ರಾಗ ಸುರುಟಿ ಆದಿತಾಳ

ಪಾರ್ಥ ಮಹಾವೀರ | ಸದ್ಗುಣ | ಕೀರ್ತಿಭರಿತ ಚದುರ ||
ಸ್ವಾರ್ಥತೆಯಿಂದ ಯ | ಥಾರ್ಥವ ಪೇಳದ |
ಧೂರ್ತತನವ ಕ್ಷಮಿ | ಸುತ್ತಲಿ ಲಾಲಿಸು || ಪಲ್ಲ ||

ತಂದೆ ಮಕ್ಕಳೊಳಗೆ | ಜಗಳವ | ತಂದಿಕ್ಕುವ ಬಗೆಗೆ ||
ಚಾಡಿಗ | ಳಂದವಲ್ಲ ಹೀಗೆ | ಆ ದೇ | ವೇಂದ್ರನೊಡೆಯನೆನಗೆ ||
ಆತನೊ | ಳೆಂದಿಗು ವೈರವ | ಹೊಂದ ಬಹುದೆ ವಿಧಿ |
ಬಂದುದಹಿತ ಮನ | ದಿಂದ ಮನಕೆ ನಿಜ || 149 ||

ಈ ಧರೆಯಲಿ ಹಿಂದೆ | ಶ್ವೇತಕಿ | ಗೈದಕ್ರತುವ ಬಿಡದೆ ||
ವತ್ಸರ | ಹೋದುದು ಶತಕಳೆದೇ | ಜೀರ್ಣಿಸ | ದಾದೆ ಹವಿಯ ಸವಿದೇ ||
ಬಾಧಿಪ  | ವ್ಯಾಧಿಯದಕೆ ವಾ | ಣೀಧವ ಸೂಚಿಸೆ |
ಸಾಧಿಸುತೌಷಧಿ | ಗೈದಿದೆನಿಲ್ಲಿಗೆ || 150 ||

ಉರಿಸಿದೆ ವನವಿತ್ತ | ವಾಸಿಸು | ತಿರಲು ಸುರಪಮಿತ್ರ ||
ತಕ್ಷಕ | ತರಳನು ಕುಲಸಹಿತ | ಆತನ | ಪೊರೆಯಲು ಮೇಘರಥ ||
ತಕ್ಷಣ | ಸುರಿಸೆ ಜಲವ ಬಾ | ಯ್ಬರಿದಾಗಿಹುದದ |
ನರಿತೀ ಕಾರ್ಯಾ | ಚರಣೆಯನೆಸಗಿದೆ || 151 ||

ವಾರ್ಧಕ

ಅದರಿಂದಲೀ ವನವನುದರಗ್ರಾಸಕೆ ನೀಡ |
ಲಿದಕೊ ಕೊಳ್ಳೆನುತ ಕಿಡಿಗೆದರೆ ಬಿಳಿಗುದುರೆ ನಾ |
ಲ್ಕುದಿಸಿ ಮೇಲೊದಗೆ ರಥ ಗಾಂಡೀವ ಚಾಪವಕ್ಷಯಶರ ನಿಷಂಗ ಸಹಿತ ||
ಮೊದಲವಂ ನರಗಿತ್ತು ಮುದದಿ ಕೌಮೋದಕೀ |
ಗದೆ ರಥಗಳಂ ಹರಿಯ ಪದಕರ್ಪಿಸುತ ಮನ್ನಿ |
ಸಿದ ಶಿಖಿಯ ಪರಿಕಿಸುತಲಧಿಕ ಹರುಷದಿ ಪಾರ್ಥ ಮದನಪಿತಗೆಂದ ಮಣಿದು || 152 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏತಕಿನ್ನನುಮಾನ ದುನುಜಾ | ರಾತಿ ಬಿಡು ಬೆದರುವೆನೆ ಸಮರಕೆ |
ವೀತಿಹೋತ್ರನು ಕರುಣಿಸಿದ ಭಾ | ಗ್ಯಾತಿಶಯದಿ || 153 ||

ನಿನ್ನ ಕರುಣಕಟಾಕ್ಷಿವಿರೆ ಸಂ | ಪನ್ನ ಸುರಪನ ಗೆಲಿದು ಬಾಣಸ |
ಗಿನ್ನು ಬಾಣಸಮಾಳ್ಪೆ ಖಾಂಡವ | ವನ್ನು ಕ್ಷಣದಿ || 154 ||

