ಕಂದ

ತಂದೆಯ ನುಡಿಯಂ ಕೇಳ್ದಾ |
ನಂದನನುರುಕೋಪದೊಳಾರ್ಭಟಿಸುತ್ತಂ ||
ಮುಂದಿಹ ರವಿಜನನೀಕ್ಷಿಸು |
ತೆಂದನು ಘರ್ಜಿಸಿ ಕಣ್ಣೊಳ್ ಕಿಡಿಗೆದರುತ್ತಂ  || ೧೫೦ ||

[ತಾತನ ನುಡಿಯಂ ಕೇಳುತ |
ಜಾತನು ಕಡುಕೋಪದಿಂದಲಾರ್ಭಟಿಸುತ್ತಂ ||
ಸೂತಜನಾನನವೀಕ್ಷಿಸು |
ತೀ ತೆರದೊಳಗೆಂದನೊಡನೆ ಬಲುಗಜರುತ್ತಂ  || ೧೫೧ ||]

ರಾಗ ಮಾರವಿ ಏಕತಾಳ

ನಿಮ್ಮನು ನುಡಿಸಿದರ್ಯಾರೈ ಪಿತ ಬೇ | ಡೆಮ್ಮೊಳಗತಿಕರುಣ ||
ವರ್ಮದಿ ನಾವಳಿದರೆ ನಿಮಗಾಗದು | ನಮ್ಮ ದೆಸೆಯ ಮರಣ  || ೧೫೨ ||

ಅರಿತಿಹೆ ಭೂಭಾರವಿಳುಹಲ್ಕವ | ತರಿಸಿಹ ಹರಿಯೆಂದು ||
ಹರಣವ ಕೊಡುವೆ ರಣಾಗ್ರದೊಳಿಳೆಗೋ | ಸ್ಕರ ಮಾಧವಗಿಂದು  || ೧೫೩ ||

ಈ ಗಂಗಾ ಸುತನೀ ಕೃಪ ಸಂಜಯ | ನೀ ಗುರು ಸಹಿತಾಗಿ ||
ಬೇಗದಿ ಯಮಜನ ಕಂಡುರೆ ಬದುಕಿ ಸ | ರಾಗದಿ ನೀವ್ ಪೋಗಿ || ೧೫೪ ||

ವಾರ್ಧಕ

ರಾಯ ಕೇಳೆಲ್ಲರಂ ಕೌರವಂ ಜರೆದು ರಿಪು |
ರಾಯನೊಳ್ ಧುರವ ನಿಶ್ಚಯಿಸಿರ್ದನಿತ್ತಯಮ |
ರಾಯನಂದನ ದೇವಕೀಜಾತನಂಘ್ರಿಗಭಿನಮಿಸಿ ಕೈಮುಗಿದು ನಿಂದು ||
ದಾಯಭಾಗದೊಳೈದು ಗ್ರಾಮವಂ ತನಗೆ ಕುರು |
ರಾಯ ಸುವಿವೇಕದಿಂ ಕೊಡುವಂದದಲಿ ಕೃಷ್ಣ |
ರಾಯ ಸಂಧಾನಮಂ ಮಾಡಿ ಬರಬೇಕು ನೀನೆನಲೆಂದನಾ ಮಹಿಮನು || ೧೫೫ ||

ಭಾಮಿನಿ

ನೀತಿಯೇ ಕರುಣಾಳು ನಿನಗೆ ವಿ |
ಘಾತವೆಣಿಸಿದ ದುಷ್ಟನಲಿ ಸಂ |
ಪ್ರೀತಿಯೇ ಸಂಧಾನಕನುವಾಗುವರೆ ಪೇಳೆನಲು ||
ಖ್ಯಾತ ಧರ್ಮಜ ನುಡಿದನನಿಬರ |
ಪಾತಕವು ಮಗುಳವರ ಪೊರ್ದುವು |
ದಾತನಲಿ ಸಂಧಿಯ ಪ್ರಯತ್ನವ ಮಾಡಿ ಬಹುದೆಂದ  || ೧೫೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸನಿಂತೆನಲಾ ರಮಾಧವ | ಕಿರುನಗೆಯ ಕೇವಣಿಸಿ ಭೀಮನ |
ಕರೆದು ಧರ್ಮಜನಿಂದು ಕುರುಭೂ | ವರನ ಬಳಿಗೆ  || ೧೫೭ ||

ಪೋಗಿ ತನಗೈದೂರನಿನ್ನುಸ | ರಾಗದಲಿ ಕೊಡುವಂತೆ ಸಂಧಿಯ |
ಸಾಗಿಸೆಂದನು ಪೇಳು ನಿನ್ನೊಳ | ವೀಗಲೆನಲು  || ೧೫೮ ||

ಅಣ್ಣನವರಿಗೆ ನೀತಿಯಾದರೆ | ನಿನ್ನ ಮನಕೊಪ್ಪಿದರೆ ಭೂತಳ |
ವನ್ನು ಕೌರವನಿತ್ತರೆನಗೇ | ನಿನ್ನು ದುಗುಡ  || ೧೫೯ ||

