ಕಂದ
ಜಡಜಾಕ್ಷಿಯ ಕಡು ಭೀಕರ |
ನುಡಿಯಾಗಳ್ ಜನಕಸುತೆಯ ಜಠರವ ಮುರಿಯಲ್ ||
ಸಿಡಿಲಪ್ಪಳಿಸಿದ ವೋಲ್ ಸೈ |
ಗಡೆಯುತ್ತಂ ಬಳಲಿ ಪೊರಳುತಂ ಬಿಸುಸುಯ್ದಳ್ ||177||
ರಾಗ ಆನಂದಭೈರವಿ, ಏಕತಾಳ
ದಶರಥಭೂವರ ಪುತ್ರ | ಸುಮ |
ವಿಶಿಖಸುಕೋಮಲಗಾತ್ರ ||
ಶ್ವಸನ ಸಖಾಂಬಕಮಿತ್ರ | ಸುಮ |
ನಸರ ಸನ್ನುತಿಪಾತ್ರ ||178||
ಸರಸಿಜಲೋಚನಸಹಜ | ವರ |
ಶರಣ ದಿವೌಕಸ ಮಹಿಜ ||
ಸುರರಿಪುಸಂಕುಲರವಿಜ | ಸುರು |
ಚಿರ ಸೌಮಿತ್ರೆಯ ತನುಜ ||179||
ತೋರಿಸು ನಿನ್ನಯ ಮೊಗವ | ಛಲ |
ವೇರುತ ಸೆಳೆದಿಡು ಶರವ ||
ತೀರಿಸು ದಶಶಿರನಸುವ | ಮುದ |
ದೋರಿಸು ರಾಮನ ಮನವ ||180||
ರಾಗ ಘಂಟಾರವ, ಆದಿತಾಳ
ರವಿಕುಲತಿಲಕನಿಗೆ ಮೆಚ್ಚಿನ ಅನುಚರರು |
ರವಿಜ ಮಾರುತಿ ಜಾಂಬವಾದಿ ವಾನರರು ||
ಅವರ ಸಮ್ಮುಖದಿ ತಾನಿಂತು ಸೌಮಿತ್ರಿಯನು |
ಬವರದಲಿ ಕೊಂದನಲಿ ಖೂಳ ರಾವಣನು ||181||
ಒಂದಾಗಿ ಮೂವರು ವನದಿ ಸಾವಿರರನ್ನ |
ತಂದ ವಂಚಿಸಿ ದೈತ್ಯನಿಂದು ಮೈದುನನ ||
ಕೊಂದ ಬಳಿಕಾ ರಾಮ ತಾನೆಂತು ಜೀವಿಪ |
ಸೆಂದುದೇ ರವಿಕುಲದನಪರ ಪ್ರತಾಪ ||182||
ಜನಕಜೆಯಾಗಿ ರಾಮನ ಕೈಪಿಡಿದು ನಾನು |
ವನದಿ ಬಳಲುತ ಖಳಗೆ ಸೆರೆಯ ಸಿಕ್ಕಿದೆನು ||
ದನುಜನನು ಕೊಂದೆನ್ನ ರಘುಜನೊಯ್ಯುವನೆಂದು |
ಇನಿತು ದಿನಗಳ ಕಳೆದೆ ವ್ಯಾಕುಲವನಳಿದು ||183||
ಎನ್ನ ಫಾಲದ ಬರಹವಿಂತಾದೊಡ ಮೇಲೆ |
ಪನ್ನಗವೇಣಿ ನಾನೆಂತು ಸೈರಿಸಲೆ ||
ಇನ್ನಾರು ಗತಿಯೆನಗೆ ಎಂದು ತೊಳಲುವ ರಮೆ |
ಯನ್ನು ಸೈಪಿಡಿದು ಪೇಳಿದಳಾಗ ಶರಮೆ ||184||
ನಾರಿ ಕೇಳ್ ಸಂಜೀವನವ ತಾರೆನ್ನುತ ರಾಮ |
ಮಾರುತ ಜನನು ಕಳುಹಿಸಿರುವನಾ ಹನುಮ ||
ಚಾರು ವೈದ್ಯವತಂದು ವೀರರನು ಎಬ್ಬಿಸುವ |
ನೀರಜಾಂಬಕಿ ನೀಗು ಮನದ ವ್ಯಾಕುಲವ ||185||
ಭಾಮಿನಿ
ಮನುಜನಲ್ಲ ಸುಬಾಹುರಿಪು ವಿಧಿ |
ಜನಕ ಲಕ್ಷುಮಣ ಫಣಿಪ ನೀ ರಮೆ |
ಹನುಮ ನೀಲ ನಳಾದಿ ಮರ್ಕಟರೆಲ್ಲ ನಿರ್ಜರರು ||
ಘನ ದುರಾತ್ಮರ ಸಂಹರಿಸಿ ಸ |
ಜ್ಜನರ ಪಾಲಿಸಲಿಂತು ಮಾಯವ |
ನನುಕರಿಸಿ ಬಂದವರ ಕೊಲಲರಿಯರು ನಿಶಾಚರರು ||186||
ವಾರ್ಧಕ
ಎನುತ ಸೀತಾಂಗನೆಯ ಜಠರದ ಮಹಾಕ್ಲೇಶ |
ವನಧಿಯಂ ಕುಡಿವ ಕುಂಭಜಳಾಗ ಶರಮೆ ಮುನಿ |
ಗಳಿರ ಕೇಳಿತ್ತಲುಂ ರಾವಣನ ಬಳಿಗೆ ಬೇಹಿನ ದೂತರೈತಂದರು ||
ದನುಜೇಶ ನೀ ಕೊಂದ ರಿಪುಭಟರನೆಬ್ಬಿಸುವ |
ರನಿಲ ಸಂಭವನ ಸಂಜೀವನವ ತಾರೆಂದು |
ಜನಪನಟ್ಟಿಹನೆಂಬ ನುಡಿಗೆ ವಿಸ್ಮಿತನಾಗಿ ಬಿಸುಸುಯ್ದನಸುರೇಂದ್ರನು ||187||
