ರಾಗ ಸುರುಟಿ ಏಕತಾಳ

ಆಡಿದರ್‌ನಾಟ್ಯವನೂ | ಶ್ರುತಿಗತಿ | ಗೂಡುತ ಗಾನವನೂ       || ಪಲ್ಲವಿ ||

ಆಡುತ ಪಾಡುತ ನೋಡುತ ನಲಿಯುತ | ಹಾಡಿದರಾಮಧುಮಾಸದ ವರ್ಣನೆ     || ಅ ಪ

ಮಂದಮಾರುತವನದೀ | ಬೀಸುವಾ | ನಂದದ ಸಂಭ್ರಮದೀ |
ಚಂದದ ಚಿಗುರುಗ | ಳಿಂದಕೆಂಪೇರಿದ | ಸುಂದರ ಸುಮನಸ | ವೃಂದವು ಮೆರೆವುದು        ||೮೩||

ಘಮಘಮಿಸುತ ವನದೀ | ಜಾಜಿಯ | ಸುಮರಸಸೇವನದೀ |
ಭ್ರಮರಂಗಳು ಝೇಂಕರಿಪಾನಂದವ | ಕಮಲಾನನೆಯರು ಪೊಗಳುತ ವಿಭವದಿ   ||೮೪||

ಕಲಹಂಸಗಳ್‌ಶುಕವೂ | ಹಾಡುವ | ಕಿಲಕಿಲ ಧ್ವನಿಕರವೂ |
ಮಲಯಮಾರುತರಥವೇರುತಸಂಗಡ | ಗಿಳಿದೇರನ ಕರೆತಂದಿಹನೆನುತಲಿ        ||೮೫||

ಇಂತೀಪರಿಯೊಳಗೇ | ವರ್ಣಿಸಿ | ಸಂತಸಕೊಡೆಸಭೆಗೇ |
ಮಂತ್ರವಿಮೋಹಿತ | ನಂತೆಯೆ ಭೂಮೀ | ಕಾಂತನು ಮನದಾನಂದದೊಳಿರುತಿರೆ ||೮೬||

ವಾರ್ಧಕ

ಇರುತಿರ್ದನಿತ್ತ ಘಂಟಾಕಂಠ ಋಷಿಯೆಂದು |
ಪರಮದ್ವೈತಾರಣ್ಯದೊಳಗೆ ತಪಗೈಯ್ಯುತಂ |
ತರಣಿಗರ್ಘ್ಯವನೀಯಲೆಂದು ಸುರಗಂಗೆಗಂ ವರಶಿಷ್ಯನನುದಿನದೊಳೂ ||
ಕರೆದೊಂದು ಅಂಜನವನಕ್ಷಿಗಿಡುತವನಕಂ |
ಧರದಲ್ಲಿ ಹಾರವೊಂದನು ತೊಡಿಸಿ ಪರಸಲ್ಕೆ |
ತರುತಲಿರ್ದನು ಜಲವನರುಣನುದಯಕೆಮುನ್ನ ಚರಿಸಿ ಮನವೇಗದಿಂದ  ||೮೭||

ರಾಗ ಕಾಂಭೋಜಿ ಝಂಪೆತಾಳ

ನಿತ್ಯನಂದದಿ ತಾಪಸೋತ್ತಮನು ಉಲ್ಕಲಗೆ | ಇತ್ತ ಅಂಜನ ಹಾರಧರಿಸೀ ||
ಭಕ್ತಿಯಿಂ ನಭದೊಳಗೆ ಬರುತಿರಲು ಸಂಗೀತ | ನೃತ್ಯಧ್ವನಿ ಕಿವಿಗೆ ಕೇಳಿಸಿತೂ      ||೮೮||

ಮನವತ್ತ ಸೆಳೆಯಲ್ಕೆ | ತನುಸಹಿತ ಉಲ್ಕಲನು | ಜನಪನೆಡೆಗತಿವೇಗದಿಂದ ||
ಮಿನುಗುತಿಹ ಕಾಂಚನದ ಗೋಪುರ ವರಾಂಗಣವ | ಘನತೆಯಿಂದೊಳಪೊಕ್ಕನಾಗ          ||೮೯||

ಬಂದಲ್ಲಿ ಅರಮನೆಯ ಬಂಧುರದ ಚಿತ್ರವನು | ಮುಂದಿರ್ಪ ವಜ್ರಸ್ತಂಭವನೂ |
ಇಂದ್ರ ಶಿಖಿವರುಣ ಅಳಕಾಧಿಪನ ಗೃಹದಂತೆ | ಸುಂದರವಾಗಿಹುದ ನೋಡಿ        ||೯೦||

