ರಾಗ ಬೇಗಡೆ ಏಕತಾಳ
ತರಳೆ ಕೇಳೌ ಎನ್ನ ನುಡಿಯಂತೆ | ಒದಗಿರ್ಪ ಪತಿಯು |
ಸರಿಯು ಬಂದುದೆ ಮನಕೆ ಗುಣವಂತೆ ||
ಸರಸಿಜಾಸನ ಬರೆದ ತೆರದಲಿ | ಪರಮ ಸುಂದರನಿವನು ದೊರೆತನು |
ಹರುಷದೊಳಗಿರು ಮುಂದಕೆನುತಲೆ | ಭರದಿ ಶಶಿಹಾಸಂಗೆ ಪೇಳಿದ ||೩೮೫||
ತರಳ ಕೇಳೀ ದಿವಸ ರಾತ್ರೆಯೊಳು | ಪೊರಟೋರ್ವನೈದಿ |
ಪುರಿಯ ಹೊರಗೆ ಶ್ಮಶಾನಭೂಮಿಯೊಳು ||
ಇರುವ ಚಂಡಿಕೆಯನ್ನು ಪೂಜಿಸಿ | ತಿರುಗಿ ಬಹುದಿದುಯೆಮ್ಮ ಕುಲದೊಳು |
ಮೆರೆವ ಪದ್ಧತಿಯಿರ್ಪುದೊಂದಿದು | ಮರೆಯಬೇಡೆಂದರುಹಿ ಸಚಿವನು ||೩೮೬||
ಹರಿಯ ಭಕ್ತನ ತೋಷಪಡಿಸುತ್ತ | ದುರ್ಮಂತ್ರಿ ತನ್ನೊಳು |
ಪರಮಚಿಂತಾಂಬುಧಿಯೊಳಾಳುತ್ತ ||
ದುರುಳನೀತನ ಕೊಲ್ಲದಿರ್ದರೆ | ತರಳನಿಗೆ ಸಾಮ್ರಾಜ್ಯ ದೊರೆಯದು |
ಶಿರವನರಿಸುವೆನೆನ್ನ ತರಳೆಗೆ | ಬರುವ ವೈಧವ್ಯಗಳಿಗಂಜೆನು ||೩೮೭||
ಭಾಮಿನಿ
ಕರೆದು ಕಟುಕರಿಗೆಂದ ನಿಶಿಯೊಳು |
ತೆರಳಿ ಚಂಡಿಕೆ ಗೃಹದಿ ನೀವಿರೆ |
ತರಳನೋರ್ವನು ಬಹನು ನೋಡದೆ ಶಿರವ ಛೇದಿಪುದು ||
ದುರುಳರಿರ ನೀವ್ ಹಿಂದೆ ಗೈದಿಹ |
ತೆರದಿ ಬಿಟ್ಟರೆ ನಿಮ್ಮನರಿವೆನು |
ತೆರಳಿರೀ ಕ್ಷಣವೆಂದು ಕಳುಹುತ ಸಚಿವನಿರಲಿತ್ತ ||೩೮೮||
ರಾಗ ಶಂಕರಾಭರಣ ಅಷ್ಟತಾಳ
ಇತ್ತ ಚಿತ್ರಧ್ವಜ ಯೋಚಿಸುತ | ಮುನಿ |
ಪೋತ್ತಮ ಗಾಲವಗೊಂದಿಸುತ ||
ಪುತ್ರಿಯ ಪತಿಯೆಲ್ಲಿಹನೆನುತ | ಕೇಳ |
ಲರ್ತಿಯೊಳ್ ಪೇಳ್ದನು ಮುನಿ ನಗುತ ||೩೮೯||
ಧರಣಿಪ ಕೇಳ್ ಚಂದ್ರಹಾಸನನ್ನು | ಬೇಗ |
ಕರೆಸೀಗ ಕೊಡು ನಿನ್ನ ಪುತ್ರಿಯನ್ನು ||
ಧರೆಯನಾತಗೆ ಕಟ್ಟು ಪಟ್ಟವನ್ನು | ಬಹು |
