ರಾಗ ಭೈರವಿ ಝಂಪೆತಾಳ
ಇಂದುಹಾಸನ ದೂತರುಪವಾಸವಿರಬಾರ |
ದೆಂದು ಬಾಣಸಿಯವರ ಕರೆಸಿ ||
ಚಂದದಿಂ ಷಡ್ರಸದ ಭೋಜ್ಯಗಳನಣಿಮಾಡಿ |
ಸೆಂದನೂಟಕೆ ಏಳಿರೆನುತ  ||೨೫೬||

ಕರೆಯೆ ಬಹು ಪಾಪ ಏಕಾದಶಿಯೊಳ್ ಭೋಜನಕೆ |
ಕರುಣಿಪುದು ಈ ದಿನದೊಳೆಮ್ಮ ||
ಹರಿಯ ಪಾದೋದಕವು ಹೊರತು ಬೇರಿಲ್ಲೆಮಗೆ |
ಬರಿದೆ ಪೀಡಿಸಬೇಡವೆನಲು            ||೨೫೭||

ಎಂದಿನಂತಿಲ್ಲದೆ ಕುಳಿಂದ ಗರ್ವಿತನಾದ |
ನಿಂದ ಸೊಕ್ಕಿದ ಭೃತ್ಯರಿವರು ||
ತಂದು ಕಾರಾಗಾರದೊಳ್ ನಿಗಳಮಂ ಪೂಡಿ |
ಬಂಧಿಸುವೆನೆನುತಿರಲ್ಕಿವರು           ||೨೫೮||

ಕಷ್ಟವೇತಕೆ ಜೀಯ ಹರಿವಾಸರವ್ರತವು |
ಭ್ರಷ್ಟರಾದಪೆವೆಂಬ ಭಯಕೆ ||
ಮೃಷ್ಟಾನ್ನವೊಲ್ಲೆವೆಂದಿರ್ದೆವಲ್ಲದೆ ಬೇರೆ |
ಅಟ್ಟಹಾಸಗಳಿಲ್ಲವೆಮಗೆ     ||೨೫೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಒಳ್ಳಿತಾದುದೆನುತ್ತ ಸಚಿವನು | ಖುಲ್ಲರಿವರೊಳಗೇಕೆ ಕ್ರೋಧವು |
ಸಲ್ಲದೆನಗೆನುತವರನಾ ದಿನ | ಉಳುಹಿಕೊಂಡು          ||೨೬೦||

ಇಷ್ಟಭೋಜ್ಯವ ಗೈಸಿ ಮರುದಿನ | ದುಷ್ಟಬುದ್ಧಿಯು ಚರರಿಗುಣಿಸುತ |
ಹೃಷ್ಟಮಾನಸರಾಗಿ ಕಳುಹಿದ | ಪಿಂದಕವರ   ||೨೬೧||

ತರಳ ಮದನನ ಕರೆದು ಪೇಳಿದ | ತೆರಳುವೆನು ನಾನೀಗ ಚಂದನ |
ಪುರಕೆ ನಾ ಬರುವರೆಗೆ ರಾಜ್ಯವ | ವಹಿಸು ನೀನು        ||೨೬೨||

ಎಂದು ನೇಮವನಿತ್ತು ಸಚಿವನು | ಅಂದು ಪೊರಮಡಲಾಗ ಕಾಣುತ |
ನಂದನೆಯು ವಿಷಯೆ ಬಂದು ಪಿತನಿಗೆ | ನಮಿಸಲಾಗ  ||೨೬೩||

ರಾಗ ತುಜಾವಂತು ಝಂಪೆತಾಳ
ಬಾರೆ ಸುಕುಮಾರಿ ಗುಣಶೀಲೆ ವೈಯಾರೆ |
ನೀರಜಾಂಬಕಿ ಬಂದುದೇಕೆ ಶೃಂಗಾರೆ ||
ನಾರಿಯರ ಜೊತೆಯಗಲುವವಳಲ್ಲ ನೀರೆ |
ಕೀರವಾಣಿಯೆ ಮೌನವೇನು ನೀನುಸಿರೆ         ||೨೬೪||

