ಭಾಮಿನಿ

ತರುಣಿಯರು ವಾಗ್ವಾದದಿಂದಿರೆ |
ಹರಿನಿರೂಪವ ಸಖಿಯು ಸೂಚಿಸ |
ಲರಿತು ಬಳಿಕ ಸುಭದ್ರೆ ದ್ರೌಪದಿಯರು ನವೋತ್ಸಹದಿ ||
ತ್ವರಿತದಿಂದಣುಗರ ಸಮೇತದಿ |
ಪೊರಮಡುತಲಿರಲನಿತರಲಿ ಶ್ರೀ |
ವರನ ಬಳಿಗೈತಂದು ಜಯ ಜಯವೆಂದಳಾಕುಂತಿ || 83 ||

ರಾಗ ಸಾಂಗತ್ಯ ರೂಪಕತಾಳ

ಮುಂದೆ ಕುಂತೀದೇವಿ | ಬಂದು ಮಾಧವ ರಕ್ಷಿ |
ಸೆಂದು ಪೇಳಲು ದೈನ್ಯತೆಯಲಿ ||
ಮಂದಹಾಸದಿ ಪೀಠ | ದಿಂದೆದ್ದು ಕ್ಷಣದಿ ಗೋ |
ವಿಂದ ವಂದಿಸಿದ ಭಕ್ತಿಯಲಿ || 84 ||

ಪರಮೇಷ್ಟಿ ಪುರುಹೂತಾ | ದ್ಯರೊಳು ಸೇವೆಯಗೊಂಬ |
ಪರಮಾತ್ಮ ತನ್ನ ಪಾದದೊಳು ||
ಶಿರವ ಚಾಚಿರೆ ನೋಡಿ | ಹರ್ಷಾಶ್ರು ಹೊರಸೂಸಿ |
ಕರುಣಾಬ್ಧಿಯನು ನೆಗಹಿದಳು || 85 ||

ಪತಿದೇವ ಪರಲೋಕ | ಗತನಾದ ಮೇಲೆ ನಾ |
ಸುತರೈವರನು ಕೂಡಿ ಹಿಂದೆ ||
ಅತಿಶಯ ದಾರಿದ್ರ್ಯ | ಸ್ಥಿತಿಗೆ ಸಂದೆನು ಪೂರ್ಣ |
ಕ್ಷಿತಿಯ ಭಾಗ್ಯಗಳಿರ್ದು ನೊಂದೆ || 86 ||

ಬೇಯದೆ ಶಿಖಿಯಿಂದ | ಸಾಯದೆ ಖಳರಿಂದ |
ನೋಯುವಂತಾಯ್ತು ನಾವೆಲ್ಲ ||
ಮಾಯಾ ಸ್ವರೂಪ ಸ | ಹಾಯವ ದಯದಿ ಗೈ |
ದೀ ಯೋಗ್ಯ ತೆಯನಿತ್ತೆಯಲ್ಲ || 87 ||

ಮುನ್ನ ಮಾಡಿದ ಕರ್ಮ | ದುನ್ನತಫಲ ನಮ್ಮ |
ಬೆನ್ನಿಗಂಟಿತು ನಾನಾ ವಿಧದಿ ||
ಇನ್ನೇನಾಹುದೊ ಆಲಿ | ಸೆನ್ನುತಲಿರೆ ಕುಂತಿ |
ಚಿನ್ಮಯನೆಂದನೀತೆರದಿ || 88 ||

ಭಾಮಿನಿ

ಅತ್ತೆಯವರೇ ಕೇಳಿ ನಿಮ್ಮಯ |
ಚಿತ್ತದಲಿ ನೋವಿಹುದು ಬಲ್ಲೆನು |
ಸತ್ಯವೆಂದಿಗು ಕೈಯ ಬಿಡದೆಂಬುದಕೆ ಶುಭವೆನಿಸಿ ||
ಪುತ್ರರಿಗೆ ಸತ್ಪುತ್ರರಾದರೆ |
ನುತ್ತ ಸಂತಸಗೊಳಿಸುತಿರೆ ಪುರು |
ಷೋತ್ತಮನ ಸನ್ನಿಧಿಗೆ ಬಂದಳು ದ್ರೌಪದೀ ದೇವಿ || 89 ||

ರಾಗ ಶಂಕರಾಭರಣ ಅಷ್ಟತಾಳ

ಬಂದಳು ಮುದದಿ ಪಾಂಚಾಲೆ | ಲಜ್ಜಾ |
ಬಂಧುರ ವದನೆ ಸುಶೀಲೆ ||
ಸಿಂಧುರಗಮನೆ ವಿಶಾಲೆ | ಅರ |
ವಿಂದನಯನೆ ಸತ್ಕಪೋಲೆ || ಪೂರ್ಣ ||
ಚಂದ್ರವದನೆ ಸುಮ | ಗಂಧಿ ಮಂದಸ್ಮಿತೆ |
ಕುಂದರದನೆ ನಂದ | ನಂದನನೆಡೆಗಾಗ || 90 ||

