ಭಾಮಿನಿ

ಮುಳಿದು ದೈತ್ಯನೊಳಿನಿತು ಮಾರುತಿ |
ಹಳಚಲೀಕರ್ಬುರನ ಮುರಿದಾ |
ಕೊಳದಿ ಬೀಳಿಸಲಳಿವನಿವನೆಂದಿಹುದು ವಿಧಿಲಿಖಿತ ||
ತಿಳಿಯೆ ನೀನದನೆನುತಲಂಬರ |
ದೊಳಗೆ ನುಡಿಯಾಗಲು ಮರುತ್ಸುತ |
ಖಳನ ಪಿಡಿದಪ್ಪಳಿಸಿ ಸಿಗಿದದ್ದಿದ ಸರೋವರದಿ ||263||

ವಾರ್ಧಕ

ಖಳ ಕಾಲನೇಮಿಯಂ ಕೊಂದು ಪವನಾತ್ಮಜಂ |
ನಳಿನರಿಪು ಕುಂಭಜರ ನಾಮದ ಮಹೀಧರವ |
ಚಳಕದಿಂದಡರಲೀಕ್ಷಿಸಿ ಮೊದಲು ಬಂದ ಕಪಿ ಬರುವ ಮತ್ತೀಗಲೆನುತ ||
ಕಳವಳಿಸುತಾ ಶಿಲಾಚಲದ ಕಾಪಿನ ಭಟರು |
ತಳುವದೌಷಧಿಗಳಂ ಕಿತ್ತು ಕೊಡಲದ ಬಾಲ |
ದೊಳಗಿರಿಸಿಕೊಂಡು ರಾಮಸ್ಮರಣೆಯಿಂದಪ್ಪರಿಸಿದಂ ಗಗನಪಥಕೆ ||264||

ರಾಗ ಘಂಟಾರವ, ಝಂಪೆತಾಳ

ಇತ್ತ ಸಾಕೇತ ನಗರದೊಳೆಚ್ಚರಿತು ಭರತ |
ಶತ್ರುಘ್ನ ಮಂತ್ರಿಗಳ ಕರೆದು ಚಿಂತಿಸುತ ||
ಹತ್ತು ಶಿರದವನು ಲಕ್ಷುಮಣನ ಮಡುಹಿದನೆನುವ |
ಉತ್ಪಾತವಹ ಕನಸ ಕಂಡೆ ಕೌತುಕವ ||265||

ಎನಲು ಶತ್ರುಘ್ನ ದುಃಖಿಸುತೆಂದ ರಾವಣನು |
ಜನಕಜೆಯನೊಯ್ಯಲವನೊಡನೆ ರಾಘವನು ||
ವನಚರರು ಸಹ ಸೆಣಸುವಾಗ ಸೌಮಿತ್ರಿಯನು |
ಅನುವರದಿ ಕೊಂದನಾ ಖಳ ದಶಾನನನು ||266||

ಎನಗೆ ಸೂಚನೆ ತೋರಿತದರಿಂದ ಸ್ವಪ್ನದೊಳು |
ಎನುತ ಮರುಗೆ ಸುಮಂತ್ರನುಡಿದನವದಿರೊಳು ||
ಮನುಜ ರೂಪಾಂತ ಮಹಿಮರಿಗೆಲ್ಲಿ ಭಯವಿಹುದು |
ಮನದ ಕಳವಳ ಕನಸಿನೊಳು ಗೋಚರಿಪುದು  ||267||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಧರೆಯ ದಿವಿಜರ ಮುಖದಿ ಶಾಂತಿಯ |
ವಿರಚಿಸಲು ದುಃಸ್ವಪ್ನ ದೋಷಗ |
ಳಿರದೆ ಪರಿಹರವೆಂದೆನಲು ಭೂ | ಸುರರನಾಗ ||268||

