ಶಾರ್ದೂಲವಿಕ್ರೀಡಿತ
ಶ್ರೀ ಸೀತಾಸ್ಯಪಯೋಜಮಿತ್ರನವನೀನಾಥಂ ಜನಾನಂದಿತಂ |
ವಾಸಿಷ್ಠಾದಿಮುನೀಂದ್ರವಂದನಮಿತಂ ದೇವಾಳಿಸಂಸೇವಿತಂ |
ಮಾಶೇಷೋತ್ತಮದಿವ್ಯತಲ್ಪಶಯನಂ ಭಕ್ತೇಷ್ಟ ಸಂಜೀವನಂ |
ಕೌಸಲ್ಯಾತ್ಮಜಮಪ್ರಮೇಯಮನಿಶಂ ಧ್ಯಾಯಾಮಿ ಶ್ರೀರಾಘವಂ || ||1||
ರಾಗ ನಾಟಿ, ಝಂಪೆತಾಳ
ಪರಮೇಶಸುಕುಮಾರ ಪಾಲಿತಾಮರವಾರ |
ಪರಮಾತ್ಮವಿಚಾರ ಪಾವನಶರೀರ ||
ಪರಮೇಷ್ಠಿನುತಿಪಾತ್ರ ಪನ್ನಗೇಶ್ವರಸೂತ್ರ |
ಪರಮಮಂಗಲಗಾತ್ರ ಪಾಹಿ ಗಜವಕ್ತ್ರ || ಶರಣು ಶರಣು ||2||
ಶರಜಶರಸಂಹಾರ ಕರುಣಪಾರಾವಾರ |
ಶರಜಾಧೀಶ್ವರ ಶೂರ ಶರಭಾವತಾರ ||
ಶರಮೇಶಾಗ್ರಜಪೋಷ ಉರಗಾಭರಣಭೂಷ |
ಶರಜಭವನುತತೋಷ ಶರಣು ಕುಡುಮೇಶ || ಶರಣು ||3||
ನಾಗಭೂಷಣರಮಣಿ ನಳಿನಾಕ್ಷಿ ಸುಗುಣಮಣಿ |
ನಾಗಾಸ್ಯಗುಹಜನನಿ ನಂದಸುತಭಗಿನಿ ||
ನಾಗಸುಂದರವೇಣೀ ಅಗಜೇ ನೀರಜಪಾಣಿ |
ನಾಗಗತಿರುದ್ರಾಣಿ ಶರಣು ಶರ್ವಾಣಿ || ಶರಣು ಶರಣು ||4||
ವಾರ್ಧಕ
ಪರಸಿಂಹಭೂತನಂ ಪವನಸಂಜಾತನಂ |
ದುರಿತ ಮೇಘಸಮೀರನಂ ಸಮರಶೂರನಂ ||
ಉರುತರಾಂಘ್ರಿಪ ಯೋಜನಂ ತರಣಿತೇಜನಂ ಶರಣುಜನಸುರಭೂಜನಂ |
ದುರಿತಘನವಾತನಂ ಧುರವಿಜಯನಾಥನಂ |
ಹರಿಕುಲಾರ್ಣವಚಂದ್ರನಂ ಪ್ರೀತಿಸಾಂದ್ರನಂ |
ಸರಸಿಜಾಸನಮಿತ್ರನಂ ಕುಲಿಶಗಾತ್ರನಂ ನೆನೆವೆ ಪಾಟಲವಕ್ತ್ರನಂ ||5||
ಭಾಮಿನಿ
ಮಾರಜನನಿಯ ಭಜಿಸಿ ಪದ್ಮಕು |
ಮಾರವಾಣಿಯರಡಿಗರಗಿ ಜಂ ||
ಭಾರಿಮುಖ್ಯಾಮರರ ಪ್ರಾರ್ಥಿಸಿ ನುತಿಸಿ ತಾಪಸರ |
ಭೂರಿ ಭಕುತಿಯೊಳಮಲ ಕವಿಗಳ |
ಚಾರುಚರಣಕೆ ಮಣಿದು ಗುರುಪದ |
ವಾರಿಜಕೆ ವಂದಿಸುತ ಪೇಳ್ದಪೆನೀ ಕಥಾಮತವ ||6||
ರಾಗ ಸೌರಾಷ್ಟ್ರ ತ್ರಿವುಡೆತಾಳ
ರಾಮಚರಿತಸುಧಾಪಯೋಧಿಯೊ | ಳಾ ಮರುತಸುತ ಕಾಲನೇಮಿಯ |
ತಾ ಮಡುಹಿ ಸಂಜೀವನವ ಸು | ಪ್ರೇಮದಿಂದ ||7||
ತಂಧ ಕಥನವ ಶ್ರೀಪತಿಯ ದಯ | ದಿಂದ ಘನ ಸನ್ಮಂಗಳಪ್ರದ |
