ಭಾಮಿನಿ
ಕುಲಿಶಹತಿಯಲಿ ಗಿರಿಶಿಲಾವಳಿ |
ಘಳಿಸಿ ಜರಿವಂದದಲಿ ರಕ್ಕಸಿ |
ಕಳವಳಿಸಿ ಹಮ್ಮಯ್ಸಿ ಧೊಪ್ಪನೆ ಬೀಳುತವನಿಯಲಿ ||
ತಳುವದೆಚ್ಚರ್ತೆದ್ದು ಪಲ್ಮೊರೆ |
ದುಲಿದು ಬಾಹ್ವಪ್ಪಳಿಸಿ ಬಾ ಬಾ |
ಹಳೆಯ ಮರ್ಕಟ ಫಡ ಎನುತ ಮರ ಮುರಿಯುತೆರಗಿದಳು || ೧೪೨ ||
ರಾಗ ಮಾರವಿ ಮಟ್ಟೆತಾಳ
ಮರವ ಮುರಿದು ಮರುತಸುತನ | ನೆರಗಲವಳ ಬಾಲದಿಂದ |
ತರುಬಿ ಹಾಯ್ದು ಗರ್ಜಿಸುತ್ತ | ದುರುಳೆಗೆಂದನು || ೧೪೩ ||
ಭ್ರಷ್ಟೆ ಮೂಳಿ ಫಡ ಬಜಾರಿ | ದಿಟ್ಟೆಯೆನುತ ತಿವಿಯಲವಳ |
ರಟ್ಟೆ ಮುರಿದು ಬಿದ್ದಳಮರ | ಬೆಟ್ಟದಂದದಿ || ೧೪೪ ||
ಆರುಭಟಿಸುತವಳು ಸಮರ | ಧಾರಿಣಿಯಲಿ ಬಿದ್ದು ಹೊರಳ |
ಲೋರುಗುಡಿಸಿತವನಿಯಮರ | ವಾರ ಬೆದರಲು || ೧೪೫ ||
ಭೂರಿ ಸೈನ್ಯದೆಡೆಯೊಳವಳು | ಜಾರಿವರಿಯೆ ಮತ್ತೆ ಹನುಮ |
ನಾರುಭಟಿಸಿ ಹೊಡೆಯಲಸು ಸ | ಮೀರ ತೊಲಗಿತು || ೧೪೬ ||
ಕಂದ
ಅಗ್ರಜೆ ಮಡಿಯಲ್ ಕಂಡ |
ತ್ಯುಗ್ರದಿ ಭೋರ್ಗರೆದು ಜಗಳಗ್ರಂಥಿನಿಯಾಗಳ್ ||
ಘರ್ಗರನೇ ಪಲ್ಮೊರೆಯುತ |
ದೀರ್ಘಸ್ವರವೆತ್ತು ಪೇಳ್ದಳಾ ಮಾರುತಿಗಂ || ೧೪೭ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಲವೊ ಕೋಡಗ ತೀರಿದಗ್ರಜೆ | ಬಳಿಗೆ ನಿಮಿಷಾರ್ಧದಲಿ ನಿನ್ನನು |
ಕಳುಹುವೆನು ಫಡ ಗೆಲಿದೆನೆಂಬ | ಗ್ಗಳಿಕೆಯೇಕೆ || ೧೪೮ ||
ಎನುತ ಹನುಮನ ಮೂದಲಿಸಿ ದ್ರುಮ | ವನು ಮುರಿದು ಪಿಡಿದಾರ್ಭಟಿಸಿ ಬಹ |
ದನುಜೆಯನು ಪರಿಕಿಸುತ ಸರ್ವರು | ಮನದಿ ಬೆದರೆ || ೧೪೯ ||
ಕಂಡು ಹನುಮನು ಗಣಿಸದದನು | ದ್ದಂಡ ಸತ್ತ್ವದಿ ಮರವನೆಳೆದಾ |
ಚಂಡವಿಕ್ರಮನಾಗ ದನುಜೆಯ | ಮಂಡೆಗಿಡಲು || ೧೫೦ ||
ಧೂರ್ತೆ ಬಾಯೊಳಗೋಸರಿಸಿ ಬಿಸಿ | ನೆತ್ತರನು ಕಾರುತ್ತ ಬಿದ್ದಳು |
ಮತ್ತೆ ದಿವಿಜರು ನಗುವ ತೆರದಿ ಧ | ರಿತ್ರಿಗವಳು || ೧೫೧ ||
ವಾರ್ಧಕ
ಧುರದೊಳಂದತ್ಯಂತ ಬಲದೊಳಂ ಛಲದೊಳಂ |
ದುರುಳ ನೈಶಾಚರಿಯ ರಂಗಮಂ ಭಂಗಮಂ |
ಬರಿಸುತಾಶುಗಜಾತ ಕೆಡಹಿದಂ ಮಡುಹಿದಂ ಭೋರ್ಗರೆವ ರಕ್ಕಸಿಯರ ||
ಇರಲಿತ್ತ ಶುಕತುಂಡನಳಲುತಂ ಬಳಲುತಂ |
ಪರಿತಂದು ವಣಶಿಲಾವಾಸಮಂ ಭಾಸಮಂ |
ಧೊರೆ ಕರಂಡಕ ದೈತ್ಯಗರುಹಿದಂ ನೆರಹಿದಂ ಬಳಿಕವಂ ಫೌಜುಗಳನು || ೧೫೨ ||
ಮಾತುಳರ ಮರಣವಂ ಶುಕತುಂಡನಿಂದರಿತು |
ಭೂತಳಕ್ಕತಳದಿಂ ಬಹ ದಾರಿಯಂ ನೋಡು |
