ರಾಗ ಭೈರವಿ ಅಷ್ಟತಾಳ
ಬಂದಾ ದುರ್ಮತಿಯ ಕಂಡು | ಸೌರಾಷ್ಟ್ರೇಶ | ನೆಂದನು ಕೋಪಗೊಂಡು
ಇಂದೆನ್ನ ಶರದೊಳು ತನುವನೀಗಲು ಇಂಥ |
ಮಂದಬುದ್ಧಿಯು ಬಂದಿದೆ   || ೬೭ ||

ಶೂರಸೇನನೆ ಕೇಳೆಲೋ | ಕಪ್ಪವನಿತ್ತು | ಭೋರನೆ ನೀ ತೆರಳೆಲೋ ||
ವೀರನಾದಡೆ ಚಾಪವಿಡಿದು ಸಂಧಾನಿಸು |
ಕ್ರೂರ ಕೋಪಗಳ್ಯಾತಕೋ || ೬೮ ||

ಎನೆ ಕೇಳಿ ನೃಪವರನು | ದುರ್ಮತಿ ಕೇಳು | ಜನಪತಿಯಾಗಿಹೆನು ||
ಘನವೆ ಮಂತ್ರಿಗೆ ಸೋತು ಕಪ್ಪವನೀವುದೆಂ |
ದೆನುತ ಶರವನೆಚ್ಚನು       || ೬೯ ||

ಬರಿಯಹಂಕಾರಗಳು | ಎನ್ನೊಳು ತೋರ್ಪೆ | ಧರಣಿಪ ನೋಡೀಗಳು ||
ಶರವೆಲ್ಲಿ ಪೋದುದೆಂದೆನುತಲಾಕ್ಷಣದೊಳು |
ಮುರಿದು ನಿಂದಿರೆ ಸಚಿವ   || ೭೦ ||

ರಾಗ ಮಾರವಿ ಮಟ್ಟೆತಾಳ
ಮರುಳೆ ಸಚಿವ ಹುಲ್ಲು ಶರವ ತರಿದೆನೆನುತಲಿ |
ಗರುವೆ ಗೊಂಬೆ ಭಾಪು ತಾಳು ತಾಳೆನುತ್ತಲಿ || ೭೧ ||

ಮಸೆದ ಸಾಣೆಯಲಗಿದನ್ನು ಕಡಿಕಡಿಯೆನುತ |
ವಸುಧೆಪಾಲ ಶರದ ಮಳೆಯ ಸುರಿದ ಗಜರುತ          || ೭೨ ||

ದಿವ್ಯ ವಿಶಿಖದಿಂದ ಚಾಪಶರವ ಕಡಿದನು |
ಹವ್ಯವಹನನೆನಲು ಸಚಿವ ಜ್ವಲಿಸಿ ನಿಂದನು   || ೭೩ ||

ಕ್ರುದ್ಧನಾಗಿ ನೃಪತಿ ಖಡ್ಗ ತೂಗುತೆರಗಲು |
ಬದ್ಧವೈರದಿಂದ ಸಚಿವ ಮುರಿದು ಕೆಡಹಲು    || ೭೪ ||

ಪೂತು ಮಝರೆಯೆನುತ ಗದೆಯೊಳೆರಗಲಾಕ್ಷಣ |
ಖಾತಿಯಿಂದ ಸಚಿವ ಸೆಳೆದನತಿ ವಿಚಕ್ಷಣ      || ೭೫ ||

ಮುಷ್ಟಿಯನ್ನು ಬಲಿದು ಭೂಪನೆತ್ತಿ ಹೊಯ್ಯಲು |
ದುಷ್ಟಬುದ್ಧಿಯವನ ಗಳವ ಪಿಡಿದು ಕೆಡಹಲು   || ೭೬ ||

ಭಾಮಿನಿ
ಶೂರಸೇನನ ಕಬರಿಯನು ಪಿಡಿ |
ದಾರುಭಟಿಸುತ ಸಚಿವ ರೌದ್ರದಿ |
ಕೂರಸಿಯ ಗಳಕಿತ್ತು ಪೇಳಿದನಾಗ ಮೂದಲಿಸಿ ||
ಕ್ರೂರ ಪಾಪಿಯೆ ನಿನ್ನನೀಕ್ಷಣ |
ಸಾರಿಸುವೆ ಯಮಪುರಕೆ ಕಾಯುವ |
ಧೀರರಾರೈತಹರು ಕರೆಯೆಂದೆನುತ ಹೂಂಕರಿಸೆ         || ೭೭ ||