ತ್ವರಿತದಿ ಮಾಡೀ ಕಾರ್ಯವನ್ನು ||೩೯೦||
ಧರಣಿಪ ಕೇಳುತ ಮದನನನು | ಬೇಗ |
ಕರೆಸಿ ಪೇಳಿದ ಚಂದ್ರಹಾಸನನು |
ತ್ವರೆಯೊಳು ಕರೆತಹುದೆನಲವನು | ಆಗ |
ಬರುತಿರೆ ದಾರಿಯೊಳ್ ಶಶಿಹಾಸನು ||೩೯೧||
ರಾಗ ತೋಡಿ ಅಷ್ಟತಾಳ
ಕರದಿ ಗಂಧಾಕ್ಷತೆಯು ಪುಷ್ಪಗ | ಳಿರಿಸಿ ಚಂಡಿಕೆ ಪೂಜೆಗೋಸುಗ |
ತೆರಳುತಿಹನನು ಕಂಡು ಮಂತ್ರಿಜನು ||
ಬರವಿದೆಲ್ಲಿಗೆ ನಿಮ್ಮನೀ ಕ್ಷಣ | ಕರೆದುತಹುದೆಂದೆನುತ ಧರಣಿಪ |
ನರುಹಿ ಎನ್ನನು ಕಳುಹಿಸಿರ್ಪನು ||೩೯೨||
ಎಂದ ಮದನನ ನುಡಿಯ ಕೇಳುತ | ಚಂದ್ರಹಾಸನು ಪೇಳ್ದ ನಿನ್ನಯ |
ತಂದೆಯಾಜ್ಞೆಗಳಂತೆ ನಾನೀಗ ||
ಚಂದದಿಂ ಚಂಡಿಕೆಯನರ್ಚಿಸ | ಲೆಂದು ಪೋಗುವೆ ಕಡೆಗೆ ಬಹೆನೆನ |
ಲೆಂದನಾತಗೆ ಮದನನುತ್ತರವ ||೩೯೩||
ಪಿತನ ನೇಮಗಳಂತೆ ಪೂಜೆಯ | ನತಿಶಯದಿ ನಾ ಮಾಡಿ ಬರುವೆನು |
ಪೃಥಿವಿಪಾಲನು ಕಾದುಕೊಂಡಿಹನು ||
ಮತಿಯುತನೆ ಪೋಗೆಂದು ಕಳುಹುತ | ನತಿ ಜವದಿ ಮಂತ್ರಿಜನು ಚಂಡಿಯ |
ಹಿತದಿ ಪೂಜಿಪೆನೆಂದು ಪೋಗುತಿರೆ ||೩೯೪||
ವಾರ್ಧಕ
ಖಳರಂತರಂಗ ಪ್ರವೇಶದ ವಿವೇಕಮಂ |
ಬಳಸಿದರಿಷಡ್ವರ್ಗಮೊತ್ತರಿಸಿ ಮುರಿವಂತೆ |
ಪೊಲಬರಿಯದೊಳಪೊಗುವ ಮದನನಂ ಕಂಡು ದುರ್ಮತಿ ಕಳುಹಿದಾ ಕಟುಕರು ||
ಕೊಲೆಗಡುಕ ಚಂಡಾಲರುಗಿದ ಕೈದುಗಳಿಂದ |
ಗಳದ ಮೇಲೆತ್ತಿ ಪೊಯ್ದಿರಿದು ಕೆಡಹಲ್ಕಾಗ |
ನಳಿನಾಕ್ಷನಾಮಗಳನುಚ್ಚರಿಸಿ ಮಂತ್ರಿಸುತನಿಳೆಗೆ ಬಿದ್ದಸು ತೊರೆದನು ||೩೯೫||
ರಾಗ ಸಾರಂಗ ಅಷ್ಟತಾಳ
ಶಶಿಹಾಸ ಬರಲಿತ್ತಲು | ಕಾಣುತ ಭೂಪ | ಕುಶಲದಿ ಮನ್ನಿಸಲು ||
