ರಾಗ ಕೇತಾರಗೌಳ ಅಷ್ಟತಾಳ
ತರುಣಿ ನಿನ್ಯಾರೆಂಬ | ಪರಿಯನು ನಿನ್ನಯ | ಪುರವ್ಯಾವುದೆಂಬುದನೂ ||
ಅರಹುಬೇಗದಿ ಪೆತ್ತ ಜನಕನ ಪೆಸರೇನು | ಹರಿತಂದುದ್ಯಾಕಿಲ್ಲಿಗೇ ||೧೫೩||
ರಾಗ ಜಂಜೂಟಿ ಅಷ್ಟತಾಳ
ಅವನಿಪಾಲಕ ಕೇಳು ನೀನೂ | ಜನಕ | ಕುವಲಯಭೂಪನೆಂಬುವನೂ ||
ಯುವತಿ ಕಲಾವತಿ ಎಂಬಭಿದಾನವು |
ತವಕದೊಳು ಸಮವರಸಿ ಬಂದೆನು |
ತವಪೆಸರನರುಹುವುದು ಬೇಗದಿ ||೧೫೪||
ರಾಗ ಕೇತಾರಗೌಳ ಅಷ್ಟತಾಳ
ತರಣಿ ಕುಲಜ ಬೃಹದ್ರಥನೆಂಬ ನಾಮವು | ಧರಣಿ ಚಕ್ರಾಂಕಿತನೂ ||
ಪುರವು ಲೀಲಾವತಿ ಸೌವ್ವೀರ ರಾಷ್ಟ್ರವು | ತರುಣಿರನ್ನಳೆ ಲಾಲಿಸೂ ||೧೫೫||
ರಾಗ ತೋಡಿ ಅಷ್ಟತಾಳ
ದೊರೆಯೆ ನೀನೀಗೆಮ್ಮ ವನದೊ | ಳಿರುವ ಕಾರಣಗಳು ಬಂದ |
ಪರಿಯದಾವುದೆಂಬ ನಿಜವ | ನರುಹಬಾರದೆ ||೧೫೬||
ರಾಗ ಕೇತಾರಗೌಳ ಅಷ್ಟತಾಳ
ವರಮನೋಹರೆ ನಿನ್ನ ಪರಿಣಯವೆನೆ ಕೇಳಿ | ಹರಿತಂದೆನಭ್ರದಲಿ ||
ಧರಣಿಯೊಳಗೆ ವಿದ್ಯುತ್ಕಾಂತಿಯಿಂದದೊಳೈದು | ತ್ತಿರುವ ನಿನ್ನನು ಕಾಣುತಾ ||೧೫೭||
ಕೆಳಗಿಳಿಯಲು ಯೆನ್ನ ಮನ ಸೂರೆಯಾದುದು | ಲಲನೆ ನೀನೊಲಿಸೆನ್ನನು |
ಮಲಯಮಾರುತನ ಸಹಾಯದಿ ಸುಮಬಾಣ | ನಲಗೆನ್ನ ಬಾಧಿಪುದೂ ||೧೫೮||
ಮನುಜೇಶ ನೀನೆಂತು ಅಭ್ರದಿ ಚರಿಸುವ | ಘನ ಮಹಿಮೆಯ ಪೊಂದಿದೆ |
ಸನುಮತದಲಿ ಪೇಳು ಕೇಳಲು ಬಯಸಿಹೆ | ದಿನಪಕುಲೇಶ್ವರನೇ ||೧೫೯||
ರಾಗ ಪಂತುವರಾಳಿ ಏಕತಾಳ
ಕೋಮಲಾಂಗಿಬಾಲೆ | ಸತ್ಕುಲ | ಸೋಮವಂಶಶೀಲೆ | ನಿನ್ನೊಳು |
ಪ್ರೇಮದಿಂದ ಪೇಳ್ವೆ | ಅಪ್ಪುತ | ಕಾಮನಲಗ ಸೀಳ್ವೆ || ಪಲ್ಲವಿ ||
ಸಾಮಜ ಗಮನೆಸು | ದಾಮಸಖನ ಸುತ |
ನಾಮಹಶರವನಿ | ಸ್ಸೀಮೆ ನೀ ಶಮಿಪರೆ || ಅ ಪ ||
ಮುಕ್ತಹಾರವಿದನೂ | ಧರಿಸುತ | ಲೆತ್ತ ಪೋಗಲಾನು | ಮನಸಿಡ |
ಲತ್ತಪೋಪುದಿದನೂ | ಜೊತೆಗೊಳಿ | ಸುತ್ತಲಿ ಕರವಾಲವನೂ || ನಾಧರಿ
ಸುತ್ತ ಪೋಗೆಧುರ | ವೆತ್ತಲದುವೆ ಜಯ |
