ರಾಗ ಮೆಚ್ಚು ಅಷ್ಟತಾಳ

ಕೇಳಿರೈ ಸಮರ  ಸೌಭಾಗ್ಯರು | ಬೇಗ |
ನೇಳಿ ಸಂಗರಕೆ ನೀವೆಲ್ಲರು ||
ಕಾಳಗದೊಳು ನೃಪ ವರರನ್ನು | ಗಲ್ದು |
ಬೀಳುಗೆಡಹಿ ತರುಚರರನ್ನು ||67||

ಧುರದಿ ಪೋದತಿಕಾಯ ಮುಖ್ಯರ ಇಂದು |
ಮರೆಯಬೇಕೈ ಗೆಲಿದಹಿತರ ||
ಪೊರಡಲೆಮ್ಮೊಡನೆ ಚತುರ್ಬಲ | ಸಹಿ |
ತಿರದಗಣಿತ ದೈತ್ಯ ಸಂಕುಲ ||68||

ಎನುತ ದೈತ್ಯರಿಗುಡುಗರೆಯನ್ನು | ಕೊಟ್ಟು |
ರಣಕೆ ತಾಂಬೂಲವನಿತ್ತನು ||
ಇನಕುಲತಿಲಕನಗೆಲುವೆನು | ಯೆಂಬ |
ನೆಣಗೊಬ್ಬಿನಲಿ ಖಡ್ಗವಿಡಿದನು ||  ||69||

ವಾರ್ಧಕ

ಸುರಪಜಿತುವತಿಕಾಯನಳಿದ ವಾರ್ತೆಯ ಕೇಳು |
ತಿರದೆಯುದರದಿ ಶೋಕಶಿಖಿಯುರಿಯಲೊಡನೆ ಪು ||
ಷ್ಕರ ಮಣಿಜನಂತೆ ರೋಷವ ತಾಳಿ ಕೌಣಪಾಗ್ರಣಿಯು ವರ್ಧಿಪ ಶೌರ್ಯದಿ ||
ಧರೆ ಬಿರಿಯಲುಬ್ಬಿರಿದು ಪವನಗಮನದೊಳೈದಿ |
ಕರದ ಖಡ್ಗಾಯುಧವ ಝಳಪಿಸುತ ರಾವಣೇ |
ಶ್ವರನ ಚರಣದಿ ಮಸ್ತಕವ ಚಾಚುತೆಂದನೆಣ್ದಿಸೆಯವರ್ಬೆಚ್ಚುವಂತೆ ||70||

ರಾಗ ಮಾರವಿ, ಏಕತಾಳ

ತಾತನೆ ಲಾಲಿಸಿ ಕೇಳೆನ್ನನುಜನ | ಘಾತಿಸಿದವರನ್ನು |
ನಾ ತಳುವದೆ ಗೆಲಿದರಿವೆನು ನೋಡಿ | ನ್ನಾ ತರುಚರರನ್ನು ||71||

ಪರ ಸೈನ್ಯಾಂತಕ ನಾನಿರಲೇತಕೆ | ಧುರಕೈದುವೆ ನೀನು ||
ನರ ವಾನರರುಗಳಂಜಿಕೆಯಿರುವದೆ | ಹರಿಬದೊಳೆನಗಿನ್ನು ||72||

ಅಪ್ಪಣೆಕೊಡು ಸಮರದಿ ಕಪಿಗಳ ಹ್ಯೊ | ದಪ್ಪಳಿಸುವೆನಿನ್ನು |
ದರ್ಪಕರಿಪು ತಡೆದರು ಬಿಡದುಭಯರ | ದರ್ಪವ ನಿಲಿಸುವೆನು ||73||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಮಗನೆ ಸಾಹಸಿಯಹುದು ನೀ ಕಾ |
ಳಗದಿ ಮಡುಹಿದೆ, ಮುನ್ನ ರಿಪುಗಳ |
ಮಗುಳೆ ಜೀವಿಸಿ ಕೊಲುವರೀಖಳ | ರುಗಳನವರು ||74||

ಇನ್ನು ನಿನಗವರಂಜುವರೆ ನಾ |
ಸೈನ್ಯ ಸಹಿತಲೆ ಪೋಗಿ ಕಪಿಬಲ |
ವನ್ನು ಸದೆಬಡಿದಾನಪಾಲಕ | ರನ್ನು ರಣದಿ ||76||