ಎನಲು ಪಾರ್ಥಗೆ ಮಾದ್ರಿಯಣುಗರಿ | ಗನುವರಿಸಲರುಹಿದರು ಮೂವರ |
ಮನವೆ ನಮ್ಮಯ ಚಿತ್ತವೆಂದ | ರ್ಜುನ ನಕುಲರು  || ೧೬೦ ||

ಉಸುರಿದನು ಸಹದೇವ ಸಂಧಿಯ | ಬೆಸುಗೆ ಹತ್ತದು ಕೌರವನು ಕ |
ಲ್ಮಷವ ಬಿಡನಿದ ಮರೆಯಬೇಡೆಂ | ದಸುರಹರಗೆ  || ೧೬೧ ||

ಭಾಮಿನಿ

ಅನಿಬರಿಂತೆನಲಾ ದ್ರುಪದನಂ |
ದನೆಯ ಕೇಳುವೆವೆನುತ ಚರರನು |
ಕ್ಷಣದೊಳಟ್ಟಲು ಬಂದು ಸೂಚಿಸಲತಿವಿಲಾಸದಲಿ ||
ರಣವ ಗಂಟಿಕ್ಕುವನೆ ಮುರರಿಪು |
ಸನುಮತವಿದೆಂದಬಲೆ ಹೊನ್ನಂ |
ದಣವನೇರಿಯೆ ಪೊರಟಳಬುಜಾಕ್ಷಿಯರ ಗಡಣದಲಿ  || ೧೬೨ ||

ವಾರ್ಧಕ

ಅರವಿಂದಮುಖಿ ತಳೆದು ಹರುಷಮಂ ಸರಸಮಂ |
ತರುಣಿಯರೊಳಾಡುತಂದಣದೊಳಂ ಘನದೊಳಂ |
ಶರದಿಂದು ಕೋಟಿಭಾಸುರವಂತೆ ಸಿರಿವಂತೆ ಮುಗುಳಂಬನಂಬಿನಂತೆ ||
ವರದಿವ್ಯಭೂಷಣಗಳುಡೆಗೆಯಿಂ ತೊಡುಗೆಯಿಂ |
ಮೆರೆವ ಮಂಗಲವಾದ್ಯರಾವದಿಂ ಭಾವದಿಂ |
ತುರುಬ ಕಟ್ಟುವೆನೆಂಬ ಗೆಲವಿನಿಂ ನಲವಿನಿಂ ಬಂದಳಾ ಭೀಮನೆಡೆಗೆ || ೧೬೩ ||

ಕಂದ

ಇಂತಾನಂದದೊಳಾ ಸಿರಿ |
ವಂತೆಯು ಬಂದಂದಣವಿಳಿದನಿಲಜಗೆರಗಲ್ ||
ಕಂತುವಿನರಗಿಣಿಯಂ ಕಂ |
ಡಂತಃಕರಣದಿ ತಳ್ಕಿಸುತೆಂದಂ ಸತಿಯೊಳ್  || ೧೬೪ ||

ರಾಗ ಸುರುಟಿ ಏಕತಾಳ

ಕೋಮಲಾಂಗಿ ಕೇಳೆ | ಮದಗಜ | ಗಾಮಿನಿ ಪಾಂಚಾಲೆ ||
ಕಾಮುಕ ಕುರು ನೃಪನಾಮಹನಿಲಯಕೆ |
ಸ್ವಾಮಿಯ ಧರ್ಮಜ | ಸಂಧಿಗೆ ಕಳುಹುವ || ಕೋಮಲಾಂಗಿ  || ೧೬೫ ||

ಆತನ ದುಷ್ಕೃತ್ಯವು | ಮಗುಳಿ | ನ್ನಾತನ ಪೊದ್ದುವುವು ||
ಆತನೊಳನುವರವೇತಕೆ ನಮಗೆಂ |
ದಾತನೊಳೈದೂರೀತನು ಬೇಡುವ || ಕೋಮಲಾಂಗಿ  || ೧೬೬ ||

ನಾವೆಲ್ಲವರಿದಕೆ | ಒಪ್ಪಿಹೆ | ವೀ ವಿಷಯೋತ್ಸವಕೆ ||
ಭಾವಕಿ ನಿನ್ನಯ ಭಾವಗಳೇನೆನ |
ಲಾ ವನಿತೆಯ ಮೊಗದಾವರೆ ಕಂದಿತು || ಕೋಮಲಾಂಗಿ  || ೧೬೭ ||

ಭಾಮಿನಿ

ಸಂಧಿಯೇ ಕಲಿಭೀಮ ನಿನಗಾ |
ನಂದವೇ ಕುರುಭೂಪನೊಳು ಹಿತ |
ಬಂದುದೇ ಧರ್ಮಜಗೆ ಪಾರ್ಥಗೆ ಹರಿಗೆ ಸನುಮತವೆ ||
ಚಂದದೊಳಗಿನ್ನೊಮ್ಮೆ ನುಡಿ ಮೊದ |
ಲೆಂದ ವಚನವ ಶಿವ ಶಿವಾ ನೀ |
ವಿಂದು ಕೈಗೊಂಡಿರೆ ಯತಿತ್ವವನೆಂದು ಹೊರಳಿದಳು  || ೧೬೮ ||