ವಾರ್ಧಕ

ಆ ಋಷಿಯ ಶಿಷ್ಯ ನೇತ್ರಾಂಜನದ ಬಲದಿಂದ |
ದ್ವಾರವೆಲ್ಲವ ದಾಂಟಲಾರು ತಡೆಗಟ್ಟದಿರೆ |
ಸಾರಿ ನವರತ್ನದಿಂ ಕೆತ್ತಿರುವ ಕಂಬತೊಲೆಬೋದಿಗೆಯ ರಚನೆಗಳಲೀ ||
ತಾರೆಗಳ ಮಿಗಿಲೆನಿಪ ಬೊಂಬಾಳದೀವಿಗೆಯೊ |
ಳ್ತೋರುತಿಹ ದಿವ್ಯಶಯ್ಯಾಗಾರಕಡಿಯಿಡಲ್ |
ಧಾರುಣಿಪ ತಾ ನಿತ್ಯ ಪವಡಿಸುವ ವರ ವಜ್ರಪರಿಯಂಕಮಂ ಕಂಡನೂ   ||೯೧||

ಭಾಮಿನಿ

ಭರದೊಳಾ ಋಷಿಶಿಷ್ಯ ತಲ್ಪದಿ |
ಹರುಷದಿಂ ಮಂಡಿಸಲಿಕಾ ದಶ |
ಶಿರನನುಜ ಮಡಿದಂದಿನಿಂದಲಿ ದುಃಖಿಸುತ್ತಿರುವಾ ||
ತರುಣಿ ನಿದ್ರಾಂಗನೆಯು ಬೀರಲು |
ಪರಿಪರಿಯ ಗಾಢಾನುರಾಗವ |
ಪರವಶದಿ ಪವಡಿಸಲು ನಿದ್ರಾಂಗನೆಯ ಕೇಳಿಯಲೀ    ||೯೨||

ರಾಗ ಭೈರವಿ ರೂಪಕತಾಳ

ಬಂದನಾಗ ವೀರಾವತೀಶ ಬೇಗ              || ಪಲ್ಲವಿ ||

ಬಂದನಾನರ್ತಕರಿಗುಡುಗೊರೆ | ತಂದು ನೀಡಲು ಹರುಷಗೊಳೆ ಸಚಿ |
ವೇಂದ್ರಸಭ್ಯರನ್ನೆಲ್ಲ ಕಳುಹುತ | ಮಂದಿರದೊಳೈದುತ್ತ ಸಂಧ್ಯಾ |
ವಂದನಾರೋಗಣೆಯ ಗೈದಾ | ನಂದದಿಂ ತಾಂಬೂಲ ಸವಿಯುತ |
ಹೊಂದೆ ಶಯನಾಲಯಕೆ ನಿದ್ರೆಯ | ದಂದುಗಕೆ ತರಹರಿಸಿ ಭೂಪನು || ಬಂದನಾಗ         ||೯೩||

ರಾಗ ಕೇತಾರಗೌಳ ಅಷ್ಟತಾಳ

ಜನಪಾಲ ತನ್ನಯ ಶಯನದೊಳೊರಗಿದ | ಮುನಿಶಿಷ್ಯನನು ಕಾಣುತ್ತಾ ||
ಘನತರ ಚೋದ್ಯವ ತಾಳುತ್ತಲೆಂದನು | ಅನುಮಾನಗೊಳ್ಳುತಾಗ        ||೯೪||

ಹರನುರಿಗಣ್ಣಿನ ಉರುಬೆಯ ಸಹಿಸದೆ | ಶಿರದೊಳಗಿಹ ಶಶಿಯೂ ||
ವರಶೈತ್ಯತಲ್ಪದಿ ಪವಡಿಸಿ ಶ್ರಮಪರಿ | ಹರಿಸಲೋಸುಗ ಬಂದನೋ      ||೯೫||

ಸುರಪನು ದುರುಳರ ಬಾಧೆಗೆ ಬೆದರುತ್ತ | ಧರಣಿಗೆ ತಾನಿಳಿದೂ ||
ಅರಿಗಳಿಲ್ಲಿವಗೆಂದು ಮರೆಯನು ಸಾರ್ದನೊ | ಉರುತರ ಕ್ಲೇಶದಿಂದ      ||೯೬||

ಶ್ವಾಸವ ನೋಡಲಾ ಶೇಷನು ಧನದಭಿ | ಲಾಷೆಗೆ ಒಳಗಾಗುತ್ತಾ |
ಈ ಸುಖತಲ್ಪದಿ ಪವಡಿಸಿದರೆ ವಿಷ | ಭಾಸವ ನಾಕಾಣೆನೂ      ||೯೭||

ಹದನವಿದೇನೆಂದು ತಿಳಿವೆ ತಾನೆನುತಲಿ | ವಿಧವಿಧದಿಂದಾತನಾ |
ಚದುರಿಸಲಾಕ್ಷಣ ಕುಳಿತನು ಋಷಿಶಿಷ್ಯ | ಅದುಭುತವಾಯ್ತೆನುತ ||೯೮||

ಆರು ನೀನೆನ್ನಯ ತಲ್ಪದೊಳೊರಗಲು | ವಾರಣವಾಹನನೂ |
ಸೇರಲು ಪಥವಿಲ್ಲದಂತೆ ಕಾದಿರುವಂಥ | ಶೂರರ ವಂಚಿಸುತಾ  ||೯೯||

