ರಾಗ ಶಂಕರಾಭರಣ ಏಕತಾಳ

ಎಂದಾಡೆ ಗುರುಸೂನು ಮತ್ತಿಂ | ತೆಂದನು ಭೀಷ್ಮಾದ್ಯರಂತೆ |
ಇಂದುಗತರಾಗದೆ ನಾವು | ಬಂದುದರಿಂದ ||
ಕಂದಿ ನಿನ್ನಾನನಕೆ ಕಿನಿಸು | ಹೊಂದಿತಾದರಾಗಲಿನ್ನು  |
ಮುಂದೆ ನೋಡೆಮ್ಮಧಟನು ನೀ | ನಿಂದೇಳು ಜೀಯ || ೨೨೬ ||

ಖೂಳ ಪಾಂಡುಸುತರ ಕಾಲ | ನಾಲಯಕಯ್ದಿಸಿ ರಾಜ್ಯ |
ಪಾಲನೆಗೆ ನೀನಲ್ಲದಿಲ್ಲೆಂ | ದೆನಿಸುವೆವಿಂದು ||
ಬೀಳುಗೊಂಡೀ ಜಲವನು ನೀ | ನೇಳು ಪಾಂಡುಸುತರ ಯುದ್ಧ |
ಕೇಳಿಗೆ ಕರೆಯೆಂದಾಡೆ ಭೂ | ಪಾಲನುಸಿರಿದ || ೨೨೭ ||

ನಂಬಿದೆ ಭೀಷ್ಮನ ಮತ್ತೆ | ಹಂಬಲಿಸಿದೆ ದ್ರೋಣನ ನಾ |
ನೆಂಬುದೇನು ಕರ್ಣನಿಹನೆಂ | ದಿಂಬು ಮಾಡಿದೆ ||
ಬೆಂಬಿಡದಿಹ ವಿಧಿಯು ತನ | ಗಂಬ ತೋರಿತಿನ್ನೇನದರ |
ಎಂಬುವೇ ನಾನಷ್ಟಕಿಲ್ಲಿ | ಇಂಬುಗೊಂಡಿರ್ಪೆ || ೨೨೮ ||

ತೆಗೆ ತೆಗೆ ಭೀಷ್ಮಾದ್ಯರಿಂದ | ಮಿಗಿಲಾಗಿ ಸಂಗರದೊಳಿಂದು |
ಮೃಗಧರನಡ್ಡೈಸಿದರು | ಬಗೆಗೊಳ್ಳೆವೀಗ ||
ವಿಗಡ ಭಿಮಾರ್ಜುನರ ಹಿಡಿದು | ಬೆಗಡುಗೊಳಿಸಿ ನಿನ್ನ ಪಾದ |
ಯುಗದೊಳು ತಂದೊಪ್ಪಿಸುವೆವು | ನಗೆಯಲ್ಲ ಜೀಯ || ೨೨೯ ||

ಧುರಸಮರ್ಥರಹುದು ನೀವು | ಒರೆಯಲೇನಿನ್ನದರ ನಾನಿ |
ಲ್ಲಿರುವೆನೀ ಹೊತ್ತಿನಲಿ ನೀವು | ತೆರಳುವದೆಲ್ಲ ||
ಮರುತಸುತನ ಬೇವಿನಾಳ್ಗ | ಳರಸುತ್ತ ಬರುವರಿನ್ನಿ |
ಲ್ಲಿರದೀಗ ನೀವ್ ಪೋಗಿರೆಂದ | ಕುರುರಾಯನಂದು || ೨೩೦ ||

ವಾರ್ಧಕ

ಅರಸ ಕೇಳಿವರಿಂತು ಮಾತಾಡುತಿರಲಿತ್ತ |
ಮರುತಸುತನರಮನೆಯ ಮೃಗ ಬೇಟೆಗಾರತತಿ |
ಭರದಿ ನೀರಡಸಿ ಮಾಂಸವನಿಳುಹಿ ಸರಸಿಯಂ ಹುಡುಕುತಯ್ದಿದರಲ್ಲಿಗೆ ||
ಚರಣಮೊಗಮಂ ತೊಳೆದು ಮಿಗೆ ನಿರ್ಮಲೋದಕವ |
ನಿರದೀಂಟಿ ಗುರುಜಕೃಪರೆಂಬುದಂ ಕೇಳುತವ |
ರರಿದರಾ ನಡುನೀರೊಳಯ್ದೆ ಮಾತಾಡುತಿಹ ಕುರುನೃಪಾಲಕನಿರವನು || ೨೩೧ ||

ಭಾಮಿನಿ

ಧಾರಿಣಿಪ ಕೇಳ್ ದೈವಘಟನೆಯ |
ಮೀರಲಳವೇನಿವರ ನುಡಿಗಳ |
ಸಾರವನು ಸಂಗ್ರಹಿಸಿ ಮನದೊಳಗಾ ಮೃಗಾರಿಗಳು ||
ಸಾರಿದರು ಪಾಳೆಯವನಿತ್ತಲು |
ವೀರ ಪಾಂಡುಕುಮಾರರಟ್ಟಿದ |
ಚಾರಕರು ಮಿಗೆ ಬಂದು ಧರ್ಮಜಗೆರಗುತುಸುರಿದರು || ೨೩೨ ||

