ಶಾರ್ದೂಲವಿಕ್ರೀಡಿತಂ

ಶ್ರೀಲಕ್ಷ್ಮೀವರಮಂಬುಜಾಸನಪಿತಂ ಬಾಲಾರ್ಕಕೋಟಿಪ್ರಭಂ
ಲೋಲಾಕ್ಷಂ ಪರಮೇಶ ಮಾಸುರುಚಿರಂ ದೇವಂ ಜಗದ್ವಲ್ಲಭಮ್ ||
ನೀಲಾಂಗಂ ಪವಮಾನಜಾತನಮಿತಂ ಭರ್ಗಪ್ರಿಯಂ ಚಿನ್ಮಯಂ
ತ್ರೈಲೋಕ್ಯಾರ್ಚಿತಪಾದಪದ್ಮಯುಗಳಂ ಶ್ರೀವೇಂಕಟೇಶಂ ಭಜೇ  || ೧ ||

ವಾರ್ಧಕ

ಪದುಮಬಾಣವಿಭಂಗನಂ ವೃಷತುರಂಗನಂ |
ತ್ರಿದಶನಿಕರಸ್ತೋತ್ರನಂ ಪಂಚವಕ್ತ್ರನಂ ||
ಮದನಪಿತಸುಪ್ರೀತನಂ ಭೂತನಾಥನಂ ದೇವಮುನಿ ಸಂಗೀತನಂ ||
ಉದಧಿಸಮಗಂಭೀರನಂ ಭಯವಿದೂರನಂ |
ಕದನಕರ್ಕಶ ಭೀಮನಂ ಪೂರ್ಣಕಾಮನಂ |
ಉದಯಭಾಸ್ಕರಭಾಸನಂ ಮಹೋಲ್ಲಾಸನಂ ಧ್ಯಾನಿಸುವೆ ಕುಡುಮೇಶನಂ || ೨ ||

ಭಾಮಿನಿ

ಅಂಬುರುಹದಳನೇತ್ರೆ ಶ್ರೀದು |
ರ್ಗಾಂಬಿಕೆಯ ಬಲಗೊಂಡು ಭಕ್ತಿಯೊ |
ಳಂಬಿಕಾಸುತ ವಿಘ್ನರಾಜನ ಪಿರಿದು ಸಂಸ್ತುತಿಸಿ ||
ಅಂಬುನಿಧಿಯಾತ್ಮಜೆಗೆ ಕೈಮುಗಿ |
ದಂಬುಜಾಸನ ವಾಣಿಯರ ಪಾ |
ದಾಂಬುಜಕೆ ಪೊಡಮಡುತ ವರ್ಣಿಪೆನೀ ಕಥಾಮೃತವ  || ೩ ||

ದ್ವಿಪದಿ

ಮುನಿಪ ವೈಶಂಪಾಯಗಭಿನಮಿಸಿ ಸುರರ |
ನೆನೆದು ನುತಿಗೆಯ್ವೆ ಸದ್ಗುರು ಕವೀಶ್ವರರ  || ೪ ||

ಭಾರತದ ಕಥೆಯೊಳುದ್ಯೋಗಪರ್ವದಲಿ |
ಶ್ರೀರಮಣ ಕುರುವರನ ಬಳಿಗೆ ನಲವಿನಲಿ  || ೫ ||

ಸಂಧಾನಕೆಂದೆನುತ ಬಂದ ಚರಿತವನು |
ಚಂದದಿಂ ಯಕ್ಷಗಾನದಲಿ ವಿರಚಿಪೆನು |  || ೬ ||

ಶ್ರುತಿಶಾಸ್ತ್ರ ಪೌರಾಣ ಸಕಲ ವಿದ್ಯೆಗಳ |
ಸ್ಥಿತಿಯರಿತು ಪೇಳ್ವೆನಿಲ್ಲೀ ಕವಿತ್ವಗಳ  || ೭ ||

ಒಡೆಯ ವೆಂಕಟರಮಣ ನುಡಿಸಿದಂದಲಿ |
ದೃಢದಿಂದಲೊರೆವೆನೀ ಕೃತಿಯ ಭಕ್ತಿಯಲಿ  || ೮ ||

ವರಪ್ರಾಜ್ಞರಾಲಿಸುತ ವಿಷಮವಿರಲದನು |
ಪರಿಹರಿಸಿ ಕೊಂಡಾಡಿ ಪುಣ್ಯಚರಿತೆಯನು  || ೯ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕ್ಷಿತಿಪ ಜನಮೇಜಯಗೆ ಭಾರತ | ಕಥೆಯ ವೈಶಂಪಾಯಮುನಿಪನು ||
ಶ್ರುತಗೊಳಿಸುತಿರಲೆಂದನಾ ಋಷಿ | ಪತಿಗೆ ನಮಿಸಿ  || ೧೦ ||

ಕುರುಪತಿಯ ಬಳಿಗೇಕೆ ಧರ್ಮಜ | ಹರಿಯ ಕಳುಹಿದನಲ್ಲಿ ಲಕ್ಷ್ಮೀ ||
ವರನದೇತಕೆ ವಿಶ್ವರೂಪವ | ಧರಿಸಿ ತೋರ್ದ  || ೧೧ ||

ಆ ಮಹಾ ಸತ್ಕಥೆಯ ಪೇಳೆಂ | ದಾ ಮಹಿಪ ಬೆಸಗೊಳಲುಸಿರ್ದನು ||
ಶ್ರೀಮನೋಹರನಡಿಯ ಧ್ಯಾನಿಸು | ತಾ ಮುನೀಂದ್ರ  || ೧೨ ||

