ಶಾರ್ದೂಲವಿಕ್ರೀಡಿತ ವತ್ತ

ಶ್ರೀಕಾಂತಾ ಮುಖಪದ್ಮ ಪಂಕಜಸಖಂ ಶ್ರೀಕಂಠ ಮಿತ್ರಂ ವಿಭುಂ |
ನಾಕೇಶಾದಿಸಮಸ್ತದೇವವಿನುತಂ ಶೋಕಾಬ್ಧಿ ಕುಂಭೋದ್ಭವಂ ||
ಕಾಕುಸ್ಥಂ ಕರುಣಾಕರಂ ಖಳಹರಂ ಕಾಕೋದರಾರಿಧ್ವಜಂ |
ಲೋಕಾನಂದಕರಂ ಸದಾಶುಭಕರಂ ಶ್ರೀಕೃಷ್ಣದೇವಂ ಭಜೇ || 1 ||

ರಾಗ ನಾಟಿ ರೂಪಕತಾಳ

ನಂಬಿದೆ ಪಾದಾಂಬುಜ ಹೇ | ರಂಬನೆ ಲಂಬೋದರ ಶಿರ |
ಮ ಬಾಗುವೆನಿಂಬನುಕೊಡು | ಸಂಭ್ರಮದಿಂ ಬೆನಕ ||
ತುಂಬಿಹ ವಿಘ್ನಧ್ವಾಂತಕ | ದಂಬವ ಹರಿಸುತ ಮುಂಬೆಳ |
ಗಂ ಬೀರುವ ದಿನಮಣಿಯೆ ದ | ಯಾಂಬುಧಿ ಜಯ ಜಯತು ||
ಜಯ ಜಯ ಜಯ ಜಯತು || 2 ||

ವಾರಣವದನನೆ ದುರಿತ ನಿ | ವಾರಣಕಾರಣ ಪಾರಾ |
ವಾರಗಭೀರನೆ ಪೊರೆ ಸುರ | ವಾರವಿನುತ ಸತತ ||
ಮಾರಮಥನ ಸುಕುಮಾರ ಕು | ಮಾರಾಗ್ರಜ ಮೂಷಿಕರಥ |
ಮಾರಜನಕಸಖ ಸಲಹು ಉ | ದಾರ ಗಣೇಶನೆ ನೀ ||
ಜಯ ಜಯ ಜಯ ಜಯತು || 3 ||

ರಾಗ ಸರಸ್ವತಿ ಆದಿತಾಳ

ಬಾ ಬಾ ಬಾ ಜನನಿ | ಶ್ರೀ ಭಾರತಿ ವಾಣಿ || ಪಲ್ಲವಿ ||

ಪುಸ್ತಕ ವೀಣಾಹಸ್ತೆ ಪ್ರಶಸ್ತೆ ||
ಶಾಸ್ತ್ರ ಕಲಾಪ್ರಿಯೆ ಸಜ್ಜನವಿನುತೆ || 4 ||

ಗಾನವಿಶಾರದೆ ಶಾರದೆ ವರದೆ ||
ಮಾನಿತೆ ವಿದ್ಯಾಬುದ್ಧಿ ಸುಫಲದೆ || 5 ||

ದಯದಿಂ ನೆಲಸೆನ್ನಯ ಜಿಹ್ವಾಗ್ರದಿ ||
ಜಯ ಕಮಲಾಸನ ಪ್ರಿಯೆ ನೀ ದಢದಿ || 6 ||

ವರ ಚರಣಾಂಬುಜಕೆರಗುವೆ ಶಿರವ ||
ಕರುಣಿಗಣೇಶಾರ್ಚಿತೆ ಪೊರೆಯವ್ವ || 7 ||

ಭಾಮಿನಿ

ಹರಿಹರರ ಪದಕೆರಗಿ ರಮೆಯುಮೆ |
ಯರನು ಪ್ರಾರ್ಥಿಸಿ ವಿಧಿಯ ಭಜಿಸುತ |
ಪರಮಹರ್ಷದಿ ಶಾರದೆಗೆ ವಂದಿಸುತ ಭಕ್ತಿಯಲಿ ||
ಶರಜನಿಗೆ ಬಲಬಂದು ಸೀತಾ |
ವರನ ಚರಣಕೆ ಮಣಿದು ಗೀರ್ವಾ |
ಣರಿಗೆ ತಲೆವಾಗುತ್ತ ಪೇಳುವೆನೀ ಕಥಾಮತವ || 8 ||