ರಾಗ ಸಾಂಗತ್ಯ ರೂಪಕತಾಳ

ಪೊಡವಿಪಕೇಳ್ಕಡು ಬಡವನು ನಾನೆನ್ನ | ದೃಢಗುರು ಘಂಟಾಕಂಠಮರೂ |
ಜಡಜಮಿತ್ರನಿಗರ್ಘ್ಯ ಕೊಡೆಗಂಗೆ ತಹುದೆಂದು | ಬಿಡದಟ್ಟುವರು ದಿನದಿನದಿ        ||೧೦೦||

ಮುನಿದತ್ತವಾದ ದೃಶ್ಯಾಂಜನ ಹಾರವ | ತನುವಿಗೆ ಧರಿಸುತಾಗಸದಿ |
ಜನರಿಗೆ ತೋರದಂತೈದಿ ಗಂಗೆಯನು ನಾ | ದಿನಕೊಂದು ಬಾರಿ ತಹೆನನಲೂ    ||೧೦೧||

ಎಂದಿನಂತಿಂದು ಬರಲಂದುಗೆ ಗೆಜ್ಜೆಗ | ಳ್ಮಂದವಾಗಿರುವ ಸುಸ್ವರವೂ ||
ಸಂಧಿಸಿತೈಯನ್ನ ಶೃತಿಗಳು ಮನ ಸೋತು | ಬಂದುದಿಲ್ಲಿಗೆ ತನುಸಹಿತಾ ||೧೦೨||

ನೋಡುತೈದಲು ತಡೆ ಮಾಡದಿಹುದರಿಂದ | ನೋಡಿದೆ ನೀ ತಲ್ಪವನ್ನು |
ಮಾಡಬಾರದ ಕೃತ್ಯ ಗೈದೆನಾ ಕರುಣಿ ಕಾ | ಪಾಡಬೇಕೆನುತೆರಗಿದನು    ||೧೦೩||

ಭಾಮಿನಿ

ಕೇಳುತಾನುಡಿ ನೃಪನು ನುಡಿದನು |
ತಾಳು ತಾಳೈ ಅಂಜದಿರು ಸರಿ |
ವೇಳೆಯಲಿ ಜಾಹ್ನವಿಯನೊಪ್ಪಿಸದಿರಲು ಮುನಿವರನೂ ||
ತಾಳಿ ಕೋಪವನೀವ ಶಾಪವ |
ಪಾಲಿಸುವರಾರಿಹರು ನಿನ್ನನು |
ಲೀಲೆಯಲಿ ನೀಪಡೆದು ಗುರುವಿನ ಸೇವೆಮಾಡೆಂದಾ   ||೧೦೪||

ರಾಗ ಮಾರವಿ ಅಷ್ಟತಾಳ

ಪೋಪೆನೈ ಭೂಪ ಪೋಪೆನೈ   || ಪಲ್ಲವಿ ||

ಪೋಪೆನೈ ಭೂಮಿನೀನೆನ್ನೊಳು ಹಿತದೀ |
ಈಪರಿಯರುಹಿದ ನುಡಿ ಸತ್ಯ ಭರದೀ           || ಅ ಪ ||

ಅರಸನು ಪವಡಿಸೆ ಮುನಿಶಿಷ್ಯನಾಗ |
ಸುರಗಂಗೆ ತಡಿಗಾಗಿ ತೆರಳಿದ ಬೇಗ |
ಶರಧಿಯೊಳ್ಮಜ್ಜನಗೈದು ಶ್ರದ್ಧೆಯೊಳು |
ಪರಮ ಪಾವನೆಯನ್ನು ತುಂಬಿ ಕುಂಭದೊಳು ||೧೦೫||

ಕಂದ

ಇಂತೀಪರಿಯೊಳಗುಲ್ಕಲ |
ತಾಂ ತವಕದಿ ತನ್ನ ಶಿರದೊಳಾಜಲಘಟಮಂ |
ಆಂತೈದಲ್ ಋಷಿಯೆಡೆಗಂ |
ಅಂತಕಪಿತನೇರಿದನುದಯಾಚಲ ಶಿರವಂ    ||೧೦೬||

ರಾಗ ಕೇತಾರಗೌಳ ಝಂಪೆತಾಳ

ಅರುಣನುದಯಾತ್ಪೂರ್ವದೀ | ಜಲವತಂ | ದಿರಿಸದಿರೆ ಮುನಿತಾಪದೀ ||
ತರಣಿಗರ್ಘ್ಯದ ಕಾಲವೂ | ಮೀರಿತೆಂ | ದುರೆ ನೊಂದು ಬರೆಕೋಪವೂ   ||೧೦೭||

ಅನಿತರೊಳು ಶಿಷ್ಯನೈದಿ | ಜಲವಿರಿಸಿ | ಮುನಿಗೆರಗೆ ತಾ ವಿನಯದೀ ||
ದಿನಪಗರ್ಘ್ಯವನೀಯುತಾ | ಋಷಿವರ್ಯ | ಘನ ಶಿಷ್ಯನನು ನುಡಿಸುತಾ  ||೧೦೮||

