ಕಂದ

ಅರೆನಿಮಿಷದಿ ಶಲ್ಯನು ಮೈ |
ಮುರಿದೇಳುತ್ತ ಗಜರಿ ಘನ ರೋಷದೊಳಾಗಲ್ ||
ಧರೆ ಬಿರಿವಂದದಿ ಬಳಿಕಾ |
ಶರವರುಷವ ಕರೆವುತ್ತೆಂದನು ಧರ್ಮಜಗಂ  || ೭೨ ||

ರಾಗ ಭೈರವಿ ಅಷ್ಟತಾಳ

ಎಲವೊ ಧರ್ಮಜನೆ ಕೇಳು | ಸಂಗರದಲ್ಲಿ | ಬಲು ಸತ್ತ್ವದಿಂದೆನ್ನೊಳು ||
ಗೆಲಿದೆನೆನುತ ಹಿಗ್ಗಬೇಡ ನಿನ್ನಧಟನು | ನಿಲಿಸುವೆ ನಿಮಿಷ ತಾಳು || ೭೩ ||

ಸಾಕದಂತಿರಲಿ ನಿನ್ನ | ಭಂಗಿಸಿ ರಕ್ತ | ದೋಕುಳಿಯೊಳಗೆ ಮುನ್ನ ||
ಶಾಕಿನಿಗಣಕೆ ತೃಪ್ತಿಯ ಗೆಯ್ವೆನೆನುತೆಚ್ಚ | ನೇಕ ಬಾಣದಿ ಶಲ್ಯನ  || ೭೪ ||

ಎಸೆದ ಬಾಣವ ತರಿದು | ಮಾದ್ರೇಶ ಗ | ರ್ಜಿಸುತಲಿ ಪಲ್ ಮೊರೆದು ||
ಬಿಸಜಾಕ್ಷ ಭೀಮ ಪಾರ್ಥರ ಕರೆಯೆಂದೆಚ್ಚ | ನಸಮ ಶರವ ಸುರಿದು || ೭೫ ||

ಕೊಳಚೆ ನೀರೊಳು ತೇಲುವ | ಮಾನವನಿಗೆ | ಜಲಧಿ ಕಾಲ್ಹೊಳೆಯೆನ್ನುವ ||
ಬಲು ಗರ್ವವೇಕಿದರೊಳು ಜೀವಿಸೆನುತೆಚ್ಚ | ನಳವಿಯೊಳುರು ಶರವ || ೭೬ ||

ವಾರ್ಧಕ

ಸಿಂಧೂರನಗರದಧಿಪತಿ ಲಾಲಿಸಿಂತು ಯಮ |
ನಂದನನು ಬಿಡದಧಿಕ ಕೋಪದೊಳು ಚಾಪದಿಂ |
ಸಂಧಿಸಿದ ಸರಳು ಫಣಿಪತಿಯಂತೆ ಕಿಡಿಯನುಗುಳುತ್ತ ತಾರಾಪಥದೊಳು ||
ಮುಂದರಿದು ಮಾದ್ರದೇಶಾಧಿಪನ ಪೇರುರಕೆ |
ಬಂದೆರಗಿ ಕರುಳನುಚ್ಚಳಿಸಿ ಬಳಿಕಾ ತೇರಿ |
ನಿಂದ ಧೊಪ್ಪನೆ ಧರಣಿಗೊರಗಿಸಿದ ಪರಿಯ ನಾ ಪೇಳಲೇನದ್ಭುತವನು || ೭೭ ||

ರಾಗ ಸಾಂಗತ್ಯ ರೂಪಕತಾಳ

ಧರಣಿಪಾಲಕ ಕೇಳು ಯಮಜನಸ್ತ್ರದ ಹತಿ | ಗೊರಗಲು ಮಾದ್ರೇಶನಂದು ||
ಮರುಗುತಾತನ ತಮ್ಮ ಸರಳಸಮ್ಮೇಳದಿ | ಧುರಕಿದಿರಾದನಯ್ತಂದು || ೭೮ ||

ಕಂಡು ಧರ್ಮಜ ರೋಷಗೊಂಡಸ್ತ್ರಚಯದಿಂದ | ಖಂಡಿಸಿ ಹಯಸಾರಥಿಯನು ||
ತುಂಡಿಸಿ ರಥವ ತಾ ಕೆಡಹಿದನವನನು | ದ್ದಂಡಸತ್ತ್ವದಿ ಪೇಳಲೇನು || ೭೯ ||

ಈ ಪರಿ ವಾರ್ತೆಯ ಕೇಳ್ದು ಕೌರವರಾಯ | ತಾಪವ ತಾಳಿ ಮತ್ತಂದು |
ಕೋಪದಿ ಕಿಡಿಕಿಡಿಯಾಗಿ ಮಾರ್ಬಲ ಕೂಡಿ | ತಾ ಪೊರಟನು ರಣಕೆಂದು || ೮೦ ||

ರಾಗ ಸುರುಟಿ ರೂಪಕತಾಳ

ಪೊಡವಿಪ ಲಾಲಿಸು ಕೌರವ | ಪಡೆ ಸಹಿತಲೆ ಬಹು ರೋಷವ |
ಕಡುಗಲಿ ತನದೊಳು ಮುಂದವ | ಘಡಿಸಿದ ರಿಪುಬಲವ |
ಘುಡುಘುಡಿಸುತಲರಿಸೈನ್ಯವ | ಕಡಿಕಡಿದೊಟ್ಟುತ ತುರಗವ |
ಪುಡಿ ಪುಡಿ ಗೆಯ್ದು ವರೂಥವ | ಕೆಡಹಿದ ಮದಗಜವ || ೮೧ ||