ರಾಗ ಸಾವೇರಿ ಅಷ್ಟತಾಳ

ರಾಯ ನೀ ಲಾಲಿಸಯ್ಯ | ನಾವೆಂಬುದ | ಪ್ರೀಯದೊಳೊಲಿದು ಜೀಯ ||
ಬಾಯಾರಿ ನಾವೆಲ್ಲ ಹುಡುಕಿದೆವಾ ಕುರು | ರಾಯನ ನೆಲೆಗಾಣೆವು || ಏನೆಂಬೆವು || ೨೩೩ ||

ಧುರಭೂಮಿಯಲಿ ಸತ್ತರಾ | ಕಾಯವ ಮಗು | ಚಿರದೆ ನೋಡಿದೆವೆಲ್ಲರ |
ಇರವ ಕಾಣೆವು ಕುರುಧಾರಿಣಿಪಾಲನೆ | ಲ್ಲಿರುವ ತಾನೆಂಬುದನು || ನಾವಿನ್ನು || ೨೩೪ ||

ನೆರೆ ಭಗದತ್ತನಂದು | ಯೇರಿದ ಮದ | ಕರಿಯನು ಸಹಿತಲಿಂದು |
ಹೊರಳಿಚಿ ನೋಡಿದರರಿಯೆ ನಾವಿನ್ನೆಲ್ಲಿ | ಸರಿದನೊ ಕೌರವನು || ನಿಮ್ಮವನು || ೨೪೫ ||

ಅಷ್ಟದಿಕ್ಕುಗಳನೆಲ್ಲ | ನೋಡಿದರೆಳ್ಳಿ | ನಷ್ಟನು ತಿಳಿಯಲಿಲ್ಲ ||
ದುಷ್ಟ ಕೌರವನ ಕಂಡವರಿಲ್ಲಿನ್ನವ ಮತಿ | ಗೆಟ್ಟೆಲ್ಲಿ ಗಯ್ದಿದನು || ಮತ್ತವನು || ೨೩೬ ||

ಕಂದ

ಇಂತೆಂದಾ  ಚರರರುಹಲು |
ಸಂತಾಪವ ತಾಳ್ದು ಮನದಿ ಪಾಂಡವತಿಲಕಂ ||
ಚಿಂತಿಸುತಿನ್ನೇನೆಂಬುದ |
ಕಂತುಪಿತನೆ ಬಲ್ಲನೆನುತ ಮತ್ತಿಂತೆಂದಂ || ೨೩೭ ||

ರಾಗ ನೀಲಾಂಬರಿ ರೂಪಕತಾಳ

ಎಲ್ಲಿಗೆ ಪೋದನೊ ಕುರುಕುಲ | ಮಲ್ಲನು ನಮ್ಮನು ವಂಚಿಸಿ |
ನಿಲ್ಲದೆ ತಾನೇನ್ ಗೆಯ್ದನೊ | ಬಲ್ಲವರಾರಿದನು ||
ಎಲ್ಲರ ಮಾತನು ಕೇಳದೆ | ಖುಲ್ಲರ ನುಡಿಯನು ಲಾಲಿಸಿ |
ಕೊಲ್ಲಿಸಿದನು ಗುರುಹಿರಿಯರ  | ಮೆಲ್ಲಗೆ ಜಾರಿದನು || ೨೩೮ ||

ಏತಕೆ ಭೀಷ್ಮನ ದ್ರೋಣನ | ನೇತಕೆ ಗೆಲಿದೆವು ಕರ್ಣನ |
ಏತಕೆ ಮಾದ್ರಾಧೀಶನ | ನೇತಕೆ ಸೌಬಲನ ||
ಏತಕೆ ಕೊಂದೆವು ಕಡೆಯಲಿ | ಪಾತಕಕೆಡೆಯಾಯ್ತಲ್ಲದೆ |
ಭೂತಳ ದೊರಕದು ಕುರುಕುಲ | ನಾಥನುಳಿಯಲಕಟ  || ೨೩೯ ||

ಕಪಟದಿ ದ್ಯೂತವನಾಡಿಸಿ | ದ್ರುಪದಜೆಯಳ ಮನ ಮರುಗಿಸಿ |
ವಿಪಿನಕ್ಕೆಮ್ಮನು ಕಳುಹಿಸಿ | ವಿಪರೀತವ ನಡೆಸಿ ||
ಚಪಳತ್ವದಿ ಸುಯ್ದಾನವ | ನಪಹರಿಸಿದ ಧುರವೆಂದವ |
ಗುಪಿತದೊಳಿಂದಡಗಿದನೇನ್ | ಕಪಟಿಗನೋ ಶಿವನೆ  || ೨೪೦ ||

