ರಾಗ ಮಾರವಿ ಏಕತಾಳ

ಕೇಳ್ ಗುಣಮಣಿ ಕ | ಟ್ಟಾಳ್ಗಳ ದೇವನು |
ಕಾಳ್ಗತ್ತಲೆಯೊಳು | ಬಿಲ್ಗೊಂಡಯ್ದಿ ಭ |
ಟಾಳ್ಗಳ ಕಡಿದು ಬಾ | ಗಿಲ್ಗಳ ಮುರಿಯುತ |
ಮೇಲ್ ಗರ್ಜಿಸುತೆಮ | ನಾಳ್ಗಳ ತೆರದಿ || ಬಂದನಾಗ || ೩೭೩ ||

ಅಸಮಪರಾಕ್ರಮಿ | ಮಿಸುನಿಯ ಜ್ಯೋತಿಯು |
ದೆಸೆದೆಸೆ ಬೆಳಗಲು | ಕುಶಲದಿ ಮಲಗಿಹ |
ರಸೆಪತಿ ದ್ರುಪದನಿ | ಗೆಸೆವ ಕುಮಾರನ |
ಮುಸುಕ ತೆಗೆದು ಮಿಗೆ | ಮುಸುಡಿನೊಳೊದೆದ || ಏನನೆಂಬೆ || ೩೭೪ ||

ಒದ್ದ ಭರಕೆ ಕಂ | ಡೆದ್ದತಿ ರೋಷದಿ
ನಿದ್ದೆಯಳಿಸಬಂ | ದಿದ್ದವರಾರೆನೆ |
ರುದ್ರನಂತೆ ನಿಂ | ತಿದ್ದನ ಕಾಣುತ |
ಯುದ್ಧಕೆ ನಿಲೆ ನೆಲ | ಕುದ್ದುತಲವನ || ಕೊಂದನಾಗ  || ೩೭೫ ||

ವಾರ್ಧಕ

ಕುಂಜರಪುರಾಧೀಶ ಕೇಳಿಂತು ಗುರುಸುತಂ |
ಭಂಜಿಸುತ ದ್ರುಪದಸುತನಂ ದ್ರೌಪದೇಯರಂ |
ಸೃಂಜಯಾದಿಗಳ ಶಿರಮಂ ಕಡಿದು ಕನಕರಥದೊಳಗಿರಿಸಿ ಕೊಂಡು ಬಳಿಕ ||
ಕುಂಜರನ ಪಡೆಗೆ ಪಂಚಾನನಂ ಪೊಕ್ಕಂತೆ |
ಪಂಜರದ ಗಿಳಿಯಂ ಬಿಡಾಲ ಮುರಿದೊಯ್ದಂತೆ |
ಕುಂಜರ ತುರಂಗ ಕಾಲಾಳ್ಗಳಂ ರಜನಿಯೊಳು ಮಡುಹಿದಂ ಗುರುತನುಜನು || ೩೭೬ ||

ಭಾಮಿನಿ

ಇಳೆಯರಸ ಕೇಳ್ ಧರ್ಮಪುತ್ರನ |
ಬಲದಿ ಸಾವಿರ ನೃಪರ ನಾರಿಯ |
ರುಳಿದುದಲ್ಲದೆ ಮಿಕ್ಕ ಮಾಗಧ ಸೂತ ವಂದಿಗಳ ||
ಸುಳಿವ ಕಾಣೆನು ಕೈದುವಿಡಿದರ |
ದಳದ ಮಧ್ಯದೊಳಾನೆ ಕುದುರೆಗ |
ಳೊಳಗೆ ಜೀವಗಳಿಲ್ಲವೇನೆಂಬೆನು ಮಹಾದ್ಭುತವ || ೩೭೭ ||

ರಾಗ ಕಾಂಭೋಜಿ ಝಂಪೆತಾಳ

ಪೊಡವಿಪತಿ ಕೇಳಿಂತು ಗುರುವಿನಾತ್ಮಜ ಭರದಿ | ಮಡುಹಿ ಪಾಂಡವರ ಕಟಕವನು ||
ತಡೆಯದಾ ಕೌರವೇಂದ್ರನ ಬಳಿಗೆ ಬಂದು ಮ | ತ್ತೊಡನೆಚ್ಚರಿಸುತಿರ್ದನವನು || ೩೭೮ ||

ಗಂಡುಗಲಿಯವಧಾನ ಚಿತ್ತವಿಸು ಕುರುಕುಲಪ್ರ | ಚಂಡ ನೀನೆನುತಲಾ ನೃಪನ ||
ಕಂಡು ಕಂಬನಿದುಂಬುತೆಚ್ಚರಿಸಿದನು ಧರಣಿ | ಮಂಡಲಾಧಿಪ ಸುಯೋಧನನ || ೩೭೯ ||

