ಶಾರ್ದೂಲವಿಕ್ರೀಡಿತವೃತ್ತ
ಸರ್ವೇಶಂ ರಜತಾದ್ರಿವಾಸಮಗಜಾ ಸರ್ವೋಪಚಾರಪ್ರಿಯಂ |
ಉರ್ವೀಭಕ್ತಜನಾಶ್ರಯಂ ಚ ವರದಂ ಚರ್ಮಾಂಬರಂ ಧೂರ್ಜಟಿಂ |
ಶರ್ವಾಖ್ಯಂ ಶತಪತ್ರಸಂಭವನುತಂ ಕಾಲಾಂತಕಂ ಭೈರವಂ |
ಸರ್ವಾನಂದಪಯೋನಿಧಿಂ ಅಘಹರಂ ವಂದೇ ಶಿವಂ ಶಂಕರಂ ||೧||
ರಾಗ ನಾಟಿ ತ್ರಿವುಡೆತಾಳ
ಹರತನಯ ಕರಿವದನ ಗಣಪತಿ | ವರದಮೂಷಿಕವಾಹ ಲಂಬೋ |
ದರನೆ ನಿನ್ನನು ದಿನವು ಭಜಿಸುವೆ | ಕರುಣನಿಧಿ ಸಲಹೆನ್ನನೂ | ಜಯತು ಜಯತೂ ||೨||
ವಿಘ್ನಶರಧಿಗೆ ಕುಂಭಸಂಭವ | ವಿಘ್ನಪನ್ನಗಕುಲಕೆ ಖಗಪತಿ |
ವಿಘ್ನವಿಪಿನದವಾನಲನೆ ನಿ | ರ್ವಿಘ್ನದಾಯಕ ನಂಬಿದೇ ||೩||
ವಿಘ್ನಮೇಘಗಗಳಿಂಗೆಮಾರುತ | ವಿಘ್ನಗಜಪಂಚಾಸ್ಯವಿಕಟನೆ |
ವಿಘ್ನಪರ್ವತಚಯಕೆ ಘನಪವಿ | ವಿಘ್ನರಾಜನೆ ಪಾಹಿಮಾಂ | ಜಯತು ಜಯತೂ ||೪||
ಭಾಮಿನಿ
ಅಭಯವರದಜಪಾಕ್ಷಮಾಲಾ |
ನಿಭೃತಪುಸ್ತಕಹಸ್ತೆ ಶಶಿಸಂ |
ನಿಭೆಸರೋರುಹನೇತ್ರೆ ಸಕಲ ಸುರಾಸುರಸ್ತುತ್ಯೇ ||
ತ್ರಿಭುವನೇಶ್ವರಿ ಸಾಧುಸನ್ನುತೆ |
ಶುಭಫಲಪ್ರದೆ ಮಾಳ್ಕೆ ವಾಚೋ |
ವಿಭವವನು ಎನಗೊಲಿದು ಕಾರುಣ್ಯದಲಿ ವಾಗ್ದೇವೀ ||೫||
ದ್ವಿಪದಿ
ಜನನಿಜನಕರ ಪಾದಪಂಕಜವಸ್ಮರಿಸಿ |
ಚಿನುಮಯಾತ್ಮಕ ಕೃಷ್ಣ ಮೂರ್ತಿಗಭಿನಮಿಸೀ ||೬||
ವಿನಯದಿಂ ನೆನೆದು ಸದ್ಗುರುಪದಾಬ್ಜವನೂ |
ಅನುನಯದಿ ಬಲಗೊಂಡು ಕವಿಗಳೆಲ್ಲರನೂ ||೭||
ಪಕ್ಷತ್ರಯೋದಶಿಯ ವ್ರತದ ಮಹಿಮೆಯನೂ |
ಮೋಕ್ಷಪೊಂದಿದ ಬೃಹದ್ರಥನ ಚರಿತವನೂ ||೮||
ಶೌನಕಾದಿಗಳಿಂಗೆ ಸೂತಮುನಿವರನೂ |
ಸಾನುರಾಗದಿ ಪೇಳ್ದ ಸರಸವೃತ್ತವನೂ ||೯||
ಧರೆಯ ಜನರರಿವಂತೆ ಯಕ್ಷಗಾನದಲೀ |
ವಿರಚಿಸಿದೆ ನೀಕೃತಿಯೊಳೆಷ್ಟು ತಪ್ಪಿರಲೀ ||೧೦||
ತಿಳಿದವರು ತಿದ್ದಿ ಮೆರೆಸುವುದು ಕೃಪೆಯಿಂದ |
ಸಲೆಭೇದವಿಡದೆಯೆನ್ನೊಳು ನಲುಮೆಯಿಂದ ||೧೧||
ಭಾಮಿನಿ
ಹರಿಯಸುತನೆಂದೆನಿಸಿ ವಿಭವದಿ |