ಜವಗೆಡಿಸಿದ ಸಹದೇವನ | ಬವರದಿ ಬಡಿದನು ನಕುಲನ |
ತವಕದಿ ಧೃಷ್ಟದ್ಯುಮ್ನನ | ನವಘಡಿಸಿದ ನೃಪನ |
ಕವಿಕವಿದೆಸುತಿಹ ಸೈನ್ಯವ | ಸವರುತಲಾ ನೃಪನಿವಹವ |
ಕವಲಂಬಿಲಿ ಪರಿಹರಿಸುತ | ದಿವಿಜರ ಮೆಚ್ಚಿಸುತ || ೮೨ ||

ವಾತಜಮುಖ್ಯರ ಚಿತ್ತಕೆ | ಭೀತಿಯ ತೋರುತ ಮುಂದೆ ವ |
ರೂಥವ ನಡೆಸುತ ಕುರುಪತಿ | ಘಾತಿಸಿದನು ಬಲವ |
ಪೂತನಿ ಭಂಜನನರಿತು ವ | ರೂಥವ ಹಾರಿಸಿ ರಿಪುಗಳ |
ಘಾತಿಸು ನೀನೆನುತಾ ಹರಿ | ಜಾತನಿಗುಸಿರಿದನು || ೮೩ ||

ವಾರ್ಧಕ

ಹರಿಕುಲಜ ಕೇಳ್ದೆಲೈ ಹರಿಯಾತ್ಮಜಾತನೊಳ್ |
ಹರಿ ನಿರೂಪಿಸುತಿಂತು ಹರಿವೇಗದಿಂದಾಂತು |
ಹರಿಗಳಂ ಚಪ್ಪರಿಸಿ ಹರಿಸಿದ ವರೂಥಮಂ ಹರಿಯತಿ ವಿಲಾಸದಿಂದ ||
ಹರಿಬಲದಿ ನೃಪರ ಸಂಹರಿಸುತ ಧನಂಜಯಂ |
ಹರಿಗಳಂ ಬಹಳ ಪರಿಹರಿಸುತಲಿ ರೋಷದಿಂ |
ಹರಿ ಕರಿಯ ಹಿಂಡಿನೊಳು ಹರಿವಂತೆ ಕುರುಬಲದಿ ಹರಿಮೈದುನಂ ಧುರದೊಳು || ೮೪ ||

ಭಾಮಿನಿ

ಅರುಹಲೇನಾ ಧುರದಿ ಮುರಿದುದು |
ವರ ವರೂಥವು ನೂರು ಸೂತರ |
ಶಿರ ಶತವು ಕಡಿವಡೆಯೆ ಸಮರಥರೆಂಟುನೂರಯ್ದು ||
ಬಿರಿದ ಸುಭಟರು ಸುರಗಿಯನು ನೆಲ |
ಕಿರಿಸಿದರು ಧುರಧುರಿಪ ನೆತ್ತರ |
ಶರಧಿಯನು ದಾಟುತ್ತ ಹಾಯ್ದರು ಭೀತಿಗರ ಹೊಡೆದು || ೮೫ ||

ಕಂದ

ಈ ಪರಿಯಂ ಕಾಣುತ ಕುರು |
ಭೂಪಾಲಕ ಗಜರಿ ಗಾಢ ಶೌರ್ಯದೊಳಾಗಲ್ ||
ಶ್ರೀಪತಿಮೈದುನನಿದಿರೊಳು |
ಚಾಪಕೆ ಸರಳೊಡ್ಡಿ ಬರಲು ಫಲುಗುಣನೆಂದಂ || ೮೬ ||