ಯಾರು ಮರಣಾಂತ್ಯಸಮಯದಿ ಬಂದು ಕರೆವರೆನೆ | ವೀರ ನಿಮ್ಮವರು ನಾವೆನುತ |
ನಾರಿ ದ್ರೌಪದಿ ಸುತರ ಶಿರವ ತೋರಿದನು ಕ | ಣ್ಣಾರೆ ನೋಡೆಂದು ಹರಹಿಸುತ || ೩೮೦ ||

ಕೊಂದೆನೈ ಪಾಂಡುಸುತರೈವರುಳಿದರು ಮಿಕ್ಕ | ದೊಂದನುಳಿಸದೆರಣದಿ ನಾನು ||
ಇಂದಿರೇಶನು ಧರ್ಮಜಾದಿಗಳಪಾಯ ಗತಿ | ಯಿಂದುಳುಹಿಕೊಂಡನೆನಲವನು || ೩೮೧ ||

ಅಳಿದರೇ ಪಾಂಡುಸುತರಾತ್ಮ ಸಂಭವರೆಲ್ಲ | ಉಳಿಯಲಿಲ್ಲವೆ ಎನುತಲಂದು ||
ಭಳಿಭಳಿರೆ ಭೀಷ್ಮ ಗುರು ಕರ್ಣ ಕೃಪರಿಂದ ಹೆ | ಚ್ಚಳವಿಗೊದಗಿದಿರಿ ನೀವಿಂದು || ೩೮೨ ||

ಎನುತ ಮಾತಾಡಿ ಕಣ್ಮುಚ್ಚಿ ಮರೆದೊರಗಲಾ | ಜನಪನಿರವನು ನೋಡುತಿವರು |
ಮನದಿ ಮರುಗುತಲಿ ಕೈದುವ ಬಿಸುಟು ಪೋದರಿ | ನ್ನೆನುವುದೇನಿತ್ತ ಪಾಂಡವರು || ೩೮೩ ||

ಕುರುನೃಪಾಲನ ಪಾಳೆಯವ ಪೊರಟು ಬರುತಿರಲು | ತರುಣಿ ದ್ರೌಪದಿಯು ಬಾಲಕರ ||
ಮರಣವನು ಕಂಡು ಕಲ್ಮರ ಕರಗುವಂತೆ ಮಿಗೆ | ಮರುಗಿದಳು ಹಂಬಲಿಸುತವರ || ೩೮೪ ||

ರಾಗ ನೀಲಾಂಬರಿ ಏಕತಾಳ

ಕಂದರಿಂಗೇನಾದುದು | ಈ ರಾತ್ರಿಯಲ್ಲಿ | ಬಂದ ಹಾವಳಿಯೇನಿದು ||
ಇಂದಿಲ್ಲ ಕಾಂತರ್ ಯಾರು | ಬಂದುದ ಕಾಣೆ | ಮುಂದಾರಿಗೆಂಬೆ ದೂರು || ೩೮೫ ||

ಪುಂಡರೀಕಾಕ್ಷ ಬಲ್ಲ | ಎನ್ನಣುಗರ | ಕೊಂಡೊಯ್ದ ಪರಿಯನೆಲ್ಲ ||
ಕಂಡವರೊಬ್ಬರಿಲ್ಲ | ಶ್ರೀಸಾಂಬಶಿವನೆ | ಕಂಡು ನೀ ಮರೆತೆಯಲ್ಲ || ೩೮೬ ||

ಎಂತಿನ್ನು ತಾಳಲಯ್ಯೊ | ಈ ದುಃಖದೊ | ಳೆಂತು ನಾ ಬಾಳಲಯ್ಯೊ ||
ಕಂತುಪಿತನೆ ರಕ್ಷಿಸೊ | ಈ ಶೋಕ ನಿಲಿಸಿ | ಸಂತೋಷಗಳ ಪಾಲಿಸೊ || ೩೮೭ ||

ರಾಗ ಆನಂದಭೈರವಿ ಏಕತಾಳ
ಇಂತೆಂದು ಪಾಂಚಾಲೆ ಬಹಳ | ಚಿಂತೆಯಿಂದ ಮನದಿ ಮರುಗಿ |
ನೊಂದಳು | ಕೃಷ್ಣ | ಎಂದಳು || ೩೮೮ ||