ಅರಿಕೆ ಮಾಡುವೆ ತಾತ ನಡು ಮಧ್ಯಾಹ್ನದೊಳು |
ವಿರಚಿಸಲು ಭೋಜನವ ಹಿತವಹುದು ಕೇಳು ||
ತೊರೆದು ಸಾಯಾಹ್ನದೊಳು ಭುಜಿಸೆ ದೇಹದೊಳು |
ಪರಿತೋಷವಹುದುಂಟೆ ನೋಡು ಕರುಣದೊಳು         ||೨೬೫||

ತರಳೆ ನಿನ್ನಯ ಮನವನರಿತೆ ಲಗ್ನವನು |
ವಿರಚಿಸದೆ ಸರಿಯಾದ ಕಾಲದೊಳು ನಾನು ||
ಮರೆತೆನೆಂಬುದಕಾಗಿ ಒರೆಯುವೆ ನೀನು |
ಸರಿಯಾದ ವರನನ್ನು ಹುಡುಕಿ ತಹೆನಿನ್ನು      ||೨೬೬||

ಭಾಮಿನಿ
ತರಳೆಯನು ತಕ್ಕೈಸಿ ಸಚಿವನು |
ತೆರಳುವೆನು ನಾನೀಗ ಚಂದನ |
ಪುರಕೆ ತ್ವರೆಯಲಿ ಬರುವೆ ಸೈರಿಸು ಸೈರಿಸಾವರೆಗೆ ||
ಮೆರೆವ ನಿನ್ನಯ ರೂಪಿಗಿಮ್ಮಡಿ |
ಪರಮ ಸುಂದರ ವರನ ತರುವೆನು |
ತೆರಳು ಒಳಗೆನ್ನುತ್ತ ಮದನನ ಕರೆಯುತಿಂತೆಂದ        ||೨೬೭||

ರಾಗ ಸುರುಟಿ ಏಕತಾಳ
ತರಳನೆ ಕೇಳೀಗ | ಚಂದನ | ಪುರಕೈದುವೆ ಬೇಗ ||
ತ್ವರಿತದಿ ನಿನಗೇನಾಜ್ಞೆಯ ಬರೆವೆನೊ | ವಿರಚಿಸು ತಡಬಡ ಮಾಡದೆ ಮುದದಿಂ    ||೨೬೮||

ಎನುತಲೆ ಸಚಿವರನು | ತೇಜಿಯ | ಘನತೆಯೊಳೇರಿದನು ||
ದಿನಮಧ್ಯಾಹ್ನದ ಪಯಣದಿ ಕಂಡನು | ಮನವನು ತೋಷಿಪ ಚಂದನಾವತಿಯನು  ||೨೬೯||

ಸಾಲು ಸಾಲಿನೊಳೆಸೆವ | ರತ್ನದ | ನೀಲಮಾಣಿಕ ಗೃಹವ ||
ಏಳು ಸುತ್ತಿನ ಕೋಟೆ ಹೊಸತಾಗಿ ರಚಿಸಿದ | ಕಾಲುವೆ ಕೊಳ ಕಾಸಾರವ ಕಾಣುತ ||೨೭೦||

ದುರುಳ ಕುಳಿಂದಕನು | ಸೊಕ್ಕಿದ | ತರಳನ ತಂದಿವನು ||
ಕೊರಳನರಿದು ನಾ ಸೆಳೆಕೊಂಬುವೆನೀ | ಪುರವನೆನುತಲಾ ಸಚಿವನು ಬರುತಿರೆ    ||೨೭೧||

ಶಶಿಹಾಸನು ಮುದದಿ | ಸಭೆಯೊಳ | ಗೆಸೆದಿರೆ ವಿಷ್ಟರದಿ ||
ವಸುಧೆಯೊಳೆರಗುತ ಚಾರರು ಪೇಳ್ದರು | ಎಸೆವ ದ್ವಾರದಿ ದುರ್ಮತಿ ಬಂದಿರುವುದ           ||೨೭೨||

ರಾಗ ಭೈರವಿ ಅಷ್ಟತಾಳ
ಚರರೆಂದ ನುಡಿ ಕೇಳುತ್ತ | ಶಶಿಹಾಸನು | ತ್ವರಿತದಿ ಪೊರಮಡುತ ||
ಧೊರೆ ಕುಳಿಂದಕ ಸಹ ಕಪ್ಪ ಕಾಣಿಕೆ ಗೊಂಡು |
ಹರುಷದೊಳಿದಿರು ಬಂದು  ||೨೭೩||

