ವಾರ್ಧಕ

ದಂತಿಪುರದರಸ ಕೇಳ್ ದಂತಿವಾಹನನು ದಿಗ್ |
ದಂತಿಯನಡರ್ದು ಬರೆ ದಂತಿಚರ್ಮಾಂಬರಂ |
ದಂತಿಮುಖ ಮೊದಲಾದನಂತ ಗಣ ಸಹಿತ ಬಂದಂತರಿಕ್ಷದಿ ನೆರೆಯಲು ||
ದಂತಿನಗರಾಧೀಶ ದಂತಗಳ ಭರದಿ ಮಸೆ |
ದಂತರಿಸದುಸಿರಿದಂ ದಂತಿವರದಾದ್ಯರೊಳು |
ನಿಂತು ನೀವೆಲ್ಲವರು ಮುಂತೆನ್ನಧಟ ನೋಡಿರಿಂತೆನಲು ಭೀಮ ನುಡಿದ || ೨೯೫ ||

ರಾಗ ಕಾಂಭೋಜಿ ಝಂಪೆತಾಳ

ಜಲದೊಳಡಗಿಹನಧಟನೀಕ್ಷಿಸುವದೇನೆನ್ನ | ಬಲುಹ ಪರಿಕಿಪುದು ಭಟರೀಗ ||
ಗೆಲುವೆ ನಿಮಿಷಾರ್ಧದೊಳು ತಾನಿವನನೆನಲು ಮೂ | ದಲಿಸಿ ಕೌರವನೆಂದನಾಗ || ೨೯೬ ||

ಊಟದಲಿ ನಿಪುಣನೆಂಬುದ ಬಲ್ಲೆ ಸಾಕು ವಾ | ಚಾಟವನು ಬಿಡು ಪರಾಕ್ರಮದ ||
ತೋಟವನು ತರಿವೆ ಜೂಜಾಟದಲಿ ನಿನ್ನ ಬೊ | ಬ್ಬಾಟವೇನಾಯ್ತೆನಲು ನುಡಿದ || ೨೯೭ ||

ಅಂದು ಶಕುನಿಯ ಕುಮಂತ್ರದಿ ಗೆಲಿದ ಫಲವೀಗ | ಬಂದುದೈ ದುಶ್ಯಾಸನನನು ||
ಕೊಂದಾತನಾರು ನೀ ತಿಳಿಯೆಯಾಯೆನಲು ಬಳಿ | ಕೆಂದ ಗಾಂಧಾರಿಯಾತ್ಮಜನು || ೨೯೮ ||

ಪುಟ್ಟಿದವರೆಲ್ಲ ಸಾಯದಲಿಹರೆ ಕಮಲಜನ | ಸೃಷ್ಟಿಯೊಳು ನಿನ್ನೊಳಹುದೇನು |
ಹುಟ್ಟು ಸಾವುಗಳಾರಿಗರಿವುದೆಲೆ ಬರಿದೆ ಮತಿ | ಗೆಟ್ಟು ಮಾತಾಡದಿರು ನೀನು || ೨೯೯ ||

ಪೂರ್ವಾಪರ ಜ್ಞಾನವಿರಲು ನೀನೇತಕೆ | ಮ್ಮೂರ್ವಿಗಾಸೆಯ ಮಾಡಿ ಧುರದಿ ||
ನಿರ್ವಹಿಸಲಾರದೋಡಿದೆ ಮರುಳೆ ನಾ ನಿನ್ನ | ಸರ್ವಥಾ ಕೊಲದೆ  ಬಿಡೆ ಜವದಿ || ೩೦೦ ||

ಎಲವೊ ದೈವಾಧೀನವಾಗಿಹುದು ಜಗವು ಮ | ತ್ತಿಳೆಯ ಜನರಿಂದಾಹುದೇನು ||
ಕೊಳುಗುಳದಿ ನಿನ್ನೊಡಲ ಬಗಿದನುಜರನು ತೆಗೆದು | ನಲಿವೆನೆನಲೆಂದ ಮರುತಜನು || ೩೦೧ ||

ಭಾಮಿನಿ

ಎಲವೊ ದುರ್ಮತಿ ನಿನ್ನ ಕಾಯ್ವಡೆ |
ಕೊಲುವಡೆಯು ನಾ ದೈವವಲ್ಲದೆ |
ಹಲವು ದೈವವದುಂಟೆ ನೋಡುವೆನದರನೆಂದೆನುತ ||
ನಿಲದೆ ಗದೆಯನು ತಿರುಹಿ ಕುರುಕುಲ |
ತಿಲಕನನು ಹೊಯ್ಯಲ್ಕೆ ತಡೆದಾ |
ಛಲದಿ ವಿಕ್ರಮನಾರ್ದು ಹೊಯ್ದನು ಬಳಿಕ ಪವನಜನ || ೩೦೨ ||

ರಾಗ ಸಾವೇರಿ ಮಟ್ಟೆತಾಳ

ಏನನೆಂಬೆನವರ ಯುದ್ಧವ | ಗತಾಕ್ಷನೃಪನ |
ಸೂನು ಹೊಡೆದ ಘಾತ ತಡೆವು | ತಾ ನರೇಂದ್ರನನುಜ ಹೊಯ್ದ || ನೇನನೆಂಬೆ  || ಪ ||

ಸುಳಿದು ಪಕ್ಷಿ ರಾಜನಂತೆ | ಸಿಲುಕಿ ನಿಲುಕಿ ಭುಜಗನಂತೆ |
ಹಳಿದು ಸುಳಿಸಮೀರನಂತೆ | ಬಳಿಕ ಲೆರಗಿ ಸಿಡಿಲಿನಂತೆ || ಏನನೆಂಬೆ || ೩೦೩ ||

ಇರಿಕಿದರು ಗ್ರಹಂಗಳಂತೆ | ತರುಬಿದರು ಮೃಗೇಂದ್ರನಂತೆ |
ಉರುವಣಿಸುತ ಮುಗಿಲಿನಂತೆ | ಭರದೊಳೆರಗುತಿರ್ದರಂತೆ || ಏನನೆಂಬೆ || ೩೦೪ ||

