ರಾಗ ನಾಟಿ ರೂಪಕತಾಳ

ಜಯ ಜಯ ಮಾತಂಗಾನನ | ಜಯ ಜಯ ತ್ರಿಜಗತ್ಪಾವನ |
ಜಯ ಜಯ ಮೂಷಿಕವಾಹನ | ಜಯ ವಿಘ್ನವಿಹರಣ ||
ಜಯ ಜಯ ಕರುಣಾಪೂರಣ | ಜಯ ಜಯ ದುರಿತನಿವಾರಣ |
ಜಯ ಜಯ ದೀನೋದ್ಧಾರಣ | ಜಯ ನಾಗಾಭರಣ || ಜಯ ಜಯ ಜಯ ಜಯತು || ೧ ||

ಬಾಲಾರ್ಕಾಮಿತ ಭಾಸುರ | ಬಾಲಶಶಾಂಕಕಲಾಧರ |
ಶೈಲಜೆಯಣುಗ ಕೃಪಾಕರ | ಸಾಲಂಕೃತ ಶೂರ |
ಪಾಲಿತಸರ್ವಚರಾಚರ | ಲಾಲಿತಗಗನಶುಭಾಕರ |
ವ್ಯಾಳೇಂದ್ರಾಸನ ಪ್ರಿಯಕರ | ಫಾಲಾಂಬಕಕುವರ | ಜಯ ಜಯ ಜಯ ಜಯತು || ೨ ||

ಹರಿಗಂಧಾಗರುಲೇಪಿತ | ನಿರುಪಮಚರಿತ ಗುಣಾನ್ವಿತ |
ಸುರುಚಿರಮಣಿಗಣಭೂಷಿತ | ಮರಕತಮಣಿಖಚಿತ |
ಪರಶುಪಾಶಾಂಕುಶಕರಧೃತ | ದುರಿತಾವಳಿ ವಿಚ್ಛೇದಿತ |
ಸರಳ ಸದಾ ಮೃದುಭಾಷಿತ | ಸ್ಮರಿಸುವೆನನವರತ || ಜಯ ಜಯ ಜಯ ಜಯತು || ೩ ||

ವಾರ್ಧಕ

ಸಚ್ಚಿದಾನಂದನಂ ಸಕಲಗುಣವೃಂದನಂ |
ಸ್ವಚ್ಚಂದರೂಪನಂ ಸ್ಮರಭಸ್ಮ ಲೇಪನಂ |
ಸಚ್ಚರಿತಸಾರನಂ ಸರ್ವಶೃಂಗಾರನಂ ಶರ್ವನಂ ಸರ್ವೇಶನಂ ||
ಅಚ್ಯುತಪ್ರೀಯನಂ ಅತಿಧವಳಕಾಯನಂ |
ದುಶ್ಚರಿತದೂರನಂ ದುರಿತಸಂಹಾರನಂ |
ನಿಶ್ಯಂಕ ನಿಪುಣನಂ ನಿರ್ದ್ವಂದ್ವಮಚಲನಂ ನೆನೆದೊರೆವೆನೀ ಕೃತಿಯನು  || ೪ ||

ವನಚರೋತ್ತುಂಗನಂ ವನಧರನಿಭಾಂಗನಂ |
ವನಕಿಳಿದನೀತನಂ ವನದಿ ನಗ ಪೊತ್ತನಂ |
ವನಭೂಮಿಚೋರನಂ ವಧಿಸಿದಾಕಾರನಂ ಸಾರನಂ ಶೃಂಗಾರನಂ ||
ವನಮೃಗಾಧ್ಯಕ್ಷನಂ ವಟು ದೈತ್ಯಶಿಕ್ಷನಂ |
ಜನನಿಯೊಳ್ ಮುನಿದನಂ ವನವಾಸಕಯ್ದನಂ |
ವನಧಿ ಮನೆ ಗೆಯ್ದನಂ ವರ ಬುದ್ಧ ಕಲ್ಕ್ಯನಂ ಬಲಗೊಂಬೆ ದಶರೂಪನಂ || ೫ ||

ವನಚಾರಿಯಾದವನ ಹೆಮ್ಮಗನ ಸೋದರನ |
ತನಯನಂ ಬಗಿದವನ ಬಾಗಿಲಂ ಕಾಯ್ದವನ |
ಮನೆಯನುಂ ನೆಗಹಿದನ ಸುತನ ಗೆಲಿದವನಗ್ರಜನ ಪೆಗಲೊಳಾಂತು ಕುಣಿವ ||
ಘನಮಹಿಮನಯ್ಯನ ಕುಮಾರಕನ ಸೋದರನ |
ವನ ರಥದ ಸಾರಥಿಯ ಸೋದರಿಯ ಸಂಭವನ |
ತನುಜನನು ಚುಚ್ಚಿದನ ಕುಲದಂತಕನ ಪಿತಾಮಹ ಬ್ರಹ್ಮ ಶರಣು ಶರಣು || ೬ ||

ಭಾಮಿನಿ

ಶಾರದಾಂಬೆಗೆ ಶಂಕರಿಗೆ ವರ |
ಮಾರಮಾತೆಗೆ ಹಿಮಕರೆಗೆ ಸರ |
ಸೀರುಹಾಪ್ತಗೆ ಮುಖ್ಯ ದಿಕ್ಪಾಲರಿಗೆ ಋಷಿಗಳಿಗೆ ||
ಚಾರು ಕವಿ ವಾಲ್ಮೀಕಿಯಂಘ್ರಿಗೆ |
ಸಾರಿ ಕರಗಳ ಮುಗಿದು ವಂದಿಸಿ |
ವೀರ ಷಣ್ಮುಖಗೆರಗಿ ಪೇಳುವೆನೀ ಪ್ರಬಂಧವನು || ೭ ||