ರಾಗ ಸಾವೇರಿ ಆದಿತಾಳ

ಏನಯ್ಯ ಪವನಜನೆ | ಕೌರವನಿಗೆ | ನಾನೆ ದುರ್ಜನಳಾದೆನೆ ||
ಹೀನವೃತ್ತಿಯ ತಾಳ್ದಿರಿ | ನೀವೈವರೆನ್ನ | ಪ್ರಾಣಕ್ಕೆ ಪಗೆಯಾದಿರಿ  || ೧೬೯ ||

ಮೊದಲಾದ ಭವದೊಳಗೆ | ಶಿವನ ಭಜಿಸಿ | ಮದುವೆಯಾದೆನೊ ನಿಮಗೆ ||
ಸುದತಿಯರೆನ್ನ ತೆರದಿ | ಪಾಪಿಗಳುಂಟೆ | ಹದಿನಾಲ್ಕು ಲೋಕಮಧ್ಯದಿ || ೧೭೦ ||

ತರುಣಿಯೋರ್ವಳಿಗೋರ್ವನು | ವಲ್ಲಭನಾಗೆ | ಕರುಣದಿ ಸಲಹುವನು ||
ಪುರುಷರೆನ್ನಯ ಬಾಳ್ವೆಗೆ | ನೀವೈವರಿದ್ದು | ಮರಣವ ನೋಳ್ಪಿರೆನಗೆ || ೧೭೧ ||

ಮುಂದಲೆಯನು ಪಿಡಿದು | ನಿಮ್ಮಯ ಕಣ್ಣ | ಮುಂದೆ ಸೀರೆಯನೆಳೆದು ||
ಬಂಧಿಸಿರುವ ಮುಡಿಯ | ಸುಲಿದುದ ಕಂಗ | ಳಿಂದ ನೋಡಿದಿರರ್ತಿಯ || ೧೭೨ ||

ಆ ನಾಯಿಗಳ್ಗೆ ಬೆದರಿ | ನಿಶ್ಚಯ ಹೆಣ್ಣು | ಪ್ರಾಣಿಯಗಳ ಕೊಯ್ದಿರಿ ||
ಶ್ರೀನಾಥ ಕರುಣದಲಿ | ಸಲಹಿದನೆನ್ನ | ಮಾನವನಂದಿನಲಿ  || ೧೭೩ ||

ಸತ್ಯವ ಮೀರಬಾರದು | ಎಂದಡವಿಯೊಳು | ಸುತ್ತಿರ್ದ ದುಗುಡವಿಂದು ||
ಚಿತ್ತದಿ ಮರೆತು ಹೀಗೆ | ಸಂಧಿಯ ಮಾಳ್ಪು | ದುತ್ತಮವಾಯ್ತೆ ನಿಮಗೆ || ೧೭೪ ||

ಭಾಮಿನಿ

ಲಲನೆ ತಾನತಿ ಮರುಗುತಿರಲಾ |
ಕಲಿ ಮರುತ್ಸುತ ನುಡಿದ ತನ್ನಿದಿ |
ರಳಲದಿರು ನಾ ಮಾಳ್ಪುದೇನರಿಭಟರ ಮುಂದಿನಲಿ ||
ತಿಳುಹು ಯಮಜಗೆ ನರಗೆ ಕೃಷ್ಣಗೆ |
ಒಲಿಸಿ ನಕುಲಾದಿಗಳನುರೆ ಮೂ |
ದಲಿಸಿ ರೋಷವನೇಳಿಸೆನಲೆಂದಳು ಸರೋಜಾಕ್ಷಿ  || ೧೭೫ ||

ರಾಗ ಯರಕಲಕಾಂಭೋಜ ಅಷ್ಟತಾಳ

ಆರು ಸುಪ್ರೀತರು | ನೀ ಹೊರತೆನ್ನ | ಆರು ಕಾಯ್ವವರು ||
ಆರು ಕಾಯ್ವರು ಹೆಣ್ಣುಜನ್ಮವ ಸುಡಲಿನ್ನು | ಭೂರಿ ಬಾಧೆಗೆ ಸಂದೆನು | ಇನ್ನೇನು   ||ಪ||

ಧರ್ಮಸಂಭವನು | ಶಾಸ್ತ್ರಾರ್ಥ ಸ | ದ್ಧರ್ಮದಿಂದಿರುತಿಹನು ||
ನಿಮ್ಮನುಜರು ಯಮಜನ ಮಾತ ಮೀರರು | ಮರ್ಮವಿಲ್ಲನಿಬರಿಗೆ | ಈ ಬಗೆಗೆ || ಆರು || ೧೭೬ ||

ಮೊನ್ನೆ ಸೈಂಧವನು | ಕೊಂಡೊಯ್ಯೆ ಮೋ | ಹನ್ನಶಾಲಿ ನೀನು ||
ಎನ್ನ ಮಾನವ ಕಾಯಲೆನ್ನುತ್ತ ಕೀಚಕ | ನನ್ನು ರಣದೊಳಿರಿದೆ | ನೀ ಮೆರೆದೆ || ಆರು || ೧೭೭ ||

ಪ್ರೀಯರೈವರಲಿ | ನೀನೆನಗೆ ಸು | ಪ್ರೀಯನಿಂದಿನಲಿ ||
ನೋಯಿಸಿದಧಮರ ಕೊಂದೆನ್ನ ಭಾಷೆಯ | ವಾಯುಜ ಸಲಿಸೆಂದಳು | ಮತ್ತವಳು || ಆರು || ೧೭೮ ||