ಎಲವೊ ಮೂಢನೆ ಜಲವನೂ | ಕಾಲಗಳ | ಕಳೆದು ತಂದಾ ಪರಿಯನೂ ||
ತಿಳುಹು ನೀನೀಗ ಜವದೀ | ಪೇಳದಿರೆ | ಸಲೆ ಶಾಪವೀವೆ ಕ್ಷಣದೀ         ||೧೦೯||

ರಾಗ ಸುರುಟಿ ಏಕತಾಳ

ಲಾಲಿಸು ನುಡಿಗಳನೇ | ಎನ್ನನ್ನು | ಪಾಲಿಸೊ ಗುಣಯುತನೇ     || ಪಲ್ಲವಿ ||

ಲೀಲೆಯೊಳಭ್ರದಿ ತೆರಳಲು ನಿಶಿಯೊಳು |
ಕೇಳಿಸಿತೈ ನಟಿಯರ ಸಂಗೀತವು   ||೧೧೦||

ಮನ ಪೋಗಿಹ ಎಡೆಗೇ | ಯೆನ್ನಯ | ತನುವಾ ಅರಮನೆಗೇ |
ಕ್ಷಣದೊಳಗಿಳಿಯಲು | ಜನಪನ ತಲ್ಪವು |
ಮಿನುಗುತಲಿರೆ ಕಂಡೆನು ನಾನದರಲಿ         ||೧೧೧||

ಹರುಷದಿ ಪವಡಿಸಲೂ | ನಿದ್ರೆಯು | ಸರಸದಿ ತಾ ಬರಲೂ |
ಧರಣಿಪ ಬೃಹದ್ರಥ ಬಂದೆನ್ನನು ಬಹು |
ಪರಿಯಿಂದೆಬ್ಬಿಸಿ ಮನ್ನಿಸಿ ಕಳುಹಿದ  ||೧೧೨||

ನುಡಿಯಲಿಕಸದಳವೂ | ಸುರರಿಗೆ | ಒಡೆಯನ ಸಂಪದವೂ ||
ಪೊಡವಿಪತಿಯ ವಶವಾದುದೊ ನೋಡಲು |
ಕಡಲಜೆ ಕಾಲ್ಗಳು ಮುರಿದು ಬಿದ್ದಿಹಳೋ      ||೧೧೩||

ಇನಿತೆಂದುದ ಕೇಳಿ | ಹರುಷವ | ಮನದೊಳು ಮುನಿ ತಾಳಿ |
ಜನಪನ ರಾಜ್ಯವ ನೋಡಬೇಕೆನುತಲಿ |
ಘನಹಾರವನಳವಡಿಸಿದ ಗಳದಲಿ   ||೧೧೪||

ಭಾಮಿನಿ

ಅಂದು ಮುನಿಪನು ಹರುಷದೊಳು ಧರ |
ಣೀಂದ್ರನಲ್ಲಿಗೆ ಪೋಪ ತ್ವರಿತದಿ |
ಚಂದದಿಂದಾಕಾಶ ಪಥದೊಳು ಪೋಗಿ ಅರಮನೆಯ ||
ಮುಂದೆ ನಿಲೆ ಸೌವೀರಪತಿ ತಾ |
ನಂದವಾಗಿಹ ಸಭೆಯೊಳೊಪ್ಪಿರೆ |
ಬಂದು ತಿಳುಹಿದ ಚಾರ ಋಷಿಯಾಗಮನ ನೃಪತಿಯೊಳು       ||೧೧೫||

ರಾಗ ಸಾಂಗತ್ಯ ರೂಪಕತಾಳ

ವಸುಧೆ ಪಾಲಕನಾಗ | ಋಷಿಯನ್ನು ಕರೆತಂದು | ಪೊಸತಾದಾಸನವನೇರಿಸುತ |
ಎಸೆವ ಪಾದಗಳ ಸನ್ನುತಿ ಗೈದು ಪೂಜಿಸಿ | ಅಸಮಾನ ಯತಿಗೆಂದನು   ||೧೧೬||

ವರ ಯತಿಗಳೆ ನಿಮ್ಮ | ದರುಶನದಿಂದಲಿ | ಹರಿವುದೀ ನರನ ಕಿಲ್ಬಿಷವೂ ||
ಬರಲೂ ಕಾರಣವೆನ್ನೊ | ಳಿರುತಿರ್ಪ ಕಾರ್ಯವ | ಅರುಹಬೇಕೆನುತ ವಂದಿಸಲೂ   ||೧೧೭||

ವರ ಚಕ್ರವರ್ತಿ ನೀ | ನಿರುವ ವೈಭವನೋಳ್ಪಾ | ತುರದಿ ಧಾವಿಸಿ ಬಂದೆನೀಗಾ ||
ಹರುಷವೆ ನಿನ್ನಯ ಸಚಿವರ್ಗೆ ಪ್ರಜೆಗಳ್ಗೆ | ಪರಿವಾರಗಳಿಗೆ ಪೇಳ್ಮುದದಿ    ||೧೧೮||