ಬಿಸಜಾಕ್ಷಿ ಚಂಪಕಮಾಲಿನಿಯನು ಗುರು |
ವುಸಿರಿದಂದದಿ ಗೈದ ಗಾಂಧರ್ವಲಗ್ನವ ||೩೯೬||
ವರ ಸುಮೂಹೂರ್ತದೊಳು | ಧಾರಿಣಿಪಾಲ | ಗುರುವಿಟ್ಟ ಲಗ್ನದೊಳು ||
ಹರಿಭಕ್ತ ಶಶಿಹಾಸನಿಂಗೆ ಪಟ್ಟವ ಕಟ್ಟಿ |
ನೆರೆದ ಭೂಸುರರಿಗೆ ದಕ್ಷಿಣೆಯಿತ್ತನು ||೩೯೭||
ತೋಷದೊಳಾ ಕ್ಷಣದಿ | ಪೀಠದಿ ಶಶಿ | ಹಾಸನಿರಲು ಭರದಿ ||
ಭೂಸುರರೆಲ್ಲ ವೇದೋಕ್ತ ಮಂತ್ರಾಕ್ಷತೆ |
ಆ ಸುರರೆಲ್ಲರು ನಲಿದಾಡಲೆಸೆದರು ||೩೯೮||
ರಾಗ ಕೇದಾರಗೌಳ ಅಷ್ಟತಾಳ
ಭೇರಿ ತಮ್ಮಟೆ ಕಹಳಾರವದಿಂದಲಿ | ವಾರಿಜಾಕ್ಷನ ಭಕ್ತನ ||
ಏರಿಸಿ ಮದಕರಿಮೇಲೆ ಅಂಬಾರಿಯೊಳ್ | ಭೂರಿ ಸಂತೋಷದಲಿ ||೩೯೯||
ಮೆರವಣಿಗೆಗೆ ಪೊರಡಿಸಲು ಸಂಭ್ರಮದಿಂದ | ಲರರೆ ಇದೇನೆನ್ನುತ ||
ತೆರಳಿ ಬಂದಾ ಮಂತ್ರಿ ಶಶಿಹಾಸನನು ಕಂಡು | ಕೆರಳುತ್ತಲಿಂತೆಂದನು ||೪೦೦||
ಚಂಡಿಕಾದೇವಿಯ ಪೂಜೆಗೆಯ್ಯದೆ ನೀ ಕೈ | ಕೊಂಡ ಕಾರ್ಯಗಳ್ಯಾವುದೊ ||
ಪುಂಡುತನಗಳೇನೆಂದೆನಲಂತರದಿ ಭಯ | ಗೊಂಡು ಪೇಳಿದ ಮಾವಗೆ ||೪೦೧||
ತೆರಳುತ್ತಲಿರೆ ಪೂಜೆಗಾಗಿ ನಾ ದಾರಿಯೊಳ್ | ಭರದಿ ನಿಮ್ಮಯ ಸುತನು ||
ಧರಣಿಪನಲ್ಲಿಗೆ ಪೋಗೆಂದು ಕಳುಹಿ ತಾ | ತೆರಳಿದನರ್ಚನೆಗೆ ||೪೦೨||
ಬರೆ ನೃಪಾಲಕ ತನ್ನ ಕುವರಿಯನಿತ್ತನು | ಪುರದ ಪಟ್ಟವ ರಚಿಸಿ ||
ಮೆರವಣಿಗೆಗೆ ಎನ್ನ ಕಳುಹಿರ್ಪನೆನೆ ಕೇಳಿ | ಕೊರೆಯೆ ಕರ್ಣಾಂತದಲಿ ||೪೦೩||
ರಾಗ ಸಾಂಗತ್ಯ ರೂಪಕತಾಳ
ಅರರೆ ನಾನೆಣಿಸಿದಕೆ ವಿಧಿಯೊಂದನೆಣಿಸಿತೆ |
ತರಳನ ಕೊಲಿಸಿದೆನೆನುತ ||
ಮರುಗುತ್ತ ಸಚಿವನು ನಿಶಿತಕಾಲವಿದೆಂದು |