ರಾಗ ಕೇದಾರಗೌಳ ಅಷ್ಟತಾಳ

ಮರುಗುತ್ತ ಭೀಮನ ಕೊರಳಪ್ಪಿ ನಯನದ | ಶರದೊಳಂಗವ ತೊಳೆದು ||
ವರಭಾಷೆಗಳ ತೀರ್ಚದಿರೆ ಪ್ರಾಣ ಬಿಡುವೆನೆಂ | ಬರಸಿಗೆ ನಗುತೆಂದನು || ೧೭೯ ||

ವನಿತೆ ಕೇಳ್ ಜನನಿಯ ಬಸಿರಿಂದಿಳಿದ ಮೇಲೆ | ದಿನವೊಂದಾದರು ಸುಖವ ||
ಕನಸಿಲಿ ಕಂಡವ ನಾನಲ್ಲ ಕಷ್ಟವ | ನುಣುತ ನೂಕಿದೆ ಜನ್ಮವ  || ೧೮೦ ||

ಅಣ್ಣನೊಡನೆ ವಿಪಿನದಿ ಸುತ್ತಿ ಹಸಿತೃಷೆ | ಯನ್ನು ತೊರೆದು ಜೀವದಿ ||
ಕನ್ನೆ ನಾ ನಿನಗಾಗಿ ಕೀಚಕಾದ್ಯರ ಕೊಂದು | ಬಣ್ಣಗುಂದಿದೆನಬಲೆ  || ೧೮೧ ||

ಭಾರವಾಯಿತು ಗದೆ ಧೈರ್ಯ ಹಿಂಗೊಳಿಸಿತು | ನಾರಿ ನೀನೇನೆಂದರು ||
ಕೌರವಾದ್ಯರ ಕೊಲಲಾರೆನೆನಲು ರೋಷ | ವೇರಿ ಗರ್ಜಿಸುತೆಂದಳು || ೧೮೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಹಹ ಪವನಜ ಗಂಡುಗಲಿ ನೀ | ನಹುದಲೈ ಖಳ ಕುರುನೃಪಾಲನ ||
ಸಹಜನೆನ್ನಯ ತುರುಬನೆಳೆವು | ತ್ತಿಹುದ ನೋಡಿ  || ೧೮೩ ||

ಮಡುಹಿ ಮಗುಳವನುದರರಕ್ತದಿ | ಮುಡಿಯ ಮುಳುಗಿಸುತೆಳೆಕರುಳ್ಗಳ ||
ಮುಡಿಸದಿರೆನೆಂದೊರೆದ ಭಾಷೆಗ | ಳಡಗೀತೇನೈ  || ೧೮೪ ||

ಸೆಳೆದು ಸೀರೆಯನುಟ್ಟು ಕರದಲಿ | ಬಳೆಯ ತೊಡು ನಾ ಪುರುಷವೇಷವ ||
ತಳೆವೆನನಿತರ ಮೇಲೆ ನೋಡೆ | ನ್ನಳವಿಯನ್ನು  || ೧೮೫ ||

ಭಾಮಿನಿ

ಎನಗೆ ಬಲ ಸಹದೇವ ಪಾರ್ಥಿಯು |
ತನಯರೈವರು ಕಲಿ ಘಟೋತ್ಕಚ |
ಜನಕ ದ್ರುಪದಂಗಿಹುದು ಮೂರಕ್ಷೆಹಿಣೀ ಬಲವು ||
ಅನಿಬರಿಂದರಿಗಳ ವಿಭಾಡಿಸಿ |
ಘನವ ಪಡೆವೆನು ಕಾಂತ ಕೊಡಿಸೈ |
ಎನಗೆ ವೀಳ್ಯವ ನಿಮ್ಮ ಹಂಗೇನೆಂದಳಬುಜಾಕ್ಷಿ  || ೧೮೬ ||

ವಾರ್ಧಕ

ವನಿತೆಯ ಕಠೋರನುಡಿಯಂ ಕೇಳ್ದು ಪವನಜಂ |
ಘನರೌದ್ರವೆತ್ತು ಗದೆಯಂ ತಿರುಹುತೆಂದ ಕಾ |
ಮಿನಿಯೆ ಸೈರಿಸು ಸೈರಿಸೆಲೆ ನಿನ್ನ ನಯನಾಂಬುಕಣಮದೊಂದಕೆ ರಿಪುಗಳ ||
ವನಿತೆಯರ ಕಂಗಳೊಳು ಶತಸಾವಿರಂ ಕೆಡಪಿ |
ನಿನಗೆಂದ ಭಾಷೆಯಂ ತೀರ್ಚಿಸುವೆನೆಂದೆನುತ |
ಲಿನಿಯಳನೊಡಂಬಡಿಸಿ ಕೃಷ್ಣನ ಪದಾಂಬುಜಕೆ ತಲೆವಾಗುತಿಂತೆಂದನು || ೧೮೭ ||

ರಾಗ ಭೈರವಿ ಏಕತಾಳ

ಎಲವೋ ಕಂಸಾಂತಕನೆ | ಆ | ಖಳ ದುರ್ಯೋಧನನೊಡನೆ ||
ಕೊಳುಗುಳದೆತ್ನವ ಬಲಿದು | ಮಾ | ಡಳುಕದೆ ಸಂಧಿಯ ಮುರಿದು || ೧೮೮ ||