ಜವಗೆಡಿಸಿ ಮೊದಲಾಹವದಿ ಪೋ |
ದವರ ಹಂಬಲ ಮರವೆ ರಾಕ್ಷಸ |
ನಿವಹಸಹಿತೀ ಪುರವ ಕಾದಿರು | ಕುವರ ನೀನು ||77||

ರಾಗ ಕಾಂಬೋಧಿ ಝಂಪೆತಾಳ

ಎನುತಲಣುಗನಪುರದ || ರಕ್ಷೆಗಿರಿಸಿ ದಶಾಸ್ಯ |
ಅನುವರಕೆ ಪೊರಡಲನಿತರೊಳು |
ಮನಸಿಜನ ಕೊರಲಗಿನಂತೆ ಬಂದಳು ಮಯನ |
ತನುಜೆ ವನಿತಾ ಸಮೂಹದೊಳು ||78||

ನವರತ್ನದಾರತಿಯ ಬೆಳಗಿ ರಿಪು ಸೈನಿಕರ |
ಶಿವನ ಕರುಣದಿ ಜೈಸು ನೀನು |
ಬವರಗಲಿಯಾಗೆಂದು ತನ್ನ ರಮಣನ ಪರಸಿ |
ಯುವತಿ ತಳಿದಳು ಸೇನೆಯನು | ||79||

ಚತುರಾಸ್ಯದತ್ತ ಮಣಿರಥವ ಸಿಂಗರಿಸಿ ಸಾ |
ರಥಿಯು ತರಲಶ್ವಗಳ ಖುರಕೆ ||
ರತುನಗಳ ಕಟ್ಟಿ ಮುತ್ತುಗಳ ಬಿಗಿದೊಡನೆ ಖಳ |
ಪತಿಯಡರಿ ನಡೆದನಾಹವಕೆ ||80||

ಕಂದ

ಸಾಮಜ ವಾಜಿ ವರೂಥ |
ಸ್ತೋಮದಿ ಖಳರಾಯುಧಂಗಳಂ ಝಡಿಯುತ್ತಂ ||
ನೇಮದಿ ದಶಕಂಠನೊಳಂ |
ಗೋಮಿನಿ ಗಡಗುಟ್ಟುವಂತೆ ಪೊರಟರ್ ಭರದಿಂ ||81||

ರಾಗ ಮುಖಾರಿ, ಏಕತಾಳ

ರಣಕೆ ಸನ್ನಾಹವಾಗಿ ಬಂದು | ಕಡು ರೋಷದಿಂದ || ರಣಕೆ || ಪಲ್ಲವಿ ||
ಹೊಣಿಕೆಯೊಳಂಬರಮಣಿವಂಶಜರೊಳು |
ಸೆಣಸಲೋಸುಗ ರಾವಣ ನೈಶಾಚರ || ರಣಕೆ  || ಅನುಪಲ್ಲವಿ ||

ಮೊಳಗುವ ಘಂಟಾವಳಿಯ ಮಹಾರವ |
ದೊಳು ನರ್ತಿಪ ಹಯಗಳ ಸಾರಥಿ ಮುಂ |
ಕೊಳಿಸುವ ಘರ್ಜನೆಯೊಳು ನಭಕಡರುವ |
ಪಳವಿಗೆಯಿಂ ಥಳಥಳಿಪರೂಥದಿ || ರಣಕೆ ||82||

ಸತ್ತಿಗೆ ಚಾಮರವೆತ್ತ ಪರೀಕ್ಷಿಸ |
ಲಿತ್ತಟ್ಟಲಿ ಕರವೆತ್ತುತ ಪೊಗಳುವ |
ಭತ್ಯರ ನೋಡುತ ಹಸ್ತಿ ತುರಗ ರಥ |
ಪತ್ತಿ ಸಮೂಹದಿ ದೈತ್ಯ ಶಿರೋಮಣಿ || ರಣಕೆ ||83||

ಬೊಬ್ಬಿರಿವುತ ನೆಣಗೊಬ್ಬಿಲಿ ವಾದ್ಯದ |
ಬೊಬ್ಬೆಯೊಳಸುರರು ಉಬ್ಬುತಲಡಿಗಡಿ |
ಗುಬ್ಬಣಗಳ ಪಿಡಿದಭ್ರದಿ ದಿವಿಜರ |
ಗರ್ಭವ ನಡುಗಿಸುತರ್ಭಟೆಯಿಂದ || ರಣಕೆ ||84||