ಭಾಮಿನಿ

ಕೇಳು ಜನಮೇಜಯನೆ ಮತ್ಸ್ಯನೃ |
ಪಾಲನರಮನೆಯಲ್ಲಿ ಪಾಂಡವ |
ಬಾಲರೈವರು ಹರಿಯ ಕರುಣದಿ ದ್ರುಪದಸುತೆ ಸಹಿತ ||
ಖೂಳ ಕೌರವಗೆಂದ ಭಾಷೆಯ |
ಬೀಳುಗೊಟ್ಟಭಿಮನ್ಯುವಿಗೆ ಸ ||
ಲ್ಲೀಲೆಯಿಂದುತ್ತರೆಯ ಮದುವೆಯ ವಿರಚಿಸಿದರೊಲಿದು  || ೧೩ ||

ವಾರ್ಧಕ

ಪರಿಣಯದ ನೆವದಿ ಬಂದಸುರಾರಿ ಪಾಂಡವರ |
ಪಿರಿದು ಸಂತಯಿಸುತ ವಿವೇಕಿಯೋರ್ವನನಟ್ಟಿ |
ಕುರುರಾಯನೊಳು ಕ್ಷಿತಿಯ ಕೇಳಿಸುವುದಾತನನುವಾಗದಿರಲಯ್ದೆ ರಣಕೆ |
ಕರೆಸಲಾಕ್ಷಣ ತಾನು ಬರುವೆನೆಂದಚ್ಯುತಂ |
ತೆರಳಲಿತ್ತಾ ಭೀಮ ಪಾರ್ಥ ಮಾದ್ರೇಯರೊಡ |
ವೆರಸಿ ದ್ರುಪದ ವಿರಾಟ ಮುಖ್ಯರಿಂ ಯಮಜನೋಲಗವಿತ್ತನುತ್ಸಹದೊಳು || ೧೪ ||

ರಾಗ ಭೈರವಿ ಝಂಪೆತಾಳ

ಕ್ಷಿತಿಪ ದ್ರುಪದನ ಪುರೋ | ಹಿತನ ಕರೆದು ಕೃತಾಂತ ||
ಸುತನೆಂದ ನೀನು ಕುರು | ಪತಿಯ ಬಳಿಗಯ್ದಿ  || ೧೫ ||

ಅವನಿಯೊಳಗರ್ಧರಾ | ಜ್ಯವನು ಕೊಡುವುದೆನುತ್ತ ||
ಸುವಿವೇಕದಿಂ ಕೇಳಿ | ಜವದಿ ಬಹುದೆಂದು  || ೧೬ ||

ಮಹಿಪನಾಜ್ಞೆಯೊಳಾತ | ವಿಹಿತದಿಂ ಬರಲಿತ್ತ ||
ಲಹಿತರುಗಳಿರದೆ ಗೋ | ಗ್ರಹಣಮುಖದಿಂದ  || ೧೭ ||

ಪೊರೆಗೈವರಿನ್ನು ಸಂ | ಗರಮುಖದೊಳಲ್ಲದಡೆ ||
ಧರೆಯ ನಾ ಕೊಡೆನೆಂದು | ಕುರುರಾಯನಿರಲು  || ೧೮ ||

ಆ ಸಮಯದೊಳಗೀತ | ನಾಸಭೆಯ ಪೊಗಲು ಕಂ ||
ಡಾ ಸುಯೋಧನನವನ | ತೋಷಗೊಳಿಸುತಲಿ  || ೧೯ ||

ಬಂದ ಕಾರ್ಯವ ಬೆಸಸಿ | ರೆಂದಡರುಹಿದ ಯಮನ ||
ಕಂದ ನಿನ್ನೆಡೆಗೆನ್ನ | ಸಂಧಿಗಟ್ಟಿಹನು  || ೨೦ ||

ಇನ್ನಾದರರ್ಧರಸೆ | ಯನ್ನಿತ್ತು ಕರುಣದಲಿ ||
ಮನ್ನಿಸುವುದೆಂದೆನಲು | ಅನ್ನೆಗವ ನುಡಿದ  || ೨೧ ||

ವಾರ್ಧಕ

ಧರಣಿಯಂ ಪಾರ್ಥಿವರ್ ಸೋತಮೇಲರಿಗಳಂ ||
ಧುರದೊಳಂ ಜೈಸಿಕೊಂಬುದು ಧರ್ಮಮೆಂದಾತ |
ಗರುಹೆನುತಲಾಪ್ತರೊಡನಾಲೋಚಿಸುತ ಹರಿಯ ತನ್ನೊಳಗೆ ಮಾಳ್ಪ ಮನದಿ ||
ಪೊರಮಡಲ್ ಕಂಡೀತ ಭರದಿ ಬಂದಾ ಯುಧಿ |
ಷ್ಠಿರಗೆ ಸೂಚಿಸಲಟ್ಟಿದಂ ನರನನಾ ಪಾರ್ಥ |
ಬರುತ ಮಂಗಲಶಕುನಮಂ ಪಥದೊಳೀಕ್ಷಿಸುತ ನಡೆದನಚ್ಯುತನ ಬಳಿಗೆ || ೨೨ ||

