ರಾಗ ಮಧುಮಾಧವಿ ಏಕತಾಳ
ಸುರಿವ ನೆತ್ತರಧಾರೆಯುರಿಗೆ ಬಾಲಕನು |
ತರಹರಿಸುತ ಹರಿ ರಕ್ಷಿಸೆಂದವನು    || ೧೯೫ ||

ಪರಮ ಶಾಲಗ್ರಾಮವೆದುರೊಳಗಿಟ್ಟು |
ಧರೆಯೊಳೊಂದಿಸಿ ಭಕ್ತಿಯಿಂ ಪೊಡಮಟ್ಟು     || ೧೯೬ ||

ಧರೆಯೊಳೆನ್ನಯ ಕಷ್ಟದೋಲ್ ಜೀವರಿಂಗೆ |
ಕರುಣಿಸ ಬೇಡವೈ ವಂದಿಪೆ ನಿನಗೆ  || ೧೯೭ ||

ಕಂದರ್ಪಪಿತ ದೇವ ಶ್ರೀಲಕ್ಷ್ಮೀಕಾಂತ |
ಬಂದೆನ್ನ ಕಾಯೆಂದು ಮೂರ್ಛಿಸಲಿತ್ತ            || ೧೯೮ ||

ಭಾಮಿನಿ
ಧರಣಿಯೊಳು ಮೈಮರೆತು ಬಾಲಕ |
ನಿರಲಿಕಿತ್ತಲು ಚಂದನಾವತಿ |
ಯರಸನಾದ ಕುಳಿಂದನೋಲಗವಿತ್ತು ವಿಭವದಲಿ ||
ಚರನ ಕರೆದಿಂತೆಂದ ಶಬರರ |
ತ್ವರಿತದಿಂ ಕರೆ ವನಕೆ ಬೇಂಟೆಗೆ |
ಪೊರಡುವೆನು ಬಲ ಸಹಿತ ಬರಲೀ ಕ್ಷಣವೆ ಸಂತಸದಿ   || ೧೯೯ ||

ರಾಗ ಮಾರವಿ ಏಕತಾಳ
ಅರಸನ ನುಡಿಗಾ ಚಾರನು ತ್ವರಿತದಿ | ಕರೆಯಲು ಶಬರನನು ||
ಮರಿ ಮರಿ ನಾಯ್ಗಳ ತರುಬುತಲೇಳಲು | ಪರಿಕಿಸುತಾಗದನು  || ೨೦೦ ||

ಭರದೊಳು ಶಬರಿಯರೈತಂದೆರೆಯರ | ಚರಣಕೆ ಬಾಗುತಲೆ ||
ಬರುವೆವು ನಿಮ್ಮೊಡನೀ ದಿನ ಬೇಂಟೆಗೆ | ಹರುಷದಿ ನಾವೆನಲು  || ೨೦೧ ||

ಹಸನಾಯ್ತರರೆ ಶಭಾಸು ಬಲ್ ಝೋಕಿಲಿ | ಬಿಸಿ ಬಿಸಿ ಮಾಂಸವನು ||
ಎಸಗುತ ಪಾಕವ ಮೆಲ್ಲುವ ವನದೋಳ್ | ಕುಶಲದಿ ಬಹುದೆನಲು           || ೨೦೨ ||

ಮೀಟಾಗುತ ಸತಿಪತಿಗಳ್ ಕಾಟಕ | ರೋಟು ಮಂದಿ ದಿನದಿ ||
ಬೇಟೆಯೊಳಟವಿಯ ಮೃಗಗಳ ತರಿವುತ | ಕೂಟದ ಸಂತಸದಿ   || ೨೦೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದು ಭೂಪತಿಗೆರಗೆ ಶಬರರ | ಚಂದದಿಂ ಮನ್ನಿಸುತಲವರೊಡ |
ನೆಂದನೀ ದಿನ ಬೇಂಟೆಯಾಡುವ | ಮನದಿ ನಿಮ್ಮ       || ೨೦೪ ||

ಕರೆಸಿದೆನು ನಡೆರೆನುತ ವೀಳ್ಯವ | ಕರುಣಿಸುತ ಹಯವೇರೆ ನೃಪತಿಯಂ |
ಪರುಟವಿಸಿ ಮಾರ್ಬಲಗಳೆಡಬಲ | ತರುಬಿ ಬರಲು      || ೨೦೫ ||

