ವಾರ್ಧಕ

ಇನಿತಾಗಿ ಮಾನಿನಿಯು ಮರುಗುತಿಹುದಂ ಕಂಡು |
ಜನಪನಿಂಮುಕ್ತಳಾಗಿರುವಾ ಮಹೋದರಿಯು |
ನೆನೆದು ಉಪಕಾರಮಂ ಪೂರ್ವಾಕೃತಿಯಗೊಂಡು ವೈಮಾನದಿಂದಿಳಿಯುತಾ ||
ವನಿತೆಯಂ ತೆಗೆದೆತ್ತಿ ಸಂತೈಸಲವಳಡಿಗೆ |
ತನುವೆರಗುತಾರು ನೀನೆಂದು ಪೇಳಲ್ಕುಸುರೆ |
ವನಜಲೋಚನೆಗೆಲ್ಲ ಪೂರ್ವ ವೃತ್ತಾಂತಮಂ ಮನಮೆಚ್ಚುವಂದದೊಳಗೇ ||೨೧೯||

ರಾಗ ಜಂಜೂಟಿ ರೂಪಕತಾಳ

ವಾರಿಜಾಕ್ಷಿ ಕೊಡುವೆ ನಿನಗೆ ಮೋಹ ಹಾರವಾ |
ಧಾರಿಣೀಶ ನಿನ್ನ ನೋಡಿ ಮೋಹಗೊಳ್ಳುವಾ  || ಪಲ್ಲವಿ ||

ಆರುಧರಿಸಲವರ ರೂಪು ಬೇರೆ ತೋರ್ಪುದೂ |
ಧಾರುಣೀಶನೊಡನೆ ಬೆರೆದು ಸುತನ ಪಡೆವುದೂ       ||೨೨೦||

ವೀಣೆಡಿಂಡಿಮಾದಿ ತಾಳತತಿಯ ನೀವೆನೂ ||
ಜಾಣೆತವಜಿಹ್ವೆಯೊಳು ಬೀಜಾಕ್ಷರವ ಬರೆವೆನೂ        ||೨೨೧||

ಪ್ರಾವೀಣ್ಯಳಾದೆ ಸಂಗೀತ ಕಲೆಯೊಳೂ |
ನೀ ಎನುತ ಪರಸುತೈದೆ ನಾಕಕಾಗಳೂ      ||೨೨೨||

ವಾರ್ಧಕ

ಸುರವನಿತೆ ತೆರಳಲ್ಕೆ ಪರಿಚಾರಿಣಿಯು ಬಂದು |
ಒರೆಯೆ ಕುವಲಯನೊಡನೆ ಸುತೆಯ ಬಲುವ್ಯಥೆಗಳಾ |
ಚರಿಸಿ ಬಾಲಕಿಯು ರೋದಿಪುದ ಕಂಡಾಕೆಯಂ ತಕ್ಕೈಸಿ ನುಡಿಸಲಾಗಿ ||
ಧರಣಿಪನ ಭಾಷೆಗಂ ಪ್ರತಿಭಾಷಿಸುತೆಗೈದ |
ಪರಿಗಳೆಲ್ಲವನು ತಾಂ ಕೇಳಿ ಮನಮರುಗುತಂ |
ಹರಿವಶ್ರುಧಾರೆಯಿಂ ಮೈಮರೆದು ಬೀಳಲ್ಕೆ ಜನಕನಂ ಪಿಡಿದೆತ್ತುತಾ      ||೨೨೩||

ಭಾಮಿನಿ

ತಂದೆ ಲಾಲಿಸು ನಮ್ಮ ಪುರದೊಳು |
ಹಿಂದೆ ಮೆರೆವ ಮಹೋದರಿಯ ಧರ |
ಣೀಂದ್ರ ತರಿಯಲಿಕಜನಶಾಪಗಳಂದು ಪೋಗಲ್ಕೇ |
ಇಂದುಮುಖಿ ವಿದ್ಯಾಧರಾಕೃತಿ |
ಯಿಂದ ತಾನಾಗಮಿಸುತಿತ್ತಳು |
ಚೆಂದದಿಂ ಸಂಗೀತ ಸಾಹಿತ್ಯಾದಿಹಾರವನೂ ||೨೨೪||

ರಾಗ ಜಂಜೂಟಿ ಮಟ್ಟೆತಾಳ

ತರಳೆ ಕೇಳ್ಕಳುಹುವೆ | ವರ ಸಚಿವನ ಮುನ್ನ |
ಅರಸನು ಶಪಥಾದೊ | ಳಿರುತಿಹ ನಿನ್ನಾ ||
ತೊರೆಯದ ತೆರದಲಿ | ಸರಿಯಾದ ಮಾರ್ಗದೊ |
ಳ್ಕರೆದೈದುವಂತೆ ನಾ | ನರುಹುವೆನೀಗಾ     ||೨೨೫||

