ರಾಗ ಸೌರಾಷ್ಟ್ರ ಅಷ್ಟತಾಳ

ಈಗ ನೀ ಕೇಳೆನ್ನ ಒಡಲುರಿಯನು ಪೇಳ್ವೆ | ಪಾರ್ವತೀಶ || ಎನ್ನ |
ಮೂಗನು ಕೊಯ್ದು ಕನ್ನಡಿಯನಿತ್ತನು ಪಾರ್ಥ | ಪಾರ್ವತೀಶ    ||೪೩೫||

ನಾಳಿಕೇರದ ಹೇರನಿಳುಹಿದನೀ ಪಾರ್ಥ | ಪಾರ್ವತೀಶ || ಈಗ |
ಘೋಳೆಂದು ಮರುಗಿ ದೂರಿದರೆ ಕೇಳುವರಾರು | ಪಾರ್ವತೀಶ  ||೪೩೬||

ತೈಲಭಾಂಡವು ಬಿದ್ದು ಅಳಲುವೆ ನಾನೀಗ | ಪಾರ್ವತೀಶ || ಯಾರು |
ಬಯಲ ಭ್ರಾಂತಿಯಿಂದ ಕೇಳುವರಾರಿಂದು | ಪಾರ್ವತೀಶ       ||೪೩೭||

ನ್ಯಾಯವಾರದ್ದು ಅನ್ಯಾಯವಾರದ್ದೆಂದು | ಪಾರ್ವತೀಶ || ಈಗ |
ನ್ಯಾಯವ ನಿರ್ಣಯ ಮಾಡದೆ ತೀರದು | ಪಾರ್ವತೀಶ ||೪೩೮||

ಭಾಮಿನಿ

ಹಿಂದೆ ಬಾಣಾಸುರನ ಸಮರದೊ |
ಳಂದು ನೀನಯ್ತಂದು ಆತನ |
ಕೊಂದು ಕಳೆಯದಿರೆಂದು ಪೇಳಿದ ನುಡಿಯ ಮೀರಿದೆನೆ ||
ಎನ್ನ ಮಾತೇನಾದಡಾಗಲಿ |
ನಿನ್ನ ವಾಕ್ಯವ ಮೀರಬಾರದು |
ಇನ್ನು ಪಾರ್ಥನ ನೀನೊಡಂಬಡಿಸೆಂದನಾ ಕೃಷ್ಣ        ||೪೩೯||

ಹರಿ ನರನು ಒಂದೇ ಶರೀರವು |
ಬರಿದೆ ನಿಮ್ಮೊಳು ಬಂದ ವೈರವು |
ಧುರಕೆ ಕಾರಣವೇನೆನಲು ಹರಿಯೆಂದ ಹರನೊಡನೆ ||
ಕಂಜಸಖಗರ್ಘ್ಯವನು ಕೊಡುವೆ |
ನ್ನಂಜಲಿಗೆ ಹಯವೆಂಜಲುಗುಳಲು |
ಭಂಜಿಸುವೆನೆಂದೆನುತ ಪಂಥವ ನುಡಿದೆ ಗಯನೊಡನೆ          ||೪೪೦||

ಸಂಜೆಯೊಳು ಬಂದವನನಾಗ ಧ |
ನಂಜಯನು ತಂದಿಟ್ಟುಕೊಂಡೆ |
ನ್ನಂಜಿಸುವ ನೀ ಕೊಟ್ಟ ಬಾಣದ ಬಲದಿ ಕೇಳೆಂದ ||
ಕೀರ್ತಿಯನು ತಾ ಪಡೆಯಲೋಸುಗ |
ಪಾರ್ಥ ನೀ ನಿಮ್ಮಿಬ್ಬರಿಗೆ ಧ |
ರ್ಮಾರ್ಥ ಕೊಟ್ಟೆನು ಶಾರ್ಙ್ಗ ಪಾಶುಪತಾಸ್ತ್ರ ಚಕ್ರವನು ||೪೪೧||