ರಾಗ ಕೇದಾರಗೌಳ, ಅಷ್ಟತಾಳ
ಪವನಜ ಸಂಜೀವನವ ತಾರದಂತೆ ವಿ | ಘ್ನವನನುಕರಿಸಲೆನ್ನು ||
ದಿವಿಜವೈರಿಗಳೊಳಾರಿಹರೆಂದು ಮನದಲಿ ವಿವರಿಸೆ ನೋಡಿದನು ||188||
ಖಳ ಕಾಲನೇಮಿ ತಾನೆನಗಾಪ್ತ ಕುಟಿಲಗ | ಳೊಳಗೆ ಕೋವಿದನವನ ||
ಕಳುಹುವೆ ನೆನುತಲೋರ್ವನೆ ಬಂದಾನಾತನ | ನಿಳಯಕೆ ದಶವದನ ||189||
ಅಸುರನ ಕಂಡಿದಿರ್ಗೋಂಡುಪಚರಿಸಿ ರಂ | ಜಿಸುವ ಪೀಠವನೇರಿಸಿ ||
ಕುಶಲಾದಿಗಳ ಬೆಸಗೊಳುತಲಾ ಖಳನೆಂದ | ದಶಕಂಠಗಭಿನಮಿಸಿ ||190||
ಕಂದ
ಏನೈ ದಶಶಿರ ನೀ ನರ |
ವಾನರರೊಳ್ ಸೆಣಸುತಿರ್ವೆಯೆನಿಪೀ ಪರಿಯಂ ||
ನಾನಾರಿತಿಹೆ ನಿನಗಾಹವ |
ವಾನರರೊಳ್ ದೊರಕಿತೇತಕೆನಲಿಂತೆಂದಂ ||191||
ರಾಗ ತುಜಾವಂತು, ಝಂಪೆತಾಳ
ಏನೆಂಬೆ ಮನುಜ ಮರ್ಕಟರ ಚಿಂತೆಯನು |
ದಾನವಾಧಿಪ ಕೇಳು ನಿನಗೆ ಪೇಳುವೆನು || ಏನೆಂಬೆ || ಪಲ್ಲವಿ ||
ವಸುಧೆಯೊಳು ಸಾಕೇತಪುರದೊಳರ್ಯಮಕುಲದ |
ದಶರಥಮಹೀಶನರ್ಧಾಂಗಿಯರು ಪಡೆದ ||
ಶಿಶುಗಳಾ ರಾಮಲಕ್ಷ್ಮಣರ ಕಡು ಸಹಸಗಳ |
ನುಸರಲರಿದೆನಲೆಂದ ಕಾಲನೇಮಿ ಖಳ ||192||
ವರ ಕೌಶಿಕಾಶ್ರಮದಿ ತಾಟಕಿ ಸುಬಾಹುಗಳ |
ಮುರಿದು ಮುನಿತತಿಯ ಪೊರೆದುರ್ವರೆಯಮಗಳ ||
ವರಿಸಿ ರಘುನಾಥನಾ ಪರಶುಪಾಣಿಯ ಮನದ |
ಗರುವ ಮುರಿದಿರುವ ಪರಿಯರಿತಿರುವೆನೆಂದ ||193||
ಜನಕಜೆರಮಣ ಕೈಕೆಯ ದೆಸೆಯೊಳಾರಣ್ಯ |
ಕನುಜ ಸತಿಯರು ಬಂದಿರುತಲೆನ್ನ ||
ಅನುಜೆಯಭಿಮಾನ ಕಳೆಯಲು ಕೇಳೆ ಜಾನಕಿಯ |
ಮುನಿಯ ವೇಷದಲಿ ನಾ ತಂದುದರಿತಿಹೆಯ ||194||
ಅಸುರೆಯ ಮೂಗು ಮುಂದಲೆಗಳನು ಕೊಯು ಖರ |
ದೂಷಣ ತ್ರಿಶಿರ ಮಾರೀಚಾದಿ ಖಳರ ||
ನಾಶಗೈದಾಶುಗಜನಿಂ ಕಂಡು ಮಿತ್ರಜನ |
ನಾ ಶಕ್ರಜನ ಮುರಿದನೆಂಬುದರಿತಿಹೆನು ||195||
ಧರಣಿಯಜಯನರಸುತ ಪಯೋನಿಧಿಯನುತ್ತರಿಸಿ |
ಮರುತಜನು ಬಂದೆಮ್ಮ ವನವ ಸಂಹರಿಸಿ ||
ಮೆರವುತಿರಲವನ ಬಾಲಕೆ ವಸನಗಳ ಬಿಗಿಸಿ |
ವರ ತೈಲವೆರೆಸಿ ಸುಡಿಸಿದೆ ಶಿಖಿಯ ಪೊಗಿಸಿ ||196||
ಭಾಮಿನಿ
ಉರುಹಿ ಲಂಕೆಯ ಹನುಮ ಸೀತೆಗೆ |
ತರಣಿಕುಲ ಜನ ಮುದ್ರಿಕೆಯನಿ |
ತ್ತಿರದೆ ಚೂಡಾಮಣಿಯ ಕೊಂಡೈತರಲು ರಾಘವನು ||
ಶರಮೆಯರಸನ ಸಖ್ಯದಿಂ ಸಾ |
ಗರವ ಬಂಧಿಸಿ ಬಂದು ನಿನ್ನಯ |
ಪುರದ ದೈತ್ಯರ ಕೊಂದುದನು ತಿಳಿದಿರ್ಪೆ ತಾನೆಂದ ||197||
ತಿಳಿದ ಬಳಿಕೇನೆಂಬೆನಿಂದಿನ |
ಕೊಳುಗುಳದಿ ನಾ ಕಪಿಬಲವನೂ |
ರ್ಮಿಳೆಯ ರಮಣನ ಕೆಡಹಲವದಿರನೆಬ್ಬಿಸುವ ಬಗೆಗೆ ||
ತಳುವದಲೆ ಸಂಜೀವನವ ನಿಶಿ |
ಯೊಳಗೆ ತಾರೆನುತಾ ರಘುಜನ |
ಗ್ಗಳೆಯ ಹನುಮನನೈದಿಸಿಹನಾ ಮಾಳ್ಪುದೇನಿದಕೆ ||198||
