ರಾಗ ಭೈರವಿ ಅಷ್ಟತಾಳ

ಭಳಿರೆ ಮೆಚ್ಚಿದೆ | ನಿಮಗೆ | ಸಂಗ್ರಾಮದಿ | ಬಲವಂತರಹುದು ಹೀಗೆ ||
ಛಲಬೇಡ ವ್ಯರ್ಥವೆ | ನ್ನಲಿ ಗಜನೂಕುವೆ | ನಿಲದಿರಿ ಸಾರಿ ಹಿಂದೆ || 281 ||

ನಾಕ ನಿವಾಸಿಗಳು | ಪೌರುಷದೊಳ | ನೇಕರು ಸಮರದೊಳು ||
ಸೋಕದೆ ಜಯವತಿ | ಶೋಕದೊಳೈದಿದ | ರ‌್ಯಾಕೆಂದು ನುಡಿದ ಪಾರ್ಥ || 282 ||

ಯಾತಕೆ ವನದಹನ | ಮಾಡಿದಿರಿ ಮ | ತ್ತೇತಕೆ ತಿಳಿಯದೆನ್ನ ||
ಯಾತಕಾಶ್ರಯ ನಮ್ಮ | ವೀತಿಹೋತ್ರಗೆ ನಿಮ್ಮ ನೀತಿ ಸರಿಯೆ ಜಗದಿ || 283 ||

ಆರ್ತರ ರಕ್ಷಕರು | ನಾವೆಂಬ ಸ | ತ್ಕೀರ್ತಿಯನಾಂತವರು ||
ಹಸ್ತಿನಾಪುರದ ಕೈ | ವರ್ತಿ ವಿಪಿನ ವಶ | ವಾಯ್ತೆಂತು ತ್ರಿದಶರಿಗೆ || 284 ||

ಸಾಕು ಗರ್ವದ ಮಾತಿದು | ತಪ್ಪಿದಿರಿ ವಿ | ವೇಕದಿ ಮರಳುವುದು ||
ಬೇಕೆಂದು ನುಡಿದರೆ | ಜೋಕೆ ನೋಡಿಕೊ ಯೆನ | ಲಾ ಕೃಷ್ಣನಿಂತೆಂದನು || 285 ||

ರಾಗ ಕೇತಾರಗೌಳ ಝಂಪೆತಾಳ

ಗರ್ವತನ ನಮಗಿಪ್ಪುದೆ | ನ್ಯಾಯಪಥ | ಗೀರ್ವಾಣರಿಂಗಪ್ಪುದೆ ||
ಸರ್ವಸಂಪನ್ನರೆಂದೇ | ನಿಮಗಿರೆ ಬೆ | ದರ್ವೆವೇ ನಾವು ಬರಿದೆ || 286 ||

ನಿನ್ನ ಸಖ್ಯತೆಯ ಬೆಳೆಸಿ | ನರನೀತ | ನೆನ್ನೊಳು ವಿರೋಧ ಗಳಿಸಿ ||
ಅನ್ಯಾಯಗೈದ ಸಹಸಿ | ಈ ವಿಪಿನ | ವನ್ನಿತ್ತ ಶಿಖಿಗೆ ವಹಿಸಿ || 287 ||

ಎನ್ನ ನೆನಪಿಹುದೆ ನಿನಗೆ | ಗೋವರ್ಧ | ನೋನ್ನತದ ಗಿರಿಯ ಕೆಳಗೆ ||
ಮುನ್ನ ಗೋವಳರ ಮಳೆಗೆ | ತೋಯಿಸಿದ | ನಿನ್ನ ಭಂಗಿಸಿದೆ ಕಡೆಗೆ || 288 ||

ಹಿಂದೆ ಭಂಗಿಸಿದೆನೆಂಬ | ಹಂಗಿನೊಳ | ಗಿಂದೇಕೆ ಪೇಳು ಜಂಭ ||
ಹೊಂದಿಸಿರಿ ಶರಕದಂಬ | ಎನಲು ನರ | ನೆಂದರಿಪುವನಧಿ ವಡಬ || 289 ||

ರಾಗ ಶಂಕರಾಭರಣ ಮಟ್ಟೆತಾಳ

ಮಾತು ಮಾತಿಗಿಂತು ಗರ್ವ | ವೇತಕೆಂದು ಬರಿದೆ ಪೇಳ್ವ |
ರಾತು ಕೊಂಬುದಯ್ಯ ಶಸ್ತ್ರ | ವ್ರಾತ ಶೀಘ್ರದಿ || 290 ||