ದ್ವಿಪದಿ

ಶ್ರೀರಾಮಚರಣಾಬ್ಜಯುಗಭೃಂಗಕೆರಗಿ |
ನಾರದಾದಿ ಮುನೀಂದ್ರರಡಿಗೆ ತಲೆವಾಗಿ  || ೮ ||

ಭಾರತಪುರಾಣದೊಳಗಂದು ಧರ್ಮಜನು |
ವೀರ ಶಲ್ಯನಗೆಲಿದ ಬಳಿಕ ಫಲುಗುಣನು  || ೯ ||

ಸಮಸಪ್ತಕಾದಿ ದಾನವರನೆಲ್ಲರನು |
ಸಮರದೊಳು ಗೆಲಿದಾ ಕರಂಡಕಾದ್ಯರನು  || ೧೦ ||

ಬಳಿಕ ಭೀಮನು ಕೌರವನನು ಸಂಹರಿಸಿ |
ಇಳೆಯಾಧಿಪತ್ಯವನು ಧರ್ಮಜಗೆ ರಚಿಸಿ  || ೧೧ ||

ಹರಿಯ ಕಾರುಣ್ಯದಲಿ ಮೆರೆದ ಸಂಗತಿಯ |
ಒರೆವೆನೈ ಯಕ್ಷಗಾನದಲಿ ಸತ್ಕಥೆಯ  || ೧೨ ||

ತಪ್ಪು ಸಾವಿರವಿರಲು ತಿದ್ದಿ ಬಲ್ಲವರು |
ಒಪ್ಪುಗೊಂಡಿದ ಮೆರೆಸಬೇಕು ಸಜ್ಜನರು   || ೧೩ ||

ಯತಿ ಗಣ ಪ್ರಾಸ ವಿಷಮಾಕ್ಷರಗಳರಿಯೆ |
ಅತಿ ದೋಷಗಳ ಕ್ಷಮಿಸಬೇಕು ಶ್ರೀಹರಿಯೆ  || ೧೪ ||

ನ್ಯೂನಾತಿರಿಕ್ತ ಬರಲದನೆಲ್ಲ ಮರೆದು |
ಸಾನುರಾಗದಿ ಪಂಚಲಿಂಗ ರಕ್ಷಿಪುದು  || ೧೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂದುಕುಲ ಜನಮೇಜಯಗೆ ನಲ | ವಿಂದ ವೈಶಂಪಾಯ ಮುನಿಪತಿ |
ಚಂದದಿಂ ಭಾರತದ ಕಥನವ | ನಂದು ಮುದದಿ || ೧೬ ||

ವಿಸ್ತರಿಸುತಿರಲೊಂದು ದಿನ ಬಲು | ಭಕ್ತಿಯಲಿ ಋಷಿಯಂಘ್ರಿಗೆರಗುತ |
ಪೃಥ್ವಿಪಾಲಕನೆಂದನಾ ಮುನಿ | ಪೋತ್ತಮನೊಳು || ೧೭ ||

ಯತಿಕುಲಾಗ್ರಣಿ ಕೇಳು ಧರ್ಮಜ | ನತಿರಥರೊಳಗ್ಗಳೆಯ ಶಲ್ಯನ |
ಮಥಿಸಿದಂದವದೆಂತು ನರ ಶ್ರೀ | ಪತಿಯ ದಯದಿ || ೧೮ ||

ದುರುಳ ಸಮಸಪ್ತಕರ ಮಿಗೆ ಸಂ | ಹರಿಸಿ ದೈತ್ಯ ಕರಂಡಕಾದ್ಯರ |
ಧುರದಿ ಹನುಮನು ಗೆಲಿದ ಕಾರಣ | ದಿರವದೆಂತು || ೧೯ ||

ದುರುಳ ಕೌರವನೃಪನ ರಣದಲಿ | ಮರುತಜನು ಸಂಹರಿಸಿ ಯಮಜಗೆ |
ಧರೆಯ ಪಟ್ಟವ ರಚಿಸಿದಂದವ | ನೊರೆವುದಾರ್ಯ || ೨೦ ||

ಎನುತ ಚರಣದಿ ಮಣಿದ ಭೂಪನ | ವಿನಯದಿಂ ಪಿಡಿದೆತ್ತಿ ಮುನಿಪತಿ |
ವನಧಿಶಯನನ ಪಾದಕಮಲವ | ನೆನೆದುಸಿರ್ದ || ೨೧ ||

ವಾರ್ಧಕ

ಶರಧಿವಸನೇಶ ಜನಮೇಜಯ ನರೇಂದ್ರ ಗುಣ |
ಶರಧಿಸಮ ಗಂಭೀರ ಲಾಲಿಸೈ ಶಶಿವಂಶ |
ಶರಧಿ ಪೂರ್ಣಶಶಾಂಕ ಕೇಳಾದಡೊರೆವೆನವಧರಿಸೇಕಚಿತ್ತದಿಂದ ||
ಹರಿಯೊಲುಮೆಯಿಂದಲಾ ಹರಿಸೂನು ಸಂಗರದಿ |
ಹರಿಯಣುಗನಂ ಕೊಲಲು ಹರಿಸುತಂ ಕೇಳ್ದಾಗ |
ಹರಿಪುತ್ರನಳಿದ ವ್ಯಥೆ ಹರಿದು ಮನದೊಳಗೆ ಶ್ರೀಹರಿಯ ಧ್ಯಾನಿಸುತಿರ್ದನು || ೨೨ ||

