ರಾಗ ಮಧುಮಾಧವಿ ತ್ರಿವುಡೆತಾಳ
ಈತನೆಮಗೆ ಮಹಾಹಿತನು ಮೇ | ಣೀತನರಸಹನೆಮ್ಮ ಧರಣಿಗೆ |
ಈತನಲಿ ಕುಲಶೀಲವಿದ್ಯವ | ನರಸಬೇಡೆಂದಿರುವುದು  ||೩೨೪||

ಭರದಿ ವಿಷಮಂ ಕೊಟ್ಟು ಕಾರ್ಯವ | ತರಳ ನೀ ನೆರವೇರಿಸೆನುತಲಿ |
ಬರೆದಿಹನು ಮತ್ಪಿತನು ತ್ವರೆಯಲಿ | ಹಸ್ತದೋಷಗಳಿಂದಲಿ        ||೩೨೫||

ಬರೆದ ವಿಷಮಂ ಎಂಬ ವಚನದಿ | ಕರದ ದೋಷಗಳಿಂದ ಯ ಎಂ |
ದಿರುವದಕೆ ಬದಲಾಗಿ ಮ ಎಂ | ತಿರಲು ಬಹುದಿದು ತಪ್ಪಿದೆ       ||೩೨೬||

ಎನುತ ತನ್ನಯ ಕಣ್ಣ ಕಾಡಿಗೆ | ಘನ ಜವದಿ ತೆಗೆದಾಗ ಬಾಲೆಯು |
ವಿನಯದಿಂ ಮ ಎಂಬ ಲಿಪಿಯನು | ತಿದ್ದಿದಳು ಯ ಎನ್ನುತ       ||೩೨೭||

ಭಾಮಿನಿ
ಸರಸಿಜಾಕ್ಷಿಯು ಲೇಖನವ ತಿರು |
ತಿರುಗಿ ಪಠಿಸುತಲಿದ್ದ ದೋಷವ |
ಸರಿಪಡಿಸಿದಂತಾಯಿತೆನ್ನುತ ಮಡಿಸಿ ಕಂಚುಕದಿ ||
ಇರಿಸಿ ಮೆಲ್ಲನೆ ಬಂದು ಸಖಿಯರ |
ವೆರೆದು ಮಂದಿರ ಪೊಕ್ಕು ಮನದೊಳು |
ಧರಣಿಪಾತ್ಮಜನನ್ನು ನೆನೆಯುತಲಿರಲು ಶಶಿಹಾಸ       ||೩೨೮||

ರಾಗ ಜಂಜೂಟಿ ಅಷ್ಟತಾಳ
ಪರಿತ್ಯಜಿಸುತ ನಿದ್ರೆಗಳನು | ಮೇಲ್ | ಪರಿಕಿಸಲಾಗ ಭಾಸ್ಕರನು ||
ಸರಿಯಲಸ್ತಮಯಕೆ ಸರಸಿಗೈತಂದಾಗ |
ಕರಚರಣ ತೊಳೆದರ್ಘ್ಯವೀಯುತ |
ಹರಿಯ ನೆನೆಯುತ ಹಯವನೇರ್ದನು          ||೩೨೯||

ಹರಿಯೇರಿ ಬರುವನ ಕಂಡು | ಆ | ಪುರಜನರಾಶ್ಚರ್ಯಗೊಂಡು ||
ಪರಮಪುರುಷನೀತನ್ಯಾರೆಂದು ಸರ್ವರು |
ಹರುಷದೊಳು ನೋಡುತಿರೆ ಸಚಿವನ |
ತರಳನಿಪ್ಪೆಡೆಗಾಗಿ ಬಂದನು           ||೩೩೦||

ಚರನೋರ್ವ ಬಾಗಿಲೊಳಿರಲು | ಕಾಣು | ತ್ತೊರೆದ ದುರ್ಮತಿಯ ಬಾಲನೊಳು |
ಹರಿತಂದಿರ್ಪನು ದ್ವಾರದೊಳಗೆ ಚಂದನಪುರ |
ದರಸನಹ ಶಶಿಹಾಸನೆಂದೀ |
ಗರುಹಿ ವೇಗದೊಳೆಂದು ಕಳುಹಲು  ||೩೩೧||