ವೆಂದು ಸದ್ಗುರುವರಿಯನಪ್ಪಣೆ | ಯಿಂದ ಜಗದಿ ||8||
ವಿವರಿಸುವೆ ವರ ಯಕ್ಷಗಾನದಿ | ಕುವರವಾಣಿಗಳೆನಗೆ ಪಾಲಿಪು |
ದವನಿಯಲಿ ಸಜ್ಜನರು ಸೀತಾ | ಧವನ ಕಥೆಯ ||9||
ಭಾಮಿನಿ
ವರ ಮಹಾ ರಜತಾಚಲದಿ ಸ |
ಚ್ಚರಿತ ಶಿವ ಪಾರ್ವತಿಗೆ ಪೇಳಿದ |
ಪರಮ ಪಾವನವೆನಿಪ ಸೀತಾರಾಮ ಕಥನವನು ||
ಮೆರೆವ ನೈಮಿಷವನದಿ ಮೌನಿಗ |
ಳರಸನಾಗಿಹ ಸೂತಮುನಿ ವಿ |
ಸ್ತರದಿ ವಿವರಿಸುತಿರ್ದ ಶೌನಕಮುಖ್ಯ ಋಷಿಗಳಿಗೆ ||10||
ದ್ವಿಪದಿ
ಒಂದು ದಿನ ಸಂಯಮಿಯ ಪದಕೆ ತಾಪಸರು |
ವಂದಿಸುತ ಭಕ್ತಿಯುತರಾಗಿ ಪೇಳಿದರು ||11||
ಫಣಿಪಾವತಾರಿ ಲಕ್ಷುಮಣನ ರಾವಣನು ||
ರಣರಂಗದಲಿ ಕೆಡಹಿದಾಶ್ಚರ್ಯವೇನು ||12||
ರಿಪುವಿಜಯ ಹನುಮಂತ ಸಂಜೀವನವನು |
ಚಪಲತ್ಪದಿಂ ತಂದು ಸೌಮಿತ್ರಿಯನ್ನು ||13||
ಕುಶಲದಿಂದೆಬ್ಬಿಸಿದ ಕಥೆಯ ಪೇಳೆನುತ |
ಬೆಸಗೊಳುವ ಮೌನಿಗಳ ಮುನಿಪ ಮನ್ನಿಸುತ ||14||
ಕಲುಷಾದ್ರಿ ಕುಲಿಶವೆಂದೆನಿಪ ರಘುಪತಿಯ |
ಲಲಿತನಾಮವ ಜಪಿಸುತೆಂದನೀ ಕಥೆಯ ||15||
ಕಂದ
ರಘುವರನುರುತರ ಚರಿತೆಯ |
ಪೊಗಳಲು ತುದಿಗಾಣದಖಿಳ ಶ್ರುತಿಶಾಸ್ತ್ರಚಯಂ |
ಮಿಗೆ ಸಾಸಿರ ಮುಖಫಣಿಪಂ |
ಗಗಣಿತಮಿನ್ನೆಂತು ಬಣ್ಣಿಸುವುದೀಕೃತಿಯಂ ||16||
ಭಾಮಿನಿ
ಖೂಳ ದಶಕಂಧರನ ಬಾಧೆಯ |
ತಾಳಲಾರದೆ ಕಮಲಜಾದಿ ಸು |
ರಾಳಿ ಲಕ್ಷ್ಮೀವರಗೆ ಬಿನ್ನವಿಸಲು ಮಹೀತಳದಿ ||
ತಾಳಿ ಮಾಯಾಮನುಜರೂಪ ಕ |
ಪಾಳು ಜನಿಸಿದ ರಾಮನಾಮದಿ |
ಕೇಳಿರೈ ದಶರಥನ ಸತಿಯುದರದೊಳಯೋಧ್ಯೆಯಲಿ ||17||
ರಾಗ ಮಧುಮಾಧವಿ, ತ್ರಿವುಡೆತಾಳ
ರಾಮ ಲಕ್ಷುಮಣಭರತ ರಿಪುಕುಲ |
ಭೀಮ ಶತ್ರುಘ್ನಾಖ್ಯ ಕುವರರು |
ಭೂಮಿಪನ ಸುದತಿತ್ರಯದೊಳುದಿ |
ಸೀ ಮಹಿಯೊಳಿರುತೀರ್ದರು ||18||
ಅನುಜ ಲಕ್ಷುಮಣ ಸಹಿತ ನಡೆತಂ |
ದಿನಕುಲಾಧಿಪನೊಲಿದು ಕೌಶಿಕ |