ಕೀರ್ತಿಯಿಂದಲಿ ಮುನ್ನವೇಯಪ |
ಕೀರ್ತಿ ಬಂದುದು ಚಕ್ರ ನಿಮಗಿ |
ನ್ನೇತಕೆನುತಲೆ ರುದ್ರ ರೌದ್ರಸಮುದ್ರದಂತಾದ ||
ಧೀರ ಪಾರ್ಥನು ಬೆದರಿ ಹಿಂದಕೆ |
ಸಾರಿ ಬಿಲ್ಲಿನ ತುದಿಗೆ ಗಲ್ಲವ |
ನೂರಿ ಹಳೆ ಕಾಮಾರಿಯೋ ಹೊಸ ಮಾರಿಯೋ ಎಂದ          ||೪೪೨||

ಕಂದ

ಶಂಭುವೆ ಕೇಳೇಕಾಂತದಿ |
ಶಾಂಭವಿಯೊಳ್ ನಾ ನಮಿಸುತ್ತುಸಿರುವೆನೆಲ್ಲಹು
ದೆಂಬುದು ನಿನ್ನಯ ಶ್ರೀ ಪಾ |
ದಾಂಬುಜ ಯುಗಳಕೆ ಶ್ರುತವಹುದೆಂದಂ     ||೪೪೩||

ವಚನ

ಇಂತೆಂದು ಪಾರ್ವತಿಯೊಡನೆ ಅರ್ಜುನನು ಅತಿ ಗುಪ್ತದಿಂದ ಶಿರಮಂ ತೋರಿ ದುಃಖಿಸಲಾಗಿ ಬ್ರಹ್ಮ ಶಿವ ಮುಂತಾದವರು ಕೃಷ್ಣಾರ್ಜುನರೊಡನೆ ಕೇಳಿದ ಬಗೆಯದೆಂತೆನೆ –

ರಾಗ ತೋಡಿ ಆದಿತಾಳ

ನರನಾರಾಯಣರುಗಳ್ ಪೂರ್ವ | ಭವದೊಳೊಂದೇ ಜನ್ಮ ||
ಬರಿದೆ ನಿಮ್ಮೊಳೇತಕಿಂಥ | ಕಲಹವೆಂದ ಬ್ರಹ್ಮ         ||೪೪೪||

ನೆಂಟ ಭಾವ ನಿಮ್ಮೊಳಿಂಥ | ದೇಕೊ ಚಕ್ರಪಾಣಿ ||
ಬಂಟತನದ ಪಂಥ ಬೇಡ | ವೆಂದರಗಜೆ ವಾಣಿ        ||೪೪೫||

ಸರ್ಪಭೂಷನೆ ಕೇಳು ಕಂ | ದರ್ಪಜನಕ ನಾನು ||
ತಪ್ಪುಯಿದ್ದಡೀಗಳೆನ್ನ | ಮೇಲೆ ಹೊರಿಸು ನೀನು        ||೪೪೬||

ಕಾಂತೆ ಕೇಳೆ ಪಾರ್ಥನ ಏ | ಕಾಂತವೇನು ಪೇಳೆ ||
ಇಂಥ ಮರುಳು ಮೂರ್ಖನೆಂಬು | ದರಿಯೆ ನೀನು ಬಾಲೆ        ||೪೪೭||

ಅರ್ಜುನ ದುರ್ಜನನೆಂದು | ಗರ್ಜಿಸುವಿರಲ್ಲ ||
ಸಜ್ಜನ ಪುಂಡನು ಕೃಷ್ಣ | ಕೇಳೊ ಎನ್ನ ಸೊಲ್ಲ ||೪೪೮||

ಏನೆ ಗಿರಿಜೆ ಕೃಷ್ಣನೆಂದ | ಮಾತ ಮನದಿ ಗ್ರಹಿಸೆ ||
ಏನು ಇದ್ದಡೀಗಲಿವನ | ಮೇಲೆ ನೀನು ಹೊರಿಸೆ        ||೪೪೯||

ಹರನಿಂತೆಂದ ಮಾತ ಕೇಳಿ | ಹರುಷದಿಂದ ಬಂದು ||
ಸುರಪಸುತನ ಕರವ ಪಿಡಿದು | ಕರೆದು ತಂದಳಂದು   ||೪೫೦||