ರಾಗ ಸುರುಟಿ, ಮಟ್ಟೆತಾಳ

ಸೆಣಸಿದರಂದು ಸಮರಕೆ ನಿಂದು || ಸೆಣಸಿದರಂದು    || ಪಲ್ಲವಿ ||

ಹರಿಕುಲತಿಲಕನ ನೆನೆವುತ | ಅರಿಗಳ ಮುತ್ತಿದರು ||
ಗಿರಿತರುಗಳ ಪಿಡಿದಿರದು | ಬ್ಬಿರಿವುತ ವಾನರರು ||85||

ಸೀತಾಚೋರನ ಪಿಡಿದು ವಿ | ಘಾತಿಸಿರೆಂದೆನುತ |
ಕಾತುರದಿಂ ತರುಗಳ ರಿಪು | ಯೂಥಕೆ ತೆಗೆದಿಡುತ  ||86||

ಗಜರುತ ಕೌತುಕ ಹಯರಥ | ಗಜಘಟೆ ಪತ್ತಿಗಳ |
ಕುಜದಿಂದಪ್ಪಳಿಸಿದರಾ | ಕುಜಚರ ವೈರಿಗಳ ||87||

ಯುವತಿಯ ನಮ್ಮರಸಂಗಿ | ತ್ತವನೇಳ್ತರಲೆನುತ |
ಪ್ಲವಗ ಸಮೂಹಕೆ ಶಸ್ತ್ರಾ ಸ್ತ್ರವ ದಾನವರೆನುತ ||88||

ಹಲವು ತೆರದಿ ಹಳಚಿದರಿ | ಕ್ಕೆಲರು ವಿರೋಧದಲಿ ||
ಕಲಹದಿ ಹಿಂಗಿತುದಾನವ | ಬಲ ಗಜಬಜಿಸುತಲಿ ||89||

ಭಾಮಿನಿ

ಹನುಮ ಜಾಂಬವ ನೀಲನಳ ರವಿ |
ತನಯ ಗವಯಗವಾಕ್ಷ ವಾಲೀ |
ತನುಜ ಮುಂತಾದಖಿಳ ಕೀಶ ಕದಂಬವೀತೆರದಿ |
ದನುಜ ಸೈನ್ಯವ ಸವರಲೀಕ್ಷಿಸು |
ತನುವರಕೆ ಸೂಟಿಯಲಿ ಮಣಿಸ್ಯಂ |
ದನವ ರಿಪುಮೋಹರಕೆ ನೂಕಿದ ವೀರ ದಶಕಂಠ ||90||

ವಾರ್ಧಕ

ದುರುಳನತಿ ಕೋಪಮಂ ತಳೆದಾರ್ದು ನೋಡಿದಂ |
ಸುರುಚಿರದ ಮಾರ್ಗಣದಿ ಕೂರ್ಗಣಿಯ ಪೂಡಿದಂ |
ಧುರದಿ ಬೊಬ್ಬಿರಿದು ಆ ಕರ್ಣಾಂತ ಸೆಳೆದಾರ್ದು ತೆಗದೆಚ್ಚನಧಟಿನಿಂದ ||
ಶರವೆರಗಿ ಕಪಿಗಳಂ ಕೆಡಹಲಾ ದಶಗಳಂ |
ಸುರಪಸುತ ವೈರಿಯಂ ಫಣಿಪಾವತಾರಿಯಂ |
ಜರಿವುತುಗ್ಗಡಿಸಿದಂ ಮಣಿರಥವ ನಡೆಸಿದಂ ಸೂತನ ಸಹಾಯದಿಂದ ||91||

ಕಂದ

ಹಾ ಹಾ ರಘುವೀರರ ಬಳಿ |
ಗಾಹವದೊಳ್ದಾನವೇಂದ್ರನೈದಿದನೆನುತಂ ||
ಬೇಹಿನ ಕಪಿಗಳ್ಗ ಜರ  |
ಲ್ಕಾಹಂಸಜ ಬಂದುಸೂರ್ದ ರಾವಣಗಾಗಳ್ ||92||