ಸ್ತುತ್ಯವಿಹುದು ಮುನಿ | ಪೋತ್ತಮನೋರ್ವನು |
ಇತ್ತನೆನ್ನಗುಣ | ವೃತ್ತಿಗೆಮೆಚ್ಚುತ |
ಮತ್ತೇತರ ಭಯ | ಪೃಥ್ವಿಯ ನಡುಗಿಸೆ || ಕೋಮಲಾಂಗಿ ||೧೬೦||
ಭಾಮಿನಿ
ಬಿಸಜಸಖಕುಲತಿಲಕ ಕೇಳೈ |
ನಿಶಿಯ ಮಧ್ಯೆ ಮಹೋದರೀಯೆಂ |
ಬಸುರೆ ಮಮ ರಾಷ್ಟ್ರದೊಳು ಭಕ್ಷಿಪಳೋರ್ವನನು ದಿನಕೇ ||
ವಸುಧೆ ಜನವಾ ದುರುಳೆ ದೆಸೆಯಿಂ |
ದಸುವ ನೀಗಲು ಕಾಣುತಲೆ ಬಹು |
ವ್ಯಸನದೊಳಗಿರಲಾಗಲೆನ್ನಯ ಜನಕ ಕುವಲಯನೂ ||೧೬೧||
ಒರೆದುದಾಗಸವಾಣಿ ನಭದಲಿ |
ದುರುಳೆಯನು ಸಂಹರಿಸುತಿಹ | ಭೂ |
ವರಗೆ ತರಳೆಯನೀವೆನೆನುತಲಿ ಪಣದೆ ದೇಶಗಳಾ ||
ದೊರೆಗಳನು ಕರೆಸೆಂದು ಪೇಳಲಿ |
ಕರಸ ದೇಶಾಧಿಪರ ನೆರಸಿಹ |
ವುರು ಪರಾಕ್ರಮಿ ನೀನು ವರಿಸೈ ದುರುಳೆಯನು ಕೊಂದೂ ||೧೬೨||
ರಾಗ ಶಂಕರಾಭರಣ ತ್ರಿವುಡೆ (ಸಂವಾದ)
ವನಿತೆ ಕೇಳ್ ಕರವಾಲದಿಂದ | ದನುಜೆಯಗಳವನರಿವೆಕಡೆಗೆ |
ಮನವ ಮೆಚ್ಚಿ ಕರವ ಪಿಡಿಯೇ | ಕ್ಷಣವು ತಡೆಯದೇ ||೧೬೩||
ಅರಸಕೇಳೈ ಪಿತನ ಭಾಷೆ | ತೊರೆಯಲೆನ್ನ ಧರಣಿಮುಂದೆ |
ಹೊರಳು ಪರದಿ ಕಾಲನೆನ್ನ | ನರಕಕದ್ದನೇ ||೧೬೪||
ಕೋಮಲಾಂಗಿ ಖೂಳೆಯನ್ನು | ನಾ ಮಹೇಶನಾಣೆ ಕೊಲುವೆ |
ಪ್ರೇಮವಿಟ್ಟಿದೀಗ ಸಲಿಸು | ಕಾಮಿತಾರ್ಥವ ||೧೬೫||
ಭಾಮಿನಿ
ಅರಸ ಕಿವಿಗೊಟ್ಟೆನ್ನ ವಚನವ |
ಹರುಷದಲಿ ಮನ್ನಿಪುದು ಪಣವಿದೆ |
ತರಿದನಕ ರಕ್ಕಸಿಯ ಒಲಿದವಳಲ್ಲ ನಿನಗೀಗಾ ||
ಮರುಳರಂದದಿ ದುಡುಕ ಬೇಡವೊ |
ದುರುಳೆಯನು ಸಂಹರಿಸೆ ವರಿಸುವೆ |
ಅರಿಯೆಯಾ ನೀತಿಗಳ ನೇಮದ ಗುರುತ ದೊರೆಯೆನಿಸೀ ||೧೬೬||
ರಾಗ ಭೈರವಿ ಝಂಪೆತಾಳ
ತರುಣಿಯಳ ನುಡಿ ಕೇಳಿ | ದೊರೆ ರೋಷದೊಳು ನುಡಿದ |
ಅರರೆ ನಿನ್ನಯ ಗರ್ವವೀಗಾ ||
ಪರಿಕಿಸಿದೆ ಛಲವ ಗೈದಿಹಪರಿಗೆ ತೋರಿಸುವೆ |
ಪುರಿಯೊಳಿಹ ದುರುಳೆಯನು ತರಿದೂ ||೧೬೭||
ನಿನ್ನ ಜನಕನ ಮುಂದೆ ಕನ್ನೆ ನಿನ್ನನು ವರಿಸಿ |
