ಶಾರ್ದೂಲವಿಕ್ರೀಡಿತಂ
ಶ್ರೀಗೋಪಾಲರಮೇಶಭಕ್ತವರದಂ ಕೌಂತೇಯರಕ್ಷಾಮಣಿಂ
ನಾಗಾರಾತಿಸುವಾಹನಂ ಮುರಹರಂ ಕ್ಷೀರಾಬ್ಧಿವಾಸಂ ಹರಿಮ್ |
ವಾಗೀಶಾದಿಸಮಸ್ತದೇವನಮಿತಂ ಗೋಪಾಂಗನಾವೇಷ್ಟಿತಂ
ಯೋಗೀಶಂ ದುರಿತಾಂತಕಂ ನರಹರಿಂ ವಂದೇ ಸರೋಜಾಂಬಕಮ್ || ೧ ||
ರಾಗ ನಾಟಿ ಝಂಪೆತಾಳ
ಜಯ ಕಾತ್ಯಾಯನಿಪುತ್ರ | ಜಯ ಜಯತು ಗಜವಕ್ತ್ರ |
ಜಯತು ಕೋಮಲ ಗಾತ್ರ | ಜಯತು ನುತಿಪಾತ್ರ ||
ಜಯ ಜಯತು ಜಯತು || ೨ ||
ಪ್ರಥಮ ಪೂಜಿತ ವೀರ | ಶ್ರುತಿವೇದ್ಯ ಗಂಭೀರ |
ನತಮೌಳಿಮಂದಾರ | ಜಿತದೈತ್ಯ ಶೂರ ||
ಜಯ ಜಯತು ಜಯತು || ೩ ||
ಸ್ತಂಭಜನ್ಮನೆ ನಿನ್ನ | ನಂಬಿಹೆನು ನೀ ಎನ್ನ |
ಬೆಂಬಿಡದೆ ಸಲಹೀಗ | ಶಂಭುಸುತ ಬೇಗ ||
ಜಯ ಜಯತು ಜಯತು || ೪ ||
ಭಾಮಿನಿ
ನೀಲಮೇಘಶ್ಯಾಮ ನೀರಜ |
ಲೋಲಲೋಚನ ಕಂಬುಕಂಠ ವಿ |
ಶಾಲ ವಕ್ಷಸ್ಥಳ ಮನೋಹರವದನ ದಾಶರಥೇ ||
ವಾಲಿಮಥನ ಸುರೇಶವಂದಿತ |
ಕಾಲಕಾಲ ಕೃಪಾಬ್ಧಿ ಸೀತಾ |
ಲೋಲ ಶ್ರೀರಘುರಾಮಮೂರುತಿ ನಡೆಸಲೀ ಕೃತಿಯ || ೫ ||
ದ್ವಿಪದಿ
ಹರಿ ಹರ ವಿರಿಂಚಿಗಳಿಗೆರಗಿ ಭಕ್ತಿಯಲಿ |
ಸಿರಿ ವಾಣಿ ಪಾರ್ವತಿಗೆ ನಮಿಪೆ ವೈಭವದಿ || ೬ ||
ಹರಿಯ ಕಿಂಕರ ಚಂದ್ರಹಾಸಕಥನವನು |
ಅರಿತ ತೆರದಲಿ ಕೃತಿಯ ಗೆಯ್ಯುವೆನು ನಾನು || ೭ ||
ಕೃತಿಯೊಳಗೆ ತಪ್ಪಿರಲು ತಿದ್ದಿ ಮೆರೆಸುವುದು |
ಮತಿಯುತರ ಗುಣಗಳಿವು ಸಹಜವಾಗಿಹುದು || ೮ ||
ಹಿಂದೆ ದ್ವಾಪರದಂತ್ಯದೊಳಗೆ ಧರ್ಮಜನು |
ಬಂಧುಹತ್ಯಕೆ ಬೆದರಿ ಹಯಮೇಧವನ್ನು || ೯ ||
ವಿರಚಿಸಲು ದೀಕ್ಷೆಯಂ ಕೊಂಡು ತುರಗವನು |
ನರನ ಬೆಂಬಲ ಗೈದು ಕಳುಹೆ ಭೂವರನು || ೧೦ ||
ಕಲಿ ಕಿರೀಟಿಯು ಸಕಲ ಧರಣಿಪರ ಜಯಿಸಿ |
ಸೆಳೆದು ಕಪ್ಪ ಸಮೇತ ಸೇನೆಗಳವೆರಸಿ || ೧೧ ||
ಬಂದು ಕುಂತಳಪುರದ ಹೊರಗಿನುಪವನದಿ |
