ರಾಗ ಕೇದಾರಗೌಳ ಅಷ್ಟತಾಳ
ಇತ್ತಲಾ ಸೌರಾಷ್ಟ್ರಪತಿ ಶೂರಸೇನನು | ಮುತ್ತಿಕೊಂಡಾ ಪುರವ ||
ಮತ್ತೆ ಸಚಿವ ಸೇನಾನಾಯಕ ಮುಖ್ಯರ | ಮುತ್ತಿ ಸೆರೆಯ ಪಿಡಿದು           || ೧೩೨ ||

ಬೆದರಿರ್ಪ ಪುರಜನಗಳಿಗೆ ಧೈರ್ಯವ ಪೇಳಿ | ಮುದದಿಂದಲರಮನೆಗೆ ||
ಮದಮುಖ ಪೊಕ್ಕು ಸಿಂಹಾಸನವೇರಿದ | ನಧಿಕ ಸಂಪ್ರೀತಿಯೊಳು         || ೧೩೩ ||

ಅಟ್ಟಹಾಸದಿ ಮಣಿಕನಕ ಭಂಡಾರವ | ಕುಟ್ಟಿ ಬೇಕಾದುದನು ||
ದುಷ್ಟಬುದ್ಧಿಗೆ ಭಂಡಿ ಭಂಡಿಯೊಳ್ ಸಾಗಿಸಿ | ದಿಟ್ಟ ತಾನಿರಲಿತ್ತಲು           || ೧೩೪ ||

ಭಾಮಿನಿ
ತರಳನನು ತೆಗೆದಪ್ಪಿ ಧಾತ್ರಿಯು |
ಮರುಗಿ ಗಿರಿಗಹ್ವರವ ತಿರುಗುತ |
ತೆರಳಿ ಬಂದಳು ಕುಂತಳಾಪುರಕಾಗಿ ದುಗುಡದಲಿ ||
ತಿರಿದು ಮನೆ ಮನೆ ಪಾಲು ಬೆಣ್ಣೆಯ |
ಮರುಕದಿಂದಲೆ ಕುಡಿಸಿ ಶಿಶುವನು |
ಪೊರೆಯುತಿರ್ದಳು ಪಾಳು ಗೃಹವಿರಲದರೊಳೇನೆಂಬೆ || ೧೩೫ ||

ರಾಗ ಕಾಂಭೋಜಿ ಅಷ್ಟತಾಳ
ತೊಟ್ಟಿಲಿಲ್ಲವೊ ನಿನ್ನನಿಟ್ಟು ತೂಗುವುದಕ್ಕೆ | ಮುದ್ದು ಕಂದ ||
ಮತ್ತೆ | ಪುಟ್ಟ ಕೈಕೊರಳಿಂಗಾಭರಣಗಳಿಲ್ಲವೊ | ಮುದ್ದು ಕಂದ    || ೧೩೬ ||

ವಸತಿಗೆ ಯೋಗ್ಯದ ಮನೆಯಿಲ್ಲ ನಿನಗೀಗ | ಮುದ್ದು ಕಂದ ||
ಚಲೋ | ಬಿಸಿನೀರ ಕಾಸಲು ಭಾಂಡಗಳಿಲ್ಲವೊ | ಮುದ್ದು ಕಂದ  || ೧೩೭ ||

ಕುಡಿವರೆ ಹಾಲಿಲ್ಲ ಮೊಸರು ಬೆಣ್ಣೆಗಳಿಲ್ಲ | ಮುದ್ದು ಕಂದ ||
ನೀನು | ಪಡೆದ ಕರ್ಮಗಳೆಂತೊ ಎಣ್ಣೆ ಸೀಗೆಗಳಿಲ್ಲ | ಮುದ್ದು ಕಂದ          || ೧೩೮ ||

ಎಳೆ ನಗೆಗಳ ನೋಳ್ಪ ತಂದೆ ತಾಯಿಗಳಿಲ್ಲ | ಮುದ್ದು ಕಂದ ||
ಈಗ | ಕಲಿಯಾದನೇ ಶೂರಸೇನ ದುರಾತ್ಮನು | ಮುದ್ದು ಕಂದ  || ೧೩೯ ||