ಎನುತೊಡಂಬಡಿಸಿ ನಂ | ದನೆಯನ್ನು ಬಳಿಕಲಾ |
ತನು ಮಧುಸಂಧಾನ | ನೆನುವಾಮಾತ್ಯನನೂ ||
ವನಿತೆ ದಾಸಿಯರೀರ್ವ | ರನು ಕರೆದವರನು |
ತನುಜೆಯೊಡನೆ ಪೋಪು | ದೆನುತ ನೇಮಿಸಿದಾ       ||೨೨೬||

ರಾಗ ನೀಲಾಂಬರಿ ಮಟ್ಟೆತಾಳ

ಪಿತನೆ ಕರುಣಿಸೋ | ಆಶಿರ್ವಚನವಾ | ಪತಿಯ ಸಂಗದೀ | ಸೇರಿ ಬಾಳುವಾ ||
ಗತಿಯ ಕಾಂಬೆನೂ | ಎನುತ ನಮಿಸಿದಾ | ಸುತೆಯನೆತ್ತಿ ಭೂ | ಪತಿಯು ಪರಸಿದಾ         ||೨೨೭||

ತಂದೆಯಾಜ್ಞೆಯಾ | ಪಡೆದು ನಾಲ್ವರೂ | ಅಂದು ಪುರವನೂ | ಪೊರಟು ಪೋದರೂ ||
ಸುಂದರಾಂಗನೇ | ಚಿತ್ತದಲ್ಲಿ ತಾ | ಮುಂದಕೆಸಗುವಾ | ಪರಿಯ ನೆನೆಯುತಾ      ||೨೨೮||

ಅಲ್ಲಿಗಲ್ಲಿಗೇ | ಪಯಣವಿರಿಸುತಾ | ಫುಲ್ಲಲೋಚನೇ | ನಡೆದು ದಣಿಯುತಾ ||
ನಿಲ್ಲದೈತರೇ | ನೀಲವತಿಗೆ ತಾ | ವೆಲ್ಲ ಬಂದರೂ | ಬಿಸಿಲೊಳಳಲುತಾ   ||೨೨೯||

ಭಾಮಿನಿ

ಪುರದ ಹೊರ ಬಾಹೆಯಲಿ ಶೋಭಿಪ |
ಪರಿಪರಿಯ ತರುಲತೆಯ ಸಾಲಿನೊ |
ಳಿರುವ ಕೂಪಾರಾಮಗಳ ಕಾಣುತ್ತ ಹರುಷದೊಳೂ ||
ಧರಣಿಪಾಲನ ವನವಿದೇಯೆಂ |
ದರಿತು ಸರ್ವರು ಕುಳಿತರಿತ್ತಲು |
ತೆರಳಿದನು ಭಾಸ್ಕರನು ಪಶ್ಚಿಮ ಶರಧಿಗೊಲವಿನಲೀ   ||೨೩೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಡನೆ ಪಾದವ ತೊಳೆದು ಸರ್ವರು | ಸಡಗರದಿ ಭೋಜನವ ಗೈಯುತ |
ಜಡಜವದನೆಯು ಕರದಿ ವೀಣೆಯ | ಪಿಡಿಯಲಾಗ      ||೨೩೧||

ಒರೆವೆ ಕೇಳ್ ಶ್ರುತ್ಯೇಕಮತ್ಯದಿ | ಧರಿಸಿ ಸಖಿಯರು ತಾಳಗತಿಗಳ |
ಹರಿಯ ಧ್ಯಾನಿಸುತಾಗ ಕುಳಿತರು | ಹರುಷದೊಳಗೇ  ||೨೩೨||

ರಾಗ ಭೈರವಿ ಅಷ್ಟತಾಳ

ಪಾಲಿಸೋ ಮುಕುಂದ ಎನ್ನ | ಕಾಲಿಗೆರಗುವೆ ನಿನ್ನ |
ಶ್ರೀಲತಾಂಗಿ ರಮಣನೆನ್ನ | ಶೀಲಕಾಂತನೊಲಿವ ತೆರದಿ              || ಪಲ್ಲವಿ ||

ಪಸುಳೆ ಧ್ರುವನಿಗಿತ್ತೆ ಮುದದಿ | ಪೆಸರ ಪಡೆದೆ ಪದವಿಯಾ ||
ದಶಕಂಧರನ ಅನುಜನಿಗೆ | ವಸುಧೆ ಇತ್ತು ಕಾಯ್ದ ತೆರದಿ || ಪಾಲಿಸೋ   ||೨೩೩||

ಪಶುಪತಿಯ ಪಿಂದೆ ಬರುವ | ಅಸುರಭಸ್ಮನ ಮಡುಹಿದೇ |
ವಸುಧೆಯೊಳಗೆ ಅಂಬರೀಷಗೆ  | ಋಷಿಯು ಇತ್ತ ಶಾಪ ತರಿದೇ || ಪಾಲಿಸೋ ||   ||೨೩೪||