ಕಂದ

ಇಂತೆಂದಾ ಧರ್ಮಜನತಿ |
ಚಿಂತಿಸುತಿರಲಿತ್ತ ಕಿರಾತರು ಭಯದಿಂದಂ ||
ಸಂತಸದಿಂ ಮಾರುತಿಯೆಡೆ |
ಗಂ ತಳುವದೆ ಬಂದು ಪೇಳ್ದರೀ ವಾರ್ತೆಗಳಂ || ೨೪೧ ||

ರಾಗ ಫರಜು ಏಕತಾಳ

ಭರದಿಂ ನೇಮ್ತೆವು ಸಾಮಿ ನಿಮ್ಮೆಡೆಯ | ಸಲಾಮು ಒಡೆಯ |
ಭರದಿಂ ನೇಮ್ತೆವು ಸಾಮಿ ನಿಮ್ಮೆಡೆಯ                      || ಪ ||

ಈಟೀಟ್ಮಂದಿ ಕೂಡಿ ನಾವು | ಓಟೋಟಾಗಿ ಹೊಲಕಾಯ್ದೇವು |
ಗೂಟ ಹಾಕಿ ಬಲೆ ಬೀಸಿದೆವು || ಮಿಗೆ ಮೊಲನಾ ಹಿಂಡ |
ಕಾಟಿ ಕಾಡ್ಗೋಣಗಳ ದುಮುಕಿದೆವು || ಬಹು ಪರಾಕು ದೊರೆಯೆ || ಭರದಿಂ || ೨೪೨ ||

ಈಟಿ ಕಠಾರಿಯಿರಿತಕಾಗಿ | ಬೇಟೆಯಾಡಿ ಬೇಜಾರಾಗಿ |
ಮೀಟಾದ ದ್ವೈಪಾಯನಕೆರೆ ದಡಕೆ || ಬಂದಲ್ಲಿ ನಾವ್ ನೀ |
ರಾಟಕಿಳಿದೆವು ಕಳೆಯೆ ಬೇಸರಿಕೆ || ಬಹು ಪರಾಕು ದೊರೆಯೆ || ಭರದಿಂ || ೨೪೩ ||

ಕೃತವರ್ಮ ಕೃಪರುಗಳ ಕೂಟ | ಜತೆಯಾಗಶ್ವತ್ಥಾಮನಲ್ಲಿ |
ಕುತುಕುತೆಮ್ತಾ ಮಾತನಾಡ್ತೌನೆ || ನೀರಾಗೆ ಮುಳುಗಿ |
ಕೃತಕದಿ ಕುರುರಾಯನಿರುತವುನೆ || ಬಹು ಪರಾಕು ದೊರೆಯೆ || ಭರದಿಂ || ೨೪೪ ||

ಭೀಮಸೇನನ ಬೇವಿನ ಮಂದಿ | ತಾವು ಕಾಂಬರ್ ಪೋಗೆಂಬ್ತವನೆ ||
ನೇಮಿಸುತ್ತ ನೀರೊಳಿರುತವನೆ | ಈ ಹೊತ್ತು ಸುಮ್ಕೆ |
ಗಾಮ್ಜಾಲ್ನಡೆಸಲೆಂದು ಕುಂತವನೆ || ಬಹು ಪರಾಕು ದೊರೆಯೆ || ಭರದಿಂ | || ೨೪೫ ||

ಭಾಮಿನಿ

ಪೃಥ್ವಿಪತಿ ಕೇಳ್ ಶಬರರೆಂದುದ |
ಕತ್ಯಧಿಕ ಹರುಷದಲಿ ಮರುತಜ |
ಮುತ್ತಿನೇಕಾವಳಿಯ ಸರಗಳ ವೀರ ಮುದ್ರಿಕೆಯ ||
ಇತ್ತನವರಿಂಗಂಗಚಿತ್ತವ |
ಮತ್ತವರ ಮನ್ನಿಸುತ ಕಳುಹಿಸು |
ತಿತ್ತ ಧರ್ಮಜನೆಡೆಗೆ ಬಂದುಸಿರಿದನು ವಿನಯದಲಿ || ೨೪೬ ||

ರಾಗ ದೇಶಿ ಏಕತಾಳ

ಲಾಲಿಸಿ ಕೇಳಿಂದೀ ವಸಗೆ | ಅಣ್ಣದೇವ | ಮನದೊ |
ಳಾಲಸ್ಯವ ಮಾಡಬೇಡ | ಅಣ್ಣದೇವ ||
ಖೂಳ ಕೌರವೇಂದ್ರನಿರವ | ಅಣ್ಣದೇವ | ಈಗ |
ಕೇಳಿದ ನಾನೆಲ್ಲ ಪರಿಯ | ನಣ್ಣದೇವ  || ೨೪೭ ||

ಕಾಯದಾಸೆಗಾಗಿಯವನು | ಅಣ್ಣದೇವ | ಈದ್ವೈ |
ಪಾಯನದ ಸಲಿಲದಲ್ಲಿ | ಅಣ್ಣದೇವ |
ಮೈಯ ಮರೆಸಿಯಿರುವನೆಂದು | ಅಣ್ಣದೇವ | ಪೇಳ್ದ |
ರಾಯತಿಕೆಯಿಂದ ಶಬರ | ರಣ್ಣದೇವ  || ೨೪೮ ||