ಬರಲಿ ತ್ರಿದಶವ್ರಾತದಿದಿರಲಿ | ಮೆರೆಸುವೆನು ಮಮಸತ್ವವನು ನೀ |
ಪರಿಕಿಸೆನುತಲಿ ಪೌರುಷದಿ ನರ | ನಿರಲು ನೋಡಿ || 155 ||

ಲೇಸು ಮೆಚ್ಚಿದೆ ನಿನಗೆನುತ ನಗೆ | ಸೂಸಿ ಬರಸೆಳೆದಪ್ಪಿದನು ಸಂ |
ತೋಷದಿಂ ಫಲುಗುಣನ ತವಕದಿ | ವಾಸುದೇವ || 156 ||

ಭಾಮಿನಿ

ಏರಿದರು ರಥವೆರಡನಿರ್ವರು |
ಸಾರಿದರು ತದ್ವನದ ಸನಿಹಕೆ |
ಸೇರಿದರು ಶೀಘ್ರದಲಿ ಧನುಶರವಿಡಿದು ಬೊಬ್ಬಿರಿದು ||
ವೀರ ಪಾರ್ಥನು ಬಿಲ್ದನಿಯ ಝೇಂ |
ಕಾರವೆಸಗಲು ಪಾಂಚಜನ್ಯವ |
ಶ್ರೀ ರಮಣ ಮೊಳಗಿಸುತಲಿರಲಿಂತೆಂದನಾ ವಹ್ನಿ || 157 ||

ರಾಗ ಕಲ್ಯಾಣಿ ಅಷ್ಟತಾಳ

ಸುರಪನಂದನ ಪಾಲಿಸು | ಬಿನ್ನಪವೊಂದ | ಕರುಣದೊಳವ ಧರಿಸು ||
ಮೆರೆವ ವಿಪಿನದೊ | ಳಿರುವ ಖಗಮಗ | ಉರಗ ಸುರ ದನುಜಾದಿ ಜೀವರ |
ಸರಿಯದಂದದಿ | ತರುಬಿ ಶರರದಲಿ | ಭರದಿಕಾಯ್ದರೆ | ಪರಮ ಭಾಗ್ಯವು || 158 ||

ಬೇರೆ ಬೇರೆಡೆಗೆ ನಿಂದು | ನೀವಿರ್ವರು | ಪೌರುಷವನು ತೋರ್ಪುದು ||
ಭೂರಿಜತನದಿ | ತೋರುತಿಹ ಕಾಂ | ತಾರವೆನಗಾ | ಹಾರ ವಿತ್ತು ಮ |
ನೋರಥವ ನೆರ | ವೇರಿಸೆನಲಾ | ಧೀರ ಪಾಂಡು ಕು | ಮಾರನೆಂದನು || 159 ||

ರಾಗ ಭೈರವಿ ಏಕತಾಳ

ಕ್ಲೇಶವಿದೇತಕೆ ವ್ಯರ್ಥ | ಬಹು | ಲೇಸು ಸಮಗ್ರಾತಿಥ್ಯ ||
ವಾಸಿಪಜೀವಿ ಸಮಸ್ತ | ವರ ವಾಸವನುಪವನ ಸಹಿತ || 160 ||

ನೀಡುವೆ ಶರಧಾರೆಯಲಿ | ಸುಪು | ರೋಡಾಶವಿದೆಸಗುತಲಿ ||
ಗಾಢದಿ ಸಮಿಧಾಜ್ಯದಲಿ | ಮನ | ಮಾಡುತ ಕೊಂಬುದು ತೆರಳಿ || 161 ||

ಎನುತಭಿಮಂತ್ರಿಸುತೆತ್ತಿ | ಉರಿ | ಗಣೆಯನು ಬಿಡಲದು ಮುತ್ತಿ ||
ಕ್ಷಣದಲಿ ಹತ್ತಿತು ಹೊತ್ತಿ | ಹೊಗೆ | ಯನುಸೂಸುತ ವನಸುತ್ತಿ || 162 ||