ತಾ ತತುಕ್ಷಣದಿ ನವಕೋಟಿ ಕರ್ಬುರಸೈನ್ಯವೆರಸಿ ಕೃಷ್ಣಾರ್ಜುನರನು ||
ಈ ತಳಾತಳಕಿರದೆ ತಹೆನೆಂದು ಪಡೆ ಸಹಿತ |
ಜ್ಯೋತಿಂಗೆ ಮೇಲ್ಪಾಯ್ದು ಖದ್ಯೋತದಂತೆ ನಾ |
ನಾತಿರೇಕದ ಕೋರೆದಾಡೆಯ ನಿಶಾಚರರನೊಡಗೊಂಡು ನಡೆತಂದನು || ೧೫೩ ||
ಭಾಮಿನಿ
ಅರರೆ ವಡಬಾನಲನ ಸರಿಸಕೆ |
ಬರುವ ಹೆದ್ದೊರೆಗಡಲೊ ಗರುಡನ |
ತರುಬಲೆಂದಯ್ತರುವ ಹಾಲಾಹಲದ ಹೆಮ್ಮಡುವೋ ||
ತರಣಿಯನು ಬೆದರಿಸುವೆನೆಂದ |
ಯ್ತರುವ ಕತ್ತಲೆಯೊಡ್ಡೊಯೇನೆಂ |
ದರಿಯೆನೈ ಬಪ್ಪಾ ಕರಂಡಕದೈತ್ಯ ಸೈನಿಕವ || ೧೫೪ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ಈ ತೆರದಿಂದಲಾರ್ಭಟಿಸುತ್ತ | ಧಾರಿ | ಣೀತಳದಲಿ ಬಂದು ಕೆದರುತ್ತ |
ಭೀತಿಯಿಲ್ಲದೆ ರಣರಂಗದಿ | ಬೇ | ಗಾತು ನಿಂದರು ಕುರುಕ್ಷೇತ್ರದಿ || ೧೫೫ ||
ಹೆಣದ ಬೆಟ್ಟಗಳನೇರ್ದಿಳಿಯುತ್ತ | ಕೊಳೆ | ಕುಣಪಗಳನು ಕಂಡು ಹೇಸುತ್ತ |
ಕಣದಿ ಕರಂಡಕದೈತ್ಯನು | ನೋಡಿ | ಪೆಣಗಳೊಟ್ಟಿನೊಳು ಮಾತುಳರನು || ೧೫೬ ||
ನಿರುಕಿಸಿ ಕಲುಷಗಾಮಿನಿಯನು | ನೆಲ | ಕುರುಳಿದ ಜಗಳಗ್ರಂಥಿನಿಯನು ||
ಹರಹರೆನ್ನುತ ಶೋಕ ತಾಳಿದ | ಖಾತಿ | ವೆರಸಿ ಬೊಬ್ಬಿರಿವುತಾರ್ಭಟಿಸಿದ || ೧೫೭ ||
ರಾಗ ಕಾಂಭೋಜಿ ಝಂಪೆತಾಳ
ಧಡಿಗ ದಾನವನಟ್ಟಹಾಸದಾರ್ಭಟೆಗೆ ಜಗ | ನಡುಗಿ ದಿಗ್ಗಜವು ಘೀಳಿಡಲು ||
ಜಡಜಭವಸುಮನಸಾದಿಗಳೆಲ್ಲ ಭಯದಿಂದ | ಮೃಡನಡಿಯ ಸೇರಿ ಜಯವೆನಲು || ೧೫೮ ||
ವರ ಯುಧಿಷ್ಠಿರ ಭೀಮ ಪಾರ್ಥ ಯಮಳಾದಿಗಳು | ಹರಿಯೆ ಗತಿ ನಮಗೆನ್ನುತಿರಲು |
ಕುರುರಾಯನುಬ್ಬಿ ಸಂತೋಷದಲಿ ನಾಳೆ ಜಯ | ಸಿರಿ ನಮ್ಮೊಳೊಲವಾಹಳೆನಲು || ೧೫೯ ||
ಹೇರೊಡಲ ಕೋರೆದಾಡೆಯ ಕೊಂಕುಮೀಸೆಯ ಕ | ಠೋರ ಹಲುಗಳ ತೋರ ಕೊರಳ |
ಘೋರ ದಾನವನು ಕಂಗಳೊಳು ಕೆಂಗೆಂಡಗಳ | ಕಾರಿ ಫಲುಗುಣಗೆಂದ ದುರುಳ || ೧೬೦ ||
ರಾಗ ಮಾರವಿ ಏಕತಾಳ
ಫಡ ಗಾಂಡೀವಿ ವೃಥಾ ಗೋಪಾಲರ | ಹುಡುಗನ ಬಲದಿಂದ ||
ಬಿಡದೆಮ್ಮಯ ಮಾತುಳರನು ಮಡುಹಿದ | ಬೆಡಗನು ತೋರೆಂದ || ೧೬೧ ||
ಮಾರಿಗೆ ತೃಪ್ತಿಯ ಪಡಿಸುವೆ ನಿನ್ನನು | ಹೀರಿ ಬವರದೊಳಗೆ ||
ಪಾರು ಮಾಡುವೆನೀಕ್ಷಣದೊಳು ದಧಿ ಘೃತ | ಚೋರನ ರಣದೊಳಗೆ || ೧೬೨ ||
ತಿಕ್ಕುವೆ ಕೀಶನ ರಕ್ತವ ಮೊಗೆ ಮೊಗೆ | ದಿಕ್ಕುವೆ ನಾಲ್ದೆಸೆಗೆ |