ರಾಗ ಘಂಟಾರವ ಮಟ್ಟೆತಾಳ

ಎಲೆ ಸುಯೋಧನ | ಕಪಟ ಜೂಜಿನ ||
ಗೆಲವ ತೋರಿ ಕೊಡುವೆನೀಗ | ಕರೆಸು ರವಿಜನ || ೮೭ ||

ಕೇಳ್ದು ನುಡಿಯನು | ಸೀಳ್ದು ನಿನ್ನನು ||
ಸೋಲ್ದ ರವಿಜನಲ್ಲಿಗಟ್ಟು | ತಾಳ್ದನಾಹೆನು || ೮೮ ||

ಎನುತ ಧನುವನು | ಝೇಂಕರಿಸಿದನು ||
ಕಿನಿಸಿನಿಂದ ದಿವ್ಯ ಶರವ | ಕನಲುತೆಚ್ಚನು || ೮೯ ||

ಬರುವ ಸರಳನು | ತರಿದು ಪಾರ್ಥನು ||
ಉರಿಯನುಗುಳುತಸ್ತ್ರಮಳೆಯ | ಸುರಿವುತೆಂದನು || ೯೦ ||

ಎಲವೊ ಭೀಮನ | ಮಾತಿಗೀಗ ನಾ ||
ಕೊಲುವನಲ್ಲ ನಿನ್ನ ಪಿಂತೆ | ತೊಲಗು ತತ್‌ಕ್ಷಣ || ೯೧ ||

ಎನುತ ಫಲುಗುಣ | ಕನಲುತಾ ಕ್ಷಣ ||
ಜನಪನನ್ನು ಮಿಕ್ಕಿ ನಡೆದ | ಘನ ವಿಚಕ್ಷಣ || ೯೨ ||

ಭಾಮಿನಿ

ಕುಮುದಬಾಂಧವವಂಶಜನೆ ಕೇ |
ಳಮರಪತಿಸುತನಿಂತು ಕುರುಭೂ |
ರಮಣನನು ಮಿಕ್ಕಯ್ದಲಿತ್ತಲು ಕೌರವನು ಮುಳಿದು ||
ಯಮಸುತನ ಸಮ್ಮುಖಕೆ ರೋಷ |
ಕ್ರಮನು ಗಜ ರಥ ತುರಗ ಸೈನಿಕ |
ಧುಮುಕಿನಲಿ ಮುಸುಕಿದನು ವೀರಾವೇಶದುಬ್ಬಿನಲಿ || ೯೩ ||

ರಾಗ ಮಾರವಿ ಏಕತಾಳ

ಭರದಿಂ ಕುರುಕುಲ | ಧರಣಿಪ ಕರಿ ರಥ |
ತುರಗ ಪದಾತಿಯ | ನೆರವಿಯ ತರುಬುತ |
ಧುರದೊಳು ಯಮಜನ | ಸರಿಸಕೊದಗಿ ಬಲು |
ಶರದಿಂ ಸೈನ್ಯವ | ನೊರೆಸುತ ಬಂದ || ಕೇಳೈ ಭೂಪ || ೯೪ ||

ನೂರು ಮುನ್ನೂರೈ | ನೂರು ಪದಾತಿಯ |
ತೂರಿ ಸಹಸ್ರ ಮ | ಹಾರಥವರ್ಗವ |
ಗಾರುಗೆಡಿಸಿ ಯಮ | ನೂರಿಗೆ ಕ್ಷಣದಲಿ |
ಸೇರಿಸಿದನು ನೃಪ | ಧೀರತನದೊಳು || ಏನನೆಂಬೆ || ೯೫ ||

ಮತ್ತೆರಡೈನೂರ್ | ಮತ್ತ ಗಜಂಗಳ್ |
ಪೃಥ್ವಿಪ ಕೌರವ | ಚಿತ್ತದೊಳಗೆ ಖತಿ |
ವೆತ್ತು ಭರದಿ ಮುಂ | ದೊತ್ತುತ ಧರ್ಮಜ |
ನೆತ್ತಲೆನುತ್ತರ | ಸುತ್ತಾ ಕ್ಷಣದಿ || ಬಂದನಾಗ || ೯೬ ||

ಸಿಕ್ಕಿದ ನೃಪನ ವ | ಶಕ್ಕೆಮಜನು ಯೆಂ |
ದೆಕ್ಕತುಳದಿ ಪಡೆ | ಪೊಕ್ಕು ದಳವ ಮುರಿ |
ದಿಕ್ಕಲು ಮರುತಜ | ನಕ್ಕರದಲಿ ಕಂ |
ಡುಕ್ಕಿ ಖತಿಯ ಸಮ | ರಕ್ಕಯ್ತಂದ || ಗಾಢದಿಂದ || ೯೭ ||

ವಾರ್ಧಕ

ಬಂದು ಕಲಿ ಭೀಮನೀ ತೆರದೊಳಂ ಭರದೊಳಂ |
ಮುಂದಕುರವಣಿಪ ಮದದಾನೆಯಂ ಸೇನೆಯಂ |
ಕೊಂದನಗಣಿತ ಚಾತುರಂಗಮಂ ಭಂಗಮಂ ಪಡಿಸಲೊಂದೇ ಕ್ಷಣದೊಳು ||
ಮುಂದುವರಿಯುತ್ತ ಗಜಬಲದಿಂದ ಛಲದಿಂದ |
ಲಂಧನೃಪನಣುಗಹಂಕೃತಿಯಿಂದ ಖತಿಯಿಂದ |
ಗಂಧವಾಹಾತ್ಮಜನ ಕಡುಹಿಂದ ಪೊಡೆವಂದದಿಂದಲಡಹಾಯ್ವುತೆಂದಾ || ೯೮ ||

ರಾಗ ಶಂಕರಾಭರಣ ಮಟ್ಟೆತಾಳ

ಎಲೆ ಸಮೀರಜಾತದಳದಿ ಹೀನಬಲರನು |
ಗೆಲಿದು ಗಜ ತುರಂಗಗಳನು ಮುರಿದ ಬಲುಹನು ||
ನಿಲಿಸಿದಪೆನು ಬಗಿದು ನಿನ್ನ ಜಠರದಿಂದಲಿ |
ಸೆಳೆವೆನೆನ್ನ ಸಹಜರನ್ನು ನಿಲ್ಲು ಕ್ಷಣದಲಿ ||೯೯ ||

ಎನುತ ಗದೆಯ ಕೊಂಡು ತಿರುಹಿ ಕುರುನೃಪಾಲನು |
ಕನಲಿ ವಾಯುತನುಜನಂಗಕಿಡಲು ಭೀಮನು ||
ಗಣಿಸದದನು ಪೇಳ್ದನೆಲವೊ ಖೂಳ ನಿನ್ನನು |
ಅನುಜತನುಜರಿದ್ದ ಬಳಿಗೆ ಕಳುಹದುಳಿಯೆನು || ೧೦೦ ||