ಇಂತು ಶಬರರು ಶಬರಿಯರು ಸಹ | ಸಂತಸದಿ ಪೊರಮಟ್ಟು ಪುರವನು |
ದಂತಿ ಹರಿಣಗಳಿರ್ಪ ಸೋವನು | ಪಿಡಿದು ಪೊಗಲು     || ೨೦೬ ||

ವಾರ್ಧಕ
ಚಾಪ ಬಾಣಂಗಳೇತಕೆ ಬೇಂಟೆಗಂಗಜನ |
ಚಾಪ ಬಾಣಂಗಳಿರ್ದಪವೆಮ್ಮೊಳೆಂಬೊಲಿಹ |
ಚಾಪಲಭ್ರೂಲತೆಯ ಚಂಚಲಾಪಾಂಗದ ಪುಳಿಂದೆಯರ್ ತಮ್ಮ ತಮ್ಮ ||
ಓಪರಂ ಬಳಿವಿಡಿದು ಬರುತಿರ್ದರಾಗ ಸ |
ಲ್ಲಾಪದಿಂದೆಸೆವ ಹರಿ ಹರಿಣ ಕರಿ ಚಮರಿಗಳ |
ರೂಪಂಗಳೆಮ್ಮೊಳಡಗಿಹವೆಂದು ಗರ್ವಿಸುತ ಶಬರಿಯರು ಸಂತಸದೊಳು            || ೨೦೭ ||

ರಾಗ ಭೈರವಿ ತ್ರಿವುಡೆತಾಳ
ನಡೆದರಂದು | ಬೇಟೆಗೆ | ನಡೆದರಂದು || ಪ ||

ನಡೆದರಾ ಕ್ಷಣ ಬೇಟೆಯಾಡುತ | ಪಡೆಯ ತರುಬಿ ವಿನೋದದಿ |
ಗಿಡನ ಪೊದರಿನೊಳಿರ್ಪ ಮೃಗಗಳ ಝಡಿದು ಹೊರಡಿಸಿ ಮೋದದಿ |
ಸಡಗರದಿ ಶಬರಿಯರು ಬಲೆಯಲಿ | ಪಿಡಿದು ಶರಗಳ ವಿಭವದಿ |
ಒಡನೆ ತಮ್ಮಯ ಪತಿಗೆ ತೋರುತ | ಕಡು ವಿನೋದದಿ ಹಿಗ್ಗುತಾಗಳು || ನಡೆದರಂದು       ||೨೦೮||

ಮತ್ತಗಜಗಳ ಭಲ್ಲೆಯಿಂದಲಿ | ನೆತ್ತಿಗಳ ಬಗಿಯುತ್ತಲಿ |
ಕಿತ್ತು ಚಮರಿಯ ಮೃಗದ ಬಾಲವ | ಸುತ್ತಿ ಬೀಸುತ ಮುದದಲಿ |
ಕತ್ತಿಯನು ಸೆಳೆಯುತ್ತ ವರಹನ | ಕತ್ತರಿಸಿ ಕೆಡಹುತ್ತಲಿ |
ಮತ್ತೆ ತಮ್ಮಯ ಸತಿಯರಂಗಕೆ | ಯೆತ್ತಿ ರಕ್ತವನೆರಚುತಾಗಳು || ನಡೆದರಂದು     || ೨೦೯ ||

ಭಾಮಿನಿ
ಒಂದೆಸೆಯೊಳಾ ಶಬರವಿತತಿಯು |
ಚಂದದಿಂ ಸೋವುತ್ತಲಿರುತಿರೆ |
ಒಂದೆಸೆಯೊಳಿರುತಿರ್ಪ ಹರಿಣನ ಬೆರಸಿ ಭೂಪತಿಯು ||
ಮುಂದೆ ಮುಂದೈತರಲು ವಿಪಿನದೊ |
ಳೊಂದೆಸೆಯ ಬಾಲಕನ ರೋದನ |
ಬಂದು ಕರ್ಣಾಂತರದಿ ಬೀಳಲು ಕೇಳುತಾ ಕ್ಷಣದಿ        || ೨೧೦ ||