ಕರದಿ ಖಡ್ಗವಗೊಂಡು ನಡೆದ ||೪೦೪||
ಏಳು ಸುತ್ತಿನ ಕೋಟೆ ಪುರಗಳ ದಾಟುತ್ತ |
ಕಾಳಗತ್ತಲೆಯೊಳಗೋರ್ವ ||
ಬೀಳುತೇಳುತ ಸುಡುಗಾಡಿನೊಳುರಿಯುವ |
ತೋಳು ಮುರಿದಪೆಣಗಳನು ||೪೦೫||
ಮುರಿದೆದೆಗುಂಡಿಗೆಯುರಿದ ಕೇಶಗಳುಳ್ಳ |
ತರ ತರ ಕುಣಪರಾಶಿಯನು ||
ಪರಿಕಿಸುತುರಿವ ಕೊಳ್ಳಿಯನೊಂದ ಪಿಡಿಯುತ್ತ |
ತಿರುಹಿಬೀಸುತ ಪೋಗುತಿರಲು ||೪೦೬||
ತಂಡ ತಂಡದ ಭೂತ ವೇತಾಳ ವಿತತಿಯು |
ಹಿಂಡುಗೂಡುತ ಕುಣಿಯುತಲಿ ||
ರುಂಡಮಾಲೆಯನಾಂತು ಬಿಟ್ಟ ಮಂಡೆಗಳಿಂದ |
ಕಂಡು ದುರ್ಮತಿಯೆಡೆಗೈದಿ ||೪೦೭||
ರಾಗ ಮಧ್ಯಮಾವತಿ ಅಷ್ಟತಾಳ
ನೋಡಿ ಮೂರ್ಖನ | ಮೆಲ್ಲುವ ನಾವು | ರೂಢಿಭಾರಕನ || ಪಲ್ಲವಿ ||
ಖೋಡಿಯ ಗಂಟಲ ಮುರಿದು | ಎದೆ | ಗೂಡಿನ ಮಾಂಸವ ತೆಗೆದು |
ಗಾಢದಿಂದಲೆ ಸುತ್ತಮುತ್ತಲು | ಕೂಡಿ ಕುಳಿತು ತಿಂದು ತೇಗುವ |
ಮೂಢನಿವನತಿ ಪಾಪಿಯಧಮನು | ಓಡಿ ಬನ್ನಿರಿಯೆನುತಲೈತರೆ ||೪೦೮||
ಪರಿಕಿಸಿ ದುರ್ಮತಿಯಾಗ | ತಾನು | ತಿರುಹಿ ಖಡ್ಗವನಿಂತು ಬೇಗ ||
ಮರುಳು ಭೂತಗಣಂಗಳೇತಕೆ | ಬರಿದೆ ಬಂದೀಗೆನ್ನ ಕೈಯಲಿ |
ಶಿರವನೀವಿರಿ ಪಥವ ಬಿಡಿರೆಂ | ದೊರೆಯೆ ಖತಿಯೊಳಗಾಗ ಗಣಗಳು ||೪೦೯||
ರಾಗ ಶಂಕರಾಭರಣ ಮಟ್ಟೆತಾಳ
ಕೆಟ್ಟ ನೀಚನೆನುತಲಾಗ | ಸುಟ್ಟ ಕೊಳ್ಳಿಗಳನು ತೆಗೆದು |
ಥಟ್ಟನಿವನ ಪೊಯ್ಯೆ ಸಚಿವ | ನಟ್ಟಹಾಸದಿ ||೪೧೦||
ತಿರುಹಿ ತಿರುಹಿ ಖಡ್ಗದಿಂದ | ಉರಿವ ಕೊಳ್ಳಿಗಳನು ಕಡಿಯೆ |
ದುರುಳ ತಾಳೆನುತ್ತ ಗಣಗ | ಳಂದು ಖತಿಯಲಿ ||೪೧೧||
ಸುತ್ತಮುತ್ತ ತರುಬುತಾ ಕ | ಗ್ಗತ್ತಲೆಯೊಳೆಲುವು ಮಾಂಸ |