ಕರಸಿ ಶಾಂತಿಯ ಮಾಡುತಿರಲಂ |
ಒರದೊಳೌಷಧಿ ಸಹಿತಲನಿಲಜ |
ಬರುತ ನೋಡಿದ ಭರತಶತ್ರು | ಘ್ನರ ನಿಶಿಯಲಿ ||269||

ಅಲ್ಲಿರುವ ರಘುನಾಥ ಲಕ್ಷ್ಮಣ |
ರಿಲ್ಲಿಗೈದಿದರೀ ವಿಚಿತ್ರವ |
ಸೊಲ್ಲಿಸುವಡರಿ ದೆನುತ ನಭಪಥ | ದಲ್ಲಿ ಬಂದ ||270||

ಮರುತಪುತ್ರನ ಮುನ್ನ ಬಾಲದೊ |
ಳಿರಿಸಿದೌಷಧಿ ಇರದೆ ಮಿನುಲು |
ಪರಿಕಿಸುತ ಶತ್ರುಘ್ನನೊಡನಾ | ಭರತನೆಂದ ||271||

ನೋಡು ಕನಸಿನ ಕೇಡಿನದ್ಭುತ |
ಮೂಡಿಹುದು ಪುಷ್ಕರದಿಚಾಪವ |
ನೀಡು ನಾನದನೆಚ್ಚು ಕೆಡಹುವೆ | ರೂಢಿಗೆನಲು ||272||

ಭಾಮಿನಿ

ಎಲವೊ ರಾಘವ ಕಾರ್ಯಪರನಿವ |
ಕೊಲದಿರೆನ್ನುವ ಗಗನ ವಚನವ |
ನೊಲಿದು ಕೇಳುತ ಸುಖಿಗಳೆಮ್ಮವರೆಂದು ಪೊಳಲೊಳಗೆ ||
ಗೆಲವಿನಿಂದಿರಲರಿತು ಕಪಿಕುಲ |
ತಿಲಕ ಮುಂದೈತರಲು ಗಜರುತ |
ಜಲಧಿಮದ್ಯದಿ ತಡೆದ ಹನುಮನ ಮಾಲ್ಯವಂತ ಖಳ ||273||

ಕಂದ

ಈ ವಾರಿಧಿಯೊಳ್ ಘನತರ |
ಠೀವಿಗಳೊಳ್ ತಡೆವದಕ್ಕೆ ನೀನಾರೆಂದಂ ||
ರಾವಣನಪ್ಪಣಿಯಿಂ ತವ |
ಜೀವಕೆ ರಿಪು ಮಾಲ್ಯವಂತ ಖಳ ತಾನೆಂದಂ ||274||

ರಾಗ ಸುರುಟಿ ಮಟ್ಟೆತಾಳ

ಎನಲುಸುರ್ದನು | ದನುಜ ನಿನ್ನನು ||
ಹನನ ಗೈದು ಪೋಪೆನೆಂದು | ಹರಿಕುಲೇಶನು ||275||

ಎಲವೊ ವಾನರ | ಎನ್ನೊಳನುವರ ||
ಸುಲಭವಲ್ಲೆನುತ್ತ ಸರಳ | ಸುರಿದ ಕರ್ಬುರ ||276||

ಕಡುಗಿ ಹನುಮನು | ನುಡಿದ ಖಳರನು |
ಹೊಡೆವುದೆನಗೆ ಸುಲಭವೆನುತ | ಪಿಡಿದು ತಿವಿದನು ||277||

ವಾರ್ಧಕ

ಅನಿಲಜನ ಕರಹತಿಗೆ ಪಾತಾಳ ಲೋಕಕಾ |
ದನುಜಹೊದ್ದಿದನಿತ್ತಲೌಷಧಿಯ ಹೊರೆ ಸಹಿತ |
ಮಿನುಗುತ್ಕೆದುವ ಕಪಿಯ ಕಿರಣಮಭ್ರದಿ ಹೊಳೆಯೆ ಕಂಡು ರಾಮಂಕೋಪದಿಂ ||
ಅನುಜನೇಳದ ಮೊದಲುದಯಿಸಿದನೆ ಹಂಸನಾ |
ತನ ಕೊಲುವೆನೆನನುತ ಚಾಪದ ಧರಿಸಲಾಗ ವಿಧಿ |
ತನುಜನುಸುರಿದನಿವಂ ಖಗನಲ್ಲ ವಜ್ರಾಂಗ ಬೃಹನೆಂದು ಕೈಮುಗಿದನು ||278||