ರಾಗ ಕಾಂಭೋಜಿ ಝಂಪೆತಾಳ
ಅರರೆ ಏನಾಶ್ಚರ್ಯ ವಿಪಿನಮಧ್ಯದೊಳೀಗ |
ತರಳರಳುತಿಹ ಧ್ವನಿಯು ಕೇಳಿಸುತಲಿಹುದು ||
ಬರಿದೆ ಮನಸಿನ ಭ್ರಮೆಯೊ ತರುಣಿಸುತರೊಡಗೂಡಿ |
ತೆರಳುತಿಹ ಮಾರ್ಗಂಗಳೀಯೆಡೆಯೊಳಿಹುದೊ           || ೨೧೧ ||

ಯಾರೆಂದು ಪರಿಕಿಸಲು ಬೇಕೆನುತಲಾ ಕ್ಷಣದಿ |
ಧಾರಿಣೀಪತಿ ಮುಂದೆ ಮುಂದೆ ತಾ ಬರಲು ||
ಚೀರಿ ರೋದಿಸಿ ಹರಿಯೆ ಶರಣು ಶರಣೆನ್ನುತ್ತ |
ಧಾರಿಣಿಯೊಳೊಂದಿಸುವ ಬಾಲಕನ ಕಂಡು   || ೨೧೨ ||

ಯಾರ ಸುತನಿವನಿಲ್ಲಿ ತಂದೆ ತಾಯ್ಗಳು ಮತ್ತೆ |
ಬೇರೆ ಬಾಂಧವರನ್ನು ನೆನೆಯದೆಯೆ ಹರಿಯ ||
ಭೂರಿ ಭಕ್ತಿಯೊಳೀತ ಸ್ತುತಿಗೈವನದರಿಂದ |
ವಾರಿಜಾಕ್ಷನೆ ಒಡೆಯ ನದಕಾಗೀತನಿಗೆ         || ೨೧೩ ||

ಹರಿಕೃಪೆಗಳಿಲ್ಲದಿರೆ ಘೋರ ವಿಪಿನಾಂತರದಿ |
ಇರುವನೆಂತೆಲ್ಲರಿಗೆ ತರಳರನು ಕೊಡುವ ||
ಮುರಹರನು ಸುತರಿಲ್ಲದೆನ್ನ ಮರುಕವ ನೋಡಿ |
ಕರುಣಿಸಿದ ಮಮ ಪೂರ್ವ  ಪುಣ್ಯದಿಂದಿವನ   || ೨೧೪ ||

ಹತ್ತು ವಿಧಮುಂಟು ಸುತರದರೊಳೌರಸಪುತ್ರ |
ನುತ್ತಮನು ಮೇಣಾತನಿಲ್ಲದಿರೆ ನರಗೆ ||
ಮತ್ತುಳಿವ ಬಗೆಗಳಲಿ ಪಡೆಯಬೇಹುದು ಸುತರ |
ತತ್ತನಯರೊಳಗಿವನು ತಾನೆ ದೊರಕಿಹನು   || ೨೧೫ ||

ಭಾಮಿನಿ
ಕಂದ ನೀನ್ಯಾರಿಲ್ಲಿಗೇತಕೆ |
ಬಂದೆ ನಿನ್ನಯ ಪೆಸರದೇನೈ |
ತಂದೆ ತಾಯಿಗಳಾರು ಪೇಳೆನಲೆಂದನಾ ಕುವರ ||
ಇಂದಿರೆಯು ತಾಯ್ ಎನಗೆ ಶ್ರೀಗೋ |
ವಿಂದನೆನ್ನಯ ಪಿತನರಣ್ಯಕೆ |
ತಂದು ಹಾಕಿದನವನೆ ಎನ್ನಲು ಕೇಳಿ ನೃಪವರನು ||    ||೨೧೬||

ರಾಗ ಕಲ್ಯಾಣಿ ಆದಿತಾಳ
ತರಳ ಬಾರೊ | ನೀ | ಮರುಗದಿರೊ | ಹರಿಚರಣಾಬ್ಜಾಳಿ ಬಾರೋ ||
ಸ್ಮರನುರುತರ ಲಾವಣ್ಯ ಗುಣಕರ |
ತರುಣ ತರಣಿಕಿರಣೋಪಮ ಸುಂದರ         || ಪಲ್ಲವಿ ||

