ರಾಗ ನಾದನಾಮಕ್ರಿಯೆ ಮಟ್ಟೆತಾಳ
ನಾನು ರಾಮ ಕೇಳೊ ಕುಂಭಕರ್ಣ ರಾಕ್ಷಸ |
ವಾನರಾದಿಗಳನು ಗೆಲುವದೇನು ಸಾಹಸ ||54||
ಕೊಲಿಸಬೇಡ ದನುಜರನ್ನು ನಿಲಿಸು ಸುಮ್ಮನೆ |
ಅಲಸದೆನ್ನೆ ಕೂಡೆಸೆಣಸಿ ನೋಡು ಘಮ್ಮನೆ ||55||
ಬಿಡುವ ಖಳನಶರವ ರಾಮ ನಡುವೆ ತರಿದನು |
ತೊಡುವ ತೊಡುವ ಶರವನೆಲ್ಲ ಪುಡಿಯಗೈದನು ||56||
ಉರಗ ಬಾಣವೆಸೆಯೆ ದನುಜ ಗರುಡವಿಶಿಖದಿ |
ತರಿದುಬಿಸುಡೆ ಗೋತ್ರಶರವ ಮುರಿದ ಕುಲಿಶದಿ ||57||
ಉರಿ ಛಢಾಳಿ ಸಲ್ಕೆಜಲದಿ ಪರಿಹರಿಸಿದನು |
ಕರದ ಧನುವ ಕಡಿದು ಧರಣಿ ಗುರವಣಿಸಿದನು ||58||
ಬಿಲ್ಲು ಮುರಿದ ಮೇಲೆ ದನುಜ ಹಲ್ಲ ಕಿರಿಯುತ |
ನಿಲ್ಲಲಾಗ ರಾಮ ಕೋಪದಲ್ಲಿ ನೊೀಡುತ ||59||
ರಾಮ ಮೂಲ ಶರದಿ ಶಿರವ ಭೂಮಿಗಿಳುಹಿದ |
ಆ ಮಹಾ ಕುಂಭಕರ್ಣೋದ್ದಾಮನೊರಗಿದ ||60||
ಬೀಳಲಸುರ ಕುಂಭಕರ್ಣ ಕೇಳಿ ದಿವಿಜರು |
ಶ್ರೀಲಲಾಮ ಶರಣೆನುತ ಹೂಮಳೆಯ ಕರೆದರು ||61||
ವಾರ್ಧಕ
ಕುಂಭಕರ್ಣನ ಮಡಿದ ಒಡಲ ನೋಡಲು ಪಾಪ |
ವೆಂಬ ಬಗೆಯಂತೆ ಭಾಸ್ಕರನಾದಿನಂ ಪಶ್ಚಿ |
ಮಾಂಬುಧಿಯೊಳದ್ದ, ತಮ್ಮನ ಮರಣಮಂ ಕೇಳ್ದು ಹಂಬಲಿಸಿ ದಶಕಂಠನು ||
ಕುಂಭಿನಿಯನಾಳ್ವಮನುಜರು ಬಂದು ದನುಜರಂ |
ಬೆಂಬಿಡದೆ ಕೊಲುವದೇನಾಶ್ಚರ್ಯ ಶಿವ ಶಿವ ತ್ರಿ |
ಯಂಬಕನೆ ತ್ರಿಪುರಾರಿ ಪಾರ್ವತೀರಮಣ ಹರಯೆಂಬಾಗ ಬೆಳಗಾಯಿತು ||62||
ರಾಗ ಸಾವೇರಿ ಅಷ್ಟತಾಳ
ಇನ್ನು ರಾಘವನಿಗೆ ಜಯವಾಯಿತು ಕುಂಭ |
ಕರ್ಣ ಹಾಗಾದ ಮೇಲೆ ||
ಬಣ್ಣಗುಂದಿದ ಚಿನ್ನ ಬಡಿದಂತಾಯಿತು ತನ್ನ |
ಪುಣ್ಯದಸಿರಿ ಎಂದನು ದನುಜೇಂದ್ರನು ||63||