ಇರಲಿತ್ತ ವಿಗತಾಕ್ಷನೃಪತಿಗಾ ಸಂಜಯಂ |
ಒರೆಯಲೀ ಹದನಮಂ ಕೇಳ್ದು ಚಿಂತಾಗ್ನಿಯೊಳು |
ಮರುಗಿ ಮೂರ್ಛಿತನಾದ ಧೃತರಾಷ್ಟ್ರನಂ ಬಳಿಕ ಪಿಡಿದೆತ್ತಿ ತವಕದಿಂದ ||
ಒರೆದನೈ ನೀ ಮೊದಲು ಬಿತ್ತಿದ ವಿಷದ್ರುಮಾಂ |
ಕುರಿಸಿ ಫಲವಾಯಿತದನುಣ್ಣಬೇಕಲ್ಲದೀ |
ಪರಿಯೊಳಳಲಿದರಹುದೆ ಪರಿಹಾರವೆನುತಲತಿ ಧೈರ್ಯಮಂ ಪೇಳ್ದನವಗೆ || ೨೩ ||

ಕುರುರಾಯ ಬಳಿಕಿತ್ತ ಕಲಿ ಕರ್ಣನಳಿದುದಂ |
ಪರಿಕಿಸುತ ಮೂರ್ಛೆಯಂ ತಾಳಿ ಬಿದ್ದಿರಲಾಗ |
ಗುರುಸೂನು ಕೃತವರ್ಮ ಕೃಪರಂದು ಸಂತವಿಸಿ ಧೈರ್ಯಗಳನೊರೆದು ನೃಪಗೆ |
ವರ ಮಾದ್ರಿಪತಿಯ ದಳದರಸುತನಕೊಡಬಡಿಸಿ |
ತರತರದ ನಿಸ್ಸಾಳ ವಾದ್ಯದಬ್ಬರದಿಂದ |
ವರಮಹಾಸೇನಾಧಿಪತ್ಯಮಂ ಪರುಠವಿಸುತನುವಾದರಿತ್ತ ರಣಕೆ || ೨೪ ||

ಭಾಮಿನಿ

ಈಸು ಪರಿ ವಾರ್ತೆಗಳನಾ ಧರ |
ಣೀಶ ಧರ್ಮಜನರಿತು ಬಂದಾ |
ವಾಸುದೇವನ ಚರಣಕೆರಗುತ ವಿನಯಪರನಾಗಿ ||
ಕೇಶವಾಚ್ಯುತ ಪದ್ಮನಾಭ ಸು |
ರೇಶ ಪೂಜಿತ ಮದನಜನಕಬು |
ಜಾಸನಾರ್ಚಿತ ಶರಣೆನುತ್ತಿಂತೆಂದನವನೀಶ || ೨೫ ||

ರಾಗ ಮಧುಮಾಧವಿ ಏಕತಾಳ

ದೇವಾಧಿದೇವ ಚಿತ್ತವಿಸು ಬಿನ್ನಪವ | ಭಾವಜಜನಕನೆ ಶರಣಸಂಜೀವ |
ಮಾವ ಶಲ್ಯಗೆ ಸೇನೆಯಧಿಪತಿತ್ವವನು | ಠೀವಿಯಿಂ ರಚಿಸಿದನಂತೆ ಕೌರವನು || ೨೬ ||

ನಾವಿನ್ನು ಮಾಡುವ ಯತ್ನಗಳೇನು | ಜೀವನದೊಡೆಯ ನೀ ಬಲ್ಲೆ ಕಾರ್ಯವನು |
ತೀವಿದ ಸಂಗರವೆಸಗುವ ಬಗೆಯ | ಸಾವಧಾನದಿ ಪೇಳ್ದು ಸಲಹಬೇಕಯ್ಯ || ೨೭ ||

ಎಂದು ಧರ್ಮಜನು ಶ್ರೀಹರಿಪಾದಕಂದು | ವಂದಿಸಿ ಪೇಳಲು ಕಲಿ ಭೀಮ ಬಂದು ||
ಇಂದೆನ್ನ ಕಳುಹು ಯುದ್ಧಕೆ ಸಾಕಿದೆಂದು | ಬಂದೆಲ್ಲ ಭಟರು ಗರ್ಜಿಸಿದರು ನಿಂದು || ೨೮ ||

ಭಾಮಿನಿ

ಆ ಸಮೀರಜ ಸುರಪಸೂನು ಮ |
ಹಾ ಸುಭಟರೆಲ್ಲವರು ಮಿಗೆ ಮಾ |
ದ್ರೀಸುತರು ನಾ ಮುನ್ನ ತಾ ಮುನ್ನೆನುತ ಗರ್ಜಿಸಲು ||
ವಾಸುದೇವನು ನಗುತ ನಿಮ್ಮಯ |
ವಾಸಿ ಕೊಳ್ಳದು ಶಲ್ಯಭೂಪನ |
ಗಾಸಿ ಮಾಳ್ಪರೆ ಧರ್ಮಸುತ ಹೊರತಿಲ್ಲ ಭಟರೆಂದ || ೨೯ ||