ಹರಿಯನುತ್ತರಿಸುತ್ತ ರೋಷದಿ |
ಹರಿಬದೊಳು ನಿಕಷಾತ್ಮಜರ ಹರಿಪುರಿಗೆ ಕಳುಹಿಸುತಾ ||
ಹರಿವರದಿ ಚಿರಜೀವಿಯಾಗುತೆ |
ಹರಿಸುತನ ರಥಕೇತನೆನಿಸಿಹ |
ಹರಿಗೆ ವಂದಿಪೆ ಕೃತಿಗೆ ಮಂಗಳವೀಯಲೆಂದೆನುತಾ ||೧೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸೂತಮುನಿ ಸತ್ಕಥೆಯ ಶೌನಕ |
ವ್ರಾತಗಳಿಗರುಹುತ್ತಲಿರೆ ಮನ |
ಸೋತು ಪುನರಪಿ ಎರಗಿ ಕೇಳ್ದರು | ಪ್ರೀತಿಯಿಂದ ||೧೩||
ವರಮನೋಹರ ಮೂರ್ತಿ ಪೂರ್ವದಿ |
ತರಣಿ ವಂಶೋದ್ಭವ ಬೃಹದ್ರಥ |
ದೊರೆಯು ಲೀಲಾವತಿಯ ಪಾಲಿಸು | ತಿರಲು ಮುದದಿ ||೧೪||
ಪರಮ ವೀರಾವತಿಯ ಪುರದೊಳು |
ಧರಣಿಪತಿಕುವಲಯನ ಮೋಹದ |
ತರಳೆಯನು ಪರಿಣಯದೊಳೊಲಿಸುತ | ತೊರೆದನೇಕೆ ||೧೫||
ತರುಣಿ ತನ್ನಯ ಪಂಥವನು ಅನು |
ಕರಿಸಿ ಪತಿಯೊಳು ಮೋಡಿಯಿಂದಲಿ |
ಬೆರೆತು ಗರ್ಭವಧರಿಸಿ ಜನಕನ | ಪುರಿಗೆ ತೆರಳೀ ||೧೬||
ಸುತನ ಪಡೆಯಲು ವಿದ್ಯೆ ಬುದ್ಧಿಯೊ |
ಳತುಳ ವಿಕ್ರಮಿ ಕುಂಡಲಶ್ರವ |
ಪಿತನ ಧುರದೊಳು ಕರವಬಂಧಿಸು | ತತಿಶಯದೊಳು ||೧೭||
ಮಾತೆಗೊಪ್ಪಿಸಿದಂಥ ಕಥೆ ಮುನಿ |
ನಾಥ ವಿಸ್ತರಿಸೆಂದು ನುತಿಸಲು |
ಪ್ರೀತಿಯಿಂದರುಹಿದನು ನಡೆದಿಹ | ಕೌತುಕವನೂ ||೧೮||
ಭಾಮಿನಿ
ಒರೆವೆ ಕೇಳಿರಿ ಪಿಂದೆ ವಾಣೀ |
ವರನ ಸಭೆಗೈತಂದ ವಿದ್ಯಾ |
ಧರೆ ತರುಣಿಮಣಿ ಮಂಜುಭಾಷಿಣಿ ವಾಯುರಭಸದಲೀ ||
ಧರಿಸಿದಂಬರ ಹಾರಿಹೋಗಲು |
ಪರಿಕಿಸುತ್ತಜರೋಷದಿಂದಲಿ |
ಧರೆಯೊಳಿರು ರಕ್ಕಸಿಯರೂಪದೊಳೆಂದು ಶಪಿಸಿದನು ||೧೯||
ಬಂದು ವೀರಾವತಿಯ ನಗರದಿ |
ವಂದಿಮಾರ್ಬಲಗಳನು ನಿಶಿಯೊಳು |
ತಿಂದು ಮೆರೆಯುತಲಿರೆ ಮಹೋದರಿಯೆಂಬ ನಾಮದಲೀ ||
ಒಂದು ದಿನ ಧರಣೀಶ ಕುವಲಯ |
ಚಂದದಿಂದೋಲಗದೊಳಿರಲೈ |
ತಂದು ವಂದಿಸಿ ಪೇಳ್ದರೂರಿನ | ಮಂದಿಯಳುತ ||೨೦||
ರಾಗ ಕೇತಾರಗೌಳ ಅಷ್ಟತಾಳ
