ರಾಗ ಕೇದಾರಗೌಳ ಅಷ್ಟತಾಳ
ಕರಗುತೀ ಪರಿ ಮಂತ್ರಿ ಶಶಿಹಾಸನೊಡನೆಂದ |
ಪರಮ ಕಾರುಣ್ಯದಲಿ ||
ಹರಿಭಕ್ತ ನಿನ್ನೊಳು ನೆನೆದೆನು ದ್ರೋಹವ |
ಕರುಣದಿ ಕ್ಷಮಿಸೆಂದನು     ||೪೪೩||

ಮಂದಮತಿಯು ನಾನು ಚಂದನಾವತಿಯೊಳು |
ಕಂದ ನಿನ್ನಯ ತಾತನ ||
ಬಂಧಿಸಿರುವೆ ಕಾರಾಗಾರದಿ ಬಿಡಿಸೀಗ |
ಲೆಂದೆನೆ ಕೇಳುತಲಿ          ||೪೪೪||

ಶಶಿಹಾಸನೆಂದನು ಗುರುಗಳು ನೀವೆನ |
ಗೆಸಗಿದ ಕಾರ್ಯಗಳು ||
ಹಸನಾದುದೆನಗೆ ನಿಮ್ಮಿಂದ ನಾ ಧನ್ಯನೆಂ |
ದುಸಿರುತ್ತಲಿರೆ ಚಂಡಿಯು   ||೪೪೫||

ಕೇಳಯ್ಯ ಶಶಿಹಾಸ ಕೇರಳದರಸ ಮೇ |
ಧಾವಿ ಬಾಲಕನು ನೀನು ||
ಮೂಲ ನಕ್ಷತ್ರದಿ ಪುಟ್ಟಿದೆ ತಿಂಗಳೊಂ |
ದಾಗಿರೆ ನಿನಗಾಗಳು         ||೪೪೬||

ದುರುಳ ಸೌರಾಷ್ಟ್ರದ ಶೂರಸೇನನು ಬಂದು |
ಧುರವೆಸಗಿದ ಮೂರ್ಖನು ||
ತರಳ ನಿನ್ನಯ ತಾತನನುಕೊಂದು ಧರೆಯನ್ನು |
ಹರುಷದೊಳಾಳುತಿಹ       ||೪೪೭||

ಕೊಡುವೆ ವೈಷ್ಣವ ಶಕ್ತಿಯಿದರಿಂದಲಾತನ |
ಬಡಿದು ನಿನ್ನಯ ರಾಜ್ಯವ ||
ಒಡನೆ ಕೊಳ್ಳೆನುತಲಿ ಶಶಿಹಾಸನಿಂಗೀಯೆ |
ಅಡಿಗೆ ವಂದಿಸುತಾಗಳು    ||೪೪೮||

ವಾರ್ಧಕ
ತ್ರಾಹಿ ಪಾರ್ವತಿ ಚಂಡಿ ವಾರಾಹಿ ಕೌಮಾರಿ |
ತ್ರಾಹಿ ಶಂಕರಿ ಗೌರಿ ಗಿರಿಜೆ ಭ್ರಾಮರಿ ದುರ್ಗೆ |
ತ್ರಾಹಿ ಮಹಿಷಘ್ನಿ ಧೂಮ್ರಾಕ್ಷಮರ್ದಿನಿ ಕಾಳಿ ತ್ರಾಹಿ ಶುಂಭನಿಷೂದಿನಿ ||
ತ್ರಾಹಿ ವೈಷ್ಣವಿ ಬ್ರಾಹ್ಮಿ ರುದ್ರಾಣಿ ನರಸಿಂಹೆ |
ತ್ರಾಹಿ ದಾಕ್ಷಾಯಣಿಯೆ ಭೈರವಿ ಜಗನ್ಮಾತೆ |
ತ್ರಾಹಿ ಕಾತ್ಯಾಯನಿ ಕರಾಳಿ ಶೂಲಿನಿ ದೇವಿ ತ್ರಾಹಿಯೆಂದಡಿಗೆರಗಲು      ||೪೪೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮೊಳಗಿದವು ದುಂದುಭಿಗಳಭ್ರದಿ |
ನಲಿದು ಪೂಮಳೆಗರೆಯೆ ದಿವಿಜರು |
ಘಳಿಲನಾಕ್ಷಣ ಚಂಡಿಯಂತ | ರ್ಧಾನ ತಳೆಯೆ           ||೪೫೦||