ಮುನಿಯ ಯಜ್ಞವ ಕಾಯ್ದ ಹಲ್ಯಾಂ |
ಗನೆಯ ಶಾಪವ ಕಳೆದನು ||19||
ಹರನ ಚಾಪವ ಮುರಿದು ಮಿಥಿಲಾ |
ಪುರದಿ ಸೀತೆಯನೊರಿಸಿ ಸಮರದಿ |
ಪರಶುರಾಮನ ಗರುವಿಕೆಯನೃಪ |
ಹರಿಸಿ ಬಂದನಯೋಧ್ಯೆಗೆ ||20||
ಜನಕನಪ್ಪಣೆಯಿಂದ ರಾಘವ |
ವನಿತೆಸಹಜರನೊಡವೆರಸಿ ಕಾ |
ನನದೊಳಿರೆ ದಶಕಂಠ ಕಪಟದಿ |
ಜನಕಜೆಯ ಕದ್ದೊದನು ||21||
ಅವನಿಜಾತೆಯ ಕಾಣದಳಲುತ |
ರವಿಕುಲೋದ್ಭವರೈದಿ ಮತ್ತಾ |
ಪವನಜನ ದೆಸೆಯಿಂದ ವಾನರ |
ನಿವಹವೆರಸಿದರೆಂದನು ||22||
ವಾರ್ಧಕ
ಶ್ರೀರಾಮನಪ್ಪಣೆಯೊಳವನಿಜೆಯನರಸುತ ಸ |
ಮೀರಜಂ ಪೋಗಿ ಸಾಗರವನುತ್ತರಸಿ ಸೀ |
ತಾರಮಣಿಯಂ ಕಂಡು ಲಂಕೆಗೆ ಧನಂಜಯನ ಪೊಗಿಸಿ ಬಂದಾ ವಾರ್ತೆಯ |
ನೀರಜಾಕ್ಷಗೆ ಪೇಳಲೈದೆ ಜಲಧಿಯ ಕಡೆಯೊ |
ಳಾ ರಾವಣಾನುಜನ ಸಖ್ಯಮಂ ಪಡೆದಾಗ |
ವಾರಿಧಿಯ ಬಂಧಿಸಿ ವನೌಕಸಸಮೂಹವೆರದೇಳ್ತಂದನಾ ರಘುಜನು ||23||
ಭಾಮಿನಿ
ದುರುಳ ಖಳ ರಾವಣನ ಛತ್ರವ |
ಮುರಿದು ಸಂಧಿಗೆ ವಾಲಿಜನ ತಿರೆ |
ಯರಸ ಕಳುಹಿಸಲೈದೆ ಬಹು ರಕ್ಕಸರ ಸದೆಬಡಿದು ||
ಬರಲು ಕೂಡೆ ಸಮಸ್ತ ಕಪಿಬಲ |
ವೆರಸಿಲಂಕೆಯ ಮುತ್ತಿ ಚೂಣಿಯ |
ಧುರದಿ ಮಿತ್ರ ಜ್ಞಾತಿ ದೈತ್ಯರ ತರಿದರಿವರೆಂದ ||24||
ರಾಗ ಭೈರವಿ ಝಂಪೆತಾಳ
ಸುರಪಜಿತು ಮಗುಳೆ ಸಂ | ಗರದಿ ಕಪಿಸೈನ್ಯವನು ||
ಶರಜಭವಶರದಿ ಕೆಡ | ಹಿರಲು ಪವನಜನು ||25||
ಪರಮಸಂಜೀವನವ | ನುರೆ ತಂದು ರಜನಿಯೊಳು |
ಹರಿಬಲವನೆಬ್ಬಿಸಿದ | ಸುರರು ಘೇ ಯೆನಲು ||26||
ಮರುದಿವಸ ಸೌಮಿತ್ರಿ | ಧುರದೊಳತಿಕಾಯನು |
ಪರಿಹರಿಸಿ ಬಂದುಭೂ | ವರಗೆ ನಮಿಸಿದನು ||27||
ರಾಗ ಸಾಂಗತ್ಯ ರೂಪಕತಾಳ
ನಮಿಸಿದ ಸಹಜನ ತಳ್ಕೈಸಿ ರಾಮಚಂ |
ದ್ರಮನೆಂದನತಿಕಾಯನನ್ನು ||
ಸಮರದಿ ಕೊಂದೆಯ ಸೌಮಿತ್ರಿ ರಘುವಂಶ |
ಕಮಲಾಪ್ತಮಿತ್ರನು ನೀನು ||28||
ಅನುಜ ನೀ ನೆನ್ನ ಸ್ನೇಹದಿ ಬಂದು ಕಷ್ಟವ |