ಮುನ್ನ ಸಂಯೋಗವನೆ ತೊರೆದೂ ||
ಬನ್ನಕ್ಕೆ ಗುರಿಮಾಡಿ ಪೋಗುವೆನು ಪುರಕೆಂದು |
ರನ್ನೆಯೊಳು ಶಪಥ ಮಾಡಿದನೂ ||೧೬೮||
ರಾಗ ಯರಕಲ ಕಾಂಭೋಜಿ ತ್ರಿವುಡೆತಾಳ
ಬೇಡಾ ಬೇಡವೊ ಭೂಪ | ಎನ್ನಮೇಲಿಂತು | ಮಾಡಬೇಡವೋ ಕೋಪ || ಪಲ್ಲವಿ ||
ರೂಢಿಯೊಳಗತಿಶ್ರೇಷ್ಠ ತವ ನುತಿ | ಮಾಡಿ ಕಪ್ಪವ ಭೂಮಿ ಪಾಲರು |
ನೀಡುವರು ಮನದಿಷ್ಟ ಕಾರ್ಯವ | ಮಾಡಲವ ಬೇಡೆಂಬರ್ಯಾರೈ || ಬೇಡ ||೧೬೯||
ಮಾನವೇಶನೆ ಲಾಲಿಸೀ | ಕೇಳುವುದೆನ್ನ | ಸಾನುರಾಗದೊಳೊಲಿಸೀ |
ನೀನೆ ನಿಷ್ಕಾರಣದಿ ತೊರೆಯಲು | ಭಾನುಕುಲಕತಿಕೀರ್ತಿ ಬರ್ಪುದೆ |
ಮಾನಿನಿಯ ತ್ಯಜಿಸುವರೆ ಪಂಥವ | ಮಾನವರಿಯದೆ ಗೈಯ್ಯಬಹುದೇ ||
ಬೇಡ ಬೇಡವೋ ಭೂಪಾ ||೧೭೦||
ರಾಗ ಭೈರವಿ ಝಂಪೆತಾಳ
ದಿಟ್ಟೆ ನಿನ್ನೊಳು ಪಿಂದೆ | ಎಷ್ಟು ಪೇಳಿದರು ಕಿವಿ |
ತಟ್ಟದೇ ಛಲಗೈದ ಪರಿಗೇ ||
ಕೆಟ್ಟಮೇಲಕೆ ಬುದ್ಧಿಬಹುದೆಂಬ ನಾಣ್ನುಡಿಯು |
ಬಟ್ಟೆ ತೋರುವುದು ಕೇಳ್ | ಸೃಷ್ಟೀಶಬಾಲೆ ||೧೭೧||
ರಾಗ ಸಾಂಗತ್ಯ ರೂಪಕತಾಳ
ದೊರೆರಾಯ ಲಾಲಿಸು | ಬರಿದೆ ಎನ್ನೊಳು ಪಂಥ |
ವರಶೂರತನದಿ ನೀ ಗೈದೆ ||
ಧರೆಯೊಳ್ನಿನ್ನಂಥ ಧೀರರನೆಲ್ಲೂ ಕಾಣೆನು |
ಅರುಹಲು ನಗೆಗೀಡಾಗುವೆಯೋ ||೧೭೨||
ನಿನ್ನ ವೀರ್ಯಕೆ ಪುತ್ರ | ನನ್ನೂ ಪಡೆದು ಧುರ |
ವನ್ನು ಗಂಟಿಕ್ಕುತಲಾಗ ||
ಚೆನ್ನಾಗಿ ಕರಕಟ್ಟಿ ತರಿಸದೆ ಇರಲು ಮೇ |
ಣೆನ್ನದು ಬಾಳ್ವೆಯೆ ಜಗದಿ ||೧೭೩||
ಭಾಮಿನಿ
ಮಂದಗಮನೆಯ ನುಡಿಗಳಿಗೆ ಭಾ |
ಪೆಂದನಾ ಧರಣೀಂದ್ರ ವನಿತೆಗೆ |
ಸಂಧಿಸಿದ ಶಪಥವನು ತೀರ್ಚಿಪ ಬಗೆಯ ಯೋಚಿಸುತ ||
ಬಂದನಾಕೆಯನಗಲುತಲಿ ಭೂ |
ಮೀಂದ್ರನಾಗಳು ತನ್ನ ಬಿಡದಿಗೆ |
ಇಂದುಮುಖಿ ತೆರಳಿದಳು ತನ್ನಯ ನಿಲಯಕೊಲವಿನಲೀ ||೧೭೪||
ವಾರ್ಧಕ
ಅರುಹುವೆನು ಶೌನಕಾದಿಗಳೆಲ್ಲ ಕೇಳಿ ನಿ |
ರ್ಜರವಾಜಿಯಂ ದಿನಪ ಪಡುಗಡಲಿಗೊಯ್ಯಲ್ಕೆ |