ಪುರವ ಸುಟ್ಟಂದೆ ಗೋಚರಿಸದಾದೆನು ಹಿಂದೆ |
ಪೊರಡಿಸಿದೆನು ತಮ್ಮನ ಸಂಧಾನದಿ ||
ಜರೆದೆನಂಗದನ ಮಾತನು ಕೇಳದಾನಿಂತು |
ಪರಿಪೂರ್ಣ ಮರುಳಾಯಿತು – ಹೀಗಾಯಿತು ||64||
ಪರಸತಿಯನು ತಂದು ಸೆರೆಯೊಳಿಕ್ಕಿದೆನೆಂದು |
ಪರಿದಪಕೀರ್ತಿ ಬಂತು ಮಕ್ಕಳಿಗಿಂತು ||
ಮರಣ ಸಂಭವಿಸಿತು ನಿರತ ಸೇವಿಸುವಂಥ |
ಸುರರು ದೂಷಕರಾದರು ಏನಾದರೂ ||65||
ವಾರ್ಧಕ
ಪರಸತಿಗೆ ಪರುಠವಿಸಿ ಪಾರಾಯ್ತು ಪಂಥದಲಿ |
ಪರುಷ ಕಬ್ಬಿಣವಾಗಿ ಫಲಿಸಿತನುದಿನ ಕರೆವ |
ಸುರಭಿ ಗೊಡ್ಡಾಯ್ತುಮತ ವಿಷವಾಯ್ತು ಸೌಭಾಗ್ಯಹೀನಗಪಜಯವಾಯಿತು ||
ಪುರುಷಾರ್ಥವಿಲ್ಲ ಬದುಕಿದರಿನ್ನೆನುತ್ತ ಮನ |
ಕರಗುತಿಹ ವೇಳ್ಯದಿ ನರಾಂತಕಂ ನಡೆತಂದು |
ಪರಮ ಪೌರುಷದಿಂದ ಮಂಡೋದರಿಗೆ ನಮಿಸಿ ದಶವದನಗಿಂತೆಂದನು ||66||
ರಾಗ ಪಂತುವರಾಳಿ ಏಕತಾಳ
ತಂದೆ ಕೇಳ್ಳ್ಮರ್ಕಟರನ್ನು ಕೊಂದಲ್ಲದೀಹೊತ್ತು ನಾನು |
ಬಂದೆನಾದರೆ, ನಿಮ್ಮ ಕಂದನಲ್ಲೆಂದ ||67||
ನೀಲನ ಪಾಳೆಯವ ಕಾಲನಾಲಯಕಿಕ್ಕದಿದ್ದರೆ |
ಪೇಳುವೆ ನಿಮ್ಮಿಬ್ಬರಿಗೂ ಬಾಲಕನಲ್ಲ ||68||
ಎಂದು ಪ್ರತಿಜ್ಞೆ ಮಾಡಿನಿಂದ ರಾಕ್ಷಸನ್ನ ನೋಡಿ |
ಬಂದನಂಗದ, ಕಾದಲೆಂದನುವಾದ ||69||
ರಾಗ ಘಂಟಾರವ ಏಕತಾಳ
ಬಂದವನಾರೋ ನೀನು ಏನೇನು || ಪಲ್ಲವಿ ||
ಬಂದವನದಾರೋ ನೀನು ಮುಂದೆ ಕಾರ್ಯಗಳಿನ್ನೇನು |
ತಂದೆ ಯಾರು ತಾಯಾರು ನಿನ್ನ ಏ ಸಂಪನ್ನ || ಅನುಪಲ್ಲವಿ ||
ಆನೆಕುದುರೆ ಒಂಟೆ ಸೇನೆಗಳಿನ್ನೆಷ್ಟುಂಟೆ |
ಜಾಣನಹುದಯ್ಯ ನೀನು ಮುಂದೇನು ||70||
ಕುಂಭಕರ್ಣನು ಹೋದ ಸಂಬಳಕಿವನಾದ |
ನೆಂಬುದ ಬಲ್ಲೆೀ ನಾನು ಇನ್ನೇನು ||71||