ಲೇಸು ನುಡಿದೆ ಾರ್ಥನೋಡು | ಸೂಸುತಿಹುದು ತೇಜವಿದು ವ |
ತ್ರಾಸುರಾಖ್ಯಗಳಿವು ತಂದು | ದೈಸೆ ವಜ್ರವು || 291 ||

ವಜ್ರವಾದರೇನು ಪಿಡಿವ | ವಜ್ರಿಯನ್ನು ಬಲ್ಲೆನೈಸೆ |
ಗರ್ಜಿಸಲ್ಕೆ ಸರಿವೆವೇ ಯೆಂ | ದರ್ಜುನ ನುಡಿದ || 292 ||

ಮಾರಹರನ ತೆರದಿ ಕ್ರೋಧ | ವೇರಿ ಧುರಕೆ ನಿಲಲು ಶಕ್ರ |
ಶೌರಿ ವಿಜಯರೀಕ್ಷಿಸುತ್ತ | ಭೂರಿ ರೋಷದಿ || 293 ||

ಬಿಂಕದಿ ಗಾಂಡೀವ ಧನುವ | ಝೇಂಕರಿಸಿದ ನರನ ನೋಡಿ |
ಶಂಖವನ್ನು ಮೊಳಗಿಸಲ್ಕೆ | ಪಂಕಜಾಕ್ಷನು || 294 ||

ಮತ್ತೆ ತೆಗೆದು ಶರವ ತೊಡುವ | ಯತ್ನಗೈಯೆ ಕೇಳ್ದುದಾಗ |
ವ್ಯರ್ಥ ಬೇಡ ಧುರವಿದೆಂದು | ಗೋತ್ರವೈರಿಗೆ || 295 ||

ಗಗನವಾಕ್ಯ ಗಣಿಸದಿರುವ | ಮಘವಗೊಲಿದ ದಶ್ಯದಿಂದ |
ಮೊಗವದೋರಿ ತಡೆದು ಬ್ರಹ್ಮ | ನಗುತ ಪೇಳಿದ || 296 ||

ರಾಗ ನವರೋಜು ಏಕತಾಳ

ಹೋ ಹೋ ಸೈರಿಸು ಮಘವ | ಬಲು | ಸಾಹಸಕಾರ್ಯದ ಭಾವ ||
ದೇಹಿಯೆನದೆ ಮರು | ಳಾಹುದೆ ವ್ಯರ್ಥದಿ |
ಊಹಿಸು ನೀ ಸಂ | ದೇಹವ ಗೊಳ್ಳದೆ || 297 ||

ನರನಾರಾಯಣರಿವರು | ಶ್ರೀ | ಹರಿ ಪಾರ್ಥರೆಂಬವರು ||
ಕಿರುಕುಳರರೇನಿದ | ನರಿಯೆಯ ಮುನಿದರೆ |
ಧರೆಮೂರನು ಬಗೆ | ವರೆ ನಿಶ್ಚಯದಿ || 298 ||

ತ್ವರಿತದೊಳೈರಾವತವ | ಪಿಂ | ತಿರುಗಿಸು ಸಾರೈಪುರವ ||
ಸರಸಿಜ ನಾಭನ | ಚರಣಕೆರಗು ಕ್ಷಮೆ |
ಕರುಣಿಸದಿರ ಗುಣ | ಭರಿತ ಕಪಾಕರ || 299 ||

ಕಂದ

ಸರಸಿಜಭವನಿಂತರುಹುತ |
ತೆರಳಿದ ನಿಜಪುರಕದಶ್ಯಪಥದಿಂದಿತ್ತಂ ||
ತ್ವರಿತದಿ ಧುರವಂ ನಿಲಿಸುತ |
ಪುರುಹೂತಂ ಶರ ಶರಾಸನವನಿಳುಹಿಸುತಂ || 300 ||

ಭಾಮಿನಿ

ಆ ಮಹಾ ಸುರಸಂದಣಿಯ ನಿಜ |
ಧಾಮಕೈದಿಸಿ ಯೋಚಿಸುತ ಸು |
ತ್ರಾಮನತಿವಿನಯದಲಿ ಜಯಜಯವೆಂದು ಪ್ರಾರ್ಥಿಸುತ ||
ಶ್ರೀ ಮುಕುಂದನೆ ಸಲಹೆನುತ ಪದ |
ತಾಮರಸಕಭಿನಮಿಸಲೆತ್ತುತ |
ಕಾಮಪಿತ ನಸು ನಗೆಯ ಸೂಸುತ ಶಕ್ರಗಿಂತೆಂದ || 301 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಕಾರ್ಯದಿ ಬಂದೆ ನುಡಿ ನಿ | ನ್ನಾನನವು ಬಲುಕುಂದಿಹುದು ದು |
ಮ್ಮಾನವೇ ಮಾನಸದಿ ಬಿಡುಗೀ | ರ್ವಾಣರೊಡೆಯ || 302 ||