ದುರುಳೆ ರಕ್ಕಸಿ ನಿತ್ಯದಂದದೊಳ್ಪುರದೊಳಗೆ ನರರನರಸುತ ರೌದ್ರದೀ ||
ಬರಲಿಕಾ ಸಮಯದಲಿ ಕೇಳಿಸಿತು ಬೃಹದ್ರಥಗೆ |
ತರತರದ ಘರ್ಜನೆಯು ಮುದದಿ ನೃಪವರ ತನ್ನ |
ಕರವಾಲಮಂ ಕೊಂಡು ಮುಕ್ತಾಕಲಾಪವಂ ಧರಿಸಿ ಕಂಠದಿ ಪೊರಡಲೂ ||೧೭೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಧರಣಿಪಾಲಕ ವಜ್ರಕವಚವ | ಧರಿಸಿ ನಭಕೈದುತ್ತಲಾಕೆಗೆ |
ಸರಳ ಮಳೆಗರೆಯುತ್ತ ನುಡಿಸಿದ | ಭರದೊಳವಳ ||೧೭೬||
ದುರುಳೆ ರಕ್ಕಸಿ ನಿಶಿಯ ಕಾಲದಿ | ತಿರುಗುತಿಹೆ ನೀನ್ಯಾಕೆ ನಭದಲಿ |
ಪುರವದಾವುದು ನಿನ್ನ ಪೆಸರೇ | ನರುಹು ಬೇಗ ||೧೭೭||
ರಾಗ ಭೈರವಿ ಝಂಪೆತಾಳ
ಆ ದುರುಳೆ ನುಡಿದಳೀ | ಮೇದಿನಿಯೊಳನುದಿನದಿ |
ಸಾದರದೊಳೋರ್ವರನು ತಿಂದು ||
ಮೋದದಿಂದಿರುತೀರ್ಪ ನನ್ನೊಡನೆ ಪುರಪೆಸರ |
ಈ ದಿವಸ ಕೇಳುವವನ್ಯಾರೋ ||೧೭೮||
ಎಂದ ದುರುಳೆಯ ನುಡಿಗೆ | ಚಂದದಿಂನೃಪನೆಂದ |
ಇಂದಿಗೋ ನಿನ್ನ ಹರಣಕ್ಕ್ಕೆ |
ಮುಂದೆ ಶೈಮಿನಿಪುರವ ಅಂದದಿಂ ತೋರಿಸಲು |
ಬಂದೆನಾ ಧುರಕಾಗಿ ನಭಕೇ ||೧೭೯||
ದುರುಳ ನರ ನೀನೆನ್ನ | ತರಿಯುವೆಯ ಕೇಳ್ಮುನ್ನ |
ಇರುವೆ ನೀ ದಿವಸ ಪರಿಯಂತ ||
ವರಧರ್ಮದಲಿ ದೃಷ್ಟಿ | ಇರಿಸುತೋರ್ವರ ತಿಂದು |
ತೆರಳುತಿರ್ದೆನು ನೋಡಲೀಗ ||೧೮೦||
ಎನ್ನೆದುರಿನೊಳು ನಿಂದು | ಕುನ್ನಿಯಂದದಿ ಬಗುಳ್ವ |
ಮುನ್ನ ನಿನ್ನನೆ ತಿಂದು ಬಳಿಕ ||
ಚೆನ್ನಾಗಿ ಭಕ್ಷಿಸುವೆ ಪುರಿಯೊಳಿರುವರನೆಲ್ಲ |
ನೆನ್ನುತಲೆ ಖತಿಗೊಂಡು ಬರಲೂ ||೧೮೧||
ಬಂದ ರಕ್ಕಸಿಯುರಕೆ | ಸಂಧಿಸಿದ ಸರಳೆಸೆಯ |
ಲಂದು ಮುರಿಯುತ ದುರುಳೆಯಾಗ ||
ಚಂದದಿಂ ಕಾಲಾಗ್ನಿ ಕಿಡಿಗಳನ್ನುಗುಳುತಿಹ |
ದೊಂದು ಶೂಲವ ಭರದಿ ಬಿಡಲು ||೧೮೨||
ಬರುವ ಶೂಲವ ಪಥದಿ | ಮುರಿಯುತ್ತ ನೃಪನಾಗ |
ಹರಿನಾದಗೈಯ್ಯಲಾಕ್ಷಣದೀ ||
ಇರುವಷ್ಟದಿಕ್ಕುಗಳು ಕಂಪಿಸಲು ಉಭಯರಾ |