ರಾಗ ಕೇದಾರಗೌಳ, ಆದಿತಾಳ
ದನುಜೇಶ ಕೇಳೊಂದು ಮಾತ | ಪೇಳ್ವೆ |
ಮನವಿಟ್ಟಾಲಿಪುದು ಸುಪ್ರೀತ ||
ನಿನಗೆ ನಾ ಸಖನೆಂಬ ಮಮತೆಯುಳ್ಳೊಡೆ ರಾಘ |
ವನ ದೂತ ಪೋಗದ ಮುನ್ನ ನೀ ನಡೆಬೇಗ || ದನುಜೇಶ || ಪಲ್ಲವಿ ||
ಬೆದರದೆ ನೀ ಸಂಜೀವನೆಯ | ಪರ್ವ |
ತದ ತಪ್ಪಲಲಿ ಮಾರುತಿಯ ||
ಚದುರನೆ ಕುಟಿಲವಿದ್ಯದಿ ಕೊಂದರನ್ಯರ |
ಸದೆದ ವಾಸಿಯು ನಿನಗಪ್ಪುದು ರಣಧೀರ || ದನುಜೇಶ ||199||
ಎನಲಾ ದಾನವ ನಗುತೆಂದ | ನಿನ್ನ |
ತನಯರೇಳ್ನೂರ್ವರ ಕೊಂದ ||
ಹನುಮನೊಳೆನ್ನಯ ಕುಟಿಲ ಮೆರವುದೆಂತು |
ನಿನಗಿನಿತ್ಯಾಕೆಂದುರ್ಬುದ್ಧಿ ಬಂದೊದಗಿತು || ದನುಜೇಶ ||200||
ಮನುಜಮರ್ಕಟರು ತಾವಾಗೆ | ಬಂದು |
ವನಧಿಯ ಬಂಧಿಸೆ ಹೀಗೆ ||
ದನುಜರ ಕೊಲುವ ಪರಾಕ್ರಮ ಉಂಟೇನೊ |
ಜನಕಜೆ ರಮೆ ರಾಮ ದೇವಾದಿದೇವನೋ || ದನುಜೇಶ ||201||
ಸರ್ವಜೀವಿಗಳ ಜೀವನನು | ರಾಮ |
ಸರ್ವರ್ಗೆ ಚೇತನಾತ್ಮಕನು ||
ಸರ್ವಜ್ಞರಿಗೆ ಚಿತ್ಪ್ರಕಾಶ ಸ್ವರೂಪನು |
ಸರ್ವರ ಭಾವಕೆ ಭೀತಿಯಾಗಿರುವನು || ದನುಜೇಶ ||202||
ತಪ್ಪಾಯಿತೆಂದು ಜಾನಕಿಯ | ಈಗ |
ಒಪ್ಪಿಸಿ ಪೂಜಿಸುಹರಿಯ ||
ಸರ್ಪಶಾಯಿಯ ನಿಂದಿಸುವರಿಂಗೆ ಪರದೊಳು |
ತಪ್ಪದು ನರಕ ನೀನರಿತುಕೊ ನಿನ್ನೊಳು || ದನುಜೇಶ ||203||
ವಾರ್ಧಕ
ಅನಿಮಿಷಾರಿಯ ನುಡಿಯ ಕೇಳಿದಂ ತಾಳಿದಂ |
ದನುಜೇಶ ಖತಿಯನಾರ್ಭಟಿಸಿದಂ ನಟಿಸಿದಂ |
ತನುವನಂಬಕದಿ ಕಿಡಿಗೆದರಿದಂ ವದರಿದಂ ಪೂರ್ವದವಿವೇಕದಿಂದ |
ಎನಗೆ ಮಾರೀಚ ಶರಮಾವರಂ ಭೂವರಂ |
ವನಜಾಕ್ಷನಂದೊರೆದ ನೀತಿಯಂ ಪ್ರೀತಿಯಂ |
ಮನಕೆ ತರದವ ನಿನ್ನ ವಾಕ್ಯಮಂಸಖ್ಯಮಂ ಧಿಗ್ಗಳೆದು ತೊರೆವೆನೆಂದ ||204||
ರಾಗ ಭೈರವಿ, ಏಕತಾಳ
ಝಡಿವುತ ಖಡ್ಗವನುಸುರಿದನಾ ನಿ | ನ್ನೆಡೆಗೀ ಬೊಮ್ಮವನು |
ನುಡಿಸಲು ಬಂದೆನೆ ನಾ ಪೇಳ್ದಲ್ಲಿಗೆ | ನಡೆಯೆನಲರುಹಿದನು ||205||
ಕೊಲ್ಲದಿರೆನ್ನನು ಪೋಗುವೆ ನಿಶಿಯಲಿ | ಖುಲ್ಲ ಕಪಿಯ ನಾನು ||
ಬಲ್ಲ ಕುಟಿಲವಿದ್ಯವ ವಿರಚಿಸಿ ಕೊಂ | ದಲ್ಲದೆ ಬಿಡೆನಿನ್ನು ||206||
ಎಂದಾ ಖಳನರುಹಿದನಿತ್ತಲು ದಶ | ಕಂಧರನೆಂಬುವನು ||
ವಂದಾರಕರಿಪು ಮಾಲ್ಯವಂತನ ಕರೆ | ದಂದಿನ ಕಾರ್ಯವನು ||207||
ಅರುಹಿದ ಕಾಲನೇಮಿಯನಾ ಪವನಜ | ನುರು ವಂಚಿಸಿ ತಾನು ||
ವರ ಸಂಜೀವನಸಹ ಬಂದರೆ ಸಾ | ಗರದ ನಡುವೆ ನೀನು ||208||
ತಡೆದು ಬಿಡದೆ ಮಡುಹೆನುತಲಿ ಕಳುಹಿಸಿ | ನಡುಯಾಮಿನಿಯೊಳಗೆ ||
ಕಡುಗಲಿ ರಾವಣನೈದಿದಮನದೊಳು | ಮಿಡುಕುತಲರಮನೆಗೆ ||209||