ರಾಗ ಶಂಕರಾಭರಣ ತ್ರಿವುಡೆತಾಳ
ಮರುಗಲೇತಕೆನುತ್ತ ಧಾತ್ರಿಯು | ತಿರಿದು ಪಾಲ್ ಮೊಸರೆಲ್ಲವ |
ತರಳನಿಗೆ ತಂದಿಕ್ಕಿ ಸಲಹುತ | ಲಿರ್ದಳಲ್ಲಿ     || ೧೪೦ ||

ಮೂರು ವರುಷಗಳಾಗೆ ಬಾಲನು | ಹೆಜ್ಜೆ ಹೆಜ್ಜೆಯನಿಕ್ಕುತ |
ಜೋಲುತಿಹ ಮುಂಗುರುಳು ಕದಪಿನ | ತೊದಲು ನುಡಿಯು      || ೧೪೧ ||

ಬಾಲಲೀಲೆಗೆ ತೋಷಪಡುತಲಿ | ಲಾಲಿಪರು ನಿನಗಿಲ್ಲದೆ |
ಬಾಳಿದಪೆಯೆಂತಕಟ ನಿನ್ನಯ | ವಿಧಿಯೆ ಹಾ ಹಾ       || ೧೪೨ ||

ದಿನದಿನದಿ ದುಃಖಿಸುತ ಧಾತ್ರಿಯು | ಮನೆಮನೆಯ ತಿರಿದಿಕ್ಕುತ |
ಕನಿಕರದಿ ಸಲಹುತಲಿ ಪಂಚಕ | ವರುಷವಾಗೆ            || ೧೪೩ ||

ಮರುಗಿ ದೇಹಗಳೆಲ್ಲ ಕ್ಷಯಿಸುತ | ತರುಣಿ ಘನತರ ರುಜೆಯಲಿ |
ಸೊರಗಿ ಜೀವವ ತೊರೆಯುತಂತಕ | ಪುರಕೆ ತೆರಳೆ    || ೧೪೪ ||

ರಾಗ ದೇವಡಿ ರೂಪಕತಾಳ
ಸಲಹಿದ ಧಾತ್ರಿಯು ಗತಿಸಲು ಬಾಲನು |
ನಿಳಯ ನಿಳಯ ಬಾಗಿಲಿಂಗೆ ||
ಮೆಲುವೆನೆಂದರೆ ದಧಿಕ್ಷೀರಾನ್ನವಿಲ್ಲದೆ |
ಅಳುಲುತ್ತ ತೊಳಲುತ್ತ ಬರಲು        || ೧೪೫ ||

ಪರದೇಶಿಯಾಗಿ ಬೀದಿಗಳಲ್ಲಿ ತಿರುಗುವ |
ತರಳನ ಕರೆದು ಕುಳ್ಳಿರಿಸಿ ||
ತರುಣಿಯರಾ ಪುರದೊಳಗಿರ್ಪರೆಲ್ಲರು |
ಪರಮ ಸುಂದರನನು ಕಂಡು          || ೧೪೬ ||

ಯಾರ ನಂದನನೀತನ್ಯಾರೊ ನೃಪಾತ್ಮಜ |
ಚಾರು ಲಕ್ಷಣ ಶೀಲವಂತ ||
ಪಾರಮಾರ್ಥದೊಳೆಮ್ಮ ಬಾಲರ ಜೊತೆಯೊಳೀ |
ಪೋರನ ಸಲಹುವೆವೆಂದು || ೧೪೭ ||

ಕರೆದು ಮೋಹದಿ ತಮ್ಮ ಭವನಕೆ ಸತಿಯರು |
ಪರಿಮಳ ಗಂಧವ ತೀಡಿ ||
ಮೆರೆವ ಕಸ್ತುರಿತಿಲಕವಿಟ್ಟಾ ಬಾಲಕನಿಂಗೆ |
ಕುರುಳ ಬಾಚುತ ವೀಳ್ಯವಿತ್ತು         || ೧೪೮ ||