ಧರಣಿ ನಡುಗಿತುಭಯ ಭಟರ | ಚರಣಹತಿಗೆ ನಭದೊಳೀಶ |
ಸುರಪ ಮುಖ್ಯರೆಲ್ಲ ಪೊಗಳೆ | ಹರಿಯು ಶಿರವ ತೂಗುತಿರ್ದ || ನೇನನೆಂಬೆ || ೩೦೫ ||

ಭಾಮಿನಿ

ಗಂಡುಗಲಿ ದುರ್ಯೋಧನನು ಖತಿ |
ಗೊಂಡು ಬಳಿಕಾ ವಾಯುಜನನು |
ದ್ದಂಡ ಸತ್ತ್ವದೊಳೆರಗಿದನು ಕಂಧರವನಾರ್ಭಟಿಸಿ ||
ಡೆಂಡಣಿಸಿ ಮಾರುತಿ ಧರಿತ್ರಿಗೆ |
ದಿಂಡುಗೆಡೆಯಲು ಧರ್ಮಜಾದ್ಯರು |
ಕಂಡು ಮರುಗಲು ಚೇತರಿಸಿ ಬಳಿಕೆದ್ದು ನಿಮಿಷದಲಿ || ೩೦೬ ||

ಕಂದ

ಪೊಡವಿಪ ಕೇಳ್ ಮಾರುತಿ ಕೆಲ |
ಸಿಡಿದಿರ್ದಾ ಗದೆಯ ಕೊಂಡು ಚಚ್ಚರದಿಂದಂ ||
ಘುಡುಘುಡಿಸುತ ಕುರುಪತಿಯ |
ನ್ನಡಹಾಯ್ದುಬ್ಬುತ್ತರೋಷವೆತ್ತು ಕಾದಿದರ್ || ೩೦೭ ||

ರಾಗ ಸುರುಟಿ ಮಟ್ಟೆತಾಳ

ಎಡೆಬಿಡದವರು | ಹೊಡೆದಾಡಿದರು      || ಪ ||

ಧಡಿಧಡಿಸುತ ಭೋರ್ಗರೆವುತ | ಲಡಿಯಿಡುತೊಡನೊಡನೆ ||
ತುಡುಕುತ ಪಿಡಿದೆಳೆವುತ ಬಡಿ | ದಡಗೆಡ ದಡಘಡನೆ || ೩೦೮ ||

ಕಂಡವರೆದೆ ನಡುಗುವ ವೋಲ್ | ಕೊಂಡಾ ಗದೆಯೊಳಗೆ  ||
ದಿಂಡುದರಿವೆನೆನುತಂದೆಡ | ದಂಡೆಯೊಳಡಿಗಡಿಗೆ || ೩೦೯ ||

ಫಡ ಫಡ ನಿಲು ನಿಲ್ಲೆಂದೆನು | ತೊಡನತಿ ರೋಷದಲಿ ||
ನುಡಿವುತ ಕನಲುತ ನೇತ್ರದಿ | ಕಿಡಿಯಿಡುತುಗ್ರದಲಿ || ೩೧೦ ||

ಉಬ್ಬದಿರಲೊ ಮರುತಾತ್ಮಜ | ಬೊಬ್ಬೆಯದೇಕೀಗ |
ಗಬ್ಬರಿಪುದು ಗದೆ ನೋಡೆನು | ತುಬ್ಬುತ ಹೊಯ್ದಾಗ || ೩೧೧ ||

ಮೂರ್ಖನೆ ಕೇಳ್ ನಿನಗಂತಕ | ನೂರ್ಕಾಣಿಪೆನೆನುತ ||
ಮೂರ್ಕಣ್ಣಿನ ಹರನಂದದಿ | ಭೋಗರೆದಡಿಯಿಡುತ || ೩೧೨ ||

ನಿಲ್ಮೊಗದೋರೆಂದೆನುತತಿ | ಬಲ್ಮೆಯೊಳ್ ಮರುತಜನು ||
ಪಲ್ಮೊರೆವುತ ಭೂಪನ ಕೊರ | ಳೊಳ್ಮತ್ತೆರಗಿದನು || ೩೧೩ ||

ಹಾರಿತು ಗದೆಯೊಂದೆಸೆ ಮಿಗೆ | ಕಾರುತ ರಕ್ತವನು ||
ಧಾರಿಣಿಪತಿ ಮನದೆಚ್ಚರು | ಜಾರಲು ಮಲಗಿದನು || ೩೧೪ ||

ಕಂದ

ಅರೆನಿಮಿಷದಿ ಮೈ ಮರೆದಾ |
ಕುರುನೃಪನೆಚ್ಚರ್ತೇಳುತ ಭರದಿಂದಾಗಳ್ ||
ಮರುತಕುಮಾರಕನಂ ಮಿಗೆ |
ಪರಿಕಿಸುತುರುತರ ರೋಷದಿ ಗದೆಗೊಂಡೆಂದಂ  || ೩೧೫ ||

ರಾಗ ಶಂಕರಾಭರಣ ಮಟ್ಟೆತಾಳ

ಎಲೆ ಸಮೀರನಣುಗ ಕೇಳು ಧುರದೊಳೆನ್ನನು | ಗೆಲಿದೆನೆಂದು ಹಿಗ್ಗಬೇಡ ನಿನ್ನ ಬಲುಹನು ||
ತಳುವದೀಗ ನಿಲಿಸಿ ರಾಜ್ಯ ವೈಭವಗಳನು | ಗೆಲವಿನಿಂದಲಾಳ್ವೆ ತಾನೆನುತ್ತ ಹೊಯ್ದನು || ೩೧೬ ||

ಹೊಯ್ದ ಘಾತಕೊಡನೆ ದಂಡನೊಡ್ಡಿ ಪವನಜ | ಬೈದು ಪೇಳ್ದ ನಿನ್ನ ಕರುಳ ಬಗೆವೆನಂಧಜ ||
ಕಾಯ್ದುಕೊಂಬರಿಲ್ಲವೀಗಲೆನುತ ಗದೆಯೊಳು | ಹೊಯ್ದಡಾಗ ಧರಣಿಪಾಲ ಬಿದ್ದ ಕಣದೊಳು || ೩೧೭ ||

