ಕಂದ

ಆರೈ ಬಂದವರೆಂದೆನು
ತಾರಯ್ಯುತ ಮಾತನಾಡಿ ಜಾಂಬವದೇವಂ |
ಶ್ರೀರಾಮನ ಮಹಿಮೆಯ ಸುವಿ
ಚಾರದೊಳು ವಿಭೀಷಣಂಗೆ ತೋರಿಸುತೆಂದಂ ||38||

ರಾಗ ಕುರಂಜಿ ಅಷ್ಟತಾಳ

ಕಂಡೆಯಾ ವಿಭೀಷಣ ರಾಮನಾಟವ || ಕಂಡೆಯಾ || ಪಲ್ಲವಿ ||

ಕಂಡೆಯಾ ಕಮಲಲೋಚನನ ಈ ಭೂ |
ಮಂಡಲದೊಡೆಯ ರಾಘವನ ಚೆಲ್ವ |
ಪುಂಡರೀಕಾಕ್ಷ ಮಾಧವನ ಸೇನಾ |
ತಂಡವೆಲ್ಲವ ಕಡೆಹಿದನೆಂಬ ಹಂಕತಿ |
ಗೊಂಡು ಪೌರುಷವ ಮುಂಕೊಂಡು ಮೈಮರೆವುದ ||39||

ಮರುತನಂದನನುಳಿದಿರಲು ಸಮ |
ಸ್ತರು ಎಚ್ಚರಿತು ಕೊಂಡವರು ಎಂದು
ಅರಿತುಕೊನಂಬಿ ಮನದೊಳು ಇದ |
ನೆರೆ ತಿಳಿದವರ್ಚಿನುಮಯನಾತ್ಮನೆಂದುಸು |
ರ್ವರು ಮುಖ್ಯ ಪ್ರಾಣನಿದ್ದರೆ ಕಾರ್ಯಜಯವೆಂದು ||40||

ಕಂದ

ವಾರಿಜಸಂಭವಸುತನಂ
ಮಾರುತಿ ಕಂಡೆರಗಿ ಬಂದೆ ನಾ ಹನುಮಂತಂ
ಕಾರಿಯಮೇನುಂಟೆನಗದ
ಕಾರುಣ್ಯದಿ ಬೆಸಸಬೇಕೆನಲ್ಕಿಂತೆಂದಂ ||41||