ನನುಭವಿಸುವದಾಯ್ತು ಬೃಹಳ |
ಜನಕ ಪೋದಳಲು ಸೀತೆಯನಗಲಿದ ಶೋಕ |
ವನವಾಸದಾಯಾಸಾದಿಗಳ ||29||
ಮರೆತ ನಾನದನೆಲ್ಲ ನಿನ್ನಾನೀಕ್ಷಿಸಿ ನಾವಿ |
ನ್ನಿರದೆ ರಾವಣನ ಸಂಹರಿಸಿ |
ತರುಣಿಯನೊಡಗೊಂಡು ತೆರಳುವ ಯತ್ನವ |
ನರಿತು ಪೇಳೆನಲೆಂದ ನಮಿಸಿ ||30||
ಧುರಧೀರನತಿಕಾಯ ಖಳನ ತೀರ್ಚಿದೆ ನಿನ್ನ |
ಕರುಣದಿ ತವ ನಾಮಂಗಳನು ||
ಸ್ಮರಿಸುವ ಜನರು ಕಷ್ಟಗಳ ಸ್ವಪ್ನದಲಿ ಕಂ |
ಡರಿಯರಿನ್ನೇನ ಪೇಳುವೆನು ||31||
ಪರಮಾತ್ಮ ನೀನೈಸೆ ಮದನಾರಿಗೆಣೆಯೆಂಬ |
ತರಣಿಜ ಹನುಮ ಮುಂತಾದ ||
ಧುರವಿಜಯರು ನಿನ್ನ ಸೇವೆಗಿರಲು ನೀ ಕ |
ರ್ಬುರನ ಕೊಲ್ಲುವದಾವ ಚೋದ್ಯ ||32||
ಭಾಮಿನಿ
ಮಾನನಿಧಿ ಲಕ್ಷುಮಣನ ಮಾತಿಗೆ |
ಜಾನಕೀಪತಿ ನುಡಿದ ಜಾಂಬವ |
ಭಾನುಸುತ ಹನುಮಾದಿ ಕಪಿವರರೆಮ್ಮ ಕಾರ್ಯದಲಿ ||
ದಾನವೇಂದ್ರನ ಸೈನ್ಯದೊಡನವ |
ಸಾನಕಂಜದೆ ಕಾದಿ ಬಳಲುವ |
ರೇನ ಪೇಳುವೆನೆಂದು ಚಿಂತಿಸಲೆಂದನಾ ರವಿಜ ||33||
ರಾಗ ಮಧುಮಾಧವಿ, ಆದಿತಾಳ
ನಳಿನಾಕ್ಷ ನಿನ್ನ ಪಾದವ ಹೊಂದಿದವರಿಗೆ |
ಬಳಲಿಕೆಯುಂಟೆ ಸಾಕುಪಚಾರವೆಮಗೆ |
ಕೊಳುಗುಳದೊಳು ನೀ ಕೋಪಿಸಿ ನಿಂತರಿದಿರಿಗೆ |
ಮುಳಿದು ನಿಲ್ಲುವರಿಲ್ಲ ಮೂರ್ಲೋಕದೊಳಗೆ ||34||
ದನುಜ ರಾವಣನ ತನ್ನಯ ತೋಳ ಮರೆಯಿಂದ |
ಅನುದಿನ ಸೆರೆಯಾಗಿಟ್ಟಸುರನಕೊಂದ ||
ಘನ ಮಹಿಮನ ಗರ್ವವಿಳುಹಿದ ಜಗದೀಶ |
ಬಣಗುದೈತ್ಯನ ನೀ ಕೊಲ್ಲುವದಾವ ಸಹಸ ||35||
ಹುರಿನೇಣಿನಲಿ ದಶಶಿರನ ಬಿಗಿದು ತನ್ನ
ತರಳನ ತೊಟ್ಟಿಲೆಡೆಯಕಟ್ಟಿದವನ ||
ಮುರಿದಾತ ನೀನೀ ರಾವಣನೆಂಬ ಖೂಳನ |
ಹರಿಬದಿ ಕೊಲಲಸಾಧ್ಯವೆ ಪೇಳ್ ಶ್ರೀರಮಣ ||36||
ವಾರ್ಧಕ
ಮಿತ್ರಸುತನಿಂತೆನಲು ಕೇಳ್ದು ವಾನರರೆಲ್ಲ |
ಮಿತ್ರಜನ ಕೋಪವೆತ್ತವನಿಜಾನನಕಂಜಿ |
ಮಿತ್ರಗೊಂದಿಸಿ ಜೀಯ ನಿನ್ನಾಜ್ಞೆಯಾದರಾ ಖಳನ ವಂಶಾವಳಿಯನು ||