ರಾಗ ಕಾಪಿ ಅಷ್ಟತಾಳ

ಕೇಳೈಯ್ಯ ಮುನಿಪ ವಿಖ್ಯಾತ | ರಾಷ್ಟ್ರ | ದೇಳಿಗೆಯಿರವಿನ ವೃತ್ತಾಂತ ||
ಶ್ರೀಲಕ್ಷ್ಮಿವರನ ಕಟಾಕ್ಷದಿ ಸರ್ವರು | ಲೀಲೆಯಿಂದಿರುತಿರ್ಪರೀಗೆನ್ನ ದೇಶದಿ         ||೧೧೯||

ಮಂತ್ರಿಗಳುಭಯರಾಗಿಹರೂ | ಕಾರ್ಯ | ತಂತ್ರಿಗಳೆನಿಸಿ ಕೊಂಡಿಹರೂ ||
ಸಂತಸದಿಂ ನಿಮ್ಮ ಕರುಣಾಕಟಾಕ್ಷದಿ | ಇಂತು ಸದ್ಧರ‍್ಮದಿ ರಾಜ್ಯವಾಳುವೆನೆಂದು   ||೧೨೦||

ಎನಲು ಕೇಳುತ ಮುನಿವರ್ಯನೂ | ತನ್ನ | ಮನದೊಳು ಯೋಚಿಸುತೆಂದನು |
ಜನಪಗೆ ತನ್ನೊಳಗಿರುತೀರ್ಪ ಕರವಾಲ | ಘನ ಮುಕ್ತಹಾರವ ನೀವೆ ತಾನೆನುತಲಿ ||೧೨೧||

ಭಾಮಿನಿ

ಅರಸ ನಿನಗೊಲಿದೀವೆ ಕೊಳ್ಳೈ |
ಹರನ ಕರವಾಲವನು ಕೇಳೈ |
ಧರಿಸು ಈ ಮುಕ್ತಾಕಲಾಪವಗಳದಿ ಸಂತಸದಿ ||
ಧರೆಯೊಳಿರುತಿಹ ದುಷ್ಟರನು ನೀ |
ತರಿದು ಕೀರ್ತಿಯ ಗಳಿಸಿ ಅಂತ್ಯದಿ |
ಹರಿಯ ಸಾಯುಜ್ಯವನೆ ಪಡೆಯೆನುತಿತ್ತ ಪರಸುತಲೀ  ||೧೨೨||

ಧರಣಿಪಾಲಕ ಕೇಳು ಎನಗಿದ |
ಹರನು ಇತ್ತಿಹ ಕಂಠಮಾಲೆಯ |
ಧರಿಸಿದರೆ ಪೋಗುವುದು ತನುಮನ ಧಾವಿಸಿದ ಎಡೆಗೆ ||
ಸುರನರೋರಗ ದಿತಿಜ ಮೊದಲಾ |
ಗಿರುವರೊಳಗಪಜಯಗಳೆಂದಿಗು |
ಬರದು ಕರವಾಲವನು ಧರಿಸಿದ ಮಾನವೇಶ್ವರಗೇ     ||೧೨೩||

ರಾಗ ಕೇತಾರಗೌಳ ಝಂಪೆತಾಳ

ಮುನಿಯಿತ್ತವಸ್ತುಗಳಿಗೇ | ತನುವುಬ್ಬಿ | ಜನಪ ಸಂತೋಷದೊಳಗೇ |
ವಿನಯದಿಂದಪಾಲ್‌ಹಣ್ಣನೂ | ತರಿಸಿತ್ತು | ಮಣಿದು ಮಮತೆಯೊಳ್‌ನಿಂದನೂ     ||೧೨೪||

ಹರುಷದಿಂ ಕೈಕೊಳ್ಳುತಾ | ಋಷಿವರ್ಯ | ಧರಣಿಪಾಲನ ಪರಸುತಾ ||
ತೆರಳಿದನು ಸಂತಸದಲೀ | ವನಕಾಗ | ಹರಿಯ  ನುತಿಸುತ ಭರದಲಿ     ||೧೨೫||

ಧರೆಯೊಳಗೆ ಬೃಹದ್ರಥನನೂ | ಪೋಲುತಿಹ | ಧೊರೆಯಿಲ್ಲವೆಂಬುದನ್ನೂ ||
ಸುರನರೋರಗರರಿಯಲೂ | ಮುಂಗಥೆಯ | ನೊರೆವೆ ಕೇಳ್ನಿಮಗೀಗಲೂ ||೧೨೬||

ರಾಗ ಕೇತಾರಗೌಳ ಅಷ್ಟತಾಳ

ಇತ್ತ  ವೀರಾವತಿಯೊಳು ವೀರಸೇನನು | ಪೃಥ್ವೀಶಕುವಲಯನೂ |
ನಿತ್ಯದೊಳುದಯಾಸ್ತಮಯ ಪರಿಯೊಳು ಕರ | ವೆತ್ತಿ ಕಾದುತ್ತಿರಲೂ       ||೧೨೭||