ಭಾಮಿನಿ

ಪರಮಷಡುರಸ ಭೋಜನವ ಮುರ |
ಹರನು ಭುಂಜಿಸಿ ಸವಿದು ವರ ಕ |
ರ್ಪುರದ ವೀಳ್ಯವ ರತುನಮಂಚದಿ ಶಯನಗೆಯ್ದಿರಲು ||
ತರುಣಿಯರು ಸಿರಿಚರಣಸೇವೆಯ |
ವಿರಚಿಸಲು ತೆರೆದರೆನಯನ ಭಾ |
ಸುರದ ವದನದೊಳಿರ್ದ ನಿದ್ರಾಂಗನೆಯ ಕೇಳಿಯಲಿ  || ೨೩ ||

ರಾಗ ಸಾಂಗತ್ಯ ರೂಪಕತಾಳ

ಚರಣಾಬ್ಜದೆಡೆಯಲ್ಲಿ ನರನು ಕೈಮುಗಿದು ನಿಂ | ದಿರಲು ಗೋವಳ ರಾಯನೀತ ||
ಅರಸುಗಳ್ ತಾವೆಂದು ಮೌಳಿಯ ಬಳಿಯಲ್ಲಿ | ಕುರುಭೂಪ ಕುಳ್ಳಿರ್ದನಾಗ || ೨೪ ||

ಹರಿಯು ಮೈಮುರಿದೆದ್ದು ಕಂಡಾಗ ನರನ ಪಿಂ | ತಿರುಗಿ ಕೌರವನನೀಕ್ಷಿಸುತ ||
ಹರಹರಾ ನೀವಿಬ್ಬರೊಂದಾಗಿ ಬಂದುದ | ಚ್ಚರಿಯೆಂದು ತೋರ್ಪುದಿಂದಿನಲಿ || ೨೫ ||

ನೂತನವಿದು ನಮ್ಮ ಹಿರಿಯ ಭಾವಯ್ಯ ನೀ | ವೈತಂದುದಪರೂಪ ಸ್ವಾರಿ ||
ಸಾತಿಶಯದೊಳಿರ್ದಪರೆ ನಿಮ್ಮವರು ಪಾಂಡು | ಜಾತರೊಳ್ ನಿಮಗಾಯ್ತೆ ಕರುಣ || ೨೬ ||

ಅಡವಿಗಟ್ಟಿದರೇನು ಸಹಜಾತರಿವರೆಂಬ | ಒಡಲುರಿ ತಾನಡಗುವುದೆ ||
ಕಡುಹಿತದಲಿ ನೀವನ್ಯೋನ್ಯರಾದರೆ ಬಲು | ಬೆಡಗು ರಂಜಿಪುದು ರಾಜ್ಯದಲಿ || ೨೭ ||

ಚೆನ್ನಾಯ್ತು ನೀವ್ ಬಂದ ಕಾರ್ಯವೇನೆನೆ ಪೇಳ್ದ | ದುರ್ನೀತಿವಂತನಾ ಕ್ಷಣದಿ ||
ಚಿನ್ಮಯ ಕೇಳು ಯಾದವರು ಕೌರವರಲ್ಲಿ | ಭಿನ್ನಭೇದಗಳುಂಟೇನಯ್ಯ || ೨೮ ||

ಯಾರಿಗಿಷ್ಟುಪಚಾರ ನೀ ಮಾಳ್ಪೆ ನಾವಿತ್ತ | ಸಾರಿದುದಪರೂಪವೇನೈ ||
ಶೌರಿ ಕೇಳ್ ದಾಯಾದ್ಯವಿಷಯದೊಳ್ ಪಾಂಡು ಕು | ಮಾರರು ನಾವು ನಮ್ಮೊಳಗೆ || ೨೯ ||

ಇಳೆಗಾಗಿ ಪಾರ್ಥಿವಪಂಥಕೋಸುಗ ನಿಂದು | ಕಲಹಗೆಯ್ವೆವು ಭೂದೇವತೆಯು ||
ಬಳಿಕಾರ ಕೈಸೇರುವಳೊ ನೀನೇ ಬಲ್ಲೆಯ | ಬಲವಾಗಬೇಕುಭಯರಿಗೆ || ೩೦ ||

ಭಾಮಿನಿ

ಧರಣಿಗೋಸುಗವಿಂದು ನಿಜಸೋ |
ದರರು ಹಳಚುವಿರೇಕೆ ಭೂಮಿಯು ||
ಸ್ಥಿರವದಾರಿಗೆ ನೀವು ಪಾಂಡವರೆರಕವಿರೆ ನಾವು ||
ಹರುಷಗೊಂಬೆವು ಸರ್ವಥಾ ಸಂ |
ಗರವು ಬೇಡೈ ನಿನಗೆ ಸಾರಿದೆ ||
ಮರಳಿ ಹರಿಹಂಚಾದರೆಂಬಪಕೀರ್ತಿ ಬಹುದೆಂದ  || ೩೧ ||

ರಾಗ ಮಾರವಿ ಏಕತಾಳ

ಹರಿ ನಿನ್ನೊಳು ಧಮಶ್ರವಣವ ಕೇ | ಳ್ವರೆ ಬಂದಿಹೆವೇನೈ ||
ನೆರೆ ಪಾರ್ಥಿವ ಪಂಥದಿ ಕಾದುವೆವೀ | ರ್ವರ ಪಕ್ಷಕೆ ನೀನು  || ೩೨ ||

ಬಲವಾಗೆನುವರೆ ಬಂದಿಹೆವೆನಲಾ | ಜಲಜಾಕ್ಷನು ನಗುತ ||
ಫಲುಗುಣ ನಿನ್ನಯ ಮತವೇನೆನೆ ಕೈ | ಗಳ ಮುಗಿದುರೆ ನುಡಿದ  || ೩೩ ||