ಭಾಮಿನಿ

ಧಗ ಧಗಿಸಿ ದಳ್ಳುರಿಯ ಕಾರುತ |
ಭುಗು ಭುಗಿಲು ಭುಗಿಲೆಂಬ ತೆರದಲಿ |
ಜಗವರಿಯೆ ಬಿಡುಗಣ್ಣರೊಡೆಯನ ವನವನುರಿ ಸುಡಲು ||
ಅಗಿಲುಚಂದನ ವರ ಕದಂಬಾ |
ದಿಗಳು ಭಸ್ಮಗಳಾಗೆ ಕಳಭಾ |
ದಿಗಳು ಮಡಿಯಲು ಶುಕ ಪಿಕಾದಿಗಳೊರಗೆ ಧರಣಿಯಲಿ || 163 ||

ಕಂದ

ಭರದಿಂ ಖಾಂಡವ ವನವಂ |
ಉರುಹಲ್ ದಹನಂ ವಿಮಾನದೊಳ್ ಸುರರೆಲ್ಲರ್ ||
ನೆರೆದೀಕ್ಷಿಸಿ ಹರಿಪಾರ್ಥರ |
ಪರಿಯರಿತೊಡನಾ ಬಿಡೌಜಗರುಹಲ್ ಸರಿದರ್ || 164 ||

ರಾಗ ಕಾಂಭೋಜಿ ಝಂಪೆತಾಳ

ಇತ್ತ ವಿಭವದೊಳಮರ | ಮೊತ್ತದಿಂ ನಾಕೇಶ |
ನಿತ್ತನೋಲಗವ ಸಂಭ್ರಮದಿ ||
ಮತ್ತಲ್ಲಿ ಮೇನಕೆ ತಿ | ಲೋತ್ತಮೆಯರುತ್ತಮದ |
ನತ್ಯಗತಿ ಮೆರೆಯಲುತ್ಸಹದಿ || 165 ||

ಎಡಬಲದಿ ಗಾಯಕರು | ಬಿಡದೆ ನಿಂದಿರಲು ಮುಂ |
ಗಡೆಯೊಳಗೆ ಸುರರು ಸೂರಿಗಳು ||
ಸಡಗರದಿ ಕುಳಿತಿರಲು | ಬೆಡಗಿನ ಬಿಡೌಜ ಮಿಗೆ |
ನುಡಿದನಚ್ಚರಿಯೊಳೆಲ್ಲರೊಳು || 166 ||

ಏನಿದೇನಿದು ಸ್ವರ್ಗ | ಕಾನಿಸಿತು ಬಲುಹೊಗೆಯು |
ತಾ ನಿಧಾನಿಸದೆ ರಭಸದಲಿ ||
ದಾನವ ನಿವಾತಕವ | ಚಾನುಜಾದಿಗಳ ಮಾ |
ಯಾನ ವೀನತೆಯೊ ವೈರದಲಿ || 167 ||

ಹಗೆಗಳಾರೆಂಬುದಿದು | ಹೊಗದು ಮನಸಿಗೆ ಯೆನುತ |
ಉಗಿಯೆ ಕಿಡಿ ಸಾವಿರಾಲಿಯಲಿ ||
ಮೊಗದ ದುಗುಡದ ಮಘವ | ನಿಗೆ ನಮಿಸಿ ಪೇಳಿದರು |
ಹಗರಣವ ಸುರರು ದೈನ್ಯದಲಿ || 168 ||

ರಾಗ ಮಧ್ಯಮಾವತಿ ತ್ರಿವುಡೆತಾಳ

ನಿನ್ನ ಸೂನುವೆ ಪಾರ್ಥ ಪೇಳಿ | ನ್ನನ್ಯನೇ ಸಪ್ತಾರ್ಚಿ ಬಾಣಸಿ ||
ಮುನ್ನಿನನುಜನು ಮುರನ ಮರ್ದನ | ರಿನ್ನು ನಿನಗನುಕೂಲರೇ ||
ಮನ್ನಿಸಲ್ಕೆ || 169 ||

ಲೇಸು ಲೇಸಿನ್ನೈಸೆ ಬಣ್ಣಿಸೆ | ಬೇಸರದ ವಿಧ ಬೇರೆ ಮನದಲಿ ||
ಮೋಸದಿಂದಾಹವದ ಕೌತುಕ | ನಾಶ ಸೂಚಕ ಕಾರ್ಯವೈ ||
ವಾಸಿಯಲ್ಲೆ || 170 ||