ಎಂದ ಮಾತ ಕೇಳ್ದು ಬೇಗ | ಧರ್ಮರಾಯ | ತಾ ಮು |
ಕುಂದನಿದ್ದ ಬಳಿಗೆ ಬಂದ | ಧರ್ಮರಾಯ ||
ನಿಂದು ಕರವ ಮುಗಿದು ಪೇಳ್ದ | ಧರ್ಮರಾಯ | ಸ್ವಾಮಿ |
ಇಂದಿರೇಶ ಲಾಲಿಸೆಂದ | ಧರ್ಮರಾಯ  || ೨೪೯ ||

ರಾಗ ರೇಗುಪ್ತಿ ಅಷ್ಟತಾಳ

ಸ್ವಾಮಿ ಲಾಲಿಪುದು ಮಾತ | ಲೋಕವಿಖ್ಯಾತ | ಸ್ವಾಮಿ ಲಾಲಿಪುದು ಮಾತ  || ಪ ||

ಸ್ವಾಮಿ ಲಾಲಿಪುದು ಮಾತ | ಪ್ರೇಮ ಭಕ್ತಸುಪ್ರೀತ |
ಕಾಮನಯ್ಯ ಮುಕುಂದ | ಕೋಮಲಾಂಗ ಗೋವಿಂದ || ಸ್ವಾಮಿ ||   || ಅ ||

ದುರುಳ ಕೌರವನೋರಂತೆ | ದ್ವೈಪಾಯನ | ಕೆರೆಯೊಳ್ ಮುಳುಗಿರ್ಪನಂತೆ |
ತೆರನಾವುದಿನ್ನು ನಮಗೆ | ಸರಸಿಯೊಳಡಗಿದವರ |
ನಿರಿದು ಕೊಲ್ಲುವುದಾವದು ಪರಿ ನೀತಿಯಿದು ಭಾವ || ಸ್ವಾಮಿ || ೨೫೦ ||

ಧುರದಿ ಬಳಲಿದಾತನ | ಶಸ್ತ್ರಾಸ್ತ್ರವು | ವಿರಥನಾಗಿಹ ಭಟನ ||
ಪರಿಕಿಸಿ ಕೊಲುವುದಾವ | ತೆರ ಶಾಸ್ತ್ರನೀತಿ ದೇವ |
ಒರೆಯಲಿನ್ನೇನು ನೀನೆ | ಕರುಣಿಸು ಲಕ್ಷ್ಮೀವರನೆ  || ಸ್ವಾಮಿ || ೨೫೧ ||

ಹಿಂದೆ ಭೀಷ್ಮಾದಿ ಹಿರಿಯರ | ನೆಲ್ಲರ ನಾವು | ಕೊಂದುದನ್ಯಾಯ ಮುರಹರ |
ಮುಂದಿನ್ನು ಗತಿ ಯಾವು | ದೆಂದು ಪೇಳಲು ಕೇಳ್ದು |
ಇಂದಿರೇಶನು ನಗು | ತೆಂದ ನೃಪತಿಯೊಡನೆ || ಸ್ವಾಮಿ || ೨೫೨ ||

ರಾಗ ನವರೋಜು ಏಕತಾಳ

ಕೇಳು ಧರ್ಮಜ ಮಾತ | ನಾ | ಪೇಳುವೆನೈ ಯಮಜಾತ ||
ಖೂಳರಮಥಿಸಿ ಸು | ಶೀಲರ ಪಾಲಿಪ | ಶೀಲವು ನಿಮ್ಮ ನೃಪಾಲರ ಬಿರುದಿದು || ೨೫೩ ||

ಮರಣವು ಬಾರದ ತೆರದಿ | ಆ | ಹಿರಣ್ಯಕನಂದತಿ ಭರದಿ ||
ವರವನು ಪಡೆಯಲು | ನರಹರಿರೂಪವ | ಧರಿಸಿ ಮುಕುಂದ ಸಂ | ಹರಿಸಿದುದರಿಯೆಯ || ೨೫೪ ||

ಕಪಟದಿ ದ್ಯೂತವನಾಡಿ | ನಿಮ್ಮ | ವಿಪಿನಕಟ್ಟಿದ ಖೋಡಿ ||
ದ್ರುಪದಜೆಸೀರೆಯ | ನಪಹರಿಸಿದ ಕುರು | ನೃಪನನು ಮಥಿಸಿ ನೀ | ನಿಪುಣನೆಂದೆನಿಸೈ || ೨೫೫ ||

ಮಾತೆಯಣ್ಣನ ನಾನು | ಹಿಂದೆ | ಘಾತಿಸಿದ ಬಗೆಗಳನು ||
ನೀ ತಿಳಿದದನಿ | ನ್ನ್ಯಾತಕೆ ಮರುಗುವೆ | ನೀತಿಯಿದೆನೆ ಯಮ | ಜಾತನು ಪೊರಟನು || ೨೫೬ ||