ರಾಗ ಭೈರವಿ ತ್ರಿವುಡೆತಾಳ

ಮುರಹರನು ಬಳಿಕಿತ್ತಲೀ ತೆರ | ನರುಹುತಿರುತಿರಲತ್ತ ಮಾದ್ರೇ |
ಶ್ವರನು ರಣಕಯ್ತರುವ ವಿಭವವ | ಪರಿಕಿಸುವೆನೆಂದೆನುತ ಬೇಗದಿ |
ತರಣಿಯುದಯಾಚಲದ ಶಿಖರದಿ | ಮೆರೆಯಲಂದತಿ ರಭಸದಲಿ ಮುಂ |
ಬರಿದು ಧರೆ ಬಿರಿವಂದದಲಿ ಬಲ | ವೆರಸಿ ಶಲ್ಯನೃಪಾಲ ಭರದಲಿ ||
ಬಂದನಾಗ | ಸಮರಕೆ | ನಿಂದನಾಗ  || ೩೦ ||

ಹತ್ತು ಸಾವಿರದೇಳುನೂರರು | ವತ್ತು ಗಜ ಮಿಗಿಲೆರಡು ನೂರರು |
ವತ್ತು ಲಕ್ಷ ತುರಂಗಗಳು ಸಹ | ಪತ್ತಿ ಮೂರ್ಕೋಟಿಯನು ನೃಪ ಕೈ |
ವರ್ತಿಸಿದ ಸಮಸಪ್ತಕರು ಗುರು | ಪುತ್ರ ಮೊದಲಾದಖಿಳ ಸುಭಟರ |
ಮೊತ್ತದೊಗ್ಗಿನಲಂದು ರಥವೇ | ರುತ್ತಧಿಕ ರೋಷದಲಿ ಸಮರಕೆ || ಬಂದನಾಗ || ೩೧ ||

ಇದಿರಲೌಕಿತು ಗಾಳಿ ಪಟ್ಟದ | ಮದ ಗಜಾವಳಿ ಮುಗ್ಗಿತಾ ಧ್ವಜ |
ವುದುರಿದುದು ದಳಪತಿಯ ನಿಮಿಷದಿ | ಬಿದಿರಿದುದು ಕೆಂಧೂಳುತಾರಕೆ | ಯುದುರಿತಭ್ರದೊಳಿಂತು ದುಶ್ಯಕು | ನದ

ಪರೀಕ್ಷೆಯ ಗಣಿಸದಯ್ದಿದ |
ರಧಟುತನದಲಿ ಕದನಕೆನುತಲಿ | ಮದಮುಖರು ಗರ್ಜಿಸುತ ಭರದಲಿ || ಬಂದನಾಗ || ೩೨ ||

ಭಾಮಿನಿ

ಇಳೆಯಧೀಶ್ವರ ಲಾಲಿಸೀ ಪರಿ |
ಯೊಳಗೆ ಮಾದ್ರಾಧೀಶ ತನ್ನಯ |
ದಳ ಸಹಿತ ನಡೆತಂದು ಮಣಿಹಾರಕನ ಕರೆದೆಂದ ||
ನಿಲದೆ ಹೋಗಾ ಧರ್ಮಜನ ಕೊಳು |
ಗುಳಕೆ ಬರಹೇಳೆನಲು ನಡೆದಾ |
ನಳಿನಸಖಸುತನಣುಗನೊಡನಿಂತೆಂದನತಿ ಭರದಿ || ೩೩ ||

ರಾಗ ಮುಖಾರಿ ಏಕತಾಳ

ಕೇಳು ಕೇಳಯ್ಯ ಧರ್ಮರಾಯ | ಸಂಗರಕೆ ಬೇ | ಗೇಳು ನೋಡಿಂದಿನ ಹೊಸ ಪರಿಯ |
ಕಾಲನಂದದೊಳಿಹ | ನಾಲಿಸು ಶಲ್ಯನು | ಮೇಲೆಮ್ಮಯದಳ | ಕಾಳಿದನಾದನು |
ಕಾಳಗಕೆನುತಲೆ | ಮೇಳಯಿಸುತ ಬಹ | ನೇಳೇಳೀ ಕ್ಷಣ | ಪೇಳಲಿನ್ನೇನು || ೩೪ ||

ತಮ್ಮಂದಿರೆಲ್ಲರ ನೀ ಕೂಡಿ | ಉಳಿದಿರ್ದ ಸೈನ್ಯ | ವೊಮ್ಮುಖ ಮಾಡಿ ಜೋಡುಗೂಡಿ ||
ಹಮ್ಮುಗೆಯುಳ್ಳರೆ | ನೆಮ್ಮಿ ಧುರವನಿದು | ಸುಮ್ಮನೆ ಪೋಗದು | ನಮ್ಮರಸನ ಬಗೆ |
ಸಮ್ಮತ ಬೇಡಿಕೊ | ನಿಮ್ಮಯ ಕೃಷ್ಣನ | ನುಮ್ಮಳಿಸದೇ ನೀ | ಘಮ್ಮನೆ ಹೊರಡು || ೩೫ ||