ನಮ್ಮಯ ಮತ ಕೇಳಣ್ಣನ ಮತವಿದು | ಸಮ್ಮತವುಭಯರಿಗು ||
ನಿಮ್ಮನುನಯವೇ ನಯವು ಸ್ವತಂತ್ರಗ | ಳೆಮ್ಮೊಳಗಿಲ್ಲೆನಲು  || ೩೪ ||

ಚಿನುಮಯನುಸಿರಿದನಂದಿಂದಿಗು ಖಳ | ರನು ಕೊಲುವರೆ ರಣದಿ ||
ಸೆಣಸಿದು ನಿಶ್ಚೈತನ್ಯದೊಳಿಹೆ ಕಾ | ಮಿನಿಯರ ಕೈಗುಣದಿ  || ೩೫ ||

ಭಂಡಾರಿಸಿತು ಸುದರ್ಶನ ಹರೆಯದ | ದಿಂಡೆಯರೂರೊಳಗೆ ||
ಉಂಡಾಡುವ ಭಟನೆನ್ನುವ ಪೆಸರಿಟ್ಟು | ಕೊಂಡಿಹರೈ ಎನಗೆ  || ೩೬ ||

ಆದರೆ ನಾನಿಹೆನೊಬ್ಬನ ಸಹಯಕೆ | ಕಾದಲಿಕಸದಳವು ||
ಯಾದವರೊಂದೆಸೆಯಿದರೊಳು ಮನಕೊ | ಪ್ಪಾದುದ ಬೇಡೆನಲು || ೩೭ ||

ಧರಣಿ ಧನಾದಿಗಳಗ್ರಜಗಾದುವು | ತಿರಿದುಂಬೆವು ನಾವು ||
ವರ ಯದುಸೈನಿಕ ಶರಧಿಯನೆಂತಾ | ದರಿಸುವುದೈ ತಿಳುಹು  || ೩೮ ||

ಬಡವರು ನಾವೈ ನೀನೇ ನಮ್ಮಯ | ಕಡೆಗಿರಬೇಕೆನಲು ||
ಪೊಡವಿಪ ಕೌರವ ಮಗುಳಿಂತೆಂದನು | ಜಡರುಹನಾಭನೊಳು  || ೩೯ ||

ಭಾಮಿನಿ

ಹರಿಯೆ ನೀ ಪಾಂಡವರ ಪಕ್ಷವೆ |
ಹೊರತು ನಮ್ಮೊಳಗಾಗುವೆಯ ಹೊ ||
ಕ್ಕಿರಿಯಲಾಗದು ರಣದಿ ನೀನೆಂದೆನುತ ಬೀಳ್ಗೊಂಡು ||
ಭರದಿ ಹಲಧರನೆಡೆಗೆ ಕೌರವ |
ಮರಳಿ ಬರಲಾ ರಾಮ ಮನ್ನಿಸು ||
ತಿರಲು ಕುರುಪತಿ ನಯದಿ ಬಿನ್ನವಿಸಿದನು ಬಲನೊಡನೆ  || ೪೦ ||

ರಾಗ ಕಾಂಭೋಜ ಝಂಪೆತಾಳ

ಕೇಳು ಯದುಕುಲಚಂದ್ರ ನಿನ್ನೊಡನೆ ನಾ ಬಂದ | ಊಳಿಗವ ಪೇಳ್ವೆ ಲಾಲಿಪುದು ||
ಖೂಳಪಾಂಡವರೊಡನೆ ಕದನಗೆಯ್ವರೆ ನಮ್ಮ | ಪಾಳೆಯಕೆ ಕೃಷ್ಣ ಬಹನೆನುತ || ೪೧ ||

ಇಂದು ನಿಮ್ಮನುಜನಿದ್ದೆಡೆಗೆ ನಾ ಬರೆ ಪಾರ್ಥ | ಬಂದು ವಂದಿಸೆ ನಮ್ಮೀರ್ವರನು ||
ಮಂದಹಾಸದಿ ಕಂಡು ನುಡಿದ ನಾ ಪಾಂಡವರಿ | ಗಿಂದು ಹಲಧರನು ನಿನಗೆನುತ || ೪೨ ||

ಎನಲು ಪಾರ್ಥನು ಒಪ್ಪುತಿರಲಾಗ ನೀವು ನಮ | ಗೆನುತ ನಿಮ್ಮೆಡೆಗೆ ನಲವಿನಲಿ ||
ವನಜಾಕ್ಷ ಬಂದೆ ಕೇಳೆನ್ನ ಪಕ್ಷವನು ನೀ | ನನುಮಾನಿಸದೆ ಪಾಲಿಸುವುದು || ೪೩ ||

ಭಾಮಿನಿ

ಎಂದು ಈ ಪರಿಯಿಂದಲಂಧಕ |
ನಂದನನು ಪದಕೆರಗಲಾ ಯದು |
ವಂದಿತನು ಮಗುಳೆದ್ದು ದುರ್ಯೋಧನನ ಮನ್ನಿಸುತ ||
ಎಂದನೆಲೆ ಕುರುಪತಿಯೆ ನಾನಿರೆ |
ಬಂದ ಭಯವೇನೆನುತ ಬಹುಪರಿ |
ನಿಂದಿಸುತ ಮಧುವೈರಿ ಕೃಷ್ಣನ ಕೌರವನಿಗೆಂದ  || ೪೪ ||