ಸೋಮವಂಶಜ ಲಾಲಿಸಾ ಮಹೋದರಿ ನಮ್ಮ | ಪ್ರೇಮದ ಸತಿಸುತರಾ ||
ಯಾಮಿನಿಯೊಳು ತಿಂದಳಾಗದು ಎಮಗಿನ್ನೀ | ಭೂಮಿಯೊಳ್ಬಾಳುವರೇ ||೨೧||
ಧರಣಿಪ ತನ್ನಯ ಮನದೊಳು ಶೋಕದಿ | ಕರಗುತ್ತ ಪೇಳಿದನು ||
ಪುರಜನರೆಲ್ಲರು ದುರುಳೆಗೆ ಬಲಿಯಾಗಿ | ಬರಿದಾಯಿತೀ ರಾಜ್ಯವೂ ||೨೨||
ಪಿತಪಿತಾಮಹನ ಕಾಲದ ನಮ್ಮ ಪ್ರಜೆಗಳು | ವ್ಯಥೆಯಿಂದ ಬಳಲಿದರೂ ||
ಹತಭಾಗ್ಯತಾನೆಂದು ನೊಸಲಿಗೆ ಕರಚಚ್ಚಿ | ಧೃತಿಗೆಟ್ಟು ಮರುಗಿದನೂ ||೨೩||
ಹರಹರ ತನಗಿಂಥ ಉರುತರ ಕಷ್ಟವು | ದೊರಕಿತಯ್ಯೋ ವಿಧಿಯೇ ||
ಬರಿದೇಕೆ ಬಾಳುವೆ ತನಗೆಂದು ಮರುಗಲು | ಒರೆದುದಾಕಾಶದೊಳು ||೨೪||
ಭಾಮಿನಿ
ಲಾಲಿಸಲೆ ಭೂಪತಿಯೆ ನಿನ್ನಯ |
ಬಾಲಕಿ ಕಲಾವತಿಯ ಪರಿಣಯ |
ಲೀಲೆಯಿಂದೆಸಗಯ್ಯ ರಕ್ಕಸಿಯನ್ನು ಕೊಂದವಗೇ ||
ಲೋಲನೇತ್ರೆಯ ನೀವುದೆಂದೇ |
ವೋಲೆ ಕಳುಹಿಸು ದೇಶದೇಶಕೆ |
ಮೇಲುಸಿದ್ಧಿಯ ಪಡೆವೆ ಸಂಶಯ ಬೇಡ ನಿನಗೆನುತ ||೨೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಹರುಷದೊಳುನೃಪನಭ್ರವಾಣಿಯ | ತೆರದಿ ಪ್ರಜೆಗಳಿಗಭಯವೀಯುತ |
ಕರೆದು ಮಂತ್ರಿಯ ನೃಪರಿಗೋಲೆಯ | ಬರೆಯಿಸೆಂದ ||೨೬||
ಎನೆಹಸಾದವೆನುತ್ತಸಚಿವನು | ಘನತರದ ಕರೆಯೋಲೆ ಬರೆಯಿಸಿ |
ಜನಪರೆಲ್ಲರ ಬಳಿಗೆ ಕಳುಹಿದ | ಜನರನಂದು ||೨೭||
ಚರರುವೋಲೆಯ ಸಕಲ ದೇಶದ | ಧರಣಿಪಾಲಕರಡಿಗೆ ಒಪ್ಪಿಸಿ |
ಪರಿಪರಿಯ ಉಡುಗೊರೆಯಕೊಳ್ಳುತ | ಚರಿಸಲಾಗ ||೨೮||
ಮೆರೆವಕಾಶ್ಮೀರಾಖ್ಯ ದೇಶದ | ಧರಣಿಪತಿಯಾ ವೀರಸೇನನು |
ಭರದೊಳೊಡ್ಡೋಲಗವನಿತ್ತನು | ಹರುಷದಿಂದ ||೨೯||
ರಾಗ ಭೈರವಿ ಝಂಪೆತಾಳ
ವರಮೋಹನಾಂಗಿಎಂಬರಸಿಮತ್ತಾತನಿಗೆ | ತರಳೆಚಂಪಕಗಂಧಿ ಎನುತಾ ||
ಪರಿಪರಿಯ ರಾಜಕಾರ್ಯವಗೈಯ್ಯುತಿಹ ಯುಗಂ | ಧರನೆಂಬ ಸಚಿವನನು ಕೂಡಿ ||೩೦||
ಇರಲು ಒಡ್ಡೋಲಗದಿ | ಚರನೋರ್ವನೊಳಪೊಕ್ಕು | ಧರಣಿಪಾಲಕನಡಿಗೆ ಮಣಿದೂ |
