ಭಾಮಿನಿ

ನಿನ್ನ ಹರಿಬವು ಸಾಕೆನಗೆ ನಾ |
ನಿನ್ನ ಕೊಲುವವನಲ್ಲ ರವಿಕುಲ |
ರನ್ನನಾಣೆ ನಿಧಾನವಿದು ಶ್ರೀರಾಮಚಂದ್ರಮನ ||
ಸನ್ನಿಧಿಗೆ ನೀ ಪೋಗೆನಲು ಶತ |
ಮನ್ಯು ಮುಂತಾದಮರರನಿಲಜ |
ನನ್ನು ದೂರಿದರಳಿದ ದುಷ್ಟನನೆಬ್ಬಿಸಿದನೆಂದು ||124||

ರಾಗ ಕೇದಾರಗೌಳ, ಅಷ್ಟತಾಳ

ಮರುತಜನಿಂತೆಂದು  ರಣಭೂಮಿಯೊಳು ಮಲ | ಗಿರುವ ಸೌಮಿತ್ರಿಯನು ||
ಪರಿಕಿಸಿ ಬೆರಗುಪಟ್ಟುರುತರಶೋಕಸಾ | ಗರದೊಳು ಮುಳುಗಿದನು ||125||

ಈ ಮಹಿಮನ ಕೆಡಹಿದ ದುಷ್ಟ ಖಳನ ನಿ | ರ್ನಾಮವ ಗೈವುದಕೆ |
ರಾಮಸುಧಾಕರ ಎನಗೆ ನೇಮಿಸಲೊಲ್ಲ | ನಾ ಮಾಳ್ಪುದೇನಿದಕೆ  ||126||

ಸರಸಿಜಭವಕತಾಂತರ ಪಿಡಿತಂದು ಸ | ಚ್ಚರಿತನ ಜೀವವನ್ನು ||
ಬರಿಸುವೆನೆಂದು ಬೊಬ್ಬಿರಿಯಲಂಜಿದರು ಆ | ತರಣಿಜರೇನೆಂಬೆನು ||127||

ಯಾಕೆ ನೀ ಮರುಳಾದೆ ಶೇಷಾವತಾರಿಯ | ನಾ ಖೂಳ ದಶವದನ ||
ತಾ ಕೊಲ್ಲಲರಿಯ ನಿಧಾನಿಸೆಂದುದು ಶೌರ್ಯೋ | ದ್ರೇಕದಂಬರ ವಚನ ||128||

ಗಗನ ವಾಣಿಯ ಕೇಳುತಾ ಸೌಮಿತ್ರಯ | ಬಗೆಬಗೆ ಪರಿಕಿಸುತ ||
ಮಗುಳೆ ಪುಷ್ಕರ ವಾಕ್ಯ ಪುಸಿಬಾರದೆನುತ ವಿ | ಶುಗಜಾತ ಧತಿಗೊಳುತ ||129||

ಭಾಮಿನಿ

ಧರಣಿಜಾಧವನಿವನನೀಕ್ಷಿಸಿ |
ಧುರವನುಳಿದಳಲುವ ದಶಾಸ್ಯನು ||
ಉರುಬಿ ಕಪಿಗಳ ಕೊಲುವನಾತನ ನಾ ತುಡುಕಲೆನ್ನ ||
ಕರದಿ ಹರಣವ ಬಿಡುವನಸುರನ |
ನರಪತಿಯು ಗಲಿದು ಸೌಮಿತ್ರಿಯ |
ಪರಕಿಸಲಿ ತಾನೆಂದು ಮರೆಯೊಳಗಿಟ್ಟ ಲಕ್ಷುಮಣನ ||130||

ರಾಗ ಕಾಂಭೋಜಿ ಝಂಪೆತಾಳ

ಇತ್ತಲಾ ದಶಕಂಠ ಸುರುಚಿರದ ಸ್ಯಂದನವ |
ನತ್ಯಂತ ತೋಷದಿಂದಡರಿ ||
ಮುತ್ತಿದ ವನೌಕಸರ ದನುಜ ಬಲ ಸಹಿತ ಮೊಳ |
ಗುತ್ತಲೋಚನದಿ ಕಿಡಿಗೆದರಿ ||131||