ಎದ್ದು ಭೀಮನೊಡನೆ ಪೇಳ್ದನೆಲವೊ ನಿನ್ನಯ | ಉದ್ದುರುಟುತನವ ನಿಲಿಸಿಕೊಡುವೆ ನಿರ್ಣಯ |
ಕದ್ದು ಬೆಣ್ಣೆ ಮೊಸರ ಮೆಲುವ ಗೊಲ್ಲರಣುಗನ | ಬುದ್ಧಿಯನ್ನು ಕೇಳಿ ಕೆಟ್ಟೆನೆನಲಿಕಾ ಕ್ಷಣ ||೩೧೮||

ಹರಿಯ ಮಾತನುಳಿದು ಬಂಧು ಬಳಗವೆಲ್ಲವ | ಧುರದಿ ಕೊಲಿಸಿದಧಮ ನಿನ್ನ ಕೊಂದು ರಾಜ್ಯವ ||
ಹರುಷದಿಂದಲಾಳ್ವೆನೆನಲು ಕೇಳ್ದು ಭರದಲಿ | ಕುರು ನೃಪಾಲ ಗದೆಯ ತಿರುಹುತೆಂದ ಖತಿಯಲಿ ||೩೧೯||

ಭರದ ಹೊಡೆತವಿದಕೊ ಸೈರಿಸೀಗ ಕರೆಸಿಕೋ | ಹರಿ ಧನಂಜಯಾದ್ಯರನ್ನು ಬಲಕೆ ಕೂಡಿಕೋ ||
ಮರಳಬೇಡ ನಿಲ್ಲೆನುತ್ತ ಶಿರದೊಳೆರಗಿದ | ಮರುತಸುತ ಧರಿತ್ರಿಗಾಗ ಜವದೊಳುರುಳಿದ ||೩೨೦||

ಭಾಮಿನಿ

ಪೃಥ್ವಿಪತಿ ಕೇಳಿಂತು ಭೀಮನ |
ನೆತ್ತಿಗೆರಗಲು ಕರದ ಗದೆ ನೆಲ |
ಕತ್ತಹಾರಲು ಡೆಂಡಣಿಸಿ ಮಲಗಿದನು ಮೂರ್ಛೆಯಲಿ ||
ಮತ್ತಧಿಕ ಸಂತೋಷ ಮಬ್ಬಿನೊ |
ಳಿತ್ತ ಕೌರವ ಧರ್ಮಜಾದಿ ಭ |
ಟೋತ್ತಮರ ಕರೆಕರೆದು ನುಡಿದನು ಮದದ ಮೋಡಿಯಲಿ || ೩೨೧ ||

ರಾಗ ತೋಡಿ ಏಕತಾಳ

ನೋಡಿರಿ ಧರ್ಮಜ ಫಲುಗುಣಾದಿಗಳು |
ರೂಢಿಯೊಳನಿಲಜ ಬಿದ್ದ ಚಂದಗಳು      || ಪ ||

ತನ್ನ ಮಾನಿನಿಗಿತ್ತ | ಮುನ್ನಿನ ಭಾಷೆ ವ್ಯರ್ಥ |
ಕನ್ನಡಿಗಂಟಾಯ್ತ | ಇನ್ನು ತಾಳುವಳೆಂತು || ನೋಡಿರಿ || ೩೨೨ ||

ಮಿಡುಕುಳ್ಳರ್ಜುನ ನೀನು | ತೊಡು ಗಾಂಡೀವವನು |
ಕೆಡೆದ ಭೀಮನ ಕಂಡು | ಕೆಡುಕರಂತಿಹೆಯಿಂದು || ನೋಡಿರಿ || ೩೨೩ ||

ಧೃಷ್ಟದ್ಯುಮ್ನನೆ ನೋಡಿ | ದೃಷ್ಟಾಂತಗಳ ಮಾಡಿ |
ದಿಟ್ಟ ಭೀಮನ ಪ್ರಾಣ | ನಷ್ಟವೈವುದೊ ಜಾಣ | ನೋಡಿರಿ || ೩೨೪ ||

ನಕುಲಸಹದೇವರೆಲ್ಲ | ಚಕಿತರಾಗಿಹರೆಲ್ಲ |
ಯುಕುತಿಯಿನ್ನೇನು ಮುಂದೆ | ಪ್ರಕಟಿಸಿರೆನ್ನೊಳಿಂದೆ || ನೋಡಿರಿ || ೩೨೫ ||

ಕಪಟನಾಟಕ ರಂಗ | ಗುಪಿತವೇನೊ ನಿನ್ನಂಗ |
ನಿಪುಣ ಭೀಮನ ನೋಡು | ಚಪಳತ್ವದಿ ಮಾತಾಡು || ನೋಡಿರಿ || ೩೨೬ ||

ಭಾಮಿನಿ

ವಿಗತಲೋಚನ ಲಾಲಿಸಿಂತಾ |
ವಿಗಡ ದುರ್ಯೋಧನನು ಧರ್ಮಜ |
ನಗಧರಾದ್ಯರ ಕರೆದು ಗಜರಿದನಧಿಕ ಗರ್ವದಲಿ ||
ಮಿಗೆ ಕಿರೀಟಿಯು ಭೀಮಸೇನನ |
ಬಗೆಯನೀಕ್ಷಿಸುತುಸಿರ‍್ದನಾರೈ |
ದಘಹರನ ಪದಕೆರಗಿ ಕೈಗಳ ಮುಗಿವುತಿಂತೆಂದ || ೩೨೭ ||

ರಾಗ ಬೇಗಡೆ ಏಕತಾಳ

ಇಂದಿರೇಶ ಮುಕುಂದ ಲಾಲಿಸು | ಈ ವಾಯುಸುತನುಸಿ |
ರಿಂದು ಪಸರಿಸುವಂದ ತೋರಿಸು ||
ಮಂದರಾಧರ ಸುಂದರಾನನ | ನಂದಕಂದ ಸನಂದನಾದಿ ಮು |
ನೀಂದ್ರವರದ ಸುರೇಂದ್ರವಂದ್ಯ ಖ | ಗೇಂದ್ರವಾಹನ ಸಿಂಧು ಶಯನನೆ || ೩೨೮ ||