ಸತ್ತ ಗಯನ ಶಿರವ ಮುಂದೆ | ಬಿಚ್ಚಿ ತೋರಿಸುತ್ತ ||
ತಪ್ಪು ವೊಪ್ಪುವರಿತು ವಿ | ಚಾರಿಸೆಂದ ಪಾರ್ಥ          ||೪೫೧||

ಭಾಮಿನಿಯರ್ಧ

ಬ್ರಹ್ಮ ಪರಶಿವ ಸಹಿತ ಸರ್ವರು |
ಸಾಮ್ಯದಿಂದಲೆ ನೋಡಿ ಬೇಗದಿ |
ತಮ್ಮ  ಮೂಗ್ಬೆರಳಿನಲಿ ಕಂಡರು ಕೃಷ್ಣಮಾಯಕವ ||   ||೪೫೨||

ರಾಗ ದೇಶಿ ಅಷ್ಟತಾಳ

ನೋಡಿದಿರಲ್ಲ | ನೀವು | ನೋಡಿದಿರಲ್ಲ || ಇಂಥ |
ಗಾಡಿಗಾರ ಕೃಷ್ಣನೀಗ | ಮಾಡಿದ ಮಾಯಕವನಿಂದು || ನೋಡಿ  || ಪಲ್ಲವಿ ||

ಬಂದು ಮರೆಯ ಹೊಕ್ಕವನ | ನಿಂದು ಕಾಯ್ವೆನೆಂದಡೆನ್ನ |
ಬಂದು ತನ್ನೊಡನೆ ಈತ | ನಿಂದು ಕಾದಲು ||
ಗಂಡುಸಾದರೆನ್ನ ಮೊದಲು | ಕೊಂದು ಬಳಿಕ ಗಯನ ಕೊಲದೆ |
ಭಂಡನೆನ್ನ ವಂಚಿಸೀಯೆ | ತುಂಡು ಮಾಡಿದ | ಗಯನ ||೪೫೩||

ಇಬ್ಬರೊಂದು ಗೂಡಿ ರಣದಿ | ಕೊಬ್ಬಿನಿಂದ ಕಾದುತಿರಲು |
ಒಬ್ಬರರಿಯದಂತೆಯೆನ್ನ | ಹಿಂಬದಿಯಲಿಹ ||
ಅಬ್ಬರದ ಮೂಡಿಗೆಯೊಳ್ | ತಬ್ಬಿಕೊಂಡಿರುವ ಗಯನ |
ಒಬ್ಬರರಿಯದಂತೆ ಬಂದು | ಗರ್ಭವ ಕತ್ತರಿಸಿದ | ನಿಂದು        ||೪೫೪||

ಭಾಮಿನಿ

ಶಂಭು ಮೃತಜೀವಿಯ ನಿರೀಕ್ಷಿಸಿ |
ತಂಬುಲವನುಗುಳುತ್ತ ಕಮಲದ |
ಳಾಂಬಕನ ನೋಡಲ್ಕೆ ಗಯ ಕಣ್ದೆರೆದು ಮೈಮುರಿದ ||
ಸರ್ವರಿಗೆ ಶಿರವೆರಗಿ ಗಯಗಂ |
ಧರ್ವ ಕರವನು ಮುಗಿದು ಬಳಿಕಾ |
ಪಾರ್ವತೀಶನೊಳೆಂದ ತನ್ನಯ ಪೂರ್ವಸಂಗತಿಯ    ||೪೫೫||

