ಭಾಮಿನಿ
ಧುರದಿ ಜಯ ಪೊಂದಿದರೆ ಲಕ್ಷ್ಮಿಯು |
ಬರುವಳೈ ಬಲಭುಜಕೆ ಒಮ್ಮೆಗೆ |
ಅರಿಗೆ ಶಿರವಂ ಕೊಡಲು ಸ್ವರ್ಗಾಂಗನೆಯರೊಲಿಯುವರೂ ||
ಧರಣಿಪತಿ ನೀ ಕೇಳು ಅಸ್ಥಿರ |
ಪರಮ ದುರ್ಘಟ ದೇಹವಿದಕೀ |
ಪರಿಯ ಚಿಂತನೆ ಮಾಳ್ಪರೇ ರಣಭಯಗಳೆನಗಿಹುದೇ ||೩೫೨||
ರಾಗ ಶಂಕರಾಭರಣ ಮಟ್ಟೆತಾಳ
ಹುಡುಗನೆಂದ ಮಾತ ಕೇಳಿ | ಪೊಡವಿಪಾಲ ಧನುವ ಪಿಡಿದು |
ಒಡನೆ ಶರವ ಪೂಡಿನಿಂತ | ಕಡುವಿಕ್ರಮದೊಳು ||೩೫೩||
ಶೂರಕುಂಡಲಿಯು ಶಸ್ತ್ರ | ಸಾರಗಳನೆ ನೋಡೆನುತ್ತ |
ಧಾರುಣಿಪನಂಗಕೆಸೆದ | ಮೂರು ಶರಗಳಾ ||೩೫೪||
ಬರುವ ಶರವ ಮಧ್ಯಪಥದಿ | ಮುರಿದು ಸಿಂಹನಾದಗೈದು |
ಗುರಿಯೊಳೊಂದು ಸರಳ ನೃಪತಿ | ತರಳಗೆಸೆದನೂ ||೩೫೫||
ಕಿಡಿಯ ಸೂಸುತಾಗ ಕುವರ | ನಡುವೆ ಶರವ ತರಿದು ಧರೆಗೆ |
ಕೆಡಹಿ ಚಾಪವನ್ನು ಮುರಿದು | ತುಡುಕೆ ಖತಿಯಲೀ ||೩೫೬||
ಚಾಪ ಪೋಗೆ ಗದೆಯಗೊಂಡು | ಕೋಪದಿಂದ ಬಿಡಲು ಸುತ ಪ್ರ |
ತಾಪದಿಂದ ಮುರಿಯೆ ಕಂಡು | ಭೂಪನಾಗಳೂ ||೩೫೭||
ಹೊಸತು ಚಾಪಕಾಗ ಶರವ | ಬೆಸೆದು ಖತಿಯೊಳೆಸೆಯೆ ನಡುವೆ |
ಮಸಗಿ ಕಡಿದು ಮೆರೆದನಾಗ | ವಸುಮತೀಶಜ ||೩೫೮||
ಭಾಮಿನಿ
ತಿಮಿರ ಬಾಣವ ಬಿಡಲು ಭೂಪನು |
ಕಮಲಬಾಂಧವ ಶರದಿ ತರಳನು |
ಶಮಿಸೆ ಕಂಡತಿರೋಷದಿಂದಲಿ ಹರಿಯ ಶರವೆಸೆಯೇ ||
ರಮೆಯರಸನತಿಭಕ್ತನಾಗಿಹ |
ವಿಮಲಗಾರುಡ ಶರದಿ ತರಿಯಲು |
ಕ್ರಮಗಳನೆ ನೋಡುತ್ತ ಧರಣಿಪನೆಂದ ನಿಜಸುತಗೇ ||೩೫೯||
ರಾಗ ಕಾಂಭೋಜಿ ಝಂಪೆತಾಳ
ಆರ ಮಗ ನೀನೆಂದು ಪೇಳೆಲೈತರಳ ನಿನ | ಗಾರು ಸರಿಯಿಲ್ಲವೈಧುರದೀ ||
ಶೂರ ನಿನ್ನಂತೋರ್ವ ಕುಲದೀಪಕನು ಜನಿಸೆ | ಪಾರವಿನ್ನುಂಟೆ ಸಂತಸಕೇ ||೩೬೦||