ಅಂಗಜನರ್ಧಾಂಗಿಯಂತೆ | ನೋಡೆ |
ಕಂಗೊಳಿಸುವ ರೂಪವಂತೆ ||
ಶಂಗಾರದೊಲಪಿನ ಕಾಂತೆ | ಕೋಮ |
ಲಾಂಗಿ ಮಂಗಲೆ ಸುಪ್ರಶಾಂತೆ || ಆ ಕು ||
ರಂಗನಯನೆ ಸುಭ | ದ್ರಾಂಗನೆಯೊಂದಿಗೆ |
ತುಂಗೆ ಭದ್ರೆಯ ಕೂಡಿ | ಮುಂಗಡೆ ಬಂದಂತೆ || 91 ||

ಚಿಣ್ಣರನೆತ್ತಿಸಿಕೊಳುತ | ಸುಪ್ರ |
ಸನ್ನೆ ಸಖೀವ್ರಾತ ಸಹಿತ ||
ತನ್ನ ವರನು ಪರಿಕಿಸುತ | ಮತ್ತೆ |
ಚಿನ್ಮಯಾತ್ಮಕನ ಕಾಣುತ್ತ || ಬಾಲ |
ರನ್ನು ಕೆಡಹಿ ಗಂಗೆ | ಯನ್ನು ಪಡೆದ ಪಾದ |
ವನ್ನು ಪಿಡಿದು ಜಯ | ವೆನ್ನುತಿಂತೆಂದಳು || 92 ||

ರಾಗ ಕೇತಾರಗೌಳ ಝಂಪೆತಾಳ

ಅಣ್ಣ ಲಾಲಿಪುದು ಮುದದಿ | ತವದಯದಿ |
ಚಿಣ್ಣರಿವರಿಹರು ಸುಖದಿ ||
ಎನ್ನತಂಗಿ ಸುಭದ್ರೆಯ | ಕುವರನಭಿ |
ಮನ್ಯುರಂಜಿಸುವ ಸೂರ್ಯ || 93 ||

ಹಿಂದೆ ಧ್ರುವ ಪ್ರಹ್ಲಾದರ | ಪಾಲಿಸಿದ |
ತಂದೆ ನೀ ಕರುಣಾಕರ ||
ಇಂದು ಕುಲದಭ್ಯುದಯವ | ಹಾರೈಸಿ |
ನಂದನರ ಸಲಹುದೇವ || 94 ||

ದುರ್ಮತಿಗಳಹಿತರಿಂದ | ನೊಂದಿಹರು |
ನಮ್ಮವರು ದಿಟ ಬಲುವಿಧ ||
ನಿರ್ಮಲಾತ್ಮಕ ತಿಳಿದಿದ | ಮುಂದೆಮಗೆ |
ನೆಮ್ಮದಿಯನೀವುದು ಸದಾ || 95 ||

ಪಂಚಮುಖನಾಪ್ತ ಸತ್ಯ | ನಿನ್ನವರು |
ಪಂಚಮುದ್ರೆಗಳೆನ್ನುತ ||
ಪಂಚಶರಪಿತಗೆರಗುತ | ಪ್ರಾರ್ಥಿಸಲು |
ಪಾಂಚಾಲೆ ಸಹಜೆ ಸಹಿತ || 96 ||

ಭಾಮಿನಿ

ಕಮಲಭವನುತಿಪಾತ್ರ ಜಯಜಯ |
ಕಮಲದಳನಿಭನೇತ್ರ ಜಯ ಜಯ |
ಕಮಲಧತ ಶುಭಗಾತ್ರ ಜಯ ಜಯ ಕಾಮಜನಕ ಜಯ |
ಕಮಲಸಖಶತಭಾಸ ಜಯ ಜಯ |
ಕಮಲಮುಖ ಜಗದೀಶ ಜಯ ಜಯ |
ಕಮಲಪದ ಕಮಲೇಶ ಜಯ ಜಯವೆನಲು ಹರಿನುಡಿದ || 97 ||