ಸತ್ತ್ವಾತಿಶಯದ ನಿನ್ನ ಪಡೆಯ | ಸಂಗರದಿ ನು | ಗ್ಗೊತ್ತಿ ನಿಮ್ಮಯ ಜಯಸಿರಿಯ ||
ಅತ್ತಲೆಳದು ಕುರು | ಪೃಥ್ವಿಪತಿಗೆ ಕೈ | ವರ್ತಿಪೆನೆಂದಾ | ಮತ್ತಾ ಶಲ್ಯನು |
ಚಿತ್ತದೊಳಗೆ ಖತಿ | ವೆತ್ತು ಬಂದಿರುವನು | ಹೊತ್ತುಗಳೆಯದೇ | ಳಿತ್ತ ಸಂಗರಕೆ || ೩೬ ||

ಭಾಮಿನಿ

ಚರರ ನುಡಿಯನು ಕೇಳ್ದು ಧರ್ಮಜ |
ನರುಹಿದನು ಬಹರೀ ಕ್ಷಣದೊಳೆಂ |
ದರುಹು ನಿಮ್ಮೊಡೆಯಂಗೆ ಲಯಕಾಮಿನಿಯ ಪರಿಣಯಕೆ ||
ಪರುಠವಿಸಿ ಸನ್ನಾಹಗಳನನು |
ಕರಿಸಿಕೊಂಡಿರಹೇಳು ಹೋಗೆಂ |
ದರಸನವನನು ಕಳುಹುತತ್ತಲು ಸಮರಕನುವಾದ || ೩೭ ||

ರಾಗ ಆಹೇರಿ ಝಂಪೆತಾಳ

ಕೊಳುಗುಳಕೆ ಬರುತಿರ್ದ ಭರದಿ | ಚತುರಂಗ |
ಬಲವೆರಸಿ ಧರ್ಮಜನು ಸಕಲ ಸಂಭ್ರಮದಿ    || ಪ ||

ಮುಂದೆ ಪಾಠಕರು ಪೊಗಳುತ ಬರಲು ಬಳಿಕದರ |
ಹಿಂದೆ ಬಿಲ್ಲಾಳುಗಳು ಬರಲವರು ಸಹವಾಗಿ |
ಮಂದಿ ಕುದುರೆ ಸಮೂಹ ಗಜಘಟೆಗಳೊಗ್ಗಿನಲಿ |
ಸಂದಣಿಯ ರಾಯದಳ ಸಹಿತ | ಅಧಿಕತರ |
ಚಂದದಿಂಮಣಿ ರಥನಿಕಾಯದೊಳಗಿರುತ || ೩೮ ||

ಧುರದಿ ಸಹದೇವ ಶಕುನಿಯ ಸೈನ್ಯಮಂಬೆರಸ |
ಲರಸ ದಳಪತಿಯೊಡನೆ ವರ ಸಾತ್ಯಕಿಯ ರಥವ |
ಗುರುಸೂನು ತಡೆಯೆ ಮುಂದುರವಣಿಸಿ ಗೌತಮಿಯ |
ಭರದಿಂದ ನಕುಲಾಂಕ ತಡೆದು | ಸಂಗರದಿ |
ಬೆರಸಿ ಕೋಪಾಗ್ನಿಯೊಳು ಹೊಯ್ದಾಡಿ ಜಡಿದು  || ೩೯ ||

ಕಂಡು ದಳಪತಿ ಕಾಲರುದ್ರನಂದದಿ ರೋಷ |
ಗೊಂಡು ಫಡ ಧರ್ಮಸುತ ನಿಲ್ಲೆನುತ ಬಳಿಕವು |
ದ್ದಂಡ ಸತ್ತ್ವದಿ ಸರಳಮಳೆಗರೆದು ಮುಸುಕಿದನು |
ದಂಡಧರ ಸುಕುಮಾರನ | ಸೈನ್ಯವನು |
ಗಂಡುಗಲಿ ಧರಿಸಿ ಕಡುರೋಷಪಾವಕನ || ೪೦ ||

ರಾಗ ಶಂಕರಾಭರಣ ಮಟ್ಟೆತಾಳ

ಅರಸ ಕೇಳು ದಂಡಧರನ | ವರ ಕುಮಾರನಖಿಳ ಸೈನ್ಯ |
ವಿರದೆ ವೈರಿದಳಗಳನ್ನು | ಬೆರಸಿ ಹೊಕ್ಕುದು ||
ಅರರೆ ಕವಿಯೆನುತ್ತಲಿವರು | ಭರದಿ ನಿಂತರಿಂತು ಬಾಣ |
ಪರಶು ತೋಮರಂಗಳಿಂದ | ತರುಬುತಿರ್ದರು || ೪೧ ||

ಹರಿಯ ಹಯದಿ ಗಜವ ಗಜದಿ | ವರ ವರೂಥಗಳನು ರಥದಿ |
ಮುರಿದು ರಾವುತರನು ರಾವ್ತ | ರಿರದೆ ಹೊಯ್ದರು |
ಧುರದಿ ರೋಷವೆತ್ತು ಶಲ್ಯ | ಧರಣಿಪಾಲನೊಡನೆ ಯಮಜ |
ಶರವ ತೂಗುತೆಂದನವನ | ಪರಿಕಿಸುತ್ತಲಿ || ೪೨ ||

ರಾಗ ದೇಶಿ ಅಷ್ಟತಾಳ

ನಿಲ್ಲು ನಿಲ್ಲೆಲೊ ಫಡ ಫಡ ಮಾದ್ರೇಶ |
ಬಲ್ಲೆ ನಿನ್ನಯ |  ಖುಲ್ಲತನಗಳ | ನಿಲ್ಲಿಸುವೆನೀ ಕ್ಷಣದಲಿ || ೪೩ ||