ಪರಮ ವೀರಾವತಿಯ ಪುರದರಸ ಪತ್ರವನು | ಬರಸಿಕಳುಹಿರ್ಪನೆಂದೆನಲೂ ||೩೧||
ಕೇಳುತಾಕ್ಷಣದಿ ಭೂ | ಪಾಲ ಪತ್ರಿಕೆಕೊಂಡು | ಶೀಲಸಚಿವನ ಕರಕೆ ಕೊಡಲೂ ||
ಮೇಲೆಮುತ್ತಿನತೆರದೆ ಪೊಳೆಯುತಿಹ ಅಕ್ಷರವ | ಲೋಲ ತಾ ವಾಚಿಸಿದ ಮುದದೀ ||೩೨||
ರಾಗ ಕೇತಾರಗೌಳ ಅಷ್ಟತಾಳ
ಸ್ವಸ್ತಿಶ್ರೀಮತುವೈರಿಗಜಕೆಪಂಚಾಸ್ಯ ಭೂ | ಪೋತ್ತುಮನೆಂದೆನಿಸೀ |
ಉತ್ತುಂಗ ವೀರಸೇನಕನೆಂಬ ಕಾಶ್ಮೀರ | ಪೃಥ್ವಿಯಪಾಲಕಗೇ ||೩೩||
ಧರೆಯೊಳಗಿಂದುವಂಶಜವೀರಾವತಿ ಪುರ | ಕರಸಾನುಕುವಲಯನಾ |
ಶಿರ ಸಾಷ್ಟಾಂಗವು ನಿಮ್ಮ ಕುಶಲವ ದಯದಿಂದ | ಬರೆಸುವುದೈಸೆ ಮತ್ತೇ ||೩೪||
ಇರುವಳು ನಮ್ಮ ರಾಷ್ಟ್ರದಿ ಮಹೋದರಿ ಎಂಬ | ದುರುಳೆ ನಿಶಾಚರಿಯೂ ||
ಭರದಿಂದ ಬಂದೆಮ್ಮನಗರದಿ ನಿಶಿಯೊಳು | ನರರ ಭಕ್ಷಿಸುತಿಹಳೂ ||೩೫||
ತ್ವರಿತದಿ ಬಂದು ರಕ್ಕಸಿಯ ಸಂಹರಿಸಲು | ವರಕಾಳಿಕಾಂಬಿಕೆಯಾ ||
ವರದಿಂದ ಪುಟ್ಟಿದ ತರಳೆಯ ನಿಮಗಿತ್ತು | ವಿರಚಿಪೆ ವೈವಾಹವ ||೩೬||
ಮುನ್ನ ರಕ್ಕಸಿ ಬಾಧೆಯನು ಪರಿಹರಿಸುತ್ತ | ಕನ್ನೆಕಲಾವತಿಗೇ |
ಇನ್ನುನೀವ್ ಪತಿಯಾಗಬೇಕೆಂದು ನಾನಿಂತೀ | ಬಿನ್ನಹಗೈದಿಹೆನೂ ||೩೭||
ರಾಗ ಘಂಟಾರವ ಅಷ್ಟತಾಳ
ಎಂದುವಾಚಿಸೆ ಕೇಳುತ್ತಭೂಪನು |
ಅಂಧಕಾರಿಯತೆರದಿಘರ್ಜಿಸು | ತೆಂದನಾತನಸಭೆಯೊಳು ||೩೮||
ಈತನಗ್ರಜೆಯಾ ವಿವಾಹದಿ |
ಈ ತೆರೆದ ಪಣವಿಟ್ಟು ಭೂಪರ | ಯಾತುಧಾನಿಗೆ ಕೊಡಿಸಿದ ||೩೯||
ಮತ್ತೆ ಈತನು ಪೃಥ್ವೀಶನಾಶಕೆ |
ಚಿತ್ತದಲಿ ಯೋಚಿಸಿಹ ದುರುಳನ | ಕತ್ತರಿಸಿ ಜಗ ಕಾವೆನೂ ||೪೦||
ಹೊಡಿಸು ಡಂಗುರ ಮಂತ್ರಿಲಲಾಮನೆ |
ಸಡಗರದಿಧನುಶರವ ಕೊಳ್ಳಲಿ | ಒಡನೆ ನಮ್ಮಯ ಪಡೆಗಳೂ ||೪೧||
ಭಾಮಿನಿ
ಇಂತು ಬಹುಪರಿಯಿಂದಖತಿಯಲಿ |
ಕಂತುಹರನಂತತುಳರೋಷದಿ |
ಹೊಂತಕಾರಿಯು ಘರ್ಜಿಸಲು ವರಸಚಿವನಾಜ್ಞೆಯಲೀ ||
ದಂತಿರಥಮೊದಲಾಗಿ ಪಡೆಬರ |