ಬರಿದೆ ಬರುವವನಲ್ಲ ಕದನವ | ತೊರೆದು ಮಧ್ಯದಿ ನಿಲಿಸಿಮೆಲ್ಲನೆ |
ಮರಳಿ ಭೇದೋಪಾಯವೇನೀ | ನರುಹು ನಿಜವ || 303 ||

ಸಿಂಧುಶಯನನ ಮಾತಿನಲಿ ಮನ | ನೊಂದು ಸಂಕ್ರಂದನನು ವಿನಯದಿ |
ನಿಂದು ಕರಗಳ ಮುಗಿದು ಮತ್ತಿಂ | ತೆಂದನಾಗ || 304 ||

ರಾಗ ಮೋಹನ ಅಷ್ಟತಾಳ

ನಿನ್ನ ನಂಬಿದೆನು ಪ್ರ | ಸನ್ನ ಮೂರುತಿ ಕೃಷ್ಣ |
ಮನ್ನಿಸೆನ್ನಪರಾಧ | ವನ್ನು ಪೂರ್ಣ ||
ನಿನ್ನೊಳೇತಕೆ ಭೇದ | ವಿನ್ನು ವಾದ ವಿರೋಧ |
ಅನ್ಯಾಯ || ಮಾಡಿದೆ ಪಾಲಿ || ಸೆನ್ನಯ್ಯ || ಬಲ್ಲವರ‌್ಯಾರು ||
ನಿನ್ನಾಯ || ಮೂರ್ಲೋಕದೊಡೆಯ ||
ಮುನ್ನ ನಮ್ಮಾ | ರಣ್ಯದಹಿಸುವ | ಭಿನ್ನತೆಯ ಮನ | ವನ್ನು ಗೈದವ ||
ವಹ್ನಿಯೆಂಬುದನೆಣ್ಣಿಸುತ ಧುರ | ವನ್ನು ತೊಡಗಿದೆ | ನೆನ್ನಲೇನದ || 305 ||

ತಿಳಿಯದಜ್ಞಾನವೆ | ನೆಲಸಿ ಮನೋರಥ |
ಕಲುಷಕಾಂತಾರದಿ | ಸುಳಿದಾಡುತ ||
ಹೊಲಬುದಪ್ಪಿರೆ ಜ್ಯೋತಿ | ಬೆಳಗುತ್ತ ಮನವ ನಿ ||
ರ್ಮಲ ಮಾಡಿ || ಧ್ವಜರೇಖೆಯ || ಕಳೆಗೂಡಿ || ತೋರಿದೆ ಪಾದ ||
ವೆಳೆದಾಡಿ || ಸುಜ್ಞಾನ ಮೂಡಿ ||
ಇಳಿದು ದಗ್ಬಲ | ಚೆಲುವ ತವಪದ | ದಲಿಹೊಳೆಯೆ ಬಳಿ | ತಳಿದ ಶುದ್ಧಿಯೊ || ಳೊಲಿದಭಯಕರ | ತಳ ಕಮಲ ಶಿರ | ದಲಿತಳೆದೆನಾ | ಕಳೆದೆ ಕಲುಷವ || 306 ||

ನರನಾರಾಯಣರೆಂಬ | ತೆರ ಕಂಡೆ ಕಣ್ತುಂಬ |
ಹರಷುವಾಯ್ತೆನಗಿಂಬ | ಕರುಣಿಸಯ್ಯ ||
ಶರಣರರಸ ಶ್ರೀಶ | ವರದ ಹಷೀಕೇಶ ||
ಸುರಪೋಷ || ದುರ್ಮದ ಕಂಸಾ | ಸುರನಾಶ || ಶತಕೋಟಿ ಭಾ |
ಸ್ಕರ ಭಾಸ || ದ್ವಾರಕಾವಾಸ ||
ವರ ಹದಯ ಸರ | ಸಿರುಹದಿಂ ಹರಿ | ಹರಿದು ವಾಕ್ಸುಧೆ | ಸುರಿಯಲಮರತೆ ||
ದೊರಕಿದುದು ದಿಟ | ಮೆರೆವ ಮೊಗಸಿರಿ | ಪರಿಕಿಸಿದನಾ | ಪರಮಧನ್ಯನು || 307 ||

