ಭಾಮಿನಿ

ಎಂದ ಮಾತನು ಕೇಳು ನಪ ನಲ |
ವಿಂದಲೆಂದನು ನೀನೆಮಗೆ ನಿಜ |
ಬಾಂಧವನು ದಿಟವೆನುತ ಖಚರೇಂದ್ರನನು ಕಳುಹುತಲೆ ||
ಕಂದುಮೊಗನಾಗಿರುವ ಕುರುಧರ |
ಣೀಂದ್ರನನು ಕಂಡೆಮಸುತನು ಸಲೆ |
ನೊಂದು ಕರೆಸಿದನರಸಿಯನು ಕೌರವನ ಬಿಡಿಸಲಿಕೆ ||203||

ರಾಗ ಬಿಲಹರಿ ಏಕತಾಳ

ಭಾವಕಿಯರ ಕುಲದೇವಿ ದ್ರೌಪದಿ ಬಂದಳ್ |
ಭಾವಜನರಗಿಣಿಯಂದದಿ ಸಭೆಗೆ ||
ಭಾವನವರಿಗಿಂಥ ಭವಣೆ ಬಂದೊದಗಿತೆ |
ಹಾ ವಿಧಿಯೆಂದಳು ಹವಣಿಸಿ ನಗುತ ||204||

ಬಳಲಿಸಿದರೆ ಜಲಕ್ರೀಡೆಗೆ ಬಂದವರ |
ನಳಲಿಸಿದರೆ ನಿಮ್ಮನಯ್ಯ ಖೇಚರರು ||
ಕೊಲಿಸದೆ ಬಿಟ್ಟಿರಲ್ಲ ಕುಜನರನೆಂದು ಮತ್ತೆ |
ಹಲುಬಿ ಹಂಗಿಸಿದಳು ಹರಿಣಾಕ್ಷಿ ನಪನ ||205||

ಉಡುಮುಡಿ ಬಿಚ್ಚಿಸಿದುಪಕಾರಕಿಂದು ನಿಮ್ಮ |
ಬಿಡಿಸುವೆನೆಂದು ಬಿಚ್ಚಿದಳೊಂದು ಕರದಿ ||
ಒಡನೆ ಕೆಳದಿಯರಿಂದ ದುಶ್ಶಾಸನಾದ್ಯರ |
ಹೆಡಮುಡಿಗಂಟ ಕೊಯ್ಸಿದಳು ಕೋಮಲಾಂಗಿ ||206||

ನೊಂದ ಮೈಗಭ್ಯಂಗವ ಮಾಡಿಸುವೆನೆಂದರೆ |
ಒಂದಕೊಂದಿಲ್ಲ ಕಾಡಲ್ಲಿ ಸನ್ನಹವು ||
ಬಂದುದೀ ಭಾಗ್ಯ ನಿಮ್ಮಿಂದಲೆ ನಮಗೆಂದು |
ನಿಂದ್ಯಾಸ್ತುತಿಯಗೈದಳಿಂದೀವರಾಕ್ಷಿ ||207||

ವಾಲೆಭಾಗ್ಯವನುಳುಹಿದಿರೆಂದು ಭಾನುಮತಿ |
ಕಾಲಜಗೆರಗಿ ಕೈಮುಗಿಯಲೆತ್ತಿದನು ||
ಮೇಲೇನು ಚಿಂತೆ ಬೇಡೆಂದು ಕೌರವರನ್ನು |
ಪಾಲಿಸಲಂದು ಕಪಟಹದಯರೈದಿದರು ||208||

ವಾರ್ಧಕ

ಅರಸ ಕೇಳಂದಖಿಳ ಪಡೆಸಹಿತ ಕೌರವಂ |
ಮರಳಿದಂ ದುಮ್ಮಾನದಿಂ ನೊಂದು ಸಕಲರಂ |
ತೆರಳಿಚಿದನಿಭಪುರಗೆ ಮೌನದಿಂ ಬಂದು ಭಾಗೀರಥಿಯ ತೀರದೆಡೆಯಾ ||
ತರಿಸಿ ತಜ್ಜಲಕೆ ಗೋಮಯವೆರಸಿ ನೆಲನ ಬಳಿ |
ಕಿರದೆ ಶುದ್ಧೀಕರಿಸಿ ದರ್ಭೆಯಂ ಹರವಿಕೊಂ |
ಡೊರಗಿದಂ ಪ್ರಾಯೋಪವೇಶದಿಂದಾಸೆಯಂ ತೊರೆದು ಕಠಿನವ್ರತದೊಳು ||209||