ತರುಣಿಯರ ಮೇಳದಲಿ ಸ್ವರ್ಗದ | ಸಿರಿಯನನುಭವಿಸುತ್ತಲಿರುವುದೆ ||
ಪರಮಯುಕ್ತವಿದರುಹುವೆವು ನೀ | ತೆರಳಿದರೆ ಸತ್ಕೀರ್ತಿಯೇ ||
ಸುರಪ ಕೇಳು || 171 ||

ರಾಗ ಭೈರವಿ ಅಷ್ಟತಾಳ

ಇಂತೆನಲಮರಾಧಿಪ | ಚಿತ್ತದಿ ರುದ್ರ | ನಂತೆ ತಾಳುತ್ತ ಕೋಪ ||
ಮುಂತೆಸೆದಿಹ ಸುರ | ಸಂತತಿಯ ನೋಡಿ | ಪಂಥದಿ ಪೇಳಿದನು || 172 ||

ಲೇಸಾದುದೀ ಹದನ | ನಮ್ಮವರವ | ರೈಸೆ ಸೈರಿಸಿರಿ ಮುನ್ನ ||
ಬೇಸರವೇಕೆ ಹೋ | ಹೋ ಸರ್ವವಿಪಿನವ | ಗ್ರಾಸಗೊಳ್ಳಲಿ ಶಿಖಿಯು || 173 ||

ಹರಿಣ ಸಂಕುಲವೊದಗಿ | ಹೆಬ್ಬುಲಿಯ ಮೇ | ಲೆರಗಿದ ತೆರನೆಸಗಿ ||
ಸುರನರರಂತರ | ವರಿಯದಾದರು ಮರು | ಳರು ಕಾಲಗತಿ ಕಷ್ಟವು || 174 ||

ಅಳುಕುವೆನೇ ಮನದಿ | ಖಾಂಡವವನು | ಮುಳುಗಿಸುವೆನು ಜಲದಿ ||
ಜಲಜನೇತ್ರಾರ್ಜುನ | ರೊಳು ಶೌರ್ಯವಿದ್ದರೆ | ತಿಳಿವೆ ನಿಶ್ಚಯವೆಂದನು || 175 ||

ಕಲ್ಪಾಂತ ಮೇಘಗಳು | ಸುರಿಯಲೆಂದು | ಕಲ್ಪಿಸಿ ಶೀಘ್ರದೊಳು ||
ಬಲ್ಪಿಂದ ವಹ್ನಿಯ | ನೋಳ್ಪೆನೆಂದಿರಲಿತ್ತ | ಕೇಳ್ಪಾರ್ಥಿವಾಗ್ರಣಿಯೆ || 176 ||

ಕಂದ

ಖಾಂಡವ ವನವಿಂತಾಹುತಿ |
ಗೊಂಡ ಧನಂಜಯನ ಭೀತಿಯಿಂ ಖಗ ಮಗಗಳ್ ||
ತಂಡದೊಳೋಡುತಲಿರಲದ |
ಕಂಡಾಹರಿ ಪಾರ್ಥರೆಂದ ರೊರ್ವರಿಗೊರ್ವರ್ || 177 ||

ರಾಗ ಬೇಹಾಗ್ ಏಕತಾಳ

ಓಡಿತು ಓಡಿತು ಬಿಡದಿರು ಪಾರ್ಥ | ಕಾಡು ಕ್ರೋಡವದೊ ನೋಡು ಯಥಾರ್ಥ || ಪಲ್ಲ ||

ಕೇಸರಿ ತವ ಶರ | ಕೇ ಸರಿ ಬರಿದೇ |
ಕೇಸರಿವೆಯೊ ಕೆಲ | ಕೇ ಸರಿಸದನು ||
ನಾ ಶರಭವ ಬಿಡೆ | ನಾಶವನೆಸಗಿ ಹು |
ತಾಶನಗೀವೆನು ಲೇಸಿನೊಳಿನ್ನು || 178 ||

ಶುಕ ಸಾರಸ ಚಾ | ತಕ ವಾಯಸ ಬಕ |
ಪಿಕ ಚಿಲಿಮಿಲಿಗ ಮ | ರ ಕುಟಿಗ ಗರಿಗ ||
ಕುಕಿಲ ಚಕೋರಾ | ದ್ಯಖಿಲ ಖಗಾಳಿಯ |
ಮಖವೆಸಗಿದ ಪಾ | ವಕ ಸಾಹಸಿಗ || 179 ||