ಭಾಮಿನಿ
ವರ ಶಶಾಂಕದ್ರೋಣ ಧಾತ್ರೀ |
ಧರದ ತಪ್ಪಲಿಗೈದಿಕಪಟದಿ |
ವಿರಚಿಸಿದನುದ್ಯಾವನವನಾ ಕಾಲನೇಮಿ ಖಳ |
ಪರಮ ಋಷಿರೂಪವ ತಳೆದು ಶಿ |
ಪ್ಯರ ಸಮೂಹದಿ ವ್ಯಾಘ್ರಚರ್ಮಾಂ |
ಬರ ಭಸಿತ ರುದ್ರಾಕ್ಷಿಗಳ ಭೂಷಣದಿ ಮಂಡಿಸಿದ ||210||
ವಾರ್ಧಕ
ಪರಿಕಿಸಲು ಚೋದ್ಯವಹ ಭೂಜವಲ್ಲರಿಗಳಿಂ |
ಸುರುಚಿರದ ತಳಿರು ಕುಡ್ಮಲ ಕುಸುಮ ಫಲಗಳಿಂ |
ಗರಗಿ ಸವಿವ ಚಕೋರ ಕೋಗಿಲೆಗಳಿಂ ಸಂಚರಿಪ ಸಾಧುಮಗಗಳಿಂದ ||
ಮೆರೆವ ಗಹನದಿ ವೇದ ತರ್ಕ ಘನಶಾಸ್ತ್ರದಿಂ |
ನಿರತ ವಟುಗಳನೋದಿಸುತ ಲಗ್ನಿಹೋತ್ರದಿಂ |
ಪರಮ ಸಂಯಮಿಯೆನಿಪ ಮಾಯಾವಿಚಿತ್ರದಿಂದಸುರೇಂದ್ರನೆಸದನೆಂದ ||211||
ಭಾಮಿನಿ
ವನದ ಫಲಗಳ ಕೊಳದೊಳಿಹ ಜೀ |
ವನವ ತನ್ನ ಕಮಂಡಲದ ವರ |
ವನವ ಹಾಲಾಹಲವ ಮಾಡಿದನೀಗ ನೀರಡಿಸಿ ||
ವನಚರಾಧಿಪ ಬರುವನಾತಗೆ |
ವನವಿದೆನ್ನುತ ಕುಡಿಸಿ ಕಳುಹುವೆ |
ವನಜಮಿತ್ರಜನಲ್ಲಿಗೆನುತಿಹ ಕಪಟಮುನಿರಾಯ ||212||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅನಿಲಗಮನದೊಳಭ್ರಮಾರ್ಗದಿ |
ಹನುಮ ತಷ್ಯಾತುರದಿ ಬರುತಾ |
ದನುಜ ಕಪಟದಿ ವಿರಚಿಸಿದನಂ | ದನವಕಂಡು ||213||
ಹಿಂದೆ ನಾನೌಷಧಿಯನ್ಯೊಯಲು |
ಬಂದವೇಳ್ಯದಿ ಕಾಣಲಿಲ್ಲಿದ |
ನಿಂದು ಕಂಡೆನಿದೇನು ಕೌತುಕ | ದಂದವೆಂದ ||214||
ಖಳರ ಕುಟಿಲವೊ ನಾವು ಗಮನದ |
ಕಳವಳದಿ ಪಥ ತಪ್ಪಿದವೊ ಇದ |
ರೊಳಗೆ ಜಲವಿರುತಿಹುದು ತಷೆಯನು | ಕಳಿವೆನೆಂದು ||215||
ಧರೆಗಿಳಿದು ನೋಡಿದ ಸಮಾಧಿಯೊ |
ಳಿರದೆದೃಷ್ಟಿಯ ನಾಸಿಕಾಗ್ರದೊ |
ಳಿರಿಸಿ ತುಟಿಗಳ ಮಿಡುಕಿಸುತ ಜಪ | ಸರವ ಪಿಡಿದು ||216||
ಶಿರದ ಜಡೆಯ ವಿಭೂತಿ ಲೇಪದ |
ಮೆರೆವ ವ್ಯಾಘ್ರಾಜಿನಗಳುಡುಗೆಯ |
ದುರುಳ ಖಳನಷ್ಟಾಂಗ ಯೋಗದೊ | ಳಿರುವ ಪರಿಯ ||217||
ಭಾಮಿನಿ
ಈತ ಕಪಟದ ಮುನಿಪನೆಂಬುದ |
ತಾ ತಿಳಿಯದಾ ಖಳನ ನುಡಿಸಿದ |
ವಾತಸುತ ನಾನೆಲೆ ಮಹಾಋಷಿವರನೆ ಕೇಳಿಗ |
ಪಾಥವಿಲ್ಲದೆ ಬಂದೆ ಬಹು ತ |
ಷ್ಯಾತುರದಿ ತವ ಪದವ ನೋಡಿದೆ |
ಸೀತಕಮಲವ ತೋರಿಸೆನೆ ಕಣ್ದಿರೆದು ಪರಿಕಿಸಿದ ||218||
ರಾಗ ಸಾಂಗತ್ಯ, ರೂಪಕತಾಳ
ಹನುಮ ನೀ ಬಂದೆಯ ಕುಳ್ಳಿರು ಕುಶಲವೆ |
ನಿನಗೆ ಲಕ್ಷ್ಮಣನ ಯುದ್ಧದಲಿ ||
ದನುಜ ರಾವಣ ಕೊಲ್ಲಲವನನೆಬ್ಬಿಸಬೇಕೆಂ |
ದೆನುತ ರಾಘವನ ನೇಮದಲಿ ||219||
ವರ ಸಂಜೀವನವನೊವುದಕೈದಿದವನೆಂಬು |
ದರಿತೆ ಸುಜ್ಞಾನ ದೃಷ್ಟಿಯಲಿ ||
ಕೊರತೆಯೇನಿದಕೆ ನಾ ಕೊಡುವೆನೌಷಧಿಯ ನೀ |
ತೆರಳಲುಬಹುದು ಶೀಘ್ರದಲಿ ||220||