ರಾಗ ಮಾರವಿ ಏಕತಾಳ

ಬಿಡು ಬಿಡು ಶೋಕವ ನುಡಿಯನು ಲಾಲಿಸು | ಪೊಡವಿಪ ಕೌರವನೆ ||
ಹುಡುಗನು ಪಾಂಡವರೊಡಗೂಡಲು ನಾ | ಬಿಡೆ ನಿನ್ನಯ ಪಡೆಯ || ೪೫ ||

ಉದ್ಧವ ಸಾತ್ಯಕಿ ಮೊದಲಾದ್ಯದುವರ | ರಿದ್ದರೆ ಭಯವೇನೈ ||
ಸದ್ದಡಗಿಸುವೆನು ಪಾಂಡವರನು ನಾ | ಯುದ್ಧದೊಳಿದು ದಿಟವು  || ೪೬ ||

ಚೋರತನದಿ ನಮ್ಮನುಜೆ ಸುಭದ್ರೆಯ | ಪೋರ ವಿಜಯನೊಯ್ದ ||
ತೀರಿಸುವೆನು ಮನವೈರವ ನೋಡಿಂ | ದೀ ರಣಮಂಡಲದಿ  || ೪೭ ||

ರಾಗ ಭೈರವಿ ಏಕತಾಳ

ಹಲಧರನೆಂದುದ ಕೇಳಿ | ಕುರು | ಕುಲಪತಿ ಸಂಶಯ ತಾಳಿ ||
ಬಲರಾಮನೊಳರುಹಿದನು | ಮನ | ವೊಲಿಸುತ ಕೌರವ ತಾನು  || ೪೮ ||

ನಿಮ್ಮಯ ನುಡಿಯನು ಕೇಳಿ | ನಾ | ಧಿಮ್ಮನೆ ಬರೆ ಮುದ ತಾಳಿ ||
ತಮ್ಮನ ಒಳವಿಲಿ ಶಚಿಯ | ಪತಿ | ಮೊಮ್ಮನಿಗಿತ್ತಿರಿ ಸುತೆಯ  || ೪೯ ||

ಎಂದಾ ಕುರುಪತಿ ನುಡಿಯೆ | ಬಲ | ನೆಂದನು ಕೇಳ್ ಕುರುದೊರೆಯೆ ||
ಸಂದೇಹವು ನಿನಗೇಕೆ | ನಾ | ನಿಂದಯ್ತಹೆ ತವ ಬಲಕೆ  || ೫೦ ||

ಭಾಮಿನಿ

ನುಡಿಗೆ ತಪ್ಪುವನಲ್ಲ ನೀನೆ |
ನ್ನೊಡನೆ ಬಹುಮಾತುಗಳನಾಡದೆ ||
ನಡೆಯೆನುತ ಕರವಿಡಿದು ನಂಬುಗೆಯಿತ್ತು ಹಲಧರನು ||
ಪೊಡವಿಪನ ಮುಂದಟ್ಟಿ ಯಾದವ |
ಪಡೆಸಹಿತ ಪೊರಮಡಲಿಕಿತ್ತಲು ||
ಜಡಜನಾಭನು ತನ್ನ ಮನದೊಳಗಾಗ ಯೋಚಿಸಿದ  || ೫೧ ||

ವಾರ್ಧಕ

ಧುರಕೀಗಲಣ್ಣಯ್ಯ ಕುರುಪತಿಯ ಬಲಕೆ ತಾ |
ತೆರಳಿದರೆ ಮತ್ಕಾರ್ಯ ಭಂಗಹೊಂದುವುದೆನುತ |
ಲರಿತಾಗ ಮಾಧವಂ ಜರಡು ಸುರಭಿಯ ಮುಸಲಧರನೆಡೆಗೆ ಕಳುಹಿಸಲ್ಕೆ ||
ಹರುಷದಿಂ ಯಾದವರನೊಡಗೊಂಡು ಸಂಗರಕೆ |
ಬರಲಾಗ ಪಥದೊಳಾ ಸುರಭಿಯಡ್ಡೈಸಲದ |
ಚರರು ತಡೆಯಲು ತಿರುಗಿ ಪೋಗದಿರೆ ಹಲಧರನು ಕರದಿಂದಲದ ಪಿಡಿಯಲು || ೫೨ ||

ಅಸುವಿಲ್ಲದಾ ಸುರಭಿ ವಸುಧೆಯೊಳು ಬೀಳಲಾ |
ವಸುದೇವಸುತ ರಾಮ ಬಸವಳಿದು ಮಾನಸದೊ |
ಳುಸಿರಿದಂ ವಿಧಿವಶದೆ ಪಶುಹತ್ಯಪಾಪ ಸಂಭವಿಸಿತಿನ್ನೇಂಗೆಯ್ವೆನು ||
ಉಸಿರುತಿರಲೀ ತೆರದಿ ಕುಸುಮಾಂಬುಪಿತನಲ್ಲಿ |
ನಸುನಗುತ ಬಂದು ಶೋಕಿಸುತಿರ್ಪ ಬಲನನೀ |
ಕ್ಷಿಸುತೆಂದ ಮಾನಸದಿ ವ್ಯಸನಮೇನೆನಲಾಗ ಅಸುರಾರಿಯೊಡನರುಹಿದ || ೫೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಪಟನಾಟಕ ಕೇಳು ಕೌರವ | ನೃಪನ ಬಲಕಾನಂದದಿಂದಲಿ |
ವಿಪುಳಬಲ ಕೂಡುತ್ತ ನಾನ | ಯ್ದಪೆನು ಎನುತ  || ೫೪ ||