ಅರಸರಿಲ್ಲದ ವೇಳ್ಯದೊಳು | ಭರದೊಳಾರೀ ಸರಿ ರಾತ್ರೆಯೊಳು |
ಬಂದರೋ | ಸುತರ | ಕುಂದರೋ || ೩೮೯ ||

ಅರಿಯೆನವರ್ ಯಾರೆಂದು ಲಕ್ಷ್ಮೀ | ವರನೆ ಬಲ್ಲನೆನುತ ಹಾಹಾ |
ಎಂದಳು ಹಲುಬಿ | ನೊಂದಳು || ೩೯೦ ||

ವಾರ್ಧಕ

ಇಂತು ದ್ರೌಪದಿ ಪ್ರಲಾಪಿಸಿ ಮರುಗುತಿಹ ಸಮಯ |
ಕಂತಕಾಂತಕನ ಪ್ರಿಯಸಹಿತ ಸಂಭ್ರಮದಿಂದ |
ಕುಂತಿಸುತರಯ್ತರಲು ಕೇಳಿದಂ ಭೀಮ ನಿಜವಲ್ಲಭೆಯ ರೋದನವನು ||
ಸಂತವಿಸಿ ಬಳಿಕ ಧೈರ್ಯವನೊರೆದು ಗುರುಪುತ್ರ |
ನಂತಿಕಕ್ಕಡಹಾಯ್ದು ಮುಂದುವರಿದನಿತರೊಳ್ |
ಮಂತ್ರಶಕ್ತಿಯೊಳೊಂದು ತೃಣವನೆಸೆದಂ ದ್ರೌಣಿ ಪೇಳಲೇನಾ ಕ್ಷಣದೊಳು || ೩೯೧ ||

ಭಾಮಿನಿ

ಅತ್ರಿಸುತಕುಲತಿಲಕ ಕೇಳ್ ಗುರು |
ಪುತ್ರನೆಸೆದ ತೃಣಾಸ್ತ್ರದುರುಬೆಗೆ |
ಹೊತ್ತಿತೆನೆ ಮೂರ್ಲೋಕ ಭಯಗೊಳೆ ಸಕಲಜನನಿಕರ ||
ಕೃತ್ತಿವಾಸನ ಫಣಿಯ ಕಣ್ಗಿ |
ಚ್ಚೊತ್ತಿ ದಹಿಪಂದದಲಿ ಢಾವರಿ |
ಸುತ್ತಲುತ್ತರೆ ಗರ್ಭಮಂ ಪೊಗಲರಚಿ ಹಲುಬಿದಳು || ೩೯೨ ||

ರಾಗ ನೀಲಾಂಬರಿ ಏಕತಾಳ

ರಕ್ಷಿಸೈಯನಾಥಬಂಧು | ಕೃಷ್ಣ ಕೃಷ್ಣ | ಕಮ | ಲಾಕ್ಷಪರಮಪುರುಷ ಸಲಹೊ | ಕೃಷ್ಣ ಕೃಷ್ಣ ||
ಪಕ್ಷಿಗಮನ ಶ್ರೀಮುಕುಂದ | ಕೃಷ್ಣ ಕೃಷ್ಣ | ಕರುಣಾ | ಧ್ಯಕ್ಷ ನುದರಜ್ವಾಲೆ ತಣಿಸೊ | ಕೃಷ್ಣ ಕೃಷ್ಣ || ೩೯೩ ||

ಸೃಷ್ಟಿಗೊಡೆಯನಯ್ಯ ಪಾಹಿ | ಕೃಷ್ಣ ಕೃಷ್ಣ | ಪಾಲಿ | ಸಷ್ಟಭೂತಿಗೊಡೆಯ ಜವದಿ | ಕೃಷ್ಣ ಕೃಷ್ಣ
ಹೊಟ್ಟೆಯಳಲ ತಡೆಯಲಾರೆ | ಕೃಷ್ಣ ಕೃಷ್ಣ | ಬಹಳ | ಕಷ್ಟವಾಯಿತಲ್ಲೊ ಸ್ವಾಮಿ | ಕೃಷ್ಣ ಕೃಷ್ಣ || ೩೯೪ ||

ತಾಳಲಾರೆನಯ್ಯೊ ಹರಿಯೆ | ಕೃಷ್ಣ ಕೃಷ್ಣ | ಉದರ | ಜ್ವಾಲೆಗೊಂದೌಷಧಿಯ ಪೇಳು | ಕೃಷ್ಣ ಕೃಷ್ಣ ||
ಪೇಳಲಾನಿನ್ನಾರಿಗಯ್ಯೋ | ಕೃಷ್ಣ ಕೃಷ್ಣ | ಎನ್ನ | ಮೇಲೆ ದಯವ ತೋರಿ ಸಲಹೊ | ಕೃಷ್ಣ ಕೃಷ್ಣ  || ೩೯೫ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಇಂತು ಮಾನಿನಿ ಹಲುಬುತಿರೆ ಶ್ರೀ | ಕಾಂತನಾ ಕ್ಷಣ ಸೂಕ್ಷ್ಮರೂಪವ |
ನಾಂತು ತಾನತಿ ಕರುಣದಿಂದಲಿ | ಕಾಂತೆಯುದರವ ಪೊಕ್ಕನು | ತವಕದಿಂದ || ೩೯೬ ||

ವರ ಸುದರ್ಶನದಿಂದ ಜಠರದಿ | ಕೊರೆವ ತೃಣಸಾಯಕವ ತರಿತರಿ |
ದಿರದೆ ಬಳಿಕಾ ತರಳೆಯಂಗಕೆ | ಪರಮಸೌಖ್ಯವನಿತ್ತನು | ಹರಿಯು ತಾನು || ೩೯೭ ||