ರಾಗ ಮಧ್ಯಮಾವತಿ ಏಕತಾಳ

ಕೇಳಿ ಸುಭದ್ರೆ ಪಾಂ | ಚಾಲೆ ||
ಶೀಲ ಸದ್ಗುಣಪುಷ್ಪ | ಮಾಲಾನ್ವಿತೆಯರು || ಪಲ್ಲ ||

ಪುತ್ರರೈವರು ಪಂಚ | ರತ್ನ ಶೋಭಿತರು ಸ |
ತ್ಕೀರ್ತಿಯೊಳಭಿಮನ್ಯು | ಜ್ಯೊತಿಯ ಮೇರು ||
ತತ್ವ ಪಂಚಕದಂತೆ | ಮಿತ್ರರೆನ್ನವರೈಸೆ |
ಪ್ರತ್ಯಕ್ಷ ನೀವಾದಿ | ಶಕ್ತಿಮಾಯೆಯರು || 98 ||

ಧರಣಿಯಾಳುವ ವೀರ | ವರರ ಬಾಲಕರೆಂದು |
ಪರಮ ಸಾಹಸ ತೇಜ | ಭರಿತರಾಗುವರು |
ಸ್ಥಿರ ಸತ್ಯ ಧರ್ಮ ಸ | ಚ್ಚರಿತರಿನ್ನಿವರಾಗಿ |
ಹರಿಣಾಂಕ ಕುಲಜರ್ಗೆ | ಕೊರತೆಯೆನ್ನಿಸರು || 99 ||

ಸಷ್ಟಿಭಾರಕರೆಲ್ಲ | ಕೆಟ್ಟುಪೋಗುವರೊಮ್ಮೆ |
ಶ್ರೇಷ್ಠ ಧರ್ಮಜ ಮುಖ್ಯ | ದಿಟ್ಟರಾಳುವರು ||
ದಿಟ್ಟಿಸಿ ನೀವೆಂಬ | ಸಷ್ಟಿಯೊಡೆಯನಿಗೆ |
ಶಿಷ್ಟೆಯರೆರಗಿದ | ರೊಟ್ಟಾಗಿ ಕಡೆಗೆ || 100 ||

ವಾರ್ಧಕ

ಪಾದಕೆರಗಿದ ತನ್ನ ಸೋದರಿಯರಂ ನೋಡಿ |
ಮಾಧವಂ ಪಿಡಿದೆತ್ತಿ ಮೋದದಿಂ ಮನ್ನಿಸುತ |
ಮೈದುಂಬದಿಹಸುತರ ಮೈದಡವಿ ಪ್ರೇಮದಿಂದಾದರಿಸಿ ಮುದ್ದಿಸುತಲಿ ||
ಭೇದವಿರದಂತೆ ಸೊಗಸಾದ ಭೂಷಣ ದುಕೂ |
ಲಾದಿಗಳ ತರಿಸಿ ಬಲು ಸ್ವಾದು ವಸ್ತುವ ಸಹಿತ |
ಲಾದಯಾನಿಧಿ ಕೊಡಿಸ ಲೈದಿದರು ಪರಿಕಿಸುತಲಾ ಧರ್ಮಸುತನೆಂದನು || 101 ||

ರಾಗ ಕೇತಾರಗೌಳ ಅಷ್ಟತಾಳ

ಯಾಕೆಮ್ಮ ಪೊಗಳುವೆ | ಲೋಕರಕ್ಷಕ ದೇವ | ಸಾಕಾರ ಮೂರ್ತಿ ನಿನ್ನ ||
ಶ್ರೀಕರಪಾದಾವ | ಲೋಕನದಿಂ ಧನ್ಯ | ರೈ ಕಪೆ ನೀಡು ಪೂರ್ಣ || 102 ||

ಚಿಕ್ಕವರನು ನಿನ್ನ | ಮಕ್ಕಳೆಂದೆಣಿಸಿಕೊ | ದುಃಖಬಾರದ ತೆರದಿ ||
ತಕ್ಕಂತೆ ಜ್ಞಾನ ಸ | ದ್ಭಕ್ತಿಯನೀಯೊ ಭಾ | ವೈಕ್ಯಗೋಚರನಯದಿ || 103 ||

ತರಳರೈವರು ರನ್ನ | ದರಲಾಗಿ ವನಮಾಲೆ | ಗೆರಕದಿ ಶೋಭಿಸಲಿ ||
ವರ ಸುಭದ್ರಾಸುತ | ಮೆರೆದು ಕೌಸ್ತುಭ ರತ್ನ | ಸರದಿ ರಾರಾಜಿಸಲಿ || 104 ||

ಕುವಲಯಾಂಬಕನೆ ಸೈಂ | ಧವ ಸೌಬಲಾಖ್ಯ ಕೌ | ರವ ದುಃಶಾಸನ ಕರ್ಣರು || ಅವನಿಯೊಳೆಮಗೆ ಕ | ಷ್ಟವನತಿ ವೈರದಿ | ವಿವಿಧ ರೀತಿಯೊಳಿತ್ತರು || 105 ||