ಎನುತ ತೇರಿನಿಂದ ಧರೆಗೆ ಧುಮುಕಿ ಶುಗಜನು |
ಅಣಕಿಸುತ್ತ ಗಜದೊಳೌಕಿ ಗಜದ ಹಿಂಡನು |
ಹಣಿದು ಹೆಟ್ಟಿ ಕುಟ್ಟಿ ಬರುವ ಭರವನೀಕ್ಷಿಸಿ |
ಜುಣುಗಿ ಕುರುಕುಲೇಶ ಪಿಂದೆ ಸರಿಯೆ ಪರಿಕಿಸಿ || ೧೦೧ ||

ಭಾಮಿನಿ

ಧುರದೊಳೀ ಪರಿ ಗಜಘಟಾಳಿಯ |
ಮರುತಸುತ ನುಗ್ಗರಿದು ಕೌರವ |
ರರಸನಾವೆಡೆ ಸರಿದನೆಂದೆನುತರಸುತಯ್ತಂದ ||
ಭರದೊಳಾಗ ಸುಶರ್ಮ ತಡೆಯಲಿ |
ಕಿರದವನ ಲೆಕ್ಕಿಸದೆ ಮುಂದ |
ಯ್ತರಲು ಸಮಸಪ್ತಕರು ತಡೆದಿಂತೆಂದರಾರ್ಭಟಿಸಿ || ೧೦೨ ||

ರಾಗ ಮಾರವಿ ಮಟ್ಟೆತಾಳ

ಯಾರೊ ನೀನು ವಾಯುಕುವರ | ಬಾರೆಲೊ ಭಂಡಾಟಗಾರ |
ಭಾರಿ ಗದೆಯ ಚಳಕ ಧನುವ | ತೋರು ನಮ್ಮಲಿ || ೧೦೩ ||

ಭಂಡನೆಂಬ ಬಾಯ ಹೊಯ್ದು | ರುಂಡದಲ್ಲಿ ರಕ್ತವೆರೆದು |
ಹಿಂಡು ಭೂತಗಣಕೆ ಕೊಡುವೆ | ನುಂಡು ದಣಿಯಲಿ || ೧೦೪ ||

ಎಂದು ವಾಯುಪುತ್ರನವರ | ಸಂಧಿಸುತ್ತ ಗದೆಯತಿರುಹು |
ತಂದು ಹೊಯ್ದ ಧರಣಿಯದುರು | ವಂದದಿಂದಲಿ || ೧೦೫ ||

 

ಕಂದ

ಭರದೊಳ್ ಗದೆಯಿಂದನಿಲಜ |
ನೆರಗಲ್ಕಾ ದೈತ್ಯರಯ್ದೆ ಸಮರಾಂಗಣದೊಳ್ ||
ಪರಿಹರಿಸುತ ಘನ ರೋಷದೊ |
ಳುರಿಯುಗುಳುತ ಪೇಳ್ದರೊಡನೆ ಮಾರುತಿಗಂದುಂ || ೧೦೬ ||

ರಾಗ ಪಂಚಾಗತಿ ಮಟ್ಟೆತಾಳ

ಎಲವೊ ಮರುತಜಾತ ಕೇಳು | ಬಳಲಬೇಡ ಬರಿದೆ ನೀನು |
ಫಲುಗುಣನ್ನ ಕರೆಸು ನಮ್ಮೊ | ಳಳವಿ ಗೆಯ್ಯಲು |
ಚಳಕದಲ್ಲಿ ನೋಡು ನಿನ್ನ | ಬಲುಹ ಮುರಿವೆವೆನುತ ಕೋಲ |
ಮಳೆಯ ಕರೆದು ಬಳಲಿಸಿದರು | ಮಲೆವ ಭೀಮನ  || ೧೦೭ ||

ಇತ್ತಲಾ ಸುಶರ್ಮನಿದಿರು | ನಿತ್ತು ಪಾರ್ಥ ಧುರದೊಳವನ |
ಪೃಥ್ವಿಗೊರಗಿಸುತ್ತ ಪೇಳ್ದ ಮತ್ತೆ ಹರಿಯೊಳು |
ದೈತ್ಯರೊಡನೆ ಧುರವು ವಾಯು | ಪುತ್ರಗರಿದು ನೋಡು ರಥವ |
ನತ್ತ ತಿರುಗಿಸೆನಲು ತೋಷ | ವೆತ್ತು ಕೃಷ್ಣನು  || ೧೦೮ ||

ಶರಧಿಯಂತೆ ಭೋರುಗುಡಿಸಿ | ಮೊರೆದು ಮೇಲುವರಿಯೆ ಸೈನ್ಯ |
ದಿರವನುಳಿದು ಜುಣುಗಿ ಜಾರಿ | ವರಿದು ನಿಮಿಷಕೆ |
ತುರಗಗಳನು ಚಪ್ಪರಿಸುತ | ದುರುಳರೆಡೆಗೆ ರಥವ ನೂಕೆ |
ನರನು ಸರಳನೆಸೆವುತೆಂದ | ನಿರದೆ ಖಳರಿಗೆ || ೧೦೯ ||