ವಾರ್ಧಕ

ಮೂಡಿಗೆಯೊಳೆನ್ನ ಕುಳ್ಳಿರಿಸಿಯರ್ಜುನ ಕಣ್ಣು |
ಬಾಡಿದಂತಾಗಲೀ ಕೃಷ್ಣನಲ್ಲಿಗೆ ಬಂದು |
ರೂಢಿಸಿದ ಪುಷ್ಪಕದೊಳಿರಿಸಿಕೊಂಡೊಯ್ದೆನ್ನ ವೈಕುಂಠಪುರಕಾಗಲೆ ||
ಮಾಡಿದುಪಚಾರಗಳನಾಡಿ ತೀರಿಸಲುಂಟೆ |
ನೋಡಿದರಿದೇ ಮೂರ್ತಿ ಶಂಖ ಚಕ್ರ ಗದಾಬ್ಜ |
ರೂಢಿಸಿದ ಕರುಣಾಕಟಾಕ್ಷ ಮಹಿಮೆಯನರಿಯದೋಡಿದೆನು ವೈರಿಯೆಂದು         ||೪೫೬||

ಭಾಮಿನಿ

ಎಣಿಸದಿರು ಮನದೊಳಗೆ ತನ್ನವ |
ಗುಣ ಶತಂಗಳನೆನುತಲಾ ಫಲು |
ಗುಣನ ನಿಜಚರಣಾರವಿಂದಕೆ ಮಣಿದನಾ ಗಯನು ||
ಸಂದುದೇ ಗಂಧರ್ವ ನಿನ್ನೊಡ |
ನೆಂದ ಭಾಷೆಯು ಎನುತ ಪಾರ್ಥನು |
ಮಂದಹಾಸದಿ ಕೈವಿಡಿದು ಬಿಗಿಯಪ್ಪಿದನು ಗಯನ     ||೪೫೭||

ವಚನ

ಆ ಸಮಯದಲ್ಲಿ ದ್ರೌಪದಿ ಬಂದು ಶ್ರೀಕೃಷ್ಣನ ಚರಣಾರವಿಂದಕ್ಕೆರಗಿ ಸ್ತುತಿಸಿದಳದೆಂತೆನೆ –

ರಾಗ ಮಾರವಿ ಅಷ್ಟತಾಳ

ಕಮಲನಯನ | ಕರುಣವಾರಿಧಿ |
ಕಾಮಪಿತನೆ | ಕಾಯೊ ಬೇಗದಿ      ||೪೫೮||

ನಿಳಯದೊಳಂದು | ದುಶ್ಯಾಸ ಬಂದು |
ಕಳೆಯೆ ಮಾನವ | ಕಾಯ್ದ ಮಾಧವ ||೪೫೯||

ಅಂಗಜಪಿತನೆ | ಗಂಗೆಯ ತಾತನೆ |
ರಂಗನೆ ನಿನ್ನಯ | ತಂಗಿ ಕಾಣಣ್ಣ    ||೪೬೦||

ಎಲ್ಲರಿಗೊಲಿದೆ | ಮಲ್ಲರ ಗೆಲಿದೆ |
ವಲ್ಲಭನ ಕಾಯೊ | ಚೆಲ್ವ ಅಭಯವೀಯೊ     ||೪೬೧||

ಭಾಮಿನಿ

ಎನಲು ಕೇಳುತ ಹರಿಯು ದ್ರುಪದನ |
ತನುಜೆಯನು ಸಂತೈಸಿ ಪಾರ್ಥನ |
ವಿನಯದಲಿ ತಕ್ಕೈಸಿ ಮೆಚ್ಚಿದೆ ವರವ ಬೇಡೆಂದ ||
ಮತ್ತೆ ವರವೇನೆನಗೆ ರಣದಲಿ |
ಸತ್ತವರು ಜೀವಿಸುವುದೇ ತ |
ನ್ನರ್ತಿಯೆನೆ ಶ್ರೀಹರಿಯು ಮೊಳಗಿದ ಪಾಂಚಜನ್ಯವನು ||
ಇತ್ತರದ ಬಲವೆದ್ದುದಾಕ್ಷಣ |
ಮತ್ತೆ ಧರ್ಮಜ ಭೀಷ್ಮ ಭೀಮರು |
ಕೀರ್ತಿಸಿದರಾ ದ್ರೋಣವಿದುರಾದಿಗಳು ಹರಿಹರರ      ||೪೬೨||