ವಿಧವಿಧದಿಂದತಿ | ಮದಗಜಗಳು ಸೇರಿ | ಸದೆಯುತ್ತಲಿಹ ಸಮಯ || ಮುದದೊಳಂಕುಶರೇಖಾ | ಪದವ ಕಾಣಿಸೆ ಬದು | ಕಿದೆವು ಪೂಗೋಲನಯ್ಯ || 106 ||

ಇಂದು ವಂಶದ ಕೀರ್ತಿ | ಕುಂದದತೆರದಿ ಮು | ಕುಂದ ಪಾಲಿಪುದೆನ್ನಲು ||
ಮಂದಹಾಸದಿ ಧರ್ಮ | ನಂದನಗಿಂತೆಂದ | ನಂದು ಕಾರುಣ್ಯದೊಳು || 107 ||

ರಾಗ ಮಧ್ಯಮಾವತಿ ತ್ರಿವುಡೆತಾಳ

ರಾಜವಂಶ ಲಲಾಮ ಲಾಲಿಸು |
ರಾಜತೇಜೋಲಕ್ಷಣದಲಿ ವಿ ||
ರಾಜಿಸುವ ಸಂಪನ್ನ ನೀನಿಹೆ |
ರಾಜಧರ್ಮದ ಗುಣದಲಿ || ತೇಜದಿಂದ || 108 ||

ಬಲದಿ ಬಲ್ಲಿದನೀತ ಪವನಜ |
ಫಲುಗುಣನು ಸಾಮಾನ್ಯನೇನು ||
ಜ್ವಲಿಪ ಯಮಳರು ಪೌರುಷಾನ್ವಿತ |
ರೊಲವು ನಿನ್ನಯ ಭಾಗ್ಯವು || ಬಲುವಿಶೇಷ || 109 ||

ಕಷ್ಟವೆಲ್ಲವ ಸಹಿಸಿ ಸತ್ಯದ |
ಶ್ರೇಷ್ಠತೆಯ ಬೆಳಗಿಸುವ ಶಿಷ್ಟ ಯು ||
ಧಿಷ್ಠಿರನೆ ಬಾಂಧವರು ಸೋದರ |
ರೊಟ್ಟುಗೂಡುತ ಸುಖವನು || ದಷ್ಟಿಸಯ್ಯ || 110 ||

ಧರ್ಮಮಾರ್ಗವ ತೊರೆದವರು ದು |
ಷ್ಕರ್ಮಿಗಳು ಕೆಡದಿರರು ನಿಶ್ಚಯ ||
ನಿರ್ಮಲಾತ್ಮಕ ನೀನೆ ಧರಣಿಯ |
ನೆಮ್ಮದಿಯೊಳಾಳುವ ಮಹಾ || ಧರ್ಮರಾಜ || 111 ||

ಈ ಮಹಾಸಾಮಂತ ಭೂವರ |
ಸ್ತೋಮ ನೆರೆದಿಹುದಿನಿತು ನಿಮ್ಮಯ ||
ಸೌಮನಸ್ಯದೊಳಿಂತು ಸದ್ಗುಣ |
ಧಾಮ ನಿನ್ನದು ಭಾವಿಸು || ಸೋಮಕುಲಜ || 112 ||

ಭಾಮಿನಿ

ಭಕ್ತವತ್ಸಲನಿಂತು ತನ್ನಯ |
ಭಕ್ತರನು ಸಂತೈಸಿ ನೆರೆದಿಹ ||
ಧಾತ್ರಿಪತಿಗಳ ಪುರಜನರ ಪರಿಜನರ ಮನ್ನಿಸುತ ||
ಮಿತ್ರಮುಖ್ಯರ ಬೀಳ್ಕೊಡುತಲಿರೆ |
ಮಿತ್ರನ ಪರಾಂಬುಧಿಗೆ ತೆರಳಿದ |
ಮತ್ತೆ ಹರುಷದಿ ಹರಿದುದೋಲಗ ಕೇಳು ಭೂನಾಥ || 113 ||