ಅಕ್ಕರದಿಂದೀ ಧರೆಯನು ಕುರುಪತಿ | ಗಿಕ್ಕುವೆ ನಾ ಕಡೆಗೆ || ೧೬೩ ||
ಎನುತ ಮಹಾಸ್ತ್ರವ ಧನುವಿನೊಳೇರಿಸಿ | ಕನಲಿ ಕರಂಡಕನು ||
ಕಿನಿಸಿಂ ಕಿವಿವರೆಗೆಳೆದಾರ್ದೆಚ್ಚನು | ರಣಗಲಿಗಳನವನು || ೧೬೪ ||
ಕಂದ
ದುರ್ಧರ ಖಳನೆಚ್ಚಸ್ತ್ರವ |
ನರ್ಧದೊಳಂ ಕಡಿದು ವಿಜಯನತ್ಯುಗ್ರದೊಳಂ ||
ಚೀರ್ದುಬ್ಬುವ ದನುಜಾತನ |
ಕೋರ್ದಾಡೆಯ ಕಳಚುವೆನೆನುತಾ ಖಳಗೆಂದಂ || ೧೬೫ ||
ರಾಗ ಘಂಟಾರವ ಮಟ್ಟೆತಾಳ
ಖೂಳ ನಿನ್ನನು | ಸೀಳಿ ತೆಗೆವೆನು ||
ಕಾಳುಗೆಡೆವ ನಾಲಿಗೆಯನು | ಬೀಳ ಹೊಯ್ವೆನು || ೧೬೬ ||
ಮಾವನೆನುತಲಿ | ಬಂದೆ ಸೊಬಗಿಲಿ |
ಮಾವ ಹೋದ ಠಾವ ನಿನಗೆ | ತೋರ್ಪೆ ಜವದಲಿ || ೧೬೭ ||
ಎಂದು ವಿಜಯನು | ಎಸೆದ ಶರವನು ||
ಮುಂದುವರಿದು ಕಡಿದು ದೈತ್ಯ | ಮೂದಲಿಸಿದನು || ೧೬೮ ||
ಎಲವೊ ಮಾನವ | ಎದೆಯೊಳುಮ್ಮುವ ||
ಬಲುಹ ತೋರಿ ಕೆಡುವೆ ನಿನ್ನ | ಛಲದ ಗರ್ವವ || ೧೬೯ ||
ಮುರಿದು ಕೊಡುವೆನು | ಭರದಿ ತನುವನು ||
ಮರುಳುಭೂತಗಡಣಕೀವೆ | ಕ್ಷಣದಿ ನೋಡಿನ್ನು || ೧೭೦ ||
ಭಾಮಿನಿ
ಹಂದೆ ಖಳ ಕೇಳೆಲವೊ ಬಾಯಿಗೆ |
ಬಂದ ಪರಿಯಲಿ ಬಗುಳಿ ಮೊದಲೇ |
ಹೊಂದಿ ಹೋದರು ನಿನ್ನವರು ಫಡ ಮೂಢ ನಿನಗವರ ||
ಸಂದ ಹರಿಬವ ತೋರ್ಪೆ ನಿಲು ನಿ |
ಲ್ಲೆಂದು ಶರಮಳೆಗರೆಯಲಸುರನು |
ನೊಂದು ಮಾಯೆಯನೊಡ್ಡಿ ಕೈವೀಸಿದನು ಕಾಳಗಕೆ || ೧೭೧ ||
ರಾಗ ಆಹೇರಿ ಝಂಪೆತಾಳ
ಬವರ ಬಿರುಸಾದುದರ್ಜುನಗೆ | ಆ ದೈತ್ಯ |
ಜವದಿ ಬಲು ಮಾಯಕವ ಮುಸುಕಲೆಣ್ದೆಸೆಗೆ || ಪ ||
ಬರಸಿಡಿಲು ಮಳೆ ಗಾಳಿ ಹೆಮ್ಮರವು ಹೆಬ್ಬೆಟ್ಟ |
ಜರಿದು ಬೀಸಲು ಖಡ್ಗ ಮುಸಲ ಮುದ್ಗರ ಖೇಟ |
ತರತರದ ಶಸ್ತ್ರಾಸ್ತ್ರ ಕಲ್ಗುಂಡುಗಳಲಿಟ್ಟ |
ನಿರದೆ ಕೃಷ್ಣಾರ್ಜುನರ ಮುಂದೆ | ದನುಜರುಗ |
ಳುರುಬಿದರು ಫಲುಗುಣನ ಸೈನ್ಯದೊಳು ಹಿಂದೆ || ೧೭೨ ||
ಆನೆ ಕುದುರೆಯ ತರಿದು ಸೇನೆಯೊಳು ಬೊಬ್ಬಿರಿದು |
ಶೋಣಿತದ ಮಳೆಗರೆದು ಸಾಣೆಯಲಗಿನೊಳಿರಿದು |
ಹೂಣಿಗರ ಹೊಯ್ದರೆದು ಹಾನಿಗೆಯ್ದರು ಜರೆದು |
ಕಾಣಿಸುತ ಕಣ್ಗೆ ಕತ್ತಲೆಯ | ಪಡೆ ಮುಂದು |
ಗಾಣದಂದಲಿ ಪಾರ್ಥನ ಪತಾಕಿನಿಯ || ೧೭೩ ||
ಹೊಡೆದುರಾವ್ತರ ಶಿರವ ಕಡಿದು ಮಾವ್ತರ ಕರವ |
ಬಡಿದು ಪಟುಭಟರುರವ ಕೆಡಹಿ ರಥ ಸಂಕುಲವ |
ಪುಡಿಗೆಯ್ದು ಮಾರ್ಬಲವ ಜಡಿದಟ್ಟಿ ಸೈನಿಕವ |
ಕೊಡಹಿ ಮೊಗೆ ಮೊಗೆದು ಶೋಣಿತವ | ಕುಂತಿಜನ |