ಕುರುಪತಿಯು ಕಳುಹುತಲಿ ಹಸ್ತಿನ | ಪುರಕೆ ನಾ ಯಾದವರ ಕೂಡುತ |
ಭರದಿ ಪೊರಮಡಲಾಗ ಮಾರ್ಗದಿ | ಜರಡು ಸುರಭಿ  || ೫೫ ||

ಬರಲು ಚರರದ ತಡೆಯೆ ಹಿಂದಕೆ | ತೆರಳದಿರಲಾ ವೇಳೆಯಲಿ ನಾ ||
ಕರದಿ ಪಿಡಿಯಲು ಮಡಿದ ಹತ್ಯವು | ದೊರಕಿತನುಜ  || ೫೬ ||

ಬಂದ ಪಾತಕ ತೆರಳುವುದು ಹೇ | ಗೆಂದು ಬಲ ಮಾಧವನ ಬೆಸಗೊಳೆ ||
ಮಂದಹಾಸದಿ ನುಡಿದ ಶ್ರೀಗೋ | ವಿಂದ ನಗುತ  || ೫೭ ||

ಭಾಮಿನಿ

ಸುರಭಿಹತಪಾತಕವು ಭೂಮಿಯ |
ಚರಿಸಿ ಬಲು ತೀರ್ಥಗಳ ಸ್ನಾನವ ||
ವಿರಚಿಸಲು ಪರಿಣಾಮಹೊಂದುವುದೆನಲು ಹಲಧರನು ||
ಹರ ಹರಾ ಎಂದೆನುತ ಕದನವ |
ಮರೆತು ವಿಷಯಾಂತರಕೆ ತೆರಳಲು ||
ಗರುಡವಾಹನನಿತ್ತ ಪಾರ್ಥನೊಳೆಂದನೊಲವಿನಲಿ  || ೫೮ ||

ರಾಗ ಕಾಂಭೋಜ ಝಂಪೆತಾಳ

ನರನೆ ನೀನೇಕೆ ಮರುಳಾದೆ ಸುರಗಿಯ ಬಿಸುಟು | ಒರೆಯನಂಗೀಕರಿಸಿದಂತೆ ||
ಧುರಧೀರ ರಾಮಾದಿ ಯದುಬಲವನುಳಿದೀಗ | ಬರಿದೆ ನಂಬಿದೆಯೆನ್ನ ಬಿಡದೆ || ೫೯ ||

ನಾವು ಬರಿಗಯ್ಯೊಳೇಂಗೆಯ್ವೆವೀಹದನ ಕೇ | ಳ್ದೇವೇಳುವನೊ ಯುಧಿಷ್ಠಿರನು ||
ದೇವರೆನ್ನುವರೆನ್ನ ನಿಮ್ಮುವರು ನಡೆವುದೇ | ದೇವತನ ಪಗೆಗಳಿದಿರಿನಲಿ || ೬೦ ||

ನರನೆಂದ ನೀನೆಂಬ ಕೌತುಕವ ಬಲ್ಲೆ ಮೃಗ | ಧರ ಕಿರಣದಿಂದಲೀ ಕ್ಷಿತಿಯ ||
ಮೆರೆವುದಗಣಿತ ತಾರೆಗಳಲೇನು ಫಲವು ನೃಪ | ನರಿಯನೇ ನಿಮ್ಮ ಮಹಿಮೆಯನು || ೬೧ ||

ಪರಮೇಶ ಸುಪ್ರೀತ ಪಂಕಜೋದ್ಭವತಾತ | ಸುರಪಾಲನಮಿತ ಶ್ರೀನಾಥ ||
ಶರಣ ನಾ ನಿನಗೆಂಬ ಕರುಣವಿರಲೀಗಲನು | ಕರಿಸು ಸಾರಥಿತನವನೆಂದ || ೬೨ ||

[ಏನೆಂಬೆ ನಾ ನಿನ್ನ ಸೇವಕನೊ ಮರುಳೆಲಾ | ಮಾನಹೀನರ ಮಾತ ಪೇಳ್ದೆ ||
ಮಾನನಿಧಿ ಬಲರಾಮ ಏನ ಪೇಳ್ವನೊ ಇಂಥ | ಹೀನ ಕೆಲಸವ ಪೇಳ್ದೆಯಲ್ಲ || ೬೩ ||

ಕೆಟ್ಟವರು ನೀವೆನುತ ಸಿಟ್ಟಿನಲಿ ಕೌರವನು | ಅಟ್ಟಿರುವ ವನಕೆ ಕೇಳ್ ಸಹಜ ||
ಕೆಟ್ಟು ಹೋಗುವಿರೆಂದು ದೃಷ್ಟಿಸಿಯೆ ನೋಡಿದರೆ | ಇಷ್ಟನಾಡಿದೆಯಲ್ಲ ಪಾರ್ಥ || ೬೪ ||

ಅತ್ತೆಯಣುಗರು ಎನುತಲೆತ್ತಿ ಸಲಹಿದಕೆ ನೀ | ಹತ್ತಿದೆಯಲಾ ಶಿರದ ಮೇಲೆ ||
ಭಕ್ತಿಯಿಂದಲಿ ಹಯದ ಕಾಸಗಾರಿಕೆಯ ತಂ | ದಿತ್ತೆಯಲ್ಲಾ ದೇವನೆನುತ || ೬೫ ||

