ಭಾಮಿನಿ

ಧರಣಿಪತಿ ಕೇಳಾ ದಿನವನು |
ತ್ತರಿಸಿ ಮರುದಿನದಲಿ ಸುಯೋಧನ |
ಕರೆಸಿದನು ಶತಸೋದರರ ಕರ್ಣಾದಿ ಶಕುನಿಗಳ ||
ವರಸಚಿವರತಿರಥ ಜಯದ್ರಥ |
ಗುರು ಕೃಪರು ವರಭೀಷ್ಮರುಗಳನು |
ಪರಮಮಿತ್ರಸುಪುತ್ರ ಮುಂತಾದವರನೋಲಗಕೆ  || ೨೨೧ ||

ವಾರ್ಧಕ

ಕುರುಭೂಪ ದಿವ್ಯಭೂಷಣ ತೊಟ್ಟು ಸುವಿಚಿತ್ರ |
ತರಮಾದ ಗದ್ದುಗೆಯನೇರಲಿತ್ತಟದ ವಿ |
ಷ್ಟರಗಳೊಳ್ ಸಕಲ ನಾಯಕವಾಡಿಗಳ್ ಕುಳ್ಳಿರಲ್ಕವರ ಮಣಿಮಕುಟದ ||
ವರರತ್ನಪಂಕ್ತಿಗಳ ಕಾಂತಿಯಿಂದುಜ್ಜ್ವಲಿಸು |
ತ್ತುರುವಾದ್ಯಘೋಷದಿಂ ಪೊಗಳಿಕೆಯ ಪಾಠಕರ |
ತುರಗ ಸಾಮಜಗಳಂ ಕುಣಿಸುವ ವಿಲಾಸಗಳನೇನೆಂಬೆನಚ್ಚರಿಯನು || ೨೨೨ ||

ಭಾಮಿನಿ

ಮನುಜಪತಿ ಧೃತರಾಷ್ಟ್ರ ತನ್ನಯ |
ವನಿತೆಯಳ ಸಮ್ಮೇಳದಿಂ ಬರ |
ಲಣುಗನೆದ್ದಡಿಗೆರಗಿ ಕುಳ್ಳಿರಿಸಿದನು ಪೀಠದಲಿ ||
ಜನಪನಾಜ್ಞೆಯೊಳಾಗಗಣಿಕಾಂ |
ಗನೆಯರಂಗಜನುರುಕಠಾರಿಗ |
ಳೆನಲು ತಾಳ ಮೃದಂಗ ಶ್ರುತಿಗತಿಯಿಂದ ನಟಿಸಿದರು  || ೨೨೩ ||

ರಾಗ ರೇಗುಪ್ತಿ ಏಕತಾಳ

ಆಡಿದರಂಗನೆಯರು ನಗುತ | ಪಾಡುತ ಗೀತವನಭಿನಯದೋರುತ || ಲಾಡಿದ | || ಪ ||

ರಂಗುದುಟಿಯ ಸನ್ಮಂಗಳವದನೆಯರು |
ಭೃಂಗಾಳಕಿಯರು ಶೃಂಗಾರದ ಸೊಬಗಿಯರು ||
ತುಂಗಕುಚದ ಮಾ | ತಂಗಗತಿಯ ಸ್ವ |
ರ್ಣಾಂಗರುಚಿಯ ಸಾ | ರಂಗನಿಭಾಕ್ಷಿಯ || ರಾಡಿದ  || ೨೨೪ ||

ಮನಸಂಭವ ನೂತನದಲಿ ಬರೆದಿರುವ |
ಘನತರ  ಬೊಂಬೆಗಳೆನಬಹುದವದಿರ ಚೆಲುವ ||
ಝಣಝಣರೆನೆ ಕಂ | ಕಣ ತೋಳ್ಬಳೆ ಸರ |
ಪಣಿ ಕಂಚುಕಿಗಳ್ | ಮಿನುಗುವ ಕುಟಿಲೆಯ || ರಾಡಿದ  || ೨೨೫ ||

ಸರಸ ಸುಮೋಹನ ನವರಸ ತೋರಿಸುತ |
ವರತನುಗಂಧದ ಪರಿಮಳಗಳ ಪಸರಿಸುತ ||
ಕಿರುನಯನಾಗ್ರದ | ಸರಳಲಿ ರಸಿಕರ |
ನಿರಿಯುತಲಪ್ಸರ | ತರುಣಿಯರಂದದೊ || ಳಾಡಿದ  || ೨೨೬ ||

ಭಾಮಿನಿ

ಅರಸ ಕೇಳಾ ದಿನದ ಕುರುಭೂ |
ವರನ ಒಡ್ಡೋಲಗದ ಘನಸಿರಿ |
ಮೆರೆವ ಸಭೆಗೇನೆಂಬೆ ಸುರಪನ ಸಭೆಯ ನಿಂದಿಸಿತು ||
ಕರೆದು ಕೌರವ ದೂತನೊಳು ಮುರ |
ಹರನ ಬರಹೇಳೆನಲು ಬಂದವ |
ನೆರಗುತೇಳೈ ಕೃಷ್ಣ ಭೂಪನನುಜ್ಞೆಯಾಯ್ತೆಂದ  || ೨೨೭ ||