ನಿನ್ನ ನಂಬಿರುವೆನು ಕಾಯೋ | ಮುನ್ನ ಪ್ರಾಣ ಪತಿಯಸೇರಿ |
ಇನ್ನು ಬಾಳುವಂತೆ ಎನಗೆ | ಸನ್ನುತನೆ ನೀ ದಯವ ತೋರಿ || ಪಾಲಿಸೋ         ||೨೩೫||

ಭಾಮಿನಿ

ಒರೆವೆ ಕೇಳಾವನಿತೆಯಳಸು |
ಸ್ವರದ ಸೊಬಗಿನ ಗಾನವನು ವನ
ಚರರು ಕೇಳ್ದಾನಂದದಿಂದೈತಂದು ಪರಿಕಿಸುತಾ ||
ಭರದೊಳಾಕೆಯ ನೋಡಿ ಬೆರಗಿಲಿ |
ತೆರಳಿದರು ತಮ್ಮರಸನೊಳು ತಾ |
ವರುಹಬೇಕೆಂದೆನುತ ಯೋಚಿಸಿ ತರಣಿಯುದಯದೊಳೂ       ||೨೩೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಂದವಾಗಿಹ ಸಭೆಗೆ ಚಾರರು |  ಬಂದು ನೋಡೆ ಬೃಹದ್ರಥಾಖ್ಯನು ಚೆಂದದಿಂದೋಲಗದೊಳಿರಲವ | ರೊಂದಿಸುತಲೀ ||೨೩೭||

ರಾಗ ಮುಖಾರಿ ಏಕತಾಳ

ಲಾಲಿಸು ದಿನಪ ವಂಶೋತ್ತಮನೆ | ನಾವೆಂಬ ನುಡಿಯ | ಶೀಲಸದ್ಗುಣ ಬೃಹದ್ರಥನೇ        || ಪಲ್ಲವಿ ||

ಮೇಲಾಗಿ ನಿಮ್ಮುಪವನವನ್ನು | ಕಾದಿರೆನಿನ್ನೆ |  ಪೇಳಲೇನೊಂದು ಚೋದ್ಯವನ್ನು |
ಬಾಲೆಯರ್ಮೂವರು ಬೆಡಗಿನೊಳೀರ್ಪರು | ಪೇಳಲಿಕಸದಳವವರ ಸೌಂದರ್ಯವ |
ಮೇಲವರ ಜೊತೆಯೊಳಗೋರ್ವ ಮುದುಕ ನಿಶಿ | ಕಾಲದಿ ನಾವಿಹ ಠಾವಿಗೈತಂದರು        ||೨೩೮||

ಹುಡುಗಿಯರ್ಮೂರು ಮಂದಿಯೊಳಗೇ | ಓರ್ವಳು ಇಹಳು | ಪೊಡವಿಯೊಳ್ಚೆಲ್ವೆ ರೂಪಿನೊಳಗೇ ||
ಜಡಜದಳಾಂಬಕಿ ಬೆಡಗಿನಭಾವಕಿ | ಕಡುಗಂಭೀರಳು ಬಡನಡು ಬಳುಕುತ
ನುಡಿಸುವ ವೀಣೆಯ ಪಾಡುವ ಪದ್ಯದ | ಗಡಣದ ಪರಿಗಳನುಸುರಲಿಕಹುದೇ       ||೨೩೯||

ತರುಣಿಯ ನೋಡದೀ ಮಾನವನಾ | ಜನ್ಮವು ವ್ಯರ್ಥ | ವರ ಶುಕವಾಣಿ ಗುಣಮಣಿಯಾ ||
ಪರಿಕಿಸಿದರೆ ಮನ ಕರಗುವದಿದು ದಿಟ | ಒರೆಯಲಿಕಸದಳ ಲಲನೆಯನೊಲಿಸಿದ |
ಪುರುಷನೆ ಧನ್ಯನು ಕೇಳೈ ಸುಗುಣಾ | ಕರ ನಿನ್ನೊಡನಿದನರುಹಲು ಬಂದೆವು ||    ||೨೪೦||

ಭಾಮಿನಿ

ಎಂದನುಡಿಗಾಸ್ಥಾನ ವಿಸ್ಮಯ |
ದಿಂದ ನಿಶ್ಯಬ್ದದಲಿ ಚಾರರು |
ಬಂದು ಪೇಳಿದ ವಾರ್ತೆಯನು ಮನದೊಳಗೆ ತರ್ಕಿಸುತಾ ||
ಇಂದಿದೇನಾಶ್ಚರ್ಯವೆನೆ ನೃಪ |
ನಂದು ತಾ ಶಶಿಮುಖಿಯ ಕರೆತರ |
ಲೆಂದು ಅಟ್ಟಲಿಕಾಗ ಪೋದರು ಚರರು ವನದೆಡೆಗೆ     ||೨೪೧||