ನಿನಗೆ ಸಾಕಾಗಿರಲು ಧನುವಿಳುಹಿ ಶಾಂತಿಯನು | ಜನಪ ನೀ ಪೊಂದುವುದು ತಿಳುಹೀ ||
ಜನನಿ ಜನಕರ ಕೇಳ್ವ ನೆವಗಳಿಂದಲಿ ಕಾಲ | ವಿನಿತೇಕೆ ಕಳೆವೆ ಸಂಗರದಿ ||೩೬೧||
ರಾಗ ಶಂಕರಾಭರಣ ಮಟ್ಟೆತಾಳ
ಎಲವೊ ಹುಡುಗ ಗರ್ವದಿಂದ | ಗಳಹಬೇಡ ತಾಳೆನುತ್ತ |
ಬಲುಹಿನಿಂದ ಕಣೆಯ ಪೂಡಿ | ಛಲದೊಳೆಸೆದನೂ ||೩೬೨||
ಕಂದ ಧರಣಿಗುರುಳಿ ಮಣ್ಣ | ತಿಂದನಾಗ ಸುರಿವ ರಕುತ |
ದಿಂದ ತೋದುದಂಗವೆದ್ದು | ನಿಂದು ಕೋಪದಿ ||೩೬೩||
ಉರಿಯಸೂಸಿ ಸಾಣೆಯಲಗ | ತರಳ ಸೇದುತೆಸೆಯಲಾಗ |
ಭರದಿ ರುಧಿರವೃಷ್ಟಿಯಾಗೆ | ಧರಣಿಪಾಲಗೇ ||೩೬೪||
ಭಾಮಿನಿ
ಕಾದುವರೆ ಶಿಶುವೆಂದು ನೀತಿಯ |
ಬೋಧಿಸಲು ಎನ್ನೊಡನೆ ಜಯವನು |
ಸಾಧಿಸುವನೇ ದುರುಳನನು ಶಿರವರಿವೆನೆಂದೆನುತಾ ||
ಮೇದಿನಿಪ ಕರವಾಲವನು ಕಡು |
ಖೇದದಿಂ ಕೈಪಿಡಿಯೆ ಯತ್ನಿಸೆ |
ಆದುದತಿಭಾರವೆನೆ ನೋಡುತ ಮನದಿ ಕಳವಳಿಸೀ ||೩೬೫||
ರಾಗ ನೀಲಾಂಬರಿ ರೂಪಕತಾಳ
ಹರಹರ ಎನ್ನಯ ಸತ್ವಕೆ | ಜರೆ ತಾನಾವರಿಸಿರುವುದೇ |
ಕರದಿಂದೆತ್ತಲಿಕಾಗದು | ಕರವಾಲವನೀಗಾ ||೩೬೬||
ಸತ್ವವು ಕುಂದಿತು ಎನ್ನಯ | ಚಿತ್ತವು ಕಳವಳಗೊಂಡಿತು |
ಬತ್ತಳಿಕೆಯೊಳೆನಗಿಲ್ಲವು | ಶಸ್ತ್ರದ ಬಲವೀಗ ||೩೬೭||
ಪಸುಳೆಯ ಧುರದೊಳು ಸೋತೆನು | ವ್ಯಸನವು ಮುಸುಕಿತು ದೇಹವ |
ವಸುಧೆಯೊಳೆನ್ನಯ ಕೀರ್ತಿಯು | ನಶಿಸಿತೆ ಶಿವಶಿವನೇ ||೩೬೮||
ರಾಗ ಕೇತಾರಗೌಳ ಅಷ್ಟತಾಳ
ಪರಿಪರಿದುಃಖದೊಳಿರುತಿಹ ಜನಕನ | ತರಳನು ಮೂದಲಿಸೀ ||
ಅರಸನೆ ತಡವೇಕೆ ಧರಿಸಬಾರದೆ ನಿಮ್ಮ | ಕರವಾಲವನು ಧುರಕೇ ||೩೬೯||
ಪಾಪವು ಬೆನ್ನಟ್ಟಲಾಪುದು ಈ ಪರಿ | ಲೇಪವೇನಿದೆ ಕಾಯಕೇ ||