ರಾಗ ನೀಲಾಂಬರಿ ಅಷ್ಟತಾಳ

ಉಳಿದೆಯಾ ಹನುಮಂತ ನೀನು |
ಕಳೆದೆಯಾ ಬಾಣದುರುಬೆಯನು |
ತಿಳಿದೆಯ | ಶೌರ್ಯ | ತಳೆದೆಯಾ ||42||

ಜಗದ ಜೀವಪ್ರಾಣನೆಂದು |
ಹೊಗಳಿಸಿ, ಕೊಳಬೇಕು ನಿಂದು |
ಬಲವಂತ | ದೇವ | ಹನುಮಂತ ||43||

ರಾಘವ, ಮುಂತಾದವರ |
ಯೋಗವನ್ನೆಚ್ಚರಿಸುವುದರ |
ಕಾಣೆನು | ಯುಕ್ತಿ | ಬೇರೇನೂ ||44||

ಮತ್ಯುಂಜಯನ ಪರ್ವತದಿಂ |
ದಿತ್ತಲೀಶಾನ್ಯ ಭಾಗದಿಂ |
ದ್ಹೊಳೆವದು | ಶೀತ | ಗಿರಿಯದು | ||45||

ಚಂದ್ರದ್ರೋಣವೆಂದು ಬಹಳ |
ಚಂದದ ಗಿರಿಯುಂಟದರಲಿ |
ಮದ್ದುಂಟು | ನಾಲ್ಕೌ | ಷಧಿಯುಂಟು ||46||

ಸಂಜೆಯಾದ ಬಳಿಕ ನಾಳೆ |
ಸಂಜೀವನವ ತಾರಾಮೇಲೆ |
ಉಳಿವರು | ಮೂರ್ಛೆ | ತಿಳಿವರು ||47||

ಕಾಣಬಾರದಲ್ಲಿಹ ಗೀ |
ರ್ವಾಣ ಮುಂತಾಗಿರುವ ದೇವ |
ದನುಜರು ಅವ | ರ್ತನುಜರು ||48||

ಮತ್ತೇಭವಿಕ್ರೀಡಿತವೃತ್ತ

ಕುರುಹಂ ಪೇಳ್ದಜಸೂನು ಬೀಳ್ಕೊಳಲವಂ ದಾರಾತ್ರೆಯೊಳ್ಬೇಗದಿಂ |
ಗಿರಿಗೈತಂದರಸಲ್ಕೆಕಾಣದಿರಲಂದಾ ಗೋತ್ರಮಂ ಕೀಳುತ |
ಬರೆ ಪೊತ್ತಾಕ್ಷಣ ತಂದು ಜಾಂಬವಗದಂ ತೋರಲ್ಕೆ ಸಂಶೋಧಿಸಿ |
ವರ ನಾಸಾಗ್ರದಿ ಹಿಂಡಲಾ ರಘುವರಂ ಎಚ್ಚತ್ತನೇವೇಳ್ವೆನು ||49||

ರಾಗ ಸಾವೇರಿ ಅಷ್ಟತಾಳ

ತಿಳಿದು ಲಕ್ಷ್ಮಣನೆದ್ದಾಗಳೆ ಸುಷೇಣನು ಮದ್ದ |
ಉಳಿದವರಿಗೆ ಹಿಂಡಲಿಳೆಗೆ ಮೂರ್ಛೆಯಗೊಂಡು |
ಮಲಗಿದವರು ಬಂದು ಎರಗೆ ರಾಘವ ಕಂಡು |
ಬೆಳಗಾಗುವಷ್ಟರ ಮೊದಲೀ ಪರ್ವತವನ್ನು
ಕಳುಹಿಸುಮುನ್ನಿದ್ದ ಬಳಿಗೆಂದುಪೇಳ್ದ ||50||

ಆ ಸುರಗಿರಿಯ ಸಂತೈಸುತಮತ್ತುಳಿ |
ದೀಸರನೆಬ್ಬಿಸಿದಾ ಸಾಹಸಕೆ ಬಿಸ |
ರ‌್ವಾಸನಸೂನು ಸಂತೋಷದಿಂದಿರ್ದನು |
ವಾಸವ ಮೊದಲಾದಮರರೆಲ್ಲರು ಜಗ |
ದೀಶನ ಮಹಿಮೆ ಎಂಬಾ ಸಮಯದಲಿ ||51||

ದಣಿಸಿದನಾ ಇಂದ್ರಜಿತು ಬಾಣನಿದ್ರೆಯಿಂ |
ದೆನುತ ಮನಃ ಕ್ಲೇಶದಿಂ ಕಪಿಗಳು ರಾ |
ವಣನ ದುರ್ಗವ ರಾತ್ರಿ ಪುನರ್ದಹನವ ಮಾಡಿ |
ಘನ ಬೇಗದಿಂದ ಹಿಂತಿರುಗಿ ವನಜನಾ |
ಭನ ಪದಕೆರಗಲಾ ದಿನಪನು ದಯವಾಯ್ತು ||52||

ವಚನ|| ಇಂತಾ ಲಂಕಾಪಟ್ಟಣವನ್ನು ಪುನರ್ದಹನವಂ ಮಾಡಿ ತಮ್ಮ ಠಾಣೆಯದಲ್ಲಿ ಸ್ವಸ್ಥದಿಂದಿರಲತ್ತಲಾ ದುರ್ಗದ ಕೇರಿಯವರು ಏನೆನ್ನುತ್ತಿರ್ದರದೆಂತೆನೆ –

