ಮತ್ತೇಭವಿಕ್ರೀಡಿತವೃತ್ತ

ಕುಶ ವಾಲ್ಮೀಕಿಮುನೀಂದ್ರನಂಘ್ರಿಗೆರಗೀ ತಾ ಕೇಳ್ದ, ಶ್ರೀರಾಘವಂ |
ದಶಕಂಠಾಖ್ಯನ ಗೆದ್ದು ನಿರ್ವಸನದಿಂ ಹಿಂದಟ್ಟಲಾ ರಾವಣಂ ||
ಅಸುಗಂ (ಖಂ) ಲಜ್ಜೆಯೊಳಿದ್ದು ರಾತ್ರಿ ಕಳೆಯುತ್ತೇನ್ಗೆಯ್ದನೇನೆಂಬುದಂ |
ಉಸುರಲ್‌ಬೇಹುದೆನಲ್ ಮಹಾಮುನಿವರಂ ಪೇಳ್ದಂ ಸುಮಾಂಗಲ್ಯದಿ ||1||

ರಾಗ ಸೌಾಷ್ಟ್ರ  ತ್ರಿವುಡೆತಾಳ

ಕೇಳು ಕುಶ ದಶಕಂಠ ಮರುದಿನ |
ಓಲಗದಿ ಕುಳಿತಿರ್ದು ಮುಂದಣ |
ಕಾಳಗಕೆ ಕಲಿಕುಂಭಕರ್ಣನು | ಏಳದನಕ ||2||

ಸಾಲದಾಹುದುಶಕ್ತಿ ನಮ್ಮದು |
ಕೋಳುಹೋದರುತನುಜ ದನುಜರು |
ಸೋಲವೇ ಸಂಪ್ರಾಪ್ತವಾಯಿತು | ಕಾಳೆಗದಲಿ ||3||

ಸಂಗಡಿಸಿಕೊಂಡಿರುವ ನಿದ್ರೆಯು |
ಭಂಗವಾದರೆ ಬಳಿಕ ಕಪಿಗಳ |
ಭಂಗಿಸದೆ ಬಿಡರಾಮಸೈನ್ಯವ | ಕುಂಭಕರ್ಣ ||4||

ಭಾಮಿನಿಷಟ್ಪದಿ

ಏನುಪಾಯದೊಳನುಜಸುಪ್ತಿಯ |
ಜ್ಞಾನಗೊಳಿಸುವುದೆನಲು ದನುಜಪ್ರ |
ಧಾನಿಗಳು ನಡೆತಂದರಾಗ ಸಮುದ್ರಘೋಷಲಿ ||5||

ಜೇನುನೊಣಗಳು ಮುತ್ತುವಂದದಿ |
ದಾನವರು ಕೂಗಿದರು ಕಿವಿಯಲಿ |
ಬಾನವೊಡೆವಂದದಲಿ ಹೊಯ್ದರು ಭೇರಿವಾದ್ಯಗಳ ||6||

ರಾಗ ಮಾರವಿ  ಏಕತಾಳ

ಏಳದಿರಲು ನಿದ್ರೆಯ ತಿಳಿ | ದೇಳದಿರುಲು –
ಏಳದಿರಲುಸಿರ ಗಾಳಿಯ ತಡೆದ್ಹೇ |
ರಾಳ ಮೆಣಸಿನ, ಧೂಳನಿಕ್ಯರೆದ |
ಭಾಳ ಸಾಸಿವೆ ಮೂಗುನಾಳದೊಳಿಕ್ಕಿಕ |
ರಾಳರಕ್ಕಸರುಅಲಿಬೊಬ್ಬಿರಿಯೆ ||7||

ಆನೆ ಒಂಟೆಗಳಪೊಗಿಸಲಾಡು ಕಾ |
ಳ್ಕೋಣ ಟಗರು ಹಂದಿಶ್ವಾನಗಳ ಮೂಗಿ |
ಗೇನ ಪೊಗಿಸಿದರುಕಾಣೆನೆಚ್ಚರುವುದ |
ಡಾಣೆಗಳಲಿಹೊಯ್ದನೆತ್ತಿಒಡೆಯೆ ||8||