ಎಂದಾ ಮಾತನು ಕೇಳಿಚರನು | ವೇಗ | ದಿಂದ ಮಂತ್ರಿಜನಲ್ಲಿಗವನು ||
ಬಂದು ಸಾಷ್ಟಾಂಗದಿ ಚಂದನಾವತಿ ಧೊರೆ |
ಚಂದ್ರಹಾಸನು ಭೇಟಿಗೆನ್ನುತ |
ಬಂದು ಕಾಯ್ದಿಹ ದ್ವಾರದೊಳಗೆನೆ    ||೩೩೨||

ವಾರ್ಧಕ
ದೂತನಿಂತೆನೆ ಮದನನಾಶ್ಚರ್ಯ ತಾಳುತಂ |
ಶಾತಕುಂಭಾಲಂಕೃತಾಸನವನಿಳಿದು ಹರು |
ಷಾತಿಶಯದಿಂ ಬಂದು ಚಂದ್ರಹಾಸನನಿದಿರ್ಗೊಳ್ಳುತತ್ಯಾದರದಲಿ ||
ಪ್ರೀತಿಯಿಂದಪ್ಪಿ ಕರವಿಡಿದೊಡನೆ ಸಭೆಗೆ ತಂ |
ದಾತನಂ ಕುಳ್ಳಿರಿಸಿ ಕುಶಲವೆ ಕುಳಿಂದ ಮ |
ತ್ತಾತನರ್ಧಾಂಗಿ ಮುಂತಾದರಿಗೆ ಸುಖವಿಹುದೆ ಯಾತರಾಗಮನವೆನಲು ||೩೩೩||

ರಾಗ ಕೇದಾರಗೌಳ ಝಂಪೆತಾಳ
ಭೂಮಿಪಾಲಕ ಮುಖ್ಯರು | ಸಕಲ ಜನ | ಕ್ಷೇಮದಿಂದಿಹರೀಗಳು ||
ಸ್ವಾಮಿ ನಿಮ್ಮಯ ತಾತನು | ಯೆನ್ನನತಿ | ಪ್ರೇಮದಿಂ ಕಳುಹಿರ್ಪನು       ||೩೩೪||

ನೋಡೆನುತ ಪತ್ರಿಕೆಯನು | ಕೊಡಲದರ | ಗಾಢದಿಂ ವಾಚಿಸಿದನು ||
ಕೂಡೆ ಹಿಗ್ಗುತ ಮನದಲಿ | ಶಿರವನೊಲೆ | ದಾಡಿ ಮುದದಲಿ       ||೩೩೫||

ವಿಷಯೆ ಮೋಹಿಸುವಂದದಿ | ಕಾರ್ಯಗಳ | ನೆಸಗೆನುತಲಿದೆ ಪತ್ರದಿ ||
ಬಿಸಜನಾಭನ ಭಕ್ತನು | ಸದ್ಗುಣನು | ಶಶಿಹಾಸನೇನೆಂಬೆನು      ||೩೩೬||

ಹಿಂದೆ ಪಡೆದಿಹ ಪುಣ್ಯದಿ | ಮಮ ಭಗಿನಿ | ಗಿಂದಿವನು ದೊರೆತ ಭರದಿ ||
ಚಂದವಾಯಿತು ಎನ್ನುತಾ | ಮದನ ಮುದ | ದಿಂದ ಪುಳಕಿತನಾಗುತ     ||೩೩೭||

ರಾಗ ಭೈರವಿ ಝಂಪೆತಾಳ
ಇದ್ದವರನಾ ಸಭೆಯೊ | ಳಿರಿಸಿ ಶಶಿಹಾಸನಂ |
ಗದ್ದುಗೆಗೆ ನೆಲೆಗೊಳಿಸಿ ಮದನ ||
ತಿದ್ದಿದಕ್ಷರವೆಂದು | ತಿಳಿಯದವ ಗೋಪ್ಯದೊಳ |
ಗೆದ್ದು ತನ್ನನುಜನಮಲನಿಗೆ ||೩೩೮||

ತೋರಿಸುತ ಪತ್ರವನು | ಪಿತನು ಬರೆದಿಹ ವಿಷಯ |
ಶೂರನಹ ಶಶಿಹಾಸನಿಂಗೆ ||
ಧಾರೆಯೆರೆಯುವುದೆಂದು | ಬರೆದಿಹನು ಪಿತನಾಜ್ಞೆ | ವಿ
ರದಾಂ ಗೈವೆನೀ ಕಾರ್ಯ  ||೩೩೯||

