ಭಾಮಿನಿ

ಸೋಲವಾದುದೆನುತ್ತ ನಿರ್ಜರ |
ಜಾಲ ಕಂಗೆಡಲರಿತದನು ಸುರ |
ಪಾಲ ರೋಷವ ತಾಳಿ ಕುಲಿಶವಪಿಡಿದು ಗರ್ಜಿಸುತ ||
ಕಾಳಗದ ಸನ್ನಾಹದಿಂ ದಿ |
ಕ್ಪಾಲ ಗಂಧರ್ವಾದಿ ಕಿನ್ನರ |
ಪಾಳಯವ ಕರೆಸಲ್ಕೆ ಮಣಿದೆಂದರು ಪರಾಕ್ರಮದಿ || 210 ||

ರಾಗ ಭೈರವಿ ಏಕತಾಳ

ಯಾತಕೆ ಕರೆಸಿದೆ ನಮ್ಮ | ಪುರ | ಕೈತಂದುದೆ ರಿಪುಸ್ತೋಮ ||
ಖಾತಿಯೊಳಿಹೆ ನುಡಿಮರ್ಮ | ಮೌ | ನಾತಿಶಯಗಳೇನಮಮ || 211 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿ ದಿಕ್ಪಾಲಾದಿ ನಿರ್ಜರ | ಜಾಲ ನಾವೀ ಮಾನ ಭಂಗವ ||
ತಾಳಿಕೊಂಡಿಹುದೆಂತು ನಾಕದಿ | ಬಾಳಿ ವ್ಯರ್ಥ || 212 ||

ರಾಗ ಭೈರವಿ ಏಕತಾಳ

ಭಂಗಿಸಿದರೆ ಮಾನವನು | ತ | ದ್ಭಂಗಕೆ ಕಾರಣವೇನು ||
ಕಂಗೆಡದಿರು ಪೇಳಿನ್ನು | ಭಟ | ಪುಂಗವನ್ಯಾರೆಂಬುದನು || 213 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಮ್ಮ ಖಾಂಡವವನವ ದಹಿಸುತ | ನಮ್ಮ ಸಖ ತಕ್ಷಕನ ಸಂತತಿ |
ಯೊಮ್ಮೆ ಕೆಡಿಸಿದರಕಟ ಧೂರ್ತರು | ಹಮ್ಮಿನಿಂದ || 214 ||

ರಾಗ ಭೈರವಿ ಏಕತಾಳ

ಧೂರ್ತ ನಿವಾತಕವಚರೊ | ಸುರ | ಮೊತ್ತದೊಳಿಹ ಘಾತಕರೊ ||
ಪೃಥ್ವಿಯ ದಾನವಭಟರೊ | ಆ | ಪಾರ್ಥಿವರೊಳಗಗ್ಗಳರೊ || 215 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕ್ಷಾತ್ರವಂಶಜ ಮನುಜ ಪಾರ್ಥ ಸ | ಮರ್ಥ ಗೋವಳ ಕೃಷ್ಣರೀರ್ವರ |
ಮಿತ್ರಭಾವದಿ ನಮ್ಮ ಬಾಣಸ | ಧೂರ್ತನಾದ || 216 ||

ರಾಗ ಭೈರವಿ ಏಕತಾಳ

ಮಾನವರೀರ್ವರ ಕೂಡಿ | ಸುರ | ಬಾಣಸ ನೀಪರಿ ಮೋಡಿ ||
ತಾನೆಸಗಿದನೇ ಖೋಡಿ | ಗೀ | ರ್ವಾಣರ ಹಗೆತನಮಾಡಿ || 217 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಗೆಯ ಹಗೆ ತೀರಿಸದೆ ಪೋದರೆ | ನಗದಿಹರೆ ಜನರಿದಕೆ ನಿಮ್ಮಯ
ಬಗೆಯ ಪೇಳಿರೆನಲ್ಕೆ ನುಡಿದನು | ವಿಗಡವರುಣ || 218 ||