ವಾರ್ಧಕ

ಮುರಹರನು ನಸುನಗುತ ಕೃತವರ್ಮಸಾತ್ಯಕಿ ವಿದುರ |
ಪರಶುರಾಮಾದಿ ಮುನಿನಿಕರಮನ್ನೊಡಗೊಂಡು |
ಹೊರಟನಂತಃಪುರದ ಸಜ್ಜನರು ಬರುತಿರ್ದರಚ್ಯುತನ ಬಳಸಿನಿಂದ ||
ಸರಸಿಜಾಸನಪಿತನು ಕೌರವರ ಸಭೆಗಾಗಿ |
ತೆರಳಲಲ್ಲಿಹ ಸಾಧುಗಳು ಬಂದು ನಮಿಸಿರಲು |
ಪರಮ ಕರುಣಾರಸದೊಳೆಲ್ಲರನುಪಚರಿಸಿ ಕೃಪಾಳು ಪರಸಿದನವರನು | || ೨೨೮ ||

ರಾಗ ಮಧ್ಯಮಾವತಿ ಏಕತಾಳ

[ಮುರಹರನು ನಸುನಗುತಲೊರೆದನೇನಿದು ನಮ್ಮ | ಕರೆಯಕಳುಹಿದನು ವಿಚಿತ್ರ ||
ಕರುಣವಾಯಿತೆ ನಮ್ಮ ಮೇಲೀಗ ದೊರೆಗಳಿಗೆ | ತೆರಳಬೇಕೆಂದಸುರಹನು || ೨೨೯ ||

ಪರಶುರಾಮಾದಿ ಮುನಿನಿಕರಗಳನೊಡಗೊಂಡು | ಪೊರಟನಾ ವಿದುರ ಸಹಿತಾಗ ||
ಸರಸಿಜಾಸನಪಿತನು ಕೌರವನ ಸಭೆಯನುರೆ | ಹರುಷದಲಿ ಕಂಡೆಂದ ನಗುತ || ೨೩೦ ||

ನೋಡಿದೆಯ ವಿದುರ ಕೌರವ ಮಾಡಿದೋಲಗವ | ಓಡಿಹೋಗಲಿ ಕೃಷ್ಣನೆನುತ ||
ಗಾಢಗರ್ವದಲಿ ಕುಳಿತಿರುವನೀ ಭೂವರನು | ಕೇಡಿಗರ ಒಡನಾಡಿ ಕೆಟ್ಟ || ೨೩೧ ||

ನೋಡು ನೀನವನ ಮಾತಾಡಿಸುವ ಪರಿಗಳನು | ರೂಢಿಯೊಳಗರ್ಧರಾಜ್ಯವನು ||
ಬೇಡುವೆನು ಕೊಡದಿರಲು ಸಂಪದವು ಸ್ಥಿರವಹುದೆ | ನಾಡಮಾತಲ್ಲ ಕೇಳೆಂದ || ೨೩೨ ||

ಎನುತ ಮಾತಾಡುತಯ್ತರಲಲ್ಲಿ ಸಾಧುಗಳು | ಘನ ಮಹಿಮನಂಘ್ರಿಗಭಿನಮಿಸೆ ||
ಚಿನುಮಯನು ಪಿಡಿದೆತ್ತಿ ಕರುಣದಲಿ ಮನ್ನಿಸಲು | ದನುಜಾರಿ ಬರಲೆಂದ ನೃಪತಿ || ೨೩೩ ||]

ರಾಗ ಸೌರಾಷ್ಟ್ರ ತ್ರಿವುಡೆತಾಳ

[ನೋಡಿರೈ ಕುಲಹೀನನೊಳು ಮಾ | ತಾಡಿ ಬಹ ಗೋವಳನ ಠೀವಿಯ ||
ನಾಡೊಳರ್ಧವನೊಯ್ವೆನೆಂಬ ಸ | ಗಾಢದಿಂದ  || ೨೩೪ ||

ಅರಸು ಮಕ್ಕಳ ಸಭೆಯನಿವ ಹೊ | ಕ್ಕರಿಯನಾ ಠೀವಿಗಳ ಮಾತಿನೊ ||
ಳಿರುವುದಿತ್ತಲು ತಿರುಗಿ ಕಂಡರೆ | ಜರಿವುದೆದೆಯು  || ೨೩೫ ||

ಮಾತನಾಡಿಸೆನೆನುತ ಗಣಿಕಾ | ವ್ರಾತವನು ಕುಣಿಸುತ್ತ ಕುಳಿತಿಹ ||
ಭೂತಳೇಶನ ಸಭೆಗೆ ದೈತ್ಯವಿ | ಘಾತಿ ಬಂದ  || ೨೩೬ ||]

ಭಾಮಿನಿ

ಘನಮದೋನ್ಮತದಿಂದ ಕುಳಿತಿಹ |
ಬಣಗುರಾಯನ ಗರ್ವವಿಳಿಸುವೆ |
ನೆನುತಲೊತ್ತಿದ ಸಿರಿಚರಣದುಂಗುಟದೊಳವನಿಯನು ||
ಜನಪ ಕೇಳಿಳೆ ಮಗುಚಲಂಧಕ |
ನಣುಗ ಪೀಠಸಮೇತ ಹರಿಪದ |
ವನಜದಲಿ ಕೆಡೆದಿರಲು ಕಂಡಿತೆಂದನಸುರಾರಿ  || ೨೩೭ ||