ಕಾದಲೆನುತ ಬಂದೆ ಹೋದಮೇಲೇನು ಮುಂದೆ |
ನೀದಾರಿ ಮಾಡಿಕೊಳ್ಳಯ್ಯ ಈ ನುಡಿಕೇಳಯ್ಯ ||72||
ಬತ್ತಲೆ ನಿಂತವನಪುತ್ರನಲ್ಲವೆ ನೀನು |
ಉತ್ತಮ ನಾಮವೇನು ಏನೇನು ||73||
ರಾಗ ಭೈರವಿ ಏಕತಾಳ
ಹೀಗೆಂದೆನುವದರೊಳಗೆ | ಬಾಣ |
ತಾಗಿತು ಬಂದಂ ಗದಗೆ ||
ಆಗದ ನೆಲ್ಲವ ತಡೆದ | ಕರ |
ದಾಗಿರಿ ಮರದಲಿ ಹೊಡೆದ ||74||
ಬಾಣವಬಿಡುವುದರೊಳಗೆ | ಬಿದ್ದ |
ದಾನವ ಧಾರಿಣಿಯೊಳಗೆ ||
ಪ್ರಾಣವಳಿಯಲಾತ್ರಿಶಿರ | ಬಲು |
ಜಾಣದೇವಾಂತಕರಿದರ ||75||
ಕಂಡೈತರೆ ಹನುಮಂತ | ಖತಿ |
ಗೊಂಡೇಳಲು ಬಲವಂತ ||
ಚಂಡಮಹೋದರ ನತ್ತ | ಕೈ |
ಗೊಂಡನು ಸಮರಕೆ ಮತ್ತ ||76||
ಹಲು ಮೊರೆಯುತ ಮುಂದರಿಯೆ | ನಿ |
ಶ್ಚಲಚಿತ್ತದಿ ಮೇಲ್ವರಿಯೆ ||
ಗಳಿಗೆಯೊಳಾತನ ನೀಲ | ರಣ |
ದೊಳು ಸಂಹರಿಸಿದಶೀಲ ||77||
ಯುದ್ಧೋನ್ಮತ್ತನೆಂಬಾತ | ಬಲು |
ಯುದ್ಧವಮಾಡಲು ವಷಭ ||
ಗೆದ್ದನರೆಕ್ಷಣದೊಳಗೆ | ಖಳ |
ಬಿದ್ದನು ಧಾರಿಣಿಯೊಳಗೆ ||78||
ಬರುವ ಬರುವ ದಾನವರು ಯಮ |
ಪುರದಲಿ ಮನೆ ಮಾಡಿದರು ||
ಕರವ ಮುಗಿದನತಿ ಕಾಯ ದಶ |
ಶಿರನಿಗೆಪೇಳ್ದನು ನ್ಯಾಯ ||79||
ಅತಿಕಾಯನ ಕಾಳಗ
ರಾಗ ಶಂಕರಾಭರಣ ತ್ರಿವುಡೆತಾಳ
ಜನಕ ಲಾಲಿಸು ರಾಮಚಂದ್ರನು | ಮನುಜನಲ್ಲ ಲೋಕದ |
ಘನವನಿಳುಹಲು ಬಂದ ನಾರಾ | ಯಣನೆ ಕೇಳು ||1||
ಸಕಲದೊಳು ಪರಿಪೂರ್ಣ ವ್ಯಾಪಾ | ರಕನ ಕೂಡೆ ಸೇವಾ |
ಸಕೃತಿಯಲಿ ಸುಖಬಾಳ್ವುದೊಳ್ಳಿತು | ಯುಕುತಿಯೊಳಗೆ ||2||
ಅಪ್ರಮೇಯಾ ದ್ವೈತನಂಘ್ರಿಯ | ಕ್ಷಿಪ್ರದಿಂದ ಸೇವಿಸಿ |
ತಪ್ಪು ಬಂತೆಂದೆನುತ ಸೀತೆಯ | ನೊಪ್ಪಿಸಯ್ಯ ||3||