ಆ ಸಮಯದಲಿ ದ್ರೋಣಪುತ್ರನ | ನಾ ಸಮೀರಕುಮಾರ ಪಿಡಿತಂ |
ದೋಸರಿಸದಸಿಯಿಂದ ಶಿರವನು | ಬಾಸಣಿಸಲನುಗೆಯ್ದನು | ಖಾತಿಯಿಂದ || ೩೯೮ ||

ವಾರ್ಧಕ

ಏಣಾಂಕಕುಲತಿಲಕ ಕೇಳಿಂತಮರಭವನ |
ಬಾಣಸಿನ ಮಿತ್ರಾತ್ಮಭವನಧಿಕ ರೋಷದಿಂ |
ದ್ರೋಣಪುತ್ರನ ಕಂಠಮಂ ಕತ್ತರಿಪೆನೆಂದು  ನಿಂತುಕೊಂಡಿರ‍್ಪಾಗಲು ||
ಏಣಾಂಕವದನೆ ದ್ರೌಪದಿ ಕಂಡು ಭೂಸುರನ |
ಸೂನುವಂ ಕೊಂದಡಪಕೀರ್ತಿ  ಬಹುದೆಂದು ಪವ |
ಮಾನಿಯಂ ಸಂತಯಿಸಲಿತ್ತ ಧೃತರಾಷ್ಟ್ರನಿಗೆ ಸಂಜಯಂ ತಿಳಿದೆಂದನು || ೩೯೯ ||

ಭಾಮಿನಿ

ಒಂದ ಕದ್ದೊಯ್ದೆರಡನೆಯ ಘನ |
ಮಂದಿರದೊಳಿರಿಸಿದನ ಕೊಂದನ |
ಕಂದನಿಗೆ ಮೊಮ್ಮಗನ ಸುತನಾ ಮೂರರಧಿಪತಿಗೆ ||
ಚಂದದಿಂದುದಿಸಿದನ ಕುವರನ |
ತಂದೆಯರಸಿಗೆ ನಾಲ್ಕರಿಂದೊಗೆ |
ದಿಂದು ಐದರಲಯ್ದವನೆ ಕೊಂದನು ತವಾತ್ಮಜನ || ೪೦೦ ||

ಧಾರಿಣೀಪಾಲಕನೆ ಲಾಲಿಸು | ತೀರಿತಿಲ್ಲಿಗೆ ರಣವಿದರ ವಿ |
ಸ್ತಾರದಿಂದುಸಿರಿದೆ ಪರಾಶರಮಗನ ಕರುಣದಲಿ ||
ಮಾರಮರ್ದನನಂತೆ ರೋಷದಿ | ಭಾರತಾಹವದೊಳಗೆ ನಿನ್ನಯ |
ನೂರು ಮಕ್ಕಳ ಕೊಂದನೋರ್ವನೆ ಪವನಸುತನೆಂದ || ೪೦೧ ||

ವಾರ್ಧಕ

ಎಂದ ನುಡಿಗರಸ ದುಃಖಿಸಲು ವ್ಯಾಸಂ ಬರ |
ಲ್ಕಂದು ನಮಿಸುತ ಪುತ್ರ ಶೋಕದಿಂ ಮೆಯ್ ಮರೆಯೆ |
ಲಂಧನೃಪತಿಯನೆತ್ತಿ ನಯ ನೀತಿ ಧರ್ಮಗಳನೊಲಿದು ಮುನಿನಾಥನುಸಿರಿ ||
ಕುಂದದತಿ ಧೈರ್ಯಮಂ ಪೇಳ್ದು ಮತ್ತೊಡನೆ ಸತಿ |
ವೃಂದಮಂ ಸಂತಯಿಸಿ ಪಾಂಡುಪುತ್ರರ ಮನ್ನಿ |
ಸೆಂದೊಡಂಬಡಿಸಿ ಸರ್ವರ ಕೂಡಿ ರಣಭೂಮಿಗರಸನನು ಕರೆತಂದನು || ೪೦೨ ||

ರಣದೊಳಗೆ ಮಡಿದಿರ್ದ ಹೆಣಗಳಟ್ಟೆಯ ಕಂಡು |
ವನಿತೆಯರು ಘೋಳೆಂದು ಬಾಯ್ಬಿಟ್ಟು ಮರುಗುತಿರ |
ಲನಿತರೊಳಗಾಚೆಯೊಳು ಕುಂತಿ ದ್ರೌಪದಿ ಸುಭದ್ರೆಯರತ್ತಲೊಂದೆಸೆಯೊಳು ||
ವನಜಾಕ್ಷ ಪಾಂಡುಸುತರೊಂದೆಸೆಯೊಳಿರುತಿರಲು |
ತನತನಗೆ ಸರ್ವರುಂ ಮರುಗಲು ಚತುರ್ವಿಧದೊ |
ಳೆನುವದೇನ್ ಬಾದರಾಯಣನಾಗ ಶೋಕಮಂ ನಿಲಿಸಿ ಸಂಧಿಯ ಗೆಯ್ದನು || ೪೦೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳಾ ಸಮಯದಲಿ ಮುರ | ಹರನು ಧರ್ಮಜಗೆಂದನೆಲ್ಲರು  |
ವೆರಸಿ ವಂದಿಸಿರೈ ಗತಾಕ್ಷನ | ಚರಣಕೆನಲು || ೪೦೪ ||