ವಾರ್ಧಕ

ಜಯ ಜಯ ಹಷೀಕೇಶ ರವಿಕೋಟಿ ಸಂಕಾಶ |
ಜಯ ದುರಿತಕುಲ ನಾಶ ನಿಜಭಕ್ತ ಜನಪೋಷ |
ಜಯ ಜಯತು ಜಗದೀಶ ಜಯತು ನಿರುಪಮ ತೋಷ ಜಯತು ವೈಕುಂಠವಾಸ ||
ಜಯ ಜಯತು ಲೋಕೇಶ ಜನಕಮುನಿ ಹದ್ವಾಸ |
ಜಯ ಜಯ ಮಹಾಶೇಷಶಯನ ಶ್ರೀ ಲಕ್ಷ್ಮೀಶ |
ಜಯ ಜಯತು ಗಿರಿಜೇಶ ಸಖ ಯದುಕುಲೋತ್ತಂಸ ಜಯತು ಗೋಪಾಲಕೃಷ್ಣ || 308 ||

ಭಾಮಿನಿ

ಎಂದು ಈ ಪರಿಯಿಂದಲಾ ಸಂ |
ಕ್ರಂದನನು ಗೋವಿಂದಗೆರಗುತ |
ನಿಂದಿರಲು ನಡೆತಂದು ಫಲುಗುಣನಂದು ವಿನಯದಲಿ ||
ತಂದೆ ನೀನೀನಂದನನ ತ |
ಪ್ಪೊಂದನೆಣಿಸದೆ ಚಂದದಿಂ ಹರ |
ಸೆಂದು ವಂದಿಸಲೆಂದನೆತ್ತುತ ಮಂದಹಾಸದಲಿ || 309 ||

ರಾಗ ಸಾವೇರಿ ರೂಪಕತಾಳ

ನೀ | ನೆಂದ ಮಾತು | ಚಂದವೇನೊ | ಕಂದ ಫಲುಗುಣ ||
ಮಂದಮತಿಯೊ | ಳಿಂದು ಸಮರ | ಕೆಂದು ನಿಂದೆ ನಾ || 310 ||

ಕಂ | ದರ್ಪ ಜನಕ | ನಾಪ್ತ ನಿನ್ನ | ತಪ್ಪ ಕಾಣೆನು ||
ತಪ್ಪಿದುದ ನಿ | ನ್ನಪ್ಪನಾದ | ರೊಪ್ಪಿಕೊಂಡೆನು || 311 ||

ಕಂ | ಣಾರೆ ಕಂಡೆ | ಪೌರುಷದ ಕು | ಮಾರ ನರನನು ||
ಶೌರಿ ದಯದಿ | ಮೂರು ಜಗದ | ವೀರನೆಂಬೆನು || 312 ||

ಬಾ | ತರಳ ಶ್ರೇಷ್ಠ | ಶಿರಕೆ ಮಕುಟ | ಕರುಣಿಸುವೆನಿದ ||
ಧರಿಸಿ ಮೆರೆಯೊ | ವರ ಕಿರೀಟಿ | ಬಿರುದಿನಿಂ ಸದಾ || 313 ||

ದೀ | ರ್ಘಾಯು ಭಾಗ್ಯ | ಶ್ರೀಯೊಳಿಹುದ | ಜೇಯನೆನ್ನಿಸು ||
ರಾಯಧರ್ಮ | ರಾಯನನುಜ | ಧ್ಯೇಯ ಸಾಧಿಸು || 314 ||

ಕಂದ

ಕೀರ್ತಿಯೊಳಿಹುದೆನ್ನುತ ನಿಜ |
ಪುತ್ರನ ಪರಸುತ್ತನಿಂದ ಸುಮನಸ ಪತಿಯಂ ||
ಮತ್ತಾಶಿಖಿ ರಿಕಿಸಿ ಮಣಿ |
ಯುತ್ತಲಿ ವಿನಯದಿ ಮನೋಗತವ ಸೂಚಿಸಿದಂ || 315 ||