ಪರಮ ವಿಭವದಿ ಚಂದ್ರಹಾಸನು |
ವರ ಸಚಿವಸುತ ಸಹಿತ ವೇಗದೊ |
ಳರಮನೆಗೆ ಬಂದಾಗ ನೃಪತಿಗೆ | ಯರುಹಿ ಬೇಗ        ||೪೫೧||

ವನಿತೆಯರ ಕೂಡುತ್ತ ಸುಖದೊಳ |
ಗಿರಲುವೊಂದಿನ ಸಚಿವ ತನ್ನಯ |
ತನಯ ಮದನಗೆ ಮಂತ್ರಿಪದವಿಯ | ನಿತ್ತು ಮುದದಿ   ||೪೫೨||

ಪರಮ ತೋಷದೊಳಿರುವ ಕಾಲದಿ |
ಹರಿಶರಣ ಶಶಿಹಾಸ ತನ್ನೊಳು |
ಗಿರಿಜೆ ಪೇಳಿದ ಮಾತ ನೆನೆವುತ | ಮದನಗೆಂದ         ||೪೫೩||

ಶೂರಸೇನನ ತರಿದು ಎಮ್ಮಯ |
ಕೇರಳವ ಕೈಕೊಂಬೆ ಸೇನೆಯ |
ಭೋರನೀ ಕ್ಷಣ ಕರೆಸುಯೆನುತಾ | ಜ್ಞೆಗಳನಿತ್ತ            ||೪೫೪||

ದೊರೆಯ ನೇಮವ ಕೇಳ್ದು ಮದನನು |
ಬರಿಸೆ ಚತುರಂಗವನು ವಿಭವದಿ |
ಪೊರಟು ರಥವೇರುತ್ತ ಚಂದನ ಪುರಿಗೆ ಬರಲು           ||೪೫೫||

ಭಾಮಿನಿ
ಕಾರಮಂದಿರಕೈದಿ ಪಿತನನು |
ಭೂರಿ ತೋಷದಿ ಬಿಡಿಸಿ ನಿಳಯಕೆ |
ಸಾರಿ ಮಾತೆಗೆ ನಮಿಸಿ ಸಕಲವನರುಹಿಯಾ ದಿನದಿ ||
ವಾರಿಜಾಕ್ಷನ ಭಕ್ತ ಸೇನಾ |
ವಾರಿಧಿಯು ಸಹಿತಲ್ಲಿ ನೆಲಸುತ |
ಮಾರನೆಯ ದಿನವೈದಿ ಕಂಡನು ಕೇರಳಾಪುರವ         ||೪೫೬||

ರಾಗ ಭೈರವಿ ಝಂಪೆತಾಳ
ಚಾರಕನ ಕರೆದೆಂದ ಕೇರಳವ ಸೆಳೆದಿರ್ಪ |
ಶೂರಸೇನನ ಬಳಿಗೆ ಪೋಗಿ ||
ಕ್ರೂರತನದಿಂ ಪಿತನ ಕೊಂದು ಸೆಳೆದಿಹ ರಾಜ್ಯ |
ಭೋರನೀ ಕ್ಷಣ ಬಿಡಲಿಯೆನುತ       ||೪೫೭||

ಬಂದು ಮರೆಹೊಂದಿದರೆ ಕಾವೆನಾತನ ದಯದೊ |
ಳಿಂದುಹಾಸನು ಪೇಳ್ದನೆಂದು ||
ಮಂದಮತಿಯೊಳು ತಿಳುಹು ಬರದಿರಲು ನಾನವನ |
ಕೊಂದು ಕಳೆವೆನೆನುತ್ತ ಕಳುಹೆ       ||೪೫೮||

ಚರಣಕೆರಗುತ ಚರನು ಭರದಿ ಬಂದಾ ನೃಪಗೆ |
ಒರೆದ ಕೇಳೆಲೊ ಮೂರ್ಖತನದಿ ||
ಧುರದಿ ಮೇಧಾವಿಯನು ಕೊಂದೆಯಾತನ ತರಳ |
ಪುರದ ಬಾಹೆಯೊಳೀಗ ಬಂದು       ||೪೫೯||