ಧುರದೊಳಗೆ ಬೊಬ್ಬಿರುವ ಭರಕೆ ||೧೮೩||
ಭಾಮಿನಿ
ದುರುಳೆಯಾರ್ಭಟಿಸುತಲಿ ನೃಪನಿಗೆ |
ಗಿರಿತರುವ ಮುರಿದೆಸೆಯೆ ಭರದಲಿ |
ತರಿಯುತದನೆಲ್ಲವನು ಖತಿಯೊಳಗೆಂದನಾಕೆಯೊಳೂ ||
ಶಿರವನುಳುಹಿಕೊ ಪಾಪಿ ಎನುತಲಿ |
ಹರನ ಕರವಾಲವನು ಬಿಡಲಾ |
ಪರಿಗಳೇನುಸುರುವೆನು ಕಾಲನ ಪುರಿಗೆ ಸಾರಿದಳೂ ||೧೮೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತಲಾಕಾಶ್ಮೀರದರಸನ | ಮತ್ತ ಸೇನಾನಿವಹಮಧ್ಯದಿ |
ಕತ್ತರಿಸಿದಾ ಶಿರವು ಬೀಳಲು | ಪೃಥ್ವಿ ನಡುಗೆ ||೧೮೫||
ಒರೆಯಲೇನದ್ಭುತವು ಸೈನ್ಯದಿ | ಮುರಿದವಾರಕ್ಷೋಹಿಣೀಗಳು |
ತೆರಳಿದನು ಅಳಿದುಳಿದ ಬಲದಿಂ | ಪುರಕೆ ಬೆದರಿ ||೧೮೬||
ಕೇಳಿ ಕುವಲಯ ಸೂರ್ಯನುದಯದಿ | ಪೇಳದೈದಿದ ವೀರಸೇನನ |
ಕಾಳಗದಿ ಬೃಹದ್ರಥನು ದುರುಳೆಯ | ಸೀಳ್ದ ಪರಿಯಾ ||೧೮೭||
ಭಾಮಿನಿ
ಒರೆದನಾ ಸಚಿವನೊಳು ಕುವಲಯ |
ಪರಮ ಶಿಲ್ಪಿಗಳೆಲ್ಲಪುರ ಶೃಂ |
ಗರಿಸಿ ವಾರಾಂಗನೆಯರೆಲ್ಲರು ಪಿಡಿದು ಚಾಮರವಾ ||
ಪರಿಪರಿಯ ವಾದ್ಯಗಳ ಮೊಳಗಿಸು |
ತರಸ ಬೃಹದ್ರಥನನ್ನು ಕರೆವರೆ |
ಪೊರಡಬೇಕೆನೆ ಕೇಳ್ದು ಸನ್ನಹಗೊಂಡನೊಲವಿನಲೀ ||೧೮೮||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬರಲಿಕುದ್ಯಾನದಲಿ ಶೋಭಿಪ | ಧರಣಿಪತಿ ನಕ್ಷತ್ರಚಂದ್ರನ
ಹರುಷದಿಂ ಕಂಡಾಗಮಣಿಯುತ | ಲೊರೆದನೃಪನೂ ||೧೮೯||
ಭಳಿರೆಭೂಪನೆ ನಿನ್ನ ಕರುಣದಿ | ಉಳಿದರೀಖಂಡಾಶ್ರಯರು ಮನ |
ದೊಳಗೆಸುಡುತಿಹ ವಹ್ನಿಶಮಿಸಿತು | ಬಳಲ್ದೆ ನೀನೂ ||೧೯೦||
ಎಂದು ಬಹುಪರಿಯಿಂದ ಪೊಗಳುತ | ಚಂದದಿಂದಲೆ ಸೇನೆಸಹಿತಲಿ |
ಮಂದಿರಕೆ ಬಹುದೆಂದು ಪೇಳ್ದಾ | ನಂದದಿಂದಾ ||೧೯೧||
ಭಾಮಿನಿ
ಬಂದನಾ ನೃಪನರಮನೆಗೆ ಸುರ |
ವೃಂದವಂದ್ಯನ ತೆರದಿ ವಿಭವದಿ |
ತಂದು ಹರಿವಿಷ್ಠರದಿ ಕುಳ್ಳಿರಿಸುತ್ತ ಕುವಲಯನೂ ||
ನಿಂದಿರುವ ಹಸ್ತ್ಯಶ್ವರಥಿ ಕರಿ |