ರಾಗ ಮಧುಮಾಧವಿ ಏಕತಾಳ
ಕಾಲನಂದದೊಳಿರ್ಪ ಸಚಿವನ ನೋಡಿ |
ಭೂಲಲಾಮನು ದೈನ್ಯದಿಂದ ಗೋಳಾಡಿ       || ೭೮ ||

ತಪ್ಪು ಮಾಡಿದೆನೆನ್ನ ಸಲಹೊ ನೀ ದಯದಿ |
ಕಪ್ಪ ನಿಷ್ಕಾಯುತ ಕೊಡುವೆ ವಾರ್ಷಿಕದಿ       || ೭೯ ||

ಕ್ಷಮಿಸಬೇಕೆನೆ ಕೇಳಿ ಹರುಷಗೊಳ್ಳುತ್ತಾ |
ಕುಮತಿಯೆಂದನು ಕಪ್ಪ ತರಿಸೀಗೆಂದೆನುತ    || ೮೦ ||

ರಾಗ ಕೇದಾರಗೌಳ ಝಂಪೆತಾಳ
ಧರಣಿಪತಿಯಾ ಕ್ಷಣದೊಳು | ಸಚಿವನನು | ಕರಕೊಂಡು ಪುರಕಾಗಳು ||
ಪರಿಪರಿಯ ಮನ್ನಿಸುತಲಿ | ವಸನವಾ | ಭರಣ ರತ್ನವ ಮುದದಲಿ           || ೮೧ ||

ತಂದು ಕಾಣಿಕೆಯೀಯುತ | ಮಂತ್ರಿಯೊಡ | ನೆಂದನಾ ಕ್ಷಣದಿ ನಗುತ ||
ಹಿಂದೆ ಕೇರಳಧೀಶನು | ಮೇಧಾವಿ | ಬಂದೆನ್ನ ಜಯಿಸಿರ್ಪನು    || ೮೨ ||

ಭೂರಿ ಬಲವಿಹುದವನೊಳು | ಸಂಗರದಿ | ಶೂರಗಿದಿರಿಲ್ಲ ಕೇಳು |
ವೀರ ನಿನ್ನಯ ಸೈನ್ಯವ | ಕಳುಹಿಸಲು | ಸಾರಿ ಕೊಡುವೆನು ಸಮರವ      || ೮೩ ||

ಧುರದೊಳಾ ದುರುಳನನ್ನು | ತರಿದವನ | ಪುರವನ್ನು ಕೈಗೊಂಬೆನು ||
ಎರಡು ರಾಜ್ಯದ ಕಷ್ಟವ | ನಿನಗೀವೆ | ಕರುಣಿಸೈ ತವ ಸೈನ್ಯವ  || ೮೪ ||

ನುಡಿಯ ಕೇಳುತ ಸಚಿವನು | ಮುಂದೆನಗೆ | ಕೊಡು ಕೋಟಿ ದ್ರವ್ಯವನ್ನು ||
ಒಡನೆ ಪೋಗೆಂದೆನುತಲಿ | ಬೀಳ್ಕೊಟ್ಟ | ಸಡಗರದಿ ಬಲಸಹಿತಲಿ           || ೮೫ ||

ರಾಗ ಘಂಟಾರವ ಮಟ್ಟೆತಾಳ
ಭರದಿ ಸಚಿವನ | ಸೈನ್ಯ ಕೂಡುತ |
ಧರಣಿಪಾಲ ತಾ | ನೇಮಗೊಳ್ಳುತ   || ೮೬ ||