ರಾಗ ಕೋರೆ ಏಕತಾಳ

ಆರೆಲೆ ತರುಣಿ ನಿನ್ನ | ಸೇರಿ ಬಂದವರಿವರು |
ಯಾರಮ್ಮ ಹೇಳು ಬೇಗದಿ | ಮರೆಮಾಚಬೇಡ | ಯಾರಮ್ಮ ಹೇಳು ಬೇಗದಿ       ||೨೪೨||

ಕರೆದು ತರಲು ನಿಮ್ಮ | ದೊರೆಯು ಅಟ್ಟಿಹನಮ್ಮ |
ತ್ವರೆಯಿಂದಲೇಳಿ ಪೋಗುವಾ | ಅರಮನೆಗೀಗ | ತ್ವರೆಯಿಂದಲೇಳಿ ಪೋಗುವಾ    ||೨೪೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪಾಲಕನಾಜ್ಞೆಯಾಗಿರೆ | ಪರಮದೀನರು ತಪ್ಪಿ ನಡೆದರೆ |
ಇರಲಿಕಸದಳ ಬರುವೆವೆನ್ನುತ | ಪೊರಟರಾಗ          ||೨೪೪||

ಆ ಲತಾಂಗಿಯ ಉಭಯ ಪಾರ್ಶ್ವದಿ | ತಾಲವೃಂದವ ಪಿಡಿದು ಸಖಿಯರು |
ವೋಲಗಕೆಬಹ ತರುಣಿ ಸೊಬಗನು | ಪೇಳಲಹುದೇ   ||೨೪೫||

ವಾರ್ಧಕ

ಕರಿಯೆಂದೆನಲ್ ದ್ವಿಪಾದವು ಚತುಷ್ಟಯವಿಲ್ಲ |
ಪರಿಕಿಸಲು ಪಂಚಾಸ್ಯ ಕ್ರೂರನಖ ಮುಖವಿಲ್ಲ |
ವರದೃಷ್ಟಿಗತಿರಮ್ಯಮಾದೆರಡು ಗೋಪುರಗಳಿರುತಿಹುದು ಹರ್ಮ್ಯವಲ್ಲಾ ||
ಹರಿಜದಂತೆಸೆಯುವುದು ಭ್ರಮರ ಝೇಂಕೃತಿಯಿಲ್ಲ |
ಉರಗಭೂಷಣನೆಂಬರಿಂದು ಶಿರದೊಳಗಿಲ್ಲ |
ತರುಣಿ ಸೊಬಗೀ ಪಂಚರೂಪು ಮತ್ತೊಂದಲ್ಲ ಪರಮೇಷ್ಠಿಕುಶಲವೆಲ್ಲಾ     ||೨೪೬||

ರಾಗ ಸುರುಟಿ ಏಕತಾಳ

ಕೋಮಲಾಂಗಿ ಕೇಳೇ | ಬೆದರದೆ | ಪ್ರೇಮದಿ ಗುಣಶೀಲೆ  || ಪಲ್ಲವಿ ||
ಭೂಮಿಯೊಳ್ನಿನಗೆಣೆಗಾಣೆನು ಮೆಚ್ಚಿದೆ |
ಸೋಮನಿಭಾನನೆ ಸಾಮಜಗಮನೇ                     || ಅ ಪಲ್ಲವಿ ||

ಪುರವಾವುದು ನಿನಗೇ | ನಿನ್ನಯ | ವರನಾಮವನೆನಗೇ |
ಅರುಹು ನೀನೆಮ್ಮಯ | ಧರಣಿಗೆ ಬಿಜಯವಾ |
ಗಿರಲೇಂ ಕಾರಣವೆಂಬುದನೆಲ್ಲವ |   ||೨೪೭||

ರಾಗ ರೇಗುಪ್ತಿ ಏಕತಾಳ

ಧರಣಿಪಾಲ ಕೇಳು | ಮಧುರಾ | ಪುರದಿ ಜನಿಸಿದವಳೂ | ನಿನ್ನೊಳ |
ಗರುಹಲೆಮ್ಮ ಬಾಳು | ಸುಖವಾ | ಗಿರದು ನಿನ್ನ ಆಳು | ತಂದಾ |
ವರಿಗೆಮ್ಮನು ಬಲುಮೆಯಿಂದ        || ಪಲ್ಲವಿ ||
ಮದನಮಂಜರೀಯು | ನಾಮವು | ಸದುಗುರುಗಳ ಕೃಪೆಯೂ | ಎನ್ನೊಳ |
ಗುದಿಸಿದ ಸಂಗೀತಗಳೂ | ನಾಟ್ಯದ | ಚದುರತೆ ಸಾಹಿತ್ಯಗಳೂ ||
ಮುದದಿ ಮುಗಿಯೆ ನೆ | ಮ್ಮದಿ ಯಿಂದೆಲ್ಲರು | ವಿದಿತ ಯಾತ್ರೆಯಿಂ | ದಧಿಕಾಯಾಸದಿ | ಸದಯ ನಿಮ್ಮವನ | ದಿದಿರು ಬರಲು ನಿಶಿ | ಯೊದಗಲ್ಕಲ್ಲಿಯೆ ಬೀಡಿಕೆ ಬಿಟ್ಟೆವು
ನೋಡು | ನಾವ್ ಪೋಗಲು ಅಪ್ಪಣೆ ಮಾಡು ||         ||೨೪೮||