ರಾಗ ತೋಡಿ ಅಷ್ಟತಾಳ

ಏನಯ್ಯ | ಇಂಥಾ | ದ್ದೇನಯ್ಯ   || ಪ ||

ಏನಯ್ಯ ನಮ್ಮ ಬರವ ಕಂಡು ನಿನಗೆ | ಜ್ಞಾನ ತಪ್ಪಿತೆ ಬಹಳಾನಂದದೊಳಗೆ || ಏನಯ್ಯ || ಅ ||

ವರಗದ್ದುಗೆಯನಿಳಿವುದು ತಡವೆನುತ | ಭರದಿಂದೇಕೋಭಾವದಲಿ ಪೀಠ ಸಹಿತ ||
ಚರಣದೊಳುರುಳುವುಂದುಂಟೆ ನಾ ನಿನ್ನ | ಸರಿಸಕೆ ಬರುತಿರ್ದೆನಲ್ಲೊ ಸಂಪನ್ನ || ಏನಯ್ಯ || ೨೩೮ ||

ಭಾವಗಳ್ನೆಂಟಗೆ ಮರ್ಯಾದೆಯನ್ನು | ಠೀವಿಯಿಂ ಮಾಡಿದಿರಲ್ಲ ಮತ್ತಿನ್ನು ||
ನೀವು ಕೋವಿದರಯ್ಯ ಮಾನವುಳ್ಳವರು | ಗೋವಳರಿಗೆ ನಮಿಸುವುದುಂಟೆ ನೃಪರು || ಏನಯ್ಯ || ೨೩೯ ||

ಚರಣವೆನಗೆ ಬಲು ನೋವಾಯಿತಯ್ಯ | ಅರಸ ನೀನತಿಸುಖವಂತನಲ್ಲಯ್ಯ ||
ಹರ ಹರಾ ತನುವೇಸು ನೊಂದಿತೊ ನಿನಗೆ | ಪೊರಳ ಬೇಡೇಳೆಂದನಾ ಸಭೆಯೊಳಗೆ || ಏನಯ್ಯ || ೨೪೦ ||

ವಾರ್ಧಕ

ಹರಿಯ ನಿಂದ್ಯಸ್ತುತಿಯನುಂ ಕೇಳ್ದು ಕೌರವಂ |
ಸೆರಗಿಂದ ವದನಮಂ ಮರೆಮಾಡಿ ಗದ್ದುಗೆಯೊ |
ಳಿರದೆ ಮಂಡಿಸಲಾಗ ಬೆರಗಾಗಿ ಸಭೆಯೊಳಂ ತಮ್ಮೊಳಗೆ ನಗುತಿರ್ದರು ||
ಗುರುಭೀಷ್ಮರಸುರಾರಿಗೆರಗಿ ಕೈ ಮುಗಿದು ಮೃದು |
ತರದ ಸಿಂಹಾಸನಮನೇರಿಸಿ ತಪೋಧನರ |
ನಿರದೆ ಸತ್ಕರಿಸಲಚ್ಯುತ ನುಡಿಸಿದಂ ಕಪಟಹೃದಯನ ವಿಲಾಸದಿಂದ || ೨೪೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಮುನಿದಿಹೆಯೇಕೆ ನನ್ನಲಿ | ಕುರಣವಿಲ್ಲವೆ ನಿನಗೆ ಸತಿಯರ ||
ತೆರದಿ ಮಂಡೆಯ ತಗ್ಗಿಸದೆ ಕ | ಣ್ದೆರೆದು ನೋಡೈ  || ೨೪೨ ||

ಎನಲು ಕೋಪವ ತಾಳುತಾ ಕುರು | ಜನಪ ಗರ್ಜಿಸಿ ನುಡಿದ ಗೋಪನೊ ||
ಳೆನಗೆ ಮಾತುಗಳೇಕೆ ನೋಡಿದೆ | ಗುಣಗಳೆಲ್ಲ  || ೨೪೩ ||

ನಿನಗೆ ನಮ್ಮರಮನೆಯೊಳಾರೋ | ಗಣೆಗೆ ಮನವಾಗದಿರೆ ಗಂಗಾ ||
ತನುಜ ಗುರು ಕೃಪರಾಲಯದಿ ಭೋ | ಜನವನುಳಿದು  || ೨೪೪ ||

ಮಗುಳೆ ತೊತ್ತಿನ ಮಗನ ಮನೆಯಲಿ | ಸೊಗಸಿನಿಂದಲಿ ಹಸಿವ ನೀಗಿದೆ ||
ಪಗೆಗಳಲ್ಲಾ ಪಾಂಡವರು ನೀ | ನಗಡು ಎನಗೆ  || ೨೪೫ ||

ಕುಲವಿಹೀನನು ವಿದುರ ನೀ ಗೋ | ವಳನು ನಿನಗವನಲ್ಲಿ ವರ ಸ ||
ಮ್ಮಿಳಿತ ಲೇಸೈ ನಿನ್ನ ಬರವೇ | ನಳುಕದುಸಿರು  || ೨೪೬ ||

