ರಾಗ ಕಾಂಭೋಜಿ ಝಂಪೆತಾಳ

ಧರಣಿಪನು ಬಾಲಕನ | ಹರುಷದಿಂ ಮುದ್ದಿಸುತ |
ತರತರದ ವಿದ್ಯೆಗಳನುಪದೇಶಗೈದು ||
ತರಳ ವೃದ್ಧಿಸೆ ಕಾಲಕಾಲಕ್ಕೆ ಸರಿಯಾಗಿ |
ವಿರಚಿಸಿದ ಚೌಲೋಪನಯನಗಳ ಮುದದೀ  ||೨೮೩||

ಚೆಂಡನಾಡಲು ಪೋಗುತಲ್ಲಿ ಬಾಲರ ಗೆದ್ದು |
ಕುಂಡಲಿಯು ಮೂದಲಿಸೆ ಕಂಡೋರ್ವ ಕುವರಾ ||
ಗಂಡುಗಲಿ ನೀನಹುದು ಮಿಂಡರಿಗೆ ಪುಟ್ಟೀರ್ಪ |
ಭಂಡನೀನಮ್ಮೊಡನೆ ಸರಸಬೇಡೆನಲೂ      ||೨೮೪||

ಮನಕೆ ಬಂದಂತೆ ನೀವಿನಿತು ಪೇಳಲುಬಹುದೇ |
ಘನತೆಯೇನಿದು ನಿಮಗೆ ಎಲೆಬಾಲಕರಿರ
ಎನೆ ಕೇಳ್ದು ನಮಗೆಲ್ಲ ತಂದೆಯಿರುವರು ನಿನಗೆ |
ಜನಕನೆಲ್ಲಿಹನೆನಲು ಅರಿಯದಿರೆ ತರಳಾ     ||೨೮೫||

ಕರದ ಚೆಂಡನು ಬಿಸುಟು ತರಳನಾಕ್ಷಣ ಜನಿಸಿ |
ದಿರವ ತಿಳಿಯುವೆನೆಂದು ಗೃಹಕೇ  ||
ಭರದಿಂದ ಬಂದಾಗ ಶಿರಬಾಗಿ ಮಾತೆಯೊಳು |
ಒರೆದನಾ ಕುವರ ಗರ್ಜಿಸುತಾ      ||೨೮೬||

ಮಾತೆ ಲಾಲಿಸು ನಿನ್ನ ವರಿಸಿ ನನ್ನನು ಪಡೆದ |
ತಾತನೆಲ್ಲಿಹನೆಂಬ ನಿಜವಾ |
ಈ ತತೂಕ್ಷಣ ಪೇಳದಿರಲು ಖಡ್ಗದಿ ನಿನ್ನ |
ಘಾತಿಸುತ ಸಾವೆತಾನೆಂದಾ        ||೨೮೭||

ವಾರ್ಧಕ

ಜನಕ ಪರಿಣಯಗೈಯ್ಯಲೆನುತ ದೇಶಾಧಿಪರ |
ಘನತೆಯಿಂ ಕರೆಸಲಾ ವೇಳೆಯೊಳು ಬೃಹದ್ರಥನ |
ವನದೊಳಗೆ ಕಂಡು ಉಭಯರು ಘೋರ ಶಪಥದಿಂ ಮನವ ಕಠಿಣವ ಗೈಯ್ಯುತಾ ||
ದನುಜೆಯನ್ನರಿದು ವರಿಸುತ ತನ್ನ ಭಾಷೆಯಂ |
ಜನಪ ಯೋಚಿಸಿ ತೆರಳಲರಿತು ತನ್ನಯ ವಾಕ್ಯ |
ಇನಿಯನೋಳ್ ಸಲಿಸಿ ತಂದಿಹ ಗುರುತನೆಲ್ಲಮಂ ತನಯನಿಗೆ ತೋರಿಪೇಳೆ      ||೨೮೮||

ರಾಗ ಮಾರವಿ ಏಕತಾಳ

ಎಲೆ ಮಾತೆಯೆ ನೀ | ನಳಲುವದೇತಕೆ | ಬಳಲಿದರೇನಹುದೇ ||
ಜಲರುಹಭವ ಪಣೆ | ಯೊಳು ಗೈದಿಹ ಲಿಪಿ | ಗಳ ತಪ್ಪಲಿಕಹುದೇ         ||೨೮೯||

ಬಿಡು ಶೋಕವನೀ | ಕೊಡು ಎನಗಪ್ಪಣೆ | ಪೊಡವಿಪನೊಳು ನುಡಿದ ||
ಕಡುಗಲಿ ಶಪಥ ನಿ | ನ್ನೊಡಲೊಳು ಪುಟ್ಟಿಹ | ಹುಡುಗನು ತೀರಿಸುವಾ    ||೨೯೦||