ದಾನವರಿಗೆಂದ – ಲಕ್ಷುಮಣನೊಡನೆ ಕೌಸಲಾ |
ಸೂನುವನು ಕೆಡಹಿ ಕೀಶರನು |
ಹಾನಿ ಗೈದಿರದೆ ಸೀತೆಯನೊಲಿಸಲಿದು ಸಮಯ |
ವೇನೆಂಬೆನೆನುತ ರಾವಣನು ||132||

ಹರಿಬಲವ  ತುಡುಕಲವನೀಶ ಕಂಡತಿ ರೋಷ |
ವೆರೆದು ಕಾರ್ಮುಕವ ಝೇಗೈದು ||
ಹರಿಬಕನುವಾಗಲನಿಲಜ ಕಾಣುತಸುರಾರಿ |
ಗೆರಗುತಿಂತೆಂದು ಕೈ ಮುಗಿದು ||133||

ಖೂಳ ರಾವಣ ರಥಾರೂಢನಾಗಿರುವ ಕಾ |
ಲಾಳಿಂದನೀವವನೊಳಿಂದು |
ಕಾಳಗಕೆ ತೆರಳಬಾರದು ಯೆನ್ನ ಹೆಗಲೊಳು ಕ |
ಪಾಳುನೀವ್ ಕುಳಿತು ಕಾದುವದು ||134||

ಎನಲು ನಸುನಗುತ ಮುಖ್ಯಪ್ರಾಣ ನಿನ್ನ ನುಡಿ |
ಗನುಮಾನವುಂಟೆ ಕೇಳಿದನು |
ದನುಜಾರಿಪತಿಗೆ ಹುಲುರಥವೆಮಗೆ ವಜ್ರ ಸ್ಯಂ |
ದನವು ನೀನೆನುತಲಡರಿದನು ||135||

ಭಾಮಿನಿ

ತುರಗ ಸಾರಥಿ ಗಾಲಿ ಸತ್ತಿಗೆ |
ವರ ಪತಾಕಧ್ವಜಗಳಿಂದಲಿ |
ಮೆರೆವುದಸುರ ವರೂಥವದಕೆ ಸಹಸ್ರ ಮಡಿಯಾಗಿ ||
ಮರುತಸಂಭವ ವಜ್ರರಥ ವಿ |
ಸ್ತರ ವಿಚಿತ್ರವೇನೇನ ಪೊಗುಳುವೆ |
ಶರೆಯ ಪಿಡಿದನು ಸೇವೆಯಲಿ ರಘುಸಾರ್ವಭೌಮಕನ ||136||

ವಾರ್ಧಕ

ಶರಜಾಪ್ತವಂಶ ರತ್ನಾಕರ ಹಿಮಾಂಶುಕುಜ |
ಚರಸಮೂಹದೊಳೈದೆ ವಿಬುಧಾರಿಯೊಡನೆ ಸಂ |
ಗರಕೆ ಜೀವ ನಜಸಖ ಭಾಸುರದಿ ಹನುಮ ವಾಹಕವಾಗಿ ಬರಲೀಕ್ಷಿಸಿ |
ಅರರೆ ಜತ ಭಾರ್ಗವ ನಿಶಾಟಕುಲ ರವಿಜನೇಳ್ |
ತರುವ ಕಿಡಿ ತಿವಿಯೆಂದು ಖಳರುಸ್ವರ್ಭಾನು ಮಗ |
ಧರಗಡರುವಂತೆ ಸಾಕೇತಪತಿಗೌಚಿ ತುಳುಕಿದರಂಬಿನಂಬುಧಿಯನು ||137||