ಭಾಮಿನಿ

ಇಂತು ಕೌರವನಿರಲಿಕಾತನ |
ಕಾಂತೆಯಾಗಿಹ ಭಾನುಮತಿ ಕೇ |
ಳ್ದಂತರಿಸದೈತಂದಳಧಿಕಪ್ರಲಾಪತಾಪದಲಿ ||
ಭ್ರಾಂತುಬುದ್ಧಿಯದೇನುಸಿರಿನಿ |
ಮ್ಮಂತರಂಗದ ಸ್ಥಿತಿಯೆನುತಲಿ |
ಚಿಂತಿಸುತ ನುಡಿಸಿದಳು ಬಿಡದಾ ಕಪಟಹದಯನನು ||210||

ರಾಗ ಕೇದಾರಗೌಳ ಆದಿತಾಳ

ಏನು ಬುದ್ಧಿ ಮಾಡಿ ಮಲಗಿದಿ | ರಿಂದು ಪೇಳಿರೆನಗೆ ||
ಮಾನನಿಧಿ ಮಾತಾಡಬಾರದೆ | ಮೌನವೇಕೆನ್ನೊಡನೆ ಈ ಪರಿ || ಏನು  ||ಪಲ್ಲವಿ||

ತಾನು ಹೊರತೇನೇಳಿ ಹೊಗುವ ಕ | ಶಾನುಕುಂಡವನ್ನು |
ಬಳಿಕಿಂ | ದೀ ನದಿಯ  ಮಡುವಿಂಗೆ ಧುಮುಕುವ || ಪ್ರಾಣವೇತಕಿನ್ನು ||
ಗರಳವಿ | ತಾನ ತರಿಸಿ ಬೇಗ ಬಿಡದೆ | ಪಾನ ಮಾಡುತಿಂದು ||
ಪರಗತಿ | ಧ್ಯಾನಮಾಡು | ಈ ನಿರಶನದ |
ಹೀನವ್ರತವನು ನೀಗಿರಿಂದಿದು || ||211||

ಕಾಂತೆ ಕೇಳ್ ನೀನೆಂದ ಪರಿ ಮರ | ಣಾಂತಕೇ ಹಿತವಲ್ಲ ||
ನಿರಶನ | ವಾಂತು ಶರೀರ ನೀಗೆ ವರಗತಿ | ಬಂತು ತಡೆಯದಲ್ಲ ||
ನಾನಾ | ಕುಂತಿಯಣುಗರು ಪಾಲಿಸಿದ ತನು | ವಾಂತು ಬಾಳಿದರೇನು ||
ಸ್ವಾರ್ಥವು | ಪಂಥ ಸುಡು ಸುಡ್ಯಾಕೆ ದೊರೆತನ |
ವಿಂತಳಿವೆ ನೀ ಕಾಡಬೇಡವೆ || ||212||

ದ್ರೋಣ ಭೀಷ್ಮ ಕಪಾದ್ಯರೆಂದುದ | ಕಾಣದುಪೇಕ್ಷೆಯಲಿ |
ಮರೆತಿರ | ದೇನು ಹೆಂಗಸು ಪೇಳ್ದಳೆನದೆ ನಿ | ಧಾನಿಸಿ ಪ್ರೇಮದಲಿ ||
ನಿಮ್ಮಯ | ಪ್ರಾಣವನುಳುಹಿದ ಪಾಂಡುಸುತರಿಗೆ | ಕ್ಷೋಣಿಯ ಧರ್ಮವನ್ನು ||
ಕೊಡಲು ಪ್ರ | ವೀಣರಿವರೆಂದಾಡಿಕೊಂಬರು |
ಜಾಣರಾದವರೆಲ್ಲ ಜಗದೊಳು || ಏನು ||213||