ಒಮ್ಮೆ ಸೈರಿಸಿದೆ ನೀ ಹೆಮ್ಮೆಯಿಂದಾಡಿದರು | ನಮ್ಮ ತಂಗಿಯ ಗಂಡನೆನುತ ||
ಸಮ್ಮತವಿದಲ್ಲ ನಡೆಯೆಂದು ಮೊಗದಿರುಹಿದ ನ | ಮ್ಮಿಂದಲಾಗುವುದಿಲ್ಲವೆನುತ || ೬೬ ||

ಹರಿಯು ಗರ್ಜಿಸಿ ಮೊಗವ ತಿರುಹಲೀಕ್ಷಿಸಿ ಪಾರ್ಥ | ಮರುಗಿ ಮನದೊಳು ಭೀತಿ ತಾಳ್ದು ||
ಪೊರೆವರಾರೆಮ್ಮುವನು ನೀನಲ್ಲದೆಂದೆನುತ | ಚರಣಕೆರಗಿದನು ಗೋಳಿಡುತ || ೬೭ ||]

ರಾಗ ನೀಲಾಂಬರಿ ಏಕತಾಳ

[ದೇವ ನೀ ದಯದೊಳು ನಮ್ಮ | ರಕ್ಷಿಪೆಯೆಂದು | ನಾವು ನಂಬಿಹೆವು ನಿಮ್ಮ ||
ಆ ವಿಪಿನದೊಳ್ ಪಿತನು | ಮಡಿಯಲಿತ್ತೆ | ದೇವ ನೀನಭಯವನು || ೬೮ ||

ಬಂಧುಬಾಂಧವರೆಲ್ಲರು | ವೈರಿಗಳು ಮು | ಕುಂದ ನೀ ದಯವ ತೋರು ||
ಧಾರಿಣಿ ಧನ ಸೈನ್ಯವು | ಕುರುಪತಿಯೊಳು | ಸೇರಿತಿನ್ನೆಂತು ಕಾಂಬೆವು || ೬೯ ||

ಗುರುಭೀಷ್ಮರಿದಿರು ನಿಂತು | ಜಯವಹುದೆಂತು | ಧರೆಯ ಪಾಲಿಸಿದಂತಾಯ್ತು ||
ನಿರತಾರಣ್ಯದೊಳಿಹರೆ | ನಪುಂಸಕರೆಂದು | ಸರಿಯರು ನಗದಿಹರೆ || ೭೦ ||

ಧುರದೊಳು ನಿಂತು ಕಾದಲು | ಸಾಮರ್ಥ್ಯವುಂಟೆ | ಹರಿಯೆ ನೀನರಿತು ಪೇಳು ||
ಶರಣರಾಧೀನನೆಂದು | ಸ್ಮೃತಿಯೊಳ್ ಪೇಳು | ತಿರಲು ಸುಳ್ಳಹುದೆ ಎಂದು || ೭೧ ||

ಚರಿಸಿ ಕಾಂತಾರದೊಳಗೆ | ಬಳಲಿದೆವು | ಪರರ ಸೇವೆಯೊಳ್ ಕಡೆಗೆ ||
ಅರಿಗಳೊಳ್ ಸೋಲುವುದರಿಂದ | ಪ್ರಾಣವನಿಲ್ಲಿ | ತೊರೆವುದೊಳ್ಳಿತು ಗೋವಿಂದ || ೭೨ ||]

ರಾಗ ಕಾಂಭೋಜ ಝಂಪೆತಾಳ

[ಎಂದು ಸಾಷ್ಟಾಂಗದಿಂದೆರಗಿ ದುಃಖಿಸಿ ಚರಣ | ದ್ವಂದ್ವದಲಿ ಬಿದ್ದು ನುತಿಸುತಿರೆ ||
ಇಂದ್ರಜಾತನ ನೋಡಿ ಮನಮರುಗಿ ವಸುದೇವ | ನಂದನನು ಕರುಣದಿಂದೊಲಿದು || ೭೩ ||]

[ನರ ನಿನ್ನ ಧೈರ್ಯ ಸಾಹಸ ಪರೀಕ್ಷಿಸಲಾನು | ಒರೆದುದಲ್ಲದೆ ಬೇರೆಯುಂಟೆ ||
ಬರಿದೆ ಬೆದರದಿರು ಶುಕ ನಿಮಗೆ ಪಂಜರನೆಂಬ | ಪರಿಯನರಿಯದೆ ಬೆಚ್ಚಿದೆಯಲಾ ||] || ೭೪ ||

ಪಾದಾಂಬುರುಹಕೆ ಪೊಡಮಟ್ಟು ನುತಿಸುವ ನರನ | ಮಾಧವನು ಸಂತಯಿಸಿ ನುಡಿದ ||
ನೀ ಧೈರ್ಯ ತಾಳು ಸಾರಥಿತನವ ಮಾಳ್ಪೆನೆಂ | ದಾ ಧನಂಜಯನೊಡನೆ ಪೊರಟ || ೭೫ ||

ಭಾಮಿನಿ

ಅರಸ ಕೇಳ್ ಬ್ರಹ್ಮಾಡಕೋಟಿಯ |
ಧರಿಸಿ ಗರ್ಭದಿ ಮೆರೆವ ಚಿನ್ಮಯ |
ನರನ ಸಾರಥಿಯಾದಮೇಲುಳಿದವರಪಾಡೇನು ||
ಹರ ಹರಾ ಮನುಜಾತರಲಿ ಸಿತ |
ತುರಗ ತಾನಿನ್ನೇಸು ಧನ್ಯನೊ |
ಶರಣರಲಿ ಮಗುಳೆಂತು ದಯವೋ ಭಕ್ತವತ್ಸಲಗೆ  || ೭೬ ||