ರಕ್ತಗಳನು ತೂರುತಿವನ | ತತ್ತರಿಸಲು ||೪೧೨||
ಭರದೊಳಿವನ ಚಂಡಿಕೆಯ | ಕರದಿ ಪಿಡಿದು ಗಣಗಳಾಗ |
ಮೆರೆವುತಿರಲು ನಭದಿ ದೇವಿ | ನುಡಿದಳಾ ಕ್ಷಣ ||೪೧೩||
ಬಿಡಿರಿ ಗಣಗಳ್ಯಾತಕಿವನ | ತಡೆಯಬೇಡಿ ಧೂರ್ತನಿವನು |
ನಡೆವ ಯಮನ ಪುರಕೆ ತಾನೆ | ತೊಡಕು ಬೇಡೆನೆ ||೪೧೪||
ಥಟ್ಟನಿವನ ಬಿಟ್ಟು ಗಣಗ | ಳಷ್ಟು ಕಾಣದಾಗ ಸಚಿವ |
ನೆಟ್ಟನೈದಿ ಚಂಡಿಕೆಯ | ಗೃಹದಿ ನೋಡಲು ||೪೧೫||
ಭಾಮಿನಿ
ಕಿರುನಗೆಯು ಕಣ್ಹುಬ್ಬು ಪೊಳೆಯುವ |
ಮೆರೆವ ತಿಲಕದ ಮುರಿದ ಮೀಸೆಯ |
ಸುರಿವ ರಕ್ತಗಳಿಂದ ನೆನೆದಿಹ ಕೇಶಪಾಶಗಳ ||
ಮುರಿದೆದೆಯ ಗೂಡುಗಳ ಚೂರ್ಣದಿ |
ತರಳ ಬಿದ್ದಿರೆ ದುಷ್ಟಬುದ್ಧಿಯು |
ಬರಸೆಳೆದು ಬಿಗಿದಪ್ಪಿ ಚುಂಬಿಸುತಾಗಲಡಿಗಡಿಗೆ ||೪೧೬||
ರಾಗ ನೀಲಾಂಬರಿ ರೂಪಕತಾಳ
ಕಂದನೆ ಹಾ ಹಾ ಮದನನೆ | ಬಂದಿಹ ಎನ್ನನು ನೋಡದೆ |
ಸುಂದರ ಮೌನದಿ ಮಲಗಿದೆ | ಚಂದದಿ ಮಾತಾಡೋ ||೪೧೭||
ಎನ್ನಯ ಮೋಸಗಳೆನ್ನನು | ತಿನ್ನುವುದಾಯಿತೆ ಹರ ಹರ |
ಚಿನ್ನನೆಯೇಳ್ ನಿನ್ನನುಜೆಯ | ಬಣ್ಣಿಸು ನೀ ಬಾರೋ ||೪೧೮||
ಬರಿದೇ ವೈರವನಿಕ್ಕುತ | ನರಹರಿಭಕ್ತಿಗೆ ಕೆಡುಕನು |
ಪರಿ ಪರಿ ಯೋಚಿಸಿ ಕೆಟ್ಟೆನು | ತರಳನೆ ಕೇಳ್ ನೀನು ||೪೧೯||
ಭರಿತದಿ ತುಂಬಿದ ದ್ರವ್ಯವ | ಧರಣಿಯ ಸುರರಿಗೆ ಮುದದಲಿ |
ತರಳನೆ ತ್ಯಾಗವ ಮಾಡಿದೆ | ಮೆರೆದೆಯೊ ಖ್ಯಾತಿಯಲಿ ||೪೨೦||
ಧರಣಿಪ ನಿನಗೇನೊರೆದನು | ತರಳನೆ ಎನಗದ ತಿಳಿಸದೆ |
ತ್ವರಿತದಿ ಬಂದೀಯೆಡೆಯಲಿ | ತೊರೆದೆಯೊ ಜೀವವನು ||೪೨೧||
ಮುಂದೀ ಕುಂತಳಪುರವದು | ಚಂದದಿ ದೊರಕಿತು ನಿನಗೆನು |