ಭಾಮಿನಿ

ಅರಸ ಕೇಳವಳೆಂದ ಮಾತಿಗೆ |
ಕುರುಪತಿಯು ಮನಮರುಗದೆಂದನು |
ತರುಣನಿಂದಲೆ ರಾಜ್ಯಭಾರವಮಾಡು ನೀನೆನುತ ||
ಭರದಿ ಬೀಳ್ಗೊಳಲಂದು ಕೇಳುತ |
ಮರುಗುತಲೆ ಗಾಂಧಾರಿ ಸೊಸೆಯರ |
ವೆರಸಿ ಬಂದಳು ನಿಜ ತನೂದ್ಭವನಿರ್ದ ಬಳಿಗಂದು ||214||

ರಾಗ ಗೌಳನೀಲಾಂಬರಿ ಏಕತಾಳ

ಯಾತಕಿಂಥ ಚಿಂತೆ ನಿನಗೆ | ಕಂದಾ ಕಂದ | ಒಂದು |
ಮಾತನಾಡು ಮನದ ದಢವ | ಕಂದಾ ಕಂದ ||
ಧಾತುಗೆಟ್ಟಿತ್ಯಾಕೊ ಮುಖವು | ಕಂದಾ ಕಂದ | ಇಂಥ |
ರೀತಿಯೊಳ್ ಮಲಗಿರ್ಪುದೇನು | ಕಂದಾ ಕಂದ ||215||

ಮಡಿವೆನೆಂಬ ಮನವಿದೇನೊ | ಕಂದಾ ಕಂದ || ಮುಂದೆ |
ಪೊಡವಿಯ ಪಾಲಿಪರ್ಯಾರು | ಕಂದಾ ಕಂದ ||
ಒಡಹುಟ್ಟಿದವರ್ಗೇನು ಗತಿಯೊ | ಕಂದಾ ಕಂದ | ನಿನ್ನ |
ಮಡದಿಯೆಂತು ಸೈರಿಸುವಳೊ | ಕಂದಾ ಕಂದ ||216||

ಚಿತ್ರಸೇನನೇನ ಗೈದ | ಕಂದಾ ಕಂದ | ಪಾಂಡು |
ಪುತ್ರರಿಂದೇನಾಯಿತಯ್ಯ | ಕಂದಾ ಕಂದ ||
ಶತ್ರುಗಳಿರಗೊಡರೇನೊ | ಕಂದಾ ಕಂದ | ಇದು |
ಕ್ಷಾತ್ರಧರ್ಮವಲ್ಲ ನೋಡು | ಕಂದಾ ಕಂದ ||217||

ಭಾಮಿನಿ

ಹಣೆಗೆ ಹಣೆಯನು ಚಾಚಿ ಕುವರನ |
ಗುಣವ ವರ್ಣಿಸುತಳುವ ಜನನಿಗೆ |
ಮಣಿದು ಪೇಳ್ದನು ಕೌರವೇಶ್ವರನಧಿಕ ದುಗುಡದಲಿ ||
ಎಣಿಸಬೇಡೌತಾಯೆ ತನ್ನಯ |
ಋಣವು ತೀರಿದುದೈಸೆ ಸುತ ಲ |
ಕ್ಷಣನ ಕಂಡೀ ದುಃಖವನು ಸಂತೈಸು ನೀನೆಂದ ||218||

ರಾಗ ಶಂಕರಾಭರಣ ಏಕತಾಳ

ಅಮ್ಮ ಕೇಳಂಜದಿರಿನ್ನು | ತಮ್ಮನಾದ ದುಶ್ಶಾಸನಗೆ |
ರಮ್ಯದಿ ಪಟ್ಟವ ಕಟ್ಟು | ಸಮ್ಮತವಿದು ||219||

ನೂರೊಂದು ಮಕ್ಕಳಲಿ ನಿನ | ಗೋರುವನಳಿದರೇನು ||
ಬೇರುಂಟು ನೂರ್ವರು ಸುಕು | ಮಾರರೆಣಿಕೆಗೆ ||220||