ಅದೊ ಕೆದರಿದ ಕಿಡಿ | ಗಿದಿರ ಬಿದಿರಮೆಳೆ |
ಚದುರಿದುದದುಭುತ | ವಿದೊ ಛಟಛಟಿಸಿ ||
ಮುದದಿ ಸದನ ಸೌ | ಧದೊಳೊದಗಿದ ನುರಿ |
ಕದಲಿಯ ಸಿಮಿಸಿಮಿ | ಸಿದ ಜಲಕುದಿಸಿ || 180 ||

ಘಳುಘಳು ಛಿಳಿಛಿಳಿ | ಕಳಕಳ ಕಿಳಕಿಳ |
ಠಳಠಳ ರವದಿಂ | ದಿಳಿದಿಳೆ ಗೆರಗಿ ||
ಬಲುಫಣಿಕುಲಗಳ | ನೆಲೆಯುಳಿಸಿದ ನೆಂ |
ದುಲಿದಾ ಹರಿ ನರ | ರೊಲಿದಿರಲಾಗಿ || 181 ||

ವಾರ್ಧಕ

ಹುತವಹನನಿತ್ತಲಾ ಖಾಂಡವದ ವನವನತಿ |
ಹಿತದಿಂದಲಾಹುತಿಯ ಗೊಳುತಿರಲು ಮಿತಿಯಿರದೆ |
ಗತವಾಯ್ತು ಹರಿ ಕರಿ ವರಾಹಾದಿ ಮಗನಿವಹ ಖಗಸಂತತಿಗಳು ಸಹಿತ ||
ವಿತಳದೊಳ್ ಪನ್ನಗಾಶನನ ಬಾಧೆಗೆ ತ್ರಿದಶ |
ಪತಿಯನಾಶ್ರಯಿಸಿ ತಕ್ಷಕ ಮಿತ್ರಭಾವದಿಂ |
ಸುತನಶ್ವಸೇನನಂ ಬಿಡಲಿಲ್ಲ ಪ್ರಬಲತರವಾಗಿರ್ದುದುರಗತತಿಯು || 182 ||

ರಾಗ ಕಾಂಭೋಜಿ ಝಂಪೆತಾಳ

ಜ್ವಲನ ನಿಂತುಜ್ವಲಿಸಿ | ಹಲವು ತರು ತಣಲತೆಯ |
ನೊಳಗೊಳಗೆ ಭುಂಜಿಸುತ ಮುನ್ನ ||
ಹಳುವದಲಿ ಹೊಳೆಹೊಳೆದು | ಬಳಕೆಗೊಂಡಿರೆ ಝಳಕೆ |
ಸುಳಿದನಭ್ರದೊಳಶ್ವಸೇನ || 183 ||

ಇದನರಿತನಾವಹ್ನಿ | ವಿಧ ವಿಧದೊಳೊದರಿದನು |
ಚದುರಿದುದು ಫಣಿಯೊಂದು ನಭಕೆ ||
ಹದನವರಿತುದುರಿಸೆನೆ | ಮುದದಿ ಗಾಂಡೀವಕವ |
ನೆದೆಗೊಟ್ಟು ತೊಡಲು ಶರಕ್ಷಣಕೆ || 184 ||

ಸಂಧಾನಲಾಘವದೊ | ಳಂದೆಚ್ಚಶರವು ಫಣಿ |
ಸಂದಕಳಚಿತು ಧರೆಗೆ ಜವದಿ ||
ಹೊಂದಿ ಶಿರದಲಿ ಜೀವ | ವೊಂದುಳಿಯಲದು ನರನೊ |
ಳೆಂದುದತಿರೋಷದಿಂ ಭರದಿ || 185 ||

ಮರೆಯದಿರು ಗಾಂಡೀವಿ | ದುರುಳ ನಿನ್ನಯ ಹಗೆಯ |
ಮರೆ ಸೇರಿ ಸಾಧಿಸುತ ಬಿಡದೆ ||
ತರಿಯದಿರೆನೆನುತಲಂ | ಬರದಿ ಯೋಚಿಸುತೊಡನೆ |
ತ್ವರಿತದಿಂದೈದಿತಲ್ಲಿರದೆ || 186 ||

ಮನದೊಳೀದ್ವೇಷವನು | ನೆನಸಿ ತಾನಿನಸುತನ |
ಘನ ನಿಷಂಗದಲಿ ಶರವಾಗಿ ||
ತನುವುಳಿಸಿ ಜತನದಿಂ |
ದನುವರವನೆಣಿಸುತ್ತ |
ಮುನಿಸಿನಿಂದಿರ್ದುದಾ ಭೋಗಿ || 187 ||