ರಾಗ ಸೌರಾಷ್ಟ್ರ ಏಕತಾಳ

ಕರುಣದಿ ಪಾಲಿಸು ಸುರರೊಡೆಯ | ತವ |
ಚರಣ ಶರಣ ನಾನೆಲೆ ಜೀಯ || ಪಲ್ಲ ||

ಅಪರಾಧವ ಮರೆದಪುದಿನಿಸು | ನೀ |
ಕುಪಿತನೆನಿಸದೆನಗುಪಕರಿಸು ||
ತಪಿಸಿದೆ ಬಲುದಿನ | ಚಪಲದಿ ಹವಿಜೀ |
ರ್ಣಿಪಡೌಷಧವಿರೆ | ವಿಪಿನದಲಿ || 316 ||

ಕ್ಷಮಿಸೆನುತಲಿ ಶಿಖಿ ನಮಿಸಿರಲು | ಆ |
ಸುಮನಸಪತಿ ಕಿವಿಗೊಡದಿರಲು ||
ಕಮಲಾಂಬಕ ಸಂ | ಭ್ರಮದಿಂದೀಕ್ಷಿಸಿ |
ಮಮತೆಯೊಳುಸುರಿದ | ಭ್ರಮಿತರೊಳು || 317 ||

ರಾಗ ಕೇತಾರಗೌಳ ಝಂಪೆತಾಳ

ಯಾತಕೀ ಭೇದಮನಸು | ಶರಣು ಬಂ | ದಾತನೊಳಗಿನ್ನು ಮುನಿಸು ||
ಪ್ರೀತಿಯಿಂದಲಿ ಮನ್ನಿಸು | ಮುದದಿ ಪುರ | ಹೂತ ಪೇಳುವೆ ಲಾಲಿಸು || 318 ||

ಇವನ ಮುಖದಿಂದ ನಿಮಗೆ | ಯಜ್ಞಗಳ | ಹವಿಯೊದಗುತಿರಲು ಹೀಗೆ ||
ಸವಿದು ಜೀರ್ಣಿಸದ ರುಜೆಗೆ | ಈ ಕತಿಯ | ಹವಣಾಯ್ತು ಸುಖದ ಬಗೆಗೆ || 319 ||

ಕರಿಪುರದ ಸಾಮ್ರಾಜ್ಯದ | ವಿಪಿನವಿದು | ದೊರೆಗಳಿವರಿಗೆ ಪೋದುದ ||
ಅರಿಯದೀತೆರದಿ ಕ್ರೋಧ | ತಾಳುವುದೆ | ಸರಿಯಲ್ಲ ಬೇಡ ವಾದ || 320 ||

ಸುರರ ವನಪೋದುದೆಂದು | ದುಗುಡಕಡೆ | ಯಿರುವುದೇ ತಿಳಿದರಿಂದು ||
ಬರಿದೆ ಶಿಖಿಗೆರಡೆಣಿಪುದು | ಸರಿಯಲ್ಲ | ಬೆರೆದು ಮೈತ್ರಿಯೊಳಿರುವುದು || 321 ||

ಇಂದ್ರನೋಲಗದಿ ಮೆರೆದು | ದಿಕ್ಪಾಲ | ವಂದದಲಿ ಶ್ರೇಷ್ಠನೆಂದು ||
ಮುಂದೆ ಸಂತಸದೊಳಿಹುದು | ಯೆನುತ ಗೋ | ವಿಂದ ವಹ್ನಿಯಲಿ ನುಡಿದು || 322 ||

ನಿಂದಿವರ ನೋಡಿ ಕ್ಷಣದಿ | ಕರೆದವರ | ನಂದು ಕೈಗೊಳಿಸಿ ಮುದದಿ ||
ಒಂದುಗೂಡಿಸಿ ಪ್ರೇಮದಿ | ಪೇಳ್ದಸುರ | ವಂದಪಾಲಗೆ ಸಾಮದಿ || 323 ||

ಭಾಮಿನಿ

ಖಾಂಡವಪ್ರಸ್ಥದಲಿ ಪ್ರಜೆಗಳ |
ತಂಡಕನುಕೂಲತೆಯ ರಚಿಸುವ |
ಪಾಂಡುಸುತರಭ್ಯುದಯವನು ಹಾರೈಸು ನೀನೆನಲು ||
ಗಂಡುಗಲಿ ಪಾರ್ಥನನು ಪರಿಕಿಸಿ |
ಪುಂಡರೀಕಾಂಬಕನ ಪದಕಾ |
ಖಂಡಲನು ಶಿಖಿಸಹಿತ ವಂದಿಸಿ ಪ್ರಾರ್ಥಿಸಿದನೊಲಿದು || 324 ||