ರಾಗ ಕೇತಾರಗೌಳ ಝಂಪೆತಾಳ

ಇನ್ನು ಯೋಚನೆಗಳೇನು | ಧುರಕೆ ಸುರ |
ಸೈನ್ಯವನು ನೆರಹು ನೀನು ||
ವಹ್ನಿಯನು ಮುಳುಗಿಸುವೆನು | ಮಿಕ್ಕವರ |
ಮಣ್ಣಕೂಡಿಸದೆ ಬಿಡೆನು || 219 ||

ಪುಂಡ ಮನುಜಾಧಮರನು | ನಿಷ್ಕರುಣೆ |
ಗೊಂಡು ಪಾಶದೊಳೊಯ್ವೆನು ||
ದಂಡಿಸುವೆನಲ್ಲಿ ನಾನು | ಯೆನುತಲಾ |
ದಂಡಧರ ಗರ್ಜಿಸಿದನು || 220 ||

ತರಣಿ ವಸುರುದ್ರವ್ರಾತ | ಯಕ್ಷಕಿ |
ನ್ನರ ಮಹೋರಗರುಸಹಿತ ||
ಪೊರಟು ಸನ್ನಹರಾಗುತ | ಬರಲು ಪಿತ |
ಗೆರಗಿ ಪೇಳಿದ ಜಯಂತ || 221 ||

ರಾಗ ಭೈರವಿ ಅಷ್ಟತಾಳ

ತಾತಕೇಳೆನ್ನ ಮಾತ | ಸಕಲಸುರ | ವ್ರಾತವನೊಡಗೂಡುತ ||
ನೀ ತೆರಳುವೆಯಾದ | ರಾತುರದಿಂ ಬಹೆ | ಖ್ಯಾತರೊಳನುವರಕೆ || 222 ||

ತುಳಿದು ಧನಂಜಯನ | ಶೌರ್ಯದಿ ಮತ್ತೆ | ಗೆಲಿದು ಧನಂಜಯನ |
ಅಳುಕದೆ ಸೆಣಸುತ್ತ | ನಳಿನದಳಾಕ್ಷನ | ಛಲದಗ್ನಿಯಳಿಸುವೆನು || 223 ||

ಕೊಡು ರಣವೀಳಯವ | ಭೇರಿಯ ಹೊಸು | ಬಿಡುಬಿಡು ಸಂಶಯವ ||
ತಡವೇತಕೆನ್ನುತ | ಪೊಡಮಟ್ಟ ಕುವರನ | ಪಿಡಿದಪ್ಪುತೆಂದನಿಂದ್ರ || 224 ||

ಭಾಮಿನಿ

ಬಾಲನೀ ನಮ್ಮೊಡನೆ ಬರುವೆಯ |
ಕಾಳಗಕೆ ಲೇಸೆನುತ ಸಂತಸ |
ತಾಳಿ ಶಸ್ತ್ರಾಸ್ತ್ರಗಳ ಸಂದಣಿಸುತ್ತ ಶೀಘ್ರದಲಿ ||
ಪೇಳಲೇನಿನ್ನಾ ಮಹಾಗಜ |
ಮೇಳವಿಸೆ ಸಂಭ್ರಮದ ಘೋಷದ |
ಮೇಲೆ ಜಯರವವೆಸೆಯೆ ಸಮರಕೆ ಪೊರಟ ಪುರುಹೂತ || 225 ||

ರಾಗ ಮಟ್ಟೆತಾಳ ಪಂಚಾಗತಿ

ಧರಣಿಪತಿಯೆ ಲಾಲಿಸಯ್ಯ | ತ್ವರಿತದಿಂದ ನಿರ್ಜರೇಂದ್ರ |
ಕರಿಯನಡರಿ ಕರದಿವಜ್ರ | ಧರಿಸೆ ತವಕದಿ ||
ತರಣಿಜಾತ ಮುಖ್ಯ ದಿ | ಗ್ವರರು ಸುರರು ಸಿದ್ಧಸಾಧ್ಯ |
ನೆರವಿ ಪೊರಟುದೇನನೆಂಬೆ | ಶರಧಿ ಘೋಷದಿ || 226 ||