ತ್ವರಿತದೊಳು ಶುಭ ಕಾರ್ಯ | ವಿರಚಿಸಲು ಬೇಕೆನುತ |
ಪುರವ ಶೃಂಗರಗೈಸುತಾಗ ||
ಭರದಿ ವಿಪ್ರೋತ್ತಮರ | ನುಜ್ಞೆಯೊಳಗಾ ರಾತ್ರೆ |
ಪರಿಣಯವ ಗೈವೆ ತಾನೆಂದು         ||೩೪೦||

ಪರಿಜನರ ಪುರಜನರ | ಸಕಲರನು ಕರೆಸಿದನು |
ಭರದೊಳಗೆ ವಂದಿಮಾಗಧರ ||
ಪರಮ ಸಂಗೀತಕರ | ಗಾಯಕರ ನರ್ತಕರ |
ಬರಿಸಿದನು ವಾದ್ಯಘೋಷಕರ         ||೩೪೧||

ಮೆರೆವ ರಾಜಾಂಗಣದಿ | ಮಂಟಪವ ವಿರಚಿಸುತ |
ತರಣಿಕೋಟಿಪ್ರಭೆಯ ತೆರದಿ ||
ಇರಿಸಿದನು ದೀವಿಗೆಯ | ಭೂಸುರರ ಸಭೆಗೈದು |
ಪರಿಜನರ ಸಭೆಗಳನು ರಚಿಸಿ         ||೩೪೨||

ರಾಗ ಕೇದಾರಗೌಳ ಅಷ್ಟತಾಳ
ಮಂಗಲ ಸ್ನಾನವ ಮಾಡಿಸಿ ವಿಷಯೆಗೆ | ಶೃಂಗರ ಗೈಸುತಲಿ ||
ಮಂಗಲ ಗೌರಿಯರ್ಚನೆಗೆ ಕುಳ್ಳಿರಿಸಿದರ್ | ಮಂಗಳಾಂಗಿಯರೆಲ್ಲರು       ||೩೪೩||

ಸುದತಿಯರಾಗಳು ಮದನನುಜ್ಞೆಯೊಳ್ | ವಿಧುಹಾಸನನು ಕರೆದು ||
ಮುದದಿದೂರ್ವಾಂಕುರ ತೈಲವನೊತ್ತಿಮ | ಜ್ಜನಗೈಸೆ ವೇಗದಿಂದ          ||೩೪೪||

ಕಲಶಕನ್ನಡಿಯಿಂದ ಮಂಟಪದೆಡೆಗಾಗ | ನಳಿನಲೋಚನೆಯರೆಲ್ಲ ||
ಚೆಲುವ ಮದುಮಕ್ಕಳ ತಂದು ನಿಲ್ಲಿಸಿದರು | ನಳಿನಾಕ್ಷ ರಮೆಯರಂತೆ     ||೩೪೫||

ವಾರ್ಧಕ
ವರ ತಾರಕಾಕ್ಷಿಯೆಂತೆಂಬ ಸಚಿವನ ಪತ್ನಿ |
ಚರಣವಂ ಪ್ರಕ್ಷಾಳನಂ ಗೈಯೆ ಮದನನಾ |
ದರಿಸಿ ಮಧುಪರ್ಕಮಂ ಮಾಡಿ ಕನ್ಯಾವರಣದೊಳ್ ಕುಲಪರಂಪರೆಯನು ||
ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರ |
ಮರವಿಂದನಾಭ ಪಿತ ನರಹರಿ ಪಿತಾಮಹಂ |
ಮುರಹರನೆ ಪ್ರಪಿತಾಮಹಂ ಕುಳಿಂದಕನೆನಗೆ ಗುರುವೆಂದನಾಗವರೊಳು            ||೩೪೬||

ರಾಗ ಕಲ್ಯಾಣಿ ಅಷ್ಟತಾಳ
ಧಾರೆಯನೆರೆದನು ಮದನ | ಮುದ | ವೇರಿ ವಾದ್ಯವು ಗೀತಗಾನ ||
ಧಾರಿಣೀಸುರರಾಶೀರ್ವಚನವ ಗೈಯುತ್ತ |
ಭೋರನೆ ಮಂತ್ರಾಕ್ಷತೆಗಳ ತಳಿದರು           ||೩೪೭||