ದ್ವಿಪದಿ

ಗುರು ರಾಘವೇಂದ್ರಭಾರತಿ ಯತೀಶ್ವರನ ||
ಪರಮ ಶುಭಚರಣವನು ಸ್ಮರಿಸುತ್ತ ಮುನ್ನ || 9 ||

ಕುಲದೇವಿ ಬಾಲದುರ್ಗಾಂಬೆಯನು ಭಜಿಸಿ ||
ಕುಲದೇವರನು ಪ್ರಾರ್ಥಿಸುವೆನು ಮನವಿರಿಸಿ || 10 ||

ಮಾತೆಯಾಶೀರ್ವಾದ ಪಿತನನುಗ್ರಹದಿ ||
ಖ್ಯಾತ ಕವಿಗಳ ನುತಿಸಿ ಭಕ್ತಿಪೂರ್ವಕದಿ || 11 ||

ಭಾರತ ಪುರಾಣದಲಿ ವೀರಫಲುಗುಣನು ||
ಶ್ರೀರಮಣ ಸಹ ವನವಿಹಾರಗೈದುದನು || 12 ||

ಖಾಂಡವವನಗ್ನಿಗಾಹುತಿಯಿತ್ತು ಮೆರೆದು ||
ಗಾಂಡೀವ ಮೊದಲಾದ ಸಾಧನವ ಪಡೆದು || 13 ||

ಇಂದ್ರನೊಡನಾಹವದಿ ಕುಂದದಿಹ ಧೀರ ||
ಹೊಂದುತ ಕಿರೀಟಿಯೆಂಬಂದದಲಿ ಪೆಸರ  || 14 ||

ಹರಿಹಯ ಪ್ರಸ್ಥವನು ಸೇರಿ ಸುಖವಾಗಿ ||
ಹರಿ ದಯದೊಳಿರ್ದ ಕಥನವನು ಲೇಸಾಗಿ || 15 ||

ಗಾನನಾಟಕದ ಪ್ರಧಾನ ಲಕ್ಷ್ಯದಲಿ ||
ನಾನಿದನು ಕತಿಗೈವೆ ಯಕ್ಷಗಾನದಲಿ || 16 ||

ನ್ಯೂನತೆಗಳಿರಲದನು ತಿದ್ದಿ ಸಾಮದಲಿ ||
ಜ್ಞಾನಿಗಳು ಮನ್ನಿಸುವುದೆನ್ನ ಪ್ರೇಮದಲಿ || 17 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕ್ಷಿತಿಪ ಜನಮೇಜಯಗೆ ಭಾರತ | ಕಥೆಯ ವೈಶಂಪಾಯನಾಖ್ಯನು |
ಶ್ರುತಗೊಳಿಸುತಿರಲೆಂದನಾ ಮತಿ | ಯುತನು ನಮಿಸಿ || 18 ||

ಪುಂಡರೀಕಾಂಬಕನ ಕರುಣದಿ | ಗಂಡುಗಲಿ ನರನಧಿಕ ಧೈರ್ಯದಿ |
ಖಾಂಡವದ ವನ ದಹನವೆಸಗಿ ಪ್ರ | ಚಂಡತನದಿ || 19 ||

ಧುರದೊಳಿಂದ್ರನ ಗೆಲಿದೊಲಿಸಿ ಬಲು | ಹರುಷದಿಂದ ಕಿರೀಟಿ ಬಿರುದನು |
ಧರಿಸಿ ಪುರಕೈತಂದು ಸೌಖ್ಯದಿ | ಮೆರೆದಪರಿಯ || 20 ||

ಪೇಳಬೇಕೆನಗೆನುತಲಿರೆ ಭೂ | ಪಾಲಕನ ಮನ್ನಿಸುತ ನುಡಿದನು |
ಶ್ರೀ ಲಲಾಮನ ಸ್ಮರಿಸಿ ಯತಿವರ | ಲೀಲೆಯಿಂದ || 21 ||

ವಾರ್ಧಕ

ಧರಣಿಪತಿ ಲಾಲಿಸೈ ಹರಿಹಯಪ್ರಸ್ಥಪುರ |
ವರದಿ ಪಾಂಡವರಿರಲು ಹರಿಯ ಕಾರುಣ್ಯದಿಂ |
ನರನಿಗೆ ಸುಭದ್ರೆಯಿಂ ತರಳನಾದಂ ಕೀರ್ತಿಭರಿತನಭಿಮನ್ಯು ಮುದದಿ ||
ತರುಣಿ ದ್ರೌಪದಿಯೊಳೈವರಿಗೈವರಣುಗರಿರೆ |
ಹರುಷದಿಂದೊಂದು ದಿನ ಪರಮ ಸಂಭ್ರಮದಿ ಭೂ |
ವರ ಧರ್ಮಸುತನನುಜರೆರಕದಿಂದೋಲಗದಿ ಮೆರೆದು ಮತ್ತಿಂತೆಂದನು || 22 ||

ರಾಗ ಕೇತಾರಗೌಳ ಅಷ್ಟತಾಳ

ಮಾತಲಾಲಿಸಿ ಸಹ | ಜಾತ ಮುಖ್ಯರು ನಾನಾ | ರೀತಿಯಿಂದಲಿ ನಮ್ಮನು |
ಘಾತಿಸಲೆಣಿಸಿದ | ನೀತಿಯ ಗಣಿಸದೆ | ಪಾತಕಿ ಕೌರವನು || 23 ||

ಗುರುಭೀಷ್ಮ ವಿದುರಾದಿ | ಹಿರಿಯರೆಂದುದನು ಧಿ | ಕ್ಕರಿಸುತ್ತ ಛಲಚಿತ್ತದಿ ||
ದುರುಳ ಸೌಬಲಕರ್ಣಾ | ದ್ಯರ ಕೂಡಿ ಬರಿದೆ ಮ | ತ್ಸರಿಸುವ ದಿನದಿನದಿ || 24 ||