ರಾಗ ರೇಗುಪ್ತಿ  ಅಷ್ಟತಾಳ

ತರವಲ್ಲ ನಾವಿನ್ನಿರಸಲ್ಲ ದಶ |
ಶಿರನೆಂಬ ರಕ್ಕಸ ತಾನೊಳ್ಳೆಯವನಲ್ಲ   || ಪಲ್ಲವಿ ||

ಹೋಯಿತು ರಾಮನದಂಡೆಂಬ ಮಾತು ಸು |
ಳ್ಳಾಯಿತು ಕನಸಿನ ರೊಕ್ಕದಂತೆ |
ಬಾಯ ಬಿನ್ನಾಣ ವಿಂದ್ರಾರಿಗೆಲಿದ ಮಾತು |
ತೋಯದೊಳ್ಮುಳುಗಿ ಕಣ್ಣೊಡೆದಂತಾದ್ದಲ್ಲದೆ ||53||

ಇನ್ನು ರಾವಣನಿಗಹಳು ಸೀತೆಎಂಬುದು |
ಕನ್ನಡಿಯೊಳಗಿನ ಗಂಟೆನಂತಾಯ್ತು ||
ಹೊನ್ನಕರಂಡದಂ ತಿರುವ ಪಟ್ಟಣ ಹೋಗಿ |
ಹೆಣ್ಣು ಗಂಡುಗಳಿಂಗೊಂದರುವೆ ಯಾಯ್ತಲ್ಲದೆ ||54||

ಧರಣಿನಂದನೆಯ ದಾನವ ತಂದಿದ್ದಾರಭ್ಯ |
ಸಿರಿಗೆಟ್ಟಿತೀ ಊರಸೌಭಾಗ್ಯವು ||
ಕರಕರೆಯಲಿ ದಿನ ಕಳೆವುದಲ್ಲದೆ ಮನ |
ಹರುಷವಿಲ್ಲದೆ ದುಃಖಸ್ಥಿರವಾಯಿತಲ್ಲದೆ ||55||

ಪಾಶವ ತೊರೆದು ಪಟ್ಟಣದಿಂದ ಹೊರವಂಟು |
ದೇಶಾಂತರಕ್ಕೆ ಹೋಗುವ ಎಂದರೆ ||
ಸಾಸುವೆಗೆಡೆಯಿಲ್ಲವೆಂಬಂತೆ ಕಪಿಗಳು |
ತಾವ್ ಸುತ್ತಮುತ್ತಲು ಕವಿದುಕೊಂಡಿಹವಲ್ಲ ||56||

ವಾರ್ಧಕ

ಎಂದು ಪಟ್ಟಣದಿ ಗುಜುಗುಜಿಸುತಿರೆ ನಿಕುರುಂಬ
ಬಂದು ರಣಕಿದಿರಾಂತು ನಿಲಲವನ ಹನುಮಂತ
ಕೊಂದನಾ ಬಳಿಕ ನೀಲನು ಶೋಣಿತಾಕ್ಷನಂ ಕಾದಿ ಕಡೆ ಗಾಣಿಸಿದನು
ಸಂದರವರೆಣಿಕೆ ತಗ್ಗಿತು ಬಳಿಕ ಮಕರಾಕ್ಷ
ನೊಂದೆರಡುಗಳಿಗೆ ಕಪಿಗಳ ಕೊಲ್ವ ಸಮಯದೊಳು
ಇಂದಿರಾರಮಣ ರಘುಕುಲಜಾತ ತಾನೆ ನಡೆತಂದು ಮಾರಾಂತು ನಿಂದ ||57||

ರಾಗ ಮಾರವಿ ಅಷ್ಟತಾಳ  (ವಿಲಂಬಿತ)

ಜಾನಕಿಯ ಗಂಡನೆಂಬಾತ ನೀನೊರಾಮ |
ಹೇನನೊರಸಿದಂತೆ ಕೊಲುವೆ ನಿನ್ನ ನಿಸ್ಸೀಮ ||58||

ಅತಿಕಾಯ ಕುಂಭಕರ್ಣರಿಂದತಿಶಯನೊ ನೀನು |
ಮತಿಗೆಟ್ಟು ಮಾತಾಡುತಿರ್ಪೆ ಮರುಳರಂತಿದೇನು ||59||

ಹಿಂದೆ ಖರದೂಷಣರ ಕೊಂದಾತ ನೀನಹುದೆ |
ಹಿಂದು ಮುಂದು ನೋಡದಿಲ್ಲಿ ಬಂದು ಸಿಕ್ಕಬಹುದೆ ||60||

ತಂದೆ ಇದ್ದಬಳಿಗೆ ನಿನ್ನ ಹೊಂದಿಸದೆ ಬಿಡೆನು |
ಹಿಂದೆ ಜಾರಿ ಜುಣುಗಿ ಪೊಷೆನೆಂದರೆ ನಾಬಿಡೆನು ||61||