ಎರಗುತ್ತಲುಭಯರಾಗ | ಕಾಣಿಕೆಯಿತ್ತು | ಕರೆತಂದರೊಳಗೆ ಬೇಗ ||
ಮೆರೆವ ಸಿಂಹಾಸನದೊಳಗೆ ಕುಳ್ಳಿರಿಸುತ್ತ |
ಪರಿಯ ಕೇಳ್ದ ಕುಳಿಂದನು ||           ||೨೭೪||

ಸ್ವಾರಿ ಬಲ್ವಪರೂಪದಿ | ಚಿತ್ತೈಸಿದ | ಕಾರಣವೇನ್ ಜವದಿ ||
ಭೂರಿ ತೋಷಗಳಾಯ್ತು ಧರಣಿಪ ಪ್ರಜೆ ಪರಿ |
ವಾರಗಳ್ ಸುಕ್ಷೇಮವೆ       ||೨೭೫||

ಎನೆ ಕೇಳಿ ಸಚಿವರನು | ಕ್ಷೇಮವು ಸರ್ವ | ಜನರೀಗ ಕೇಳು ನೀನು ||
ತನಯನ ಪಡೆದುದ ಕೇಳಿ ಬಂದೆನು ನೋಳ್ಪ |
ಮನದೊಳ್ ಕುಳಿಂದಕನೆ  ||೨೭೬||

ತರಳ ನೀತನು ವನದಿ | ಸಿಕ್ಕಿದನನ್ನು | ಕರತಂದೆನತಿ ಮೋಹದಿ ||
ಧರೆಯ ಪಟ್ಟವಗೈದು ಹರುಷದೊಳಿರುವೆನು |
ಕರುಣದಿ ಸಲಹುವುದು      ||೨೭೭||

ಎಂದು ಕುಳಿಂದಕನು | ವಂದಿಸುತಾಗ | ಲಿಂದುಹಾಸಾಖ್ಯನನ್ನು ||
ಚಂದದಿ ಸಚಿವನ ಕರಕೆ ಕೈಪಿಡಿಸಲು |
ಮಂದಮತಿಯು ಮನದಿ    ||೨೭೮||

ವಾರ್ಧಕ
ಘಾಡಿಸಿದ ನೃಪಲಕ್ಷಣಂಗಳಿಂ ಮೆರೆಯುವನ |
ನೋಡಿ ವಿಸ್ಮಿತನಾಗಿ ತನ್ನ ಮನದೋಳ್ ಪಿಂತೆ |
ಮಾಡಿಸಿದ ಕೃತ್ಯಮಂ ನೆನೆದು ಕಾಟುಕಜನರು ಎನ್ನ ವಂಚನಗೈದರೆ ||
ಕೂಡೆ ಮನದೋಳ್ ಮರುಗಿ ಪುಸಿನಗೆಯ ನಗುತ ಕೊಂ |
ಡಾಡಿ ಮನ್ನಿಸಿ ಎನಗೆ ನಿನ್ನ ಸುತನಂ ಕಂಡು |
ಮೂಡಿದುತ್ಸಹವೆಂದನಾ ದುಷ್ಟಬುದ್ಧಿ ಕಪಟೋಕ್ತಿಯಿಂದಲಿ ನೃಪತಿಗೆ        ||೨೭೯||

ರಾಗ ಸಾರಂಗ ಅಷ್ಟತಾಳ
ಕೇಳು ಕುಳಿಂದ ನೀನು | ಪುಣ್ಯಾತ್ಮನೆಂ | ದ್ಹೇಳುವೆ ಮುದದಿ ನಾನು
ಬಾಲನು ಗುಣವಂತ ಸಾತ್ತ್ವಿಕನೀತನು |
ಪೇಳುವೆ ನುಡಿಯೊಂದನು | ಈತನೊಳ್ ನಾನು         ||೨೮೦||