ವಾರಿಧಿಯ ತೆರನಂತೆ ಭೂರಿ ಸೇನೆಯ ತರುಬಿ |
ಸಾರಿ ಬಂದಿಹನವಗೆ ನೀನು ||
ಭೋರನೆರಗುತ ರಾಜ್ಯವೀಯೆನಲು ಕಿಡಿಗೆದರಿ |
ಚಾರಕನ ನೂಕಿಸುತಲೆಂದ            ||೪೬೦||

ರಾಗ ಮಧ್ಯಮಾವತಿ ಅಷ್ಟತಾಳ
ಧೀರನ್ಯಾರಿವನು | ರಣಕೆ ಬಂದ | ಪೋರನ್ಯಾರಿವನು     || ಪ ||

ಸಾರಿ ನಾನೀಗಲೆ ಧುರದಿ | ಬಂದ | ಚೋರನ ತರಿವೆನು ಮುದದಿ ||
ಕೇರಳದ ಮೇಧಾವಿಗೋರ್ವನು | ಪೋರ ಪುಟ್ಟಿಹನೆಂಬ ವಾರ್ತೆಯ |
ನೂರ ಜನಗಳು ಪೇಳುತಿರ್ಪರು | ಭೋರನೀತನ ತರಿವೆನೀಗಳೆ            ||೪೬೧||

ಕರಿ ರಥ ವಾಜಿ ಸಂದಣಿಸಿ | ಬೇಗ | ಬರಲೆಂದು ಮಂತ್ರಿಯೊಳ್ ಸಹಸಿ ||
ಒರೆದು ತನ್ನಯ ತಮ್ಮನಾಗಿಹ | ಧುರವಿಜಯನಾ ಚಂಡಸೇನನ |

ಕರೆದು ಪೇಳಿದ ಸಮರಕೀ ಕ್ಷಣ | ಪೊರಡು ಸನ್ನಹವೆರಸಿ ಬೇಗನೆ           ||೪೬೨||
ತ್ವರೆಯೊಳು ಮಾರ್ಬಲ ಕೂಡಿ | ನೃಪ | ಬರುತಿರೆ ಶಶಿಹಾಸ ನೋಡಿ ||

ಕರದ ಧನು ಝೇಂಕರಿಸಿ ನಿಂದಿರೆ | ತೆರಳುತಾ ಕ್ಷಣ ಚಂಡಸೇನನು |
ಧುರಕೆ ತರುಬುತ ಬಂದು ಮಾರಾಂ | ತಿರಲು ಖತಿಯೊಳಗುಭಯ ಸೈನ್ಯವು         ||೪೬೩||

ಭಾಮಿನಿ
ಇಂತು ಭೂಪತಿ ಸಮರಕೆಂದು ಮ |
ಹಾಂತ ಧನು ಶರ ಪಿಡಿದು ನಿಂದಿರೆ |
ಪಂಥದಿಂದಲಿ ಮದನ ಮುಂಬರಿದಾಗ ಬರುತಿರಲು ||
ಹೊಂತಕಾರಿಯೆ ಭಾಪುನಿಲ್ಲೆಂ |
ದಂತಕನ ತೆರನಂತೆ ಗರ್ಜಿಸಿ |
ನಿಂತನೆದುರೊಳು ಧುರಕೆ ರೋಷದಿ ಚಂಡಸೇನಾಖ್ಯ               ||೪೬೪||

ರಾಗ ಮಾರವಿ ಮಟ್ಟೆತಾಳ
ಅರರೆ ಚಂಡಸೇನ ಬೇಡ ಸಮರ ಸಲ್ಲದು |
ದೊರೆಗೆ ನಮಿಸಿ ಶರಣು ಹೊಂದೆ ನಿನಗೆ ಲೇಸದು       ||೪೬೫||