ಪರಮ ಷಡ್ರಸದನ್ನದಿಂದ ಭೋಜನ ಗೈಸಿ |
ತರಳರೊಡನೆ ಮಲಗಿಸುತ ||
ಪರರಾದರೇನಿಂಥ ಹರಿಯ ಭಕ್ತನನತಿ |
ಕರುಣದಿ ಸಲಹುತ್ತಲಿರಲು  || ೧೪೯ ||

ರಾಗ ಮಧುಮಾಧವಿ ತ್ರಿವುಡೆತಾಳ
ತರಳರೊಡನಾಡುತ್ತ ಕುವರನು |
ಪುರದ ಬೀದಿಯೊಳಿರಲಿಕೊಂದಿನ |
ಕರಕೆ ಸಿಕ್ಕಿದುದೊಂದು ವೃತ್ತಾ | ಕಾರ ಶಾಲಗ್ರಾಮವು  || ೧೫೦ ||

ಹರುಷದಿಂದಲಿ ಕೊಂಡು ಬಾಲನು
ಕರಿಯ ವರ್ಣದ ಗೋಲಿಯೆನ್ನುತ |
ಲಿರಿಸಿದನು ಬಾಯೊಳಗೆ ಸುಲಭದಿ | ಬೇರೆ ಸ್ಥಳ ತನಗಿರದಿರೆ     || ೧೫೧ ||

ತರಳ ಭೋಜನಗೈವ ಸಮಯದಿ |
ಕರಕೆ ಕೊಂಡರ್ಚಿಸುತಲನುದಿನ |
ಪರಮ ನೈವೇದ್ಯಗಳ ಗೈಯುತ | ಉಣ್ಣುತಿರಲಾ ಬಾಲನು        || ೧೫೨ ||

ರಾಗ ಭೈರವಿ ಝಂಪೆತಾಳ
ಇರಲೊಂದು ದಿನ ದುಷ್ಟಬುದ್ಧಿಯೆಂಬುವ ಸಚಿವ |
ಹರುಷದಿಂ ತನ್ನ ಗೃಹದೊಳಗೆ ||
ಧರಣಿಯಮರರ ಕರೆಸಿ ಭೋಜನವ ಗೈಸುವರೆ |
ಕಿರಿಯ ಸುತನಹನಮಲನೊಡನೆ     || ೧೫೩ ||

ಕಂದ ಕೇಳ್ ಪಿತೃಕಾರ್ಯವಿಂದು ಸಂಭವಿಸಿಹುದು |
ಒಂದು ಶತ ವಿಬುಧರನು ಕರೆಸು ||
ಗಂಧಪುಷ್ಪಾಕ್ಷತೆಯನಿತ್ತು ಭೋಜನಗೈಸಿ |
ಚಂದದಿಂ ಪೂಜಿಸುವೆನೀಗ || ೧೫೪ ||

ಪಿತನ ವಾಕ್ಯವ ಕೇಳುತಮಲ ಸಂಪ್ರೀತಿಯಲಿ |
ಪೃಥಿವಿಸುರರಿಗೆ ಬಂದು ನಮಿಸಿ ||
ಮತಿವಂತರೆಮ್ಮಲ್ಲಿ ಭೋಜನಕೆ ಬಹುದೆನ್ನು |
ತತಿ ಜವದಿ ಪೇಳಿ ನಡೆಯಲ್ಕೆ         || ೧೫೫ ||

ರಾಗ ಘಂಟಾರವ ಏಕತಾಳ
ತಟ್ಟನೇಳಿರಿ ದ್ವಿಜರು ಭೋಜನಕೀಗ |
ದುಷ್ಟಬುದ್ಧಿಯು ಕಾದುಕೊಂಡಿಹ | ಸಿಟ್ಟು ಬರ್ಪುದು ತಡೆದರೆ      || ೧೫೬ ||

ಸೋಮಜೋಯ್ಸರು  ಮಂಜಯ್ಯ ಉಡುಪರು |
ಭೀಮಭಟ್ಟರು ನಾರ್ಣುಪಾಧ್ಯರು | ಮಡಿಯ ಚೀಲವ ಕೊಳ್ಳಿರಿ     || ೧೫೭ ||