ರಾಗ ಸೌರಾಷ್ಟ್ರ ಅಷ್ಟತಾಳ

ತರುಣಿ ನಿನಗೆ ಮದುವೆಯಾಗಿ | ಇರುವುದೋ ಇವೋ ಎಂಬ |
ಪರಿಯನರಿಯದಾದೆ ನಿಜವ | ನರುಹು ಬೇಗದಿ        ||೨೪೯||

ಎಂದ ನುಡಿಯ ಕೇಳುತಾಗ | ಇಂದುಮುಖಿಯು ನಾಚಿ ತಿರುಗಿ |
ಪಿಂದೆ ಪೋಪ ತೆರದಿ ನಟಿಸು | ತೆಂದಳಾಗಳೆ         ||೨೫೦||

ಭಾಮಿನಿ

ಧರಣಿಪಾಲಕ ಪೋಗಿಬರುವೆವು |
ಇರಲಿ ನಮ್ಮೊಳು ಪ್ರೀತಿ ಎನ್ನುತ |
ತೆರಳುವರೆ ಅಡಿ ಇಡಲಿಕಾಕ್ಷಣ ಪೇಳ್ದ ಭೂವರನೂ ||
ತರುಣಿ ಪೋಗದಿರೆನಗೆ ಮನ್ಮಥ |
ಶರವು ನಾಂಟಿಹುದದನು ನೀ ಪರಿ |
ಹರಿಸಿ ಸಂತಸವಿತ್ತು ಪೋಪುದೆನುತ್ತ ಪೇಳಿದನೂ      ||೨೫೧||

ರಾಗ ಜಂಜೂಟಿ ಅಷ್ಟತಾಳ

ಘನಸತ್ಯವಂತನಿಹೆ ನೀನು | ಎಂಬು | ದನು ಕೇಳಿರ್ದೆನು ಪಿಂದೆ ನಾನು |
ಇನಿತಾದ ತುಚ್ಛಕಾರ್ಯವು ನಿನಗುಚಿತವೆ |
ಸನುಮತದ ನುಡಿಯಲ್ಲ ನಿಮ್ಮರ | ಮನೆಗೆ ಬಂದಿಹರೆಂದು ಪೇಳ್ವುದು    ||೨೫೨||

ವರವೇಶ್ಯಾ ವನಿತೆ ನಾನಲ್ಲ | ಸುಮ | ಶರನುರುಬೆಯ ಶಮಿಸುವ ಕಾಲವಲ್ಲ |
ಮರುಳಾಟವಾಯಿತೆ ನಾವಿಲ್ಲಿಗೈದುದು |
ಪರಮದೀನರಿಗಪ್ಪಣೆಯ ನೀ | ಕರುಣಿಸುತ ಕಳುಹುವುದು ದಯದೊಳು  ||೨೫೩||

ರಾಗ ಸುರುಟಿ ಏಕತಾಳ

ಮತ್ತಕಾಶಿನಿ ನಿನ್ನಾ | ಮಾತಿಗೆ | ಉತ್ತರವಿಲ್ಲೆನ್ನಾ |
ಚಿತ್ತಜಬಾಣಕೆ | ಹತ್ತಿದ ಬೇಗೆಯ | ನುತ್ತರಿಸುವೆ ನೀ | ನಿತ್ತರೆ ನೇಹವ ||   ||೨೫೪||

ರಾಗ ಜಂಜೂಟಿ ಅಷ್ಟತಾಳ

ಈಗ ನಿನ್ನೊಳು ರತಿಸುಖವನೂ | ಲಗ್ನ | ವಾಗದ ತರುಣಿಯು ತಾನು |
ಸಾಗಿಸುವುದು ಯೋಗ್ಯಮಪ್ಪುದೆ ತಿಳಿದವ |
ನಾಗಿ ಅಜ್ಞರ ತೆರದಿ ಮುಂದರಿ | ದೀಗ ಬಯಸುವುದೇಕೆ ಸುಮ್ಮನೆ        ||೨೫೫||

ರಾಗ ಕೇತಾರಗೌಳ ಅಷ್ಟತಾಳ

ಗಂಧರ್ವವಿಧಿಯಿಂದಲೆನ್ನ ನೀನೊಲಿಸುತ್ತ | ಲಿಂದು ಸಂತಸಬಡಿಸೇ |
ಚಂದಿರವದನೆ ಕೇಳೆನ್ನದೇಹವ ನಿನ | ಗಿಂದು ನಾನರ್ಪಿಸಿದೇ    ||೨೫೬||