ಶೂರನು | ನೀನೆನ್ನಯ ಸುಕುಮಾರನು |
ರಾಕಾಶಶಿನಿಭಾಕಾರನು | ಮತ್ಪತ್ನಿಯ ಕರಕೀರನು |
ಧೀರನು | ಸುಗುಣಾಕರ ಗಂಭೀರನು | ರಿಪುಗಳ ಹೃದಯಕುಠಾರನು |
ಕಾರುಣ್ಯದಿ ಬಿಗಿದಪ್ಪುತ ತರಳನ |
ಧಾರಿಣಿಪತಿ ಹಯವೇರಿದನಾ ಕ್ಷಣ || ತರಳ ಬಾರೊ    ||೨೧೭||

ರಾಗ ಕೇದಾರಗೌಳ ಅಷ್ಟತಾಳ
ಚಂದದಿ ಕುವರನನೆತ್ತಿ ಮೋಹದೊಳಾ ಕು | ಳಿಂದನು ವಿಭವದಿಂದ ||
ಮಂದಿಯ ಕೂಡಿ ಪಟ್ಟಣಕೆ ಬೇಗದೊಳೈ | ತಂದು ಪೊಕ್ಕರಮನೆಯ        ||೨೧೮||

ತರುಣಿ ಮೇಧಾವಿನಿಯನು ಕರೆದೆಂದನು | ಹರಿಯೆನಗೀ ಸುತನ ||
ಕರುಣಿಸಿದನು ಇಂದು ಕಾನನಾಂತರದೊಳು | ಹರುಷದಿ ಸಲಹೆನಲು      ||೨೧೯||

ಕಂದನ  ತೆಗೆದಪ್ಪಿ ಮುದ್ದಿಸುತತ್ಯಾ | ನಂದದಿ ಮೇಧಾವಿನಿ ||
ಸುಂದರಾಂಗನ ನೋಡಿ ಹಿಗ್ಗುತ ಪತಿಯೊಡ | ನೆಂದಳು ವಿಭವದಿಂದ      ||೨೨೦||

ಹರಿದುದೆನ್ನಯ ಬಂಜೆತನ ಪುತ್ರವತಿಯಾದೆ | ಹರಿಕರುಣದೊಳೆನ್ನಯ ||
ಪರಮಪುಣ್ಯದ್ರುಮಂ ಫಲಿಸಿತೆಂದೆನಲಾಗ | ಹರುಷದಿ ಭೂವರನು          ||೨೨೧||

ವಾರ್ಧಕ
ಬಳಿಕ ನಗರದೊಳಾದುದುತ್ಸವಂ ಪಾರ್ವರ್ಗೆ |
ನಿಳಯದೊಳಗುಳ್ಳಖಿಳ ವಸ್ತುಗಳನೊಲಿದಿತ್ತು |
ಚೆಲುವಂಗೆ ವಿಧ್ಯುಕ್ತ ಜಾತಕರ್ಮವ ಗೈಸೆ ಬುಧರುತ್ತರೋತ್ತರವನು ||
ತಿಳಿದು ನಿರ್ಮಲ ಮುಖಾಂಬುಜದಿಂ ಶಶಾಂಕನಂ |
ಕಳಕಳಿಪನದರಿಂದ ಚಂದ್ರಹಾಸಾಖ್ಯನೆಂ |
ದಿಳೆಯೊಳೀತಂಗೆ ಪೆಸರಾಗಲೆಂದುಚ್ಚರಿಸಿ ನಾಮಕರಣವ ಗೈದರು         ||೨೨೨||

ಭಾಮಿನಿ
ತರಳ ದಿನ ದಿನ ವರ್ಧಿಸುತಲಿರೆ |
ಧರಣಿಪಾಲಕ ಸಕಲ ವಿದ್ಯೆಯ |
ಗುರುಮುಖದಿ ಕಲಿಸುತ್ತ ಉಪನಯನವನು ಗೈದವಗೆ ||
ಸಿರಿವರನ ಪೂಜಿಸುತ ನಿತ್ಯದೊ |
ಳಿರಲು ಬಾಲಕ ಭಕ್ತಿಭಾವದಿ |
ವಿರಚಿಸುವನೇಕಾದಶೀವ್ರತಗಳನು ಶಶಿಹಾಸ ||೨೨೩||

ರಾಗ ಮಧುಮಾಧವಿ ತ್ರಿವುಡೆತಾಳ
ಇಂತು ವಿಭವದಿ ಚಂದ್ರಹಾಸನು | ಕಂತುಪಿತನಡಿಗಳನು ನೆನೆಯುತ |
ಸಂತಸದೊಳಿರೆ ಷೋಡಶಾಬ್ದಗ | ಳಾಗಲಿವಗೆ ವಿನೋದದಿ       ||೨೨೪||