ಪಡೆಯೊಳಗೆ ತೋರಿದರು ಬಹಳಮಾಯಕವ || ೧೭೪ ||
ರಾಗ ಕೇದಾರಗೌಳ ಅಷ್ಟತಾಳ
ಈ ಪರಿಯೊಳು ನಾನಾವಿಧದಿಂದಲೊಂದೊಂದು | ರೂಪುಗಳನೆ ತೋರುತ ||
ಕಾಪಟ್ಯದಿಂದಲಿ ಶರಮಳೆಗರೆದು ಪ್ರ | ತಾಪದಿ ಗರ್ಜಿಸುತ || ೧೭೫ ||
ಇರಲಾಗ ಯಮಜಭೀಮಾದಿಗಳ್ ಮನದೊಳ | ಚ್ಚರಿಯಲಿದೇನೆನಲು ||
ಕುರುರಾಯನಧಿಕ ಸಂತಸದಿ ದೂರದೊಳಿರ್ದು | ಧುರವನೀಕ್ಷಿಸುತಿರಲು || ೧೭೬ ||
ನರನು ರಕ್ಷೆಘ್ನಸಾಯಕವನ್ನು ಜಪಿಸಿ ಹೂಂ | ಕರಿಸಿ ವೀರಾವೇಶದಿ ||
ಭರದಿ ಗಾಂಡೀವದೊಳಳವಡಿಸುತಲೆಚ್ಚ | ನರಿವಿಜಯನು ಧುರದಿ || ೧೭೭ ||
ಎಸೆದಡಾಕ್ಷಣದಿ ರಾಕ್ಷಸರ ಮಾಯಕವೆಲ್ಲ | ಪುಸಿಯಾಗಿ ಬಯಲಾಗಲು ||
ಕುಸುಮನಾಭನು ಹನುಮಗೆ ಕಣ್ಣಸನ್ನೆಯೊ | ಳುಸಿರಲು ನಿಮಿಷದೊಳು || ೧೭೮ ||
ಪ್ರಳಯಭೈರವನಂತೆ ಧ್ವಜದಿಂದ ದುಮ್ಮಿಕ್ಕಿ | ಖಳಸೈನ್ಯ ಪೊಕ್ಕು ತಾನು ||
ಕೊಳುಗುಳದೊಳಗಾನೆ ನಳಿನವ ತುಳಿವ ವೋ | ಲಳಿಸಿದನಸುರರನು || ೧೭೯ ||
ಕೋಟಿ ದಾನವರ ವಿಘಾತಿಸಿ ಭುಜದಿಂದ | ಮೀಟಿ ಕರ್ಬುರ ಭಟರ ||
ಲೂಟಿಯ ಗೆಯ್ವುತುಬ್ಬಾಟದಿಂದಲಿ ಯಮ | ಕೋಟೆಗಟ್ಟಿದನು ವೀರ || ೧೮೦ ||
ಬಳಿಕ ಕರಂಡಕಾಸುರ ಕಂಡು ಹನುಮನ | ಬಳಲಿಸಿ ಬಾಲವನು ||
ಖಳ ಸೈನ್ಯಗಳು ಕೂಡಿ ಪಿಡಿದೆಳೆಯಲುರೋಷ | ಗೊಳುತಾಗ ಹನುಮಂತನು || ೧೮೧ ||
ಭಾಮಿನಿ
ವೀರ ಹನುಮನ ಬಾಲವನು ಮ |
ತ್ತಾರುಭಟಿಸಿ ಕರಂಡಕಾಸುರ |
ನೋರುಗುಡಿಸುತ ಪಡೆವೆರಸಿ ಪಿಡಿದೆಳೆಯಲನಿತರೊಳು ||
ತೋರಿ ಬಾಲವನಂಬರಕೆ ಮದ |
ವೇರಿ ಪುಟ ನೆಗೆದಾಗ ಮಾರುತಿ |
ಭಾರಿ ಖತಿಗೊಂಡುಬ್ಬಿ ಕೊಬ್ಬಿರ್ದಸುರಗಿಂತೆಂದ || ೧೮೨ ||
ರಾಗ ಶಂಕರಾಭರಣ ಮಟ್ಟೆತಾಳ
ಏನೆಲಾ ಕರಂಡಕಾಖ್ಯ ದಾನವಾಧಮ |
ತ್ರಾಣದಲ್ಲಿ ದಿಟ್ಟನಯ್ಸೆ ಭಳಿರೆಯಾಮಮ ||
ಕಾಣಬಹುದು ನೋಡೆನುತ್ತ ಬಾಲದಿಂದಲಿ |
ಗೋಣಿಗೌಕಿ ಬಿಗಿಯಲಸುರನುರುಳಿ ಧರೆಯಲಿ || ೧೮೩ ||
ಧಡಧಡಿಸುತ ಮಿಡುಕಿ ಪ್ರಾಣ ಬಿಡಲು ದೈತ್ಯನ |
ಕಡಲಿಗಿಕ್ಕಿ ಬಡೆದ ಮಿಕ್ಕ ಪಡೆಯನಾಕ್ಷಣ ||
ಮಿಡುಕಲೀಸದವನ ಯಮನ ಬಿಡೆಯ ಕಟ್ಟಲು |
ಕಡಲಶಯನಮುಖ್ಯರವನ ಬಿಡದೆ ಪೊಗಳಲು || ೧೮೪ ||
ರಾಗ ಸಾಂಗತ್ಯ ರೂಪಕತಾಳ
ಜನನಾಥ ಕೇಳಿಂತು ನವಕೋಟಿ ದೈತ್ಯರ | ನನುವರದೊಳಗೆ ಮಾರುತಿಯು |
ಇನಜಾತನೆಡೆಗಟ್ಟಿ ವನಜಾಕ್ಷಗೆರಗಿ ಸ್ಯಂ | ದನತುದಿಗೇರಿ ಕುಳ್ಳಿರಲು || ೧೮೫ ||