ಭಾಮಿನಿ

ದನುಜಸೈನ್ಯವನೊಂದು ವಿಶಿಖದಿ |
ಜನಪ ರಾಘವನಿರಿದು ಕೆಡಹಲು |
ದನುಜಪತಿ ಸಿಡಿಲಂತೆ ಬೊಬ್ಬಿರಿವುತ ಶರಾಸನದಿ ||
ಮೊನೆಗಣಿಯ ತೆಗದೆಚ್ಚಿ ಹನುಮನ |
ತನುವಕೀಳಿಸಲೈದೆ ಖಳಕುಲ |
ವನದಿ ಕುಂಭೋದ್ಭವನುಸೂರ್ದನಿಶಾಚರೇಂದ್ರನೊಳು ||138||

ರಾಗ ಪಂಚಾಗತಿ, ಮಟ್ಟೆತಾಳ

ದುರುಳ ಕೇಳೊ ದೇವ ದನುಜ ನಾಗ ನರರನು |
ಶರೆಯ ಪಿಡಿದ ಸಹಸಿ ನೀನು ಮೌನಿರೂಪನು ||
ಧರಿಸಿ ಕಳವಿನಿಂದಲೈದಿ ನಮ್ಮ ಸತಿಯನು |
ತರುವಹಾವ ಧರ್ಮವೆನಲು ದೈತ್ಯನೊರೆದನು ||139|

ದಢವನರಿಯದೀಗ ಕಳ್ಳನೆನದಿರೆನ್ನೆನು |
ಒಡಲಿನೊಳಗಜಾಂಡ ಮುಖ್ಯ ಸಕಲ ಜಗವನು ||
ಅಡಗಿಸಿಟ್ಟ ಚೋರ ನೀನು ರಣದಿ ನಿನ್ನನು |
ಹೊಡೆದು ಭಕ್ಷಿಸುವೆನೆನುತ್ತ ಗಜರುತೆಂದನು ||140||

ಬೇಡ ನಿನಗೆ ನಮ್ಮೊಳಹಿತ ಸಾರ್ದೆನೀಕ್ಷಣ |
ರೂಢಿಸುತೆಯನೆಮಗೆ ಕೊಟ್ಟು ಶರಮೆಯರಸನ ||
ಕೂಡಿಕೊಂಡು ರಾಜ್ಯವಾಳು ಲಕ್ಷುಮಣಾಖ್ಯನ |
ನೋಡುವಂತೆ ನಿನ್ನ ನೋಳ್ಪೆ ನೆಲವೊ ರಾವಣ ||141||

ಎನಲು ರಾಮ ನಿನ್ನ ಹರಿಬಕಾನು ಬೆದರೆನು |
ವಿನಯದಿಂದ ಬಿಡುವನಲ್ಲ ಯಿಳೆಯ ಮಗಳನು |
ಅನುಜ ಸತಿಸುತಾದಿ ರಾಜ್ಯದಾಸೆ ತೊರೆದೆನು |
ತನುವನೀಯದನಕ ನಿನಗೆ ಶರಣನಾಗೆನು ||142||

ಕದನ ಕೇಳಿಯಲ್ಲಿ ಕುಹಕವೇಕೆ ಬಾಣವ |
ಬೆದರದೈದಿಸೆನುತಲೆಚ್ಚನಖಿಳವಿಶಿಖವ ||
ಬದಲು ಶರದಿ ಪಗೆಯ ಸರಳ ಮುರಿದು ಚಾಪವ |
ವದರಿಸುತ್ತ ತಿರುವಿಗೇರಿಸಿದ ಮಹಾಸ್ತ್ರವ ||143||

ವಾರ್ಧಕ

ಬೆರಗಾದರನಿಮಿಷರು ಬೆದರಿದಂ ಕೂರ್ಮ ಕ |
ರ್ಬುರಪ್ರಭವರಾಹವದ ಘರ್ಜನೆಗೆ ವಾನರರ ||
ಹರಿನಿನಾದದಿ ಮೊಳಗಲೆದೆಬಿರಿದು ಕೆಡೆದವರಿಪತ್ತಿ ಗಜತುರಗಂಗಳು ||
ದುರುಳನಂ ವಾಮನಯನದಿ ನೋಡಿ ಜಿತಪರಶು |
ಧರ ಮಹಾಸ್ತ್ರವನೆಸೆಯಲಾ ರಾಮ ಶರದುರಿಗಾ |
ಪೊರಳಿದಂ ಗೋಪಾಲ ಬೌದ್ಧರೂಪವ ತಾಳ್ದ ಕಲಿ ದಶಗ್ರೀವನಂದು ||144||