ಹೆಂಡತಿಯವನದಿ ಕಳೆದುಕೊಂಡಾತ ನಾಬಲ್ಲೆ |
ಹಿಂಡು ಹಿಂಡು ವಕ್ಷಚರರ ದಂಡಿಸಿರುವೆ ನಿಲ್ಲೆ ||62||

ಜಾಣ ನೀನೋಡೆನ್ನಕಯ್ಯ ಬಾಣವೆನುತ ಹೊಡೆದ |
ಜಾನಕಿಯ ರಮಣನದರ ಕಾಣುತ್ತಲೆ ಕಡಿದೆ ||63||

ಹತ್ತೆಂಟು ಬಾಣವ ರಘುಜಮಸ್ತಕಕ್ಕೆ ಬಿಡಲು |
ಕತ್ತರಿಸಿ ಪ್ರತಿಗೆ ಬಾಣವಿತ್ತ ನೋಡಿ ದನುಜ ||64||

ಎಸೆಯುತಿರಲು ರಾಮಶರವನಸುರ ನೋಡುತಿರ್ದ |
ವಶವಿಲ್ಲದಂತಾಗಿ ದನುಜ ವಸುಧೆಗೊರಗಿ ಬಿದ್ದ ||65||

ಇಳೆಯೊಳಸುರ ಬಿದ್ದನೆಂದು ತಿಳಿಯಲಾಗಿಸುರರು |
ಭಳಿರೆ ರಾಮಜಯವೆಂದು ಪೂಮಳೆಯ ಕರೆಯುತಿರಲು ||66||

ಭಾಮಿನಿ

ಖರತನುಜ ಮಕರಾಕ್ಷಸಹ ಯಮ
ಪುರಿಗೆ ಬಿಜಯಂಗೆಯ್ಯಲಾಕ್ಷಣ
ಸುರಪಜಿತು ಹನುಮಂತನಿಂದುರೆ ಸೋತು ಜಾನಕಿಯ |
ಪರಿಯ ಕಪಟದ ರೂಪ ನಿರ್ಮಿಸಿ
ಮರುತಸುತನಿಗೆ ತೋರೆ ಮಾಯದ
ತರುಣಿ ಎಂಬುದ ತಿಳಿಯದೇ ಚಿಂತಿಸಲು ರಘುನಾಥ ||67||

ಕಂದ

ಕಪಟದ ಕಾಯಕವೆನುತಾ
ಗುಪಿತದಿ ತಾಪೇಳಿ ಶರಣನತಿಭರವಸೆಯೊಳ್ |
ತಪನಕುಲೇಶನ ಚಿಂತೆಯ
ನೃಪಹರಿಸಲ್ಕಿತ್ತ ನೆನೆದನಾ ಶಕ್ರಜಿತು ||68||

ಸಾಂಗತ್ಯ (ಚರಿತೆ) ರಾಗ ಪಂತುವರಾಳಿ ರೂಪಕತಾಳ

ರಣವ ಜೈಸುವ ಶಕ್ತಿಬೇರಿಹುದಿನ್ನು ಮಾ |
ರಣಯಜ್ಞವನು ರಚಿಸುವೆನು |
ಹನುಮ ಜಾಂಬವ ವಿಭೀಷಣಮುಖ್ಯಲಕ್ಷ್ಮಣ |
ಗೆಣೆಯಹತೆರನ ನೋಡುವೆನು ||69||

ಎನುತ ಯೋಚನೆ ಗೈದು ಏಕಾಂತದಿಂದ ರಾ |
ವಣಿಗೋಪ್ಯಸ್ಥಳವನು ಗ್ರಹಿಸಿ |
ಘನತರಕಪಟದಿ ಯಜ್ಞವೆಸೆಗೆ ವಿಭೀ |
ಷಣನುಸುರ್ದನು ರಘುಪತಿಗೆ ||70||