ರಾಗ ಆರಭಿ ಧ್ರುವತಾಳ

ನಾಚುತ ಕುರುಪತಿ ಪುರಕಯ್ದಲು |
ಆ ಚರರಂ ಕಳುಹಿ ಕುಬೇರಂ ||
ಖೇಚರಮಾರ್ಗದೊಳೆಯ್ದಂಬುಜ |
ಲೋಚನನಡಿಗಳಿಗೆರಗಿರ್ದಂ        ||೪೬೩||

ಭಾಮಿನಿ

ಕಂದನಪರಾಧವನು ನೋಡದೆ |
ತಂದೆ ನೀ ದಯದಿಂದ ಕ್ಷಮಿಸಿದೆ |
ಯೆಂದು ಕೈಮುಗಿದೆರಗಿದನು ಗೋವಿಂದನಿಗೆ ಧನಪ ||
ಅರ್ಥ ಯೌವನಗೇಡಿ ತನುಜರು |
ವ್ಯರ್ಥ ಕೇಳಮರೇಂದ್ರ ನಿನ್ನಯ |
ಪಾರ್ಥನಿಂದೀರೇಳು ಜಗದಿ ಸಮರ್ಥರಿಲ್ಲೆಂದ ||೪೬೪||

ವಚನ

ಈ ರೀತಿಯಿಂದ ಸುರ ಹರ ಬ್ರಹ್ಮಾದಿಗಳು ಶ್ರೀ ಕೃಷ್ಣಾರ್ಜುನರಿಗೆ ರೋಷವಿಲ್ಲೆಂದು ಆಣೆಭಾಷೆಯಂ ಕೊಡಲಾಗಿ ಧರ್ಮರಾಯ ಮುಂತಾದವರು ಹರಿಹರರ ಸಭಾಸ್ಥಳಗಳಿಗೆ ಕೈಮುಗಿದು ಬಿನ್ನವಿಸಿದರದೆಂತೆನೆ-

ರಾಗ ಸಾಂಗತ್ಯ ರೂಪಕತಾಳ

ಕಂತುಪಿತನೆ ಸುರಸಂತತಿಸಹಿತಲೆ | ಸಂತೋಷದಿಂದ ನೀ ಬಂದು ||
ಪಙ್ಕ್ತಿಯೂಟಕೆ ದಯಮಾಡಬೇಕೆನುತಲೆ | ಅಂತಕಸುತನು ತಾ ಪೇಳ್ದ  ||೪೬೫||

ಅಳಿಯ ತಂಗಿಯರೆಮ್ಮ ನಿಳಯದೊಳಗೆ ಬಿಟ್ಟು | ಇಳೆಯೊಳು ಮತವಲ್ಲ ಕೇಳು ||
ಕಳುಹು ಚಾರಕರನಿಂದೊಲವಿಂದಲೀಗೆಂದು | ಜಲಜನಾಭನು ಪೇಳೆ ಯಮಜ     ||೪೬೬||

ಚಂದದಿಂದೋಲೆಯ ಬರೆದು ಸಂತಸದಿಂದ | ಲೆಂದು ಕಳುಹೆ ಸಹದೇವ ||
ಬಂದು ರಥದೊಳಭಿಮನ್ಯು ಮಾತೆಯ ಕರೆ | ತಂದನಾ ಕಾಮ್ಯಕವನಕೆ   ||೪೬೭||

ಮಂಟಪಗಳ ರಚಿಸಿದರು ಚಪ್ಪರವ ನೂ | ರೆಂಟು ಯೋಜನವ ಶೃಂಗರಿಸಿ ||
ವೆಂಟಣಿಸುವ ಅಜಭವ ಸುರರೊಡನೆ ವೈ | ಕುಂಠಾಧಿಪನು ನಡೆತಂದ    ||೪೬೮||

ಅಕ್ಕ ದ್ರೌಪದಿಯು ಸುಭದ್ರೆಯರೊಡಗೂಡಿ | ಅಕ್ಷಯಪಾತ್ರೆಯ ಪೂಜೆಯ ಮಾಡಿ ||
ಆ ಕ್ಷಣದೊಳಗಭಿಕರಿಸಿ ಪಾಯಸ ಪಂಚ | ಭಕ್ಷ್ಯಗಳನು ಬಡಿಸಿದರು       ||೪೬೯||