ಚಂದದಿಂದಿರೆ ತುರಗವಡಗಲಾ ಸ್ಥಳದಿ || ೧೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎತ್ತ ಪೋದುದು ತುರಗವೆನುತಲಿ | ಚಿತ್ತದಲಿ ಯೋಚಿಸುವ ಕಾಲದಿ |
ಕತ್ತಲೆಯ ಪರಿಹರಿಪ ಭಾಸ್ಕರ | ನುದಿಸಿದಂತೆ || ೧೩ ||
ಮುನಿಪ ನಾರದ ಬರಲು ನಮಿಸುತ | ಘನಮಹಿಮರೀ ದೇಶವ್ಯಾವುದು |
ಜನಪನ್ಯಾರಿಹನಿಲ್ಲಿ ಕ್ರತುಹಯ | ಕಾಣದಿಹುದು || ೧೪ ||
ಅರುಹಬೇಹುದು ಕರುಣದಿಂದಲಿ | ಪರಮ ಸುeನಿಗಳು ನೀವೆನೆ |
ನರನೆ ಕೇಳೀ ಪುರವ ಪಾಲಿಪ | ಧೊರೆಯ ಕಥೆಯ || ೧೫ ||
ಹರಿಯ ಭಕ್ತನು ಚಂದ್ರಹಾಸನು | ಪರಮ ಧಾರ್ಮಿಕ ಸಾಧುಗುಣಯುತ |
ನಿರುವನೀತನ ಸುತರು ಹಯವನು | ಬಂಧಿಸಿಹರು || ೧೬ ||
ಧುರದೊಳಗೆ ತ್ರೈಭುವನದೊಳಗೀ | ಧರಣಿಪಾಲಗೆ ಸರಿಯ ಕಾಣೆನು |
ಹರಿಯ ಕರುಣಾರಸಗಳೀತಗೆ | ಪೂರ್ಣವಿಹುದು || ೧೭ ||
ಎನಲು ನಮಿಸುತ ಧರ್ಮಜಾನುಜ | ಮುನಿಪ ಪೇಳೀ ನೃಪನ ಚರಿತೆಯ |
ಚಿನುಮಯನ ದಯವೆಂತು ಈತನೊ | ಳೆನಲು ಪೇಳ್ದ || ೧೮ ||
ಆದಡಾಲಿಸು ನರನೆ ಪೇಳುವೆ | ಮೇದಿನಿಯೊಳೀತನ ಚರಿತ್ರೆಯ |
ನಾದರದಿ ಕೇಳ್ದರಿಗೆ ಮುರಹರ | ನೊಲಿವ ದಯದಿ || ೧೯ ||
ವಾರ್ಧಕ
ಸುರಪಸುತ ಲಾಲಿಸೀ ಪುರಕೆ ಕುಂತಳವೆಂದು |
ಧರೆಯೊಳಗೆ ನಾಮದಿಂ ಖ್ಯಾತಿಯಾಗಿಹುದಿದಕೆ |
ಧೊರೆಯು ಮಕರಧ್ವಜನನಣುಗನಹ ಧಾರ್ಮಿಕಂ ಸುಗುಣ ಸಜ್ಜನಪ್ರೇಮನು ||
ಧುರವಿಜಯ ಚಿತ್ರಧ್ವಜಾಖ್ಯ ನೃಪವರನಿಗಂ |
ಪರಮಾಪ್ತನಹ ದುಷ್ಟಬುದ್ಧಿಯೆಂಬುವ ಸಚಿವ |
ನಿರುತಿರಲ್ಕೊಂದು ದಿನ ಧರಣಿಪತಿಯೋಲಗಕೆ ಹರಿತಂದು ಮಂಡಿಸಿದನು || ೨೦ ||
ರಾಗ ಕೇದಾರಗೌಳ ಅಷ್ಟತಾಳ
ಧರಣಿಪಾಲನು ತನ್ನ ರಮಣಿ ಲೀಲಾಂಗನೆ | ವೆರಸಿಯೊಡ್ಡೋಲಗದಿ ||