ಮಿತ್ರಜನ ಬಳಿಗಟ್ಟಿ ದೇವಿಯರ ತಂದು ಭವ ||
ಮಿತ್ರ ನಿನಗೊಪ್ಪಿಸುವೆ ವೆನಲು ಸಂಗ್ರಾಮದೊಳ |
ಮಿತ್ರನಂ ಕೊಲುವೆ ನಾ ನಿಮ್ಮಯ ಸಹಾಯದಿಂ ಸಹಿಸಿ ರೋಷವನೆಂದನು ||37||
ಭಾಮಿನಿ
ಸರಸಿಜಾಂಬಕ ಸಕಲ ಕೀಶೇ |
ಶ್ವರರ ಕೋಪವ ನಿಲಿಸಿ ಶಿಬಿರಕೆ |
ತೆರಳಲಭ್ರದಿ ಕುಂಕುಮೋತ್ಸವವಾಯ್ತು ಪಶ್ಚಿಮದಿ ||
ಶರೆಯ ಸಿಕ್ಕಿದವಂಬುಜದಿ ಮಧು |
ಕರಗಳ ರ್ಕನರಸಿಮೆ ಹಿಂಗಿತು |
ತರಣಿ ವಾರಿಧಿಗಿಳಿಯೆ ತಮಮುಸುಕಿತು ಮಹೀತಳವ ||38||
ಕಂದ
ಅನುವರಕಂ ಪೋದತಿಕಾ |
ಯನ ವಾರ್ತೆಯನರಿಯದಾಗಳಾ ದಶಕಂಠಂ ||
ಅನುಮಾನದೊಳಿರಲಾಕ್ಷಣ |
ಅನುಚರನೈತಂದು ಪೇಳ್ದನಾ ಸಂಗತಿಯಂ ||39||
ರಾಗ ಮುಖಾರಿ ಏಕತಾಳ
ದಶಕಂಠ ನೀ ಕೇಳೆನ್ನ ಮಾತ | ಖಳವಂಶೋದ್ಭೂತ | ದಶಕಂಠ || ಪಲ್ಲವಿ ||
ಅತಿಕಾಯನಾಹವದ ಪರಿಯ | ನೀಕೇಳಚ್ಚರಿಯ |
ಶ್ರುತವ ಮಾಡುವೆ ದೈತ್ಯರೆರೆಯ ||
ಕ್ಷಿತಿಪಾಗ್ರಣಿ ರಘುಪತಿಯೊಳು ನಿನ್ನಯ |
ಸುತನನುವರಕಗಣಿತ ಕೌಣಪಸಂ |
ತತಿಸಹಿತಲಿ ವಸುಮತಿ ಬಿರಿವಂದದೊ |
ಳತಿ ರೋಷದಿ ಗಜರುತಲೈದಿದನೈ || ದಶಕಂಠ ||40||
ವಾನರರುಗಳ ಹೊದಪ್ಪಳಿಸಿ | ಕೋಪವೆಗ್ಗಳಿಸಿ |
ನಾನಾಕೈದುಗಳಿಂ ಪ್ರಜ್ವಲಿಸಿ ||
ಮಾನನಿಧಿಯೆ ತವ ಸೂನುವಿರೋಧಿಯ |
ಸೇನೆಯೊಳುರುಬಿದುದಾನಭಿವರ್ಣಿಸ |
ಲೇನದಮತ್ತಾ ಮಾನವರಿಂ ಕೇ |
ಳೈ ನಿನಗಾದ ಪ್ರಮಾದವನೊರವೆ || ದಶಕಂಠ ||41||
ಆ ಸೌಮಿತ್ರಿಯು ನಿಂತು ರಣದಿ | ದಿವ್ಯ ಮಾರ್ಗಣದಿ ||
ಈ ಸೈನ್ಯವ ಸಂಹರಿಸೆ ಕ್ಷಣದಿ ||
ರೋಷದಿ ನಿನ್ನಭಿಲಾಷೆಯ ಮಗನ ವಿ |
ನಾಶನಗೈದು ವಿಲಾಸದೊಳಿಹರಿ |
ನ್ನಾ ಸುಭಟರನಾವೇಶದಿ ಜೈಸುವ |
ವಾಶಿಯುಳ್ಳರಚಿತ್ತೈಸಿರಿ ಜವದಿಂ ||42||
ಭಾಮಿನಿ
ಬಸವಳಿದು ಬೆಂಡಾಗಿ ಮೈಮರೆ |
ದಸಮಬಲ ದಶಮೌಳಿ ಮಲಗಿದ |
ವಸುಧೆಯೊಳು ಮಗನಳಿದ ವಾರ್ತೆಯ ಕೇಳಿದಾಕ್ಷಣವೆ ||