ಎಂದ ಮಾತಿಗೆ ಪಾಂಡುಪುತ್ರರು | ವಂದಿಸಲು ಪಿಡಿದೆತ್ತಿ ಬಾ ಬಾ |
ಕಂದ ಬಾರೈ ಭೀಮನೀ ಬಾ |  ರೆಂದು ಕರೆಯೆ || ೪೦೫ ||

ಅನಕ ಲೋಹದ ಕೃತಕರೂಪವ | ಜನಪನಿದಿರೊಳು ನಿಲಿಸಿ ಮಾರುತಿ |
ಯೆನಲು ಪಿಡಿದೆತ್ತಿದನು ಮನದೊಳು | ಕಿನಿಸಿನಿಂದ || ೪೦೬ ||

ವಾಯುಸುತನೆಂದೌಕಲುಕ್ಕಿನ | ಕಾಯವದು ಪುಡಿ ಚೂರ್ಣವಾಗಲಿ |
ಕಾಯತಾಕ್ಷನು ಬಳಿಕ ಪೇಳ್ದನು | ವಾಯುಸುತಗೆ || ೪೦೭ ||

ರಾಗ ಭೈರವಿ ಝಂಪೆತಾಳ

ಮರುತಸುತ ನೋಡಿದೆಯ | ಹಿರಿ ತಂದೆಯವರ ಮನ |
ದಿರವ ಭಯವಿಲ್ಲಿನ್ನು | ಚರಣಕೆರಗೆನಲು || ೪೦೮ ||

ಮನದಿ ಭಯವನು ತಾಳು | ತನುನಯದಿ ಮಾರುತಿಯು |
ಮಣಿಯಲೆತ್ತುತಲೆಂದ | ವಿನಯಪರನಾಗಿ || ೪೦೯ ||

ತರಳರೈವರು ನಿಮ್ಮೊ | ಳೆರಡಿಲ್ಲವಿನ್ನೆನಗೆ |
ಮರೆಯ ಮಾತಲ್ಲೆಂದ | ನರಸನವರೊಡನೆ || ೪೧೦ ||

ಬಳಿಕ ಗಾಂಧಾರಿ ಮನ | ದಳಲನುರೆ ಸಂತಯಿಸಿ |
ತಿಳುಹಿದರು ಮಿಕ್ಕಾದ | ಲಲನೆಯರಿಗೆಲ್ಲ || ೪೧೧ ||

ಒಲಿದು ಯಮಜಾತ ಕುರು | ತಿಲಕ ಮುಂತಾದರ್ಗೆ |
ಬಳಿಕ ಸಂಸ್ಕಾರಾದಿ | ಗಳನು ಮಾಡಿಸಿದ || ೪೧೨ ||

ಮುರಮಥನ ಸಕಲರನು | ವೆರಸಿ ಸಂತೋಷದೊಳ |
ಗರಮನೆಗೆ ಕರೆತರಲು | ಪರಮವೈಭವದಿ || ೪೧೩ ||

ವ್ಯಾಸ ನಾರದ ಕೃಷ್ಣ | ರಾ ಸಕಲ ಜನರು ಭೂ |
ಮೀಶನನು ಪಟ್ಟಸಿಂ | ಹಾಸನದ ಮೇಲೆ || ೪೧೪ ||

ಭೂಸುರಾಶೀರ್ವಾದ | ಘೋಷದಿಂದಲಿ ತರಣಿ |
ವಾಸರದಿ ಸರ್ವರು ವಿ | ಲಾಸದಿಂದಾಗ  || ೪೧೫ ||

ತರಿಸಿ ಮಂಗಲವಸ್ತು | ಪರಿಕರದ ದ್ರವ್ಯದಿಂ |
ದುರೆ ಶುಭ ಮುಹೂರ್ತದೊಳು | ವರ ಧರ್ಮಸುತನ || ೪೧೬ ||

ಕರೆತಂದು ಕುಳ್ಳಿರಿಸಿ | ವರ ಗಾರ್ಗ್ಯ ಜೋಯಿಸರು |
ಸುರುಚಿರದ ನವರತ್ನ | ಭರಿತ ಕುಂಭವನು || ೪೧೭ ||

ಕರದಿ ಪಿಡಿದೆಲ್ಲವರು | ವೆರಸುತಭಿಷೇಕವನು |
ವಿರಚಿಸಿದರುತ್ಸಹದಿ | ನೆರೆದ ಸಭೆ ಮುದದಿ || ೪೧೮ ||