ಅರಿತಿಹ ದೇಹ ಬಂಗಾರವೆ ಮೊದಲಾಗಿ | ಸುರತಕ್ರೀಡೆಯ ನೆವದೀ |
ತರುಣಿ ಶಕುಂತಲೆಗಿತ್ತಿಹ ಪರಿಗಳ | ಪುರುಷರ ಸವಿನುಡಿಯಾ   ||೨೫೭||

ರಾಗ ಕೇತಾರಗೌಳ ಝಂಪೆತಾಳ

ಕೊಡುವೆ ನೀ ಬೇಡಿದುದನೂ | ಆಡಿರುವ | ನುಡಿಗೆ ತಪ್ಪಿದರೆ ತಾನೂ |
ಜಡಜಸಖಕುಲತಿಲಕನೇ | ಯಾಕಿನಿತು | ನುಡಿಯುತಿಹೆ ನೀ ಸುಮ್ಮನೇ ||          ||೨೫೮||

ರಾಗ ಜಂಜೂಟಿ ಅಷ್ಟತಾಳ
ಸೃಷ್ಟಿಪಾಲಕ ಕೇಳು ನಿನಗೇ | ಬಹು | ನಿಷ್ಠೆಯಿಂದಲಿ ಒಲಿವ ಎನಗೇ  |
ಪುಟ್ಟುವ ಬಾಲಕರಿಂಗೆ ಈ ರಾಜ್ಯದ |
ಪಟ್ಟಗಟ್ಟುವೆನೆಂದು ನಂಬುಗೆ | ಕೊಟ್ಟರಪ್ಪುದು ನೆನೆದ ಕಾರ್ಯವು         ||೨೫೯||

ರಾಗ ಕೇತಾರಗೌಳ ಅಷ್ಟತಾಳ

ಕರವನೀಡೀಗಲೀಯುವೆ ನಿನ್ನ ಮನದೊಳ | ಗಿರುತಿಹಭೀಷ್ಟವನೂ |
ಮರೆಯದೆ ಸಲಿಸುವೆನೆಂದು ನಂಬುಗೆ ಇತ್ತ | ತರುಣಿಯ ಹಸ್ತದೊಳೂ    ||೨೬೦||

ಭಾಮಿನಿ

ಬಳಿಕ ಕೇಳ್ಪಡುಗಡೆಯ ಕಡಲಲಿ |
ಮುಳುಗೆ ದಿನಪನು ಕಂಡು ಭೋಜನ |
ಗಳನೆ ಮಾಡುತ ವನಿತೆಯನು ಗಾಂಧರ್ವವಿಧಿಯಿಂದಾ ||
ಒಲಿಸಿ ಕೈ ಪಿಡಿದಾಗ ಶಯ್ಯಾ |
ನಿಲಯದೊಳು ಸುಂದರಿಯ ಮೋಹದಿ |
ಇಳೆಯಧಿಪನಿರಲಂದು ಸುರತಕ್ರೀಡೆ ಸಂಭ್ರಮದೀ     ||೨೬೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುಂದಕಾಗಿಹ ಕಥೆಯನರುಹುವೆ | ಸುಂದರಾಂಗನೆ ಸಂಗದಲಿ ಧರ |
ಣೀಂದ್ರ ಕೆಲಕಾಲಗಳು ಕಳೆಯಲಿ | ಕೊಂದು ದಿನದಿ    ||೨೬೨||

ತರುಣಿ ಗರ್ಭಿಣಿಯೆಂದು ತನ್ನೊಳ | ಗರಿತು ತತ್ಕಾಂತನೊಳು ಪೇಳ್ದಳು |
ಅರಸ ಲಾಲಿಸುಯೆನ್ನಮನದೊಳ | ಗಿರುವ ವ್ಯಥೆಯಾ ||೨೬೩||

ಜನನಿಜನಕರ ನೋಡದೆನ್ನಯ | ತನುವು ಬೇಸರಗೊಂಡಿಹುದು ಕೇ |
ಳಿನಿಯ ನಿಮ್ಮನು ಬಿಟ್ಟು ತೆರಳಲು | ಮನವು ಬರದೂ ||೨೬೪||

ತರುಣಿ ಪೋಗುವುದುಚಿತವೈ ಸಲೆ | ತೆರಳಿ ಬೇಸರ ಕಳೆದು ನೀ ಪಿಂ |
ತಿರುಗಿ ಬಾರೆಂದೆನುತ ಪೇಳಿದ | ಧರಣಿಪಾಲ ||೨೬೫||