ವಾರ್ಧಕ

ಸರಸಿಜಾಂಬಕನಿಂತು ಹರಿಹಯ ಪ್ರಸ್ಥದೊಳ |
ಗಿರೆ ಬಳಿಕ ಬಲನೊಡನೆ ಪರಿವಾರವೆಲ್ಲವಂ |
ಪುರವರಕೆ ಕಳುಹಿಸುತ ಹರುಷದಿಂ ಪರಮಾಪ್ತ ನರನನೊಡಗೂಡಿ ಹರಿಯು ||
ಚರಿಸಿ ಕಾಂತಾರವಂ ಸರಿದು ಯಮುನಾತೀರ |
ಕಿರದೆ ಬೆಳ್ದಿಂಗಳಲಿ ವಿಹರಿಸೆ ರಹಸ್ಯದಿಂ |
ದರುಹಿದಂ ವೇದಾಂತ ಚರಿತ ಬೋಧಾಮತವ ಮೆರೆದು ಹನ್ನೆರಡು ದಿನದಿ || 114 ||

ರಾಗ ಭೈರವಿ ಝಂಪೆತಾಳ

ಇಂತು ಸುಖದಿಂದಿರಲು | ಸಂತಸದೊಳೊಂದು ದಿನ |
ಕಂತು ಜನಕನು ಪಾರ್ಥ | ಗಿಂತೆಂದನೊಲಿದು || 115 ||

ಮನದಣಿಯೆ ವಿಹರಿಸಿದೆ | ವಿನಿತುದಿನವಲ್ಲಲ್ಲಿ |
ಯೆನಗೊಂದು ಬಯಕೆ ಸಂ | ಜನಿಸಿದುದು ಕ್ಷಣಕೆ || 116 ||

ಅಡವಿಯಲಿ ದುಷ್ಟಮಗ | ಗಡಣವನು ಸದೆಬಡಿವ |
ದಢವನೆಸಗಿ ದೆನೆನಲು | ನುಡಿದ ಫಲುಗುಣನು || 117 ||

ಚಿನ್ಮಯಾತ್ಮಕನೆ ಕೇ | ಳಿನ್ನೇತಕನುಮಾನ |
ನಿನ್ನೊಡನೆ ಬಹೆನಿದಕೆ | ಭಿನ್ನತೆಗಳುಂಟೆ || 118 ||

ಗಿರಿ ಕಂದರದಲಿ ಸಂ | ಚರಿಸಿ ರಮಣೀಯತೆಯ |
ಪರಿಕಿಸಲ್ಕೆಡೆ ಯಾಯ್ತು | ಹರುಷವಿದು ಯೆನುತ || 119 ||

ಹರಿಗೆ ವಂದಿಸುತ ಶಂ | ಗರಿಸಿ ಪೊರಟವರು ಭೂ |
ವರನ ಪರಿಕಿಸೆ ಬಳಿಕ | ನರನೆಂದ ಮಣಿದು || 120 ||

ರಾಗ ಸಾರಂಗ ಅಷ್ಟತಾಳ

ಲಾಲಿಸಿ ಕೇಳು ಮಾತ | ಯೆನ್ನಣ್ಣ ಭೂ |
ಲೋಲ ಕಪಾಳು ಖ್ಯಾತ ||
ಶ್ರೀಲೋಲ ಸಹಿತ ಸ | ಲ್ಲೀಲೆಯಿಂ ವನಕೈದಿ |
ಖೂಳ ಮಗಂಗಳ | ಜಾಲವನರಿವೆನು || 121 ||

ಕರುಣಿಸಪ್ಪಣೆ ದಯದಿ | ಶೀಘ್ರದಿ ಪೋಗಿ |
ಬರುವೆವು ಸಂತಸದಿ ||
ಹರಸಿ ಕಳುಹಿಸೆಂದು | ಶಿರಬಾಗಿ ನಮಿಸುತ್ತ |
ಲಿರಲರಸನೊಳೆಂದ | ಹರಿನೋಡಿ ಸರಸದಿ || 122 ||

ರಾಗ ಸುರುಟಿ ಏಕತಾಳ

ಕೇಳುಧರ್ಮಜಾತ | ನಪಕುಲ | ಮೌಳಿ ಮಹಾಖ್ಯಾತ ||
ಲೀಲೆಯೊಳೀ ಮಗ | ಜಾಲದ ಬೇಟೆಗೆ |
ಪೇಳಿ ಕರೆಸು ಶಬ | ರಾಳಿಯ ತ್ವರಿತದಿ || 123 ||

ತರಿಸೈ ಧನುಶರವ | ನೂತನ | ಕರ ಮಣಿಮಯ ರಥವ ||
ಪರಿಪರಿಯಾಯುಧ | ಪರಿವಾರವು ಸಹ |
ಪೊರಡಲಿ ಘೋಷವು | ಮೆರೆಯಲಿ ವಿಭವದಿ || 124 ||

ಗಿರಿ ಕಂದರಗಳಲಿ | ವಿಹರಿಸಿ | ಚರಿಸುತ ಹರುಷದಲಿ ||
ಬರುವೆವೆನಲು ಭೂ | ವರನತಿ ತವಕದಿ |
ನರನನೆಗಹಿ ಶ್ರೀ | ವರಗಿಂತೆಂದನು || 125 ||