ಭಾಮಿನಿ

ಶಿವಶಿವಾ ತಪ್ಪಾಯ್ತೆನುತ ಚಾ |
ಪವನಿಳುಹಲಾ ಬಳಿಕ ಮಾರುತಿ |
ಜವದಿ ಬಂದು ಸರೋಜನಾಭವ ಪದಕೆರಗಲೊಡನೆ |
ಬವರಗಲಿ ಬಂದೆಯ ಸಮೀರನ |
ಕುವರ ಮುಖ್ಯಪ್ರಾಣ ಬಾರೈ |
ಭುವನ ಪಾವನಚರಿತ ಬಾರೆಂದನು ರಾಮ ||279||

ರಾಗ ಕಾಂಭೋಜಿ ಝಂಪೆತಾಳ

ಸುರವೈರಿಗಳಿಗೆ ನೀ ಸಿಲುಕದಂದದಿ ಪೋಗಿ |
ಪರಮಸಂಜೀವನೌಷಧಿಯ ||
ಇರುಳಿನೊಳು ತಂದ ಸಾಹಸವ ಪೊಗಳುವರೆ ಸಾ |
ಸಿರ ಬಾಯ ಸರ್ಪಗರಿದಯ್ಯ ||280||

ಎನೆ ಪಾವಮಾನಿ ತಲೆದೂಗಲು ಸಭಾಂಗಣದೊ |
ಳನಿಮಿಷರು ನುಡಿದರೀ ಭಟನು ||
ಮುನಿಪ ಶಾಂಡಿಲ್ಯನಿಂನೆಗಳಾದ ಧಾನ್ಯಮಾ |
ನಿನಿಯ ಶಾಪವ ಕಳೆದನಿವನು  ||281||

ಕಾಲನೇಮಿಯ ಮುರಿದು ಮಧುಮಾಲತಿಯು ಸಹಿತ |
ಮಾಲಸ್ಯಮಿಲ್ಲದೇಳ್ತಂದು |
ಖೂಳ ಖಳ ಮಾಲ್ಯವಂತನ ಕಡಲ ನಡುವೆ ಪಾ |
ತಾಳಕದ್ದಿದನೆಂದರಂದು   ||282||

ಸುರರ ನುಡಿ ಕೇಳ್ದು ರಾಮನುಸುರ್ದಬಳಲಿದೈ |
ಪಿರಿದಾಗಿ ನಮ್ಮಿಂದಲೆನುತ ||
ಶರಣನಂ ತಳ್ಕೈಸಲೀ ಮಾತ  ನೀವಾಡ |
ದಿರಿ ನಿಮ್ಮ ಕಿಂಕರನೊಳೆನುತ ||283||

ಔಷಧಿಯ ಮುಂದಿರಿಸಲದನಂದು ರಘುನಾಥ |
ನಾ ಸುಪೇಷಣ ಕರೆದು ನಗುತ ||
ನೀ ಸುಗುಣ ಲಕ್ಷ್ಮಣ ವಿಭೀಷಣರ ರವಿಜಾದಿ |
ಕೀಶ ಸೈನ್ಯವನೆಬ್ಬಿಸೆನುತ  ||284||