ಶಶಿಹಾಸ ಬಾರೊ ನೀನು | ಕಾರ್ಯವನೊಂದ | ನುಸಿರುವೆ ನಿನಗೆ ನಾನು |
ಕುಶಲಪತ್ರವನೊಂದ ಬರೆದೀವೆ ಗುಟ್ಟಿನೊ |
ಳಸಮ ವಿಕ್ರಮಿ ಕೊಳ್ಳಯ್ಯ | ನೀ ಕೇಳಯ್ಯ    ||೨೮೧||

ತೆರಳಿ ಎನ್ನಯ ಪುರಿಗೆ | ಪತ್ರವನಿದ | ತ್ವರೆಯೊಳು ಮದನನಿಗೆ |
ಪರರರಿಯದ ತೆರವಿತ್ತು ಬಾರೀ ಕ್ಷಣ |
ನಿರುವೆ ನಾನಿಲ್ಲೆಂದನು | ಮಂತ್ರೀಶನು         ||೨೮೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಪ್ರೀತಿಯಿಂ ಪೇಳಿರ್ದ ಸಚಿವನ | ಮಾತು ನಿಶ್ಚಯವೆಂದು ಕೈಗೊಂ |
ಡಾತತೂಕ್ಷಣ ಮುದ್ರಿಸಿದ ಲೇ | ಖನವ ಕೊಂಡು         ||೨೮೩||

ತಂದೆಯಡಿಗೊಂದಿಸುತ ಪರಕೆಯ | ಗೊಂಡು ಮಾತೆಗೆ ನಮಿಸಲಾಕೆಯು |
ಕಂದನನು ಬಿಗಿಯಪ್ಪಿ ಪಯಣವಿ | ದೆಲ್ಲಿಗೆನಲು           ||೨೮೪||

ವರ ಸಚಿವನಾಜ್ಞೆಯಲಿ ಕುಂತಳ | ಪುರಕೆ ಪೋಗುವೆ ಬಹೆನು ತ್ವರೆಯಲಿ |
ಕರುಣದಿಂದಪ್ಪಣೆಯ ಪಾಲಿಸಿ | ರೆನಲಿಕಾಗ ||            ||೨೮೫||

ಸಿರಿವರನ ದಯದಿಂದ ಕಂಟಕ | ಬರದ ತೆರನಹುದಯ್ಯ ವೇಗದಿ |
ಪುರಕೆ ಬಾರೆಂದೆನುತ ಪರಸುತ | ಲಾಗ ಕಳುಹೆ         ||೨೮೬||

ಹರಿಶರಣ ಹರಿಯೇರಿ ತ್ವರೆಯಲಿ | ಪುರವ ಪೊರಮಟ್ಟೋರ್ವ ವೇಗದಿ |
ತೆರಳಿ ಕುಂತಳಪುರದೊಳುಪವನ | ದೊಳಗೆ ಇಳಿದ    ||೨೮೭||

ರಾಜಿಪುದ್ಯಾನದಲಿ ನೃಪಸುತ | ತೇಜಿಯನು ಕಟ್ಟಿದನು ತರುವಿಗೆ |
ರಾಜಿಸುವ ನಿರ್ಮಲ ಸರೋವರ | ದೊಳಗೆ ಮಿಂದು || ||೨೮೮||

ಕಮಲಪುಷ್ಪವ ಕೊಯ್ದು ಭಕ್ತಿಯೊಳ್ | ಕಮಲನಯನಾರ್ಚನೆಯಗೈಯುತ |
ಕಮಲನಾಭನ ಭಕ್ತ ಪಾಥೇ | ಯವನು ಭುಜಿಸಿ           ||೨೮೯||

ಭಾಮಿನಿ
ತರಿದು ಚಿಗುರನೆ ಹಾಸಿ ಮುರಹರ |
ಚರಣವನು ಧ್ಯಾನಿಸುತ ಮಲಗಲು |
ತ್ವರಿತದಿಂ ಬಂದಿರುವ ಮಾರ್ಗಾಯಸದಿ ನಿದ್ರೆಗಳು ||
ಭರದಿ ಮುಸುಕಲಿಕಿತ್ತ ದುರ್ಮತಿ |
ಯರರೆ ಪಾಪಿ ಕುಳಿಂದನೆನ್ನಯ |
ಸ್ಮರಣೆಯಿಲ್ಲದೆ ಸುತನ ಗರ್ವದಿ ಮಾಡಿಕೊಂಡೆಯಲಾ ||೨೯೦||