ಧರಣಿಪಾಲ ಕುಳಿಂದ ತವಕದಿ | ಧರೆಯ ಪಟ್ಟವ ಕಟ್ಟಲೆನುತಾ |
ಕರೆದು ಮಂತ್ರಿಯೊಳೆಂದನೊಂದಿನ | ಹರುಷಶರಧಿಯೊಳಾಳುತ            ||೨೨೫||

ಕಂದ ಶಶಿಹಾಸಂಗೆ ಪಟ್ಟವ | ಚಂದದಿಂ ಗೈದಿನ್ನು ಸುಖದೊಳ |
ಗಿಂದಿನಾರಭ್ಯದಲಿ ನಾನಿಹೆ | ನೆಂದು ನೆನೆದಿಹೆ ಮನದಲಿ         ||೨೨೬||

ಕರೆಸು ವಿಬುಧರ ರಂಜಕದೊಳೀ | ಪುರವ ಶೃಂಗರಗೈಸಮಾತ್ಯನೆ |
ನೆರಹು ಸಂಭಾರಗಳನೆನಲಾ | ಕ್ಷಣದೊಳವನು ತಡೆಯದೆ ||    ||೨೨೭||

ಕರೆಸಿ ವಿಪ್ರೋತ್ತಮರ ಪುರವನು | ಪರಮ ಶೃಂಗರಗೈಸಿ ವಿಭವದಿ |
ನೆರಹಿ ಸಂಭಾರಗಳ ಭೂಪತಿ | ಗೊಂದಿಸಿದನುರೆ ಸಚಿವನು      ||೨೨೮||

ಕಂದ
ಹರುಷದಿ ಮಂಗಲಸ್ನಾನವ |
ವಿರಚಿಸಿ ವಸ್ತ್ರಾಭರಣದಿ ಶೋಭಿಪ ಸುತಗಂ ||
ವರ ವೇದೋಕ್ತದಿ ನೃಪವರ |
ಧರಣಿಗೆ ಪಟ್ಟವ ಗೈಸಲ್ ವಿಬುಧರ ಮುಖದಿಂ ||

ರಾಗ ಮಾರವಿ ಏಕತಾಳ
ಧರಣಿಪ ಸಿಂಹಾಸನದೊಳಗಿರುತಿಹ | ತರಳಗೆ ಮುದ್ರಿಕೆಯ ||
ಕರುಣಿಸಿ ಪೇಳಿದ ಪ್ರಜೆಗಳ ಸಲಹುವ | ಪರಿಗಳ ಸಂತಸದಿ       ||೨೨೯||

ಸಿರಿವರಭಕ್ತನು ಮಾತಾಪಿತರಿಗೆ | ಹರುಷದಿ ವಂದಿಸುತ ||
ಪರಕೆಯಗೊಳ್ಳುತ ಸಚಿವನ ಕರೆದಿಂ | ತೊರೆದನು ಮೋದದಲಿ  ||೨೩೦||

ಏಳು ಸುತ್ತಿನ ಕೋಟೆ ಕಟ್ಟಿಸು ನಗರಕೆ | ಸಾಲ್ಕೇರಿಯ ಮನೆಯ ||
ನೀಲ ಮಾಣಿಕ ಸೋಪಾನ ಕಾಸಾರವ | ಮೇಲುಪವನ ಗೈಸು    ||೨೩೧||

ದಶಮಿಯೊಪ್ಪೊತ್ತಿನ ಭೋಜನವೇಕಾ | ದಶಿಯುಪವಾಸಗಳು ||
ಕುಶಶಯನಾರ್ಚನೆ ದ್ವಾದಶಿ ವ್ರತಗಳ | ನೆಸಗಲಿ ರಾಷ್ಟ್ರದೊಳು ||೨೩೨||

ಬರಲೇಕಾದಶೀ ಕರಿ ತುರಗವು ಪಶು | ತರಳ ತರುಣಿ ಪ್ರಜೆಯು ||
ಹರಿಪಾದೋದಕ ಹೊರತುಪಹಾರವ | ತೊರೆಯಬೇಕೆಂದೆನುತ             ||೨೩೩||