ಭಾಮಿನಿ

ಎಲವೊ ಭಂಡ ಖಳಾಧಮರರಿಂ |
ದಳವಿಯಲಿ ಬಲುಗೈಗಳಾದಿರಿ |
ತಿಳಿಯಬಹುದೆಂದೆನುತ ಪವನಾತ್ಮಜನ ಹಿಂದಿಕ್ಕಿ ||
ಪ್ರಳಯಕಾಲದ ರುದ್ರನಂತು |
ಜ್ವಲಿಸಿ ಕೋಪಾಟೋಪದಿಂದಲಿ |
ಹೊಳೆವ ಹೊಸ ಕೆಂಗರಿಯ ಶರಮಳೆಗರೆವುತಿಂತೆಂದ || ೧೧೦ ||

ರಾಗ ಭೈರವಿ ಏಕತಾಳ

ಫಡ ಫಡ ರಾತ್ರಿಂಚರಿರಾ | ಹೆ | ಬ್ಬಿಡಿ ಗೋಲಾಕೃತಿಗಳಿರಾ ||
ಬಿಡಿ ಬಿಡಿ ಜಡಮತಿಗಳಿರಾ | ಮುಂ | ದಡಿಯಿಡಬೇಡಧಮರಿರಾ || ೧೧೧ ||

ಎನುತ ಮಹಾಸ್ತ್ರವ ಸುರಿದು | ಆ | ದನುಜಪಡೆಯ ನುಗ್ಗರಿದು ||
ಕನಲುತ ಮಿಗೆ ಭೋರ್ಗರೆದು | ಎಸೆ | ದನು ದಿವ್ಯಾಸ್ತ್ರವ ತೆಗೆದು || ೧೧೨ ||

ನರನೆಸೆದಸ್ತ್ರವ ತರಿದು | ಆ | ದುರುಳ ಖಳರು ಬೊಬ್ಬಿರಿದು |
ಧುರದಲಿ ನಮ್ಮಯ್ಯನನು | ಕೊಂದ | ನರಗುರಿ ಕೇಳ್ ನಿನ್ನುವನು || ೧೧೩ ||

ಘಕ್ಕನೆ ಮುರಿದಸುವೆಳೆದು | ದಿಕ್ಕು | ದಿಕ್ಕಿಗೆ ರಕ್ತವನೆರೆದು ||
ಸೊಕ್ಕನು ಮಾಜಿಸದಿರೆವು | ನ | ಮ್ಮಕ್ಕರ ಸಲಿಸದೆ ಬಿಡೆವು || ೧೧೪ ||

ಎಂದಾರ್ಭಟಿಸುತ ಮುಳಿದು | ಶರ | ವೃಂದವನೆಚ್ಚಡೆ ತರಿದು |
ವೃಂದಾರಕಪತಿಸುತನು | ಖಳ | ಸಂದಣಿಗುರೆ ಪೇಳಿದನು || ೧೧೫ ||

ಭಾಮಿನಿ

ಖೂಳರಿರ ನೀವ್ ಕೇಳಿ ಕುರುಭೂ |
ಪಾಲಕನ ಬರಹೇಳಿ ಸಾಯದ |
ಹೋಲುವೆಯ ಮೊದಲೇ ವಿಚಾರಿಸಿ ನಿಮ್ಮ ನೃಪನೊಡನೆ ||
ಕಾಲನರಮನೆಗೆಯ್ಯಲನುವನು |
ಕೇಳಿರೀ ನೆಲನಾಸೆ ಬೇಡೆನು |
ತಾಳೊಳಗ್ಗದ ಪಾರ್ಥನೆಚ್ಚನು ಪಾಶುಪತಶರವ  || ೧೧೬ ||

ರಾಗ ನವರೋಜು ಮಟ್ಟೆತಾಳ

ಏನನೆಂಬೆನಸ್ತ್ರದುರುಬೆಯ | ಧರಣಿಪಾಲ | ಏನನೆಂಬೆನಸ್ತ್ರದುರುಬೆಯ  || ಪ ||

ಭುಗಿಲು ಭುಗಿಲು ಭುಗಿಲೆನುತ್ತ | ಹೊಗೆಯ ಸೂಸುತಾಗಲಸ್ತ್ರ |
ಧಗ ಧಗಿಸಿ ಧನುಸ್ಸನೊದೆದು |  ಗಗನಕಾವರಿಸುತ ಬರಲು |
ಬೆಗಡುಗೊಂಡು ದೈತ್ಯರುರುಬಲು | ಬಿಡದೆಯವರ |
ತಗಲಿ ತನುವ ಸೀಳಿ ತೆಗೆಯಲು |  ನಭದಿ ಸುರರು |
ಪೊಗಳಿ ನರನ ಭಳಿರೆನುತ್ತ | ನಗಧರಾದ್ಯರೊಪ್ಪುಗೊಳಲು || ಏನನೆಂಬೆ || ೧೧೭ ||

ಉಳಿದ ಭಟರು ಶಸ್ತ್ರದುರುಬೆ | ಗಳಲಿ ತೃಣವ ಕಚ್ಚಿ ತಲೆಯ |
ನುಳುಹಬೇಕೆನುತ್ತಲಾಗ | ವಿಳುಹಿ ಧನುಶರಂಗಳನ್ನು |
ಫಲುಗುಣನ್ನ ಬೇಡಿಕೊಂಡರು || ಬಹಳ ಭಯವ |
ತಳೆದು ಕಂಡಕಡೆಗೆ ಹಾಯ್ದರು | ಸುಶರ್ಮಕಾದಿ |
ಬಲುಭಟಾಗ್ರಗಣ್ಯರಿಳೆಗೆ | ಮಲಗಿ ಪ್ರಾಣ ತೊರೆದರವರು || ಏನನೆಂಬೆ || ೧೧೮ ||