ತರುಣಿಯೆಲ್ಲರು ಕೂಡಿ | ವಧೂ | ವರರಿಂಗಾರತಿಗಳ ಮಾಡಿ ||
ಅರಸಿನೆಣ್ಣೆಯ ಗೈಸಿ ವರವೀಳ್ಯವನ್ನಿತ್ತು |
ಪರಿ ಪರಿ ಶೋಭಾನಂಗಳ ಪೇಳಿ ನಲಿದರು    ||೩೪೮||

ರಾಗ ಢವಳಾರ
ಮುತ್ತಿನ ಹಸೆಯೊಳು ಚಂದ್ರಹಾಸನನು |
ಒತ್ತಿಲಿಕುಮಾರಿ ವಿಷೆಯನು |
ಅರ್ತಿಯೊಳ್ ಕುಳ್ಳಿರಿಸುತ್ತಲಿ ಬಂದಿಹ |
ಮುತ್ತೈದೆರೆಲ್ಲರು ಪಾಡಿ ವಿನೋದದಿ |
ಮುತ್ತಿನಾರತಿಯ ಸುಳಿದರು || ಶೋಭಾನೆ    ||೩೪೯||

ತರುಣಿಯರೊಟ್ಟಾಗಿ ವಿಭವದೊಳಾಗ |
ಅರಸಿನೆಣ್ಣೆ ವಿಷಯೆ ಕರಕಿತ್ತು ಬೇಗ ||
ಹರಿಯ ಕಿಂಕರ ಚಂದ್ರಹಾಸನ ಗಲ್ಲಕೆ |
ಸರಸದಿ ತಿವುರಿಸಿ ನಲಿಯುತಲೆಲ್ಲರು |
ಹರಳಿನಾರತಿಯ ಸುಳಿದರು || ಶೋಭಾನೆ    ||೩೫೦||

ನಾರಿಕೇಳವು ಕ್ರಮುಕ ಕದಳಿಫಲವನು ||
ಭೂರಿ ತೋಷದೊಳಾಗ ನಾಗವಲ್ಲಿಯನು ||
ನಾರಿಯರೆಲ್ಲರು ಮಡಿಲ ತುಂಬಿಸುತಲಿ |
ವಾರಿಜಗಂಧಿ ವಿಷಯೆಯ ಸನ್ಮಾನಿಸಿ |
ರತ್ನದಾರತಿಯ ಬೆಳಗಿರೆ || ಶೋಭಾನೆ         ||೩೫೧||

ವಾರ್ಧಕ
ಈ ರೀತಿ ಲಗ್ನಮಂ ಗೈದು ಗಾಲವಮುನಿಗೆ |
ಭೂರಿ ದ್ರವ್ಯವನಿತ್ತು ಮದನ ಸಂಪ್ರೀತಿಯಿಂ |
ಧಾರಿಣೀಸುರ ಗೀತನಟನಗಾಯಕರಿಂಗೆ ಹಾಸ್ಯ ವೈತಾಳಿಕರ್ಗೆ ||
ಸೇರಿರುವ ಸಕಲರನು ತರವರಿತು ಸತ್ಕರಿಸಿ |
ಭಾರಿ ಭಂಡಾರಮಂ ಬರಿಗೈದನರೆ ಕ್ಷಣದಿ |
ಯಾರು ಸರಿಯಿಲ್ಲಿವನ ತ್ಯಾಗಮಂ ಪೋಲುವರೆ ಧಾರಿಣಿಯೊಳೆನುತಿರ್ದರು          ||೩೫೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮದನನಾಕ್ಷಣ ಚಂದ್ರಹಾಸಗೆ | ಮದಗಜವು ಹಯ ಪಶು ಸಹಸ್ರವ |
ವಿಧವಿಧಾಭರಣಂಗಳಿತ್ತನು | ತೋಷದಿಂದ    ||೩೫೩||

ಧರಣಿಸುರರಿಗೆ ಭಕ್ಷ್ಯಭೋಜ್ಯದಿ | ಹರುಷದಿಂದುಪಚರಿಸಿ ಮಂತ್ರಿಜ |
ಭರಿತ ದಕ್ಷಿಣೆಯಿತ್ತು ಕಳುಹಲು | ಪೊಗಳುತವರು        ||೩೫೪||