ರಾಗ ಜಂಜೂಟಿ ಅಷ್ಟತಾಳ

ಭೂವರೇಣ್ಯನೆ ನಿನ್ನನಗಲೀ | ಎನ್ನ | ಜೀವಿತವಹುದೆ ಪ್ರೀತಿಯಲೀ |
ಸೇವೆಯಗೈದು ಆನಂದಸಾಗರದೊಳು |
ಈವರೆಗೆ ಜಲಕೇಳಿಯಾಡಿದ | ಠೀವಿಯನು ಬಿಟ್ಟೆಂತು ಪೋಗಲಿ  ||೨೬೬||
ಆದರೀಗೊಂದಭಿಮತವನೂ | ಪೇಳ್ವೆ | ಮೇದಿನಿಪಾಲ ಮುದ್ರಿಕೆಯನೂ |
ನೀ ದಯಪಾಲಿಸಲದನು ನಾನನುದಿನ |
ಮೋದದಿಂದೀಕ್ಷಿಸುತ ಮನ್ಮನ | ಆದರಿಸಿ ಬಹೆನೆಂದು ಪೇಳಲು ||೨೬೭||

ರಾಗ ಬೇಹಾಗ್ ರೂಪಕತಾಳ

ವನಿತೆ ಬೇಕಾದುದ | ಅನುಮಾನಗೊಳ್ಳದೆ | ಘನಜವದಿಂ ಪೇಳು ನಿನಗೆ ನಾನೀವೇ ||
ಸನುಮತದಿಂದ ಕೈಕೊಂಡು ನಿನ್ನನು ಪೆತ್ತ | ಜನನಿ ಜನಕರನ್ನು ನೋಡಿ ನೀ ಬಹುದೂ      ||೨೬೮||

ಅರಸ ಲಾಲಿಸು ತಮ್ಮ ಕೊರಳೊಳು ಧರಿಸುವ | ವರಮುಕ್ತಹಾರವೀ ಪಟ್ಟಗತ್ತಿಯನೂ ||
ಕರುಣಿಸೆ ತೋರಿಸಿ ಜನನಿಜನಕರಿಗೆ | ಅರುಹುವೆ ನಾ ನಿಮ್ಮ ಅರಸಿಯಾದುದನೂ ||೨೬೯||

ಭಾಮಿನಿ

ವನಿತೆ ಪೇಳಿದ ನುಡಿಗೆ ಹರುಷದಿ |
ಮುನಿಪನಿತ್ತಿಹ ಮುಕ್ತಹಾರವ  |
ಕನಕ ನವರತ್ನದಿ ಪ್ರಕಾಶಿಪ ಮುದ್ರೆಯುಂಗರವಾ ||
ಘನತರಾಭರಣವನು ಪಟ್ಟಸ |
ವನು ಸಹಿತ ಕಾಂತೆಯೊಳು ಮೋಹದಿ |
ಜನಪನಿತ್ತನು ಕಪಟವಾಗಿಯೆ ವನಜಲೋಚನೆಗೇ      ||೨೭೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕರೆಸಿದನು ಹಸ್ತ್ಯಶ್ಚರಥಗಳ | ನೆರಹಿ ಸೇನೆಯ ದಾಸಿಯರುಗಳ |
ಹರುಷದಿಂ ಕಳುಹಿದನು ಭೂಮಿಪ | ತರುಣಿಯೊಡನೇ ||೨೭೧||

ಕರೆದುಕೊಂಡೈತಂದು ಸಚಿವನ | ಪರಿಚರೀಯರಕೂಡಿ  ಭೂಪಗೆ |
ಎರಗುತೇರಲು ರಥವ ಸರ್ವರು | ಹರುಷದೊಳಗೇ    ||೨೭೨||

ಪೋಗಿಬಾರೆಂದೆನುತ ಹರಸಲು | ಆ ಗರುವೆ ಪೇಳಿದಳು ನೆನಪಿರ |
ಲೀಗ ಕೊಟ್ಟಿಹುದೆಲ್ಲ ಮರೆಯದೆ | ಭೋಗಿಸುವೆನೂ     ||೨೭೩||

ನಡೆಸು ವೀರಾವತಿಗೆ  ರಥವೆನೆ | ಪೊಡೆಯೆ ಸೂತನು ಜವದಿ ಬಂದರು |
ಪೊವವಿಪತಿ ಕುವಲಯನಿಗೆರಗಲು | ಪರಸಲಾಗ       ||೨೭೪||

ತಂದ ಗುರುತುಗಳೆಲ್ಲವನು ಮುದ | ದಿಂದ ತೋರಿಸೆ ಜನನಿಪಿತರಾ |
ನಂದದಿಂ ತಕ್ಕೈಸಿ ಗರ್ಭಿಣಿ  | ಎಂದು ತಿಳಿದು          ||೨೭೫||