ಧರಣಿಪಗಾತನೊಳಿನ್ನು | ಹಿತ | ವಿರೆ ಸೀಮೆಯ ಮೂರನ್ನು ||
ಮರೆಹೊಕ್ಕವನಲಿ ಕೊಳಲಿ | ನಾ | ನೆರಡೂರ್ಕೊಂಬೆ ರಣದಲಿ  || ೧೮೯ ||

ಈಶನ ಮರೆ ಹೊಗಲಿನ್ನು | ಬಿಡ | ದಾ ಸಮರದಿ ರಿಪುಗಳನು |
ನಾಶವ ಮಾಡುವೆನಯ್ಯ | ವರ | ಭಾಷೆಯ ಸಲಿಸುವೆ ಸತಿಯ  || ೧೯೦ ||

ಭಾಮಿನಿ

ಕ್ಷೆಣಿಪತಿ ಕೇಳ್ ಭೀಮನಿಂತೆನ |
ಲಾ ನರೇಶ್ವರಗೆಂದ ನಗುತಲಿ |
ದೇನು ಪವನಜ ದ್ರುಪದಸುತೆಯರ ಮತವು ಬೇರಾಯ್ತು ||
ಮಾನನಿಧಿ ನಿಜವಾಗಿ ನುಡಿ ಸಂ |
ಧಾನವೋ ಸಂಗ್ರಾಮವೋ ಮಗು ||
ಳೇನೆನುತ್ತಸುರಾರಿ ಬೆಸಗೊಳಲೆಂದ ಯಮಸೂನು  || ೧೯೧ ||

ರಾಗ ಮಧುಮಾಧವಿ ಏಕತಾಳ

ದಾನವಾಂತಕ ಕೇಳಿನ್ನೇನೆಂಬೆ ಬಗೆಗೆ | ಮಾನಿನಿಯನಿಲಜರಾಡುವ ನುಡಿಗೆ || ದಾನ  ||ಪ||

ಆವ ಜನ್ಮದಿ ಗೆಯ್ದ ಪಾಪದ ಫಲದಿ | ಭೂವಲಯವನು ಬಿಟ್ಟಲೆದೆವೊ ವನದಿ ||
ಭಾವಜಪಿತ ನಿನ್ನ ದಯದಿ ಬದುಕಿದೆವು | ನಾವು ಕೌರವಗೆಂದ ಭಾಷೆ ತೀರ್ಚಿದೆವು || ದಾನ  ||೧೯೨||

ಪರದೇಶಿಗಳಿಗೇಕೆ ಬವರ ಭೂಪರೊಳು | ಕರುಣದಿ ಜಯಲಕ್ಷ್ಮಿ ಯಾರಿಗೊಲಿವಳೊ ||
ಧರೆಯ ನೆವದಿ ಸೋದರರೊಳು ಹೊಯ್ದಾಡಿ | ದುರಿತಾತ್ಮರೆನಿಸಿಕೊಳ್ಳುವುದೇನು ಪ್ರೌಢಿ || ದಾನ ||೧೯೩||

ದೊರೆತನ ಸುಡಲಿನ್ನು ಬಡತನವೆಮಗಕ್ಕು | ಕುರುರಾಯ ಸುಖಿಯೆಂದು ಕೇಳ್ದರೆ ಸಾಕು ||
ವರಸಂಧಿ ಲೇಸು ತೋರ್ಪುದು ಎನ್ನ ಮನದಿ | ವಿರಚಿಸರ್ಜುನ ಭೀಮಾದಿಗಳೆಂದ ತೆರದಿ || ದಾನ ||೧೯೪||

ರಾಗ ಮಾರವಿ ಏಕತಾಳ

ಫಲುಗುಣನುಸಿರಿದನಳಲುತ ವಿಪಿನದಿ | ತೊಳಲಿದ ದುಗುಡವನು ||
ಕಳೆವೆನು ರಿಪುಗಳೊಳಳವಿಯೊಳಲ್ಲದೆ |
ಅಳುಕುವುದುಂಟೇ ನಳಿನಜ ಬರೆದೋಲ್ |
ಫಲಿಸುವುದೆಮಗೆನುತಿರ್ದನಾಗ  || ೧೯೫ ||

ಭಾಮಿನಿ

ಕಲಿಕಿರೀಟಿಯ ನುಡಿಗೆ ಧರ್ಮಜ |
ನೊಲಿದು ಕೃಷ್ಣನೊಳೆಂದ ಕುರು ಕುಲ |
ತಿಲಕ ಸಂಧಿಯ ಮುರಿದನಾದರೆ ಕಳೆದು ಮಾತುಗಳ ||
ಕಲಹವನು ನಿಶ್ಚಯಿಸಿ ಬಾರೆನ |
ಲಳುತ ದ್ರುಪದಜೆ ಬಂದು ಮಣಿದಳು |
ಸಲಹೊ ಲಕ್ಷ್ಮೀರಮಣ ತನ್ನನೆನುತ್ತಲಂಘ್ರಿಯಲಿ  || ೧೯೬ ||