ಗಂದದಿಂದಲ್ಲಲ್ಲಿ ಬಿಡದಿಯ |
ಚಂದದಿಂ ನೇಮಿಸುತಲಿತ್ತನು ಭೋಜ್ಯವಸ್ತುಗಳಾ ||೧೯೨||
ರಾಗ ಸಾಂಗತ್ಯ ರೂಪಕತಾಳ
ಮೆರೆಯುವ ಅರಮನೆಯೊಳು ಗೈದ ನವರತ್ನ | ಕುರುಜುಮೇರುವೆ ಮಂಟಪಗಳಾ ||
ಪರಿವಾರಗಳಿಗೆ ಸಭೆಯ ಗೈಯ್ಯೆ ಪುರಜನ | ಧರಣಿಪರಿಗೆ ಬೇರೆ ರಚಿಸೀ ||೧೯೩||
ಇರುತಿರೆ ಬಂದರೈವತ್ತೈದು ದೇಶದ | ಧರಣಿಪಾಲರ ಕಂಡು ಭೂಪ |
ಕರೆತಂದು ಮನ್ನಿಸಿ ಸಭೆಯೊಳ್ಕುಳ್ಳಿರಿಸುತ್ತ | ಪರಿಪರಿಯಿಂದುಪಚರಿಸೆ ||೧೯೪||
ಹರುಷದಿ ಮಂಗಳ ಸ್ನಾನವಗೈಸುತ್ತ | ತರತರಾಭರಣ ವಸ್ತ್ರಗಳ ||
ತರಿಸಿತ್ತು ಕನ್ನೆಯ ಕರೆತಂದು ಕುವಲಯ | ವರವಜ್ರ ಮಂಟಪದೊಳಗೆ ||೧೯೫||
ರಾಗ ಜಂಜೂಟಿ ಅಷ್ಟತಾಳ
ವರವೇದಘೋಷದಿ ದ್ವಿಜರೂ | ವಧು | ವರನ ಗೋತ್ರವನೆ ಪೇಳಿದರೂ ||
ಧರಣಿಪಾಲಕ ಬೃಹದ್ರಥನ ಹಸ್ತದೊಳಾಗ | ತರಳೆಯ ಕರವಿಟ್ಟು ಧಾರೆಯನೆರೆದನು ||೧೯೬||
ಪೃಥುವಿಪಾಲಕರ ಮನ್ನಿಸುತಾ | ವಿಪ್ರ | ತತಿಗೆ ದಕ್ಷಿಣೆಗಳ ಕೊಡುತಾ ||
ಕೃತಕೃತ್ಯನಾದೆ ತಾನೆನುತಲೆ ಸಕಲರ್ಗೆ | ಅತಿ ಹಿತದಿಂದ ಕೈಮುಗಿದು ನಿಂದಿರಲಿತ್ತ ||೧೯೭||
ಭಾಮಿನಿ
ಆರತಿಯನೆತ್ತಿದರು ಸೊಬಗಿನ |
ನಾರಿಯರು ಶೋಭಾನಗೈದರು |
ಭೂರಿಭೋಜನದಿಂದ ಸಂತೈಸಿದನು ಸಕಲರನೂ ||
ಕೀರವಾಣಿಯರರಸಿನೆಣ್ಣೆಯ |
ಸಾರಿಸಲು ಬುಧರಾಶಿಷಂಗಳ |
ಚಾರುದಂಪತಿಗಳ್ಗೆ ಮಾಡಿದರಂದು ಸಂತಸದೀ ||೧೯೮||
ರಾಗ ಸಾಂಗತ್ಯ ರೂಪಕತಾಳ
ಜನಪ ಬೃಹದ್ರಥನೊಡನೆ ಸಂಯೋಗಕ್ಕೆ | ವನಜಲೋಚನೆ ಕಲಾವತಿಯ |
ಘನತೆಯಿಂ ಶಯನಮಂದಿರಕೆಂದು ಕಳುಹಲು | ವನಿತೆಯರಾಗ ಸಂತಸದೀ ||೧೯೯||
ಮಲಯಜಗಂಧಿತಾ | ಗೆಳತಿಯರೊಡನ್ಹಿಂದೆ | ನಿಲೆ ಭೂಮಿಪಾಲ ಮುಂದಾಗೆ |
ಪೊಳೆಯುವ ನವರತ್ನದಿಂ ತೋರ್ಪಪರಿಯಂಕ | ದೊಳಗೆ ಶೋಭಿಸುವಾತಲ್ಪವನೂ ||೨೦೦||
ಮುತ್ತಿನಿಂಮೇಲುಗುಜ್ಜುಗಳನ್ನು ಕಟ್ಟಿರೆ | ಸುತ್ತ ಸುಜ್ಯೋತಿಯ ಬೆಳಕು ||