ಲೇಸು ಬಾರದು ಕದನವಾಲಕ್ಷ್ಮೀಶನೊಡನೆ ಅನುಜವಿ |
ಭೀಷಣನ ಕರ ಕೊಂಡು ಬಂದು ವಿ | ಲಾಸದಿಂದ ||4||
ಇರುವದೊಳ್ಳಿತು ಎಂಬನುಡಿ ದಶ | ಶಿರನು ಕೇಳಿ ಕೋಪದಿ |
ಜರೆಯಲಿದುವೇ ಸಮಯವೆನುತವ | ನರಿತನಾಗ ||5||
ರಾಗ ಘಂಟಾರವ ಜಂಪೆತಾಳ
ತಂದೆ ಕೇಳೀ ಹೊತ್ತು ಎನಗೆ ವೀಳ್ಯವನಿತ್ತು |
ಚಂದದಲಿ ರಣಕೆ ಕಳುಹೆಂದು ಕೈಮುಗಿದ ||6||
ಬೇಗ ರಣವನು ಜೈಸು ಹೋಗೆಂದು ವೀಳ್ಯವಿ |
ತ್ತಾಗ ಕಳುಹಿದ ಕರುಣಸಾಗರನ ಬಳಿಗೆ ||7||
ಕರಿತುರಗ ರಥ ದಾನವರು ಸಹಿತ ಹೊರವಂಟ |
ಧುರಕೆ ಸನ್ನಹದಿಂದ ಹರಿಸೇವೆಗೆಂದ ||8||
ರಾಗ ಕಲ್ಯಾಣಿ ಅಷ್ಟತಾಳ
ಬನ್ನಿ ರಾಮನ ಸೇವೆಗೆ ಸಾಧುಗಳೆಲ್ಲ || ಪಲ್ಲವಿ ||
ಇನ್ನು ಇಂಥಾವೇಳ್ಯ ವಿಲ್ಲ ಸಿಕ್ಕುವುದಿಲ್ಲ |
ಪನ್ನಂಗಶಯನ ರಾಮೆನ್ನುತ್ತ ಶರಣರೆಲ್ಲ ||9||
ಮನು ಮುನಿಗಳು ನಿತ್ಯ ನೆನೆಯುತಿರಲು ಸತ್ಯ |
ಘನತರ ನಿಜಮುಕ್ತಿಯನು ಸಾಧಿಸುವರಲ್ಲ ||10||
ಸರಸದಿಂದಲೆ ಸರಸಿರುಹನಾಭನ ಪದ |
ಸರಸಿಜವನು ಕಾಂಬತವಕದಿ ಸುಜನರೆಲ್ಲ ||11||
ವಾರ್ಧಕ
ಇಂತೆಂದು ಡಂಗುರವ ಹೊಸಿ ಪಟ್ಟಣದಿಂದ
ತಾಂ ತೆರಳಿ ಬರುವ ಪಾಳೆಯವ ನೋಡುತ್ತ ಹನು
ಮಂತಮುಖ್ಯಾದಿಗಳು ಮಾತಾಡುತಿರೆ ಶರಣನಿಂತೆಂದನಾ ರಾಮಗೆ ||
ಕಂತುಪಿತ ಕೇಳೀತನತಿಕಾಯನಧಿಕಬಲ
ವಂತ ನಿಯಮಿತಸುವ್ರತಂ ವೈಷ್ಣವಾದಿಗಳೊ
ಳಂತರಿಲ್ಲದ ಭಕ್ತನೆನಲು ಸೌಮಿತ್ರಿ ಮಾರಾಂತನತಿಕಾಯಗಿದಿರು ||12||
ರಾಗ ಕಾಂಭೋಜಿ ಅಷ್ಟತಾಳ
ಹೊಡೆದಾಡಿದರು ರಣದೊಳಗೆ, | ಬಲು |
ಕಡುಪರಾಕ್ರಮ ಪಂಥಪೌರುಷದೊಳಗೆ || ಪಲ್ಲವಿ ||