ರಾಗ ಶಂಕರಾಭರಣ ಮಟ್ಟೆತಾಳ

ದುರುಳ ರಥವ ತಿರುಹು ನಮ್ಮ |
ಹೊರಗೆ ದನುಜವಂಶ ದಂಡ |
ಧರನ ತುಡುಕಬೇಡ ಘೋರ | ತರದಮಾರಿಗೆ ||
ಸೆರೆಯನಿತ್ತೆ ನಿನ್ನ ಕುಲವ |
ಪರಕೆ ದೂರನಾದೆ ನೀನು |
ಧರಣಿಸುತೆಯ ನೆವದೊಳೆಂದು | ಗಿರಿಯನಿಟ್ಟನು ||93||

ಕುಧರಹತಿಗೆ ನೊಂದು ದೈತ್ಯ |
ನಧರ ವಡಿಯುತೆಲವೊ ಕಪಿಯೆ |
ಸುದತಿಗಾಗಿ ಪೂರ್ವಭವನ | ವಧೆಯಗೈಸಿದ ||
ಅಧಮ ನೀನು ನಿನಗೆ ಸಮರ |
ತ್ರಿದಶಕುಲವಿರೋಧಿಯೊಡನೆ ||
ಸದರವಲ್ಲೆನುತ್ತ ಬಾಣ | ನಿಧಿಯತುಳುಕಿದ ||94||

ಸರಳು ನಾಂಟಿಯಿನಜ ಮೈಯ |
ಮರೆಯಲಗ್ನಿಜಾತ ಶೈಲ |
ಮರಗಳನ್ನು ಪಿಡಿದು ಮುಂದು | ವರಿದುಸೂರ್ದನು |
ಹರಿಯೊಳಹಿತವೆತ್ತು ಬಳಗ |
ವೆರಸಿ ಮೀಸಲಾದೆ ಯಮಗೆ |
ದುರುಳತನದೊಳೆಂದು ಪೊಡೆದ | ತರುಗಳಿಂದಲಿ ||95||

ಬಣಗು ಕೀಶ ವಿಷದ ಹೊಳೆಯ |
ನೊಣಗಳೀಸಿ ಬದುಕಲುಂಟೆ |
ರಣದಿ ಕಪಿಗಳಸುರರೊಡನೆ | ಸೆಣಸಿಜೀವಿಪ ||
ಪಣವಿದಾವದೆಲವೊ ನಮ್ಮೊ |
ಳಣಕವೇಕ ನಿನಗೆನುತ್ತ |
ಕಣಿಯ ಕವಿಸಲಳುಕದಗ್ನಿ | ಯಣುಗನೆಂದನು  ||96||

ಕೆಡುಕರಿಗೆ ವಿಲಾಸ ನಿನ್ನ |
ನುಡಿಗಳಲ್ಲಿ ಮೆರೆವುದೆನುತ |
ಅಡಚಿಕಲು ಮರಾಸ್ತ್ರ ಶಸ್ತ್ರ | ಗಡಣವೆಸುತಲಿ ||
ಮಿಡುಕದೀರ್ವರುರುಬಿ ಗಿಳಿಗೆ |
ಗಿಡುಗವೆರಗುವಂತೆ ಖಳನ |
ಪಿಡಿದು ಬಾಲದಲ್ಲಿ ಕಟ್ಟಿ | ಜಡಿದು ತೂಗಿದ ||97||

ರಾಗ ಜೋಗುಳ, ಅಷ್ಟತಾಳ

ಜೋ ಜೋ ಕಳ್ಳರ ಕುಲ ಶಿರೋಮಣಿಯೆ |
ಜೋ ಜೋ ರಣಹೇಡಿಗಳ ಕೈಯ ಗಿಣಿಯೆ ||
ಜೋ ಜೋ ಕಡುಖೂಳರಿಗೆ ತೌರುಮನೆಯೆ |
ಜೋ ಜೋ ಭಂಡರ ಭಾಗ್ಯದ ಕಣಿಯೆ || ಜೋ ಜೋ ||98||

ಅಳಲದಿರೆನ್ನ ಕಂದಯ್ಯ ದುಶ್ಯೀಲ |
ಮೊಲೆಯ ನೀಡುವರೆ ತಾಯಿಯು ನಿನಗಿಲ್ಲ ||
ಕಲಹದಿ ನಾ ನಿನ್ನ ಕೊಲುವವನಲ್ಲ |
ಗಳಿತ ಜೌವನೆಯರ ತೊಟ್ಟಿಲ ಬಾಲ | ಜೋ ಜೋ  ||99||