ಎಂದು ಕೌರವೇಂದ್ರ ಮೌನ | ದಿಂದಿರಲು ಗಾಂಧಾರಿಯು |
ನೊಂದು ಕೊಂಡಳಾಗ ಬಂದ | ನಂಧಕನಪನು ||221||

ರಾಗ ತುಜಾವಂತು ಝಂಪೆತಾಳ

ಕಂದ ನಿನಗೀ ಬುದ್ಧಿ | ಬಂದುದೇಕಿಂದು |
ಕಂದೆರೆದು ಮಾತಾಡು | ಕುಂದುಕೊರತೆಯಿದೆಂದು || ಕಂದ ||ಪಲ್ಲವಿ||

ಯಾಕೆ ದರ್ಭಾಸನವ ಹಾಕಿ ಮಲಗಿಹುದಿಂತು |
ವ್ಯಾಕುಲವಿದೇನೆಂದು ಪೇಳೆನ್ನೊಳಿಂದು ||
ಕಾಕುತನವನು ಬಳಸದಿರು ಬಂದ ಭಯವೇನು |
ಸಾಕಿನ್ನು ಚಿಂತೆಗಳ ಬಿಟ್ಟು ಮಾತಾಡು || ಕಂದ ||222||

ಅರುಹಲಿಲ್ಲವೆ ಮೊದಲು ತೆರಳದಿರು ವನಕೆಂದು |
ಗುರುಭೀಷ್ಮ ಕೃಪರೆಂದ ಪರಿ ತಿಳಿಯದಾದೆ ||
ಕರೆಸು ಪಾಂಡವರನ್ನು ಧರಣಿಯರ್ಧವನಿತ್ತು |
ಕುರುಕುಲವನುದ್ಧರಿಸು ಬರಿದೆ ಕೆಡಬೇಡ || ಕಂದ ||223||

ಅನುಜರಲ್ಲವೆ ನಿನಗೆ ಆಪತ್ತಿಗೊದಗಿದರೆ |
ಮನಕೆ ಮತ್ಸರವೇನು ಗ್ರಹಿಸದರ ನೀನು ||
ಘನ ಕೀರ್ತಿ ಬಹುದಿನ್ನು ಕರೆಸು ಪಾಂಡವರನ್ನು |
ವಿನಯದಲಿ ತೊರೆ ಮನದ ದುಗುಡವಿದನೆಂದ || ಕಂದ ||224||

ಭಾಮಿನಿ

ಸಷ್ಟಿಪಾಲನೆ ಲಾಲಿಸಾ ಧತ |
ರಾಷ್ಟ್ರನಾಡಿದ ನುಡಿಗೆ ಕುರುಪತಿ |
ಸಿಟ್ಟಿನಿಂದುಸಿರಿದನು ನೀವಾ ಪಾಂಡವರ ಕರೆಸಿ ||
ಸಷ್ಟಿಯರ್ಧವನಿತ್ತು ಪಾಲಿಪು |
ದಿಷ್ಟ ನಿಮ್ಮದೆನುತ್ತ ಮಲಗಿರ |
ಲಷ್ಟರೊಳು ದುಶ್ಯಾಸನನು ಬಂದಳುತಲೆರಗಿದನು ||225||

ರಾಗ ನೀಲಾಂಬರಿ ಆದಿತಾಳ

ಅಣ್ಣ ನಿನಗೀ ಕ್ಲೇಶವೇನು | ಬಣ್ಣಿಸೆನ್ನೊಳಿಂದು ||
ಬಣ್ಣಗೆಟ್ಟಿತಲ್ಲ ನೋಡು | ಕಣ್ಣೆತ್ತಿ ಮಾತಾಡು ||226||

ಕ್ಷತ್ರಿಯರಿಗೆ ಧರ್ಮವಲ್ಲ | ಶಾಸ್ತ್ರದಿ ನೋಡೆಲ್ಲ ||
ಶತ್ರುಗಳಿಗೆ ಸುದ್ದಿ ಹೋಯ್ತು | ಧಾತ್ರಿಯರಿಗಾಯ್ತು ||227||