ಪೊರಡೆ ಭೂಪನು | ಬೇಗ ಸಚಿವನು |
ತೆರಳಿ ಕುಂತಳ | ಪುರವ ಕಂಡನು   || ೮೭ ||

ಮೂರು ಪಯಣದಿ | ಸಾರಿ ತ್ವರ್ಯದಿ |
ಕೇರಳಾಪುರ | ಕೈದೆ ಭೂವರ         || ೮೮ ||

ಬಂದು ಕೋಟೆಯ | ಸುತ್ತ ಸೇನೆಯ |
ಚಂದದಿಂದಲಿ | ನಿಲಿಸಿ ತ್ವರೆಯಲಿ    || ೮೯ ||

ಭಾಮಿನಿ
ಚರನನೋರ್ವನ ಕರೆದು ಕೇರಳ |
ದರಸನಲ್ಲಿಗೆ ತೆರಳು ಬೇಗನೆ |
ಧುರದಿ ಪಿಂದಕೆ ಜಯಿಸಿ ಎನ್ನೊಳು ಕೊಂಡ ಕಪ್ಪವನು ||
ಹರುಷದಿಂದಲಿ ಕೊಂಡು ಎನ್ನಡಿ |
ಗೆರಗುತೀಕ್ಷಣವಿತ್ತು ಸಾರಲಿ |
ಭರದಿ ಕಾಯುವೆನವನ ಹೀಗೆಂದೆನುತ ಕಳುಹಿದನು     || ೯೦ ||

ವಾರ್ಧಕ
ನರನೆ ಕೇಳಿತ್ತ ಮೇಧಾವಿ ನೃಪನೈತಂದು |
ಪರಮ ಸಿಂಹಾಸನದಿ ಮಂಡಿಸುತ ಜೋಯಿಸರ |
ಕರೆಸಿ ಸತ್ಕರಿಸುತ್ತ ಕುಳ್ಳಿರಿಸಿ ವಿಭವದಿಂ ಚರಣಕಾನತನಾಗುತ ||
ತರಣಿಯುದಯದೊಳೆನ್ನ ಸತಿ ಪದ್ಮರೇಖೆಯೊಳ್ |
ತರಳ ಜನಿಸಿಹನಿಂದು ಜನನಸಮಯಗಳೆಂತೊ |
ಕರುಣದಿಂದಲೆ ಗುಣಿಸಿ ನೋಡಿ ಪೇಳುವುದೆನಲ್ ಬೆರಳನೆಣಿಸುತಲೆಂದನು          || ೯೧ ||

ರಾಗ ಬೇಗಡೆ ಏಕತಾಳ
ಕೇರಳಾಧಿಪ ಲಾಲಿಸೈ ನುಡಿಯ | ನಿನ್ನಾತ್ಮಭವ ಗುಣ |
ಧೀರನಾಯುಷ್ಮಂತ ನೋಡಯ್ಯ ||
ಭೂರಿ ಭಾಗ್ಯನುದಾರಿ ವಿಕ್ರಮಿ | ವಾರಿಜಾಕ್ಷನ ಪಾದ ಕಿಂಕರ |
ತೋರುತಿದೆಯನುಮಾನ ಪೇಳ್ದರೆ | ಭೂರಿ ಚಿಂತೆಗಳುಂಟದೇತಕೆ          || ೯೨ ||

ದಿವದಿ ಮೂಲದೊಳಾದಿ ಚರಣದಲಿ | ಸಂಭೂತನಾಗಿಹ |
ಕುವರ ಮಾತಾಪಿತರು ಬೇಗದಲಿ ||
ಜವನ ಪುರವನು ಕಾಂಬರೆಂಬುದು | ವಿವರಿಸಲು ಸಂಕಟಗಳಾಪುದು |
ಭುವನಪತಿ ತರಿಸೀಗ ಶಿಶುವನು | ತವಕದಿಂದಲೆ ನೋಳ್ಪೆ ಚಿಹ್ನೆಯ        || ೯೩ ||

ನುಡಿಯ ಕೇಳುತಲಾಗ ಬಾಲನನು | ತಂದೀಯೆ ಪರಿಕಿಸಿ |
ಪೊಡವಿಪಾಲಗೆ ಪೇಳ್ದ ಭೂಸುರನು ||
ಎಡದ ಪಾದದೊಳಾರು ಬೆರಳಿವೆ | ಬಿಡದು ನಿಮಗೆ ಅರಿಷ್ಟವೆಂಬುದು |
ದೃಢದಿ ನಂಬಿಕೊ ನಾಥನಿಲ್ಲದೆ | ಹುಡುಗನಿಂಗತಿ ಕಷ್ಟವಪ್ಪುದು  || ೯೪ ||