ವಸುಧೆಪಾಲಕ ಬೃಹದ್ರಥನು ಒಡ್ಡೋಲಗ | ವೆಸಗಿರೆ ಬಂದೆರಗೀ |
ದೆಸೆದೆಸೆ ಗೈದಿರ್ವ ಪ್ರತಿಹಾರಿನುಡಿದನು | ಪೊಸವಾರ್ತೆ ಇಹುದೆನ್ನುತ್ತ   ||೧೨೮||

ಒಡೆಯನೆ ಲಾಲಿಸು ನುಡಿಗಳ ಕಿವಿಗೊಟ್ಟು | ಪೊಡವಿಯ ತಿರುಗುತಲೀ |
ಒಡನೆ ಕಾಶ್ಮೀರ ಕಾಂಭೋಜದ ವಾರ್ತೆಯ | ಸಡಗರದಿಂ ತಿಳಿದೂ       ||೧೨೯||

ಸಾರಿ ವೀರಾವತಿಯೊಳಗಲ್ಲಿ ಗೈದ ಶೃಂ | ಗಾರವನೀಕ್ಷಿಸುತಾ ||
ಊರೊಳಲ್ಲಲ್ಲಿ ವಿಚಾರಿಸೆ ಪ್ರಜೆಗಳ್ಗೆ | ಭೂರಿಕಷ್ಟಗಳು ಕೇಳೈ     ||೧೩೦||

ನಿಶಿಯೊಳು ಬ್ರಹ್ಮರಾಕ್ಷಸಿ ಬಂದು ತಿನುವಳಾ | ವಸುಧೆಯೊಳೋರ್ವರನೂ ||
ಅಸಮಸಾಹಸಿಗಳಾಗಿರುವರಾ ದುರುಳೆಯ | ವಶದ ಭೊಜನಕೆಂಬರೂ   ||೧೩೧||

ಧುರಪರಾಕ್ರಮಿ ಸತ್ವವುಳ್ಳಭೂಪಾಲರು | ದುರುಳೆಯ ಮಥಿಸುತಲೀ ||
ತರಳೆ ಕಲಾವತಿಗರಸನಾಗಲಿ ಎಂದು | ಬರೆಸಿಹ ಕುವಲಯನೂ          ||೧೩೨||

ಈ ರೀತಿಯಾದ ಪತ್ರವನೋಡಿ ಕಾಶ್ಮೀರ | ವೀರಸೇನಾಖ್ಯನೈದಿ |
ಧಾರುಣಿಪತಿಯೊಳುರೋಷದಿ ಕಾದುವ | ನಾರಿಯ ಕೊಂಡೊಯ್ಯಲೂ     ||೧೩೩||

ಭಾಮಿನಿ

ಶಿರವತೂಗುತಲೆಂದ ಪೊಡವಿಪ |
ನರರೆ ಬಂದನೆ ವೀರಸೇನನು |
ಪರಿಪರಿಯ ದುಃಖವನು ಕೊಡುವನೆ ಸಾಧು ಕುವಲಯಗೇ ||
ಭರದಿ ನಾ ಪೋಗುವೆನು ರಕ್ಕಸಿ |
ಕೊರಳರಿದು ನಿರ್ನಾಮಗೈಯ್ಯುತ |
ತರುಣಿಯನು ಪಣದಂತೆ ವರಿಸುವೆನೆನುತ ಕರ ಜಡಿದಾ         ||೧೩೪||

ರಾಗ ಮಾರವಿ ಅಷ್ಟತಾಳ

ಹೀರಾಮಾತ್ಯನೆ ಲಾಲಿಸೈಯ್ಯಾ | ನಮ್ಮ | ಧಾರುಣಿಗಳ ನೋಡಿ ಕೊಂಡಿಹುದೈಯ್ಯಾ ||
ವೀರಾವತೀಪುರಿಗೀಗ | ಚಂದ್ರ | ತಾರನ ಕೂಡುತ್ತ ಪೋಪೆನು ಬೇಗ      ||೧೩೫||

ಕರೆಸು ಚಾರಕರಟ್ಟಿ ನೆಂಟರ | ಚಿತ್ರ | ವಿರಚೀಪ ಶಿಲ್ಪಿವರೇಣ್ಯರ |
ತ್ವರಿತದಿ ಹೊಯಿಸು ಡಂಗುರಗಳ | ಮತ್ತೆ | ಪುರದ ಕಾವಲಿಗಿಡು ಜನಗಳ          ||೧೩೬||