ಮದಕರಿಗಳನೆತ್ತಿಗಿಡುತ | ರಥ |
ಕುದುರೆ ರಾವುತರ ಮಂಡೆಗೆ ಬಾಣಬಿಡುತ,
ಬದಲಿಗೆ ಬದಲಂಬ ನಿಡುತ, | ಸಮ |
ರದ ಸಂಭ್ರಮದಲಿ ಡೊಂಬಿಗೆ ಮೆಯ್ಯಕೊಡುತ ||13||
ಕೆಂಗರಿ ಕೋಲ ಕಾಹುರಕೆ, | ಮುಸು |
ಸಿಂಗಳೀಕಗಳೆಲ್ಲ ಬಿದ್ದವುನೆಲಕೆ |
ಸಂಗಡಿಸಲು ಯಮಪುರಕೆ, | ಸಮ |
ರಾಂಗಣದೊಳು ಲೆಕ್ಕವಿಲ್ಲ ಸತ್ತುದಕೆ ||14||
ಕ್ಷಯವಾಯ್ತನೇಕ ದಾನವರು, | ಜಯ |
ಜಯವೆಂದಂಬರದಿ ಬೊಬ್ಬಿಡುತಲೆ ಸುರರು |
ಜಯಭೇರಿ ಹೊಯ್ದರತ್ಯಧಿಕ, | ಬಲು |
ಪ್ರಿಯದಿಂದ ಲಕ್ಷ್ಮಣನನು ಪೊಗಳುತ ||15||
ಶಕ್ತಿಯಿಂದೆಚ್ಚು ಸೌಮಿತ್ರಿ, | ಖಳ |
ಮಸ್ತಕವನು ಕೆಡಹಲ್ಕೆ ಧರಿತ್ರಿ |
ಎತ್ತಿಕೊಂಡುದು ಭಯಭಕ್ತಿ, | ಸುರ |
ರರ್ತಿಯಿಂದೊಯ್ದರಾ ತಂಗಾಯ್ತು ಮುಕ್ತಿ ||16||
ಶಾರ್ದೂಲವಿಕ್ರೀಡಿತವೃತ್ತ
ಶ್ರೀ ರಾಮಾನುಜ ಕೋಪದಿಂದ ಶರಮಂ ಬಿಟ್ಟಾಗ ಲಕ್ಷ್ಯಾಂತದೊಳ್ |
ಘೋರಾಕಾರತಿಕಾಯ ಮಸ್ತಕವು ತಾ ಬೀಳಲ್ಕೆ ಸಂತೋಷದಿ |
ಭೋರೆಂದೆದ್ದು ಸಮಸ್ತ ನಿರ್ಜರರುಗಳ್ ಪುಷ್ಪಾರ್ಚನಂ ಗೈಯಲು |
ಧೀರೋದಾರ ಕುಮಾರನಿಂದ್ರಜಿತುವಂ ತಕ್ಕೈಸುತಿಂತೆಂದನು ||17||
ಇಂದ್ರಜಿತುಕಾಳಗ
ರಾಗ ಶಂಕರಾಭರಣ ಮಟ್ಟೆತಾಳ
ತನಯ ಇಂದ್ರ ವೈರಿ ನಿನ್ನ ವಿನಯದನುಜ ನತಿಕಾಯನ್ನ |
ರಣದಿ ಕೊಂದನಂತೆ ರಾಮನನುಜ ಲಕ್ಷ್ಮಣ ||18||
ದನುಜರೆಲ್ಲ | ಕೊಂದವರವರು ಮನುಜರಲ್ಲ ನಿಂದರಿವರು |
ರಣಪ್ರತಾಪರಾಗಿ ಮೆರೆವ ಘನವಿವೇಕವ ||19||
ಇಲ್ಲ ಸಾಹಸಿಗಳು ನೀ, ನಲ್ಲದೆನ್ನ ಕಂದರೊಳಗೆ |
ಬಲ್ಲತನವ ನೋಡಬೇಕಲ್ಲ ಬಾಲಕ – ||20||
ಕಂದ
ತಂದೆಯ ಮಾತನು ಕೇಳುತ