ನಡೆವ ಪಡೆಯ ಪದದ ಹತಿಗೆ | ಪೊಡವಿ ಕುಸಿದು ಬಳಿಕ ಫಣಿಯ |
ಪೆಡೆಗೆ ವೇದನೆಗಳು ಪುಟ್ಟಿ | ತೊಡನೆ ಬಾಗಲು ||
ಎಡೆಯ ಬಿಡದೆ ಗುಡುಗುಡಿಸುತ | ದುಡುಕಿ ಮಿಡುಕಿ ಬರಲು ನೋಡಿ |
ಜಡಜನಾಭನೆಂದ ನರಗೆ | ದಢವ ತಿಳಿಯಲು || 227 ||

ರಾಗ ಕಾಂಭೋಜಿ ಏಕತಾಳ

ಪಾರ್ಥ ಬಲು ಸಮರ್ಥ ನೋಡು | ಗೋತ್ರವೈರಿ ಬರವ ||
ಮತ್ತ ಗಜವನೇರಿ ಮೆರೆವ | ಮತ್ತತನದುಬ್ಬರವ || 228 ||

ವತ್ರಖಳನ ತರಿದ ವಜ್ರ | ವೆತ್ತಿ ಕರದಿ ತೋರ್ವ ||
ಭತ್ಯವಹ್ನಿಗಾಗಿ ನಮ್ಮೊ | ಳೊತ್ತಿ ಧುರವ ಗೈವ || 229 ||

ತರಣಿಜಾತನಾತ ಖ್ಯಾತ | ವರುಣನೀತ ಮುಂದೆ ||
ತರಣಿ ವಸು ರುದ್ರಾದಿ ಸರ್ವ | ನೆರವಿಯಿಹುದು ಹಿಂದೆ || 230 ||

ಯುದ್ಧ ಬದ್ಧವಹುದೆ ಪೇಳು | ಸಿದ್ಧರಿವರಿನ್ನೈಸೆ ||
ಸಾಧ್ಯವಹುದೆಯೆನಲು ನುಡಿದ | ತಿದ್ದಿ ನರನು ಮಾಸೆ || 231 ||

ಭಾಮಿನಿ

ಬೆದರುವೆನೆ ಕದನದಲಿ ಸುರಪಗೆ |
ಸದಮಲಾತ್ಮಕ ನಿನ್ನ ದಯವಿರೆ |
ತ್ರಿದಶಪುರಕನಿಬರನು ಮರಳಿಸುವೆನು ಶರಾಗ್ರದಲಿ ||
ವಿದಿತವಿದು ನೋಡೆನುತ ಗಾಂಡೀ |
ವದ ನಿನಾದವನೆಸಗೆ ಹರಿ ಮೊಳ |
ಗಿದನು ಶಂಖವನನಿತರೊಳಗಿದಿರಾಯ್ತು ರಿಪುನಿವಹ || 232 ||

ರಾಗ ಮಾರವಿ ಏಕತಾಳ

ಎಸೆವ ಮಹಾಂಬುಧಿ | ಮಸಗಿದ ತೆರ ಸುರ | ವಿಸರ ಮುಸುಕಿತಖಿಲ ||
ಅಸುರಾರಿಗೆ ನರ | ಗೆಸೆದನು ಪಸರಿಸಿ | ಪೊಸಮಸೆದಲಗುಗಳ || 233 ||

ಸಿಡಿದೆದ್ದನು ದಢ | ಗೆಡದೆ ಧನಂಜಯ | ವಡಬಾನಲನಂತೆ ||
ಎಡ ಬಲದೊಳಗಿಹ | ಬಡ ಸುರಗಡಣವ | ಬಡಿದೋಡಿಸೆಪಿಂತೆ || 234 ||

ಕಿಡಿಗೆದರುತ ಗುಡು | ಗುಡಿಸುತೊಡನೆ ಮುಂ | ದುಡುಕುತ ಲಡಿಯಿಡುತ ||
ನಡೆದು ತಡೆದು ನರ | ಗೆಡೆಯಗೊಡದೆ ಬಿ | ಲ್ಪಿಡಿದೆಂದ ಜಯಂತ || 235 ||