ಹರಿತಂದು ಮಂಡಿಸಿ ನಳಿನಾಕ್ಷಿಯಳ ಮುಖ | ಪರಿಕಿಸುತಿಂತೆಂದನು || ೨೧ ||
ತರುಣಿ ಕೇಳೆಲೆ ನಿನ್ನ ವರಿಸಿದ ಕಾರಣ | ಮೆರೆವುದು ಸಕಲ ಭಾಗ್ಯ ||
ಧರೆಯೊಳೇಕಚ್ಛತ್ರಪತಿಯಾಗಿ ಪಾಲಿಪೆ | ಮರೆಯ ಮಾತಲ್ಲೆನಲು || ೨೨ ||
ಪತಿಯೆ ಲಾಲಿಸು ಎನ್ನ ಭಾಗ್ಯಂಗಳೇನಿದೆ | ಸುತಹೀನೆಯಾಗಿ ನಾನು ||
ಪೃಥಿವಿಯೊಳ್ ವಂಧ್ಯತ್ವದಿಂದ ಬಾಳುವೆನೆಂತು | ಸತತ ಮನೋಚಿಂತೆಯು || ೨೩ ||
ಸತಿ ನೀ ಪೇಳಿದ ನುಡಿಯಹುದೆನ್ನ ಮನದೊಳು | ವ್ಯಥಿಪೆ ನಾನನುದಿನದಿ ||
ಸುತವಿಹೀನಗೆ ಸ್ವರ್ಗಪದವಿಲ್ಲವೆಂಬುದು | ಶ್ರುತಿಸಾರವಚನ ಕೇಳೆ || ೨೪ ||
ಹಿಂದಿನ ಭವದೊಳು ಪಡೆದ ದುಷ್ಕರ್ಮದಿ | ಬಂದಿತೆಮಗೆ ವ್ಯಥೆಯು ||
ಇಂದೀವರಾಕ್ಷಿ ನೀ ಮರುಗಬೇಡೆನುತಿರೆ | ಬಂದೆರಗುತ ದೂತನು || ೨೫ ||
ಆರ್ಯಾ ಸವಾಯ್
ಸಲಾಮು ಚಿತ್ರಧ್ವಜ ಮಹರಾಜ | ಸಲಾಮು ಭಾಸ್ಕರತೇಜ ||
ಸಲಾಮು ವೈರಿವ್ರಾತಕುಠಾರಕ | ಸಲಾಮು ಕಲ್ಮಷಹಾರಕ || ೨೬ ||
ಸಾಮೀಯವರ ಪುರೋಹಿತ ಗಾಲವ | ಸ್ವಾಮೀಯವರ ಸವಾರಿಯು ||
ಪ್ರೇಮದಿ ದ್ವಾರದೊಳೈತಂದಿರ್ಪರು | ಭೂಮಿಪಗರುಹೆನೆ ಬಂದೆವು || ೨೭ ||
ಗುಡುಗುಡಿಗೆನ್ನೊಳು ಗತಿಯಿಲ್ಲದೆ ಕಂ | ಗೆಡುವೆನು ಪಾದದ ಸೇವಕ ||
ಪೊಡವಿಪ ಕಾಸೂ ವೀಸವ ನಿತ್ತರೆ | ಹುಡುಗ ಸಿಪಾಯಿಗೆ ಸಾಧಕ || ೨೮ ||
ರಾಗ ಕೇದಾರಗೌಳ ಝಂಪೆತಾಳ
ಚಾರಕನ ನುಡಿ ಕೇಳುತ | ಭೂವರನು | ಭೂರಿ ತೋಷವ ತಾಳುತ ||
ಸಾರಿ ಮುನಿಪದಕೆರಗುತ | ಕರೆದೊಯ್ದ | ಚಾರು ಪೀಠವನೀಯುತ || ೨೯ ||
ಪರಿಪರಿಯ ಪೂಜಿಸುತಲಿ | ಗುರುವರರೆ | ಪರಮ ಸ್ವಾರಿಯು ದಯದಲಿ ||
ಹರಿತಂದುದಪರೂಪವು | ಎನ್ನಿಂದ | ಸಿರಿಚರಣಕೇಂ ಕಾರ್ಯವು || ೩೦ ||
ಧರಣಿಪನ ನುಡಿಯ ಕೇಳಿ | ಪೇಳ್ದ ಗುರು | ಹರುಷಾಂಬುನಿಧಿಯೊಳಾಳಿ ||