ವಾರ್ಧಕ

ಇಳೆಯರಸ ಕೇಳಿಂತು ಸಮಸಪ್ತಕಾದಿ ಖಳ |
ರಳಿಯಲವರೊಡನಿರ್ದ ಶುಕತುಂಡನೆಂಬವಂ |
ತಳುವದೋಡಿದನವರ ಜಾಮಾತನಾಗಿಹ ಕರಂಡಕಾಸುರನಲ್ಲಿಗೆ ||
ನಿಳಯವಾತಗೆ ವಣಶಿಲಾ ನಗರದೊಳಗಧಿಕ |
ಖಳರ ಮೇಳದೊಳಿರ್ಪವನ ಬಳಿಗೆ ಬರುವವನ |
ಕಲುಷಗಾಮಿನಿ ಜಗಳಗ್ರಂಥಿಯರ್ ಕಂಡಗ್ರಜರ ಪರಿಯ ಬೆಸಗೊಂಡರು || ೧೧೯ ||

ಭಾಮಿನಿ

ಅಗ್ಗಳೆಯ ಶುಕತುಂಡ ಕೇಳೆ |
ಮ್ಮಗ್ರಭವರೆಲ್ಲಿರ್ಪರೆನುತಲಿ |
ವಿಗ್ರಹದಿ ನಾವ್ ಕಾಣದಳಲುತ ಬಹೆವು ಭೂತಳಕೆ ||
ಅಗ್ರಭುಜಬಲರೊಡನೆ ಪೋಗಿ ಸ |
ಮಗ್ರದಲಿ ನೀನೋರ್ವನೇ ಮನ |
ಕುಗ್ಗಿ ಪೋಪೆಯದೆಲ್ಲಿಗೆನಲವನೆಂದನವರೊಡನೆ || ೧೨೦ ||

ರಾಗ ಕಾಂಭೋಜಿ ಅಷ್ಟತಾಳ

ಕಲುಷಗಾಮಿನಿ ಕೇಳು ಕಥೆಯ | ಹೇಳ | ಲಳವಲ್ಲ ನಮಗಾದ ಸ್ಥಿತಿಯ |
ಇಳೆಗಯ್ದಿ ಕುರುನೃಪಾಲರಿಗೆ ಬೆಂಬಲವಾಗಿ |
ಕೊಳುಗುಳದಿ ಕೃಷ್ಣಾರ್ಜುನರ ಮುಂ | ದಳವಿಗೊಟ್ಟೆವು ಭರದಲಿ || ೧೨೧ ||

ಕೇಣಿಗೊಂಡಾಜಿಗಯ್ದಿದೆವು | ರಿಪು | ಸೇನೆಯ ಜಡಿದು ಮುಕ್ಕಿದೆವು |
ಬಾಣ ತೋಮರ ಕುಂತ ಮುಸಲ ಮುದ್ಗರದಿಂದ |
ಹೂಣಿಗರ ಹೊಯ್ದೊರಸಿ ಹಾಣಾ | ಹಾಣಿಯಲಿ ಸದೆಬಡಿದೆವು || ೧೨೨ ||

ಮತ ಕಿರೀಟಿಯೆಂಬವನು | ಬಲು | ಒತ್ತಾಯಗೆಯ್ದು ಕಾದಿದನು ||
ಬತ್ತೀಸಾಯುಧದಿಂದ ಬಳಲದೆಚ್ಚನು ಶಿವ |
ನಿತ್ತ ಪಾಶುಪತಾಸ್ತ್ರದಿಂದಲಿ | ಕುತ್ತಿ ಕೆಡಹಿದನಿವರನು || ೧೨೩ ||

ಬಿಡದಿನ್ನಾದರು ಕೃಷ್ಣಾರ್ಜುನರ | ಹೆಡ | ಮುಡಿ ಮುರಿದಿಕ್ಕಿ ಮಾನವರ ||
ಬಡೆಯಬೇಕೆಂದು ಕರಂಡಕಾಸುರನಿಗೆ |
ಒಡನೆ ದೂರುವೆ ಪಾಂಡುಪುತ್ರರ |  ಬೆಡಗ ನಿಲಿಸುವೆ ನಿಮಿಷದಿ || ೧೨೪ ||

ಕಂದ

ಎನೆ ಕೇಳ್ದಗ್ರಜರಿರಮಂ |
ಮನದೊಳು ಮರುಗುತ್ತಲೊಡನೆ ಖಾತಿಯ ತಳೆದುಂ ||
ದನುಜೆಯರಾರ್ಭಟೆವೆತ್ತಾ |
ರಣಧಾರಿಣಿಗಯ್ತಂದುಸಿರಿದರರ‍್ಜುನಗಂ  || ೧೨೫ ||

ರಾಗ ಮಾರವಿ ಅಷ್ಟತಾಳ

ಏನೆಲೊ ಮನುಜ | ನಿನ್ನಯ ಪೆಸ | ರೇನೆಲೊ ಮನುಜ    || ಪ ||

ಏನೆಲವೊ ನಮ್ಮಗ್ರಜರ ನಿ | ನ್ನೀ ನಿರೋಧಕೆ ಬರಿಸಿದಾತನು |
ನೀನೆಲೋ ನಿನ್ನೆದೆಯ ಗುಂಡಿಗೆ | ಗೋಣ ಮುರಿದೀ ಕ್ಷಣದಿ ತಿಂಬೆವು || ಏನೆಲೊ ಮನುಜ   || ಅ||