ಇಂದ್ರಾರಿಯು ಪೋಪೆ ತಾನು ಧುರಕೆಂದೆನುತಂ |
ವಂದಿಸೆ ಕೊಟ್ಟನು ವೀಳ್ಯವ
ಸಂದಣಿಸಹಿತಾಗಿ ಸಮರಸನ್ನಹವಾಗಿ ||21||
ರಾಗ ಭೈರವಿ ತ್ರಿವುಡೆತಾಳ
ಬಂದನಾಗ ಸಮರಕೆನಿಂದನಾಗ |
ಇಂದ್ರಜಿತುಮರ್ಕಟರಸೈನ್ಯವ | ಕೊಂದುಬಿಸುಡುವೆನೆನುತಕೋಪದಿ ||ಪಲ್ಲವಿ||
ಓಡಿದಸುರರ ಕರೆಸಿ ಸಂಗಡ ಕೂಡಿಕೊಂಡನು ತ್ವರಿತದಿ |
ಜೋಡಿಸುತ ಗಜತುರಗಗಳ ಬರಮಾಡಿಕೊಂಡನು ಹರುಷದಿ |
ಝಾಡಿಸುತ ಖಡ್ಗವನು ಝಳಪಿಸಿ ನೋಡಿಕೊಂಡನು ಸಹಸದಿ |
ಗಾಢದಿಂದಲಿ ರಥಕೆ ಕುದುರೆಯ ಹೂಡಿ ಮುಗುಳ್ನಗೆ ಮಾಡು ತೊಯ್ಯನೆ ||22||
ಹಾರ ಕುಂಡಲ ಮಕುಟ ಮಣಿಕೇಯೂರ ಕಂಕಣವಿಟ್ಟನು |
ಭಾರಿ ರಚನೆಯೂಳೆಸೆವ ವಸನವ ವೀರ ತೆಗೆತೆಗೆದುಟ್ಟನು |
ಚಾರುಸೀಸಕ ಕವಚಗಳ ಮುದವೇರಿ ಘಮ್ಮನೆ ತೊಟ್ಟನು |
ಮೂರುಲೋಕದೊಳೊಸಗೆಮಿಗೆ ಗಂಭೀರ ನೆರೆ ಪೊರಮಟ್ಟು ಸಮರಕೆ ||23||
ರಣಜಯವ ಕೊಡಿ ನಮಗೆನುತ ಸುರಗಣವನರ್ತಿಲಿ ಕೇಳಿದ |
ಮಣಿಯು ತೊಳಗೈಯಿಂದ ತನ್ನಯ ಜನನಿಯಳಮೊಗ ನೋಡಿದ |
ಅಣಿಯರಿತು ಕಾದೆನುತಸುರ ನಂದನಗೆ ನೇಮವ ನೀಡಿದ |
ಕುಣಿಯುತಿಹ ಪಟುಭಟರುಗಳ ಸಂದಣಿಯ ಮುಂದಕೆ ಮಾಡಿ ನೋಡುತ ||24||
ರಾಗ ಮಾರವಿ (ಉತ್ಸಾಹ) ಏಕತಾಳ
ಏನೆಂಬೆನು ಸ್ವರ್ಭಾಸುವಿನಂದದೊ |
ಳಾ ನಕ್ತಂಚರ ಸೇನೆಯ ನೆರಹುತ |
ದಾನವರೊಡೆಯನಸೂನು ವರೂಥವ |
ತಾನೇರುತಲತ್ಯಾನಂದದಲಿ, | ಬಂದನಾಗ ||25||
ಅಸುರ ಪಡೆಯ ಭರವ ಸಹಿಸಲಾರದೆ |
ವಸುಧೆ ತಗ್ಗಿಫಣಿ ಕುಸಿದ ಕೂರ್ಮನೆದೆ |
ಬೆಸುಗೆ ಬಿಟ್ಟಿತೆಣ್ದೆಸೆಯ ಮದೇಭಗ |
ಳ್ಗುಸಿರುಬ್ಬಸವೆನಲಸಮ ಸಾಹಸದಿ | ಬಂದನಾಗ ||26||
ವಾರ್ಧಕ