ದೊರೆ ನಿನ್ನ ಕಾಣದೀಗ | ಬಹು ದಿವಸ | ತೆರಳಿತದಕಾಗಿ ಬೇಗ || ೩೧ ||
ಬಂದೆನಲ್ಲದೆ ಕಾರ್ಯವು | ಮತ್ತಿಲ್ಲ | ಕಂದಿಹುದು ಮುಖಕಮಲವು ||
ಇಂದೇನು ಕೊರತೆ ಪೇಳು | ಮನದೊಳಗೆ | ಕುಂದದೇ ಧೈರ್ಯ ತಾಳು || ೩೨ ||
ಧರೆಯನೇಕಚ್ಛತ್ರದಿ | ಪಾಲಿಸುವೆ | ಕೊರತೆಗಳಿದೇನು ಮನದಿ ||
ಅರಿಗಳ್ಯಾರಿರ್ಪರದನು | ಹೇಳೆನಗೆ | ಪರಿಗಳೆಲ್ಲವ ಕೇಳ್ವೆನು || ೩೩ ||
ರಾಗ ಶಂಕರಾಭರಣ ರೂಪಕತಾಳ
ಮುನಿರಾಯ ಲಾಲಿಸು ಮನದೊಳಗಿರ್ಪುದ | ವಿನಯದಿ ಪೇಳುವೆ ನಾನು ||
ಕನಕಭಂಡಾರಗಳಾನೆ ಸೇನೆಯು ರಾಷ್ಟ್ರ | ಘನ ಸಂಪತ್ತುಗಳಿರ್ದರೇನು || ೩೪ ||
ಪರದೊಳು ತಿಲಜಲಂಗಳನಿತ್ತು ಸ್ವರ್ಗದೊ | ಳಿರಿಸುವಂದವ ಮಾಳ್ಪ ಸುತರು ||
ಧರೆಯ ಭಾರಕೆ ನಾನು ಪಡೆಯಲಿಲ್ಲೆನುತಲಿ | ಕೊರತೆಯೆನಲು ಮುನಿ ಪೇಳ್ದ || ೩೫ ||
ಪುರುಷಸಂತತಿ ನಿನಗಿಲ್ಲ ಪ್ರಾರಬ್ಧದಿ | ತರಳೆಯೋರ್ವಳು ಜನಿಸುವಳು ||
ವರಿಸುವಳಾಕೆ ಶ್ರೀಹರಿಯ ಕಿಂಕರನನ್ನು | ದೊರೆಯಹನವನೆಯೀ ಪುರಕೆ || ೩೬ ||
ಎಂದು ಭೂವರನ ದುಃಖವನೊಡಬಡಿಸುತ್ತ | ಅಂಧಕಾರಿಯ ನೆನೆವುತ್ತ ||
ಬಂದಂತೆ ಗಾಲವ ಮುನಿಪ ಹೋಗಲು ಭೂಪ | ನಂದು ಯೋಚಿಸಿದ ತನ್ನೊಳಗೆ || ೩೭ ||
ರಾಗ ಕಾಂಭೋಜಿ ಝಂಪೆತಾಳ
ತನಯ ವರ್ಜಿತನಾಗಿ | ರಾಜಕೀಯ ಕಾರ್ಯದೊಳು |
ಮನವಿಟ್ಟು ಕಷ್ಟಗಳ | ನನುಭವಿಸಲ್ಯಾಕೆ ||
ತನುಜೆಯುದ್ಧವಿಸುವಳ | ಭರ್ತ ಚಿನ್ಮಯ ಭಕ್ತ |
ನೆನುತ ಮುನಿವಚನಗಳು | ಸಟೆಯಾಗದೈಸೆ || ೩೮ ||
ಹರಿಯು ತನ್ನಯ ಶರಣ | ರಿಂಗೆ ಬೇಕಾದುದನು |
ಕರುಣಿಪನು ಸಹಜವಿದು | ಸ್ಮೃತಿಸಾರವಚನ ||
ಪರರಿಂದಲೇನಹುದು | ಪರರ್ಯಾತಕವರಿಂಗೆ |
ಕರುಣಿಸುವ ದಾತನಿರೆ | ಸರಿಯಲ್ಲವೆನಗೆ || ೩೯ ||
ಈ ರಾಜ್ಯಪದವಿಯನು | ಸಚಿವ ದುರ್ಮತಿಗೀಗ |