ಪಥ್ವಿ ಜಾತೆಯನಿತ್ತು ಶ್ರೀರಾಮಚರಣ |
ಭತ್ಯ ನೀನಾದರುಳುಹಿಕೊಂಬೆ ಹರಣ ||
ಕತ್ರಿಮ ಕುಟಿಲ ವಿದ್ಯದಿಸು ಪ್ರವೀಣ |
ಹತ್ತು ಮಂಡೆಯ ಘೋರ ರೂಪಿನ ಕೋಣ || ಜೋ ಜೋ ||100||

ವಾರ್ಧಕ

ಸುರನಾರಿಯರು ನೋಡಿ ನಗುತಿರಲು ಶೋಕಿಸುವ |
ದುರುಳನ ರಥಸ್ತಂಭದೊಳು ಬಿಗಿಯಲೊಡನೆ ಚೇ ||
ತರಿಸಿನೀಲನ ರಣದಿ ಸೋಲಿಸಲ್ಕಂಡು ಮುಖ್ಯಪ್ರಾಣ ಒರೆಯಲವನೊಳು ||
ಧುರದಿ ಮುಷ್ಟಿತ್ರಯದಿ ಗೆಲುವವಾಸಿಯನೆಗಳಿ |
ಮರುತಜನ ತಾ ಮುನ್ನ ತಿವಿದು ಪುನರಪಿ ಕಪೀ |
ಶ್ವರನ ಕರಹತಿಗೆ ತಾ ಮೈರೆದು ಮುಗುಳೆದ್ದು ಮತ್ತೆ ಹನುಮನ ಪಿಡಿದನು ||101||

ರಾಗ ಸುರುಟಿ, ಏಕತಾಳ

ವಿವರಿಸಲೇನದನು | ದನುಜಾ | ಧವನ ಸಹಸವನು ||
ವವನಕುಮಾರನ | ತಿವಿದು ಕೆಡಹಿ ಕಪಿ |
ನಿವಹವ ಸದೆಯುತ || ತವಕದಿ ಬಂದನು || ಪಲ್ಲವಿ ||

ಖಾತಿಯೊಳಗ್ರಜಗೆ | ಶರಮಾ | ನಾಥ ನುಡಿದ ನಿನಗೆ ||
ಜಾತರಹಿತನೊಡ | ನೇತಕೆ ಹಗೆತನ | ಸೀತೆಯ  ನಳಿನಜ | ತಾತಂಗೊಪ್ಪಿಸು |
ಪಾತಕವೆಸಗಿ ದು | ರಾತುಮ ನರಕದಿ | ನೀ ತೊಳಲದಿರೆನು | ತಾತನುಸೂರ್ದನು ||  ||102||

ಆರು ಕಲಿಸಿದಂಥ | ಮಾಯವ | ಬೀರುವೆ ಸಹಜಾತ ||
ವೈರಿ ಭಟನನೀ | ಸೇರಿ ಕುಲಕೆ ಹೆ | ಮ್ಮಾರಿಯ ತಂದ ವಿ | ಕಾರಿಯೆ ನಿನ್ನ ಶ |
ರೀರವ ತೀರ್ಚುವೆ | ನೀ ರಣದೊಳಗೆನು | ತಾರು ಶರವೆನೆಸ | ಲೀ ರಸಗುರುಳಿದ ||  ||103||

ಮತ್ತಾ ಸಮಯದಲಿ | ವರ ಸೌ | ಮಿತ್ರಿ ವಿರೋಧದಲಿ ||
ನೆತ್ತರ ಕಿಡಿಗಾ | ರುತ್ತ  ನುಡಿದ ಭೂ | ಪೋತ್ತಮನೊಳು ವೈರತ್ವವ ವಿರಚಿಸಿ |
ಹತ್ತು ಶಿರಂಗಳ | ಮತ್ಯುವಿಗೀವ ದು | ರಾತ್ಮಕ ತಿರುಗೆನು | ತಸ್ತ್ರವ ಕವಿದನು ||  ||104||

ತಳುವದೆ ರಾವಣನು | ಬೃಹ ಶರ | ಗಳ ಕಡಿದೊಟ್ಟಿದನು ||
ಭಳಿರೆ ಮನುಜ ನ | ಮ್ಮೊಳು ನೀ ಸೆಣಸುವ | ಇಳೆಯ ಮಗಳ ಪತಿ | ಗೆಳೆಯನೊ ಕುವರನೊ ||
ತಿಳುಹಿಸೆನುತ ಕೋ | ಲ್ಗಳನೆಸೆಯಲು ಬಲು | ಚಳಕದಿ ಮುರಿದ | ಗ್ಗಳೆಯನುಸೂರ್ದನು ||  ||105||