ಲೆಂತುಬಣ್ಣಿಪೆ ವೀರರೆಲ್ಲರ |
ಸಂತಸದೊಳೊಡಗೊಂಡು ಪೊರಟರು ಕಡುಪರಾಕ್ರಮದೀ ||೪೨||
ರಾಗ ಮಾರವಿ ಏಕತಾಳ
ಅಟ್ಟಹಾಸದೊಳಿಹ ಸಚಿವನಕೂಡುತ | ಸೃಷ್ಟಿಪ ತೋಷದೊಳೂ ||
ಥಟ್ಟನೆ ಮಾರ್ಬಲವೆರಸುತ ಮುಂದಡಿ | ಯಿಟ್ಟನು ವಿಭವದೊಳೂ ||೪೩||
ಕೆಂಧೂಳಿಯುನಭಕಡರಲು ಯಮಭಟ | ರಂದದಿ ಪಟುಭಟರೂ ||
ಸಿಂಧುವಿನಾರ್ಭಟೆಯಂತೆ ಬೊಬ್ಬಿಡುತಲೆ | ಬಂದರು ವೀರಾವತಿಗೆ ||೪೪||
ಪುರದ್ವಾರವ ಮುರಿದೊಳಪೊಗುವಾರಿಪು | ಪರಿವಾರವ ಕಂಡೂ ||
ಕರದಿ ಶಸ್ತ್ರಾಸ್ತ್ರವ ಪಿಡಿದಾ ದ್ವಾರದೊ | ಳಿರುತಿಹ ಚರರಂದೂ ||೪೫||
ರಾಗ ಘಂಟಾರವ ಅಷ್ಟತಾಳ
ಆರೆಲೋ ಚೋರರಂದದಿ ಬಂದೀಗ |
ದ್ವಾರವನು ಮುರಿದೊಳಗೆ ಪೊಗುತಿಹ | ಕಾರಣಂಗಳಿದೇನಿದೂ ||೪೬||
ಕಡುಮದಾಂಧರ ಮುರಿವ ಕಾಶ್ಮೀರದ |
ಪೊಡವಿಪಾಲಕ ವೀರಸೇನನು | ಬಿಡಿರಿ ದ್ವಾರವ ಬೇಗದೀ ||೪೭||
ಧುರಪರಾಕ್ರಮಿ ಕುವಲಯಾಖ್ಯನ ನೇಮ |
ವಿರದೆ ದ್ವಾರವ ಬಿಡೆವುಪಾಮರ | ತೆರಳು ಸುಮ್ಮನೆ ಪಿಂದಕೆ ||೪೮||
ಮರುಳು ಚಾರರೆ ನಮ್ಮಯ ಸರಿಸದಿ |
ಮೆರೆದಪುದೆ ಪೌರುಷಗಳೆನ್ನುತ | ಬರೆದ ಹಣೆಯೊಳುನಾಮವ ||೪೯||
ಭಾಮಿನಿ
ಪೋಗಿ ನಿಮ್ಮಯ ದೊರೆಯೊಡನೆ ನಿಮ |
ಗಾಗಿರುವ ಪರಿಗಳನು ಉಸುರಿ ಸ |
ರಾಗದಿಂದೈತಂದು ಶಿರಬಾಗುತ ಕಲಾವತಿಯಾ ||
ಬೇಗದಿಂದೆನಗಿತ್ತುದಾದರೆ |
ತಾಗುಬಾಗುಗಳನ್ನು ಕ್ಷಮಿಸುವೆ |
ತಾಗದಿರೆ ಸಮರದಲಿ ಲಲನೆಯ ಪಡೆವೆನೆಂದರುಹೂ ||೫೦||
ವಚನ
ಈ ಪರಿಯಾಗಿ ನುಡಿದ ವೀರಸೇನನ ವಾಕ್ಯಮಂ ಕೇಳಿ ದೊರೆಯಾದ ಕುವಲಯಭೂಪನೋಳ್ ಚರರ್ಮೊರೆಯಿಡುವರದೆಂತೆನೆ ||೫೧||
ರಾಗ ಮುಖಾರಿ ಏಕತಾಳ
ಲಾಲಿಸು ವೀರಾವತಿಯ ದೊರೆಯೆ | ಸದ್ಗುಣ ನಿಧಿಯೇ || ಲಾಲೀಸು || ಪಲ್ಲವಿ ||
ಕಾಲಕಾಲದಿ ಬಾಗಿಲನ್ನು | ಕಾದಿರ್ಪ ನಮ್ಮ | ಗೋಳನಾರೊಳು ಪೇಳ್ವುದಿನ್ನು |