ಭೂಪತಿಗಳು ನೀವು ಕಾಪುರುಷರೆ ನೋಡೆ | ಶಾಪವು ತಗಲಿಹುದೇ ||೩೭೦||
ಇನಿತು ಮೂದಲಿಸುವ ತನಯನ ಕಾಣುತ್ತ | ಮನದಿ ರೋಷವ ತಾಳುತ್ತಾ ||
ಜನಪಾಲ ಮಲ್ಲಯುದ್ಧಕೆ ನಿಂತನಾಗಳು | ಘನತೆಯನೇನೆಂಬನೂ ||೩೭೧||
ಮುಷ್ಟಿ ಮುಷ್ಟಿಯೊಳೆರಗುತ್ತಲಿ ಜನಪನ | ಥಟ್ಟಾನೆ ಕೆಡಹುತಲೀ ||
ಕಟ್ಟಿದನಾಗಳೆ ತರಳನು ಕರವ ಹಿಂ | ಗಟ್ಟಿನೊಳುರೆ ಬಿಗಿದೂ ||೩೭೨||
ಜನನಿಯ ಭಾಷೆಯು ತೀರಿತೀದಿನವೆಂದು | ಮನದಿ ತೋಷವ ತಾಳುತ್ತಾ |
ಜನಪನ ತಳ್ಕಿಸಿ ರಥದಿ ಕುಳ್ಳಿರಿಸುತ್ತ | ಮನವೇಗದಿಂ ಬಂದನೂ ||೩೭೩||
ರಾಗ ನೀಲಾಂಬರಿ ರೂಪಕತಾಳ
ಇತ್ತ ಕಲಾವತಿ ಗೃಹದೊಳು | ಪುತ್ರನ ನೆನೆನೆನೆದಳಲುತ |
ಎತ್ತೈದಿದೆ ರವಿಕುಲಕೀರ್ತಿಯ | ರತ್ನನೆ ಬಾರೆನುತಾ ||೩೭೪||
ಒರೆದಿಹ ಭಾಷೆಗೆ ದಿನವೆಂ | ಟರೆ ಘಳಿಗೇಯೊಳು ಗತಿಪುದು |
ತೊರೆದೆಯೊ ಪಿತನೊಳು ಜೀವವ | ಧುರವನೆ ನೀ ಗೈದೂ ||೩೭೫||
ಭಾಮಿನಿ
ಇನಿತು ಕಡುಶೋಕದಿ ಕಲಾವತಿ |
ತನಯನನು ಹಂಬಲಿಪ ಕಾಲದಿ |
ಘನಪರಾಕ್ರಮಿ ಕುಂಡಲಿಯು ರಥವಿಳಿದು ವಂದಿಸುತಾ ||
ಜನನಿ ಬೇಗದಿ ತಹುದು ಗುರುತನು |
ಜನಕನನು ಬಂಧಿಸುತ ತಂದಿಹೆ |
ಇನಿಯನನು ನೋಡೆನುತ ಕರವಂ ಪಿಡಿದು ತೋರಿದನೂ ||೩೭೬||
ವಾರ್ಧಕ
ಪರಮ ದೀನನಿಗೊಮ್ಮೆ ನವನಿಧಿಯು ದೊರೆತಂತೆ |
ಕುರುಡನಿಗೆ ನೇತ್ರ ಬಂದಾನಂದ ಪಡುವಂತೆ |
ತರಳ ಬಂಜೆಯೊಳುದಿಸೆ ನೋಡಿ ಮುದ್ದಿಸುವಂತೆ ಪರಿಪರಿಯ ಹರುಷದಿಂದಾ ||
ಬೆರಳ ಮುದ್ರಿಕೆ ಖಡ್ಗ ಮೊದಲಾದ ಗುರುತುಗಳ |
ಅರಸನೆದುರಿನೊಳಿಟ್ಟು ಕೈಗಟ್ಟಸಡಿಲಿಸುತ |