ಭರದಿ ಡಂಗುರ ಹೊಯ್ಸು ಮಿಕ್ಕರೆನ್ನಾಜ್ಞೆಗೆ | ಶಿರವ ಛೇದಿಪೆನೆಂದು ||
ಪರಿಜನ ಪುರಜನ ರಾಷ್ಟ್ರಚಾತುರ್ವರ್ಣ | ದವರಿಗೆ ತಿಳಿಸೀಗ      ||೨೩೪||

ರಾಗ ಸಾಂಗತ್ಯ ರೂಪಕತಾಳ
ವಸುಧೀಶನಾಜ್ಞೆಯೊಳ್ ಸಚಿವನು ಕೋಟೆಯ | ನೆಸಗುತುದ್ಯಾನಾದಿಗಳ ||
ಕುಶಲದಿ ಪುರುದೊಳು ಡಂಗುರ ಹೊಯ್ಸುತ್ತ | ಲುಸಿರಿದನಂದು ಸಂತಸದಿ           ||೨೩೫||

ದಶಮಿಯೊಂದೂಟವ ಗೈದೇಕಾದಶಿಯೊಳು | ಪಶುಹಯಗಜ ಮುಂತಾದುದನು ||
ಶಿಶುವೃದ್ಧಾದಿಗಳುಪವಾಸಿರ್ದು ದ್ವಾದಶಿ | ವ್ರತವಗೈವುದು ಸರ್ವಜನರು  ||೨೩೬||

ಧರಣಿಪಾಲನ ನೇಮ ಮಿಕ್ಕು ಪೋದರೆ ನಿಮ್ಮ | ಶಿರವ ಛೇದಿಪನೆಂದು ಸಚಿವ ||
ಪರಿಜನ ಪುರಜನರೆಲ್ಲರ್ಗೆ ಬೋಧಿಸಿ | ಹರುಷದೊಳಿರಲೊಂದು ದಿವಸ     ||೨೩೭||

ವಾರ್ಧಕ
ಭೂತಳೇಶ ಕುಳಿಂದ ಚಂದ್ರಹಾಸಾಖ್ಯನಂ |
ಪ್ರೀತಿಯಿಂದಲಿ ಕರೆದು ನುಡಿದನೆಲೆ ಮಗನೆ ವಿ |
ಖ್ಯಾತಮಾಗಿಹ ರಾಜಧಾನಿ ಕುಂತಳಮಿಲ್ಲಿಗಾರು ಯೋಜನವಿರ್ಪುದು ||
ಭೂತಳಮಿದಾ ನಗರದರಸಿಂಗೆ ಸಚಿವನಹ |
ಖ್ಯಾತ ದುರ್ಮತಿಗಾನು ನಿಷ್ಕಾಯುತ ದ್ರವ್ಯ |
ಪ್ರೀತಿಯೊಳಗೀವೆ ಸಿದ್ಧಾಯಮಂ ಪ್ರತಿವರುಷ ಬಂದುದಾ ಕಾಲಮೀಗ      ||೨೩೮||

ರಾಗ ಮಧುಮಾಧವಿ ತ್ರಿವುಡೆತಾಳ
ಧರಣಿಪತಿಗೆಂಟಂಶವಾತನ | ತರುಣಿಗೊಂದಂಶಗಳು ಮಂತ್ರಿಗೆ |
ಕರವಮಿಕ್ಕುದನೀವೆನಯುತ | ದ್ರವ್ಯದೊಳಗೇ ಮುದದಲಿ          ||೨೩೯||

ಕಂದ ಕೇಳೈ ಪರಿಪರಿಯ ಧನ | ಕನಕ ಮುಂತಾದುದನು ಚರರೊಳು |
ಇಂದು ತ್ವರೆಯೊಳು ಕಳುಹು ಲೇಖನ | ವಿತ್ತು ನೀನೆನಲಾಗಳು  ||೨೪೦||

ಪಿತನ ಮಾತನು ಕೇಳುತಾ ಭೂ | ಪತಿಗೆ ಮಹಿಷಿಗೆ ದುಷ್ಟಬುದ್ಧಿಗೆ ||
ಪ್ರತಿಪ್ರತಿಯ ದ್ರವ್ಯಗಳನೆಣಿಸುತ | ಗಂಟ ಕಟ್ಟಿಸುತಾ ಕ್ಷಣ         ||೨೪೧||

ಹಸ್ತಿ ಹಯ ರತ್ನಾದಿ ಕರ್ಪುರ | ಕಸ್ತುರಿಯು ಸೌವರ್ಣ ರಜತವ |
ಪ್ರತ್ಯಪ್ರತ್ಯೇಕದೊಳು ಚಾರರೊ | ಳಿತ್ತು ಲೇಖನ ಸಹಿತಲಿ         ||೨೪೨||