ಭಾಮಿನಿ

ಧಾತ್ರಿಪತಿ ಕೇಳಿತ್ತ ವನದಲಿ |
ಮತ್ತೆ ಪಠಿಸುತ ವಹ್ನಿಸೂಕ್ತವ |
ಋತ್ವಿಜೋತ್ತಮ ಮಂದಪಾಲನ ಸುತ ಚತುಷ್ಟಯವ ||
ತುತ್ತು ದೊರಕದೆ ಶಿಖಿಗೆ ಬದುಕಿರ |
ಲಿತ್ತಲೊಂದೆಡೆ ಬೇಗೆಯಿಂ ಭಯ |
ಚಿತ್ತದಿಂ ಮಯ ಶಿಲ್ಪಿಹಾಹಾರವದಿ ಶೋಕಿಸಿದ || 188 ||

ರಾಗ ನೀಲಾಂಬರಿ ರೂಪಕತಾಳ

ಹರ ಹರ ಈ ವಿಧಿಯಾಯಿತೇ | ಉರಿಯೊಳು ಸಿಲುಕಿದೆನಯ್ಯೋ |
ಪೊರೆವವರಿಲ್ಲವೆ ಹಾಹಾ | ಕರುಣದೊಳರಿತೆನ್ನ || ಪಲ್ಲ ||

ಯಾತಕೆ ಬಂದೆನೊ ಇಲ್ಲಿಗೆ | ಯಾತಕೆ ಶಿಖಿಯುಜ್ವಲಿಸಿತೊ |
ಯಾತಕೆ ಈ ತೆರನಾಯ್ತ ವಿ | ಧಾತನೆ ಬಲ್ಲನಿದ ||
ಪಾತಕವೇನೆಸಗಿರ್ಪೆನೊ | ಖ್ಯಾತನು ಮಯಶಿಲ್ಪಿಯು ನಾ |
ಭೂತಳದೊಳು ಪೆಸರಡಗಿತೆ | ಸೋತಿಹೆನಕಟಕಟ || 189 ||

ಪಾವಕನುರಿಯನು  ತಾಳದೆ | ಈ ವನದೊಳಗಿಹ ಖಗಮಗ |
ಜೀವಿಗಳಳಿದವು ತರುಲತೆ | ಯಾವುದುಳಿಯದಾಯ್ತು ||
ದೇವರದೇವ ನರೋತ್ತಮ | ಭಾವಜಪಿತ ತವಪದ ರಾ |
ಜೀವವ ನಂಬಿದೆ ಪಾಲಿಸು | ಶ್ರೀ ವತ್ಸಾಂಕಿತನೆ || 190 ||

ರಾಗ ಆರ್ಯಸವಾ ಏಕತಾಳ

ದೂರದೊಳಾ ಕಾಂ | ತಾರದ ಮಧ್ಯದಿ ||
ವಾರಿಜನಾಭನ ಸ್ಮರಿಸುತಲಿ ||
ಈ ರೀತಿಯೊಳಿರೆ | ಸೇರಿತು ಧ್ವನಿಯದು |
ಶೌರಿನರರಿಗತಿ ಶೀಘ್ರದಲಿ || 191 ||

ಧಾವಿಸಿ ಬರಲಾ | ದಾವಾಗ್ನಿಯು ಬಿಡ |
ದಾವರಿಸಿರೆ ತನ್ಮಧ್ಯದಲಿ ||
ಜೀವಭಯದಿ ನಿ | ರ್ಜೀವಿಯೊಲಿಹ ಮಯ |
ನಾ ವಿಧ ಪರಿಕಿಸಿ ತವಕದಲಿ || 192 ||

ಹತ್ತಿರದಲಿ ಕೈ | ಯಿತ್ತವನನು ಮೇ |
ಲೆತ್ತಲು ನೀನ್ಯಾರೆನಲದಕೆ ||
ಪಾರ್ಥನೆನಲು ಮುದ | ವೆತ್ತು ಮನದಿ ಸ್ತುತಿ |
ಸುತ್ತೆಂದನು ವಂದಿಸಿ ಪದಕೆ || 193 ||