ಭಾಮಿನಿ
ಧರಣಿದೇವನ ನುಡಿಗೆ ಧರಣಿಪ |
ಸೊರಗಿ ಚಿಂತೆಯ ತಾಳಿ ಮನದೊಳು |
ಹರಿಯೆ ಗತಿಯೆಂದೆನುತ ಧನಧಾನ್ಯಾದಿ ದಾನವನು ||
ಹರುಷದಿಂ ಭೂಸುರರಿಗೀಯುತ |
ಲಿರಲು ಸೌರಾಷ್ಟ್ರೇಶ ಕಳುಹಿದ |
ಚರನು ನಡೆತಂದಾಗ ಪೇಳಿದ ನೃಪಗೆ ವಿಭವದಲಿ       || ೯೫ ||

ರಾಗ ಮುಖಾರಿ ಆದಿತಾಳ
ಕೇರಳಾಧಿಪ ಲಾಲಿಸಯ್ಯ | ಸೌರಾಷ್ಟ್ರೇಶ |
ಶೂರಸೇನನು ಪೇಳ್ದ ಬಗೆಯ || ಪ ||

ಭೂರಿ ಮಾರ್ಬಲ ಕೂಡೀಗವನು | ಬಂದುಪವನದಿ |
ಡೇರೆಯನಿಕ್ಕಿ ಕಾಯ್ದಿರುವನು ||
ಮೀರಿಯವನನೀ ಬಂಧಿಸಿ ಪಿಂದಕೆ |
ಭಾರಿಯ ಕಪ್ಪವ ಸೆಳೆದುಕಿಮ್ಮಡಿ |
ಭೋರನೆ ಕೊಟ್ಟೀಗೆರಗಲು ಬದುಕುವೆ |
ಧಾರಿಣಿಪಾಲನ ನೇಮಗಳಿದು ಕೇಳ್ || ಕೇರಳಾಧಿಪ   || ೯೬ ||

ಎಂದು ಈ ಪರಿ ಪೇಳಿ ನಿನ್ನ | ಕರೆತರೆ ಬೇಗ |
ದಿಂದಲಟ್ಟಿಹ ಭೂಪತಿಯೆನ್ನ ||
ಇಂದೀಗವನಿಗೆ ಕಪ್ಪವನೀಯದೆ |
ಮಂದಮತಿಯು ನೀ ರಣಕೈತಂದರೆ |
ಮುಂದಕೆ ಜೀವದೊಳಾಸೆಯನಿಡದಿರು |
ಬಂದಿದೆ ಐದಕ್ಷೌಹಿಣಿ ಸೇನೆಯು || ಕೇರಳಾಧಿಪ          || ೯೭ ||

ತಡಿಬಿಡಿ ಮಾಡದೀಗ ನೀನು | ಬರದಿರೆ ನೋಡು |
ಹುಡುಗ ಸಿಪಾಯಿ ನಾ ಬಿಡೆನಿನ್ನು ||
ಸಡಗರ ಸುಡು ಸುಡು ಕರವಿಡಿದೆಳೆಯುತ |
ಪೊಡವಿಪನಲ್ಲಿಗೆ ಬಿಡದೊಪ್ಪಿಸುವೆನು |
ಕಡೆಗಾಲವು ನಿನಗೊದಗಿದೆ ಸಹಜವು |
ನಡೆ ನಡೆಯೆನುತಲೆ ನಿಂದಿರೆ ಕಾಣುತ || ಕೇರಳಾಧಿಪ || ೯೮ ||

ರಾಗ ಘಂಟಾರವ ಏಕತಾಳ
ದೂತನೆಂದುದಕಾ ಕ್ಷಣ ನೃಪವರ  |
ಖಾತಿಯಲಿ ನೂಕಿಸುತಲವನನು |
ಸೂತನನು ಕರೆದೆಂದನು   || ೯೯ ||

ಎಲವೊ ಸಾರಥಿ ರಥಕೀಗ ವೇಗದಿ |
ಚಲಿಸುತಿಹ ಹಯಗಳನು ಬಂಧಿಸಿ |
ನಿಲಿಸು ಬರುವೆನು ಸಮರಕೆ           || ೧೦೦ ||

ಮಂದಿ ಮಾರ್ಬಲವೆರಸಿ ಸೇನಾನಿಯು |
ಚಂದದಿಂ ಬಹುದೆಂದು ಸಚಿವನಿ |
ಗೆಂದ ಭೂಪತಿಯಾಕ್ಷಣ     || ೧೦೧ ||