ತಿಂದಿನವರೆಗಿರುತಿರ್ದೆನು | ಸಂದೆಯೊ ಶಿವ ಶಿವನೆ ||೪೨೨||
ವಾರ್ಧಕ
ಕಂಬನಿಯೊಳರುಣಾಂಬುವಂ ತೊಳೆದು ಮುಂಡಾಡಿ |
ಹಂಬಲಿಸಿ ಬೆರಗಾಗಿ ನಂದನನು ಪೋದೆನೆಂ |
ತೆಂಬಳವಿಗಾ ಮಂತ್ರಿ ಸೈರಿಸದೆ ಮುಂಗಡೆಯ ಕಂಬಮಂ ಧುಮುಕಲಾಗ ||
ಕುಂಬಳದ ಕಾಯಂತೆ ಚಿಪ್ಪಾಗಿ ನಿಜ ಮಸ್ತ |
ಕಂ ಬಿರಿದು ಬಿದ್ದನುರ್ವಿಗೆ ಪೋದುದಸು ಕಾಯ |
ದಿಂ ಬಳಿಕ ನಂದಿದ ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು ||೪೨೩||
ರಾಗ ಕಾಂಭೋಜಿ ಝಂಪೆತಾಳ
ಇರುಳಿನೊಳಗೀ ಪರಿಯು | ನಡೆದುದನು ಪುರಜನರು |
ಅರಿಯದಿರೆ ಮನದೊಳಗೆ | ಕುಂತಳಾಪುರಕೆ |
ಹರಿಭಕ್ತನಹ ಚಂದ್ರ | ಹಾಸಂಗೆ ಪಟ್ಟಗಳು |
ವಿರಚಿಸಿರೆ ದುರ್ಮತಿಯು | ಸೈರಿಸದೆ ಮನದಿ ||೪೨೪||
ತೆರಳಿದನು ವನಕೆಂದು | ಪುರದಿ ವಾರ್ತೆಗಳಿರಲು |
ಪರಿಶೋಭಿಸುತ ತರಣಿ | ಯುದಿಸೆ ಪೂರ್ವದೊಳು ||
ಹರಿತಂದ ಶಾಂಭವಿಯ | ನರ್ಚಿಸುವ ಭೂಸುರನು |
ಒರಗಿರುವ ಸುತಪಿತರ | ನೋಡಿ ನಡುಗುತಲಿ ||೪೨೫||
ಅರಮನೆಗೆ ಬರಲಾಗ | ಶಶಿಹಾಸ ಸಂಭ್ರಮದಿ |
ಹರಿಪೂಜೆಯನು ಗೈದು | ವೋಲಗದೊಳಿರಲು ||
ಸುರಿವ ಕಂಬನಿಯಿಂದ ಭೂಸುರನು ಪೇಳಿದನು |
ಗಿರಿಜೆಯಾಲಯದೊಳಗೆ | ನಿನ್ನೆ ರಾತ್ರಿಯೊಳು ||೪೨೬||
ದುಷ್ಟಬುದ್ಧಿಯು ಮದನ | ರೀರ್ವರತಿ ಕೋಪದಲಿ |
ಕುಟ್ಟಿ ಹೊಯ್ದಾಡಿದರೊ | ಕಾಣೆ ನಾನದರ ||
ಸೃಷ್ಟಿಯೊಳು ತಲೆವೊಡೆದು | ಕರುಳುಗಿದು ಬಿದ್ದಿಹರು |
ದಿಟ್ಟ ಲಾಲಿಸು ಸಟೆಯ | ನುಡಿಯಲ್ಲ ಜೀಯ ||೪೨೭||
ಭಾಮಿನಿ
ಧರಣಿಸುರನಿಂತೆನಲು ಕೇಳುತ |