ಕೊಟ್ಟ ದ್ರವ್ಯಗಳೆಲ್ಲ ತಮ್ಮಯ | ಬಟ್ಟೆಯೊಳು ಗಂಟಕ್ಕಿ ವಿಭವದಿ |
ಮಟ್ಟೆಯನು ಪೊತ್ತಾಗ ಬಳಲುತ | ಪೋಗುತಿರಲು      ||೩೫೫||

ಅನಿತರೊಳಗಾ ದುಷ್ಟಬುದ್ಧಿಯು | ತನಯ ವಿಷಮಂ ಕೊಟ್ಟು ಕೊಂದನೊ |
ಘನಮದೋನ್ಮತದಿಂದ ಮರೆತನೊ | ನೋಳ್ಪೆನೆಂದು  ||೩೫೬||

ಪೊರಟು ಸಚಿವನು ಚಂದನಾವತಿ | ಪುರವ ತೊರೆದಲ್ಲಿಂದ ಬರುತಿರೆ |
ಉರಗನೊಂದಿದಿರಾಗಿ ಪರಿವುತ | ಲೆಂದುದಿವಗೆ          ||೩೫೭||

ನಿನ್ನ ಭಂಡಾರದಲಿ ಬಹುಧನ | ವನ್ನು ಇಂದಿನವರೆಗೆ ಕಾಯುತ |
ಚೆನ್ನವಾಗಿರುತಿರ್ದೆ ಸೂರೆಯ | ಗೈದಮದನ  ||೩೫೮||

ನರರ ತೆರದೊಳಗಿನಿತು ಪೇಳುತ | ಉರಗ ವೇಗದೊಳೊಂದು ಬಿಲದಲಿ |
ತೆರಳೆ ಕೇಳ್ದಾಶ್ಚರ್ಯಪಡುತಲಿ | ಮಂತ್ರಿ ಮನದಿ         ||೩೫೯||

ಭಾಮಿನಿ
ನರಗೆ ಯೌವನಮದವು ಸಿರಿಮದ |
ಬರಲು ಪ್ರಭುತನ ದುಷ್ಟಪ್ರಕೃತಿಗ |
ಳಿರಲಿದರೊಳೊಂದ್ಯಾವ ಗುಣಗಳು ಸಾಕು ಮತ್ತೇನು ||
ತರಳನಿಂಗೀ ನಾಲ್ಕು ಘಟಿಸಿದೆ |
ಮರುಳು ತಾನಿನ್ನೇನ ಗೈದನೊ |
ಬರಿದೆ ಕಳುಹಿದೆನಿಂದುಹಾಸನ ಪತ್ರಿಕೆಯನಿತ್ತು           ||೩೬೦||

ರಾಗ ಭೈರವಿ ಝಂಪೆತಾಳ
ಬರುತಿರಲು ಕುಂತಳದ ಪುರಸಮೀಪದೊಳವನು |
ಮೆರೆವ ವಾದ್ಯದ ರಭಸ ಕೇಳೆ ||
ಅರರೆಯೇನದ್ಭುತಗಳೆಂದು ಹಂಬಲಿಸುತಿರೆ |
ಧರಣಿವಿಬುಧರ ಕಾಣುತವನು         ||೩೬೧||

ಎಲ್ಲಿಗೈದಿರಿ ನೀವು ದಣಿದು ನಿಮ್ಮಯ ಶಿರಗ |
ಳಲ್ಲಿ ಪೊತ್ತಿಹಗಂಟಿದೇನು ||
ಎಲ್ಲವನು ವಿಸ್ತರದಿ ಪೇಳುವುದು ದಯದಿಂದ |
ತಲ್ಲಣಿಪೆ ನಾನು ಮನದೊಳಗೆ        ||೩೬೨||

ಅರುಹುವೆವು ಕೇಳ್ ನಿನ್ನ ತರಳೆ ವಿಷಯೆಂಬವಳ |
ಹರಿ ಶರಣ ಶಶಿಹಾಸನಿಂಗೆ ||
ಪರಿಣಯವ ಗೈದ ತವ ತರಳ ಮದನನು ನಿನ್ನೆ |
ಭರಿತ ದ್ರವ್ಯವನಿತ್ತನೆಮಗೆ  ||೩೬೩||