ಸುರಿದರಂಬರದಿಂದ ಸುಮದ ವೃಷ್ಟಿಯನಾಗ | ಸುರರು ಕೊಂಡಾಡಿ ಭಾಪೆನುತ |
ಮರುತಜಾರ್ಜುನರನ್ನು ಪೊಗಳಿದರೊಲಿದು ಶ್ರೀ | ಹರಿಯ ಕಟಾಕ್ಷದೆಂದೆನುತ || ೧೮೬ ||
ಕುರುರಾಯನದನೆಲ್ಲ ಕಂಡು ಸಂತಾಪದಿ | ಮರುಗಿ ತನ್ನಯ ಭಾಗ್ಯವೆನುತ |
ಬರಿದಿನ್ನಿವರೊಳು ನಾ ಕಾದಲೇಕೆನುತೊಳ | ಸರಿದನು ಮನದಿ ಚಿಂತಿಸುತ || ೧೮೭ ||
ಬಳಿಕಸುಶರ್ಮಕನರ್ಜುನನೊಳು ಕಾದಿ | ಬಳಲಿ ಬೆಂಡಾಗಲಾಚೆಯಲಿ ||
ಮುಳಿದು ಸೌಬಲ ಸಹದೇವನ ಯುದ್ಧದೊ | ಳಿಳೆಗೊರಗಿದನು ಮೂರ್ಛೆಯಲಿ || ೧೮೮ ||
ಭಾಮಿನಿ
ಅರಸ ಕೇಳಾ ಬಳಿಕ ಕೌರವ |
ಧರಣಿಪತಿ ಧರ್ಮಜನ ಗರ್ಜಿಸಿ |
ಜರೆದು ಭಂಗಿಸುತಿರಲು ಕಂಡಾ ಪವನನಂದನನು ||
ಉರಗನಿದಿರಿಗೆ ಬರುವ ವಿಹಗೇ |
ಶ್ವರನ ತೆರದಲಿ ಗಜರಿ ಮೀಸೆಯ |
ತಿರುಹಿ ವೀರಾವೇಶದಲಿ ಕುರುಪತಿಯನಡಹಾಯ್ದು || ೧೮೯ ||
ರಾಗ ಕಾಂಭೋಜಿ ಝಂಪೆತಾಳ
ಮರುತಸಂಭವನಿಂತು ಮೂದಲಿಸಿ ಬರುತಿರಲು | ಕುರುಪತಿಯು ಭಯದೊಳತಿ ಮರುಗಿ ||
ಸರಿದನಿಂದ್ರಾದಿಶಾಮುಖನಾಗಿ ಕಣನೊಳಗೆ | ಜರುಗಿ ತಾನೇಕಾಂಗಿಯಾಗಿ || ೧೯೦ ||
ಪೇಳಲೇನದ ಛತ್ರಚಾಮರಾದಿಗಳ ತಾ | ಬೀಳುಗೊಟ್ಟತಿ ದುಗುಡದಿಂದ ||
ಕಾಲುನಡೆಯಲಿ ಹೆಣನ ಪರ್ವತವನೇರಿಳಿವು | ತಾಳೊಳಗ್ಗಳನು ನಡೆತಂದ || ೧೯೧ ||
ಧರಣಿಪತಿ ಲಾಲಿಸೇಕಾದಶಕ್ಷೌಹಿಣಿಯೊ | ಳರಸ ಕೃತವರ್ಮ ಕೃಪರುಗಳು |
ಗುರುಸೂನು ಸಹ ನಾಲ್ವರುಳಿದರೀ ಪರಿಯಿಂದ | ಕುರು ನೃಪಾಲಕನ ಸೈನ್ಯದೊಳು || ೧೯೨ ||
ಎನಿತು ಬಲವಿರಲು ಮತ್ತೆನಿತು ಸಂಪದವಿರಲು | ಎನಿತು ಭಟರಿರಲು ಮುದದಿಂದ ||
ಎನುವದೇನೈ ದೈವಬಲವಿಲ್ಲದುದರಿಂದ | ಲಿನಿತಾದುದರಸ ಕೇಳೆಂದ || ೧೯೩ ||
ಇತ್ತ ಧರ್ಮಜಗುಳಿದುದೈದು ಸಾವಿರ ತುರಗ | ಮತ್ತೆ ಸಾವಿರ ವರೂಥಗಳು ||
ಮತ್ತ ಗಜವೆರಡು ಸಾವಿರದೇಳುನೂರುಮಿಗೆ | ಹತ್ತು ಲಕ್ಷವು ಪದಾತಿಗಳು || ೧೯೪ ||
ತೊತ್ತಳದ ಭಟರು ಸಾತ್ಯಕಿ ಯುಧಾಮನ್ಯುಗಳು | ಉತ್ತಮೌಜಸ ದ್ರುಪದಸೂನು ||
ಮತ್ತೆ ದ್ರೌಪದಿಸುತರು ಮಿಗೆ ಶಿಖಂಡಿಯು ತೋಷ | ವೆತ್ತಿರ್ದರರಸ ಕೇಳ್ ನೀನು || ೧೯೫ ||
ಭಾಮಿನಿ
ಜನಪ ಕೇಳಿನ್ನೇನೊರೆವೆ ನಿ |
ನ್ನಣುಗನಾವೆಡೆ ಕಾಣೆನರಸಲು |
ತನಗೆ ನೇಮವೆನುತ್ತ ಸಂಜಯನಂಧನೃಪತಿಯನು ||
ವಿನಯದಿಂ ಬೀಳ್ಗೊಂಡು ರಣಧಾ |
ರಿಣಿಯೊಳಾ ಕುರುಭೂಪನಾವೆಡೆ |