ಅಳಿಯಿವೆ ಮಲತವರ | ಮಗನೆಂ | ದುಳುಹಿಪೆ ಆನತರ ||
ಉಳಿವೆಯೊ ಜೀವವ | ಕಳಕೊಂಬೆಯೊ ನ | ್ಮೊಳು ಪೇಳೆನುತಲೆ || ಮೊಳಗುತ ಕೌಶಿಕ | ನೊಳು ಪಡೆದಸ್ತ್ರವ | ಸೆಳೆದು ಪೊಡೆಯಲಾ | ಖಳಗೆರಗಲು ರಥ | ದೊಳು ಮೈಮರೆದನು ||106||

ಕಂದ

ಉದ್ದಿದನಾಖಳನಂಗಕೆ |
ವಿದ್ಯುಜ್ಜಿಹ್ವಂ ಮಹೌಷಧಿಯ ಬಳಿಕಸುರಂ ||
ಎದ್ದಾರ್ಭಟಿಸುತ ವಿಲಯದ |
ರುದ್ರನ ವೋಲ್ ಭರ್ಗದತ್ತ ಶಕ್ತಿಯನಿಟ್ಟಂ ||107||

ಭಾಮಿನಿ

ದಿತಿಜನಿಟ್ಟ ಕರಾಳ ಶಕ್ತಿಯ |
ಹತಿಗೆ ರಕುತವ ಕಾರು ತಾ ರಘು |
ಪತಿಯ ಸೋದರ ಕ್ಷಿತಿಯೊಳುರುಳಲು ಕಾಣುತಭ್ರದಲಿ ||
ಶತಮಖಾದಿ ಸುರೌಘ ಮೊರೆಯಿಡೆ |
ಅತುಳ ತೋಷದಿ ತಾಮಸೀಚರ |
ತತಿಯು ನಗುತಿರೆ ದುಗುಡವಾಯ್ತು ವನೌಕಸರಿಗೆಂದ ||108||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಿತ್ರತೇಜವ ಜರಿವುತಾ ಸೌ |
ಮಿತ್ರಿ ಮಲಗಿರಲ ಸುರಪತಿಯು ವಿ ||
ಚಿತ್ರವ್ಯಾತೆಂದಿಳಿದ ರಥವ ಧ | ರಿತ್ರಿಗಂದು ||109||

ವೈದು ತೋರುವೆನೆನ್ನನೊಲ್ಲದ |
ಮೇದಿನೀಸುತೆಗಿವನನೆನುತಡೆ |
ಹ್ಯಾದು ತೋಳುಗಳಿಂದ ತಳ್ಕಿಸ | ಲಾ ದಶಾಸ್ಯ ||110||

ಆ ಸುಮಿತ್ರಾಸುತನ ನಾನಾ |
ಶ್ವಾಸಗರಳ ಜ್ವಾಲೆಯಡರಿ ವಿ |
ಭೀಷಣಾಗ್ರಜ ಬಾಡಿ ಬಳುಕಿದ | ನಾ ಸಮಯದಿ ||111||

ಶಿವಶಿವೀತನ ನೆಗಹಲಸದಳ |
ಇವನ ಕೊರಳರಿದೊವೆನೆನುತಾ |
ದಿವಿಜರಿಪು ಶಶಿಹಾಸಕವ ಕೊಂ | ಡವಘಡಿಸಿದ ||112||

ಸಿಡಿಲಿನಂತಾರ್ಭಟಸುತನಿಲಜ |
ನುಡಿದ ನಾ ನಿನಗೀವ ಸಾಲವ |
ಕೊಡುವೆನಿದ ಕೊಳ್ಳೆಂದು ಮುಷ್ಟಿಯ | ಝಡಿದುನಿಂದ ||113||

ಕಂದ

ಕರಸಿಕೊ ವಿಧಿಯಂ ಭಾವದಿ |
ಸ್ಮರಿಸಿಕೊ ಶಿವನಿತ್ತ  ವರವ ಸದ್ಗುರು ಸಖರಂ ||
ಬರಿಸಿಕೊ ಮತಸಂಜೀವನ ||
ವಿರಿಸಿಕೊ ಜಿಹ್ವೆಯೊಳಗೆಂದನಾಶುಗಕುವರಂ ||114||