ಏತಕೀ ಬುದ್ಧಿ ಸಂ | ಜಾತವಾಯಿತೊ ಕಾಣೆ | ನೀತೆರ ಶಶಿಕುಲದ ||
ಖ್ಯಾತಿಗೆ ಕೊರತೆಯ | ನೀತನು ಗೈದ ವಿ | ಧಾತನೆ ಬಲ್ಲನಿದ || 25 ||

ಎಂದು ಧರ್ಮಜ ಪೇಳ | ಲಂದು ರೋಷದೊಳೆದ್ದು | ನಿಂದನು ಪವನಜನು ||
ಮುಂದಾಗಿ ಸಭೆಯೊಳಿಂ | ತೆಂದನು ಗರ್ಜಿಸಿ | ಗಂದೇಭ ನಿಭಬಲನು || 26 ||

ರಾಗ ಭೈರವಿ ಏಕತಾಳ

ಅಂಧಕನಣುಗರ ಹದನ | ಆದ | ನೊಂದನು ಪೇಳದಿರಣ್ಣ ||
ಬಂದಪುದೆನಗತಿರೌದ್ರ | ಕೇ | ಳಂದವರೆಸಗಿದ ಛಿದ್ರ || 27 ||

ಕರೆದಿತ್ತರು ಘನ ವಿಷವ | ಮತಿ | ಮರೆಸುತ ಬಂಧಿಸಿ ತನುವ ||
ಭರದಿಂ ಮಡುವಿನೊಳಿಡುತ | ಬಲ್ | ಕಿರುಕುಳವಿತ್ತರು ಸತತ || 28 ||

ಅರಗಿನ ಮನೆಯನು ಮಾಡಿ | ಹುಸಿ | ಹರುಷದಿ ನಮ್ಮನು ಕೂಡಿ ||
ಉರಿಸಲು ಯತ್ನಿಸಿದಂದ | ನಾ | ಮರೆವೆನೆ ಮನದಿ ವಿರೋಧ || 29 ||

ಹರಿಕಪೆಯೊಂದಿರಲಿನ್ನು | ಬಡಿ | ದುರುಳಿಸದಿರೆನಹಿತರನು ||
ಪರಿಕಿಸುವೆನು ವೇಳೆಯನು | ಎನ | ಲರುಹಿದ ಸುರಪನ ಸೂನು || 30 ||

ರಾಗ ಕಾಂಭೋಜಿ ಝಂಪೆತಾಳ

ಲಾಲಿಸಗ್ರಜನೆ ಪಾಂ | ಚಾಲೆಯ ಸ್ವಯಂವರದಿ |
ಮೇಲೀ ಸುಭದ್ರೆ ಕೈವಿಡಿದ ||
ವೇಳೆಯಲಿ ನಮ್ಮೊಡನೆ | ಕಾಳಗಕೆ ನಿಂದವರ |
ಮೇಲೆನಗೆ ಕರುಣವಿಲ್ಲೆಂದ || 31 ||

ದುರುಳ ತನದಲಿ ಕೆಣಕಿ | ದರೆ ನಮ್ಮ ತ್ವರಿತದಿಂ |
ದುರಗಕೇತನವ ಮುರಿದೊಗೆವ ||
ಸ್ಥಿರ ಚಿತ್ತದಿಂದ ನಾ | ನಿರುವೆನೆನೆ ನಕುಲಾಂಕ |
ಹಿರಿಯರೊಡನೆಂದ ಸಹದೇವ || 32 ||

ಧೂರ್ತರಿಗೆ ಕೆಡುವದಿನ | ಹತ್ತಿರದೊಳಿಹುದದಕೆ |
ವ್ಯರ್ಥಪೌರುಷದಿ ಫಲವೇನು ||
ಚಿತ್ತಭವಪಿತನ ಸ್ಮರಿ | ಸುತ್ತನಾವಿಹುದೆಂಬ |
ಸತ್ಯನುಡಿಗೆಂದ ಧರ್ಮಜನು || 33 ||

ರಾಗ ಸಾಂಗತ್ಯ ರೂಪಕತಾಳ

ಸರಿಯಾದುದೀ ಮಾತು | ನಿರತ ಸತ್ಯದಿ ನಾವಿ |
ನ್ನಿರಲು ವೈರಿಗಳಿಂದೇನಹುದು ||
ಹರಿಯ ಕಾರುಣ್ಯದಿ | ಹರಿದುಕಷ್ಟವು ಕ್ಷೇಮ |
ಕರವಾಗಿ ಮನೆಯಾದುದೊಂದು || 34 ||

ಬಾಲೆ ಸುಭದ್ರೆ ಪಾಂ | ಚಾಲೆಯರಲಿ ಚೆಲ್ವ |
ಬಾಲರು ಜನಿಸಿದ ಹದನ ||
ಶ್ರೀಲೋಲನಿಗೆ ಪೋಗಿ | ಪೇಳಬೇಕೆಂದು ಸು |
ಶೀಲನಟ್ಟಿದನು ಚಾರಕನ || 35 ||

ಧರಣೀಶನಾಜ್ಞೆಯ | ತೆರದೊಳಾತನು ದಿವ್ಯ |
ತರವಾದ ವಸ್ತುಭೂಷಣವ ||
ತ್ವರಿತದಿಕೈಗೊಂಡು | ತೆರಳಿದ ದ್ವಾರಕಾ |
ಪುರಕೆ ತಾಳುತ್ತ ಸಂತಸವ || 36 ||