ಯೆನುತ ಹುಡುಕುವ ವೇಳೆಯಲಿ ಸಾತ್ಯಕಿಯು ತಡೆದೆಂದ || ೧೯೬ ||
ರಾಗ ಭೈರವಿ ಅಷ್ಟತಾಳ
ಎಲವೊ ಸಂಜಯನೆ ಕೇಳು | ಪೋಪೆಯದೆಲ್ಲಿ | ತಿಳುಹು ನೀ ಬೇಗೆನ್ನೊಳೂ ||
ಕೊಳುಗುಳಕಿದಿರಾಗೆಂದೆನುತಲಿ ಖಡ್ಗವ | ಸೆಳೆದು ಗರ್ಜಿಸುತಾಗಳು || ೧೯೭ ||
ರಣದ ಸಂಗತಿಯನೆಲ್ಲ | ಗತಾಕ್ಷನಿ | ಗನುವಾಗಿ ಪೇಳ್ದೆಯಲ್ಲ ||
ಬಣಗೆ ನೀನೀಗಿಲ್ಲಿ ಜುಣುಗಿದರೊಪ್ಪೆನೆಂ | ದೆನುತ ಪೇಳಿದನು ಸೊಲ್ಲ || ೧೯೮ ||
ಎಂದು ಕಠಾರಿಯನು | ಆತನ ಗೋಣಿ | ಗ್ಹೊಂದಿಸುತಿರೆ ವ್ಯಾಸನು ||
ಬಂದು ಸಾತ್ಯಕಿ ಕಯ್ಯ ಖಡ್ಗವ ಪಿಡಿವುತಿಂ | ತೆಂದನು ಋಷಿವರನು || ೧೯೯ ||
ರಾಗ ಸಾಂಗತ್ಯ ರೂಪಕತಾಳ
ಏನಯ್ಯ ಸಾತ್ಯಕಿ ನಮ್ಮ ಶಿಷ್ಯನ ಮೇಲೆ | ನೀನಿಷ್ಟು ಮುನಿವರೇನಯ್ಯ |
ಸಾನುರಾಗವಿದಲ್ಲ ಬಿಡು ಬಿಡೆಂದೆನೆ ಬಿಟ್ಟು | ಮೌನಿಗೆ ಮುಗಿದನು ಕಯ್ಯ || ೨೦೦ ||
ಅರಿಯದೆನ್ನಿಂದಾದುದಪರಾಧ ಕ್ಷಮಿಸೆಂದು | ಚರಣದೊಳೆರಗಿ ಸಾತ್ಯಕಿಯು |
ವರ ಸಂಜಯನ ಬಿಟ್ಟು ಸರಿಯಲು ಶಿಷ್ಯನ | ಪರಸಿ ಬೀಳ್ಗೊಟ್ಟನಾ ಋಷಿಯ || ೨೦೧ ||
ವಾರ್ಧಕ
ಶರಧಿವಸನೇಶ್ವರನೆ ಕೇಳಿಂತು ಕರುಣದಿಂ |
ಪರಮಋಷಿ ಸಂಜಯನ ಬೀಳ್ಗೊಟ್ಟು ತೆರಳಲ್ಕೆ |
ಕರುರಾಯನಂ ಕಾಂಬ ಲವಲವಿಕೆಯಿಂದಿತ್ತ ಸಂಜಯಂ ಬರುತಿರ್ದನು ||
ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ |
ಪರಿವುತಿಹ ರಕ್ತದೋಕುಳಿಯ ಹೆಮ್ಮಡುವನು |
ತ್ತರಿಸುತ್ತ ರಣಧಾರಿಣಿಯೊಳೊರ್ವ ಬರುತಿರ್ದನೇನೆಂಬೆನದ್ಭುತವನು || ೨೦೨ ||
ಎಲ್ಲಿ ನೋಡಿದರುಲಿವ ಭೂತರವ ಪ್ರೇತರವ |
ವೆಲ್ಲಿ ನೋಡಿದರೊರಲ್ವ ಕಾಕರವ ಘೂಕರವ |
ಘಲ್ಲಿಸುವ ಜಂಬುಕಾನೇಕರವ ಭೀಕರವ ಶಾಕಿನೀಗಣದ ರವವು ||
ನಿಲ್ಲದಾರ್ಭಟಿಪ ಭೇತಾಳರವ ಕಾಳರವ |
ವಲ್ಲಲ್ಲಿ ಬಿಸಿರಕುತ ಹರಿವ ರವ ಸುರಿವ ರವ |
ಝಲ್ಲೆಂಬ ಗೃಧ್ರಗೋಮಾಯುರವ ವಾಯುರವದೊಳು ನಡೆದ ಕುರುರಾಯನು || ೨೦೩ ||
ತಂಡ ತಂಡದ ಶವಗಳಟ್ಟೆಮಯ ಬೆಟ್ಟಮಯ |
ದೊಂಡೆಗರುಳುರುಳ್ವ ಕಡಿ ಖಂಡಮಯ ಮುಂಡಮಯ |
ತುಂಡುತುಂಡಾದ ಗಜದಿಂಡುಮಯ ರುಂಡಮಯ ಮಡಿದಿರುವ ತುರಗಮಯವು ||
ಡೆಂಡಣಿಸಿ ಬಿದ್ದ ಸ್ಯಂದನಮಯವ ಹೆಣಮಯವ |
ಹಿಂಡುಹಿಂಡಾಗಿರುವ ಗಣಮಯವ ನೊಣಮಯವ |
ನಂಡಲೆದು ಭಕ್ಷಿಸುವ ಖಗಮಯವ ಮೃಗಮಯವ ಮಜ್ಜೆ ಮಾಂಸಗಳ ಮಯವ || ೨೦೪ ||
ಅರಸ ಕೇಳ್ ಸಂಜಯಂ ಕೌರವನನರಸುತ |