ರಾಗ ಸಾಂಗತ್ಯ ರೂಪಕತಾಳ

ಚರಣದಿ ಪೊರಳುವ ತರಳೆಯ ಪಿಡಿದೆತ್ತಿ | ಕರುಣಾಳು ನುಡಿದ ದ್ರೌಪದಿಗೆ ||
ಸಿರಿವಂತೆ ದುಃಖಿಸಬೇಡೇಳು ತಾಯೆ ನಿ | ನ್ನಿರವೇನು ಪೇಳು ಪೇಳೆನಲು || ೧೯೭ ||

ಹರಿಯೆ ಚಿತ್ತಯಿಸೆನ್ನ ಮನದೊಳಗಿರ್ಪುದ | ನರಿಯೆಯ ಪೇಳ್ವುದಿನ್ನೇನು ||
ತುರುಬ ಕಟ್ಟಿಸುವೆ ನೀನೆಂದೆನುತುಸಿರಿದ | ವರಭಾಷೆ ನಡೆಯಲಿಲ್ಲೆನುತ || ೧೯೮ ||

ಮರುಗುವೆನೆನಲೆಂದ ತಂಗಿ ನೀನಳಲದಿರ್ | ತರಳೆ ನಾ ನಿನಗಾಗಿ ಪೋಗಿ ||
ಧುರವ ಗಂಟಿಕ್ಕಿ ನಿನ್ನವರಿಂದ ಖಳರ ಸಂ | ಹರಿಸುವಂತೆಸಗುವೆನವ್ವ || ೧೯೯ ||

ಪುಸಿಯಲ್ಲ ದಿಟವಿದು ನಂಬಿಕೋ ಮುಡಿಯ ಕ | ಟ್ಟಿಸಿ ನಿನ್ನ ಭಾಷೆ ತೀರ್ಚದಡೆ ||
ವಸುದೇವನಾಣೆ ದೇವಕಿಯಾಣೆ ತನಗೆಂದು | ಬಸಿವ ಕಂಬನಿಯೊರಸಿದನು || ೨೦೦ ||

ವಾರ್ಧಕ

ದನುಜಾರಿ ದ್ರೌಪದಿಯ ಸಂತವಿಸಲನ್ನೆಗಂ |
ಮಣಿಮಯವರೂಥಮಂ ದಾರುಕಂ ತರಲು ದು |
ರ್ಜುನರೆಡೆಗೆ ಪೋಪುದೆಂದಗಣಿತಾಯುಧವ ಸಾತ್ಯಕಿ ತುಂಬಿದಂ ರಥದೊಳು ||
ಅನಿಮಿಷರು ಜಯವೆನಲು ಮಂಗಲಮುಹೂರ್ತದಲಿ |
ವನಜಾಕ್ಷನೇರ್ದನಾ ಸ್ಯಂದನವನಾ ಪಾಂಡು |
ತನಯರನ್ನುಳಿದಿರಲ್ ಸೂತನಾ ಹಯಗಳಂ ಬೋಳಯ್ಸಿದಂ ಭರದೊಳು || ೨೦೧ ||

ಆ ರಥ ಸಮೀರಗತಿಯಂ ಮೀರುತಯ್ದುತಿರೆ |
ದಾರಿಯೊಳು ಶುಭ ಶಕುನವಾಗಲುತ್ತಮಮೆನುತ |
ಭೂರಿತಪಗೆಯ್ವ ಭಾರ್ಗವರಾಮ ಕಣ್ವ ನಾರದ ಕಾಶ್ಯಪಾದ್ಯತಿಗಳ ||
ವಾರಮಿಹ ಬಳಿಗಾಗಿ ಮುರಹರಂ ನಡೆತರ |
ಲ್ಕಾ ಋಷಿಗಳೀ ಮಹಿಮನಂ ಕಂಡು ಬಪ್ಪೆವೆಂ |
ದಾ ರಮಾಧವನೊಡನೆ ತೆರಳಿದರ್ ಗಜಪುರದ ಶೃಂಗಾರತೋಟದೆಡೆಗೆ || ೨೦೨ ||

ಬಗೆಬಗೆಯ ವೃಕ್ಷಸಂತತಿಗಳಿಂ ಲತೆಗಳಿಂ |
ಚಿಗುರೆಲೆಯ ಚೂತ ದಾಳಿಂಬದಿಂ ರಂಭದಿಂ |
ಮಘಮಘಿಪ ವರಸುಮಾವಳಿಗಳಿಂ ಫಲಗಳಿಂ ಸವಿವ ಶುಕಪಿಕಗಳಿಂದ ||
ಸೊಗಸಿನಿಂ ಪಾಡುತಿಹ ಸ್ವರಗಳಿಂ ಹರಿಗಳಿಂ |
ಸುಗುಣತರಮಾದ ಸುಸ್ಥಳಗಳಿಂ ಜಲಗಳಿಂ |
ಸೊಗಸಾದ ಸರಸಿಜದ ಗಂಧಮಂ ಚಂದಮಂ ಕಂಡರತ್ಯಾನಂದದಿ || ೨೦೩ ||