ಹೊರಿಸಿದನು ಕೋಟ್ಯಾನುಕೋಟಿ ಸಂಖ್ಯೆಯೊಳೆಲ್ಲ |
ಬರಿಗೈದ ಭಂಡಾರಗಳನು ||
ತರಳನಾದರು ತ್ಯಾಗ ಗೈದ ನಿನ್ನಿಂದಧಿಕ |
ಸರಿಗಾಣೆವವನ ಸಾಹಸಕೆ  ||೩೬೪||

ವಾರ್ಧಕ
ಕೂರ್ದಸಿಯನಿಳುಹಿದಂತಾಯ್ತು ಕರ್ಣದೊಳಾಗ |
ಕಾರ್ದವಕ್ಷಿಗಳರುಣ ಜಲವನತ್ಯುಗ್ರದಿಂ |
ಮೀರ್ದನೇ ತನ್ನ ನೇಮವನಕಟ ಮಗನೆಂದು ಪಲ್ಗಡಿವುತೈತಂದನು ||
ಸಾರ್ದ ಸಂತೋಷದಿಂ ಮದನ ಬಂದೆರಗಲ್ಕೆ |
ಚೀರ್ದು ಸುತನಂ ಬೈದು ಮಂತ್ರಿ ನಿಜಸದನಮಂ |
ಸೇರ್ದು ಕೋಪಾಟೋಪದಿಂದ ಸುತನಂ ನೋಡಿ ಗರ್ಜಿಸುತ್ತಿರಲಾಗಳು   ||೩೬೫||

ರಾಗ ಕಾಂಭೋಜಿ ಝಂಪೆತಾಳ
ಪಿತನ ಕೋಪಕೆ ಮದನ ದೈನ್ಯವೃತ್ತಿಯೊಳೆಂದ |
ಖತಿಯೇಕೆ ಜೀಯ ನಿಮ್ಮಡಿಯಾಜ್ಞೆಯಂತೆ ||
ಪ್ರತಿಪಾಲಿಸಿದೆ ಹೊರತು ಎನ್ನ ದೋಷಗಳೇನು |
ಹಿತದಿ ಶಶಿಹಾಸನಿಗೆ ಕೊಟ್ಟೆ ಭಗಿನಿಯನು      ||೩೬೬||

ರಾಗ ಪುನ್ನಾಗ ಅಷ್ಟತಾಳ
ಏನೆಲೋ | ಪೋರ | ಏನೆಲೋ     || ಪ ||

ಏನೆಲೋ ಪೋರ ನೀ ಗೈದ ಕಾರ್ಯಗಳು |
eನಶೂನ್ಯನೆ ಕೆಟ್ಟ ಮೂರ್ಖ ಕೃತ್ಯಗಳು ||
ನಾನೇನ ಬರೆದಿಹೆ ನೋಡ್ದೆಯ ನೀನು |
ಹೀನ ಪಾಪಿಯೆ ಬಾಳಿಕೊಂಡಿರ್ದರೇನು         ||೩೬೭||

ರಾಗ ಕಾಂಭೋಜಿ ಝಂಪೆತಾಳ
eನಿ ನಾನಹುದೆಂದು ತಿಳಿದು ನಿಮ್ಮಾಜ್ಞೆಯನು |
ಮಾನದಿಂ ಗೈದಿಹೆನು ದುಷ್ಕಾರ್ಯವಲ್ಲ ||
ಹಾನಿ ಯಾವುದು ತಮಗೆ ನಾನಿರ್ದ ದೆಸೆಯಿಂದ |
ಸಾನುರಾಗದಿ ತಾತ ಬೆಸಸಿರೆಂದೆನಲು         ||೩೬೮||

ರಾಗ ಪುನ್ನಾಗ ಅಷ್ಟತಾಳ
ಕೋತಿಯ ಕೈಗಿತ್ತ ಮಾಣಿಕದಂತೆ |
ಭೂತ ಬಾಯ್ದೆರೆದಿರೆ ಸೆರೆಸಿಕ್ಕಿದಂತೆ ||
ಚೂತದ ಮರವೆಂದು ತಲೆ ಜಪ್ಪಿದಂತೆ |
ಜಾತ ನೀ ಜನಿಸಿದೆ ಹೆಮ್ಮಾರಿಯಂತೆ           ||೩೬೯||