ರಾಗ ಭೈರವಿ ಅಷ್ಟತಾಳ
ಎಲೆ ಕುಳಿಂದಕನೆ ಕೇಳು | ಛೇದಿಸಿ ನಿನ್ನ |
ನೆಲನ ಕೊಂಬುವೆನು ತಾಳು ||

ಒಲಿದು ನಿನಗೆ ರಾಜ್ಯವಿತ್ತು ಕಾಪಾಡಿದೆ | ಸಲಿಗೆ ಬಂದುದೆ ಇನಿತು          ||೨೯೧||
ನಿನ್ನಾಧೀನಗಳಲ್ಲದೆ | ಮಿಕ್ಕಿದುದೇನು |
ಮುನ್ನ ನೀನ್ಯೋಚಿಸದೆ ||
ಗನ್ನಘಾತಕ ಮಾತನ್ಯಾತಕೆಂಬುವೆ ನಿನ್ನ | ಪನ್ನಿಗಳ್ಯಾಕಿನಿತು     ||೨೯೨||

ಯಾರ ಮಾತಿಲಿ ಕೋಟೆಯ | ಕಟ್ಟಿಸಿ ನೀನೀ |
ಪೋರನ ಕೈಕೊಂಡೆಯ ||
ಆರಾಮಕೂಪ ಛತ್ರಾದಿಗಳಿಡಿಸಿದ | ಕಾರಣವೇನೆಂದನು           ||೨೯೩||

ನರಹರಿ ಕರುಣಿಸಿದ | ತೆರದಿ ಗೈದೆ |
ಒರೆಯುವದ್ಯಾತಕದ ||
ಬರಿದೆ ಎನ್ನೊಳು ನೀ ಕೋಪಿಸೆ ಎಂದಿಗು | ಸರಿಯುವನಲ್ಲ ಹಿಂದೆ           ||೨೯೪||

ರಾಗ ಶಂಕರಾಭರಣ ಮಟ್ಟೆತಾಳ
ಕರದಿ ಧನುವ ಕೊಂಡು ದುಷ್ಟ | ಬುದ್ಧಿ ರೋಷದಿಂದಲಾಗ |
ದುರುಳ ನಿಲ್ಲು ನಿನ್ನ ಕರುಳ | ನುಗಿವೆನೆಂದನು            ||೨೯೫||

ಧುರಸಮರ್ಥನಹುದೊ ನಿಲ್ಲು | ಯೆನುತಲಾ ಕುಳಿಂದ ರೋಷ |
ವೆರೆದು ಶರವ ಬಿಟ್ಟ ಮಂತ್ರಿ | ವರಗೆ ಭರದಲಿ ||೨೯೬||

ಬರುವ ಶರವ ತರಿದು ಸಚಿವ | ನುರುತರಾಸ್ತ್ರವೆಸೆಯೆ ನೃಪನು |
ಧರೆಯೊಳದರ ಚೂರ್ಣಗೈದು | ಕೆಡಹಲಾ ಕ್ಷಣ            ||೨೯೭||

ದುಷ್ಟಬುದ್ಧಿ ನೃಪನ ಧನುವ | ತಟ್ಟನಾಗ ಕಡಿಯೆ ಗದೆಯೊ |
ಳಟ್ಟಹಾಸದಿಂದ ಪೊಯ್ಯೆ | ಸೆಳೆದನದರನು   ||೨೯೮||

ಅಸಿಯ ತಿರುಹುತಾಗ ನೃಪನು | ಎಸೆಯೆ ಸಚಿವನಂಗಕದರ |
ಕಸಿದು ಬಿಸುಟ ಕ್ರೋಧದಿಂದ | ಮಂತ್ರಿಶೇಖರ           ||೨೯೯||

ಮಲ್ಲಯುದ್ಧಕಾಗಿ ನಿಲಲು | ಖುಲ್ಲ ತಾಳು ತಾಳೆನುತ್ತ |
ಮೆಲ್ಲನವನ ಸೆರೆಯ ಪಿಡಿದ | ಸಚಿವನಾಕ್ಷಣ   ||೩೦೦||