ಆ ವನದ ಸಂಭ್ರಮವನಾ ಮುನಿಗಳೊಡನೆ ರಾ |
ಧಾವರಂ ನೋಡುತಂ ಹಸ್ತಿನಾಪುರದ ನಾ |
ನಾ ವಿಚಿತ್ರವ ಕಾಣುತಾಶ್ಚರ್ಯಮಂ ತಾಳುತಾ ಪುರವನುಂ ಪೊಕ್ಕನು ||
ರಾವಣವಿರೋಧಿ ಬಪ್ಪಾನಂದಮಂ ಕೇಳು |
ತಾ ವಿದುರ ಗುರು ಭೀಷ್ಮ ವರಕೃಪಾದಿಗಳಖಿಳ |
ಭಾವಭಕ್ತಿಯೊಳಬ್ಚಲೋಚನಗೆ ನಮಿಸಲು ಕೃಪಾಳು ಪರಸಿದನವರನು || ೨೦೪ ||

ಮುರಹರಂ ಬರುವನಾರೋಗಣೆಗೆ ತಮ್ಮ ಮಂ |
ದಿರಕೆಂದು ಗುರುಭೀಷ್ಮ ವರಕೃಪಾದಿಗಳು ತರ |
ತರ ಸುವಸ್ತುವ ಕೂಡಿಕೊಂಡಿರಲ್ ಕೌರವಂ ಬರುವನಚ್ಯುತನೆನುತಲಿ ||
ವರದಿವ್ಯರಸಭರಿತದಡುಗೆಯಂ ಮಾಡಿಸಲ್ |
ಕುರುರಾಯನುಳಿದೆಲ್ಲರಾಲಯವ ಪೊಕ್ಕು ಸ |
ತ್ಕರುಣದಿಂ ಕುಶಲಮಂ ಬೆಸಗೊಳುತ ವಿದುರನರಮನೆಗಯ್ದಿದಂ ಕೃಷ್ಣನು || ೨೦೫ ||

ನೋಡಿದಂ ಕಣ್ದಣಿಯೆ ಚಿನ್ಮಯನ ಮೂರ್ತಿಯಂ |
ಮಾಡಿದಂ ನಿಯತ ಸಂಸ್ತುತಿಗಳಂ ಪಿರಿದು ಕೊಂ |
ಡಾಡಿದಂ ತನಗೆ ಲಕ್ಷ್ಮೀರಮಣ ದಯವಾದನೆನುತಲಾ ವಿದುರನಂದು ||
ಪಾಡಿದಂ ಗುಣಗಣವ ಬೇಕಾದ ವರಗಳಂ |
ಬೇಡಿದಂ ಮನದೊಳಾನಂದಸಾಗರದೊಳೋ |
ಲಾಡಿದಂ ಕೈಮುಗಿದು ನಿಂದಿರಲ್ಕವನ ತಕ್ಕಯ್ಸಿ ಮುರಹರನೆಂದನು || ೨೦೬ ||

ಭಾಮಿನಿ

ನಿನ್ನ ಭಕ್ತಿಗೆ ಮೆಚ್ಚಿದೆನು ಎನ |
ಗಿನ್ನು ತೀರದು ನಿನ್ನ ಪೊಗಳಲಿ |
ಕನ್ನಪಾನಗಳಿಲ್ಲದೇ ಬಳಲಿರ್ಪೆ ತಾನೆಂದ ||
ಧನ್ಯನಾದೆನು ದೇವ ಚಿತ್ತವಿ |
ಸಿನ್ನೆನುತ ಕರೆದೊಯ್ದು ಭವನಕೆ |
ಬಣ್ಣಿಸುವಡಚ್ಯುತನ ಮಹಿಮೆಗಳಾರಿಗರಿದೆಂದ  || ೨೦೭ ||

ರಾಗ ಮಧುಮಾಧವಿ ತ್ರಿವುಡೆತಾಳ

ಮಗುಳೆ ಪುರುಷೋತ್ತಮನ ಸುಪ್ಪ | ತ್ತಿಗೆಯನೇರಿಸಿ ಸಿರಿಪದಾಂಬುಜ ||
ಯುಗಳವರ್ಚಿಸಿ ನಮಿಸಿ ಪೇಳ್ದನು | ನಗುತ ತನ್ನಯ ಸತಿಯೊಳು | ತೋಷದಿಂದ || ೨೦೮ ||

ಶ್ರೀರಮಣ ದಯವಾದನೆಮಗಿ | ನ್ನಾರು ಲೋಕದೊಳೆಣೆಯು ನೀ ಕ |
ಣ್ಣಾರೆ ನೋಡಿದು ತೀರ್ಚು ಪಿಂದಣ | ಘೋರದುರಿತವನೆಂದನು | ಸತಿಯೊಳಂದು || ೨೦೯ ||

ಸ್ವರ್ಣಕುಂಭದೊಳೈದೆ ಕ್ಷೀರವ | ಚಿನ್ಮಯಂಗೆ ಸಮರ್ಪಿಸಲು ಕಾ ||
ರುಣ್ಯವಾರಿಧಿ ಸೇವಿಸಿದ ಪರಿ | ಪೂರ್ಣಸಂತಸದಿಂದಲಿ | ಶರಧಿಶಯನ || ೨೧೦ ||