ವಾರ್ಧಕ

ಮಂತ್ರಿ ಪೇಳಿದ ಬಂಧು ದಿಬ್ಬಣವೆ ಮೊದಲಾಗಿ |
ದಂತಿರಥವಾಜಿಗಳ ಅತಿರಥರ ಬಲಯುತರ |
ಹೊಂತಕಾರಿಗಳೆನಿಪ ಸಾಮಂತರೈತಂದ ವೃತ್ತವನು ನೃಪತಿಯೊಡನೆ ||
ಇಂತುಪಡೆ ಸಂಧಿಸಿದ ಪರಿ ಕೇಳಿ ನೃಪವರ್ಯ |
ಸಂತಸದಿ ಪುರವ  ಪೊರಮಡಲಿಕಾ ಸಮಯದಲಿ |
ಎಂತು ಬಣ್ಣಿಪೆ ಗೀತ ವಾದ್ಯಾದಿ ಮಾಗಧರು ನಿಂತು ಪೊಗಳುವ ಪರಿಯನೂ       ||೧೩೭||

ನಾರಿಯರ ಕಲಶ ಕನ್ನಡಿಗಳಿಂ ರಥಗಳಿಂ |
ಭೂರಿಮಾರ್ಬಲಗಳಿಂ ಬಂಧುಸಂದಣಿಗಳಿಂ |
ಸೇರಿದರು ಪಯಣ ನಾಲ್ಕಾರರಿಂ ಶೂರರಾ ವೀರಾವತೀ ನಗರಕೆ ||
ಆರಾಮಮಂ ಕಂಡು ಬೀಡಿಕೆಯ ಬಿಡಲು ಮೇಣ್ |
ಧಾರುಣಿಪ ಚಿಂತಿಸುತ ಮೌನದಿಂದಿರೆ ಚಂದ್ರ |
ತಾರ ತಾಂ ಕೇಳಲ್ಕೆ ಮುನಿಸಿದೇತರದೆಂದು ನುಡಿದನವನೀಶನವಗೇ    ||೧೩೮||

ರಾಗ ಸುರುಟಿ ಏಕತಾಳ

ಲಾಲಿಸು ಸಚಿವೇಂದ್ರಾ | ವ್ಯಸನವ | ಪೇಳುವೆ ಗುಣಸಾಂದ್ರಾ    || ಪಲ್ಲವಿ ||

ಬಾಲೆ ಕಲಾವತಿ ರೂಪುಲಾವಣ್ಯವ |
ವೋಲೈಸುವರುಸು |  ಶೀಲೆ ಎಂದೆನುತಲಿ || ಲಾಲಿಸು ||೧೩೯||

ತರುಣಿಯ ನೀಕ್ಷಿಸದೇ | ಮನದೊಳು | ಹರುಷವು ಪುಟ್ಟುವುದೇ ||
ತರವಲ್ಲವು ಯೌವ್ವನ ಲಕ್ಷಣಗಳ | ಪರಿಕಿಸಿ ಕಾರ್ಯವ ವಿರಚಿಪೆ ಕಡೆಯೊಳು       ||೧೪೦||

ಮುನಿಯೆನಗಿತ್ತಿರುವಾ | ಪಾವನ | ಘನಮೌಕ್ತಿಕ ಸರವಾ ||
ತನುವಿನೊಳ್ಧರಿಸುತ ಪೋಗಿ ನಾನಾಕೆಯ | ಗುಣಲಾವಣ್ಯವನೀಕ್ಷಿಸಿ ಬರುವೆನು    ||೧೪೧||

ಭಾಮಿನಿ

ವರ ಸಚಿವನಿಂಗುಸುರಿ ಭೂಮಿಪ |
ಧರಿಸಿ ಮುಕ್ತಾಹಾರವನು ಖೇ |
ಚರದೊಳೈದುತಲಿರಲಿಕಿತ್ತಲು ಪೇಳ್ವೆ ಮುಂಗಥೆಯಾ ||
ಧರಣಿಪತಿ ಕುವಲಯನ ಮೋಹದ |
ತರಳೆಯಾದ ಕಲಾವತಿಯು ಸಖಿ |
ಯರನೆ ಕೂಡುತ ವನವಿಹಾರಕೆ ಪೊರಟು ಬಂದಿರಲೂ ||೧೪೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅನಿತರೊಳಗಭ್ರದಲಿ ಗಮಿಸುವ | ಜನಪನಕ್ಷಿಗೆ ಕುವಲಯಾಖ್ಯನ |
ತನುಜೆ ವಿದ್ಯುತ್ಕಾಂತಿಯಂದದಿ | ಮಿನುಗುತಿರಲೂ    ||೧೪೩||
ಪರಿಕಿಸುತಲಾ ಕ್ಷಣದಿ ಕೆಳಗಿಳಿ | ದರಸ ಮನದೊಳು ಶಂಕಿಸುತ್ತಲಿ |
ಅರರೆ ವನದೇವತೆಯೊ ಆರಿವ | ಳರಿಯೆನೆನುತಾ      ||೧೪೪||