ಭಾಮಿನಿ

ಆ ಸುಪೇಷಣ ಕರದೊಳಗೆ ನಾ |
ಲ್ಕೌಷಧಿಯ ತಾ ನಾಯ್ದು ಕೊಡಲು ವಿ |
ಲಾಸದಿಂ ಲಕ್ಷ್ಮಣನ ಮೂಗಿನೊಳೆರೆಯಲೆಚ್ಚತ್ತ ||
ಕೀಶ ಸೈನ್ಯವನೆಬ್ಬಿಸಲು ವಾ |
ರಾಶಿ ಘೋಷದಿ ಸಕಲ ಕಪಿಬಲ |
ವಾಸುದೇವನ ನುತಿಸುತೀರ್ದುದು ಜಯ ನಮೋ ಎನುತ ||285||

ವಾರ್ಧಕ

ವನಜನಾಭನ ವದನಪದ್ಮವಿಕಸಿತವ್ಯಾತು |
ಜನಕ ಜಾತೆಯ ಮನದ ತಿಮಿರ ಮಡುಗಿತು ದಶಾ |
ಸ್ಯನ ಹತ್ಕುಮುದ ಕಂದಿತಾ ಲಕ್ಷ್ಮಣನ ಜೀವವೆಂಬ ಸೂರ್ಯೋದಯದಲಿ ||
ದನುಜರಿಪು ಸಂತೋಷ ಶರಧಿಯೊಳ್ ಮುಳುಗಿ ತ |
ನ್ನನುಜನಂ ಮುದ್ದಿಸಲು ವಾನರರ್ವಾಯುಜಾ |
ತನ ಪೊಗಳುತಿರೆ ಸುರರು ಸುಮವ ಸೂಸಿದರರ್ಕನಡರಿದಂ ಪುಷ್ಕರವನು ||286||

ರಾಗ ಮುಖಾರಿ, ಏಕತಾಳ

ಬಂದ ಸಾಕೇತಪುರಕೆ ರಾಮ | ರವಿಕೋಟಿ ಧಾಮ | ಬಂದ    || ಪಲ್ಲವಿ ||

ಕಾಳಗದಲಿ ಖಳ | ಜಾಲವನೀಪರಿ | ಹೇಳಿ ಕುಮಾರಕ | ನಾಳಯಕೈದಿಸಿ |
ಖೂಳ ರಾವಣನ ಕ | ಪಾಲವನೆಲ್ಲವ | ಸೀಳಿ ಬಿಸುಟು ಲಂ | ಕಾ ಲಕ್ಷ್ಮಿಯ ದಶ |
ಮೌಳಿಯ ತಮ್ಮಗೆ | ಲೀಲೆಯೊಳೊಲಿಸಿ ಸು | ರಾಳಿ ಹೊಗಳೆ ಸೀ | ತಾ ಲಲನೆಯ ಸ |
ಮ್ಮೇಳದಿ ಹೊರವಂ | ಟಾ ಲಕ್ಷ್ಮಣ ಕಪಿ |  ಪಾಳಯ ಸಹಿತಲಿ | ಮೂಲೋಕಾರ್ಚಿತ | ವ್ಯಾಳಶಯನ ಸಿರಿ | ಲೋಲ ಸನಾತನ | ನಾಳಿಕಲೋಚನ | ನೀಲಗಳ ಪ್ರಿಯ |
ಹೇಳಿರುಚಿರಗುಣ | ಶೀಲ ಪರಮ ಕರು | ಣಾಳು ರಘುಕ್ಷಿತಿ | ಪಾಲ ವಿಲಾಸದಿ ||287||

ಭಾಮಿನಿ

ಜನನಿಯರ ಸಂತೈಸಿ ಕೈಕಾ |
ತನುಜ ಸೌಮಿತ್ರಾದಿ ತತ್ಪುರ |
ಜನರ ಮನ್ನಿಸಿ ವಾಮದೇವ ವಸಿಷ್ಠ ಮೊದಲಾದ ||
ಮುನಿವರರ ಸಮ್ಮತದಿ ಸಿಂಹಾ |
ಸನವ ಮುನಿಪತಿ ಪೇಳ್ದ ಲಗ್ನದಿ |
ಜನಕಜಾವಲ್ಲಭನಡರ್ದ ಸುಮಂಗಲೋತ್ಸವದಿ ||288||