ನಮ್ಮ ಬಂಧುತ್ವದವನಾಗಿ ನೀನಿಂದು |
ದುರ್ಮದಗಳಿಂ | ದೆಮ್ಮರಿಯ ಸೇ | ರ್ದುಂ ಮದತ್ವದಿ ಬಂದೆಯ || ೪೪ ||

ಗಳಿಗೆ ಸೈರಿಸಿ ನೋಡಿಂದಿನಲಿ ನಿನ್ನ |
ಬಲಿಯ ಕೊಡುವೆನು | ಭೂತನಿಕರಕೆ | ತೊಲಗದಿದಿರಾಗೆಂದನು || ೪೫ ||

ವಾರ್ಧಕ

ವಸುಧೀಶ ಕೇಳಿಂತು ಕಿನಿಸಿಂದ ಮುನಿಸಿಂದ |
ಲಸಮ ಸಾಹಸಸತ್ತ್ವದೊಲವಿಂದ ಗೆಲವಿಂದ |
ವಸುಮತೀಪತಿ ಯಮಜ ಭರದಿಂದ ಕರದಿಂದ ಧುರದೊಳಸ್ತ್ರಂಗಳಿಂದ ||
ಮುಸುಕಿದಂ ಮಾದ್ರೇಶನಂಗಮಂ ಭಂಗಮಂ |
ಕುಸುಕಿದಂ ಸಾರಥಿ ವರೂಥಮಂ ಯೂಥಮಂ |
ದೆಸೆಗೆಡಿಸಿ ಬಿಡದೆ ರಿಪುಸೈನ್ಯಮಂ ದೈನ್ಯಮಂ ಬರಿಸಿದಂ ಸಂಗರದೊಳು || ೪೬ ||

ಕಂದ

ಇಂತಸ್ತ್ರದ ವರ್ಷಗಳಂ |
ಕುಂತೀಸುತ ಕರೆದು ಗಜರಿ ಗರ್ಜಿಸಲಾಗಳ್ ||
ತಾಂ ತಳುವದೆ ಮಾದ್ರೇಶಂ |
ಪಂಥದೊಳದ ಸವರುತೆಚ್ಚು ಧರ್ಮಜಗೆಂದಂ || ೪೭ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲೆ ಧರ್ಮಜಾತನೆ ಕೇಳಿಂದು | ಪಗೆ | ಗಳ ಕೂಡಿ ಬಂದಿಹೆ ನಾನೆಂದು |
ಬಲುಮೆಯ ಮಾತೇಕಾಡುವೆ | ನಿನ್ನ | ಬಲುಹನೀ ಕ್ಷಣದೊಳೀಡಾಡುವೆ  || ೪೮ ||

ಧರಣಿಪಾಲರ ನೀತಿಗುಣದಿಂದ | ಕೌರ | ವರ ರಾಯ ಕರೆತಂದನದರಿಂದ |
ಧುರಕೆ ಬೆಂಬಲವಾತಗಾದೆನು | ಯೆಂದು | ಕೆರಳಿ ಕೆಂಗರಿಗೋಲ ಕರೆದನು || ೪೯ ||

ಎಚ್ಚ ಕೋಲಾ ರಣರಂಗದಿ | ಬಂದು | ಚುಚ್ಚಿ ಭೂವರನ ಸರ್ವಾಂಗದಿ ||
ಬಿಚ್ಚಿ ತೊಟ್ಟಿರುವ ಸೀಸಕವನ್ನು | ಎದೆ | ಗುಚ್ಚಿ ಸೂಸಿತು ರಕ್ತಜಲವನ್ನು || ೪೭ ||

ಅನಿತರೊಳ್ ಮಾದ್ರಿಕುಮಾರರು | ಬಂದು | ಧನುವಿಗಸ್ತ್ರವ ಪೂಡುತೆಂದರು ||
ಜನನಿಯಗ್ರಜನಾಗಿ ನೀನಿಂದು | ನಮ್ಮ | ಕೆಣಕಿದೆ ಪಗೆಯೊಡನಯ್ತಂದು || ೪೮ ||

ಕಾಯದಾಸೆಯ ಬಿಡು ಸಾಕಿನ್ನು | ನಿನ | ಗಾಯುಷ್ಯಕವಧಿ ಬಂದಿಹುದಿನ್ನು ||
ಸಾಯದಿರೆಮ್ಮಗ್ರಜನೊಳೆಂದು | ಬಲು | ಸಾಯಕಗಳನೆಚ್ಚರವರಂದು || ೪೯ ||

ವಾರ್ಧಕ

ಅರಸ ಕೇಳ್ ಮಾದ್ರಿಸಂಜಾತರಿಂತೆನಲವರ  |
ಶರವರ್ಷಮಂ ತರಿದು ಧಿಕ್ಕರಿಸಿ ತರುಬಿದಂ |
ಧುರದಿ ಮಾದ್ರೇಶನರಿಸೇನೆಯೊಳು ಬೀದಿವರಿದತಿರಥ ಮಹಾರಥರನು ||
ಸರಳ ಮಳೆಗರೆದು ಮುಂದುರವಣಿಸಲಿತ್ತಲುಂ |
ಉರಿಗಣ್ಣನಂತೆ ರೋಷಿತನಾಗಿ ಫಲುಗುಣಂ |
ಗುರುಜ ಗೌತಮಿ ಸುಶರ್ಮಾದಿಗಳ ನೆರವಿಯಂ ಪೊಕ್ಕು ಕೋಲ್ಮಳೆಗರೆದನು || ೫೦ ||