ರಾಗ ಸೌರಾಷ್ಟ್ರ ಅಷ್ಟತಾಳ

ಸೈರಿಸು ನಿನ್ನಯ | ಧೈರ್ಯಕ್ಕೆ ಮೆಚ್ಚಿದೆ | ಕಂದ ಕೇಳು ||  ಸಣ್ಣ |
ಪೋರ | ನೀನಾಗಿಹೆ | ಶೂರನ ಗೆಲುವರೆ | ಕಂದ ಕೇಳು ||
ಭೂರಿಸೈನ್ಯಗಳಿಂದ | ಧಾರುಣಿಯಾಳುವ | ಕಂದ ಕೇಳು | ಮತ್ತೆ |
ಬಾರದು ಜಯವೀಗ | ಸಾರಿದೆ ಧುರದೊಳು | ಕಂದ ಕೇಳು      ||೨೯೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಯಾಕೆ ಪೊಗಳುವೆ ನೃಪನ ಶೌರ್ಯವ | ಲೋಕವಾತಗೆ ಮಾರಿ ಹೋಯಿತೆ |
ನಾಕವಾಸಿಗಳೆದುರು ಧುರದೊಳು | ಸಾಕೆನಿಸುವೇ    ||೨೯೨||

ರಾಗ ಸೌರಾಷ್ಟ್ರ ಅಷ್ಟತಾಳ

ಬೇಡ ಶೌರ್ಯವು ನಿನಗೀಗ ಸಾಲದು ಶಕ್ತಿ | ಕಂದ ಕೇಳು | ಮತ್ತೆ |
ರೂಢಿಯೊಳವನ ಪೋಲುವರಿಲ್ಲ ಧುರದೊಳು | ಕಂದ ಕೇಳು ||
ಆಡುವ ಬಾಲ ನೀನಾಗಿಹೆ ಛಲವೇಕೆ | ಕಂದ ಕೇಳು | ನಿನ್ನ |
ನೋಡೆ ಕಪೋಲದಿ ಹಾಲು ರಕ್ತಗಳಯ್ಯೋ | ಕಂದ ಕೇಳು       ||೨೯೩||

ವಾರ್ಧಕ

ವರಜನನಿಯೆಂದ ನುಡಿ ತರಳನಾ ಕರ್ಣದಲಿ |
ಶರಗಳಾಡಿಸಿದಂತೆ  ಕೊರೆಯುವನಿತರೊಳಾಗ |
ಧರಿಸಿ ಹಸ್ತದಿ ಧನುವನುರಿಸೂಸಿ ಕಂಗಳೊಳ್ ಭರದೊಳೆಂದನು ಗರ್ಜಿಸೀ ||
ಧರಣಿಪನ ಕರಕಟ್ಟಿ ತರದಿರಲು ದಿನವೆಂಟು |
ತೆರಳಿದರೆ ವೈಶ್ವಾನರಂಗರ್ಪಿಸುವೆ ದೇಹ |
ಮರೆಸಿದರೆ ಮತ್ತಿದಕೆ ಸುರಭಿವಿಪ್ರರ ತರಿದ ದುರಿತವಿರಲೆಂದ ತನಗೇ     ||೨೯೪||

ಕಂದ

ಇನಿತೀ ನುಡಿಯಾ ಕುವರನ |
ಜನನಿಯ ಜಠರದಲುರಿಯುತ ಭೇದಿಸಲಾಗಳ್ ||
ಘನಶೋಕದಿ ತಾಂ ಮೂರ್ಛಿಸೆ |
ತನಯನ ಪೊರೆವಾತನಾರೆನುತ್ತಲಿ ಸುಯ್ದಳ್ ||೨೯೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮತ್ತೆ ಕುಂಡಲಿ ಪೇಳ್ದ ಮಾತೆಯ | ನೆತ್ತಿ ಕಂಬನಿಗಳನೆ ಒರಸುತ |
ಚಿತ್ತಶುದ್ಧಿಯೊಳೆನಗೆ ಅಪ್ಪಣೆ | ಇತ್ತು ಕಳುಹೇ ||೨೯೬||

ಎನ್ನ ಸತ್ವವ ತೋರುವೆನು ಮು | ಕ್ಕಣ್ಣ ಹರಿಪರಮೇಷ್ಟಿಯೆದುರಿನೊ |
ಳಿನ್ನು ತಡವೇಕೆನಗೆ ಅಪ್ಪಣೆ | ಯನ್ನು ಕೊಡಿಸೂ        ||೨೯೭||

ಎನಲು ಲೇಸಹುದೆಂದು ಮಾತೆಯು | ತನಯನನು ಪರಸುತ್ತಲಿತ್ತಳು |
ಇನಿಯನಿತ್ತಿಹ ಮುಕ್ತ ಹಾರವ | ಅನುನಯದೊಳು      ||೨೯೮||