ಭಾಮಿನಿ

ಇತ್ತ ದ್ವಾರಕೆಯೊಳಗೆ ಯಾದವ |
ಮೊತ್ತವನು ಪಾಲಿಸುತ ರುಕ್ಮಿಣಿ |
ಸತ್ಯಭಾಮಾದ್ಯಷ್ಟಮಾಂಗನೆಯರ ಸಮೇಳದಲಿ ||
ಚಿತ್ರಮಯ ನವರತ್ನ ಪೀಠದಿ |
ಚಿತ್ತಜನಪಿತನೊಪ್ಪಿರಲು ಸ |
ದ್ವಸ್ತುಭೂಷಣಗಳನು ಕಾಣಿಕೆಯಿರಿಸಿ ಚರ ಮಣಿದ || 37 ||

ರಾಗ ಆರ್ಯಸವಾ ಏಕತಾಳ

ಪರಿಕಿಸಿ ಪಾಂಡವ | ಚರನೆಂದರಿಯುತ | ಕರುಣಾಕರ ಶಿರನೆಗಹಿದನು ||
ಬರವಾಯ್ತೇನೆನ | ಲರುಹಿದ ದೈನ್ಯದಿ | ಹರುಷದಿ ಜೋಡಿಸಿ ಕರಗಳನು || 38 ||

ರಾಗ ಸಾರಂಗ ಅಷ್ಟತಾಳ

ಲಾಲಿಸಬೇಕು ಜೀಯ | ಪಾಂಡವ ಪ್ರಿಯ |
ಲೋಲಸಜ್ಜನರೆರೆಯ ||
ಪಾಲಿಸುತಿರುವ ನ | ಮ್ಮಾಳಿದ ಸಂತಸ |
ತಾಳಿಯಟ್ಟಿದನೆನ್ನ | ಪೇಳಲು ಶುಭವಾರ್ತೆ || 39 ||

ಅಮ್ಮ ಸುಭದ್ರೆಗೊರ್ವ | ಪುಟ್ಟಿದ ಚಿಣ್ಣ |
ನೆಮ್ಮದಿಯಿಂದಿರುವ ||
ಕಮ್ಮಗೋಲನ ರೂಪ | ಕಿಮ್ಮಡಿಯಿಂ ತೋರ್ಪ |
ನಿಮ್ಮವನಳಿಯನು | ನಿರ್ಮಲನಭಿಮನ್ಯು || 40 ||

ದೇವಿ ದಪದನಂದನೆ | ತಾ ಪಡೆದಿಹ |
ಳೈವರು ಬಾಲರನೇ ||
ದೇವ ನಿನ್ನವರ ಸ | ದ್ಭಾವದೊಳೊಡಗೂಡಿ |
ನೀವೆಲ್ಲ ಬಹುದು ಚಿ | ತ್ತಾವಧಾನ ಪರಾಕು || 41 ||

ರಾಗ ಶಂಕರಾಭರಣ ತ್ರಿವುಡೆತಾಳ

ಪಸರಿಸಿತು ಶುಭವಾರ್ತೆ ಯಾದವ | ವಿಸರದಲಿ ಸತಿನಿವಹದಿ ||
ಕುಸುಮನಾಭನು ಸಹಿತ ಬಲು ಸಂ | ತಸವ ತಳೆಯೆ || 42 ||

ಅಕ್ಕರೆಯ ಮಮಪಾಂಡುಸುತರಿಗೆ | ಮಕ್ಕಳುದಿಸಿದರೆನ್ನುತ ||
ಸಕ್ಕರೆಯತೆಗೆದಿತ್ತನೆಲ್ಲರಿ | ಗಕ್ಷಯಾತ್ಮ || 43 ||

ಕ್ಷೇಮವಾರ್ತೆಗಳನು ವಿಚಾರಿಸಿ | ಪ್ರೇಮದಿಂ ನಿಜಭಕ್ತರ ||
ಧಾಮಕೈದಲು ಮನವಮಾಡಿದ | ಕಾಮಜನಕ || 44 ||

ಚರನಿಗುಚಿತವನಿತ್ತು ಕಳುಹಿಸಿ | ಕರೆದು ಸ್ಮರಕತವರ್ಮರ |
ಪುರವರದ ರಕ್ಷಣಗೆ ನೇಮಿಸಿ | ಪರಮ ಪುರುಷ || 45 ||

ವಾರ್ಧಕ

ಹಿರಿಯ ಬಲಭದ್ರ ವಸುದೇವ ದೇವಕಿಯರಿಂ |
ತರುಣಿ ರುಕ್ಮಿಣಿ ಸತ್ಯಭಾಮಾದಿ ಸತಿಯರಿಂ |
ಪರಿವಾರ ಸಹಿತ ಶಂಗರಿಸಿ ಪೀತಾಂಬರಂ ಪೊರಟು ಮಣಿರಥವನೇರಿ ||
ತರಿಸಿ ನವ ವಸನ ಭೂಷಣವ ತೆಗೆದಿರಿಸಿ ಬಲು |
ಹರುಷದಿಂ ಪರಿಪರಿಯ ಬಿರುದಿನಿಂ ಛತ್ರ ಚಾ |
ಮರ ವಾದ್ಯ ಘೋಷದಿಂ ಬಂದನಿಂದ್ರಪ್ರಸ್ಥಪುರಕೆ ಭಕ್ತಾಧೀನನು || 46 ||