ಬರಬರುತ ಬಿಲ್ಬಾಣ ಮುಸಲ ಮುದ್ಗರಕಣೆಯ
ಪರಶು ಪಟ್ಟಸ ಪಿಂಡಿವಾಳ ಗದೆ ಶೂಲ ವಿ
ಸ್ತರ ಕುಂತ ತೋಮರಾದಿಗಳಿಂದ ಮುತ್ತಿದರು ಖಳರೈದೆ ಕಪಿಪಾಳ್ಯವ |
ಇರಿದರೆಸೆದರು ಹೊಡೆದರಿಟ್ಟರಲ್ಲಲ್ಲಿ ಪಲ್
ಗಿರಿದು ಕಿರಿಕಿರಿಗುಟ್ಟುತೋಡಿಬರುವಂಥ ವಾ
ನರರ ಸಂತೈಸುತ್ತ ತರಣಿನಂದನನವರ ತಿರುಗಿಸುವ ಹೋಗಗೊಡದೆ ||27||
ರಾಗ ವಂದಾವನಸಾರಂಗ ಅಷ್ಟತಾಳ
ಆಯಿತು ಯುದ್ಧವಾಯಿತು ಅತಿ |
ಕಾಯನಗ್ರಜನ ಪೆಟ್ಟಿಗೆ ವಾನರರ ಲಯವಾಯಿತು || ಪಲ್ಲವಿ ||
ಇನಕುಲಾಧಿಪನ ತಮ್ಮನು ರಣಕೆನುತ ಮ |
ತ್ತಿನಜಾತಸಹಿತಲೆಬರುವಾಗ | ಅಂಗ |
ದನು ಸುಷೇಣನು ಸಂಗಡಿರುವಾಗ | ಮರ |
ಗಿರಿ ಕಲ್ಲುಗಳನೆತ್ತಿ ತರುವಾಗ | ನೋಡಿ |
ದರು ಬೇಗ || ಕೂಡಿ |
ಕರೆದಾಗ | ರಾ |
ವಣಿಗೆ ರಕ್ಕಸರು ಹೇಳಿದರಾಗ | ಸೇರಿ |
ರಣಕೆ ಶೌರ್ಯದಿ ಬಂದು ನಿಲುಾಗ | ಯುದ್ಧ ||28||
ಕೊಳುಗುಳದೊಳಗತಿ ಪೌರುಷದಿಂ ಕಪಿ |
ಗಳ ಸಂಹರಿಸುವ ವೇಳೆಯೊಳಂದು ಬಿಲು |
ಗೊಳುತಿದಿರಾಗೆ ಲಕ್ಷ್ಮಣ ಬಂದು ಕಣ |
ನೊಳಗೆ ರಕ್ಕಸರನು ಕೊಲುವಂದು | ಇಂದ್ರ |
ಜಿತು ಹಾರಿ | ಮೇಘ |
ದೆಡೆ ಸೇರಿ | ಬಾಣ |
ಗಳ ಬಿಡುತಿರಲು ಮರ್ಕಟರಲ್ಲಿ ಪ್ರಾಣ |
ವಳಿದು ಭೂಮಿಗೆ ಬಿದ್ದರಲ್ಲ್ಯಲ್ಲಿ || ಯುದ್ಧ ||29||
ಹನುಮ ಜಾಂಬವ ನೀಲ ಗವಯ ಗವಾಕ್ಷನು |
ಪನಸನಾವಾಲಿತನೂದ್ಭವ ಸುಷೇ |
ಣನು ಗಜಸುಮುಖಾಗ್ನಿ ಸಂಭವ ಬಲ |
ವನು ಕೂಡಿ ಬಂದ ಲಕ್ಷ್ಮಣದೇವ ಸಹಿ |
ತಲೆ ಕೊಂದ | ಶಕ್ರ |
ಜಿತುವಂದಾ | ರಾಮ |
ನನು ಕಾಣುತೆಚ್ಚ ಬಾಣಗಳಿಂದ ಮೂರ್ಛೆ |
ಯನು ತಾಳ್ದರಘುನಾಥ ಭರದಿಂದ ಯುದ್ಧ ||30||