ಚಿತ್ತಜನಾಟವ ಗೈಯ್ಯುವ ಅಪರಂಜಿ | ಚಿತ್ರದ ಬೊಂಬೆಯ ನೋಡಿ ||೨೦೧||
ಅತ್ಯಂತ ಹರುಷದಿ ಮತ್ತಕಾಶಿನಿಯೊಳು | ಚಿತ್ತಜನಾಟದಿ ಮೆರೆವಾ |
ಪೃಥ್ವಿಪ ತಾ ಧನ್ಯನೆನುತ ಹಿಗ್ಗುತಲೊಮ್ಮೆ | ಮತ್ತೆ ದುಃಖಿಸುತೆಂದನಾಗ ||೨೦೨||
ವಾರ್ಧಕ
ಹಿಂದೆ ನಾ ವನದೊಳಗೆ ಮಂದಗಾಮಿನಿಯೊಡನೆ |
ಮುಂದಪ್ಪಪರಿಗಳನ್ನರಿಯದೆಲೆ ಶಪಥವನು |
ಸಂಧಿಸಿದೆನೀ ಗತಿಯು ದೊರಕಿಹುದೆ ಶಿವ ಎಂದು ಹೊಂದೆ ಮೂರ್ಛೆಯ ತಲ್ಪದೀ ||
ಸುಂದರನ ಪರಿಗಳನ್ನರಿಯದತಿಲಜ್ಜೆಯೋಳ್ |
ಬಂದೆಡದ ಭಾಗದೊಳ್ಪವಡಿಸಲು ತರುಣಿಮಣಿ |
ನಿಂದು ಹಾರೈಸುತಿಹ ನಿದ್ರಾವಿಲಾಸಿನಿಯು ಚೆಂದದಿಂ ತಕ್ಕೈಸಲೂ ||೨೦೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರೆನಿಮಿಷದೊಳಗಾಗ ಭೂಪನು |
ತರಹರಿಸಿ ವನಿತೆಯನೆ ತಡವುತ |
ಸ್ಮರನ ಬಾಧೆಗೆ ಸಿಲುಕಿ ನುಡಿದನು | ಪರಿಪರಿಯಲೀ ||೨೦೪||
ಪೇಳಿದೆನು ಬಹುಪರಿಯ ನೀತಿಯ |
ಬಾಲೆಯೊಳು ವರಿಸೆಂದು ಎನ್ನನು |
ಕೇಳದಿರೆ ಶಪಥವನುಗೈದೆ ಸು | ಶೀಲೆಯೊಡನೆ ||೨೦೫||
ಭಾಮಿನಿ
ಇನಿತು ದುರ್ಜನರಂತೆ ಪಂಥದಿ |
ಮನಸಿಜನ ಸತಿಯನ್ನು ಮೀರುವ |
ವನಜಮುಖಿಯೊಳು ವೈರ ಬೆಳೆಸುತ ಕೆಟ್ಟೆಮುರಹರನೆ ||
ಎನುತಲಾನೃಪತಿಲಕ ಬಹುಪರಿ |
ನೆನೆದು ಶೋಕಾಬ್ಧಿಯಲಿ ಪೊರಳುತ |
ತನಗೆ ಮುಂದೇಂ ಗತಿಯು ಹಾ ಎಂದೆನುತ ಹಲುಬಿದನೂ ||೨೦೬||
ರಾಗ ಸಾವೇರಿ ಆದಿತಾಳ
ಹೇಗೇ ಈ ತರುಣಿಯನೂ | ತ್ಯಜಿಸುತೊಮ್ಮೆ | ಈಗ ಪೋಗುವುದು ತಾನೂ ||
ನಾಗವೇಣಿಯ ಸಂಗವಾ | ಬಿಟ್ಟಿರಲಾರೆ | ಹೋಗಿ ಹೇಗಿಡಲಿ ಜೀವ ||೨೦೭||
ವನಿತೆಯ ಬಿಟ್ಟು ಪೋದರೇ | ಲೋಕದ ಜನರು | ಮನಕೆ ಬಂದಂತೆ ಬೈಯ್ಯರೇ ||
ಘನ ಪಾಪಿ ನೀಚನೆಂಬರೂ | ಈಕೆಯ ಪೆತ್ತ | ಜನನೀಜನಕರೀರ್ವರು ||೨೦೮||
ಮಂದಗಮನೆ ಸಂಗದಿ | ಸುರತಕೇಳಿ | ಇಂದೂ ಗೈಯಲು ಮೋದದಿ ||
ಮುಂದೆನ್ನ ತರಣಿಜನೂ | ನರಕದೊಳೊಯ್ದು | ಎಂದೂ ಅದ್ದದೆ ಬಿಡನೂ ||೨೦೯||
