾಕ್ಷ ದಯದೋರ್ದನೀಗೆಮ್ಮ ಮೇಲೆ ||
ಸುಮತರ ಸಮ ಶಿಶುವಿದೊ ಗಂಗೆ ಮೇಲೆ |
ಸಮಾವೇಶವಿರೆ ವಸು ತಂದೆನು ಕೇಳೆ ||56||

ಅವಚಿದೆ ಕವಚವು ಕುಂಡಲ ನೋಡು |
ರವಿ ತೇಜ ಮೊಗ ತುಂಬುದೇಹದ ಜೋಡು ||
ಪವಿ ರತ್ನ ಕನಕಾದಿ ಜತೆಯಿದೆ ಭಾರಿ |
ಅವನಿಪ ಕುಲಜಾತ ಸಲಹೆಲೆ ನಾರಿ ||57||

ರಾಗ ನೀಲಾಂಬರಿ ಏಕತಾಳ
(
ಧಾಟಿ : ಗಗನ ವಾಣಿಯ ತರುಣಿ ಕೇಳುತ್ತಾ,)

ರಮಣನುಲಿಯನು ರಾಧೆ ಕೇಳುತ್ತ | ನಗುತಲಿ ನಲಿದು |
ವಿಮಲ ಶಿಶುವನಪ್ಪಿ ಮುದ್ದಿಸುತ ||
ಕಮಲ ನೇತ್ರನು ಕಣ್ಣು ತೆರೆದನು | ನಮ್ಮಯ ಭಾಗ್ಯ |
ಕ್ಕಮರ ಜಗದೊಳುಂಟೆ ಎಣೆಯಿನ್ನು ||58||

ಹುಟ್ಟು ಬಂಜೆಯ ಮೊಲೆಯೊಳ್ ಕ್ಷೀರವು | ಒಸರಲು ತೊಡಗೆ |
ಹುಟ್ಟಿತಚ್ಚರಿ ವಿಧಿಯ ಆಟವು ||
ತೊಟ್ಟಿಲೊಳಗೆ ಇರಿಸಿ ಸಾಕುತ | ವಸುಷೇಣ ಪೆಸರ |
ನಿಟ್ಟು ಕರೆದರು ಮಮತೆ ದೋರುತ್ತ ||59||

ರಾಗ ಕಾಂಭೋಜಿ ಝಂಪೆತಾಳ

ಇತ್ತ ಕುಂತೀ ಭೋಜ | ಪುತ್ರಿಯಾ ವೈವಾಹ |
ಕುತ್ತಮವು ತಾ ಸ್ವಯಂವರವೆಂದು ತಿಳಿದು ||
ಪೃಥ್ವಿಪಾಲರ ಕರೆಸಿ | ಮತ್ತೆ ಸರ್ವರ ಗೆಲಿದ |
ಉತ್ತಮೋತ್ತಮನಿಂಗೆ ಸುತೆಯೀವೆನೆಂದು ||60||

ಸಚಿವನೊಡನೆಂದ ಕೇಳ್ | ಪುರವ ಸಿಂಗರಗೈಸು |
ಉಚಿತೋಲೆ ನಪತಿಂಗೆ ಗೌರವದಿ ಬರೆಸು ||
ರಚಿಸು ಮಂಟಪ ವಸ್ತು | ನಿಚಯವನು ಸಂಗ್ರಹಿಸು |
ಈ ಚೈತ್ರ ಪೂರ್ಣಮಿಯ ದಿನದಿ ವೈವಾಹ ||61||

ಕಂದ

ಜನಪನ ನೇಮದಿ ಸಚಿವಂ |
ಜನಪರಿಗೋಲೆಯ ಕಳುಹಿದ ಕರೆಸುತ ಶಿಲ್ಪೀ ||
ಜನರಿಂ ಜನಪದ ಸಿಂಗರಿ |
ಸನಿತಂ ಕಂಡಚ್ಚರಿ ಪಡೆದಿರೆ ಜನರಿತ್ತಂ ||62||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ದಮಘೊಷಾಖ್ಯ ಚೇದಿಯ |
ಪರಮ ವೈಭವದಿಂದಲಾಳ್ತಿರೆ |
ಚರನು ನಡೆತಂದೋಲೆಯೀಯಲು | ತೆರೆಯುತೋದೀ ||63||

ಬರುವ ಚೈತ್ರದ ಪೂರ್ಣಮಿಯ ದಿನ |
ತರಳೆಗಾಂ ವೈವಾಹವೆಸಗುವೆ |
ಭರಿತ ವಿಕ್ರಮ ಫಣವು ನೀವು | ತ್ವರದಿಬಹುದು ||64||

ಹರುಷಗೊಳಿಸುತ ಚರನ ಬೀಳ್ಕೊಳು |
ತರಸ ಕುಂತಿಯನೊರಿಪೆನೆನ್ನುತ |
ಭರತ ಸೇನೆಯ ಕೂಡಿ ನಡೆತರೆ | ಹರುಷದಿಂದಾ ||65||