ಅಳಿದರೆ ನಿನ್ನೊಡನಳಿವೆ | ಉಳಿದರೆ ನಾನುಳಿವೆ ||
ಬಳಲಿಸದಿರು ತನುವನೆಂದು | ಸೆಳೆದಪ್ಪಿದನಂದು ||228||

ಭಾಮಿನಿ

ಜನಪ ಕೇಳಂದಿನಲಿ ದುಶ್ಯಾ |
ಸನನು ದುಗುಡದಿ ದುಃಖಿಸುತ ನಿಜ |
ತನುವ ನೀಗುವೆ ನಿನ್ನೊಡನೆ ನಿಶ್ಚಯವಿದೆಂದೆನುತ ||
ಮನಮರುಗುತಗ್ರಜನನಪ್ಪಿರ |
ಲನಿತರೊಳಗುಸಿರಿದನು ರಾಜ್ಯವ |
ನನುಕರಿಸಿ ಸಮ್ಮತದಿ ಸೇಸೆಯ ತಳಿವೆ ತಾನೆಂದ ||229||

ರಾಗ ನೀಲಾಂಬರಿ ತ್ರಿವುಡೆತಾಳ

ತಮ್ಮ ಕೇಳ್ಯಾಕೆ ಚಿಂತಿಪುದಿಂದು | ಕ್ಷತ್ರಿ | ಧರ್ಮವಣ್ಣನ ಮೇಲನುಜರೆಂದು ||
ಸುಮ್ಮನೆ ನಡೆ ಮರುಗದಿರಿನ್ನು | ಘನ | ರಮ್ಯದಿ ಪಾಲಸು ಪ್ರಜೆಯನ್ನು ||230||

ಮುಪ್ಪಿನ ತಾಯಿತಂದೆಗಳನು | ನೋಡಿ | ಒಪ್ಪಾಗಿ ನಡೆಸು ಸೋದರರನು ||
ತಪ್ಪದೀ ವ್ರತ ಸಾಧಿಸಿದವರ್ಗೆ | ಮುಕ್ತಿ | ಬಪ್ಪುದು ನಿಜ ಶಾಸ್ತ್ರವರಿತರ್ಗೆ ||231||

ದುಮ್ಮಾನವಾದ ಶರೀರವನು | ಪೊತ್ತು | ಕರ್ಮಿಗಳಂತಿರಲಾರೆನು ||
ಶರ್ಮದಿ ಕಾಯವನೀಡಾಡಿ | ಸತ್ಯ | ಧಾರ್ಮಿಕನೆನಿಸುವೆ ಸುಖಗೂಡಿ ||232||

ದ್ವಿಪದಿ

ಭೂಪ ಕೇಳಿಂತು ದುಶ್ಯಾಸನಗೆ ಪೇಳ್ದು |
ತಾ ಪಿರಿದು ಮೌನವನು ತನ್ನೊಡನೆ ತಾಳ್ದು ||233||

ಮಾತಾಡದಿರಲು ಮರುಗುತಲೆ ಸಹಭವನು |
ಕಾತರಿಸಿ ಮನದೊಳಗೆ ಕರಗುತೈದಿದನು ||234||

ಈ ತೆರದೊಳಿರುತಿರ್ಪ ಕೌರವನ ಬಳಿಗೆ |
ಪ್ರೀತಿಯಲಿ ನಾಗರಿಕಜನರನಿತರೊಳಗೆ ||235||

ಬಂದು ಸಂತೈಸಿದಡೆ ಕೇಳದಿರಲಾಗ |
ಮಂದಮತಿಯಿಂದರಸನಿರುತಿರಲು ಬೇಗ ||236||

ಇನನಿಳಿದನಂಬುಧಿಯೊಳಪರರಾತ್ರಿಯಲಿ |
ದನುಜರೈತಂದು ಕೌರವನ ಸಾಮದಲಿ ||237||

ಬೆಂಬಿಡದೆ ಪಾತಾಳಕೊಯ್ದು ಶೌರ್ಯದಲಿ |
ಬೆಂಬಲಕೆ ತಾವಿರುವೆವೆಂದರೊಲವಿನಲಿ ||238||

ರಾಗ ಕೇದಾರಗೌಳ ಝಂಪೆತಾಳ

ಅರಸ ಬಿಡು ಚಿಂತೆಗಳನು | ಪಾಂಡವರ | ಧುರಕೆ ನಾವೆಲ್ಲರಿನ್ನು ||
ಭರದಿ ಬೆಂಬಲಕೆ ಬಂದು | ರಿಪುಗಳನು | ತರಿದು ಕೆಡಹುವೆವು ಮುಂದು ||239||