ಮೂಗಿಗೆಪೊಗಿಸಿದ ಸಕಲ ಜಂತುಗಳು |
ಸಾಗಿ ಬಾಯೊಳಗಿಂದಿಳಿದೈತಂದವು |
ಯೋಗವೆಚ್ಚರಿಪ ಬಗೆಯಂ ಕಾಣದೆ |
ಬೇಗ ರಾವಣನಿಗಾಗ ಪೇಳಿದರು ||9||

ಕಂದ

ತಮ್ಮಗೆ ನಿದ್ರೆಯ ಕೊಟ್ಟಾ |
ಬೊಮ್ಮನ ಕರೆ ಎನಲು ಬೆದರಿ ಬಂದಜನಾಗಂ ||
ಉಮ್ಮಳಿಸುತ ಮಂತ್ರೋದಕ |
ಮಂ ಮೈಗೆರೆಯಲ್ಕೆ ಯೆದ್ದನಾ ಖಳನನುಜಂ ||10||

ರಾಗ ಸೌರಾಷ್ಟ್ರ  ಏಕತಾಳ

ಆರೆಲೊ ದಾನವರೆನ್ನ ಆರುತಿಂಗಳ ನಿದ್ರೆಯನ್ನ |
ಗಾರುಗೆಡಿಸಿ ಎಚ್ಚರಿಸಿದ ಧೀರನಾರಯ್ಯ |
ತೋರಿ ಭೋಜನಕ್ಕೆ ಸೋಪಸ್ಕಾರಂಗಳ ತಂದೊಂದೊಂದ |
ಬೇರೆ ಬೇರಾದೆಣಿಕೆಯಿಂದ ಭೂರಿವಹಿಲದಿ ||11||

ಉಂಬೆನೀರೇಳು ಲೋಕಕುಂಭಿನಿಯೊಳಿದ್ದಂಥಾದ್ದ |
ಕುಂಭಕರ್ಣದೈತ್ಯ ತಾನಾರೆಂಬುದರಿಯಿರೆ ||
ಕೊಂಬ ಮೊದಲೆಮಾತಿದಲ್ಲ ಸಾಂಬಶಿವನೆ ಬಲ್ಲನೆಲ್ಲ | ||12||

ಕುಂಭಿನಿಯ ರಕ್ಷಿಸುವ ಜಂಭಾರಿ ದೇವ

ಅಣ್ಣ ರಾವಣೇಂದ್ರ ಬಲ್ಲ ಅನ್ನ ಪದಾರ್ಥಂಗಳೆಲ್ಲ |
ಸನ್ನಾಹವ ಮಾಡಿರೀಗತನ್ನಿರೋ ಬೇಗ ||
ಇನ್ನು ತಾಳ್ವದಲ್ಲ ಗಳಿಗೆಉಣ್ಣದಿದ್ದರೀಗಳೆನಗೆ
ಕಣ್ಣು ಕಾಣದು ಯಾರೆಂಬುದಿನ್ನು ಕೇಳದು ||13||

ಸೇವಕನೊರ್ವನು ಬಂದು ಈ ವರ್ತಮಾನವ ತಂದು |
ರಾವಣೇಂದ್ರನಿದಿರು ನಿಂದು ಪೇಳಿದನಂದು ||
ಸಾವಿರ ಶಾಕಂಗಳನ್ನು ತೊವೆ ಶಾಲ್ಯದನ್ನವನ್ನು |
ಕೇವಲ ಭಕ್ಷ್ಯಂಗಳನ್ನು ತಾನೆ ಕಳುಹಿದ ||14||