ಹಾಳುಗೆಲಸವಿದು ಬೇಡವೊ ಹಿಂದಿನ | ಕೂಲಿಯ ಕೊಟ್ಟರು ಕೊಡು ನೀ ಕೊಡದಿರು |
ಕೇಳುವರ್ಯಾರೈ ತಿರುಕು ಗುಲಾಮರು | ಬಾಳುವೆವೆಲ್ಲಾದರು ನಾವ್ ಜೀವದಿ ||೫೨||
ಧಿಂಡ್ಯಾ ಕಾಶ್ಮೀರ ಧರಣಿಪನಂತೇ | ವೀರಸೇನನೆಂದು | ಪುಂಡನ ಪೆಸರ ಕರೆವರಂತೇ |
ದಂಡಧರನ ಪಡೆಯಂದದೊಳಾತನು | ತಂಡತಂಡದ ಮಾರ್ಬಲಗಳ ಕೂಡುತ |
ಚಂಡ ಪರಾಕ್ರಮಿ ನಮ್ಮನು ಗರ್ವದಿ | ದಂಡಿಸಿ ಬಹುಪರಿ ಲತ್ತೆಯನಿಕ್ಕಿದ ||೫೩||
ಪೋಗಿ ನಿಮ್ಮಯನೃಪತಿಯಲ್ಲೀ | ಪೇಳಿರಿ ಸುತೆಯ | ಬೇಗದಿಂದಿತ್ತು ಪಾದದಲ್ಲೀ |
ಬಾಗಲು ಶಿರವನು ಗೈದಿಹ ಫಣವನು | ಸಾದರದಿಂದಲಿ ಕ್ಷಮಿಸುವೆನಲ್ಲದೆ |
ಈಗಲೆ ಕೊಡದಿರೆ ಸಮರದಿ ಮುಂದಕೆ | ನೀಗುವೆನೆಲ್ಲರ ಹರಣವನೆಂದನು ||೫೪||
ರಾಗ ಕೇತಾರಗೌಳ ಝಂಪೆತಾಳ
ದೂತರಿಂತೆನೆ ಕೇಳುತಾ | ಕುವಲಯನು | ಖಾತಿಯೊಳು ಪಲ್ಗಡಿಯುತಾ ||
ಘಾತಿಸುವೆನರೆಕ್ಷಣದೊಳು | ಇಂದಿವಗೆ | ಸೋತಮೇಲೇಕೆ ಬಾಳು ||೫೫||
ಕೊಡೆನು ತರಳೆಯನಿವನಿಗೇ | ರಾಕ್ಷಸಿಯು | ಮಡಿದನಕ ಶಪಥದೊಳಗೇ |
ಕೊಡುವೆನೀತನ ಶಿರವನೂ | ಶಾಕಿನಿಯ | ಪಡೆಗಳಿಗೆ ಔತಣವನೂ ||೫೬||
ಎನುತಲೆದ್ದತಿರೋಷದೀ | ಧಾರುಣಿಪ | ಧನುಶರವಗೊಂಡು ಭರದೀ ||
ಮಣಿಮಯದ ರಥವಡರುತಾ | ಸೈನ್ಯಗಳ | ಘನಜವದಿ ತಾ ಕೂಡುತಾ ||೫೭||
ಪೊರಟು ಬರುತಿರೆ ದ್ವಾರದೀ | ಭೋರಿಡುವ | ಅರಿಬಲವ ಕಂಡು ಭರದೀ |
ಉರುತರದ ಕೋಪದಿಂದಾ | ಕಾಶ್ಮೀರ | ಪುರಪತಿಯ ನುಡಿಸುತೆಂದಾ ||೫೮||
ರಾಗ ಮಾರವಿ ಏಕತಾಳ
ಆರೆಲೊ ಚೋರರ ತೆರದೊಳು ಸೇನಾ | ವಾರಿಧಿಯನೆ ದಾಂಟೀ |
ಭೊರನೆ ಬಂದೀ ನಗರವ ಮುಸುಕಲು | ಕಾರಣವೇನಿಹುದೂ ||೫೯||
ದೊರೆಯೆ ಕೇಳ್ನಿನ್ನಯ | ತರಳೆಯ ವರಿಸಲು | ತ್ವರಿತದಿ ಬಂದಿಹೆನೂ |
ದೊರೆ ಕಾಶ್ಮೀರದ ವೀರಸೇನಾಖ್ಯನು | ಜರಗಿಸು ಲಗ್ನವನೂ ||೬೦||
ಎಲವೋ ಧೂರ್ತನೆ ಗರ್ವಗಳಿಂದಲಿ | ಗಳಹಿದರೇನಹುದೂ ||