ಚಂದನಾವತಿಯರಸನಾಗಿಹ | ನಿಂದುಹಾಸನು ಕಪ್ಪ ಕಳುಹಿದ |
ನೆಂದು ಮಂತ್ರೀಶ್ವರಗೆ ವೇಗದೊ | ಳಿತ್ತು ಬಹುದೆನೆ ನಡೆದರು   ||೨೪೩||

ಭಾಮಿನಿ
ಚಾರರೇಕಾದಶಿಯ ದಿನದೊಳು |
ಸಾರಿ ಕುಂತಳ ಪುರವ ಕಾಣುತ |
ಭೂರಿ ಹರುಷದೊಳುಪವನಾಂತದಿ ನೆಲಸುತಾಗವರು ||
ನೀರಜೇಕ್ಷಣಗೊಂದಿಸುತ ಕಾ |
ಸಾರದೊಳು ಮಜ್ಜನವ ವಿರಚಿಸಿ |
ವಾರಿಜಾಪ್ತಾಸ್ತಮನಕಾಲದಿ ಪೊಕ್ಕರಾ ಪುರವ ||೨೪೪||

ರಾಗ ಜಂಜೂಟಿ ಅಷ್ಟತಾಳ
ನೊಸಲಿನೊಳೂರ್ಧ್ವಪುಂಡ್ರವನು | ರಂ | ಜಿಸುವ ಧೌತಾಂಬರಂಗಳನು ||
ಪೊಸ ತುಲಸೀಮಾಲೆ ಕೊರಳೊಳಗಳವಟ್ಟು |
ಬಿಸಜನಾಭನ ಅಡಿಯ ನೆನೆವುತ | ಶಶಿಯಹಾಸನ ಚಾರರಾಗಲು           ||೨೪೫||

ದುಷ್ಟಬುದ್ಧಿಗೆಯಭಿನಮಿಸಿ | ಬೇಗ | ಕೊಟ್ಟು ಲೇಖನ ಕಪ್ಪವಿರಿಸಿ ||
ದಿಟ್ಟ ಕುಳಿಂದನ ಸುತ ಚಂದ್ರಹಾಸನು |
ತಟ್ಟನಿದ ನಿಮಗೀಯಲೋಸುಗ | ವಟ್ಟಿಹನು ತ್ವರೆಯಿಂದಲೆಮ್ಮನು          ||೨೪೬||

ಚರರ ನುಡಿಯ ಕೇಳ್ದು ಕನಲಿ | ಮೇಲ್ | ಬರಹವ ನೋಡಿ ಪತ್ರದಲಿ ||
ಅರರೆ ಏನಾಶ್ಚರ್ಯ ಮುದ್ರೆ ಬೇರಾಗಿದೆ |
ಮರುಳೊ ಮೂರ್ಖ ಕುಳಿಂದಾನ್ಯಾರಿಗೆ | ಕರುಣಿಸಿದ ಧೊರೆತನವನಿಂದಿಗೆ            ||೨೪೭||

ಬಿಡಿಸಿ ಕಾಂಬುವೆ ಪತ್ರವೆನುತ | ಬೇ | ಗೊಡೆಯಲಕ್ಷರ ಪರೀಕ್ಷಿಸುತ ||
ಒಡನೆ ಸಚಿವ ಶಂಕೆಗೊಂಡು ತನ್ನೊಳು ತಾನೆ |
ಮಿಡುಕಿ ಮನದೊಳಗೊಕ್ಕಣೆಯ ತಾ | ಸಡಗರದಿ ವಾಚಿಸಿದನಾ ಕ್ಷಣ      ||೨೪೮||

ರಾಗ ಕೇದಾರಗೌಳ ಅಷ್ಟತಾಳ
ಶ್ರೀಮತ್ತು ಸಕಲ ಐಶ್ವರ್ಯವಿರಾಜಿತ | ಸಾಮಂತಜನವಂದಿತ ||
ಭೂಮಿಗಧಿಕ ಕುಂತಳಾಪುರಸಚಿವೇಂದ್ರ | ಸ್ವಾಮಿಯವರ ವೇದ್ಯಕೆ         ||೨೪೯||