ಭಾಮಿನಿ

ಆಗಲದಕೇನಿಹುದು ನುಡಿ ಸಕ |
ಲಾಗಮಜ್ಞನೆ ಮನದಿ ನಿಮ್ಮ ಸು |
ಖಾಗಮನ ಬಯಸುವೆನು ಶೀಘ್ರದೊಳೆನುತ ವಂದಿಸುತ ||
ನಾಗವಾಹನ ನಂದನಗೆ ಶ್ರೀ |
ನಾಗ ಶಯನನ ಜತೆಗೊಳಿಸುತನು |
ರಾಗದಿಂ ಕರುಣಿಸಿದ ವೀಳ್ಯವ ಹೊನ್ನ ಬಟ್ಟಲಲಿ || 126 ||

ವಾರ್ಧಕ

ಅಗ್ರಭವನಾಣತಿಯ ಶೀಘ್ರದಿಂ ಕೈಗೊಂಡು |
ನಿಗ್ರಹಿಪೆನುಗ್ರಮಗ ವರ್ಗಗಳನೆಂಬ ಶಬ |
ರಾಗ್ರಣಿಗಳಿಂದ ಸುಭಟಾಗ್ರಣಿಗಳಿಂ ಚಾಪ ಮಾರ್ಗಣಾದಿಗಳಿಂದಲಿ ||
ಭೋರ್ಗರೆವ ಜಯರವದಿ ಸ್ವರ್ಗಾಧಿಪತಿ ಸುತಂ |
ಭರ್ಗ ಸಖಸಹಿತ ಪೊಸ ತೇರ್ಗಡರಿ ಮನದಿ ವೇ |
ದಗ್ರಾಹಿಯಂ ಸ್ಮರಿಸಿ ಮಾರ್ಗವಿಡಿದೈದಿದ ಸಮಗ್ರ ಸಂಭ್ರಮದಿ ವನಕೆ || 127 ||

ರಾಗ ಆರ್ಯಸವಾ ಏಕತಾಳ

ದೂರದಿ ನಿಲಿಸಿದ | ತೇರನಿಳಿದು ಕ್ಷಣ | ಶೌರಿಸಹಿತ ನರ ತವಕದಲಿ ||
ಸಾರಿದ ನಿಜಪರಿ | ವಾರದೊಡನೆ ಕಾಂ | ತಾರದಿ ಬೇಟೆಯನಾಡುತಲಿ || 128 ||

ರಾಗ ಮುಖಾರಿ ಏಕತಾಳ

ಬೇಟೆಯಾಡುತ್ತ ಬಂದ ಪಾರ್ಥ | ಶೌರಿ ಸಮೇತ |
ಬೇಟೆಯಾಡುತ್ತ ಬಂದ ಪಾರ್ಥ || ಪಲ್ಲ ||

ಅದೊ ಸೂಕರ ನೋ | ಡಿದೊ ಮದಗಜ ಬಂ |
ದುದು ಬೆದರದಿರೆಂ | ದೊದರುತ ಸದೆದು || 129 ||

ಕುಕ್ಕುರಗಳ ಬಿಡು | ತಿಕ್ಕೆಲದಲಿ ಬಹ |
ಮರ್ಕಟ ನಿವಹವ | ಘಕ್ಕನೆ ಕೆಡಹಿ || 130 ||

ಬೊಬ್ಬೆಯನೆಬ್ಬಿಸು | ತಬ್ಬರಿಸುತ ಬಲು |
ಕೊಬ್ಬಿದ ಮಗಗಳ ಹಬ್ಬವನೆಸಗಿ || 131 ||

ವಾರ್ಧಕ

ಹರಿಧನಂಜಯರಿಂತು ತ್ವರಿತದಿಂ ಕಾನನದಿ |
ಪರಿಪರಿಯ ದುಷ್ಟಮಗ ಹರಣ ಕೇಳಿ ಕಳಾಪ |
ಸರಸದಿಂ ಬಲುಬಳಲಿ ಮರನನೆಳಲಲಿ ಕುಳಿತು ಪರಿಪೂರ್ಣ ಶ್ರಮವ ಕಳೆದು ||
ಪರಿವಾರವೆಲ್ಲವಂ ಪುರಕೆ ಕಳುಹಿದ ಬಳಿಕ |
ಪರಿಶೋಭಿಸುವ ಜಲವ ಪರಿಕಿಸುತ ದೂರದಲಿ |
ಸರಸಿಜಾಂಬಕ ಸರೋವರದೆಡೆಗೆ ತಷೆಯ ಪರಿಹರಿಸಲೈದಿದ ತವಕದಿ || 132 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆ ಸಮಯದಲಿ ಬಂದನೋರ್ವ ಮ | ಹೀಸುರನು ಕಿಡಿಗಳ ತುಷಾರದ |
ಮಾಸೆಗಡ್ಡದ ಸುಳಿದಲೆಯ ಹೊಗೆ | ಸೂಸುತಿರಲು || 133 ||