ಭಾಮಿನಿ

ನೆತ್ತಿಗಡರಿತು ಜೀವ ಮಾರುತ |
ಪುತ್ರನಾಡಿದ ನುಡಿಯ ಕೇಳುತ |
ಹೆತ್ತ ತಾವೊಡಲಲ್ಪವಾಯ್ತಿನ್ನೆತ್ತಲಡಗುವೆನೊ ||
ಮತ್ಯುವಂತಿವನಿತ್ತ ಬಂದನೆ |
ನುತ್ತ ಭಯದಲಿ ಕಾಯ ಕಂಪಿಸೆ |
ಕಿತ್ತು ಬಿದ್ದುದು ಕರದಿ ಪಿಡಿದ ಹಿಮಾಂಶುಹಾಸಕವು ||115||

ರಾಗ ಭೈರವಿ, ಏಕತಾಳ

ಆ ಸಮಯದಿ ಪವನಜನು | ಮಾಂ |
ಸಾಶನನೊಳುಪೇಳಿದನು ||
ನೀ ಶೋಕಿಸಲದಕಿನ್ನು | ನಾ |
ಕ್ಲೇಶಿಪನಲ್ಲೆನುತವನು ||116||

ಘನಘೋಷದಿ ಘರ್ಜಿಸುತ | ದೈ |
ತ್ಯನ ವೃಕ್ಷವನೀಕ್ಷಿಸುತ ||
ಅನುವಾಗೆಲೊ ನೀನೆನುತ | ಭೋ |
ರನೆ ತಿವಿದೌಕಿದ ನಗುತ ||117||

ದನುಜೇಶನ ತನು ಬಿರಿದು | ಕುಂ |
ಭಿನಿಗುರುಳಲು ಭಯವೆರದು ||
ದನುಜರು ತೊಲಗಿದರಂದು | ಕಂ |
ಡನಿಲಜ ಮಿಡುಕಿದ ನೊಂದು ||118||

ರಾಗ ಸಾಂಗತ್ಯ, ಮಟ್ಟೆತಾಳ

ಹರಹರ ಶ್ರೀರಾಮ ಬಾಣಕೆ ಮೀಸಲಾ |
ಗಿರುವ ದೈತ್ಯನ ದೇಹವನ್ನ ||
ಕರಹತಿಯಲಿ ಚೂರ್ಣವಾಂ್ತುಲ್ಲ ನಾನೇಕಿಂ |
ದಿರದೆ ಮುಟ್ಟಿದೆನೊ ಈ ಖಳನ ||119||

ಸ್ವಾಮಿದ್ರೋಹಿಕೆಯ ಪಾತಕವ ನಾ ಕೈಕೊಂಡೆ |
ರಾಮಕೋಪಿಸುವನೀ ಬಗೆಗೆ ||
ಭೂಮಿ ಮೆಚ್ಚದು ವಂದಾರಕರು ನಿಂದಿಪರಯ್ಯ |
ನಾ ಮಾಡಿದಪರಾಧಗಳಿಗೆ  ||120||

ಕಾಕುತನದೊಳೈದೆನೆಗಳಿದ ಕೆಲಸಕ್ಕೆ |
ಏಕೆ ಚಿಂತಿಪುದು ನಾನಿನ್ನು |
ಈ ಖೂಳನವಸಾನ ದಿಟವಾದರಗ್ನಿಯ |
ನಾ ಕೂಡಿ ತನುವನೀಗುವೆನು ||121||

ಎನುತಲಾ ಖಳನ ಸರ್ವಾಂಗವನೊಡಗೂಡಿ |
ಅನುಪಮ ಜಲವ ತಂದೆರೆದು |
ಜನಕಗೆ ಮಣಿದೆಂದ ತನಯ ಮಾಡಿದ ತಪ್ಪ |
ಮನಕೆ ತಾರದೆ ನೀವಿಂದೊಲಿದು ||122||

ದಿತಿಜನನುಳುಹಿ ರಾಮನ ಸೇವೆಗಳಿಗೆ ಯೋ |
ಗಿತನ ಮಾಡೆನ್ನ ನೀನೆನುತ ||
ನುತಿಸಲಾಶುಗನು ದೈತ್ಯನ ನೆಗಹಿಸಲೆದ್ದ |
ಶತಕೋಟಿಕಾಯನೀಕ್ಷಿಸುತ ||123||