ಎಂದ ಮಾತ ಕೇಳಿ ಚಂಡಸೇನನೆಂದನು |
ಮಂದಮತಿಯೆ ಕೆಣಕಿ ನೋಡೆನುತ್ತಲೆಚ್ಚನು   ||೪೬೬||

ಬರುವ ಶರವ ತರಿದು ಮದನ ಖಾತಿಯಿಂದಲಿ |
ಅರಸನನುಜ ಪಿಡಿದ ಧನುವ ಮುರಿದ ಭರದಲಿ           ||೪೬೭||

ಚಾಪಪೋಗೆ ಗದೆಯ ತಿರುಹುತಾಗ ಬಡಿದನು |
ಕೋಪದಿಂದ ಮದನನದರ ಪಿಡಿದು ಸೆಳೆದನು            ||೪೬೮||

ಅಸಿಯ ಕೊಂಡು ಚಂಡಸೇನನೆತ್ತಿ ಹೊಯ್ಯಲು |
ಕಸಿದು ಮದನನವನ ಶಿರದ ಮೇಲೆ ಬಡಿಯಲು          ||೫೬೯||

ಭಾಮಿನಿ
ಶಿರವು ಖಂಡಿಸಿ ಚಂಡಸೇನನು |
ಧರೆಗುರುಳೆ ಪಲ್ಗಡಿದು ತಮ್ಮನ |
ನರಿದು ಕೆಡಹಿದನ್ಯಾರೆನುತ್ತಲಿ ಶೂರಸೇನಾಖ್ಯ ||
ಉರಿಗಿಡಿಯನುಗುಳುತ್ತ ನೇತ್ರದಿ |
ಬರಲು ಹೂಂಕರಿಸುತ್ತ ಸಮರಕೆ |
ಪರಿಕಿಸುತ ಶಶಿಹಾಸನೈತಂದಾಗ ಮಾರಾಂತ           ||೪೭೦||

ರಾಗ ಭೈರವಿ ಅಷ್ಟತಾಳ
ಎಲೆ ಶೂರಸೇನ ಕೇಳು | ಸಂಗರವೆಂಬ | ಛಲವನ್ನು ಬಿಟ್ಟೀಗಳು ||
ಘಳಿಲನೊಂದಿಸಿ ಎನ್ನ ರಾಜ್ಯವನಿತ್ತರೆ | ಉಳುಹುವೆ ಪ್ರಾಣಂಗಳ            ||೪೭೧||

ತಂದೆಯೋರ್ವನು ಗರ್ವದಿ | ಕಾದುತಲೆನ್ನೊ | ಳಂದು ಪೋದನು ವ್ಯರ್ಥದಿ ||
ಇಂದು ನಿನ್ನನು ಪಿತನೆಡೆಗೆ ಸೇರಿಸುವೆನು | ಮಂದಮತಿಯೆ ನೋಡೆಲೋ           ||೪೭೨||

ಕಡಿದು ನಿನ್ನಯ ಶಿರವ | ಶೋಣಿತದೊಳು | ಕೊಡುವೆನು ತರ್ಪಣವ ||
ಮಡಿದ ಪಿತನ ತೃಪ್ತಿಪಡಿಸುವೆ ಪಾಮರ | ನುಡಿವೆ ಏತಕೆ ನಿಲ್ಲೆಲೊ          ||೪೭೩||

ಶೂರಸೇನನು ಕೋಪದಿ | ಚಾಪಕೆ ತಿರು | ವೇರಿಸುತತಿ ಜವದಿ ||
ಕ್ರೂರ ಬಾಣಗಳನ್ನು ಬಿಡಲು ಕತ್ತರಿಸುತ್ತ | ಭೋರನೆ ನಿಂದಿರಲು            ||೪೭೪||

ರಾಗ ಶಂಕರಾಭರಣ ಮಟ್ಟೆತಾಳ
ಭಳಿರೆ ನಿನ್ನ ಸಹಸವನ್ನು | ಒಲಿದು ತೋರು ತೋರೆನುತ್ತ |
ಘಳಿಲನೆಚ್ಚ ಸಾಣೆಯಲಗ | ಶೂರಸೇನನು     ||೪೭೫||

ಮುರಿದು ಕೆಡಹಿ ಚಂದ್ರಹಾಸ | ಮರುಳೆ ಸಾಯಬೇಡೆನುತ್ತ |
ಪರಮ ನೀತಿ ಪೇಳೆ ಕೇಳ | ದವನು ಶೌರ್ಯದಿ          ||೪೭೬||