ನಿಲುನಿಲು ಚಲಿಸದೆ | ಕೊಳುಗುಳಕೆಳಸದೆ | ಸುಳಿವೆ ನುಸುಳಿ ವ್ಯರ್ಥ ||
ಬಲವಗೆಲುವ ನಿ | ನ್ನೊಳವ ತಿಳಿವ ಯೆನ | ಗಳುಕದಿರೆಲೆ ಪಾರ್ಥ || 236 ||

ಪರಿಕಿಸಿದರೆ ತರ | ಳರ ತೆರನಿಹೆ ಧುರ | ವರಿತವರಂದದಲಿ ||
ಕರದಿ ಶರವಪಿಡಿ | ದಿರುವವ ನೀನ್ಯಾ | ರರುಹೈ ತ್ವರಿತದಲಿ || 237 ||

ಅಮರತ್ವದೊಳನು | ಪು ನಾಕದೊಳಿಹ | ಸುಮನಸಪತಿ ಸುತನು ||
ಕುಮತಿನಿಚಯತಮ | ದ್ಯುಮಣಿ ಜಯಂತನು | ಗಮನಿಸು ನುಡಿಗಳನು || 238 ||

ಬಾನುವಿನಂದದಿ | ನೀನಿದ್ದರೆ ಸ್ವ | ರ್ಭಾನುವೆ ನಾನರಿಯಾ ||
ಸೇನೆ ಸಹಿತ ಪಿತ | ತಾನೈತಂದ ವಿ | ಧಾನವ ನುಡಿತ್ವರ್ಯ || 239 ||

ಘನ ಖಾಂಡವ ವನ | ವನಿಮಿಷಗಣಕಿಹು | ದೆಣಿಸದನಲ ದಹಿಸಿ ||
ಕೆಣಕಿ ಸೆಣಸಲನು | ವನುಗೈದನೆ ನಿ | ನ್ನನು ಗಣಿಸೆವು ಸಹಸಿ || 240 ||

ರಾಗ ಕಾಂಭೋಜಿ ಝಂಪೆತಾಳ

ಭಳಿರೆ ಮೆಚ್ಚಿದೆ ನಿನಗೆ | ಬಲಸಹಿತ ಪಿತನೊಡನೆ |
ಕೊಳುಗುಳಕೆ ಬಂದೆಯಾ ಹೀಗೆ ||
ಒಲಿದ ಶರಣಾಗತರ | ಸಲಹುವುದೆ ಪಾರ್ಥಿವರ |
ಕುಲಧರ್ಮದಂತೆ ನಡೆದೆ ಮಿಗೆ || 241 ||

ನಮ್ಮ ಕಾಂತಾರವಿದು | ನಮ್ಮ ಬಾಣಸಿಗನಿವ |
ನಮ್ಮೊಡನೆ ತಿಳಿಯದೀ ತೆರದಿ ||
ದುರ್ಮತಿಗಳಂತೆ ನೀ | ಸಮ್ಮತಿಸಿ ಶಿಖಿಯ ಬಗೆ |
ನೆಮ್ಮದಿಯೊಳುಣಿಸಿತ್ತೆ ಮುದದಿ || 242 ||

ಕರಿಪುರದ ಸಾಮ್ರಾಜ್ಯ | ಕಿರುವ ವನವಾಕ್ರಮಿಸಿ |
ಉರಗ ಸಂತತಿಯ ಪೋಷಿಸುತ ||
ತೊರೆದು ಬಾಣಸನ ಮನ | ದಿರವ ನೆರವೇರಿಸದೆ |
ಧುರಕೆ ಬಂದುದು ನಿಮ್ಮಸ್ವಾರ್ಥ || 243 ||

ಸ್ವಾರ್ಥನಿಸ್ವಾರ್ಥವಿ | ತ್ಯರ್ಥವೆಸಗುವೆ ಕ್ಷಣದಿ |
ಶಸ್ತ್ರಾಸ್ತ್ರ ಮುಖದಿ ನೋಡೆನುತ ||
ಗೋತ್ರಾರಿಸುತನು ಖತಿ | ವೆತ್ತು ಶರವೆಚ್ಚಡದ |
ಕತ್ತರಿಸುತೆಂದನಾಪಾರ್ಥ || 244 ||