ಕಂದ

ಇಂತೆನೆ ಕೇಳ್ದಾ ವಿದುರಂ |
ತಾಂ ತವಕದೊಳೆದ್ದಕ್ಷಿಯೊಳುರಿಗೆದರುತ್ತಂ ||
ಅಂತಕನೆಂಬೊಲ್ ಗರ್ಜಿಸು |
ತಿಂತೆಂದನು ಕುರುಜನಪಾಲನೊಡನಾಗಳ್  || ೨೪೭ ||

[ಕುರುಪತಿಯಿಂತೆನೆ ವಿದುರಂ |
ಉರುತರ ಕೋಪವನು ತಾಳುತೆರಡಕ್ಷಿಯೊಳಂ ||
ಉರಿಸೂಸುತ ಕಡೆಗಾಲದ |
ಪುರಹರನಂದದಲಿ ನುಡಿದನಾ ದುಷ್ಟನೊಳುಂ]  || ೨೪೮ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲವೊ ಕೌರವ ಮದಗರ್ವದಿ | ಮುಂದ | ಣೊಲವ ನೀನರಿಯದೆ ಶೌರ್ಯದಿ ||
ಕುಲಹೀನನೆನುತೆನ್ನ ಜರೆದೆಯ | ಗೋ | ವಳನೆಂದು ಹರಿಯ ನಿಂದಿಸಿದೆಯ || ೨೪೯ ||

ಎನ್ನ ಕುಲವನ್ನೆಲ್ಲ ಬಲ್ಲರು | ಮೂಢ | ನಿನ್ನ ದುರ್ಗುಣವನಾರರಿಯರು ||
ಮುನ್ನ ನೀನಜಪುತ್ರ ಕಾಣೆಲೊ | ಪೋಗಿ | ನಿನ್ನ ತಾಯೊಡನೀಗ ಕೇಳೆಲೊ || ೨೫೦ ||

ಚಿನ್ಮಯಮೂರುತಿ ಬಲ್ಲನು | ನಿನ್ನ | ಎನ್ನಂತರಂಗದ ಪರಿಯನು ||
ನಿನ್ನ ತೊಡೆಯ ಗದೆಯಿಂದಲಿ | ವಾಯು | ಚಿಣ್ಣ ಮುರಿವ ತತ್‌ಕ್ಷಣದಲಿ || ೨೫೧ ||

ಕದನದಿ ತಲೆಗಾಯ್ವೆನೆನುತಲಿ | ಚಾಪ | ವಿದ ನಾನು ಧರಿಸಿಹೆ ಕರದಲಿ ||
ಅದ ಗ್ರಹಿಸದೆ ನಿಂದಿಸಿದ ಮೇಲೆ | ಚಾಪ | ವಿದ ಮುರಿದಿಕ್ಕುವೆನೀಗಲೆ || ೨೫೨ ||

ಎನುತಲಾ ಚಾಪವ ಮುರಿಯುತ್ತ | ಇನ್ನು | ತನಗಸ್ತ್ರಸಂನ್ಯಾಸವೆನ್ನುತ್ತ ||
ಕನಲುತಿರಲು ದ್ರೋಣ ಭೀಷ್ಮರು | ಕಂಡು | ಘನಚಿಂತಾಬ್ಧಿಯೊಳಾಳುತಿರ್ದರು || ೨೫೩ ||

ಭಾಮಿನಿ

ದನುಜರಿಪು ನಗುತೆಂದ ರಾಯರ |
ಮನೆಗಳಲಿ ಗೋಪಾಲರಾರೋ |
ಗಣೆಗೆ ಯೋಗ್ಯತರಲ್ಲ ಮಗುಳಾ ಪಾಂಡುತನಯರಿಗೆ ||
ಘನವಿರೋಧಿಗಳೈಸೆ ನೀವಿಂ |
ದನಿಬರಲಿ ಬಂಧುತ್ವವಾದುದು |
ತನಗೆ ಕೇಳೈ ಪೇಳ್ವೆ ನಾ ಬಂದೊಲವ ನಿನಗೆಂದ  || ೨೫೪ ||

ರಾಗ ಕೇದಾರಗೌಳ ಝಂಪೆತಾಳ

ಆದರಾ ಪಾಂಡುಸುತರು | ಜೂಜಿನಲಿ | ಮೇದಿನಿಯನುರೆ ಸೋತರು ||
ಆದಿಯಲಿ ನಿನಗೆ ಪೇಳ್ದ | ಭಾಷೆ ಸರಿ | ಯಾದುದೀವರೆಗೆ ಸಿದ್ಧ  || ೨೫೫ ||

ಇನ್ನಾದರವರು ಬಂದು | ನಿಮ್ಮೊಡನೆ | ಮುನ್ನಿನಂತಿರ್ಪೆವೆಂದು ||
ಎನ್ನನಿಲ್ಲಿಗೆ ಸಂಧಿಗೆ | ಕಳುಹಿದರು | ಮನ್ನಿಸೈ ಕರುಣದೊಳಗೆ  || ೨೫೬ ||