ಭಾಮಿನಿ
ಉರಿಯ ಸೂಸುತ ಸಚಿವನಾತನ |
ಭರದಿ ಕಾರಾಗೃಹದೊಳಿಡಿಸುತ |
ಪರಮವಿಭವದಿ ಚಂದನಾವತಿಪುರವ ತನ್ನೊಶದಿ ||
ಇರಿಸಿ ಬೆದರಿಹ ಜನರಿಗಭಯವ |
ಕರುಣಿಸುತಲೇಕಾಧಿಪತ್ಯದಿ |
ಮೆರೆದಿರಲು ಶಶಿಹಾಸ ನಿದ್ರೆಯೊಳಿರುವ ಕಾಲದಲಿ      ||೩೦೧||

ರಾಗ ಮಾರವಿ ಏಕತಾಳ
ಇತ್ತಲು ಕುಂತಳಪತಿ ಚಿತ್ರಧ್ವಜ | ನತ್ಯಾನಂದದೊಳು ||
ಇತ್ತಿರೆಯೋಲಗಕೈತಂದಿಹ ಗುರು | ಗಾಲವಗೊಂದಿಸುತ           ||೩೦೨||

ಕರುಣಿಗಳಾಲಿಸಿ ಹಿಂದೆತಾವರುಹಿದ | ತೆರದೊಳಗೆನಗೀಗ ||
ತರಳೆಯೋರ್ವಳು ಜನಿಸಿರ್ಪಳು ಬಲ್ಲಿರಿ | ವರುಷ ಷೋಡಶವಾಯ್ತು        ||೩೦೩||

ಬಾಲಕಿ ಯೌವನದೊಳಗಿಹ ಚಂಪಕ | ಮಾಲಿನಿಯೆಂಬಳಿಗೆ ||
ನೀಲನಿಭಾಂಗನ ಕಿಂಕರ ಪತಿಯೆಂ | ದ್ಹೇಳಿದಿರೈ ಎನಗೆ           ||೩೦೪||

ಅರಿಯೆನು ಎಲ್ಲಿಹನೆಂಬುದ ಗುರುವರ | ನೊರೆಯಬೇಹುದು ದಯದಿ ||
ತರಳೆಗೆ ಪರಿಣಯಕಾಲಗಳಾಯಿತು | ಚರಣಕೆ ವೇದ್ಯವಿದೆ        ||೩೦೫||

ರಾಗ ಸಾಂಗತ್ಯ ರೂಪಕತಾಳ
ಧರಣಿಪಾಲಕ ತಾಳು ನಾಲ್ಕೆಂಟು ದಿನಗಳೊಳ್ |
ತರಳೆಗೆ ಪರಿಣಯವಹುದು ||
ಹರಿಭಕ್ತ ಕೋಮಲಕಾಯ ಸದ್ಗುಣವಂತ |
ಹರಿತಹನಿಲ್ಲಿಗೆ ಕೇಳು        ||೩೦೬||

ಅರಿತು ನಾ ಪೇಳುವೆ ತ್ವರೆಯೊಳಾತನಿಗಿತ್ತು |
ಧರೆಯ ಮೂರ್ಧಾಭಿಷೇಕವನು ||
ವಿರಚಿಸಲದು ಕೀರ್ತಿಯಹುದು ನಿನ್ನಂದದೊ |
ಳಿರರು ಪುಣ್ಯಾತ್ಮರೀ ಜಗದಿ            ||೩೦೭||

ಇನಿತುಸಿರುತ ಮುನಿ ತೆರಳಲು ಜನಪನು ||
ಘನ ತೋಷದೊಳಗಿರಲಿತ್ತ ||
ಜನಪಕುಮಾರಿ ಚಂಪಕಮಾಲಿನಿಯ ಸಖಿ |
ವನಿತೆ ಮಂತ್ರಿಯ ಸುತೆ ವಿಷಯೆ     ||೩೦೮||

ಬಂದಳು ಧರಣಿಪಾತ್ಮಜೆಯನ್ನು ಕಾಣುತ್ತ |
ಲೆಂದಳು ವಿನಯೋಕ್ತಿಯಿಂದ ||
ಚಂದದಿ ಜಲಕ್ರೀಡೆಯಾಡುವ ವನದೊಳು |
ಇಂದುಮುಖಿಯೆ ಏಳೆಂದಳು          ||೩೦೯||