ವಾರ್ಧಕ

ಜಯ ಜಯ ರಮಾರಮಣ ವಂದಿತ ಜನೋದ್ಧರಣ |
ಜಯ ಜಯತು ಗೋವಿಂದ ನಂದತನಯ ಮುಕುಂದ |
ಜಯ ಜಯತು ಶ್ರೀಲೋಲ ವನಮಾಲ ಖಳಕಾಲ ಜಯ ಘನಶ್ಯಾಮರಾಮ ||
ಜಯ ಜಗನ್ನಾಥ ಸಲಹೆಂದು ನುತಿಗೈದಾವಿ |
ಜಯನ ಮೋದದೊಳಪ್ಪಿ ಮುಂದಿನ್ನು ಧುರದೊಳಗೆ |
ಜಯವಪಡೆಯೆಂದರುಹಿ ಪರಸುತಲಿ ಶಿಖಿಯೊಡನೆ ತೆರಳಿದಂ ಶಕ್ರಪುರಕೆ || 325 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ಹರಿಫಲುಗುಣರು ನವಮಣಿ | ರತ್ನದೆರಕದ ರಥವನಡರುತ |
ಉತ್ಸಹದಿ ನಡೆತಂದರಿಂದ್ರ | ಪ್ರಸ್ಥಪುರಕೆ || 326 ||

ಬರವರಿತು ಧರಣೀಶ ಮುಖ್ಯರು | ಪರಿಪರಿಯ ಘೋಷದೊಳಿದಿರ್ಗೊಂ |
ಡಿರದೆ ಸಂಭ್ರಮದಿಂದಲವರನು | ಕರೆದು ತಂದು || 327 ||

ಆಸನವನಿತ್ತುಪಚರಿಸೆ ಬಳಿ | ಕಾಸಮಸ್ತರಿಗೊಲಿದು ಪೇಳಿದ |
ವಾಸವನ ವನದಹನ ಕಥನವ | ವಾಸುದೇವ || 328 ||

ಮತ್ತೆ ಶಿಖಿಕರುಣಿಸಿದ ಸಾಧನ | ಮೊತ್ತವನು ತೋರಿಸಿ ಕಿರೀಟಿಯು |
ಚಿತ್ತಜನಪಿತ ಸಹಿತ ಮಣಿದನು | ಪೃಥ್ವಿಪತಿಗೆ || 329 ||

ವಂದಿಸಿದಡಿರ್ವರನು ಧರ್ಮಜ | ನಂದು ಹರಸಿದನಾಗ ವಾಯುಜ |
ನಿಂದ ನರನಾಶೀರ್ವಚನಗಳ | ಹೊಂದಲಾಗಿ || 330 ||

ಸಂತಸದೊಳೆಲ್ಲವರಿರಲು ಶ್ರೀ | ಕಾಂತ ಫಲುಗುಣರಿರ್ವರಿಗೆ ನಲ |
ವಾಂತು ಬೆಳಗಿದರಾತಿಯ ಸೀ | ಮಂತಿನಿಯರು || 331 ||

ರಾಗ ರೇಗುಪ್ತಿ ಏಕತಾಳ (ಆದಿ)

ಶ್ರೀರಮಣಗೆ ಸರ | ಸೀರುಹ ನಯನಗೆ | ಮಾರಜನಕ ಹರಿಗೆ ||
ಶೌರ್ಯದಿ || ಐರಾವತವನು | ಧಾರಿಣಿಗಿಳಿಸಿದ | ವೀರಧನಂಜಯಗೆ ||
ವೇದೋ || ಧ್ದಾರವೆಸಗಿ ಗಿರಿ | ಭಾರವಹಿಸಿ ಭೂ | ಚೋರನ ತರಿದವಗೆ ||
ಶಶಿಕುಲ || ವಾರಿಧಿ ಚಂದ್ರಗೆ | ನಾರಿದಪದಜೆಯ | ನೀರನೆನಿಪ ನರಗೆ ||
ವಾರಿಜದಾರತಿಯ ಬೆಳಗಿದರು || ಶೋಭಾನಂ || 332 ||