ರಾಗ ಶಂಕರಾಭರಣ ತ್ರಿವುಡೆತಾಳ

ಕುಂಭಕರ್ಣನ ರಣಕಿಳುಹ ಬೇ |
ಕೆಂಬ ಬಗೆಗೆ ರಾವಣ |
ಸಂಭ್ರಮದಿ ಸನ್ನಹವ ಕಳುಹಿದ | ನುಂಬ ಢಗೆಗೆ ||15||

ಹೆಂಡ ಮಾಂಸದಗಡಿಗೆ ಹೆಡಗೆ, |
ಮಂಡೆಗಳಲಿ ತುಂಬಿಸಿ |
ತಂಡತಂಡದಿ ಕಳುಹಿದನು ನೂ | ರ್ಭಂಡಿಗಳಲಿ ||16||

ಮಿಂದು ಮಡಿಯುಟ್ಟೀಶ್ವರಾರ್ಚನೆ |
ಯಿಂದ ಕುಳಿತು ಎಲ್ಲವ |
ತಿಂದನರೆನಿಮಿಷದಲಿ ಸವಿಸವಿ | ಯಿಂದ ಜಗಿದು ||17||

ದ್ವಿಪದಿ

ಸಣ್ಣಕ್ಕಿಯನ್ನ ಸೇಮಗೆ ಕಡುಬು ಘತವ |
ಎಣ್ಣೆ ಹೂರಿಗೆಯ ಹೋಳಿಗೆಯು ಅತಿರಸವ ||18||

ಸುಕಿನುಂಡೆ ಲಡ್ಡುಗೆಯ ಪೆರಡಿಪಾಯಸವ |
ಸಕಲಶಾಲ್ಯನ್ನ ಹೊಸ ಮಾಂಸರಾಶಿಗಳ ||19||

ತುಪ್ಪದಲಿ ಹುರಿದ ತಾಳಿಲವ ತಂಬುಳಿಯ |
ಅಪ್ಪಕಜ್ಜಾಯ ಬಾಳುಕವ ಸೆಂಡಿಗೆಯ ||20||

ಅದರಿಂದ ತಪ್ತಿಯಾಗದ ಕುಂಭಕರ್ಣ |
ಮುದಿಯಾನೆ ಕುರಿ ಕೋಣ ಹೊರತಾಗಿ ತಿನ್ನ ||21||

ಕದನಕೊದಗದ ವಿಧದ ಕುದುರೆಗಳ ತಿಂದ |
ಬದಲು ಬತ್ತೆಮ್ಮೆ ಸಾವಿರದ ನೂರೊಂದ ||22||

ಶ್ವಾನವೊಂದುಳಿದು ದನಕರು ಹಂದಿಗಳನು |
ದಾನವರು ತಂದಿತ್ತರೆಲ್ಲ ನುಂಗಿದನು ||23||

ಕತ್ತೆಗಳ ಕೊಂದು ತಂದಿತ್ತರೈನೂರ |
ಮತ್ತೆ ಹಸಿವಡಗದಿರೆ ಹೇಳಿದರು ದೂರ ||24||

ರಾಗ ಘಂಟಾರವ ಜಂಪೆತಾಳ

ದುರುಳನಿಗೆ ಹಸಿವಡಗದಿರಲು ರಾವಣದೈತ್ಯ |
ಗುರುವಿಗಾಜ್ಞಾಪಿಸುತ ತೆರಳಿಸಿದನಾಗ ||25||

ಮಂತ್ರಿಸಿದ ಮೊಸರನ್ನವಂ ತಿನಿಸಿದಾಕ್ಷಣಕೆ |
ನಿಂತಿತಾಹಶು ತಷೆ ಮಹಾಂತದೈತ್ಯನಿಗೆ ||26||

ಉಂಡು ಕರಗಳ ತೊಳೆದು ವೀಳ್ಯಗಳ ಮೆಲುತ ಮುಂ |