ನೋಡು ದಾನವಕೋಟಿಯ | ಸಂಗರಕೆ | ಕೂಡೆ ಬಹ ಧೀರತತಿಯ ||
ಪೀಡಿಸಿದ ಖೇಚರರನು | ಸದೆಬಡಿದು | ತೋಡಿ ತಿಂಬೆವು ಕರುಳನು ||240||

ದಿವಿಜರಾ ಪಾಂಡುಸುತರು | ಭೂತಳದೊ | ಳವತರಿಸಿ ಬಂದಿರುವರು ||
ಅವನಿಯ ತಿಲಾಂಶ ನೀನು | ಕೊಡದಿರೈ | ಭವಣಿಬಡಿಸುವೆವವರನು ||241||

ಎಂದು ಗರ್ಜಿಸಿ ಖೂಳರು | ದಯದಿ ಕರೆ | ತಂದು ಭೂಪನನೆಲ್ಲರು ||
ಚಂದದಿಂ ಕಳುಹಿಕೊಡಲು | ನಿಜ ಗಹಕೆ | ಬಂದಿರ್ದನುತ್ಸವದೊಳು ||242||

ಕನಲಿ ಮಾರಣಮಖವನು | ಮಾಡುತಿರ | ಲಿನಿತಾವ ವಾರ್ತೆಗಳನು ||
ಜನರಿಂದ ಕೇಳಿ ನಗುತಾ | ಪಾಂಡವರು | ದಿನವ ಕಳೆದರು ನೋಡುತ ||243||

ವಾರ್ಧಕ

ಭೂಪಾಲ ಕೇಳಿಂತು ಚಿಂತಿಸುತ ತನ್ನ ಸ್ವ |
ರೂಪಾನುಸಾರದಿಂ ಗ್ರಹಿಸಿದಂ ಕೌರವಂ |
ದ್ರೌಪದಿಯ ಗರ್ವಮಂ ಖಂಡಿಸುವ ದುರ್ಮಾರ್ಗವೊಂದರಿತು ನಿಶ್ಚಯದಲಿ ||
ತಾಪದಿಂ ಬೆಂದು ಬಂದಾ ಸಿಂಧುದೇಶದ ಮ |
ಹೀ ಪತಿಯ ಬಳಿಗಾಗ ಬರಲಿದಿರ್ಗೊಂಡು ಬಹ |
ಳೋಪಚಾರಗಳೆಸಗಿ ಕುಳ್ಳಿರಿಸಲರುಹಿದಂ ತನಗಾದ ದುಸ್ಥಿತಿಯನು ||244||

ರಾಗ ಸಾವೇರಿ ಮಟ್ಟೆತಾಳ

ಕೇಳು ಸಿಂಧುನಪಾಲ | ಕೀರ್ತಿಯೊಳತಿ ಗುಣಶೀಲ |
ಪೇಳುವೆನೇನವಮಾನದ | ಸ್ಥಿತಿಯನೀ ವ್ಯಥೆಯ || ಕೇಳಯ್ಯ  || ಪಲ್ಲವಿ ||

ಘೋಷ ಯಾತ್ರೆಯ ನೆವದಿ | ಪೋಗಿ ದ್ವೈತಾರಣ್ಯದಿ |
ತೋಷದಿ ಬೀಡಿಕೆ ಮಾಡಿ | ಮಗ ಬೇಟೆಯಾಡಿ ||
ಆ ಸಮಯದಿ ಜಲಕ್ರೀಡೆಗೆ | ಅಂಗನೆಯರು ಕೂಡರ್ತಿಗೆ |
ಲೇಸಿಂದಟ್ಟಿದೆ ವನಕೆ | ಪೊಗುತಿರಲಾಕ್ಷಣಕೆ || ಕೇಳಯ್ಯ ||245||