ಅಸುರರಂಜಿದರಿಕ್ಕಲದಿ ರ |
ಕ್ಕಸಕುಲಾಧಿಪನೆಚ್ಚರಿತು ದು |
ಖ್ಖಿಸಿದನಡಿಗಡಿಗಳುತ ತನ್ನಾತ್ಮಜನ ನೆನೆನೆನೆದು ||43||
ರಾಗ ನೀಲಾಂಬರಿ, ರೂಪಕತಾಳ
ಹ್ಯಾಗೆ ಜೀವಿಸಲೆನ್ನ ತನುಜಾನ ಮರೆತಿನ್ನು |
ರಾಘವನ ವಶವಾದಳೆ ಜಯಲಕ್ಷ್ಮಿಯು ತಾನು || ಹ್ಯಾಗೆ || || ಪಲ್ಲವಿ ||
ಸ್ಮರಕೋಟಿಲಾವಣ್ಯ ಲಲಿತಕೋಮಲಕಾಯ |
ಸಿರಿವಂತ ರಿಪುವಂಶಾಂತಕನತಿಕಾಯ ||
ಧುರಧೀರ ಮಮಜೀವರತ್ನ ಮೋಹದ ಕಂದ |
ಮರಣವ ಪಡೆದನೆ ಸದ್ಗುಣವಂದ ||44||
ತಂಗಿಯ ಸವಿಮಾತು ಕುಲಕೆ ಕೇಡಾಯ್ತಲ್ಲ |
ಅಂಗಜಹರನೆನ್ನ ಕೈ ಬಿಟ್ಟನಲ್ಲ ||
ಸಂಗರದಲಿ ವೈರಿಗಳನು ಜೈಸುವ ಪಂಥ |
ಹಿಂಗಿತಿಂದಿನೊಳು ಪೇಳುವದೇನೇಕಾಂತ ||45||
ತೃಣಕೆಣಿಯೆನಿಪ ಮಾನವರು ಮರ್ಕಟರಿಂತು |
ಹೊಣಿಕೆಯಿಂದಲಿ ಘೋರ ದೈತ್ಯರೊಳಾಂತು ||
ರಣದಿ ಕೊಲ್ಲುವದಾದ ಬಳಿಕಾವರೊಡನಿನ್ನು |
ಸೆಣಸಿ ನಾನೆಂತು ಜೈಸುವೆನೆಂದ ಖಳನು ||46||
ಕಂದ
ರಾವಣನಿಂತೆಂದಳುವುದ |
ನಾ ವನಿತಾರನ್ನೆ ಮಯತನುಜೆ ಕೇಳ್ದಾಗಳ್ ||
ಭಾವದಿ ಸಂತಾಪವ ತಾ |
ಳ್ದಾವೀರನ ಬಳಿಗೆ ಬಂದು ದುಃಖಿಸುತೆಂದಳ್ ||47||
ರಾಗ ಸಾವೇರಿ ಆದಿತಾಳ
ಅರಸ ಕೇಳವನಿಜೆಯ | ನೀ ತಂದು ಕುಲಕೆ | ಗರಳವನೆರದೆ ಪ್ರಿಯ ||
ಶರಮೇಶ ರಘುಪತಿಯ | ಸೇರ್ದಾಗಲಂಕಾ | ಸಿರಿ ಹಿಂಗಿದಳು ನಿಶ್ಚಯ ||48||
ನಾವೆಲ್ಲರಾಡಿದ ಮಾತು | ಪೂರ್ವದಿ ನಿನ್ನ | ಭಾವಕೆ ಪುಸಿಯಾಯಿತು ||
ದೇವ ಶ್ರೀರಘುಜನೊಳು | ಧಾರುಣಿಯೊಳುರುಬಿ | ಜೀವಿಪರುಂಟೆ ನೀ ಪೇಳು ||49||
ರಾಮ ತಾ ಮನುಜನಲ್ಲ | ಶ್ರೀ ವಿಷ್ಣು ದಿವಿಜಾ | ರಾ ಮಹಾ ಕಪಿಗಳೆಲ್ಲ |
ಭೂಮಿ ಭಾರವನಿಳುಹ | ಲಿಂತುದಿಸಿಹ | ರೀ ಮಾತಿಗಿಲ್ಲ ಸಂದೇಹ ||50||
ಸಮರದಿ ದೈತ್ಯರೆಲ್ಲರು | ಸಂದರು ಸುಪರಾ | ಕ್ರಮಿ ನಿನ್ನ ವಧೆಗವರು ||