ಕೊರಳಹಾರವ ಧರಿಸುತಮ್ಮನ | ಚರಣಕಭಿವಂದಿಸುತ ಧನು ಝೇಂ |
ಕರಿಸಿ ಪಿತನಿತ್ತಿರುವ ರಥವನು | ತರಿಸುತಡರೀ        ||೨೯೯||

ಭಾಮಿನಿ

ಕಡುಪರಾಕ್ರಮದಿಂದಲೋರ್ವನೆ |
ಪಿಡಿದು ಚಮ್ಮಟಿಕೆಯನೆ ರಥವನು |
ಪೊಡೆಯೆ ಪೊಡವಿಯಪೊತ್ತ ದಿಗ್ಗಜ ಶಿರವ ತಗ್ಗಿಸಲೂ ||
ಅಡರೆ ಕೆಂಧೂಳುಗಳು ನಭವನು |
ನಡುಗೆ ಸುಮನಸಗಡಣ ನೋಡುತ |
ನುಡಿಯಲೇನದನೊಂದರಣ್ಯಕೆ ತೆರಳಲಾ ದಿನದೀ     ||೩೦೦||

ವಾರ್ಧಕ

ಪೊಡವಿಯಿಂದಭ್ರಮಂ ಚುಂಬಿಸುವ ತರುಗಳಂ |
ಸಡಗರದೊಳೊಪ್ಪಿರುವ ಪೂಪಣ್ಣ ಲತೆಗಳಂ |
ಮಡುಗಳೆನೆ ತುಂಬಿ ನಿರ್ಮಲಮಾದ ಕೊಳಗಳಿಂ ಗಡುಸಾದ ಮೃಗಗಳನ್ನೂ ||
ಕಡುಪರಾಕ್ರಮಿ ಕಂಡು ರಥವಿಳಿದು ಸರಸಿಯೊಳು |
ಬಿಡದೆ ಪಾದವ ತೊಳೆದು ಕರದೊಳುದಕವಧರಿಸಿ |
ಪಡುಗಡಲ ಸಾರುತಿಹ ದಿನಪಗರ್ಘ್ಯವನಿತ್ತು ಎಡಬಲವನೀಕ್ಷಿಸಿದನೂ     ||೩೦೧||

ಕಂದ

ಕಾರೀಷಾಖ್ಯಮುನೀಶಂ |
ಭೂರಿಶ್ರದ್ಧೆಯೊಳಸಂಖ್ಯ ಶಿಷ್ಯಸಮೇತಂ ||
ಗೌರೀಶವ್ರತ ದೀಕ್ಷಿತ |
ನೇರಿರ್ದಂ ಧ್ಯಾನಯೋಗದೊಳ್ ಕಾಡಿನೊಳಂ        ||೩೦೨||

ರಾಗ ಸಾಂಗತ್ಯ ರೂಪಕತಾಳ

ಜಯ ಜಯ ಜಗದೇಕನಾಥ ಸಂಕಟದೂರ | ಜಯ ಪಾಪತಿಮಿರ ಮಾರ್ತಂಡ ||
ಜಯ ಮೋಕ್ಷದಾತನೆ ಭವದಿಂದುತ್ತರಿಸೆನ್ನಾ | ಜಯ ಮಹೇಶ್ವರನೇ ನೀ ಸಲಹೈ   ||೩೦೩||

ರಾಗ ಕೇತಾರಗೌಳ ಅಷ್ಟತಾಳ

ಈ ರೀತಿಯೊಳಗೆ ಲೋಕೇಶನ ಸ್ತುತಿಸುತ್ತ | ಕಾರೀಷಮುನಿ ಪತಿಯೂ |
ಮಾರಾರಿವ್ರತವ ಗೈಯುತ್ತಿರಲಲ್ಲಿಗೆ | ಸಾರಿದ ಕುಂಡಲಿಯೂ    ||೩೦೪||

ಮುನಿಪನು ಮಂಗಳಾರತಿಯ ಮಹೇಶಗೆ | ಘನಭಕ್ತಿಯೊಳು ಬೆಳಗಿ ||
ವಿನಯದಿ ಶಿಷ್ಯರ ಕಡೆಗೆ ತಿರುಗೆ ಕಂಡ | ದಿನಪಕುಲೋದ್ಭವನಾ ||೩೦೫||

ಕುಂಡಲಿಕರವ ಜೋಡಿಸಿ ತಲೆಬಾಗೆ ಪ್ರ | ಚಂಡ ಮುನಿಪನಡಿಗೇ ||
ಮಂಡೆಯ ಪಿಡಿದೆತ್ತಿ ಬೆದರಬೇಡೆನುತಪ್ಪಿ | ಕೊಂಡು ಶಿರವ ಘ್ರಾಣಿಸೀ     ||೩೦೬||

ಅರಿತೆ ನೀ ಬಂದಿಹ ಕಾರ್ಯವನೆಲ್ಲವ | ವರಜ್ಞಾನದೃಷ್ಟಿಯಿಂದಾ ||
ಪುರವ ಸೇರಲು ಘೋರಕಾನನವನೆ ದಾಂಟಿ | ಚರಿಪುದು ಕಡುಕಷ್ಟವೈ    ||೩೦೭||