ಶರಧಿ ಸಪ್ತಕವೇಳು ದ್ವೀಪವ ದಾಂಟಿ ನೀ |
ಬರಲಿಕ್ಕೆ ಹೊರಟೆಷ್ಟು ದಿನವು ||
ತೆರಳಿತು ಶವಗಳ್ನೀ ಮರುಳುವನಕ ಹ್ಯಾಗೆ |
ಧುರಮಂಡಲದೊಳುಳುದಿಸಿಹವು ||221||
ಎನಲರ್ಧ ಘಟಿಯಾಯ್ತು ಜಾಂಬವನ ಬೀಳ್ಕೊಂಡು |
ದಿನವ್ಯಾಕೆ ಸ್ವಲ್ಪಕಾರಿಯಕೆ ||
ಇನನುದಯಿಪ ಮುನ್ನ ಮರುಳುವೆ ಬರಿದೆ ನೀ |
ನಿನಿತು ಕಾಲ್ಗೆಡಿಸುವದ್ಯಾಕೆ ||222||
ಶರವ ತೋರೆನಲೀತ ರುದ್ರರೂಪಿನ ಕೀಶೇ |
ಶ್ವರನೆಂದು ಬೆದರಿ ಲಕ್ಷ್ಮಣನ ||
ಹರಣಕ್ಕೆ ಹೊಣೆ ನಾನು ನಿನಗಾತಿಥ್ಯವ ಮಾಳ್ಪೆ |
ಮರುಗದಿರ್ಕಪಿಕುಲ ರನ್ನ ||223||
ಭಾಮಿನಿ
ಎನುತ ಗರಳಕಮಂಡಲವ ಕಪಿ |
ಜನಪಗೀಯಲು ತಪ್ತಿಯಾಗದು |
ತನಗೆ ನಿರ್ಮಲ ಜಲವ ತೋರೆಂದೆನಲು ರಕ್ಕಸನು ||
ಎನಗೆ ಜೈಸಲಸಾಧ್ಯವೀತನ |
ವನಚರಗಳಿಂ ಕೊಲಿಸುವೆನು ತಾ |
ನೆನುತ ಕಳುಹಿದ ಶಿಷ್ಯರೊಡನೆ ಮಹಾಸರೋವರಕೆ ||224||
ವಾರ್ಧಕ
ತನ್ನ ಪೌತ್ರ ವಿರಂಚಿ ತಾ ಕ್ಷಿತಿಯ ಬಸುರೊಳಿಹೆ |
ತನ್ನೊಳುದಿಸಿರ್ಪುದಂ ತೊಡುವನಂಗಜನೊಲಿದು |
ತನ್ನ ಸನ್ನಿಧಿಯೊಳಂ ತಪ ಗೈಯುವರ್ಮನೀಶ್ವರರು ಶಿವರೂಪತಾನು ||
ತನ್ನ ತನುಜೇಶ ರವಿಮಾ ಪದ್ಮಿಯನಿಮಿಷರು |
ತನ್ನೊಳಿಹರೈಸೆ ಗುಣಹೀನರುಂ ಕಳವಳಿಸಿ |
ತನ್ನ ಬಳಿಗಯ್ಯಲವರಂ ಪೊರೆವೆನೆನುತ ಮೆರೆದಿರ್ದುದಾ ಕೊಳನ ಕಮಲ ||225||
ರಾಗ ಬೈರವಿ, ಏಕತಾಳ
ಮರುತಜ ಗರಳದ ವನವೆಂದರಿಯದೆ | ಕರಚರಣವತೊಳೆದು ||
ತರಣಿಕುಲೇಶನ ಸ್ಮರಿಸುತಲೀಂಟಿದ | ಶರವನು ಮನವಲಿದು ||226||
ಆಶುಗಜಾತನ ನುಂಗಿತು ನೆಗಳೊಂದಾ | ಸಮಯದಿ ಕಂಡು ||
ರೋಷದಿ ಬೊಬ್ಬಿರಿವುತ ವಟುಗಳ ಕಪ | ಟಾಸುರನೊಡಗೊಂಡು ||227||
ಬೆಚ್ಚದೆ ಶೈಲವಕಿತ್ತಾ ಸರಸಿಯ | ಮುಚ್ಚಲು ಜವದಿಂದ ||
ಅಚ್ಚುತ ಸೇವಕಮಕರದ ಜಠರದಿ | ಹೆಚ್ಚಲು ಜಲಚರದ ||228||
ವಡಲೊಡೆಯಲು ಪೊರಟನಿಲಜ ಬರೆ ಗಿರಿ | ತಡೆಯಲು ತವಕದಲಿ ||
ಅಡಿಗಳನಡಿಗಾನಿಸಿ ನೆಗದೆತ್ತಿದ | ದಡದಿ ಶಿರಾಗ್ರದಲಿ ||229||
ಶರಚರ ದಕ್ಷಿಣಪಾಣಿಯೊಳುತ್ತರ | ಕರದಿ ಗಿರಿಯ ಪಿಡಿದು ||
ಹರಿಸ್ವಾರ್ಭಾನುವನುಳಿದೇಳ್ಪಂದದಿ | ಧರೆಗಡರಿದನಂದು ||230||
ಭಾಮಿನಿ
ಖಳನ ಮಾಯವ ಜೈಸುತಲೆ ಕೈ |
ಯೊಳಗೆ ಪಿಡಿದಿಹ ಮಕರ ದೇಹವ |
ನುಳಿದು ಘನ ದಿವ್ಯಾಂಗ ಸುಂದರ ಸತಿಯ ರೂಪಾಂತು ||
ನಳಿನಶರನರಗಿಳಿಯೊ ವಿಟರೆದೆ |
ಗಳಿಗೆ ಶೂಲವೊ ತಿಳಿಯದೆನೆನಭ |
ದೊಳು ವಿಮಾನದಿ ಪೊಳೆದು ನುತಿಗೈದಳು ಸಮೀರಜನ ||231||
ವಾರ್ಧಕ
ಜಯಜಯ ಸಮೀರಸುತ ವಿಬುಧ ಪರಿವಾರನುತ |