ಭರದಿ ಪುರಜನ ತಾರಕಾಕ್ಷಿಯ |
ಕರೆಸಿ ಜೊತೆಗೊಂಡಾಗ ತೆರಳಿದನಂದು ಶಶಿಹಾಸ ||
ಶಿರವೊಡೆದು ಬಿದ್ದಿಹರನೀಕ್ಷಿಸಿ |
ಮರುಗುತಿರೆ ಪುರಜನಗಳೆಲ್ಲರು |
ತರುಣಿ ತಾರಕನಯನೆ ಮೂರ್ಛಿಸುತಾಗ ಚೇತರಿಸಿ ||೪೨೮||
ರಾಗ ನೀಲಾಂಬರಿ ಏಕತಾಳ
ಪತಿಯೆ ನಿನ್ನ ಬಿಟ್ಟು ನಾನು | ಹಿತದೊಳೆಂತು ಬಾಳ್ವೆ ||
ಸುತನ ಪ್ರೇಮದಿಂದ ಸಲಹಿ | ಗತಿಯ ಕಾಂಬುದಾಯ್ತೆ ||೪೨೯||
ಕೆಟ್ಟ ವೈಧವ್ಯದಲಿ ನಾನು | ಸೃಷ್ಟಿಯೊಳೆಂತಿರುವೆ ||
ಹೊಟ್ಟೆ ಹಾಳಾಯ್ತೀಗ ಕಂದ | ಬಿಟ್ಟಿರ್ಪುದು ಹೇಗೆ ||೪೩೦||
ಸುತಪತಿವಿಹೀನೆ ಎನ್ನ | ವ್ಯಥೆಯ ಕೇಳ್ವರ್ಯಾರು ||
ಹಿತವೆ ಎನ್ನ ತೊರೆದು ನೀವು | ಗತಿಸಿದಿರೆ ಶಿವನೆ ||೪೩೧||
ರಾಗ ಸಾಂಗತ್ಯ ರೂಪಕತಾಳ
ಈ ರೀತಿಯಲಿ ತಾರಕಾಕ್ಷಿ ಶೋಕಿಸುತಿರೆ |
ವಾರಿಜನಾಭನ ಭಕ್ತ ||
ಭೂರಿ ಚಿಂತೆಯ ತಾಳಿ ಸೈರಿಸುತಾಕೆಯ |
ಕೂರಸಿಯನು ಕೊಂಡು ಕರದಿ ||೪೩೨||
ಪುಂಡರೀಕಾಕ್ಷನ ಭಕ್ತ ನಾನಾದರೆ |
ಖಂಡಿತ ಬದುಕಿಪೆನೆಂದು ||
ಚಂಡಿಕೆಯೆದುರೊಳು ಚತುರಶ್ರಮಾಗಿಹ |
ಕುಂಡವ ತೆಗೆಸುತಗ್ನಿಯನು ||೪೩೩||
ಧರಣಿಸುರರ ಮಂತ್ರಘೋಷದೊಳ್ ಸ್ಥಾಪಿಸಿ |
ಕರದೊಳಗಿಹ ಖಡ್ಗದಿಂದ ||
ಭರದಿ ತನ್ನಯ ದೇಹದೊಳಗಿರ್ಪ ಮಾಂಸವ |
ನರಿದುರಿಯೊಳು ಹೋಮಿಸುತಲಿ || ||೪೩೪||
ವಾರ್ಧಕ
ಬಾಳಿ ಫಲವೇನಿನ್ನು ಧರೆಯ ಭಾರಕನಾಗಿ |
ಮೂಲೋಕದಪಹಾಸ್ಯವೆನುತ ಮನದೊಳು ಖತಿಯ |
ತಾಳಿ ಪೂರ್ಣಾಹುತಿಗೆ ಶಿರವನರಿದಪೆನೆಂದು ಖಡ್ಗಮಂ ಪೂಡುತಾಗ ||
ಕಾಳಿ ನೀನಖಿಳ ಶಕ್ತಿಗಳ ರೂಪಂಗಳಂ |
ತಾಳಿ ಸರ್ವಾತ್ಮಕನ ಕೂಡೆ ರಮಿಸುವೆಯಲಾ |