ರಾಗ ಕಾಂಭೋಜಿ ಝಂಪೆತಾಳ
ದೊರೆತಿರುವ ಮಾಣಿಕವ ಕನಕದೊಳು ಕಟ್ಟಿಹೆನು |
ಸೆರೆಪಿಡಿವ ಭೂತಗಳನುರಿವ ರಂಜಕದ ||
ಪರಮಚೂತದ್ರುಮಕೆ ಮಲ್ಲಿಕೆಯ ಲತೆಯನ್ನು |
ಹರುಷದೊಳಗ್ಹಬ್ಬಿರ್ಪೆ ಮನದಿ ಗ್ರಹಿಸದರ                  ||೩೭೦||

ರಾಗ ಪುನ್ನಾಗ ಅಷ್ಟತಾಳ
ಭಂಡಾರ ದ್ರವ್ಯವ ಪರರಿಗೆ ತೆತ್ತು |
ಮಂಡೆಯ ಬಡಿವಗೆ ತಂಗಿಯನಿತ್ತು ||
ಕಂಡೋರ ಮನೆ ಮನೆ ತಿರಿಯುವ ಹೊತ್ತು |
ಲಂಡಿ ನಿನಗೆ ವನವಾಸವೆ ಗೊತ್ತು    ||೩೭೧||

ರಾಗ ಕಾಂಭೋಜಿ ಝಂಪೆತಾಳ
ಇದ್ದ ಕಾಲದಿ ಧರ್ಮ ಗೈದು ಸದ್ಗತಿಯನ್ನು |
ಹೊದ್ದುವುದು ಮಾನವಗೆ ಕೀರ್ತಿಯಾಗಿಹುದು ||
ಮುದ್ದು ಸುಕುಮಾರ್ತೆಯಳನಿತ್ತಿಹೆನು ಕರುಣದಲಿ |
ಪದ್ಮನಾಭನ ಭಕ್ತ ಶಶಿಹಾಸನಿಂಗೆ    ||೩೭೨||

ಕ್ಷಿತಿಗೆ ಕೌತುಕವೇನು ಪಿತನ ಮಾತಿಂಗೆ ರಘು |
ಪತಿಯು ತೆರಳಿದ ವನಕೆ ಹಿಂದೆ ತ್ರೇತೆಯೊಳು ||
ಪಿತ ಬರೆದ ಪತ್ರಿಕೆಗಳಂತೆ ಗೆಯ್ಯುವೆನೆಂಬ |
ಮತಿಯಿಂದ ಮಾಡಿದಕೆ ವನವಾಸಮೆನಗೆ     ||೩೭೩||

ರಾಗ ನಾದನಾಮಕ್ರಿಯೆ ಅಷ್ಟತಾಳ
ಗನ್ನಗತಕಿ ಬಾಯ ಮುಚ್ಚೆಲೊ | ಎನ್ನ | ಕಣ್ಣಮುಂದಿರಬೇಡ ಸಾರೆಲೋ ||
ಕುನ್ನಿಯಂದದೊಳ್ಯಾಕೆ ಕೂಗುವೆ | ಎಲು |  ವನ್ನು ಖಂಡಿಸಿ ಸೊಕ್ಕ ಮುರಿಯುವೆ    ||೩೭೪||

ಹಿಂದೆ ಪ್ರಹ್ಲಾದನು ಹರಿಯನ್ನು | ನೆನೆ | ದೊಂದೆ ಬುದ್ಧಿಯೊಳಿರೆ ತಾತನು ||
ಮಂದಮತಿಯು ಕೋಪಗೊಂಡನು | ಅದ |  ರಂದ ವ್ಯರ್ಥದಿ ಕೂಗುವೆ ನೀನು       ||೩೭೫||

ಎಲೆ ಪಾಪಿ ಸಕಲ ಸಾಮ್ರಾಜ್ಯವ | ನಾನು | ಗಳಿಸಿಹೆನೇಕಚ್ಛತ್ರವ ||
ಪೊಳೆವ ಸಿಂಹಾಸನವೇರಲು |  ಕೆಟ್ಟ | ಕುಲಗೇಡಿ ನಿನಗಿಲ್ಲ ಋಣಗಳು     ||೩೭೬||