ಸಲಿಗೆಗಳ್ಯಾತಕೊ ಸಮರಾಂಗಣದಲಿ | ಲಲನೆಯನೊಲಿಸುವುದು ||೬೧||
ಪೊಡವಿಪ ಕೇಳೈ ನಿನ್ನಯ ತರಳೆಯ | ಬಿಡುವವನಲ್ಲೀಗ ||
ಕಡೆಯಲಿ ಸಮರದಿ ಸೋತೀವುದು ಅಳಿ | ನಡತೆಯು ತಿಳಿಯೀಗ ||೬೨||
ರಾಗ ಕೇತಾರಗೌಳ ಅಷ್ಟತಾಳ
ಪೃಥಿವೀಶ ಮತ್ಸುತೆಯ ವರಿಸಬೇಕಾದರೆ | ಮಥಿಸು ರಕ್ಕಸಿಯ ನೀನೂ |
ವ್ಯಥೆಯೊಳಗಿರುವೆನ್ನ ಪೃಥುವಿಯ ಜನರೆಲ್ಲ | ಸ್ತುತಿಸಿಕೊಂಡಾಡುವರೂ ||೬೩||
ಕರದೊಳು ಬಳೆಯ ತೊಟ್ಟವನಲ್ಲ ಪೆಣ್ಣಿನೋ | ಳ್ಧುರವನು ಗೈಯ್ಯುವರೇ ||
ತರಳೆಯನೀವೆಯೊ ಸರಿಧುರಗೈವೆಯೊ | ಅರುಹು ನೀ ಬೇಗದೊಳು ||೬೪||
ಹಿಂದೆ ತ್ರೇತಾಯುಗದೊಳು ದಶರಥರಾಮ | ಚಂದ್ರನು ತಾಟಕಿಯಾ ||
ಕೊಂದನಾತನಿಗೆ ನೀನಧಿಕನೆ ಗಳಹಬೇ | ಡೆಂದನು ಕುವಲಯನೂ ||೬೫||
ಧರಣಿಪ ಕೇಳ್ ಗಾಧಿತನಯನ ವಾಕ್ಯವ | ತೊರೆದನೆ ರಘುವರನೂ ||
ದುರಿತ ದುಃಖವು ಮುಂದೆ ಬರುವುದು ತನಗೆಂದು | ತರಿದನು ದುರುಳೆಯನೂ ||೬೬||
ಅನಕದುಂದುಭಿ ಪುತ್ರನೆನಿಸಿ ಗೋಕುಲ ದಿ ಪೂ | ತನಿಯನ್ನು ಸದೆಯುವರೇ |
ಮುನಿಗಳ್ಯಾರವಗೆ ಅಪ್ಪಣೆ ಇತ್ತರೆಂಬುದ | ಘನ ಜವದಿಂದ ಪೇಳೋ ||೬೭||
ಭಾಮಿನಿ
ಅರಸ ಕೇಳೆನ್ನೊಡನೆ ಪೂರ್ವದ |
ಚರಿತೆಗಳನರುಹುತ್ತ ಕಾಲವ |
ಹರಿಸುವುದು ಸರಿಯಲ್ಲ ಬೇಗದಿ ಸುತೆಯ ಕೊಡದಿರಲೂ ||
ಹರಿಹರಾದ್ಯರ ಕೂಡಿ ನೀ ಧುರ |
ಕೆರಗಿ ಬಂದರು ಬಿಡೆನು ಕಾಲನ |
ಪುರದ ಮಾರ್ಗವ ತೋರಿಪೆನು ಕೇಳ್ಮರುಳೆ ಸಾರಿದೆನೂ ||೬೮||
ರಾಗ ಶಂಕರಾಭರಣ ಮಟ್ಟೆತಾಳ
ಅರರೆ ಧೂರ್ತ ನಿನ್ನೊಳೀಗ | ಧುರಕೆ ಹರಿಹರಾದ್ಯರೇಕೆ |
ಧರಿಸು ಕರದಿ ಧನುವನೆನ್ನ | ಪರಿಯ ತೋರ್ಪೆನು ||೬೯||
ಎನುವ ನುಡಿಗೆ ವೀರಸೇನ | ಮನದಿ ಬಹಳ ರೋಷತಾಳಿ |
ಘನತರಾಸ್ತ್ರಗಳನೆ ಸುರಿದ | ನೆಣಿಕೆಯಿಲ್ಲದೇ ||೭೦||
ಬಿಟ್ಟ ಶರವ ಮಧ್ಯಪಥದಿ | ಕುಟ್ಟಿ ಕುವಲಯಾಖ್ಯ ಪೇಳ್ದ |
ಥಟ್ಟನೀಗ ತೆರಳು ಆಸೆ | ಬಿಟ್ಟು ಬಾಲೆಯ ||೭೧||