ದ್ವಾರಕೆಯೊಳಗಭಿಮನ್ಯು ಕೋಪವ ತಾಳಿ | ನಾರಿ ಬಾಲಕರ ಗರ್ಜಿಸಿದ ||
ವಾರತೆಯನು ಹರಿಯೊಡನೆ ನಾರದ ಪೇಳೆ | ಕೇಳಿ ಕೈಮುಗಿದಿರ್ದರೆಲ್ಲ   ||೪೭೦||

ನಾಗವಲ್ಲಿಯ ಚೂರ್ಣ ಪೂಗಳನಾಗಲೆ | ವೇಗದಿ ಸುರಿಸಿದರಂದು ||
ರಾಗ ನರ್ತನ ವಾದ್ಯ ಸರ್ವ ಸಂಭ್ರಮದಿಂದ | ಬೇಗ ಓಲಗದೊಳೊಪ್ಪಿದರು        ||೪೭೧||

ವಚನ

ಈ ರೀತಿಯಿಂದ ಹರಿ ಹರ ಬ್ರಹ್ಮಾದಿ ದಿಕ್ಪಾಲ ಮನುಮುನಿಗಳು ಮುಂತಾದ ಮಹಾ ಸಮೂಹಗಳನ್ನು ಷಡ್ರಸಭಕ್ಷ್ಯಾದ್ಯಾದರದಿಂದ ಸತ್ಕರಿಸಿ ವೀಳ್ಯ ಉಡುಗೊರೆಗಳ ಕೊಟ್ಟು ಮಂಗಳಾರತಿಯನೆತ್ತಿದರದೆಂತೆನೆ-

ರಾಗ ಢವಳಾರ ತ್ರಿವುಡೆತಾಳ

ಚೂತ ಪನಸ ತಳಿರುಗಳ ನೂತನದಿಂದಲಿ ರಚಿಸಿ |
ಜಾತಿ ಮಾಣಿಕ್ಯ ಮಂಟಪವ ಶೃಂಗರಿಸಿ |
ಜ್ಯೋತಿರ್ಮಯದಾ ಮಣಿಗಳ ತರಿಸಿ ||
ಗೀತವಪಾಡುತ ಗೀರ್ವಾಣಿಯರತಿ |
ಪ್ರೀತಿಯೊಳು ಹಸೆಗೆ | ಕರೆದರು || ಶೋಭಾನೆ          ||೪೭೨||

ಶ್ರೀಹರಿ ಹರ ಗಿರಿಜೆಯರ ಸರಸಿಜಭರ ಶಾರದೆಯ |
ಸುರಪತಿ ಶಚಿಯರ ಕರೆದು ಕುಳ್ಳಿರಿಸಿ ||
ತರತರ ವಿಧದಾರತಿಗಳ ರಚಿಸಿ |
ತರುಣಿ ಸುಭದ್ರೆ ದ್ರೌಪದಿಯರವೆರಸಿ ||
ಹರುಷದೊಳ್ ಹಸೆಗೆ | ಕರೆದರು || ಶೋಭಾನೆ         ||೪೭೩||

ಸುರಿದ ಹೂವಿನ ಮಳೆಯೊಳಗೆ |
ಸುರದುಂದುಭಿ ನೆಲಮೊಳಗೆ ||
ವರ ಮನುಮುನಿಗಳು ವೇದ ಘೋಷಣಗಳಿಂದ |
ಊರ್ವಶಿಯರು ಸಂಗೀತ ನರ್ತನಗಳ |
ಪರಿಪರಿಯಲಿ ಹಾಡುತ ಪಾಡುತ ||
ಕುರುಜಿನಾರತಿಯ | ಬೆಳಗಿರೆ || ಶೋಭಾನೆ  ||೪೭೪||