ರಾಗ ಭೈರವಿ ತ್ರಿವುಡೆತಾಳ

ಬಂದನಾಗ | ರಥದಲಿ | ಬಂದನಾಗ || ಪಲ್ಲ ||

ಬಂದನಾ ಗೋವಿಂದ ಪಾಂಡವ | ನಂದನರ ಕಾಂ |
ಬೊಂದುತವಕದಿ || ಅನುಪಲ್ಲ ||

ಪರಮವೇದೋದ್ಧರಣ ಕಾರಣ | ನಿರತ ಖಳಸಂಹರಣ ಸದ್ಗುಣ |
ಭರಿತ ಶುಭಲಕ್ಷಣ ನಿಪುಣ ನಿಜ | ಶರಣ ಜನರಾಭರಣ ಕೇಶವ ||
ತರುಣ ಭಾಸ್ಕರಕಿರಣ ಭವಸಾ | ಗರತರಣ ಮಾರಮಣ ಕರುಣಾ |
ಕರ ಯಶೋವಿಸ್ತರಣ ಪಾವನ | ಚರಣ ಶ್ರೀ ಸಂ | ಕರುಷಣಾನುಜ || ಬಂದನಾಗ || 47 ||

ಎನ್ನ ಪಂಚಪ್ರಾಣ ಪಾಂಡವ | ರಿನ್ನುಪ ಪ್ರಾಣಗಳು ತತ್ಸುತ |
ರೆನ್ನ ಶಕ್ತಿಯೆ ವಹ್ನಿಸಂಭವೆ | ಎನ್ನ ಛಾಯಾರೂಪನೇ ನರ ||
ಎನ್ನ ಮಾಯೆ ಸುಭದ್ರೆಯಾಗಿರ | ಲೆನ್ನ ಜೀವಜ್ಯೋತಿಯಹನಭಿ |
ಮನ್ಯುಯಿವರನು ಕಂಡಪೆನು ಯೆನ | ಗನ್ಯರವರಲ್ಲೆನುತ ಹರುಷದಿ || ಬಂದನಾಗ || 48 ||

ತೆಗೆದುನೋಡುತ ಸೊಗಯಿಸು ಹೊಸ | ಬಗೆಯ ತೊಡುಗೆಯ ಝಗಝಗಿಸುವಂ |
ಗಿಗಳನೊಪ್ಪುವ ಬಗೆಯೊಳೆಲ್ಲವರ | ಬಿಗಿದು ಮೆಲ್ಲನೆ ಮುನ್ನಿನಂದದಿ ||
ಮಗುಗಳಿಗೆ ಸವಿಯೊಗುವ ತಿನಿಸಿನ | ಬಗೆಯ ಮಿಕ್ಕವರೊಳು ವಿಚಾರಿಸಿ |
ನಗುತ ನರಲೀಲಾಚರಿತ ಬಂ | ಧುಗಳೊಡನೆ ಸರಸಗಳನಾಡುತ || ಬಂದನಾಗ || 49 ||

ರಾಗ ನಾದನಾಮಕ್ರಿಯೆ ಅಷ್ಟತಾಳ

ದೇವರೈತಹರೆಂಬ ಸುದ್ದಿಯ | ಕೇಳ್ದು | ಭೂವರ ಮಂತ್ರಿಗಿತ್ತಾಜ್ಞೆಯ |
ತೀವಿದ ಗುಡಿತೋರಣಗಳಿಂದ | ಸರ್ವ | ಠಾವ ಶಂಗಾರವ ಗೈಸಿದ || 50 ||

ಬಂಧುಮಿತ್ರರ ಸಹಜಾತರ | ನಾರೀ | ವಂದವು ಸಹಿತ ಯುಧಿಷ್ಠಿರ |
ಚಂದದಿ ವಾದ್ಯದ ಘೋಷದಿ | ಬರ | ಲಂದು ಹರಿಯಕಾಂಬ ತವಕದಿ || 51 ||

ದೂರದಿ ತೇರನು ನಿಲಿಸುತ್ತ | ಪರಿ | ವಾರವೆಲ್ಲವ ಕೆಳಗಿಳಿಸುತ್ತ ||
ಭೂರಿಸಂತೋಷವ ತಾಳುತ್ತ | ಪನ್ನ | ಗಾರಿಧ್ವಜನು ಬಂದ ನಡೆಯುತ್ತ || 52 ||

ವಿಧವಿಧ ಸಂಭ್ರಮವೆಸೆಯಲು | ಶಶಿ | ಯದುವಂಶ ಜತೆಗೂಡೆ ಕ್ಷಣದೊಳು ||
ತ್ರಿದಶರು ಸುಮವಷ್ಟಿ ಸೂಸಲು | ಧರೆ | ಯಧಿಪತಿ ಕಂಡಿದಿರ್ಗೊಳ್ಳಲು || 53 ||