ಜಗದಾಧಾರನೆ ಕೇಳು ಬಂತೊಂದಾಕಸ್ಮಿತ |
ಬಗೆಯಲಿನ್ನೇನೆಂಬೆ ನಾನು |
ಪಗೆಗೆ ಮಾರಣಯಜ್ಞ ಕುಂಭಿನಿಯೊಳು ಮಾಳ್ಪ |
ಮಗನಿಂದ್ರಜಿತು ಲಾಲಿಸೆಂದ ||71||

ತ್ರಿಜಗದೊಳಿದಿರಿಲ್ಲವಗೆ ರಾಜೇಂದ್ರ ಕೇ |
ಳಜನಿತ್ತ ವರಬಲದಿಂದ
ಭುಜಬಲವುಳ್ಳರು ಸಂಗಡ ಬರಲೆನ್ನ |
ಸುಜನವೈರಿಯ ತೋರಿ ಕೊಡುವೆ ||72||

ಹನ್ನೆರಡಬುದ ಹಸಿವು(ದು?) ನಿದ್ರೆ ಸ್ತ್ರೀಸಂಗ |
ವನ್ನು ತೊರೆದವನ ಹೊರತು |
ತನ್ನ ಕೊಲ್ಲಲು ಬಾರದೆಂಬ ವರವುಂಟವ |
ಗಿನ್ನೇನುಹವಣುಯೆಂಬಾಗ ||73||

ಅಣ್ಣ ಕೊಡಪ್ಪಣೆ ಯೆನುತ ಬಿಲ್ವಿಡಿದಿಹ |
ತನ್ನ ತಮ್ಮನ ಮೊಗ ನೋಡಿ |
ಸಣ್ಣವನೆಂತು ನೀ ಜೈಸುವೆಂದೆನಲೆಂದ |
ಬಿನ್ನೈಸುವೆನಯ್ಯ ಕಡೆಗೆ ||74||

ಕೊಂದುಕೊಡುವೆ ರಕ್ಕಸನನೆಂದು ಕೈಮುಗಿ |
ದಂದು ಸೌಮಿತ್ರಿ ಮುಂದೊತ್ತೆ |
ಒಂದುಳಿಯದೆ ಈ ಸಾಧನೆಗಳಿದ್ದರೆ ಯೆನ್ನ |
ತಂದೆ ನೀಮುಂದೆ ಪೋಗೆಂದ ||75||

ತಡೆಯದೆ ಹನುಮ ನೀಲಾಂಗದ ಜಾಂಬವ |
ರೊಡನೆ ಪೋಗಲಿ ವಿಭೀಷಣನು |
ಬಡಿದು ಖಳನ ಯಜ್ಞಕೆಡಿಸಿ ಬರುವುದಕ್ಕೆ |
ಪಡಿಬಲವಾಗಿ ಲಕ್ಷ್ಮಣಗೆ ||76||

ರಾಮನಪ್ಪಣೆಯಿಂದ ರಭಸದಿಂದಾರ್ವರು |
ಆ ಮಹಾಕುಂಭಿನಿಗಿಳಿದು |
ತಾಮಸ ಚರರ ಸಂಹರಿಸಿ ಏಳಂಗದ |
ಹೋಮವ ಕೆಡಿಸಿದರೊಲಿದು ||77||

ಭುಗಿಲೆಂಬ ಭೂತಗಣವನೆಚ್ಚು ಗಾಳಿಯ |
ಪೊಗಿಸಿ ಹಾರಿಸಿದನು ಹನುಮ |
ನಗುತಲಾ ಹುತಿಗೊಂಬ ಭೂತಸಂಕುಲವೆಲ್ಲ |
ಮಗಧರಹರನ ಸಾರಿದವು ||78||

ರಾಗ ಮಾರವಿ ಅಷ್ಟತಾಳ

ರಾವಣಾತ್ಮಜ ಸಾಕು ರಥವೇರುಕೊಳು ಚಾಪ |
ಸಾವಕಾಲಕೆ ಯಜ್ಞವೇಕೆ |
ಜೀವಗಳ್ಳರ ಗಂಡ ಇದಿರಾಗೆಂದೆನುತಲಿ |
ದೇವಲಕ್ಷ್ಮಣ ಗರ್ಜಿಸಿದನು ||79||