ರಾಗ ಖಮಾಚು ಏಕತಾಳ
ಕಾಳಾಹಿವೇಣಿ ಕೇಳೆ | ವಾಸಂತಿಕ | ಕಾಲಂಗಳೀಗ ಶೀಲೆ ||
ಏಳು ವಿಷಯೆ ನಿನ್ನ ಜೊತೆಯೊಳು ಬರುವೆನು |
ಬಾಲಕಿಯರ ಕರೆಯೆ | ಬೇಗನೆ ಪೋಗಿ |
ಬಾಲಕಿಯರ ಕರೆಯೆ         ||೩೧೦||

ಧರಣಿಪಾತ್ಮಜೆಗಾಗಿ | ವಿಷಯೆ ಬೇಗ | ತರಳೆಯರನು ನೆರಹಿ |
ಸರಸಸುಗಂಧದ ಪರಿಮಳ ಝೋಂಪಿಲಿ |
ಪೊರಟರು ವಿಭವದಲಿ | ಕಡೆಗಣ್ಣಿನ |
ತಿರುಹಿನ ನೋಟದಲಿ        ||೩೧೧||

ಮಂದಗತಿಗಳಿಂದಲಿ | ಸೊಕ್ಕಿದ ಕರಿ | ಯಂದದೊಳೊಲಿಯುತಲಿ ||
ಚಂದಿರಮುಖಿಯರ | ನಂದೀಕ್ಷಿಸಿ ವಿಟ |
ಮಂದಿಗಳ್ ಮೈಮರೆಯೆ | ಚೇತನಗೊಂಡು |
ಕುಂದಿ ಮೌನವತಳೆಯೆ     ||೩೧೨||

ಕಂದ
ಸರಸಿಜನೇತ್ರೆಯರೀ ಪರಿ |
ಹರಿತಂದುಪವನಮಧ್ಯದಿ ಪೊಳೆಯುವ ನಿರ್ಮಲ ||
ಸರಸಿಯನಿಳಿಯುತಲೆಲ್ಲರು |
ಕರದಿಂ ಜಲಗಳನೆರಚುತಲಾಡಿದರಾಗಳ್     ||೩೧೩||

ರಾಗ ಮುಖಾರಿ ಏಕತಾಳ
ಆಡಿದರಂದು ಜಲಕೇಳಿಯನು | ಸುದತಿಯರೆಲ್ಲ |
ರಾಡಿದರಂದು ಜಲಕೇಳಿಯನು   || ಪ ||

ಪಾಡಿ ಕೋಕಿಲಗಾನಂಗಳನು | ಚೆಲುವೆಯರಾಗ |
ನೋಡೀ ಕಮಲಪುಷ್ಪಂಗಳನು ||
ಮೂಡಿದ ಕುಚಕದನಾಲಿಂಗಿಸುತಲಿ |
ಕೂಡೆ ಬಗಸೆ ಜಲವೀಡಾಡುತ ಬಲು |
ಗಾಡಿಗಾರ್ತಿಯರೊಬ್ಬರೊಬ್ಬರನಪ್ಪುತ |
ಆಡಿದ ಪರಿಗಳನಿನ್ನೇನೆಂಬೆನು        ||೩೧೪||

ರಾಗ ಕೇದಾರಗೌಳ ಅಷ್ಟತಾಳ
ಇನಿತು ಪರಿಯೊಳೆಲ್ಲರಾಡಿ ಮೇಲಕೆ ಎದ್ದು |
ಘನವೇಗ ಮಡಿಯುಡುತ ||
ವನದೊಳಗರಳಿದ ಸುಮಗಳ ಕೊಯ್ಯುತ್ತ |
ವನಿತೆಯರಿರಲಾಗಳು       ||೩೧೫||

ಬಂದಳೋರ್ವಳೆ ವಿಷಯೆಯೊಂದು ಕಡೆಗೆ ಪುಷ್ಪ |
ಕೆಂದತಿ ಹರುಷದಿಂದ ||
ಚಂದದಿ ತಳಿರೊಳು ಮಲಗಿರ್ಪ ಪುರುಷನ್ಯಾ |
ರೆಂದು ಹತ್ತಿರ ಬಂದಳು     ||೩೧೬||