ದ್ವಿಪದಿ

ಇಂತು ವೈಭವದಿ ಪಟ್ಟಾಭಿಷೆಕವನು |
ಸಂತಸದಿ ರಚಿಸಿ ಯುವರಾಜ ಪಟ್ಟವನು || ೪೧೯ ||

ಕೌಂತೇಯ ಭೀಮಸೇನಂಗಿತ್ತು ಮುದದಿ |
ಕಂತುಪಿತ ಮೈದುನಗೆ ಪರಮವೈಭವದಿ || ೪೨೦ ||

ಸೇನಾಧಿಪತ್ಯವಿತ್ತರು ಮಾದ್ರಿಜರಿಗೆ |
ಸಾನಂದದಿಂದ ಹಿರಿಯರ ಸೇವೆಯೊಳಗೆ || ೪೨೧ ||

ಸಾನುರಾಗದೊಳಾ ಯುಯುತ್ಸುವೆಂಬವಗೆ |
ಮಾಣದಾ ಸರ್ವಾಧಿಕಾರವಾಯ್ತವಗೆ || ೪೨೨ ||

ಮುನಿಜನರನಖಿಳ ದೇಶಾವಳಿಯ ಜನರ |
ಕನಕ ಗೋ ಭೂಮಿ ದಾನದಲಿ ಭೂಸುರರ || ೪೨೩ ||

ವಿನಯದಿಂದುಪಚರಿಸಿ ಪೌರ ಪರಿಜನವ |
ಜನಪ ಧರ್ಮಜ ಪಾಲಿಸಿದನು ಭೂತಳವ || ೪೨೪ ||

ಭಾಮಿನಿ

ಧರಣಿಪತಿ ಕೇಳಿಂತು ಧರ್ಮಜ |
ಭರತ ನಳನೃಪ ನಹುಷರಿಂದಲಿ |
ಯೆರಡು ಪರಿ ಮಿಗಿಲೆನಿಸಿ ಮೆರೆದನು ಸಕಲ ವೈಭವದಿ ||
ಪರಿಪರಿಯ ಶೋಭನವ ಪಾಡುತ |
ಹರಿಗೆ ಪಾಂಡುಕುಮಾರಕರಿಗತಿ |
ಹರುಷದಲಿ ನಾರಿಯರು ರತುನಾರತಿಯ ಬೆಳಗಿದರು  || ೪೨೫ ||

ರಾಗ ಢವಳಾರ ಅಷ್ಟತಾಳ

ವಸುಧೆಯನಳೆದಿಹ ವಾಮನಗೆ | ಬಿಸಜೋದ್ಭವಪಿತ ಕೇಶವಗೆ |
ಪಶುಪತಿ ಸಖನಿಗೆ ಪಾರ್ಥಸಾರಥಿಗೆ |
ಕುಸುಮಗಂಧಿನಿಯರು ಪಾಡುತ ಪೊಗಳುತ ||
ಕುಶಲದಾರತಿಯ ಬೆಳಗಿರೆ | ಶೋಭಾನೆ || ೪೨೬ ||

ಧರಣಿಪಾಲಕನಿಗೆ ಮಾರುತಿಗೆ | ಹರನೊಡನಸ್ತ್ರವ ಪಡೆದವಗೆ |
ತರುಣಿ ಮಣಿ ಶಶಿಮುಖಿ ದ್ರೌಪದಿಗೆ |
ತರುಣಿಯರೆಲ್ಲರು ಪಾಡುತ ಪೊಗಳುತ |
ಸುರುಚಿರದಾರತಿಯ ಬೆಳಗಿರೆ | ಶೋಭಾನೆ || ೪೨೭ ||

ನಾರಿಯರೆಲ್ಲರು ತಾವ್ ನೆರೆದು | ಚಾರು ಭೂಷಣವಿಟ್ಟುರೆ ಮೆರೆದು |
ವೀರಾಧಿವೀರರಿಗರಸ ನೀನಾಗೆಂದು |
ವಾರಿಜಮುಖಿಯರಕ್ಷತೆಗಳನಿಡಿಸುತ |
ಸಾರಸದಾರತಿಯ ಬೆಳಗಿರೆ | ಶೋಭಾನೆ || ೪೨೮ ||

ವಾರ್ಧಕ

ಹರಿಣಾಂಕಕುಲಜಾತ ಲಾಲಿಸೀ ತೆರದಿಂದ |
ಕುರುಸೇನೆಯಂ ಸವರಿ ಧರಣಿಪತಿ ಧರ್ಮಜಂ |
ಧರೆಯನೇಕಚ್ಚತ್ರದಿಂದ ಪಾಲಿಸುತಿರ್ದ ಪೂರ್ವನೃಪರಿಂದ ಮಿಗಿಸಿ ||
ಸುರಪಾಲನೊಪ್ಪುವೊಡ್ಡೋಲಗಕೆ ಮಿಗಿಲಾಗಿ |
ಮೆರೆದರಚ್ಯುತನ ದಯದಿಂದ ಕೌಂತೇಯರೆಂ |
ದೊರೆದ ವೈಶಂಪಾಯ ಜನಮೇಜಯಗೆ ಪರಮ ಭಾರತಕಥಾಮೃತವನು || ೪೨೯ ||