ರಾಗ ಕಾಂಭೋಜಿ ಏಕತಾಳ

ಭೂಲಲಾಮಕುಲ | ಮೌಳಿ ಭಳಿರೆ ಪಾರ್ಥ ||
ಮೂಲೋಕದ ಖ್ಯಾತ || ಪಲ್ಲ ||

ಐರಾವತವನು | ಧಾರಿಣಿಗಿಳಿಸಿದ
ಶೂರರಿಹರೆ ದಢದಿ || ನೀ ನಲ್ಲದೆ ಜಗದಿ
ವೀರತನದೊಳಂ | ಗಾರವರ್ಮನ ಪ
ಚಾರಿಸುತಲಿ ಧುರದಿ || ಗೆಲಿದೆ ಶರದ ಬಲದಿ
ಭಾರಿ ಬಲ್ಮುರಿದೆ | ನಾರಿ ದ್ರೌಪದಿ ಮ
ನೋರಮಣನೆ ನಿಜದಿ || ಧೀರತನದಿ ಮುದದಿ ||
ಸೇರಿಶಿಖಿಗೆ ಬಾ | ಯಾರಿರಲೆನ್ನನು
ಕಾರುಣ್ಯದಿ ಕೈ | ದೋರುತಲೆತ್ತಿದೆ || ||194||

ಆ ಶಶಾಂಕ ಕುಲ | ಭೂಷಣ ಪಲುಗುಣ
ವಾಸವಿ ಸಂಜಾತ || ಧರ್ಮಜನನುಜಾತ ||
ಭಾಸುರಾಂಗನತ | ಪೋಷತರಣಿ ಸಂ |
ಕಾಶ ಸಚ್ಚರಿತ್ರ || ಸಂತತ ಸನ್ಮಿತ್ರ ||
ಶ್ರೀಶ ದ್ವಾರಕಾ | ವಾಸಕೃಷ್ಣಜಗ
ದೀಶನಾಪ್ತ ಭಕ್ತ || ಸದ್ಗುಣ ಭರಿತ ||
ನೀ ಸಲಹಿದೆಯೆನ | ಗೈಸೆಸಹಾಯದ
ನೇಸುಗೈವೆನಾ | ಬೇಸರಿಸದೆ ನುಡಿ || ||195||

ಕಂದಪದ್ಯ

ಸ್ತುತಿಸುವ ಮಯನಂಪಿಡಿದೆ |
ತ್ತುತಲತಿಹರುಷದಿ ಧನಂಜಯಂ ಮನ್ನಿಸಿರಲ್ ||
ಗತಿ ನೀನೇಯೆನ್ನುತ ಶ್ರೀ |
ಪತಿಪದಕೆರಗುತಲಿ ದೈನ್ಯದಿಂ ಪ್ರಾರ್ಥಿಸಿದಂ || 196 ||

ರಾಗ ಕಾನಡ ಆದಿತಾಳ

ಕರುಣಾಕರ ಸ್ವಾಮಾ | ನಮಾಮಿ || ಪಲ್ಲ ||

ಸರಸ ಸುಗುಣ ಭವ | ಹರಣ ನಿಪುಣ ತವ |
ಚರಣ ಶರಣ ನಾ | ಪರಿಪಾಲಿಸು ಹರಿ || 197 ||

ಹೋ ಸಿಲುಕಿದೆನಿದಿ | ರೀ ಶಿಖಿಮಧ್ಯದಿ |
ಕೇಶವ ಕರುಣದಿ | ನೀ ಸಲಹಿದೆ ಹರಿ || 198 ||

ಉಪಕಾರಕೆ ಪ್ರ | ತ್ಯುಪಕಾರವ ಗೈ |
ದಪೆ ಸೂಚಿಸು ಪ್ರಾರ್ಥಿಪೆ ನಿನ್ನೊಳು ಹರಿ || 199 ||

ಭಾಮಿನಿ

ಸುಜನ ರಕ್ಷಕ ಕುಜನ ಶಿಕ್ಷಕ |
ಅಜನತಾತನೆ ಖಗವರೂಥನೆ |
ವಿಜಯನನು ಪಾಲಿಸುವ ನಂದನಕಂದ ಗೋವಿಂದ ||
ಭುಜಗಶಯನನೆ ಭಜಕರರಸನೆ |
ರಜಕಮರ್ದನ ವರಜನಾರ್ದನ |
ಗಜವರದ ಸಲಹೆಂದು ಪದಪಂಕಜಕೆ ವಂದಿಸಿದ || 200 ||