ನೀ ಮಾಡಿದಪರಾಧವ | ಕ್ಷಮಿಸುತಾ | ರಾಮದಲಿ ತಾಳ್ದ ದಣುವ ||
ತಾ ಮರೆತು ನಿಮ್ಮೊಳಿನ್ನೂ | ಕೂಡಿರ್ಪ | ರಾ ಮಹಿಮರೆನಲೆಂದನು || ೨೫೭ ||

ಅಹಹ ಕೇಳಿದೆಯ ಕರ್ಣ | ಜೂಜಿನಲಿ | ಮಹಿಯ ಸೋತವರಿಗೆನ್ನ ||
ಸಹವಾಸವೇನು ಕಡೆಗೆ | ನಮ್ಮೊಳಳು | ಕಿಹರಯ್ಯ ಸಂಧಾನಕೆ  || ೨೫೮ ||

ಅಟ್ಟಿರುವರೀ ಚೋರನ | ಬಂದ್ಯಮಜ | ಕೆಟ್ಟೆನೆಂದೆರಗಲವನ ||
ಶ್ರೇಷ್ಠದಿಂಪೊರೆವೆನೆನುತ | ಸಖನ ಕೈ | ತಟ್ಟಿ ಪೇಳಿದನು ನಗುತ  || ೨೫೯ ||

ಭಾಮಿನಿ

ಕುರುಪತಿಯ ಪೌರುಷಕೆ ನುಡಿದರು |
ಪರಶುಧರ ಕಣ್ವಾದಿ ಋಷಿಗಳು |
ಮರುಳಲಾ ದಶಕಂಠ ಸೀತೆಯನೊಯ್ದು ರಾಘವನ ||
ಶರದೊಳಳಿದಂತಿಳೆಯ ಗೋಷ್ಠಿಗೆ |
ಶಿರವನೀಗದೆ ಕುಂತಿಯಣುಗರ |
ವೆರಸಿ ಸುಖದಲಿ ರಾಜ್ಯವಾಳ್ವುದು ನಿನಗೆ ಲೇಸೆನುತ  || ೨೬೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

[ಕುರುಪತಿಯ ಪೌರುಷವ ಕೇಳುತ | ಪರಶುಧರನಿಂತೆಂದ ಪೂರ್ವದಿ |
ಧರಣಿಜೆಯ ಕದ್ದೊಯ್ದ ದಶಕಂ | ಧರನ ಪರಿಯ  || ೨೬೧ ||

ಆತಗಾದಂದದಲಿ ನೀನೀ | ಭೂತಳವ ಕೊಡದಿರಲಿಕಪ್ಪುದು |
ಮಾತ ನೀನೆಂತರಿವೆ ದೈತ್ಯವಿ | ಘಾತಿ ಪರಿಯ  || ೨೬೨ ||

ಮರುಳುತನ ಬೇಡಿನ್ನು ಪಾಂಡವ | ತರಳರಿಗೆ ಈ ಧರೆಯೊಳರ್ಧವ ||
ನಿರದೆ ಕೊಟ್ಟಿರು ವೈರಬುದ್ಧಿಯ | ಮರೆದು ಸುಖದಿ]  || ೨೬೩ ||

ರಾಗ ಪಂತುವರಾಳಿ ಮಟ್ಟೆತಾಳ

[ಎನಲು ಕೇಳ್ದು ಕೌರವೇಂದ್ರ ಕಿನಿಸಿನಿಂದಲಿ |
ದನುಜವೈರಿ ರಾಮನೆಂಬ ಗರುವ ಮೊದಲಲಿ ||
ಮುನಿಯೆ ನಿನಗೆ ತಗಲಿತೆಂಬ ಪರಿಯ ಬಲ್ಲೆನು |
ಅನುವುಗೊಳಿಸಬೇಡ ರಾವಣನ್ನ ಪರಿಯನು  || ೨೬೪ ||

ಗಂಡುಗಲಿಯೆ ಪಾಂಡವರಿಗೆ ಧರೆಯನಿತ್ತರೆ |
ಮಂಡಲೀಕರೆಲ್ಲ ನಗರೆ ಛಲವ ಬಿಟ್ಟರೆ ||
ಉಂಡುಬುತ್ತಿಕೂಳ ತಿಂದ ಲಂಡ ಕೃಷ್ಣನ |
ಕಂಡಿರುವೆನು ಹೀನಜಾತಿ ಕರಡಿಯಳಿಯನ  || ೨೬೫ ||

ಧುರದೊಳಲ್ಲದೊಮ್ಮೆ ಸೋತ ಪಾಂಡುಸುತರಿಗೆ |
ಧರೆಯ ಕೊಡೆನು ಕೊಡೆನು ನಿಮ್ಮ ಬರಿಯ ಮಾತಿಗೆ ||
ಕರಕರಿಸಬೇಡಿ ತಪಕೆ ಪೋಗಿರೆನ್ನುತ |
ಕುರುಕುಲೇಂದ್ರ ಜರೆದ ಕೋಪದಿಂದ ಗಜರುತ]  || ೨೬೬ ||