ನೋಡಿ ಹಿಗ್ಗಿದಳಾಗ ನೃಪಕುಮಾರನ ಕಂಡು |
ಪಾಡಿ ಪೂರ್ವದ ಪುಣ್ಯವ ||
ಗಾಢ ನಿದ್ರಿಪನೀತನ್ಯಾರು ಲಕ್ಷಣದೊಳು |
ರೂಢಿಪಸುತನಹುದು        ||೩೧೭||

ರಾಗ ಸಾವೇರಿ ಆದಿತಾಳ
ಸ್ಮರವಸಂತರ ಪೋಲುವ | ನೋಡಲು ಮತ್ತೆ |
ಸುರಪಜನಂತೆ ಕಾಂಬುವ          || ಪ ||

ಪರಮ ಸುಂದರ ನಳಕೂಬರನಂದದೊ |
ಳಿರುವನೀತನ ಮಾತೆ ಪುಣ್ಯವೇನನೆಂಬೆನು    || ಅ ಪ ||

ಎನ್ನ ಪಡೆದ ತಾತನು | ಚಂದನಾವತಿಗೆ |
ಮೊನ್ನೆ ದಿವಸಪೋದನು ||
ಎಣ್ಣ ಬೇಡೆಲೆ ತಕ್ಕ ವರನ ನಾ ತಹೆನೆಂದು |
ಬಣ್ಣಿಸಿ ತೆರಳಿದ ಮನದನುಮಾನವು ||೩೧೮||

ವರಿಸಲೆನಗೆ ವರನ | ಕಳುಹಿರ್ಪನೇನೊ |
ಪರಮ ಸುಂದರಕಾಯನ ||
ಸರಿಯಿದೆಂದೆನುತಲಿ ವಿಷೆಯಾತನಂಗವ |
ಪರಿಶೋಧಿಸಲು ಕಂಚುಕದಿ ಲೇಖನವ ಕಂಡು            ||೩೧೯||

ಬಿಡಿಸಿ ಮೆಲ್ಲನೆ ನೋಡಲು | ತಂದೆಯ ಲಿಪಿಯು |
ಒಡನೆ ಮೇಲಕೆ ತೋರಲು ||
ಬೆಡಗಿನಿಂದದರನ್ನು ಒಡೆದು ಚಂದಿರ ಮುಖಿ |
ಸಡಗರದಿಂದ ವಾಚನವನ್ನು ಗೈದಳು           ||೩೨೦||

ರಾಗ ಕಾಂಭೋಜಿ ಝಂಪೆತಾಳ
ಸ್ವಸ್ತ್ಯಸ್ತು ಸುಕುಮಾರ | ಮದನನಿಂಗಾಶಿಷವ |
ನಿತ್ತು ಬರೆದಿಹ ದುಷ್ಟ | ಬುದ್ಧಿಯಾಜ್ಞೆಗಳು ||
ಮತ್ತೀಗ ಬಂದ ಶಶಿ | ಹಾಸನೆಂಬುವ ತರಳ |
ನತ್ಯಂತಾಹಿತ ನಮಗೆ | ಮುಂದೆ ಕುಂತಳಕೆ  ||೩೨೧||

ಅರಸನಹ ಸಾಮಾನ್ಯ | ದವನಲ್ಲ ನೀನಿವನ |
ಪರಿಕಿಸಿದ ಕ್ಷಣದೊಳಗೆ | ಕುಲಗೋತ್ರಗಳನು ||
ಬರಿದೇ ವಿಚಾರಿಸುತ | ಹೊತ್ತುಗಳೆಯದೆ ನೀನು |
ಭರದಿ ವಿಷಮಂ ಕೊಟ್ಟ | ರದು ವಿಹಿತವೆನಗೆ  ||೩೨೨||

ತರಳ ನೀನೆನ್ನ ಸುತ | ನಾದಡೀ ಕಾರ್ಯಗಳ |
ತ್ವರಿತದೊಳು ಗೆಯ್ಯುತಿಹೆ | ಯೆಂದು ನಂಬಿರುವೆ ||
ಸರುವಥಾ ಕಾಲಹರ | ಣವ ಗೆಯ್ಯ ಬೇಡವೈ |
ಬರೆದಿರುವೆನಾಶಿಷದ | ಪತ್ರ ಸುಕುಮಾರ      ||೩೨೩||