ತಂಡ ತಂಡದಿ ಬರುವ ಸೇನೆಯ ಕೂಡಿ |
ಕೊಂಡು ರಥಗಳನೇರಿಯಹಿತರ |
ಕಂಡು ಭೂಮಿಪ ಕ್ರೋಧದಿ || ೧೦೨ ||

ಬಾರೆಲೋ ಶೂರಸೇನನೆನ್ನಿದಿರೊಳು |
ಬಾರಿ ಸಮರದಿ ಗೆಲಿದೆ ಪಿಂದಕೆ |
ತೋರು ನಿನ್ನಯ ಸಹಸವ || ೧೦೩ ||

ಎಂದ ಮಾತಿಗೆ ಸೌರಾಷ್ಟ್ರ ಭೂಮಿಪ |
ನಂಧಕಾರಿಯ ತೆರದಿ ಗರ್ಜಿಸು |
ತೆಂದನಾ ಮೇಧಾವಿಗೆ       || ೧೦೪ ||

ರಾಗ ಮಾರವಿ ಏಕತಾಳ
ಎಲೆಯೆಲೆ ಕೇರಳಪಾಲಕನೆನ್ನೊಳು | ಛಲದೊಳು ನೀ ಕಾದಿ ||
ಸುಲಿದಿಹೆ ಕಪ್ಪವ ನಿನ್ನನು ತರಿದೀ | ಪೊಳಲನೆ ಪಾಲಿಪೆನು       || ೧೦೫ ||

ಯಾರ ಬಲದಿ ನೀ ಬಂದೆಯೊ ಎನ್ನೊಳು | ತೋರುವೆ ವಿಕ್ರಮವ ||
ಕ್ರೂರನೆ ಪಿಂದಕೆ ಸಲಹಿದೆ ನೊಮ್ಮೆಗೆ | ಭೋರನೆ ಕೊಲ್ಲುವೆನು  || ೧೦೬ ||

ಒಮ್ಮೆಗೆ ಕಪ್ಪವನಿತ್ತೆನು ಎಂಬುವ | ಹೆಮ್ಮೆಗಳ್ಯಾಕೀಗ ||
ತಮ್ಮ ದುಷ್ಕರ್ಮವೆ ತಮಗರಿಯಾಪುದು | ಸಮ್ಮತವಿದು ನೋಡು          || ೧೦೭ ||

ರಾಗ ಶಂಕರಾಭರಣ ಮಟ್ಟೆತಾಳ
ಕೇರಳೇಂದ್ರ ಗಜರುತಾಗ | ನೂರು ನೂರರಂತೆ ಶರವ |
ತೂರಿ ಶೂರಸೇನ ರಥವ | ಮುಚ್ಚಿ ಮುಸುಕಿದ            || ೧೦೮ ||

ಪುಡಿಯ ಗೈದು ಬರುವ ಶರವ | ಕೆಡೆದು ಸಿಂಹನಾದದಿಂದ |
ಧಡಿಗ ಶೂರಸೇನನಿರಲು | ಕಾಣುತಾ ಕ್ಷಣ     || ೧೦೯ ||

ಭಾರಿ ದಂಡ ಪರಶು ಮುಸಲ | ಮುದ್ಗರಂಗಳಿಂದ ಪೊಯ್ಯೆ |
ಶೂರಸೇನ ಕುಲಿಶ ಖಡ್ಗ | ದಿಂದ ಮುರಿದನು  || ೧೧೦ ||

ಕೆರಳಿ ಮೇಧಾವಿನೃಪನು | ಉರಗ ತಿಮಿರ ಶರವ ಬಿಡಲು |
ಗರುಡ ಸೂರ್ಯ ಶರದೊಳದರ | ಶಮಿಸಿ ನಿಂದಿರೆ      || ೧೧೧ ||

ರಾಗ ಭೈರವಿ ಏಕತಾಳ
ತೋರೈ ಸಹಸವನೆನುತ | ಆ | ಕೇರಳಪತಿ ಗರ್ಜಿಸುತ ||
ಧಾರಿಣಿ ಕಂಪಿಪ ತೆರದಿ | ಶರ | ತೂರುತಲಿರಲಾ ಕ್ಷಣದಿ           || ೧೧೨ ||

ಧನುವನೆ ಮುಕ್ಕಡಿ ಗೈದು | ನೃಪ | ಘನತರದಸ್ತ್ರವ ತೆಗೆದು ||
ಫಣೆಗದ ನೋಡುತ ಬಿಡಲು | ಶಿಖಿ | ಯೆನೆ ಜ್ವಲಿಸುತ ಶಿರ ಪೊಗಲು       || ೧೧೩ ||