ಸಾಂಗತ್ಯ ರೂಪಕತಾಳ

[ಎಂದ ಮಾತಿಗೆ ನಾರದಾದ್ಯರು ಕುರುಭೂಪ | ಗೆಂದರು ಇಳೆಯ ಭಾರಕರ ||
ಹೊಂದಿಸಲೆಂದವತರಿಸಿ ಬಂದಿಹ ನಂದ | ನಂದನ ಶ್ರೀಕೃಷ್ಣನೆನುತ || ೨೬೭ ||

ಪಿಂದೊಬ್ಬ ಗರ್ವದೈತ್ಯನ ವಧೆಗೆಂದೀತ | ನಿಂದಿರಿಸಿದ ಛಾಯೆ ಪಾರ್ಥ ||
ಹಿಂದುಮುಂದರಿಯದೆ ಕಲಹಗೆಯ್ದರೆ ಪಾಂಡು | ನಂದನರನು ಬಿಡನೀತ || ೨೬೮ ||

ಧರಣಿಯೊಳರ್ಧ ರಾಜ್ಯವನ್ನಿತ್ತು ಸುಖದಿಂದ | ಲಿರದೆ ನೀ ಛಲವ ತಾಳಿರಲು ||
ವರಪುತ್ರಮಿತ್ರ ಬಾಂಧವಜಾಲವು ಸಹ | ಸಿರಿಸಂಪದವು ಲಯವಕ್ಕು || ೨೬೯ ||

ರಾಗ ಭೈರವಿ ಅಷ್ಟತಾಳ

[ಕಲಿತ ಮಾತಾಡದಿರಿ | ಎನ್ನೊಳು | ಸಲುಗೆಯೆ ನಿಮಗೀಪರಿ ||
ಇಳೆಯ ಭಾರಕರ ಸಂಹರಿಸುವ ಕೃಷ್ಣನೆಂ | ಬೊಲವ ಬಲ್ಲೆನು ತಾನೀಗ || ೨೭೦ ||

ಕೊಡೆನು ಈ ರಸೆಯವರ್ಗೆ | ಎನ್ನೊಳು ರಾಜ್ಯ | ಕೊಡು ಎಂಬರುಂಟೆ ಹೀಗೆ ||
ಕಡುಪರಾಕ್ರಮಿಗಳಾದರೆ ಬಂದು ಧುರದೊಳು | ಬಿಡಿಸಿಕೊಳ್ಳಲಿ ರಾಜ್ಯವ || ೨೭೧ ||]

ರಾಗ ಮಧ್ಯಮಾವತಿ ತ್ರಿವುಡೆತಾಳ

[ಎನಲು ಪೇಳ್ದನು ಭೀಷ್ಮ ಮಗನೇ | ಚಿನುಮಯನು ಪೊತ್ತಿರಲು ಪಾಂಡವ ||
ಜನಪರಿಗೆ ರಾಜ್ಯವನು ಕೊಡದಿರೆ | ಘನತೆಯಹುದೇ ಲೋಕದಿ  || ೨೭೨ ||

ತಂದೆಯಿಲ್ಲದ ಸುತರ ನಾವೇ | ತಂದು ರಕ್ಷಿಸಿದಾಗ ರಾಜ್ಯವ ||
ನಂದು ವಿಂಗಡಿಸಿದಕೆ ಇನಿತಾ | ಯ್ತೆಂದು ಮನದಲಿ ಮರುಗಿದ  || ೨೭೩ ||

ಅರಗಿನಾಲಯವನ್ನು ಮಾಡಿದೆ | ಬಳಿಕ ತರುಣಿಯ ಮಾನಹಾನಿಯ ||
ನಿರದೆ ಕೊಂಡು ಅರಣ್ಯವಾಸಕೆ | ತೆರಳಿಚಿದೆ ನೀ ಕಪಟದಿ  || ೨೭೪ ||

ಸತ್ಯದಲಿ ತಾವ್ ನುಡಿದ ಭಾಷೆಯ | ನುತ್ತರಿಸೆ ಧರೆಯನ್ನು ಕೊಡದಿರೆ ||
ಪಥ್ಯವಪ್ಪುದೆ ಕೊಡದಿರಲು ಹರಿ | ಪೊತ್ತಿರಲು ಪಾಂಡವರನು  || ೨೭೫ ||]

ರಾಗ ರೇಗುಪ್ತಿ ಅಷ್ಟತಾಳ

[ಮರುಳಾದಿರಿ ಈ ಸಿರಿಸಂಪತ್ತನು | ಪರಿಕಿಸಿ ಮುತ್ತಯ್ಯ ||
ಹಿರಿಯರ ಬಯಕೆಯೆ ಪಾಂಡವರಿಗೆ ಈ | ಧರೆಯನು ಕೊಡಿಸುವರೆ || ೨೭೬ ||

ಶಾಂತಭೂಪಗೆ ನೀವ್ ಪೇಳಿದ ಮಾತನು | ಭ್ರಾಂತಿಲಿ ಮರೆತಿರಲ್ಲಾ ||
ಎಂತೀ ಧರೆಯನು ಕೊಡಿಸುವಿರೈ ನೀವ್ | ನಾಂ ತಿಳಿಯದಾದೆನಲ್ಲಾ || ೨೭೭ ||