ಯ್ತರಲಿತ್ತ ಕುರುಪತಿಯು ಗದೆಯ ಪೆಗಲೊಳಗಾಂತು |
ಪರಿವುತಿಹ ರಕ್ತದೋಕುಳಿಯ ಹೆಮ್ಮಡುವನುತ್ತರಿಸಿ ರಣಧಾರಿಣಿಯೊಳು |
ಒರಲುತಿಹ ಭೂತಬೇತಾಳ ಶಾಕಿನಿ ಹದ್ದು |
ನರಿ ನಾಯಿ ಕಾಗೆಗಳು ಕುಣಿದು ಹೆಣಗಳ ತಿನ್ನು |
ತಿರಲದನು ನೋಡಿ ಕೊಳೆ ಕುಣಪಗಳ ಹತ್ತಿಳಿದು ತೆರಳುವನ ಕಂಡೆಂದನು | || ೨೦೫ ||
ಭಾಮಿನಿ
ಭೂತಳಾಧೀಶ್ವರನೆ ಕೇಳಂ |
ದೀ ತೆರದ ರಣಭೂಮಿಯೊಳಗತಿ |
ಭೀತಿಯಲಿ ಮನನೊಂದು ಬೀಳುತ್ತೇಳುತಡಿಗಡಿಗೆ ||
ಧಾತುಗೆಡದಯ್ತರುವ ಕುರುಕುಲ |
ನಾಥನನು ಕಾಣುತ್ತ ಸಂಜಯ |
ನೋತು ಮನದೊಳು ಚಿಂತಿಸುತ ಕಾಲ್ಗೆರಗಿ ಬೆಸಗೊಂಡ || ೨೦೬ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ಪೊಡವಿಪಾಲಕ ಭಾಗ್ಯದಾಯಕ | ನುಡಿಯದೆಲ್ಲಿಗೆ ನಡೆವೆ ಮೆಲ್ಲನೆ ||
ಬಡಿವೆ ರಿಪುಗಳನೆಂಬ ಛಲಗಳ | ನುಡಿಯಡಗಿ ಹೀಗಾಯಿತೆ | ಪುಣ್ಯ ಫಲವೆ || ೨೦೭ ||
ಬಿಡದೆ ಬಾಗುತ ನೃಪರು ಮಕುಟವ | ನಿಡುವ ಕೋಮಲ ಚರಣವಿದರೊಳು |
ನಡೆವೆನೀನೆಂತಕಟ ಪೇಳೈ | ಮಡುವಿನಂತಿಹ ರಕ್ತದಿ | ರಣಕೆ ಬೆದರಿ || ೨೦೮ ||
ಇಂದುನಿನ್ನಯ ಮಂದಮತಿಯೊಳು | ಸಂದರೆಲ್ಲರು ಉಳಿದೆಯೊಬ್ಬನೆ |
ಮಂದಭಾಗ್ಯರು ನಾವು ಶಿವ ಶಿವ | ಯೆಂದು ಸಂಜಯ ಮರುಗಿದ | ಚಿಂತೆಗೊಂಡು || ೨೦೯ ||
ಭಾಮಿನಿ
ಆದಡೆಲೆ ಸಂಜಯನೆ ನೀ ಕೇ |
ಳಾದಿಸುಕೃತವಿಶಾಲವನವದು |
ಸೀದು ಹೋದರೆ ಜಯಸಿರಿಯು ಜಂಗುಳವ ಜಾರಿದರೆ ||
ಆದರಿಸುವವರಾರು ವಿಧಿ ಬರೆ |
ದಾದಿಯಕ್ಷರಕಿಂದು ಪ್ರತಿಕೂ |
ಲಾದಿಯುಂಟೇಯೆಂದು ಕಂಬನಿದುಂಬುತುಸಿರಿದನು || ೨೧೦ ||
ರಾಗ ಭೈರವಿ ಝಂಪೆತಾಳ
ಎಲವೊ ಸಂಜಯ ಕೇಳು | ಏನ ಪೇಳಲಿ ನಿನಗೆ |
ತಲೆಯ ಕಡಿವೆನು ಪಾಂಡು | ತನಯರನು ನಾಳೆ || ೨೧೧ ||
ನರನ ಶಿರವನು ಹೊಡೆದು | ನಳಿನಬಾಂಧವಸುತನ |
ಹರಿಬವನು ತೆಗೆವೆ ನಾ | ಹದನವನು ನೋಡು || ೨೧೨ ||
ಮರುತಸುತನೊಡಲಿರಿದು | ಮಮ ಸಹೋದರರನ್ನು |
ಭರದಿಂದ ತೆಗೆವೆನೈ | ಬದ್ಧವಿದು ಕೇಳು || ೨೧೩ ||
ಮಿಕ್ಕ ಭಟರೆಲ್ಲರನು | ಮಾರಿಗೀಯದಿರೆ ನೂರ್ |
ಮಕ್ಕಳೊಳು ಧೃತರಾಷ್ಟ್ರ | ನಿಗೆ ತನಯನಲ್ಲ || ೨೧೪ ||
ಇದೆ ಸರೋವರವೊಂದು | ಇಲ್ಲಿಗೆ ಸಮೀಪದಲಿ |
ಹುದುಗಿರುವೆನೈ ಪಗೆಗ | ಳರಿಯದಂದದಲಿ || ೨೧೫ ||
ತಂದೆಗತಿ ಧೈರ್ಯವನು | ತಾರತಮ್ಯದಿ ಪೇಳು |