ತೆರಳಿಸುವೆ ನಿನ್ನನೀಗ | ತರಣಿಜನ ಪುರಕೆ ಬೇಗ |
ಪರಿಕಿಸೀಗಲೆನುತಲುರಗ | ಶರವನೆಸೆದನೂ ||೭೨||
ಗರಳವನ್ನು ಸುರಿಸಿ ಬರುವ | ಉರಗಶರವ ಕಂಡು ಭೂಪ |
ಗರುಡ ಬಾಣದಿಂದ ತರಿದು | ವರುಣಶರವನೂ ||೭೩||
ಕನಲಿ ವೀರಸೇನಗೆಸೆಯೆ | ಅನಿಲ ಶರದಿ ಶಮಿಸಿ ತಿಮಿರ |
ಕಣೆಯ ನೆಸೆಯಲಾಗ ತರಿದ | ದಿನಪಶರದೊಳು ||೭೪||
ಭಾಮಿನಿ
ಅರೆನಿಮಿಷವಾಲಸ್ಯವಿಲ್ಲದೆ |
ಧುರವ ಗೈಯ್ಯುತಲಿರಲಿಕಿತ್ತಲು |
ತರಣಿ ಪಶ್ಚಿಮಶರಧಿಸಾರಲ್ಕುಭಯ ವಿಕ್ರಮರೂ ||
ತೆರಳಿದರು ತಂತಮ್ಮ ಡೇರೆಗೆ |
ಒರೆವೆ ನಾ ಮುಂದಾದ ಕಥನವ |
ಹರುಷದಿಂದಿನನಾಥನಡರಿದ ಪೂರ್ವಶಿಖರವನೂ ||೭೫||
ರಾಗ ಕೇತಾರಗೌಳ ಅಷ್ಟತಾಳ
ಇತ್ತ ಲೀಲಾವತಿಯೊಳಗೆ ಬೃಹದ್ರಥ | ನಿತ್ತಿರಲೋಲಗವಾ |
ಉತ್ತಮಸಚಿವ ಸಾಮಂತರ ಮನ್ನಿಸು | ತತ್ಯಾದರದೊಳೆಂದನೂ ||೭೬||
ಹೀರಾಮಾತ್ಯನೆ ನಮ್ಮ ವಸುಧೆಯೊಳ್ಪ್ರಜೆ ಪರಿ | ವಾರವು ಕುಶಲಿಗಳೇ |
ಧಾರುಣಿಪಾಲರ ಕಪ್ಪವು ಕಾಲವ | ಮೀರದೆ ಬರುತಿಹುದೇ ||೭೭||
ಪೊಡವಿಪ ಕೇಳ್ ಸುರಕಲ್ಪಭೂರುಹನಂತೆ | ಒಡೆಯ ನೀನಾಗಿರಲೂ |
ಬಡತನಕಷ್ಟಗಳೊದಗದು ಕಪ್ಪವು | ನಡತೆಯೊಳ್ಬರುತಿಹುದೂ ||೭೮||
ತಪ್ಪದೆ ನಡೆಯುವ ಕಲೆಯ ಪ್ರದರ್ಶನ | ವಪ್ಪದಿ ನಡೆಯುವುದೇ ||
ಇಪ್ಪುದೀದಿನ ಯಾವ ಕಲೆ ಯಾವ ವೇಳೆಗೆ | ಒಪ್ಪಿಸು ತನಗೆಂದನೂ ||೭೯||
ಇಂದು ಬಾಲೆಯರ ಸಂಗೀತನಾಟ್ಯದ ದಿನ | ಬಂದಿದೆ ಮೇಳವಿಸೀ |
ಕುಂದಿಲ್ಲ ದಿನಕೊಂದು ಕಲೆಯ ಪ್ರದರ್ಶನ | ಚಂದದಿ ನಡೆಯುವುದೂ ||೮೦||
ಲಾಲೀಸಮಾತ್ಯ ಈ ದಿನದ ಪ್ರದರ್ಶನ | ವೋಲಗದೊಳು ಸಾಗಲೀ ||
ಬಾಲೆಯರ್ಬರಲವರ ಮೇಳ ಸಹಿತವೆನೆ | ಕೇಳುತ್ತ ಸಚಿವೇಶನೂ ||೮೧||
ಕರೆಸಲು ಮೇಳವ ಸುರುಚಿರಾಭರಣದಿ | ಪರಿಪರಿ ಶೃಂಗಾರದೀ ||
ಅರಮನೆಯೋಲಗಕೈದಲಂಬುಜ ಮಿತ್ರ | ತೆರಳಿದ ಪಡುಗಡೆಗೇ ||೮೨||
Leave A Comment