ಧೀರ ನೀನಹುದು ನಿನ್ನೆಯ ತಾಯಸ್ತನಗಳ | ಕ್ಷೀರವನುಂಡುದಕೇ |
ಧಾರುಣಿಪತಿಯ ತಂದೊಪ್ಪಿಸಿ ಭಾಷೆಯ | ಶೂರತನದಿ ಸಲಿಸು ||೩೦೮||

ರಾಗ ಬೇಗಡೆ ಆದಿತಾಳ

ತರಳನೇ ಸ್ವೀಕರಿಸೊ ಪರಶಿವನ | ಪ್ರಸಾದಗಳ ನೀ |
ಹರುಷದಿಂದಲಿ ಗೆಯ್ಯೊ ವ್ರತವಿದನಾ |
ಬರುವ ಮಾಸದೊಳೆರಡು ಪಕ್ಷದಿ | ವರತ್ರಯೋದಶಿಯೊಳು ಪ್ರದೋಷದಿ |
ಭರಿತ ವಿಧಿಯಿಂ ಪೂಜಿಸುವರಿಗೆ | ಹರನು ಕೊಡುತಿಹ ಸರ್ವಸಂಪದ     ||೩೦೯||

ಮುನಿಪನಡಿಗೆರಗುತ್ತ ಬಾಲಕನೂ | ಭಕ್ತಿಯೊಳು ಗೈಯ್ಯುವೆ |
ಮನಸಿಜಾರಿಯ ವ್ರತದ ವಿಧಿಗಳನೂ |
ತನಗೆ ಕರುಣದಿ ಪೇಳ್ವುದೆನಲಾ | ವನಜಸಖಕುಲತಿಲಕಗಾಗಳು |
ಅನುನಯದೊಳಭಯಗಳ ನೀಡುತ | ಮನದಿ ತೋಷವ ತಾಳುತೆಂದನು ||೩೧೦||

ವಾರ್ಧಕ

ಅರುಣನುದಯದೊಳೆದ್ದು ವ್ರತವ ಸಂಕಲ್ಪಿಸುತ |
ಕರೆದಿಷ್ಟ ಬಂಧುಗಳನುಪವಾಸದೊಳಗಿರ್ದು |
ವಿರಚಿಸುತ ಮಂಟಪವ ಕಲಶಮಂ ಪೂಡುತಂ ಹರಶಾಂಭವಿಯ ಪ್ರತಿಮೆಯಾ ||
ಗುರುವರನ ಕೂಡುತಂ ಸ್ಕಾಂದ ಪೌರಾಣೋಕ್ತ |
ವರ ಷೋಡಶೋಪಚಾರದ ಪೂಜೆಗೈಯ್ಯುತಲಿ |
ಹರ ಕಥಾಶ್ರವಣದಿಂದಾನಂದಮಂ ಪೊಂದಿ ನೀರಾಜನವಗೈಯ್ಯುತಾ    ||೩೧೧||

ಇತ್ತು ಗುರುವರಗೆ ದಕ್ಷಿಣೆಗಳಂ ಬಾಂಧವರಿ |
ಗಿತ್ತು ಪ್ರಸಾದಮಂ ಸ್ವೀಕರಿಸಿ ಕರ್ತ ತಾಂ |
ಪ್ರತ್ಯಕ್ಷ ಪರಶಿವಾರ್ಪಿತಮಾಗಿ ಭೋಜನದಿ ತುಷ್ಟಿಯಂಪಡಿಸಿ ಜನರಾ ||
ಅರ್ತಿಯಿಂ ನೃತ್ಯಗೀತಾದಿಗಳ ಬಳಕೆಯಿಂ |
ಮತ್ತಾದಿಮಧ್ಯಾಂತ್ಯದೊಳಗೆ ಉದ್ಯಾಪನೆಯ |
ಭಕ್ತಿಯಿಂ ಗೈಯ್ಯಲಿಹದೊಳಗೆ ಇಷ್ಟಾರ್ಥಮಂ ಮುಕ್ತಿಯಂ ಪಡೆವ ಪರದೀ ||೩೧೨||

ರಾಗ ಕೇತಾರಗೌಳ ಅಷ್ಟತಾಳ

ವ್ರತದ ವಿಧಾನವನರಿತು ಬಾಲನು ಮುನಿ | ಪತಿಗೆ ವಂದಿಸಿ ಪೇಳ್ದನೂ ||
ಗತಿಸಿತು ದಿನವೊಂದು ಪೋಪೆನು ಪುರಕೆನೆ | ಮತಿವಂತನಿಂತೆಂದನೂ  ||೩೧೩||