ಜಯಜಯ ಸುಚಾರಿತ್ರ ರಿಪು ಕುಮುದಕುಲಮಿತ್ರ |
ಜಯ ಜಯ ಕಪಾಧಾಮ ಕೀಶವಂಶ ಲಲಾಮ ಜಯ ಭೀಮ ವಿಜಯ ಕಾಮ ||
ಜಯಜಯ ಕುಲೀಶಾಂಗ ಖಳವಿತಾನ ವಿಭಂಗ |
ಜಯ ಜಯ ಚಿರತ್ರಾಣ ವೀರ ಮುಖ್ಯಪ್ರಾಣ |
ಜಯಜಯ ಸುಗುಣವಂದ ಹರಿಪದಾಬ್ಜಮಿಳಿಂದ ಜಯವೆಂದಳೊಲವಿನಿಂದ ||232||
ಕಂದ
ನುತಿಸುವ ನಾರಿಯನುಂ ಕಾ |
ಣುತಲಚ್ಚರಿಯಿಂದ ಹನುಮ ನುಡಿದಂ ಕೊಳನೊಳ್ ||
ಸತಿ ನೀಂನೆನಗಳಾಗಿತ ತ |
ತ್ಕಥೆ ಏನದ ಪೇಳು ನೀನದಾರೆನಲೆಂದಳ್ ||233||
ರಾಗ ಕೇದಾರಗೌಳ, ಅಷ್ಟತಾಳ
ಹನುಮ ಲಾಲಿಸು ವಂದಾರಕ ವಧು ಧಾನ್ಯಮಾ | ಲಿನಿ ಎಂಬ ನಾಮಕದಿ ||
ಘನ ರೂಪೋತ್ಕರದಿ ನಾನಿರಲೊಂದು ದಿವಸ ಭ | ರ್ಗನ ಮೆಚ್ಚಿಸಿಯೆ ಪೂರ್ವದಿ ||234||
ವರ ಪುಷ್ಪಕವ ಪಡೆದಖಿಳ ಲೋಕಗಳ ಸಂ | ಚರಿಸುತಿಲ್ಲಿಗೆ ಬರಲು ||
ಪರಕಿಸಿ ಶಾಂಡಿಲ್ಯಋಷಿ ವಿರಹದೊಳೆನ್ನ | ನೆರೆಯಬೇಕೆಂದೆನಲು ||235||
ಸುಮತಿಯಾಗಿರ್ದ ಕಾರಣದಿಂದಿದು | ಸಮಯವಲ್ಲೆನುತ ನಿಂದು ||
ಕ್ರಮದಿ ಯಾಮಿನಿಚತುಷ್ಟಯವ ತನ್ಮುನಿಪಾನಾ | ಶ್ರಮದಿ ನಾ ಕಳೆದೆನಂದು ||236||
ಮುನಿಯ ವಂಚಿಸಿ ಪೋದಡೆನಗೆ ಶಾಪವನೀವ | ನೆನುತ ಸಿಂಗರಿಸಿ ನಾನು ||
ಮಿನುಗುತಲಿರಲಭ್ರಪಥದೊಳೈದುವ ದಶಾ | ನನನೀಕ್ಷಿಸಿದನೆನ್ನನು ||237||
ಭ್ರಮಿಸಿ ಬಂದೆನ್ನನು ತುಡುಕಲೀ ತನುವ ಸಂ | ಯಮಿಗೆ ಮೀಸಲಿಸಿರುವೆ ||
ಕುಮತಿ ನೀ ಮುಟ್ಟದಿರೆನೆ ಬಲೋತ್ಕರದಿಂದ | ರಮಿಸಿದನಾಕ್ಷಣವೆ ||238||
ಭಾಮಿನಿ
ಎನಗೆ ಮಗನತಿಕಾಯನಾಗಳೆ |
ಜನಿಸಲಾತನನೊದರಾವಣ |
ಮುನಿಪ ನಡೆತಂದೆನ್ನ ದೇಹದ ಚಿಹ್ನೆಗಳ ನೋಡಿ |
ವನಿತೆ ನೀನಾರೊಡನೆ ಕೂಡಿದೆ |
ತನಗೆ ಪೇಳೆನಲೀಗ ದಶಕಂ |
ಠನು ಬಲೋತ್ಕರದಿಂದ ರಮಿಸಿದನೆಂದೆನತಿಭಯದಿ ||239||
ರಾಗ ಸುರುಟಿ, ಏಕತಾಳ
ಏನ ಪೇಳಲಿನ್ನು | ಶಾಪವ | ತಾನು ಪಡೆದುದನ್ನು ||
ಈ ನುಡಿಗಳ ಕೇಳುತ ಕಡು ವಿರಹದಿ |
ಮೌನಿಯು ಬಳಲುತಲುಸುರಿದ ಕೋಪದಿ || ಪಲ್ಲವಿ||
ಒಲ್ಲದ ಸತಿಯರನು | ತುಡುಕಲು | ಖುಲ್ಲ ದಶಾನನನು ||
ಅಲ್ಲಿ ಭಸಿತವಾಗಲಿ ಎನುತೆನ್ನನು |
ಇಲ್ಲಿ ಮಕರ ರೂಪವ ಧರಿಸೆಂದನು || ||240||
ಮರುಗುತ ಮುನಿಪತಿಯ | ಪಾದದಿ | ಪೊರಳುತ ಸದ್ಗತಿಯ ||
ಕರುಣಿಸು ಕಪಟಿಯು ತಾನಲ್ಲೆನಲದ |
ನರಿತು ಕಟಾಕ್ಷದಿ ಪುನರಪಿ ವಚಿಸಿದ || ||241||
ಶರವಿಹ ಕೊಳನೊಳಗೆ | ನೆಗಳಾ | ಗಿರು ನೀನೀ ಬಳಿಗೆ |
ಚಿರಕಾಲಕ ಸಂಜೀವನಕೋಸ್ಕರ |
ಮರುತಜನೈದುವನೆಂದು ಮುನೀಶ್ವರ || ||242||
ವಾರ್ಧಕ
ಶರವನೀಂಟಲು ಬರುವನಾ ಹನುಮನವನ ಪಿಡಿ ||