ಚಂದನಾವತಿ ಸೀಮೆಗಧಿಪತಿಯಾದ ಕು | ಳಿಂದಕುಮಾರಕನು ||
ಚಂದ್ರಹಾಸನುಗೈವ ಬಿನ್ನಹಂಗಳು ಕ್ಷೇಮ | ವಿಂದಿನವರೆಗೆ ನಾವು           ||೨೫೦||

ಕರುಣರಸವನಿಟ್ಟು ತಮ್ಮಯ ಕುಶಲವ | ಬರೆಸುವುದೈಸೆ ಮತ್ತೆ ||
ಚರಣಕೆಮ್ಮಿಂದ ವಾರ್ಷಿಕದೊಳು ಕೈಕೊಂಬ | ಕರವ ನಾ ಕಳುಹಿರ್ಪೆನು  ||೨೫೧||

ಹರುಷದಿ ಸ್ವೀಕಾರಗೈದು ಕಾರುಣ್ಯದಿ | ಬರೆಸುವುದುತ್ತರವ ||
ಹೊರತು ಮಿಕ್ಕಾದತಿಶಯಗಳ ಕಾಣೆನು | ವಿರಚಿಪ ಬಿನ್ನಹವು ||
ಈ ರೀತಿ ಬರೆದಿಹ ಲೇಖನಂಗಳ ನೋಡಿ | ಚಾರರೊಡನೆ ಮಂತ್ರಿಯು ||
ಪೋರನ್ಯಾರೈ ಸುತಹೀನ ಕುಳಿಂದನು | ಭೋರನರುಹಿರೆನಲು   ||೨೫೨||

ರಾಗ ಮುಖಾರಿ ಏಕತಾಳ
ಕೇಳು ಕೇಳಯ್ಯ ಸಚಿವರಾಯ | ಪೇಳ್ವೆವು ಜೀಯ |
ಕೇಳು ಕೇಳಯ್ಯ ಸಚಿವರಾಯ   ||ಪ||

ಧಾರಿಣೀಪಾಲ ಕುಳಿಂದನು | ಮೃಗಬೇಟೆಗೆಂದು |
ಸಾರಿದ ಮುದದಿ ಪುಣ್ಯಾತ್ಮಕನು ||
ಘೋರ ಕಾನನದೊಳು ಬಾಲಕನೋರ್ವನು |
ಚೀರಿಚೀರಳುತಿರೆ ನಾಲಿಗೆಯಿಂದಲಿ |
ವಾರಿಜಾಕ್ಷನ ದಿವ್ಯನಾಮವ ಸ್ಮರಿಸುತ |
ಸೂರಿಯನಂದದಿ ಪ್ರಭೆ ಶೋಭಿಸುತಲಿ          ||೨೫೩||

ಚರಣದಂಗುಲಿ ಖಂಡಿಸಿರಲು | ಧರೆಯೊಳೆಲ್ಲ |
ಸುರಿದು ರಕ್ತವು ಪರಿವುತಿರಲು ||
ಧರಣಿಪನಾತನ ಕಂಡತಿ ಪ್ರೇಮದಿ |
ತರಳನ ತಂದತಿ ಸ್ನೇಹದಿ ಸಲಹುತ |
ಲಿರುತಿರಲೀಚೆಗೆ ಚಂದನ ನಗರದ |
ದೊರೆತನವಾತಗೆ ಇತ್ತಿಹ ಸುಖದೊಳು         ||೨೫೪||

ವಾರ್ಧಕ
ಕೇಳಿ ವಿಸ್ಮಿತನಾದನಾ ದುಷ್ಟಬುದ್ಧಿ ನಾಂ |
ಪಾಳಡವಿಯೊಳ್ ಪಸುಳೆಯಂ ಕೊಂದು ಬಹುದೆಂದು |
ಹೇಳಿದರೆ ಚಂಡಾಲರಂದುಳುಹಿ ಬಂದಿರ್ಪರೆಂದು ತನ್ನೊಳಗೆ ತಿಳಿದು ||
ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರು |
ಣಾಳುಗಳ ತೆರದೊಳಾ ಚಾರಕರ ಮನ್ನಿಸಿ ನಿ |
ಜಾಲಯದೊಳಿಡಿಸಿದಂ ಶಶಿಹಾಸ ಕಳುಹಿರ್ದ ಸಕಲ ಸಿರಿವಸ್ತುಗಳನು     ||೨೫೫||