ರಾಗ ಭೈರವಿ ತ್ರಿವುಡೆತಾಳ

ಈ ತೆರದೊಳಸುರಾರಿ ದಿವ್ಯ ವ | ರೂಥವಡರಿದು ಗಾಯಕರ ಸಂ ||
ಗೀತ ಪೊಗಳಿಕೆ ವಾದ್ಯನಿನದದಿ | ಜಾತಿಗಣಿಕೆಯರುಗಳ ನಾಟ್ಯದೊ ||
ಳೋತು ಮನಿವಿಟ್ಟಂಬುಜಾಸನ | ತಾತ ಕಂಸವಿಘಾತ ಲಕ್ಷ್ಮೀ ||
ನಾಥ ಸಾತ್ಯಕಿಸಹಿತ ಯಮಸಂ | ಜಾತನೆಡೆಗೆಯ್ತಂದನತ್ಯಾ ||
ನಂದಕರದಿ | ನರನೊಡ | ನಂದು ಭರದಿ  || ೭೭ ||

ವರ ಯುಧಿಷ್ಠಿರನಿತ್ತ ಮುರಹರ | ನರನಿಗೊಲಿದನೊ ಕೌರವೇಂದ್ರಗೆ |
ಕರುಣವಾದನೊ ಎನುತ ಚಿಂತಿಸು | ತಿರಲು ಚಾರಕ ಬಂದು ಪೇಳ್ದನು ||
ಹರಿ ಕಿರೀಟಿಗೆ ಸೂತನಾಗಿಯೆ | ತೆರಳಿ ಬಹನಿನ್ನಾರು ಲೋಕದಿ ||
ಸರಿಸಮಾನರು ನಿನ್ನ ಭಾಗ್ಯಕೆ | ಸರಸಿಜಾಕ್ಷನನಿದಿರುಗೊಳ್ಳೆಂ ||
ದೆರಗಿ ನಿಂದ | ಭೂಪಗೆ | ಹರುಷದಿಂದ  || ೭೮ ||

ವಾರ್ಧಕ

ಕೇಳ್ದವನಿಪಂ ಚಿಂತೆಯನ್ನುಳಿದು ಧೈರ್ಯಮಂ |
ತಾಳ್ದಾ ವಿರಾಟ ದ್ರುಪದಾದ್ಯರೊಡಗೊಂಡು ಸಿರಿ |
ಯಾಳ್ದಿಹನ ಬಳಿಗೆ ಪೊಂದಳಿಗೆಯಂ ದರ್ಪಣವ ಪಿಡಿದವರ ಶೋಭಾನದಿ ||
ಪೋಲ್ದಪ್ಸರಾಂಗನೆಯರಿಂ ನರ್ತಿಸುವ ಪೆಣ್ಗ |
ಳೋಳ್ದಿವ್ಯತರವಾದ ಬಿರುದಿನಿಂ ವಾದ್ಯರವ |
ದೋಳ್ದಾನವಾರಿಯಂ ಕರೆತಂದು ಕಾಂಚನದ ಪೀಠವನ್ನೇರಿಸಿದನು || ೭೯ ||

ಕಂದ

ಅಚ್ಯುತನಂ ಅತಿಭಕ್ತಿಯೊ |
ಳರ್ಚಿಸಿ ಪದತೀರ್ಥವ ತಾ ಶಿರದೊಳಗಾಂತಂ ||
ಸಚ್ಚಿನ್ಮಯನಂಘ್ರಿಯೊಳಂ |
ಸಚ್ಚರಿತಂ ಪೊಡಮಡುತಿಂತೆಂದಂ ನಯದಿಂ  || ೮೦ ||

ರಾಗ ಮಧ್ಯಮಾವತಿ ಏಕತಾಳ

ದೇವ ನೀ ಚಿತ್ತೈಸಿದೇನಯ್ಯ ನಿನ್ನ | ಸೇವಕರ್ಮೇಲಾಯ್ತೆ ಪೂರ್ಣ ಕಾರುಣ್ಯ ||
ನಾವೆ ಧನ್ಯರು ನಮಗಿನ್ನಾವ ಭವದ | ನೋವಿಲ್ಲವೆನಲೆಂದ ಸಾಮಜವರದ || ೮೧ ||

ದೇವತನವು ನಮಗಿನ್ನೆಲ್ಲಿ ನರಗೆ | ನಾವೆ ಸಾರಥಿಯಾದ ಮೇಲಿನ್ನು ನಿಮಗೆ ||
ಭೂವಳಯದೊಳೆಣೆಯಾರೆಂದಚ್ಯುತನು | ಕೇವಲ ಕೃಪೆಯೊಳಪ್ಪಿದ ಕಾಲಜನನು || ೮೨ ||

ದೇವರ ದೇವ ನೀನಹುದು ಮೂಜಗದಿ | ದೈವ ಬೇರಿನ್ನುಂಟೆ ಭಕ್ತರ ಮುದದಿ ||
ಆವಾವ ರೀತಿಯೊಳ್ ಪೊರೆವೆಯೊ ಎಂದು | ಪಾವನಚರಿತನ ನುತಿಸಿದನಂದು || ೮೩ ||