ಭಾಮಿನಿ

ಭೂತಳಾಧಿಪ ಕೇಳು ಹರಿ ಯಮ |
ಜಾತ  ಭೀಮಾರ್ಜುನರು ಮಾದ್ರೀ |
ಜಾತರಖಿಳ ಭಟಾಗ್ರಣಿಗಳೊಗ್ಗಿನಲಿ ಸಂದಣಿಸಿ ||
ಭೂತಳವು ಬಿರಿವಂತೆ ಬರಲಾ |
ರೀತಿಯನು ಗುರುಸುತನು ಕಾಣುತ |
ಭೀತಿಯನು ಬಿಟ್ಟಾಗ ಕುರುಪತಿಗೆಂದನೀ ತೆರದಿ || ೨೫೭ ||

ರಾಗ ಸಾರಂಗ ಅಷ್ಟತಾಳ
ಬಂದ ಧರ್ಮಜ ನೋಡು ಜೀಯ | ಇನ್ನು | ಮುಂದೇನುಪಾಯ ಪೇಳಯ್ಯ ||
ಮಂದಿ ಮಾರ್ಬಲ ಕೂಡಿ ಗಜ ರಥ ತುರಗಗ |
ಳಿಂದ ಸಮರಕೆ ಮುಂದುವರಿದೈ | ತಂದನಿದಕೋ ಭರದೊಳು || ೨೫೮ ||

ನಂದನ ಕಂದನರ್ಜುನರು | ವಾಯು | ನಂದನ ಮಾದ್ರಿಯಾತ್ಮಜರು ||
ಸಂಧಿಸಿದರಿಭಟರ್ಗಿಂದು ನಾವಿದಿರಾಗಿ |
ನಿಂದು ಯುದ್ಧವ ಮಾಡುವೆವು ಜಲ | ದಿಂದ ಹೊರಡತಿ ಬೇಗದಿ  || ೨೫೯ ||

ಸಲಿಲದೊಳಿಹುದಿನ್ನು ವ್ಯರ್ಥ | ಬಂದ | ರಲಘುವಿಕ್ರಮರು ಗರ್ಜಿಸುತ ||
ಕೊಳುಗುಳವನು ಗೆಯ್ವೆವಲಸದೀ ಕ್ಷಣದಿ ನೀ |
ಕೊಳನ ಹೊರವಡುಗಳಿಗೆಯೊಳು ರಿಪು | ಬಲವನೆಲ್ಲವ ಗೆಲುವೆವು || ೨೬೦ ||

ಕಂದ

ಎಂದೆನಲವರೊಡನೆಂದಂ |
ಮುಂದಿರದಿಂದೊಡನೆ ಪೋಪೆ ಪಾತಾಳಕ್ಕಂ ||
ಬಂದಾ ರಿಪುಗಳು ಮಾಡುವ |
ದಿಂದೇನೈ ನೀವು ಪೋಗಿರಿಲ್ಲಿರದೆಂದಂ || ೨೬೧ ||

ರಾಗ ಸಾಂಗತ್ಯ ರೂಪಕತಾಳ

ಎನಲವರಯ್ದಲಿತ್ತಲು ಧರ್ಮಜಾದಿಗ | ಳನುವಾಗಿ ಕೊಳನೆಡೆಗಯ್ದಿ ||
ವಿನಯದಿಂದಲಿ ಧರ್ಮಪುತ್ರನು ಕೌರವ | ಜನಪನ ಕರೆದೆಂದ ಭರದಿ || ೨೬೨ ||

ಕೇಳು ಕೌರವ ಪುತ್ರ ಮಿತ್ರಾದಿ ಬಾಂಧವ | ಜಾಲವನಿಕ್ಕಿ ಸಂಗರದಿ ||
ಬೀಳಲು ಬಹುದೆ ನೀನೀ ಸರೋವರದೊಳು | ಏಳಿತ್ತ  ಬಾರಯ್ಯ ಮುದದಿ || ೨೬೩ ||

ಭೀತಿಯೊಳಗೆ ನೀರ ಹೊಕ್ಕಿಂದು ಕುಲಕಪ | ಖ್ಯಾತಿಯ ಬರಿಸಿದೆ ರಾಯ |
ಪೇತುಗರೂ ಸಹ ನಗುವಂತೆ ಮಾಡಿದೆ | ಭೂತಳಾಧಿಪನೆ ಬಾರಯ್ಯ  || ೨೬೪ ||

ಪೊಡವಿ ತಿಲಾಂಶ ಮಾತ್ರವ ಕೊಡೆನೆಂದು ನೀ | ನುಡಿದ ಭಾಷೆಗಳನ್ನು ಮರೆತು ||
ಒಡೆತನ ಸಕಲ ಮಹೀತಳವನು ಬಿಟ್ಟು | ಅಡಗಿದುದಿದು ಚಿತ್ರವಾಯ್ತು || ೨೬೫ ||