ರಾಗ ಶಂಕರಾಭರಣ ಮಟ್ಟೆತಾಳ

ಎರಡು ಬಲ ವಿರೋಧದಿಂದ ಕದನಮಧ್ಯದಿ |
ತುರಗ ಗಜ ವರೂಥಗಳನು ಸವರಿ ತ್ವರಿತದಿ ||
ಉರಿಯನುಗುಳುತಾಗ ಪಾರ್ಥನಿದಿರು ರೋಷದಿ |
ಗುರು ಕುಮಾರನಂದು ಪೇಳ್ದನಧಿಕ ರೌದ್ರದಿ || ೫೧ ||

ಎಲೆ ಕಿರೀಟಿ ಸೂತಸುತನ ಗೆಲಿದೆನೆನುತಲಿ |
ನಲವಿನಿಂದ ಪಿತ್ತವೇರಿ ಕುಣಿವೆ ಮನದಲಿ ||
ಇಳೆಯು ಸಿಕ್ಕಿತೆಂದು ಹಿಗ್ಗಬೇಡ ಸುಮ್ಮನೆ |
ಹಳುವವನ್ನು ಹೊಗಿಸದಿರೆನು ನಿನ್ನ ಘಮ್ಮನೆ || ೫೨ ||

ಹಳುವದಲ್ಲಿ ಸೇರಿ ತಳಿರ ಗುಡಿಯೊಳಿರ್ಪುದು |
ಮುಳುಗಿ ನೀರ ಜಪ ತಪಂಗಳನ್ನೆ ಮಾಳ್ಪುದು ||
ಇಳೆಯ ಸುರರ ಧರ್ಮವೆನ್ನೊಳಾಡಲೇತಕೊ |
ಉಳಿಯಗೊಡೆನು ನಿನ್ನ ಮನದಿ ಗ್ರಹಿಸಿ ನೋಡಿಕೊ || ೫೩ ||

ತಿಳಿದು ಬಲ್ಲೆ ಹಿಂದೆ ನಾನು ದ್ಯೂತಮುಖದಲಿ |
ಇಳೆಯ ತೆತ್ತು ವನವ ಸಾರ್ದ ಪರಿಯನೆನ್ನಲಿ ||
ಗಳಹ ಬೇಡ ನಿನ್ನನೀಗಲೀ ರಣಾಗ್ರದಿ |
ಬಲಿಯ ಕೊಡುವೆ ಭೂತಗಣಕೆ ನೋಡು ಶೀಘ್ರದಿ || ೫೪ ||

ಎನುತಲಗಣಿತಾಸ್ತ್ರವೆಸೆಯೆ ಕಂಡು ಪಾರ್ಥನು |
ಕ್ಷಣದೊಳದರ ತರಿದು ಗುರುಜನೊಡನೆ ಪೇಳ್ದನು ||
ಬಣಗೆ ಬಗುಳಬೇಡ ಪಶುವಿಗಾಗಿ ಪೂರ್ವದಿ |
ಕೆಣಕಿ ನೊಂದುದನ್ನು ಮರೆತು ನುಡಿವೆ ಗರ್ವದಿ || ೫೫ ||

ಎನಲು ನೂರು ಬಾಣದಿಂದ ನರನನೆಚ್ಚನು |
ಕನಲಿ ಪ್ರತಿ ಶರೌಘದಿಂದ ಕಡಿದು ಪಾರ್ಥನು ||
ಧನುವನೊದರಿಸುತ್ತ ಮೂರು ಸರಳನೆಸೆದನು |
ಮನದಿ ನೊಂದು ಗುರುಕುಮಾರ ಕೆಲಕೆ ಸಾರ್ದನು || ೫೬ ||

ರಾಗ ಮಾರವಿ ಏಕತಾಳ

ಧರಣಿಪ ಕೇಳೀ | ತೆರದಿಂ ಪಾರ್ಥನು | ಗುರುಸುತನಂಗವ |
ಶರದಲಿ ಕೀಲಿಸಿ | ಕರಿ ರಥ ಪದಚರ | ತುರಗವ ನುಗ್ಗರಿ |
ದೊರೆಸುತ ರಣದಲಿ | ಪರಿಶೋಭಿಸಿದ | ನೇನನೆಂಬೆ  || ೫೭ ||

ಹತ್ತು ಕೃಪಗೆ ತೊಂ | ಭತ್ತು ಶಲ್ಯಗೆ ಮೂ | ವತ್ತು ಸುಶರ್ಮಗೈ |
ವತ್ತು ಶಕುನಿಗೆಂ | ಭತ್ತು ಮಹಾಸ್ತ್ರವ | ನಿತ್ತು ಬಿದ್ದಿಹ ದಳ |
ಪತ್ತಿ ಸಮೂಹವ | ತೊತ್ತ ಳದುಳಿದ | ನೇನನೆಂಬೆ  || ೫೮ ||

ಕೆರಳ್ದನು ಸೌಬಲ | ಹೊರಳ್ದನು ಕೃಪ ನೆಲ | ಕುರುಳ್ದನು ರಥದಿಂ |
ಪೊರಳ್ದ ಸುಶರ್ಮಕ | ನೊರಲ್ದವು ಗಜಘಟೆ | ನರಳ್ದುದು ಹಯಗಳು |
ಮರುಳ್ದುದು ರಥಬಲ | ವುರುಳ್ದುದು ರಣದಿ | ಏನನೆಂಬೆ || ೫೯ ||