ಭೋಜನವೆಂಬುದು ಸಹಜವು ನಿಮಗಿದು | ಮೂಜಗಕರಿತಿಹವು ||
ತ್ರೈಜಗ ನಗುವುದು ಈ ಮಾತಾಡಲು | ರಾಜಿಸದೆನ್ನೊಡನೆ  || ೨೭೮ ||]

ಭಾಮಿನಿ

[ಈ ಪರಿಯೊಳೆಲ್ಲವರು ಕುರುಕುಲ |
ಭೂಪನಿಗೆ ಬುದ್ಧಿಯನು ಪೇಳ್ದರೆ |
ಕೋಪದಿಂದವರವರ ಜರೆದನು ಬಹಳ ರೋಷದಲಿ ||
ಪಾಪಿಗಳ ತೆರದಿಂದ ಶಶಿಕುಲ |
ದೀಪನಿಂತೆನೆ ಕೇಳ್ದು ಬಳಿಕಾ |
ತಾಪಸೋತ್ತಮರಿತ್ತ ತೆರಳಲಿಕೆಂದ ಹರಿ ನಗುತ || ೨೭೯ ||]

ವಾರ್ಧಕ

ತಾಪಸೋತ್ತಮರಿಂತೆನಲ್ ಕೇಳ್ದು ಕಿನಿಸಿನಿಂ |
ದೀಪರಿಯ ಭೋಧಾವಲಂಬನವ ಬಲ್ಲೆನೆಂ |
ದಾ ಪಾರ್ವರಂ ಜರೆಯಲನ್ನೆಗಂ ಧೃತರಾಷ್ಟ್ರ ಕುಂಭಸುತ ಗಾಂಗೇಯರು ||
ಭೂಪಗೆ ವಿವೇಕ ಬುದ್ಧಿಯನೈದೆ ಪೇಳಿದುರೆ |
ಕೋಪದಿಂದಾಲಿಸದಿರಲ್ ನುಡಿದರೀ ದುಷ್ಟ |
ಭೂಪನೋಲಗ ಸಲ್ಲದೆನುತ ಸರಿಯಲ್ಕಿತ್ತ ಕೃಷ್ಣ ಕೌರವಗೆಂದನು  || ೨೮೦ ||

ಭಾಮಿನಿ

ಪೊಡವಿಗೋಸುವ ಬಳಗ ಸಹಿತಲಿ |
ನಡೆಯಬೇಡ ಕೃತಾಂತನಲ್ಲಿಗೆ |
ಕೊಡು ಕುಶಸ್ಥಳ ವರವೃಕಸ್ಥಳ ವಾರಣಾವತಿಯ ||
ಬಿಡು ಬಿಡೆಲೊ ಆವಂತಿನಗರವ |
ನೊಡನೆ ಶಕ್ರಪ್ರಸ್ಥವನು ಸಹ |
ತಡೆಯದೇ ಧರ್ಮಜಗೆ ಸಾಮದೊಳೆಂದನಸುರಾರಿ  || ೨೮೧ ||

ರಾಗ ನಾದನಾಮಕ್ರಿಯೆ ಆದಿತಾಳ

[ಇಂದ್ರಪ್ರಸ್ಥವನ್ನು ಗುರುವಿ | ಗೆಂದಿತ್ತೆ ನಾ ಮೊದಲೇ |
ಸಂದಿತು ವಿಜಯಂತಿ ಭಾನು | ನಂದನಗಂದು || ೨೮೨ ||

ಧರೆಯೊಳು ವೃಕಸ್ಥಳಿಯ ಗ್ರಾಮ | ದಿರವು ಕೃಪನಿಗಾಯ್ತು ಮೊದಲೆ ||
ವರಕುಶಸ್ಥಳಿಯ ಗುರುವಿನ | ತರಳಗಿರಿಸಿದೆ  || ೨೮೩ ||

ಭೂರಿ ಹಿರಿಯ ಮುತ್ತಯ್ಯಗೆ | ವಾರಣನಗರದೊಳಿರಲು |
ದಾರಿಗಿಲ್ಲ ಸುಂಕವು ಕಂ | ಸಾರಿ ಪೋಗಯ್ಯ  || ೨೮೪ ||

ನೊಂದರು ಕಾಂತಾರದೊಳ | ಗೆಂದು ನಾನೈದೂರ ಕೇಳ್ದ |
ರಿಂದು ಹೀಗೆ ಪೇಳ್ವುದಿದು | ಚಂದವೇನಯ್ಯ  || ೨೮೫ ||

ಮೂರು ಗ್ರಾಮವನ್ನು ನಾ | ಕಾರುಣ್ಯದಿ ಕೊಟ್ಟಿರುವೆ ಮೊದಲೆ |
ಪಾರುಪತ್ಯ ಬೇಡ ನಿನಗೆ | ಊರವಿಚಾರ  || ೨೮೬ ||

ಮೂರು ಗ್ರಾಮವಾಯ್ತು ಮತ್ತೆರ | ಡೂರು ತಾವೆ ಆಳ್ವರಂತೆ |
ಬೇರೆ ಬೇರೆ ನಾವು ಕೇಳ್ದೈ | ದೂರು ಕೊಡಿಸಯ್ಯ  || ೨೮೭ ||