ಸರಳೈದಿ ಚಾಪ ರಥ ಸೂತಹಯ ಛತ್ರ ಚಾ  |
ಮರ ಮಕುಟ ಹಾರಾದಿಗಳ ಕಡಿಯಲಾ |
ದುರುಳ ನಿರ್ಭೂಷಣದಿ ನಿಂತ ಕಾಮನ ಗರಡಿಯಂ ಗೆಲೆದ ಯೋಗಿಯಂತೆ |
ಸುರತರುಣಿಯರು ನಾಚುತಿರದೆ ವದನಕೆ ಸೆರಗ |
ಮರೆಗೈದು ತೆರಳಲು ದಿವೌಕಸರ್ ಕೈಯ ಚ |
ಪ್ಪರಿಸಿ ನಗುತಿರಲಾಗ ರಾಘವಂ ಧರೆಗಿಳಿದು ಕೂರ್ಗಣಿಯ ಕರೆದೆಂದನು ||145||

ಭಾಮಿನಿ

ಅಧಮನೇಕೆ ದಿಗಂಬರದಿ ನ |
ಮ್ಮಿದಿರು ನಿಂತಿಹ ಪೋಗಲೀ ಖಳ |
ಬದುಕಲಿಂದಿಗೆ ವಿಶಿಖ ವಾಹನ ವನನವರ್ಜಿತರ ||
ವಧಿಸಲಾಗದು ನೋಡಲೀತನ |
ಸುದತಿಯಲ್ಲೆಗೆ ನೂಕೆನಲು ಕಿಡಿ |
ಗೆದರಿ ದೈತ್ಯನನಟ್ಟಿ ಹೊಕ್ಕುದುಹರಿಯ ಮೂಡಿಗೆಯ ||146||

ರಾಗ ಶಂಕರಾಭರಣ, ಅಷ್ಟತಾಳ

ಏನೆಂಬೆ ನಾನಿನ್ನೇನೆಂಬೆ  || ಪಲ್ಲವಿ ||

ಏನೆಂಬೆ ದಶಕಂಠ ರಣದೊಳಾ ದಿವಸ |
ಮಾನವ ಕಳಕೊಂಡು ಮರಳುವ ಸೊಗಸ  || ಅನುಪಲ್ಲವಿ ||

ಕೆದರಿದ ಕಬರಿಯ ಮಂಡೆಗಳಿಂದ |
ವದನ ಭೀಕರದ ಕೆಂಗಣ್ಣುಗಳಿಂದ |
ರುಧಿರಮಾಂಸಗಳು ಮೆತ್ತಿದ ಕಾಯದಿಂದಿ |
ಅದುಭುತ ಬೌದ್ಧರೂಪವ ತಾಳಿ ಬಂದ ||147||

ರಾಮನ ಸಮರವ ನೆನವುತ ಬೆಚ್ಚಿ |
ತಾ ಮನದೊಳು ರೋಷಿಸುತ ಔಡುಗಚ್ಚಿ |
ವಾಮಕರದೊಳಂಕಮೂಲವ ಮುಚ್ಚಿ |
ಭೂಮಿಯ ನೋಡುತ ಲೈದಿದನಾಚಿ ||148||

ಕೇರಿಕೇರಿಗಳೊಳ್ಸಂಚರಿಸುವ ಜನರು |
ಮಾರಿ ಬಂತೆನ್ನುತ ನಿಲ್ಲದೋಡಿದರು ||
ಆರತಿ ಪಿಡಿದಿದಿರ್ಗೊಳುವ ನಾರಿಯರು |
ಮೋರೆಗೆ ಮಸುಕಿಕ್ಕಿ ಮರಳಿ ಹಿಂಗಿದರು ||149||

ಪೊಗರು ಜೌವನದ ಪೆಂಗಳು ನಾಚಿಕೊಂಡು |
ನಗುತ ಮಾತಾಡಿದರೇನಿದು, ಭಂಡು |
ಮುಗುಧೆಯರಂಜಬೇಡೀತನ ಕಂಡು |
ಜಗವನಿಕ್ಕಿಸಿರೆಂದಚ್ಚರಿಗೊಂಡು ||150||