ಬ್ರೂಹಿ ತಾವಾಯ್ತಿಂದಿನೀವರೆಗೆ | ಪಾಂಡವರು ಮಮ ಪ್ರಾ |
ಣಾಹಿಯೆನ್ನುವರಿನ್ನು ನಿಮ್ಮಡಿಗೆ ||
ಊಹಿಸಲದೇಕಿನ್ನು ದಿವಿಜ ಸ | ಮೂಹ ಕರೆದುದು ಪುಷ್ಪವೃಷ್ಟಿಯ |
ಸ್ನೇಹದಿಂದಲಿ ಕೌರವೇಂದ್ರಂ | ಗೀ ಹದನವೆಂತೈ ವಿಚಿತ್ರವು || ೩೨೯ ||

ಎಂದರಾಲಿಸುತಂದು ಕರುಣದಿ | ಶ್ರೀಕೃಷ್ಣ ಮಾರುತ |
ನಂದನನ ಬಳಿಗಯ್ದಿ ಶೀಘ್ರದಿ ||
ಗಂಧವಾಹಕುಮಾರ ಭೀಮನೊ | ಳಂದವಿಟ್ಟಾ ಪ್ರಾಣಪವನನ |
ಹೊಂದಿಸಲು ಬಳಿಕೆದ್ದು ಭೀಮನು |  ಮುಂದುವರಿದುಬ್ಬೇರುತಿರ್ದನು || ೩೩೦ ||

ವಾರ್ಧಕ

ವಾರಣಪುರಾಧೀಶ ಕೇಳಿಂತು ಪವನಜಂ |
ವಾರಿಜಾಂಬಕನೊಲುಮೆಯಿಂದ ಚೇತರಿಸಿ ಕೆಲ |
ಸಾರಿದ ಗದಾದಂಡಮಂ ಕೊಂಡು ಗರ್ಜಿಸಿ ಸುಯೋಧನಂಗಿದಿರಾದನು ||
ತೋರಿದಂ ಕೃಷ್ಣ ಮರುತಜಗೊಂದು ಕುರುಹಮಂ |
ಧೀರ ಕೌರವ ಗೆದ್ದನೆಮ್ಮ ಮಯ್ದುನನಯ್ಸೆ |
ಮಾರುತಿಯು ಸೋತನೊಮ್ಮೆಗೆಯೆನುತ ತೊಡೆಗಳಂ ತಟ್ಟಿ ಸೂಚನೆಗೆಯ್ದನು || ೩೩೧ ||

ರಾಗ ಶಂಕರಾಭರಣ ಮಟ್ಟೆತಾಳ

ಭಳಿರೆ ಧಿಟ್ಟ ಕುರುಕುಲೇಶನೊಮ್ಮೆಗೆನ್ನನು |
ಕೊಳುಗುಳದಲಿ ಗೆಲಿದ ಹಮ್ಮ ನಿಲಿಸಿಕೊಡುವೆನು ||
ತಲೆಯೊಳೂರುಗಳಲಿ ಹೊಡೆಯಲಾಗದೆನ್ನುತ |
ಬಲಿದ ತಹವ ಮೀರ್ದೆ ತನಗೆ ಬರದು ಪಾತಕ || ೩೩೨ ||

ಎನುತ ಕಂಸಹರನ ಕುರುಹ ನೆನೆದು ಭೀಮನು |
ಕನಲಿ ಭೋರ್ಗರೆವುತಲಂಧನಣುಗಗೆಂದನು ||
ಘನದೊಳೆಮ್ಮ ಜರೆದ ಬಲುಹ ತೋರೆನುತ್ತಲಿ |

ತೊನೆದು ಗದೆಯ ತಿರುಹಿ ಲಾಗು ಲವಣೆಯಿಂದಲಿ || ೩೩೩ ||

ಕುಪ್ಪಳಿಸುತ ಧಣುರೆ ಧಣುರೆನುತ್ತ ಭುಜವನು |
ಚಪ್ಪರಿಸುತ ಹೊಯ್ದನಾಗ ನೃಪನ ತೊಡೆಯನು ||
ಧೊಪ್ಪೆನುತ್ತಲೂರ್ಗಳುಡಿದು ನೆಲಕೆ ನಿಮಿಷದಿ |
ದರ್ಪವಳಿದು ಬಿದ್ದ ಕೌರವೇಂದ್ರ ಸಮರದಿ || ೩೩೪ ||

ಭಾಮಿನಿ

ಅವನಿಪತಿ ಕೇಳ್ ಕಾಳುಗಿಚ್ಚೆ |
ದ್ದವಘಡಿಸೆ ನೀರೆರೆದ ತೆರದಲಿ |
ಪವನಜನ ದುರ್ಧರ ಗದಾಘಾತದಲಿ ತೊಡೆಯುಡಿದು ||
ಅವನಿಯೊಳು ಕುರುರಾಯ ರಣದಲಿ |
ಪವಡಿಸಲು ಕಾಣುತ್ತ ಮಾರುತಿ |
ಸವಡಿ ಗದೆಯಲಿ ಬಳಿಕ ಝೇಂಕಿಸುತವನ ನುಡಿಸಿದನು || ೩೩೫ ||

ರಾಗ ಮುಖಾರಿ ಏಕತಾಳ

ಭೂಪ ಏನಾಯ್ತು ಪ್ರತಾಪ | ಯುದ್ಧದಿ ಬಳಲಿ |
ಈ ಪಾಟಿಯಾಯ್ತೆ ಸುಕಲಾಪ | ಯಾರಿಲ್ಲದೆ ಪಾಪ |
ಈ ಪರಿ ಕಲುನೆಲ | ದೊಳು ಮಲಗಿರುವರೆ |
ಭೂಪರೊಳಧಮ ಸ್ವ | ರೂಪನೆ ಹಾ ಹಾ || ಭೂಪ      || ಪ ||

ಕೃತ್ರಿಮ ಜೂಜಾಡಿಸಿದೆ ಮೊದಲು | ಸತಿಯುಟ್ಟ ಸೀರೆ |
ಒತ್ತಾಯದಿಂದೆಳೆಸಿದ ಗರ್ವದೊಳು | ಕಾನನವಾಸ |
ದತ್ತಲಟ್ಟಿಸಿದೆ ತೋಷದೊಳು | ಬೆರಳೊಳೇಡಿಸುತ |
ನಿತ್ತು ನೋಡಿದೆಯ ಹಾಸ್ಯದೊಳು | ನಾನಾ ರೀತಿಯೊಳು ||
ಹೊತ್ತಿಸುತರಗಿನ | ಕೃತ್ಯದಿ ಪಿಂದಕೆ | ವತ್ತಿ ದಣಿಸಿದುದು | ಕುತ್ತರವಿದಕೋ | ಭೂಪ || ೩೩೬ ||