ತರಳನೆ ನಿನಗೆ ಮಂತ್ರಾಸ್ತ್ರದ ವಿಧಿಗಳ | ನರುಹುವೆ ಕಲಿತದನೂ ||
ತೆರಳಲ್ಕೆ ಜಯವಹುದೆಂದು ಪೇಳಲು ಮುನಿ | ಹರುಷದಿಂ ಕೈಗೊಂಡನೂ         ||೩೧೪||

ಉರಗಬಾಣಕೆ ವೈನತೇಯರು ವೈರಿಯು | ಗಿರಿ ವಜ್ರ ಶತ್ರುಗಳೂ |
ಹರಿಯಸ್ತ್ರ ಶತ್ರುವಾ ತಿಮಿರಕ್ಕೆ ವಹ್ನಿಗೆ | ನೆರೆ ವೈರಿ ವರುಣಾಸ್ತ್ರವೂ       ||೩೧೫||

ಮುನಿಪನೀಪರಿಯ ಮಂತ್ರಾಸ್ತ್ರದ ವಿಧಿಗಳ | ಘನ ಮೂಲಮಂತ್ರವನೂ |
ಇನಕುಲೋದ್ಭವಗುಪದೇಶವ ಗೈದನು | ದಿನಗಳೆರಡರೊಳಗೇ  ||೩೧೬||

ವಾರ್ಧಕ

ತರಳನತಿಭಕ್ತಿಯಿಂ ನುತಿಸಿ ಮುಕುಟವ ಚಾಚಿ |
ಚಿರಋಣಿಯು ಮೂಲಮಂತ್ರವನೆನಗೆ ಕಲಿಸಿದಿರಿ |
ಗುರುದಕ್ಷಿಣೆಯನೇನ ಕೊಡಲಿ ಧನಕನಕಗಳ ವರದರ್ಪಣದೊಳಿರ್ಪುದೂ ||
ಕರುಣದಿಂದುಪದೇಶವಿತ್ತ ನಿಮ್ಮಯ ದಿವ್ಯ |
ಚರಣಕರ್ಪಿಸಿದೆ ಭಕ್ತಿಗಳೆಂಬ ನವರತ್ನ |
ಶರಣಜನ ರಕ್ಷಕನೆ ಜಯತು ಎನಗಪ್ಪಣೆಯ ಹರುಷದಿಂದೀವುದೆನಲೂ    ||೩೧೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶಿರಕೆ ಕೈ ಚಾಚುತ್ತ ರಕ್ಷಾ | ವರಮಹಾಮಂತ್ರವನೆ ಜಪಿಸುತ |
ಹರಸಿ ಕಳುಹಿದ ಜಯಿಸು ಪಿತನನು | ತರಳ ಎನುತಾ ||೩೧೮||
ಭರದಿ ರಥವೇರುತ್ತ ಬಾಲನು | ಪುರದ ಮಾರ್ಗವ ಪಿಡಿದು ಬರುತಿರೆ |
ಒರೆವೆ ಕೇಳ್ಕಾಂಭೋಜದರಸನ | ತರಳನೋರ್ವ      ||೩೧೯||

ಹುಡುಗನಾಗಿಹ ಚಂದ್ರಸೇನನು | ಅಡವಿಯಲಿ ಕಾಷ್ಠಗಳ ನೆರಹುತ |
ಮೃಡನ ನೆನೆಯುತ ದೇಹವಗ್ನಿಗೆ | ಕೊಡುವೆನೆನುತಾ  ||೩೨೦||

ಇರುತಿರಲು ಧ್ವನಿಗೇಳಿ ಕುಂಡಲಿ | ಪರಿಕಿಸುತ ಸ್ಯಂದನವ ನಿಲ್ಲಿಸಿ |
ಮರುಗುತಿಹ ನೃಪಸುತನ ಕರೆಯುತ | ಲೊರೆದನಾಗ  ||೩೨೧||

ಆರ ಸುತ ನೀಂ ಮರುಗುತಿಹುದೇಂ | ಕಾರಣವು ಕಾಷ್ಠಾಗ್ನಿಯೇತಕೆ |
ಘೋರ ವಿಪಿನದೊಳಿರ್ಪ ಬಗೆಯ ಕು | ಮಾರ ಪೇಳೈ  ||೩೨೨||

ವಾರ್ಧಕ

ಅರುಹುವೆನು ಕೇಳು ಕಾಂಭೋಜ ದೇಶಕೆ ಪಿತನು |
ದೊರೆ ಶೂರ ಸೇನನೆಂಬಭಿದಾನವಾತನಂ |
ದುರುಳನಾಗಿಹ ಚೋಳ ಕೃತವರ್ಮನೈತಂದು ಧುರದಿ ಸಂಹರಿಸುತೆನ್ನ ||
ಕರೆತಂದು ಕಾನನದಿ ಬಿಟ್ಟು ಪೋಗಿಹ ನಾನು |
ಅರಿಯ ಜೈಸಲು ಸೈನ್ಯಶಸ್ತ್ರ ಸಂಚಯವಿಲ್ಲ |
ಧರಿಸಿ ಫಲವೇನಿನ್ನು ದೇಹವನ್ನೊಪ್ಪಿಸುವೆ ಉರಿವಗ್ನಿಯೊಳಗೆಂದನೂ     ||೩೨೩||