ಸಂದುಸಂದನು ಗುಮ್ಮಿ ಮುರಿದು | ನಿನ್ನ | ನೊಂದೊಂದು ತುಂಡಾಗಿ ಸಿಗಿದು |
ತಿಂದು ರಕ್ತಪಾನ ಮಾಡಿ | ಬಂಧುಬಳಗವೆಲ್ಲ ಕೂಡಿ |
ಸಂದುಗೊಂದು ಮೂಲೆ ನೋಡಿ | ಹೊಂದಿಸೀ ಮುರಿಮುರಿದು ತಿಂಬೆವು ||
ಏನೆಲೊ ಮನುಜ || ೧೨೬ ||

ಎಲುಬು ತೋಳನು ತೋಟಿಗೆಯ್ದು | ರಕ್ತ | ಹೊಳೆಯ ಕಾಣಿಸಿ ಮೊಗೆ ಮೊಗೆದು |
ನಿಳಯಕೊಯ್ದು ನೀರ ಹೊಯ್ವುತ | ತಲೆಬುರುಡೆಯ ಕರಡಿಗೆ ಗೆಯ್ದು |
ಉಳಿಸದೆಮ್ಮವರುಗಳ ನೆರೆದು | ಗಳಗಳನೆ ಬಾಯ್ಗೆರೆದು ನಲಿವೆವು || ಏನೆಲೊ ಮನುಜ || ೧೨೭ ||

ವಾರ್ಧಕ

ಅರರೆ ಯಮನಬ್ಬಟೆಯೊ ಮೃತ್ಯುವಿನ ಹೋರಟೆಯೊ |
ಹರನ ಕಣ್ಗಿಚ್ಚುರಿಯೊ ಹಾಲಾಹಲದ ನೊರೆಯೊ |
ಬರಸಿಡಿಲ ಗರ್ಜನೆಯೊ ಭೈರವನ ಬಾಯ್ದೆರೆಯೊ ರಕ್ಕಸಿಯರಾರುಭಟೆಯೋ ||
ಒರೆಯಲಾನದನರಿಯೆ ವಸುಧೆ ಬಿಕ್ಕನೆ ಬಿರಿಯೆ |
ಶರಧಿಗಳು ಮೇಲ್ವರಿಯೆ ಶೇಷ ಪೆಡೆಯೊಳಸರಿಯೆ |
ಕುರುಕುಲಾಂಬುಧಿ ಜರಿಯೆ ನರಕೃಷ್ಣರುಬ್ಬಿರಿಯೆ ಹರಿ ಹನುಮನೊಡನೆಂದನು || ೧೨೮ ||

ರಾಗ ಮಾರವಿ ಝಂಪೆತಾಳ

ನೋಡಿದೆಯ ಹನುಮ ನೀ | ಜೋಡು ದಿಂಡೆಯರಿವರು |
ರೂಢಿಸುವ ಶೌರ್ಯದ ಸ | ಗಾಢತನದಿರವ ||
ಹೇಡಿಗೊಳಿಸಿದರಿಲ್ಲಿ | ಕೂಡಿರುವ ಸೈನಿಕಕೆ |
ಜೋಡು ಜೋಡಿಯರ ಮಾ | ತಾಡಿಸೈ ನೀನು  || ೧೨೯ ||

ನಿನಗಿವರು ಪಾಡಲ್ಲ | ರಣದಿ ಮೊದಲಿವರಿಂದ |
ಘನವಾದ ದೈತ್ಯರನು | ಹಣಿದಾತನೈಸೆ ||
ಎನಲುರೋಷದಿ ಹನುಮ | ಮನದೊಳುಬ್ಬೇರಿದನು |
ವನಜಾಕ್ಷ ಶರಣೆನುತ | ಲನುಗೆಯ್ದನವನು  || ೧೩೦ ||

ಭಾಮಿನಿ

ಕಡಲಶಯನನ ನುಡಿಗೆ ಮಾರುತಿ |
ಯೊಡನೆ ಜೀಯ ಹಸಾದವೆನುತು |
ಗ್ಗಡಸಿ ಬಾಲವ ಸಡಲಿಸುತಲುಬ್ಬೇರಿ ಹೂಂಕರಿಸಿ ||
ಎಡೆಬಿಡದೆ ಬೆಳೆಯಲ್ಕೆ ಭೂತಳ |
ನಡುಗಿತಾ ಬ್ರಹ್ಮಾಂಡಖರ್ಪರ |
ವೊಡೆದುದೋಯೆನೆ ಧರೆಗೆ ಹಾಯ್ದನು ಸುರರು ಭಾಪೆನಲು || ೧೩೧ ||

ಕಂದ

ಹನುಮನ ಭರಮಂ ಕಂಡಾ |
ದನುಜೆಯುಬ್ಬೇರ್ದು ಸಿಡಿಲಿನಂತೆ ಗರ್ಜಿಸುತಂ ||
ಕನಲಿದು ಬಳಿಕ ಕಲುಷಗಾ |
ಮಿನಿಯಾ ಜಗಳಗ್ರಂಥಿಯೊಳೀ ತೆರನೊರೆದಳ್  || ೧೩೨ ||