ತಡೆದು ಬಾಗಿಲಭಟರು | ಬಿಡದೆ ಕದನ ಗೈದರು |
ಜಡಿದೊತ್ತುತ ನಮ್ಮವರು | ಜವಗೆಡಿಸಲ್ಕವರು ||
ಒಡೆಯನಿಂಗೋಡುತ್ತ ಪೇಳಿ | ಒಡನೆ ಖೇಚರ ಧಾಳಿ |
ನಡೆತಂದೆಸಗಲಾ ಯುದ್ಧದಿ | ಕೆಡಹಿದರಾಕ್ಷಣದಿ || ಕೇಳಯ್ಯ ||246||

ಚಿತ್ರಸೇನನು ತಾ ಬಂದು | ಚಿತ್ರದಿ ಕಟ್ಟಲಿಕಂದು |
ಗೋತ್ರಾರಿಯ ಸುತ ತಡೆದು | ತರಲಾಕ್ಷಣ ಬೈದು ||
ವಸ್ತ್ರದ ನೆವನವ ಕೊಟ್ಟು | ವಾಕ್ಪಂಥದ ಕೂರ್ಗಣೆ ತೊಟ್ಟು |
ಶಸ್ತ್ರಗಳಿಂದಿರಿದು ಕೈಯ | ಬಿಡಿಸಿದಳೀ ಪರಿಯ || ಕೇಳಯ್ಯ ||247||

ವಾರ್ಧಕ

ಕೇಳ್ದಾ ಜಯದ್ರಥಂ ಧೈರ್ಯಮಂ ಭಾವಂಗೆ |
ಪೇಳ್ದನಾ ದ್ರೌಪದಿಯನೆಳೆತಂದು ಕೈಸೆರೆಯೊ |
ಳಾಳ್ದಪೆಂ ನಿಮಗೀಸು ಚಿಂತೆ ಬರಿದೇಕೆಂದು ಬೋಳೈಸಿದಂ ನಪನನು ||
ತಾಳ್ದೊಡನೆ ಹರುಷಮಂ ತನ್ನ ಬೆಂಬಲಕೆ ಕ |
ಟ್ಟಾಳ್ಗಳಂ ಮದದಾನೆ ಕುದುರೆಗಳನರೆನಿಮಿಷ |
ದೋಳ್ಧುರಕೆ ಕೂಡಿಸಿದನೇನೆಂಬೆನವನ ಗರ್ವೋದ್ರೇಕತನವನಂದು ||248||

ಭಾಮಿನಿ

ಕರಿಘಟೆಗಳಿಪ್ಪತ್ತು ಸಾವಿರ |
ತುರಗಚಯವೈವತ್ತು ಸಾವಿರ |
ವೆರಸಿ ಬಂತು ಮಹಾರಥವು ಹದಿಮೂರು ಸಾವಿರವು ||
ಚರಣಪಟುಭಟರೈದು ಲಕ್ಷವು |
ಬೆರಸಿ ಬಲುತರ ವಾದ್ಯಘೋಷದಿ |
ಪೊರಡುತಿರೆ ಜೋಯಿಸರು ಬಂದರುಹಿದರು ಭೂಪತಿಗೆ ||249||

ರಾಗ ಕಾಪಿ ಅಷ್ಟತಾಳ

ಜೀಯ ಲಾಲಿಪುದೆಮ್ಮ ಮಾತ | ಮುಂ |
ದಾಯಾಸ ಬರುವುದು ನೋಡು ವಿಖ್ಯಾತ || ಜೀಯ || ಪಲ್ಲವಿ ||

ಇನ ಚಂದ್ರ ಕುಜ ಬುಧರುಗಳು | ನೋಡ |
ಲನುವಲ್ಲ ಸುರಗುರು ವೈರಿ ಕ್ಷೇತ್ರದೊಳು ||
ಘನ ನೀಚ ಶನಿ ಶುಕ್ರರುಗಳು | ಮುಂದೆ |
ಗುಣಿಸಲು ವಿಪರೀತ ರಾಹು ಕೇತುಗಳು || ಜೀಯ ||250||