ಖೂಳ ನಿರ್ವಸನದೊಳೈದುವದನ್ನು |
ನಾಳಿಕ ಬಂದು ಕಂಡರು ಲಜ್ಜೆಯನ್ನು |
ತಾಳಿ ಮತ್ತಪರ ರತ್ನಾಕರವನ್ನು |
ಬೀಳಲಾ ದೈತ್ಯನೈದಿದ ಮನೆಯನ್ನು ||151||

ಭಾಮಿನಿ

ಹೊಳಲ ಹೊರಗೈತರಲು ಕಾಣುತ |
ಖಳರು ಮುತ್ತಿದರಿಕ್ಕೆಲದಿ ದಶ |
ಗಳಗೆ ವಸನವನುಡಿಸಿ ಸರ್ವಾಭರಣವಿಡಿಸಿದರು ||
ಕಳಕಳಿಸಿ ಮಂಡೋದರಿಯು ಬಂ |
ದಳುತಲೊದಳು ನಿನ್ನ ಜೀವವ |
ನುಳುಹಿ ರಾಘವ ಬಿಟ್ಟುದುದೆಸಾಕೆನುತ ವಲ್ಲಭನ ||152||

ರಾಗ ಘಂಟಾರವ, ಝಂಪೆತಾಳ

ರಜನಿಯೊಳಗಿತ್ತ ಕೈದೀವಿಗೆಯ ಬೆಳಕಿನಲಿ |
ಕುಜಚರರು ಮಡಿಸಿರ್ಪ ಸಮರ ಭೂಮಿಯಲಿ ||
ಅಜಸುತಸಮೀರಜ ಸುಷೇಣರುಗಳೊಗ್ಗಿನಲಿ |
ಸುಜನ ಸುರ ಭೂಜನೈತಂದು ದುಗುಡದಲಿ ||153||

ಕೆನೆ ರಕುತ ಕರುಳು ಮಾಂಸಗಳುಗಿದು ಮಲಗಿರುವ |
ದಿನಪಜನ ಕಾಣುತ್ತ ತೊಳಲಿ ರಘುಪ್ರಭವ ||
ವನದೊಳಗೆ ಕಂಡ ಬಿಡಯಕೆ ಬಂದು ನೀ ತನುವ |
ಎನಗೊಪ್ಪಿಸಿದೆಯ ಪ್ರಭಾಕರಾತ್ಮಭವ ||154||

ಎನುತ ವಾಲಿಜಗವಯ ನೀಲಾದಿ ಕಪಿಗಳನು |
ಜನಪಾಲ ಕಂಡು ಮರೆಹೊಕ್ಕ ಶರಣರನು |
ದನುಜನೊಳು ರಾಮ ಕೊಲಿಸಿದನೆಂಬ ಕೀರ್ತಿಯನು |
ವನಿತೆಗೋಸುಗಪಡೆದೆನೆಂದು ಮರುಗಿದನು ||155||

ಭಾಮಿನಿ

ಕೆಡೆದ ಕಪಿಗಳ ನೋಡಿ ಶೋಕದ |
ಕಡಲಿನಲಿ ತೊಳತೊಳಲಿ ರಘುವರ |
ನಡೆಯುತನಿತರೊಳೀಕ್ಷಿಸಿದ | ಬಿದ್ದಿರ್ದ ಲಕ್ಷುಮಣನ ||
ಒಡನೆ ರಾಘವ ನೆಲೆಯ ಕಾಣದ |
ಮಡುವ ಧುಮುಕಿದ ನಿಜವನರಿಯದೆ |
ಹುಡಿ ಹೊರಳಿ ಬಿಸುಸುಯ್ದನನುಜನ ತನುವ ತಳ್ಕೈಸಿ ||156||