ಭಾಮಿನಿ

ಹುಡುಕಿ ಕಾಣವು ವೇದತತಿ ತಾ |
ಹುಡುಕಿ ಬಂದನು ಭಕ್ತರನು ಸಂ |
ಗಡದೊಳಿರ್ದರನುಳಿದು ಯಮಜಗೆ ಮಣಿದ ವಿನಯದಲಿ ||
ಅಡಿಗಳಿಗೆ ವಂದಿಸಿದ ಕೃಷ್ಣನ |
ಪೊಡವಿಪತಿ ತೆಗೆದಪ್ಪಿದನು ಶ್ರುತಿ |
ಗಡಣತಲೆವಾಗಿದವು ಲಜ್ಜಾಮನದೊಳನಿತರಲಿ || 54 ||

ರಾಗ ಕೇತಾರಗೌಳ ಝಂಪೆತಾಳ

ಕರುಣನಿಧಿ ಸಲಹೆಂದರು | ವರಯುಧಿ |
ಷ್ಠಿರ ಭೀಮ ನರ ಯಮಳರು ||
ಹರಿಪದಾಬ್ಜಕೆ ಮಣಿದರು | ಶಿರನೆಗಹು |
ತಿರಲು ಜಯವೆನೆ ಸರ್ವರು || 55 ||

ಪರಿಪರಿಯ ಘೋಷಗಳಲಿ | ಸ್ವಾಗತಿಸಿ |
ಪರಮ ಪುರುಷನ ಮುದದಲಿ ||
ಕರವಿಡಿದು ಕರೆತಂದನು | ಪುರಕೆಯದು |
ಪರಿವಾರ ಸಹಿತ ನಪನು || 56 ||

ಶ್ರೀರಮಣ ಬರುವ ಸೊಬಗ | ಸೌಾಗ್ರ |
ವೇರಿನಾರಿಯರ ಬಳಗ ||
ಸೇರಿ ಪರಿಕಿಸಲು ಬೇಗ | ಹರಿಯನುಜೆ |
ಸಾರಿ ಸಖಿಗೆಂದಳಾಗ || 57 ||

ರಾಗ ಬೇಗಡೆ ರೂಪಕತಾಳ

ನೋಡೆಲೇ ಸಖೀ | ಅಣ್ಣ ಬಂದ | ನೋಡೆಲೇ ಸಖೀ || ಪಲ್ಲ ||

ನೋಡೆ ಸಖಿ ನಮ್ಮಣ್ಣ ಬಂದ | ರೂಢಿಪತಿಯ ಪುಣ್ಯದಿಂದ |
ಕೂಡೆರಥವ ನಿಳಿದು ದಯವ | ಮಾಡಿ ಕರವ ನೀಡಿ ಬಹುದ || 58 ||

ತಂದೆತಾಯಿ ಬಂಧುಗಳು ಸಂ | ಬಂಧಿಕರು ನಮ್ಮತ್ತಿಗೆಯರು |
ಮುಂದೆ ಹಿರಿಯಣ್ಣಯ್ಯ ಸಹಿತ | ಬಂದನಂದತನಯನಂದ || 59 ||

ಚಿನ್ಮಯಾತ್ಮ ಕೃಷ್ಣನೊಲಿದು | ಚಿಣ್ಣರನ್ನು ಕೈಯೊಳೆತ್ತಿ |
ಮನ್ನಿಸುತ್ತ ಹರಿಸಿದರೆ ಸಂ | ಪೂರ್ಣ ಧನ್ಯರೆನ್ನಲೇನು || 60 ||

ಮಕ್ಕಳನು ಮಜ್ಜನವಗೈಸಿ | ತಕ್ಕ ಭೂಷಣಗಳ ತೊಡಿಸಿ |
ಸಕ್ಕರೆ ಹಾಲನ್ನು ಕುಡಿಸಿ | ನಕ್ಕುನಗಿಸಿ ಕರೆದುತಾರೆ || 61 ||

ಕಂದ

ಈ ತೆರದಿಂದ ಸುಭದ್ರೆಯು |
ಪೀತಾಂಬರನಂ ಕುತೂಹಲದಿ ಬಣ್ಣಿಸುತಲಿ ||
ಮಾತಾಡುತ್ತಲಿ ಸಖಿಯರ |
ವ್ರಾತದಿ ದ್ರೌಪದಿಯ ಕೂಡಿ ಸರಸ ದೊಳಿರ್ದಳ್ || 62 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪತಿ ಕೇಳಿತ್ತ ಧರ್ಮಜ | ಕರುಣನಿಧಿಯೊಡಗೂಡಿ ನಿಭವದಿ |
ಮೆರೆವ ಸಭೆಗೈತಂದ ಸಂತಸ | ಭರಿತನಾಗಿ || 63 ||

ಆ ಸಮಸ್ತರ ಜಯರವದಿ ಬಲು | ಘೋಷದಲಿ ನವರತ್ನಮಯ ಸಿಂ |
ಹಾಸನದಿ ಕುಳ್ಳಿರಿಸಿದನು ಕ್ಷೋ | ಣೀಶ ಹರಿಯ || 64 ||

ಭಕ್ತಿಯಲಿ ಮನ್ನಿಸುತ ಶ್ರೀ ಪುರು | ಷೋತ್ತಮನಿಗಾರತಿಯ ಬೆಳಗಿದ |
ಮತ್ತೆ ನಪವರನಾಡುತಿರೆ ಕುಶ | ಲೋಕ್ತಿಗಳನು || 65 ||