ಸ್ಥಾಯಿಗಳಿಂಗಪಜಯವು | ಪರ |
ಸ್ಥಾಯಿಗಳಿಂಗೊಳ್ಳಿತಾಗಿ ನಿರ್ಭಯವು ||
ಆಯವಿದ್ದರಿತರೆ ಜಯವು | ನಿಮ್ಮ |
ಪಾಯವಿನ್ನೆಂದುದು ಜೋಯಿಸಚಯವು || ಜೀಯ ||251||

ವಾರ್ಧಕ

ಅರಸ ಕೇಳವರುಕ್ತಿ ಕೇಳ್ದೊಡಂಬಡದಾಗ |
ಪೊರಡುತಿರಲುರಿ ಹೊಗೆಯು ದಿಕ್ಕಿನಲಿ ಸೂಸುತಿರ |
ಲೊರಲಿದವು ಗೋಮಾಯು ದೆಸೆ ದೆಸೆಯೊಳಂದು ಸಂಗರಭಯಂ ತೋರುತಿರಲು ||
ದುರುಳನದನೆಣಿಸದತಿ ಶೌರ್ಯ ಪ್ರತಾಪದಿಂ |
ಭರದೊಳುರವಣಿಸಿ ಪಯಣದ ಮೇಲೆ ಪಯಣದಿಂ |
ವರ ಪಾಂಡುಸುತರಿರ್ಪ ವನಸಮೀಪಕೆ ಬಂದು ಹರಹಿದಂ ಪಾಳೆಯವನು ||252||

ಭಾಮಿನಿ

ಭೂವರೋತ್ತಮ ಕೇಳು ಪಾಂಡವ |
ರೈವರಿಲ್ಲದ ವೇಳೆಯಲಿ ಪ |
ಟ್ಟಾವಳಿಯ ವಿವಿಧಾಭರಣಗಳ ಕೊಟ್ಟು ಚರರುಗಳು ||
ಠೀವಿಯಲಿ ಸೈಂಧವನು ಕಳುಹಲು |
ದೇವಿಯರ ಬಳಿಗಾಗಿ ಬಂದು ಸು |
ಪಾವುಡದ ಗಂಟಿಳುಹಿ ಬಿನ್ನೈಸಿದರು ಸೇವಕರು ||253||

ರಾಗ ಸುರುಟಿ ಆದಿತಾಳ

ಲಾಲಿಪುದೆಲೆ ತಾಯೆ | ಸದ್ಗುಣ |
ಶೀಲೆ ಪಾಂಡವಪ್ರೀಯೆ || ಲಾಲಿ || ಪಲ್ಲವಿ ||

ಸಿಂಧುದೇಶದ ನಪನು | ಪಾವುಡಗಟ್ಟಿ | ಇಂದು ನಿಮ್ಮೆಡೆಗೆಮ್ಮನು ||
ಚಂದದಿ ಕಳುಹಿದನು | ನೀವಿದನೆಲ್ಲ | ಹೊಂದಿ ಶಂಗರಿಪುದಿನ್ನು  || ಲಾಲಿ ||254||

ನಾರುಸೀರೆಯ ಬಿಟ್ಟು | ಪಟ್ಟಿಯನುಟ್ಟು | ಭೂರಿಭೂಷಣ ತೊಟ್ಟು ||
ಸಾರದಿ ಮನವಿಟ್ಟು | ಹಸಿರು ಕುಪ್ಪಸ | ಪೇರುರಕಳವಟ್ಟು || ಲಾಲಿ ||255||

ಅಗಿಲು ಗಂಧವ ಪೂಸಿ | ಪಣೆಯೊಳು | ಮಗಮದ ಬೊಟ್ಟಿರಿಸಿ ||
ಸೊಗಸಿಂದಲಂಕರಿಸಿ | ಚಿತ್ತದ | ದುಗುಡವ ನೆರೆ ತ್ಯಜಿಸಿ || ಲಾರಿ ||256||