ಮಂಡಿಗೆ ಲಾಡು ಫೇಣಿ ಚಿರೋಟಿಯು |
ಸಂಡಿಗೆಯು ಕಾಯ್ಗಡುಬು ಪಾಯಸ | ಉಂಡು ತೀರದು ಇಂದಿಗೆ            || ೧೫೮ ||

ಹಣ್ಣುಗಡ್ಡದ ಸುಬ್ಬಾಭಟ್ಟರೆ ನಿಮ್ಮ |
ಸಣ್ಣ ಮಾಣಿಯ ಕರಿರಿ ಬಪ್ಪುದು | ಎಣ್ಣೆಮೆಣಸಿನ ಖರಚಿಗೆ          || ೧೫೯ ||

ಕಂದ
ಬರುತಿಹ ಭೂಸುರವರ್ಯರ |
ಹರುಷದಿ ಕರೆತಂದಾಸನವೀಯುತೆ ಸಚಿವಂ |
ಪರಿ ಪರಿ ಷಡ್ರಸಭೋಜ್ಯವ |
ವಿರಚಿಸಿ ಬಡಿಸಲ್ ಭುಂಜಿಸಿ ನಲಿಯುತಲಾಗಳ್         || ೧೬೦ ||

ರಾಗ ಸುರುಟಿ ಏಕತಾಳ
ಹಸನವಾಯ್ತು ಮಂತ್ರಿ | ಮನಸಿಗೆ | ಕುಶಲವು ಸ್ವಾತಂತ್ರಿ ||
ಎಸಗಿಹ ಭೋಜ್ಯದಿ ತೃಪ್ತರಾಗಿರುವೆವು |
ಉಸಿರುವುದೇನಿದೆ ಧಾರ್ಮಿಕ ಕೇಳೈ            || ೧೬೧ ||

ಒರೆಯುತಲೀ ತೆರದಿ | ವಿಬುಧರು | ಹರುಷದಿ ವಿಧವಿಧದಿ ||
ಕರದೊಳು ವೀಳ್ಯವ ಮಡಿಸುತ ಕುಳ್ಳಿರೆ |
ತರಳರೊಳಾಡುತ ಕೇರಳಪತಿಸುತ || ೧೬೨ ||

ಮೆರೆಯುತ ಬರೆ ಬೇಗ | ವಿಬುಧರು | ತರಳನ ಕಂಡಾಗ ||
ಪರಮ ಲಕ್ಷಣಯುತದಾರ ಕುಮಾರನು |
ಒರೆಯೆನೆ ದುರ್ಮತಿ ಪೇಳಿದನವರಿಗೆ            || ೧೬೩ ||

ರಾಗ ಕೇದಾರಗೌಳ ಝಂಪೆತಾಳ
ತಿರಿದು ತಿನ್ನುವ ಬಾಲರು | ಈ ಪುರದೊ | ಳಿರುತಿಹರು ಬಹಳ ಜನರು ||
ತರಳನೀತನ ಪಡೆದನು | ಯಾರೊ ನಾ | ನರಿಯೆ ಪಾಮರನಲ್ಪನು        || ೧೬೪ ||

ಎನ್ನ ರಾಜ್ಯದ ಕಾರ್ಯದಿ | ನಾನಿರ್ಪು | ದನ್ನು ತ್ಯಜಿಸುತ ವ್ಯರ್ಥದಿ ||
ಸಣ್ಣ ಜನರ ವಿಚಾರವು | ಸರಿಯಲ್ಲ | ವೆನ್ನುವುದು ನೃಪಧರ್ಮವು || ೧೬೫ ||

ಒರೆಯಲೀ ಪರಿ ಕೇಳುತಾ | ದ್ವಿಜರಾಗ | ಲರುಹಿದರು ಬಾಲನೀತ ||
ಪರದೇಶಿಯಲ್ಲವಯ್ಯ | ಲಕ್ಷಣದಿ | ದೊರೆಕುವರ ಕೇಳು ನುಡಿಯ || ೧೬೬ ||