ರಾಗ ಭೈರವಿ ಝಂಪೆತಾಳ

ಚಾರು ಸಂಭ್ರಮದಿ ವಿ | ಸ್ತಾರವಾಗಿಹ ಸಿಂಧು |
ಧಾರಿಣಿಯ ಪಾಲಿಸಿರೆ ವದ್ಧ ಕ್ಷತ್ರಾಖ್ಯಾ ||66||

ಚಾರಕನು ನಡೆತಂದು | ತೋರಿದನು ಲೇಖನವ |
ಭೂರಿ ತೋಷವ ತಾಳುತೊರೆದ ನಪನಾಗಾ ||67||

ಧಿರುರೆ ಕುಂತೀ ಭೊೀಜ | ತರಳೆಯನು ನಾ ಗೆಲಿದು |
ವರಿಪ ಸೌಲಭ್ಯವಿದು | ದೊರಕಿಹುದು ಸುಕತ ||68||

ಎನುತ ಸಂತೋಷದಲಿ | ಜನಪ ಸೇನೆಯ ಕೂಡಿ |
ಮನದ ಉತ್ಸಾಹದಲಿ | ಘನ ವೇಗ ಹೊರಟ ||69||

ರಾಗ ಕಾಂಭೋಜಿ ಝಂಪೆತಾಳ

ಅರಸ ಕೇಳೈ ಪಾಂಡು ರಾಜನೋಲಗದೊಳಿರೆ |
ಚರನೋರ್ವ ನಡೆತಂದು ಎರಗಲದ ನೋಡಿ ||
ಅರರೆ ನಿನ್ನನು ಕಳುಹಿದವರಾರು ಕಾರಣವ |
ನರುಹೆನಲು ಲೇಖನವ ನಪವರನಿಗಿತ್ತ ||70||

ರಾಜವಂಶಾಬ್ದಿ ಶಶಿ ರಾಜ ವಾರಿರುಹ ವಿ |
ರಾಜಾಧಿರಾಜ ಗಜ ಪುರ ಪಾಂಡು ನಪಗೆ ||
ರಾಜ ಕುಂತೀ ಭೋಜನರಿಕೆಯಿದು ಮಮಸುತೆಗೆ |
ಯೋಜಿಸಿಹೆ ಸ್ವಯಂವರ ಸಾಗಿಸುವೆನೆಂದು ||71||

ಬರುವ ಚೈತ್ರದ ಪೂರ್ಣಮಿಯ ದಿನದಿ ನೆರೆದಿರುವ |
ದೊರೆಗಳಲಿ ಧುರಗೈದು | ಸರುವರನು ಗೆಲುವ ||
ವರ ವಿಕ್ರಮಿಗೆ ಲಗ್ನ | ವಿರಚಿಪೆನು ಆಗಮಿಸಿ |
ತರಳೆಯನು ಗೆಲಿದವಳನುದ್ಧರಿಸಬೇಕು ||72||

ಎಂದು ಬರೆದಿಹ ಪತ್ರ | ದಿಂದ ತೋಷವ ತಾಳಿ |
ಬಂದು ಭೀಷ್ಮಗೆ ಅಗ್ರಜಂಗೆರಗಿ ತಿಳುಹಿ ||
ಹೊಂದಿಯಾಶೀರ್ವಚನ | ಮಂದಿಗಳ ಕೂಡುತೈ |
ತಂದ ವಿಭವದಿ ಪಾಂಡು ನರಪತಿಯು ಭರದಿ ||73||

ಭಾಮಿನಿ

ತೋರೆ ಮಂಗಲ ಶಕುನ ನರಪತಿ |
ಭೂರಿ ತೋಷದಿ ಮುಂದೆ ಬರುತಿರೆ |
ಸಾರಿದರು ಭೂದಿವಿಜರವನಿಪ ಯಾಚಕಾದಿಗಳು ||
ಧಾರಿಣಿಪನಿದಿರ್ಗೊಂಡು ಸರ್ವರ |
ತಾರತಮ್ಯದೊಳುಪಚರಿಸೆ ರವಿ |
ಸಾರಿದನು ಪಡುಗಡಲ ನಿತ್ಯಾಹ್ನಿಕವ ತೊಡಗಿದರು ||74||

ರಾಗ ಮಾರವಿ ಏಕತಾಳ

ಮರುದಿನದುದಯದಿ | ವರ ಮಂಟಪದೊಳು | ನೆರಹುತ ಭೂಪರನು ||
ಪರಿಪರಿ ಹೆಣಗುತ ವಿಕ್ರಮದೋರಿರಿ | ವರಿಸಿರಿ ತರುಣಿಯನು ||75||

ಎಂದೆನೆ ಕೇಳುತ ನಪ ದಮ ಘೋಷನು | ಸ್ಯಂಧನವಡರುತಲಿ ||
ಹಂದೆಗಳಂದದಿ ಕುಳಿತಿಹುದೇತಕೆ | ಮುಂದಕೆ ಬಹುದೆಂದ ||76||

ರುದ್ರನ ತೆರನಾರ್ಭಟಿಸುತಲಾಕ್ಷಣ | ವದ್ಧಕ್ಷತ್ರಾಖ್ಯ ||
ಕ್ಷುದ್ರ ಪರಾಧಿಪ | ಗದ್ದಲವೇತಕೆ | ಛಿದ್ರಿಪೆ ನೋಡ್ನಿನ್ನಾ ||77||

ಪೂತುರೆ ಭೂಪನೆ ಮಾತುಗಳಾರೊಳು | ಘಾತಿಪೆ ನಿಲ್ಲೆನುತ ||
ಖಾತಿಯೊಳಂಬಿನ ಮಳೆಗರೆದನು ಭೂ | ನಾಥನು ವೇಗದಲಿ ||78||

ಬರುತಿಹ ಶರಗಳ ಸಿಂಧು ಧರಾಧಿಪ | ತರಿಯುತ ಪರಿಘವನು ||
ಭರದೊಳಗೆಸೆಯಲು ದಮಘೋಷನು ತಾ | ನರಿದನು ರೋಷದಲಿ ||79||

ಕುಂತಿಯ ಆಸೆಯ ಬಿಡುಬಿಡು ಪಾರ್ಥಿವ | ಪಂಥದಿ ಹೆಣಗಾಡು ||
ಹಿಂತಿರುಗದೆ ನೀ ನಿಲೆ ಶಿರವರಿಯುವಾ | ಕುಂತದ ಪರಿ ನೋಡು ||80||