ಬಾಸರದ ಬಳಲುಡಿಗೆ ಮಟ್ಟಿಯ | ಧೂಸರದ ಮೈದೊಡಿಗೆಯಿಂದಲಿ |
ವಾಸವಾತ್ಮಜನೆಡೆಗೆ ಕ್ಷಣದಿ ವಿ | ಲಾಸದಿಂದ || 134 ||

ಬರವ ಕಾಣುತಲೆದ್ದು ಸುರಪನ | ತಳನಚ್ಚರಿಗೊಂಡು ವಿಪ್ರನ |
ಚರಣಕೆರಗಿದ ವಿನಯಭಾವದೊ | ಳರಿತು ಮುದದಿ || 135 ||

ರಾಗ ಬೇಗಡೆ ಏಕತಾಳ

ಪಾರ್ಥಿವಾನ್ವಯ ತಿಲಕ ಕೌಂತೇಯ | ಧುರ ಧೀರ ಶೌರ್ಯ ಸ |
ಮರ್ಥ ಪಾರ್ಥ ಪುರಂದರನ ತನಯ ||
ಉತ್ತರೋತ್ತರವಾಗಿ ಸುಖ ಸ | ತ್ಕೀರ್ತಿ ಲಭಿಸಲಿ ನಿನಗೆನುತ ವೇ |
ದಾರ್ಥದಿಂ ವಿಸ್ತರಿಸಿ ಹರಸಿದ | ಧಾತ್ರಿ ಸುರಗಿಂತೆಂದನರ್ಜುನ || 136 ||

ನೂತನದಿ ತವ ಗಮನವಾಯ್ತೇನು | ನಿಜ ಪೆಸರ ಗುರುತವ |
ನಾ ತಿಳಿಯೆ ಕಾರ್ಯಾತಿಶಯಗಳನು ||
ಖ್ಯಾತರೆನ್ನನು ಪರಿಕಿಸಿದ ತೆರ | ಮಾತನಾಡುವಿರೈಸೆ ಪೇಳಲು |
ಪ್ರೀತಿಯಲಿ ನೆರವೇರಿಸುವೆನೆಂಬಾತಗೆಂದನು ಭೂತಳಾಮರ || 137 ||

ಎಲ್ಲಿ ನೋಡಿದರಲ್ಲಿ ಮನೆಯನಗೆ | ನಾನಿಲ್ಲದಾ ಸ್ಥಳ |
ವಿಲ್ಲವೆಲ್ಲರ ಬಲ್ಲೆ ಜಗದೊಳಗೆ ||
ಚೆಲ್ವೆ ಕಷ್ಣೆಯ ನಲ್ಲನಲ್ಲವೆ | ಬಲ್ಲಿದನೆ ಯಜ್ಞೇಶ್ವರನೆ ಪೆಸ |
ರಲ್ಲಿರುವೆ ಗ್ರಾಸಾರ್ಥಿ ಕೇಳ್ದುದ | ಸಲ್ಲಿಸುವೆಯಾ ಸೊಲ್ಲಿಸೈನಿಜ || 138 ||

ರಾಗ ಕೇತಾರಗೌಳ ಝಂಪೆತಾಳ

ಲಾಲಿಪುದು ವಿಪ್ರವರ್ಯ | ನಿಮ್ಮೊಡನೆ | ಪೇಳುವೆನೆ ಬರಿದೆ ಪುಸಿಯ ||
ಪಾಲಿಸುವೆ ತವ ವಾಂಛೆಯ | ಚಿತ್ತದಲಿ | ತಾಳುವುದು ನಿಜದಿ ಧೈರ್ಯ || 139 ||

ರಾಗ ಶಂಕರಾಭರಣ ಏಕತಾಳ

ಆಗದಾಗದಿಂಥ ಕಾರ್ಯ | ಸೋಗುಮಾತಿಗಹುದೆ ಧೈರ್ಯ |
ವಾಗಿ ಆಣೆ ಭಾಷೆತ್ವರ್ಯ | ವೀಗ ನೀಡಯ್ಯ || 140 ||