ಕೊಂಡು ಬರುತಣ್ಣನಂ ಕೊಂಡಾಡುತಿರ್ದ ||27||

ಬರುವ ತಮ್ಮನ ನೋಡಿ ಬಹಳ ಹರ್ಷವ ಮಾಡಿ |
ಸರಿಗದ್ದುಗೆಯಲಿ ಕುಳ್ಳಿರಿಸೆ ಪ್ರೇಮಲಿ ||28||

ಅಣ್ಣ ಮುಖಕಮಲಗಳು ಬಣ್ಣಗುಂದಿಹುದೇನು |
ಎನ್ನನೆಬ್ಬಿಸಿದ ಬಗೆ ಇನ್ನೇನು ನಿನಗೆ ||29||

ಎಂದು ಕೇಳಿದ ತಮ್ಮನಂದವನು ಮನಸಿನಲಿ |
ತಂದುಕೊಂಡತಿದೈನ್ಯದಿಂದ ಪೇಳಿದನು ||30||

ರಾಗ ಕಾಂಭೋಜಿ ಅಷ್ಟತಾಳ

ತಮ್ಮ ಕೇಳೆನಗೊಂದು ತೊಡರು ಬಂದಿದೆ ಇಂದು |
ನಮ್ಮ ಶೂರ್ಪಣಖಿಯಿಂದ ||
ಸುಮ್ಮನೆ ಕಲಹಕಾರಣವ ಮಾಡಿದಳೀಕೆ |
ಶರ್ಮವಾಗಿರುವದಕೆ ಸಾವಿರವೇಕೆ ||31||

ದಶರಥಸುತ ರಾಮ ಧರಣಿಪಾಲಕ ತಮ್ಮ |
ಅಸಮಸಾಹಸಿ ಲಕ್ಷ್ಮಣ ||
ವಸುಧೆಯಾಳ್ವುದ ಬಿಟ್ಟು | ವನವಾಸ ಕಾಲಿಟ್ಟು |
ಕಸರಿಕೆಮೊಳೆದೋರಿತು ನಮ್ಮೊಳಗಿನಿತು ||32||

ತಂಗಿ ಸೂರ್ಪಣಖಿಯ ಕುಚವ ನಾಸಿಕವ ಕ |
ರ್ಣಂಗಳ ಕೊಯ್ದರೆಂದು ||
ಕಂಗೊಳಿಸಿದ ಖರದೂಷಣ ತ್ರಿಶಿರರ |
ಭಂಗಿಸಿ ಮೆರೆದರೆಂದು ಪೇಳಿದಳ್ಬಂದು ||33||

ಆ ಕೋಪಕದಕಾಗಿ ಅರಿಯದಂದದಿ ಪೋಗಿ |
ನಾ ಕದ್ದು ತವಕದಲಿ ||
ಆ ಕಾಂತೆ ಸೀತೆಯ ತಂದ ಕಾರಣದಿಂದ
ಈ ಕಡೆಮುಖವಾಯಿತು ನಮ್ಮೆಡೆಗಿಂತು ||34||

ಆ ಸೀತೆಯನು ಬಿಟ್ಟು ಕೊಡಬೇಕೆಂದೆನುತ ವಿ |
ಭೀಷಣ ಛಲದಿ ಪೋಗಿ ||
ತಾ ಸೇರಿಕೊಂಡ ರಾಮನ ನಮಗಿದಿರಾಗಿ |
ಈಸು ಕಾರ್ಯವ ಮಾಡಿದ ಪೇಳಲೇನದ ||35||

ಆಯಿತೊಂದೆರಡಂತ್ರ ಅಣುಗರ ಕದನದಿ |
ಮಾಯಕದೊಳಗೆ ಕೊಂದ ||
ನ್ಯಾಯವ ನ್ಯಾಯವಾದರು ಹೀಗಾಯಿತು ಮುಂದೆ  |
ನೀ ಯೆಂಬುದೇನು ಪೇಳುಸತ್ಯವೆನ್ನೊಳು ||36||