ರಾಗ ಕೇದಾರಗೌಳ ಅಷ್ಟತಾಳ

ದೀಕ್ಷೆಯ ಮುರಿದೆದ್ದು ಕಡೆಗಣ್ಣಿ ನಿಂದ ನಿ |
ರೀಕ್ಷಿಸಿ ಕಿರಿಯಯ್ಯಗೆಂದ |
ರಾಕ್ಷಸ ಕುಲಗೇಡಿ ತೊಲಗೆಂದು ನಿಂದಿಸಿ |
ಲಕ್ಷ್ಮಣಗಿದಿರಾದ ಖಳನು ||80||

ಎಲವೊ ರಾವಣಿ ಕೇಳುಪರಸತಿಯರ ದ್ರೋಹ |
ನೆಲನ ಹೊಕ್ಕರು ಬೆನ್ನ ಬಿಡದು |
ಛಲ ಬಿಟ್ಟು ರಾಮನ ಪದಪಂಕ ಜವಸೇರಿ |
ಸಲಹಿಕೊ ನಿನ್ನ ಪ್ರಾಣವನು ||81||

ಹರಣದಾಸೆಗಳುಳ್ಳಡಣ್ಣನ ಕರೆಸಿಕೊ |
ಚರಣ ನಂಬಿದ ವಿಭೀಷಣನ |
ತಿರಿದುಂಬುದಕ್ಕೆ ಜೋಳಿಗೆಯ ಪಾಲಿಸಿ ದೇಶಾಂ |
ತರಕಟ್ಟು ಕೋಲೊಂದ ಕೊಟ್ಟು ||82||

ಅಣ್ಣನ ಕರೆಸಿ ನಿನ್ನಪ್ಪ ರಾವಣನನ್ನು |
ಮಣ್ಣ ಕೂಡಿಸಿ ಲಂಕಾಪುರವ |
ಬಣ್ಣದಿಂದಲೆ ನಿನ್ನ ಚಿಕ್ಕಯ್ಯ ಶರಣಂಗೆ |
ಉಣ್ಣಗೊಡುವೆ ನಿರಂತರದಿ ||83||

ಆಶ್ಚರ್ಯವೆಂಬಡೆ ಅಸುರನ ರಥ ವಾಜಿ |
ಎಚ್ಚು ಕೆಡಹಿದ ಮಾರ್ಬಲವ |
ಕೊಚ್ಚಿ ಸೀಸಕವ ಮೈರುಧಿರಾಂಬು ಮಯವಾಗೆ |
ಮುಚ್ಚಿ ಲೋಚನವ ಮೈಮರೆದ ||84||

ಎಚ್ಚರುವುತಲೆದ್ದು ಶುಕ್ರನೌ ಷಧಿಯಿಂದ |
ಎಚ್ಚನು ಬ್ರಹ್ಮಶಕ್ತಿಯನು |
ಅಚ್ಯುತಾನುಜ ವಿಭೀಷಣಗಿಟ್ಟ ಶಕ್ತಿಯ |
ನುಚ್ಚುಗೆಯ್ದೆಸೆದಾಗ ಖಳನು ||85||

ಮನುಜೇಂದ್ರ ಕೇಳನ್ನಾ ಹಾರವು ನಿದ್ರೆಯು |
ವನಿತೆ ವರ್ಜಿತವಾದ ವ್ರತವು |
ನಿನಗುಳ್ಳೊಡಿದಿರಾಗು ಬರಿದೆ ಸಾಯದಿರೆಂದು |
ಧನುವಿಗೊಡ್ಡಿದನು ಮಾರ್ಗಣವ ||86||