ಜಾಣತನವ್ಯಾಕೆ ಗೀ | ರ್ವಾಣನೋ ಪೇಳು ದಢ |
ಬಾಣನೋ ನೋಳ್ಪೆನಿದೊ ಪಿಡಿದ ||
ಸಾಣೆಯಲಗಿಗೆ ನಿನ್ನ | ಶೋಣಿತವ ಕೊಡುಸುರಪ |
ನಾಣೆ ಹಿಮ್ಮೆಟ್ಟಲೆಂದೆಸೆದ || 245 ||

ರಾಗ ಭೈರವಿ ಏಕತಾಳ

ಭಳಿರೆ ಪರಾಕ್ರಮಿಯೆನುತ | ಬರು | ವಲಗನು ಕಡಿದು ಜಯಂತ ||
ಮುಳಿದೆಚ್ಚನು ಶರವ್ರಾತ | ಧರೆ | ಗಿಳುಹಿದನಾಕಲಿಪಾರ್ಥ || 246 ||

ಘೋರವಿಷದ ನಾಗಾಸ್ತ್ರ | ಸುರ | ವೀರನೆಸೆಯೆ ನರನರಿತ ||
ಭೂರಿ ಜವದಿ ಗರುಡಾಸ್ತ್ರ | ಬಿಡೆ | ಹಾರಿಸಿದುದು ಖಂಡಿಸುತ || 247 ||

ಮುಸುಕಿದ ತಿಮಿರದೊಳಾತ | ಬೆಳ | ಗಿಸಿದನು ದ್ಯುಮಣಿಯೊಳೀತ ||
ಪಸರಿಸೆ ಮೇಘವ ತ್ವರಿತ | ತೊಲ | ಗಿಸಿದನು ಜಂಝೂವಾತ || 248 ||

ಪರಿಪರಿ ಸರಳಾಟದೊಳು | ಧುರ | ಮೆರೆದಿರೆ ಬಲು ಖಾತಿಯೊಳು ||
ಕೆರಳಿದ ಹರಿಯಂದದೊಳು | ಹೂಂ | ಕರಿಸಿ ಧನಂಜಯ ಮಿಗಿಲು || 249 ||

ಕ್ಷಾತ್ರತನವ ನೋಡೆಂದು | ಘನ | ಶಕ್ತಿಯನೊಂದನು ತೆಗೆದು ||
ಸತ್ವದೊಳೆಸೆಯಲು ಸಿಡಿದು | ಶಚಿ | ಪುತ್ರನೊರಗೆ ಮೈಮರೆದು || 250 ||

ಭಾಮಿನಿ

ಕ್ಷೋಣಿಪತಿ ಕೇಳೊಡನೆ ಸುರಭಟ |
ಶ್ರೇಣಿ ಕವಿದೆಸೆಯುತ್ತಿರಲು ತ |
ದ್ಬಾಣಗಳ ಕಡಿಕಡಿದು ಮಗುಳೆಚ್ಚೊರಸಿ ಬಿಡದೆಸೆದು ||
ಏಣ ನಿವಹವ ತರಿವ ಪುಲಿವೋ |
ಲ್ಕಾಣಿಸುತ್ತಿರೆ ಕೊಬ್ಬಿರುವ ಕಾ |
ಡ್ಗೋಣನಂತಬ್ಧೀಶನಿದಿರಾಗಲ್ಕೆ ಹರಿ ತಡೆದ || 251 ||

ರಾಗ ಭೈರವಿ ಅಷ್ಟತಾಳ

ಧೀರತೆಯಿಹುದೆ ಪೇಳು | ಸಂಗರವನ್ನು ಹಾರೈಸದಿರು ಯೆನ್ನೊಳು ||
ಸಾರತ್ತಕೆಲಕೆ ಬ | ಲಾರಿಯ ತ್ವರಿತದಿ | ತೋರೆನಲಿಂತೆಂದನು || 252 ||