ಭೋರನೊಪ್ಪಿಸಿ ನಾನು | ಸ್ವಸ್ಥ ಚಿತ್ತದೊಳು ||
ನಾರಿ ಲೀಲಾಂಗನೆಯ | ಕೂಡಿ ಕೊಂಡಿಹೆನಿನ್ನು |
ವಾರಿಜಾಕ್ಷನ ಪದವ | ನೆನೆವುತ್ತ ಸುಖದಿ || ೪೦ ||
ಭಾಮಿನಿ
ಧಾರಿಣಿಪನೀ ತೆರದಿ ಯೋಚಿಸಿ |
ಚಾರರಿಂ ಸಚಿವನನು ಕರೆಸುತ |
ಭೂರಿಸಂತೋಷದಲಿ ನೀನೀ ಧರೆಯ ಪಾಲಿಪುದು ||
ಘೋರ ಪಾತಕಿಯಾಗಿ ಸಂತತಿ |
ದೋರದಿದೆವೀ ರಾಜ್ಯವೀ ಸಂ |
ಸಾರವೇಕೆನಗಿನ್ನು ದುರ್ಮತಿ ವಹಿಸು ನೀನಿದರ || ೪೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎನುತಲಾಕ್ಷಣ ರಾಜಮುದ್ರೆಯ | ಜನಪನಿತ್ತಾ ದುಷ್ಟಬುದ್ಧಿಗೆ |
ವನಿತೆಯೊಡಗೊಂಡಾಗ ಸುಖದೊಳ | ಗಿರ್ದನಂದು || ೪೨ ||
ಪರಮ ವಿಭವದಿ ದುಷ್ಟ ಬುದ್ದಿಯು | ದೊರೆಯು ಸಂತತಿಹೀನನಾಗಿಹ |
ಧರೆಯದೆನ್ನಯ ತರಳ ಮದನಗೆ | ದೊರಕಿತೆನುತ || ೪೩ ||
ಮನದಿ ನಾನರಿತಿರ್ದೆ ಪೂರ್ವದಿ | ತನಗೆ ತಾನಾಗಿಂದು ದೊರಕಿತು |
ಘನತರದ ಪುಣ್ಯಗಳ ಗಳಿಸಿದೆ | ಪೂರ್ವ ಭವದಿ || ೪೪ ||
ಎಂದು ಹರುಷಾಂಬುಧಿಯೊಳಾಳುತ | ಚಂದದಿಂದಾ ರಾಷ್ಟ್ರಪ್ರಜೆಗಳ |
ಬಂಧಿಸುತ ಭಂಡಾರವೆಲ್ಲವ | ತುಂಬಿಸಿದನು || ೪೫ ||
ಅರಿಗಳಿಲ್ಲದ ತೆರದಿ ಪಾಲಿಪೆ | ನಿರುವನೀ ಕುಂತಳದ ಪಾರ್ಶ್ವದಿ |
ಧರಣಿಪನು ಸೌರಾಷ್ಟ್ರ ದೇಶಕೆ | ಶೂರಸೇನ || ೪೬ ||
ಧುರದೊಳಾತನ ಜಯಿಸಿ ಕಷ್ಟವ | ಹೊರಿಸಿ ತರುವೆನು ಮಿಕ್ಕರಾತನ |
ತರಿವೆನೆನುತಾ ದುಷ್ಟಬುದ್ಧಿಯು | ಚರನ ಕರೆದು || ೪೭ ||
ಚಾರ ನಡೆ ಸೌರಾಷ್ಟ್ರ ದೇಶದ | ಶೂರಸೇನಗೆ ಪೇಳು ಸಾಮದಿ |
ಸಾರಿ ಬಂದೆನಗೀಗ ಕಪ್ಪವ | ನೀಯಲೆನುತ || ೪೮ ||
ಬರನೊ ಬಾರನೊ ಎಂಬ ಪರಿಗಳ | ನರಿತು ಬೇಗದಿ ಬರುವುದೆನ್ನುತ |
ತ್ವರೆಯೊಳಗೆ ಕಳುಹಲ್ಕೆ ದೂತನು | ಬಂದು ನೃಪಗೆ || ೪೯ ||
ರಾಗ ಸಾರಂಗ ಅಷ್ಟತಾಳ