ಆರತಿಹಾಡು

ಸುರತರುಣಿಯರಾ ಸಮಯದಿ ಭಾ |
ಸುರ ರತ್ನದ ಹಸೆಯಲಿ ಸೀತಾ |
ತರುಣೀಮಣಿ ರಾಘವರನು ವಗ್ಗಿಲಿ |
ಹರುಷದಿ ಕುಳ್ಳಿರಿಸುತ ಸಂತಸದಲಿ |
ಸುರುಚಿರದಾರತಿಯ ಬೆಳಗಿರಿ || ಶೋಭಾನೆ ||289||

ಮೊರೆವ ಮದಂಗ ಸಂಗೀತದೊಳ |
ಪ್ಸರ ಸತಿಯರ ನಾಟ್ಯದಿ ಭೂಮಿ |
ಸುರರ ಮಂತ್ರದಲಿ ತರುಣೀಮಣಿಯರು |
ಸ್ವರವೆತ್ತಿ ಶೋಭಾನವ ಪಾಡುತ ವರ |
ಕುರುಜಿನಾರತಿಯ ಬೆಳಗಿರೆ || ಶೋಭಾನೆ  ||290||

ಅಹಿವೇಣಿಗೆ ಅಹಿಶಯನನಿಗೆ |
ತುಹಿನಕುಲೇಶಗೆ ಅಗಸುತೆಗೆ |
ಮಹಿಜಾತೆಗೆ ವರ ಸೀತಾನಾಥಗೆ |
ವಹಿಲದಿ ವನಿತೆಯರೈತಂದಿದಿರಲಿ |
ಬಹುವಿಧದಾರತಿಯ ಬೆಳಗಿರೆ || ಶೋಭಾನೆ ||291||

ಭಾಮಿನಿ

ಕಮಲಜಾಂಬಕನೀ ಪರಿಯ ಸಂ |
ಭ್ರಮದ ನರನಾಟಕದಿ ಸೀತಾ |
ರಮಣಿ ಸಹಿತಲಿ ಭರತ ಸೌಮಿತ್ರೇಯರೊಗ್ಗಿನಲಿ ||
ಅಮಿತ ಸೌಭಾಗ್ಯದಿ ವಿಧಾತಾ |
ದ್ಯಮರರಿಂನುತಿಗೊಳುತ ಲಕ್ಷ್ಮೀ |
ರಮಣನಾಳುತಲಿರ್ದನೈ ಸಾಕೇತ ಪುರವರವ ||292||

ವಾರ್ಧಕ

ವರ ಶೌನಕಾದಿ ಋಷಿಗಳಿಗೆ ಮುನಿಸೂತನೀ |
ತೆರದೊಳುಸುರಿದ ರಾಮ ಚರಿತಾಬ್ದಿಯಲ್ಲಿ ಭೂ |
ಸುರಕುಲಜ ವೆಂಕಟಕುಮಾರ ಪರಮೇಶ್ವರಂ ಶಾಸ್ತ್ರಾರ್ಥಮಂ ತಿಳಿಯದ ||
ಹರಿಮಹೀಧರಗೇಹ ನುಡಿಸಿದ ಸುವಾಣಿಯಂ |
ಗುರುವಿನಾಜ್ಞೆಯ ಪಡೆದು ಸಂಜೀವನದ ಕಥೆಯ |
ನೊರೆದನಿದ ಕೇಳ್ವ ಕಮಲಾಕ್ಷ ಶರಣರಿಗೆ ರಾಘವನೀವನಾನಂದವ ||293||