ಉರಗ ತಿಮಿರ ವಹ್ನಿ ಮರುತ | ಕ್ರೌಂಚ ಮುಸಲ ಪರಶುವೆಂಬ |
ತರತರಾಸ್ತ್ರ ವೆಚ್ಚು ಬೊ | ಬ್ಬಿರಿದು ನಿಂದನು   ||೪೭೭||

ತಂಡ ತಂಡ ಶರಗಳನ್ನು | ತುಂಡು ಗೈದು ಚಂದ್ರಹಾಸ |
ಚಂಡಿ ತನಗೆಯಿತ್ತ ಶರವ | ನೆಸೆದ ಗಜರುತ  ||೪೭೮||

ಭಾಮಿನಿ
ಭೋರನಾ ಶರ ಬಂದು ಎರಗುತ |
ಶೂರಸೇನನ ಶಿರವ ಛೇದಿಸಿ |
ಧಾರಿಣಿಗೆ ಕೆಡಹಲ್ಕೆ ಸೈನ್ಯಗಳೆಲ್ಲವೋಡುತಿರೆ ||
ಸಾರುತಿಹರಿಂಗಭಯ ಕೊಡುತಲಿ |
ತೋರಿ ಕರುಣವ ಚಂದ್ರಹಾಸನು |
ಭೇರಿಕಹಳಾರವವ ಗೈಸುತ ಪೊಕ್ಕನರಮನೆಯ         ||೪೭೯||

ರಾಗ ಕೇದಾರಗೌಳ ಅಷ್ಟತಾಳ
ಕರೆಸಿ ಪುರೋಹಿತರನು ವೇಗದಿಂದಲಿ |
ಪರಮ ಮನ್ನಣೆ ಗೆಯ್ಯುತ್ತ ||
ಧರಣಿಪಟ್ಟವ ಕಟ್ಟಿಕೊಂಡು ವಿಧ್ಯುಕ್ತದಿ |
ಪುರದೊಳುತ್ಸವ ಗೈಸಿದ    ||೪೮೦||

ಪುರಕೆ ಮಂತ್ರಿಯನಿಟ್ಟು ಕುಂತಳನಗರಿಗೆ |
ತೆರಳಿ ಚಿತ್ರಧ್ವಜಗೆ ||
ಎರಗಿ ನಡೆದ ವೃತ್ತಾಂತವ ಪೇಳಲು |
ಹರುಷದೊಳ್ಹರಸಿದನು       ||೪೮೧||

ಭರಿತಾನಂದದೊಳಾಗ ಕೇರಳ ಕುಂತಳ |
ವರ ಚಂದನಾವತಿಯು ||
ಮೆರೆವ ಸೌರಾಷ್ಟ್ರ ದೇಶಗಳನ್ನು ಕುಶಲದಿ |
ಪರಿಪಾಲಿಸುತಲಿರಲು       ||೪೮೨||

ಹಿರಿಯ ಪಟ್ಟದ ರಾಣಿ ವಿಷಯೆ ಮತ್ತೆರಡನೆ |
ತರುಣಿ ಚಂಪಕಮಾಲಿನಿ ||
ಪರಮಾಹ್ಲಾದದಿ ಪತಿಸೇವೆ ಗೆಯ್ಯುತಲಿರೆ |
ಮುರಹರಭಕ್ತನಿಗೆ ||೪೮೩||

ತರಳನೋರ್ವನು ವಿಷಯೆಯೊಳು ಮಕರಧ್ವಜ |
ನೆರಡನೆ ತರುಣಿಯೊಳು ||
ಮೆರೆವ ಪದ್ಮಾಕ್ಷನು ಜನಿಸಲಾನಂದದಿ |
ಧರೆಯ ಪಾಲಿಸುತಿರ್ದನು  ||೪೮೪||

ನರನೆ ಕೇಳೈ ನಿಮ್ಮ ಮಖವಾಜಿ ಕಟ್ಟಿದ |
ಧರಣಿಪನಾತ್ಮಜರು ||
ಧುರದೊಳೀತನಿಗಿದಿರಿಲ್ಲ ಶ್ರೀಹರಿಭಕ್ತ |
ಪರಮಾಪ್ತನಹ ನಿನಗೆ       ||೪೮೫||