ಕರುಣದಿಂ ರಕ್ಷಿಪುದು ಭಾಷೆತೀರಿತು ಎನ್ನ ಸೆರಗೊಡ್ಡಿ ಬೇಡುತಿಹೆನೂ ||೩೭೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬೆಚ್ಚಿದನು ಬೆರಗಾದನವನಿಪ | ನೆಚ್ಚಿನಸಿಮುದ್ರೆಯನು ಮಾಲಿಕೆ |
ಗಚ್ಚರಿಯ ತಾಳುತ್ತಲುಸುರಿದ | ಉಚ್ಚ ಸ್ವರದೀ ||೩೭೮||
ಮದನಮಂಜರಿಗಿತ್ತೆನಂದಿನ | ಒದಗಿಸಿದಳೆಂತಿವಳು ಕೃತ್ರಿಮ |
ವಿದರ ಪರಿ ತಾನರಿಯೆ ಚೋದ್ಯವು | ಹೃದಯಕಾಯ್ತು ||೩೭೯||
ರಾಗ ಮಧ್ಯಮಾವತಿ ತ್ರಿವುಡೆತಾಳ
ಚಿಂತೆಚೋದ್ಯಗಳೆಲ್ಲ ಮನಸಿನ | ಭ್ರಾಂತಿ ಸಹಿತೋಡಿಸುವೆನಾ ಸುಖ |
ಶಾಂತಿಯನು ತಂದೀವೆ ನೋಡೆನು | ತೊಳಗೆ ಪೋಗಿ ||೩೮೦||
ದೇವಮಾನಿನಿ ಇತ್ತ ಹಾರವ | ಭಾವಶುದ್ಧಿಯೊಳ್ಧರಿಸಿ ನಿಲ್ಲಲು |
ಜೀವಕಳೆ ಬೇರಾಯ್ತು ನೋಡಿದ | ನಾಗ ಭೂಪ ||೩೮೧||
ಮದನಮಂಜರಿ ಬಾರೆ ಯೆನ್ನೀ | ಹೃದಯ ಜ್ಯೋತಿಯೆ ಬಾರ ಎನ್ನುತ |
ಸುದತಿಯನು ಅಪ್ಪಿರಲು ಭೂಮಿಪ | ಮುದದೊಳಾಗ ||೩೮೨||
ಕತ್ತಿನಿಂ ಹಾರವನು ತೆಗೆದಿರಿ | ಸುತ್ತ ನೋಡಿನ್ನೊಮ್ಮೆ ಎನೆ ಭೂ |
ಪೋತ್ತಮನು ಪರಿಕಿಸುತ ವಿಸ್ಮಯ | ಗೊಳ್ಳುತಾಗ ||೩೮೩||
ವನಿತೆಯಂಗವ ಬಿಗಿದ ಕರಗಳು | ಘನಜವದಿ ಹಿಂದಿರುಗೆ ಸಂಶಯ |
ವೆನಿಸಿತೊಡಮೂಡಿದವು ದಿಗ್ಭ್ರಮೆ | ಗೊಂಡನಾಗ ||೩೮೪||
ಅಹುದು ಕೈಪಿಡಿದಿಹ ಕಲಾವತಿ | ಯಹುದು ಮೋಹದ ಮದನಮಂಜರಿ |
ಯಹುದು ವನದೊಳು ಪಂಥವೆಸಗಿದ | ನಿನ್ನ ರಾಣಿ ||೩೮೫||
ಮಾಟಗಾತಿಯೊ ಮಾಂತ್ರಿಕಳೊವರ | ಬೇಟೆನಿಪುಣೆಯೊ ಕಾಣೆನಿವಳಿಗೆ |
ಸಾಟಿಯಿಲ್ಲೀ ಬಾಲಕಗೆ ಧುರ | ಹೂಟಿಯಲ್ಲೀ ||೩೮೬||
ಎನಲು ಕೇಳ್ದಾ ಮಾನಿನಿಯು ಸುರ | ವನಿತೆ ತನ್ನುಪಕಾರ ಸ್ಮರಿಸಿಯೆ |