ರಾಗ ಕೇತಾರಗೌಳ ಅಷ್ಟತಾಳ

ತರಳೆಯ ಬಯಕೆಯ ಜನನಿ ಪೂರೈಸುತ್ತ | ಪೊರೆಯುತ್ತಲಿರಲಾಗಳೂ ||
ತರುಣಿಮಣಿಗೆ ನವಮಾಸಮಾಗಲು ಗರ್ಭ | ಹೊರೆದೂದು ಪರಿಪೂರ್ಣದಿ ||೨೭೬||

ಶರದಿಂದುಸನ್ನಿಭ ಮುಖಕಾಂತಿ ಕುಗ್ಗಿತು | ಸುರಿವಶ್ರುಧಾರೆಯಿಂದಾ |
ಮರುಗುತ್ತಲಿರಲಂತರಂಗವರಿದಾಗ | ತರುಣಿ ಮಾತೆಯು ಬೇಗದಿ        ||೨೭೭||

ಅರಮನೆ ಹೆರಿಗೆಯ ಸತಿಯರ ಕರೆಸುತ್ತ | ಪರದೆಯನಿಕ್ಕಿಸುತಾ ||
ತರುಣಿಯ ಕರೆತಂದು ಉಪಚರಿಸುತ್ತಲಿ | ಮುರಹರನನು ಧ್ಯಾನಿಸೇ      ||೨೭೮||

ಶುಭತಿಥಿ ಶುಭವಾರ ಶುಭಯೋಗ ಶುಭಲಗ್ನ | ಶುಭತಾರೆ ನಕ್ಷತ್ರದಿ |
ಇಭರಾಜಗಮನೆಯು ಪೆತ್ತಳರ್ಭಕನನ್ನು | ವಿಭವನ್ನೇನೆಂಬೆನೂ  ||೨೭೯||

ಭಾಮಿನಿ

ತರಳ ಕುಂಡಲಯುಕ್ತನಾಗಿರೆ |
ಧರಣಿಪತಿ ನಡೆತಂದು ಪರಿಕಿಸಿ |
ಕರೆಸಿ ಜೋಯಿಸರೊಡನೆ ಜನಿಸಿಹ ಘಟಿಯ ಕೇಳಿದನೂ ||
ಪರಿಕಿಸುತ ಪಂಚಾಂಗವನು ಹಿರಿ |
ಹಿರಿಯ ಹಿಗ್ಗುತ ಬೆರಳನೆಣಿಸುತ |
ಬರೆದು ಬಾಲನ ಜಾತಕವ ವಿವರಿಸಿದ ಭೂಮಿಪಗೇ    ||೨೮೦||

ಕಂದ

ಧನುರರ್ಧವ ಗತಿಸಿಹರೈ |
ಇನಶಶಿಗಳು ತಾವತೀವ ಬಲಯುತರಾಗಲ್ ||
ಶನಿ ತಾ ಕುಳಿತಿರೆ ಲಗ್ನದಿ |
ಜನಿಸಿಹ ಕುವರಂ ಮಹೀಜನುಚ್ಚದಿ ಮೆರೆಯೇ ||೨೮೧||

ಅರ್ಥ

(ಸೂರ್ಯ ಮತ್ತು ಚಂದ್ರರು ಧನುರಾಶಿಯ ಅರ್ಧವನ್ನು ಕಳೆದು ಸ್ಥಿತರಾಗಿದ್ದಾರೆ. ಲಗ್ನಾಧಿಪತಿ ಶನಿಯು ಸ್ವಕ್ಷೇತ್ರದಲ್ಲಿ ವರ್ಗೋತ್ತಮಾಂಶದಲ್ಲಿ ಬಲಿಷ್ಠರಾಗಿರುವನು. | ಕುಜನು ತನ್ನ ಉಚ್ಚರಾಶಿಯಲಿದ್ದಾನೆ. ಮಹಾಪ್ರತಾಪಿಯಾದ ರಾಜಯೋಗವು ಈ ಕುವರನ ಜಾತಕದಲ್ಲಿ ಇರುವುದೈಯ್ಯಾ) –

ವಾರ್ಧಿಕ

ನೆರೆಹೊರೆಯ ಬಂಧುಗಳ ಕರೆದು ಭೋಜನಗೈಸಿ |
ತರಳನಿಗೆ ಕುಂಡಲಶ್ರವನೆಂದು ಪೆಸರಿಟ್ಟು |
ಕರಿಮುಖನ ಗಂಧಪುಷ್ಪಗಳಿಂದಲರ್ಚಿಸುತಲಿರಲು ಕುವಲಯಭೂಪನು ||
ಶರದ ಋತುಪೂರ್ಣಿಮೆಯೊಳುದಿಪಿಂದು ಭಾಸದಿಂ |
ಪರಿಶೋಭಿಸುತಲೀರ್ಪ ತರಳನಂ ತೆಗೆದೆತ್ತಿ |
ಕರಿರಾಜಗಮನೆಯರು ಪೊನ್ನತೊಟ್ಟಿಲೊಳಿರಿಸಿ ಪರಸಿ ತೂಗಿದರಾಗಳೂ ||೨೮೨||