ನರಹರಿರೂಪದಿ | ಶರಣನ ಸಲಹುತ | ಧರಣಿಯನಳೆದವಗೆ ||
ಮೋಹದ || ತರುಣಿ ಸುಭದ್ರಾ | ವರ ಫಲುಗುಣನಿಗೆ | ಪುರುಷೋತ್ತಮ ಸಖಗೆ ||
ಕ್ಷತ್ರಿಯ || ನೆರವಿಯನರಿದಗೆ | ದುರುಳದಶಶಿರನ | ತರಿದ ದಾಶರಥಿಗೆ ||
ಮೇದಿನಿ || ಯರಸ ಪಾಂಡುಸುತ | ಪರಮ ಸಹಸಗುಣ | ಭರಿತನಿಗರ್ಜುನಗೆ || ಮರುಗದಾರತಿಯ ಬೆಳಗಿದರು || ಶೋಭಾನಂ || 333 ||

ಮಂಗಳ ಮೂರುತಿ | ರಂಗಗೆ ನೀಲನಿ | ಭಾಂಗಗೆ ಕೃಷ್ಣನಿಗೆ ||
ವರ ಸ | ತ್ಸಂಗ ಧನುರ್ವೇ | ದಾಂಗ ಪೂರ್ಣಪಾ | ರಂಗತ ಪಾರ್ಥನಿಗೆ ||
ತ್ರಿಪುರರ || ಅಂಗನೆಯರ ವ್ರತ | ಭಂಗವಗೈದು | ತ್ತುಂಗಗೆ ಕಲ್ಕ್ಯನಿಗೆ ||
ನಿರ್ಜರ || ಪುಂಗವನನು ಗೆಲಿ | ದಂಗೆ ಕಿರೀಟಿಗೆ | ಸಂಗರವಿಜಯನಿಗೆ ||
ಮಂಗಳದಾರತಿಯ ಬೆಳಗಿದರು || ಶೋಭಾನಂ || || 334 ||

ವಾರ್ಧಕ

ಆರತಿಯ ಭಾರತಿಯ ಮಾರುತಿಯ ನಾರಿಯರು |
ತೋರುತಿಹ ಶ್ರೀ ಕೃಷ್ಣಮೂರುತಿ ಧನಂಜಯರಿ |
ಗಾರತಿಯನೆತ್ತುತಿರೆ ಸುರರು ಸುಮವಷ್ಟಿಯಂ ಹಾರಿಸುತಲಿರಲು ನಭದಿ ||
ವಾರಿಜಾಂಬಕ ಸರ್ವರಿಗೆ ಶುಭವ ಬಯಸಿ ಸುಕು |
ಮಾರರಂ ಹರಸಿ ಪಾಂಡವರ ಬೀಳ್ಕೊಂಡು ರಥ |
ವೇರಿ ಬಳಿಕಂ ದ್ವಾರಕಿಗೆ ಸಾರಿ ಭಕ್ತರಂ ಪಾಲಿಸುತ ಮೆರೆಯುತಿರ್ದ || 335 ||

ರಾಗ ಕೇತಾರಗೌಳ ಅಷ್ಟತಾಳ

ಇತ್ತ ಪಾಂಡವರಿಂದ್ರ | ಪ್ರಸ್ಥದಿ ಹರಿಧ್ಯಾನ | ಚಿತ್ತದಿ ಸದಢದಿ ||
ಸತ್ಯ ಸದ್‌ಧರ್ಮದಿ | ಕೀರ್ತಿಯ ಪಡೆದಿರ್ದ | ರತ್ಯಂತ ಸುಖಭಾಗ್ಯದಿ || 336 ||

ಚಿನ್ಮಯಾತ್ಮಕನ ಕಾ | ರುಣ್ಯದಿ ಮೌನಿ ವ | ರೇಣ್ಯ ವೈಶಂಪಾಯನ ||
ಮುನ್ನ ಪೇಳಿದನಭಿ | ಮನ್ಯು ಪೌತ್ರಗೆ ಶ್ರೇಷ್ಠ | ಪುಣ್ಯ ಕಥೆಯನಿದನು || 337 ||

ಶಾರದಾಂಬಿಕೆ ದಯ | ದೋರಿ ನುಡಿಸೆ ಲಕ್ಷ್ಮೀ | ನಾರಾಯಣನುಯನ್ನನು ||
ಪ್ರೇರಿಸಿದಂತೆ ವಿ | ಸ್ತಾರದಿ ಬರೆದು ನಾ | ನೀರೀತಿ ಮುಗಿಸಿದೆನು || 338 ||