ಯಾರಾದರೇನಿಹುದು | ಯುದ್ಧದಿ ಮಮ | ಕಾರವಿಹುದೆ ತಡೆದು ||
ವಾರಿಧಿಯಧಿಪನೆಂ | ಬಾ ರೀತಿಯರಿಯದೆ | ಭೂರಿ ಗರ್ವವೆ ನಿನಗೆ || 253 ||

ಮತ್ತನಾಗಿಹೆ ವರುಣ | ನಿನ್ನೊಡನೆ ಯ | ಥಾರ್ಥಕಿಲ್ಲವು ಕರುಣ ||
ಗೊತ್ರಾರಿ ನುಡಿಯಿಂದ | ವ್ಯರ್ಥವೆಮ್ಮಲಿ ಧುರ | ಕಿತ್ತ ಬಂದುದೆ ಕಾರಣ || 254 ||

ತ್ರಿದಶಪತಿಯ ವೈರವ | ಪಿಡಿದ ವಹ್ನಿ | ಚದುರ ಸಾಧಿಸಿ ಸ್ವಾರ್ಥವ ||
ಕದನವನೆಸಗುವ | ಹದನಗೈದನು ಬಿಡು | ಬೆದರೆವು ನಾವಿದಕೆ || 255 ||

ಶರಣಾಗತರ ಪೊರೆವ | ಬಿರುದು ನಮ್ಮ | ದಿರೆ ತಿಳಿಯನೆ ಮಘವ ||
ಕರಿಪುರದರಸರ | ಧರೆಯನಾಕ್ರಮಿಸಿದ | ಸುರರಿಗೆಲ್ಲಿಯ ಗೌರವ || 256 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆ ಧನಂಜಯಗೀಧನಂಜಯ | ಮೈದುನನು ನೀನೊರ್ವಕೂಡಿದೆ |
ಬಾಧೆ ನಮಗಾಯ್ತಾತೆರದಿ ವನ | ಹೋದ ವಿಧದಿ || 257 ||

ಮತ್ತರಾದುದೆ ಕಾರಣವು ನಯ | ವೆತ್ತಿ ಹಿತವರುಹಿದರೆ ಕೇಳದ |
ಧೂರ್ತರಿಗೆ ನಾನಿರುವೆನೈರಿಪು | ಮತ್ಯುವೆನಿಸಿ || 258 ||

ಮತ್ಯು ನೀ ದಿಟವಾಗಿರಲು | ಮರ್ತ್ಯರಿಗೆ ಭಯಬೇಗೆಯಲ್ಲದೆ |
ವ್ಯರ್ಥವೀ ನುಡಿ ದಿವಿಜರಿಗೆ ತಣ | ದರ್ಥವಹುದು || 259 ||

ಕೊಬ್ಬಿ ಮಾತಾಡಿದರೆ ಕ್ಷಣ ನಿ | ನ್ನುಬ್ಬಟೆಯ ಮುರಿಯದಿರೆ ಬರಲಿ |
ನ್ನೊಬ್ಬನಿಂದ್ರನು ನೋಳ್ಪೆನಾಜಯ | ದುಬ್ಬರವನು || 260 ||

ಹರಿಯ ನುಡಿಯರಿತಾ ಜಲಾಧಿಪ | ಕೆರಳಿ ಶರವರುಷವನು ಸುರಿಸಲು |
ತರಿದು ಮೆರೆದನು ತ್ವರಿತದಿಂದಲಿ | ಪರಮಪುರುಷ || 261 ||

ಪಿರಿದು ಹಸಿದ ಮಗೇಂದ್ರನಂ ತೈ | ತರಲು ಶರಭನತೆರದಿ ತರುಬುತ |
ವರುಣನನು ಬರಿಗೈದು ಕಳುಹಿದ | ಸರಸಿಜಾಕ್ಷ || 262 ||