ಪರಮ ಭಕ್ತಿಯೊಳೋದಿ ಕೇಳ್ವ ಪುಣ್ಯಾತ್ಮರಿಗೆ |
ದುರಿತಗಳ ಪರಿಹರಿಸಿ ಸುಜ್ಞಾನಗಳನಿತ್ತು |
ಕರುಣದಿಂ ವಿಠಲಪುರ ಶ್ರೀ ಪಂಚಲಿಂಗೇಶ ನಿರತ ರಕ್ಷಿಪನವರನು ||
ಒರೆದೆನೀ ಸತ್ಕಥೆಯ ಯಕ್ಷಗಾನಕ್ರಮದಿ |
ವರ ಶಾರದಾಂಬೆಯ ಕಟಾಕ್ಷದಿಂದೀ ಧರೆಯ |
ಪರಮ ಸತ್ಕವಿಗಳಿದ ನೋಡಿ ಜರೆಯದೆ ಮೆರೆಸಬೇಕು ಬಲ್ಲರು ಪ್ರೌಢರು || ೪೩೦ ||

ಭಾಮಿನಿ

ವೇದ ಶಾಸ್ತ್ರ ಪುರಾಣ ತತ್ತ್ವದ |
ಹಾದಿ ನೋಡಿದುದಿಲ್ಲ ಕಾವ್ಯವ |
ನೋಡಿ ಕೇಳ್ದವನಲ್ಲ ಕವಿತಾಕೃತಿಗೆ ಗುರುವಾದ ||
ಆದಿಮಾಯಾಶಕ್ತಿಯೊಲುಮೆಯೊ |
ಳಾಧರಿಸಿ ಶ್ರೀಪಂಚಲಿಂಗನ |
ಪಾದಕಮಲವನೊಲಿದು ಪೇಳಿದೆನೀ ಪ್ರಬಂಧವನು || ೪೩೧ ||

ರಾಗ ಢವಳಾರ ಆದಿತಾಳ

ಮಂಗಲ ಮಂಗಲ ಈಶ್ವರಗೆ | ಜಯ |
ಮಂಗಲ ಪಾರ್ವತಿರಮಣನಿಗೆ || ಮಂಗಲಂ  || ಪ ||

ಪಂಚಾನನನಿಗೆ ಶಶಿಧರಗೆ | ಪಂಚಶರನ ತನು ಶಿಕ್ಷನಿಗೆ |
ಪಂಚಾಕ್ಷರದೊಲು ನಲಿವ ಮಹಾತ್ಮಗೆ | ಪಂಚಾಸ್ಯನ ಶಿರ ನಾಶನಿಗೆ || ಮಂಗಲಂ || ೪೩೨ ||

ಭುಜಗಭೂಷಣನಿಗೆ ತ್ರಿಣಯನಿಗೆ | ಅಜಸುರವಂದಿತಚರಣನಿಗೆ |
ವಿಜಯಗೆ ಪಾಶುಪತವನಿತ್ತ ಮಹಿಮಗೆ | ಸುಜನರಕ್ಷಾಮಣಿ ಮೂರುತಿಗೆ || ಮಂಗಲಂ || ೪೩೩ ||

ದುರಿತಕುಲಾರಿಗೆ ಪುರಹರಗೆ | ಸರಸಿಜನಾಭನ ಮಿತ್ರನಿಗೆ |
ಧರೆಯೊಳಗುತ್ತಮ ಶೃಂಗ ಪುರೀಶಗೆ | ಪರಮಮೂರುತಿ ಮಲ್ಲಿಕಾರ್ಜುನಗೆ |
ಮಂಗಲಂ | ಜಯ | ಮಂಗಲಂ | ಶುಭ | ಮಂಗಲಂ || ೪೩೪ ||

ರಾಗ ಢವಳಾರ ಏಕತಾಳ

ಇಂದು ಶೇಖರನಿಗೆ ಈಶ್ವರಗೆ | ಇಂದಿರೆಯರಸನ ಮಿತ್ರನಿಗೆ |
ಇಂದ್ರಾದಿ ವಂದ್ಯಗೆ ಪುರಹರಗೆ | ಇಂದುವಿಭವಸು ಇನಸಂಕಾಶನಿಗೆ || ೪೩೫ ||

ಅಂಬುಜಭವನುತ ಪರಶಿವಗೆ | ಅಂಬುಜನೇತ್ರೆಗೆ ಅಂಬಿಕೆಗೆ |
ಅಂಬರಮಣಿಬಿಂಬನ ಸಂಕಾಶಗೆ | ಅಂಬುಧರನ ಸತಿ ಶಂಕರಿಗೆ || ೪೩೬ ||