ಮಂಗಲ ಶ್ರೀಹರ ಕೋಮಲೆ ಗೌರಿಗೆ |
ಮಂಗಲ ಕಮಲಜ ಸರಸ್ವತಿಗೆ ||
ಮಂಗಲ ಶಚಿ ಸುರಪತಿಗೆ ದಂಪತಿಗಳಿಗೆ |
ಮಂಗಲವೆನುತಾ ಸತಿಯರಾಕ್ಷಣದಲಿ ||
ಮಂಗಲಾರತಿಯ | ಬೆಳಗಿರೆ || ಶೋಭಾನೆ   ||೪೭೫||

ಮಂಗಲ ಶ್ರೀಜಯ ಮಾಧವಗೆ |
ಮಂಗಲ ಉಮೆಪತಿಯಾದವಗೆ ||
ಮಂಗಲ ಶಾರದೆ ವಾಗೀಶ್ವರಗೆ ||
ಮಂಗಲ ಶರನಿಧಿ ಭೀಮೇಶ್ವರಗೆ ||
ಮಂಗಲ ಸರ್ವಸಭಾ ಸಮ್ರಾಜಗೆ ||
ಮಂಗಲಾರತಿಯ | ಬೆಳಗಿರೆ || ಶೋಭಾನೆ   ||೪೭೬||

ಭಾಮಿನಿ

ಅಜಭವರು ಅಮರಾದ್ಯರೆಲ್ಲರು |
ನಿಜಪುರವನಯ್ದಿದರು ಮುನಿಜನ |
ವ್ರಜಗಳತಿಮುದದಿಂದ ತಮ್ಮಾಶ್ರಮಕೆ ತೆರಳಿದರು ||
ನಿಜಕರದಿ ಪಾಂಡವರಿಗಭಯಾ |
ಸ್ಪದವ ಕರುಣಿಸಿ ಕೃಷ್ಣ ಗರುಡ |
ಧ್ವಜವನೇರಿಯೆ ಬಂದ ಯಾದವರೊಡನೆ ದ್ವಾರಕೆಗೆ    ||೪೭೭||

ರಾಗ ಆಹೇರಿ ಝಂಪೆತಾಳ

ನಿಗಮವನು ತಂದವಗೆ ನಗವನುದ್ಧರಿಸಿದಗೆ |
ನೆಗಹಿ ಮೇದಿನಿಯನೆತ್ತಿದ ಧೀರಗೆ ||
ಬಗಿದು ರಕ್ಕಸನುರವ ಬಲಿಯ ಬಂಧಿಸಿದವಗೆ |
ಮಿಗೆ ದುರುಳ ಕ್ಷತ್ರಿಯರ ಮಡುಹಿದವಗೆ ||
ಜಯ ಮಂಗಲಂ | ನಿತ್ಯ | ಶುಭ ಮಂಗಲಂ   ||೪೭೮||

ಮೃಗವ ಸಂಹರಿಸಿದಗೆ ಖಗನ ಪೆಗಲೇರಿದಗೆ |
ಹಗಲು ಪತಿವ್ರತೆಯರನು ಕೂಡಿದವಗೆ ||
ಅಗಲದನವರತ ಸತಿಯಿಚ್ಛೆಯೊಳು ನಡೆದವಗೆ |
ಬಗೆಬಗೆಯ ವಿಶ್ವರೂಪವ ತಾಳ್ದಗೆ ||
ಜಯ ಜಯ ಮಂಗಲಂ | ನಿತ್ಯ | ಶುಭ ಮಂಗಲಂ     ||೪೭೯||

ಮಂಗಲಂ ಮಧುಕೈಟಭಾರಿಗೆ |
ಮಂಗಲಂ ಮಂಗಲಂ ಮುರವೈರಿಗೆ ||
ಮಂಗಲಂ ಮಂಗಲಂ ಮದನಪಿತ ಶ್ರೀಹರಿಗೆ |
ಮಂಗಲಂ ಮಂಗಲಂ ಭೀಮೇಶಗೆ ||
ಜಯ ಮಂಗಲಂ | ನಿತ್ಯ | ಶುಭ ಮಂಗಲಂ   ||೪೮೦||

ಯಕ್ಷಗಾನ ಕೃಷ್ಣಾರ್ಜುನರ ಕಾಳಗ ಮುಗಿದುದು