ರಾಗ ನೀಲಾಂಬರಿ, ಆದಿತಾಳ

ಅನುಜ ಸೌಮಿತ್ರೇಯ ವೀರ | ಮನಸಿಜ ಶೃಂಗಾರ ||
ದನುಜನಾಗಾಸಿಂಹಾಕಾರ | ವನಧಿಸಮ ಗಂಭೀರ ||157||

ಸಮರಶೂರ ಸುಗುಣಸಾಂದ್ರ | ಕಮನೀಯನಾಗೇಂದ್ರ ||
ದ್ಯುಮಣಿವಂಶಜಲಧಿಚಂದ್ರ | ನಮಿತನಿರ್ಜರೇಂದ್ರ ||158||

ಕರುಣದಿ ಕಂದೆರೆದು ನೋಡು | ಹರುಷದಿ ಮಾತಾಡು ||
ಸರಳಾಸನಕೆ ಶರವ ಪೂಡು | ದುರುಳನೊಳ್ ಕೈಗೂಡು  ||159||

ದುಷ್ಟಾ ನಾನೆನ್ನೊಡನ್ಯಾಕೆಂದು | ಶ್ರೇಷ್ಠನೀನೈತಂದು ||
ಅಟ್ಟಾರಣ್ಯದಲ್ಲಿ ನೊಂದು | ದೆಷ್ಟೆಂಬೆನಾನಿಂದು ||160||

ಭಾಮಿನಿ

ಶಿವಶಿವಾ ರವಿಕುಲದಿ ನಾ ಸಂ |
ಭವಿಸಿ ರಾಜ್ಯವ ನುಳಿದು ವಿಪಿನದಿ |
ಯುವತಿ ಅನುಜರು ಸಹಿತ ತೊಳಲಿದೆ ಶಬರರಂದದಲಿ ||
ದಿವಿಜವೈರಿಗೆ ಸತಿಯನಿತ್ತಾ |
ಹವದಿ ತಮ್ಮನ ಕಳೆದೆನಕಟಾ |
ಭುವನದಲಿ ತನ್ನಂತೆ ಪಾಪಾತ್ಮಕರದಾರೆಂದ ||161||

ಅನುಜರಿಗೆ ಮಜ್ಜನನಿಯರಿಗಾ |
ನನವ ಕಾಣಿಸಲಾವ ಬಗೆಯಲಿ |
ಮನುಜ ಸಂಸಾರಾಂಬುಧಿಯನುತ್ತರಿಸಲಿನ್ನೆಂತು ||
ಎನಗೆ ಜೀವನ ಹನುಮ ತಾನಿರಲ |
ನುವರದಿ ಸಂಭವಿಸಿತಪಜಂು |
ವೆನುತ ದುಃಖಿಸಲಾಶುಗಾತ್ಮಜನೆಂದ ಕೈಮುಗಿದು ||162||

ರಾಗ ಕೇತಾರಗೌಳ, ಅಷ್ಟತಾಳ

ಲಾಲಿಸೈ ರಘುವಂಶ ಲಲಾಮ |
ನೀಲಕಂಧರ ಮಿತ್ರ ವಿನುತಸುತ್ರಾಮ   || ಪಲ್ಲವಿ ||

ಖಳನಾಗಕುಲ ನೀಲಗಳ ಪ್ರಿಯ ಮನುಜರಂ |
ತಳಲುವದೇಕೆ ಶ್ರೀನಿಳೆಯ ನಿನ್ನನುಜಾತ |
ನಿಳೆಗುರುಳಲು ಕಾಣುತ | ನಾ ದುಃಖಿಸ |
ಲಳೆಯಲಿಲ್ಲವೆನುತ | ತಿಳಿಸಿತಭ್ರ |
ದೊಳು ವಾಣಿಯದರಿಂದ | ತಳೆದೆ ಧೈರ್ಯವನೆಂದ || ಲಾಲಿಸೈ ||163||