ಹಳುವಕಟ್ಟಿದೆನೆಂಬ ಛಲಕೆ | ನಾರಿಯ ಸೀರೆ |
ಸೆಳೆದನೆಂದೆಂಬ ನಿನ್ನಾಳ್ತನಕೆ | ಅರಗಿನ ಗೃಹದೊ |
ಳಳವಟ್ಟಗ್ನಿಯನೊಟ್ಟಿದುದಕೆ | ಬಾಲ್ಯದೊಳೆನ್ನ |
ಬಳಲಿಸಿ ವಿಷವನುಣಿಸಿದುದಕೆ | ಕೊಳನೊಳಿಕ್ಕಿದಕೆ ||
ತಿಳಿದೊಂದಿದ ನೀ | ಕೊಳಬೇಕೆನುತವ | ನಲಸದೆ ನೃಪಶಿರ | ತುಳಿದುಸಿರಿದನು || ಭೂಪ ||೩೩೭||

ವಾರ್ಧಕ

ನಾಗನಗರಾಧೀಶ ಕೇಳಿಂತು ಪವನಜಂ |
ನಾಗನಿದಿರೊಳು ಮಲೆವ ಮೃಗ ರಾಜನಂದದಿಂ |
ನಾಗಪುರದರಸನಂ ಭಂಗಿಸುತ ಹಲುಗಳಂ ಕಳಚಿದಂ ಖಾತಿಯಿಂದ ||
ಆ ಗರುವ ನೆಗಳಿದಾಟೋಪಮಂ ನೆನೆನೆನೆದು |
ನಾಗಭೂಷಣನಂತೆ ಕನಲಿ ಕಡು ರೋಷಮನ |
ನಾಗಿ ಮತ್ತೊಡನೊಡನೆ ಸದೆದೊದೆದು ಮಕುಟಮಂ ಕಳಚಿದಂ ಕಲಿ ಭೀಮನು || ೩೩೮ ||

ಭಾಮಿನಿ

ಈ ತೆರದೊಳಾ ವಿಗತನೇತ್ರನ |
ಜಾತನಾಗಿಹ ಕುರುಕುಲೇಶನ |
ವಾತಸುತನೊಡನೊಡನೆ ನೋಯಿಸುತಿರಲು ಬಳಿಕಂದು ||
ನೀತಿಯಲ್ಲೆಂದೆನುತ ದೇವ |
ವ್ರಾತ ಬಯ್ದುದು ಪವನಜನ ಯಮ |
ಜಾತ ಮಿಗೆ ನಯನೀತಿಯಿಂದೊಡಬಡಿಸುತುಸಿರಿದನು || ೩೩೯ ||

ರಾಗ ಕಾಂಭೋಜಿ ಝಂಪೆತಾಳ

ಬವರದೊಳು ಸೋತವನನಿಂದು ನೀನೀ ಪರಿಯ | ಬವಣೆಬಡಿಸುವರೇನೊ ತಮ್ಮ ||
ಅವನಿಪತಿ ಲೋಕೈಕಮಾನ್ಯನಿವನೈಸೆ ಪಾ | ರ್ಥಿವವಂಶರತ್ನವಲೆ ತಮ್ಮ || ೩೪೦ ||

ಕದನಕರ್ಕಶನಿವನ ತೊಡೆಗಳನು ರಣದಿ ಹೋಯ್ | ದುದೆ ನೀತಿಯಲ್ಲವೆಲೊ ತಮ್ಮ ||
ವದನಕೊದೆದಿಂದು ಹಲ್ಲುಗಳ ಕಳಚಬಹುದೆ ಕೇ | ಳಿದುವೆ ತಪ್ಪಾಯ್ತಲ್ಲೊ ತಮ್ಮ || ೩೪೧ ||

ಆವ ರೀತಿಯೊಳಿನ್ನು ಹಿರಿಯಪ್ಪನಾದವನ | ನಾವು ನೋಡುವುದಯ್ಯೊ ತಮ್ಮ ||
ದೇವಿ ಗಾಂಧಾರಿ ದುಃಖವನಾವ ಪರಿಯಲ್ಲಿ | ನಾವು ನಿಲಿಸುವುದೆಂತು ತಮ್ಮ || ೩೪೨ ||

ರಾಗ ಮಾರವಿ ಏಕತಾಳ
ಎಂದಾ ಧರ್ಮಜ ಪವನಕುಮಾರಕ | ಗಂದುಸಿರುತ್ತಿರಲು ||
ಮುಂದುವರಿದು ಬಲರಾಮನು ಗರ್ಜಿಸು | ತೆಂದನು ರೋಷದೊಳು || ೩೪೩ ||

ನುಡಿದ ತಹಂಗಳ ಮರೆದೀ ಕುರುಕುಲ | ದೊಡೆಯನ ಸಂಗರದಿ ||
ತೊಡೆಯನು ಮುರಿದನ್ಯಾಯದೊಳೀ ಪರಿ | ನಡಸಿದೆಯುನ್ಮದದಿ || ೩೪೪ ||

ತಕ್ಕುದ ಕೂಡಲೆ ಮಾಡುವೆನಿದಕೆನು | ತುಕ್ಕುವ ಕ್ರೋಧದಲಿ |
ಮುಕ್ಕಣ್ಣನ ತೆರದಲಿ ಹಲಧರ ಮಿಗೆ | ಧಿಕ್ಕರಿಸುತ ಕನಲಿ || ೩೪೫ ||

ಎನುತೆಡಗಯ್ಯಲಿ ನೆಗಹುತ ಮುಸಲವ | ಘನ ಪೌರುಷದಿಂದ ||
ಅಣಕಿಸಿ ನೇಗಿಲ ತುಡುಕುತ ಸಮರಾಂ | ಗಣಕಿಳಿದಯ್ತಂದ || ೩೪೬ ||