ಭಾಮಿನಿ
ಶೂರಸೇನನ ಶರವು ಕೊರೆಯುತ |
ಕೇರಳೇಶನ ಫಣೆಯ ಭೇದಿಸೆ |
ಸೂರ್ಯಮಂಡಲದಂತೆ ಭೂಪನ ಶಿರವು ನೆಲಕುರುಳೆ ||
ಸಾರಥಿಯು ಕಂಡಾಗ ನೃಪನ ಶ |
ರೀರವನು ರಥದೊಳಗೆ ಮಲಗಿಸಿ |
ಭೂರಿವಿಕ್ರಮವನ್ನು ನೆನೆನೆನೆದಾಗ ದುಃಖಿಸುತ           || ೧೧೪ ||

ರಾಗ ನೀಲಾಂಬರಿ ಮಟ್ಟೆತಾಳ
ಧರಣಿಪಾಲ ಧರ್ಮಶೀಲ | ತೊರೆದು ನಿನ್ನನು ||
ಪರರ ಕೈಯೊಳೆಂತು ಮುಂದೆ | ಬಾಳಬೇಕಿನ್ನು | ಹೇಗೆ | ತಾಳಬೇಕಿನ್ನು  || ೧೧೫ ||

ತರುಣಿ ಪದ್ಮರೇಖೆ ಚಿಕ್ಕ | ತರಳ ನಿನಗಿರೆ ||
ತೊರೆದು ಎಂತು ಪೋಪೆ ಕರುಣ | ವಿಲ್ಲವೈ ಧೊರೆ | ನಿ | ಷ್ಕರುಣಿಯೈ ಖರೆ          || ೧೧೬ ||

ಎನುತ ಕಂಬನಿಯ ಬಿಡುತ | ಕೂಗಿ ಮರುಗುತ ||
ವನಿತೆ ಪದ್ಮರೇಖೆಯೆಡೆಗೆ | ಬಂದ ಹಲುಬುತ | ರಥ | ದಿಂದ ಧುಮುಕುತ || ೧೧೭ ||

ಭಾಮಿನಿ
ಸೂತನೋರ್ವನೆ ರಥವ ತಿರುಗಿಸಿ |
ಭೀತಿಯೊಳಗವನಿ ಳಿದು ಬರುತಿರೆ |
ಭೂತಳೇಶನ ರಮಣಿ ಮರುಗುತಲಾಗ ಕೇಳಿದಳು ||
ತಾತ ಪೇಳ್ ಮತ್ಕಾಂತನೆಲ್ಲಿಹ |
ರೀತಿ ಬೇರಾಗಿಹುದು ಪೇಳೆನೆ |
ಮಾತೆ ಕೇಳರಿ ಶೂರಸೇನನು ಸಮರ ದೊಳಗಿಂದು    || ೧೧೮ ||

ಕಂದ
ದುರುಳನು ಎಮ್ಮಯ ನೃಪತಿಯ |
ಧುರದೊಳು ಮಡುಹಿದನೆನ್ನುತ ಸಾರಥಿ ಭರದಿಂ ||
ತರುಣಿಯ ಮುಂದಕೆ ಶವವ |
ನ್ನಿರಿಸಲ್ ಕಾಣುತೆ ಪತಿಯನ್ನಪ್ಪುತಲಾಗಳ್   || ೧೧೯ ||

ರಾಗ ನೀಲಾಂಬರಿ ಆದಿತಾಳ
ಹಾ ಹಾ ಪ್ರಾಣಕಾಂತ ನಿನ್ನ | ಮೋಹ ಬಿಟ್ಟು ಜಗದಿ ||
ದೇಹ ರಕ್ಷಿಸುವುದೆಂತು | ತ್ರಾಹಿಯೆಂಬೆ ಬಾರೊ          || ೧೨೦ ||

ಮಕ್ಕಳಿಲ್ಲವೆಂದು ನೀನು | ದುಃಖಿಸುತ್ತಲಿರ್ದೆ ||
ರಕ್ಕಸಾರಿ ಕೊಟ್ಟ ಸುತನ | ಅಕ್ಕರಿಂದ ನೋಡೊ         || ೧೨೧ ||