ಕುಡುತೆಯೊಂದರ ಪಾಲಿನಲಿ ಹಸಿ | ವಡಗಿತಾ ಕ್ಷೀರಾಬ್ಧಿಶಯನಗೆ |
ದೃಢವ ತೋರಿಸಲಾಗಿ ಬಿಂದುವ | ಕೆಡಹಿದನು ಕಟವಾಯಲಿ | ಚಂದದಿಂದ || ೨೧೧ ||

ತುಂಬಿತಾ ಪುರವೆಲ್ಲ ವರಕ್ಷೀ | ರಾಂಬುನಿಧಿಮಯವಾಗಲಚ್ಚರಿ ||
ಯಿಂ ಭ್ರಮಿಸಿ ನೋಡಿದರು ಜನರುಗ | ಳಂಬುಜಾಕ್ಷನ ಮಹಿಮೆಯ | ಕೇಳು ಭೂಪ || ೨೧೨ ||

ವಾರ್ಧಕ

ಅರಸ ಕೇಳಾ ಪುರದ ನಾರಿಯರು ಕಾಣುತ |
ಚ್ಚರಿಗೊಂಡು ತಮ್ಮ ತಮ್ಮಾಲಯದ ಪಾಲ್ಗಡಿಗೆ |
ಜರಿದವೀ ತೆರನೆಂದು ಕೌತುಕದ ಗಮನದಿಂದೀಕ್ಷಿಸುತಲಿರೆ ವಿದುರನು ||
ಮುರಹರನಪಾರಮಹಿಮೆಗೆ ವಿಸ್ಮಯಂಗೊಳುತ |
ಕರಗಳಂ ಮುಗಿದು ಜಯವೆನಲವನ ಮೈದಡವಿ |
ಶರಣರಲಿ ಶ್ರೇಷ್ಠ ನೀನೆಂಬಾಗ ಬಂದಳಾ ಪಾಂಡುನೃಪನರಸಿ ಬಳಿಕ || ೨೧೩ ||

ರಾಗ ಕಾಂಭೋಜ ಝಂಪೆತಾಳ

ಅರಸ ಕೇಳೈ ಕುಂತಿದೇವಿ ಬರಲವಳನುಪ | ಚರಿಸಿ ಕಂಸಾರಿ ಕೈ ಮುಗಿದು ||
ಪರಿಣಾಮವೇನವ್ವ ನಿಮಗೆನಲು ನುಡಿದಳಾ | ತರುಣಿ ದಾಮೋದರಗೆ ಮಣಿದು || ೨೧೪ ||

ದೇವ ತವ ಕರುಣದಿಂ ಸುಖವೆನಗೆ ವಸುದೇವ | ದೇವಕಿಯು ಮೊದಲಾದ ಜನರು ||
ಕೋವಿದರೆ ವನವಾಸಕಯ್ದ ಮತ್ಸುತರು ಮ | ತ್ತಾವ ಪಾಡಾದರೆಂದುಸಿರು || ೨೧೫ ||

ನೇತ್ರಾಂಬುಗರೆಯಲರುಹಿದ ತಾಯೆ ಮರುಗದಿರಿ | ಧೂರ್ತರಿಗೆ ನುಡಿದ ಭಾಷೆಯನು ||
ಸತ್ಯದಿಂದಲಿ ನಿಮ್ಮವರು ಸಲಿಸಿಕೊಂಡರೀ | ಹೊತ್ತಿಗಿನ್ನವರು ಪದುಳಿಗರು || ೨೧೬ ||

ಇನ್ನಾದರೀ ಕೌರವನೊಳು ಕೂಡಿರ್ಪೆವೆಂ | ದೆನ್ನ ಸಂಧಾನ ಕಟ್ಟಿಹರು ||
ಮನ್ನಿಸಿದರೊಳಿತು ಮಗುಳಲ್ಲದಿರಲೀ ಖಳರ | ಮಣ್ಣಗೂಡಿಸದೆ ಬಿಡರವರು || ೨೧೭ ||

ಚಿಂತಿಸದಿರವ್ವ ನಾ ಕಾದಿರ್ಪೆ ನಿಮ್ಮವರ | ಮುಂತೆ ಭಯವಿಲ್ಲವೆನುತವಳ ||
ಸಂತಯಿಸಿ ವಿದುರನೊಳು ಕೌರವನ ಸಮಯಗಳ | ನೀಂ ತಿಳಿದು ಬಾರೆಂದ ನಗುತ || ೨೧೮ ||

ಪರಮಾತ್ಮನಾಜ್ಞೆಯಿಂ ಪೋಗಿ ಭೂಪನೊಳೆಂದ | ಅರಸ ನಿನ್ನೆಡೆಗಸುರಹರನು ||
ಎರಡು ಮಾತುಗಳಾಡ್ವ ಕಾರ್ಯವಿಹುದಂತೆ ಮ | ತ್ತರಿತು ಬಾರೆಂದ ಸಮಯವನು || ೨೧೯ ||

ಎಂದಡುಸಿರಿದ ಗೋಪನಂದನಂಗೆನ್ನೆಡೆಯೊ | ಳಿಂದೇನು ಕಜ್ಜ ನಾಳಿನಲಿ ||
ಬಂದರಯ್ತರಲಿ ಪೇಳೆನುತವನ ಕಳುಹಿಸಿದ | ನಂಧನೃಪನಣುಗನಂದಿನಲಿ || ೨೨೦ ||