ಸಮಯನೀಕ್ಷಿಪರಿನ್ನು | ನೀ ಲಾಲಿಸೆನ್ನ | ರಮಣಾ ನಾನೆಂಬ ಮಾತನು ||51||
ಮಹಿಜೆಯ ರಾಘವಗಿಂದು | ಒಪ್ಪಿಸಿ ನಿನ್ನ | ಸಹಜಾತ ಸಹಿತ ಬಂದು |
ವಿಹಿತದಿ ಲಂಕೆಯನಾಳು | ಶರಗೊಡ್ಡಿ ಬೇಡು | ತಿಹೆನೆನ್ನ ನುಡಿಯ ಕೇಳು ||52||
ಭಾಮಿನಿ
ಅಳುಕವನೆ ಶತಕೋಟಿ ಕಲ್ಪದಿ |
ಹಳಚಿದರು ನಿನಗಸುರರಿಪು ನೀ |
ನುಳುಹಿಸೆನ್ನಯ ವಾಲೆಭಾಗ್ಯವ ಮಾಣುಮೂರ್ಖತೆಯ ||
ಉಳಿದ ಪುತ್ರ ಸುಮಿತ್ರ ಬಾಂಧವ |
ಬಳಗವೆರದಚ್ಚುತನ ಮರೆ ಹೊಗು |
ಕಳಿ ವಿರೋಧವ ಪರಕೆ ಹಿತನಾಗೆನ್ನಲವನೆಂದ ||53||
ರಾಗ ಕಾಂಬೋದಿ ಝಂಪೆತಾಳ
ಅರಸಿ ನೀನೆನ್ನ ಮೂಢಾತ್ಮನೆನಬೇಡೀಗ |
ಧರೆಯ ಭಾರವ ಕಳೆವ ನೆವದಿ |
ಹರಿ ಮನುಜರೂಪಿನೊಳು ಉದಿಸಿರುವನೆಂದು ನಾ |
ನರಿಯದವನಲ್ಲ ಕೇಳ ಮಡದಿ ||54||
ಇಂದಿರೆಯ ನೆವದೊಳೀ ಭವವ ಪರಿಹರಿಸಿ ಗೋ |
ವಿಂದ ಮುಕುತಿಯನೀವೆನೆಂದು |
ಹಿಂದೆ ತಾನೆನಗೆ ಪೇಳಿದ ಮಾತಿಗಾಗಿ ನಾ |
ತಂದೆ ಜಾನಕಿಯ ರಮೆಯೆಂದು ||55||
ಪುತ್ರ ಮಿತ್ರಾದಿ ಬಂಧುನಿಕಾಯ ಸಹಿತಾಬ್ಜ |
ಪತ್ರಾಕ್ಷನೊಡನೆ ಸಮರದೊಳು |
ಶತ್ರುತ್ವದಿಂದಿಳಿದು ಪಡವೆ ಕೈವಲ್ಯವ ವಿ |
ಚಿತ್ರವಲ್ಲಿದು ರಮಣಿಕೇಳು ||56||
ನಾ ಸಮರಕಂಜಿ ಸೀತೆಯ ರಾಮಗೊಪ್ಪಿಸಿ ವಿ |
ಭೀಷಣ ಸಮೇತ ಲಂಕೆಯನು ||
ಪೋಷಿಸುವನಲ್ಲ ಸಂಗರದೊಳೀ ದೇಹವ ರ |
ಮೇಶನಡಿಗೆ ಸಮರ್ಪಿಸುವೆನು ||57||
ಜನವ ಮೆಚ್ಚಿಸಲಾಗಿ ರಣದಿ ಪೋದವರಿಗಾ |
ಗಿನಿತು ಮರುಗುವೆನಿದಾನವಿದು |
ವನಿತೆ ಬಿಡು ಬಯಲ ಭ್ರಾಂತಿಯನೀಗ ಹರಿಪದವ |
ನೆನೆಯೆಂದು ಕೈ ಪಿಡಿದನೊಲಿದು ||58||
ವಾರ್ಧಕ
ಧುರದಿ ರಾಮಗೆನಾಳೆ ತೋರಬೇಕೆನ್ನ ಕೈ |
ಗುರಿಯನೆಂದೆನುತಲಾಯುಧ ಶಾಲೆಯಂ ಪೊಕ್ಕು |
ವರ ಕೈದುಗಳ ಮುಚ್ಚಳವ ತೆಗೆದು ನವಗಂಧ ಸುಮಧೂಪದೀಪದಿಂದ ||
ಪರಶಿವೆಯ ಬೀಜಮಂತ್ರಗಳನುಚ್ಚರಿಸಿ ದಶ |
ಶಿರನಾಗಮೋಕ್ತದಿಂ ಪೂಜಿಸಿ ಸುಭಕ್ಷ ರಸ |