ವಾರ್ಧಕ

ಕಪಿಬಲವು ಬೆರಗಾಗಿ ಕಂಗೆಟ್ಟು ನಿಂದಿರಲು
ಅಪರಿಮಿತ ದಾನವರು ಗುಪಿತದಿಂದಿರುತಿರಲು
ಚಪಲಾಕ್ಷಿ ಸೀತೆ ಕಳಕಳಿಸಿ ಮುರುಗುತ್ತಿರಲು ವಿಪುಳ ಭಯ ಮೈನೆರೆಯಲು |
ನೃಪನ ಶರದಿಂದ್ರಸುತನೃಪಕೀರ್ತಿಯಾಯ್ತೆಂದು
ತ್ರಿಪುರಸಂಹಾರಿಭಕ್ತನ ಸುತನ ಕಾಳಗದಿ
ಕಪಿರಾಜಸುಗ್ರೀವ ಮೊದಲಾದ ವೀರರುಂ ಗುಪಿತದಿಂ ಗುಜುಗುಜಿಸಲು ||87||

ರಾಗ ಮಾರವಿ ಅಷ್ಟತಾಳ

ಮರುಳೆ ರಾವಣಿ ಪರಿಹರಿಸು ಮಹಾಸ್ತ್ರವ |
ಸ್ಮರಿಸಿಕೊ ಕುಂಭಿನಿಯ |
ಬರಿಸು ಶುಕ್ರನನೆಂಬಷ್ಟರೊಳಿಂದ್ರ ಸೂನುವ |
ಶಿರವು ಹಾರಿತು ನಭಕೆ ||88||

ಸುರರುಘೇಯೆಂದುಬ್ಬಿ ಸೌಮಿತ್ರಿಯಂಗಕೆ |
ಸುರಿದರು ಪುಷ್ಪವಷ್ಟಿಗಳ |
ಮರಳಿ ರಾಮನ ಪದಾಬ್ಜಕೆ ಬಂದು ಪೊಡಮಟ್ಟು |
ಧುರದ ಸಂಗತಿಯ ಪೇಳಿದರು ||89||

ಭಾಮಿನಿ

ಮೂರುಲೋಕದ ಮತ್ಯು ಯಮನಲಿ
ಸೇರಿದನು ಖಳನೆಂದು ರಘುಪತಿ
ಭೂರಿಹರ್ಷದಿ ಲಕ್ಷ್ಮಣನ ತಕ್ಕೈಸಿ ಮುದ್ದಾಡೆ |
ಸಾರಸಂತಸದಿಂದ ಪಶ್ಚಿಮ
ವಾರಿಧಿಯ ಮರೆಯಾಗೆ ರವಿ, ಸುರ
ನಾರಿಯರು ಬಂದಾರತಿಯ ಬೆಳಗಿದರು ರಘುವರಗೆ ||90||

ವಾರ್ಧಕ

ರಘುವಂಶವಾರಿಧಿಗಳಿರ ಕೇಳಿರಿಂದ್ರಾರಿ
ಹಗರಣದಿ ಮಡಿದಲ್ಲಿಗಾಯಿತೀ ಸಂಧಿಯೆಂ
ದೊಗುಮಿಗೆಯ ಹರ್ಷದಲಿ ಮುನಿಪೇಳ್ದ ರಾಮಚಾರಿತ್ರವಂ ಮನಮೆಚ್ಚುತ |
ಸೊಗಸಿಂದ ಕೇಳ್ವಪೇಳ್ವರ ಮನಕೆ ಸಂತಸವ
ನಗಣಿತದ ಸೌಭಾಗ್ಯ ಸಂಪತ್ತುಗಳ ಕಣ್ವ
ನಗರೇಶ ಗೋಪಾಲಕೃಷ್ಣನೊಲಿದೀವನೆಂಬುದು ವೇದಸಿದ್ಧವಚನ ||91||

ಮಂಗಲಪದ

ತುಂಗ ವಿಕ್ರಮ ದಶಮುಖಸಂಹರಗೆ
ಮಂಗಳ ಮಧುಸೂದನ ಮುರಹರಗೆ || ಮಂಗಳಂ ||
ದಶರಥಸುತ ಶತಭಾಸನಿಗೆ |
ಕುಸುಮನಯನ ದುರ್ಜನಕುಲಹರಗೆ |
ಅಸುರದಲ್ಲಣ ಮನುಮುನಿವಂದಿತಗೆ
ಬಿಸಜನಾಭ ಪಶುಪತಿ ಮಾಧಗೆ || ಮಂಗಳಂ ||

***