ಕಂದ

ಕಂಡಾಕ್ಷಣ ಚಿತ್ತದಿ ಖತಿ |
ಗೊಂಡಾರ್ಭಟಿಸುತ ಬಲಾನ್ವಿತಂ ಘನಕಾಯಂ ||
ದಂಡಧರಂ ತಾಪರಿಕಿಸಿ |
ಗಾಂಡೀವಿಯೊಳೆಂದನಾಗ ಹೂಂಕರಿಸುತ್ತಂ || 263 ||

ರಾಗ ಮಟ್ಟೆತಾಳ

ಧಿರುರೆ ಪಾಂಡು | ತರಳ ಪಾರ್ಥ | ಧುರಕೆ ನಿಲ್ಲೆಲಾ ||
ಪರಿಕಿಸಿದೆನು | ಪರಮಶೌರ್ಯ | ಭರಿತನಾದೆಲಾ || 264 ||

ಮಿತ್ರಸುತ ಪ | ವಿತ್ರನೆಂಬ | ಕೀರ್ತಿಯುಳಿಸಿಕೋ ||
ದೈತ್ಯರಂತೆ | ವರ್ತಿಸಿದರೆ | ವ್ಯರ್ಥನೋಡಿಕೋ || 265 ||

ನ್ಯಾಯಮಾರ್ಗ | ಧ್ಯೇಯ ಧರ್ಮ | ರಾಯನೆನಗಿರೆ ||
ಹೇಯ ಕಾರ್ಯ | ಗೈಯ್ಯಲವರ | ನೋಯಿಸುವೆ ಖರೆ || 266 ||

ನೀತಿತೊರೆದು | ದೇತರಿಂದ | ಖ್ಯಾತ ಪೇಳೆಲಾ ||
ರೀತಿ ತಪ್ಪಿ | ಮಾತನಾಡೆ | ಘಾತವಹುದೆಲಾ || 267 ||

ರಾಗ ಕೇತಾರಗೌಳ ಝಂಪೆತಾಳ

ಸುರರ ವನವನು ಕೆಡಿಸಿದೆ | ಶಿಖಿಯಿಂದ | ಮರುಳಾದೆ ನೀನರಿಯದೆ ||
ಭರದೊಳಾಶ್ರಯ ನೀಡಿದೆ | ಧನುಶರವ | ಧರಿಸಿ ಸಂಗರಕೆ ನಿಂದೆ || 268 ||

ಶರಣರನು ಪೊರೆವ ಬಿರುದ | ತಾಳಿರ್ಪ | ಕರಿಪುರದ ಸಾಮ್ರಾಜ್ಯದ ||
ವರವಿಪಿನವಾಕ್ರಮಿಸಿದ | ನೀವೆ ಬಂ | ದಿರಿ ಧುರಕೆ ಗರ್ವದಿಂದ || 269 ||

ತಾತ ಪುರುಹೂತನ ಹಗೆ | ನೀತಿಯೇ | ಖ್ಯಾತಿಯೇ ಲೋಕದೊಳಗೆ ||
ಮಾತುಳಾಂತಕನು ಹೀಗೆ | ಬೋಧಿಪನೆ | ಯಾತಕೀ ಹಟವು ನಿನಗೆ || 270 ||

ತಪ್ಪಿದರೆ ನ್ಯಾಯಗಳನು | ಬಳಿಕ ನ | ಮ್ಮಪ್ಪನಾದರು ಗಣಿಸೆನು ||
ಬಪ್ಪುದೆಲ್ಲವನೋಳ್ಪೆನು | ಹರಿದಯದಿ | ದರ್ಪವನು ಮೆರೆಸದಿರೆನು || 271 ||

ಛಲಗಳಿರಲೀಪರಿಯೊಳು | ನಿನ್ನಧಟ | ನಳಿಸುವೆನು ಶರ ಮುಖದೊಳು ||
ಸಲುಗೆಯಾದುದೆ ನುಡಿಗಳು | ದಂಡಧರ | ನಲಿಬೇಡ ವಿಕ್ರಮಗಳು || 272 ||

ಯಾಗಗಳ ನರರು ರಚಿಸಿ | ಆ ಹವಿ | ರ್ಭಾಗ ನೀಡಲು ಭುಂಜಿಸಿ ||
ಆ ಗಣಿಕೆಯರಲಿ ಸುಖಿಸಿ | ಇರಲೇಸು | ಸಾಗದೈ ಸಮರವೆಳಸಿ || 273 ||