ಭಾಮಿನಿ

ಸರಸಿಜೋದ್ಭವೆ ಧರೆಯೊಳಗೆ ಶ್ರೀ |
ಹರಿಸುತನ ಸತಿ ಚಂದ್ರಶೇಖರ |
ನರಸಿ ಕಮಲಾಸನನ ಮೋಹದ ರಾಣಿ ಎಂದೆನುತಾ ||
ಮೆರೆದಪರು ಈರೆರಡು ಸತಿಯರು |
ಬರಿದೆ ಚೆಲುವೆಯರೆಂಬ ಪೆಸರಿಲಿ |
ಪರಮ ಸುಂದರಿಯಿವಳ ಚಲ್ವಿಕೆಗವರು ಸರಿಯಹರೇ   ||೧೪೫||

ವಾರ್ಧಕ

ಹರಿಣಾಂಕನಾನನವು ಹರಿಪೆಡೆಯ ತೆರ ಜಡೆಯು |
ಹರಿಜದಳದಂತಕ್ಷಿ ಹರಿಯಂತೆ ನಡು ದಿಟ್ಟಿ |
ಹರಿಣಿಯಾ ತೆರನಂತೆ ಹರಿವಾಲುಕವ ಪಿಡಿದು ಹರಿತರಲಿಕಾಗ ಮುಂದೇ ||
ಹರಿವರೂಥಾಧಿಪತಿ ಗಮನೆಯನ್ನೀಕ್ಷಿಸುತ |
ಹರಿಸಿದಂ ನೃಪ ಮನವನಾಕೆಯೋಳ್ ಮೋಹದಿಂ |
ಹರಿಯಣುಗ ಕಂಡು ಪೂಬಾಣಮಂ ಹೊಡೆಯಲ್ಕೆ ಹರಿಯೆಂದು ಮೂರ್ಛೆಗೊಳಲೂ ||೧೪೬||

ರಾಗ ಸಾಂಗತ್ಯ ರೂಪಕತಾಳ

ಹರುಷದೊಳ್ಬರುತಿಹ | ತರುಣಿಯು ಜನಪನ | ಪರಿಕಿಸಿ ಚಿತ್ತ ಚಂಚಲದಿ ||
ಹರಹರ ಇವನ್ಯಾರು | ಸ್ಮರನೊ ಮೇಣ್ಸುರಪನ | ತರಳನು ಧರೆಗಿಳಿದಿಹನೋ      ||೧೪೭||

ಪರಿಕಿಸುವನಿತರೊಳ್ | ತರಹರಿಪುದು ಮನ | ಹರಿಯಣುಗನ ಬಾಧೆಯೊಳಗೇ ||
ವರ ಮನೋಹರನನ್ನು | ಅರಸನ ಮಾಡಿಕೊಂ | ಡರಿಯುವೆನಾ ಪುಷ್ಪಶರವಾ      ||೧೪೮||

ಎಂದು ಯೋಚಿಸುತಾಗ | ತಂದೆಯ ಪಣವನಾ | ನಿಂದು ತಪ್ಪಿದರಿಹಪರದೀ ||
ಚಂದ್ರ ಸೂರ‍್ಯರು ಇಹ ತನಕಪಕೀರ್ತಿಯು | ಮುಂದೆನ್ನ ಭುವನದಿ ಬಿಡದು          ||೧೪೯||

ಭಾಮಿನಿ

ಪಿತನರಕ್ಷಣೆಯೊಳಗೆ ಬಾಲ್ಯವ |
ಗತಿಸಿ ಕೌಮಾರದೊಳು ತಮ್ಮಯ |
ಪತಿಯ ವಾಕ್ಯಗಳಂತೆ ಚರಿಸುತ ಸುತರಕಾಲದೊಳು ||
ವ್ಯಥೆಗೊಳುತ ವಾರ್ಧಕ್ಯ ಕಾಲದಿ |
ಸುತನರಸಿ ಕೈಕೆಳಗೆ ಅಕಟಾ |
ಸತಿಯ ಜನ್ಮವೆ ಸಾಕು ಹರಹರಬೇಡ ಸರ್ವಥವೂ     ||೧೫೦||

ರಾಗ ಕಾಪಿ ಅಷ್ಟತಾಳ

ಮಾರನ ಕೂರ‍್ಗಣೆಹತಿಯೂ | ಮಿತಿ |
ಮೀರಿತೆನ್ನಯಗೃಹ ಸೇರುವ ಪರಿಯೂ ||
ತೋರದು ಕಂಗೆಟ್ಟು ಕತ್ತಲೆಯಾಯ್ತೆಂದು |
ವಾರಿಜಲೋಚನೆ ಸಾರೆ ನಾಲ್ಕಡಿಗಳ         ||೧೫೧||

ಕಂದ

ಧರಣಿಪ ಚೇತರಿಸುತ್ತತಿ |
ಭರದಿಂದೀಕ್ಷಿಸೆ ನಾಲ್ದೆಸೆಗಾಗಳ್ ಮನವಂ ||
ಸೆರೆಪಿಡಿದೊಯ್ವಬಲೆಯನಾ |
ದರದಿಂ ಕರೆಯುತೆ ವಿಚಾರಿಸುವೆನೀಕೆಯನುಂ         ||೧೫೨||