ಮುಂದೆ ಕುಂತಳ ನಗರಿಗೆ | ದೊರೆಯಹನು | ಚಂದದಿಂದೀ ಬಾಲಗೆ ||
ತಂದು ರಕ್ಷಿಸಿ ವಿದ್ಯವ | ಕಲಿಸು ಮುದ | ದಿಂದ ಮಾಡೀ ಕಾರ್ಯವ         || ೧೬೭ ||

ವಾರ್ಧಕ
ಕ್ರೂರ ಮಕರಗಳಿಂದ ತುಂಬಿರ್ದ ಮಡುವಿನ ಗ |
ಭೀರ ನಿರ್ಮಲ ಜಲವು ಶೋಭಿಸುವ ತೆರನಂತೆ |
ಘೋರತರ ವಿಷವ ತನ್ನಾತ್ಮದೊಳಗಾವರಿಸಿ ಭೂರಿ ವಿನಯವ ತೋರುತ ||
ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ |
ದಾರಕರ ನುಡಿಗೊಪ್ಪಿದೋಲಿರ್ದು ಬಳಿಕ ಸ |
ತ್ಕಾರದಿಂದಾ ವಿಪ್ರರಂ ಕಳುಹಿ ದುರ್ಮತಿ ಕಠೋರಭಾವವ ತಾಳುತ      || ೧೬೮ ||

ರಾಗ ಮಧ್ಯಮಾವತಿ ಅಷ್ಟತಾಳ
ಘಾತವಾಯಿತಲ್ಲ | ಮನಕೆ ಬಲ್ ವಿ | ಘಾತವಾಯಿತಲ್ಲ || ಪ ||

ಭೂತಳಾಧಿಪ ಚಿತ್ರಧ್ವಜನು | ಬಹು |
ಪಾತಕಿ ಸುತವರ್ಜಿತನು ||
ಈತನಂತ್ಯದಿ ಕುಂತಳವ ಮಮ | ಜಾತ ಮದನನಿಗಿತ್ತು ಎನ್ನಯ |
ಖ್ಯಾತಿಯನು ಪಸರಿಸುತ ಮೆರೆಮೆಂ | ಬಾತುರದಿ ನಾನಿರ್ದೆನೈಸಲೆ        || ೧೬೯ ||

ಧರಣಿಯಮರರೆಂದಾ ನುಡಿಯು | ತಪ್ಪ |
ಲರಿಯದು ಎನ್ನಾಶಾಕೃತವು ||
ಬರಿದೆಯಾದುದು ನರಿಯು ಗಗನದಿ | ಮೆರೆವ ತರಣಿಯ ತಿಂಬೆನೆನುತಲಿ |
ಗರುವಗೊಂಡಿಹ ತೆರದಿ ಪಾಮರ | ತರಳನೆನಗರಿಯಾದನಕಟಾ           || ೧೭೦ ||

ಬೇರೆ ಯೋಚಿಪೆ ಯತ್ನಂಗಳನು | ಈ |
ಪೋರನ ತರಿಯಲು ನಾನು ||
ದಾರಿಯೊಂದಿದೆ ಚಿಗುರನುಗುರಿನೊ |  ಳೂರಿ ಮುರಿಯುವ ತೆರನ ಮಾಳ್ಪೆನು |
ಕ್ರೂರಕರ್ಮಿಗಳಾದ ಕಟುಕರ |  ಚಾರುಮುಖದೊಳು ಕರೆಸಿ ಪೇಳುವೆ      || ೧೭೧ ||

ಭಾಮಿನಿ
ಚರರೊಡನೆ ಕಟುಕರನು ಕರೆಸಲು |
ಪರಮ ಘೋರಾಕಾರದೊಡಲಿನ |
ದುರುಳರಾ ಕ್ಷಣ ಜವನ ಭಟರೆಂಬಂತೆ ಬಂದೆರಗೆ ||
ಹರುಷದಿಂ ಮನ್ನಿಸುತ ಸಚಿವನು |
ತರಳನಿವನೆನ್ನರಿಯು ವಿಪಿನಕೆ |
ಭರದಿ ಕೊಂಡೊಯ್ದರಿದು ಕುರುಹನು ತಂದು ತೋರುವುದು      || ೧೭೨ ||