ಎಲವೊ ಭಂಡರ ಭಾವ ಷಂಡರ ತಿಲಕ ಕೇ | ಳಿಳೆಯೊಳು ಹೇಡಿಗಳೊಡೆಯ |
ಜಲದಿಂದ ತಡಿಗಯ್ದಿ ಬಾರಿಂದು ಕೆಡುಕರ | ಕುಲ ಶಿರೋಮಣಿಯೆ ಕೇಳಯ್ಯ || ೨೬೬ ||

ಇಂದುಕುಲದಿ ಪುಟ್ಟಿ ಈ ರೀತಿಯಪಕೀರ್ತಿ | ತಂದೆಯ ವಂಶಕ್ಕೆ ಬರಿದೆ ||
ಇಂದು ಪೇಳುವದೇನು ಸುಡು ನಿನ್ನ ಜನ್ಮವ | ನೆಂದನು ಧರ್ಮಜನಿರದೆ || ೨೬೭ ||

ಭಾಮಿನಿ

ಈ ತೆರದೊಳಾ ಧರ್ಮಜನು ಬಲು |
ಖಾತಿಯಿಂದಲಿ ಜರೆದು ಕರೆಯಲು |
ಮಾತನಾಡದೆ ಕೌರವೇಂದ್ರನು ಮೌನದಿಂದಿರಲು ||
ಭೂತಳವು ಬಿರಿವಂತೆ ಗರ್ಜಿಸಿ |
ವಾತಸಂಭವನಂದು ಬಹು ರೋ |
ಷಾತಿರೇಕದಿ ಜರೆದು ನುಡಿದನು ಸುಪ್ರತಾಪಕವ || ೨೬೮ ||

ರಾಗ ಸವಾಯ್ ಏಕತಾಳ

ಎಲಾ ಎಲಾ ಛೀ ನೃಪಕುಲಕುನ್ನಿ | ಕಳವಿನ ಜೂಜಾಡುವ ಬಾರೈ ||
ಸಲಿಲದೊಳ್ಯಾತಕೆ ಸುಮ್ಮನೆ ಮುಳುಗಿಹೆ |
ಸುಲಿಸೈ ದ್ರುಪದಜೆಸೀರೆಯ ಫಡ ಫಡ || ಎಲಾ ಎಲಾ  || ೨೬೯ ||

ಹಳುವಕೆ ರಿಪುಗಳನಟ್ಟಿದೆನೆಂಬಾ | ಬಲು ಬೆಡಗನು ತೋರಿಸು ಬಾರೈ ||
ಗೆಲುವೆನು ನಮ್ಮೈವರನೆಂದುಬ್ಬುವ |
ಛಲವೇನಾಯಿತು ನಿರುಕಿಸು ಮುಖವನು || ಎಲಾ ಎಲಾ  || ೨೭೦ ||

ಧುರದೊಳು ನಿನ್ನ ಸಹೋದರರನು ಯಮ | ಪುರಕಟ್ಟಿದ ಭಟ ನಾನಲ್ಲೈ ||
ದುರುಳ ದುಶ್ಯಾಸನನುರವ ಬಗಿದು ಕೆಂ |
ಗರುಳನು ತೆಗೆದುದ ಮರೆತೆಯ ಫಡ ಫಡ || ಎಲಾ ಎಲಾ  || ೨೭೧ ||

ಮಡದಿಗೆ ನೀನೇನ್ ದೃಢವನು ಪೇಳಿದೆ | ಜಡಪಂಕದೊಳಿಂತಡಗುವರೆ ||
ಬಡಿದು ನಿನ್ನ ಯಮಬಿಡೆಯಕೆ ಕಳುಹುವೆ |
ಕಡಿಕಡಿದೆಲುಗಳ ನಾಚಿಕೆಗೆಡುಕನೆ || ಎಲಾ ಎಲಾ  || ೨೭೨ ||

ವಾರ್ಧಕ

ಇನಿತು ಭೀಮಂ ಪಚಾರಿಸುತಿರಲು ಬಳಿಕ ಫಲು |
ಗುಣ ಯಮಳ ಸಾತ್ಯಕಿಗಳಂದು ದೃಷ್ಟದ್ಯುಮ್ನ |
ಕನಲಿ ಸೃಂಜಯ ಸೋಮಕಾದಿಗಳ್ ತಮತಮಗೆ ಜಲಧಿಘೋಷಂಗಳಿಂದ ||
ಅನುಚಿತವು ಸಲಲಿಪ್ರವೇಶವೆಂದೆನುತಿರಲು |
ಮನದೊಳದ ಲೆಕ್ಕಿಸದೆ ಜನಪ ಕೌರವನಾಗ |
ಕನಲಿದಂ ಭೀಮಸೇನನ ನುಡಿಯ ಕೇಳ್ದು ಮಿಗೆ ಪೇಳಲೇನದ್ಭುತವನು || ೨೭೩ ||