ದರೆ ಮುರಿವ ಮಕರದೇಹವ ನಿನಗೆ ಬಹುದು ಸುರ |
ತರುಣಿಯಾಕಾರವೆನಲೀಗ ಮಮ ದುರಿತ ಪರಿಹಾರವಾತು ತವ ಕರುಣದಿ ||
ಪರಮ ಋಷಿಶಾಂಡಿಲ್ಯನಾಶ್ರಮವಿದಲ್ಲಿ ಕುಳಿ |
ತಿರುವಾತ ಮುನಿಯಲ್ಲ ಕಾಲನೇಮಿ ನಿಶಾಟ |
ನುರು ಕಪಟ ಎಚ್ಚರಿತು ಪೋಗೆನುತ ಪೇಳ್ದು ಪುಷ್ಪಕವೇರಿ ಸರಿದಳಬಲೆ ||243||
ರಾಗ ಕಾಂಬೋಧಿ, ಝಂಪೆತಾಳ
ಶಶಿಮುಖಿಯ ಕಳುಹಿ ಬರಲಚ್ಚರಿಯೊಳೆಂದ ಖಳ |
ತಷೆಯ ಕಳಪೆಯ ಹನುಮ ನೀನು ||
ನಿಶಿಯೊಳೈದಲು ನಿನ್ನ ದೈತ್ಯರೀಕ್ಷಿಸದಂತೆ |
ಬೆಸಸುವೆನು ದಿವ್ಯಮಂತ್ರವನು ||244||
ಕಿವಿಯೊಳರುಹುವೆನಿತ್ತ ಬಾರೆನಲು ಶಿಷ್ಯರಾ |
ದವರು ಗುರುವಿಂಗೆರಗಿ ಬಳಿಕ ||
ಜವದಿ ಮಂತ್ರೋಪದೇಶವ ಕೊಂಬುದುಚಿತ ನಮಿ |
ಸುವೆನೆನುತ ಕೀಶಕುಲತಿಲಕ ||245||
ಖಳನ ಕಾಲ್ಗಳ ಪಿಡಿದು ನಭಕೆತ್ತಲೇನಿದೇ |
ನೆಲವೊ ಕಪಿತನದ ಚೇಷ್ಟೆಗಳ ||
ವಲಿದು ತೋರ್ಪೆಯ ಹಿರಿಯರಲ್ಲಿ ಸಾಕಯ್ಯ ಬಿಡು |
ಸಲುಗೆ ನಮ್ಮೊಳು ವಿಹಿತವಲ್ಲ ||246||
ಎನಲು ಕಪಿತನವಲ್ಲ ಗುರುಪೂಜೆ ಗೈವೆನಿದೊ |
ಮನವಲಿದು ಕೈಕೊಂಬುದೆನುತ |
ದನುಜಾಗ್ರಣಿಯನೈದೆ ನೆಲಕಪ್ಪಳಿಸಿ ಬಿಸುಡ |
ಲನಿತರೊಳು ಶಿವನ ರೂಪಾಂತ ||247||
ಶಿರ ಪಂಚಕದ ಜಟೆಯ ಶಿಖಿ ನೇತ್ರಗಳ ನೀಲ |
ಗೊರಳಿನ ಗಜಾಂಬನಾಂಬರದ ||
ಹರಿ ಕುಂಡಲದವರ ಕಪಾಲಮಾಲದ ಶೂಲ |
ಧರನಾಗಿ ಹನುಮನೊಳುಸುರ್ದ ||248||
ರಾಗ ಮಧ್ಯಮಾವತಿ, ತ್ರಿವುಡೆತಾಳ
ಏಕೆ ನೀ ಮತಿಗೆಟ್ಟೆ ಪವನಜ |
ಏಕ ಚಿತ್ತದೊಳೆನ್ನ ಪದವ ವಿ |
ವೇಕದಿಂ ಭಜಿಸುವ ತಪಸ್ವಿಯ |
ಕಾಕುತನದಲಿಕೊಂದೆಯ ||249||
ಪಾತಕವ ಕೈಕೊಂಡೆ ನೀ ರಘು |
ನಾಥನಡಿಗಪರಾಧವೆಸಗಿದೆ |
ವಾತಸುತ ಗುಣಶೀಲನೆನ್ನುವ |
ಮಾತುಗಳ ನೀಗಿದೆಯಲ ||250||
ತರುಣಿಸುತ ಲಕ್ಷ್ಮಣರ ಜೀವವ |
ಮರಳಿ ಕೊಟ್ಟನು ರಾಮನಲ್ಲಿಗೆ |
ತೆರಳು ನೀನಾಷಧಿಯ ನೆವದಲಿ |
ಬರಿದೆ ಬಳಲುದ್ಯಾರಿಗೆ ||251||
ಭಾಮಿನಿ
ಶಿವನ ರೂಪಿನ ಖಳನ ವಚನಕೆ |
ಪವನಸುತ ಬೆರಗಾಗಿರಲು ತೀ |
ರ್ಚವನ ಹರನಲ್ಲವು ದನುಜನೆಂದೆನೆ ನಭೋ ವಚನ ||
ಅವನ ಕಾಲ್ಪಿಡಿದಪ್ಪಳಿಸಲಾ |
ದಿವಿಜರಿಪು ಸುಗ್ರೀವ ನಾಗುತ |
ಸವಿ ನುಡಿಯೊಳುಸುರಿದನದೇಂ ಸಾಹಸಿಯೊ ಕುಟಿಲದಲಿ ||252||
ರಾಗ ಸೌರಾಷ್ಟ್ರ, ಆದಿತಾಳ
ಏನಿದು ಲಂಕೆಯ ದನುಜರ ತರಿವಂತೆ | ವಾಯುಜಾತ | ಅನು |
ಮಾನವಿಲ್ಲದೆ ಶಶಿಮೌಳಿಯ ಕೊಂದೆಯ | ವಾಯುಜಾತ ||
ನೀನಿಂಥ ಬುದ್ಧಿಯ ಗೈದುದಚ್ಚರಿಯಯ್ಯ | ವಾಯುಜಾತ | ನಮ್ಮ |
ವಾನರಕುಲಕಪಕೀರ್ತಿಯ ತಂದೆಯ | ವಾಯುಜಾತ ||253||