ಶೂರಸೇನಾಖ್ಯ ಕೇಳು | ಪೇಳ್ವುದನೆಲ್ಲ | ಧೀರ ನಿನ್ನೊಡನೀಗಳು ||
ಪಾರಮಾರ್ಥದೊಳರಿಕೆಯ ಗೈವೆ ಕುಂತಳ |
ಧಾರಿಣೀಶನ ಮಂತ್ರಿಯಾಜ್ಞೆಯೇನೆಂಬೆನು || ೫೦ ||
ತಂದು ಕಪ್ಪವ ಸಾಮದಿ | ಒಪ್ಪಿಸಿ ಮುದ | ದಿಂದ ಪೋಗಲಿ ವೇಗದಿ ||
ಮುಂದೆನ್ನನುಜ್ಞೆಗಳಂತೇ ನೀನಿರದಿರೆ |
ಬಂಧಿಸಿ ರಣದೊಳು ಸೆರೆಯ ಪಿಡಿವನಂತೆ || ೫೧ ||
ಎರಡೆಂಟ ಯೋಚಿಸದೆ | ಕಪ್ಪವ ಕೊಂಡು | ಪೊರಡನುಮಾನಿಸದೆ ||
ಪರಮ ವಿಕ್ರಮಿ ದುಷ್ಟಬುದ್ದಿ ಕುಂತಳಪುರ |
ಕರ ಸಾಗಿರ್ಪನು ದೊರೆ ಸುಮ್ಮನೆ ಇರುವನು || ೫೨ ||
ರಾಗ ತೋಡಿ ಏಕತಾಳ
ಏನೆಂದೆ | ದೂತ | ಏನೆಂದೆ || ಪ ||
ಏನೆಂದೆ ದೂತ ದುರ್ಬುದ್ಧಿ ಎಂಬವನು |
ಹೀನ ಸಚಿವನಾಗಿ ಕಟ್ಟಾಜ್ಞೆಗಳನು ||
ಕ್ಷೋಣಿಪನಾದೆನಗಿತ್ತನದೇನು |
ಕ್ಷೀಣಬಲನಿಗಂಜಿ ಬರುವೆನೆ ನಾನು || ಏನೆಂದೆ || ೫೩ ||
ನಡೆ ನಡೆ ಸುಮ್ಮನೆ ಕಪ್ಪಗಳನ್ನು |
ಕೊಡುವವ ನಾನಲ್ಲ ನಾಲಿಗೆಯನ್ನು ||
ಕಡಿದು ನೂಕಿಸುವೆನು ಸಾರು ಸಾರಿನ್ನು |
ಬಡಿದಿಕ್ಕಿ ಮೆರೆವೆನು ಬರಲವನನ್ನು || ೫೪ ||
ಕುಂತಳೇಶನ ಅರಮನೆಯೊಳು ತಿಂದು |
ಬಂತೀಗ ಮದಗಳು ಲುಚ್ಚನಿಗಿಂದು ||
ಪಂಥ ಪೌರುಷಕಾಗಿ ಬೆದರುವನೆಂದು |
ಇಂಥ ಮಾತುಗಳನ್ನು ಪೇಳ್ದನೆಯಿಂದು || ೫೫ ||
ಕಲಿಗಂಜದಿಹ ಶೂರಸೇನನು ನಾನು |
ಬಲ ಸಹಿತೀಗವ ಬರಲಿ ಕಾಂಬುವೆನು ||
ಇಳೆಯ ಪಾಲಕ ನಾನು ಸಚಿವನಾಗಿಹೆನು |
ಛಲವಿಟ್ಟು ಕಾದದಿರ್ದರೆ ಬಾಳ್ವೆಯೇನು || ೫೬ ||
ವಾರ್ಧಕ
ಭೋರನೀ ಕ್ಷಣ ಪೋಗಿ ಪೇಳು ನಿಮ್ಮೊಡೆಯಂಗೆ |
ಶೂರನಾದಡೆಯಿವನು ಬರಲಿ ಸಂಗರಕೀಗ |
ತೋರುವೆನು ಕೈಚಳಕವೆನುತ ಕಳುಹಲ್ ಬೇಗ ಸಾರಿ ಸಚಿವನೊಳೆಂದನು ||
ಧೀರ ಲಾಲಿಸು ನಿನ್ನ ನೇಮವಂ ಕೇಳ್ದವನು |
ಭೂರಿ ಕೋಪಿಸುತೆಂದ ಸಮರಕೈತಹುದೆಂದು |