ಶಾರ್ದೂಲ ವಿಕ್ರೀಡಿತವೃತ್ತ

ಇಂತೆಂದಾದವಿಚಾರಸಂಗತಿಗಳಂ ಕುಂಭಶ್ರವಂ ಕೇಳುತ |
ಕಾಂತಾಭ್ರಾಮಕದಿಂದ ಬಂದ ಕದನಂ ಲೇಸಾಗದೀಸಾರಿಯೊಳ್ ||
ಅಂತರ್ಭಾವದಿ ನಿರ್ಣಯಂಗೊಳಿಸಿ ಇನ್ನೇನಾಗಲೆಂತಾಗಲಿ |
ಸಂತಾನಂ ಕೆಡದಂತೆ ಪೊಗಿಯನುಜಂ ಶ್ರೀರಾಮನಂ ಸೇರಿದಂ ||37||

ವಚನ

ಇಂತೆಂದು ಮನದೊಳಗೆ ಹಲವು ಯೋಚನೆಯಂ ಮಾಡಿ ರಾವಣನೊಡನೆ ಏನೆಂದನು  ಎಂದರೆ –

ರಾಗ ಕಲ್ಯಾಣಿ  ಏಕತಾಳ

ನಿನ್ನಂಥ ಜಾಣರಿಂಗಿದು ನೀತಿಯೆ ಪೇಳಣ್ಣ |
ಕಣ್ಣ ಮುಂದಲ್ಲದೆ ಪರರ ಹೆಣ್ಣ ತಂದಿಟ್ಟುಕೊಂಬುದು ||38||

ಸೀತೆ ಯೆಂಬಳೀಗ ಭೂಮಿಜಾತೆ ಮಹಾಲಕ್ಷ್ಮೀ |
ಆತ ರಾಮಚಂದ್ರನೇ ಸಾಕ್ಷಾತದೇವನು ||39||

ಕೋತಿಗಳೆಂಬುದು ಪುಸಿಮಾತು ಸುಪರ್ವಾಣರೈಸೆ |
ಮಾತನಾಡಿನ್ನೇನು ಕಾರ್ಯ ಆತುದೇ ಶೌರ್ಯ ||40||

ಮುಂದುವರಿದಮೇಲೆ ಇನ್ನುನೊಂದು ಮಾಡುವಂಥದೇನು |
ಎಂದಿಗಾದರೀ ಶರೀರ ಎರವಿನ ಹಾರ ||41||

ಹಿಂದುಗಳೆಯೆಕೀರ್ತಿ ನಿಲದುನಿಂದಿಸುವರು ಬೈದು ಜನರು |
ಸಂದೇಹವಿಲ್ಲ ಸಂಗರವೇ ಸರ್ವಸಮ್ಮತ ||42||

ಮಾಧವನ ಸೇರ್ವೆ ನಾ ವಿರೋಧದಿಂದಾದರೂ ಸ್ವಾಮಿ |
ಪಾದವ ಹೊಂದುವೆ ಹೇಗಾದರಾಗಲಿ ||43||

ಕಾದುವೆನೀಹೊತ್ತು ನಾನು ಕೊಡಿಸು ವೀಳೆಯವ ನೀನು |
ಸಾಧನಸನ್ನಾಹವನ್ನುಸಾಗಿಸೈಇನ್ನು ||44||

ಕಂದ

ಗೆಲುವೆನು ರಾಮನ ಸೈನ್ಯವ
ಕಳುಹೆನ್ನನು ವೀಳ್ಯವಿತ್ತು ಕಪಿಪಾಳೆಯವಂ |
ಕಲಕುವೆನೊಡ್ಡಿಸಿ ಕೀಶರ
ಗೆಲವೆಮಗಾಯ್ತೆನಿಸದಿರೆನು ತವ ಕರುಣದೊಳಂ ||45||

ರಾಗ ಶಂಕರಾಭರಣ ಅಷ್ಟತಾಳ

ತಮ್ಮ ನೀ ತೆರಳು ಬೇಗ ರಾಮನ ಪಾಳ್ಯ |
ಗಮ್ಮನೆ ಜಯಿಸಲೀಗ ||
ತಮ್ಮವರಿಗೆ ಬಂತು ಗೆಲವೆಂದು ಮನದಲಿ |
ಹಮ್ಮಿನೊಳಿರುವ ರಾಮನಿಸ್ಸೀಮ ||46||