ರಾಗ ಕೇದಾರಗೌಳ ಝಂಪೆತಾಳ

ಏರೆನ್ನ ರಥವ ಬೇಗ | ಸತ್ವಗಳ | ತೋರಿಸುವೆ ಚೋಳಗೀಗ |
ಸೇರಿಸುವೆ ಯಮಪುರಿಯನೂ | ಬಾಲಕನೆ | ಧಾರುಣಿಯ ಸೆಳೆದೀವೆನೂ ||೩೨೪||

ಎನುತ ನಂಬುಗೆಯೀಯಲು | ಬಾಲಕನು | ಅನುನಯದಿ ರಥವೇರಲು |
ಘನ ಚೋಳದೇಶಕವರೂ | ಗೆಳೆತನದಿ | ಮನವೇಗದಿಂ ಬಂದರೂ       ||೩೨೫||

ಬರುವ ಸ್ಯಂದನದ ಭರಕೇ | ಗಿರಿತರುಗ | ಳ್ಮುರಿದುರುಳುತಿರಲು ನೆಲಕೆ |
ಹರಿನಾದಗೈದು ಚರರ | ಬೆನ್ನುಗಳ | ಮುರಿಯುತಿರಲಾಗ ಕುವರಾ       ||೩೨೬||

ರೂಢಿಪತಿಯೋಲಗದೊಳು | ಇರಲರಿಕೆ | ಮಾಡುವರೆ ಚರರಾಗಳು |
ಓಡೆ ಬೀಳುತಲೇಳುತಾ | ಬಿನ್ನಪವ | ಮಾಡೆ ಭಯದೊಳು ನಡುಗುತಾ   ||೩೨೭|

ರಾಗ ಮುಖಾರಿ ಏಕತಾಳ

ಸ್ವಾಮಿ ಸಲಾಮುಜೀಯಾ | ಕೃತವರ್ಮರಾಯ | ಸ್ವಾಮಿ ಸಲಾಮುಜೀಯಾ     || ಪಲ್ಲವಿ ||
ವರಚಂದ್ರಸೇನನನ್ನೂ ನೀನು | ಕಾನನಕಟ್ಟಿ | ಇರಲೋರ್ವ ತರಳನಾತನನೂ |
ಕರೆತಂದಿರುವನು ನಮ್ಮನು ದಂಡಿಸಿ | ಪುರಕೋಟೆಯ ದಾಟಿರುವನು ನೋಡಲು |
ಉರಿವಾಯುವು ಸೇರಿರುವಂತಿಹರೈ | ಕರದೊಳು ಧನುಶರ ಧರಿಸಿರಹರೆಂದನು ||
ಸ್ವಾಮಿ ಸಲಾಮುಜೀಯಾ ||೩೨೮||

ರಾಗ ಕೇತಾರಗೌಳ ಝಂಪೆತಾಳ

ಧಾರುಣಿಪ ಕಿಡಿಗೆದರುತಾ | ಧನುವ ಝೆಂ | ಕಾರಗೈಯ್ಯುತಲೇಳುತಾ |
ಚೋರ ಬಂದನೆ ಸಖನನೂ | ಸೇರಿದನೆ | ತೋರುವೆನು ಧುರ ಸವಿಯನೂ        ||೩೨೯||

ಕಡು ರೋಷದಿಂದೈದುತಾ | ಇರಲಾಗ | ಪೊಡವಿಪತಿಬೇಡೆನ್ನುತಾ ||
ನುಡಿಯುತಿರಲಂಬರದಲೀ | ಕೃತವರ್ಮ | ನಡಿಗಡಿಗೆ ಚಿಂತಿಸುತಲೀ     ||೩೩೦||

ಭಾಮಿನಿ

ಕೇಡು ಬರುವುದು ಧುರಕೆ ಪೋಗಲು |
ಮಾಡುತಿಹ ಯತ್ನಗಳ ನರಿಯೆನು |
ಹೇಡಿಗೆಣೆಯಾಯ್ತೆನ್ನ ಬಾಳುವೆಯೆಂದು ಚಿಂತಿಸುತಾ ||
ಹೂಡುವೆನು ಸಂಧಾನವಾತನೊ |
ಳ್ನೀಡುವೆನು ಕಪ್ಪವನು ನುತಿಗಳ |
ಮಾಡಿ ಬದುಕುವೆ ಚಂದ್ರಸೇನನ ರಾಜ್ಯವನೆ ಕೊಡುತಾ         ||೩೩೧||