ಕ್ರೂರತನಗಳನೆಂತು ವರ್ಣಿಪೆನು ಚರಣದಲಿ ತೋರಿದಂದವ ಮಾಳ್ಪುದು || ೫೭ ||
ರಾಗ ಮಾರವಿ ಏಕತಾಳ
ಚರನಿಂತೆಂದುದ ಕೇಳುತ ಸಚಿವನು | ಗರಗರನಾಲಿಗಳ ||
ತಿರುಹುತ ಧನು ಝೇಂಕರಿಸುತ ಸೇನೆಯ | ತರುಬುತಲಾಕ್ಷಣದಿ || ೫೮ ||
ಧಾರಿಣಿ ಕಂಪಿಪ ತೆರದಲಿ ನಡೆದನು | ಶೂರಸೇನನ ಪುರಕೆ ||
ದ್ವಾರದಿ ನಿಂದಿಹ ಚರರ ನುಗ್ಗೊತ್ತಲು | ಭೂರಿ ಕೋಪದೊಳವರು || ೫೯ ||
ಆರೆಲೊ ಬಂದವ ನಿಂದಿರು ನಿಂದಿರು | ದ್ವಾರವ ಬಿಡೆವೀಗ ||
ಸಾರೆಂದುಸಿರುತ ತಡೆದಿರೆ ಸಚಿವನು | ಚಾರರ ಬಂಧಿಸುತ || ೬೦ ||
ರಾಗ ಕೇದಾರಗೌಳ ಅಷ್ಟತಾಳ
ಪೇಳಿ ನಿಮ್ಮಪ್ಪನ ಕರೆತನ್ನಿ ರಣಕೀಗ | ಖೂಳನ ನೋಳ್ಪೆ ನಾನು ||
ಕಾಲ ನಂದದಿ ದುರ್ಮತಿ ಬಂದೆ ನಿಮ್ಮ ಭೂ | ಪಾಲನ ತರಿವುದಕೆ || ೬೧ ||
ಎಂದುಸಿರುತ ಕಳುಹಲ್ಕೆ ಚಾರರು ನಡೆ | ತಂದೆರಗುತ ನೃಪಗೆ ||
ಬಂದಿದೆ ದುರ್ಮತಿ ಸೈನ್ಯವು ದ್ವಾರದಿ | ಸಿಂಧುಘೋಷಗಳಂದದಿ || ೬೨ ||
ಲತ್ತೆಯನಿತ್ತೆಮ್ಮ ಕರಗಳ ಬಂಧಿಸಿ | ಕುತ್ತಿಗೆಮೇಲ್ ತಿವಿದು ||
ಪೃಥ್ವಿಪ ನಿನ್ನನು ಕರೆತರೆ ಕಳುಹಲು | ವಿಸ್ತರಿಪರೆ ಬಂದೆವು || ೬೩ ||
ರಾಗ ಕೇದಾರಗೌಳ ಝಂಪೆತಾಳ
ಶೂರಸೇನನು ಕೇಳುತ | ಪಲ್ಗಡಿದು | ಮಾರರಿಪುವೆನೆ ಗಜರುತ ||
ಕ್ರೂರ ಪಾಪಿಯು ಬಂದನೆ | ಯಮಪುರಕೆ | ಸಾರಿಸುವೆ ನಾ ಬೇಗನೆ || ೬೪ ||
ನೆರಹು ಸೇನೆಗಳೆನ್ನುತ | ಮಂತ್ರಿವರ | ಗೊರೆದು ಧನು ಶರ ಪಿಡಿಯುತ ||
ಪೊರಡೆ ಬೆಂಗಡೆ ಸಚಿವನು | ಭೂರಿ ಬಲ | ವೆರಸಿ ಬರೆ ನರಪಾಲನು || ೬೫ ||
ದ್ವಾರದೊಳು ಮುತ್ತಿರ್ಪರ | ಕಂಡು ಖತಿ | ಯೇರಿ ಗರ್ಜಿಸೆ ಭೂವರ ||
ಧೀರ ಬಾ ಬಾರೆನ್ನಲು | ದುರ್ಮತಿಯು | ಮಾರಾಂತು ಮುಂದೆ ನಿಲಲು || ೬೬ ||
Leave A Comment