ಚಟುಳ ಪರಾಕ್ರಮಿ | ಪಟುತರ ಕೋಪದೊ | ಳಟಿಕಟಿಸುತ ಧೂ |
ರ್ಜಟಿಯಂದದೊಳಾ | ರ್ಭಟಿಸುತ ಶಲ್ಯನು | ಕುಟಿಲತನದೊಳರಿ |
ಕಟಕದಿ ಯಮಜನ | ನಟಕಿಸುತೆಂದನೇನನೆಂಬೆ  || ೬೦ ||

ರಾಗ ಭೈರವಿ ಏಕತಾಳ

ಎಲೆ ಕಾಲಾತ್ಮಜ ಕೇಳು | ಈ | ನೆಲ ನಿನಗಾಹುದು ತಾಳು |
ತಳುವದೆ ಕೊಡಿಸುವೆನೆನುತಾ | ಕೋಲ್ | ಮಳೆಗರೆದನು ಗರ್ಜಿಸುತ || ೬೧ ||

ಅನುವರದಲಿ ಸೂತಜನ | ಹಯ | ವನು ನಡೆಸುತಲಿರ್ದವನ ||
ಘನ ಪೌರುಷವೇನೆಂದು | ಬಹ | ಕಣೆಗಳ ಕಡಿದಿಡಲಂದು || ೬೨ ||

ಚತುರಾನನ ಮಾಧವರು | ಸಾ | ರಥಿತನವನು ಗೆಯ್ದಿಹರು |
ಅತಿಶಯವೆನ್ನೊಳಗಲ್ಲ | ಛೀ | ಮತಿಹೀನನೆ ಬಿಡುಸೊಲ್ಲ || ೬೩ ||

ಕುಲಧರ್ಮಗಳನು ಮೀರಿ | ಕುರು | ಕುಲಜನ ಕೂಳಿಗೆ ಸೇರಿ ||
ಗಳಹುವ ಮೂಢನು ನೀನೋ | ಪೇ | ಳೆಲೊ ಮತ್ತಿದರೊಳಗಾನೋ || ೬೪ ||

ಎನಲತಿ ರೋಷದಿ ಶಲ್ಯ | ನಿ | ನ್ನನು ರಣದಲಿ ನಿರ್ಮಾಲ್ಯ |
ವನು ಮಾಡದೆ ಬಿಡೆನೆಂದು | ಎಸೆ | ದನು ಘನ ಶಕ್ತಿಯೊಳಂದು || ೬೫ ||

ಭಾಮಿನಿ

ಕ್ಷಿತಿಜ ಕೇಳ್ ವಾತಾಶನನು ಹರಿ |
ರಥನುರುಬೆಗೆದೆ ಬಿರಿವವೋಲ್ ದಳ |
ಪತಿಯ ಶಕ್ತಿಯ ಹತಿಗೆ ಧರ್ಮಜನೊರಗೆ ಮೂರ್ಛೆಯಲಿ ||
ಖತಿಯೊಳಾ ಕಲಿಭೀಮ ಮಾದ್ರಾ |
ಪತಿಯ ಸಮ್ಮುಖಕಾಗಿ ನಡೆತಂ |
ದತಿರಥನನಡಹಾಯ್ವುತೆಂದನು ಸಿಂಹನಾದದಲಿ || ೬೬ ||

ರಾಗ ಮಾರವಿ ಏಕತಾಳ

ಫಡ ಫಡ ಭಂಡ ನೃಪಾಧಮ ನಿಲು ಮುಂ | ದಡಿಯಿಡದಿರು ನಿನ್ನ ||
ಪಡೆಪತಿಯೆನ್ನುವ ಗರುವವ ನಿಲಿಸುವೆ | ಕೊಡು ಬವರವ ಮುನ್ನ || ೬೭ ||

ಎನುತಿಟ್ಟಣಿಸುತ ಭಾರಿ ಗದೆಯೊಳಂ | ದಣಕಿಸಿ ಶಲ್ಯನನು |
ಮಣಿರಥವನು ಪುಡಿಗೆಯ್ಯಲು ಪ್ರತಿರಥ | ವನು ಸಾರ್ದುಸಿರಿದನು || ೬೮ ||

ಭಳಿರೆ ಸಮೀರ ಕುಮಾರಕ ರಣ ಕೈ | ಚಳಕದಿ ಬಲ್ಲಿದನು ||
ಕೊಳುಗುಳದೊಳಗೆ ಸಮರ್ಥನೆನುತ ಕೋಲ್ | ಮಳೆಯನು ಸುರಿಸಿದನು || ೬೯ ||

ಆ ಸಮಯದಿ ಯಮಸುತನೆಚ್ಚರ್ತತಿ | ರೋಷದಿ ಹುಂಕರಿಸಿ ||
ಬಾ ಸಮ್ಮುಖಕೆನುತೆಚ್ಚನು ಶಲ್ಯನ | ದೂಷಿಸಿ ಭೀಕರಿಸಿ  || ೭೦ ||

ಎಚ್ಚ ಮಹಾಸ್ತ್ರವು ಮಾದ್ರಾಧಿಪನುರ | ಕುಚ್ಚಲು ರಣದೊಳಗೆ |
ಎಚ್ಚರಿಕೆಯ ತೊರೆದೊರಗಲು ಸೇನೆಯು | ಬೆಚ್ಚಿತು ಕ್ಷಣದೊಳಗೆ || ೭೧ ||