ವೇಳೆಯನರಿತುಕೊಂಡು ತಮ್ನನಿಗಾಗ |
ವೀಳೆಯ ಕೊಡಿಸಲಂದು ||
ಪಾಳೆಯನೆರಹಿ ಪಟ್ಟಣದಿಂದ ಬರೆ ಯಮ |
ಗೂಳೆಯ ತೆಗೆದನಂತೆ ಎಂಬಂತೆ ||47||

ಶೃಂಗಾರ ರಚನೆಯಿಂದ ಕೂಡಿದ ಚತು |
ರಂಗ ಮಾರ್ಬಲಗಳಿಂದ ||
ಸಂಗಡಿಸಿದ ನಾನಾ ಬಿರುದು ಬಣ್ಣಗಳಿಂದ |
ತುಂಗವಿ ಕ್ರಮನು ಬಂದ ಮಲೆತು ನಿಂದ ||48||

ಭಾಮಿನಿ

ಕುಂಭಕರ್ಣನ ರಣದ ಸೊಬಗಿನ |
ಸಂಭ್ರಮವ ನೋಡುತ್ತ ದಿವಿಜ ಕ |
ದಂಬ ಬೆರಗಿನಲಿದ್ದರಗಣಿತ ಭಯದ ಭಾರದಲಿ ||49||

ಅಂಬುಜಾಕ್ಷನು ಆ ವಿಭೀಷಣ |
ನೆಂಬುವನ ಕೇಳಿದರೆ ಬರುವವ |
ಕುಂಭಕರ್ಣಮಹಾನಿಶಾಚರನೆಂಬ ಸಮಯದಲಿ ||50||

ರಾಗ ಕಾಂಭೋಜಿ ಝಂಪೆತಾಳ

ಎಂತು ಜೈಸುವನೊ ಶ್ರೀರಾಮ ಇವನ |
ಅಂತಕೊೀಪಮನಾದ ಕಲಿಕುಂಭಕರ್ಣ  || ಪಲ್ಲವಿ ||

ಮೇರುಪರ್ತದಂತೆ ಮೆರೆದಿಹುದು ಒಡಲಂತೆ |
ಭಾರಿ ಕೆಂಗಣ್ಣು ಕೆಮ್ಮಾಸೆಗಳಲಿ ||
ಮೂರು ತಾಳೆಯ ಮರವ ಮಾರಿಹುದು ಕಾಲವನ |
ತೋರ ಕೈಬೆರಳು ಹೆಮ್ಮರನಂಥ ಕೊರಳು ||51||

ಇಂತೆಂದು ಸಕಲಸುರರಾಗ ಯೋಚಿಸಲು ಹನು |
ಮಂತ ನೋಡಿದನು ರಾಕ್ಷಸನ ಸೈನ್ಯವನು ||
ಅಂತರಂಗದೊಳಿವರ ನರೆವೆನೆಂದಿರುವಾಗ |
ಭ್ರಾಂತು ಬುದ್ಧಿಯ ದನುಜ ಬಂದು ಬೊಬ್ಬಿರಿದ ||52||

ವೃತ್ತ

ಅಸುರಪಡೆಯು ಬಂದು ಆರ್ಭಟಿಸುತ್ತಲಂದು |
ಮುಸುಕಿ ಮರ್ಕಟರನು ಮುಂದೆ ನಿಂದಿರ್ದರನ್ನು ||
ಬಿಸಜನಾಭನಾಗ ಬಿಲ್ಲ ತೆಕ್ಕೊಂಡು ಬೇಗ |
ಎಸೆವ ಶರಗಳಿಂದ ರಾಮ ಮಾರಾಂತು ನಿಂದ ||53||