ಇಂದು ಜನನಿಗೆ ದೃಢದೊ | ಳಿನಿತೆಲ್ಲ ತಿಳುಹು || ೨೧೬ ||
ತರುಣಿಗತಿ ಧೈರ್ಯವನು | ತಳುವದುಸಿರೈ ನೀನು |
ಅರಮನೆಯ ಜನಕೆಲ್ಲ | ಅರುಹು ಭಾಷೆಯನು || ೨೧೭ ||
ಭಾಮಿನಿ
ಎಂದು ಸಂಜಯಗುಸಿರಿ ಕೌರವ |
ಮುಂದೆ ನಡೆಯಲು ಕಂಡು ಮರುಗುತ |
ಬಂದನಾ ಸಂಜಯನು ಸಂತಾಪದಲಿ ಮನ ಮರುಗಿ ||
ನೊಂದು ನಡೆತರುವವನ ಕಾಣು |
ತ್ತಂದು ಗುರುಸುತ ನೃಪನ ವಾರ್ತೆಯ |
ನಿಂದು ಕೇಳಲು ಪೇಳ್ದನಾ ಭೂವರನ ದುಃಸ್ಥಿತಿಯ || ೨೧೮ ||
ರಾಗ ಕಲ್ಯಾಣಿ ಝಂಪೆತಾಳ
ಕೇಳಾದಡೆಲೆ ಕಲಶಜಾತಸಂಭವನೆ | ಪೇಳಲೇನನುಮಾನ ವಾರ್ತೆ ನಿನ್ನೊಡನೆ || ಪ ||
ಧುರದಿ ತಾನೇಕಾಂಗಿಯಾಗಿ ಕೌರವನು | ಮರಳಿದನು ಕಣವನ್ನುಳಿದು ಜವದಿ ತಾನು ||
ಭರದಿಂದ ದಕ್ಷಣದಿಶಾಭಿಮುಖದೊಳಗೆ | ತೆರಳ್ವ ಭೂಪನಕಂಡು ಸರಿದೆನವನೆಡೆಗೆ || ೨೧೯ ||
ಪೋಗಿ ನಾ ಕಾಲ್ಗೆರಗಿ ಕೇಳಲೆನ್ನೊಡನೆ | ಆಗ ಅವನೆಲ್ಲ ತಿಳುಹುತ ಧೈರ್ಯಗಳನೆ ||
ಬೇಗದಿಂ ಪೇಳಿ ದ್ವೈಪಾಯನದ ತಡಿಗೆ | ಸಾಗಿದನು ನಾ ಪೇಳ್ವುದೇನು ನಿಮ್ಮೊಳಗೆ || ೨೨೦ ||
ಭಾಮಿನಿ
ಎಂದು ಸಂಜಯನಂಧನೃಪನೆಡೆ |
ಗಂದು ಸರಿದೀ ಪರಿಯ ವಾರ್ತೆಯ |
ಬಂದುಸಿರಿಸಂತಯಿಸಲಿತ್ತಲು ಗುರುಸುತಾದಿಗಳು ||
ಕುಂದಿ ಕೌರವನಿರವನೀಕ್ಷಿಸ |
ಲೆಂದು ಬರೆ ಕೊಳನೊಳಗೆ ಮುಳುಗಿರು |
ತಂದು ಸಲಿಲಸ್ತಂಭ ವಿದ್ಯೆಯೊಳಿಹನ ನುಡಿಸಿದರು || ೨೨೧ ||
ರಾಗ ಕಾಪಿ ಅಷ್ಟತಾಳ
ಕುರುರಾಯ ಕೇಳೆಮ್ಮ ಮಾತ | ಈಗ | ಬರಿದೆ ನೀರೊಳಗಿರಲೇಕೆ ವಿಖ್ಯಾತ || ಪ ||
ದುರುಳ ಭೀಮಾರ್ಜುನರುಗಳ | ಶಿರ | ವರಿದು ಕೊಡುವೆವೀಗ ಹಿಡಿನಂಬುಗೆಗಳ |
ಗರುವರಿಹರೆ ಜಲದೊಳಗೆ | ಏಳೆಂ | ದೊರೆಯಲು ಕೇಳುತ್ತ ಪೇಳ್ದ ನೀರೊಳಗೆ || ೨೨೨ ||
ಕದನಕಲಿಗಳು ನೀವಹುದು | ಚಳ | ಕದಿ ಭೀಮಾದ್ಯರ ಕೊಲ್ವರೆಂದು ತೋರುವುದು ||
ಸದನಕೆ ಪೋಗಿ ನೀವಿಂದು | ಎನ | ಲದ ಕೇಳ್ದು ಗುರುಸೂತನೊರೆದನಿಂತೆಂದು || ೨೨೩ ||
ನಮ್ಮೊಳಿನಿತು ಮುನಿಸೇಕೆ | ಜೀಯ | ನಿಮ್ಮ ಪೂರ್ವದ ಸುಕೃತದ ಪುಣ್ಯಫಲಕೆ ||
ನಮ್ಮಿಂದಾದಪರಾಧವೇನು | ಎನ | ಲೊಮ್ಮೆ ಮತ್ತವರೊಡನೆಂದ ಕೌರವನು || ೨೨೪ ||
ಬಿಡದೆ ಸೌಬಲ ಮುಂತಾದವರು | ಯುದ್ಧ | ಗೊಡುವ ವೇಳ್ಯದೊಳಗಿಂತಾದ ಪ್ರವುಢರು ||
ಮಿಡುಕುತ್ತವರ ಮಡುಹಿದಿರಿ | ಸಾಕು | ಬಿಡಿ ಬಿಡೀ ಬಡಿವಾರವೇನ ಪೇಳುವಿರಿ || ೨೨೫ ||
Leave A Comment