ರಾಗ ಮಾರವಿ ಏಕತಾಳ

ಬಿಡು ಬಿಡು ನಿನ್ನಯ | ಬಡಿವಾರಂಗಳ | ತೊಡು ಶರ ತಡವೇಕೆ ||
ದಢ ಕಡೆಗಾಹುದು | ತಡೆಯೆನುತಲಿ ಕಣೆ | ಬಿಡೆ ರವಿಜನು ಕ್ಷಣಕೆ || 274 ||

ಬೆಚ್ಚದೆ ಬೆದರದೆ | ಕೊಚ್ಚುತೊಡನೆ ಖತಿ | ಹೆಚ್ಚಿ ಧನಂಜಯನು ||
ಕಿಚ್ಚನುಗುಳಿ ಮಗು | ಳೆಚ್ಚನು ಸರಳಿಲಿ | ಮುಚ್ಚಿದನಿನಜನನು || 275 ||

ಮುಸುಕಿದ ಸರಳನು | ಕುಸುರಿದರಿದು ಪೊಸ | ವಿಶಿಖವಿಸರವೆಸೆದ ||
ಅಸಮಬಲದಿ ಪುಡಿ | ಯೆಸಗುತ ನಿಮಿಷದಿ | ಶಶಿವಂಶಜ ಮೆರೆದ || 276 ||

ಕಂಡತಿ ರೌದ್ರದಿ | ದಂಡವನೆಗಹಲು | ಚಂಡಪರಾಕ್ರಮದಿ ||
ಗಾಂಡೀವಿಯು ಮುಂ | ಕೊಂಡು ಸೆಳೆದು ಭೂ | ಮಂಡಲಕಿಡೆ ಭರದಿ || 277 ||

ನೇಸರಣುಗ ನಿಜ | ಪಾಶವ ಬೀಸುತ | ಘೋಷದೊಳಿರೆ ಕೆರಳಿ ||
ವಾಸವಸುತನೆಸೆ | ದಾ ಶಕ್ತಿಗೆ ಜವ | ತಾ ಸರಿದನು ಮರಳಿ || 278 ||

ವಾರ್ಧಕ

ಇಂದು ಕುಲತಿಲಕ ಕೇಳಾಕ್ಷಣದಿ ಧನದ ರವಿ |
ನಂದನಾಶುಗನಿಋತಿ ವರುಣಾದಿ ಯಕ್ಷಸುರ |
ಗಂಧರ್ವ ಬಲಸಹಿತ ಮುಸುಕುತ ಧನಂಜಯನ ಸುರಿಸಿದರ್ಸರಳ ಮಳೆಯ ||
ಕುಂದದತಿ ಧೈರ್ಯದಿಂ ನಿಋತಿಯ ಸರಿಸಿಯಮ |
ನಂದಮಂ ಕೆಡಿಸಿ ಮಿಗೆ ವರುಣನಂ ಬರಿಗೈದು |
ಕಂದಿಸಿ ಧನೇಶನಧಟಂ ಸಕಲಸೇನೆಯಂ ನರನೊರಸಿ ಬೊಬ್ಬಿರಿದನು || 279 ||

ಭಾಮಿನಿ

ಕಲಕಿ ರಿಪುಬಲ ಜಲಧಿಯನು ನರ |
ತುಳುಕಿದನು ಕೆಂಗೋಲ ಮಳೆಯಲಿ |
ಹಿಳುಕ ತಾಳದೆ ಕಂಡಕಡೆಯಲಿ ಸರಿಯೆ ಪರಿಕಿಸುತ ||
ಆಳುಕದಭಯವನಿತ್ತು ಗಜವನು |
ಬಳಿಸರಿಸಿ ತಿವಿದಂಕುಶದಿ ಖತಿ |
ಯಲಿ ಬಳಿಕ ಬಲವೈರಿ ಕಷ್ಣಾರ್ಜುನರಿಗಿಂತೆಂದ || 280 ||