ಭಾಮಿನಿ

ಮರುತಜಾತನ ಕರ್ಕಶದ ನುಡಿ |
ಕುರುಕುಲೇಶಗೆ ನಾಟಿತಂಬಿನ |
ತೆರದಿ ಮರೆದುದು ಬಳಿಕ ಸಲಿಲಸ್ತಂಭವಿದ್ಯೆಗಳು ||
ಘುರುಘುರಿಪ ಬಿಸುಸುಯ್ಲಿನುರಿ ಗತಿ |
ತುರುಗಿ ಕುದಿದುಕ್ಕಿದುದು ಜಲ ಮಿಗೆ |
ಭರದೊಳಾ ಛಲದಂಕ ಕೌರವನಡರಿದನು ತಡಿಗೆ || ೨೭೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಡಿಗಡರಿ ಕೌರವನು ಧರ್ಮಜ | ನೊಡನೆ ನುಡಿದನು ಹಿಡಿ ಧನುವ ನೆರೆ |
ಪೊಡವಿಪಾಲಕ ಮಾರುತಾತ್ಮಜ | ತುಡುಕು ಗದೆಯ || ೨೭೫ ||

ಫಲುಗುಣನೆ ಗಾಂಡೀವವನು ಪಿಡಿ | ತೊಲಗದಿರಿ ಮಾದ್ರೀಕುಮಾರರು |
ಕೊಳುಗುಳಕೆ ಸಾತ್ಯಕಿ ಭಟಾದ್ಯರು | ನಿಲುವದೀಗ || ೨೭೬ ||

ಎಂದು ಗದೆಯನು ತಿರುಗಿಸುತ ಖತಿ | ಯಿಂದ ನಿಂದಿರೆ ಕಾಣುತಂತಕ |
ನಂದನನು ಪೇಳಿದನು ವಿನಯದೊ | ಳಂಧಸುತಗೆ || ೨೭೭ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಕೇಳಯ್ಯ ಕುರುಕುಲಾಧೀಶ ಸಂತಸದಿ | ಮೂಲೋಕದೊಳು ನಿನಗೆಣೆಗಾಣೆ ಛಲದಿ    || ಪ ||

ಕದನದೊಳೆಲ್ಲರು ಸೋತರು ಮನದಿ | ಬೆದರದೆಮ್ಮನು ಗೆಲ್ವೆನೆಂದೆಯೈ ದೃಢದಿ ||
ಅದರಿಂದ ನಿನಗೆಣೆಗಾಣೆ ನಾ ಜಗದಿ | ಚದುರ ನೀ ಕೇಳು ಕೋಪಿಸಬೇಡ ಮುದದಿ || ೨೭೮ ||

ಧುರಕೆ ಬೆದರಿ ನೀನು ಜಲದೊಳಗಿಂದು | ಅರಿಯದಂತಡಗಿದೆಯೆಂಬುದಿದೊಂದು ||
ಕೊರತೆಯೆ ಹೊರತೀಗ ನಿನ್ನಂತ ಭಟರು | ಸುರನರೋರಗರೊಳಗಿಲ್ಲ ಸಾಹಸರು || ೨೭೯ ||

ಆದರೆಮ್ಮೈವರೊಳೊಬ್ಬನ ನೀನು | ಸಾಧಿಸುತಿಂದು ಗೆಲ್ದರೆ ಮುಂದೆ ನಾನು ||
ಮೇದಿನಿಯನು ಬಿಟ್ಟು ಮಿಕ್ಕವರ್ ನಿನ್ನ | ಪಾದಸೇವೆಯೊಳಿರುವೆವು ಕೇಳು ಮುನ್ನ || ೨೮೦ ||

ಅರಸ ನೀ ತೊಡು ಸಂಭ್ರಮದಿ ಕವಚವನು | ವರ ವಜ್ರಮಯವಾದ ಸೀಸಕಗಳನು ||
ವರದುಕೂಲ ವರಾನುಲೇಪನಗಳನು | ಹರುಷದಿ ಪೂಸುವರಿದಕೊ ವೀಳ್ಯವನು  || ೨೮೧ ||

ಎನುತಲಾಭರಣಪೆಟ್ಟಿಗೆಗಳ ತರಿಸಿ | ಜನಪ ಧರ್ಮಜ ಕೊಡಿಸಿದನನು ಕರೆಸಿ |
ಕಿನಿಸಿನಿಂದದ ಕಂಡು ತೋಷಗೊಂಡಂತೆ | ಜನಪನೊಳೊರೆದ ಕೌರವನು ಕಂಡಂತೆ || ೨೮೨ ||

ರಾಗ ಸುರುಟಿ ಅಷ್ಟತಾಳ

ನಿನ್ನಯ ಬಲುಹೇನು | ಮಾರುತಿ | ಯನ್ನು ನಿರೀಕ್ಷಿಪೆನು ||
ಸಣ್ಣವನರ್ಜುನ | ಚಿಣ್ಣರು ಯಮಳರು | ಇನ್ನೀ ಭೀಮನ | ನೆನ್ನಿದಿರಿಗೆ ಬಿಡು || ೨೮೩ ||