ರಾಗ ಲಾವಣಿ
ದುಷ್ಟಬುದ್ಧಿಗೆರಗಿ ಝೋಕಿನಲಿ | ಕಟುಕರವನ |
ರಟ್ಟೆಯನ್ನು ಪಿಡಿದು ವೇಗದಲಿ                    ||ಪಲ್ಲವಿ||

ದುಷ್ಟ ಬಾ ಬಾರೆಮ್ಮ ಕರಕೆ | ಥಟ್ಟನೀ ದಿನ ಸಿಕ್ಕಿಬಿದ್ದೆ |
ಕುಟ್ಟೆವು ನಿನ್ನೀ ತಲೆಯ ನೋಡೆಲೊ | ಎಲೆ ಪೋರ ನಿನ್ನ |
ನಟ್ಟಡವಿಗೊಯ್ವೆವು ಬಾರೆಲೊ         || ೧೭೩ ||

ಅರರೆ ಮಂತ್ರಿ ಸಾಮ್ಯೋರಿಂಗೆ | ದುರುಳ ವೈರಿಯಾದ ಮ್ಯಾಗೆ |
ಕರುಣವೇನು ಕಲ್ಲುಮುಳ್ಳೊಳು | ಎಳೆ ಎಳೆದಿವನ |
ಕೊರಳನರಿಯಬೇಕು ತ್ವರೆಯೊಳು   || ೧೭೪ ||

ಭಾಮಿನಿ
ತರಳನನು ಪಿಡಿದೆಳೆದು ಕಟುಕರು |
ಪರಮ ಘೋರಾಕಾರ ವಿಪಿನಕೆ |
ತರಲು ಕಾಲೊಡೆದಾಗ ಶೋಣಿತಧಾರೆ ಪರಿವುತಿರೆ ||
ಉರಗವದನದೊಳಿರ್ಪ ಮೂಷಿಕ |
ತೆರದಿ ಬಾಲನು ಹಲುಬಿ ಬಾಯೊಳ |
ಗಿರುವ ಶಾಲಗ್ರಾಮ ಮಹಿಮೆಯೊಳರಿತು eನದಲಿ       || ೧೭೫ ||

ವಾರ್ಧಕ
ಬಲಿಯಂತೆ ದಾನಮಂ ಗೆಯ್ಯಲಸದಳಮೆನಗೆ |
ಚೆಲುವ ಪ್ರಹ್ಲಾದ ಧ್ರುವರಂದದೋಳ್ ಸುದೃಢದಿಂ |
ನಿಲದೆನ್ನ ಸಲಹು ರುಕ್ಮಾಂಗದಾಖ್ಯನ ತೆರದೊಳೊಲಿಸಲಾರೆನು ವ್ರತದಲಿ ||
ಹರಿಯೆ ನಾರದನಂತೆ ಭಜಿಸಲಾರೆನು ನಿನ್ನ |
ಸಿರಿಚರಣ ಪಂಕಜದ ಮಧುರ ಮಕರಂದಮಂ |
ನಿರತ ಸೇವಿಪ ದಿವ್ಯ ನಾಲಿಗೆಯನಿತ್ತೆನ್ನ ಪೊರೆಯಬೇಹುದು ಕರುಣದಿ      || ೧೭೬ ||

ರಾಗ ಸಾವೇರಿ ಆದಿತಾಳ
ಪಾಲಿಸು ಕಮಲನೇತ್ರ | ಹರಿ ವಾಸುದೇವ |
ಲೀಲಾಮಾನುಷ ಚಾರಿತ್ರ ||
ಫಾಲಾಕ್ಷಸಖ ಕಂಸಾರಿ | ವಾಮನಮೂರ್ತೇ |
ನೀಲಾಂಗ ದುರಿತಹಾರಿ     || ೧೭೭ ||