ಏನಯ್ಯ ಜಾಂಬವ ನೀನುಸುರೀ ಪವ |
ಮಾನಿಯ ನುಡಿತನುಮಾನವಿಲ್ಲೆನಗೆ ನಿ |
ಧಾನಿಸಿ ಪರಿಕಿಸಲು | ತಮ್ಮನ ಪ್ರಾಣ |
ಹಾನಿಯಾಗಿಹುದೆನ್ನಲು | ಕೇಳುತಲಜ |
ಸೂನು ಕೈಮುಗಿದು ಸ | ದಾನಂದಮಯಗೆಂದು || ಲಾಲಿಸೈ ||164||

ಕ್ಷಿತಿಪ ಕೇಳಾಶುಗಸುತನುಸುರಿದ ಮಾತು |
ಶಿಥಿಲವಲ್ಲೂರ್ಮಿಳಾಪತಿಯನೀಕ್ಷಿಸಲಪ |
ಗತನಹುದೇನೆನ್ನಲಿ | ನಿನ್ನಯ ಪ್ರಾಣ |
ರತುನ ವಾಯುಜನಿಂದಲಿ ಲಕ್ಷ್ಮಣ ಮತಿ |
ಯುತನಾಹನೆನುತ ಮಾ | ರುತಿಯೊಡನಿಂತೆಂದ || ಲಾಲಿಸೈ ||165||

ರಾಗ ವಸಂತಭೈರವಿ, ಏಕತಾಳ

ವಾಯುಸಂಭವನೆ ನೀ ಲಾಲಿಸು | ರಘು |
ರಾಯನ ಸಹಜನ ಪಾಲಿಸು | ಕಪಿ |
ನಾಯಕ ಶತಕೋಟಿಕಾಯಸೇವಕ ಪ್ರಿಯ |
ಶ್ರೀಯರಸನ ಕಾರ್ಯಕನುವಾಗಬೇಕಯ್ಯ || ವಾಯು || ಪಲ್ಲವಿ ||

ಭೋರೆಂಬ ಶರಧಿಯ ಲಂಘಿಸಿ | ಪೋಗಿ |
ಘೋರ ದೈತ್ಯನ ನೀ ಭಂಗಿಸಿ || ಶುಭ |
ಕಾರಸೀತೆಯ ಚರಣಾರವಿಂದವ ಕಂಡು |
ಚಾರು ಲಂಕೆಯಸುಟ್ಟ | ಧೀರ ಸಂಗರಶೂರ || ವಾಯು ||166||

ಕೊತ್ತಿ ಸೈನ್ಯವ ಜಿತವಾಸನ | ಕೊಲ |
ಶಿವ ಲಾತತುಕ್ಷಣ ತಾಳ್ದುರೋಷವ ||
ಪ್ರೀತ ಸಂಜೀವನ ನೀ ತಂದು ತರುಚರ |
ವ್ರಾತವನುಳುಹಿದ ಸೀತಾವಲ್ಲಭ ದೂತ || ವಾಯು ||167||

ಜೀವಿಸಬೇಕಯ್ಯ ಲಕ್ಷ್ಮಣ | ಸಂ |
ಜೀವನವನು ತರಲೀಕ್ಷಣ || ಪೋಗು |
ಸಾವಿರ ಮಾತೇನು | ಭಾವಜಪಿತ ಪಾದ |
ಸೇವಕ ರಿಪುವನ | ದಾವ ವೀರರ ದೇವ || ವಾಯು ||168||

ಭಾಮಿನಿ

ಹನುಮನೊಳು ಚತುರಾಸ್ಯಸುತನಿಂ |
ತೆನಲು ಶೋಕಾರ್ಣವದ ತಡಿಯಲಿ |
ಜನಪ ಕುಳಿತು ಸಮೀರಜನೆ ನೀರಡಸಿ ಬಾಡಿರ್ದ ||
ಇನಕುಲದ ವಲ್ಲರಿಯ ಬೇರಿಗೆ |
ವನವ ನೀ ತಂದೆರೆದು ಕೀರ್ತ್ಯಂ |
ಗನೆಯ ಕೈವಿಡಿ ಜಾಂಬವನ ಮಾತುಗಳ ನಡಿಸೆಂದ ||169||