ವಾರ್ಧಕ

ಈ ತೆಂಕುನಾಡ ಪುತ್ತೂರು ತಾಲೂಕಿನಲಿ |
ಸಾತಿಶಯದಿಂ ಮೆರೆವ ಪಂಜಸೀಮೆಯೊಳಿರುವ |
ಖ್ಯಾತ ನತವ್ರಾತಮಂ ಪೊರೆವ ಶ್ರೀರಾಮನ ಕ್ಷೇತ್ರ ಚೊಕ್ಕಾಡಿಯೊಳಗೆ ||
ತಾತ ಕೇದಾರಗಹದಾತ ಸುಬ್ರಹ್ಮಣ್ಯ |
ಭೂತಳಾಮರನ ತನುಜಾತ ಗಣಪಯ್ಯ ನಾ |
ನೀ ತೆರದಿ ಭಾಗವತ ಪ್ರೀತರಭಿಮತದೊಳೀ ನೂತನದ ಕತಿಗೈದೆನು || 339 ||

ಪಥ್ವೀಶ ನಳಚಕ್ರವರ್ತಿಯಭಿಧಾನ ಸಂ |
ವತ್ಸರದಿ ಜನನವೆನಗಾಯ್ತು ಕನ್ಯಾಮಾಸ |
ವಿಸ್ತರಿಸಲೇಕವಿಂಶತಿಯ ಶುಭದಿವಸದ ಮುಹೂರ್ತದಲಿ ಶನಿವಾರದಿ ||
ಮತ್ತೆ ಹದಿನೈದನೆಯ ವತ್ಸರದಿ ರಚಿಸಿದ ಕ |
ವಿತ್ವವಿದು ತಿದ್ದಿ ಪರಿಶೋಧಿಸಲ್ ಕ್ರೋಧಿ ಸಂ |
ವತ್ಸರ ಧನುರ್ಮಾಸ ಬಹುಳ ಪಾಡ್ಯದ ಭಾನುವಾರದೊಳ್ ಪೂರ್ಣಮಾಯ್ತು || 340 ||

ಭಾಮಿನಿ

ಸಂತಸದೊಳೀ ಕಥೆಯ ಬಿಡದಾ |
ದ್ಯಂತವಾಚಿಸಿ ಬೋಧಿಸುತಲಿಹ |
ಸಂತರಿಗೆ ದೀರ್ಘಾಯುರಾರೋಗ್ಯಾದಿ ಭಾಗ್ಯಗಳ ||
ಚಿಂತಿತಾರ್ಥವನಿತ್ತು ಧರೆಯಲಿ |
ಶಾಂತಿ ಸತ್ಯಪ್ರೇಮ ಧರ್ಮ ನಿ |
ರಂತರದಿ ಬೆಳಗಿಸುವ ಮಂಗಳ ಮಹಿಮ ಶ್ರೀಕೃಷ್ಣ || 341 ||

ರಾಗ ಮೋಹನ ಏಕತಾಳ

ಜಯ ಮಂಗಳ ಜಯತು | ಜಯ ಜಯ |
ಜಯ ಮಂಗಳ ಜಯತು || ಪಲ್ಲ ||

ಮಂಗಳ ಮಹಿಮಗೆ | ರಂಗಗೆ ನೀಲನಿ |
ಭಾಂಗಗೆ ಗರುಡ ತು | ರಂಗಗೆ ದೇವೋ ||
ತ್ತುಂಗಗೆ ಸಜ್ಜನ | ಸಂಗಗೆ ದುರ್ಜನ |
ಭಂಗಗೆ ಯದುಕುಲ | ಪುಂಗವ ಕೃಷ್ಣಗೆ || 342 ||

ಸಿಂಧುಶಯನ ಅರ | ವಿಂದನಯನ ಮಕ |
ರಂದವಚನ ಭವ | ಬಂಧವಿಮೋಚನ ||
ಮಂದರಧರ ಮುಚು | ಕುಂದವರದಕರ |
ನಂದನ ಕಂದ ಮು | ಕುಂದಗೆ ಕೃಷ್ಣಗೆ || 343 ||

ವಾಸವನುತ ಕಮ | ಲಾಸನಪಿತ ಲ |
ಕ್ಷ್ಮೀಶ ದಿನಪಶತ | ಭಾಸಗಿರಿಶಸಖ |
ವಾಸುದೇವ ನತ | ಪೋಷ ದಯಾನ್ವಿತ |
ಕೇಶವ ವರದ ಗಣೇಶ ಸ್ವರೂಪಗೆ || 344 ||

|| ಂಪೂರ್ಣಂ ||