ಭಾಮಿನಿ

ಆ ವಕೋದರ ಬಲನ ನರ ವಸು |
ದೇವಕನ ಯಮಳರು ಸಮಸ್ತರ |
ಠೀವಿಯಿಂುಪಚರಿಸಿದರು ಸುಖವಾರ್ತೆಗಳನರಿದು ||
ದೇವಕಿಯ ರುಕ್ಮಿಣಿಯ ಭಾಮಾ |
ದೇವಿ ಮುಖ್ಯರನೊಲಿಸೆ ಸತಿಯರು |
ಭಾವಜನಪಿತ ನೀಕ್ಷಿಸಿದ ನಪನೋಲಗದ ಸಿರಿಯ || 66 ||

ವಾರ್ಧಕ

ನೀಲಮಣಿಗಳ ಕಾಂತಿಯಿಂದ ಕತ್ತಲೆಯಾಗಿ |
ಮೇಲೆ ಮೌಕ್ತಿಕದ ರುಚಿ ಸುಜ್ಯೋತ್ಸ್ನೆಯಂತಾಗಿ |
ಸಾಲಾದ ವಜ್ರ ಕಂಭಗಳ ದೀಧಿತಿಯಿಂದ ಪಗಲಿನಂತಾಗಿ ಮೆರೆವ ||
ತೇಲಗಟ್ಟಿದ ಹವಳಗಳ ಕಾಂತಿ ಲಹರಿಗಳ |
ನಾಲೋಕಿಸಿದರೆ ಭಾಸ್ಕರನ ಸಂಧ್ಯಾರಾಗ |
ಲೀಲೆಯಂತಾಗಿರಲು ಪಗಲಿರುಳು ಸಂಜೆಗಳನೆಚ್ಚರಿಸುವಂತಿರ್ದುದು || 67 ||

ಕಂದ

ಈ ಪರಿಯಿಂದಿರೆ ಸೊಬಗಂ |
ಶ್ರಿ ಪುರುಷೋತ್ತಮನು ಕಾಣುತತಿ ಸಂಭ್ರಮದಿಂ ||
ಭೂಪಾಲಕಗೆಂದನು ಚಿ |
ದ್ರೂಪಂ ನಸುನಗೆಯ ಬೀರಿಸರಸದ ನುಡಿಯಂ || 68 ||

ರಾಗ ಕಾಪಿ ಅಷ್ಟತಾಳ

ಕ್ಷೇಮವೇ ಧರ್ಮಸಂಜಾತ | ಗುಣ ||
ಧಾಮ ನಿರ್ಮಲ ಚಿತ್ತ ಕೀರ್ತಿ ವಿಖ್ಯಾತ || ಪಲ್ಲ ||

ಅತ್ತೆ ಕುಂತೀದೇವಿಯರಿಗೆ | ವಾಯು |
ಪುತ್ರನರ್ಜುನ ಯಮಳರು ಸಹಜರಿಗೆ ||
ಮತ್ತ ಕಾಶಿನಿ ದ್ರುಪದಜೆಗೆ | ಶುಭ |
ಗಾತ್ರೆ ಸುಭದ್ರೆಗೆ ಪುತ್ರರೆಲ್ಲರಿಗೆ || 69 ||

ಏನೆಂಬೆ ನಿನ್ನ ವೈಭವವ | ಇಂದ್ರ |
ಕಾಣನೀಪರಿಯೊಳೋಲಗದ ಸಂಭ್ರಮವ ||
ತಾನೆ ಬಂದೊಲಿದಳು ಸಿರಿಯು | ಅನು |
ಮಾನವೇನಿದಕಿನ್ನು ನಿಜದೊಳಚ್ಚರಿಯು || 70 ||

ಫಣಿರಾಜಗರಿದು ಬಣ್ಣಿಸಲು | ನೋಡಿ |
ಫಣಿಕೇತುವರಿತು ಮತ್ಸರಿಸನೆಪೇಳು ||
ಫಣಿಭೂಷಣನು ನಿಮ್ಮ ದಯದಿ | ಕಾವ |
ನೆನಲು ಕೈಮುಗಿದೆಂದ ಜನಪಾಲನಯದಿ || 71 ||

ರಾಗ ಕಾಂಭೋಜಿ ಝಂಪೆತಾಳ

ದೇವ ತವಕರುಣದಲಿ | ನಾವು ಸುಕ್ಷೇಮಿಗಳು |
ಕೇವಲಾಪ್ತರು ಸಹಿತ ನಿಜದಿ ||
ನೋವನೆಸಗಿದರು ಕೃಪ | ಟಾವಲಂಬಿಗಳಿಂದ |
ಜೀವಕೈಗಾಯ್ದೆ ನೀ ದಯದಿ || 72 ||

ಅರಿತು ಪವನಜನೆಂದ | ಪರಮಾತ್ಮ ನಿನ್ನ ಕಪೆ |
ಯಿರುವ ಕಾರಣ ಹಿಡಿಂಬಕನ |
ತರಿದು ಬಕನನು ಮುರಿದು | ಧರಣಿಸುರರಿಗೆ ಕ್ಷೇಮ |
ದೊರಕುವಂತಾಯ್ತು ಸಂಪನ್ನ || 73 ||