ಮಂಗಲಪದ

ಶ್ರೀ ರಾಮಚಂದ್ರಾಯ ಶುಭ ಮಂಗಳಂ | ಮಹಾ |
ಕಾರುಣ್ಯ ಭವನಾಯ ಜಯ ಮಂಗಳಂ  || ಪಲ್ಲವಿ ||

ಸೀತಾಸ್ಯನಳಿನಸೂರ್ಯಾಯ ಶುಭ ಮಂಗಳಂ ||
ವಾತಜನಮಿತ್ರಾಯ ಜಯ ಮಂಗಳಂ ||
ಯಾತುಧಾನವಿನಾಶಾಯ ಶುಭ ಮಂಗಳಂ |
ಭೂತೇಶಮಿತ್ರಾಯ ಜಯ ಮಂಗಳಂ ||
ಜಯ ಮಂಗಳಂ | ನಿತ್ಯ ಶುಭ ಮಂಗಳಂ ||294||

ಮದ್ಗುರು ಸುಸೇವ್ಯಾಯ ಶುಭ ಮಂಗಳಂ | ಸದಾ |
ಸದ್ಗುಣ ಸಮುದ್ರಾಯ ಜಯ ಮಂಗಳಂ ||
ಶುದ್ಧ ಸಾಗರ ಮಂದಿರಾಯ ಶುಭ ಮಂಗಳಂ |
ಸದ್ಗಾನಲೋಲಾಯ ಜಯ ಮಂಗಳಂ |
ಜಯ ಮಂಗಳಂ | ನಿತ್ಯ ಶುಭ ಮಂಗಳಂ ||295||

ಪದ್ಮಜನುತಾಂಘ್ರಿಯುಗಳಾಯ ಶುಭ ಮಂಗಳಂ |
ಪದ್ಮೇಶವರದಾಯ ಜಯ ಮಂಗಳಂ ||
ಪದ್ಮಾಕ್ಷ ಶ್ರೀವೆಂಕಟೇಶಾಯ ಮಂಗಳಂ |
ಪದ್ಮಾವತೀಶಾಯ ಜಯ ಮಂಗಳಂ ||
ಜಯ ಮಂಗಳಂ | ನಿತ್ಯ ಶುಭ ಮಂಗಳಂ ||296||

ಪಾರ್ವತಿಮಂಗಲಪದ

ಕಮಲಾಕ್ಷಿಗೆ ಕರುಣಾಕರೆಗೆ |
ವಿಮಲ ಚರಿತ್ರೆಗೆ ವಿಧುಮುಖಿಗೆ |
ಕಮನೀಯ ಮೂರ್ತಿಗೆ ಕಂಬು ಸುಕಂಠೆಗೆ |
ಭ್ರಮರಾಳಕಿ ಭಾರ್ಗವಿ ಶಿವೆಗೆ |
ಮಂಗಳಂ ಜಯ ಮಂಗಳಂ ||297||

ದುಷ್ಟಸ್ತಂಬಿನಿಯೆನಿಪಳಿಗೆ |
ಕಷ್ಟದರಿದ್ರವ ಹರಿಪಳಿಗೆ |
ಸೃಷ್ಟಿಸ್ಥಿತಿಲಯ ಕಾರಣಭೂತೆಗೆ |
ಇಷ್ಟವಭಕುತರಿಗೀವಳಿಗೆ ||
ಮಂಗಳಂ ಜಯ ಮಂಗಳಂ ||298||

ದೇಶಿಗ ಶಂಕರಗೊಲಿದಳಿಗೆ |
ಕ್ಷೇಶವಿದೂರವ ಮಾಳ್ಪಳಿಗೆ |
ವಾಸವಮುಖ್ಯಾಮರರನು ಸಲಹಿದ |
ಈಶೆಗೆ ಶ್ರೀಬಕುಳಾಂಬಕೆಗೆ |
ಮಂಗಳಂ ಜಯ | ಮಂಗಳಂ ||299||

* * *