ದೇವ ನಿನ್ನಂಶಾಂಶದಿ | ದಾನವ ಮನುಜ |
ದೇವತೆ ಪಕ್ಷಿ ಮೃಗದಿ ||
ಆವ ಚರಾಚರವ | ಹೃದಯದೊಳಿಟ್ಟು |
ಕಾವೆ ದಯದಿ ಕೇಶವ        || ೧೭೮ ||

ನಿನ್ನ ನಾಭಿಯ ಕಮಲದಿ | ಚತುರಾಸ್ಯ ತಾನು |
ತ್ಪನ್ನನಾದನು ಮೂಲದಿ ||
ನಿನ್ನಾಜ್ಞೆಯಾದ ತೆರದಿ | ಗೈವೆನು ಸೃಷ್ಟಿ |
ನಿನ್ನ ಬಿಟ್ಟಿಲ್ಲ ಜಗದಿ           || ೧೭೯ ||

ರಾಗ ಶಂಕರಾಭರಣ ತ್ರಿವುಡೆತಾಳ
ಕಿವಿಗಳೊಳು ದಶ ದಿಕ್ಕು ನಾಸಾ | ವಿವರದೊಳಗಶ್ವಿನಿಗಳು |
ಪವನಸಖ ಮುಖದೊಳಗೆಯುದರದಿ | ಸಪ್ತಶರಧಿ        || ೧೮೦ ||

ಗಿರಿನಿಕರದೀಪ್ತಿಗಳು ಧಾರಾ | ಧರನಿಕರಕೇಶಂಗಳು |
ತರುನಿಕರರೋಮಗಳು ಶ್ವಾಸವೆ | ಯಗ್ನಿಸಖನು        || ೧೮೧ ||

ಪರಮ ನಿಗಮಕೆ ಮತ್ಸ್ಯ ಮಂದರ | ಧರಣಿಗೋಸುಗ ಕೂರ್ಮನು |
ಧರಣಿಗಾಗಿ ವರಾಹ ನರಹರಿ | ಶರಣಗಾಗಿ     || ೧೮೨ ||

ತಿರಿವ ಭಿಕ್ಷುಕ ಬಲಿಗೆ ಪರಶುವ | ಧರಿಸಿ ಕ್ಷತ್ರಿಯಮಥನಕೆ |
ದುರುಳ ದಶಕಂಧರಗೆ ಮನುಜನು | ತಿಳಿವರ್ಯಾರು   || ೧೮೩ ||

ಮುರ ನರಕ ಕಂಸಾದಿ ಮಥನಕೆ | ಹರಿಯು ತ್ರಿಪುರರ ತರಿಯಲು |
ಪರಮ ಬೌದ್ಧ ಯುಗಾಂತ ಕಲ್ಕಿಯೆ | ಪಾಲಿಸೆನ್ನ         || ೧೮೪ ||

ಹಲವು ದಿನಗಳ ತರ್ಪಣದ ಜಲ | ಜಲಧಿಗೈದುವ ತೆರದಲಿ |
ಹಲವು ದೈವದ ಭಜನೆಯರ್ಪಿತ | ವಹುದು ನಿನಗೆ       || ೧೮೫ ||

ಭಾಮಿನಿ
ಘೋರ ಕಾನನದೊಳಗೆ ಬಾಲನ |
ಕ್ರೂರ ಕರ್ಮಿಗಳಬ್ಬರಿಸಿ ಖತಿ |
ಯೇರುತಾತನ ಚಂಡಿಕೆಯ ಪಿಡಿದಾಗ ಬಗ್ಗಿಸುತ ||
ಪಾರಮಾರ್ಥಿಕವೇಕೆ ವೇಗದಿ |
ಪೋರನನು ಛೇದಿಸಿಯೆ ಕುರುಪನು |
ತೋರಬೇಕೆಮ್ಮೊಡೆಯಗೆನ್ನುತಲೆತ್ತೆ ಖಡ್ಗವನು            || ೧೮೬ ||