ರಾಗ ಸೌರಾಷ್ಟ್ರ ಅಷ್ಟತಾಳ

ಇವನಾವ ಕಾಡಿಂದಲಡಹಾಯ್ದ ಮರ್ಕಟ | ನೀತನ್ಯಾರೆ | ಬಲು |
ಬವರಿ ಗಡ್ಡದ ಗುಜುಗುಜುರು ಕೇಶದ ಕಪಿ | ಯೀತನ್ಯಾರೆ ||
ಹವಣಿಸಿ ಬಾಲವ ನಭಕೇರಿಸಿರುವಾತ | ನೀತನ್ಯಾರೆ | ಕೇಳು |
ಬವರಕೆ ನಡೆತಂದು ಕೀರುಗುಟ್ಟುವ ಮಂಗ | ನೀತನ್ಯಾರೆ || ೧೩೩ ||

ತಂಗಿ ಕೇಳಿವ ಹಿಂದೆ ಪಾತಾಳ ಲಂಕೆಗೆ | ಬಂದಕಾಣೆ | ದೈತ್ಯ |
ಪುಂಗವ ಮೈರಾವಣನ ಕೊಂದ ಕೋಡಗ | ನೀತ ಕಾಣೆ ||
ಹಿಂಗದೆ ದುರುದುಂಡಿ ಮಗಗೆ ಪಟ್ಟವ ಕಟ್ಟಿ | ದಾತ ಕಾಣೆ | ಸಮ |
ರಾಂಗಣಕಿಂದಿಲ್ಲಿ ಯಾರಿಗೋಸುಗ ಬಂದ | ನೀತ ಕಾಣೆ || ೧೩೪ ||

ಬೆಂಬಲಕೆನುತೀತ ಬಂದರೇನಾಯ್ತೀಗ | ಅಕ್ಕ ಕೇಳು | ಲಂಕೆ ||
ಗಂಬುಧಿಯನು ದಾಟಿ ಬಾಲ ಸುಡಿಸಿಕೊಂಡ | ನಕ್ಕ ಕೇಳು ||
ಕುಂಭಕರ್ಣನ ಮೂಗಿನುಸಿರೊಳ್ ಸಿಕ್ಕಿದನೀತ | ನಕ್ಕ ಕೇಳು | ಈ |
ಡೊಂಬಿಯ ಬಗೆಯೆಲ್ಲ ನಾ ಕೇಳಿ ಬಲ್ಲೆನು | ಅಕ್ಕ ಕೇಳು || ೧೩೫ ||

ರಾಗ ಮಾರವಿ ಏಕತಾಳ

ಇಂತು ಕೂಲಂಕಷಗಳನುಸಿರುತ್ತ ಮ | ಹಾಂತ ಪರಾಕ್ರಮದಿ |
ನಿಂತಾರ್ಭಟಿಸುತ ಪೇಳಿದರಾ ಹನು | ಮಂತನೊಳತಿ ಭರದಿ || ೧೩೬ ||

ಎಲೆ ಎಲೆ ಕೇಳ್‌ಮ್ಯಾ ಹಳೆ ಮುದಿ ಮರ್ಕಟ | ಕೊಳುಗುಳ ನಿನಗ್ಯಾಕ್ ಮ್ಯಾ ||
ಹಳುವದಿ ಮರ ಮರ ಹಾರ್ಹಾರ್ಹಣುಹಂ | ಪಲುಗಳ ತಿನು ಹೋಗ್ ಮ್ಯಾ || ೧೩೭ ||

ಭಲರೇನೆಂಬ್ತೀ  ಹೆಣಗಳ ತಿಂಬ್ತೀ | ಕುಲಗೆಡುಕರ ಹೆಂಡ್ತೀ ||
ನಿಲು ನೋಡ್ ನಮ್ತಾವ್ ಗಮಜಾಲ್ ಮಾಡ್ನಿ | ನ್ನೆಲುಗಳ ಜಾಳ್ಮಾಡ್ತ್ನೀ || ೧೩೮ ||

ಅರೆಯಾದೇನ್ ಮ್ಯಾ ಮೈಮೇಲಂಘಿಸಿ | ಹರಣ ಕೊಡಲು ಬೇಡ್ ಮ್ಯಾ |
ತರುಚರ ನಿನ್ನನು ಸರ್ರನೆ ಸೀಳುತ | ಕರುಳ ತೆಗೆವೆ ತಾಳ್ ಮ್ಯಾ || ೧೩೯ ||

ಎನುತಬ್ಬರಿಸುತ ಹತ್ತಾಹತಿಯಲಿ | ದಣುವಾಯಿತು ಎನುತ |
ಅಣಕಿಸಿ ಹೆಮ್ಮರಗಳ ಕಿತ್ತೆರಗಲು | ಹನುಮನು ಗರ್ಜಿಸುತ || ೧೪೦ ||

ಬಲಿದಾ ವಜ್ರದ ಮುಷ್ಟಿಯ ಹಳೆಹಳೆ | ಹುಲು ರಕ್ಕಸಿಯೆನುತ ||
ಕಲುಷಾಗಾಮಿನಿಗೆರಗಲು ಮೂರ್ಛೆಯ | ತಳೆಯಲು ಗೋಳಿಡುತ || ೧೪೧ ||