ತನಗನುಗ್ರಹಗೈಯ್ಯೆ ಪಂಥವ | ಗೆಲಿದೆವೀಗ ||೩೮೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭಾಷೆ ತೀರಿದ ಮೇಲೆ ತರುಣಿಯು | ದೋಷರಹಿತಳು ಕ್ಷಮಿಸೆನುತಲಾ |
ಕಾಶವಾಣಿಯು ನುಡಿಯಲತಿ ಸಂ | ತೋಷಗೊಂಡು ||೩೮೮||
ತರಳನನು ತೆಗೆದಪ್ಪಿ ಮುದ್ದಿಸಿ | ಕಿರುನಗೆಯ ನಗುತಲ್ಲಿ ನಿಂದಿಹ |
ವರ ಮನೋಹರೆ ಚಂಚಲಾಕ್ಷಿಯ | ಕರದಿ ಸೆಳೆದೂ ||೩೮೯||
ವನಿತೆ ಕೇಳೆಲೆ ಪಾಪ ಪುಣ್ಯದಿ | ತನಯ ಜನಿಸುತಲುಭಯ ಕುಲವನು |
ಘನತೆಯಿಂ ಪಾವನವಗೊಳಿಸಿದ | ನೆನುತಲಾಗ ||೩೯೦||
ಭಾಮಿನಿ
ತರುಣಿ ಸುತ ಸಹಿತಾಗ ಭೂಮಿಪ |
ಹರುಷದಿಂ ಶ್ವಶುರನಿಗೆ ವಂದಿಸೆ |
ಧರಣಿಪನ ತಕ್ಕೈಸಿದನು ಕುವಲಯನ ಪರಸುತಲೀ ||
ಕರುಣದಿಂ ಪೊರೆ ಎನಲು ಭೂಮಿಪ |
ತರಳನಿಗೆ ಯುವರಾಜ್ಯ ಪಟ್ಟವ |
ವಿರಚಿಸಲು ದಯಮಾಡಬೇಕೆಂದೊರೆಯೆ ಕೇಳುತಲೀ ||೩೯೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅಸ್ತೆನುತ ಕುವಲಯನು ತರಳೆಗೆ | ಇತ್ತು ಧನಕನಕಾದಿ ದಾಸಿಯ |
ರುತ್ತಮದ ಪಶುಗಳನು ಬಳುವಳಿ | ಯತ್ಯಧಿಕದೀ ||೩೯೨||
ಉಭಯ ಕುಲಕಿವನೋರ್ವ ಪುತ್ರನು | ಪ್ರಭುವು ಯೆನ್ನಯ ರಾಜ್ಯಕಿವನೆಂ |
ದಭಯಹಸ್ತದಿ ಹರಿಸಿದನು ಬಲು | ಸೊಬಗಿನಿಂದ ||೩೯೩||
ಬರಲು ಲೀಲಾವತಿಗೆ ಸರ್ವರು | ಗುರುವಶಿಷ್ಠರ ನೇಮದಿಂದಲಿ |
ನೆರಹಿ ಸಾಮಗ್ರಿಗಳನೆಲ್ಲವ | ಹರುಷದಿಂದ ||೩೯೪||
ಭಾಮಿನಿ
ಸುರಸ ಮಂಗಲವಾದ್ಯಘೋಷದಿ |
ಗುರು ವಶಿಷ್ಠರ ವೇದಮಂತ್ರದಿ |
ತರುಣಿಯರ ಶೋಭಾನರವದಿಂ ತರಳ ಕುಂಡಲಿಗೆ ||
ವಿರಚಿಸುತ ಯುವರಾಜ ಪಟ್ಟವ |
ಪರಿಪರಿಯೊಳುಪಚರಿಸಿ ಸರ್ವರ |