ರಾಗ ನೀಲಾಂಬರಿ ರೂಪಕತಾಳ
ಹಿಂದಿನ ಭವದೊಳಗ್ಯಾರನು | ಬಂಧಿಸಿ ಹನನವ ಗೈದೆನೊ |
ಇಂದಿಗೆ ಪರರಿಂ ಮರಣವು | ಬಂದುದೆ ನಗಧರನೆ       || ೧೮೭ ||

ಹೆತ್ತಿಹ ಮಾತಾಪಿತರನು | ಮತ್ತೇನಾದರೊ ಕಾಣೆನು |
ಸ್ವಸ್ಥದಿ ಮನೆ ಮನೆ ಬೇಡುತ | ನಿತ್ಯದೊಳಿರುತಿರ್ದೆ     || ೧೮೮ ||

ಪರದೇಶಿಯು ನಾನ್ಯಾರಿಗು | ಕೊರತೆಯ ಪುಟ್ಟಿಸಲಿಲ್ಲವು |
ನಿರಪರಾಧಿಯ ಕೊಲ್ವರು | ಹರಿ ನೀ ಕಾಪಾಡೊ          || ೧೮೯ ||

ರಾಗ ಕಾಪಿ ಅಷ್ಟತಾಳ
ತರಳನಿಂತಳುವುದ ಕಂಡು | ಆ |
ದುರುಳರು ಮರುಕವಗೊಂಡು ||
ಅರಿಯದ ಬಾಲನ ಕೊಲುವರೆ ದುರ್ಮತಿ |
ಯೊರೆದನು ಪಾಪಿಯು ನಿರಪರಾಧಿಯನೀಗ   || ೧೯೦ ||

ಹಿಂದೆ ಪಡೆದ ಕರ್ಮವೆಂದು | ಈ |
ಕಂದ ತಾನಳುವನಿಂದು ||
ಮಂದಮತಿಗಳೆಮ್ಮ ಪೂರ್ವಕಲ್ಮಷದಿಂದ |
ಬಂದಿದೆಮಗೆ ಇಂಥ ಕಟುಕರ ವೃತ್ತಿಯು        || ೧೯೧ ||

ಕೊಲಬಾರದೀ ತರಳನನು | ಕೊಂದು |
ಫಲವೇನು ಶಿಶುಹತ್ಯಂಗಳನು ||
ಗಳಿಸಲ್ಯಾತಕೆಯೆಂದು ಬಾಲನ ಮುದ್ದಿಸಿ |
ಚೆಲುವ ಪಾದದೊಳಾರು ಬೆರಳಿರೆ ಕಂಡಾಗ   || ೧೯೨ ||

ಕುರುಹ ತೋರಿಸಬೇಕೆಂದೆನುತ | ನಮ |
ಗೊರೆದಿಹ ಸಚಿವನು ಮಾತ ||
ಕಿರುಬೆರಳಿನೊಳೊಂದು ಅಧಿಕವಾಗಿಹುದನ್ನು |
ಭರದಿ ಕತ್ತರಿಸಿಕೊಂಡ್ಹೋಗಿ ತೋರಿಸುವೆವು   || ೧೯೩ ||

ವಾರ್ಧಕ
ಐದಲ್ಲದೊಂದು ಬೆರಳಿರ್ಪುದಂ ಬಳಿಕವರು |
ಕೊಯ್ದು ಕುರುಪಂ ಕೊಂಡು ತಮ್ಮ ದಾತಾರನಡೆ |
ಗೈದಿ ತೋರಿಸಲವನವರ್ಗಳಂ ಮನ್ನಿಸುತ ಕಳುಪಿ ಸುಖದೊಳಗಿರುತಿರೆ ||
ಐದೆ ವರುಷದ ಬಾಲನಿತ್ತ ವಿಪಿನಾಂತರದಿ |
ಕೊಯ್ದ ಬೆರಳಿನ ಗಾಯದುರಿಗೆ ಹಮ್ಮೈಸುತ್ತ |
ಬೈದು ತನ್ನಯ ವಿಧಿಯ ಘೋರಡವಿಯೊಳಗೆಂತು ಬಾಳಿದಪೆನಕಟೆನ್ನುತ || ೧೯೪ ||