ಭರಿತ ಫಲತಾಂಬೂಲಗಳ ನಿವೇದಿಸಿ ಸುಳಿದನಾರತಿಯ ವಾದ್ಯರವದಿ ||59||
ಕಂದ
ಶಕ್ತಿಯನಿಂತರ್ಚಿಸಿ ಫಲ |
ರಕ್ತಗಳಿಂ ಖೂಳ ಭೂತನಿವಹಕ ಬಲೆಯಂ ||
ಯುಕ್ತದಿ ಹರಹಿಸಿ ಭಯ ರಸ |
ಭಕ್ತಿಗಳಿಂನಿಂದು ನುತಿಸಿದಂ ಚಂಡಿಕೆಯಂ ||60||
ಭಾಮಿನಿ
ಜಯ ಮಹೇಶ್ವರಿ ವಿಶ್ವನಾಯಕಿ |
ಜಯ ಸಮಸ್ತ ಫಲಪ್ರದಾಯಕಿ |
ಜಯ ಭವಾನಿ ಸದಾಶಿವಾತ್ಮಕಿ ಜಯ ಶಶಾಂಕಮುಖಿ ||
ಜಯ ನಮೋ ಹರ್ಯಕ್ಷವಾಹಿನಿ |
ಜಯ ಪರಬ್ರಹ್ಮಸ್ವರೂಪಿಣಿ ||
ಜಯ ಸುರಾಸುರ ವರಕುಟುಂಬಿನಿ ಜಯ ಜಗಜ್ಜನನಿ ||61||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಈ ತೆರದಿ ನುತಿಗೈದು ಸಿಂಹ ವ | ರೂಥಿನಿಗೆ ಕೈಮುಗಿವುತಾ ರಘು |
ನಾಥನೊಳು ಕಾದುವ ಮಹಾ ಸ | ತ್ವಾತಿಶಯವ ||62||
ಕರುಣಿಪುದು ತನಗೆನುತ ಬಲ ಬಂ | ದೆರಗಿದರ್ಭಾಸನದಿ ರಕ್ಕಸ |
ರೆರೆಯ ಮೌನದಿ ಕುಳಿತ ರಜನೀ | ಚರರು ಸಹಿತ ||63||
ದೆಸೆದೆಸೆಗೆ ಕೈದುಗಳ ಭಾಸುರ | ವೆಸೆಯಲಡಗಿತು ತಿಮಿರಕಮಲ |
ಪ್ರಸರ ವಿಕಸಿತವಾಗಲುದಿಸಿದ | ಬಿಸಜಮಿತ್ರ ||64||
ವಾರ್ಧಕ
ಉದಯಕಾಲದೊಳೆದ್ದು ದಶಕಂಠ ವಿಮಲ ತೋ |
ಯದಿ ಮಿಂದು ಹಂಸಗರ್ಘ್ಯವ ಸೂಸಿ ತನ್ನ ಹ |
ತ್ಪದುಮಪೀಠದಿ ಶಿವನನಿರಿಸಿ ಮಾನಸದೊಳರ್ಚಿಸಿ ಪಿತಾಮಹನನೆನೆದು |
ಮುದದಿ ಗುರುವಿಗೆ ನಮಿಸಿ ಭೂಷಣವ ತೊಟ್ಟು ವಾ |
ದ್ಯದ ನಿನದ ಗೀತ ನರ್ತನ ಪೊಗಳಿಕೆಗಳಿಂದ |
ಮದದಮೋಡಿಯೊಳೋಲಗಕೆ ಬಂದು ಕುಳಿತ ಸುರುಚಿರ ಸಿಂಹವಿಷ್ಟರದೊಳು ||65||
ಭಾಮಿನಿ
ದುರುಳ ಕುಂಭ ನಿಕುಂಭ ಸುಮನಸ |
ರೆರೆಯ ರಿಪುವರ ವೈರಿ ಕಡು ಭೀ |
ಕರದ ಮಕರಾಕ್ಷಾದಿ ರಕ್ಕಸ ನಿವಹವೈತಂದು ||
ಸುರುಚಿರದ ಖಂಡೆಯವ ಝಡಿಯುತ |
ಬರೆದಶಾಸ್ಯನ ಸಮ್ಮುಖದೊಳು |
ಬ್ಬಿರಿದು ಜೀಯೆನುತಿರಲು ರಾವಣನೆಂದನವದಿರೊಳು ||66||
Leave A Comment