ಧರಣಿಯನು ಪಾಲಿಸುತಲಿರೆ ಭೂನಾಥ ಹರುಷದಲೀ ||೩೯೫||
ರಾಗ ಬೇಗಡೆ ಅಷ್ಟತಾಳ
ಬಂದಿತಾಪಕ್ಷ ತ್ರಯೋದಶಿಯೂ | ಹಂಬಲಿಸಿ ತರಳನು |
ಇಂದಿರೇಶನ ವ್ರತದ ಹರಕೆಯೂ ||
ಹಿಂದೆ ತಾ ಕೈಕೊಂಡುದೆಲ್ಲವ | ಬಂದರುಹೆ ಜನಕನಿಗೆ ಕೇಳುತ |
ಚಂದದಿಂ ಕರೆಸಿದನು ಗುರುಗಳ | ನಂದು ಗೈದರು ಹರನ ಪೂಜೆಯ ||೩೯೬||
ಭೂತನಾಥನೆ ನಿಮ್ಮಡಿಯ ಭಜಿಸೀ | ಪಾಮರನ ಜನ್ಮವು |
ಪೂತವಾಯಿತು ಭೂಮಿಯೊಳಗುದಿಸೀ ||
ನಾಥನೇ ನೀ ರಕ್ಷಿಸೆನುತೀ | ರೀತಿ ಪ್ರತಿಪಕ್ಷದೊಳು ಗೈಯುತ |
ಭೂತಳವ ಪಾಲಿಸುತಲಿರೆ ಶ್ರೀ | ನಾಥನಂದದಲಿ ಶೂಲಿ ಭಕುತರು ||೩೯೭||
ಒಂದೆ ಮನದೊಳಗಾಚರಿಸೆ ವ್ರತವಾ | ಪರಶಿವನು ಕೊಡುವನು |
ಚಂದದಿಂದಲಿ ಸೌಖ್ಯ ಸಂಪದವಾ ||
ಬಂದ ಬವಣೆಯು ಪೋಗಿ ಸದ್ಗತಿ | ಹೊಂದುವರು ಪರದಲ್ಲಿ ನಿಶ್ಚಯ |
ವೆಂದು ಸೂತರು ಶೌನಕಾದ್ಯರಿ | ಗಂದದಿಂ ಪೇಳಿರುವ ಚರಿತೆಯ ||೩೯೮||
ರಾಗ ಕೇತಾರಗೌಳ ಅಷ್ಟತಾಳ
ಮೆರೆಯುವ ನೃಪ ಶಾಲಿವಾಹನ ಶಕದೊಳು | ಹರಿಯಣುಗನ ಸಖನಾ ||
ವರನಾಮ ಧರಿಸಿ ಮೈಸೂರಿನೊಳ್ನೆಲೆಯಾದ | ಧರಣಿಪನಾಳ್ವಿಕೆಗೇ ||೩೯೯||
ವಶವಾದ ಸಾಗರವೆಂಬ ತಾಲ್ಲೂಕಿನೊ | ಳ್ಕಸಬಾ ಹೋಬಳಿಯಂತ್ಯದಿ ||
ಎಸೆವ ಬೆಳ್ಳೂರೊಳು ದಶರಥನಣುಗನ | ಪೆಸರಿನೊಳಿಹ ದ್ವಿಜನಾ ||೪೦೦||
ವರ ಜ್ಯೇಷ್ಠಸುತ ಮಂಜುನಾಥನೆಂಬಬಿಧಾನ | ವಿರೂಪಾಕ್ಷೇಶ್ವರನ ಭಕ್ತಾ |
ಗುರು ಸಾಧು ಸಜ್ಜನ ಸೇವಕ ಶಿಷ್ಟರ | ಚರಣಾದಾಸಾನುದಾಸ ||೪೦೧||
ವರ ಕಲಾವತಿ ಪರಿಣಯವೆಂಬ ನಾಮದಿ | ಅರಿತಂತೆ ವಿರಚಿಸಿದೇ ||
ಧರಣಿಯೊಳ್ವಿದ್ಯಾಪ್ರವೀಣರು ಕೃತಿಯೊಳ | ಗಿರುವೊಪ್ಪು ತಪ್ಪುಗಳ ||೪೦೨||