ಅಲ್ಲಿ ಲಕ್ಷ್ಮಣನ ಜೀವವ ರಾಮ ಪಡೆದನು | ವಾಯುಜಾತ | ಶೀಘ್ರ |
ದಲ್ಲಿ ನಾನಿನ್ನ ಕೊಂಡ್ಯೊಯಲು ಬಂದೆನು | ವಾಯುಜಾತ ||
ನಿಲ್ಲದೆ ಪೋಗಬೇಕಯ್ಯ ಜಾಗ್ರತೆಯೊಳು | ವಾಯುಜಾತ | ಬರ |
ಲಿಲ್ಲವೆನುತ ರಾಮ ಚಿಂತಿಪಮನದೊಳು | ವಾಯುಜಾತ ||254||
ರಾವಣನುಪಟಳ ಬಹಳವಾಗಿರುವದು | ವಾಯುಜಾತ | ಮತ್ತೆ |
ಕೋವಿದ ಕಪಿಗಳು ಮಿಡುಕತಲಿರುವರು | ವಾಯುಜಾತ ||
ನಾವಿಲ್ಲಿ ಕುಳಿತರೆ ಕಾರ್ಯಲೇಸಾಗದು | ವಾಯುಜಾತ | ಸಂ |
ಜೀವನವೇಕೆ ಬಾರಯ್ಯಸಾಯಲಿ ಅದು | ವಾಯುಜಾತ ||255||
ಕಂದ
ಕಪಟದ ರಕ್ಕಸನೀತಂ |
ತಪನಾತ್ಮಜನಲ್ಲವೆಂಬುದರಿತಾ ಖಳನಂ ||
ಕಪಿರಾಜಂ ಮಡುಹಲ್ ಕೌ |
ಣಪಬಾಂಧವನಾಗಿ ಜರಿದನಾ ಮರುತಜನಂ ||256||
ರಾಗ ಕೇತಾರಗೌಳ, ಝಂಪೆತಾಳ
ಭಳಿರೆ ಬಹುಧೀರನಹುದಯ್ಯ | ಭೂಲೋಕ |
ದೊಳು ನಿನ್ನ ಪೋಲ್ವ ಸಹಸಿಯ ಕಾಣೆವಯ್ಯ || ಭಳಿರೆ || ಪಲ್ಲವಿ ||
ನಿನ್ನ ಜನನಿಯ ಪೂರ್ವಭವನು | ಕೀಶಕುಲ |
ರನ್ನ ಸುಗ್ರೀವಾಖ್ಯ ನಿನಗೆ ಮಾತುಳನು ||
ನಿನ್ನನರಸುತಲಿಲ್ಲಿಗವನು | ಬರಲಾತ |
ನನ್ನು ತರಿದಿರದೆ ಘಳಿಸಿದೆ ಪಾತಕವನು || ಭಳಿರೆ ||257||
ಮೆಚ್ಚುವನೆ ರಘುನಾಥನಿದಕೆ | ಇನ್ನೇನ |
ನುಚ್ಚರಿಪೆ ತವ ಬುದ್ಧಿ ಪ್ರಕಟವಾದುದಕೆ ||
ಚಚ್ಚರದಿ ಗಮಿಸು ಪಾಳಯಕೆ | ಸೌಮಿತ್ರಿ |
ಎಚ್ಚರಿತ ನೀ ಬಂದ ಬಳಿಕಲಾಕ್ಷಣಕ || ಭಳಿರೆ ||258||
ಎನ್ನೊಡನೆ ಬಾ ಹನುಮ ನೀನು | ಸುಗ್ರೀವ |
ನನ್ನು ನಾ ಕೊಂದೆನೆನುತಾ ನಪಗೆ ನಾನು ||
ಬಿನ್ನವಿಸುವೆನು ಖತಿಯೊಳವನು | ಕೊಲ್ಲಲೀ |
ಗೆನ್ನ ಕೊರಳಿತ್ತು ನಿನ್ನಸುವ ರಕ್ಷಿಪೆನು || ಭಳಿರೆ ||259||
ರಾಗ ಶಂಕರಾಭರಣ ಮಟ್ಟೆತಾಳ
ಮುದದಿ ಹನುಮ ನುಡಿದ ನಾನು |
ಮೊದಲು ಮುರಿದ ಮುನಿಯ ಮತ್ತೆ |
ಮದನೆಹರನ ತರಿದೆ ಬಳಿಕ | ಸದೆದೆ ರವಿಜನಾ ||
ವಿಧಿಜ ನಿನ್ನ ಮಡುಹಲವರ |
ವಧಿಸಿದಖಿಳ ದೋಷ ಪೋಪು |
ದಿದರೊಳೆನ್ನುತ ಕೊಂದನಾಗ | ಭಿದುರಕಾಯನು ||260||
ಮಗುಳೆ ಪದ್ಮಿಯಾಗಲದರ |
ಮಗಕುಲೇಶರೂಪ ಧರಿಸಿ |
ಸಿಗಿಯೆ ಸರ್ಪನಂತೆ ಬರಲು | ಖಗಪನಂದದಿ ||
ಚಿಗಿದು ಹನುಮ ಮುರಿಯಲೊಡನೆ |
ನೆಗೆದು ಮುನ್ನಿನಂದದಲ್ಲಿ ||
ವಿಗಡ ಕಾಲನೇಮಿ ನುಡಿದ | ನೆಗೆವ ರೋಷದಿ ||261||
ಕೀಶ ನಿನಗೆ ನಮ್ಮ ಗೆಲುವೆ |
ವಾಶಿ ಬೇಡ ನಿನ್ನ ತನುವ ||
ನಾಶಗೈವೆನೆನಲು ಪೇಳ್ದ | ಆಶುಗಾತ್ಮಜ ||
ವೇಷಧಾರಿಯೈಸೆ ಬದಲು |
ವೇಷ ಧರಿಸು ಕುಣಿಸಿ ಬಹು ವಿ |
ಲಾಸಗೊಳುವೆನೆಂದು ತಿವಿದ | ನಾಸುರೇಂದ್ರನ ||262||
Leave A Comment