ಬರುತಿಹ ರೋಹಿಣಿಕುವರನ ಕಾಣುತ | ಮರುತಜ ಖಾತಿಯೊಳು ||
ತಿರುಹಲು ಗದೆಯನು ಬಳಿಕಾ ಪಾರ್ಥನು | ವರ ಗಾಂಡೀವದೊಳು || ೩೪೭ ||

ಸರಳನು ಸಂಧಿಸೆ ತವಕದಿ ಮಾದ್ರೀ | ತರಳರು ಪಂಥದೊಳು ||
ಭರದಿಂ ತಮ್ಮಾಯುಧಗಳ ತುಡುಕಲು | ಧರಣಿಪ ಭೀತಿಯೊಳು || ೩೪೮ ||

ನೆನೆದನಿದೇನೇನಾಗುವುದೆಂಬುದ | ಮನುಮಥಪಿತ ಬಲ್ಲ ||
ಎನುತಿರೆ ಮುರರಿಪು ನಡೆತಂದುಸಿರಿದ | ವಿನಯದಿ ಬಲಗೆಲ್ಲ || ೩೪೯ ||

ರಾಗ ಬೇಗಡೆ ಏಕತಾಳ

ಚಂದವಾಯ್ತಿನ್ನಣ್ಣದೇವನೆ | ಇದೇನು ರೋಷ | ಬಂದುದೇಕಿಂತು ಸುಮ್ಮನೆ ||
ಮಂದಮತಿಗಳು ಹಿಂದೆ ಕೌರವ |  ರೊಂದುಗೂಡಿದರಂದು ಛತ್ರದಿ |
ಸಂದ ದ್ಯೂತವನಾಡಿ ಪಾಂಡವ | ನಂದನರು ದಣಿದಂದವರಿಯೆಯ || ಚಂದವಾಯ್ತಿನ್ನಣ್ಣದೇವನೆ       || ಪ ||

ಬಾಲೆಯಾ ಪಾಂಚಾಲೆಯುಟ್ಟಿಹ | ಶಾಲೆ ಸುಲಿದಂದು | ಅರಗಿನೊ |
ಳಾಲಯವ ಸಮ್ಮೇಳವಿಸಿ ಸುಡೆ | ಪೇಳಲೇನಿಂದು | ಜೂಜಿನ |
ಪಾಳಿಯಲಿ ವನಕೇಳಿಸಿದನಾ | ಕಾಲದೊಳಗಂದು || ನೀವದ |
ಕೇಳಿ ದುಗುಡವ ತಾಳಿಯಂಧನೃ | ಪಾಲನಣುಗನ ಖೂಳನೆಂದಿರಿ |
ಪೇಳಲೇನೀ ಕಾಲದೊಳಗತಿ | ಜ್ವಾಲೆ ಕುರುಭೂಪಾಲಗೋಸುಗ || ಚಂದ || ೩೫೦ ||

ಮಾಡಿದೆವು ತಹ ಯುದ್ಧರಂಗದಿ | ಕೂಡಿ ನಾವಿಂದು | ಮಿಗೆ ಕೈ  |
ಮಾಡದಿರಿ ಶಿರವೂರುಗಳಿಗೆಂ | ದಾಡಲದನಿಂದು | ಮರೆತದ |
ರೂಢಿಪಾಲಕ ಮಾರುತಿಯ ಶಿರ  | ಕೀಡಿರಿದನಿಂದು || ಮತ್ತದ |
ನಾಡಲೇಕನ್ಯಾಯವಾರದು | ಕೂಡಿತಾ ಪ್ರಾರಬ್ಧಕರ್ಮದ |
ಕೇಡು ಕೌರವಗಿಂದು ನೀವ್ ದಯ | ಮಾಡಿ ಬಿಡಿ ಬಿಡಿ ಬೇಡ ಪೌರುಷ  || ಚಂದ || ೩೫೧ ||

ಎಂದ ಕೃಷ್ಣನ ಮಾತನಾಲಿಸು | ತಂದು ಹಲಧರನು | ನಿನ್ನಯ |
ಸಂದ ಮಾಯಕದಿಂದಳಿದನಿ | ನ್ನೆಂದು ಫಲವೇನು | ಕೌರವ |
ವೃಂದವನು ನೀನಿಂದು ಕೊಲಿಸಿದೆ | ಯೆಂದಡದಕೇನು || ಸುಡಲಿ |
ನ್ನೆಂದು ಮನದಲಿ ನೊಂದು ತೆರಳಿದ | ನಂದು ಸಾತ್ಯಕಿ ಸಹಿತಲಿತ್ತಲು |
ಮಂದರಾಧರಗೆಂದ ಕೌರವ | ನಂದಹಂಕೃತಿಯಿಂದ ಗರ್ವದಿ | ಚಂದ || ೩೫೨ ||

ರಾಗ ಮಧ್ಯಮಾವತಿ ಅಷ್ಟತಾಳ

ಶ್ರೇಷ್ಠನಹುದೋ | ಗೋವಳರಾಯ | ಶ್ರೇಷ್ಠನಹುದಹುದೊ    || ಪ ||

ಶ್ರೇಷ್ಠನಹುದೊ ಬ್ರಹ್ಮ | ಸೃಷ್ಟಿಯೊಳ್ ನಿನ್ನಂತ |
ದುಷ್ಟ ಮಾನವರ ಕಾಣೆ | ಗೊಲ್ಲತಿಯರೊ |
ಳಿಷ್ಟದೊಳಿರುವವನೆ | ಮೊಸರ ಕದ್ದು |
ಪೆಟ್ಟನು ತಿಂದವನೆ  ನಾರಿಯರು ಬಿ |
ಚ್ಚಿಟ್ಟ ಶಾಲೆಯನೊಯ್ದನೆ || ಗೋವಳರಾಯ | ಶ್ರೇಷ್ಠನಹುದಹುದೊ || ೩೫೩ ||