ರಾಗ ಸಾಂಗತ್ಯ ರೂಪಕತಾಳ

ಅನಿತರೊಳಿತ್ತ ಕುಂಡಲಿಯ ಕೋಟೆಯು ಕಿತ್ತು | ಜನಪನ ಮಾರ್ಬಲವಾ |
ಘನತೆಯಿಂ ಕೆಡಹುತ್ತ ಕಳುಹಿದ ದ್ಯುಮಣಿಯ | ತನಯನಟ್ಟಿದ ದೂತರೊಡನೇ    ||೩೩೨||

ಬಂದನು ಕೃತವರ್ಮ ಕಡುದೈನ್ಯದಿಂದಲಿ | ತಂದು ಕಪ್ಪವ ಪಾದದೆಡೆಗೇ |
ಅಂದು ತಾನಿರಿಸುತ್ತಲೆನ್ನನು ಪಾಲಿಪು | ದೆಂದು ಕೈಮುಗಿದ ಕಂದನಿಗೆ    ||೩೩೩||

ರಾಗ ಕಾಂಭೋಜಿ ಝಂಪೆತಾಳ

ಸಾರೆಲವೊ ಕುನ್ನಿ ರಣಧೀರ ನೀನಹುದಹುದು |
ಧಾರುಣಿಯನಿತ್ತು ನೀನೀಗ ಬಾಲಕಗೆ ||
ವೋರಂತೆ ರಾಜ್ಯವಾಳೆಂದು ಕುಂಡಲಿ ಪೇಳ
ಲಾರಾಜ್ಯವಿತ್ತನಾ ಚಂದ್ರಸೇನನಿಗೆ  ||೩೩೪||
ತರಣಿವಂಶೋದ್ಭವನ ಪದಕೆ ವಂದಿಸುತಲಾ |
ವರ ಚಂದ್ರಸೇನ ನುತಿಸುತಲೀ ||
ಧರೆಯ ಕೊಡಿಸುತಲೆನ್ನ ಕರುಣದಿಂ ರಕ್ಷಿಸಿದೆ |
ಬರುವುದೆನ್ನರಮನೆಗೆ ಬಿಡೆನು ನಾನೆನಲೂ   ||೩೩೫||

ಕೆಲಸವಿಹುದವಸರದ ಛಲವೇಕೆ ಗೆಳೆಯ ನೀ |
ಬಲುಮೆ ಮಾಡಲುಬೇಡ ಪಣವಿಹುದು ತನಗೇ ||
ಅಳುತ ಕುಂಡಲಿಯನಪ್ಪುತ ಬಾಲ ಪೇಳಿದನು |
ತಳೆಯಲಾರೆನು ನಿನ್ನನುಳಿದು ರಾಜ್ಯವನೂ   ||೩೩೬||

ಅಟ್ಟಹಾಸದಿ ಪೋಗಿ ಬಾಲಕಗೆ ರಾಜ್ಯವನು |
ಪಟ್ಟಾಭಿಷೇಕವನು ಗೈಸಿ ವಿಭವದಲಿ ||
ಸೃಷ್ಟಿಪಾತ್ಮಜನು ಸಂತುಷ್ಟಿಯಿಂದೈದಿದನು |
ಥಟ್ಟನೇ ತನ್ನ ಪುರಕಾಗಿ ವಹಿಲದಲಿ ||೩೩೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒರೆದನುಡಿಗಾರನೆಯ ದಿನವಿದು | ಧರಣಿಪಾಲನ ಗೆಲಿದು ಧುರದಲಿ |
ಕರವ ಕಟ್ಟುವುದೆಂತು ಉಳಿದಿರು | ವೆರಡು ದಿನದೀ    ||೩೩೮||

ಹರನು ದಯಗೈದಂತೆ ಮುಂದಕೆ | ಪರಿಣಮಿಸುತಿಹುದೇಕೆ ಬೆಸನವು |
ಕರೆದು ಪೇಳುವೆ ಚರರೊಳರಸಂ | ಗರುಹಲೀಗ        ||೩೩೯||

ವಾರ್ಧಕ

ಹೊರದ್ವಾರಕೈತಂದು ಬಾಲಕನು ಚರರೊಡನೆ |
ಅರಸನೊಳು ಪೇಳಿರೈ ಕುಂಡಲಶ್ರವನೆಂಬ |
ಧುರಪರಾಕ್ರಮಿ ನಿಮಗೆ ಸರಳಸವಿ ತೋರಲಿಕೆ ಹರುಷದಿಂ ಬಂದಿರುವನೂ |
ತರಣಿಜನ ಪಟ್ಟಣಕೆ ತೆರಳುವರೆ ಸಿದ್ಧವಾ |
ಗಿರುವರನು ಮಾತ್ರ ಕರೆದೈತಹುದು ಸಂಗರಕೆ |
ತರವಲ್ಲದಿರಲು ರಾಜ್ಯವ ಬಿಟ್ಟು ಪೋಗಲೆಂದರುಹಿ ಕಳುಹಿದನೆನುವುದೂ  ||೩೪೦||