ಧೂರ್ತಕೌರವರಿನ್ನು | ಮತ್ಸರಿಸಿ ನಮ್ಮ ವೈ |
ರತ್ವವೆಸಗಿದಡವರ ಬಡಿದು ||
ಮಿತ್ರಸುತಗೊಪ್ಪಿಸುವೆ | ಸತ್ವದಿಂದೆನುತಲಿರೆ |
ಪಾರ್ಥಶೌರ್ಯದೊಳೆಂದನಂದು || 74 ||

ಕುರುಪತಿಯಚಿತ್ತವನು | ಮರುಳೆಸಗುತಿಹ ಸೂತ |
ತರಳ ಮುಖ್ಯರು ಸಮರಕೊದಗಿ ||
ಬರಲವರ ಸಂಹರಿಸಿ | ಮರುಳುಗಳಿಗುಣ ಬಡಿಸ |
ದಿರೆನೆಂದ ಹರಿಗೆ ಶಿರಬಾಗಿ || 75 ||

ಮತ್ತೆ ನಕುಲನು ನುಡಿದ | ಶತ್ರುಗಳ ಗೆಲವು ಸಾ |
ಮರ್ಥ್ಯವನು ಕರುಣಿಸುವುದೊಲಿದು ||
ವ್ಯರ್ಥ ಪೌರುಷ ವ್ಯಾಕೆ | ನುತ್ತ ಚಿನ್ಮಯಗೆ ಮಣಿ |
ಯುತ್ತಲಿರೆ ಸಹದೇವ ಕೇಳ್ದು || 76 ||

ಕತ್ರಿಮವ ಸಾಧಿಸುತ | ಸತ್ಯವನು ಕಡೆಗಣಿಸಿ |
ಪೃಥ್ವಿಭಾರಕರಾದ ವರನು ||
ದೈತ್ಯಾರಿಪರಿಕಿಸುವ | ನಿತ್ಯರ್ಥಕೆಂದು ಪುರು |
ಷೋತ್ತಮಗೆ ನಮಿಸಿ ಪೇಳಿದನು || 77 ||

ಭಾಮಿನಿ

ಮೆಚ್ಚಿದೆನು ನಾ ನಿಮ್ಮ ಶೌರ್ಯಕೆ |
ಹೆಚ್ಚು ಮಾತುಗಳೇಕೆ ನಿಜ ಮನ |
ದಿಚ್ಛೆಯಂತಹುದೆನುತಲಚ್ಯುತ ನುಡಿಯುತಿರಲಿತ್ತ ||
ಸಚ್ಚರಿತೆ ದ್ರೌಪದಿಯ ಪರಿಕಿಸಿ |
ಬೆಚ್ಚಿದಂದದಿ ಟಿಸಿ ಹಂಗಿಸಿ |
ಬಿಚ್ಚದಂತರ್ಯವನು ಭಾಮಾ ದೇವಿ ನುಡಿಸಿದಳು || 78 ||

ರಾಗ ಬಿಲಹರಿ ಏಕತಾಳ

ಹರಿಣಾಂಕವದನೆ ಸ | ಚ್ಚರಿತೆ ದ್ರೌಪದಿರನ್ನೆ |
ತರಳರೆಷ್ಟಿಹರೇನೆ | ತರುಣಿ ಸಂಪನ್ನೆ ||
ವರರೈವರನು ನೀನೆ | ಮರುಳುಮಾಡುವ ಜಾಣೆ |
ಸರಸಕಂಜುವೆ ನಾನೆ | ನಿರತ ನಿನ್ನಾಣೆ || 79 ||

ಲಾಲಿಸತ್ತಿಗೆ ಲಕ್ಷ್ಮೀ | ಲೋಲನ ದಯದಿ ಸು |
ಶೀಲರೈವರ ಚೆಲ್ವ ಬಾಲಕರಿವರು ||
ಜಾಲ ಮಾತುಗಳೇಕೆ | ಪೇಳೆ ಬಂಜೆಯತನ |
ತಾಳಿ ಕೊಂಡಿಹುದೇನೆ | ಮೂಲವನುಸುರು || 80 ||

ಕರುಣವಾರಿಧಿಯು ನ | ಮ್ಮರಸನಾದುದರಿಂದ |
ನಿರತಸದ್ಭಕ್ತರ ಪುರವಾಸವಾಯ್ತು ||
ಅರಿಯದೆ ನುಡಿದುದ | ಪರಿಪೂರ್ಣ ಕ್ಷಮಿಸೆಂದ |
ಡೊರೆದಳು ಪಾಂಚಾಲೆ | ಮರೆಯದೆಳ್ಳಿನಿತು || 81 ||

ಪರಮಾತ್ಮ ತನ್ನಯ | ವರನೆಂಬ ಗರ್ವವ |
ತೊರೆದರೆ ನಿನ್ನೊಡನಿರುವ ನಿಶ್ಚಯದಿ ||
ಬರಿದೆ ಹಂಗಿಸುತ ಮ | ತ್ಸರಿಸಲು ಫಲವೇನು |
ಹಿರಿಯಳು ನಿನಗೆ ನಾ | ನೆರಗುವೆ ಮುದದಿ || 82 ||