ಇಂದುಕಲಾಪೆಗೆ ಈಶ್ವರಿಗೆ | ಸುಂದರ ರೂಪೆಗೆ ಸುರನುತೆಗೆ |
ವಂದಿತ ಸನಕಸನಂದನಾರಾಧ್ಯೆಗೆ | ವಂದೇ ತ್ರೈಪುರ ಸುಂದರಿಗೆ || ೪೩೭ ||

ಯಕ್ಷಗಾನ ಗದಾಪರ್ವ ಮುಗಿದುದು

�-sP���family: Calibri;mso-ascii-theme-font:minor-latin;mso-hansi-font-family:Calibri; mso-hansi-theme-font:minor-latin’>ಕಲಿಕರ್ಣಂ ತವಕದೊಳಯ್ತಂದತಿ ಭರದಿಂ ||
ಫಲುಗುಣನಗ್ರಜನೊಳು ಮಾ |
ರ್ಮಲೆತುರೆ ಸಂಗ್ರಾಮದೊಳೆಚ್ಚಾಡಿದನಾಗಂ || ೧೧೪ ||

 

ರಾಗ ಘಂಟಾರವ ಅಷ್ಟತಾಳ

ಎಲವೊ ಭೀಮನೆ ಗೆಲಿದೆಮ್ಮ ಸೈನ್ಯವ |
ನಿಳೆಯಪಾಲನ ಮೇಲೆ ಮಲೆತಿಹ | ಬಲುಹ ನಿಲಿಪೆನು ತೋರೆಲಾ || ೧೧೫ ||

ಸೂತನಂದನ ಬಗುಳದಿರೆಲೊ ನಿನ್ನ |
ನೀ ತತೂಕ್ಷಣ ಗೆಲಿದು ಕುಹಕಿಯ | ಘಾತಿಸುವೆನೆಂದೆಚ್ಚನು || ೧೧೬ ||

ಎಚ್ಚ ಬಾಣವ ತರಿದೆಸೆಯಲಿಕದ |
ನುಚ್ಚುಗೆಯ್ಯುತ ಹೆಣಗಲಭ್ರದೊ | ಳಚ್ಚರಿಸೆ ಸುರರೆಲ್ಲರು || ೧೧೭ ||

ರಾಗ ದೇಶಿ ಅಷ್ಟತಾಳ

ಕಾದಿದರ್ ಮತಿಯುತ ಭೀಮರವಿಜರು |
ಮೇದಿನಿಯ ಸುಭಟಾಳಿತಾವ್ ಬೆರ | ಗಾದರೀ ಪರಿ ಸಮರದಿ  || ೧೧೮ ||

ಎಚ್ಚ ಬಾಣವ ಗುಡಿಕಟ್ಟಿದನು ಕರ್ಣ |
ಕಿಚ್ಚಿನಂತುರಿಮಸಗುತದರನು | ನುಚ್ಚುಗೆಯ್ದನು ಮರುತಜ   || ೧೧೯ ||

ಹೆಚ್ಚಿ ರೋಷದಿ ಬಳಿಕ ರಾಧೇಯನು |
ಚುಚ್ಚುವಂದದಿ ಸರಳನೆಸೆಯಲು | ಮೆಚ್ಚಿ ಖಂಡಿಸಲಾತನು  || ೧೨೦ ||

ಮತ್ತೆ ಬೊಬ್ಬಿರಿದಾರ್ದು ಶರಂಗಳ |
ಮೊತ್ತ ಸುರಿಯಲು ಕೂಡೆ ಭೀಮನ | ಮುತ್ತಿದನು ಸರ್ವಾಂಗದಿ || ೧೨೧ ||

ತತ್ತ ಮಾರ್ಗಣವೆಲ್ಲ ಸಂಹರಿಸಿ ಮ |
ರುತ್ತಜನು ಕಲಿಯಾಗಿ ರಿಪುಭಟ | ನುತ್ತಮಾಂಗದೊಳೆರಗಿದ  || ೧೨೨ ||

ವಾರ್ಧಕ

ತುಂಗಭುಜಬಲ ವೃಕೋದರನಯ್ದೆ ಜಡಿದು ರಿಪು |
ಪುಂಗವನ ಸುವರೂಥದಿಂದೆಳೆದು ಕೊರಳೌಕು |
ತಂಗಮಂ ಜಜ್ಝರಿತಮಂ ಗೆಯ್ದು ಕೆಡಹಲ್ಕೆ ಮಾದ್ರಾವನೀಶನಂದು ||
ಹಂಗಿಗಂ ತಾನಾಗಿ ಪೇಳ್ದನೆಲೆ ಭೀಮ ನೀ |
ಸಂಗರದಿ ಕಲಿಯಲೈ ಸಾಕು ಬಿಡು ಕರ್ಣನಂ |
ಭಂಗಿಸಿದೆ ಮೇಣೇತರವಮಾನಗಳು ಬೇಕು ಶೌರ್ಯವಂತರಿಗೆಂದನು || ೧೨೩ ||