ತರಣಿವಂಶದಿ ಕ್ಷಾತ್ರಿಯ | ಜನ್ಮವನೆತ್ತಿ | ತೊರೆಯಲಾರೆನು ನುಡಿಯಾ ||
ವರವೇದ ಶಾಸ್ತ್ರವನೂ | ನೋಡಿರುವೆನು | ತರುಣಿಯ ತ್ಯಜಿಸಲಾನು ||೨೧೦||
ಆವಕರ್ಮವ ಗೈಯ್ಯಲೂ | ನಿಷ್ಪಲವಹುದು | ಜೀವಿತವಲ್ಲವೆನಲೂ ||
ಸಾವುಬಾರದೆ ಎನಗೆ | ಭೂಮಿಯೊಳು ಸಂ | ಭಾವಿತನಲ್ಲ ಕಡೆಗೇ ||೨೧೧||
ಬಿಟ್ಟುಪೋದನೆ ಪತಿಯೆಂದೂ | ಪಂಕೇರುಹಾಕ್ಷಿ | ನಿಟ್ಟುಸಿರನು ತಾ ತಂದೂ |
ಕೆಟ್ಟದಾರಿಯ ತುಳಿದರೇ | ಉಭಯ ಕುಲದ | ಶ್ರೇಷ್ಠ ಪಿತೃಗಳು ನೋಯರೇ ||೨೧೨||
ಭಾಮಿನಿ
ಮುರಿದು ತಾನೇ ತನ್ನ ಮಾತನು |
ಸರುವಥಾ ಇರಲಾರೆನೆನ್ನುತ |
ಧರಿಸಿದನು ಮುಕ್ತಾಕಲಾಪವ ಪೋಪೆ ಪುರಕೆನುತಾ ||
ಭರದೊಳಂತರ್ಧಾನದಿಂ ನಿಜ |
ಪುರಕೆ ಸಾರಲ್ಕಿತ್ತ ನಿದ್ರಿಪ |
ತರುಣಿಗೆಚ್ಚರವಾಗೆ ತಲ್ಪವನೆಲ್ಲ ತಡವರಿಸೀ ||೨೧೩||
ರಾಗ ನೀಲಾಂಬರಿ ತ್ರಿವುಡೆತಾಳ
ಅಷ್ಟದಿಕ್ಕನು ನೋಡಿ ತರುಣಿಯು | ಕೆಟ್ಟೆನೆಂದೆನುತಾಗಲಳಲುತ |
ಪಟ್ಟದರಸನು ಗೈದ ಶಪಥವು | ನಟ್ಟು ಮನದೀ ||೨೧೪||
ಉರಿಯು ಸೋಂಕಿದ ತಳಿರಿನಂದದಿ | ಸೊರಗಿ ಸಂಫುಲ್ಲಾನನವು ಸು |
ಸ್ವರವು ಕುಗ್ಗುತೆ ಮುಸುಕೆ ಶೋಕವು | ಪರಿಪರಿಯಲಿ ||೨೧೫||
ರಾಗ ಸಾಂಗತ್ಯ ರೂಪಕತಾಳ
ಎಲ್ಲಿಗೈದಿದೆ ಎನ್ನಾ | ವಲ್ಲಭ ಮೋಹನ್ನ | ನಿಲ್ಲದು ಹರಣವೀಗೆನಗೇ ||
ಎಳ್ಳೆನಿತಾದರೂ ಕರುಣವಿಲ್ಲವೆ ನಿಶಿ | ಯಲ್ಲೆನ್ನ ಬಿಟ್ಟು ಪೋಗುವುದೇ ||೨೧೬||
ಧರಣಿಯೊಳಗೆ ಬಹು | ಪರಿಯಿಂದ ನಿಂದಕ | ರಿರುವರವರ ಮುಂದೆ ನಾನು ||
ಧರಿಸಿ ಈ ಜೀವವ | ಹೊರೆಯಲೆಂತೊಡಲನ್ನು | ತೊರೆದು ಯೆನ್ನನು ನೀನು ಪೋಗೆ ||೨೧೭||
ಹರಹರ ಕೆಟ್ಟೆನು | ವರಗುಣ ಮಣಿಯನ್ನು | ತೊರೆದು ಜೀವಿಸಲಾರೆನಿನ್ನೂ ||
ಎರೆಯನಿದ್ದರು ಎನಗಿರದಂತಾಯಿತು ಮುಂದೆ | ಹರಿಯೇ ಇನ್ಯಾಕೆ ಬಾಳುವೆಯೂ ||೨೧೮||
Leave A Comment