ವ್ಯಾಳಶಯನಗೆ ಸಮರ್ಪಿತಮಾಗಲೆಂದೆನುತ ಗಳಕೆ ಖಡ್ಗವನಿರಿಸಲು ||೪೩೫||
ರಾಗ ನವರೋಜು ಏಕತಾಳ
ಹರಿಯ ಕಿಂಕರ ನೀನು | ಈ | ಪರಿಯ ಸಾಹಸವೇನು ||
ದರುಶನವಿತ್ತಿಹೆ ನಿನಗೋರ್ವಗೆ ಬೇ |
ರಿರುವರು ತಿಳಿಯರೆಂದೆನುತಲಿ ಚಂಡಿಯು ||೪೩೬||
ಕೇಳು ನೀನೆಲೊ ಬಾಲ | ನಾ | ಪೇಳುವುದ ಗುಣಶೀಲ ||
ಖೂಳ ಸಚಿವ ತಾ ಗೈದ ಕುಮಂತ್ರದಿ |
ಕಾಲನಲ್ಲಿಗೆ ಪೋದ ಸಹಸವಿದ್ಯಾತಕೆ ||೪೩೭||
ವರವ ಬೇಡೈ ನೀನು | ಅತಿ | ಹರುಷದೊಳೀವೆನು ನಾನು ||
ದುರುಳ ಸಚಿವಗಾಗಿ ಹರಣವ ತೊರೆಯಲು |
ಮರುಳನೊ ಸುಮ್ಮನೆ ಮನದೊಳು ಯೋಚಿಸು ||೪೩೮||
ಭಾಮಿನಿ
ಚಿತ್ತಜಾಂಬಕಿ ಪಾಲಿಸಾದರೆ |
ಸತ್ತವರನೀರ್ವರನು ಎಬ್ಬಿಸು |
ಚಿತ್ತಜನ ಪಿತ ಭಕ್ತಿಯೆನ್ನೊಳು ನಿಲಿಸು ಸ್ಥಿರವಾಗಿ ||
ಮತ್ತಿದರನುಳಿದೇನು ಬೇಡೆನೆ |
ಸತ್ತವರನೀಕ್ಷಿಸಲು ದೇವಿಯು |
ಸ್ವಸ್ಥದಿಂದಲೆ ಮೇಲಕೆದ್ದರು ಕಾಣುತೆಡಬಲವ ||೪೩೯||
ರಾಗ ಸಾಂಗತ್ಯ ರೂಪಕತಾಳ
ಸುತ್ತಲು ನಿಂದಿಹ ಜನರ ಕಂಡಾಶ್ಚರ್ಯ |
ವೆತ್ತುತಾ ಸಚಿವನಾ ಕ್ಷಣದಿ |
ಚಿತ್ತದಿ ಕರಗುತ್ತ ಶಶಿಹಾಸನೊಡನೆಂದ |
ಮತ್ತೆ ಕಾರುಣ್ಯಭಾವದಲಿ ||೪೪೦||
ತರಳತನದಿ ನಿನ್ನ ಕಟುಕರೊಳಡವಿಗೆ |
ಕೊರಳ ಕೊಯ್ಯಲು ಕಳುಹಿದೆನು ||
ಬರೆದುಕೊಟ್ಟೆನು ಪತ್ರ ವಿಷವ ಕೊಡೆನ್ನುತ್ತ |
ತರಳನಾಗಿಹ ಮದನನಿಗೆ ||೪೪೧||
ನಿಲಿಸಿದೆ ಚಂಡಾಲರನ್ನು ಮೋಸದಿ ನಿನ್ನ |
ಕೊಲುವರೀ ಚಂಡಿಕಾಲಯದಿ ||
ಚೆಲುವ ನಿನ್ನನು ಪೂಜೆಗಟ್ಟಿದೆ ಎನ್ನಯ |
ಖಳ ಕೃತ್ಯವೆನಗಾಯಿತಯ್ಯ ||೪೪೨||
Leave A Comment