ಹರುಷದಿ ತಿದ್ದಿ ಕಾರುಣ್ಯದಿ ಮೆರೆಸಿರಿ | ಪರಮ ಸುಜ್ಞಾನಿಗಳೇ |
ಶಿರಸಾಷ್ಟಾಂಗವಗೈದು ಬೇಡುವೆ ಕವನದ | ಅರಿವುಯಿಲ್ಲವುಯೆನಗೇ ||೪೦೩||
ವಾರ್ಧಕ
ಅರಿಯೆನಾ ಯತಿಗಣವ ಪ್ರಾಸಪ್ರಾಣಗಳೊಂದ |
ನರಿಯೆ ವಿಷಮಾದಿ ಸಂಜ್ಞೆಗಳ ವ್ಯಾಕರಣವ |
ನ್ನರಿಯೆ ಗುರುಲಘುವೆಂಬುದಂ ಛಂದಶಾಸ್ತ್ರಮಂ ಅರಿಯೆ ಸಂಸ್ಕೃತವ ತಾನು ||
ವರಮಹಾಕವಿತಾ ಪ್ರವೀಣರೊಪ್ಪವಗೈದು |
ಮೆರೆಸಲೀ ಸುಕಥಾಪ್ರಸಂಗಮಂ ಬೇಳೂರ |
ಸ್ಥಿರವಾಸ ಪರಮೇಶ ವಿರೂಪಾಕ್ಷೇಶ್ವರನ ಕರುಣದಾನಂದದಿಂದಾ ||೪೦೪||
ರಾಗ ಢವಳಾರ ಏಕತಾಳ
ಮಂಗಳ ಜಯ ಉಮೆಯರಸನಿಗೇ | ಮಂಗಳ ಮತ್ಸ್ಯವತಾರನಿಗೇ |
ಮಂಗಳ ಕೂರ್ಮಗೆ ವರಹಗೆ ಜಯ ಜಯ | ಮಂಗಳ ನರಹರಿ ವಾಮನಗೇ |
ಮಂಗಳಂ ಜಯ ಮಂಗಳಂ ||೪೦೫||
ವಸುಧೆಪಾಲರ ಗೆದ್ದ ಭಾರ್ಗವಗೇ ವರ | ಶಶಿಮುಖಿ ಸೀತಾ ಕಾಂತನಿಗೇ |
ಅಸುರ ಕಂಸನ ಕೊಂದು | ಕುಶಲದಿ ಮೆರೆದಿಹ | ವಸುದೇವತನಯ ಗೋಪಾಲಕೃಷ್ಣಗೇ ಮಂಗಳಂ
ಜಯ ಮಂಗಳಂ ||೪೦೬||
ಬತ್ತಲೆ ತಿರುಗಿದ ಬುದ್ಧನಿಗೇ | ಶಕ್ತಿಯೊಳ್ಮೆರದಿಹ ಕಲ್ಕ್ಯನಿಗೆ |
ಹತ್ತವತಾರವ | ನೆತ್ತುತ ಜಗದೊಳು | ಭಕ್ತಾರ ಸಲಹುವ ಶ್ರೀ ಹರಿಗೇ
ಮಂಗಳಂ ಜಯ ಮಂಗಳಂ ||೪೦೭||
ಭೂಮಿಯೊಳಧಿಕ ಶ್ರೀ ಕೆಳದಿಯೊಳ್ನೆಲಸಿಹ | ರಾಮೇಶ್ವರಗೇ ಪಾರ್ವತಿಗೇ |
ಕಾಮಿತ ಫಲಗಳನೀಯುವ ಬೇಳೂರ | ಸ್ವಾಮಿ ವಿರೂಪಾಕ್ಷೇಶ್ವರಗೇ
ಮಂಗಳಂ ಜಯ ಮಂಗಳಂ ||೪೦೮||
ಕೆರೆಯಕೊಪ್ಪದೊಳಿಹ | ವರಸಿದ್ಧಿ ಗಣಪಗೆ | ಸರಸತಿ ವಾಗೀಶ್ವರಿಯರಿಗೇ |
ತಿರುಪತಿ ವೆಂಕಟರಮಣಗೆ ಜಯ ಜಯ | ಪರತತ್ವ ಬೋಧಿಪ ಗುರುವರಗೇ
ಮಂಗಳಂ ಜಯ ಮಂಗಳಂ ||೪೦೯||
ಯಕ್ಷಗಾನ ಕಲಾವತಿ ಪರಿಣಯ ಮುಗಿದುದು
Leave A Comment