ದಶರಥಸತಿ ಕೈಕೆಯೆಂಬಳು | ತನ್ನ | ಬಸಿರೊಳ್ ಪುಟ್ಟಿದ ಸುತಗಾಗಳು ||
ವಸುಧೆಯೆ ಸ್ಥಿರವೆಂಬ ಮನದೊಳು | ಮೂಢೆ | ಎಸಗಿದ ಕಾರ್ಯವೇನಾಯ್ತು ಹೇಳು           ||೩೭೭||

ಸೂತಶೌನಕ ಗಾರ್ಗ್ಯರಂದದಿ | ಪು | ರಾತನ ಕಥೆಗಳ ಗರ್ವದಿ ||
ಪಾತಕಿ ಯಾಕೆನ್ನೊಳುಸಿರುವೆ | ನಿನ್ನ | ಘಾತಿಸಿ ಮತ್ಪ್ರಾಣ ನೀಗುವೆ        ||೩೭೮||

ಯಾತಕೆ ಪಾಪಬುದ್ಧಿಗಳನ್ನು | ಮಮ | ತಾತ ನೀ ಬರೆದ ಲೇಖನವನು ||
ಪ್ರೀತಿಯೊಳ್ ನೋಡಿ ಗೈದಿಹೆ ನಾನು | ಇಂಥಾ | ಮಾತು ಸಲ್ಲದು ಹಿರಿಯನು ನೀನು         ||೩೭೯||

ಕುನ್ನಿಗೆ ಹಂಸತೂಲಿಕವನ್ನು | ಬಹು | ಚೆನ್ನಾಗಿ ಹಾಸುವುದ್ಯಾಕಿನ್ನು ||
ಪನ್ನಿಗಳ್ ಸಾಕು ಸಾಕೆಲೊ ಮೂಢ | ಪತ್ರ | ವನ್ನು ತೋರಿಸು ನೋಡುವೆ ಗಾಢ    ||೩೮೦||

ಎನೆ ಕೇಳಿ ಪತ್ರವ ತಂದನು | ಅತಿ | ವಿನಯದೊಳೊಪ್ಪಿಸಿ ನಿಂದನು ||
ಘನ ಕ್ರೋಧದೊಳಗಾಗ ಸಚಿವನು | ಲೇ | ಖನವನ್ನು ಬಿಡಿಸುತ್ತ ನೋಡ್ದನು           ||೩೮೧||

ವಾರ್ಧಕ
ವಿಷವ ಮೋಹಿಸುವಂತೆ ಕೊಡುವದೆನಲೀತಂಗೆ |
ವಿಷಯೆ ಮೋಹಿಸುವಂತೆ ಲೇಖನದ ಬರೆಹ ತಾಂ |
ವಿಷಮವಿದು ವಿಧಿಕೃತವೊ ತನ್ನ ಕರದೋಷಗಳೊ ಶಶಿಹಾಸನೊಂಚನೆಗಳೊ ||
ವ್ಯಸನವಿದು ಮದನನಲಿ ತಪ್ಪಿಲ್ಲ ವಿಪ್ರರೆನ |
ಗುಸಿರಿದರು ಮೊದಲೆನಗೆ ಪುಸಿಯದೆಂದಾ ಮಂತ್ರಿ |
ವಿಷಮಬುದ್ಧಿಯೊಳೊಂದುಪಾಯ ಮನ್ಮನದೊಳಗೆ ನೆನೆದು ಚಿಂತಿಸುತಿರ್ದನು      ||೩೮೨||

ರಾಗ ಸಾಂಗತ್ಯ ರೂಪಕತಾಳ
ಮಂಜುಲ ಹರಿದ್ರದಿಂದ ಶೋಭಿಪ ತನು |
ರಂಜಿಪ ರತ್ನಭಾಸಿಕದಿ ||
ಅಂಜಲಿ ಬದ್ಧದೊಳಾ ವಧೂವರರಾಗ |
ಲಂಜುತ ನಡೆತಂದು ನಮಿಸೆ         ||೩೮೩||

ಮರಿಗಿಣಿಗಳ ಕಂಡು ಮಾರ್ಜಾಲನಿರುವಂತೆ |
ಹೊರಗೆ ತೋಷಿಸುತಾಗ ಮಂತ್ರಿ ||
ಭರದೊಳು ಶಶಿಹಾಸನನು ಬಿಗಿದಪ್ಪುತ |
ತರಳೆಯ ಮುದ್ದಿಸುತೆಂದ  ||೩೮೪||