ಓರ್ವಳ ಬಸಿರಲಿ ಜನಿಸಿ | ಮ | ತ್ತೋರ್ವಳ ಪುತ್ರನೆಂದೆನಿಸಿ |
ಊರ್ವಿಗೋಸುಗ ನಮ್ಮೊ | ಳುರ್ವಿ ಯುದ್ಧವ ಬಿತ್ತಿ |
ಬೇರ್ವರಿಸಿದೆಯಿನ್ನೇನು | ಲೋಕದೊಳು ನೀ |
ಸರ್ವರ್ಗೆ ಕಪಟಿಗನು | ನಿನ್ನನು ಪೊತ್ತ |
ಊರ್ವಿಗುಬ್ಬಸವುಯಿನ್ನು |  ಮೌನದಲಿ ನಿಂ |
ತಿರ್ವೆ ತಸ್ಕರನೆ ನೀನು | ಗೋವಳರಾಯ | ಶ್ರೇಷ್ಠನಹುದಹುದೋ || ೩೫೪ ||

ಧುರದಿ ಮಾಗಧಗಂಜಿ ಓಡಿ | ಹೇಡಿ | ಶರಧಿಮಧ್ಯದಿ ಮನೆ ಮಾಡಿ |
ವರ ಪಾಂಡುಪುತ್ರರ | ತುರಗ ಚಪ್ಪರಿಸಿ ನೀ |
ಧರಣಿಪಾಲಕರನೆಲ್ಲ | ಯೆನ್ನನುಜರ |
ಧುರದಿ ಕೊಲ್ಲಿಸಿದೆಯಲ್ಲ | ನನಗೆ ವೈರಿ |
ಯರ ತೆರನಾದೆಯಲ್ಲ | ಧರ್ಮಜನಿಂಥಾ |
ಪರಿಯ ತಾನೇನ ಬಲ್ಲ | ಗೋವಳರಾಯ | ಶ್ರೇಷ್ಠನಹುದಹುದೋ || ೩೫೫ ||

ವಾರ್ಧಕ

ಶುಂಡಾಲನಗರಪತಿ ಲಾಲಿಸೀ ತೆರದೊಳಂ |
ಪುಂಡರೀಕಾಕ್ಷನಂ ನೋಡಿ ಕುರುಪತಿ ಕಿನಿಸು |
ಗೊಂಡು ಜರೆಯಲು ಕೇಳದವನಂತೆ ಶ್ರೀಹರಿಯು ಮೌನದಿಂದಿರಲು ಬಳಿಕಾ ||
ಚಂಡಕರನಾದ ದಿನಮಣಿ ಕೃಷ್ಣನಂ ಜರೆವ |
ಭಂಡ ನೃಪನಿವನಿರವ ನೋಡಲರಿದೆಂದು ಮರೆ |
ಗೊಂಡು ಜವದಿಂ ಪಶ್ಚಿಮಾಂಬುಧಿಯ ಪೊರೆಗಯ್ದನೆನೆ ಸಂಜೆ ಮೊಳೆದೋರಿತು || ೩೫೬ ||

ಭಾಮಿನಿ

ಆ ಸಮಯದಲಿ ಸೋಮಕಾದಿ ಮ |
ಹಾ ಸುಭಟರೆಲ್ಲವರ ಕರೆದಾ |
ವಾಸುದೇವನು ನಿಜ ನಿಕೇತನಕವರನುರೆ ಕಳುಹಿ ||
ತೋಷದಿಂ ಯಮಜಾತ ಫಲುಗುಣ |
ನಾ ಸಮೀರ ಕುಮಾರ ಯಮಳರ |
ಕೇಶವನು ಮತ್ತೊಡನೆ ಕರೆದಿಂತೆಂದನತಿ ಮುದದಿ || ೩೫೭ ||

ರಾಗ ನಾದನಾಮಕ್ರಿಯೆ ಆದಿತಾಳ

ಕೇಳಿ ಧರ್ಮಜಾದಿಗಳೆಲ್ಲ ಮಾತ | ಏಳಿ ಪಾಳಯದೊಳು ಚರಿಸುವರೀತ  || ಪ ||

ಧರಣಿಪಾಲರ ಸೈನ್ಯ | ಶರಧಿಯ ನೋಡುತ |
ತರಣಿಸುತಾದ್ಯರ | ಪರಿಯನೀಕ್ಷಿಸಲಿಂದು || ೩೫೮ ||

ಹರಿ ಪೇಳ್ದ ನುಡಿ ಕೇಳಿ | ನರನು ಸಂತಸ ತಾಳಿ |
ವರ ವರೂಥವನೇರಿ | ಪೊರಟ ಸಂಭ್ರಮದಿಂದ || ೩೫೯ ||

ಬೇರೆ ನಾಲ್ವರು ತಮ್ಮ | ತೇರಿನೊಳ್ ಕುಳಿತಾಗ |
ಹಾರಿಸಿ ರಥ ರಣ | ಧಾರಿಣಿಯೊಳಗಂದು  || ೩೬೦ ||

ಮಲಗಿರ್ದ ಕರ್ಣನ | ನಿಳೆಯಾಧಿಪಾಲನ |
ನಿಲವ ನೋಡುತ ಮನ | ವಳಲಿದ ನೃಪತಿಯು || ೩೬೧ ||

ಅರಸ ಧರ್ಮಜ ಮಾದ್ರಿ | ತರಳ ಭೀಮಾದ್ಯರು |
ಧರೆಗಿಳಿದರು ರಥ | ತುರಗವ ನಿಲಿಸುತ್ತ || ೩೬೨ ||

ಭಾಮಿನಿ

ಲಾಲಿಸೈ ಜನಮೇಜಯ ಕ್ಷಿತಿ |
ಪಾಲ ಧರ್ಮಜ ಭೀಮ ಮಾದ್ರೀ |
ಬಾಲಕರು ಧರೆಗಿಳಿಯೆ ಮುರರಿಪು ವಿಜಯನೊಡನೆಂದ ||
ಕೇಳು ಫಲುಗುಣ ರಥವ ನಿಳಿಯಿಳಿ |
ಯೇಳೆನುತ ವನಮಾಲಿ ನುಡಿಯಲು |
ಶ್ರೀಲಲಾಮನೆ ಮೊದಲಿಳಿವುದೆನಲೆಂದನಸುರಾರಿ || ೩೬೩ ||