ಮಾರುತಿಯೆಂಬವನು | ಬಲಮದ | ವೇರಿ ನುಡಿಯುತಿಹನು |
ತೋರಲಿ ಬಂದವ | ನಾರುಭಟೆಯ ರಣ | ಧಾರಿಣಿಯಲಿ ಮ | ತ್ತ್ಯಾರೊಡನ್ಯಾತಕೆ || ೨೮೪ ||

ಭಾಷೆಯನಿತ್ತಿಹನು | ಯೆನ್ನನು | ಘಾತಿಪೆನೆನುತವನು ||
ಈ ಸಮಯದಿ ಬಂ | ದೋಸರಿಸದೆ ಕ | ಟ್ಟಾಸುರವಾದು | ಲ್ಲಾಸವ ತೋರಲಿ || ೨೮೫ ||

ಎಂದಾ ಧರ್ಮಜಗೆ | ಕುರುವರ | ನೆಂದೆನಲಾಯೆಡೆಗೆ ||
ಮಿಂದು ತೀರ್ಥಗಳ | ನಂದು ಹಲಾಯುಧ | ಬಂದನಖಿಳ ಮುನಿ | ವೃಂದ ಸಮೇತದಿ || ೨೮೬ ||

ಕಂದ

ಬಂದಾ ರಾಮನ ಕಾಣುತ |
ಲಂದಾ ಪಾಂಡುಸುತರೈದೆ ಭಕ್ತಿಯೊಳಾಗಳ್ ||
ಇಂದಿರೆಯರಸ ಸಮೇತದಿ |
ವಂದಿಸೆ ಬಲಭದ್ರನಡಿಗೆ ಕೌರವ ಮಣಿದಂ  || ೨೮೭ ||

ರಾಗ ಕೇದಾರಗೌಳ ಅಷ್ಟತಾಳ

ಚರಣದೊಳೆರಗಿದ ನೃಪನನ್ನು ಪಿಡಿದೆತ್ತಿ | ಕರುಣದಿ ಬಲರಾಮನು ||
ವರಪಾಂಡುಸುತರನೀಕ್ಷಿಸುತ ಕೃಷ್ಣನ ನೋಡಿ | ಕುರುರಾಯಗಿಂತೆಂದನು || ೨೮೮ ||

ಉಳಿದುದಾಚೆಯೊಳೀಸು ಬಲಗಳೀ ಕಡೆಯೊಳ | ಗುಳಿದೆಯೋರ್ವನೆ ನೀನಿಂದು ||
ಜಲಜಸಂಭವ ಬರೆದಂತ ಬರಹವೆನು | ತಳಲಿದ ಮನದಿ ನೊಂದು || ೨೮೯ ||

ಬಳಿಕ ಕೃಷ್ಣನ ಮೊಗವನು ನೋಡಿ ಪೇಳ್ದ ನೀ | ನುಳುಹಿದೆ ನಿನ್ನವರ ||
ಛಲದಿಂದೆಮ್ಮಯ ಶಿಷ್ಯಗೀ ಹದನವ ಮಾಡಿ | ಗೆಲಿದೆ ಶಾಭಾಸು ಧೀರ || ೨೯೦ ||

ಎಂದುಸಿರ್ದಾಗ ನೀಲಾಂಬರ ಮನದೊಳು | ನೊಂದುಕೊಂಡಿರೆ ಕಾಣುತ ||
ಬಂದು ತನ್ನಗ್ರಜನೊಡನುಸಿರಿದನು ಗೋ | ವಿಂದನು ನಸುನಗುತ || ೨೯೧ ||

ರಾಗ ಕಾಂಭೋಜಿ ಅಷ್ಟತಾಳ

ಅಣ್ಣ ನೀನೀ ರೀತಿ ನುಡಿವರೆ | ಪಕ್ಷ | ವನ್ನು ಮಾಡಲು ಸುರರ್ ಜರೆಯರೆ ||
ಇನ್ನವರಲಿ ಹೆಚ್ಚು ನಮಗೇನು | ನೋಡೆ | ಮುನ್ನಿವರಿಂದಾದ ಕುಂದೇನು || ೨೯೨ ||

ಕುರುಪತಿಪಕ್ಷದಿ ನೀನಿಂತು | ಯೆನ್ನೊ | ಳೊರೆದಿರೆಂದೆನುತ ಕೌರವಗಿಂತು ||
ನಿರತ ಹಂಗಿಗನಾಗಲಿಲ್ಲಯ್ಯ | ರಥ | ತುರಗವ ನಡೆಸುವೆನಲ್ಲಯ್ಯ || ೨೯೩ ||

ನಮಗಿವರಿತ್ತಂಡ ಸರಿಯೀಗ |  ಮಾಳ್ಪ | ಸಮರವನೀಕ್ಷಿಪುದೆನುತಾಗ ||
ಅಮರಿನೋಟಕೆ ತಾಗುತಿರ್ದರು | ಕಂಡು | ಸುಮನಸರಭ್ರದಿ ನೆರೆದರು || ೨೯೪ ||