ಹಿತವೇ ವೈರಿನೃಪರೆದುರೊಳ್ | ಪತಿಯೆ ನಾನೆಂತಿರುವೆ ||
ಸುತನ ಸಲಹುವರೆ ಮುಂದೆ | ವ್ಯಥೆಯಲ್ಲವೆ ರಮಣ    || ೧೨೨ ||

ರಾಗ ನೀಲಾಂಬರಿ ರೂಪಕತಾಳ
ಘೋರ ಪಾತಕಿ ಶೋಕಿಸ | ಲ್ಯಾರತಿ ಧೈರ್ಯವ ಪೇಳ್ವರು |
ವಾರಿಜನಾಭ ಮುಕುಂದನೆ | ಕ್ಷೀರಾಂಬುಧಿವಾಸ         || ೧೨೩ ||

ನಂದಾತ್ಮಜ ಮುರವೈರಿಯೆ | ಕಂದನ ರಕ್ಷಿಸು ಎನುತಲೆ |
ಚಂದಿರಮುಖಿಯಾ ಶವವನು | ತಂದುರಿ ಮಾಡುತಲಿ  || ೧೨೪ ||

ಕರುಣಿಸು ಏಳೇಳ್ ಜನ್ಮದಿ | ಎರೆಯ ಮೇಧಾವಿಯ ಶ್ರೀಹರಿ |
ತರಳನ ರಕ್ಷಿಸು ರಕ್ಷಿಸು | ಎನುತಂಬುಜರೇಖೆ || ೧೨೫ ||

ಚಿತೆಯನ್ನೊಟ್ಟುತ ವೇಗದಿ | ಪತಿಯನು ಮಲಗಿಸಿ ದೃಢದಲಿ |
ರತಿಪತಿಪಿತ ಗತಿಯೆನ್ನುತ | ಸತಿಯತಿ ವ್ಯಥಿಸುತಲಿ    || ೧೨೬ ||

ಉರಿಯುವ ಯಜ್ಞೇಶ್ವರನಿಗೆ | ಭರದಿ ಪ್ರದಕ್ಷಿಣೆ ಗೈಯುತ |
ತರುಣಿ ಪತಿವ್ರತೆ ಪೊಗುತಲೆ | ಎರೆಯನ ಕೂಡಿದಳು   || ೧೨೭ ||

ರಾಗ ಸಾಂಗತ್ಯ ರೂಪಕತಾಳ
ಈ ರೀತಿ ಪದ್ಮರೇಖೆಯು ಚಿತೆಯೊಳು ಪೊಗೆ | ಚೀರಿ ಚೀರಳುತಿರೆ ಬಾಲ ||
ಸಾರಿದಳೀಕೆಯ ದೂತಿಯೋರ್ವಳು ವೃದ್ಧ | ನಾರಿ ಬಂದಪ್ಪುತ ಶಿಶುವ     || ೧೨೮ ||

ದೊರೆಕುಮಾರಕ ನೀನು ಪುಟ್ಟಿ ತಾಯ್ತಂದೆಯ | ತೊರೆದುಕೊಂಡೆಯೊ ವಿಧಿಯಕಟ ||
ತರಳ ನೀನಿರ್ಪುದನರಿತರೆ ಶತ್ರುಗ | ಳಿರಿಸರು ನಿನ್ನ ಪ್ರಾಣವನು            || ೧೨೯ ||

ದೊರೆರಾಯನರಸಿಗೆ ಪರಮಪ್ರಿಯಳು ನಾನು | ಮರೆಯೆ ನಿನ್ನನು ಧಾತ್ರಿ ಹೊರದು ||
ತರಳ ನಾನದಕಾಗಿ ನಿನ್ನ ಶೋಕದಿ ಪ್ರಾಣ | ಪರಿತ್ಯಜಿಪೆನು ಮುಂದೀಗೆನುತ        || ೧೩೦ ||

ತೊರೆದು ಈ ಪುರವನು ಪರ ರಾಷ್ಟ್ರದೊಳು ಪೋಗಿ | ಪರಿಪಾಲಿಪೆನು ನಿನ್ನನೀಗ ||
ಇರಬಾರದರೆ ಕ್ಷಣವೆನುತಲಾ ಧಾತ್ರಿಯು | ತರಳನ ಕೊಂಡು ಸಾರಿದಳು || ೧೩೧ ||