ರಾಗ ಶಂಕರಾಭರಣ ಏಕತಾಳ

ಕೇಳು ರಾಘವ ಕಮಲಜನೇತ್ರ |
ವ್ಯಾಳಭೂಷಣ ಮಿತ್ರ ವಾಣೀಶನುತಿಪಾತ್ರ    || ಪಲ್ಲವಿ ||

ಯಾತಕೆ ಮರುಗುವೆ ಮನುಜರಂದದಿ ನೀನು |
ಪ್ರೀತಿಯೊಳೈದಿಸಿನ್ನೆನ್ನುವನು ||
ಭೂತೇಶ ರವಿಜರಡ್ಡೈಸಿದರವರವನ್ನು |
ಧಾತುಗೆಡಿಸಿ ಸಂಜೀವನವ ತರುವೆನು || ಕೇಳು  ||170||

ವನಜಾಕ್ಷನೊಡನೆ ವಾಯುಜನಿಂತು ಪೇಳಲು |
ವನಜಪೀಠಜನೆಂದರಜನಿಯೊಳು ||
ಅನಿಲಜ ನೀ ದೈತ್ಯರರಿಯದ ತೆರದೊಳು |
ಅನಿಲವೇಗದಿ ಪೋಗು ಬಹಳ ಜಾಗ್ರತೆಯೊಳು || ಕೇಳು ||171||

ಉತ್ತರದೆಸೆಯೋಳಿಂದು ದ್ರೋಣ ಗಿರಿಯೊಳು |
ಉತ್ತಮ ವೈದ್ಯಗಳಿಹವು ಕೇಳು ||
ಮಿತ್ರನೀಕ್ಷಿಸದೊಲೌಷಧಿಯ ನೀ ತಾರೆನಲು |
ಮಿತ್ರಕುಲೇಶಗೆ | ನಮಿಸಿದ ಮುದದೊಳು || ಕೇಳು ||172||

ವಾರ್ಧಕ

ಜೀವನಜನಾಭವನಂಘ್ರಿಗೆ ನಮಿಸುತಂ ಜಗದ |
ಜೀವಸುಕುಮಾರ ಜಾಂಬವಗೆ ಪೊಡಮಟ್ಟು ಸಂ |
ಜೀವನವ ತರಲುತ್ತರಾಭಿಮುಖನಾಗಿ ರಾಮಧ್ಯಾನದಿಂ ಪೊರಟನು |
ಜೀವನಜಸದನೆ ಜಾನಕಿ ಯಿತ್ತಲುಂ ತನ್ನ |
ಜೀವದೊಳು ಸಂತಾಪವೆತ್ತು ಕಳವಳಿಸಿ ರಾ |
ಜೀವಾಕ್ಷಿ ಶರಮೆಯೊಳ್ಮನುಜಸುದತಿಯರಂದದಿಂ ಪೇಳ್ದಳಾನಿಶಿಯೊಳು ||173||

ರಾಗ ಸಾಂಗತ್ಯ, ರೂಪಕತಾಳ

ಶರಮೆ ಕೇಳೆನ್ನ ಮನದ ತಾಪವಿಂದೇಕೆ |
ಪಿರಿದಾಯ್ತು ಪೇಳು ಪ್ರವೀಣೆ ||
ಪುರುಷರನಗಲಿದ ಪೊಗರು ಜವ್ವನೆಯರ |
ಸ್ಮರ ಬಳಲಿಸುವನು ಕಾಣೆ ||174||

ಅಶನ ನಿದ್ರೆಯನುಳಿದವರಿಗೆ ಪಂಕಜ |
ವಿಶಿಖನಿಂದಾಗುವದೇನೆ ||
ಋಷಿಗಳಿಗಾದರಂಗಜನುಪಟಳವುಂಟು |
ಕುಸುಮಾಂಬಕಿಯರ ಪಾಡೇನೆ ||175||

ಸರಸದ ಮಾತ ನೀನಾಡದಿರಿಂದಿನ |
ಹರಿಬವಾರಿಗೆ ಜಯವಾತೆ ||
ದುರುಳ ರಾವಣ ಕಪಿಗಳ ಕೊಂದು ಊರ್ಮಿಳಾ |
ವರನ ಕೆಡಹಿ ಪೋದನಂತೆ ||176||