ರಾಗ ಭೈರವಿ ಝಂಪೆತಾಳ

ಇಂತು ವಂದಿಸಿದ ಮಯ | ನಂತರ್ಯವರಿತು ಶ್ರೀ |
ಕಾಂತಪಿಡಿದೆತ್ತಿದನು | ಸಂತೋಷದಿಂದ || 201 ||

ನಿನ್ನ ಸದ್ಭಕ್ತಿಗುಣ | ವೆನ್ನ ಮೆಚ್ಚಿಸಿತು ದನು |
ಜಾನ್ವಯ ಮಹಾಶಿಲ್ಪಿ | ಚೆನ್ನಿಗನೆ ಕೇಳೈ || 202 ||

ಬೇಯುತಿರೆ ಶಿಖಿಯಿಂದ | ಸಾಯದಂದದಲಿ ಸಾ |
ಹಾಯವೆಸಗಿದ ವಿಧಕೆ | ನೀ ಯೋಚಿಸುವೆಯ || 203 ||

ಕ್ಷೋಣೀಶ ಧರ್ಮಜಗೆ | ಕಾಣಲು ನವೀನದಾ |
ಸ್ಥಾನ ಮಂಟಪ ರಚಿಸಿ | ನೀನೆತಾರಯ್ಯ || 204 ||

ಎಂದು ನೇಮಿಸುತ ಕಪೆ | ಯಿಂದ ಮನ್ನಿಸಿ ಮಯನ |
ನಂದು ಬೀಳ್ಕೊಟ್ಟ ಗೋ | ವಿಂದ ವಹಿಲದಲಿ || 205 ||

ರಾಗ ಕಮಾಚ್ ಏಕತಾಳ

ಇಂತು ಮಯನ ಶ್ರೀ | ಕಾಂತ ಕಳುಹಿ |
ನಂತರದಲಿ ಕಂ | ಡಂತರವರಿತು ||
ಕಾಂತಾರದಿ ಶಿಖಿ | ಭ್ರಾಂತರ ತರ ಪ್ರಭೆ |
ಯಾಂತು ಜ್ವಲಿಸಿರೆ | ಸಂತಸವಾಂತು || 206 ||

ಭಳಿರೇ ಬಾಪುರೆ | ಬೆಳದೆಳಲತೆ ತರು |
ಬಲುಖಗಮಗ ವಿಂ | ತಳಿದುದು ಯೆನುತ ||
ಜಲಜಾಂಬಕ ನರ | ರೊಲಿದಿರೆ ತ್ವರಿತದಿ |
ಇಳೆಗೆರಗಿತು ಮಳೆ ಹೊಳೆಯೆ ವಿಚಿತ್ರ || 207 ||

ಸಿಟ್ಟಿನೊಳಿಹ ಸುರ | ಶ್ರೇಷ್ಠ ನಮಗೆ ಕೈ |
ಗೊಟ್ಟನು ತಾ ಘನ | ವಷ್ಟಿಯ ಸುರಿಸಿ ||
ದಿಟ್ಟತನವಿದೆನ | ಲಷ್ಟರೊಳಗೆ ಕಂ |
ಗೆಟ್ಟು ನುಡಿದ ಶಿಖಿ | ಬಲುತರಹರಿಸಿ || 208 ||

ವಾರ್ಧಕ

ಹರಿ ಧನಂಜಯರೆನ್ನ ಹರಿಬಮಂ ಲಾಲಿಪುದು |
ಹರಿಯ ಸತ್ವಾತಿಶಯ ಹರಿಸುವಂ ನಮ್ಮೊಡನೆ |
ಹರಿಯದೀ ಕಲ್ಪಾಂತ ವರ್ಷಮವಘಡಿಸಿದರೆ ಪರಿಹರಿಸದಿರೆ ಬರಿದೆನೆ ||
ಉರಿಗೆದರುತರ್ಜುನಂ ಸರಿಸಿ ಶರಪಂಜರವ |
ವಿರಚಿಸಿ ಸಮಾರಾಸ್ತ್ರದಿಂದ ಬಿರುಗಾಳಿಯಂ |
ಬರಿಸಲ್ಕೆ ಜ್ವಲನನತಿ ಮೇಲ್ವಾಯ್ದು ಸುಳಿಸುಳಿಯೆ ಗಾರುಗೆಟ್ಟಂ ಮಘವನು || 209 ||