ಕಂದ

ಚರರತಿವೇಗದಿ ತಮ್ಮಯ |
ದೊರೆಗೊರೆದರು ಬಾಲನಾಡಿದೆಲ್ಲಾ ನುಡಿಯಂ |
ಪರಮಾಶ್ಚರ್ಯವ ಪೊಂದಿದ |
ಹರುಷಾಕ್ರೋಶಂ ನಿಜಾಂತ ರಂಗದೊಳಾಗಲ್        ||೩೪೧||

ರಾಗ ಮಾರವಿ ಏಕತಾಳ

ಚರರಿಂತೆಂದುದ ಕೇಳಿ ಬೃಹದ್ರಥ | ವರಧನು ಝೇಂಕರಿಸೀ ||
ಅರರೆ ಪಂಚಾಸ್ಯನ ಸರಿಸದಿ ಕದನವು | ಕಿರುಮೂಷಿಕಗಹುದೇ  ||೩೪೨||

ವಸುಧೆಯೊಳೆನ್ನಯ | ಪೆಸರನು ಕೇಳಲು | ಅಸಮ ಪರಾಕ್ರಮರೂ ||
ಬಸವಳಿಯುವರಿದು | ಪೊಸತಾಯಿತು ಚರ | ರುಸುರಿದ ಪರಿ ಕೇಳಿ       ||೩೪೩||

ಭಳಿರೆ ಶಸ್ತ್ರಾಸ್ತ್ರದ ಸವಿಯನು ತೋರಿಪೆ | ಕಲಹಕೆ ಬಂದವನಾ ||
ಛಲಬಲವೀಕ್ಷಿಪೆನೆನುತ ಬೃಹದ್ರಥ | ಘಳಿಲನೆ ಪೊರವಂಟಾ     ||೩೪೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧಾರುಣೀಶ್ವರನಾಗ ಶಸ್ತ್ರಾ | ಗಾರದೊಳು ಧನುಶರವಕೊಳ್ಳುತ |
ಏರಿ ಮಣಿಮಯ ರಥದೊಳೈದಿದ | ಶೂರನೆಡೆಗೇ      ||೩೪೫||

ದಿನಮಣಿಪ್ರಭೆಯಂತೆ ರಥದಲಿ | ಧನುಶರವನಾಂತಿರುವ ತನ್ನಯ |
ತನಯನನು ಕಾಣುತ್ತ ನುಡಿಸಿದ | ವಿನಯದಿಂದಾ     ||೩೪೬||

ಆರ ಸುತ ಪೆಸರೇನು ನಿನ್ನಯ | ಧಾರಿಣಿಗಳೆಲ್ಲಿಹುದು ನೋಡಲು |
ಪೋರ ನಿನಗೇನಿಹುದು ನಮ್ಮೊಳು | ಕಾರಣಗಳು      ||೩೪೭||

ರಾಗ ಕೇತಾರಗೌಳ ಝಂಪೆತಾಳ

ಆರಮಗನಾದಡೇನು | ನಿನಗೆನ್ನ | ಧಾರಿಣಿಯ ವಿವರವೇನೂ ||
ಶೂರ ನಿನ್ನಂತೆ ಪಿತನೂ | ಎನ್ನೊಡನೆ | ತೋರು ನೀ ವಿಕ್ರಮವನೂ       ||೩೪೮||

ರಾಗ ಕೇತಾರಗೌಳ ಅಷ್ಟತಾಳ

ಮರುಳು ಮಾತುಗಳೇಕೆ ನಿನಗೆನ್ನ ಸರಿಸದಿ | ಧುರವೆಸಗಲಿಕಹುದೇ ||
ಅರಿಯದ ಬಾಲ ನೀ ತರವಲ್ಲ ಯುದ್ಧವು | ತೆರಳು ಸುಮ್ಮನೆ ಪಿಂದಕೇ    ||೩೪೯||

ಬಾಲನಾದೊಡೆಯೆನ್ನ ಶಸ್ತ್ರಕ್ಕೆ ಯೌವ್ವನ | ಕಾಲವಾಗಿಹುದು ಕೇಳೂ ||
ಮೇಲಾದ ಕ್ಷಾತ್ರಿಯ ಧರ್ಮಕ್ಕೆ ಸರಿಯಾಗಿ | ಶೀಲ ನೀ ಕಾದುವುದೂ      ||೩೫೦||

ಬೇಡವೊ ಸಾರಿದೆ ಧುರದೊಳು ಮುಂದಕೆ | ಆಡುವ ಬಾಲನಿಗೇ ||
ಕೇಡು ಬಂದೊದಗಲಾನೆಂತು ಸೈರಿಪೆ ನಿನ್ನ | ನೋಡಿ ರಣಾಂಗಣದೀ     ||೩೫೧||