ರಾಗ ಕೇತಾರಗೌಳ ಝಂಪೆತಾಳ

ಆವಕಾರ್ಯವನಾದರು | ಗೈವೆ ಶಿವ | ದೇವ ಬಂದಿದಿರಾದರು ||
ದೇವಕೀತನಯನಾಣೆ | ರವಿ ಶಶಿಗ | ಳೀ ವಿಧಕೆ ಸಾಕ್ಷಿತಾನೆ || 141 ||

ರಾಗ ಶಂಕರಾಭರಣ ಏಕತಾಳ

ಲೇಸನುಡಿದೆಯಾದರೊಂದು | ಆಸೆಯಿಹುದು ತಪ್ಪದೆಂದು |
ಭಾಷೆಯಿತ್ತು ನಂಬುವುದ ಕಿ | ನ್ನಾಸರೆದೋರು || 142 ||

ರಾಗ ಕೇತಾರಗೌಳ ಝಂಪೆತಾಳ

ಸತ್ಯನುಡಿ ತಪ್ಪಿದಾತ | ಶಶಿಕುಲಜ | ಪಾರ್ಥನಾನಲ್ಲ ಖಚಿತ ||
ಕ್ಷಾತ್ರವಂಶಜನೆ ಯೆನುತ | ಕೈತಟ್ಟಿ | ಮತ್ತೆ ನಂಬುಗೆಯನಿತ್ತ || 143 ||

ಭಾಮಿನಿ

ಕ್ಷಾತ್ರತೇಜೋ ಮೂರ್ತಿ ಶೌರ್ಯ ಸ |
ಮರ್ಥ ಪಾರ್ಥ ಯಥಾರ್ಥ ಮೆಚ್ಚಿದೆ |
ಸ್ವಾರ್ಥವೆನ್ನದು ಕೀರ್ತಿನಿನಗಿದು ಧಾತ್ರಿಯೊಳಗೆನಲು ||
ಆರ್ತರಕ್ಷಕನಿತ್ತ ತಷೆಯ ನಿ |
ವತ್ತಿಯೆಸಗುತ ಬಂದು ವಹ್ನಿಯ |
ಧೂರ್ತತನ ವರಿಯುತ್ತ ಪಾಂಡು ಸುಪುತ್ರಗಿಂತೆಂದ || 144 ||

ರಾಗ ತೋಡಿ ತ್ರಿವುಡೆತಾಳ

ಮೋಸವಾತಿನ್ನೇನನುಸುರಲಿ |
ಬೇಸರದ ಹದನವಿದು ಕಪಟದ |
ಭೂಸುರನ ನಿಜವೇಶವಿಂತಲ್ಲ ||
ವಾಸವನ ಬಾಣಸಿಗನಿವಕೇ |
ಳೀ ಶಿಖಿಗೆ ಖಾಂಡವದ ದಹನಕೆ |
ಭಾಷೆಯನು ನೀನಿತ್ತು ಕೆಡಿಸಿದೆಲಾ || 145 ||

ಸುಖವೆ ಹೇಳೈತಂದೆ ಧುರ ಶತ |
ಮಖನೊಡನೆ ನಿನಗಹುದೆ ಲೋಕದಿ |
ಸಕಲಜನ ಪರಿಹಾಸಿಸುವ ತೆರದಿ ||
ನಿಖಿಳ ನಿರ್ಜರ ವ್ರಾತಬರೆ ಸ |
ಮ್ಮುಖದೊಳಾಹವಕೊದಗಬೇಹುದು |
ಯುಕುತವೇ ಮರುಳಾದೆ ನಿಶ್ಚಯದಿ || 146 ||

ತಿಳಿದರಿದು ನಿನ್ನನುಜರೆಲ್ಲರು |
ಮುಳಿದು ಜರೆಯುವರೆನ್ನ ಸಹಿತಲಿ |
ಸುಲಭವಾದುದೆ ನಿನಗೆ ಭಾವಿಸಲು ||
ಜ್ವಲನ ನೀ ಪರಿ ವಂಚಿಸಿದನಹ |
ಬಲು ವಿಧದ ಬಿಲ್ಬಾಣಗಳು ಬ |
ತ್ತಳಿಕೆ ಹಯರಥವೆಲ್ಲಿ ನಮಗೆನಲು || 147 ||

ಕಂದ

ಕೇಳ್ದಾವಚನವನಾಸಿರಿ |
ಯಾಳ್ದನ ಪಾವನ ಪದಾಬ್ಜಕೆರಗುತ ಜವದಿಂ |
ತಾಳ್ದತಿವಿನಯದಿ ಭಾವವ |
ಪೇಳ್ದ ಧನಂಜಯ ಧನಂಜಯಗೆ ತನ್ನಿರವಂ || 148 ||