ಮಾಲಿನೀವೃತ್ತ

ಮರುಳೆ ವಿಜಯ ಮುನ್ನಾ ರಥವನಿಳಿ ಬೇಗ ನಿನ್ನ |
ಧುರಪರಾಕ್ರಮವನೆಲ್ಲ ಮತ್ತೆ ನಾ ಪೇಳ್ವೆ ಸೊಲ್ಲ ||
ಗರುವ ಬಿಟ್ಟೀಗಲಿಳೆಗೆ ಇಳಿ ಬೇಗ ಸಾರ್ದೆ ನಿನಗೆ |
ಒರೆದ ನುಡಿಯಿಲ್ಲದಾಯ್ತೆ ಒಳ್ಳಿತೆ ನೋಡು ಮತ್ತೆ || ೩೬೪ ||

ಕಂದ

ರಕ್ಕಸವೈರಿಯ ನುಡಿಗಂ |
ಬೆಕ್ಕಸಮಂ ತಾಳಿ ಧರಣಿಗಿಳಿಯಲು ಪಾರ್ಥಂ ||
ನಕ್ಕಸುರಾರಾತಿಯು ಮಿಗೆ |
ಯಕ್ಕರದಿಂದಿಳಿಯಲ್ ಸುಟ್ಟುರುಹಿತು ರಥವುಂ || ೩೬೫ ||

ವಾರ್ಧಕ

ಛಿಟಿ ಛಿಟಿಲ್ ಛಿಟಿಲೆಂದು ರಥದ ಹಲಗೆಗಳೊಡೆಯೆ |
ನಿಟಿ ನಿಟಿಲ್ ನಿಟಿಲೆಂದು ಚಮ್ಮಟಿಕೆ ಮುರಿಯಲ್ಕೆ |
ಲಟಕಟಿಸಿ ಹೇಯೆನುತ್ತಿರದೆ ಹೇಷಾರವದಿ ತೇಜಿಗಳು ಚೀರುತಿರಲು ||
ಮಿಟಿ ಮಿಟಿಲ್ ಮಿಟಿಲೆಂದು ಕೇತನಂ ಮುರಿದಿಳೆಗೆ |
ಲಟ ಲಟಿಲ್ ಲಟಿಲೆನುತ ಕಳಚಲಾ ಕ್ಷಣದೊಳಂ |
ಪಟು ಪರಾಕ್ರಮಿ ಹನುಮ ಟರ್ರೆನುತ ಹಾರಲುರಿ ಧಗಧಗಿಸಿ ರಥವುರಿದುದು || ೩೬೬ ||

ಕಂದ

ಇಂತು ವರೂಥವು ದಹಿಸಲು |
ಕುಂತಿಜರೀಕ್ಷಿಸಿ ಭಯಗೊಳುತಚ್ಚರಿವಡುತಂ ||
ಚಿಂತಿಸುತಿರೆ ಮಿಗೆ ಲಕ್ಷ್ಮೀ |
ಕಾಂತನು ನಸುನಗೆಯಿಂದಂ ಪೇಳ್ದರ್ಜುನಗಂ || ೩೬೭ ||

ರಾಗ ಕೇದಾರಗೌಳ ಝಂಪೆತಾಳ

ಕಂಡೆಯಾ ಪಾರ್ಥ ನೀನು | ರಥವನುರಿ | ಗೊಂಡು ದಹಿಸಿದ ಪರಿಯನು ||
ಚಂಡವಿಕ್ರಮನೆ ನಿನಗೆ | ಮೊದಲೆ ನಾ | ಕಂಡೆಂದೆನೀಸು ಬಗೆಗೆ || ೩೬೮ ||

ಎನುತ ಹರಿನುಡಿಯಲಂದು | ಏನಿದೇ | ನೆನುತ ಕೌಂತೇಯರಂದು ||
ಮನದಿ ಭಯವನು ತಾಳುತ | ಕೇಳಿದರು | ವನಜಾಕ್ಷನನು ಸ್ಮರಿಸುತ || ೩೬೯ ||

ಆದರಾಲಿಪುದು ಹದನ | ಭೀಷ್ಮದ್ರೋ | ಣಾದಿನಾಯಕರಂಬಿನ ||
ವೇದಮಂತ್ರಾಸ್ತ್ರದುರಿಯು | ರಥವನುರಿ | ದೂದಿ ಹೋದುದು ಭೀತಿಯು || ೩೭೦ ||

ವಾರ್ಧಕ

ಯಾಮಿನೀವಲ್ಲಭನ ಕುಲಜಾತ ಲಾಲಿಸೈ |
ಭೂಮಿಪಾಲಕನನೀ ತೆರದಿ ಹರಿಸಂತಯಿಸೆ |
ಭೀಮವಿಕ್ರಮ ಗುರುಕುಮಾರನಿತ್ತಲು ಸುಯೋಧನಗೆ ಭಾಷೆಯನುಸಿರುತ |
ಆ ಮಹೀಪತಿ ಪಾಂಡವಾತ್ಮಜರನೀ ರಾತ್ರಿ |
ಶ್ಯಾಮಳಾವಲ್ಲಭನ ಸದನಕಯ್ದಿಸುವೆನೆಂ |
ದಾ ಮಹಾಭಟ ಬರಲ್ಕಿದಿರಿನೊಳು ನಿಂದುದದ್ಭುತ ದೈವ ಭೀಕರದೊಳು || ೩೭೧ ||

ಅಗ್ಗಳೆಯ ದೈವದುಪಹತಿಗಂಜದಾಗಲ |
ತ್ಯುಗ್ರದಿಂದಭವನಂ ಭಜಿಸಿ ಮೆಚ್ಚಿಸುತಲಿ ಸ |
ಮಗ್ರದಿಂದೀಶನೊಲುಮೆಯ ಪಡೆದು ಭೂತಗಳನುಚ್ಚಾಟನಂ ಗೆಯ್ವುತ |
ಉಗ್ರದಿಂದಯ್ದಿ ಮತ್ತಿರದೆ ಕೋಟೆಯ ಕದವ |
ನುಗ್ಗರಿವುತೊಳಪೊಕ್ಕು ಬೀದಿಬೀದಿಯೊಳಯ್ದು |
ತುಗ್ಗಡಿಸಿ ಬಂದು ಪಾಂಚಾಲನೃಪನಣುಗನಾಲಯಕಯ್ದನೇನೆಂಬೆನು || ೩೭೨ ||