ರಣದಿ ಮತ್ತಾರೂ ತನ್ನೊಳು ಸೆಣಸುವರಿಲ್ಲ |
ವೆನುತ ಪಟ್ಟಣಕಾಗಿ ತಿರುಗುತ್ತ | ಮನೆ |
ಮನೆಗಳೊಳಾರತಿ ಬೆಳಗುತ್ತ | ಪುರ |
ಜನರು ಬಂದವನಿದಿರ್ಗೊಳ್ಳುತ್ತ | ಬಾಗಿ |
ಮಣಿಯುತ್ತ | ಹಿಗ್ಗಿ | ಕುಣಿಯುತ್ತ | ಮಿಗೆ |
ತನೆಯನಿಂಗುಡುಗೊರೆ ಮಾಡುತ್ತ | ದಶಾ |
ಸ್ಯನು ಸಂತಸದೊಳಿರುತಿರಲಿತ್ತ || ಗೆಲ ||31||
ವಚನ || ಇತ್ತಲಾ ವಿಭೀಷಣನು ಬಿದ್ದಂಥ ಸೈನ್ಯವಂ ನೋಡಿ ತನ್ನೊಳುತಾನೇ ಏನೆಂದನು ಎಂದರೆ-
ರಾಗ ಕೇದಾರಗೌಳ ಅಷ್ಟತಾಳ
ಸಿರಿದೇವಿ ಸೀತೆ ರಾಘವ ನಾರಾಯಣನೆಂದು |
ನೆರೆನಂಬಿ ಬಂದೆ ನಾನು ||
ಸುರಪನ ಜೈಸಿದವನ ದಿವ್ಯಶರಕೆ ಮೈ |
ಮರೆವುದೇನಾಶ್ಚರ್ಯವು ||32||
ಕುರುಡ ಹೋದಲ್ಲಿ ಕತ್ತಲೆ ಎಂಬ ಗಾದೆಯು |
ಸ್ಥಿರವಾಯಿತೆನಗೆ ಬಂದು ||
ಮರುತನಂದನನಿದ್ದತೆರನ ನೋಡುವೆನೆಂದು |
ಅರಸುತ್ತ ನಡೆತಂದನು ||33||
ಕಂಡ ವಿಭೀಷಣನಖಳಾಂಡ ಕೋಟಿ ಬ್ರ |
ಹ್ಮಾಂಡನಾಯಕ ರಾಮನ ||
ಪುಂಡರೀಕಾಕ್ಷಿ ಜಾನಕಿಯನು ವನದಲ್ಲಿ |
ಕಂಡು ಕೈಮುಗಿದಾತನ ||34||
ಕೊಂಡುಬಂದಾ ಚೂಡಾಮಣಿಯ ಪಟ್ಟಣವನ್ನು |
ಕೆಂಡದಂತುರುಹಿದನ ||
ಚಂಡವಿಕ್ರಮನಂಜನೆಯ ಸುಕುಮಾರದೋ |
ರ್ದ್ದಂಡ ಶ್ರೀ ಹನುಮಂತನ ||35||
ಇರ್ವರೊಂದಾಗಿ ಮಾತಾಡಿಕೊಂಡವರು ಮ |
ತ್ತೊರ್ವನ ಹುಡುಕಲೆಂದು ||
ಪರ್ವತದಂತಿಪ್ಪ ಶವಗಳ ಕೆದರುತ್ತ |
ಗರ್ವದಿಂ ದರಸಲಾಗಿ ||36||
ಸುರ್ವಿಟ್ಟುಸುಯ್ದುನಿಧಾನ ಕೀರವದಿಂದ |
ಸರ್ವಜ್ಞಬ್ರಹ್ಮಜಾತ ||
ಪೂರ್ವದಿಕ್ಕಿನಲಿ ಬಿದ್ದಲ್ಲಿಂದ ಕೇಳ್ದುಗಂ |
ಭೀರರ ನುಡಿಸಿದನು ||37||
Leave A Comment