ರಾಗ ಸೌರಾಷ್ಟ್ರ ತ್ರಿವುಡೆತಾಳ
ನರಗೆ ನಾರದನಿಂತು ಪೇಳುತ | ಸರಿಯಲಂಬರಕತ್ತ ಮುರಹರ |
ತೆರಳಿ ಬಂದಾ ಚಂದ್ರಹಾಸನ | ಮನ್ನಿಸುತಲಿ ||೪೮೬||

ತುರಗವನು ಬಿಡಿಸುತ್ತಲಾತನ | ಕರೆದುಕೊಂಡೈದಿದರು ಹಸ್ತಿನ |
ಪುರಿಗೆ ಧರ್ಮಜನೆಜ್ಞ ಪೂರೈ | ಸುವರೆ ಭರದಿ ||೪೮೭||

ಹರಿಯ ಭಕ್ತನ ಚರಿತೆಗಳ ನಾ | ನರಿತ ತೆರದಲಿ ಗೈದೆ ತಪ್ಪಿರೆ |
ಪರಮ ವಿದ್ವಜ್ಜನರು ತಿದ್ದುತ | ಮೆರೆಸಿರಿದನು  ||೪೮೮||

ಕ್ರೋಧಿ ವತ್ಸರ  ಗ್ರೀಷ್ಮಋತು ವಾ | ಷಾಢ ಬಹುಳ ದ್ವಿತೀಯದಲಿ ನಾ |
ಮಾಧವನ ದಯದಿಂದಲೀ ಕೃತಿ | ಪೂರ್ಣಗೈದೆ          ||೪೮೯||

ಧರೆಯೊಳುತ್ತಮ ತೀರ್ಥರಾಜಾ |  ಪುರದೊಳಿಹ ಮಹ ತುಂಗಭದ್ರೆಯ |
ಮೆರೆವ ದಕ್ಷಿಣಕೂಲದೊಳಗಿಹ |  ಪನಸಪುರದ            ||೪೯೦||

ಧರೆಯಮರ ನಾಗೇಂದ್ರ ಶಾಸ್ತ್ರಿಯ | ತರಳನಾದ ನೃಸಿಂಹನೆಂಬನು |
ವಿರಚಿಸಿದ ಧರೆಯೊಳಗೆ ಮರೆಸುವು | ದೆಲ್ಲವಿದನು       ||೪೯೧||

ಮಂಗಲ
ರಾಗ ಢವಳಾರ ಆದಿತಾಳ

ಮಂಗಲ ಮಂಗಲ ನರಹರಿಗೆ |
ಮಂಗಲ ಮಂಗಲ ಮುರಹರಗೆ ||
ಮಂಗಲ ಮಂಗಲ ನಗಧರ ರಘುಕುಲ |
ಪುಂಗವ ಸೀತಾರಾಮನಿಗೆ ||
ಮಂಗಲಂ ಜಯ ಮಂಗಲಂ           ||೪೯೨||

ಮಂಗಲ ಮಂಗಲ ಮತ್ಸ್ಯನಿಗೆ |
ಮಂಗಲ ಮಂಗಲ ಕೂರ್ಮನಿಗೆ ||
ಮಂಗಲ ವರಹವತಾರ ನೃಸಿಂಹಗೆ |
ಮಂಗಲ ವಾಮನಮೂರುತಿಗೆ ||
ಮಂಗಲಂ ಜಯ ಮಂಗಲಂ           ||೪೯೩||

ಮಂಗಲ ಭಾರ್ಗವರಾಮನಿಗೆ |
ಮಂಗಲ ದಶರಥರಾಮನಿಗೆ ||
ಮಂಗಲ ಗೋಕುಲವಾಸ ಶ್ರೀಕೃಷ್ಣಗೆ |
ಮಂಗಲ ಬೌದ್ಧಕಲ್ಕ್ಯರಿಗೆ ||
ಮಂಗಲಂ ಜಯ ಮಂಗಲಂ           ||೪೯೪||

ಯಕ್ಷಗಾನ ಚಂದ್ರಹಾಸಚರಿತ್ರೆ ಮುಗಿದುದು