ಧಾರಿಣಿಯೊಳಗೆ ಸೂಚಿ | ಯೂರುವ ಜಾಗವ ಕೊಡೆನು |
ವೀರರಾದರವರು ಧುರದೊ | ಳೂರ ಕೊಳ್ಳಲಿ  || ೨೮೮ ||

ನರನು ತಾನೈಸೆಂಬ ನಿಮ್ಮ | ಧುರದೊಳಗೆ ಕೆಡಹಿ ಮತ್ತೆ |
ಧರಣಿಯ ಕೈ ಹಿಡಿವೆನೆನ್ನು | ತೊರೆವನಾತನು  || ೨೮೯ ||

ತರುಣಿಯ ಸಂತಯಿಸದವನು | ಹಿರಿಯರು ಕಿರಿಯರಿಗೇಕೋ |
ಧುರದಿ ನಮ್ಮ ಗೆಲಿದು ಧರಣಿ | ಸಿರಿಯನಾಳ್ವನೆ  || ೨೯೦ ||

ಮರುತಜನಿಂತೆಂಬ ತನ್ನ | ತರುಣಿಗೆ ತಾನೊರೆದ ಭಾಷೆ |
ಧುರದೊಳಗಲ್ಲದೆ ಸಲದೆಂ | ದೊರೆವನಾತನು  || ೨೯೧ ||

ಭಂಡಿ ಕೂಳ ತಿಂದ ಲಜ್ಜೆ | ಭಂಡ ಮಾಳ್ಪ ಪರಿಯ ಬಲ್ಲೆ |
ಹೆಂಡತಿಯ ಮುಂದೈಸೆ ಕೇಳ್ | ಖಂಡಿತವಿದು  || ೨೯೨ ||

ಧರಣಿಗಳೀರೇಳರಲಿ | ಇರುವೆ ನಾನು ತೃಣದೊಳೆಲ್ಲ |
ಮರುಳೆ ಕೇಳ್ ಸ್ವತಂತ್ರ ಎನ್ನೊ | ಳಿರುವುದೈ ಕೇಳು  || ೨೯೩ ||

ಹರಿಯೆ ನೀ ಸ್ವತಂತ್ರನೆನ್ನು | ತೊರೆದೆಯಲ್ಲ ಪಾಂಡುಸುತರ |
ಕರೆಸುವ ಬುದ್ಧಿಯನೇಕೆ | ಕರುಣಿಸೆ ಹೇಳು  || ೨೯೪ ||

ಕರೆಸು ನೀ ಪಾಂಡವರನಿನ್ನು | ಧರೆಯೊಳರ್ಧವಿತ್ತರೇ ನೀ |
ಸ್ಥಿರದಿ ರಾಜ್ಯವಾಳ್ವೆಯಲ್ಲ | ದಿರಲು ಲಯವೆಂದ  || ೨೯೫ ||

ಮುನ್ನ ಅವರನಡವಿಗಟ್ಟಿ | ಇನ್ನು ಧರೆಯ ಕೊಡಲು ನಾನು |
ಕನ್ಯೆಯೆಂದು ತಿಳಿಯಬೇಡ | ಮುನ್ನ ನೋಡೆಂದ  || ೨೯೬ ||]

�z�rl�� ��ೊತ್ತಿಗಿನ್ನವರು ಪದುಳಿಗರು || ೨೧೬ ||

 

ಇನ್ನಾದರೀ ಕೌರವನೊಳು ಕೂಡಿರ್ಪೆವೆಂ | ದೆನ್ನ ಸಂಧಾನ ಕಟ್ಟಿಹರು ||
ಮನ್ನಿಸಿದರೊಳಿತು ಮಗುಳಲ್ಲದಿರಲೀ ಖಳರ | ಮಣ್ಣಗೂಡಿಸದೆ ಬಿಡರವರು || ೨೧೭ ||

ಚಿಂತಿಸದಿರವ್ವ ನಾ ಕಾದಿರ್ಪೆ ನಿಮ್ಮವರ | ಮುಂತೆ ಭಯವಿಲ್ಲವೆನುತವಳ ||
ಸಂತಯಿಸಿ ವಿದುರನೊಳು ಕೌರವನ ಸಮಯಗಳ | ನೀಂ ತಿಳಿದು ಬಾರೆಂದ ನಗುತ || ೨೧೮ ||

ಪರಮಾತ್ಮನಾಜ್ಞೆಯಿಂ ಪೋಗಿ ಭೂಪನೊಳೆಂದ | ಅರಸ ನಿನ್ನೆಡೆಗಸುರಹರನು ||
ಎರಡು ಮಾತುಗಳಾಡ್ವ ಕಾರ್ಯವಿಹುದಂತೆ ಮ | ತ್ತರಿತು ಬಾರೆಂದ ಸಮಯವನು || ೨೧೯ ||

ಎಂದಡುಸಿರಿದ ಗೋಪನಂದನಂಗೆನ್ನೆಡೆಯೊ | ಳಿಂದೇನು ಕಜ್ಜ ನಾಳಿನಲಿ ||
ಬಂದರಯ್ತರಲಿ ಪೇಳೆನುತವನ ಕಳುಹಿಸಿದ | ನಂಧನೃಪನಣುಗನಂದಿನಲಿ || ೨೨೦ ||